ಯೆರೆಮೀಯ 7:1-34
7 ಯೆಹೋವ ಯೆರೆಮೀಯನಿಗೆ ಈ ಮಾತುಗಳನ್ನ ಹೇಳಿದನು
2 “ನೀನು ಯೆಹೋವನ ಆಲಯದ ಬಾಗಿಲಲ್ಲಿ ನಿಂತು ಈ ಸಂದೇಶ ಸಾರಿ ಹೇಳು ‘ಯೆಹೋವನಿಗೆ ಅಡ್ಡಬೀಳೋಕೆ ಈ ಬಾಗಿಲುಗಳಿಂದ ಒಳಗೆ ಬರೋ ಯೆಹೂದದ ಎಲ್ಲ ಜನ್ರೇ, ಯೆಹೋವನ ಮಾತು ಕೇಳಿ.
3 ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ “ನಿಮ್ಮ ನಡತೆ ಸರಿ ಮಾಡ್ಕೊಂಡು ನಿಮ್ಮ ಕೆಟ್ಟಕೆಲಸಗಳನ್ನ ಬಿಟ್ಟುಬಿಡಿ. ಆಗ ನೀವು ಈ ಜಾಗದಲ್ಲೇ ವಾಸಿಸ್ತಾ ಇರೋಕೆ ನಾನು ಬಿಡ್ತೀನಿ.+
4 ನೀವು ಮೋಸದ ಮಾತುಗಳನ್ನ ನಂಬಿ ‘ಇದು* ಯೆಹೋವನ ಆಲಯ, ಇದು ಯೆಹೋವನ ಆಲಯ, ಇದು ಯೆಹೋವನ ಆಲಯ’ ಅಂತ ಹೇಳಬೇಡಿ.+
5 ನೀವು ನಿಜವಾಗಿ ನಿಮ್ಮ ನಡತೆ ಸರಿ ಮಾಡ್ಕೊಂಡು ನಿಮ್ಮ ಕೆಟ್ಟಕೆಲಸಗಳನ್ನ ಬಿಟ್ಟುಬಿಟ್ರೆ, ಇಬ್ರ ವ್ಯಾಜ್ಯವನ್ನ ತೀರಿಸುವಾಗ ನಿಜವಾಗ್ಲೂ ನ್ಯಾಯವಾಗಿ ತೀರ್ಪುಕೊಟ್ರೆ,+
6 ಅಷ್ಟೇ ಅಲ್ಲ ವಿದೇಶಿಯರ, ಅನಾಥರ,* ವಿಧವೆಯರ ಮೇಲೆ ದಬ್ಬಾಳಿಕೆ ಮಾಡದಿದ್ರೆ,+ ಈ ಪ್ರದೇಶದಲ್ಲಿ ನಿರಪರಾಧಿಯ ರಕ್ತ ಸುರಿಸದಿದ್ರೆ, ನಿಮಗೆ ನಷ್ಟ ಬರಿಸೋ ಬೇರೆ ದೇವರುಗಳನ್ನ ಆರಾಧನೆ ಮಾಡದಿದ್ರೆ+
7 ಈ ಸ್ಥಳದಲ್ಲಿ ಅಂದ್ರೆ ನಿಮ್ಮ ಪೂರ್ವಜರಿಗೆ ನಾನು ಶಾಶ್ವತವಾಗಿ ಕೊಟ್ಟ ಈ ದೇಶದಲ್ಲಿ ಇರೋಕೆ ನಿಮ್ಮನ್ನ ಬಿಡ್ತೀನಿ.”’”
8 “ಆದ್ರೆ ನೀವು ಮೋಸದ ಮಾತುಗಳನ್ನ ನಂಬ್ತೀರ.+ ಅದ್ರಿಂದ ನಿಮಗೆ ಸ್ವಲ್ಪನೂ ಪ್ರಯೋಜನ ಆಗಲ್ಲ.
9 ನೀವು ಕಳ್ಳತನ+ ಕೊಲೆ ವ್ಯಭಿಚಾರ ಮಾಡ್ತೀರ, ಸುಳ್ಳಾಣೆ ಇಡ್ತೀರ,+ ಬಾಳನಿಗೆ ಬಲಿ ಕೊಡ್ತೀರ,+ ನಿಮಗೆ ಮುಂಚೆ ಯಾವತ್ತೂ ಗೊತ್ತಿರದ ದೇವರುಗಳ ಹಿಂದೆ ಹೋಗ್ತೀರ.
10 ಆಮೇಲೆ ನನ್ನ ಹೆಸ್ರಿಗಾಗಿರೋ ಆಲಯಕ್ಕೆ ಬಂದು ನನ್ನ ಮುಂದೆ ನಿಲ್ಲೋಕೆ ನಿಮಗೆ ಮನಸ್ಸಾದ್ರೂ ಹೇಗೆ ಬರುತ್ತೆ? ಎಲ್ಲ ಅಸಹ್ಯ ಕೆಲಸಗಳನ್ನ ಮಾಡಿ ‘ದೇವರು ನಮ್ಮನ್ನ ಕಾಪಾಡ್ತಾನೆ’ ಅನ್ನೋಕೆ ಬಾಯಿಯಾದ್ರೂ ಹೇಗೆ ಬರುತ್ತೆ?
11 ನನ್ನ ಹೆಸ್ರಿಗಾಗಿರೋ ನನ್ನ ಆಲಯವನ್ನ ನೀವೇನು ಕಳ್ಳರ ಸಂತೆ ಅಂದ್ಕೊಂಡಿದ್ದೀರಾ?+ ನೀವು ಮಾಡ್ತಾ ಇರೋದನ್ನೆಲ್ಲ ನಾನು ನೋಡಿದ್ದೀನಿ” ಅಂತ ಯೆಹೋವ ಹೇಳ್ತಾನೆ.
12 “‘ನನ್ನ ಹೆಸ್ರಿಗೆ ಗೌರವ ತರೋಕೆ ಮೊದಲು ಆರಿಸ್ಕೊಂಡಿದ್ದ+ ಶೀಲೋನಲ್ಲಿನ ನನ್ನ ಆರಾಧನಾ ಸ್ಥಳಕ್ಕೆ ನೀವೀಗ ಹೋಗಿ.+ ನನ್ನ ಜನ್ರಾದ ಇಸ್ರಾಯೇಲ್ಯರು ಕೆಟ್ಟದು ಮಾಡಿದ್ರಿಂದ ನಾನು ಅದಕ್ಕೆ ಏನು ಮಾಡ್ದೆ ಅಂತ ನೋಡಿ.+
13 ನೀವಂತೂ ಆ ಕೆಟ್ಟ ಕೆಲಸಗಳಲ್ಲಿ ಯಾವುದನ್ನೂ ಬಿಟ್ಟಿಲ್ಲ’ ಅಂತ ಯೆಹೋವ ಹೇಳ್ತಾನೆ. ಅಷ್ಟೇ ಅಲ್ಲ ಆತನು ಹೇಳೋದು ಏನಂದ್ರೆ ‘ನಾನು ನಿಮಗೆ ಪದೇ ಪದೇ ಹೇಳಿದ್ರೂ* ನೀವು ಕಿವಿಗೆ ಹಾಕೊಳ್ಳಲಿಲ್ಲ.+ ನಾನು ನಿಮ್ಮನ್ನ ಕರಿತಾ ಇದ್ರೂ ನೀವು ಉತ್ರ ಕೊಡಲಿಲ್ಲ.+
14 ಹಾಗಾಗಿ ಶೀಲೋಗೆ ನಾನು ಮಾಡಿದ+ ಹಾಗೆನೇ ನೀವೀಗ ನಂಬಿರೋ+ ನನ್ನ ಹೆಸ್ರಿಗಾಗಿರೋ ನನ್ನ ಆಲಯಕ್ಕೂ ಮಾಡ್ತೀನಿ.+ ನಾನು ನಿಮಗೆ, ನಿಮ್ಮ ಪೂರ್ವಜರಿಗೆ ಕೊಟ್ಟ ಈ ಜಾಗಕ್ಕೂ ಅದೇ ಗತಿ ತರ್ತಿನಿ.
15 ನಿಮ್ಮ ಸಹೋದರರನ್ನ ಅಂದ್ರೆ ಎಫ್ರಾಯೀಮನ ಸಂತತಿಯವರನ್ನೆಲ್ಲ ಎಸೆದುಬಿಟ್ಟ ಹಾಗೆ ನೀವು ನನ್ನ ಕಣ್ಮುಂದೆ ಇರಬಾರದು ಅಂತ ನಿಮ್ಮನ್ನ ಎಸೆದು ಬಿಡ್ತೀನಿ.’+
16 ಯೆರೆಮೀಯನೇ ನೀನು ಈ ಜನ್ರಿಗೋಸ್ಕರ ಪ್ರಾರ್ಥಿಸಬೇಡ. ಇವ್ರಿಗಾಗಿ ಮೊರೆ ಇಡಬೇಡ, ವಿಜ್ಞಾಪಿಸಬೇಡ, ಬೇಡ್ಕೊಳ್ಳಬೇಡ,+ ನಾನು ಅದನ್ನ ಕೇಳಲ್ಲ.+
17 ಅವರು ಯೆಹೂದದ ಪಟ್ಟಣಗಳಲ್ಲಿ, ಯೆರೂಸಲೇಮಿನ ಬೀದಿಗಳಲ್ಲಿ ಏನೆಲ್ಲಾ ಮಾಡ್ತಾ ಇದ್ದಾರಂತ ನೀನೇ ನೋಡ್ತಾ ಇದ್ದೀಯಲ್ಲಾ.
18 ಸ್ವರ್ಗದ ರಾಣಿಗೆ*+ ರೊಟ್ಟಿಗಳನ್ನ ಅರ್ಪಿಸೋಕೆ ಮಕ್ಕಳು ಕಟ್ಟಿಗೆ ಕೂಡಿಸ್ತಿದ್ದಾರೆ, ಅಪ್ಪಂದಿರು ಬೆಂಕಿ ಉರಿಸ್ತಿದ್ದಾರೆ, ಹೆಂಡತಿಯರು ಹಿಟ್ಟು ನಾದುತ್ತಿದ್ದಾರೆ. ಅವರು ಬೇರೆ ದೇವರುಗಳಿಗೆ ಪಾನ ಅರ್ಪಣೆಗಳನ್ನ ಸುರಿತಿದ್ದಾರೆ. ನನಗೆ ಕೋಪ ಬರಿಸೋಕಂತನೇ ಹೀಗೆಲ್ಲ ಮಾಡ್ತಿದ್ದಾರೆ.+
19 ಯೆಹೋವ ಹೇಳೋದು ಏನಂದ್ರೆ ‘ಅವರು ನೋಯಿಸ್ತಿರೋದು* ನನಗಾ? ಇಲ್ಲ, ಅವ್ರಿಗೇ ನೋವು ಮಾಡ್ಕೊಳ್ತಿದ್ದಾರೆ, ಅವಮಾನ ಮಾಡ್ಕೊಳ್ತಿದ್ದಾರೆ.’+
20 ಹಾಗಾಗಿ ವಿಶ್ವದ ರಾಜ ಯೆಹೋವ ಹೀಗೆ ಹೇಳ್ತಾನೆ ‘ನೋಡು! ನಾನು ಈ ಜಾಗದ ಮೇಲೆ, ಮನುಷ್ಯರ ಮೇಲೆ, ಪ್ರಾಣಿಗಳ ಮೇಲೆ, ಹೊಲದಲ್ಲಿರೋ ಮರಗಳ ಮೇಲೆ, ಭೂಮಿಯ ಬೆಳೆಗಳ ಮೇಲೆ ನನ್ನ ಕೋಪ ಅನ್ನೋ ರೋಷಾಗ್ನಿ ಸುರಿತೀನಿ.+ ಅದು ಎಲ್ಲವನ್ನ ಸುಟ್ಟುಬಿಡುತ್ತೆ, ಅದು ಯಾವತ್ತೂ ಆರಿಹೋಗಲ್ಲ.’+
21 ಸೈನ್ಯಗಳ ದೇವರೂ ಇಸ್ರಾಯೇಲಿನ ದೇವರೂ ಆಗಿರೋ ಯೆಹೋವ ಹೇಳೋದು ಏನಂದ್ರೆ ‘ನೀವು ಅರ್ಪಿಸೋ ಬಲಿಗಳ ಜೊತೆ ಸರ್ವಾಂಗಹೋಮ ಬಲಿಗಳನ್ನ ಕೂಡ ಅರ್ಪಿಸಿ, ಅವುಗಳ ಮಾಂಸವನ್ನ ನೀವೇ ತಿನ್ನಿ.+
22 ನಾನು ನಿಮ್ಮ ಪೂರ್ವಜರನ್ನ ಈಜಿಪ್ಟ್ ದೇಶದಿಂದ ಹೊರಗೆ ಕರ್ಕೊಂಡು ಬಂದ ದಿನ ಅವ್ರಿಗೆ ಸರ್ವಾಂಗಹೋಮ ಬಲಿ ಬಗ್ಗೆಯಾಗಲಿ ಬೇರೆ ಬಲಿಗಳ ಬಗ್ಗೆಯಾಗಲಿ ಮಾತೇ ಎತ್ತಲಿಲ್ಲ. ಬಲಿ ಅರ್ಪಿಸಬೇಕು ಅನ್ನೋ ಆಜ್ಞೆನೂ ಕೊಡಲಿಲ್ಲ.+
23 ಆದ್ರೆ ನಾನು ಕೊಟ್ಟ ಆಜ್ಞೆ ಏನಂದ್ರೆ “ನಾನು ಹೇಳೋ ತರ ನಡಿರಿ. ಆಗ ನಾನು ನಿಮಗೆ ದೇವರಾಗಿ ಇರ್ತಿನಿ, ನೀವು ನನ್ನ ಜನ್ರಾಗಿ ಇರ್ತಿರ.+ ಎಲ್ಲ ವಿಷ್ಯಗಳಲ್ಲಿ ನಾನು ಕೊಡೋ ಆಜ್ಞೆಗಳನ್ನ ನೀವು ಪಾಲಿಸಬೇಕು, ಆಗ ನಿಮಗೆ ಒಳ್ಳೇದಾಗುತ್ತೆ.”’+
24 ಆದ್ರೆ ಅವರು ಕಿವಿಗೇ ಹಾಕೊಳ್ಳಲಿಲ್ಲ, ನನ್ನ ಮಾತು ಕೇಳಲಿಲ್ಲ,+ ತಮಗೆ ಇಷ್ಟಬಂದ ಹಾಗೆ* ನಡೆದ್ರು, ಹಠಮಾರಿಗಳ ತರ ತಮ್ಮ ಕೆಟ್ಟಹೃದಯ ಹೇಳೋದನ್ನೇ ಮಾಡಿದ್ರು,+ ಅವರು ಇನ್ನೂ ಕೆಟ್ಟು ಹೋದ್ರು, ಸ್ವಲ್ಪನೂ ಬದಲಾಗಲಿಲ್ಲ.
25 ನಿಮ್ಮ ಪೂರ್ವಜರು ಈಜಿಪ್ಟ್ ದೇಶದಿಂದ ಬಂದ ದಿನದಿಂದ ಇವತ್ತಿನ ತನಕ ಹೀಗೇ ನಡಿತಿದೆ.+ ಹಾಗಾಗಿ ನನ್ನ ಸೇವಕರಾದ ಪ್ರವಾದಿಗಳನ್ನ ನಿಮ್ಮ ಹತ್ರ ಕಳಿಸ್ತಾ ಇದ್ದೆ. ಪ್ರತಿದಿನ, ಪದೇ ಪದೇ ನಾನು ಆ ಪ್ರವಾದಿಗಳನ್ನ ಕಳಿಸಿದೆ.*+
26 ಆದ್ರೆ ಈ ಜನ್ರು ನನ್ನ ಮಾತು ಕೇಳಲಿಲ್ಲ,+ ಹಠಮಾರಿಗಳಾಗಿದ್ರು, ತಮ್ಮ ಪೂರ್ವಜರಿಗಿಂತ ಕೆಟ್ಟವರಾದ್ರು!
27 ನೀನು ಈ ಎಲ್ಲ ಮಾತುಗಳನ್ನ ಹೇಳಿದ್ರೂ+ ಅವರು ಕಿವಿಗೇ ಹಾಕೊಳ್ಳಲ್ಲ, ಅವ್ರನ್ನ ಕರೆದ್ರೂ ನಿನಗೆ ಉತ್ರ ಕೊಡಲ್ಲ.
28 ಹಾಗಾಗಿ ನೀನು ಅವ್ರಿಗೆ ‘ತಮ್ಮ ದೇವರಾದ ಯೆಹೋವನ ಮಾತನ್ನ ಪಾಲಿಸದ, ಶಿಸ್ತನ್ನ ತಿರಸ್ಕರಿಸಿದ ಜನ್ರು ಇವರು. ಒಬ್ರೂ ಕೂಡ ನಂಬಿಗಸ್ತರಾಗಿಲ್ಲ. ನಂಬಿಗಸ್ತಿಕೆ ಅನ್ನೋ ಪದ ಸಹ ಅವ್ರ ಬಾಯಲ್ಲಿ ಬರಲ್ಲ’+ ಅಂತ ಹೇಳು.
29 ನೀನು* ನಿನ್ನ ಉದ್ದ* ಕೂದಲನ್ನ ಕತ್ತರಿಸಿ ಬಿಸಾಡು. ಬೋಳು ಬೆಟ್ಟಗಳ ಮೇಲೆ ಶೋಕಗೀತೆ ಹಾಡು. ಯೆಹೋವ ಈ ಪೀಳಿಗೆ ಜನ್ರನ್ನ ತಿರಸ್ಕರಿಸಿದ್ದಾನೆ, ಅವ್ರನ್ನ ಕೈಬಿಟ್ಟಿದ್ದಾನೆ. ಯಾಕಂದ್ರೆ ಅವರು ಆತನಿಗೆ ತುಂಬ ಕೋಪ ಬರೋ ತರ ಮಾಡಿದ್ದಾರೆ.
30 ಯೆಹೋವ ಹೇಳೋದು ಏನಂದ್ರೆ ‘ಯೆಹೂದದ ಜನ್ರು ನನ್ನ ದೃಷ್ಟಿಯಲ್ಲಿ ಕೆಟ್ಟದನ್ನೇ ಮಾಡಿದ್ದಾರೆ. ಅವರು ತಮ್ಮ ಅಸಹ್ಯ ಮೂರ್ತಿಗಳನ್ನ ನನ್ನ ಹೆಸ್ರಿಗಾಗಿರೋ ನನ್ನ ಆಲಯದಲ್ಲಿ ಇಟ್ಟು ಅದನ್ನ ಅಶುದ್ಧ ಮಾಡಿದ್ದಾರೆ.+
31 ಅವರು ಹಿನ್ನೋಮ್* ಕಣಿವೆಯಲ್ಲಿ*+ ತೋಫೆತ್ ಅನ್ನೋ ಪೂಜಾ ಸ್ಥಳಗಳನ್ನ ಕಟ್ಟಿ ತಮ್ಮ ಮಕ್ಕಳನ್ನ ಬೆಂಕಿಗೆ ಆಹುತಿ ಕೊಟ್ಟಿದ್ದಾರೆ.+ ಇದನ್ನ ಮಾಡಿ ಅಂತ ನಾನು ಹೇಳಲೇ ಇಲ್ಲ. ಅಂಥ ಯೋಚನೆ ಕೂಡ ನನ್ನ ಮನಸ್ಸಲ್ಲಿ ಯಾವತ್ತೂ ಬಂದಿರಲಿಲ್ಲ.’+
32 ಯೆಹೋವ ಹೇಳೋದು ಏನಂದ್ರೆ ‘ಅದಕ್ಕೆ ನೋಡ್ತಾ ಇರು, ಆ ಸ್ಥಳಕ್ಕೆ ತೋಫೆತ್ ಅಥವಾ ಹಿನ್ನೋಮ್* ಕಣಿವೆ* ಅಂತ ಕರಿಯದೆ “ಸಂಹಾರದ ಕಣಿವೆ” ಅಂತ ಕರಿಯೋ ದಿನ ಬರುತ್ತೆ. ಅವರು ತೋಫೆತಿನಲ್ಲಿ ಶವಗಳನ್ನ ಸಮಾಧಿ ಮಾಡ್ತಾರೆ. ಎಷ್ಟು ಶವ ಇರುತ್ತೆ ಅಂದ್ರೆ ಅಲ್ಲಿ ಸಮಾಧಿ ಮಾಡೋಕೆ ಜಾಗಾನೇ ಇರಲ್ಲ.+
33 ಈ ಜನ್ರ ಶವಗಳನ್ನ ಪ್ರಾಣಿಪಕ್ಷಿಗಳು ತಿಂದುಬಿಡುತ್ತೆ. ಅವುಗಳನ್ನ ಹೆದರಿಸಿ ಓಡಿಸೋಕೆ ಯಾರೂ ಇರಲ್ಲ.+
34 ನಾನು ಯೆಹೂದದ ಪಟ್ಟಣಗಳಲ್ಲಿ, ಯೆರೂಸಲೇಮಿನ ಬೀದಿಗಳಲ್ಲಿ ಸಂತೋಷ ಸಂಭ್ರಮದ ಶಬ್ದವನ್ನ, ಮದುಮಗ ಮದುಮಗಳ ಸ್ವರವನ್ನ ನಿಲ್ಲಿಸಿಬಿಡ್ತೀನಿ.+ ಯಾಕಂದ್ರೆ ಈ ದೇಶ ನಾಶವಾಗಿ ಹಾಳಾಗಿ ಹೋಗುತ್ತೆ.’”+
ಪಾದಟಿಪ್ಪಣಿ
^ ಅಕ್ಷ. “ಅವು,” ಅಂದ್ರೆ ದೇವಾಲಯದ ಕಟ್ಟಡಗಳು.
^ ಅಥವಾ “ತಂದೆಯಿಲ್ಲದ ಮಕ್ಕಳ.”
^ ಅಕ್ಷ. “ಬೆಳಿಗ್ಗೆ ಬೇಗ ಎದ್ದು ಮಾತಾಡ್ತಾ ಇದ್ರೂ.”
^ ಇದು ಧರ್ಮಭ್ರಷ್ಟ ಇಸ್ರಾಯೇಲ್ಯರು ಆರಾಧಿಸ್ತಿದ್ದ ಒಂದು ದೇವತೆಯ ಬಿರುದು. ಇದು ಬಹುಶಃ ಸಂತಾನೋತ್ಪತ್ತಿಯ ದೇವತೆ.
^ ಅಥವಾ “ರೇಗಿಸೋದು.”
^ ಅಥವಾ “ತಮ್ಮ ಆಲೋಚನೆ ಪ್ರಕಾರ.”
^ ಅಕ್ಷ. “ಪ್ರತಿದಿನ ಬೆಳಿಗ್ಗೆ ಬೇಗ ಎಬ್ಬಿಸಿ ಕಳಿಸ್ತಿದ್ದೆ.”
^ ಚೀಯೋನ್ ಅಥವಾ ಯೆರೂಸಲೇಮ್.
^ ಅಥವಾ “ಸಮರ್ಪಿಸಿದ.”
^ ಅಕ್ಷ. “ಹಿನ್ನೋಮನ ಮಗನ.”
^ ಅಕ್ಷ. “ಹಿನ್ನೋಮನ ಮಗನ.”