ಕಮ್ಮಿ ಕಾಸಲ್ಲಿ ಬಂಪರ್ ಬದುಕು
ಅಂಟುರೋಗಗಳು, ನೈಸರ್ಗಿಕ ವಿಪತ್ತುಗಳು, ರಾಜಕೀಯ ಗಲಭೆಗಳು ಮತ್ತು ಯುದ್ಧಗಳಿಂದ ಒಂದೇ ದಿನದಲ್ಲಿ ಆರ್ಥಿಕ ಪರಿಸ್ಥಿತಿ ತಲೆಕೆಳಗಾಗಿಬಿಡುತ್ತೆ. ಇದ್ರಿಂದ ಕೈಯಲ್ಲಿ ಕಾಸಿಲ್ಲದೆ ಜೀವನ ಮಾಡೋದು ನಿಮ್ಗೆ ಕಷ್ಟ ಆಗ್ತಿದ್ಯಾ? ಕಷ್ಟ ಆಗುತ್ತೆ ನಿಜ. ಆದ್ರೆ ಇಂಥಾ ಕಷ್ಟದಲ್ಲೂ ನಮ್ಗೆ ಒಂದು ಆಶಾಕಿರಣ ಇದೆ. ಅದೇ ಬೈಬಲಿನಲ್ಲಿರೊ ವಿವೇಕದ ಮಾತುಗಳು. ಅದರಲ್ಲಿರೋ ಪ್ರಾಯೋಗಿಕ ಮಾತುಗಳನ್ನ ಕೇಳೋದಾದ್ರೆ ಕಮ್ಮಿ ಕಾಸಲ್ಲೂ ಖುಷಿಯಾಗಿ ಸಂಸಾರ ಮಾಡಬಹುದು.
1. ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳಿ.
ಬೈಬಲ್ ತತ್ವ: ‘ಸಮೃದ್ಧಿಯಿಂದಿರುವುದು ಹೇಗೆ ಮತ್ತು ಕೊರತೆಯಿಂದಿರುವುದು ಹೇಗೆ ಎಂಬುದು ನನಗೆ ತಿಳಿದಿದೆ.’—ಫಿಲಿಪ್ಪಿ 4:12.
ಮೊದಲಿನ ತರ ದುಡ್ಡು ಇಲ್ಲದೆ ಇದ್ರೂ ಕಮ್ಮಿ ದುಡ್ಡಲ್ಲೇ ನೀವು ಜೀವನ ಮಾಡೋದಿಕ್ಕೆ ಆಗುತ್ತೆ. ಎಷ್ಟು ಬೇಗ ನೀವು ಪರಿಸ್ಥಿತಿನ ಅರ್ಥಮಾಡ್ಕೊಂಡು ಅದಕ್ಕೆ ಹೊಂದುಕೊಳ್ತಿರೋ ಅಷ್ಟೇ ಬೇಗ ನೀವು ಮತ್ತು ನಿಮ್ಮ ಕುಟುಂಬದವ್ರು ಜೀವ್ನನಾ ಸುಧಾರಿಸಿಕೊಂಡು ಹೋಗಬಹುದು.
ಸರ್ಕಾರ ಅಥ್ವಾ ಸಂಘ ಸಂಸ್ಥೆಗಳು ಕೊಡೋ ಸಹಾಯಗಳ ಬಗ್ಗೆ ತಿಳ್ಕೊಳ್ಳಿ. ಒಂದುವೇಳೆ ಆ ತರ ಸೌಲಭ್ಯ ಇದ್ರೆ ಅರ್ಜಿ ಹಾಕಿ ಅದನ್ನ ಉಪಯೋಗಿಸಿಕೊಳ್ಳಿ. ಯಾಕಂದ್ರೆ ಅವು ಸ್ವಲ್ಪ ಸಮಯಕ್ಕೆ ಮಾತ್ರ ಲಭ್ಯ ಇರುತ್ತೆ.
2. ಪರಿಸ್ಥಿತಿನ ಕುಟುಂಬವಾಗಿ ಎದುರಿಸಿ.
ಬೈಬಲ್ ತತ್ವ: “ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು, ಬಹು ಮಂದಿ ಆಲೋಚನಾಪರರಿರುವಲ್ಲಿ ಈಡೇರುವವು.”—ಜ್ಞಾನೋಕ್ತಿ 15:22.
ಪರಿಸ್ಥಿತಿ ಬಗ್ಗೆ ಹೆಂಡತಿ ಮಕ್ಕಳ ಹತ್ರ ಮಾತಾಡಿ. ಹೀಗೆ ಕುಟುಂಬದವರ ಜೊತೆ ಮಾತಾಡೋದ್ರಿಂದ ಕುಟುಂಬದ ಪರಿಸ್ಥಿತಿ ಎಲ್ರಿಗೂ ಅರ್ಥ ಆಗುತ್ತೆ ಮತ್ತು ಬೇಕಾದ ಬದಲಾವಣೆಗಳನ್ನ ಅವ್ರೂ ಮಾಡ್ಕೊಳೋಕಾಗುತ್ತೆ. ಈ ರೀತಿ ನಿಮ್ಮ ಕುಟುಂಬ ಹಿತ ಮಿತವಾಗಿ ಹಣನ ಬಳಸಿದ್ರೆ ಮತ್ತು ಅನಾವಶ್ಯಕವಾಗಿ ವೇಸ್ಟ್ ಮಾಡದೆ ಇದ್ರೆ, ಖರ್ಚು ಕಮ್ಮಿ ಆಗುತ್ತೆ ಮತ್ತು ದುಡ್ಡನ್ನ ಉಳಿಸಬಹುದು.
3. ಬಡ್ಜೆಟ್ ಮಾಡಿ.
ಬೈಬಲ್ ತತ್ವ: “ಕುಳಿತುಕೊಂಡು . . . ಸಾಕಾಗುವಷ್ಟು ಹಣ ತನ್ನಲ್ಲಿದೆಯೋ ಎಂದು ಲೆಕ್ಕಮಾಡುವುದಿಲ್ಲವೆ?”—ಲೂಕ 14:28.
ಹಾಸಿಗೆ ಇದ್ದಷ್ಟು ಕಾಲುಚಾಚೋಕೆ ಕಲಿಬೇಕು. ಆರ್ಥಿಕ ಪರಿಸ್ಥಿತಿ ಬದಲಾಗಿರೋದ್ರಿಂದ ಯಾವುದಕ್ಕೆಲ್ಲಾ ದುಡ್ಡು ಖರ್ಚಾಗ್ತಿದೆ ಅಂತ ಮೊದಲು ತಿಳ್ಕೊಬೇಕು. ಅದಕ್ಕೆ ಬಡ್ಜೆಟ್ ಮಾಡಿ. ಪ್ರತಿ ತಿಂಗಳು ನಾವು ಯಾವುದಕ್ಕೆಲ್ಲಾ ಖರ್ಚುಮಾಡ್ತಿವಿ ಅಂತ ಲಿಸ್ಟ್ ಮಾಡಿ. ದಿಢೀರಂತ ಬರೋ ಖರ್ಚುಗಳಿಗೆ ಮತ್ತು ತುರ್ತು ಪರಿಸ್ಥಿತಿಗಳಿಗೆ ಎತ್ತಿಡೊ ಹಣ ಕೂಡ ಆ ಬಡ್ಜೆಟಲ್ಲಿ ಇರಲಿ.
ಕಿವಿಮಾತು: ಚಿಕ್ಕಪುಟ್ಟ ವಿಷ್ಯಗಳಿಗೆ ನೀವು ಖರ್ಚು ಮಾಡೋದನ್ನ ಕೂಡ ಬರ್ದಿಡಿ. ಯಾಕಂದ್ರೆ ಅದ್ರಿಂದನೂ ನಮ್ಮ ಬಡ್ಜೆಟ್ಗೆ ಏಟು ಬೀಳುತ್ತೆ. ಆಶ್ಚರ್ಯದ ವಿಷ್ಯ ಏನಂದ್ರೆ ಈ ತರ ಸಣ್ಣ ಪುಟ್ಟ ವಿಷ್ಯಗಳಿಗೆ ಕೆಲವು ಸಾರಿ ಜಾಸ್ತಿ ಖರ್ಚಾಗಿರುತ್ತೆ. ಉದಾಹರಣೆಗೆ, ಒಬ್ಬ ವ್ಯಕ್ತಿ ತಾನು ಮಾಡೋ ಖರ್ಚನ್ನ ಲೆಕ್ಕ ಮಾಡಿದಾಗ ಒಂದು ವರ್ಷದಲ್ಲಿ ಬರೀ ಚೂಯಿಂಗ್ ಗಮ್ ತಿಂದೇ ಸಾವಿರಗಟ್ಟಲೆ ರುಪಾಯಿಗಳನ್ನ ಖರ್ಚು ಮಾಡಿದ್ದ ಅಂತ ಆತನಿಗೆ ಗೊತ್ತಾಯ್ತು!
4. ಪ್ರಾಮುಖ್ಯವಾದ ವಿಷ್ಯಗಳಿಗೆ ಮಾತ್ರ ಖರ್ಚು ಮಾಡಿ.
ಬೈಬಲ್ ತತ್ವ: ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳುವವರಾಗಿ ಇರಿ’—ಫಿಲಿಪ್ಪಿ 1:10.
ನಿಮ್ಮ ಆದಾಯನ ನೀವು ಮಾಡೋ ಖರ್ಚಿನ ಜೊತೆ ಹೋಲಿಸಿ ನೋಡಿ. ನಿಮ್ಗೆ ಆದಾಯ ಕಮ್ಮಿ ಬರ್ತಿರೋದ್ರಿಂದ ಯಾವುದರಲೆಲ್ಲಾ ಖರ್ಚು ಕಮ್ಮಿ ಮಾಡಬಹುದು ಅಂತ ನೋಡಿ. ಈ ಕೆಳಗೆ ತಿಳಿಸಿರೊ ಕ್ಷೇತ್ರಗಳ ಬಗ್ಗೆ ಸ್ವಲ್ಪ ಗಮನ ಕೊಡಿ:
ವಾಹನ. ನಿಮ್ಮ ಹತ್ರ ಒಂದಕ್ಕಿಂತ ಜಾಸ್ತಿ ಗಾಡಿಗಳಿದ್ರೆ ಅದನ್ನ ಮಾರಬಹುದಾ ಅಂತ ನೋಡಿ. ತುಂಬ ಬೆಲೆಬಾಳೋ ಮತ್ತೆ ಖರ್ಚು ಜಾಸ್ತಿಯಾಗೋ ಗಾಡಿಗಳಿದ್ರೆ ಅದರ ಬದ್ಲು ಖರ್ಚು ಕಮ್ಮಿಯಾಗೋ ಗಾಡಿಗಳನ್ನ ಉಪಯೋಗಿಸಿ. ಸಾರ್ವಜನಿಕ ವಾಹನಗಳಲ್ಲಿ ಹೋಗಬಹುದಾ ನೋಡಿ, ಇಲ್ಲಾ ಸೈಕಲ್ ಉಪಯೋಗಿಸಿ. ಸಾಧ್ಯ ಆಗೋದಾದ್ರೆ ಆದಷ್ಟು ನಡಿಯೊ ಅಭ್ಯಾಸ ಮಾಡ್ಕೊಳ್ಳಿ.
ಮನರಂಜನೆ. ಸಾಧ್ಯ ಆದ್ರೆ ಕೆಲವು ತಿಂಗಳು, ಸ್ಟ್ರೀಮಿಂಗ್, ಸ್ಯಾಟಲೈಟ್, ಕೇಬಲ್ ಕನೆಕ್ಷನ್ ಕಟ್ ಮಾಡಕ್ಕಾಗುತ್ತಾ ನೋಡಿ. ಮನರಂಜನೆಗೆ ಸಾಧ್ಯವಾದಷ್ಟು ಕಮ್ಮಿ ಖರ್ಚು ಮಾಡಿ.
ಸೌಕರ್ಯಗಳು. ನೀರು, ಕರೆಂಟ್, ಪೆಟ್ರೋಲ್ ಇವುಗಳನ್ನೆಲ್ಲ ಹೇಗೆ ಉಳಿಸಬಹುದಂತ ಕುಟುಂಬದವ್ರತ್ರ ಮಾತಾಡಿ. ಅಗತ್ಯ ಇಲ್ಲದಿದ್ದಾಗ ಲೈಟ್ ಆಫ್ ಮಾಡಿ, ಮಿತವಾಗಿ ನೀರನ್ನ ಉಪಯೋಗಿಸಿ. ಇವೆಲ್ಲಾ ನಮಗೆ ಕ್ಷುಲ್ಲಕ ಅನಿಸಬಹುದು ಆದ್ರೆ ಇಂಥಾ ರೂಢಿಗಳನ್ನ ಬೆಳೆಸಿಕೊಂಡ್ರೆ ಆಗೋ ಖರ್ಚನ್ನ ಖಂಡಿತ ಕಮ್ಮಿ ಮಾಡಬಹುದು.
ಊಟ. ಆಚೆ ಹೋಟೆಲ್ಗಳಲ್ಲಿ ಊಟ ಮಾಡೋ ಬದ್ಲು ಮನೆಲೇ ಅಡಿಗೆ ಮಾಡಿ. ಏನು ಅಡಿಗೆ ಮಾಡಬೇಕು ಅಂತ ಮೊದಲೇ ಯೋಚ್ಸಿ, ಒಂದೇ ಸಲ ಜಾಸ್ತಿ ಅಡಿಗೆ ಮಾಡಿಕೊಳ್ಳಿ, ಉಳಿದಿರೋ ಊಟನ ಮತ್ತೆ ಉಪಯೋಗಿಸಿ. ಶಾಪಿಂಗ್ ಹೋಗೋಕು ಮುಂಚೆ ಏನೆಲ್ಲಾ ತಗೊಬೇಕು ಅಂತ ಲಿಸ್ಟ್ ಮಾಡಿ. ಲಿಸ್ಟಲ್ಲಿ ಇಲ್ಲದಿರೋದನ್ನ ತಗೊಬೇಡಿ. ಸೀಸನಲ್ಲಿ ಸಿಗೋ ಹಣ್ಣು ತರಕಾರಿಗಳನ್ನ ತಗೊಳ್ಳಿ. ಅವುಗಳು ತಾಜಾ ಮತ್ತು ಕಮ್ಮಿ ಬೆಲೆಗೆ ಸಿಗುತ್ತೆ. ಕುರುಕಲು ತಿಂಡಿಗಳಿಂದ ದೂರ ಇರಿ. ಸಾಧ್ಯ ಆದ್ರೆ ಮನೆ ಮುಂದೆ ತರಕಾರಿಗಳನ್ನ ಬೆಳೆಸಬಹುದಾ ನೋಡಿ.
ಬಟ್ಟೆ. ಬೇಕಾಗಿರೋವಾಗ ಮಾತ್ರ ಬಟ್ಟೆನಾ ಖರೀದಿ ಮಾಡಿ. ಹೊಸ ಫ್ಯಾಶನ್ ಅಂತ ಅಗತ್ಯ ಇಲ್ಲದೇ ಇದ್ರೂ ಹೊಸ ಹೊಸ ಬಟ್ಟೆಗಳನ್ನ ಖರೀದಿ ಮಾಡೋಕೆ ಹೋಗಬೇಡಿ. ಎಂಡ್ ಆಫ್ ಸೀಸನ್ ಸೇಲ್ಗಳಲ್ಲಿ ಅಥ್ವಾ ಸೆಕೆಂಡ್ ಹ್ಯಾಂಡ್ ಅಂಗಡಿಗಳಲ್ಲಿ ಒಳ್ಳೇ ವಸ್ತುಗಳು ಕಮ್ಮಿ ಬೆಲೆಗೆ ಸಿಗುತ್ತೆ. ಅದ್ರ ಪ್ರಯೋಜ್ನ ಪಡ್ಕೊಳ್ಳಿ. ಬಟ್ಟೆ ಒಣಗಿಸೋಕೆ ಡ್ರೈಯರ್ಗಳನ್ನ ಬಳಸೋ ಬದ್ಲು ಬಿಸಿಲಿನಲ್ಲಿ ಒಣಗಿ ಹಾಕಿ. ಹೀಗೆ ದುಡ್ಡನ್ನ ಉಳಿತಾಯ ಮಾಡಬಹುದು.
ಖರೀದಿ ಮಾಡೋ ಮೊದ್ಲು. ಏನೇ ತಗೊಳೋದಿಕ್ಕೂ ಮುಂಚೆ ನಿಮ್ಮನ್ನ ಹೀಗೆ ಕೇಳಿಕೊಳ್ಳಿ: ‘ಇದನ್ನ ತಗೊಳದಿಕ್ಕೆ ನನ್ನ ಹತ್ರ ದುಡ್ಡಿದ್ಯಾ? ನಿಜವಾಗ್ಲೂ ಇದರ ಅವಶ್ಯಕತೆ ನನಗಿದ್ಯಾ?’ ಹೊಸ ಹೊಸ ಎಲೆಕ್ಟ್ರಾನಿಕ್ ಉಪಕರಣಗಳನ್ನ, ವಾಹನಗಳನ್ನ ತಗೊಳ್ಳೋ ಬದ್ಲು ಇರೋದನ್ನೇ ಉಪಯೋಗಿಸಬಹುದಾ ನೋಡಿ. ನೀವು ಉಪಯೋಗಿಸದೇ ಇರೋ ವಸ್ತುಗಳನ್ನ ಮಾರೋದ್ರಿಂದ ಸರಳವಾಗಿರಬಹುದು ಮತ್ತು ನಿಮ್ಗೆ ಉಳಿತಾಯಾನೂ ಆಗುತ್ತೆ.
ಕಿವಿಮಾತು: ಆದಾಯ ಕಮ್ಮಿ ಇರೋದ್ರಿಂದ ನಿಮ್ಗಿರೋ ಕೆಲವು ಅಭ್ಯಾಸಗಳನ್ನ ಬಿಟ್ಟು ಬಿಡಬಹುದಾ ಅಂತ ಯೋಚ್ಸಿ, ಉದಾಹರಣೆಗೆ ತಂಬಾಕು ಅಗಿಯೋದು, ಜೂಜಾಡೋದು ಅಥ್ವಾ ಕುಡಿಯೋದನ್ನ ಬಿಡಬಹುದಾ ಅಂತ ನೋಡಿ. ಈ ರೀತಿ ಬದಲಾವಣೆ ಮಾಡ್ಕೊಳ್ಳೋದ್ರಿಂದ ಖರ್ಚು ಕಮ್ಮಿ ಆಗುತ್ತೆ ಜೀವನನೂ ಚೆನ್ನಾಗಿರುತ್ತೆ.
5. ಆಧ್ಯಾತ್ಮಿಕ ವಿಷ್ಯಗಳಿಗೆ ಗಮನ ಕೊಡಿ.
ಬೈಬಲ್ ತತ್ವ: “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು.”—ಮತ್ತಾಯ 5:3.
ನಾವು ಸಮತೋಲನವಾದ ನೋಟ ಇಟ್ಕೊಬೇಕು ಅಂತ ಬೈಬಲ್ ಹೇಳುತ್ತೆ. ಅದು ಹೇಳೋದು: “ಧನವು ಹೇಗೋ ಹಾಗೆ ಜ್ಞಾನವೂ ಆಶ್ರಯ; ಜ್ಞಾನಕ್ಕೆ ವಿಶೇಷವೇನಂದರೆ ತನ್ನನ್ನು ಹೊಂದಿದವನಿಗೆ ಅದು ಜೀವದಾಯಕವೆಂಬದೇ.” (ಪ್ರಸಂಗಿ 7:12) ಇಂಥಾ ಜ್ಞಾನ ಸಿಗೋದು ಬೈಬಲಲ್ಲೇ. ತುಂಬ ಜನ ಬೈಬಲಿನಲ್ಲಿರೊ ಮಾತನ್ನ ಕೇಳಿರೋದ್ರಿಂದ ಹಣಕಾಸಿನ ಬಗ್ಗೆ ಅನಾವಶ್ಯಕವಾಗಿ ಯೋಚ್ನೆ ಮಾಡದೆ ನೆಮ್ಮದಿಯಾಗಿ ಇದ್ದಾರೆ.—ಮತ್ತಾಯ 6:31, 32.