ನೀವು ದೇವರ ಸಮೀಪಕ್ಕೆ ಬರಬಲ್ಲ ವಿಧ
ಅಧ್ಯಾಯ 16
ನೀವು ದೇವರ ಸಮೀಪಕ್ಕೆ ಬರಬಲ್ಲ ವಿಧ
1. ಅನೇಕ ಧರ್ಮಗಳಲ್ಲಿ ಯಾವ ಹೋಲಿಕೆಗಳು ವ್ಯಕ್ತವಾಗಿವೆ?
ಪ್ರಾಚ್ಯ ದೇಶವೊಂದಕ್ಕೆ ಭೇಟಿಕೊಡುತ್ತಿದ್ದ ಪ್ರವಾಸಿಯೊಬ್ಬಳು ಬೌದ್ಧ ಮಂದಿರವೊಂದರಲ್ಲಿ ತಾನು ಅವಲೋಕಿಸಿದ ಧಾರ್ಮಿಕ ಸಂಸ್ಕಾರಗಳಿಂದ ಬೆರಗಾದಳು. ವಿಗ್ರಹಗಳು ಮರಿಯಳದ್ದು ಅಥವಾ ಕ್ರಿಸ್ತನದ್ದು ಅಲ್ಲವಾಗಿದ್ದರೂ, ಅನೇಕ ಸಂಸ್ಕಾರಗಳು ಅವಳ ಸ್ವದೇಶದ ಚರ್ಚಿನದ್ದನ್ನು ಹೋಲುತ್ತಿದ್ದವು. ಉದಾಹರಣೆಗೆ, ಜಪಮಾಲೆಗಳ ಬಳಕೆ ಮತ್ತು ಜಪಗಳ ಪಠನವನ್ನು ಆಕೆ ಗಮನಿಸಿದಳು. ಇತರರು ಸಹ ಇಂತಹ ತುಲನೆಗಳನ್ನು ಮಾಡಿದ್ದಾರೆ. ಪ್ರಾಚ್ಯವಾಗಲಿ, ಪಾಶ್ಚಾತ್ಯವಾಗಲಿ, ಭಕ್ತರು ದೇವರಿಗೆ ಅಥವಾ ಅವರ ಆರಾಧನಾ ವಸ್ತುಗಳಿಗೆ ಸಮೀಪವಾಗಲು ಪ್ರಯತ್ನಿಸುವ ವಿಧಗಳು ಗಮನಾರ್ಹವಾಗಿ ಸದೃಶವಾಗಿವೆ.
2. ಪ್ರಾರ್ಥನೆಯನ್ನು ಹೇಗೆ ವರ್ಣಿಸಲಾಗಿದೆ, ಮತ್ತು ಅನೇಕ ಜನರು ಪ್ರಾರ್ಥಿಸುವುದೇಕೆ?
2 ಅನೇಕರು ವಿಶೇಷವಾಗಿ ದೇವರಿಗೆ ಸಮೀಪವಾಗಲು ಪ್ರಯತ್ನಿಸುವುದು ಆತನಿಗೆ ಪ್ರಾರ್ಥಿಸುವ ಮೂಲಕ. ಪ್ರಾರ್ಥನೆಯನ್ನು, “ಪವಿತ್ರ ಅಥವಾ ಪರಿಶುದ್ಧವಾದುದರೊಂದಿಗೆ—ದೇವರು, ದೇವತೆಗಳು, ಪ್ರಕೃತ್ಯತೀತ ಕ್ಷೇತ್ರ, ಅಥವಾ ಅತಿಲೌಕಿಕ ಶಕ್ತಿಗಳೊಂದಿಗೆ—ಮನುಷ್ಯನು ಸಂವಾದಿಸುವ ಒಂದು ಕೃತ್ಯ” ಎಂದು ವರ್ಣಿಸಲಾಗಿದೆ. (ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ) ಆದರೂ, ದೇವರನ್ನು ಪ್ರಾರ್ಥನೆಯಲ್ಲಿ ಸಮೀಪಿಸುವಾಗ ಕೆಲವರು ತಮಗೆ ಅದರಿಂದ ದೊರೆಯುವ ಪ್ರಯೋಜನದ ಕುರಿತು ಮಾತ್ರ ಯೋಚಿಸುತ್ತಾರೆ. ಉದಾಹರಣೆಗೆ, ಒಬ್ಬ ಮನುಷ್ಯನು ಒಮ್ಮೆ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೊಡನೆ ಕೇಳಿದ್ದು: “ನೀನು ನನಗೋಸ್ಕರ ಪ್ರಾರ್ಥಿಸುವಲ್ಲಿ, ನನ್ನ ಕುಟುಂಬದಲ್ಲಿ, ಕೆಲಸದಲ್ಲಿ ಮತ್ತು ಆರೋಗ್ಯದೊಂದಿಗೆ ಇರುವ ಸಮಸ್ಯೆಗಳು ಬಗೆಹರಿಸಲ್ಪಡುವುವೊ?” ಆ ಮನುಷ್ಯನು ಹಾಗೆ ಯೋಚಿಸಿದ್ದಿರಬೇಕು, ಆದರೆ ಅನೇಕರು ಪ್ರಾರ್ಥಿಸಿದರೂ ತಮ್ಮ ಸಮಸ್ಯೆಗಳು ಇನ್ನೂ ಇವೆ ಎಂದು ಕಂಡುಕೊಳ್ಳುತ್ತಾರೆ. ಆದಕಾರಣ ನಾವು ಹೀಗೆ ಕೇಳಬಹುದು, ‘ನಾವು ದೇವರನ್ನು ಮಾತ್ರ ಏಕೆ ಸಮೀಪಿಸಬೇಕು?’
ದೇವರ ಸಮೀಪಕ್ಕೆ ಬರುವ ಕಾರಣ
3. ನಮ್ಮ ಪ್ರಾರ್ಥನೆಗಳು ಯಾರಿಗೆ ನಿರ್ದೇಶಿಸಲ್ಪಡಬೇಕು, ಮತ್ತು ಏಕೆ?
3 ಪ್ರಾರ್ಥನೆಯು ಒಂದು ಟೊಳ್ಳು ಸಂಸ್ಕಾರವೂ ಅಲ್ಲ, ಏನನ್ನಾದರೂ ಸಂಪಾದಿಸುವ ಬರಿಯ ಒಂದು ಸಾಧನವೂ ಅಲ್ಲ. ದೇವರನ್ನು ಸಮೀಪಿಸುವ ಒಂದು ದೊಡ್ಡ ಕಾರಣವು ಆತನೊಂದಿಗೆ ಒಂದು ಆಪ್ತ ಸಂಬಂಧವಿರಲಿಕ್ಕಾಗಿಯೇ. ಆದಕಾರಣ ನಮ್ಮ ಪ್ರಾರ್ಥನೆಗಳು ಯೆಹೋವ ದೇವರಿಗೆ ನಿರ್ದೇಶಿಸಲ್ಪಡಬೇಕು. “ಯೆಹೋವನಿಗೆ . . . ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ,” ಎಂದನು ಕೀರ್ತನೆಗಾರನಾದ ದಾವೀದನು. (ಕೀರ್ತನೆ 145:18) ನಾವು ಯೆಹೋವನೊಂದಿಗೆ ಶಾಂತಿಯ ಸಂಬಂಧಕ್ಕೆ ಬರುವಂತೆ ಆತನು ನಮ್ಮನ್ನು ಆಮಂತ್ರಿಸುತ್ತಾನೆ. (ಯೆಶಾಯ 1:18) ಈ ಆಮಂತ್ರಣಕ್ಕೆ ಓಗೊಡುವವರು, “ನನಗಾದರೋ ದೇವರ ಸಾನ್ನಿಧ್ಯವೇ ಭಾಗ್ಯವು,” ಎಂದು ಹೇಳಿದ ಕೀರ್ತನೆಗಾರನೊಂದಿಗೆ ಸಮ್ಮತಿಸುತ್ತಾರೆ. ಏಕೆ? ಏಕೆಂದರೆ ಯೆಹೋವ ದೇವರ ಸಮೀಪಕ್ಕೆ ಬರುವವರು ನಿಜ ಸಂತೋಷ ಮತ್ತು ಮನಶ್ಶಾಂತಿಯನ್ನು ಅನುಭವಿಸುವರು.—ಕೀರ್ತನೆ 73:28.
4, 5. (ಎ) ದೇವರಿಗೆ ಪ್ರಾರ್ಥಿಸುವುದು ಏಕೆ ಪ್ರಾಮುಖ್ಯ? (ಬಿ) ಪ್ರಾರ್ಥನೆಯ ಮೂಲಕ ನಾವು ದೇವರೊಂದಿಗೆ ಯಾವ ರೀತಿಯ ಸಂಬಂಧವನ್ನು ಕಟ್ಟಬಲ್ಲೆವು?
4 ‘ನಾವು ಕೇಳುವುದಕ್ಕಿಂತ ಮೊದಲೇ ನಮಗೆ ಏನು ಅಗತ್ಯವೆಂದು ಆತನು ಬಲ್ಲವನಾಗಿದ್ದರೆ,’ ನಾವು ಸಹಾಯಕ್ಕಾಗಿ ದೇವರಿಗೆ ಏಕೆ ಪ್ರಾರ್ಥಿಸಬೇಕು? (ಮತ್ತಾಯ 6:8; ಕೀರ್ತನೆ 139:4) ನಮಗೆ ದೇವರಲ್ಲಿ ನಂಬಿಕೆಯಿದೆ ಮತ್ತು ನಾವು ಆತನನ್ನು ‘ಎಲ್ಲ ಒಳ್ಳೇ ದಾನಗಳ ಮತ್ತು ಕುಂದಿಲ್ಲದ ಎಲ್ಲ ವರಗಳ’ ಮೂಲನಾಗಿ ವೀಕ್ಷಿಸುತ್ತೇವೆಂದು ಪ್ರಾರ್ಥನೆಯು ತೋರಿಸುತ್ತದೆ. (ಯಾಕೋಬ 1:17; ಇಬ್ರಿಯ 11:6) ಯೆಹೋವನು ನಮ್ಮ ಪ್ರಾರ್ಥನೆಗಳಲ್ಲಿ ಆನಂದಿಸುತ್ತಾನೆ. (ಜ್ಞಾನೋಕ್ತಿ 15:8) ಒಬ್ಬ ತಂದೆಯು ತನ್ನ ಎಳೆಯ ಮಗು ಕೃತಜ್ಞತೆಯ ಯಥಾರ್ಥ ಮಾತುಗಳನ್ನಾಡುವುದನ್ನು ಕೇಳುವುದರಲ್ಲಿ ಸಂತೋಷಿಸುವಂತೆಯೇ, ಆತನು ನಮ್ಮ ಗಣ್ಯತೆ ಮತ್ತು ಸ್ತುತಿಯ ಅರ್ಥಗರ್ಭಿತ ಅಭಿವ್ಯಕ್ತಿಗಳನ್ನು ಕೇಳಲು ಸಂತೋಷಿಸುತ್ತಾನೆ. (ಕೀರ್ತನೆ 119:108) ತಂದೆ-ಮಗುವಿನ ಮಧ್ಯೆ ಸುಸಂಬಂಧವಿರುವಲ್ಲಿ, ಹೃದಯೋಲ್ಲಾಸಕರವಾದ ಸಂವಾದವಿರುತ್ತದೆ. ಪ್ರೀತಿಸಲ್ಪಡುವ ಒಂದು ಮಗುವು ತನ್ನ ತಂದೆಯೊಂದಿಗೆ ಮಾತಾಡಬಯಸುತ್ತದೆ. ದೇವರೊಂದಿಗೆ ನಮ್ಮ ಸಂಬಂಧದ ವಿಷಯದಲ್ಲಿಯೂ ಇದು ಸತ್ಯ. ನಾವು ಯೆಹೋವನ ವಿಷಯ ಮತ್ತು ಆತನು ನಮಗಾಗಿ ತೋರಿಸಿದ ಪ್ರೀತಿಯ ವಿಷಯದ ಕುರಿತು ಕಲಿಯುತ್ತಿರುವುದನ್ನು ನಿಜವಾಗಿಯೂ ಮಾನ್ಯಮಾಡುವಲ್ಲಿ, ಪ್ರಾರ್ಥನೆಯಲ್ಲಿ ನಮ್ಮನ್ನು ಆತನಿಗೆ ವ್ಯಕ್ತಪಡಿಸಿಕೊಳ್ಳುವ ಬಲವಾದ ಬಯಕೆ ನಮಗಿರುವುದು.—1 ಯೋಹಾನ 4:16-18.
5 ಸರ್ವೋನ್ನತನಾದ ದೇವರನ್ನು ಸಮೀಪಿಸುವಾಗ, ನಾವು ಉಪಯೋಗಿಸುವ ನಿಖರವಾದ ಪದಗಳ ಕುರಿತು ವಿಪರೀತವಾಗಿ ಚಿಂತಿತರಾಗುವ ಅಗತ್ಯವಿಲ್ಲದಿದ್ದರೂ, ನಾವು ಗೌರವ ತೋರಿಸುವವರಾಗಿರಬೇಕು. (ಇಬ್ರಿಯ 4:16) ನಮಗೆ ಯೆಹೋವನ ಬಳಿಗೆ ಹೋಗುವ ಪ್ರವೇಶಾಧಿಕಾರ ಯಾವಾಗಲೂ ಇದೆ. ಮತ್ತು ಪ್ರಾರ್ಥನೆಯಲ್ಲಿ ದೇವರ ಮುಂದೆ ‘ಹೃದಯವನ್ನು ಬಿಚ್ಚುವ’ ಸಾಧ್ಯತೆ ನಮಗಿರುವುದು ಎಂತಹ ಒಂದು ಸುಯೋಗ! (ಕೀರ್ತನೆ 62:8) ಯೆಹೋವನಿಗಾಗಿ ಗಣ್ಯತೆಯು ಆತನೊಂದಿಗೆ ಹೃದಯೋಲ್ಲಾಸಕರವಾದ ಸಂಬಂಧಕ್ಕೆ, ನಂಬಿಗಸ್ತ ಮನುಷ್ಯನಾದ ಅಬ್ರಹಾಮನು ದೇವರ ಸ್ನೇಹಿತನಾಗಿ ಅನುಭವಿಸಿದಂತಹ ಸಂಬಂಧಕ್ಕೆ ನಡೆಸುತ್ತದೆ. (ಯಾಕೋಬ 2:23) ಆದರೆ ವಿಶ್ವದ ಪರಮಾಧಿಕಾರಿಯಾದಾತನಿಗೆ ನಾವು ಪ್ರಾರ್ಥಿಸುವಾಗ, ಆತನನ್ನು ಸಮೀಪಿಸುವ ಸಂಬಂಧದಲ್ಲಿರುವ ಆತನ ಆವಶ್ಯಕತೆಗಳಿಗೆ ನಾವು ಹೊಂದಿಕೊಳ್ಳಬೇಕು.
ದೇವರ ಸಮೀಪಕ್ಕೆ ಬರಲಿಕ್ಕಾಗಿ ಆವಶ್ಯಕತೆಗಳು
6, 7. ನಮ್ಮ ಪ್ರಾರ್ಥನೆಗಳನ್ನು ಕೇಳಲು ದೇವರು ಹಣವನ್ನು ಅಪೇಕ್ಷಿಸುವುದಿಲ್ಲವಾದರೂ, ನಾವು ಪ್ರಾರ್ಥಿಸುವಾಗ ಆತನು ನಮ್ಮಿಂದ ಏನನ್ನು ಅವಶ್ಯಪಡಿಸುತ್ತಾನೆ?
6 ದೇವರನ್ನು ಸಮೀಪಿಸಲು ಹಣ ಅವಶ್ಯವೊ? ಅನೇಕರು ತಮಗಾಗಿ ಪ್ರಾರ್ಥನೆಮಾಡಲು ಪುರೋಹಿತರಿಗೆ ಹಣ ತೆರುತ್ತಾರೆ. ಕೆಲವರು ತಾವು ಮಾಡುವ ದ್ರವ್ಯದಾನದ ಗಾತ್ರದ ಪ್ರಮಾಣಕ್ಕನುಸಾರವಾಗಿ ತಮ್ಮ ಪ್ರಾರ್ಥನೆಗಳು ಕೇಳಲ್ಪಡುವವೆಂದೂ ನಂಬುತ್ತಾರೆ. ಆದರೂ, ಪ್ರಾರ್ಥನೆಯಲ್ಲಿ ನಾವು ಯೆಹೋವನನ್ನು ಸಮೀಪಿಸಲು ಹಣದ ಕಾಣಿಕೆ ಬೇಕೆಂದು ದೇವರ ವಾಕ್ಯವು ಹೇಳುವುದಿಲ್ಲ. ಆತನ ಆತ್ಮಿಕ ಒದಗಿಸುವಿಕೆಗಳೂ ಪ್ರಾರ್ಥನೆಯಲ್ಲಿ ಆತನೊಂದಿಗೆ ಒಂದು ಸಂಬಂಧದ ಆಶೀರ್ವಾದಗಳೂ ಬೆಲೆಯಿಲ್ಲದೆ ದೊರೆಯುತ್ತವೆ.—ಯೆಶಾಯ 55:1, 2.
7 ಹಾಗಾದರೆ ಏನು ಅಗತ್ಯ? ಒಂದು ಆವಶ್ಯಕವು ಯೋಗ್ಯವಾದ ಹೃದಯ ಮನೋಭಾವ. (2 ಪೂರ್ವಕಾಲವೃತ್ತಾಂತ 6:29, 30; ಜ್ಞಾನೋಕ್ತಿ 15:11) ನಮ್ಮ ಹೃದಯದಲ್ಲಿ ನಾವು ಯೆಹೋವ ದೇವರಲ್ಲಿ “ಪ್ರಾರ್ಥನೆಯನ್ನು ಕೇಳುವವ” ನಾಗಿಯೂ “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು” ಕೊಡುವವನಾಗಿಯೂ ನಂಬಿಕೆಯನ್ನು ಅಭ್ಯಾಸಿಸಬೇಕು. (ಕೀರ್ತನೆ 65:2; ಇಬ್ರಿಯ 11:6) ನಮ್ಮಲ್ಲಿ ನಮ್ರ ಹೃದಯವೂ ಇರಬೇಕು. (2 ಅರಸುಗಳು 22:19; ಕೀರ್ತನೆ 51:17) ತನ್ನ ದೃಷ್ಟಾಂತಗಳಲ್ಲಿ ಒಂದರಲ್ಲಿ, ದೇವರನ್ನು ಸಮೀಪಿಸುವಾಗ ತಗ್ಗಿದ ಹೃದ್ಭಾವವುಳ್ಳ ಒಬ್ಬ ಸುಂಕದವನು ಅಹಂಕಾರಿಯಾದ ಒಬ್ಬ ಫರಿಸಾಯನಿಗಿಂತ ಹೆಚ್ಚು ನೀತಿವಂತನಾಗಿ ಪರಿಣಮಿಸಿದನೆಂದು ಯೇಸು ಕ್ರಿಸ್ತನು ತೋರಿಸಿದನು. (ಲೂಕ 18:10-14) ನಾವು ದೇವರನ್ನು ಪ್ರಾರ್ಥನೆಯಲ್ಲಿ ಸಮೀಪಿಸುವಾಗ, “ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ” ಎಂಬುದನ್ನು ಜ್ಞಾಪಿಸಿಕೊಳ್ಳೋಣ.—ಜ್ಞಾನೋಕ್ತಿ 16:5.
8. ದೇವರು ನಮ್ಮ ಪ್ರಾರ್ಥನೆಗಳಿಗೆ ಉತ್ತರಕೊಡಬೇಕೆಂದು ನಾವು ಬಯಸುವುದಾದರೆ, ನಾವು ಯಾವುದರಿಂದ ನಮ್ಮನ್ನು ಶುದ್ಧಮಾಡಿಕೊಳ್ಳಬೇಕು?
8 ದೇವರು ನಮ್ಮ ಪ್ರಾರ್ಥನೆಗಳಿಗೆ ಉತ್ತರಕೊಡುವಂತೆ ನಾವು ಬಯಸುವಲ್ಲಿ, ನಮ್ಮ ಪಾಪಪೂರ್ಣ ನಡತೆಯಿಂದ ನಾವು ನಮ್ಮನ್ನು ಶುದ್ಧಮಾಡಿಕೊಳ್ಳಬೇಕು. ಶಿಷ್ಯ ಯಾಕೋಬನು ಇತರರನ್ನು ದೇವರ ಸಮೀಪಕ್ಕೆ ಬರಲು ಪ್ರೋತ್ಸಾಹಿಸಿದಾಗ ಅವನು, “ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ; ಎರಡು ಮನಸ್ಸುಳ್ಳವರೇ, ನಿಮ್ಮ ಹೃದಯಗಳನ್ನು ನಿರ್ಮಲಮಾಡಿಕೊಳ್ಳಿರಿ,” ಎಂದು ಕೂಡಿಸಿದನು. (ಯಾಕೋಬ 4:8) ಪಶ್ಚಾತ್ತಾಪಪಡುವುದಾದರೆ ಮತ್ತು ತಮ್ಮ ಪೂರ್ವದ ಜೀವನ ರೀತಿಯನ್ನು ಬಿಡುವುದಾದರೆ, ತಪ್ಪುಗಾರರು ಕೂಡ ಯೆಹೋವನೊಂದಿಗೆ ಶಾಂತಿಯ ಸಂಬಂಧಕ್ಕೆ ಬರಬಲ್ಲರು. (ಜ್ಞಾನೋಕ್ತಿ 28:13) ನಾವು ನಮ್ಮ ಮಾರ್ಗವನ್ನು ಶುದ್ಧೀಕರಿಸಿದ್ದೇವೆಂದು ಕೇವಲ ನಟಿಸುವ ಮಾತ್ರಕ್ಕೆ ನಮಗೆ ಯೆಹೋವನೊಂದಿಗೆ ಸಂದರ್ಶನಾವಕಾಶ ದೊರೆಯಲಾರದು. “ಯಾಕಂದರೆ ಕರ್ತನು [“ಯೆಹೋವನು,” NW] ನೀತಿವಂತರನ್ನು ಕಟಾಕ್ಷಿಸುತ್ತಾನೆ, ಆತನು ಅವರ ವಿಜ್ಞಾಪನೆಗಳಿಗೆ ಕಿವಿಗೊಡುತ್ತಾನೆ. ಕೆಡುಕರಿಗೋ ಕರ್ತನು [“ಯೆಹೋವನು,” NW] ಕೋಪದ ಮುಖವುಳ್ಳವನಾಗಿರುತ್ತಾನೆ,” ಎನ್ನುತ್ತದೆ ದೇವರ ವಾಕ್ಯ.—1 ಪೇತ್ರ 3:12.
9. ನಾವು ಯಾರ ಮೂಲಕ ಯೆಹೋವನನ್ನು ಸಮೀಪಿಸಬೇಕು ಮತ್ತು ಏಕೆ?
9 ಬೈಬಲು ಹೇಳುವುದು: “ಪಾಪಮಾಡದೆ ಧರ್ಮವನ್ನೇ ಆಚರಿಸುತ್ತಿರುವ ಸತ್ಪುರುಷನು ಲೋಕದಲ್ಲಿ ಇಲ್ಲವೇ ಇಲ್ಲ.” (ಪ್ರಸಂಗಿ 7:20) ಆದಕಾರಣ ನೀವು ಹೀಗೆ ಕೇಳಬಹುದು: ‘ಹಾಗಾದರೆ ನಾವು ಯೆಹೋವ ದೇವರನ್ನು ಹೇಗೆ ಸಮೀಪಿಸಬಲ್ಲೆವು?’ ಬೈಬಲು ಉತ್ತರಕೊಡುವುದು: “ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ.” (1 ಯೋಹಾನ 2:1) ನಾವು ಪಾಪಿಗಳಾದರೂ, ನಮಗೆ ಪ್ರಾಯಶ್ಚಿತ್ತವಾಗಿ ಸತ್ತ ಯೇಸು ಕ್ರಿಸ್ತನ ಮೂಲಕ ನಾವು ದೇವರನ್ನು ವಾಕ್ ಸ್ವಾತಂತ್ರ್ಯದಿಂದ ಸಮೀಪಿಸಬಲ್ಲೆವು. (ಮತ್ತಾಯ 20:28) ನಾವು ಯೆಹೋವ ದೇವರನ್ನು ಸಮೀಪಿಸಸಾಧ್ಯವಿರುವ ಏಕಮಾತ್ರ ಮಾಧ್ಯಮವು ಅವನೇ. (ಯೋಹಾನ 14:6) ನಾವು ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಉತ್ಕೃಷ್ಟತೆಯನ್ನು ಮಾಮೂಲಿಯಾಗಿ ತೆಗೆದುಕೊಂಡು ಉದ್ದೇಶಪೂರ್ವಕವಾಗಿ ಪಾಪವನ್ನು ರೂಢಿಮಾಡಬಾರದು. (ಇಬ್ರಿಯ 10:26) ಆದರೂ, ಕೆಟ್ಟದ್ದನ್ನು ಮಾಡದಿರಲು ನಮ್ಮ ಕೈಲಾದಷ್ಟನ್ನು ಮಾಡಿಯೂ ಕೆಲವು ಸಲ ತಪ್ಪುಮಾಡುವಲ್ಲಿ, ನಾವು ಪಶ್ಚಾತ್ತಾಪಪಟ್ಟು ದೇವರಿಂದ ಕ್ಷಮೆಯನ್ನು ಯಾಚಿಸಬಲ್ಲೆವು. ನಾವು ಆತನನ್ನು ನಮ್ರ ಹೃದಯದಿಂದ ಸಮೀಪಿಸುವಾಗ ಆತನು ನಮಗೆ ಕಿವಿಗೊಡುವನು.—ಲೂಕ 11:4.
ದೇವರೊಂದಿಗೆ ಮಾತನಾಡುವ ಅವಕಾಶಗಳು
10. ಪ್ರಾರ್ಥನೆಯ ವಿಷಯದಲ್ಲಿ, ನಾವು ಯೇಸುವನ್ನು ಹೇಗೆ ಅನುಕರಿಸಬಲ್ಲೆವು, ಮತ್ತು ಖಾಸಗಿ ಪ್ರಾರ್ಥನೆಗಿರುವ ಕೆಲವು ಸಂದರ್ಭಗಳಾವುವು?
10 ಯೇಸು ಕ್ರಿಸ್ತನು ಯೆಹೋವನೊಂದಿಗಿನ ತನ್ನ ಸಂಬಂಧವನ್ನು ಅತಿ ಅಮೂಲ್ಯವೆಂದೆಣಿಸಿದನು. ಆದಕಾರಣ, ಖಾಸಗಿ ಪ್ರಾರ್ಥನೆಯಲ್ಲಿ ದೇವರೊಂದಿಗೆ ಮಾತನಾಡಲು ಯೇಸು ಸಮಯವನ್ನು ಮಾಡಿಕೊಂಡನು. (ಮಾರ್ಕ 1:35; ಲೂಕ 22:40-46) ನಾವು ಯೇಸುವಿನ ಮಾದರಿಯನ್ನು ಅನುಕರಿಸಿ, ದೇವರಿಗೆ ನಿಯತಕ್ರಮದಲ್ಲಿ ಪ್ರಾರ್ಥಿಸುವುದು ಒಳ್ಳೆಯದು. (ರೋಮಾಪುರ 12:12) ದಿನವನ್ನು ಪ್ರಾರ್ಥನೆಯ ಮಾತುಗಳಿಂದ ಆರಂಭಿಸುವುದು ಯೋಗ್ಯ, ಮತ್ತು ಮಲಗಿಕೊಳ್ಳುವ ಮೊದಲು ದಿನದ ಚಟುವಟಿಕೆಗಳಿಗಾಗಿ ನಾವು ಯೆಹೋವನಿಗೆ ಯುಕ್ತವಾಗಿ ಉಪಕಾರ ಹೇಳಬಲ್ಲೆವು. ದಿನದಲ್ಲಿ, “ಎಲ್ಲಾ ಸಮಯಗಳಲ್ಲಿ” ದೇವರನ್ನು ಸಮೀಪಿಸಲು ನಿರ್ಧರಿಸಿರಿ. (ಎಫೆಸ 6:18) ಯೆಹೋವನು ನಮಗೆ ಕಿವಿಗೊಡಬಲ್ಲನೆಂದು ತಿಳಿದವರಾಗಿ, ನಾವು ನಮ್ಮ ಹೃದಯದಲ್ಲಿ ಮೌನವಾಗಿಯೂ ಪ್ರಾರ್ಥಿಸಬಲ್ಲೆವು. ಖಾಸಗಿಯಾಗಿ ದೇವರೊಂದಿಗೆ ಮಾತಾಡುವುದು ನಾವು ಆತನೊಂದಿಗಿನ ನಮ್ಮ ಸಂಬಂಧವನ್ನು ಬಂಧಿಸುವಂತೆ ಸಹಾಯಮಾಡುತ್ತದೆ, ಮತ್ತು ಯೆಹೋವನಿಗೆ ದಿನಾಲೂ ಪ್ರಾರ್ಥಿಸುವುದು ನಾವು ಆತನ ಬಳಿ ಇನ್ನಷ್ಟು ನಿಕಟವಾಗಿ ಬರುವಂತೆ ಸಹಾಯಮಾಡುತ್ತದೆ.
11. (ಎ) ಕುಟುಂಬಗಳು ಏಕೆ ಒಟ್ಟುಗೂಡಿ ಪ್ರಾರ್ಥಿಸಬೇಕು? (ಬಿ) ಒಂದು ಪ್ರಾರ್ಥನೆಯ ಅಂತ್ಯದಲ್ಲಿ ನೀವು “ಆಮೆನ್” ಎಂದು ಹೇಳುವಾಗ ಅದರ ಅರ್ಥವೇನು?
11 ಜನರ ಗುಂಪುಗಳ ಪರವಾಗಿ ಮಾಡಿದ ಪ್ರಾರ್ಥನೆಗಳಿಗೆ ಸಹ ಯೆಹೋವನು ಕಿವಿಗೊಡುತ್ತಾನೆ. (1 ಅರಸುಗಳು 8:22-53) ಕುಟುಂಬದ ಯಜಮಾನನು ನಾಯಕತ್ವವನ್ನು ವಹಿಸುವುದರೊಂದಿಗೆ, ನಾವು ಕುಟುಂಬವಾಗಿ ದೇವರ ಸಮೀಪಕ್ಕೆ ಬರಬಲ್ಲೆವು. ಇದು ಕುಟುಂಬ ಬಂಧವನ್ನು ಬಲಪಡಿಸುತ್ತದೆ, ಮತ್ತು ತಮ್ಮ ಹೆತ್ತವರು ನಮ್ರತೆಯಿಂದ ದೇವರಿಗೆ ಪ್ರಾರ್ಥಿಸುವುದನ್ನು ಎಳೆಯರು ಕೇಳುವಾಗ ಯೆಹೋವನು ಅವರಿಗೆ ನೈಜನಾಗುತ್ತಾನೆ. ಪ್ರಾಯಶಃ ಯೆಹೋವನ ಸಾಕ್ಷಿಗಳ ಒಂದು ಕೂಟದಲ್ಲಿ, ಯಾವನಾದರೂ ಒಂದು ಗುಂಪನ್ನು ಪ್ರಾರ್ಥನೆಯಲ್ಲಿ ಪ್ರತಿನಿಧೀಕರಿಸುವುದಾದರೆ ಏನು? ನಾವು ಆ ಕೇಳುಗರಲ್ಲಿರುವುದಾದರೆ, ಪ್ರಾರ್ಥನೆಯ ಅಂತ್ಯದಲ್ಲಿ ಹೃತ್ಪೂರ್ವಕವಾಗಿ “ಹಾಗೆಯೇ ಆಗಲಿ” ಎಂಬರ್ಥವಿರುವ “ಆಮೆನ್” ಎಂದು ನಮಗೆ ಹೇಳಸಾಧ್ಯವಾಗುವಂತೆ ನಾವು ಗಮನಕೊಟ್ಟು ಕೇಳೋಣ.—1 ಕೊರಿಂಥ 14:16.
ಯೆಹೋವನು ಕೇಳುವಂತಹ ಪ್ರಾರ್ಥನೆಗಳು
12. (ಎ) ದೇವರು ಕೆಲವು ಪ್ರಾರ್ಥನೆಗಳನ್ನು ಏಕೆ ಉತ್ತರಿಸುವುದಿಲ್ಲ? (ಬಿ) ಪ್ರಾರ್ಥಿಸುವಾಗ ನಾವು ಕೇವಲ ವೈಯಕ್ತಿಕ ಅಗತ್ಯಗಳ ಮೇಲೆ ಕೇಂದ್ರೀಕರಿಸಬಾರದೇಕೆ?
12 ತಾವು ಕ್ರಿಸ್ತನ ಮೂಲಕ ಪ್ರಾರ್ಥಿಸಿದರೂ ದೇವರು ತಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡುವುದಿಲ್ಲವೆಂದು ಕೆಲವರಿಗೆ ಅನಿಸೀತು. ಆದರೂ ಅಪೊಸ್ತಲ ಯೋಹಾನನು ಹೇಳಿದ್ದು: “ನಾವು ದೇವರ ಚಿತ್ತಾನುಸಾರವಾಗಿ ಏನಾದರೂ ಬೇಡಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆ.” (1 ಯೋಹಾನ 5:14) ಆದುದರಿಂದ, ನಾವು ದೇವರ ಚಿತ್ತಾನುಸಾರವಾಗಿ ಬೇಡಿಕೊಳ್ಳುವುದು ಅಗತ್ಯ. ಆತನು ನಮ್ಮ ಆತ್ಮಿಕ ಯೋಗಕ್ಷೇಮದಲ್ಲಿ ಆಸಕ್ತನಾಗಿರುವುದರಿಂದ, ನಮ್ಮ ಆತ್ಮಿಕತೆಯನ್ನು ಬಾಧಿಸುವ ಯಾವುದೂ ಪ್ರಾರ್ಥನೆಗೆ ಸಮಂಜಸವಾದ ವಿಷಯವಾಗಿದೆ. ಶಾರೀರಿಕ ಆವಶ್ಯಕತೆಗಳ ಮೇಲೆ ಪೂರ್ತಿ ಕೇಂದ್ರೀಕರಿಸುವ ದುಷ್ಪ್ರೇರಣೆಯನ್ನು ನಾವು ತಡೆದು ಹಿಡಿಯಬೇಕು. ಉದಾಹರಣೆಗೆ, ಕಾಯಿಲೆಯನ್ನು ನಿಭಾಯಿಸಲು ಬೇಕಾಗುವ ಒಳನೋಟ ಮತ್ತು ಸ್ಥೈರ್ಯಗಳಿಗಾಗಿ ಪ್ರಾರ್ಥಿಸುವುದು ಯೋಗ್ಯವಾಗಿರುವುದಾದರೂ, ಆರೋಗ್ಯದ ಕುರಿತ ಚಿಂತೆಗಳು ಆತ್ಮಿಕ ಅಭಿರುಚಿಗಳನ್ನು ಹೊರದಬ್ಬಬಾರದು. (ಕೀರ್ತನೆ 41:1-3) ತನ್ನ ಆರೋಗ್ಯದ ವಿಷಯದಲ್ಲಿ ತಾನು ಮಿತಿಮೀರಿ ಚಿಂತಿತಳೆಂದು ಮನಗಂಡ ಒಬ್ಬ ಕ್ರೈಸ್ತ ಸ್ತ್ರೀ, ತನ್ನ ಕಾಯಿಲೆಯ ವಿಷಯವಾಗಿ ತನಗೆ ಯೋಗ್ಯವಾದ ವೀಕ್ಷಣವಿರುವಂತೆ ಸಹಾಯಮಾಡಲು ಯೆಹೋವನನ್ನು ಕೇಳಿಕೊಂಡಳು. ಇದರ ಪರಿಣಾಮವಾಗಿ, ಆಕೆಯ ಆರೋಗ್ಯ ಸಮಸ್ಯೆಗಳು ತುಂಬ ಚಿಕ್ಕ ವಿಷಯವಾಯಿತು, ಮತ್ತು ತನಗೆ “ಬಲಾಧಿಕ್ಯವು” ಕೊಡಲ್ಪಟ್ಟಿತೆಂದು ಆಕೆಗನಿಸಿತು. (2 ಕೊರಿಂಥ 4:7) ಇತರರಿಗೆ ಆತ್ಮಿಕ ಸಹಾಯವಾಗಿರಬೇಕೆಂಬ ಆಕೆಯ ಬಯಕೆ ತೀಕ್ಷ್ಣವಾಯಿತು, ಮತ್ತು ಆಕೆ ಪೂರ್ಣ ಸಮಯದ ರಾಜ್ಯ ಘೋಷಕಿಯಾದಳು.
13. ಮತ್ತಾಯ 6:9-13 ರಲ್ಲಿ ಸೂಚಿಸಿರುವಂತೆ, ನಾವು ನಮ್ಮ ಪ್ರಾರ್ಥನೆಗಳಲ್ಲಿ ಒಳಗೂಡಿಸಸಾಧ್ಯವಿರುವ ಕೆಲವು ಸೂಕ್ತವಾದ ವಿಷಯಗಳು ಯಾವುವು?
13 ಯೆಹೋವನು ಕಿವಿಗೊಡಲು ಇಷ್ಟಪಡುವ ಯಾವುದನ್ನು ನಾವು ನಮ್ಮ ಪ್ರಾರ್ಥನೆಗಳಲ್ಲಿ ಸೇರಿಸಬಹುದು? ಹೇಗೆ ಪ್ರಾರ್ಥಿಸಬೇಕೆಂದು ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಕಲಿಸಿದನು. ಮತ್ತಾಯ 6:9-13 ರಲ್ಲಿ ದಾಖಲಿಸಲ್ಪಟ್ಟಿರುವ ಮಾದರಿ ಪ್ರಾರ್ಥನೆಯಲ್ಲಿ, ನಾವು ಪ್ರಾರ್ಥಿಸಲು ಯೋಗ್ಯವಾಗಿರಬಹುದಾದ ವಿಷಯಗಳ ಒಂದು ನಮೂನೆಯನ್ನಿಟ್ಟನು. ನಮ್ಮ ಪ್ರಾರ್ಥನೆಗಳಲ್ಲಿ ಮುಖ್ಯ ಆಸಕ್ತಿ ಏನಾಗಿರಬೇಕು? ಯೆಹೋವ ದೇವರ ನಾಮ ಮತ್ತು ರಾಜ್ಯಕ್ಕೆ ಆದ್ಯತೆಯ ಅಗ್ರಸ್ಥಾನವಿರಬೇಕು. ನಮ್ಮ ಪ್ರಾಪಂಚಿಕ ಆವಶ್ಯಕತೆಗಳಿಗಾಗಿ ಕೇಳುವುದು ಯೋಗ್ಯ. ನಮ್ಮ ಪಾಪಗಳ ಕ್ಷಮೆಗಾಗಿ ಮತ್ತು ಶೋಧನೆಗಳಿಂದ ಮತ್ತು ಕೆಡುಕನಾದ ಪಿಶಾಚ ಸೈತಾನನಿಂದ ತಪ್ಪಿಸಲು ಕೇಳುವುದು ಸಹ ಪ್ರಾಮುಖ್ಯ. ಈ ಪ್ರಾರ್ಥನೆಯನ್ನು ನಾವು ಪಠಿಸಬೇಕೆಂದು ಅಥವಾ ಮತ್ತೆ ಮತ್ತೆ ಪುನರಾವೃತ್ತಿಸಬೇಕೆಂದು, ಅದರ ಅರ್ಥದ ಕುರಿತು ಯೋಚಿಸದೆ ಅದನ್ನು ಕಂಠಪಾಠಮಾಡಬೇಕೆಂದು ಯೇಸು ಬಯಸಲಿಲ್ಲ. (ಮತ್ತಾಯ 6:7) ಒಂದು ಮಗು ತನ್ನ ತಂದೆಯೊಡನೆ ಪ್ರತಿ ಸಲವೂ ಮಾತಾಡಿದಾಗ ಒಂದೇ ರೀತಿಯ ಪದಗಳನ್ನು ಉಪಯೋಗಿಸುವಲ್ಲಿ ಅದು ಯಾವ ವಿಧದ ಸಂಬಂಧವಾಗಿರುವುದು?
14. ವಿಜ್ಞಾಪನೆಗಳಲ್ಲದೆ, ಇನ್ನಾವ ಪ್ರಾರ್ಥನೆಗಳನ್ನು ನಾವು ಅರ್ಪಿಸಬೇಕು?
14 ವಿಜ್ಞಾಪನೆ ಮತ್ತು ಹೃತ್ಪೂರ್ವಕವಾದ ಯಾಚನೆಗಳಲ್ಲದೆ, ನಾವು ಸ್ತುತಿ ಮತ್ತು ಉಪಕಾರಸ್ತುತಿಯ ಪ್ರಾರ್ಥನೆಗಳನ್ನೂ ಅರ್ಪಿಸಬೇಕು. (ಕೀರ್ತನೆ 34:1; 92:1; 1 ಥೆಸಲೊನೀಕ 5:18) ನಾವು ಇತರರಿಗಾಗಿಯೂ ಪ್ರಾರ್ಥಿಸಬಲ್ಲೆವು. ಸಂಕಟ ಅಥವಾ ಹಿಂಸೆಯನ್ನು ಪಡೆಯುತ್ತಿರುವ ನಮ್ಮ ಆತ್ಮಿಕ ಸೋದರಸೋದರಿಯರಿಗಾಗಿ ಮಾಡಲ್ಪಡುವ ಪ್ರಾರ್ಥನೆಗಳು, ನಮಗೆ ಅವರಲ್ಲಿರುವ ಆಸಕ್ತಿಯನ್ನು ತೋರಿಸುತ್ತದೆ, ಮತ್ತು ಇಂತಹ ಚಿಂತೆಯನ್ನು ನಾವು ವ್ಯಕ್ತಪಡಿಸುವುದನ್ನು ಕೇಳಲು ಯೆಹೋವನು ಇಷ್ಟಪಡುತ್ತಾನೆ. (ಲೂಕ 22:32; ಯೋಹಾನ 17:20; 1 ಥೆಸಲೊನೀಕ 5:25) ವಾಸ್ತವದಲ್ಲಿ ಅಪೊಸ್ತಲ ಪೌಲನು ಬರೆದುದು: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.”—ಫಿಲಿಪ್ಪಿ 4:6, 7.
ಪ್ರಾರ್ಥನೆಯನ್ನು ಪಟ್ಟುಹಿಡಿದು ಮಾಡಿರಿ
15. ನಮ್ಮ ಪ್ರಾರ್ಥನೆಗಳು ಉತ್ತರಿಸಲ್ಪಡದೆ ಹೋಗುತ್ತವೆಂದು ತೋರುವುದಾದರೆ ನಾವೇನನ್ನು ಜ್ಞಾಪಿಸಿಕೊಳ್ಳಬೇಕು?
15 ನೀವು ದೇವರ ಕುರಿತಾದ ಜ್ಞಾನವನ್ನು ಸಂಪಾದಿಸುತ್ತಿರುವುದಾದರೂ, ನಿಮ್ಮ ಪ್ರಾರ್ಥನೆಗಳು ಕೆಲವು ಬಾರಿ ಉತ್ತರಿಸಲ್ಪಡದೆ ಹೋಗುತ್ತವೆಂದು ನೀವು ಕಂಡುಕೊಳ್ಳಬಹುದು. ಒಂದು ನಿರ್ದಿಷ್ಟ ಪ್ರಾರ್ಥನೆಯ ಉತ್ತರಕ್ಕೆ, ಅದು ದೇವರ ಸಮಯವಾಗಿಲ್ಲದಿರಬಹುದಾದ ಕಾರಣ ಹಾಗಾಗಸಾಧ್ಯವಿದೆ. (ಪ್ರಸಂಗಿ 3:1-9) ಒಂದು ಸ್ಥಿತಿಗತಿಯು ಸ್ವಲ್ಪ ಸಮಯ ಮುಂದುವರಿಯುವಂತೆ ಯೆಹೋವನು ಬಿಡಬಹುದು, ಆದರೂ ಆತನು ಪ್ರಾರ್ಥನೆಗಳಿಗೆ ಉತ್ತರ ಕೊಡುವುದು ನಿಶ್ಚಯ ಮತ್ತು ಅದಕ್ಕಿರುವ ಅತ್ಯುತ್ತಮ ಸಮಯವು ಆತನಿಗೆ ಗೊತ್ತು.—2 ಕೊರಿಂಥ 12:7-9.
16. ನಾವು ಪ್ರಾರ್ಥನೆಯನ್ನು ಏಕೆ ಪಟ್ಟುಹಿಡಿದು ಮಾಡಬೇಕು, ಮತ್ತು ಇದನ್ನು ಮಾಡುವುದು ದೇವರೊಂದಿಗಿನ ನಮ್ಮ ಸಂಬಂಧವನ್ನು ಹೇಗೆ ಬಾಧಿಸಬಲ್ಲದು?
16 ಪ್ರಾರ್ಥನೆಯಲ್ಲಿ ನಮ್ಮ ಪಟ್ಟು ಹಿಡಿಯುವಿಕೆಯು, ನಾವು ದೇವರಿಗೆ ಹೇಳುವ ವಿಷಯದಲ್ಲಿ ನಮ್ಮ ಹೃತ್ಪೂರ್ವಕವಾದ ಆಸಕ್ತಿಯನ್ನು ಪ್ರಕಟಪಡಿಸುತ್ತದೆ. (ಲೂಕ 18:1-8) ದೃಷ್ಟಾಂತಕ್ಕೆ, ಒಂದು ನಿರ್ದಿಷ್ಟ ಬಲಹೀನತೆಯನ್ನು ಜಯಿಸಲು ಸಹಾಯಕ್ಕಾಗಿ ನಾವು ಯೆಹೋವನನ್ನು ಕೇಳಿಕೊಂಡೇವು. ಪ್ರಾರ್ಥನೆಯಲ್ಲಿ ಪಟ್ಟುಹಿಡಿಯುವ ಮೂಲಕ ಮತ್ತು ನಮ್ಮ ಬಿನ್ನಹಗಳಿಗೆ ಹೊಂದಿಕೆಯಾಗಿ ವರ್ತಿಸುವ ಮೂಲಕ, ನಾವು ನಮ್ಮ ಯಥಾರ್ಥತೆಯನ್ನು ತೋರಿಸುತ್ತೇವೆ. ನಾವು ನಮ್ಮ ಬಿನ್ನಹಗಳಲ್ಲಿ ವಿಶಿಷ್ಠರೂ ಪ್ರಾಮಾಣಿಕರೂ ಆಗಿರತಕ್ಕದ್ದು. ಶೋಧನೆಯನ್ನು ಅನುಭವಿಸುವಾಗ ನಾವು ಅತ್ಯಾಸಕ್ತಿಯಿಂದ ಪ್ರಾರ್ಥಿಸುವುದು ವಿಶೇಷವಾಗಿ ಪ್ರಾಮುಖ್ಯ. (ಮತ್ತಾಯ 6:13) ನಮ್ಮ ಪಾಪಪೂರ್ಣ ಪ್ರವೃತ್ತಿಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾ ನಾವು ಪ್ರಾರ್ಥನೆಯಲ್ಲಿ ಮುಂದುವರಿಯುವುದಾದರೆ, ಯೆಹೋವನು ಹೇಗೆ ಸಹಾಯಮಾಡುತ್ತಾನೆಂದು ನಾವು ನೋಡುವೆವು. ಇದು ನಮ್ಮ ನಂಬಿಕೆಯನ್ನು ಕಟ್ಟಿ ಆತನೊಂದಿಗಿನ ನಮ್ಮ ಸಂಬಂಧವನ್ನು ಬಲಪಡಿಸುವುದು.—1 ಕೊರಿಂಥ 10:13; ಫಿಲಿಪ್ಪಿ 4:13.
17. ದೇವರನ್ನು ಸೇವಿಸುವುದರಲ್ಲಿ ಪ್ರಾರ್ಥನಾಪೂರ್ವಕವಾದ ಮನೋಭಾವದಿಂದ ನಾವು ಹೇಗೆ ಪ್ರಯೋಜನ ಹೊಂದುವೆವು?
17 ಯೆಹೋವ ದೇವರಿಗೆ ಪವಿತ್ರ ಸೇವೆಯನ್ನು ಸಲ್ಲಿಸುವುದರಲ್ಲಿ ಒಂದು ಪ್ರಾರ್ಥನಾಪೂರ್ವಕ ಮನೋಭಾವವನ್ನು ಬೆಳೆಸುವ ಮೂಲಕ, ನಾವು ನಮ್ಮ ಸ್ವಂತ ಬಲದಿಂದ ಆತನನ್ನು ಸೇವಿಸುವುದಿಲ್ಲ ಎಂದು ನಾವು ಗ್ರಹಿಸುವಂತಾಗುವುದು. ಸಂಗತಿಗಳನ್ನು ಮಾಡಿ ಮುಗಿಸುವವನು ಯೆಹೋವನೇ. (1 ಕೊರಿಂಥ 4:7) ಇದನ್ನು ಒಪ್ಪುವುದು, ನಾವು ನಮ್ರರಾಗುವಂತೆ ಸಹಾಯಮಾಡಿ ಆತನೊಂದಿಗಿನ ನಮ್ಮ ಸಂಬಂಧವನ್ನು ಸಂಪದ್ಯುಕ್ತ ಮಾಡುವುದು. (1 ಪೇತ್ರ 5:5, 6) ಹೌದು, ಪ್ರಾರ್ಥನೆಯನ್ನು ಪಟ್ಟುಹಿಡಿದು ಮಾಡಲು ನಮಗೆ ಸ್ವಸ್ಥವಾದ ಕಾರಣಗಳಿವೆ. ನಮ್ಮ ಶ್ರದ್ಧಾಪೂರ್ವಕವಾದ ಪ್ರಾರ್ಥನೆಗಳು ಮತ್ತು ನಾವು ನಮ್ಮ ಪ್ರೀತಿಯ ಸ್ವರ್ಗೀಯ ಪಿತನ ಬಳಿಗೆ ಹೇಗೆ ಬರುವುದೆಂಬುದರ ಕುರಿತ ಅಮೂಲ್ಯ ಜ್ಞಾನವು ನಮ್ಮ ಜೀವನವನ್ನು ನಿಜವಾಗಿಯೂ ಸಂತೋಷವುಳ್ಳದ್ದಾಗಿ ಮಾಡುವುದು.
ಯೆಹೋವನೊಂದಿಗಿನ ಸಂವಾದ ಏಕಮುಖದ್ದಲ್ಲ
18. ನಾವು ದೇವರಿಗೆ ಹೇಗೆ ಕಿವಿಗೊಡಬಲ್ಲೆವು?
18 ದೇವರು ನಮ್ಮ ಪ್ರಾರ್ಥನೆಗಳನ್ನು ಕೇಳಬೇಕೆಂದು ನಾವು ಬಯಸುವುದಾದರೆ, ಆತನು ಹೇಳುವ ವಿಷಯಗಳಿಗೆ ನಾವು ಕಿವಿಗೊಡಬೇಕು. (ಜೆಕರ್ಯ 7:13) ಆತನು ದೈವಿಕವಾಗಿ ಪ್ರೇರಿತರಾದ ಪ್ರವಾದಿಗಳ ಮೂಲಕ ಇನ್ನು ಮುಂದೆ ಸಂದೇಶಗಳನ್ನು ಕಳುಹಿಸುವುದಿಲ್ಲ ಮತ್ತು ಆತನು ಪ್ರೇತವ್ಯವಹಾರ ಮಾಧ್ಯಮಗಳನ್ನು ಉಪಯೋಗಿಸುವುದಿಲ್ಲ ನಿಶ್ಚಯ. (ಧರ್ಮೋಪದೇಶಕಾಂಡ 18:10-12) ಆದರೆ ಆತನ ವಾಕ್ಯವಾದ ಬೈಬಲನ್ನು ಅಧ್ಯಯನ ಮಾಡುವುದರ ಮೂಲಕ ನಾವು ದೇವರಿಗೆ ಕಿವಿಗೊಡಬಲ್ಲೆವು. (ರೋಮಾಪುರ 15:4; 2 ತಿಮೊಥೆಯ 3:16, 17) ನಮಗೆ ಉತ್ತಮವಾಗಿರುವ ಶಾರೀರಿಕ ಆಹಾರಕ್ಕೆ ನಾವು ರುಚಿಯನ್ನು ಬೆಳೆಸಿಕೊಳ್ಳುವ ಅಗತ್ಯ ನಮಗಿರುವಂತೆಯೇ, “ಪಾರಮಾರ್ಥಿಕವಾದ ಶುದ್ಧ ಹಾಲನ್ನು ಬಯಸು” ವಂತೆ ನಾವು ಪ್ರೋತ್ಸಾಹಿಸಲ್ಪಡುತ್ತೇವೆ. ದೇವರ ವಾಕ್ಯವನ್ನು ದಿನಾಲೂ ಓದುವ ಮೂಲಕ ಆತ್ಮಿಕ ಆಹಾರಕ್ಕೆ ರುಚಿಯನ್ನು ಬೆಳೆಸಿರಿ.—1 ಪೇತ್ರ 2:2, 3; ಅ. ಕೃತ್ಯಗಳು 17:11.
19. ನೀವು ಬೈಬಲಿನಲ್ಲಿ ಏನನ್ನು ಓದುತ್ತೀರೋ ಅದನ್ನು ಮನನ ಮಾಡುವುದರಲ್ಲಿ ಯಾವ ಪ್ರಯೋಜನವಿದೆ?
19 ನೀವು ಬೈಬಲಿನಲ್ಲಿ ಏನು ಓದುತ್ತೀರೋ ಅದನ್ನು ಮನನಮಾಡಿರಿ. (ಕೀರ್ತನೆ 1:1-3; 77:11, 12) ವಿಷಯವನ್ನು ಪರ್ಯಾಲೋಚಿಸುವುದೆಂದು ಅದರ ಅರ್ಥ. ಇದನ್ನು ನೀವು ಜೀರ್ಣವಾಗುತ್ತಿರುವ ಆಹಾರಕ್ಕೆ ಹೋಲಿಸಬಹುದು. ನೀವು ಓದುತ್ತಿರುವುದನ್ನು ನಿಮಗೆ ಆಗಲೇ ತಿಳಿದಿರುವ ವಿಷಯಗಳಿಗೆ ಸಂಬಂಧಿಸುವ ಮೂಲಕ ನೀವು ಆತ್ಮಿಕ ಆಹಾರವನ್ನು ಜೀರ್ಣಿಸಬಲ್ಲಿರಿ. ಆ ವಿಷಯವು ನಿಮ್ಮ ಜೀವಿತವನ್ನು ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ಪರಿಗಣಿಸಿರಿ, ಅಥವಾ ಯೆಹೋವನ ಗುಣಗಳ ಮತ್ತು ವ್ಯವಹಾರಗಳ ಕುರಿತು ಅದು ಏನನ್ನು ಪ್ರಕಟಪಡಿಸುತ್ತದೋ ಅದರ ಮೇಲೆ ಪ್ರತಿಬಿಂಬಿಸಿರಿ. ಹೀಗೆ, ವೈಯಕ್ತಿಕ ಅಧ್ಯಯನದ ಮೂಲಕ, ಯೆಹೋವನು ಒದಗಿಸುವ ಆತ್ಮಿಕ ಆಹಾರವನ್ನು ನೀವು ಸೇವಿಸಬಲ್ಲಿರಿ. ಅದು ನಿಮ್ಮನ್ನು ದೇವರ ಬಳಿ ಹೆಚ್ಚು ಸಮೀಪಕ್ಕೆ ಎಳೆದು, ನಿಮ್ಮ ದೈನಂದಿನ ಸಮಸ್ಯೆಗಳನ್ನು ನಿಭಾಯಿಸಲು ಸಹಾಯಮಾಡುವುದು.
20. ಕ್ರೈಸ್ತ ಕೂಟಗಳಲ್ಲಿ ಉಪಸ್ಥಿತರಾಗಿರುವುದು ನಾವು ದೇವರ ಸಮೀಪಕ್ಕೆ ಹೋಗುವಂತೆ ಹೇಗೆ ಸಹಾಯ ಮಾಡುತ್ತದೆ?
20 ದೇವರ ಧರ್ಮಶಾಸ್ತ್ರವು ಬಹಿರಂಗವಾಗಿ ಓದಲ್ಪಡುವುದನ್ನು ಕೇಳಲು ನೆರೆದುಬಂದಾಗ ಇಸ್ರಾಯೇಲ್ಯರು ಗಮನಕೊಟ್ಟು ಆಲಿಸಿದಂತೆಯೇ, ಕ್ರೈಸ್ತ ಕೂಟಗಳಲ್ಲಿ ದೇವರ ವಾಕ್ಯವು ಚರ್ಚಿಸಲ್ಪಡುವುದನ್ನು ಆಲಿಸುವ ಮೂಲಕ ನೀವು ಸಹ ಆತನ ಸಮೀಪಕ್ಕೆ ಬರಬಲ್ಲಿರಿ. ಆ ಕಾಲದ ಉಪದೇಶಕರು ಧರ್ಮಶಾಸ್ತ್ರದ ವಾಚನದ ಅರ್ಥ ವಿವರಿಸಿ, ಹೀಗೆ ಕೇಳುಗರು ಅರ್ಥ ಮಾಡಿಕೊಳ್ಳುವಂತೆ ಮತ್ತು ಅವರು ಕೇಳಿದ್ದನ್ನು ಅನ್ವಯಿಸುವಂತೆ ಪ್ರಚೋದಿತರಾಗಲು ಸಹಾಯಮಾಡಿದರು. ಅದು ಮಹಾ ಸಂತೋಷಕ್ಕೆ ನಡೆಸಿತು. (ನೆಹೆಮೀಯ 8:8, 12) ಆದಕಾರಣ, ಯೆಹೋವನ ಸಾಕ್ಷಿಗಳ ಕೂಟಗಳಲ್ಲಿ ಉಪಸ್ಥಿತರಾಗುವುದನ್ನು ನಿಮ್ಮ ರೂಢಿಯಾಗಿ ಮಾಡಿರಿ. (ಇಬ್ರಿಯ 10:24, 25) ಇದು ದೇವರ ಜ್ಞಾನವನ್ನು ನೀವು ಅರ್ಥಮಾಡಿಕೊಂಡು ಅನಂತರ ಅದನ್ನು ನಿಮ್ಮ ಜೀವನದಲ್ಲಿ ಅನ್ವಯಿಸುವಂತೆ ನಿಮಗೆ ಸಹಾಯಮಾಡಿ ನಿಮಗೆ ಸಂತೋಷವನ್ನು ತರುವುದು. ಲೋಕವ್ಯಾಪಕವಾದ ಕ್ರೈಸ್ತ ಸಹೋದರತ್ವದ ಭಾಗವಾಗಿರುವುದು ನೀವು ಯೆಹೋವನಿಗೆ ಸಮೀಪವಾಗಿ ಉಳಿಯಲು ನಿಮಗೆ ಸಹಾಯಮಾಡುವುದು. ಮತ್ತು ನಾವು ನೋಡಲಿರುವಂತೆ, ನೀವು ದೇವಜನರ ಮಧ್ಯೆ ನಿಜ ಭದ್ರತೆಯನ್ನು ಕಂಡುಕೊಳ್ಳಬಲ್ಲಿರಿ.
ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ
ನೀವು ಯೆಹೋವನ ಸಮೀಪಕ್ಕೆ ಏಕೆ ಬರಬೇಕು?
ದೇವರಿಗೆ ಸಮೀಪವಾಗಲಿಕ್ಕಾಗಿ ಕೆಲವು ಆವಶ್ಯಕತೆಗಳಾವುವು?
ನಿಮ್ಮ ಪ್ರಾರ್ಥನೆಗಳಲ್ಲಿ ನೀವು ಏನನ್ನು ಸೇರಿಸಬಲ್ಲಿರಿ?
ನೀವು ಪ್ರಾರ್ಥನೆಯಲ್ಲಿ ಏಕೆ ಪಟ್ಟುಹಿಡಿಯಬೇಕು?
ನೀವು ಇಂದು ಯೆಹೋವನಿಗೆ ಹೇಗೆ ಕಿವಿಗೊಡಬಲ್ಲಿರಿ?
[ಅಧ್ಯಯನ ಪ್ರಶ್ನೆಗಳು]
[ಪುಟ 157ರಲ್ಲಿ ಇಡೀ ಪುಟದ ಚಿತ್ರ]