ಬೇರೆಯವರ ನಂಬಿಕೆ ಮತ್ತು ಅಭಿಪ್ರಾಯಗಳನ್ನ ಗೌರವಿಸಬೇಕಾ?—ಬೈಬಲ್ ಕೊಡೋ ಸಹಾಯ
ಬೇರೆಯವರ ನಂಬಿಕೆ ಮತ್ತು ಅಭಿಪ್ರಾಯಗಳನ್ನ ಗೌರವಿಸಿದ್ರೆ ಮಾತ್ರ ಶಾಂತಿ ನೆಮ್ಮದಿ ಸಿಗುತ್ತೆ.—ಯುನೆಸ್ಕೋ (UNESCO) ಡಿಕ್ಲೆರೇಶನ್ ಆಫ್ ಪ್ರಿನ್ಸಿಪಲ್ಸ್ ಆನ್ ಟಾಲರೆನ್ಸ್, 1995.
ಬೇರೆಯವರ ಆಭಿಪ್ರಾಯಗಳನ್ನ ಗೌರವಿಸಿಲ್ಲಾಂದ್ರೆ ನಾವು ಅವರನ್ನ ದ್ವೇಷಿಸೋಕೆ ಶುರುಮಾಡಿಬಿಡ್ತೀವಿ. ಇದರಿಂದ ಅವರ ಬಗ್ಗೆ ತಪ್ಪುತಪ್ಪಾಗಿ ಮಾತಾಡಿಬಿಡ್ತೀವಿ, ಅವರನ್ನ ದ್ವೇಷಿಸಿಬಿಡ್ತೀವಿ ಮತ್ತು ಬೇಧಬಾವ ಮಾಡಿಬಿಡ್ತೀವಿ.
ಬೇರೆಯವರ ನಂಬಿಕೆ ಮತ್ತು ಅಭಿಪ್ರಾಯಗಳನ್ನ ಗೌರವಿಸೋದಂದ್ರೆ ಅವರು ಸರಿ ಮಾಡಲಿ ತಪ್ಪು ಮಾಡಲಿ, ಸರಿಯಾಗಿ ಯೋಚಿಸಲಿ ತಪ್ಪಾಗಿ ಯೋಚಿಸಲಿ ಎಲ್ಲವನ್ನೂ ಒಪ್ಪಿಕೊಳ್ಳೋದು ಅಂತ ಕೆಲವರು ಅಂದುಕೊಳ್ತಾರೆ. ಆದ್ರೆ ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ ಗೊತ್ತಾ? ಪ್ರತಿಯೊಬ್ಬ ವ್ಯಕ್ತಿಗೂ ಏನು ಮಾಡಬೇಕು, ಏನು ನಂಬಬೇಕು ಅಂತ ಆಯ್ಕೆ ಮಾಡೋ ಹಕ್ಕಿದೆ. ಆ ವ್ಯಕ್ತಿ ಮಾಡೋದು ನಮಗೆ ಇಷ್ಟ ಆಗಲಿ, ಇಷ್ಟ ಆಗದೇ ಇರಲಿ ನಾವು ಅವರ ಹಕ್ಕನ್ನ ಗೌರವಿಸ್ತೀವಿ.
ಒಬ್ಬೊಬ್ಬರೂ ಒಂದೊಂದನ್ನ ನಂಬ್ತಾರೆ. ಅವರ ನಂಬಿಕೆಯನ್ನ ಗೌರವಿಸೋಕೆ ಇವತ್ತು ಬೈಬಲ್ ನಮಗೆ ಸಹಾಯ ಮಾಡುತ್ತಾ?
ಗೌರವಿಸೋಕೆ ಬೈಬಲ್ ಕೊಡೋ ಸಹಾಯ
“‘ನಾನು ಹೇಳಿದ್ದೇ ಆಗಬೇಕು’ ಅನ್ನೋ ಗುಣ” ನಮ್ಮಲ್ಲಿರಬಾರದು ಅಂತ ಬೈಬಲ್ ಹೇಳುತ್ತೆ. (ಫಿಲಿಪ್ಪಿ 4:5) ಹೀಗೆ ಬೇರೆಯವರ ನಂಬಿಕೆ ಮತ್ತು ಅಭಿಪ್ರಾಯಗಳನ್ನ ಗೌರವಿಸಬೇಕು ಅಂತ ಪ್ರೋತ್ಸಾಹಿಸುತ್ತೆ. ಅಂದ್ರೆ ನಾವು ಬೇರೆಯವರ ಭಾವನೆಗಳನ್ನ ಚೆನ್ನಾಗಿ ಅರ್ಥಮಾಡಿಕೊಂಡು ಅವರನ್ನ ಗೌರವಿಸಬೇಕು, ಅವರ ಜೊತೆ ಸರಿಯಾಗಿ ನಡ್ಕೊಳ್ಳಬೇಕು ಅಂತ ಬೈಬಲ್ ಹೇಳುತ್ತೆ. ಈ ತರ ಮಾಡಿದ್ರೆ ನಾವು ಒಬ್ಬ ವ್ಯಕ್ತಿ ನಂಬೋದನ್ನ ಅಥವಾ ಅವನು ಮಾಡೋದನ್ನ ಸಂಪೂರ್ಣವಾಗಿ ಒಪ್ಪಲ್ಲ ಅಂದ್ರೂ ಅವನಿಗಿರೋ ಹಕ್ಕನ್ನ ಗೌರವಿಸ್ತೀವಿ ಅಂತ ತೋರಿಸಿಕೊಡ್ತೀವಿ.
“ಮನುಷ್ಯನೇ, ಒಳ್ಳೇದು ಯಾವುದಂತ ಆತನು [ದೇವರು] ನಿನಗೆ ಹೇಳಿದ್ದಾನೆ” ಅಂತ ಬೈಬಲ್ ಹೇಳುತ್ತೆ. (ಮೀಕ 6:8) ಮನುಷ್ಯರು ಯಾವ ತರ ನಡ್ಕೊಂಡ್ರೆ ಸರಿಯಾಗಿರುತ್ತೆ ಅಂತ ದೇವರು ಬೈಬಲ್‌ನಲ್ಲಿ ಮುಂಚೆನೇ ಬರೆಸಿಟ್ಟಿದ್ದಾನೆ. ಈ ಸಲಹೆಗಳನ್ನ ನಮ್ಮ ಜೀವನದಲ್ಲಿ ಪಾಲಿಸಿದ್ರೆ ನಾವು ಯಾವಾಗಲೂ ಖುಷಿ ಖುಷಿಯಾಗಿರ್ತೀವಿ.—ಯೆಶಾಯ 48:17, 18.
ಬೇರೆಯವರು ಮಾಡೋದು ಸರಿನಾ ತಪ್ಪಾ ಅಂತ ಹೇಳೋ ಅಧಿಕಾರವನ್ನ ದೇವರು ನಮಗೆ ಕೊಟ್ಟಿಲ್ಲ. ಯಾಕಂದ್ರೆ “ದೇವರೇ ನಮಗೆ ನಿಯಮ ಕೊಡ್ತಾನೆ, ಆತನೇ ನಮ್ಮ ನ್ಯಾಯಾಧೀಶ . . . ಬೇರೆಯವ್ರಲ್ಲಿ ತಪ್ಪು ಹುಡುಕೋಕೆ ನೀವ್ಯಾರು?” ಅಂತ ಬೈಬಲ್ ಹೇಳುತ್ತೆ. (ಯಾಕೋಬ 4:12) ಯಾವುದು ಸರಿ ಯಾವುದು ತಪ್ಪು ಅಂತ ಆಯ್ಕೆ ಮಾಡೋ ಸ್ವಾತಂತ್ರ್ಯವನ್ನ ದೇವರು ನಮಗೆ ಕೊಟ್ಟಿದ್ದಾನೆ. ಹಾಗಾಗಿ ನಾವು ಏನೇ ಮಾಡಿದ್ರೂ ಅದಕ್ಕೆ ನಾವೇ ಜವಾಬ್ದಾರಿ.—ಧರ್ಮೋಪದೇಶಕಾಂಡ 30:19.
ಗೌರವಿಸೋದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ?
“ಎಲ್ಲ ರೀತಿಯ ಜನರನ್ನು ಗೌರವಿಸಿರಿ” ಅಂತ ಬೈಬಲ್ ಹೇಳುತ್ತೆ. (1 ಪೇತ್ರ 2:17) ಜನ ಏನೇ ನಂಬಲಿ, ಹೇಗೇ ಜೀವಿಸಲಿ ನಾವು ಅವರನ್ನ ಗೌರವಿಸ್ತೀವಿ. ಯಾಕಂದ್ರೆ ನಾವು ಬೈಬಲ್ ನಿಯಮ ಪಾಲಿಸ್ತೀವಿ. ಆದ್ರೆ ಇದರರ್ಥ ಜನ ಹೇಗೇ ಜೀವಿಸಲಿ, ಏನನ್ನೇ ನಂಬಲಿ ಅದನ್ನೆಲ್ಲಾ ಒಪ್ಪಿಕೊಳ್ತೀವಿ ಅಂತ ಅಲ್ಲ. ಬದಲಿಗೆ ನಾವು ಎಲ್ಲ ಜನರನ್ನ ಗೌರವಿಸ್ತೀದ್ದೀವಿ ಅಂತರ್ಥ. (ಲೂಕ 6:31) ಹೀಗೆ ಯೇಸು ಜನರ ಜೊತೆ ಹೇಗೆ ನಡ್ಕೊಂಡನೋ ನಾವೂ ಅದೇ ತರ ನಡ್ಕೊಳ್ಳೋಕೆ ಪ್ರಯತ್ನಿಸ್ತೀವಿ.
ಉದಾಹರಣೆಗೆ ಯೇಸು ಒಂದು ಸಲ ಒಬ್ಬ ಸ್ತ್ರೀಯನ್ನ ಭೇಟಿ ಮಾಡಿದನು. ಇವರಿಬ್ಬರ ನಂಬಿಕೆ ಬೇರೆ ಬೇರೆಯಾಗಿತ್ತು. ಅಷ್ಟೇ ಅಲ್ಲ ಈ ಸ್ತ್ರೀ ತನ್ನ ಗಂಡನ ಜೊತೆ ಜೀವಿಸದೆ ಬೇರೆ ವ್ಯಕ್ತಿ ಜೊತೆ ಜೀವಿಸ್ತಿದ್ದಳು. ಇದು ಯೇಸುಗೆ ಒಂಚೂರೂ ಇಷ್ಟ ಆಗಲಿಲ್ಲ. ಆದ್ರೂ ಯೇಸು ಆ ಸ್ತ್ರೀ ಜೊತೆ ಗೌರವದಿಂದ ಮಾತಾಡಿದನು.—ಯೋಹಾನ 4:9, 17-24.
ನಮ್ಮ ನಂಬಿಕೆಗಳ ಬಗ್ಗೆ ತಿಳ್ಕೊಳ್ಳೋಕೆ ಇಷ್ಟಪಡೋರಿಗೆ ಯೇಸು ತರ ವಿವರಿಸೋಕೆ ನಾವು ಯಾವಾಗಲೂ ತಯಾರಿರುತ್ತೀವಿ. ಅದನ್ನ ತುಂಬ ಗೌರವದಿಂದ ಮಾಡ್ತೀವಿ. (1 ಪೇತ್ರ 3:15) “ದೇವರ ಸೇವಕನಿಗೆ ಜಗಳ ಮಾಡೋ ಅಗತ್ಯ ಇಲ್ಲ. ಅವನು ಎಲ್ರ ಜೊತೆ ಮೃದುವಾಗಿ ನಡ್ಕೊಬೇಕು” ಅಂತ ಬೈಬಲ್ ಹೇಳುತ್ತೆ. (2 ತಿಮೊತಿ 2:24) ಹೀಗೆ ನಾವು ನಂಬೋದನ್ನೇ ಬೇರೆಯವರೂ ನಂಬಬೇಕು ಅಂತ ಒತ್ತಾಯ ಮಾಡದೆ ಅವರು ಏನು ನಂಬುತ್ತಾರೋ ಅದನ್ನ ಗೌರವಿಸ್ತೀವಿ.
ದ್ವೇಷಿಸೋದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ?
“ಎಲ್ರ ಜೊತೆ ಶಾಂತಿಯಿಂದ” ಇರಬೇಕು ಅಂತ ಬೈಬಲ್ ಹೇಳುತ್ತೆ. (ಇಬ್ರಿಯ 12:14) ಯಾರು ಶಾಂತಿಯನ್ನ ಇಷ್ಟಪಡುತ್ತಾರೋ ಅವರು ದ್ವೇಷವನ್ನು ಇಷ್ಟಪಡಲ್ಲ. ಇಂಥ ವ್ಯಕ್ತಿ ಬೇರೆಯವರು ಏನೇ ಮಾಡಿದ್ರೂ ಶಾಂತಿಯಿಂದ ಇರೋಕೆ ಪ್ರಯತ್ನಿಸ್ತಾನೆ. ಇದರರ್ಥ ಅವನು ಎಲ್ಲದಕ್ಕೂ ಒಪ್ಪಿಕೊಳ್ತಾನೆ ಅಂತ ಅಲ್ಲ. (ಮತ್ತಾಯ 5:9) “ನಿಮ್ಮ ಶತ್ರುಗಳನ್ನ ಪ್ರೀತಿಸ್ತಾ ಇರಿ” ಅಂತ ಬೈಬಲ್ ಹೇಳುತ್ತೆ. (ಮತ್ತಾಯ 5:44) ಇದರರ್ಥ ಜನ ನಮ್ಮ ಜೊತೆ ಕೆಟ್ಟದಾಗಿ ನಡ್ಕೊಂಡರೂ ನಾವು ಅವರ ಜೊತೆ ದಯೆಯಿಂದ ನಡ್ಕೋಬೇಕು.
ಜನರನ್ನ ಅವಮಾನಿಸೋ ಅಥವಾ ಅವರಿಗೆ ಹಾನಿ ಮಾಡೋ ತರ ಏನಾದ್ರೂ ಮಾಡಿದ್ರೆ ಅದನ್ನ ದೇವರು ‘ಇಷ್ಟಪಡಲ್ಲ’ ಅಥವಾ ದ್ವೇಷಿಸ್ತಾನೆ ಅಂತ ಬೈಬಲ್ ಹೇಳುತ್ತೆ. (ಜ್ಞಾನೋಕ್ತಿ 6:16-19) ಇದರರ್ಥ ಇಂಥ ಕೆಟ್ಟ ವಿಷಯಗಳನ್ನ ಮಾಡೋರನ್ನ ದೇವರು ದ್ವೇಷಿಸ್ತಾನೆ. ಒಬ್ಬ ಕೆಟ್ಟ ವ್ಯಕ್ತಿ ಎಲ್ಲವನ್ನ ಬಿಟ್ಟು ಬದಲಾಗೊಕೆ ರೆಡಿ ಇದ್ರೆ ದೇವರು ಅವನನ್ನ ಕ್ಷಮಿಸೋಕೆ ಮತ್ತು ಅವನಿಗೆ ಸಹಾಯ ಮಾಡೋಕೆ ರೆಡಿಯಾಗಿರ್ತಾರೆ.—ಯೆಶಾಯ 55:7.
ಬೇರೆಯವರ ನಂಬಿಕೆಗಳನ್ನ ಮತ್ತು ಅಭಿಪ್ರಾಯಗಳನ್ನ ಗೌರವಿಸೋಕೆ ಸಹಾಯ ಮಾಡೋ ಬೈಬಲ್ ವಚನಗಳು
ತೀತ 3:2: “‘ನಾನು ಹೇಳಿದ್ದೇ ಆಗಬೇಕು’ ಅನ್ನೋ ಗುಣ ಇರಬಾರದು, ಎಲ್ರ ಜೊತೆ ಯಾವಾಗ್ಲೂ ಸೌಮ್ಯವಾಗಿ ನಡ್ಕೊಬೇಕು.”
‘ನಾನು ಹೇಳಿದ್ದೇ ಆಗಬೇಕು’ ಅಂತ ಹಟ ಹಿಡಿಯದೇ ಇರೋರು ಯಾರು ಏನೇ ಹೇಳಿದ್ರೂ ಸೌಮ್ಯವಾಗಿರ್ತಾರೆ. ಹೀಗೆ ಬೇರೆಯವರನ್ನ ಗೌರವಿಸ್ತಾರೆ.
ಮತ್ತಾಯ 7:12: “ಜನ ನಿಮಗೆ ಏನು ಮಾಡಬೇಕಂತ ಇಷ್ಟಪಡ್ತೀರೋ ಅದನ್ನೇ ಅವ್ರಿಗೆ ಮಾಡಿ.”
ಬೇರೆಯವರು ನಾವು ಹೇಳೋದನ್ನ ಕೇಳಿಸ್ಕೊಂಡು ನಮ್ಮ ಭಾವನೆಗಳಿಗೆ ಬೆಲೆ ಕೊಟ್ರೆ, ನಮ್ಮನ್ನ ಗೌರವಿಸಿದ್ರೆ ನಮಗೆ ಅದು ತುಂಬ ಇಷ್ಟ ಆಗುತ್ತೆ. ಯೇಸು ಕಲಿಸಿದ ಈ ನಿಯಮವನ್ನ ಹೇಗೆ ಅನ್ವಯಿಸಬಹುದು ಅಂತ ತಿಳ್ಕೊಳ್ಳೋಕೆ “ನಾವು ಬೇರೆಯವರ ಜೊತೆ ಹೇಗಿರಬೇಕು ಅಂತ ಬೈಬಲ್ ಹೇಳುತ್ತೆ?” ಅನ್ನೋ ಲೇಖನವನ್ನ ನೋಡಿ.
ಯೆಹೋಶುವ 24:15: “ನೀವು ಯಾರನ್ನ ಆರಾಧಿಸಬೇಕಂತ ಇವತ್ತೇ ಆರಿಸ್ಕೊಳ್ಳಿ.”
ಪ್ರತಿಯೊಬ್ಬರಿಗೂ ಏನು ಮಾಡಬೇಕು ಅಂತ ತೀರ್ಮಾನ ಮಾಡೋ ಹಕ್ಕಿದೆ. ಆ ಹಕ್ಕನ್ನ ನಾವು ಗೌರವಿಸಿದಾಗ ಶಾಂತಿ ಕಾಪಾಡಿಕೊಳ್ತೀವಿ.
ಅಪೊಸ್ತಲರ ಕಾರ್ಯ 10:34: “ದೇವರು ಭೇದಭಾವ ಮಾಡಲ್ಲ.”
ಜಾತಿ, ಸಂಸ್ಕೃತಿ, ಮತ ನೋಡಿ ದೇವರು ಬೇಧಭಾವ ಮಾಡಲ್ಲ. ಅಷ್ಟೇ ಅಲ್ಲ ಸ್ತ್ರೀ, ಪುರುಷ ಅಂತನೂ ಬೇಧಭಾವ ಮಾಡಲ್ಲ. ಯಾರು ದೇವರನ್ನ ಅನುಕರಿಸಲು ಇಷ್ಟಪಡ್ತಾರೋ ಅವರು ದೇವರ ತರ ಎಲ್ಲರನ್ನ ಗೌರವಿಸ್ತಾರೆ.
ಹಬಕ್ಕೂಕ 1:12, 13: “[ದೇವರು] ಕೆಟ್ಟತನವನ್ನ ಸಹಿಸಲ್ಲ.”
ದೇವರ ತಾಳ್ಮೆಗೂ ಒಂದು ಮಿತಿಯಿದೆ. ಶಾಶ್ವತಕ್ಕೂ ದೇವರು ಸುಮ್ನೆ ಕೂರಲ್ಲ. ಇದರ ಬಗ್ಗೆ ಹೆಚ್ಚನ್ನ ತಿಳ್ಕೊಳ್ಳೋಕೆ ದೇವರು ಕಷ್ಟಗಳನ್ನು ಯಾಕೆ ಅನುಮತಿಸುತ್ತಾನೆ? ಅನ್ನೋ ವಿಡಿಯೋ ನೋಡಿ.
ರೋಮನ್ನರಿಗೆ 12:19: “ದೇವರು ತನ್ನ ಕೋಪ ತೋರಿಸೋಕೆ ಬಿಟ್ಟುಬಿಡಿ. ‘ಸೇಡು ತೀರಿಸೋದು ನನ್ನ ಕೆಲಸ, ನಾನೇ ಸರಿಯಾದ ಪ್ರತಿಫಲ ಕೊಡ್ತೀನಿ’ ಅಂತ ಯೆಹೋವ a ಹೇಳ್ತಾನೆ.”
ಸೇಡು ತೀರಿಸೋ ಜವಾಬ್ದಾರಿಯನ್ನ ಯೆಹೋವ ದೇವರು ಯಾರ ಕೈಗೂ ಕೊಟ್ಟಿಲ್ಲ. ಆತನು ಸರಿಯಾದ ಸಮಯಕ್ಕೆ ನ್ಯಾಯವನ್ನ ಕೊಟ್ಟೇ ಕೊಡ್ತಾನೆ. ಇದರ ಬಗ್ಗೆ ಹೆಚ್ಚನ್ನ ತಿಳ್ಕೊಳ್ಳೋಕೆ “ನಮಗೆ ನ್ಯಾಯ ಸಿಗುತ್ತಾ?” ಅನ್ನೋ ಲೇಖನವನ್ನ ನೋಡಿ.
a ಯೆಹೋವ ಅನ್ನೋದು ದೇವರ ಹೆಸರು. (ಕೀರ್ತನೆ 83:18) “ಯೆಹೋವ ಯಾರು?” ಅನ್ನೋ ಲೇಖನವನ್ನ ನೋಡಿ.