ಹವಾಮಾನದಲ್ಲಾಗೋ ಏರುಪೇರನ್ನ ನಿಭಾಯಿಸೋಕೆ ಬೈಬಲ್ ಕೊಡೋ ಸಹಾಯ
ಹವಾಮಾನದ ಏರುಪೇರಿಂದ ಲಕ್ಷಾಂತರ ಜನರು ಸಮಸ್ಯೆಗಳನ್ನ ಅನುಭವಿಸ್ತಿದ್ದಾರೆ. ಅದರಲ್ಲಿ ನೀವು ಒಬ್ಬರಾ? ಹವಾಮಾನದ ಬದಲಾವಣೆಯಿಂದ ಆಗೋ ಸಮಸ್ಯೆಗಳು ಒಂದೆರಡಲ್ಲ. ಉದಾಹರಣೆಗೆ, ಚಂಡಮಾರುತ ಮತ್ತು ಬಿರುಗಾಳಿಯಿಂದ ಸಮುದ್ರದ ನೀರಿನ ಮಟ್ಟ ಜಾಸ್ತಿಯಾಗಿ ಪ್ರವಾಹಗಳಾಗುತ್ತೆ, ಕಡಲ ತೀರದ ಜನರಿಗೆ ತುಂಬ ತೊಂದರೆ ಆಗುತ್ತೆ. ವಿಪರೀತ ಮಳೆಯಿಂದಾಗಿ ಭೂಕುಸಿತ ಆಗುತ್ತೆ. ಬಿರುಗಾಳಿಯಿಂದ ಬರುವ ಸಿಡಿಲು ಬಡಿದು ಇಡೀ ಕಾಡಿಗೆ ಕಾಡೇ ಕಾಡ್ಗಿಚ್ಚಿನಿಂದ ಸರ್ವನಾಶ ಆಗುತ್ತೆ. ಬಿಸಿಗಾಳಿ, ಚಳಿಗಾಳಿ ಮತ್ತು ಬರಗಾಲಗಳು ಮಾಡೋ ಅನಾಹುತ ಕಮ್ಮಿ ಏನಲ್ಲ.
ಇತ್ತೀಚಿಗೆ ಹವಾಮಾನದಲ್ಲಿ ಏರುಪೇರು ತುಂಬಾ ಜಾಸ್ತಿ ಆಗ್ತಾ ಇದೆ. ಇದರಿಂದ ಜನರು ಹಿಂದೆಂದಿಗಿಂತಲೂ ಈಗ ತುಂಬಾ ಸಮಸ್ಯೆಗಳನ್ನ ಅನುಭವಿಸ್ತಿದ್ದಾರೆ. ಇದರ ಬಗ್ಗೆ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿಸ್ ಈ ರೀತಿ ವರದಿ ಮಾಡಿದೆ, “ಹಿಂದೆ ಅಪರೂಪವಾಗಿದ್ದ ಪ್ರವಾಹ, ಬಿರುಗಾಳಿ ಮತ್ತು ಬರಗಾಲಗಳು ಈಗ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇಂಥ ವಿಪತ್ತುಗಳಿಂದ ಪ್ರತಿ ವರ್ಷ ಲಕ್ಷಾಂತರ ಜನರು ತಮ್ಮ ಜೀವ ಕಳ್ಕೊಳ್ಳುತ್ತಿದ್ದಾರೆ. ಮನೆ, ಆಸ್ತಿಪಾಸ್ತಿ ಕಳ್ಕೊಂಡು ಬೀದಿ ಪಾಲಾಗ್ತಿದ್ದಾರೆ.”
ಇಂಥಾ ವಿಪತ್ತುಗಳ ಪರಿಣಾಮ ಎಷ್ಟು ಭಯಾನಕವಾಗಿರುತ್ತೆ ಅಂದ್ರೆ ಜನರು ಶಾರೀರಿಕವಾಗಿ ಮಾತ್ರ ಅಲ್ಲ, ಭಾವನಾತ್ಮಕವಾಗಿ ಕುಗ್ಗಿಹೋಗ್ತಾರೆ. ಈ ವಿಪತ್ತುಗಳಿಂದ ಎಷ್ಟೋ ಜನ ತಮ್ಮ ಮನೆ, ಆಸ್ತಿಪಾಸ್ತಿಯನ್ನು ಕಳ್ಕೊಳ್ಳೋದಷ್ಟೇ ಅಲ್ಲ, ತಮ್ಮ ಪ್ರೀತಿ ಪಾತ್ರರನ್ನೂ ಕಳ್ಕೊತಾರೆ.
ಹವಾಮಾನದ ಏರುಪೇರಿಂದ ಇಂಥದ್ದೇ ಕಷ್ಟಗಳನ್ನ ನೀವು ಅನುಭವಿಸಿದ್ದೀರಾ? ಹಾಗಿದ್ರೆ ಬೈಬಲ್ ಖಂಡಿತ ನಿಮಗೆ ಸಹಾಯ ಮಾಡುತ್ತೆ. ಸಾಂತ್ವನ, ನಿರೀಕ್ಷೆ ಮತ್ತು ಪ್ರಾಯೋಗಿಕ ಸಲಹೆಗಳನ್ನು ಕೊಡುತ್ತೆ. ಈ ಎಲ್ಲಾ ಸಲಹೆಗಳನ್ನ ಅನ್ವಯಿಸಿ ತುಂಬಾ ಜನ ತಮ್ಮ ಜೀವನವನ್ನ ಸುಧಾರಿಸಿಕೊಂಡಿದ್ದಾರೆ. (ರೋಮನ್ನರಿಗೆ 15:4) ದೇವರು ಈ ವಿಪತ್ತುಗಳು ಆಗೋ ತರ ಯಾಕೆ ಬಿಟ್ಟಿದ್ದಾರೆ? ಇವುಗಳ ಮೂಲಕ ನಮ್ಮನ್ನು ಶಿಕ್ಷಿಸುತ್ತಿದ್ದಾರಾ? ಅನ್ನೋ ಪ್ರಶ್ನೆ ಲಕ್ಷಾಂತರ ಜನರ ಮನಸ್ಸನ್ನು ಕಾಡುತ್ತಿದೆ. ಈ ಪ್ರಾಮುಖ್ಯ ಪ್ರಶ್ನೆಗೂ ಬೈಬಲ್ ಉತ್ತರ ಕೊಡುತ್ತೆ.
ಹವಾಮಾನದ ಏರುಪೇರು ದೇವರ ಶಿಕ್ಷೆ ಅಲ್ಲ
ಜನರು ಅನುಭವಿಸುವ ಕಷ್ಟ ಸಮಸ್ಯೆಗಳಿಗೆ ದೇವರು ಕಾರಣ ಅಲ್ಲ ಅಂತ ಬೈಬಲ್ ಹೇಳುತ್ತೆ. ಅದು ಹೇಳೋದು, “ಕೆಟ್ಟ ವಿಷ್ಯಗಳಿಂದ ದೇವರನ್ನ ಯಾರೂ ಪರೀಕ್ಷಿಸಕ್ಕಾಗಲ್ಲ. ದೇವರೂ ಯಾರಿಗೂ ಕಷ್ಟ ಕೊಟ್ಟು ಪರೀಕ್ಷೆ ಮಾಡಲ್ಲ.” (ಯಾಕೋಬ 1:13) ಈಗ ಆಗುತ್ತಿರುವ ಹವಾಮಾನದ ಏರುಪೇರಿಗೆ ಮತ್ತು ಅದರಿಂದಾಗುವ ಅನಾಹುತಗಳಿಗೆ ದೇವರು ಕಾರಣವಲ್ಲ.
ಬೈಬಲ್ ಕಾಲದಲ್ಲಿ ಕೆಟ್ಟ ಜನರನ್ನ ನಾಶ ಮಾಡೋಕೆ ದೇವರು ನೈಸರ್ಗಿಕ ಶಕ್ತಿಗಳನ್ನ ಬಳಸಿದ್ದು ನಿಜಾನೇ. ಆದರೆ ಆ ವಿಪತ್ತುಗಳಿಗೂ ಈಗ ನಡೆಯುತ್ತಿರುವ ಹವಾಮಾನದ ಏರುಪೇರಿಂದ ಆಗೋ ವಿಪತ್ತುಗಳಿಗೂ ತುಂಬಾ ವ್ಯತ್ಯಾಸ ಇದೆ. ಈಗ, ಹವಾಮಾನದ ಏರುಪೇರಿಂದ ಆಗೋ ವಿಪತ್ತುಗಳು ಕ್ಷಣಮಾತ್ರದಲ್ಲಾಗುತ್ತಿದೆ. ಇದರಿಂದ ಒಳ್ಳೆಯವರಿಗೂ, ಕೆಟ್ಟವರಿಗೂ ತೊಂದರೆ ಆಗ್ತಿದೆ. ಆದರೆ ದೇವರು ತಂದ ವಿಪತ್ತು ಈ ರೀತಿ ಇರಲಿಲ್ಲ. ಅಲ್ಲಿ ಕೆಟ್ಟ ಜನ ಮಾತ್ರ ನಾಶವಾದ್ರು, ಒಳ್ಳೆ ಜನರಿಗೆ ಯಾವ ತೊಂದರೆನೂ ಆಗಲಿಲ್ಲ. ಅಲ್ಲದೇ, ಅವರಿಗೆ ಮೊದಲೇ ಎಚ್ಚರಿಕೆನೂ ಸಿಕ್ತು ಜೊತೆಗೆ ದೇವರು ಯಾಕೆ ಈ ರೀತಿ ಮಾಡ್ತಿದ್ದೀನಿ ಅಂತ ಕಾರಣನೂ ಕೊಟ್ರು. ಉದಾಹರಣೆಗೆ, ನೋಹನ ಸಮಯದಲ್ಲಿ ಜಲಪ್ರಳಯ ತಂದಾಗ ದೇವರು ಅದಕ್ಕೆ ಕಾರಣ ಏನು ಅಂತ ಹೇಳಿದ್ರು, ಮೊದಲೇ ಎಚ್ಚರಿಕೆನೂ ಕೊಟ್ಟರು, ನೋಹ ಮತ್ತು ಅವನ ಕುಟುಂಬದವರನ್ನ ಕಾಪಾಡಿದ್ರು.—ಆದಿಕಾಂಡ 6:13; 2 ಪೇತ್ರ 2:5.
ಇವತ್ತು ನಡೆಯುತ್ತಿರೋ ಪ್ರಕೃತಿ ವಿಕೋಪಗಳು ದೇವರು ಕೊಡ್ತಿರೋ ಶಿಕ್ಷೆ ಅಲ್ಲ ಅಂತ ತಿಳಿದುಕೊಳ್ಳೋಕೆ “ಪ್ರಕೃತಿ ವಿಕೋಪಗಳ ಬಗ್ಗೆ ಬೈಬಲ್ ಏನು ಹೇಳುತ್ತೆ?” ಅನ್ನೋ ಲೇಖನ ನೋಡಿ.
ಹವಾಮಾನದ ಏರುಪೇರಿಂದ ಬಾಧಿತರಾದವರ ಮೇಲೆ ದೇವರಿಗೆ ಕಾಳಜಿ ಇದೆ
ಯೆಹೋವ ದೇವರು ತುಂಬ ಕಾಳಜಿ ವಹಿಸುತ್ತಾರೆ a, ದಯೆ ತೋರಿಸುತ್ತಾರೆ ಅಂತ ಬೈಬಲ್ ಹೇಳುತ್ತೆ. ಮನಸ್ಸಿಗೆ ನೆಮ್ಮದಿ ಕೊಡೋ ಕೆಲವು ಬೈಬಲ್ ವಚನಗಳನ್ನ ಕೆಳಗೆ ನೋಡಿ.
ಯೆಶಾಯ 63:9: “ಅವರು ಸಂಕಟದಲ್ಲಿದ್ದಾಗ ಆತನಿಗೂ [ದೇವರಿಗೂ] ಸಂಕಟ ಆಯ್ತು.”
ಅರ್ಥ: ಜನರು ಕಷ್ಟ ಅನುಭವಿಸೋದನ್ನ ನೋಡುವಾಗ ಯೆಹೋವನಿಗೆ ತುಂಬ ನೋವಾಗುತ್ತೆ.
1 ಪೇತ್ರ 5:7: “ದೇವರಿಗೆ ನಿಮ್ಮ ಮೇಲೆ ತುಂಬ ಕಾಳಜಿ ಇದೆ.”
ಅರ್ಥ: ನಮಗೆ ಒಳ್ಳೇದಾಗಬೇಕು ಅಂತ ಯೆಹೋವ ಇಷ್ಟಪಡುತ್ತಾರೆ.
ಯೆಹೋವ ದೇವರಿಗೆ ಕಾಳಜಿ, ದಯೆ ಇರೋದರಿಂದ ಸಹಾಯ ಮಾಡಲು ತುದಿಗಾಲಲ್ಲಿ ಇರುತ್ತಾರೆ. ಅದಕ್ಕೆ ಬೈಬಲ್ನಲ್ಲಿ ಸಾಂತ್ವನ ಕೊಡೋ ಮಾತುಗಳನ್ನ ಕೊಟ್ಟಿದ್ದಾರೆ. ಅದರಲ್ಲಿ ಪ್ರಾಯೋಗಿಕ ಸಲಹೆಗಳಿವೆ ಮತ್ತು ಮುಂದೆ ಹವಾಮಾನದ ಏರುಪೇರಿಂದ ಯಾವ ಸಮಸ್ಯೆಗಳು ಆಗಲ್ಲ ಅನ್ನೋ ಸಿಹಿಸುದ್ದಿನೂ ಇದೆ.—2 ಕೊರಿಂಥ 1:3, 4.
ಹವಾಮಾನದ ಏರುಪೇರಿಗೆ ಕೊನೆ ಯಾವಾಗ?
“ನಿಮ್ಮ ಭವಿಷ್ಯ ಚೆನ್ನಾಗಿರಬೇಕು, ನೀವು ಒಳ್ಳೇದನ್ನ ಎದುರುನೋಡಬೇಕು ಅನ್ನೋದೇ ನನ್ನ ಆಸೆ” ಅಂತ ಯೆಹೋವ ದೇವರು ಬೈಬಲ್ನಲ್ಲಿ ಮಾತು ಕೊಟ್ಟಿದ್ದಾರೆ. (ಯೆರೆಮೀಯ 29:11) ಹವಾಮಾನದ ಏರುಪೇರಿಂದ ‘ಅಯ್ಯೋ ಯಾವಾಗ ಏನಾಗುತ್ತೋ’ ಅಂತ ಯಾರೂ ಭಯಪಡಬಾರದು ಮತ್ತು ಈ ಸುಂದರ ಭೂಮಿಯಲ್ಲಿ ಎಲ್ಲರೂ ಸಂತೋಷವಾಗಿರಬೇಕು ಅನ್ನೋದೆ ದೇವರ ಆಸೆ.—ಆದಿಕಾಂಡ 1:28; 2:15; ಯೆಶಾಯ 32:18.
ಈ ಆಸೆನ ತನ್ನ ಸ್ವರ್ಗೀಯ ಸರ್ಕಾರದ ಮೂಲಕ ದೇವರು ನೆರವೇರಿಸುತ್ತಾನೆ. ಆ ಸರ್ಕಾರದ ರಾಜ ಬೇರೆ ಯಾರೂ ಅಲ್ಲ, ನಮ್ಮ ಯೇಸು ಕ್ರಿಸ್ತ. (ಮತ್ತಾಯ 6:10) ಆತನಿಗೆ ಹವಾಮಾನದಿಂದ ಆಗೋ ಏರುಪೇರನ್ನ ತಡೆಯುವ ಶಕ್ತಿನೂ ಇದೆ, ಬುದ್ಧಿನೂ ಇದೆ. ನಮಗೆ ಹೇಗೆ ಗೊತ್ತು? ಯೇಸು ಭೂಮಿಲಿದ್ದಾಗ ತನಗೆ ಪ್ರಕೃತಿಯ ಮೇಲೆ ನಿಯಂತ್ರಣ ಇದೆ ಅಂತ ಎಷ್ಟೊಂದು ಸಲ ತೋರಿಸಿಕೊಟ್ಟನು. (ಮಾರ್ಕ 4:37-41) ಅಲ್ಲದೇ ಯೇಸುಗೆ ತುಂಬ ಜ್ಞಾನ ಇದೆ ಮತ್ತು ಆತನು ಜನರನ್ನ ಅರ್ಥ ಮಾಡಿಕೊಳ್ಳುತ್ತಾನೆ. ಜನರಿಗೆ ಪ್ರಕೃತಿಯನ್ನ ಹೇಗೆ ನೋಡಿಕೊಳ್ಳೋದು ಅಂತನೂ ಮುಂದೆ ಕಲಿಸುತ್ತಾನೆ. (ಯೆಶಾಯ 11:2) ಹಾಗಾಗಿ ಯೇಸು ರಾಜನಾಗಿ ಆಳುವಾಗ ಹವಾಮಾನದ ಏರುಪೇರಿಂದ ಯಾರಿಗೂ ಯಾವ ತೊಂದರೆನೂ ಆಗಲ್ಲ.
ಹಾಗಾದ್ರೆ ಇಂಥಾ ದಿನ ಯಾವಾಗ ಬರುತ್ತೆ ಅನ್ನೋ ಪ್ರಶ್ನೆ ನಿಮ್ಮ ಮನಸ್ಸಿಗೆ ಬರಬಹುದು. ಇದಕ್ಕೆ ಉತ್ತರ ತಿಳ್ಕೊಳ್ಳೋಕೆ “ದೇವರ ಸರ್ಕಾರದ ಆಳ್ವಿಕೆ ಭೂಮಿಗೆ ಯಾವಾಗ ಬರುತ್ತೆ?” ಅನ್ನೋ ಲೇಖನ ನೋಡಿ.
ಹವಾಮಾನದ ಏರುಪೇರಿಂದಾಗೋ ಸಮಸ್ಯೆನ ಜಯಿಸೋದು ಹೇಗೆ?
ಹವಾಮಾನದ ಏರುಪೇರಿಂದ ಸಮಸ್ಯೆ ಆಗೋ ಮುಂಚೆ, ಸಮಸ್ಯೆ ಆದಾಗ ಮತ್ತು ಆದ ನಂತರ ಏನು ಮಾಡಬೇಕು ಅನ್ನೋದಕ್ಕೆ ಬೈಬಲ್ ಒಳ್ಳೆ ಸಲಹೆ ಕೊಡುತ್ತೆ.
ಮುಂಚೆ: ಮೊದಲೇ ರೆಡಿ ಇರಿ
ಪವಿತ್ರ ಗ್ರಂಥ ಏನು ಹೇಳುತ್ತೆ?: “ಜಾಣ ಅಪಾಯ ನೋಡಿ ಅಡಗಿಕೊಳ್ತಾನೆ, ಅನುಭವ ಇಲ್ಲದವನು ಮುಂದೆ ಹೋಗಿ ನಷ್ಟ ಅನುಭವಿಸ್ತಾನೆ.”—ಜ್ಞಾನೋಕ್ತಿ 22:3.
ಅರ್ಥ: ನೀವಿರೋ ಜಾಗದಲ್ಲಿ ಯಾವೆಲ್ಲಾ ವಿಪತ್ತುಗಳಾಗಬಹುದು ಅಂತ ಮೊದಲೇ ತಿಳಿದುಕೊಳ್ಳಿ. ಈ ತರ ತಿಳಿದುಕೊಂಡರೆ ವಿಪತ್ತುಗಳಾದ ತಕ್ಷಣ ಏನು ಮಾಡಬೇಕು ಅಂತ ಗೊತ್ತಿರುತ್ತೆ ಮತ್ತು ನಿಮ್ಮ ಕುಟುಂಬದವರ ಜೀವನೂ ಕಾಪಾಡಬಹುದು.
ಅನುಭವ: “ನಾವಿರೋ ಜಾಗದಲ್ಲಿ ದಿಡೀರ್ ಅಂತ ಕಾಡ್ಗಿಚ್ಚು ಬಂದಾಗ ನಮ್ಮ ಜೀವಕ್ಕೆ ಯಾವ ತೊಂದರೆನೂ ಆಗಲಿಲ್ಲ. ಯಾಕಂದರೆ ನಾವು ಮೊದಲೇ ತಯಾರಾಗಿದ್ವಿ. ಎಮರ್ಜೆನ್ಸಿ ಬ್ಯಾಗ್ ಅಂದರೆ ಗೋ ಬ್ಯಾಗ್ಗಳನ್ನ ರೆಡಿ ಮಾಡಿದ್ವಿ, ಅದರಲ್ಲಿ ಬಟ್ಟೆ ಬರೆ, ಔಷಧಿಗಳು ಎಲ್ಲಾ ಇತ್ತು. ನಮ್ಮ ಸುತ್ತ ಮುತ್ತ ಜನರು ಏನ್ ಮಾಡೋದು ಅಂತ ಗೊತ್ತಾಗದೆ ದಿಕ್ಕಾಪಾಲಾಗಿ ಓಡುತ್ತಿದ್ರು. ಆದರೆ ನಮ್ಮ ಪರಿಸ್ಥಿತಿ ಅವರ ತರ ಇರಲಿಲ್ಲ. ನಾವು ಮೊದಲೇ ತಯಾರಾಗಿದ್ದು ಒಳ್ಳೇದೇ ಆಯ್ತು!”—ತಾಮರ, ಕ್ಯಾಲಿಫೋರ್ನಿಯಾ, ಅಮೆರಿಕ.
ಸಮಸ್ಯೆಗಳಾದಾಗ: ಪ್ರಾಮುಖ್ಯ ವಿಷಯಗಳಿಗೆ ಗಮನ ಕೊಡಿ.
ಪವಿತ್ರ ಗ್ರಂಥ ಏನು ಹೇಳುತ್ತೆ?: “ಒಬ್ಬನ ಹತ್ರ ಎಷ್ಟೇ ಆಸ್ತಿಪಾಸ್ತಿ ಇದ್ರೂ ಅದು ಅವನಿಗೆ ಜೀವ ಕೊಡಲ್ಲ.”—ಲೂಕ 12:15.
ಅರ್ಥ: ಆಸ್ತಿಪಾಸ್ತಿಗಿಂತ ಜೀವ ತುಂಬ ಮುಖ್ಯ.
ಅನುಭವ: “ಲಾವಿನ್ ಚಂಡಮಾರುತದಿಂದ b ನಮ್ಮ ಮನೆ ಸರ್ವನಾಶ ಆದಾಗ ನನ್ನ ಕೈ ಕಾಲೇ ಆಡಲಿಲ್ಲ, ಏನ್ ಮಾಡಬೇಕು ಅಂತಾನೇ ಗೊತ್ತಾಗಲಿಲ್ಲ. ಆಗ ನಾನು ಪ್ರಾರ್ಥಿಸಿ ಯೆಹೋವ ದೇವರ ಹತ್ರ ಎಲ್ಲಾನೂ ಹೇಳಿಕೊಂಡೆ, ಇದಾದ ಮೇಲೆ ಮನಸ್ಸಿಗೆ ನಿರಾಳ ಅನಿಸ್ತು. ಈ ಟೈಮ್ನಲ್ಲಿ ನಮ್ಮ ಜೀವ ಉಳಿದಿದ್ದೇ ಹೆಚ್ಚು, ಮನೆ ಆಸ್ತಿಪಾಸ್ತಿ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಬಾರದು ಅಂತ ಅರ್ಥಮಾಡಿಕೊಂಡೆ.”—ಲೆಸ್ಲಿ, ಫಿಲಿಪ್ಪೀನ್ಸ್.
ಆದ ನಂತರ: ಇವತ್ತಿನ ಬಗ್ಗೆ ಚಿಂತೆ ಮಾಡಿ, ನಾಳೆ ಬಗ್ಗೆ ಚಿಂತೆ ಮಾಡಬೇಡಿ.
ಪವಿತ್ರ ಗ್ರಂಥ ಏನು ಹೇಳುತ್ತೆ?: “ನಾಳೆ ಬಗ್ಗೆ ಚಿಂತೆ ಮಾಡಬೇಡಿ. ನಾಳೆಗೆ ನಾಳೆದೇ ಚಿಂತೆ ಇರುತ್ತೆ. ಇವತ್ತಿನ ಸಮಸ್ಯೆಗಳು ಇವತ್ತಿಗೇ ಸಾಕು.”—ಮತ್ತಾಯ 6:34.
ಅರ್ಥ: ‘ನಾಳೆ ಏನಾಗುತ್ತೋ, ಯಾವ ಸಮಸ್ಯೆ ಬರುತ್ತೋ’ ಅಂತ ಚಿಂತೆ ಮಾಡಬೇಡಿ.
ಅನುಭವ: “ಇರ್ಮಾ ಚಂಡಮಾರುತ ಬಂದಾಗ ನಮ್ಮ ಮನೆ ಹಾಳಾಗೋಯ್ತು. ಆಗ ನಂಗೆ ತುಂಬಾ ನಿರ್ಧಾರಗಳನ್ನ ಮಾಡಬೇಕಾಗಿ ಬಂತು. ಎಷ್ಟರ ಮಟ್ಟಿಗೆ ತಲೆಕೆಟ್ಟೋಯ್ತು ಅಂದ್ರೆ ಏನು ಮಾಡಬೇಕು ಅಂತನೇ ಗೊತ್ತಾಗ್ಲಿಲ್ಲ. ಆಗ ನಾನು, ಇವತ್ತಿನ ಬಗ್ಗೆ ಮಾತ್ರ ಚಿಂತೆ ಮಾಡಬೇಕು ನಾಳೆ ಬಗ್ಗೆ ಚಿಂತೆ ಮಾಡಬಾರದು ಅನ್ನೋ ಬೈಬಲ್ ಸಲಹೆನ ಪಾಲಿಸಿದೆ. ಆಗ ಮನಸ್ಸಿಗೆ ನೆಮ್ಮದಿ ಅನಿಸ್ತು. ಯೆಹೋವ ದೇವರ ಸಹಾಯದಿಂದ ನಂಗೆ ಬಂದಿರೋ ಕಷ್ಟಗಳನ್ನ ನಾನು ಖಂಡಿತ ಜಯಿಸಬಹುದು ಅಂತ ಅರ್ಥಮಾಡ್ಕೊಳ್ಳೋಕಾಯ್ತು.”—ಸ್ಯಾಲಿ, ಫ್ಲೊರಿಡ, ಅಮೆರಿಕ.
ಹೆಚ್ಚಿನ ಪ್ರಾಯೋಗಿಕ ಸಲಹೆಗಳ ಬಗ್ಗೆ ತಿಳಿದುಕೊಳ್ಳಲು “ಪ್ರಕೃತಿ ವಿಕೋಪಗಳ ಹಾವಳಿ—ನಿಭಾಯಿಸುವುದು ಹೇಗೆ?” ಅನ್ನೋ ಲೇಖನ ನೋಡಿ.
a ಯೆಹೋವ ಅನ್ನೋದು ದೇವರ ಹೆಸರು.—ಕೀರ್ತನೆ 83:18.
b ಹೈಮಾ ಚಂಡಮಾರುತ ಅಂತನೂ ಕರೆಯುತ್ತಾರೆ.