ಧರ್ಮೋಪದೇಶಕಾಂಡ 4:1-49

  • ವಿಧೇಯತೆ ತೋರಿಸೋಕೆ ಮನವಿ (1-14)

    • ದೇವರ ಕೆಲಸಗಳನ್ನ ಮರಿಬಾರದು (9)

  • ಯೆಹೋವನನ್ನ ಮಾತ್ರ ಆರಾಧಿಸಬೇಕು (15-31)

  • ಯೆಹೋವನನ್ನ ಬಿಟ್ಟು ಬೇರೆ ದೇವರು ಇಲ್ಲ (32-40)

  • ಯೋರ್ದನಿನ ಪೂರ್ವದಲ್ಲಿ ಆಶ್ರಯನಗರಗಳು (41-43)

  • ನಿಯಮ ಪುಸ್ತಕಕ್ಕೆ ಪೀಠಿಕೆ (44-49)

4  ಇಸ್ರಾಯೇಲ್ಯರೇ, ನಾನು ನಿಮಗೆ ಕಲಿಸ್ತಿರೋ ನಿಯಮಗಳನ್ನ, ತೀರ್ಪುಗಳನ್ನ ಗಮನಕೊಟ್ಟು ಕೇಳಿ, ಅದ್ರ ಪ್ರಕಾರ ನಡೀರಿ. ಆಗ ತುಂಬ ವರ್ಷ ಬದುಕ್ತೀರ.+ ನಿಮ್ಮ ಪೂರ್ವಜರ ದೇವರಾದ ಯೆಹೋವ ನಿಮಗೆ ಕೊಡೋ ದೇಶಕ್ಕೆ ಹೋಗಿ ಅದನ್ನ ವಶ ಮಾಡ್ಕೊಳ್ತೀರ.  ನಿಮ್ಮ ದೇವರಾದ ಯೆಹೋವನ ಆಜ್ಞೆಗಳನ್ನ ನಾನು ತಿಳಿಸ್ತಾ ಇದ್ದೀನಿ. ನೀವು ಅದನ್ನೆಲ್ಲ ಪಾಲಿಸಬೇಕು. ಆ ಆಜ್ಞೆಗಳಿಗೆ ಏನೂ ಸೇರಿಸಬಾರದು, ಏನೂ ತೆಗಿಬಾರದು.+  ಇಸ್ರಾಯೇಲ್ಯರಲ್ಲಿ ಯಾರೆಲ್ಲ ಪೆಗೋರದ ಬಾಳನನ್ನ ಆರಾಧಿಸಿದ್ರೋ+ ಅವ್ರಿಗೆ ಯೆಹೋವ ಏನು ಮಾಡಿದ ಅಂತ ಕಣ್ಣಾರೆ ನೋಡಿದ್ದೀರ. ನಿಮ್ಮ ದೇವರಾದ ಯೆಹೋವ ಅವ್ರನ್ನೆಲ್ಲ ನಾಶ ಮಾಡಿದನು.  ಆದ್ರೆ ನೀವು ದೇವರಾದ ಯೆಹೋವನನ್ನ ಗಟ್ಟಿಯಾಗಿ ಹಿಡ್ಕೊಂಡಿದ್ದೀರ. ಅದಕ್ಕೇ ಇವತ್ತಿನ ತನಕ ಬದುಕಿದ್ದೀರ.  ನನ್ನ ದೇವರಾದ ಯೆಹೋವ ನನಗೆ ಹೇಳಿದ ಹಾಗೇ ನಿಮಗೆ ಆತನ ಎಲ್ಲ ಆಜ್ಞೆಗಳನ್ನ, ತೀರ್ಪುಗಳನ್ನ ಕಲಿಸಿದ್ದೀನಿ.+ ನೀವು ವಶ ಮಾಡ್ಕೊಳ್ಳೋ ದೇಶದಲ್ಲಿ ಅದರ ಪ್ರಕಾರನೇ ನಡಿಬೇಕು.  ಗಮನಕೊಟ್ಟು ಅದನ್ನೆಲ್ಲ ಪಾಲಿಸಬೇಕು.+ ಆಗ ಆ ನಿಯಮಗಳ ಬಗ್ಗೆ ಕೇಳಿಸ್ಕೊಳ್ಳೋ ಜನ್ರಿಗೆ ನೀವೆಷ್ಟು ವಿವೇಕಿಗಳು,+ ತಿಳುವಳಿಕೆ+ ಇರೋರು ಅಂತ ಗೊತ್ತಾಗುತ್ತೆ. ಆ ಜನ ನಿಮ್ಮ ಬಗ್ಗೆ ‘ಈ ದೊಡ್ಡ ಜನಾಂಗದವರು ನಿಜಕ್ಕೂ ತುಂಬಾ ವಿವೇಕಿಗಳು, ತಿಳುವಳಿಕೆ ಇರೋರು’ + ಅಂತ ಮಾತಾಡ್ಕೊಳ್ತಾರೆ.  ನಮ್ಮ ದೇವರಾದ ಯೆಹೋವನಿಗೆ ಯಾವಾಗ ಬೇಡಿದ್ರೂ ಆತನು ಕೇಳಿಸ್ಕೊಳ್ತಾನೆ, ನಮಗೆ ಹತ್ರ ಇರ್ತಾನೆ. ಬೇರೆ ಯಾವ ದೊಡ್ಡ ಜನಾಂಗಕ್ಕಾದ್ರೂ ಅವ್ರ ದೇವರುಗಳು ಇಷ್ಟು ಹತ್ರ ಇದ್ದಾರಾ?+  ನಾನು ಇವತ್ತು ನಿಮಗೆ ಕೊಡ್ತಿರೋ ನಿಯಮ ಪುಸ್ತಕದಲ್ಲಿ ಇರೋ ನೀತಿಯ ಎಲ್ಲಾ ನಿಯಮಗಳು, ತೀರ್ಪುಗಳು ಬೇರೆ ಯಾವ ದೊಡ್ಡ ಜನಾಂಗಕ್ಕಾದ್ರೂ ಇದ್ಯಾ?+  ನೀವು ಕಣ್ಣಾರೆ ನೋಡಿದ ವಿಷ್ಯಗಳನ್ನ ಮರಿಬೇಡಿ. ಆ ವಿಷ್ಯಗಳು ನಿಮ್ಮ ಜೀವನಪೂರ್ತಿ ಹೃದಯದಲ್ಲಿ ಇರೋ ತರ ನೋಡ್ಕೊಳ್ಳಿ. ಅದನೆಲ್ಲ ನಿಮ್ಮ ಮಕ್ಕಳಿಗೆ ಮೊಮ್ಮಕ್ಕಳಿಗೆ ಹೇಳಿ.+ 10  ಹೋರೇಬಿನಲ್ಲಿ ನಿಮ್ಮ ದೇವರಾದ ಯೆಹೋವನ ಮುಂದೆ ನಿಂತ ದಿನ ಯೆಹೋವ ನನಗೆ ‘ಜನ್ರನ್ನ ನನ್ನ ಹತ್ರ ಸೇರಿಸು. ಅವರು ನನ್ನ ಮಾತುಗಳನ್ನ ಕೇಳಿಸ್ಕೊಳ್ಳಲಿ.+ ಅವರು ಬದುಕಿರೋಷ್ಟು ದಿನ ನನಗೆ ಭಯಪಡೋಕೆ ಕಲಿತಾರೆ,+ ತಮ್ಮ ಮಕ್ಕಳಿಗೂ ಅದನ್ನ ಕಲಿಸ್ತಾರೆ’ + ಅಂದನು. 11  ನೀವು ಬೆಟ್ಟದ ಹತ್ರ ಬಂದು ಅದ್ರ ಬುಡದಲ್ಲಿ ನಿಂತ್ಕೊಂಡ್ರಿ. ಬೆಟ್ಟದಲ್ಲಿ ಬೆಂಕಿ ಹೊತ್ತಿ ಉರಿತಿತ್ತು. ಅದ್ರ ಜ್ವಾಲೆ ಆಕಾಶ ಮುಟ್ತಿತ್ತು. ಆಕಾಶದಲ್ಲಿ ಮೋಡ ಮುಚ್ಚಿತ್ತು, ಕತ್ತಲು ಕವಿದಿತ್ತು.+ 12  ಆಗ ಯೆಹೋವ ಬೆಂಕಿ ಒಳಗಿಂದ ನಿಮ್ಮ ಜೊತೆ ಮಾತಾಡಿದನು.+ ಆತನ ಮಾತು ಕೇಳಿಸಿದ್ರೂ+ ರೂಪ ಕಾಣಿಸಲಿಲ್ಲ.+ 13  ಆಮೇಲೆ ತನ್ನ ಒಪ್ಪಂದವನ್ನ*+ ಅಂದ್ರೆ 10 ಆಜ್ಞೆಗಳನ್ನ*+ ನಿಮಗೆ ಕೊಟ್ಟು ಪಾಲಿಸೋಕೆ ಹೇಳಿದನು. ಆ 10 ಆಜ್ಞೆಗಳನ್ನ ಆತನು ಎರಡು ಕಲ್ಲಿನ ಹಲಗೆ ಮೇಲೆ ಬರೆದನು.+ 14  ಆಗ ಯೆಹೋವ ಆತನ ನಿಯಮಗಳನ್ನ, ತೀರ್ಪುಗಳನ್ನ ನಿಮಗೆ ಕಲಿಸಬೇಕಂತ ನನಗೆ ಆಜ್ಞೆ ಕೊಟ್ಟನು. ನೀವು ವಶ ಮಾಡ್ಕೊಳ್ಳೋ ದೇಶದಲ್ಲಿ ಅದನ್ನ ಪಾಲಿಸಬೇಕು. 15  ಹೋರೇಬಿನಲ್ಲಿ ಯೆಹೋವ ಬೆಂಕಿ ಮಧ್ಯದಿಂದ ನಿಮ್ಮ ಜೊತೆ ಮಾತಾಡಿದಾಗ ಆತನ ರೂಪವನ್ನ ನೀವು ನೋಡಲಿಲ್ಲ. ಹಾಗಾಗಿ ತುಂಬ ಜಾಗ್ರತೆ ವಹಿಸಬೇಕು, 16  ಕೆತ್ತಿದ ಮೂರ್ತಿ ಮಾಡ್ಕೊಬೇಡಿ, ಅವುಗಳನ್ನ ಸಂಕೇತವಾಗಿ ಉಪಯೋಗಿಸಿ ಭ್ರಷ್ಟರಾಗಬೇಡಿ. ಗಂಡು ಅಥವಾ ಹೆಣ್ಣಿನ ರೂಪ ಆಗ್ಲಿ,*+ 17  ಭೂಮಿಯಲ್ಲಿರೋ ಯಾವುದೇ ಪ್ರಾಣಿ ರೂಪ ಆಗ್ಲಿ, ಹಾರಾಡೋ ಯಾವುದೇ ಪಕ್ಷಿ ರೂಪ ಆಗ್ಲಿ,+ 18  ನೆಲದ ಮೇಲೆ ಹರಿದಾಡೋ ಯಾವುದೇ ಜೀವಿ ರೂಪ ಆಗ್ಲಿ, ನೀರಲ್ಲಿರೋ ಯಾವುದೇ ಮೀನಿನ ರೂಪ ಆಗ್ಲಿ ಮಾಡ್ಕೊಬೇಡಿ.+ 19  ನೀವು ಕಣ್ಣೆತ್ತಿ ಆಕಾಶದ ಸೈನ್ಯವನ್ನ ಅಂದ್ರೆ ಸೂರ್ಯ, ಚಂದ್ರ, ನಕ್ಷತ್ರಗಳನ್ನ ನೋಡಿದಾಗ ಅವುಗಳಿಗೆ ಮರುಳಾಗಿ ಅಡ್ಡಬೀಳಬೇಡಿ, ಅವುಗಳ ಸೇವೆ ಮಾಡಬೇಡಿ.+ ನಿಮ್ಮ ದೇವರಾದ ಯೆಹೋವ ಅದನ್ನೆಲ್ಲ ಭೂಮಿಯಲ್ಲಿರೋ ಎಲ್ಲ ಜನ್ರಿಗೋಸ್ಕರ ಕೊಟ್ಟಿದ್ದಾನೆ. 20  ಕಬ್ಬಿಣ ಕರಗಿಸೋ ಕುಲುಮೆ ತರ ಇದ್ದ ಈಜಿಪ್ಟಲ್ಲಿ ತುಂಬ ಕಷ್ಟ ಪಟ್ಟಿದ್ರಿ. ಆದ್ರೆ ಯೆಹೋವ ನಿಮ್ಮನ್ನ ತನ್ನ ಸೊತ್ತಾಗಿ ಮಾಡ್ಕೊಳ್ಳೋಕೆ ಅಲ್ಲಿಂದ ಬಿಡಿಸ್ಕೊಂಡು ಬಂದನು.+ ಅದೇ ತರ ಇವತ್ತು ನೀವು ಆತನ ಸೊತ್ತಾಗಿದ್ದೀರ. 21  ನಿಮ್ಮಿಂದಾಗಿ ಯೆಹೋವ ನನ್ನ ಮೇಲೆ ಕೋಪ ಮಾಡ್ಕೊಂಡನು.+ ಯೋರ್ದನ್‌ ನದಿ ದಾಟಬಾರದು, ನಿಮಗೆ ಆಸ್ತಿಯಾಗಿ ಕೊಡೋ ಒಳ್ಳೇ ದೇಶಕ್ಕೆ ಹೋಗ್ಲೇ ಬಾರದು ಅಂತ ನಿಮ್ಮ ದೇವರಾದ ಯೆಹೋವ ನನಗೆ ಹೇಳ್ಬಿಟ್ಟಿದ್ದಾನೆ.+ 22  ನಾನು ಈ ದೇಶದಲ್ಲೇ ಸಾಯಬೇಕು. ನಾನು ಯೋರ್ದನ್‌ ನದಿ ದಾಟಿ ಬರಲ್ಲ.+ ಆದ್ರೆ ನೀವು ಯೋರ್ದನ್‌ ದಾಟಿ ಹೋಗಿ ಆ ಒಳ್ಳೇ ದೇಶವನ್ನ ವಶ ಮಾಡ್ಕೊಳ್ತೀರ. 23  ನಿಮ್ಮ ಜೊತೆ ನಿಮ್ಮ ದೇವರಾದ ಯೆಹೋವ ಮಾಡ್ಕೊಂಡ ಒಪ್ಪಂದನ ಯಾವತ್ತೂ ಮರಿಬೇಡಿ.+ ನಿಮ್ಮ ದೇವರಾದ ಯೆಹೋವ ಬೇಡ ಅಂತ ಹೇಳಿದ ಯಾವ ಕೆತ್ತಿದ ಮೂರ್ತಿನೂ ಯಾವುದ್ರ ರೂಪನೂ ಮಾಡ್ಕೊಬೇಡಿ. ಈ ವಿಷ್ಯದಲ್ಲಿ ತುಂಬ ಹುಷಾರಾಗಿರಿ.+ 24  ಯಾಕಂದ್ರೆ ನಿಮ್ಮ ದೇವರಾದ ಯೆಹೋವ ಸುಡೋ ಬೆಂಕಿ ತರ.+ ತನ್ನನ್ನ ಮಾತ್ರ ಆರಾಧಿಸಬೇಕಂತ* ಬಯಸೋ* ದೇವರು.+ 25  ನೀವು ಮಕ್ಕಳು-ಮೊಮ್ಮಕ್ಕಳನ್ನ ಪಡೆದು ಆ ದೇಶದಲ್ಲಿ ಹೆಚ್ಚು ವರ್ಷ ಬದುಕಿದ ಮೇಲೆ ನಾಶಕ್ಕೆ ನಡಿಸೋ ಕೆಲಸಗಳನ್ನ ಮಾಡಿದ್ರೆ, ಯಾವುದೇ ತರದ ಕೆತ್ತಿದ ಮೂರ್ತಿ ಮಾಡ್ಕೊಂಡ್ರೆ,+ ನಿಮ್ಮ ದೇವರಾದ ಯೆಹೋವನಿಗೆ ಇಷ್ಟ ಆಗದ್ದನ್ನ ಮಾಡಿ ಆತನಿಗೆ ಕೋಪ ಬರಿಸಿದ್ರೆ+ 26  ನಾನು ಇವತ್ತು ಭೂಮಿ, ಆಕಾಶ ಸಾಕ್ಷಿಯಾಗಿಟ್ಟು ಹೇಳ್ತಿನಿ, ನೀವು ಯೋರ್ದನ್‌ ದಾಟಿ ವಶ ಮಾಡ್ಕೊಳ್ಳೋ ಆ ದೇಶದಲ್ಲಿ ಬೇಗ ನಾಶ ಆಗ್ತೀರ. ಆ ದೇಶದಲ್ಲಿ ತುಂಬ ದಿನ ಬದುಕಲ್ಲ. ಪೂರ್ತಿ ನಾಶ ಆಗಿಹೋಗ್ತೀರ.+ 27  ಯೆಹೋವ ನಿಮ್ಮನ್ನ ಬೇರೆ ಜನಾಂಗಗಳಲ್ಲಿ ಚೆದರಿಸಿಬಿಡ್ತಾನೆ.+ ಯೆಹೋವ ನಿಮ್ಮನ್ನ ಯಾವ ದೇಶಗಳಿಗೆ ಓಡಿಸಿಬಿಡ್ತಾನೋ ಅಲ್ಲಿ ನೀವು ಸ್ವಲ್ಪ ಜನ ಮಾತ್ರ ಉಳಿತೀರ.+ 28  ಅಲ್ಲಿ ಮನುಷ್ಯರು ಮರದಿಂದ, ಕಲ್ಲಿಂದ ಮಾಡಿದ ದೇವರುಗಳನ್ನ ಅಂದ್ರೆ ನೋಡೋಕೆ, ಕೇಳೋಕೆ, ತಿನ್ನೋಕೆ, ವಾಸನೆ ತಿಳಿಯೋಕೆ ಆಗದ ದೇವರುಗಳ ಸೇವೆ ಮಾಡಬೇಕಾಗುತ್ತೆ.+ 29  ಆದ್ರೆ ನೀವು ಅಲ್ಲಿರುವಾಗ ನಿಮ್ಮ ದೇವರಾದ ಯೆಹೋವನ ಹತ್ರ ವಾಪಸ್‌ ಬಂದ್ರೆ* ಮತ್ತೆ ನಿಮ್ಮ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ*+ ಆತನಿಗಾಗಿ ವಿಚಾರಿಸಿದ್ರೆ ಆತನು ನಿಮಗೆ ಖಂಡಿತ ಸಿಗ್ತಾನೆ.+ 30  ನೀವು ಆ ಕೆಟ್ಟ ಪರಿಣಾಮಗಳನ್ನೆಲ್ಲ ಅನುಭವಿಸಿ ತುಂಬ ಕಷ್ಟ ನೋವಲ್ಲಿ ಇರುವಾಗ ನಿಮ್ಮ ದೇವರಾದ ಯೆಹೋವನ ಹತ್ರ ವಾಪಸ್‌ ಬರ್ತಿರ, ಆತನ ಮಾತನ್ನ ಕೇಳ್ತೀರ.+ 31  ನಿಮ್ಮ ದೇವರಾದ ಯೆಹೋವ ಕರುಣಾಮಯಿ.+ ಆತನು ನಿಮ್ಮ ಕೈಬಿಡಲ್ಲ, ನಾಶವಾಗಿ ಹೋಗೋಕೆ ಬಿಡಲ್ಲ. ನಿಮ್ಮ ಪೂರ್ವಜರ ಜೊತೆ ಆತನು ಆಣೆ ಇಟ್ಟು ಮಾಡಿದ ಒಪ್ಪಂದವನ್ನ ಮರಿಯಲ್ಲ.+ 32  ದೇವರು ಭೂಮಿ ಮೇಲೆ ಮನುಷ್ಯನನ್ನ ಸೃಷ್ಟಿ ಮಾಡಿದ ಸಮಯದಿಂದ ಇಲ್ಲಿ ತನಕ ಇಂಥ ಮಹಾನ್‌ ಕೆಲಸ ಯಾವತ್ತಾದ್ರೂ ನಡಿದಿದ್ಯಾ ಅಂತ ಯೋಚ್ನೆ ಮಾಡಿ. ಇಂಥ ವಿಷ್ಯನ ಯಾರಾದ್ರೂ ಯಾವತ್ತಾದ್ರೂ ಕೇಳಿಸ್ಕೊಂಡಿದ್ದಾರಾ ಅಂತ ಭೂಮಿಯ ಒಂದು ಮೂಲೆಯಿಂದ ಇನ್ನೊಂದು ಮೂಲೆ ತನಕ ವಿಚಾರಿಸಿ ನೋಡಿ.+ 33  ದೇವರು ಬೆಂಕಿ ಒಳಗಿಂದ ಮಾತಾಡೋದನ್ನ ನೀವು ಕೇಳಿಸ್ಕೊಂಡ ಹಾಗೆ ಬೇರೆ ಯಾರಾದ್ರೂ ಕೇಳಿಸ್ಕೊಂಡು ಜೀವಂತ ಉಳಿದಿದ್ದಾರಾ?+ 34  ನಿಮ್ಮ ದೇವರಾದ ಯೆಹೋವ ಈಜಿಪ್ಟಲ್ಲಿ ನಿಮ್ಮ ಕಣ್ಮುಂದೆನೇ ಅವರಿಗೆ ಶಿಕ್ಷೆ* ಕೊಟ್ಟು, ಸೂಚಕ ಕೆಲಸಗಳನ್ನ ಅದ್ಭುತಗಳನ್ನ ಮಾಡಿ,+ ಯುದ್ಧ ಮಾಡಿ,+ ಮಹಾ ಶಕ್ತಿ+ ಬಲ ತೋರಿಸಿ,* ಭಯಹುಟ್ಟಿಸೋ ಕೆಲಸಗಳನ್ನ+ ಮಾಡಿ ನಿಮ್ಮನ್ನ ಬಿಡಿಸ್ಕೊಂಡು ಬಂದ್ನಲ್ಲಾ! ಒಂದು ಜನಾಂಗದ ಕೈಯಿಂದ ಇನ್ನೊಂದು ಜನಾಂಗವನ್ನ ಬಿಡಿಸೋಕೆ ದೇವರು ಹೀಗೆ ಯಾವತ್ತಾದ್ರೂ ಮಾಡಿದ್ದಾನಾ? ನಿಮ್ಮನ್ನ ಆರಿಸ್ಕೊಂಡ ಹಾಗೆ ಬೇರೆ ಯಾವ ಜನಾಂಗವನ್ನಾದ್ರೂ ತನಗಾಗಿ ಆರಿಸ್ಕೊಂಡಿದ್ದಾನಾ? 35  ಯೆಹೋವನೇ ಸತ್ಯ ದೇವರು, ಆತನನ್ನ ಬಿಟ್ಟು ಬೇರೆ ಯಾವ ದೇವರೂ ಇಲ್ಲ+ ಅಂತ ನೀವು ತಿಳ್ಕೊಳ್ಳಬೇಕು ಅಂತಾನೇ ಆ ಅದ್ಭುತಗಳನ್ನೆಲ್ಲ ಮಾಡಿದನು.+ 36  ಆತನು ನಿಮ್ಮನ್ನ ತಿದ್ದೋಕೆ ಸ್ವರ್ಗದಿಂದ ತನ್ನ ಸ್ವರ ನಿಮಗೆ ಕೇಳಿಸೋ ತರ, ಭೂಮಿಯಲ್ಲಿ ಆತನ ದೊಡ್ಡ ಬೆಂಕಿ ನಿಮಗೆ ಕಾಣಿಸೋ ತರ ಮಾಡಿದನು. ಬೆಂಕಿ ಒಳಗಿಂದ ಆತನ ಮಾತುಗಳನ್ನ ನೀವು ಕೇಳಿಸ್ಕೊಂಡ್ರಿ.+ 37  ಆತನು ನಿಮ್ಮ ಪೂರ್ವಜರನ್ನ ಪ್ರೀತಿಸಿ ಅವ್ರ ಸಂತತಿಯವರನ್ನ ಆರಿಸ್ಕೊಂಡನು.+ ಹಾಗಾಗಿ ಆತನು ನಿಮ್ಮ ಜೊತೆ ಇದ್ದು ತನ್ನ ಮಹಾ ಶಕ್ತಿಯಿಂದ ನಿಮ್ಮನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬಂದನು. 38  ನಿಮಗಿಂತ್ಲೂ ದೊಡ್ಡದಾದ ಬಲಿಷ್ಠವಾದ ಜನಾಂಗಗಳು ವಾಸ ಮಾಡ್ತಿದ್ದ ದೇಶಕ್ಕೆ ನಿಮ್ಮನ್ನ ಕರ್ಕೊಂಡು ಬಂದು ಆ ಜನಾಂಗಗಳನ್ನ ನಿಮ್ಮ ಎದುರಿಂದ ಓಡಿಸಿಬಿಟ್ಟನು. ಈ ದೇಶನ ನಿಮಗೆ ಆಸ್ತಿಯಾಗಿ ಕೊಡೋಕೆ ಹಾಗೆ ಮಾಡಿದನು. ಈಗ ಅದು ನಡಿತಿದ್ಯಲ್ಲಾ.+ 39  ಹಾಗಾಗಿ ಆಕಾಶದಲ್ಲೂ ಭೂಮಿಯಲ್ಲೂ ಯೆಹೋವನೇ ಸತ್ಯ ದೇವರು,+ ಬೇರೆ ಯಾವ ದೇವರೂ ಇಲ್ಲ+ ಅಂತ ಈಗ ನೀವು ತಿಳ್ಕೊಂಡು ಅದನ್ನ ನಿಮ್ಮ ಹೃದಯದಲ್ಲಿ ಅಚ್ಚೊತ್ತಿ. 40  ಇವತ್ತು ನಿಮಗೆ ಹೇಳಿರೋ ದೇವರ ನಿಯಮಗಳನ್ನ ಆಜ್ಞೆಗಳನ್ನ ನೀವು ಪಾಲಿಸಬೇಕು. ಆಗ ನಿಮಗೆ ನಿಮ್ಮ ಮಕ್ಕಳಿಗೆ ಒಳ್ಳೇದಾಗುತ್ತೆ, ನಿಮ್ಮ ದೇವರಾದ ಯೆಹೋವ ಕೊಡೋ ದೇಶದಲ್ಲಿ ನೀವು ಜಾಸ್ತಿ ವರ್ಷ ಇರ್ತಿರ.”+ 41  ಆ ಸಮಯದಲ್ಲಿ ಮೋಶೆ ಯೋರ್ದನ್‌ ನದಿಯ ಪೂರ್ವದಲ್ಲಿ ಮೂರು ಪಟ್ಟಣಗಳನ್ನ ಆರಿಸ್ಕೊಂಡ.+ 42  ಒಬ್ಬ ಆಕಸ್ಮಿಕವಾಗಿ ಇನ್ನೊಬ್ಬನನ್ನ ಕೊಂದ್ರೆ ಸತ್ತವನ ಮೇಲೆ ಅವನಿಗೆ ಮುಂಚೆ ಯಾವುದೇ ದ್ವೇಷ ಇರದಿದ್ರೆ+ ಅವನು ಈ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ತನ್ನ ಜೀವ ಉಳಿಸ್ಕೊಳ್ಳಬೇಕು.+ 43  ಆ ಪಟ್ಟಣಗಳು ಯಾವುದಂದ್ರೆ, ರೂಬೇನ್ಯರಿಗಾಗಿ ಎತ್ರದ ಸಮತಟ್ಟಾದ ಕಾಡಲ್ಲಿರೋ ಬೆಚೆರ್‌,+ ಗಾದ್ಯರಿಗಾಗಿ ಗಿಲ್ಯಾದಿನಲ್ಲಿರೋ ರಾಮೋತ್‌,+ ಮನಸ್ಸೆಯವರಿಗಾಗಿ ಬಾಷಾನಿನಲ್ಲಿರೋ+ ಗೋಲಾನ್‌.+ 44  ಮೋಶೆ ಇಸ್ರಾಯೇಲ್ಯರಿಗೆ ಹೇಳಿದ ನಿಯಮ ಪುಸ್ತಕ ಇದೇ.+ 45  ಇಸ್ರಾಯೇಲ್ಯರು ಈಜಿಪ್ಟಿಂದ ಬಂದ ಮೇಲೆ ಮೋಶೆ ಅವ್ರಿಗೆ ನೆನಪು ಮಾಡಿದ ನಿರ್ದೇಶನಗಳು, ಹೇಳಿದ ನಿಯಮಗಳು, ತೀರ್ಪುಗಳು ಇವೇ.+ 46  ಮೋಶೆ ಇದನ್ನೆಲ್ಲ ಯೋರ್ದನ್‌ ಪ್ರದೇಶದಲ್ಲಿ ಅಂದ್ರೆ ಬೇತ್‌-ಪೆಗೋರಿನ+ ಎದುರಲ್ಲಿರೋ ಕಣಿವೆಯಲ್ಲಿ ಹೇಳಿದನು. ಇದು ಹೆಷ್ಬೋನಿನಲ್ಲಿ+ ವಾಸವಾಗಿದ್ದ ಅಮೋರಿಯರ ರಾಜ ಸೀಹೋನನ ದೇಶದಲ್ಲಿ ಇತ್ತು. ಈಜಿಪ್ಟಿಂದ ಬಂದ ಮೇಲೆ ಮೋಶೆ, ಇಸ್ರಾಯೇಲ್ಯರು ಆ ರಾಜನನ್ನ ಸೋಲಿಸಿ+ 47  ಅವನ ದೇಶ ವಶ ಮಾಡ್ಕೊಂಡ್ರು. ಬಾಷಾನಿನ ರಾಜ ಓಗನ+ ದೇಶವನ್ನ ಕೂಡ ವಶ ಮಾಡ್ಕೊಂಡ್ರು. ಅಮೋರಿಯರ ಆ ಇಬ್ರು ರಾಜರು ಯೋರ್ದನಿನ ಪೂರ್ವದ ಪ್ರದೇಶದಲ್ಲಿದ್ರು. 48  ಆ ಪ್ರದೇಶ ಅರ್ನೋನ್‌ ಕಣಿವೆಯ ಅಂಚಿನಲ್ಲಿರೋ ಅರೋಯೇರ್‌+ ಪಟ್ಟಣದಿಂದ ಹಿಡಿದು ಸೀಯೋನ್‌ ಅಂದ್ರೆ ಹೆರ್ಮೋನ್‌ ಬೆಟ್ಟದ+ ತನಕ 49  ಮತ್ತು ಯೋರ್ದನಿನ ಪೂರ್ವದ ಪ್ರದೇಶದಲ್ಲಿರೋ ಇಡೀ ಅರಾಬಾ ಮತ್ತೆ ಪಿಸ್ಗಾ ಬೆಟ್ಟದ ಇಳಿಜಾರುಗಳ ಕೆಳಗಿರೋ ಅರಾಬಾ ಸಮುದ್ರದ ತನಕ* ಇತ್ತು.+

ಪಾದಟಿಪ್ಪಣಿ

ಅಥವಾ “ದಶಾಜ್ಞೆಗಳನ್ನ.”
ಅಥವಾ “ಒಡಂಬಡಿಕೆಯನ್ನ.”
ಅಥವಾ “ಪ್ರತೀಕವನ್ನಾಗಲಿ.”
ಅಥವಾ “ಅನನ್ಯ ಭಕ್ತಿಯನ್ನ.”
ಅಥವಾ “ಕೇಳೋ ಹಕ್ಕಿರೋ.”
ಅಕ್ಷ. “ಯೆಹೋವನನ್ನ ಹುಡುಕಿದ್ರೆ.”
ಅಕ್ಷ. “ಬಲಿಷ್ಠ ಕೈಯಿಂದ, ಚಾಚಿದ ತೋಳಿಂದ.”
ಅಥವಾ “ಕಷ್ಟ.”
ಇದು, ಮೃತ ಸಮುದ್ರ.