ಯೆರೆಮೀಯ 50:1-46
50 ಯೆಹೋವ ಪ್ರವಾದಿ ಯೆರೆಮೀಯನ ಮೂಲಕ ಬಾಬೆಲಿನ+ ಬಗ್ಗೆ, ಕಸ್ದೀಯರ ದೇಶದ ಬಗ್ಗೆ ಹೇಳಿದ ಮಾತುಗಳು
2 “ಇದನ್ನ ದೇಶಗಳಿಗೆ ಹೇಳಿ, ಸಾರಿಹೇಳಿ.
ಒಂದು ಬಾವುಟ* ಎತ್ತಿ ಮತ್ತು ಸಾರಿ.
ಯಾವ ವಿಷ್ಯನ ಕೂಡ ಮುಚ್ಚಿಡಬೇಡಿ,ಹೀಗೆ ಹೇಳಿ ‘ಬಾಬೆಲ್ ಶತ್ರು ಕೈಗೆ ಸೇರುತ್ತೆ.+
ಅವಳ ದೇವರಾದ ಬೇಲ್‌ಗೆ ಅವಮಾನ ಆಗಿದೆ.+
ಮೆರೋದಾಕ್‌ಗೆ* ಭಯ ಹಿಡ್ಕೊಂಡಿದೆ.
ಬಾಬೆಲಿನ ಮೂರ್ತಿಗಳಿಗೆ ಅವಮಾನ ಮಾಡಿದ್ದಾರೆ.
ಅವಳ ಅಸಹ್ಯ ಮೂರ್ತಿಗಳಿಗೆ* ತುಂಬ ಭಯ ಆಗಿದೆ.’
3 ಯಾಕಂದ್ರೆ ಉತ್ತರದಿಂದ ಒಂದು ದೇಶ ಯುದ್ಧ ಮಾಡೋಕೆ ಬಂದಿದೆ.+
ಆ ದೇಶಕ್ಕೆ ಎಂಥ ಗತಿ ಆಗುತ್ತೆ ಅಂದ್ರೆ ನೋಡೋರ ಎದೆ ಡವಡವ ಅಂತ ಬಡ್ಕೊಳ್ಳುತ್ತೆ,ಅಲ್ಲಿ ಯಾರೂ ವಾಸ ಮಾಡಲ್ಲ.
ಮನುಷ್ಯರೆಲ್ಲ ಓಡಿಹೋಗಿದ್ದಾರೆ, ಪ್ರಾಣಿಗಳೂ ಓಡಿಹೋಗಿವೆ,ಯಾರೂ ಅಲ್ಲಿಲ್ಲ.”
4 ಯೆಹೋವ ಹೇಳೋದು ಏನಂದ್ರೆ “ಆ ದಿನಗಳಲ್ಲಿ, ಆ ಸಮಯದಲ್ಲಿ ಇಸ್ರಾಯೇಲಿನ ಜನ್ರು ಯೆಹೂದದ ಜನ್ರು ಒಟ್ಟಿಗೆ ಬರ್ತಾರೆ.+ ಅವರು ದಾರಿಯಲ್ಲೆಲ್ಲಾ ಅಳ್ತಾ ಒಟ್ಟಾಗಿ+ ತಮ್ಮ ದೇವರಾದ ಯೆಹೋವನನ್ನ ಬೇಡ್ಕೊಳ್ತಾರೆ.*+
5 ಚೀಯೋನ್ ಇರೋ ದಿಕ್ಕಿನ ಕಡೆ ನೋಡ್ತಾ ಚೀಯೋನಿಗೆ ಹೋಗೋ ದಾರಿ ಯಾವುದು ಅಂತ ಕೇಳ್ತಾ+ ‘ಬನ್ನಿ ನಾವು ಯೆಹೋವನ ಜೊತೆ ಶಾಶ್ವತವಾದ, ಮರಿಯೋಕೆ ಆಗದ ಒಪ್ಪಂದ ಮಾಡ್ಕೊಳ್ಳೋಣ’+ ಅಂತಾರೆ.
6 ನನ್ನ ಜನ್ರು ಕಳೆದುಹೋದ ಕುರಿಹಿಂಡು ತರ ಆಗಿದ್ದಾರೆ.+ ಅವರನ್ನ ದಾರಿತಪ್ಪಿಸಿದ್ದು ಅವ್ರ ಕುರುಬರೇ.+ ಆ ಕುರುಬರು ಅವ್ರನ್ನ ದೂರದ ಬೆಟ್ಟಗಳ ಮೇಲೆ ಕರ್ಕೊಂಡು ಹೋದ್ರು. ಪರ್ವತಗಳ ಮೇಲೆ ಬೆಟ್ಟಗಳ ಮೇಲೆ ಅಲೆದಾಡೋ ತರ ಮಾಡಿದ್ರು. ನನ್ನ ಜನ್ರು ವಿಶ್ರಾಂತಿ ಪಡ್ಕೊಳ್ಳೋ ಜಾಗನ ಮರೆತುಬಿಟ್ಟಿದ್ದಾರೆ.
7 ಅವ್ರನ್ನ ನೋಡೋರೆಲ್ಲ ಅವ್ರನ್ನ ಗಬಗಬ ಅಂತ ತಿಂದುಬಿಟ್ರು.+ ಅವ್ರ ಶತ್ರುಗಳು ‘ನಾವೇನೂ ತಪ್ಪು ಮಾಡಿಲ್ಲ, ಯೆಹೋವನ ವಿರುದ್ಧ ಪಾಪ ಮಾಡಿದ್ದು ಅವ್ರೇ. ಅವರು ಪಾಪ ಮಾಡಿರೋದು ನೀತಿವಂತ ದೇವರ ವಿರುದ್ಧ, ಅವ್ರ ಪೂರ್ವಜರಿಗೆ ನಿರೀಕ್ಷೆ ಕೊಡ್ತಿದ್ದ ಯೆಹೋವನ ವಿರುದ್ಧ’ ಅಂದಿದ್ದಾರೆ.”
8 “ಬಾಬೆಲನ್ನ ಬಿಟ್ಟು ಓಡಿಹೋಗಿ,ಕಸ್ದೀಯರ ದೇಶದಿಂದ ಹೊರಗೆ ಹೋಗಿ.+
ಹೋತಗಳ ತರ, ಟಗರುಗಳ ತರ ಕುರಿಹಿಂಡಿನ ಮುಂದೆ ಇರಿ.
9 ಯಾಕಂದ್ರೆ ನಾನು ಉತ್ತರದ ದೇಶದಿಂದ ದೊಡ್ಡ ದೊಡ್ಡ ದೇಶಗಳಿಂದ ಒಂದು ಸೇನೆಯನ್ನ ಕರ್ಕೊಂಡು ಬರ್ತಿನಿ+ಅದು ಬಾಬೆಲ್ ಮೇಲೆ ದಾಳಿ ಮಾಡುತ್ತೆ.
ಆ ದೇಶಗಳವರು ಸೈನ್ಯ ಕಟ್ಟಿ ಯುದ್ಧ ಮಾಡ್ತಾರೆ.
ಬಾಬೆಲನ್ನ ವಶ ಮಾಡ್ಕೊಳ್ತಾರೆ.
ಅವ್ರ ಬಾಣಗಳು ವೀರ ಸೈನಿಕರ ಬಾಣಗಳ ತರ ಇದೆ,ಅವು ಮಕ್ಕಳನ್ನ ಹೆತ್ತವರಿಂದ ದೂರ ಮಾಡುತ್ತೆ,+ಅವು ಗುರಿ ತಪ್ಪಲ್ಲ.
10 ಕಸ್ದೀಯ ಪಟ್ಟಣ ಸೂರೆ ಆಗುತ್ತೆ,+ಅವಳನ್ನ ಲೂಟಿ ಮಾಡೋರೆಲ್ಲ ಪೂರ್ತಿ ತೃಪ್ತರಾಗ್ತಾರೆ”+ ಅಂತ ಯೆಹೋವ ಹೇಳ್ತಾನೆ.
11 “ಯಾಕಂದ್ರೆ ನೀವು ನನ್ನ ಆಸ್ತಿ ಲೂಟಿ ಮಾಡುವಾಗ+ ಖುಷಿಯಲ್ಲಿ ತೇಲಾಡಿದ್ರಿ,+ ಹಬ್ಬ ಮಾಡಿದ್ರಿ.
ಹುಲ್ಲಿನ ಮೇಲೆ ಕಡಸು* ಜಿಗಿಯೋ ತರ ಜಿಗಿತಾ ಇದ್ರಿ,*ಗಂಡು ಕುದುರೆಗಳ ತರ ಜೋರಾಗಿ ಸದ್ದು ಮಾಡ್ತಾ ಇದ್ರಿ.
12 ನಿಮ್ಮ ತಾಯಿಯನ್ನ ಅವಮಾನ ಮಾಡ್ತಾರೆ.+
ನಿಮ್ಮನ್ನ ಹೆತ್ತ ಅಮ್ಮಗೆ ನಿರಾಶೆ ಆಗುತ್ತೆ.
ನೋಡಿ, ಬೇರೆ ದೇಶಗಳಿಗೆ ಹೋಲಿಸಿದ್ರೆ ಅವಳಿಗೆ ಬೆಲೆನೇ ಇಲ್ಲ,ಅವಳು ನೀರಿಲ್ಲದ ಕಾಡು, ಮರುಭೂಮಿ.+
13 ಯೆಹೋವನ ಕೋಪದಿಂದಾಗಿ ಅವಳು ಮತ್ತೆ ಜನ ವಾಸ ಮಾಡೋ ಜಾಗ ಆಗಲ್ಲ.+
ಅವಳು ಪೂರ್ತಿ ಹಾಳುಬೀಳ್ತಾಳೆ.+
ಬಾಬೆಲನ್ನ ದಾಟಿ ಹೋಗೋರೆಲ್ಲ ಅದನ್ನ ನೋಡಿ ಬೆಚ್ಚಿಬೀಳ್ತಾರೆ,ಅವಳಿಗೆ ಬಂದಿರೋ ಕಾಯಿಲೆಗಳನ್ನ ನೋಡಿ ಸೀಟಿ ಹೊಡೆದು ಅವಮಾನ ಮಾಡ್ತಾರೆ.+
14 ಬಿಲ್ಲುಗಾರರೇ, ಸೈನ್ಯ ಕಟ್ಕೊಂಡು ಬಂದುಎಲ್ಲ ಕಡೆಗಳಿಂದ ಬಾಬೆಲ್ ಮೇಲೆ ದಾಳಿ ಮಾಡಿ.
ಅವಳ ಮೇಲೆ ಬಾಣ ಎಸಿರಿ, ಒಂದು ಬಾಣನೂ ಉಳಿಸಬೇಡಿ,+ಯಾಕಂದ್ರೆ ಅವಳು ಯೆಹೋವನ ವಿರುದ್ಧ ಪಾಪ ಮಾಡಿದ್ದಾಳೆ.+
15 ಎಲ್ಲಾ ಕಡೆಯಿಂದ ಅವಳ ಮೇಲೆ ಯುದ್ಧ ಮಾಡಿ.
ಅವಳು ಶರಣಾಗಿದ್ದಾಳೆ.
ಅವಳ ಕಂಬಗಳು ಬಿದ್ದುಹೋಗಿವೆ, ಅವಳ ಗೋಡೆಗಳನ್ನ ಬೀಳಿಸ್ತಾರೆ.+
ಯಾಕಂದ್ರೆ ಯೆಹೋವ ಅವಳಿಗೆ ಸೇಡು ತೀರಿಸ್ತಿದ್ದಾನೆ.+
ನೀವು ಅವಳಿಗೆ ಸೇಡು ತೀರಿಸಿ.
ಅವಳು ಮಾಡಿದ ತರಾನೇ ಅವಳಿಗೆ ಮಾಡಿ.+
16 ಬಿತ್ತುವವನನ್ನ, ಕೊಯ್ಲಿನ ಕಾಲದಲ್ಲಿ ಕೊಯ್ಲು ಮಾಡೋಕೆ ಕತ್ತಿ ಹಿಡಿಯೋನನ್ನ ಬಾಬೆಲಿಂದ ನಾಶಮಾಡಿ.+
ಕ್ರೂರವಾದ ಕತ್ತಿಯಿಂದಾಗಿ ಪ್ರತಿಯೊಬ್ರು ತಮ್ಮ ಜನ್ರ ಹತ್ರ ವಾಪಸ್ ಹೋಗ್ತಾರೆ,ಪ್ರತಿಯೊಬ್ಬ ತನ್ನ ದೇಶಕ್ಕೆ ಓಡಿಹೋಗ್ತಾನೆ.+
17 ಇಸ್ರಾಯೇಲ್ಯರು ಎಲ್ಲಿ ಹೋಗಬೇಕಂತ ಗೊತ್ತಾಗದಿರೋ ಕುರಿಗಳ ತರ ಇದ್ದಾರೆ.+ ಸಿಂಹಗಳು ಅವ್ರನ್ನ ಓಡಿಸಿಬಿಟ್ಟಿವೆ.+ ಮೊದ್ಲು ಅಶ್ಶೂರದ ರಾಜ ಅವ್ರನ್ನ ತಿಂದುಹಾಕಿದ.+ ಆಮೇಲೆ ಬಾಬೆಲಿನ ರಾಜ ನೆಬೂಕದ್ನೆಚ್ಚರ* ಬಂದು ಅವ್ರ ಮೂಳೆಗಳನ್ನ ಕಚ್ಚಿ ಕಚ್ಚಿ ಹಾಕಿದ.+
18 ಹಾಗಾಗಿ ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ ‘ನಾನು ಅಶ್ಶೂರದ ರಾಜನಿಗೆ ಶಿಕ್ಷೆ ಕೊಟ್ಟ ಹಾಗೆ+ ಬಾಬೆಲಿನ ರಾಜನಿಗೆ, ಅವನ ದೇಶಕ್ಕೆ ಶಿಕ್ಷೆ ಕೊಡ್ತೀನಿ.
19 ನಾನು ಇಸ್ರಾಯೇಲನನ್ನ ಅವನ ಹುಲ್ಲುಗಾವಲಿಗೆ ವಾಪಸ್ ಕರ್ಕೊಂಡು ಬರ್ತಿನಿ.+ ಅವನು ಕರ್ಮೆಲಿನ, ಬಾಷಾನಿನ ಮೇಲೆ ಮೇಯ್ತಾನೆ.+ ಎಫ್ರಾಯೀಮಿನ,+ ಗಿಲ್ಯಾದಿನ+ ಬೆಟ್ಟಗಳ ಮೇಲೆ ತೃಪ್ತಿ ಆಗೋಷ್ಟು ತಿಂತಾನೆ.’”
20 ಯೆಹೋವ ಹೇಳೋದು ಏನಂದ್ರೆ “ಆ ದಿನಗಳಲ್ಲಿ, ಆ ಸಮಯದಲ್ಲಿನಾನು ಇಸ್ರಾಯೇಲಲ್ಲಿ ತಪ್ಪು ಹುಡುಕ್ತೀನಿ,ಆದ್ರೆ ಯಾವ ತಪ್ಪೂ ಸಿಗಲ್ಲ,ಯೆಹೂದದಲ್ಲಿ ಯಾವ ಪಾಪನೂ ಸಿಗಲ್ಲ,ಯಾಕಂದ್ರೆ ನಾನು ಉಳಿಸಿದ ಜನ್ರನ್ನ ಕ್ಷಮಿಸ್ತೀನಿ.”+
21 ಯೆಹೋವ ಹೇಳೋದು ಏನಂದ್ರೆ“ನೀನು ಹೋಗಿ ಮೆರಾಥಯಿಮ್ ದೇಶದ ಮೇಲೆ, ಪೆಕೋದಿನ+ ಜನ್ರ ಮೇಲೆ ದಾಳಿ ಮಾಡು.
ಅವ್ರನ್ನ ಕೊಲ್ತಾ ಹೋಗು, ಪೂರ್ತಿ ನಾಶಮಾಡು.
ನಾನು ಹೇಳಿದ್ದನ್ನೆಲ್ಲ ಅದೇ ತರ ಮಾಡು.
22 ಯುದ್ಧ ನಡಿತಿರೋ ಸದ್ದು,ಅತಿ ದೊಡ್ಡ ದುರಂತದ ಸದ್ದು-ಗದ್ದಲ ದೇಶದಲ್ಲಿ ಕೇಳಿಸ್ತಿದೆ.
23 ಭೂಮಿಯ ಎಲ್ಲ ದೇಶಗಳನ್ನ ಪುಡಿಪುಡಿ ಮಾಡಿದ ಕಮ್ಮಾರನ ಸುತ್ತಿಗೆಯನ್ನ ಮುರಿದು ತುಂಡು ತುಂಡು ಮಾಡಿದ್ದಾರೆ!+
ಬಾಬೆಲಿಗೆ ಎಂಥಾ ಗತಿ ಬಂದಿದೆ ಅಂದ್ರೆ ಅದನ್ನ ನೋಡಿದ ದೇಶದವ್ರಿಗೆಲ್ಲ ಗಾಬರಿ ಆಗ್ತಿದೆ!+
24 ಬಾಬೆಲೇ, ನಾನು ನಿನಗೆ ಉರುಲು ಹಾಕ್ದೆ, ನೀನು ಅದಕ್ಕೆ ಸಿಕ್ಕಿ ಬಿದ್ದೆ,ಆದ್ರೆ ನಿನಗದು ಗೊತ್ತೇ ಆಗಿಲ್ಲ.
ನೀನು ಯೆಹೋವನನ್ನ ವಿರೋಧಿಸಿದ್ರಿಂದನಿನ್ನನ್ನ ಹಿಡಿದು ಬಂಧಿಸಿದ್ರು.+
25 ವಿಶ್ವದ ರಾಜನು ಸೈನ್ಯಗಳ ದೇವರು ಆದ ಯೆಹೋವನಿಗೆಕಸ್ದೀಯರ ದೇಶದಲ್ಲಿ ಒಂದು ಕೆಲಸ ಇದೆ.
ಹಾಗಾಗಿ ಯೆಹೋವ ತನ್ನ ಗೋಡೌನನ್ನ ತೆರೆದುಅದ್ರಿಂದ ತನ್ನ ಕೋಪದ ಆಯುಧಗಳನ್ನ ತರ್ತಾ ಇದ್ದಾನೆ.+
26 ದೂರ ದೂರದ ಜಾಗಗಳಿಂದ ಬಂದು ಅದ್ರ ಮೇಲೆ ದಾಳಿ ಮಾಡಿ.+
ಅದ್ರ ಕಣಜಗಳನ್ನ ತೆರಿರಿ.+
ಧಾನ್ಯದ ರಾಶಿಗಳ ತರ ಅದನ್ನ ಗುಡ್ಡೆ ಹಾಕಿ.
ಪೂರ್ತಿ ನಾಶಮಾಡಿ.+
ಅದ್ರ ಜನ್ರಲ್ಲಿ ಒಬ್ರನ್ನೂ ಉಳಿಸಬೇಡಿ.
27 ಅದ್ರ ಎಳೇ ಹೋರಿಗಳನ್ನೆಲ್ಲ ಕೊಂದುಬಿಡಿ,+ಕಡಿಯೋ ಜಾಗಕ್ಕೆ ಅವುಗಳನ್ನ ಕಳಿಸಿ.
ಅವುಗಳ ಗತಿಯನ್ನ ಏನಂತ ಹೇಳಲಿ, ಯಾಕಂದ್ರೆ ಅವುಗಳ ಹತ್ರ ಲೆಕ್ಕ ಕೇಳೋ ದಿನ ಬಂದಿದೆ,ಅವುಗಳಿಗೆ ಶಿಕ್ಷೆ ಕೊಡೋ ಸಮಯ ಬಂದಿದೆ!
28 ಬಾಬೆಲ್ ದೇಶದಿಂದ ಓಡಿಹೋಗ್ತಾ ಇರೋ ಜನ್ರ,ಅಲ್ಲಿಂದ ತಪ್ಪಿಸ್ಕೊಂಡು ಹೋಗ್ತಾ ಇರೋ ಜನ್ರ ಸದ್ದು ಕೇಳಿಸ್ತಿದೆ,ನಮ್ಮ ದೇವರಾದ ಯೆಹೋವ ಸೇಡು ತೀರಿಸ್ತಿದ್ದಾನೆ ಅಂತ,ತನ್ನ ಆಲಯಕ್ಕಾಗಿ ಆತನು ಸೇಡು ತೀರಿಸ್ತಾ ಇದ್ದಾನೆ+ ಅಂತಚೀಯೋನಲ್ಲಿ ಹೇಳೋಕೆ ಅವರು ಹೋಗ್ತಿದ್ದಾರೆ.
29 ಬಾಬೆಲ್ ಮೇಲೆ ದಾಳಿ ಮಾಡೋಕೆ ಬಿಲ್ಲುಗಾರರನ್ನ,ಬಿಲ್ಲನ್ನ ಬಗ್ಗಿಸೋ ಎಲ್ರನ್ನ ಕರಿರಿ,+ಸುತ್ತ ಪಾಳೆಯ ಹೂಡಿ, ಒಬ್ರೂ ತಪ್ಪಿಸ್ಕೊಳ್ಳಬಾರದು.
ಅದು ಮಾಡಿದ ಕೆಲಸಕ್ಕೆ ಸರಿಯಾಗಿ ಸೇಡು ತೀರಿಸ್ಕೊಳ್ಳಿ.+
ಅದು ಮಾಡಿದ ತರಾನೇ ಅದಕ್ಕೆ ಮಾಡಿ.+
ಯಾಕಂದ್ರೆ ಅದು ಯೆಹೋವನ ವಿರುದ್ಧ,ಇಸ್ರಾಯೇಲ್ಯರ ಪವಿತ್ರ ದೇವರ ವಿರುದ್ಧ ಅಹಂಕಾರದಿಂದ ನಡ್ಕೊಂಡಿದೆ.+
30 ಹಾಗಾಗಿ ಆ ದಿನ ಪಟ್ಟಣದ ಯುವಕರು ಪಟ್ಟಣದ ಮುಖ್ಯಸ್ಥಳಗಳಲ್ಲಿ* ಸತ್ತು ಬೀಳ್ತಾರೆ,+ಸೈನಿಕರೆಲ್ಲ ನಾಶ ಆಗ್ತಾರೆ” ಅಂತ ಯೆಹೋವ ಹೇಳ್ತಾನೆ.
31 ವಿಶ್ವದ ರಾಜನು ಸೈನ್ಯಗಳ ದೇವರು ಆದ ಯೆಹೋವ ಹೇಳೋದು ಏನಂದ್ರೆ“ಸೊಕ್ಕು ಹಿಡಿದವಳೇ+ ನೋಡು, ನಿನಗೆ ಶಿಕ್ಷೆ ಕೊಡ್ತೀನಿ.+
ನಿನ್ನಿಂದ ಲೆಕ್ಕ ಕೇಳೋ ದಿನ, ನಿನಗೆ ಶಿಕ್ಷೆ ಕೊಡೋ ಸಮಯ ಬಂದೇ ಬರುತ್ತೆ.
32 ಸೊಕ್ಕು ಹಿಡಿದವಳೇ, ನೀನು ಎಡವಿ ಬೀಳ್ತೀಯ.
ನಿನ್ನನ್ನ ಎತ್ತೋಕೆ ಯಾರೂ ಇರಲ್ಲ.+
ನಿನ್ನ ಪಟ್ಟಣಗಳಿಗೆ ನಾನು ಬೆಂಕಿ ಹಚ್ತೀನಿ,ಅದು ನಿನ್ನ ಸುತ್ತ ಇರೋ ಎಲ್ಲವನ್ನ ಸುಟ್ಟು ಬೂದಿ ಮಾಡುತ್ತೆ.”
33 ಸೈನ್ಯಗಳ ದೇವರಾದ ಯೆಹೋವ ಹೇಳೋದು ಏನಂದ್ರೆ“ಇಸ್ರಾಯೇಲ್, ಯೆಹೂದದ ಜನ್ರ ಮೇಲೆ ದಬ್ಬಾಳಿಕೆ ಮಾಡುತ್ತೆ.
ಅವ್ರನ್ನ ಕೈದಿಗಳಾಗಿ ಹಿಡ್ಕೊಂಡು ಹೋದವ್ರೆಲ್ಲ ಇನ್ನೂ ಕೈದಿಗಳಾಗೇ ಇದ್ದಾರೆ,+ಅವ್ರನ್ನ ಬಿಡುಗಡೆ ಮಾಡೋಕೆ ಒಪ್ತಿಲ್ಲ.+
34 ಆದ್ರೆ ಅವ್ರನ್ನ ಬಿಡಿಸೋ ದೇವರು ತುಂಬ ಬಲಶಾಲಿ.+
ಸೈನ್ಯಗಳ ದೇವರಾದ ಯೆಹೋವ ಅನ್ನೋದು ಆತನ ಹೆಸ್ರು.+
ಅವ್ರ ದೇಶದಲ್ಲಿ ಶಾಂತಿ ನೆಮ್ಮದಿ ತರೋಕೆ,+ಬಾಬೆಲಿನ ಜನ್ರಲ್ಲಿ ಕಳವಳ ಬರಿಸೋಕೆ+ಆತನು ಅವ್ರ ಮೊಕದ್ದಮೆಯಲ್ಲಿ ಅವ್ರ ಪರವಾಗಿ ವಾದಿಸ್ತಾನೆ.”+
35 ಯೆಹೋವ ಹೇಳೋದು ಏನಂದ್ರೆ “ಒಂದು ಕತ್ತಿ ಕಸ್ದೀಯರನ್ನ,ಬಾಬೆಲಿನ ಜನ್ರನ್ನ, ಅದ್ರ ಅಧಿಕಾರಿಗಳನ್ನ, ವಿವೇಕಿಗಳನ್ನ ನಾಶಮಾಡೋಕೆ ಬರ್ತಾ ಇದೆ.+
36 ಪ್ರಯೋಜನಕ್ಕೆ ಬಾರದ ವಿಷ್ಯ ಮಾತಾಡೋರನ್ನ* ಕೊಲ್ಲೋಕೆ ಒಂದು ಕತ್ತಿ ಬರುತ್ತೆ, ಆಗ ಅವರು ಮೂರ್ಖರ ತರ ನಡ್ಕೊಳ್ತಾರೆ.
ಅದ್ರ ವೀರ ಸೈನಿಕರನ್ನ ಕೊಲ್ಲೋಕೆ ಒಂದು ಕತ್ತಿ ಬರುತ್ತೆ, ಆಗ ಅವ್ರಿಗೆ ತುಂಬ ಭಯ ಆಗುತ್ತೆ.+
37 ಅವ್ರ ಕುದುರೆಗಳನ್ನ ಯುದ್ಧರಥಗಳನ್ನ ನಾಶ ಮಾಡೋಕೆ,ಅಲ್ಲಿ ವಾಸ ಮಾಡ್ತಿರೋ ವಿದೇಶಿಯರನ್ನೆಲ್ಲ ನಾಶ ಮಾಡೋಕೆ ಒಂದು ಕತ್ತಿ ಬರುತ್ತೆ.
ಆಗ ಅವರು ಹೆಂಗಸರ ತರ ಆಗ್ತಾರೆ.+
ಅದ್ರ ಸಿರಿಸಂಪತ್ತನ್ನ ನಾಶ ಮಾಡೋಕೆ ಒಂದು ಕತ್ತಿ ಬರುತ್ತೆ. ಆಗ ಅದೆಲ್ಲ ಲೂಟಿ ಆಗುತ್ತೆ.+
38 ಅದ್ರ ನೀರೆಲ್ಲ ಹಾಳಾಗುತ್ತೆ, ಒಣಗಿ ಹೋಗುತ್ತೆ.+
ಯಾಕಂದ್ರೆ ಬಾಬೆಲ್ ದೇಶ ಕೆತ್ತಿರೋ ಮೂರ್ತಿಗಳಿಂದ ತುಂಬಿದೆ.+
ಅವರು ಭಯಹುಟ್ಟಿಸೋ ದರ್ಶನಗಳನ್ನ ನೋಡಿದ್ರಿಂದ ಹುಚ್ಚುಚ್ಚಾಗಿ ಆಡ್ತಾ ಇದ್ದಾರೆ.
39 ಹಾಗಾಗಿ ಅಲ್ಲಿ ಬರೀ ಮರುಭೂಮಿಯಲ್ಲಿರೋ ಜೀವಿಗಳು, ಊಳಿಡೋ ಪ್ರಾಣಿಗಳೇ ಇರುತ್ತೆ.
ಉಷ್ಟ್ರಪಕ್ಷಿಗಳು ಅಲ್ಲಿ ವಾಸ ಮಾಡುತ್ತೆ.+
ಇನ್ನು ಯಾವತ್ತೂ ಅಲ್ಲಿ ಜನ್ರು ವಾಸ ಮಾಡಲ್ಲ.
ಎಷ್ಟೇ ಪೀಳಿಗೆ ಕಳೆದ್ರೂ ಅಲ್ಲಿ ಯಾರೂ ಇರಲ್ಲ.”+
40 ಯೆಹೋವ ಹೇಳೋದು ಏನಂದ್ರೆ “ನಾನು ಸೊದೋಮ್, ಗೊಮೋರ,+ ಅದ್ರ ಸುತ್ತಮುತ್ತ ಇದ್ದ ಊರುಗಳನ್ನ ನಾಶ ಮಾಡಿದ ಹಾಗೇ+ ಬಾಬೆಲನ್ನ ಕೂಡ ನಾಶ ಮಾಡ್ತೀನಿ. ಅಲ್ಲಿ ಯಾರೂ ವಾಸ ಮಾಡಲ್ಲ, ಯಾವ ಮನುಷ್ಯನೂ ಇರಲ್ಲ.+
41 ನೋಡು! ಉತ್ತರದಿಂದ ಒಂದು ದೇಶ ಬರ್ತಿದೆ,ಭೂಮಿಯ ದೂರದೂರದ ಜಾಗಗಳಿಂದ+ ಒಂದು ದೊಡ್ಡ ದೇಶ ಬರುತ್ತೆ, ಮಹಾ ರಾಜರು ಬರ್ತಾರೆ.+
42 ಅವರು ಬಿಲ್ಲು ಈಟಿಯಿಂದ ದಾಳಿ ಮಾಡ್ತಾರೆ.+
ಅವರು ಕ್ರೂರಿಗಳು, ಸ್ವಲ್ಪನೂ ದಯೆ-ಕರುಣೆ ತೋರಿಸಲ್ಲ.+
ಅವರು ಕುದುರೆ ಹತ್ತಿ ಬರೋ ಶಬ್ದಸಮುದ್ರ ಆರ್ಭಟಿಸೋ ತರ ಕೇಳಿಸುತ್ತೆ.+
ಬಾಬೆಲ್, ಅವ್ರೆಲ್ಲ ಸೇರ್ಕೊಂಡು ಸೈನ್ಯ ಕಟ್ಕೊಂಡು ಬಂದು ದಾಳಿ ಮಾಡ್ತಾರೆ.+
43 ಬಾಬೆಲಿನ ರಾಜನಿಗೆ ಅವ್ರ ಬಗ್ಗೆ ಸುದ್ದಿ ಸಿಕ್ಕಿದೆ.+
ಆಗ ಹೆದ್ರಿ ಅವನಿಗೆ ಏನು ಮಾಡಬೇಕಂತ ಗೊತ್ತಾಗ್ತಿಲ್ಲ.+
ಅವನು ತುಂಬ ಕಷ್ಟದಲ್ಲಿ ಮುಳುಗಿ ಹೋಗಿದ್ದಾನೆ,ಒಬ್ಬ ಹೆಂಗಸು ಹೆರುವಾಗ ಅನುಭವಿಸುವಂಥ ನೋವನ್ನ ಅನುಭವಿಸ್ತಾ ಇದ್ದಾನೆ.
44 ನೋಡು, ಯೋರ್ದನಿನ ಸುತ್ತಮುತ್ತ ಇರೋ ದಟ್ಟ ಪೊದೆಗಳಿಂದ ಸಿಂಹ ಬರೋ ತರ ಒಬ್ಬ ಬಂದು ಬಾಬೆಲಿನ ಸುರಕ್ಷಿತ ಹುಲ್ಲುಗಾವಲುಗಳ ಮೇಲೆ ದಾಳಿ ಮಾಡ್ತಾನೆ. ಅವರು* ಒಂದು ಕ್ಷಣದಲ್ಲೇ ತಮ್ಮ ದೇಶ ಬಿಟ್ಟು ಓಡಿಹೋಗೋ ತರ ಮಾಡ್ತೀನಿ. ನಾನು ಆರಿಸಿರೋ ಒಬ್ಬ ನಾಯಕನನ್ನ ಅದ್ರ ಮೇಲೆ ಇಡ್ತೀನಿ.+ ನನಗೆ ಸರಿಸಾಟಿ ಯಾರಿದ್ದಾರೆ? ನನಗೆ ಸವಾಲು ಹಾಕೋಷ್ಟು ಧೈರ್ಯ ಯಾರಿಗಿದೆ? ನನ್ನ ಮುಂದೆ ನಿಲ್ಲೋಕೆ ಯಾವ ಕುರುಬನಿಗೆ ಆಗುತ್ತೆ?+
45 ಹಾಗಾಗಿ ಜನ್ರೇ, ಯೆಹೋವನು ಬಾಬೆಲ್ ಬಗ್ಗೆ ಏನು ತೀರ್ಮಾನ ತಗೊಂಡಿದ್ದಾನೆ,+ ಕಸ್ದೀಯರ ದೇಶದ ಬಗ್ಗೆ ಏನು ಯೋಚ್ನೆ ಮಾಡಿದ್ದಾನೆ ಅಂತ ಕೇಳಿಸ್ಕೊಳ್ಳಿ.
ಹಿಂಡಲ್ಲಿರೋ ಕುರಿಮರಿಗಳನ್ನ ಖಂಡಿತ ಎಳ್ಕೊಂಡು ಹೋಗ್ತಾರೆ.
ಅಲ್ಲಿನ ಜನ್ರಿಂದಾಗಿ ಅವರು ವಾಸ ಮಾಡೋ ಜಾಗ ಹಾಳು ಬೀಳುತ್ತೆ.+
46 ಶತ್ರುಗಳು ಬಾಬೆಲನ್ನ ವಶ ಮಾಡ್ಕೊಂಡ ಶಬ್ದಕ್ಕೆ ಭೂಮಿ ನಡುಗುತ್ತೆ,ಕೂಗಾಟ ದೇಶಗಳಿಗೆ ಕೇಳಿಸುತ್ತೆ.”+
ಪಾದಟಿಪ್ಪಣಿ
^ ಅಥವಾ “ಸೂಚನಾ ಕಂಬ.”
^ ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.
^ ಅಕ್ಷ. “ಯೆಹೋವನನ್ನ ಹುಡುಕ್ತಾರೆ.”
^ ಅಂದ್ರೆ, ಇನ್ನೂ ಕರು ಹಾಕದಿರೋ ಹಸು.
^ ಅಥವಾ “ಹುಲ್ಲಿನ ಮೇಲೆ ಕಡಸು ಗೊರಸಿಂದ ಕೆರಿಯೋ ತರ ನೀವು ಕೆರಿತಿದ್ರಿ.”
^ ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.
^ ಅಥವಾ “ಸುಳ್ಳು ಪ್ರವಾದಿಗಳನ್ನ.”
^ ಬಾಬೆಲಿನ ಜನ್ರಿಗೆ ಸೂಚಿಸುತ್ತಿರಬಹುದು.