ಎರಡನೇ ಅರಸು 23:1-37

  • ಯೋಷೀಯ ಮಾಡಿದ ಸುಧಾರಣೆ (1-20)

  • ಪಸ್ಕ ಹಬ್ಬದ ಆಚರಣೆ (21-23)

  • ಯೋಷೀಯ ಮಾಡಿದ ಮುಂದಿನ ಸುಧಾರಣೆ (24-27)

  • ಯೋಷೀಯನ ಮರಣ (28-30)

  • ಯೆಹೋವಾಹಾಜ ಯೆಹೂದದ ರಾಜ (31-33)

  • ಯೆಹೋಯಾಕೀಮ ಯೆಹೂದದ ರಾಜ (34-37)

23  ಹಾಗಾಗಿ ರಾಜ ಯೆಹೂದದ ಮತ್ತು ಯೆರೂಸಲೇಮಿನ ಎಲ್ಲ ಹಿರಿಯರನ್ನ ಒಟ್ಟುಸೇರಿಸು ಅಂತ ಹೇಳಿ ಕಳಿಸಿದ. ಆಗ ಅವ್ರೆಲ್ಲ ಸೇರಿಬಂದ್ರು.+  ರಾಜ ಯೆಹೂದದ ಎಲ್ಲ ಗಂಡಸ್ರನ್ನ, ಯೆರೂಸಲೇಮಿನ ಎಲ್ಲ ಜನ್ರನ್ನ, ಪುರೋಹಿತರನ್ನ, ಪ್ರವಾದಿಗಳನ್ನ, ಚಿಕ್ಕವ್ರಿಂದ ದೊಡ್ಡವ್ರ ತನಕ ಎಲ್ರನ್ನ ಕರ್ಕೊಂಡು ಯೆಹೋವನ ಆಲಯಕ್ಕೆ ಹೋದ. ಅಲ್ಲಿ ಅವನು ಪ್ರತಿಯೊಬ್ರೂ ಕೇಳಿಸ್ಕೊಳ್ಳೋ ತರ ಯೆಹೋವನ ಆಲಯದಲ್ಲಿ ಸಿಕ್ಕಿದ್ದ ನಿಯಮ+ ಪುಸ್ತಕದ+ ಮಾತುಗಳನ್ನೆಲ್ಲ ಓದಿದ.+  ರಾಜ ಆಲಯದ ಕಂಬದ ಹತ್ರ ನಿಂತು, ಪುಸ್ತಕದಲ್ಲಿದ್ದ ಆ ಒಪ್ಪಂದದ ಮಾತುಗಳನ್ನ ಪಾಲಿಸ್ತಾ ತಾನು ಯೆಹೋವ ಹೇಳಿದ್ದನ್ನ ಮಾಡ್ತೀನಿ, ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ ಆತನ ಆಜ್ಞೆಗಳನ್ನ, ಆತನು ಕೊಟ್ಟ ಎಚ್ಚರಿಕೆಗಳನ್ನ, ಆತನ ನಿಯಮಗಳನ್ನ ಪಾಲಿಸ್ತೀನಿ ಅಂತ ಯೆಹೋವನ ಮುಂದೆ ಒಪ್ಪಂದ ಮಾಡ್ಕೊಂಡ.*+ ಜನ್ರೆಲ್ಲ ಆ ಒಪ್ಪಂದವನ್ನ ಒಪ್ಕೊಂಡ್ರು.+  ಬಾಳನಿಗಾಗಿ, ಪೂಜಾಕಂಬಕ್ಕಾಗಿ*+ ಮತ್ತು ಆಕಾಶದ ಎಲ್ಲ ಸೈನ್ಯಕ್ಕಾಗಿ ಮಾಡಿಸಿದ್ದ ಪಾತ್ರೆಗಳನ್ನ ಯೆಹೋವನ ಆಲಯದಿಂದ ಹೊರಗೆ ತರಬೇಕು ಅಂತ ರಾಜ ಮಹಾ ಪುರೋಹಿತ ಹಿಲ್ಕೀಯನಿಗೆ,+ ಸಹಾಯಕ ಪುರೋಹಿತರಿಗೆ, ಬಾಗಿಲು ಕಾಯುವವರಿಗೆ ಆಜ್ಞೆ ಕೊಟ್ಟ. ರಾಜ ಅವುಗಳನ್ನ ಯೆರೂಸಲೇಮಿಂದ ಹೊರಗೆ ತಗೊಂಡು ಹೋಗಿ ಕಿದ್ರೋನ್‌ ಕಣಿವೆಯ ಮೆಟ್ಟಿಲುಪಾತಿಯಲ್ಲಿ* ಸುಟ್ಟುಹಾಕಿದ. ಅದ್ರ ಬೂದಿಯನ್ನ ಅವನು ಬೆತೆಲಿಗೆ ತಗೊಂಡು ಹೋದ.+  ಯೆಹೂದದ ಪಟ್ಟಣಗಳಲ್ಲಿದ್ದ ಮತ್ತು ಯೆರೂಸಲೇಮಿನ ಸುತ್ತಮುತ್ತಲಿನ ಪ್ರದೇಶಗಳ ಬೆಟ್ಟಗಳಲ್ಲಿ ಬಲಿಯ ಹೊಗೆ ಏರೋ ತರ ಮಾಡೋಕೆ ಯೆಹೂದದ ರಾಜರು ನೇಮಿಸಿದ್ದ ಸುಳ್ಳು ದೇವರುಗಳ ಪುರೋಹಿತರನ್ನ ಓಡಿಸಿಬಿಟ್ಟ. ಅಷ್ಟೇ ಅಲ್ಲ ಬಾಳನಿಗೆ, ಸೂರ್ಯ ಚಂದ್ರರಿಗೆ, ರಾಶಿಚಕ್ರದ ನಕ್ಷತ್ರಗಳಿಗೆ, ಆಕಾಶದ ಎಲ್ಲ ಸೈನ್ಯಗಳಿಗೆ ಬಲಿಯ ಹೊಗೆ ಏರೋ ತರ ಮಾಡ್ತಾ ಇದ್ದವ್ರನ್ನೂ ಓಡಿಸಿಬಿಟ್ಟ.+  ಅವನು ಯೆಹೋವನ ಆಲಯದಲ್ಲಿದ್ದ ಪೂಜಾಕಂಬವನ್ನ*+ ಯೆರೂಸಲೇಮಿನ ಗಡಿಯಲ್ಲಿದ್ದ ಕಿದ್ರೋನ್‌ ಕಣಿವೆಗೆ ತಗೊಂಡು ಹೋಗಿ ಅಲ್ಲಿ ಅದನ್ನ ಸುಟ್ಟುಹಾಕಿದ.+ ಅದನ್ನ ಪುಡಿಪುಡಿ ಮಾಡಿ, ಅದ್ರ ಬೂದಿಯನ್ನ ಸಾಮಾನ್ಯ ಜನ್ರ ಸಮಾಧಿ ಮೇಲೆ ಎರಚಿದ.+  ಆಲಯದಲ್ಲಿ ಲೈಂಗಿಕ ಅನೈತಿಕತೆ* ಮಾಡ್ತಿದ್ದ ಗಂಡಸ್ರ ಮನೆಗಳನ್ನ ಕೆಡವಿ ಹಾಕಿದ.+ ಆ ಮನೆಗಳು ಯೆಹೋವನ ಆಲಯದ ಒಳಗೇ ಇದ್ವು. ಆ ಮನೆಗಳಲ್ಲೇ ಸ್ತ್ರೀಯರು ಪೂಜಾಕಂಬಕ್ಕಾಗಿ* ಡೇರೆಗಳನ್ನ ನೇಯ್ತಿದ್ರು.  ರಾಜ ಪುರೋಹಿತರನ್ನೆಲ್ಲ ಯೆಹೂದದ ಪಟ್ಟಣಗಳಿಂದ ಹೊರಗೆ ಕರ್ಕೊಂಡು ಬಂದ. ಗೆಬದಿಂದ+ ಬೇರ್ಷೆಬದ+ ತನಕ ಇದ್ದ ದೇವಸ್ಥಾನಗಳನ್ನ ಆರಾಧನೆಗಾಗಿ ಬಳಸೋಕೆ ಆಗದ ಹಾಗೆ ಮಾಡಿದ. ಪುರೋಹಿತರು ಆ ಸ್ಥಳಗಳಲ್ಲಿ ಬಲಿಯ ಹೊಗೆ ಏರೋ ತರ ಮಾಡ್ತಿದ್ರು. ಅವನು ಪಟ್ಟಣದ ಅಧಿಪತಿಯಾಗಿದ್ದ ಯೆಹೋಶುವನ ಬಾಗಿಲ ಹತ್ರ ಇದ್ದ ಆರಾಧನೆ ಮಾಡ್ತಿದ್ದ ಜಾಗಗಳನ್ನ ಕೆಡವಿಹಾಕಿದ. ಆ ಸ್ಥಳಗಳು ಪಟ್ಟಣದ ಬಾಗಿಲಿಂದ ಒಳಗೆ ಬರುವಾಗ ಎಡಗಡೆಗೆ ಕಾಣುತ್ತಿದ್ದವು.  ಅಲ್ಲಿದ್ದ ಪೂಜಾರಿಗಳು ಯೆರೂಸಲೇಮಿನಲ್ಲಿದ್ದ ಯೆಹೋವನ ಯಜ್ಞವೇದಿ ಮುಂದೆ ಸೇವೆ ಮಾಡ್ತಿರಲಿಲ್ಲ.+ ಆದ್ರೆ ತಮ್ಮ ಸಹೋದರರ ಜೊತೆ ಹುಳಿ ಇಲ್ಲದ ರೊಟ್ಟಿಯನ್ನ ತಿಂತಿದ್ರು. 10  ಅಷ್ಟೇ ಅಲ್ಲ ‘ಹಿನ್ನೋಮ್‌ ವಂಶಜರ ಕಣಿವೆಯ’*+ ಹತ್ರದಲ್ಲಿದ್ದ ತೋಫೆತನ್ನ+ ಆರಾಧನೆಗೆ ಬಳಸೋಕೆ ಆಗದ ಹಾಗೆ ಯೋಷೀಯ ಮಾಡಿದ. ಯಾಕಂದ್ರೆ ಅಲ್ಲಿ ಜನ್ರು ತಮ್ಮ ಮಕ್ಕಳನ್ನ ಮೋಲೆಕನಿಗೆ ಬೆಂಕಿಯಲ್ಲಿ ಬಲಿ ಕೊಡಬಾರದು ಅಂತ ಹೀಗೆ ಮಾಡಿದ.+ 11  ಯೆಹೂದದ ರಾಜರು ಸೂರ್ಯನಿಗಾಗಿ ಸಮರ್ಪಿಸಿದ್ದ ಕುದುರೆಗಳನ್ನ ರಾಜ ಯೆಹೋವನ ಆಲಯಕ್ಕೆ ತಗೊಂಡು ಹೋಗದ ಹಾಗೆ ಮಾಡಿದ. ಆ ಕುದುರೆಗಳನ್ನ ಆಸ್ಥಾನದ ಅಧಿಕಾರಿಯಾಗಿದ್ದ ನಾತಾನ್‌-ಮೆಲೆಕನ ಕೊಠಡಿಯ* ಮೂಲಕ ಆಲಯಕ್ಕೆ ತಗೊಂಡು ಹೋಗ್ತಿದ್ರು. ಆ ಕೊಠಡಿ ಕಂಬಗಳ ಮಂಟಪದ ಹತ್ರ ಇತ್ತು. ಸೂರ್ಯನ+ ಆರಾಧನೆಗಾಗಿ ಉಪಯೋಗಿಸಲಾಗ್ತಿದ್ದ ರಥಗಳನ್ನ ರಾಜ ಸುಟ್ಟುಹಾಕಿದ. 12  ಆಹಾಜನ ಮೇಲಿನ ಕೊಠಡಿಯ ಚಾವಣಿಯ+ ಮೇಲೆ ಯೆಹೂದದ ರಾಜರು ಕಟ್ಟಿಸಿದ್ದ ಯಜ್ಞವೇದಿಗಳನ್ನ ಅವನು ನಾಶ ಮಾಡಿದ. ಯೆಹೋವನ ಆಲಯದ ಎರಡು ಅಂಗಳಗಳಲ್ಲಿ ಮನಸ್ಸೆ ಕಟ್ಟಿಸಿದ್ದ ಯಜ್ಞವೇದಿಗಳನ್ನ ಸಹ ರಾಜ ಕೆಡವಿಹಾಕಿದ.+ ಅವನು ಅವುಗಳನ್ನ ಪುಡಿಪುಡಿ ಮಾಡಿ ಅವುಗಳ ಧೂಳನ್ನ ಕಿದ್ರೋನ್‌ ಕಣಿವೆಯಲ್ಲಿ ಎರಚಿದ. 13  ಯೋಷೀಯ ಯೆರೂಸಲೇಮಿನ ಮುಂದೆ ನಾಶನ ಅನ್ನೋ ಬೆಟ್ಟದ* ದಕ್ಷಿಣಕ್ಕಿದ್ದ* ಪೂಜಾಸ್ಥಳಗಳನ್ನ ಸಹ ಆರಾಧನೆಗೆ ಬಳಸದ ಹಾಗೆ ಮಾಡಿದ. ಇವುಗಳನ್ನ ರಾಜ ಸೊಲೊಮೋನ ಸೀದೋನ್ಯರ ಅಸಹ್ಯವಾದ ದೇವತೆಯಾದ ಅಷ್ಟೋರೆತಿಗಾಗಿ, ಮೋವಾಬ್ಯರ ಅಸಹ್ಯವಾದ ದೇವರಾದ ಕೆಮೋಷನಿಗಾಗಿ ಮತ್ತು ಅಮ್ಮೋನಿಯರ ಅಸಹ್ಯವಾದ ದೇವರಾದ ಮಿಲ್ಕೋಮನಿಗಾಗಿ+ ಕಟ್ಟಿಸಿದ್ದ. 14  ಯೋಷೀಯ ವಿಗ್ರಹಸ್ತಂಭಗಳನ್ನ ಚೂರುಚೂರು ಮಾಡಿದ, ಪೂಜಾಕಂಬಗಳನ್ನ*+ ಕತ್ತರಿಸಿದ. ಅವುಗಳ ಜಾಗದಲ್ಲಿ ಮನುಷ್ಯರ ಮೂಳೆಗಳನ್ನ ತುಂಬಿಸಿದ. 15  ಇಸ್ರಾಯೇಲ್ಯರು ಪಾಪ ಮಾಡೋ ತರ ನೆಬಾಟನ ಮಗ ಯಾರೊಬ್ಬಾಮ ಬೆತೆಲಲ್ಲಿ ಕಟ್ಟಿಸಿದ್ದ ಯಜ್ಞವೇದಿಯನ್ನ ಮತ್ತು ದೇವಸ್ಥಾನವನ್ನ+ ಕೂಡ ರಾಜ ಕೆಡವಿ ಹಾಕಿದ. ಅವುಗಳನ್ನ ಕೆಡವಿದ ಮೇಲೆ ಆ ಸ್ಥಳವನ್ನ ಬೆಂಕಿಯಿಂದ ಸುಟ್ಟು ಎಲ್ಲವನ್ನ ಪುಡಿಪುಡಿ ಮಾಡಿದ, ಪೂಜಾಕಂಬವನ್ನ* ಸುಟ್ಟುಹಾಕಿದ.+ 16  ಯೋಷೀಯ ವಾಪಸ್‌ ಬಂದು ನೋಡಿದಾಗ ಬೆಟ್ಟದ ಮೇಲೆ ಸಮಾಧಿಗಳು ಕಾಣಿಸಿದವು. ಅವನು ಆ ಸಮಾಧಿಗಳಿಂದ ಮೂಳೆಗಳನ್ನ ತೆಗೆಸಿದ. ಆ ಮೂಳೆಗಳನ್ನ ಯಜ್ಞವೇದಿ ಮೇಲೆ ಸುಟ್ಟು ಯಜ್ಞವೇದಿಯನ್ನ ಆರಾಧನೆಗೆ ಬಳಸದ ಹಾಗೆ ಮಾಡಿದ. ಹೀಗೆ ಯೆಹೋವ ತನ್ನ ಸೇವಕನ ಮೂಲಕ ಹೇಳಿಸಿದ ಮಾತುಗಳು ನಿಜ ಆಯ್ತು. ಈ ವಿಷ್ಯಗಳು ನಡಿಯುತ್ತೆ ಅಂತ ಸತ್ಯ ದೇವರ ಆ ಸೇವಕ ಮುಂಚೆನೇ ಹೇಳಿದ್ದ.+ 17  ಯೋಷೀಯ “ಈ ಸಮಾಧಿ ಯಾರದ್ದು?” ಅಂತ ಕೇಳಿದ. ಅದಕ್ಕೆ ಪಟ್ಟಣದ ಗಂಡಸ್ರು “ಇದು ಯೆಹೂದದಿಂದ ಬಂದಿದ್ದ ಸತ್ಯ ದೇವರ ಸೇವಕನ ಸಮಾಧಿ.+ ನೀನು ಬೆತೆಲ್‌ ಯಜ್ಞವೇದಿಗೆ ಈಗ ಏನು ಮಾಡಿರುವೆಯೋ ಇದ್ರ ಬಗ್ಗೆ ಅವನು ಮುಂಚೆನೇ ಹೇಳಿದ್ದ” ಅಂದ್ರು. 18  ಆಗ ರಾಜ ಅವ್ರಿಗೆ “ಅವನ ಸಮಾಧಿಗೆ ಏನೂ ಮಾಡಬೇಡಿ. ಅವನ ಮೂಳೆಗಳನ್ನ ಮುಟ್ಟಬೇಡಿ” ಅಂದ. ಹಾಗಾಗಿ ಅವರು ಅವನ ಮೂಳೆಗಳನ್ನ ಮುಟ್ಟಲಿಲ್ಲ. ಅಷ್ಟೇ ಅಲ್ಲ ಸಮಾರ್ಯದ ಪ್ರವಾದಿಯ ಮೂಳೆಗಳನ್ನ ಸಹ ಮುಟ್ಟಲಿಲ್ಲ.+ 19  ಸಮಾರ್ಯದ ಪಟ್ಟಣಗಳ ಬೆಟ್ಟಗಳಲ್ಲಿ ಕಟ್ಟಿದ್ದ ಆರಾಧನಾ ಸ್ಥಳಗಳನ್ನ ಯೋಷೀಯ ತೆಗೆಸಿದ.+ ಇಸ್ರಾಯೇಲ್‌ ರಾಜರು ಇವುಗಳನ್ನ ಕಟ್ಟಿಸಿ ದೇವರಿಗೆ ಕೋಪ ಬರಿಸಿದ್ರು. ಯೋಷೀಯ ಬೆತೆಲಲ್ಲಿದ್ದ ಆರಾಧನಾ ಸ್ಥಳಗಳಿಗೆ ಮಾಡಿದ ಗತಿಯನ್ನೇ ಇವುಗಳಿಗೂ ಮಾಡಿದ.+ 20  ಅವನು ಅಲ್ಲಿದ್ದ ಪೂಜಾಸ್ಥಳಗಳ ಎಲ್ಲ ಪುರೋಹಿತರನ್ನ ಯಜ್ಞವೇದಿಯ ಮೇಲೆ ವಧಿಸಿದ. ಅವ್ರ ಮೇಲೆ ಮನುಷ್ಯರ ಮೂಳೆಗಳನ್ನ ಸುಟ್ಟು+ ಯೆರೂಸಲೇಮಿಗೆ ವಾಪಸ್‌ ಹೋದ. 21  ರಾಜ ಎಲ್ಲ ಜನ್ರಿಗೆ “ನಿಯಮದ ಈ ಪುಸ್ತಕದಲ್ಲಿ ಬರೆದಿರೋ ಪ್ರಕಾರ+ ನಿಮ್ಮ ದೇವರಾದ ಯೆಹೋವನಿಗಾಗಿ ಪಸ್ಕ ಹಬ್ಬ ಆಚರಿಸಿ”+ ಅಂತ ಆಜ್ಞೆ ಕೊಟ್ಟ. 22  ಇಸ್ರಾಯೇಲ್ಯರಿಗೆ ನ್ಯಾಯತೀರಿಸ್ತಿದ್ದ ನ್ಯಾಯಾಧೀಶರ ಕಾಲದಲ್ಲಾಗಲಿ ಇಸ್ರಾಯೇಲ್ಯರ ಮತ್ತು ಯೆಹೂದದ ರಾಜರ ಕಾಲದಲ್ಲಾಗಲಿ ಇಂಥ ಪಸ್ಕ ಹಬ್ಬ ಆಚರಿಸಿರಲೇ ಇಲ್ಲ.+ 23  ಆದ್ರೆ ಯೆಹೋವನಿಗಾಗಿ ಇಂಥ ಪಸ್ಕ ಹಬ್ಬವನ್ನ ರಾಜ ಯೋಷೀಯ ಆಳ್ತಿದ್ದ 18ನೇ ವರ್ಷದಲ್ಲಿ ಯೆರೂಸಲೇಮಿನಲ್ಲಿ ಆಚರಿಸಲಾಯ್ತು. 24  ಸತ್ತವರನ್ನ ಮಾತಾಡಿಸ್ತೀವಿ ಅಂತ ಹೇಳ್ಕೊಳ್ತಿದ್ದ ಜನ್ರನ್ನ, ಭವಿಷ್ಯ ಹೇಳೋರನ್ನ,+ ಮನೆದೇವರ ಮೂರ್ತಿಗಳನ್ನ,+ ಅಸಹ್ಯ ಮೂರ್ತಿಗಳನ್ನ* ಮತ್ತು ಎಲ್ಲ ಅಸಹ್ಯ ವಿಷ್ಯಗಳನ್ನ ಯೆಹೂದದಿಂದ, ಯೆರೂಸಲೇಮಿಂದ ಯೋಷೀಯ ತೆಗೆದುಹಾಕಿದ. ಯೆಹೋವನ ಆಲಯದಲ್ಲಿ ಪುರೋಹಿತ ಹಿಲ್ಕೀಯನಿಗೆ ಸಿಕ್ಕಿದ ಪುಸ್ತಕದಲ್ಲಿ+ ಬರೆದಿರೋ ನಿಯಮ ಪುಸ್ತಕದ ಮಾತುಗಳನ್ನ ಪಾಲಿಸೋ ಸಲುವಾಗಿ ಅವನು ಹೀಗೆ ಮಾಡಿದ.+ 25  ಯೋಷೀಯ ಮೋಶೆಯ ಇಡೀ ನಿಯಮ ಪುಸ್ತಕವನ್ನ ಪಾಲಿಸಿ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ+ ಮತ್ತು ಪೂರ್ಣ ಬಲದಿಂದ ಯೆಹೋವನ ಕಡೆ ವಾಪಸ್‌ ಬಂದ. ಅವನಿಗಿಂತ ಮುಂಚೆ ಇದ್ದ ರಾಜರಾಗಲಿ ಅವನ ನಂತ್ರ ಬಂದ ರಾಜರಾಗಲಿ ಯಾರೂ ಅವನ ತರ ಇರಲಿಲ್ಲ. 26  ಹಾಗಿದ್ರೂ ಯೆಹೂದದ ಮೇಲಿದ್ದ ಯೆಹೋವನ ಕೋಪ ಕಡಿಮೆಯಾಗಲಿಲ್ಲ. ಯಾಕಂದ್ರೆ ಮನಸ್ಸೆ ತುಂಬ ಕೆಟ್ಟ ಕೆಲಸಗಳನ್ನ ಮಾಡಿ ಆತನಿಗೆ ಕೋಪ ಬರಿಸಿದ್ದ.+ 27  ಯೆಹೋವ ಹೀಗಂದನು: “ನನ್ನ ಕಣ್ಮುಂದೆಯಿಂದ ನಾನು ಇಸ್ರಾಯೇಲನ್ನ ಓಡಿಸಿಬಿಟ್ಟ ಹಾಗೇ+ ಯೆಹೂದವನ್ನೂ ತೆಗೆದು ಬಿಡ್ತೀನಿ.+ ನಾನು ಆರಿಸ್ಕೊಂಡ ಈ ಯೆರೂಸಲೇಮ್‌ ಪಟ್ಟಣವನ್ನ ತಿರಸ್ಕರಿಸ್ತೀನಿ. ಯಾವ ಆಲಯದ ಬಗ್ಗೆ ‘ನನ್ನ ಹೆಸ್ರು ಯಾವಾಗ್ಲೂ ಇಲ್ಲಿ ಇರುತ್ತೆ’+ ಅಂತ ನಾನು ಹೇಳ್ತಿದ್ನೋ ಅದನ್ನ ಸಹ ತಿರಸ್ಕರಿಸ್ತೀನಿ.” 28  ಯೋಷೀಯನ ಉಳಿದ ಜೀವನಚರಿತ್ರೆ ಬಗ್ಗೆ, ಅವನು ಮಾಡಿದ ಎಲ್ಲ ಕೆಲಸಗಳ ಬಗ್ಗೆ ಯೆಹೂದದ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ. 29  ಅವನ ಕಾಲದಲ್ಲಿ ಈಜಿಪ್ಟಿನ ರಾಜ ಫರೋಹ ನೆಕೋ ಅಶ್ಶೂರ್ಯರ ರಾಜನನ್ನ ಭೇಟಿ ಮಾಡೋಕೆ ಯೂಫ್ರೆಟಿಸ್‌ ನದಿ ಹತ್ರ ಬಂದ. ಆಗ ರಾಜ ಯೋಷೀಯ ನೆಕೋವಿನ ವಿರುದ್ಧ ಯುದ್ಧ ಮಾಡೋಕೆ ಹೋದ. ಆದ್ರೆ ನೆಕೋ ಯೋಷೀಯನನ್ನ ನೋಡಿ ಮೆಗಿದ್ದೋವಲ್ಲಿ+ ಅವನನ್ನ ಕೊಂದುಹಾಕಿದ. 30  ಹಾಗಾಗಿ ಅವನ ಸೇವಕರು ಅವನ ಶವವನ್ನ ರಥದಲ್ಲಿ ಮೆಗಿದ್ದೋವಿಂದ ಯೆರೂಸಲೇಮಿಗೆ ತಂದ್ರು. ಅವನ ಶವವನ್ನ ಅವನ ಸಮಾಧಿಯಲ್ಲಿ ಹೂಣಿಟ್ರು. ಆ ದೇಶದ ಜನ ಯೋಷೀಯನ ಮಗ ಯೆಹೋವಾಹಾಜನನ್ನ ಅಭಿಷೇಕಿಸಿ ಅವನ ತಂದೆ ಸ್ಥಾನದಲ್ಲಿ ಅವನನ್ನ ರಾಜನಾಗಿ ಮಾಡಿದ್ರು.+ 31  ಯೆಹೋವಾಹಾಜ+ ರಾಜನಾದಾಗ ಅವನಿಗೆ 23 ವರ್ಷ. ಅವನು ಯೆರೂಸಲೇಮಿಂದ ಮೂರು ತಿಂಗಳು ಆಳಿದ. ಅವನ ತಾಯಿ ಹೆಸ್ರು ಹಮೂಟಲ್‌.+ ಅವಳು ಲಿಬ್ನದ ಯೆರೆಮೀಯನ ಮಗಳು. 32  ಯೆಹೋವಾಹಾಜ ತನ್ನ ಪೂರ್ವಜರ ತರಾನೇ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡೋಕೆ ಶುರುಮಾಡಿದ.+ 33  ಯೆಹೋವಾಹಾಜ ಯೆರೂಸಲೇಮಲ್ಲಿ ಆಳ್ವಿಕೆ ಮಾಡೋಕೆ ಆಗದ ಹಾಗೆ ಫರೋಹ ನೆಕೋ+ ಅವನನ್ನ ಹಾಮಾತ್‌ ದೇಶದ ರಿಬ್ಲದಲ್ಲಿ+ ಬಂಧಿಸಿಟ್ಟ. ಅಷ್ಟೇ ಅಲ್ಲ ನೆಕೋ 100 ತಲಾಂತು* ಬೆಳ್ಳಿ ಮತ್ತು ಒಂದು ತಲಾಂತು ಬಂಗಾರವನ್ನ ಯೆಹೂದ ದೇಶದ ಮೇಲೆ ದಂಡವಾಗಿ ವಿಧಿಸಿದ.+ 34  ಫರೋಹ ನೆಕೋ ಯೋಷೀಯನ ಮಗ ಎಲ್ಯಕೀಮನನ್ನ ಅವನ ತಂದೆ ಸ್ಥಾನದಲ್ಲಿ ರಾಜನಾಗಿ ಮಾಡಿದ. ಎಲ್ಯಕೀಮನ ಹೆಸ್ರನ್ನ ಯೆಹೋಯಾಕೀಮ ಅಂತ ಬದಲಾಯಿಸಿದ. ಆದ್ರೆ ಫರೋಹ ನೆಕೋ ಯೆಹೋವಾಹಾಜನನ್ನ ಈಜಿಪ್ಟಿಗೆ ಕರ್ಕೊಂಡು ಬಂದ.+ ಸ್ವಲ್ಪ ಸಮಯ ಆದ್ಮೇಲೆ ಯೆಹೋವಾಹಾಜ ಅಲ್ಲಿ ತೀರಿಹೋದ.+ 35  ಯೆಹೋಯಾಕೀಮ ಫರೋಹನಿಗೆ ಬೆಳ್ಳಿಬಂಗಾರ ಕೊಟ್ಟ. ಆದ್ರೆ ಫರೋಹ ಕೇಳಿದಷ್ಟು ಹಣ ಕೊಡೋಕೆ ಅವನು ದೇಶದ ಮೇಲೆ ತೆರಿಗೆ ವಿಧಿಸಬೇಕಾಯ್ತು. ಯೆಹೋಯಾಕೀಮ ಫರೋಹ ನೆಕೋಗೆ ಕೊಡೋಕೆ ಪ್ರತಿಯೊಬ್ಬ ವ್ಯಕ್ತಿಯ ಜಮೀನಿನ ಬೆಲೆಗೆ ತಕ್ಕಂತೆ ಆ ವ್ಯಕ್ತಿಯಿಂದ ಬೆಳ್ಳಿಬಂಗಾರ ವಸೂಲಿ ಮಾಡಿದ. 36  ಯೆಹೋಯಾಕೀಮ+ ರಾಜನಾದಾಗ ಅವನಿಗೆ 25 ವರ್ಷ. ಅವನು ಯೆರೂಸಲೇಮಿಂದ 11 ವರ್ಷ ಆಳಿದ.+ ಅವನ ತಾಯಿ ಹೆಸ್ರು ಜೆಬೂದಾ. ಅವಳು ರೂಮದವನಾದ ಪೆದಾಯನ ಮಗಳು. 37  ಯೆಹೋಯಾಕೀಮ ತನ್ನ ಪೂರ್ವಜರ ತರಾನೇ+ ಯೆಹೋವನಿಗೆ ಇಷ್ಟ ಆಗದೇ ಇರೋದನ್ನೇ ಮಾಡ್ತಿದ್ದ.+

ಪಾದಟಿಪ್ಪಣಿ

ಅಥವಾ “ನವೀಕರಿಸಿದ.”
ಅಂದ್ರೆ, ಇಳಿಜಾರು ನೆಲದ ಮೇಲೆ ಮೆಟ್ಟಿಲು ಮೆಟ್ಟಿಲಾಗಿ ಮಾಡಲಾಗಿರೋ ಕೃಷಿಭೂಮಿ.
ಅಕ್ಷ. “ಬೇರೆ ಗಂಡಸರ ಜೊತೆ ಅನೈತಿಕತೆ ಮಾಡ್ತಿದ್ದ ಗಂಡಸರು.”
ಪದವಿವರಣೆಯಲ್ಲಿ “ಗೆಹೆನ್ನ” ನೋಡಿ.
ಅಥವಾ “ಊಟದ ಕೋಣೆಯ.”
ಅದು, ಆಲೀವ್‌ ಗುಡ್ಡ, ಮುಖ್ಯವಾಗಿ ದಕ್ಷಿಣದ ತುದಿಯನ್ನ ಅಪರಾಧದ ಗುಡ್ಡ ಅಂತಾನೂ ಕರೆಯಲಾಗುತ್ತೆ.
ಅಕ್ಷ. “ಬಲಗಡೆಗೆ.” ಅಂದ್ರೆ ಪೂರ್ವದ ಕಡೆಗೆ ಮುಖ ಮಾಡ್ಕೊಂಡು ನಿಂತಿರೋ ವ್ಯಕ್ತಿಯ ಬಲಗಡೆಗೆ.
ಇದಕ್ಕೆ ಹೀಬ್ರು ಭಾಷೆಯಲ್ಲಿ ಬಳಸಿರೋ ಪದ “ಸಗಣಿ” ಅನ್ನೋದಕ್ಕೆ ಬಳಸಿರೋ ಪದಕ್ಕೆ ಸಂಬಂಧಿಸಿದೆ. ತುಂಬ ಅಸಹ್ಯ ಅಂತ ತೋರಿಸೋಕೆ ಈ ಪದ ಬಳಸಲಾಗಿದೆ.
ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.