ವಿಮೋಚನಕಾಂಡ 27:1-21
27 ಅಕೇಶಿಯ ಮರದಿಂದ* ಯಜ್ಞವೇದಿಯನ್ನ ಮಾಡಬೇಕು.+ ಅದು ಚೌಕಾಕಾರ ಆಗಿರಬೇಕು, ಐದು ಮೊಳ* ಉದ್ದ, ಐದು ಮೊಳ ಅಗಲ, ಮೂರು ಮೊಳ ಎತ್ತರ ಇರಬೇಕು.+
2 ಅದ್ರ ನಾಲ್ಕು ಮೂಲೆಗಳಲ್ಲಿ ಒಂದೊಂದು ಕೊಂಬನ್ನ+ ಮಾಡಬೇಕು. ಯಜ್ಞವೇದಿ ಮತ್ತು ಅದ್ರ ಕೊಂಬುಗಳನ್ನ ಮರದ ಒಂದೇ ತುಂಡಿಂದ ಮಾಡಬೇಕು. ಯಜ್ಞವೇದಿಗೆ ತಾಮ್ರದ ತಗಡುಗಳನ್ನ ಹೊದಿಸಬೇಕು.+
3 ಯಜ್ಞವೇದಿಯ ಬೂದಿ* ತಗೊಂಡು ಹೋಗೋಕೆ ಬಕೀಟುಗಳನ್ನ ಮಾಡಬೇಕು. ಅಷ್ಟೇ ಅಲ್ಲ ಸಲಿಕೆಗಳನ್ನ, ಬೋಗುಣಿಗಳನ್ನ, ಕವಲುಗೋಲುಗಳನ್ನ, ಕೆಂಡ ಹಾಕೋ ಪಾತ್ರೆಗಳನ್ನ ಮಾಡಬೇಕು. ಯಜ್ಞವೇದಿಯ ಈ ಎಲ್ಲ ಉಪಕರಣಗಳನ್ನ ತಾಮ್ರದಿಂದ ಮಾಡಬೇಕು.+
4 ಜೊತೆಗೆ ಯಜ್ಞವೇದಿಗಾಗಿ ತಾಮ್ರದ ಜಾಲರಿ ಮಾಡಬೇಕು. ಜಾಲರಿಯ ನಾಲ್ಕು ಮೂಲೆಗಳಲ್ಲಿ ತಾಮ್ರದ ನಾಲ್ಕು ಬಳೆಗಳನ್ನ ಮಾಡಬೇಕು.
5 ಆ ಜಾಲರಿನ ಯಜ್ಞವೇದಿ ಒಳಗೆ ಅಂದ್ರೆ ಪಟ್ಟಿಯ ಕೆಳಗೆ ಯಜ್ಞವೇದಿಯ ಮಧ್ಯದಲ್ಲಿ ಇಡಬೇಕು.
6 ಯಜ್ಞವೇದಿಗಾಗಿ ಅಕೇಶಿಯ ಮರದಿಂದ ಕೋಲುಗಳನ್ನ ಮಾಡಿ ಅವುಗಳಿಗೆ ತಾಮ್ರದ ತಗಡನ್ನ ಹೊದಿಸಬೇಕು.
7 ಆ ಕೋಲುಗಳನ್ನ ಯಜ್ಞವೇದಿಯ ಬಳೆಗಳಲ್ಲಿ ಹಾಕಬೇಕು. ಆಗ ಯಜ್ಞವೇದಿಯ ಎರಡೂ ಕಡೆಗಳಲ್ಲಿ ಕೋಲುಗಳು ಇರೋದ್ರಿಂದ ಹೊತ್ಕೊಂಡು ಹೋಗಕ್ಕಾಗುತ್ತೆ.+
8 ಯಜ್ಞವೇದಿನ ಮರದ ಹಲಗೆಗಳಿಂದ ಪೆಟ್ಟಿಗೆ ಆಕಾರದಲ್ಲಿ ಮಾಡಬೇಕು. ಅದು ಮೇಲೆ ಕೆಳಗೆ ತೆರೆದಿರಬೇಕು. ನಾನು ನಿನಗೆ ಬೆಟ್ಟದಲ್ಲಿ ತೋರಿಸಿದ ಹಾಗೇ ಅದನ್ನ ಮಾಡಬೇಕು.+
9 ಪವಿತ್ರ ಡೇರೆಗೆ ಅಂಗಳವನ್ನ+ ಮಾಡಬೇಕು. ಹೊಸೆದ ಒಳ್ಳೇ ಗುಣಮಟ್ಟದ ನಾರಿಂದ ತಯಾರಿಸಿದ ಪರದೆಗಳನ್ನ ನಾಲ್ಕೂ ಕಡೆಗಳಲ್ಲಿ ಹಾಕಿ ಆ ಅಂಗಳವನ್ನ ಮಾಡಬೇಕು. ಅಂಗಳದ ದಕ್ಷಿಣಕ್ಕೆ 100 ಮೊಳ ಉದ್ದದ ಪರದೆ ತೂಗಿಬಿಡಬೇಕು.+
10 ಅದಕ್ಕೆ 20 ಕಂಬ, ಆ ಕಂಬಗಳಿಗೆ 20 ತಾಮ್ರದ ಅಡಿಗಲ್ಲು ಇರಬೇಕು. ಕಂಬಗಳ ಕೊಕ್ಕೆಗಳನ್ನ, ಅವುಗಳ ಕಟ್ಟುಗಳನ್ನ* ಬೆಳ್ಳಿಯಿಂದ ಮಾಡಬೇಕು.
11 ಅಂಗಳದ ಉತ್ತರಕ್ಕೂ 100 ಮೊಳ ಉದ್ದದ ಪರದೆಯನ್ನ ತೂಗಿಬಿಡಬೇಕು. ಅದಕ್ಕೆ 20 ಕಂಬಗಳು ಆ ಕಂಬಗಳಿಗೆ 20 ತಾಮ್ರದ ಅಡಿಗಲ್ಲು ಇರಬೇಕು. ಕಂಬಗಳಿಗೆ ಬೆಳ್ಳಿಯ ಕೊಕ್ಕೆಗಳು, ಕಟ್ಟುಗಳು* ಇರಬೇಕು.
12 ಪಶ್ಚಿಮ ಭಾಗದಲ್ಲಿ 50 ಮೊಳ ಉದ್ದದ ಪರದೆಯನ್ನ ತೂಗಿಬಿಡಬೇಕು. ಅದಕ್ಕಾಗಿ ಹತ್ತು ಕಂಬಗಳನ್ನ, ಹತ್ತು ಅಡಿಗಲ್ಲುಗಳನ್ನ ಮಾಡಬೇಕು.
13 ಪೂರ್ವದ ಅಂಗಳ 50 ಮೊಳ ಅಗಲ ಇರಬೇಕು.
14 ಮುಖ್ಯ ಬಾಗಿಲಿನ ಬಲಕ್ಕೆ 15 ಮೊಳ ಉದ್ದದ ಪರದೆ ತೂಗಿಬಿಡಬೇಕು. ಅದಕ್ಕಾಗಿ ಮೂರು ಕಂಬಗಳನ್ನ, ಮೂರು ಅಡಿಗಲ್ಲುಗಳನ್ನ ಮಾಡಬೇಕು.+
15 ಬಾಗಿಲಿನ ಎಡಕ್ಕೆ 15 ಮೊಳ ಉದ್ದದ ಪರದೆ ತೂಗಿಬಿಡಬೇಕು. ಅದಕ್ಕಾಗಿ ಮೂರು ಕಂಬಗಳನ್ನ, ಮೂರು ಅಡಿಗಲ್ಲುಗಳನ್ನ ಮಾಡಬೇಕು.
16 ಅಂಗಳದ ಬಾಗಿಲಿಗೆ 20 ಮೊಳ ಉದ್ದದ ಒಂದು ಪರದೆ ಹಾಕಬೇಕು. ಆ ಪರದೆಯನ್ನ ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಹೊಸೆದ ಒಳ್ಳೇ ಗುಣಮಟ್ಟದ ನಾರು ಇವುಗಳನ್ನೆಲ್ಲ ಒಟ್ಟಿಗೆ ನೇಯ್ದು ಮಾಡಬೇಕು.+ ನಾಲ್ಕು ಕಂಬಗಳನ್ನ ಅವುಗಳಿಗೆ ನಾಲ್ಕು ಅಡಿಗಲ್ಲುಗಳನ್ನ ಸಹ ಮಾಡಬೇಕು.+
17 ಅಂಗಳದ ಸುತ್ತ ಇರೋ ಎಲ್ಲ ಕಂಬಗಳಿಗೆ ಬೆಳ್ಳಿಯ ಕಟ್ಟುಗಳು, ಬೆಳ್ಳಿಯ ಕೊಕ್ಕೆಗಳು ಇರಬೇಕು. ಆದ್ರೆ ಕಂಬಗಳ ಅಡಿಗಲ್ಲುಗಳು ತಾಮ್ರದ್ದಾಗಿರಬೇಕು.+
18 ಅಂಗಳ 100 ಮೊಳ ಉದ್ದ,+ 50 ಮೊಳ ಅಗಲ, ಅಂಗಳದ ಸುತ್ತ ಇರೋ ಪರದೆ 5 ಮೊಳ ಎತ್ತರ ಇರಬೇಕು. ಹೊಸೆದ ಒಳ್ಳೇ ಗುಣಮಟ್ಟದ ನಾರಿಂದ ಪರದೆ ಮಾಡಬೇಕು. ಅಂಗಳದಲ್ಲಿರೋ ಅಡಿಗಲ್ಲುಗಳು ತಾಮ್ರದ್ದಾಗಿರಬೇಕು.
19 ಪವಿತ್ರ ಡೇರೆಯಲ್ಲಿನ ಕೆಲಸಕ್ಕಾಗಿ ಬಳಸೋ ಎಲ್ಲ ಉಪಕರಣಗಳನ್ನ, ವಸ್ತುಗಳನ್ನ, ಡೇರೆಯ ಗೂಟಗಳನ್ನ, ಅಂಗಳದ ಎಲ್ಲ ಗೂಟಗಳನ್ನ ತಾಮ್ರದಿಂದ ಮಾಡಬೇಕು.+
20 ದೀಪಗಳು ಯಾವಾಗ್ಲೂ ಉರಿತಾ ಇರೋಕೆ ಅವುಗಳಿಗಾಗಿ ಶುದ್ಧ ಆಲಿವ್ ಎಣ್ಣೆನ ತಂದುಕೊಡಬೇಕು ಅಂತ ನೀನು ಇಸ್ರಾಯೇಲ್ಯರಿಗೆ ಆಜ್ಞಾಪಿಸಬೇಕು.+
21 ದೇವದರ್ಶನ ಡೇರೆಯಲ್ಲಿ ಸಾಕ್ಷಿ ಮಂಜೂಷದ+ ಹತ್ರ ಇರೋ ಪರದೆಯ ಹೊರಗೆ ದೀಪಗಳು ಸಂಜೆಯಿಂದ ಬೆಳಿಗ್ಗೆ ತನಕ ಯೆಹೋವನ ಮುಂದೆ ಉರಿತಾ ಇರೋ ಹಾಗೆ ಆರೋನ, ಅವನ ಮಕ್ಕಳು ಏರ್ಪಾಡು ಮಾಡಬೇಕು.+ ಇದು ಇಸ್ರಾಯೇಲ್ಯರು ಯಾವಾಗ್ಲೂ ಪಾಲಿಸಬೇಕಾದ ಶಾಶ್ವತ ನಿಯಮ.+
ಪಾದಟಿಪ್ಪಣಿ
^ ಇದು ಜಾಲಿ ಕುಲಕ್ಕೆ ಸೇರಿದ ಮರ.
^ ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು). ಪರಿಶಿಷ್ಟ ಬಿ14 ನೋಡಿ.
^ ಅದು, ಬಲಿಗಳ ಕೊಬ್ಬಿಂದ ನೆನೆದ ಬೂದಿ.
^ ಅಥವಾ ಜೋಡಿಸೋಕೆ ಬಳಸೋ “ಬಳೆಗಳು; ದುಂಡುಪಟ್ಟಿಗಳು; ಪಟ್ಟಿಗಳು.”
^ ಅಥವಾ ಜೋಡಿಸೋಕೆ ಬಳಸೋ “ಬಳೆಗಳು; ದುಂಡುಪಟ್ಟಿಗಳು; ಪಟ್ಟಿಗಳು.”