ಪಾಠ 12
ಧೈರ್ಯವಂತ ಯುವಕ
ಈ ಯುವಕ ತನ್ನ ಮಾವನ ಜೀವ ಉಳಿಸಿದ. ಅವನ ಮಾವನ ಹೆಸರು ಅಪೊಸ್ತಲ ಪೌಲ. ಈ ಯುವಕನ ಹೆಸರು ನಮಗೆ ಗೊತ್ತಿಲ್ಲ. ಆದರೆ ಅವನು ತನ್ನ ಮಾವನ ಜೀವ ಉಳಿಸಿದ್ದು ಧೈರ್ಯದ ಕೆಲಸ. ಹೇಗೆ ಉಳಿಸಿದ ಅಂತ ನಿನಗೆ ತಿಳಿದುಕೊಳ್ಳಬೇಕಾ?—
ಪೌಲ ಯೆರೂಸಲೇಮಿನಲ್ಲಿ ಜೈಲಿನಲ್ಲಿದ್ದ. ಯೇಸುವಿನ ಬಗ್ಗೆ ಸಾರುತ್ತಿದ್ದ ಅಂತ ಅವನನ್ನು ಜೈಲಿಗೆ ಹಾಕಿದ್ದರು. ಕೆಲವು ಕೆಟ್ಟ ಜನರಿಗೆ ಪೌಲನ ಮೇಲೆ ದ್ವೇಷ ಇತ್ತು. ಹಾಗಾಗಿ ಒಂದು ಕೆಟ್ಟ ಉಪಾಯ ಮಾಡಿದರು. ‘ಸೈನಿಕರ ಜೊತೆ ಪೌಲನನ್ನು ನ್ಯಾಯಾಲಯಕ್ಕೆ ಕಳುಹಿಸುವಂತೆ ಸೇನಾಪತಿಗೆ ಹೇಳೋಣ. ನಾವು ದಾರಿ ಪಕ್ಕದಲ್ಲೆಲ್ಲೊ ಅಡಗಿಕೊಂಡು, ಪೌಲ ಅಲ್ಲಿಂದ ದಾಟುವಾಗ ಅವನನ್ನು ಕೊಂದುಬಿಡೋಣ’ ಅಂತ ತಮ್ಮತಮ್ಮೊಳಗೆ ಮಾತಾಡಿಕೊಂಡರು.
ಈ ಉಪಾಯ ಪೌಲನ ಸಹೋದರಿಯ ಮಗನಿಗೆ ಗೊತ್ತಾಯಿತು. ಅವನೇನು ಮಾಡಿದ? ಜೈಲಿಗೆ ಹೋಗಿ ಅದನ್ನು ಪೌಲನಿಗೆ ಹೇಳಿದ. ಈ ಉಪಾಯದ ಬಗ್ಗೆ ಸೇನಾಪತಿಗೆ ಹೋಗಿ ತಿಳಿಸು ಅಂತ ಪೌಲ ಹೇಳಿದ. ಪೌಲನ ಸಹೋದರಿಯ ಮಗನಿಗೆ ಸೇನಾಪತಿ ಜೊತೆ ಮಾತಾಡುವುದು ಸುಲಭ ಆಗಿತ್ತೆಂದು ನೆನಸುತ್ತೀಯಾ?— ಇಲ್ಲ, ಏಕೆಂದರೆ ಆ ಸೇನಾಪತಿ ಒಬ್ಬ ದೊಡ್ಡ ಮನುಷ್ಯ. ಆದರೂ ಪೌಲನ ಸಹೋದರಿಯ ಮಗ ಧೈರ್ಯದಿಂದ ಅವನ ಬಳಿ ಹೋಗಿ ಮಾತಾಡಿದ.
ಏನು ಮಾಡಬೇಕಂತ ಸೇನಾಪತಿಗೆ ಗೊತ್ತಾಯಿತು. ಪೌಲನನ್ನು ಕಾಪಾಡಲು ಸುಮಾರು 500 ಮಂದಿ ಸೈನಿಕರಿಗೆ ಹೇಳಿದ! ಅವತ್ತೇ ರಾತ್ರಿ ಪೌಲನನ್ನು ಕೈಸರೈಯ ಎಂಬ ಸ್ಥಳಕ್ಕೆ ಕರಕೊಂಡು ಹೋಗುವಂತೆ ಹೇಳಿದ. ಪೌಲನ ಜೀವ ಉಳಿಯಿತಾ?— ಉಳಿಯಿತು. ಆ ಕೆಟ್ಟ ಜನರು ಅವನಿಗೆ ಏನೂ ಮಾಡಲಾಗಲಿಲ್ಲ. ಅವರ ಉಪಾಯ ವಿಫಲವಾಯಿತು.
ಈ ಕಥೆಯಿಂದ ನೀನೇನು ಕಲಿತೆ?— ಪೌಲನ ಸಹೋದರಿಯ ಮಗನ ಹಾಗೆ ನೀನೂ ಧೈರ್ಯವಂತ ಆಗಬಹುದು. ಯೆಹೋವನ ಬಗ್ಗೆ ಬೇರೆಯವರೊಟ್ಟಿಗೆ ಮಾತಾಡುವಾಗ ನಾವು ಧೈರ್ಯ ತೋರಿಸಬೇಕು. ನೀನು ಯೆಹೋವನ ಬಗ್ಗೆ ಧೈರ್ಯದಿಂದ ಮಾತಾಡುತ್ತಾ ಇರುತ್ತೀಯಾ?— ಹಾಗೆ ಮಾಡಿದರೆ ನೀನು ಸಹ ಪೌಲನ ಸಹೋದರಿಯ ಮಗನ ಹಾಗೆ ಯಾರದ್ದಾದರೂ ಜೀವ ಉಳಿಸಬಹುದು.