ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ವೃದ್ಧರಾಗುವುದೂ ಸಾಯುವುದೂ ಏಕೆ?

ನಾವು ವೃದ್ಧರಾಗುವುದೂ ಸಾಯುವುದೂ ಏಕೆ?

ಅಧ್ಯಾಯ 6

ನಾವು ವೃದ್ಧರಾಗುವುದೂ ಸಾಯುವುದೂ ಏಕೆ?

1. ಮಾನವ ಜೀವದ ಕುರಿತು ಏನನ್ನು ವಿವರಿಸಲು ವಿಜ್ಞಾನಿಗಳು ಅಶಕ್ತರಾಗಿದ್ದಾರೆ?

 ಮಾನವರು ವೃದ್ಧರಾಗುವುದೂ ಸಾಯುವುದೂ ಏಕೆಂಬುದು ವಿಜ್ಞಾನಿಗಳಿಗೆ ತಿಳಿಯದು. ನಮ್ಮ ಜೀವಕಣಗಳು ನವೀಕರಿಸಲ್ಪಡುತ್ತಾ ಹೋಗಬೇಕು ಮತ್ತು ನಾವು ಸರ್ವದಾ ಜೀವಿಸಬೇಕು ಎಂಬಂತೆ ಕಾಣುತ್ತದೆ. ಹ್ಯೋಜೂನ್‌ ಸೋಷೀಕೀಗಾಕೂ (ಅಂಗಾಂಶ ಶಾಸ್ತ್ರ ಪ್ರಮಾಣ) ಎಂಬ ಪುಸ್ತಕವು ಹೇಳುವುದು: “ಜೀವಕಣಗಳಿಗೆ ವಯಸ್ಸಾಗುವಿಕೆಯು ಒಬ್ಬ ವ್ಯಕ್ತಿಯ ವಯಸ್ಸಾಗುವಿಕೆಗೆ ಮತ್ತು ಮರಣಕ್ಕೆ ಹೇಗೆ ಸಂಬಂಧಪಡುತ್ತದೆಂಬುದು ಒಂದು ಮಹಾ ರಹಸ್ಯವಾಗಿದೆ.” ಅನೇಕ ವಿಜ್ಞಾನಿಗಳು, ಜೀವಮಾನಕ್ಕೆ ಒಂದು “ಸ್ವಾಭಾವಿಕವಾದ ಅಂತರ್ಗತ” ಮಿತಿಯಿದೆಯೆಂದು ನಂಬುತ್ತಾರೆ. ಅವರು ಸರಿಯೆಂದು ನೀವು ಭಾವಿಸುತ್ತೀರೊ?

2. ಜೀವದ ಕ್ಷಿಪ್ರ ಗತಿಯ ಕಾರಣ ಕೆಲವರು ಏನು ಮಾಡಿದ್ದಾರೆ?

2 ಮಾನವರು ಯಾವಾಗಲೂ ದೀರ್ಘಾಯುಸ್ಸಿಗಾಗಿ ಹಾತೊರೆದು ಅಮರತ್ವವನ್ನು ಪಡೆಯಲು ಸಹ ಪ್ರಯತ್ನಿಸಿದ್ದಾರೆ. ಸಾ.ಶ.ಪೂ. ನಾಲ್ಕನೆಯ ಶತಮಾನದಿಂದ, ಅಮರತ್ವವನ್ನು ಸಾಧ್ಯಮಾಡಲಿಕ್ಕಾಗಿ ರಚಿಸಲ್ಪಟ್ಟಿವೆಯೆಂದು ಊಹಿತವಾದ ಔಷಧಗಳು ಚೀನಾ ದೇಶದ ಕುಲೀನರ ಗಮನವನ್ನು ಆಕರ್ಷಿಸಿದವು. ಅನಂತರದ ಕೆಲವು ಚೀನೀ ಸಮ್ರಾಜರು ಪಾದರಸದಿಂದ ಮಾಡಲ್ಪಟ್ಟ—ಜೀವ ಸಂಜೀವಿನಿಗಳೆಂದು ಕರೆಯಲ್ಪಟ್ಟ ಇವುಗಳನ್ನು ಸೇವಿಸಿದರು ಮತ್ತು ಸತ್ತರು! ಭೂಗೋಳಾದ್ಯಂತ, ಮರಣವು ತಮ್ಮ ಅಸ್ತಿತ್ವದ ಅಂತ್ಯವಲ್ಲವೆಂದು ಜನರು ನಂಬುತ್ತಾರೆ. ಬೌದ್ಧರಿಗೆ, ಹಿಂದುಗಳಿಗೆ, ಮುಸ್ಲಿಮರಿಗೆ ಮತ್ತು ಇತರರೆಲ್ಲರಿಗೆ ಮರಣಾನಂತರದ ಜೀವನದ ಉಜ್ವಲ ನಿರೀಕ್ಷೆಗಳಿವೆ. ಕ್ರೈಸ್ತ ಪ್ರಪಂಚದಲ್ಲಿ, ಅನೇಕರು ಸ್ವರ್ಗಸುಖದ ಮರಣೋತ್ತರ ಜೀವನವನ್ನು ದೃಷ್ಟಿಸುತ್ತಾರೆ.

3. (ಎ) ಮಾನವರು ನಿತ್ಯಜೀವವನ್ನು ಹಾರೈಸುವುದೇಕೆ? (ಬಿ) ಮರಣದ ಕುರಿತು ಯಾವ ಪ್ರಶ್ನೆಗಳನ್ನು ಉತ್ತರಿಸುವ ಅವಶ್ಯವಿದೆ?

3 ಮರಣಾನಂತರದ ಸುಖದ ಭಾವನೆಗಳು ನಿತ್ಯಜೀವಕ್ಕಾಗಿ ಹಾತೊರೆಯುವಿಕೆಯನ್ನು ಪ್ರತಿಬಿಂಬಿಸುತ್ತವೆ. “ಇದಲ್ಲದೆ ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ,” ಎಂದು ದೇವರು ನಮ್ಮಲ್ಲಿ ನೆಟ್ಟಿರುವ ಶಾಶ್ವತತೆಯ ವಿಚಾರದ ಕುರಿತು ಬೈಬಲು ಹೇಳುತ್ತದೆ. (ಪ್ರಸಂಗಿ 3:11) ಆತನು ಪ್ರಥಮ ಮಾನವರನ್ನು ಭೂಮಿಯ ಮೇಲೆ ಅವರು ನಿತ್ಯ ಜೀವಿಸಸಾಧ್ಯವಿರುವ ಪ್ರತೀಕ್ಷೆಯೊಂದಿಗೆ ಸೃಷ್ಟಿಸಿದನು. (ಆದಿಕಾಂಡ 2:16, 17) ಹಾಗಾದರೆ, ಮಾನವರು ಸಾಯುವುದೇಕೆ? ಮರಣವು ಜಗತ್ತಿನೊಳಗೆ ಹೇಗೆ ಬಂದು ಸೇರಿತು? ದೇವರ ಜ್ಞಾನವು ಈ ಪ್ರಶ್ನೆಗಳ ಮೇಲೆ ಬೆಳಕನ್ನು ಬೀರುತ್ತದೆ.—ಕೀರ್ತನೆ 119:105.

ಕುಟಿಲವಾದೊಂದು ಒಳಸಂಚು

4. ಮಾನವ ಮರಣಕ್ಕೆ ಜವಾಬ್ದಾರನಾದ ಪಾತಕಿಯನ್ನು ಯೇಸುವು ಹೇಗೆ ಗುರುತಿಸಿದನು?

4 ಒಬ್ಬ ಪಾತಕಿಯು ತನ್ನ ಜಾಡನ್ನು ಬಚ್ಚಿಡಲು ಪ್ರಯತ್ನಿಸುತ್ತಾನೆ. ಕೋಟ್ಯಂತರ ಜನರ ಮರಣಗಳನ್ನು ಫಲಿಸಿರುವ ಒಂದು ಪಾತಕಕ್ಕೆ ಜವಾಬ್ದಾರನಾಗಿರುವ ಒಬ್ಬನ ವಿಷಯದಲ್ಲಿಯೂ ಇದು ನಿಜ. ಮಾನವ ಮರಣವನ್ನು ಒಂದು ರಹಸ್ಯದಲ್ಲಿ ಮುಚ್ಚಿಡಲಿಕ್ಕಾಗಿ ಅವನು ಹಂಚಿಕೆ ಹೂಡಿದ್ದಾನೆ. ತನ್ನನ್ನು ಕೊಲ್ಲಲು ಹುಡುಕುತ್ತಿದ್ದವರಿಗೆ ಹೀಗೆ ಹೇಳಿದಾಗ ಯೇಸು ಕ್ರಿಸ್ತನು ಈ ಪಾತಕಿಯನ್ನು ಗುರುತಿಸಿದನು: “ಸೈತಾನನು ನಿಮ್ಮ ತಂದೆ; ನೀವು ಆ ತಂದೆಯಿಂದ ಹುಟ್ಟಿದವರಾಗಿದ್ದು ನಿಮ್ಮ ತಂದೆಯ ದುರಿಚ್ಛೆಗಳನ್ನೇ ನಡಿಸಬೇಕೆಂದಿದ್ದೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನಿಲ್ಲಲಿಲ್ಲ; ಅವನಲ್ಲಿ ಸತ್ಯವು ಇಲ್ಲವೇ ಇಲ್ಲ.”—ಯೋಹಾನ 8:31, 40, 44.

5. (ಎ) ಪಿಶಾಚನಾದ ಸೈತಾನನಾಗಿ ಪರಿಣಮಿಸಿದವನ ಮೂಲ ಯಾವುದಾಗಿತ್ತು? (ಬಿ) “ಸೈತಾನ” ಮತ್ತು “ಪಿಶಾಚ” ಎಂಬ ಪದಗಳ ಅರ್ಥವೇನು?

5 ಹೌದು, ಪಿಶಾಚನು ಹಗೆ ಸಾಧಿಸುವ ಒಬ್ಬ “ಕೊಲೆಗಾರನು.” ಅವನೊಬ್ಬ ನಿಜ ವ್ಯಕ್ತಿ, ಯಾವನೋ ಒಬ್ಬನ ಹೃದಯದಲ್ಲಿರುವ ಕೇವಲ ಕೆಡುಕಲ್ಲವೆಂದು ಬೈಬಲು ತಿಳಿಯಪಡಿಸುತ್ತದೆ. (ಮತ್ತಾಯ 4:1-11) ಒಬ್ಬ ನೀತಿವಂತ ದೇವದೂತನಾಗಿ ಸೃಷ್ಟಿಸಲ್ಪಟ್ಟಿದ್ದರೂ, ಅವನು “ಸತ್ಯದಲ್ಲಿ ನಿಲ್ಲಲಿಲ್ಲ.” ಅವನಿಗೆ ಪಿಶಾಚನಾದ ಸೈತಾನನೆಂದು ನಾಮಕರಣವಾಗಿರುವುದು ಅದೆಷ್ಟು ಸಮಂಜಸ! (ಪ್ರಕಟನೆ 12:9) ಅವನು “ಸೈತಾನ,” ಅಥವಾ “ಪ್ರತಿಭಟಕ” ಎಂದು ಕರೆಯಲ್ಪಡುವುದು ಅವನು ಯೆಹೋವನನ್ನು ವಿರೋಧಿಸಿ, ಪ್ರತಿಭಟಿಸಿದುದರಿಂದಲೇ. ಈ ಪಾತಕಿಯು “ಪಿಶಾಚ,” ಎಂದರೆ “ಮಿಥ್ಯಾಪವಾದಿ” ಎಂದೂ ಕರೆಯಲ್ಪಡುತ್ತಾನೆ, ಏಕೆಂದರೆ ಅವನು ದೇವರನ್ನು ದೂಷಣಾತ್ಮಕವಾಗಿ ತಪ್ಪಾಗಿ ಪ್ರತಿನಿಧೀಕರಿಸಿದ್ದಾನೆ.

6. ಸೈತಾನನು ದೇವರ ವಿರುದ್ಧ ದಂಗೆಯೆದ್ದದ್ದೇಕೆ?

6 ದೇವರ ವಿರುದ್ಧ ದಂಗೆಯೇಳುವಂತೆ ಸೈತಾನನನ್ನು ಯಾವುದು ಪ್ರಚೋದಿಸಿತು? ಲೋಭವೇ. ಯೆಹೋವನು ಮಾನವರಿಂದ ಪಡೆಯುತ್ತಿದ್ದ ಆರಾಧನೆಯನ್ನು ಅವನು ದುರಾಶೆಯಿಂದ ಆಶಿಸಿದನು. ಯಾವುದು ಯೋಗ್ಯವಾಗಿಯೇ ಸೃಷ್ಟಿಕರ್ತನಿಗೆ ಮಾತ್ರ ಸೇರಿದ್ದಾಗಿತ್ತೋ, ಅಂತಹ ಆರಾಧನೆಯನ್ನು ಪಡೆಯುವ ಬಯಕೆಯನ್ನು ಪಿಶಾಚನು ತಳ್ಳಿಹಾಕಲಿಲ್ಲ. (ಹೋಲಿಸಿ ಯೆಹೆಜ್ಕೇಲ 28:12-19.) ಬದಲಾಗಿ, ಸೈತಾನನಾಗಿ ಪರಿಣಮಿಸಿದ ಈ ದೇವದೂತನು ಈ ದುರಾಶೆಯನ್ನು, ಅದು ಫಲವತ್ತಾಗಿ ಪಾಪವನ್ನು ಹೆರುವ ತನಕ ಪೋಷಿಸಿದನು.ಯಾಕೋಬ 1:14, 15.

7. (ಎ) ಮಾನವ ಮರಣವನ್ನು ಯಾವುದು ಉಂಟುಮಾಡುತ್ತದೆ? (ಬಿ) ಪಾಪವೆಂದರೇನು?

7 ಯಾರ ದೋಷಾತ್ಮಕ ವರ್ತನೆಯು ಮಾನವರ ಮರಣಕ್ಕೆ ನಡೆಸಿತೋ, ಆ ಅಪರಾಧಿಯನ್ನು ನಾವು ಗುರುತಿಸಿದೆವು. ಆದರೆ ಮಾನವ ಮರಣಕ್ಕೆ ನಿರ್ದಿಷ್ಟವಾದ ಕಾರಣವೇನು? “ಮರಣದ ಕೊಂಡಿ ಪಾಪವೇ,” ಎನ್ನುತ್ತದೆ ಬೈಬಲು. (1 ಕೊರಿಂಥ 15:56) ಮತ್ತು ಪಾಪವೆಂದರೇನು? ಈ ಪದದ ಅರ್ಥ ಗ್ರಹಿಸಲು, ಬೈಬಲಿನ ಮೂಲಭಾಷೆಗಳಲ್ಲಿ ಅದಕ್ಕಿದ್ದ ಅರ್ಥವನ್ನು ಪರಿಗಣಿಸೋಣ. “ಪಾಪಮಾಡು” ಎಂದು ಸಾಮಾನ್ಯವಾಗಿ ಭಾಷಾಂತರವಾಗಿರುವ ಹೀಬ್ರು ಮತ್ತು ಗ್ರೀಕ್‌ ಕ್ರಿಯಾಪದಗಳು, ಗುರಿಯನ್ನು ತಪ್ಪುವ ಅಥವಾ ಧ್ಯೇಯವನ್ನು ಮುಟ್ಟದಿರುವ ಅರ್ಥದಲ್ಲಿ “ತಪ್ಪುವುದು” ಎಂಬ ಅರ್ಥವನ್ನು ಕೊಡುತ್ತವೆ. ನಾವೆಲ್ಲರೂ ಯಾವ ಗುರಿಯನ್ನು ತಪ್ಪುತ್ತೇವೆ? ದೇವರಿಗೆ ಪರಿಪೂರ್ಣ ವಿಧೇಯತೆಯ ಗುರಿಯನ್ನೇ. ಆದರೆ, ಪಾಪವು ಜಗತ್ತಿನೊಳಗೆ ಹೇಗೆ ಸೇರಿತು?

ಒಳಸಂಚು ನಿರ್ವಹಿಸಲ್ಪಟ್ಟ ವಿಧ

8. ಮಾನವರ ಆರಾಧನೆಯನ್ನು ಪಡೆಯಲು ಸೈತಾನನು ಹೇಗೆ ಪ್ರಯತ್ನಿಸಿದನು?

8 ಸೈತಾನನು ಜಾಗರೂಕತೆಯಿಂದ, ಎಲ್ಲ ಜನರನ್ನು ತಾನು ಆಳುವುದಕ್ಕೆ ಮತ್ತು ಅವರ ಆರಾಧನೆಯನ್ನು ಪಡೆಯುವುದಕ್ಕೆ ನಡೆಸುವುದೆಂದು ಯೋಚಿಸಿದ ಒಂದು ಒಳಸಂಚನ್ನು ಮಾಡಿದನು. ಪ್ರಥಮ ಮಾನವ ದಂಪತಿಗಳಾದ ಆದಾಮ ಮತ್ತು ಹವ್ವ, ದೇವರಿಗೆ ವಿರೋಧವಾಗಿ ಪಾಪಮಾಡುವಂತೆ ಪ್ರೇರಿಸಲು ಅವನು ನಿರ್ಣಯಿಸಿದನು. ಯೆಹೋವನು ನಮ್ಮ ಪ್ರಥಮ ಪಿತೃಗಳಿಗೆ ನಿತ್ಯಜೀವಕ್ಕೆ ನಡೆಸಬಹುದಾಗಿದ್ದ ಜ್ಞಾನವನ್ನು ಕೊಟ್ಟಿದ್ದನು. ಅವರ ಸೃಷ್ಟಿಕರ್ತನು ಅವರನ್ನು ಸುಂದರವಾದ ಏದೆನ್‌ ತೋಟದಲ್ಲಿ ಇಟ್ಟಿದ್ದ ಕಾರಣ ಆತನು ಒಳ್ಳೆಯವನೆಂದು ಅವರಿಗೆ ಗೊತ್ತಿತ್ತು. ದೇವರು ಆದಾಮನಿಗೆ ಸುಂದರಿಯೂ ಸಹಾಯಕಾರಿಯೂ ಆಗಿದ್ದ ಒಬ್ಬ ಪತ್ನಿಯನ್ನು ಕೊಟ್ಟಾಗ, ಅವನು ತನ್ನ ಸ್ವರ್ಗೀಯ ಪಿತನ ಒಳ್ಳೆಯತನವನ್ನು ವಿಶೇಷವಾಗಿ ಅನುಭವಿಸಿದನು. (ಆದಿಕಾಂಡ 1:26, 29; 2:7-9, 18-23) ಪ್ರಥಮ ಮಾನವಜೊತೆಯ ಮುಂದುವರಿಯುವ ಜೀವಿತವು ದೇವರಿಗೆ ವಿಧೇಯತೆಯ ಮೇಲೆ ಹೊಂದಿಕೊಂಡಿತ್ತು.

9. ಪ್ರಥಮ ಮಾನವನಿಗೆ ದೇವರು ಯಾವ ಆಜ್ಞೆಯನ್ನು ಕೊಟ್ಟನು, ಮತ್ತು ಅದು ಏಕೆ ನ್ಯಾಯಸಮ್ಮತವಾಗಿತ್ತು?

9 ದೇವರು ಆದಾಮನಿಗೆ ಆಜ್ಞಾಪಿಸಿದ್ದು: “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು; ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ [“ಖಂಡಿತವಾಗಿ,” NW] ಸತ್ತೇ ಹೋಗುವಿ.” (ಆದಿಕಾಂಡ 2:16, 17) ಸೃಷ್ಟಿಕರ್ತನೋಪಾದಿ, ಯೆಹೋವ ದೇವರಿಗೆ ನೈತಿಕ ಮಟ್ಟಗಳನ್ನಿಡುವ ಮತ್ತು ತನ್ನ ಸೃಷ್ಟಿಜೀವಿಗಳಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ನಿರೂಪಿಸುವ ಹಕ್ಕಿತ್ತು. ಆತನ ಆಜ್ಞೆ ಸಮಂಜಸವಾಗಿತ್ತು, ಏಕೆಂದರೆ ಆದಾಮ, ಹವ್ವರಿಗೆ ತೋಟದ ಇತರ ಎಲ್ಲ ಮರಗಳ ಹಣ್ಣನ್ನು ತಿನ್ನುವ ಸ್ವಾತಂತ್ರ್ಯವಿತ್ತು. ಈ ನಿಯಮಕ್ಕೆ ವಿಧೇಯರಾಗುವ ಮೂಲಕ ಅವರು, ಅಹಂಕಾರದಿಂದ ತಮ್ಮ ಸ್ವಂತ ನೈತಿಕ ಮಟ್ಟಗಳನ್ನು ಇಟ್ಟುಕೊಳ್ಳುವ ಬದಲಾಗಿ, ಯೆಹೋವನ ನ್ಯಾಯವಾದ ಹಕ್ಕಿನ ಆಳಿಕೆಗೆ ಗಣ್ಯತೆ ತೋರಿಸಸಾಧ್ಯವಿತ್ತು.

10. (ಎ) ಸೈತಾನನು ಮಾನವರನ್ನು ತನ್ನ ಪಕ್ಷಕ್ಕೆಳೆಯಲು ಅವರನ್ನು ಹೇಗೆ ಸಮೀಪಿಸಿದನು? (ಬಿ) ಸೈತಾನನು ಯೆಹೋವನಿಗೆ ಯಾವ ದುರುದ್ದೇಶಗಳನ್ನು ಆರೋಪಿಸಿದನು? (ಸಿ) ದೇವರ ಮೇಲೆ ಸೈತಾನನ ಆಕ್ರಮಣದ ಕುರಿತು ನೀವು ಏನು ಯೋಚಿಸುತ್ತೀರಿ?

10 ಪಿಶಾಚನು ಪ್ರಥಮ ಮಾನವರನ್ನು ದೇವರಿಂದ ತಿರುಗಿಸಲು ಹೂಟ ಹೂಡಿದನು. ತನ್ನ ಪಕ್ಷ ವಹಿಸುವಂತೆ ಸೆಳೆಯಲು, ಸೈತಾನನು ಸುಳ್ಳು ಹೇಳಿದನು. ಸುಮಾರಾಗಿ ಒಬ್ಬ ಧ್ವನ್ಯಂತರಾನುಕಾರನು ಒಂದು ಕೈಗೊಂಬೆಯನ್ನು ಉಪಯೋಗಿಸುವಂತೆಯೇ, ಒಂದು ಸರ್ಪವನ್ನು ಉಪಯೋಗಿಸಿ, ಪಿಶಾಚನು ಹವ್ವಳನ್ನು ಕೇಳಿದ್ದು: “ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ.” ಹವ್ವ ದೇವರ ಆಜ್ಞೆಯನ್ನು ಉದಾಹರಿಸಿದಾಗ ಸೈತಾನನು ತಿಳಿಯಪಡಿಸಿದ್ದು: “ನೀವು ಹೇಗೂ ಸಾಯುವದಿಲ್ಲ.” ಬಳಿಕ ಅವನು ಹೀಗೆ ಹೇಳುವ ಮೂಲಕ ಯೆಹೋವನ ಮೇಲೆ ದುರುದ್ದೇಶಗಳನ್ನು ಆರೋಪಿಸಿದನು: “ನೀವು ಇದರ ಹಣ್ಣನ್ನು ತಿಂದಾಗಲೇ [“ತಿಂದ ದಿನವೇ,” NW] ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ; ಇದು ದೇವರಿಗೆ ಚೆನ್ನಾಗಿ ಗೊತ್ತುಂಟು.” (ಆದಿಕಾಂಡ 3:1-5) ಹೀಗೆ, ಒಳ್ಳೆಯದಾದ ಯಾವುದನ್ನೋ ದೇವರು ಹಿಡಿದಿಟ್ಟಿದ್ದಾನೆ ಎಂದು ಪಿಶಾಚನು ಸೂಚಿಸಿದನು. ಸತ್ಯವಂತನೂ ಪ್ರೀತಿಸುವ ಸ್ವರ್ಗೀಯ ಪಿತನೂ ಆದ ಯೆಹೋವನ ಮೇಲೆ ಎಂತಹ ಮಿಥ್ಯಾಪವಾದದ ಆಕ್ರಮಣವಿದು!

11. ಆದಾಮ ಮತ್ತು ಹವ್ವರು ಹೇಗೆ ಸೈತಾನನ ಸಹಾಪರಾಧಿಗಳಾದರು?

11 ಹವ್ವಳು ಪುನಃ ಮರವನ್ನು ನೋಡಿದಾಗ, ಅದರ ಹಣ್ಣು ಈಗ ವಿಶೇಷವಾಗಿ ಅಪೇಕ್ಷಣೀಯವಾಗಿ ತೋರಿತು. ಆದಕಾರಣ ಅವಳು ಆ ಹಣ್ಣನ್ನು ತೆಗೆದುಕೊಂಡು ತಿಂದಳು. ತರುವಾಯ, ಅವಳ ಗಂಡನು ದೇವರಿಗೆ ಅವಿಧೇಯತೆಯನ್ನು ತೋರಿಸಿದ ಈ ಪಾಪಪೂರ್ಣ ಕ್ರಿಯೆಯಲ್ಲಿ ಇಚ್ಛಾಪೂರ್ವಕವಾಗಿ ಅವಳೊಂದಿಗೆ ಜೊತೆಗೂಡಿದನು. (ಆದಿಕಾಂಡ 3:6) ಹವ್ವಳು ವಂಚಿಸಲ್ಪಟ್ಟರೂ, ಅವಳು ಮತ್ತು ಆದಾಮನು ಇಬ್ಬರೂ, ಮಾನವ ಕುಲವನ್ನು ಆಳುವ ಸೈತಾನನ ಹೂಟವನ್ನು ಬೆಂಬಲಿಸಿದರು. ಕಾರ್ಯತಃ, ಅವರು ಅವನ ಸಹಾಪರಾಧಿಗಳಾದರು.—ರೋಮಾಪುರ 6:16; 1 ತಿಮೊಥೆಯ 2:14.

12. ದೇವರ ವಿರುದ್ಧ ನಡೆದ ಮಾನವ ದಂಗೆಯ ಪರಿಣಾಮವೇನಾಯಿತು?

12 ಆದಾಮ, ಹವ್ವರು ತಮ್ಮ ಕ್ರಿಯೆಗಳ ಪರಿಣಾಮಗಳನ್ನು ಎದುರಿಸಲೇ ಬೇಕಾಗಿತ್ತು. ಅವರು ವಿಶೇಷವಾದ ಜ್ಞಾನವಿದ್ದವರಾಗಿ ದೇವರಂತಾಗಲಿಲ್ಲ. ಬದಲಾಗಿ, ಅವರು ನಾಚಿಕೆಪಟ್ಟು ಅಡಗಿಕೊಂಡರು. ಯೆಹೋವನು ಆದಾಮನನ್ನು ವಿಚಾರಣೆಗೆ ಗುರಿಪಡಿಸಿ ಈ ತೀರ್ಪನ್ನು ವಿಧಿಸಿದನು: “ನೀನು ತಿರಿಗಿ ಮಣ್ಣಿಗೆ ಸೇರುವ ತನಕ ಬೆವರಿಡುತ್ತಾ ಬೇಕಾದ ಆಹಾರವನ್ನು ಸಂಪಾದಿಸಬೇಕು. ನೀನು ಮಣ್ಣಿನಿಂದ ತೆಗೆಯಲ್ಪಟ್ಟವನಲ್ಲವೋ; ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ.” (ಆದಿಕಾಂಡ 3:19) ನಮ್ಮ ಪ್ರಥಮ ಪಿತೃಗಳು ಆ ಒಳ್ಳೆಯದರ ಮತ್ತು ಕೆಟ್ಟದ್ದರ ಜ್ಞಾನದ ಮರದಿಂದ ತಿಂದ “ದಿನವೇ” ಅವರು ದೇವರಿಂದ ತೀರ್ಪನ್ನು ಹೊಂದಿ, ಆತನ ದೃಷ್ಟಿಕೋನದಲ್ಲಿ ಸತ್ತರು. ಬಳಿಕ ಅವರನ್ನು ಪ್ರಮೋದವನದಿಂದ ಹೊರಹಾಕಲಾಯಿತು ಮತ್ತು ಶಾರೀರಿಕ ಮರಣಕ್ಕೆ ತಮ್ಮ ಅವರೋಹಣವನ್ನು ಪ್ರಾರಂಭಿಸಿದರು.

ಪಾಪ ಮತ್ತು ಮರಣ ಹಬ್ಬಿದ ವಿಧ

13. ಪಾಪವು ಸಕಲ ಮಾನವ ಕುಲಕ್ಕೆ ಹೇಗೆ ಹಬ್ಬಿತು?

13 ಸೈತಾನನು ಮಾನವ ಪೂಜ್ಯಭಾವವನ್ನು ಪಡೆಯುವ ತನ್ನ ಹಂಚಿಕೆಯಲ್ಲಿ ಯಶಸ್ವಿಗೊಂಡಿದ್ದನೆಂಬುದು ವ್ಯಕ್ತ. ಆದರೂ, ಅವನು ತನ್ನ ಆರಾಧಕರನ್ನು ಸಜೀವವಾಗಿ ಇಡಶಕ್ತನಾಗಲಿಲ್ಲ. ಪ್ರಥಮ ಮಾನವ ಜೊತೆಯಲ್ಲಿ ಪಾಪವು ಕಾರ್ಯನಡೆಸತೊಡಗಿದಾಗ, ಅವರು ಇನ್ನು ಮುಂದೆ ಪರಿಪೂರ್ಣತೆಯನ್ನು ತಮ್ಮ ಸಂತತಿಗೆ ದಾಟಿಸಶಕ್ತರಾಗಲಿಲ್ಲ. ಶಿಲೆಯಲ್ಲಿ ಕೆತ್ತಿದ ಲೇಖದಂತೆ, ಪಾಪವು ನಮ್ಮ ಪ್ರಥಮ ಪಿತೃಗಳ ವಂಶವಾಹಿಗಳ ಮೇಲೆ ಆಳವಾಗಿ ಕೆತ್ತಲ್ಪಟ್ಟಿತು. ಹೀಗೆ, ಅವರು ಅಪರಿಪೂರ್ಣರಾದ ವಂಶಜರನ್ನು ಮಾತ್ರ ಹುಟ್ಟಿಸಶಕ್ತರಾಗಿದ್ದರು. ಆದಾಮ, ಹವ್ವರು ಪಾಪಮಾಡಿದ ಮೇಲೆಯೇ ಅವರ ಮಕ್ಕಳೆಲ್ಲರ ಗರ್ಭತಾಳಿದ್ದರಿಂದ, ಅವರ ವಂಶಜರು ಪಾಪ ಮತ್ತು ಮರಣವನ್ನು ಬಾಧ್ಯತೆಯಾಗಿ ಪಡೆದರು.—ಕೀರ್ತನೆ 51:5; ರೋಮಾಪುರ 5:12.

14. (ಎ) ತಮ್ಮ ಪಾಪವನ್ನು ಅಲ್ಲಗಳೆಯುವವರನ್ನು ನಾವು ಯಾರಿಗೆ ಹೋಲಿಸಬಹುದು? (ಬಿ) ಇಸ್ರಾಯೇಲ್ಯರಿಗೆ ಅವರ ಪಾಪಪೂರ್ಣತೆಯ ಅರಿವನ್ನು ಹೇಗೆ ಕೊಡಲಾಯಿತು?

14 ಆದರೆ ಇಂದು ಅನೇಕರು ತಾವು ಪಾಪಿಗಳೆಂದು ನಂಬುವುದಿಲ್ಲ. ಲೋಕದ ಕೆಲವು ಭಾಗಗಳಲ್ಲಿ ಬಾಧ್ಯತೆಯಾಗಿ ಬಂದಿರುವ ಪಾಪದ ಭಾವನೆಯು ಸಾಮಾನ್ಯವಾಗಿ ಅಜ್ಞಾತ. ಆದರೆ ಪಾಪ ಅಸ್ತಿತ್ವದಲ್ಲಿಲ್ಲ ಎಂಬುದಕ್ಕೆ ಅದು ರುಜುವಾತಲ್ಲ. ಕೊಳಕು ಮುಖವಿರುವ ಹುಡುಗನೊಬ್ಬನು ತಾನು ನಿರ್ಮಲನು ಎಂದು ವಾದಿಸಬಹುದು, ಮತ್ತು ತಾನು ಹಾಗಿಲ್ಲವೆಂದು ಒಂದು ಕನ್ನಡಿಯಲ್ಲಿ ನೋಡಿದ ಮೇಲೆಯೇ ಅವನಿಗೆ ಮನವರಿಕೆಯಾಗಬಹುದು. ದೇವರ ಪ್ರವಾದಿಯಾದ ಮೋಶೆಯ ಮೂಲಕ ದೇವರ ಧರ್ಮಶಾಸ್ತ್ರವನ್ನು ಪಡೆದಾಗ ಪೂರ್ವಕಾಲದ ಇಸ್ರಾಯೇಲ್ಯರು ಅಂತಹ ಒಬ್ಬ ಹುಡುಗನಂತಿದ್ದರು. ಪಾಪವು ಅಸ್ತಿತ್ವದಲ್ಲಿತ್ತೆಂದು ಧರ್ಮಶಾಸ್ತ್ರವು ಸ್ಪಷ್ಟಗೊಳಿಸಿತು. “ಧರ್ಮಶಾಸ್ತ್ರದಿಂದಲೇ ಹೊರತು ಪಾಪವೆಂಬದು ಏನೋ ನನಗೆ ಗೊತ್ತಾಗುತ್ತಿರಲಿಲ್ಲ,” ಎಂದು ಅಪೊಸ್ತಲ ಪೌಲನು ವಿವರಿಸುತ್ತಾನೆ. (ರೋಮಾಪುರ 7:7-12) ಕನ್ನಡಿಯಲ್ಲಿ ನೋಡುವ ಆ ಹುಡುಗನಂತೆ, ತಮ್ಮನ್ನು ನೋಡಲು ಧರ್ಮಶಾಸ್ತ್ರವನ್ನು ಉಪಯೋಗಿಸಿದ ಮೂಲಕ, ತಾವು ಯೆಹೋವನ ದೃಷ್ಟಿಯಲ್ಲಿ ಅಶುದ್ಧರಾಗಿದ್ದೇವೆಂದು ಇಸ್ರಾಯೇಲ್ಯರು ಕಾಣಶಕ್ತರಾಗಿದ್ದರು.

15. ದೇವರ ವಾಕ್ಯದ ಕನ್ನಡಿಯೊಳಕ್ಕೆ ನೋಡುವುದರಿಂದ ಏನು ಪ್ರಕಟಿಸಲ್ಪಡುತ್ತದೆ?

15 ದೇವರ ವಾಕ್ಯವೆಂಬ ಕನ್ನಡಿಯೊಳಗೆ ನೋಡಿ ಅದರ ಮಟ್ಟಗಳನ್ನು ಗಮನಿಸುವ ಮೂಲಕ, ನಾವು ಅಪರಿಪೂರ್ಣರೆಂದು ನಾವು ನೋಡಬಲ್ಲೆವು. (ಯಾಕೋಬ 1:23-25) ದೃಷ್ಟಾಂತಕ್ಕೆ, ಮತ್ತಾಯ 22:37-40 ರಲ್ಲಿ ದಾಖಲೆಯಾಗಿರುವಂತೆ, ದೇವರನ್ನು ಮತ್ತು ನೆರೆಯವರನ್ನು ಪ್ರೀತಿಸುವ ಕುರಿತು ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಹೇಳಿದ್ದನ್ನು ಪರಿಗಣಿಸಿರಿ. ಈ ಕ್ಷೇತ್ರಗಳಲ್ಲಿ ಮಾನವರು ಎಷ್ಟು ಸಲ ಗುರಿಯನ್ನು ತಪ್ಪುತ್ತಾರೆ! ದೇವರ ಮತ್ತು ತಮ್ಮ ನೆರೆಯವರ ಕಡೆಗೆ ಪ್ರೀತಿಯನ್ನು ತೋರಿಸಲು ತಪ್ಪುವುದಕ್ಕಾಗಿ ಅನೇಕರಿಗೆ ಮನಸ್ಸಾಕ್ಷಿಯ ಒಂದು ಚುಚ್ಚಿನ ಅನಿಸಿಕೆಯೂ ಆಗುವುದಿಲ್ಲ.—ಲೂಕ 10:29-37.

ಸೈತಾನನ ತಂತ್ರೋಪಾಯಗಳ ಕುರಿತು ಎಚ್ಚರಿಕೆ!

16. ಸೈತಾನನ ಹೂಟಗಳಿಗೆ ಆಹುತಿಯಾಗುವುದರಿಂದ ತಪ್ಪಲು ನಾವೇನು ಮಾಡಬಲ್ಲೆವು, ಮತ್ತು ಇದೇಕೆ ಕಷ್ಟಕರ?

16 ನಾವು ಇಚ್ಛಾಪೂರ್ವಕವಾಗಿ ಪಾಪವನ್ನು ಅಭ್ಯಸಿಸುವಂತೆ ಮಾಡಲು ಸೈತಾನನು ಪ್ರಯತ್ನಿಸುತ್ತಾನೆ. (1 ಯೋಹಾನ 3:8) ಅವನ ಹಂಚಿಕೆಗಳಿಗೆ ಆಹುತಿಯಾಗುವುದರಿಂದ ತಪ್ಪುವ ಯಾವ ಮಾರ್ಗವಾದರೂ ಇದೆಯೆ? ಹೌದು, ಆದರೆ ಇಚ್ಛಾಪೂರ್ವಕವಾದ ಪಾಪದ ಕಡೆಗಿನ ಪ್ರವೃತ್ತಿಗಳ ವಿರುದ್ಧ ನಾವು ಹೋರಾಡಬೇಕೆಂದು ಇದು ಕೇಳಿಕೊಳ್ಳುತ್ತದೆ. ಇದು ಸುಲಭವಲ್ಲ, ಏಕೆಂದರೆ ಪಾಪ ಮಾಡಲು ನಮಗಿರುವ ಪ್ರಕೃತಿಜನ್ಯ ಪ್ರವೃತ್ತಿಯು ಬಲು ಬಲಾಢ್ಯವಾಗಿದೆ. (ಎಫೆಸ 2:3) ಪೌಲನಿಗೆ ಒಂದು ನಿಜ ಹೋರಾಟವನ್ನು ಮಾಡಬೇಕಾಗಿತ್ತು. ಏಕೆ? ಏಕೆಂದರೆ ಅವನಲ್ಲಿ ಪಾಪವು ವಾಸಿಸಿತ್ತು. ನಮಗೆ ದೇವರ ಒಪ್ಪಿಗೆ ಬೇಕಿರುವಲ್ಲಿ, ನಾವೂ ನಮ್ಮೊಳಗಿರುವ ಪಾಪಪೂರ್ಣ ಪ್ರವೃತ್ತಿಗಳ ವಿರುದ್ಧ ಹೋರಾಡಬೇಕು.—ರೋಮಾಪುರ 7:14-24; 2 ಕೊರಿಂಥ 5:10.

17. ನಮ್ಮ ಪಾಪಪೂರ್ಣ ಪ್ರವೃತ್ತಿಗಳ ವಿರುದ್ಧ ಮಾಡುವ ಹೋರಾಟವನ್ನು ಯಾವುದು ಹೆಚ್ಚು ಕಷ್ಟಕರವಾಗಿ ಮಾಡುತ್ತದೆ?

17 ದೇವರ ನಿಯಮಗಳನ್ನು ನಾವು ಮುರಿಯುವಂತೆ ನಮ್ಮನ್ನು ಸೆಳೆಯಲು ಸೈತಾನನು ಸತತವಾಗಿ ಸಂದರ್ಭಗಳಿಗಾಗಿ ನೋಡುವುದರಿಂದ, ಪಾಪದ ವಿರುದ್ಧ ನಮ್ಮ ಹೋರಾಟವು ಸುಲಭವಾಗಿಲ್ಲ. (1 ಪೇತ್ರ 5:8) ಜೊತೆಕ್ರೈಸ್ತರಿಗಾಗಿ ಚಿಂತೆ ತೋರಿಸುತ್ತಾ, ಪೌಲನು ಹೇಳಿದ್ದು: “ಆದರೆ ಹೇಗೆ ಹವ್ವಳು ಸರ್ಪದ ಕುಯುಕ್ತಿಗೆ ಒಳಬಿದ್ದು ಮೋಸಹೋದಳೋ ಹಾಗೆಯೇ ನಿಮ್ಮ ಮನಸ್ಸು ಕ್ರಿಸ್ತನ ವಿಷಯದಲ್ಲಿರಬೇಕಾದ ಯಥಾರ್ಥತ್ವವನ್ನೂ ಪಾತಿವ್ರತ್ಯವನ್ನೂ ಬಿಟ್ಟು ಕೆಟ್ಟುಹೋದೀತೆಂದು ನನಗೆ ಭಯವುಂಟು.” (2 ಕೊರಿಂಥ 11:3) ಸೈತಾನನು ತದ್ರೀತಿಯ ತಂತ್ರೋಪಾಯಗಳನ್ನು ಇಂದು ಉಪಯೋಗಿಸುತ್ತಾನೆ. ಯೆಹೋವನ ಒಳ್ಳೆಯತನ ಮತ್ತು ದೇವಾಜ್ಞೆಗಳಿಗೆ ವಿಧೇಯರಾಗುವುದರಿಂದ ಬರುವ ಪ್ರಯೋಜನಗಳ ಕುರಿತು ಅವನು ಸಂಶಯದ ಬೀಜಗಳನ್ನು ಬಿತ್ತಪ್ರಯತ್ನಿಸುತ್ತಾನೆ. ನಮಗೆ ಬಾಧ್ಯತೆಯಾಗಿ ಬಂದ ಪಾಪಪೂರ್ಣ ಪ್ರವೃತ್ತಿಗಳ ಪ್ರಯೋಜನ ಪಡೆಯಪ್ರಯತ್ನಿಸುತ್ತಾ, ನಾವು ಅಹಂಕಾರ, ಲೋಭ, ಹಗೆ ಮತ್ತು ಅವಿಚಾರಾಭಿಪ್ರಾಯಗಳ ಮಾರ್ಗವನ್ನು ಬೆನ್ನಟ್ಟುವಂತೆ ಪಿಶಾಚನು ಅಪೇಕ್ಷಿಸುತ್ತಾನೆ.

18. ಪಾಪವನ್ನು ಪ್ರವರ್ತಿಸಲು ಸೈತಾನನು ಲೋಕವನ್ನು ಹೇಗೆ ಬಳಸುತ್ತಾನೆ?

18 ಪಿಶಾಚನು ನಮ್ಮ ವಿರುದ್ಧ ಬಳಸುವ ಸಾಧನಗಳಲ್ಲಿ ಒಂದು, ಅವನ ಅಧಿಕಾರದಲ್ಲಿರುವ ಲೋಕವೇ. (1 ಯೋಹಾನ 5:19) ನಾವು ಜಾಗರೂಕರಾಗಿಲ್ಲದಿರುವಲ್ಲಿ, ಲೋಕದಲ್ಲಿ ನಮ್ಮ ಸುತ್ತಲಿರುವ ಭ್ರಷ್ಟರೂ ಅಪ್ರಾಮಾಣಿಕರೂ ಆದ ಜನರು, ದೇವರ ನೈತಿಕ ಮಟ್ಟಗಳನ್ನು ಉಲ್ಲಂಘಿಸುವ ಪಾಪಪೂರ್ಣ ಮಾರ್ಗದಲ್ಲಿ ಹೋಗುವಂತೆ ನಮ್ಮ ಮೇಲೆ ಒತ್ತಡ ಹಾಕುವರು. (1 ಪೇತ್ರ 4:3-5) ಅನೇಕರು ದೇವರ ನಿಯಮಗಳನ್ನು ಅಲಕ್ಷಿಸಿ, ತಮ್ಮ ಮನಸ್ಸಾಕ್ಷಿಯ ತಿವಿತಗಳನ್ನೂ, ಕ್ರಮೇಣ ಅದು ಸಂವೇದನಾಶೂನ್ಯವಾಗುವಂತೆ, ಬದಿಗೊತ್ತುತ್ತಾರೆ. (ರೋಮಾಪುರ 2:14, 15; 1 ತಿಮೊಥೆಯ 4:1, 2) ಕೆಲವರು, ತಮ್ಮ ಅಪರಿಪೂರ್ಣ ಮನಸ್ಸಾಕ್ಷಿಯು ಸಹ ಹಿಂದೆ ಅನುಮತಿಸದಿದ್ದ ಮಾರ್ಗವನ್ನು ಕ್ರಮೇಣ ಆಯ್ದುಕೊಳ್ಳುತ್ತಾರೆ.—ರೋಮಾಪುರ 1:24-32; ಎಫೆಸ 4:17-19.

19. ಕೇವಲ ಒಂದು ಶುದ್ಧವಾದ ಜೀವನವನ್ನು ನಡೆಸುವುದು ಏಕೆ ಸಾಲದು?

19 ಒಂದು ಶುದ್ಧವಾದ ಜೀವನವನ್ನು ನಡೆಸುವುದು ಈ ಜಗತ್ತಿನಲ್ಲಿ ಒಂದು ಸಾಧನೆಯಾಗಿದೆ. ಆದರೆ ನಮ್ಮ ಸೃಷ್ಟಿಕರ್ತನನ್ನು ಮೆಚ್ಚಿಸಲು ಇನ್ನೂ ಹೆಚ್ಚಿನದ್ದು ಅಗತ್ಯ. ನಮಗೆ ದೇವರಲ್ಲಿ ನಂಬಿಕೆಯೂ ಇದ್ದು, ನಾವಾತನಿಗೆ ಜವಾಬ್ದಾರರು ಎಂಬ ಅನಿಸಿಕೆಯಿರಬೇಕು. (ಇಬ್ರಿಯ 11:6) “ಹೀಗಿರುವದರಿಂದ ಒಳ್ಳೇದನ್ನು ಮಾಡಬೇಕೆಂದು ತಿಳಿದು ಅದನ್ನು ಮಾಡದೆ ಇರುವವನು ಪಾಪಕ್ಕೊಳಗಾಗಿದ್ದಾನೆ” ಎಂದು ಶಿಷ್ಯ ಯಾಕೋಬನು ಬರೆದನು. (ಯಾಕೋಬ 4:17) ಹೌದು, ಬೇಕೆಂದು ದೇವರನ್ನು ಮತ್ತು ಆತನ ಆಜ್ಞೆಗಳನ್ನು ಉಪೇಕ್ಷಿಸುವುದು ತಾನೇ ಪಾಪದ ಒಂದು ರೂಪವಾಗಿದೆ.

20. ಸರಿಯಾದುದನ್ನು ಮಾಡುವುದರಿಂದ ಸೈತಾನನು ನಿಮ್ಮನ್ನು ಹೇಗೆ ತಡೆಹಿಡಿಯಲು ಪ್ರಯತ್ನಿಸಬಹುದು, ಆದರೆ ಅಂತಹ ಒತ್ತಡಗಳನ್ನು ಪ್ರತಿಭಟಿಸಲು ನಮಗೆ ಯಾವುದು ಸಹಾಯಮಾಡುವುದು?

20 ಬೈಬಲ್‌ ಅಧ್ಯಯನದ ಮೂಲಕ ದೇವರ ಜ್ಞಾನದ ನಿಮ್ಮ ಬೆನ್ನಟ್ಟುವಿಕೆಗೆ ಸೈತಾನನು ವಿರೋಧವನ್ನು ಉದ್ರೇಕಿಸುವುದು ತೀರ ಸಂಭವನೀಯ. ಇಂತಹ ಒತ್ತಡಗಳು ಸರಿಯಾಗಿರುವುದನ್ನು ಆಚರಿಸುವುದರಿಂದ ನಿಮ್ಮನ್ನು ತಡೆಯಲಿಕ್ಕಿಲ್ಲವೆಂದು ಯಥಾರ್ಥವಾಗಿ ನಿರೀಕ್ಷಿಸಲಾಗುತ್ತದೆ. (ಯೋಹಾನ 16:2) ಯೇಸುವಿನ ಶುಶ್ರೂಷೆಯ ಸಮಯದಲ್ಲಿ ಅನೇಕ ಅಧಿಪತಿಗಳು ಅವನಲ್ಲಿ ನಂಬಿಕೆಯಿಟ್ಟರೂ, ತಮ್ಮ ಸಮಾಜವು ತಮ್ಮನ್ನು ದೂರವಿಡುವುದೆಂದು ಭಯಪಟ್ಟ ಕಾರಣ, ಅವರು ಅವನನ್ನು ಬಹಿರಂಗವಾಗಿ ಒಪ್ಪಿಕೊಳ್ಳಲಿಲ್ಲ. (ಯೋಹಾನ 12:42, 43) ದೇವರ ಜ್ಞಾನವನ್ನು ಹುಡುಕುವ ಯಾವನನ್ನೂ ಸೈತಾನನು ಕನಿಕರರಹಿತವಾಗಿ ಹೆದರಿಸಪ್ರಯತ್ನಿಸುತ್ತಾನೆ. ಆದರೂ, ನೀವು ಯಾವಾಗಲೂ ಯೆಹೋವನು ಮಾಡಿರುವ ಅದ್ಭುತಕರವಾದ ಸಂಗತಿಗಳನ್ನು ನೆನಪಿಸಿಕೊಂಡು ಗಣ್ಯಮಾಡಬೇಕು. ವಿರೋಧಿಗಳೂ ಅದೇ ರೀತಿಯ ಗಣ್ಯತೆಯನ್ನು ಪಡೆಯುವಂತೆ ನೀವು ಸಹಾಯಮಾಡಲು ಶಕ್ತರಾದೀರಿ.

21. ನಾವು ಲೋಕವನ್ನೂ ನಮ್ಮ ಸ್ವಂತ ಪಾಪಪೂರ್ಣ ಪ್ರವೃತ್ತಿಗಳನ್ನೂ ಹೇಗೆ ಜಯಿಸಬಹುದು?

21 ನಾವು ಅಪರಿಪೂರ್ಣರಾಗಿರುವ ತನಕ, ನಾವು ಪಾಪಮಾಡುವೆವು. (1 ಯೋಹಾನ 1:8) ಆದರೂ ಈ ಕದನವನ್ನು ಹೋರಾಡುವರೆ ನಮಗೆ ಸಹಾಯವಿದೆ. ಹೌದು, ಕೆಡುಕ ಪಿಶಾಚನಾದ ಸೈತಾನನ ವಿರುದ್ಧ ನಮ್ಮ ಹೋರಾಟದಲ್ಲಿ ವಿಜಯ ಹೊಂದುವ ಸಾಧ್ಯತೆಯಿದೆ. (ರೋಮಾಪುರ 5:21) ಯೇಸುವು ಭೂಮಿಯ ಮೇಲೆ ತನ್ನ ಶುಶ್ರೂಷೆಯ ಅಂತ್ಯದಲ್ಲಿ, ತನ್ನ ಶಿಷ್ಯರನ್ನು ಈ ಮಾತುಗಳಿಂದ ಪ್ರೋತ್ಸಾಹಿಸಿದನು: “ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ.” (ಯೋಹಾನ 16:33) ದೇವರ ಸಹಾಯದಿಂದ ಲೋಕವನ್ನು ಜಯಿಸಲು ಅಪರಿಪೂರ್ಣ ಮಾನವರಿಗೂ ಸಾಧ್ಯವಿದೆ. ತನ್ನನ್ನು ವಿರೋಧಿಸಿ ‘ದೇವರಿಗೆ ಅಧೀನರಾಗಿರು’ ವವರ ಮೇಲೆ ಸೈತಾನನಿಗೆ ಯಾವ ಅಧಿಕಾರವೂ ಇಲ್ಲ. (ಯಾಕೋಬ 4:7; 1 ಯೋಹಾನ 5:18) ನಾವು ನೋಡಲಿರುವಂತೆ, ಪಾಪ ಮತ್ತು ಮರಣಕ್ಕೆ ದಾಸತ್ವದಿಂದ ಹೊರಬರಲು ದೇವರು ಒಂದು ಮಾರ್ಗವನ್ನು ಒದಗಿಸಿದ್ದಾನೆ.

ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ

ಪಿಶಾಚನಾದ ಸೈತಾನನು ಯಾರು?

ಮಾನವರು ವೃದ್ಧರಾಗುವುದೂ ಸಾಯುವುದೂ ಏಕೆ?

ಪಾಪವೆಂದರೇನು?

ಸೈತಾನನು ಜನರನ್ನು ದೇವರ ವಿರುದ್ಧ ಇಚ್ಛಾಪೂರ್ವಕವಾದ ಪಾಪಕ್ಕೆ ಹೇಗೆ ಎಳೆಯುತ್ತಾನೆ?

[ಅಧ್ಯಯನ ಪ್ರಶ್ನೆಗಳು]

[ಪುಟ 54ರಲ್ಲಿ ಇಡೀ ಪುಟದ ಚಿತ್ರ]