ಯೆಹೋಶುವ 2:1-24
2 ಆಮೇಲೆ ನೂನನ ಮಗ ಯೆಹೋಶುವ ಗುಟ್ಟಾಗಿ ಶಿಟ್ಟೀಮಿಂದ+ ಇಬ್ರನ್ನ ಗೂಢಚಾರರಾಗಿ ಕಳಿಸಿದ. ಅವನು ಅವ್ರಿಗೆ “ನೀವು ಹೋಗಿ ಕಾನಾನ್ ದೇಶವನ್ನ, ಅದ್ರಲ್ಲೂ ಯೆರಿಕೋವನ್ನ ಚೆನ್ನಾಗಿ ನೋಡ್ಕೊಂಡು ಬನ್ನಿ” ಅಂದ. ಆಗ ಅವರು ಯೆರಿಕೋವಿಗೆ ಹೋಗಿ ರಾಹಾಬ+ ಅನ್ನೋ ವೇಶ್ಯೆ ಮನೇಲಿ ಉಳ್ಕೊಂಡ್ರು.
2 ಯೆರಿಕೋವಿನ ರಾಜನಿಗೆ “ಇಸ್ರಾಯೇಲಿನ ಗೂಢಚಾರರು ಇವತ್ತು ರಾತ್ರಿ ನಮ್ಮ ದೇಶವನ್ನ ಗುಟ್ಟಾಗಿ ನೋಡ್ಕೊಂಡು ಹೋಗೋಕೆ ಬಂದಿದ್ದಾರೆ!” ಅಂತ ಯಾರೋ ಹೇಳಿದ್ರು.
3 ಆಗ ಯೆರಿಕೋವಿನ ರಾಜ ರಾಹಾಬಳಿಗೆ “ನಿನ್ನ ಮನೆಗೆ ಬಂದಿರೋ ಆ ಗೂಢಚಾರರನ್ನ ಹೊರಗೆ ಕರ್ಕೊಂಡು ಬಾ. ಅವರು ನಮ್ಮ ದೇಶನ ಗುಟ್ಟಾಗಿ ನೋಡ್ಕೊಂಡು ಹೋಗೋಕೆ ಬಂದಿದ್ದಾರೆ” ಅಂತ ಹೇಳಿ ಕಳಿಸಿದ.
4 ರಾಹಾಬ ಆ ಇಬ್ರನ್ನ ಬಚ್ಚಿಟ್ಟು ಹುಡ್ಕೊಂಡು ಬಂದವ್ರಿಗೆ “ಹೌದು, ಅವರು ಇಲ್ಲಿ ಬಂದಿದ್ರು. ಆದ್ರೆ ಯಾವ ಊರಿನವರು ಅಂತ ನಂಗೊತ್ತಿಲ್ಲ.
5 ರಾತ್ರಿ ಪಟ್ಟಣದ ಬಾಗಿಲು ಮುಚ್ಚೋ ಸಮಯಕ್ಕೆ ಹೋಗಿಬಿಟ್ರು. ಎಲ್ಲಿ ಹೋದ್ರು ಅಂತ ನಂಗೊತ್ತಿಲ್ಲ. ನೀವು ಬೇಗ ಅವ್ರ ಹಿಂದೆ ಹೋದ್ರೆ ಅವ್ರನ್ನ ಹಿಡೀಬಹುದು” ಅಂದಳು.
6 (ಅವಳು ಗೂಢಚಾರರನ್ನ ಚಾವಣಿ ಮೇಲೆ ಕರ್ಕೊಂಡು ಹೋಗಿ ಹರಡಿದ್ದ ಅಗಸೆ ಕಟ್ಟುಗಳ ಮಧ್ಯ ಬಚ್ಚಿಟ್ಟಿದ್ದಳು.)
7 ರಾಜ ಕಳಿಸಿದ್ದ ಜನ್ರು ಯೋರ್ದನ್ ನದಿ ದಾಟೋ ಜಾಗದಲ್ಲಿ+ ಅವ್ರನ್ನ ಹುಡುಕ್ತಾ ಆ ಕಡೆ ಹೋದ್ರು. ಅವರು ಹೊರಗೆ ಹೋದ ಕೂಡ್ಲೇ ಪಟ್ಟಣದ ಬಾಗಿಲು ಮುಚ್ಚಿಬಿಟ್ರು.
8 ಚಾವಣಿ ಮೇಲಿದ್ದ ಗೂಢಚಾರರು ಮಲಗೋ ಮುಂಚೆ ರಾಹಾಬ ಅವ್ರ ಹತ್ರ ಹೋಗಿ
9 “ಯೆಹೋವ ದೇವರು ಈ ದೇಶನ ನಿಮಗೆ ಕೊಡ್ತಾನೆ ಅಂತ ನಂಗೆ ಚೆನ್ನಾಗಿ ಗೊತ್ತು.+ ನಿಮ್ಮಿಂದಾಗಿ ನಮಗೆ ಭಯ ಜಾಸ್ತಿ ಆಗಿದೆ,+ ದೇಶದ ಜನ್ರೆಲ್ಲ ಧೈರ್ಯ ಕಳ್ಕೊಂಡಿದ್ದಾರೆ.+
10 ಯಾಕಂದ್ರೆ ನೀವು ಈಜಿಪ್ಟ್* ಬಿಟ್ಟು ಬರೋವಾಗ ಯೆಹೋವ ನಿಮ್ಮ ಮುಂದೆ ಕೆಂಪು ಸಮುದ್ರದ ನೀರನ್ನ ಹೇಗೆ ಒಣಗಿಸಿಬಿಟ್ಟನು ಅಂತ ನಾವು ಕೇಳಿಸ್ಕೊಂಡ್ವಿ.+ ಯೋರ್ದನಿನ ಆ ಕಡೆ* ಸೀಹೋನ+ ಮತ್ತು ಓಗ+ ಅನ್ನೋ ಅಮೋರಿಯರ ರಾಜರಿಗೆ ಯಾವ ಗತಿ ಕಾಣಿಸಿದ್ರಿ, ಹೇಗೆ ಸಾಯಿಸಿದ್ರಿ ಅಂತಾನೂ ಕೇಳಿಸಿಕೊಂಡ್ವಿ.
11 ಆಗ ನಮಗೆ ತುಂಬ ಭಯ ಆಯ್ತು.* ನಿಮ್ಮನ್ನ ಎದುರಿಸೋ ಧೈರ್ಯ ನಮ್ಮಲ್ಲಿ ಯಾರಿಗೂ ಇಲ್ಲ. ಯಾಕಂದ್ರೆ ಸ್ವರ್ಗಕ್ಕೂ ಭೂಮಿಗೂ ನಿಮ್ಮ ದೇವರಾದ ಯೆಹೋವ ಮಾತ್ರ ದೇವರು.+
12 ನಾನು ನಿಮಗೆ ಸಹಾಯ ಮಾಡಿದ ಹಾಗೆ* ನೀವೂ ನನ್ನ ಕುಟುಂಬಕ್ಕೆ ಸಹಾಯ ಮಾಡ್ತೀರ ಅಂತ ದಯವಿಟ್ಟು ಯೆಹೋವನ ಹೆಸ್ರಲ್ಲಿ ಮಾತುಕೊಡಿ. ಅಷ್ಟೇ ಅಲ್ಲ, ನಿಮ್ಮನ್ನ ನಂಬೋಕೆ ಒಂದು ಗುರುತು ಕೊಡಿ.
13 ನನ್ನ ಅಪ್ಪಅಮ್ಮ, ಒಡಹುಟ್ಟಿದವರು, ಅವ್ರ ಇಡೀ ಕುಟುಂಬದ ಜೀವ ಕಾಪಾಡಿ. ನಮ್ಮನ್ನ ಸಾವಿನ ದವಡೆಯಿಂದ ರಕ್ಷಿಸಿ”+ ಅಂದಳು.
14 ಅದಕ್ಕೆ ಗೂಢಚಾರರು “ನಮ್ಮ ಜೀವ ಕೊಟ್ಟಾದ್ರೂ ನಿನ್ನನ್ನ ಕಾಪಾಡ್ತೀವಿ. ನಾವು ಯಾಕೆ ಬಂದಿದ್ದೀವಿ ಅಂತ ನೀನು ಯಾರಿಗೂ ಹೇಳದಿದ್ರೆ, ಯೆಹೋವ ಈ ದೇಶವನ್ನ ನಮಗೆ ಕೊಡುವಾಗ ನಿನಗೆ ಸಹಾಯ ಮಾಡ್ತೀವಿ,* ನೀನು ನಮ್ಮ ಮೇಲಿಟ್ಟಿರೋ ನಂಬಿಕೆನ ಉಳಿಸ್ಕೊಳ್ತೀವಿ” ಅಂದ್ರು.
15 ಆಮೇಲೆ ಅವಳು ಕಿಟಕಿಯಿಂದ ಹಗ್ಗ ಬಿಟ್ಟು ಅವ್ರನ್ನ ಕೆಳಗೆ ಇಳಿಸಿದಳು. ಯಾಕಂದ್ರೆ ಅವಳ ಮನೆ ಪಟ್ಟಣದ ಗೋಡೆ ಮೇಲಿತ್ತು.+
16 ಅವಳು ಅವ್ರಿಗೆ “ರಾಜನ ಕಡೆಯವ್ರ ಕೈಗೆ ಸಿಗದ ಹಾಗೆ ಬೆಟ್ಟಕ್ಕೆ ಹೋಗಿ. ಅಲ್ಲೇ ಮೂರು ದಿನ ಬಚ್ಚಿಟ್ಕೊಂಡು ಅವರು ಪಟ್ಟಣಕ್ಕೆ ವಾಪಸ್ ಬಂದ ಮೇಲೆ ನಿಮ್ಮ ದಾರಿ ಹಿಡಿದು ಹೋಗಬಹುದು” ಅಂದಳು.
17 ಆ ಗೂಢಚಾರರು “ನಿನಗೆ ಮಾತು ಕೊಟ್ಟ ಹಾಗೆ ನಾವು ನಡೀಬೇಕಂದ್ರೆ,+
18 ಈ ದೇಶಕ್ಕೆ ಮತ್ತೆ ಬರುವಾಗ ಈ ಕೆಂಪು ಹಗ್ಗನ ನಮ್ಮನ್ನ ಇಳಿಸ್ತಿರೋ ಈ ಕಿಟಕಿಗೆ ಕಟ್ಟಬೇಕು. ನಿನ್ನ ಅಪ್ಪಅಮ್ಮ, ಒಡಹುಟ್ಟಿದವರು, ಅವ್ರ ಇಡೀ ಕುಟುಂಬನ ನಿನ್ನ ಮನೇಲಿ ಸೇರಿಸಬೇಕು.+
19 ಯಾರಾದ್ರೂ ನಿನ್ನ ಮನೆ ಬಿಟ್ಟು ಹೊರಗೆ ಹೋದ್ರೆ ಅವ್ರ ಸಾವಿಗೆ ಅವ್ರೇ ಕಾರಣ.* ಆಗ ಆ ಅಪರಾಧ ನಮ್ಮ ಮೇಲೆ ಬರಲ್ಲ. ಒಂದುವೇಳೆ ನಿನ್ನ ಮನೇಲಿದ್ದಾಗ ಅವ್ರಿಗೇನಾದ್ರೂ ಆದ್ರೆ ಅವ್ರ ಸಾವಿಗೆ ನಾವು ಕಾರಣ.
20 ಆದ್ರೆ ನಾವ್ಯಾಕೆ ಬಂದಿದ್ದೀವಿ ಅಂತ ನೀನು ಯಾರಿಗಾದ್ರೂ ಹೇಳಿದ್ರೆ+ ನಾವು ನಮ್ಮ ಮಾತಿನ ಪ್ರಕಾರ ನಡಿಯಲ್ಲ” ಅಂದ್ರು.
21 ಅದಕ್ಕವಳು “ಹಾಗೇ ಆಗ್ಲಿ” ಅಂದಳು.
ಈ ಮಾತು ಹೇಳಿ ಅವ್ರನ್ನ ಕಳಿಸ್ಕೊಟ್ಟಳು. ಅವರು ತಮ್ಮ ದಾರಿ ಹಿಡಿದು ಹೋದ್ರು. ಆಮೇಲೆ ಅವಳು ಕೆಂಪು ಹಗ್ಗನ ಕಿಟಕಿಗೆ ಕಟ್ಟಿದಳು.
22 ರಾಜನ ಕಡೆಯವರು ಎಲ್ಲ ಕಡೆ ಹುಡುಕಿದ್ರೂ ಆ ಗೂಢಚಾರರು ಸಿಗಲಿಲ್ಲ. ಹಾಗಾಗಿ ಪಟ್ಟಣಕ್ಕೆ ವಾಪಸ್ ಹೋದ್ರು. ಆ ಗೂಢಚಾರರು ಮೂರು ದಿನ ಬೆಟ್ಟದಲ್ಲೇ ಇದ್ರು.
23 ಆಮೇಲೆ ಬೆಟ್ಟದಿಂದ ಇಳಿದು ಯೋರ್ದನ್ ನದಿ ದಾಟಿ ನೂನನ ಮಗ ಯೆಹೋಶುವನ ಹತ್ರ ಬಂದು ನಡೆದ ಎಲ್ಲ ವಿಷ್ಯ ಹೇಳಿದ್ರು.
24 ಅವರು ಯೆಹೋಶುವಗೆ “ಯೆಹೋವ ಆ ಇಡೀ ದೇಶ ನಮಗೆ ಕೊಟ್ಟಿದ್ದಾನೆ.+ ನಿಜ ಹೇಳಬೇಕಂದ್ರೆ ನಮ್ಮಿಂದಾಗಿ ಆ ದೇಶದ ಜನ್ರು ಧೈರ್ಯ ಕಳ್ಕೊಂಡಿದ್ದಾರೆ”+ ಅಂದ್ರು.
ಪಾದಟಿಪ್ಪಣಿ
^ ಅಥವಾ “ಐಗುಪ್ತ.”
^ ಅದು, ಪೂರ್ವದ ಕಡೆ.
^ ಅಕ್ಷ. “ನಮ್ಮ ಹೃದಯ ಕರಗ್ತು.”
^ ಅಥವಾ “ಶಾಶ್ವತ ಪ್ರೀತಿ ತೋರಿಸಿದ ಹಾಗೆ.”
^ ಅಥವಾ “ಶಾಶ್ವತ ಪ್ರೀತಿ ತೋರಿಸ್ತೀವಿ.”
^ ಅಕ್ಷ. “ಅವನ ರಕ್ತ ಅವನ ತಲೆ ಮೇಲೆ ಬರುತ್ತೆ.”