ಅಧ್ಯಾಯ 17
‘ಅವನು ವಚನಗಳನ್ನ ಅರ್ಥ ಮಾಡ್ಕೊಳ್ಳೋಕೆ ಸಹಾಯ ಮಾಡಿದ’
ಚೆನ್ನಾಗಿ ಕಲಿಸೋ ವಿಧ ಮತ್ತು ಬೆರೋಯದವರ ಉತ್ತಮ ಮಾದರಿ
ಆಧಾರ: ಅಪೊಸ್ತಲರ ಕಾರ್ಯ 17:1-15
1, 2. (ಎ) ಫಿಲಿಪ್ಪಿಯಿಂದ ಥೆಸಲೊನೀಕಕ್ಕೆ ಯಾರು ಪ್ರಯಾಣ ಮಾಡಿದ್ರು? (ಬಿ) ಆಗ ಅವ್ರ ಮನಸ್ಸಲ್ಲಿ ಯಾವ ಯೋಚ್ನೆ ಬಂದಿರಬಹುದು?
ರೋಮನ್ ಇಂಜಿನಿಯರ್ಗಳು ಮಾಡಿದ ಜನಪ್ರಿಯ ಮುಖ್ಯ ರಸ್ತೆಗಳು ಬೆಟ್ಟ-ಗುಡ್ಡಗಳನ್ನೂ ದಾಟಿ ಹೋಗ್ತಿದ್ವು. ಆ ರಸ್ತೆಗಳಲ್ಲಿ ಆಗೊಮ್ಮೆ-ಈಗೊಮ್ಮೆ ಕತ್ತೆ ಕಿರುಚಿದ ಶಬ್ದ, ಕಲ್ಲುಹಾಸಿನ ಮೇಲೆ ರಥದ ಚಕ್ರಗಳ ಕಟ-ಕಟ ಸದ್ದು ಕೇಳಿಸ್ತಿತ್ತು. ಜೊತೆಗೆ ಸೈನಿಕರು, ವ್ಯಾಪಾರಿಗಳು ಮತ್ತು ಕಸೂತಿಗಾರರು ಹೀಗೆ ಅಲ್ಲಿ ಪ್ರಯಾಣ ಮಾಡ್ತಿದ್ದ ಎಲ್ಲಾ ರೀತಿಯ ಜನ್ರ ಮಾತು ಕೇಳಿಸ್ತಿತ್ತು. ಇದೇ ದಾರಿಯಲ್ಲಿ ಪೌಲ, ಸೀಲ, ತಿಮೊತಿ ಫಿಲಿಪ್ಪಿಯಿಂದ ಥೆಸಲೊನೀಕಕ್ಕೆ ಹೋಗ್ತಿದ್ರು. ಅವರು 130ಕ್ಕೂ ಜಾಸ್ತಿ ಕಿ.ಮೀ. ಪ್ರಯಾಣ ಮಾಡ್ತಿದ್ರು, ಅದು ಅಷ್ಟು ಸುಲಭ ಇರಲಿಲ್ಲ. ಅದ್ರಲ್ಲೂ ಪೌಲ ಮತ್ತು ಸೀಲಗಂತೂ ತುಂಬ ಕಷ್ಟ ಆಗಿರುತ್ತೆ. ಯಾಕಂದ್ರೆ ಫಿಲಿಪ್ಪಿಯಲ್ಲಿ ಅವ್ರಿಗೆ ಕೋಲುಗಳಿಂದ ಹೊಡೆದಾಗ ಆದ ಗಾಯಗಳು ಇನ್ನೂ ವಾಸಿ ಆಗಿರಲಿಲ್ಲ.—ಅ. ಕಾ. 16:22, 23.
2 ಅವರು ಆ ನೋವಲ್ಲೂ ಹೇಗೆ ಪ್ರಯಾಣ ಮಾಡಿದ್ರು? ಅವರು ಒಬ್ಬರಿಗೊಬ್ರು ಮಾತಾಡ್ತಾ ಹೋಗಿದ್ದು ಅವ್ರಿಗೆ ಸಹಾಯ ಮಾಡಿರಬೇಕು. ಫಿಲಿಪ್ಪಿಯಲ್ಲಿ ಜೈಲಿನ ಯಜಮಾನ ಮತ್ತು ಅವನ ಮನೆಯವರು ಕ್ರೈಸ್ತರಾಗಿದ್ದು ಅವ್ರ ಮನಸ್ಸಲ್ಲಿ ಇನ್ನೂ ಹಚ್ಚಹಸಿರಾಗಿತ್ತು. ಇದ್ರ ಬಗ್ಗೆ ಅವರು ಖಂಡಿತ ಮಾತಾಡಿರಬೇಕು. ಇದ್ರಿಂದ, ಏನೇ ಆದ್ರೂ ದೇವರ ವಾಕ್ಯದ ಬಗ್ಗೆ ಸಾರುತ್ತಾ ಇರೋದನ್ನ ಬಿಟ್ಟುಬಿಡಬಾರದು ಅಂತ ತೀರ್ಮಾನ ಮಾಡ್ಕೊಂಡ್ರು. ಆದ್ರೂ ಸಮುದ್ರ ತೀರದಲ್ಲಿದ್ದ ಥೆಸಲೊನೀಕ ಹತ್ರ ಆಗ್ತಾ ಇದ್ದ ಹಾಗೆ ಅವ್ರ ಮನಸ್ಸಲ್ಲಿ ‘ಇಲ್ಲಿರೋ ಯೆಹೂದ್ಯರು ಏನು ಮಾಡ್ತಾರೋ? ಫಿಲಿಪ್ಪಿಯಲ್ಲಿ ಆದ ಹಾಗೆ ಇಲ್ಲೂ ನಮ್ಮ ಮೇಲೆ ದಾಳಿ ಮಾಡ್ತಾರಾ, ಹೊಡೀತಾರಾ’ ಅನ್ನೋ ಯೋಚ್ನೆ ಬಂದಿರಬಹುದು.
3. ಪೌಲ ಏನು ಮಾಡಿದ್ನೋ ಅದ್ರಿಂದ ನಾವೇನು ಕಲೀಬಹುದು?
3 ಸ್ವಲ್ಪ ಸಮಯ ಆದ್ಮೇಲೆ ಪೌಲ ಥೆಸಲೊನೀಕದ ಕ್ರೈಸ್ತರಿಗೆ ಬರೆದ ಪತ್ರದಲ್ಲಿ ತನ್ನ ಭಾವನೆಗಳನ್ನ ಹೇಳಿದ: “ಫಿಲಿಪ್ಪಿಯಲ್ಲಿ ಇದ್ದಾಗ ನಮಗೆ ತುಂಬ ಕಷ್ಟ, ವಿರೋಧ ಬಂತು, ಅವಮಾನ ಆಯ್ತು. ಆದ್ರೂ ನಮ್ಮ ದೇವರು ಆತನ ಸಿಹಿಸುದ್ದಿಯನ್ನ ನಿಮಗೆ ಹೇಳೋಕೆ ನಮಗೆ ಧೈರ್ಯ ಕೊಟ್ಟನು. ಇದು ನಿಮಗೇ ಗೊತ್ತು.” (1 ಥೆಸ. 2:2) ಫಿಲಿಪ್ಪಿಯಲ್ಲಿ ಹಿಂಸೆ ಅನುಭವಿಸಿದ ಮೇಲೆ ಥೆಸಲೊನೀಕಕ್ಕೆ ಹೋಗೋಕೆ ತನಗೆ ಹಿಂಜರಿಕೆ ಆಗಿತ್ತು ಅಂತ ಈ ವಚನದಲ್ಲಿ ಪೌಲ ಹೇಳ್ತಿದ್ದಾನೆ ಅನ್ಸುತ್ತೆ. ಪೌಲನ ಈ ಭಾವನೆ ನಿಮಗೆ ಅರ್ಥ ಆಗ್ತಿದ್ಯಾ? ಸಿಹಿಸುದ್ದಿ ಸಾರೋಕೆ ನಿಮಗೆ ಯಾವತ್ತಾದ್ರೂ ಕಷ್ಟ ಆಗಿದ್ಯಾ? ಯೆಹೋವ ದೇವರು ತನಗೆ ಧೈರ್ಯ ಮತ್ತು ಶಕ್ತಿ ಕೊಟ್ಟೇ ಕೊಡ್ತಾನೆ ಅಂತ ಪೌಲ ನಂಬಿದ. ನಾವೂ ಇದೇ ತರ ಇರಬೇಕು. ಬನ್ನಿ, ಪೌಲ ಏನು ಮಾಡಿದ ಅಂತ ನೋಡೋಣ.—1 ಕೊರಿಂ. 4:16.
ಅ. ಕಾ. 17:1-3)
‘ಅವನು ವಚನಗಳನ್ನ ಅರ್ಥ ಮಾಡ್ಕೊಳ್ಳೋಕೆ ಸಹಾಯ ಮಾಡಿದ’ (4. ಪೌಲ ಥೆಸಲೊನೀಕದಲ್ಲಿ ಮೂರು ವಾರಕ್ಕಿಂತ ಜಾಸ್ತಿ ದಿನ ಇದ್ದಿರಬೇಕು ಅಂತ ಹೇಗೆ ಹೇಳಬಹುದು?
4 ಥೆಸಲೊನೀಕದಲ್ಲಿ ಇದ್ದಾಗ ಪೌಲ ಸಭಾಮಂದಿರದಲ್ಲಿ ಮೂರು ಸಬ್ಬತ್ ದಿನಗಳ ತನಕ ಸಾರಿದ ಅಂತ ಬೈಬಲ್ ಹೇಳುತ್ತೆ. ಹಾಗಾದ್ರೆ ಅವನು ಅಲ್ಲಿ ಮೂರು ವಾರ ಮಾತ್ರ ಇದ್ನಾ? ಪೌಲ ಅಲ್ಲಿ ತಲುಪಿ ಎಷ್ಟು ದಿನ ಆದ್ಮೇಲೆ ಸಭಾಮಂದಿರಕ್ಕೆ ಹೋದ ಅಂತ ನಮಗೆ ಗೊತ್ತಿಲ್ಲ. ಆದ್ರೆ ಪೌಲ ಮತ್ತು ಅವನ ಜೊತೆ ಇದ್ದವರು ಥೆಸಲೊನೀಕದಲ್ಲಿ ಇದ್ದಾಗ ತಮ್ಮ ಖರ್ಚನ್ನ ನೋಡ್ಕೊಳ್ಳೋಕೆ ಕೆಲಸ ಮಾಡಿದ್ರು ಅಂತ ತನ್ನ ಪತ್ರದಲ್ಲಿ ಪೌಲ ಹೇಳಿದ್ದಾನೆ. (1 ಥೆಸ. 2:9; 2 ಥೆಸ. 3:7, 8) ಅಷ್ಟೇ ಅಲ್ಲ, ಅವನು ಅಲ್ಲಿದ್ದಾಗ ಫಿಲಿಪ್ಪಿಯ ಸಹೋದರರು ಎರಡು ಸಲ ಅವನಿಗೆ ಬೇಕಾದ ವಸ್ತುಗಳನ್ನ ಕಳಿಸ್ಕೊಟ್ರು. (ಫಿಲಿ. 4:16) ಹಾಗಾಗಿ ಅವನು ಥೆಸಲೊನೀಕದಲ್ಲಿ ಮೂರು ವಾರಕ್ಕಿಂತ ಜಾಸ್ತಿ ದಿನ ಇದ್ದಿರಬೇಕು.
5. ಪೌಲ ಜನ್ರಿಗೆ ಅರ್ಥ ಆಗೋಕೆ ಹೇಗೆ ಮಾತಾಡಿದ?
5 ಪೌಲ ಧೈರ್ಯ ತಂದ್ಕೊಂಡು ಸಭಾಮಂದಿರದಲ್ಲಿದ್ದ ಜನರ ಹತ್ರ ಮಾತಾಡಿದ. “ಅವನು ವಚನಗಳನ್ನ ಅರ್ಥಮಾಡ್ಕೊಳ್ಳೋಕೆ ಅಲ್ಲಿದ್ದವ್ರಿಗೆ ಸಹಾಯ ಮಾಡಿದ. ವಚನಗಳನ್ನ ತೋರಿಸಿ ಕ್ರಿಸ್ತ ಕಷ್ಟ ಅನುಭವಿಸಿ ಸಾಯೋದು, ಮತ್ತೆ ಜೀವದಿಂದ ಎದ್ದು ಬರೋದು ಅಗತ್ಯವಾಗಿತ್ತು ಅಂತ ವಿವರಿಸಿದ. ‘ನಾನು ನಿಮ್ಗೆ ಹೇಳ್ತಿರೋ ಕ್ರಿಸ್ತ ಬೇರೆ ಯಾರೂ ಅಲ್ಲ, ಆತನು ಯೇಸುನೇ’ ಅಂದ.” (ಅ. ಕಾ. 17:2, 3) ಇಲ್ಲಿ ಪೌಲ, ಜನ್ರಿಗೆ ಖುಷಿ ಆಶ್ಚರ್ಯ ಆಗೋ ತರ ಮಾಡಿದ್ರೆ ಸಾಕು ಅಂತ ಅಂದ್ಕೊಳ್ಳಲಿಲ್ಲ. ಬದಲಿಗೆ, ವಚನಗಳನ್ನ ಅರ್ಥ ಮಾಡ್ಕೊಳ್ಳೋಕೆ ಅವ್ರಿಗೆ ಸಹಾಯ ಮಾಡಿದ. ಯಾಕಂದ್ರೆ ಸಭಾಮಂದಿರಕ್ಕೆ ಹೋಗ್ತಿದ್ದ ಜನ್ರಿಗೆ ಪವಿತ್ರಗ್ರಂಥದ ಬಗ್ಗೆ ಗೊತ್ತಿತ್ತು, ಅದ್ರ ಬಗ್ಗೆ ಅವ್ರಿಗೆ ತುಂಬ ಗೌರವನೂ ಇತ್ತು. ಆದ್ರೆ ಪವಿತ್ರಗ್ರಂಥದಲ್ಲಿದ್ದ ವಿಷ್ಯಗಳ ಅರ್ಥ ಗೊತ್ತಿರಲಿಲ್ಲ. ಹಾಗಾಗಿ ಪೌಲ ನಜರೇತಿನ ಯೇಸುನೇ ಪವಿತ್ರಗ್ರಂಥದಲ್ಲಿ ಹೇಳಿರೋ ಮೆಸ್ಸೀಯ ಅಥವಾ ಕ್ರಿಸ್ತ ಅಂತ ಪವಿತ್ರಗ್ರಂಥದಿಂದಾನೇ ವಚನಗಳನ್ನ ತೋರಿಸಿದ, ವಿವರಿಸಿದ ಮತ್ತು ರುಜುಪಡಿಸಿದ.
6. (ಎ) ಯೇಸು ಪವಿತ್ರಗ್ರಂಥವನ್ನ ಹೇಗೆ ವಿವರಿಸಿದನು? (ಬಿ) ಇದ್ರಿಂದ ಏನಾಯ್ತು?
6 ಯೇಸು ಪವಿತ್ರಗ್ರಂಥವನ್ನ ಆಧಾರವಾಗಿ ಇಟ್ಕೊಂಡು ಕಲಿಸ್ತಿದ್ದನು. ಅದನ್ನೇ ಪೌಲ ಕೂಡ ಮಾಡಿದ. ಉದಾಹರಣೆಗೆ, ಸಾರ್ವಜನಿಕ ಸೇವೆಯಲ್ಲಿ ಯೇಸು ತನ್ನ ಶಿಷ್ಯರಿಗೆ, ಮನುಷ್ಯಕುಮಾರ ಕಷ್ಟಗಳನ್ನ ಅನುಭವಿಸಿ, ಸತ್ತು ಮತ್ತೆ ಜೀವಂತವಾಗಿ ಬರಬೇಕು ಅಂತ ಪವಿತ್ರಗ್ರಂಥ ಹೇಳುತ್ತೆ ಅಂತ ಹೇಳಿದನು. (ಮತ್ತಾ. 16:21) ಆತನು ಮತ್ತೆ ಜೀವಂತವಾಗಿ ಬಂದ ಮೇಲೆ ತನ್ನ ಶಿಷ್ಯರಿಗೆ ಕಾಣಿಸ್ಕೊಂಡನು. ಯೇಸು ಸತ್ಯಾನೇ ಹೇಳಿದ್ದನು ಅನ್ನೋಕೆ ಈ ಒಂದು ಆಧಾರನೇ ಸಾಕಾಗಿತ್ತು. ಆದ್ರೂ ಯೇಸು ಇನ್ನೂ ತುಂಬ ಆಧಾರಗಳನ್ನ ಕೊಟ್ಟನು. “ಪವಿತ್ರ ಗ್ರಂಥದಲ್ಲಿ ಮೋಶೆ ಮತ್ತು ಪ್ರವಾದಿಗಳು ತನ್ನ ಬಗ್ಗೆ ಬರೆದಿರೋ ಎಲ್ಲ ವಚನಗಳನ್ನ ಒಂದೊಂದಾಗಿ ಬಿಡಿಸಿ ವಿವರಿಸಿದನು.” ಹೀಗೆ ಆತನು ತನ್ನ ಶಿಷ್ಯರಿಗೆ ತುಂಬ ವಿಷ್ಯಗಳನ್ನ ಹೇಳಿ ವಿವರಿಸಿದ್ರಿಂದ ಏನಾಯ್ತು? “ದಾರಿಯಲ್ಲಿ ಆತನು ನಮ್ಮ ಜೊತೆ ಮಾತಾಡ್ತಿದ್ದಾಗ ನಮಗೆ ವಚನಗಳ ಅರ್ಥ ವಿವರಿಸ್ತಿದ್ದಾಗ ನಮ್ಮ ಹೃದಯ ಕುದಿತಲ್ವಾ?” ಅಂತ ಶಿಷ್ಯರು ಹೇಳಿದ್ರು.—ಲೂಕ 24:13, 27, 32.
7. ಪವಿತ್ರಗ್ರಂಥವನ್ನ ಆಧಾರವಾಗಿ ಇಟ್ಕೊಂಡು ಕಲಿಸೋದು ಯಾಕೆ ಮುಖ್ಯ?
7 ದೇವರ ವಾಕ್ಯದಲ್ಲಿರೋ ಸಂದೇಶಕ್ಕೆ ತುಂಬಾ ಶಕ್ತಿ ಇದೆ. (ಇಬ್ರಿ. 4:12) ಹಾಗಾಗಿ ಯೇಸು, ಪೌಲ ಮತ್ತು ಬೇರೆ ಅಪೊಸ್ತಲರ ತರ ನಾವು ಕೂಡ ಅದೇ ವಾಕ್ಯವನ್ನ ಆಧಾರವಾಗಿ ಇಟ್ಕೊಂಡು ಜನ್ರಿಗೆ ಕಲಿಸ್ತೀವಿ. ಬೈಬಲ್ ತೆರೆದು ಅದ್ರಲ್ಲಿ ಏನಿದೆ ಅಂತ ಮನೆಯವ್ರಿಗೆ ತೋರಿಸ್ತೀವಿ. ಬೈಬಲಲ್ಲಿರೋ ವಿಷ್ಯಗಳ ಅರ್ಥವನ್ನ ವಿವರಿಸ್ತೀವಿ. ಹೀಗೆ ನಾವು ಹೇಳೋ ಸಂದೇಶ ನಮ್ಮದಲ್ಲ, ಬದಲಿಗೆ ದೇವರದ್ದು ಅಂತ ರುಜುಪಡಿಸ್ತೀವಿ. ಹಾಗಾಗಿ ನಾವು ಬೈಬಲನ್ನ ಧಾರಾಳವಾಗಿ ಉಪಯೋಗಿಸಬೇಕು. ಅಷ್ಟೇ ಅಲ್ಲ, ನಾವು ಜನ್ರಿಗೆ ಹೇಳೋ ಸಂದೇಶ ಬೈಬಲಲ್ಲಿರೋ ಸತ್ಯ, ಅದನ್ನ ನಂಬಬಹುದು ಅನ್ನೋದನ್ನ ನಾವೂ ಮರೀಬಾರದು. ನಮಗೆ ಈ ನಂಬಿಕೆ ಇದ್ರೆ ಪೌಲನ ತರ ಧೈರ್ಯದಿಂದ ಸಾರೋಕೆ ಆಗುತ್ತೆ ಅಲ್ವಾ?
“ಕೆಲವು ಜನ ಶಿಷ್ಯರಾದ್ರು” (ಅ. ಕಾ. 17:4-9)
8-10. (ಎ) ಥೆಸಲೊನೀಕದ ಜನರು ಸಿಹಿಸುದ್ದಿಗೆ ಹೇಗೆ ಪ್ರತಿಕ್ರಿಯಿಸಿದ್ರು? (ಬಿ) ಕೆಲವು ಯೆಹೂದ್ಯರು ಪೌಲನ ಮೇಲೆ ಯಾಕೆ ಹೊಟ್ಟೆಕಿಚ್ಚುಪಟ್ರು? (ಸಿ) ಯೆಹೂದಿ ವಿರೋಧಿಗಳು ಏನು ಮಾಡಿದ್ರು?
8 “ಒಬ್ಬ ಸೇವಕ ತನ್ನ ಯಜಮಾನನಿಗಿಂತ ದೊಡ್ಡವನಲ್ಲ . . . ಜನ ನನಗೇ ಹಿಂಸೆ ಕೊಟ್ಟಿರುವಾಗ ನಿಮಗೂ ಹಿಂಸೆ ಕೊಡ್ತಾರೆ. ಜನ ನನ್ನ ಮಾತು ಕೇಳಿದ್ರೆ ನಿಮ್ಮ ಮಾತೂ ಕೇಳ್ತಾರೆ” ಅಂತ ಯೇಸು ಹೇಳಿದ್ದ ಮಾತು ನಿಜ ಅಂತ ಪೌಲ ಅನುಭವದಿಂದ ತಿಳ್ಕೊಂಡಿದ್ದ. (ಯೋಹಾ. 15:20) ಥೆಸಲೊನೀಕದಲ್ಲಿ ಕೆಲವರು ಪೌಲನ ಮಾತುಗಳನ್ನ ಕೇಳಿ ಅದೇ ತರ ನಡಿಯೋಕೆ ತುದಿಗಾಲಲ್ಲಿ ನಿಂತಿದ್ರು. ಇನ್ನು ಕೆಲವರು ತುಂಬ ವಿರೋಧಿಸಿದ್ರು. ಒಳ್ಳೇ ಪ್ರತಿಕ್ರಿಯೆ ತೋರಿಸಿದವರ ಬಗ್ಗೆ ಲೂಕ ಹೀಗೆ ಬರೆದಿದ್ದಾನೆ: “ಕೆಲವು ಜನ [ಯೆಹೂದ್ಯರು] ಶಿಷ್ಯರಾದ್ರು. ಅವರು ಪೌಲ ಮತ್ತು ಸೀಲನ ಜೊತೆ ಇದ್ರು. ದೇವಭಕ್ತಿ ಇದ್ದ ತುಂಬ ಜನ ಗ್ರೀಕರು ಮತ್ತು ಹೆಸ್ರುವಾಸಿಯಾಗಿದ್ದ ಸ್ತ್ರೀಯರು ಸಹ ಅದೇ ತರ ಮಾಡಿದ್ರು.” (ಅ. ಕಾ. 17:4) ಪವಿತ್ರಗ್ರಂಥವನ್ನ ಅರ್ಥ ಮಾಡ್ಕೊಳ್ಳೋಕೆ ಸಹಾಯ ಸಿಕ್ತು ಅಂತ ಆ ಹೊಸ ಶಿಷ್ಯರು ತುಂಬ ಸಂತೋಷಪಟ್ಟಿರ್ತಾರೆ!
9 ಕೆಲವರು ಪೌಲ ಹೇಳಿದ ವಿಷ್ಯಗಳಿಗೆ ತುಂಬ ಬೆಲೆ ಕೊಟ್ರು, ಆದ್ರೆ ಇನ್ನು ಕೆಲವರು ಅವನ ಮೇಲೆ ಕೋಪದಿಂದ ಕುದೀತಿದ್ರು. “ತುಂಬ ಜನ ಗ್ರೀಕರು” ಪೌಲನ ಸಂದೇಶವನ್ನ ಸ್ವೀಕರಿಸಿದ್ದನ್ನ ನೋಡಿ ಥೆಸಲೊನೀಕದ ಕೆಲವು ಯೆಹೂದ್ಯರು ಹೊಟ್ಟೆಕಿಚ್ಚುಪಟ್ರು. ಯಾಕೆ? ಆ ಯೆಹೂದ್ಯರು ಗ್ರೀಕರಿಗೆ ಹೀಬ್ರು ಪವಿತ್ರಗ್ರಂಥದ ಬೋಧನೆಗಳನ್ನ ತಿಳಿಸಿದ್ರು, ಅವ್ರನ್ನ ಯೆಹೂದ್ಯರಾಗಿ ಮತಾಂತರ ಮಾಡಬೇಕು ಅಂದ್ಕೊಂಡಿದ್ರು. ಆ ಗ್ರೀಕರು ‘ನಮ್ಮ ಸ್ವತ್ತು’ ಅಂತ ಅವರು ನೆನಸ್ತಿದ್ರು. ಆದ್ರೆ ಇದ್ದಕ್ಕಿದ್ದ ಹಾಗೆ ಪೌಲ ಆ ಗ್ರೀಕರನ್ನ ತಮ್ಮಿಂದ ಕಿತ್ಕೊಳ್ಳೋ ತರ ಅವ್ರಿಗೆ ಅನಿಸ್ತು. ಅದೂ ಸಭಾಮಂದಿರದಲ್ಲೇ! ಅದಕ್ಕೇ ಯೆಹೂದ್ಯರಿಗೆ ಅವನ ಮೇಲೆ ತುಂಬ ಕೋಪ ಬಂತು.
10 ಆಮೇಲೆ ಏನಾಯ್ತು? “ಇದನ್ನ ನೋಡಿ ಯೆಹೂದ್ಯರಿಗೆ ಹೊಟ್ಟೆಕಿಚ್ಚಾಯ್ತು. ಹಾಗಾಗಿ ಕೆಲಸ ಇಲ್ಲದೆ ಪೇಟೆಯಲ್ಲಿ ಅಲೆಯುತ್ತಾ ಇದ್ದ ಕೆಲವು ಪೋಲಿ ಜನ್ರನ್ನ ಸೇರಿಸಿ ಒಂದು ಗುಂಪು ಕಟ್ಟಿದ್ರು. ಪಟ್ಟಣದಲ್ಲಿ ಗಲಾಟೆ, ಗಲಿಬಿಲಿ ಎಬ್ಬಿಸಿದ್ರು. ಪೌಲ ಮತ್ತು ಸೀಲನನ್ನ ಈ ಕೆಟ್ಟ ಜನ್ರಿಗೆ ಒಪ್ಪಿಸಬೇಕು ಅನ್ನೋ ಉದ್ದೇಶದಿಂದ ಅವರು ಯಾಸೋನನ ಮನೆ ಮೇಲೆ ದಾಳಿ ಮಾಡಿದ್ರು. ಆದ್ರೆ ಪೌಲ ಮತ್ತು ಸೀಲ ಅಲ್ಲಿ ಇರಲಿಲ್ಲ. ಆ ಜನ ಯಾಸೋನನನ್ನ, ಕೆಲವು ಸಹೋದರರನ್ನ ಪಟ್ಟಣದ ಅಧಿಕಾರಿಗಳ ಹತ್ರ ಎಳ್ಕೊಂಡು ಹೋದ್ರು. ಅಲ್ಲಿ ಅವರು ‘ಇಡೀ ಲೋಕವನ್ನ ತಲೆಕೆಳಗೆ ಮಾಡ್ತಿದ್ದ ಈ ಮನುಷ್ಯರು ಇಲ್ಲಿಗೂ ಬಂದಿದ್ದಾರೆ. ಈ ಯಾಸೋನನ ಮನೆಯಲ್ಲಿ ಅವರು ಅತಿಥಿಗಳಾಗಿ ಇದ್ರು. ಯೇಸು ಅನ್ನೋ ಇನ್ನೊಬ್ಬ ರಾಜ ಇದ್ದಾನೆ ಅಂತ ಹೇಳ್ತಾ ನಮ್ಮ ರಾಜನ ಆಜ್ಞೆಗಳಿಗೆ ವಿರುದ್ಧವಾಗಿ ನಡಿತಿದ್ದಾರೆ’ ಅಂತ ಕೂಗಿದ್ರು.” (ಅ. ಕಾ. 17:5-7) ಜನ್ರು ಈ ತರ ದಾಳಿ ಮಾಡಿದಾಗ ಪೌಲ ಮತ್ತು ಅವನ ಜೊತೆ ಇದ್ದವರು ಏನು ಮಾಡಿದ್ರು?
11. (ಎ) ಪೌಲ ಮತ್ತು ಅವನ ಜೊತೆ ಇದ್ದವರ ಮೇಲೆ ಯಾವ ಆರೋಪ ಹಾಕಿದ್ರು? (ಬಿ) ಯಾವ ಆಜ್ಞೆಯನ್ನ ಮನಸ್ಸಲ್ಲಿಟ್ಟು ವಿರೋಧಿಗಳು ಈ ತರ ಆರೋಪ ಹಾಕಿರಬಹುದು? (ಪಾದಟಿಪ್ಪಣಿ ನೋಡಿ.)
11 ಗುಂಪು ಕಟ್ಕೊಂಡು ಬಂದಿದ್ದ ಜನ್ರು ರೋಷದಿಂದ ಕುದೀತಿದ್ರು. ಅವರು ದಡಮೀರಿ ಉಕ್ಕಿ ಹರಿಯೋ ನದಿ ತರ ಇದ್ರು. ಹಿಂದೆ ಮುಂದೆ ನೋಡದೆ ಏನು ಮಾಡೋಕೂ ರೆಡಿ ಇದ್ರು. ಆ ಜನ್ರನ್ನ ಬಳಸಿ ಯೆಹೂದ್ಯರು ಪೌಲ ಮತ್ತು ಸೀಲನನ್ನ ಕೊಲ್ಲಬೇಕಂತ ಇದ್ರು. ಅವರು ಪಟ್ಟಣದಲ್ಲಿ “ಗಲಾಟೆ, ಗಲಿಬಿಲಿ ಎಬ್ಬಿಸಿ” ಪೌಲ ಮತ್ತು ಸೀಲ ದೊಡ್ಡ ತಪ್ಪು ಮಾಡಿದ್ದಾರೆ ಅಂತ ಹೇಳಿ ಅಧಿಕಾರಿಗಳ ಕೈಗೆ ಒಪ್ಪಿಸೋಕೆ ಪ್ರಯತ್ನಿಸಿದ್ರು. ಪೌಲ ಮತ್ತು ಅವನ ಜೊತೆ ಇದ್ದವರು “ಇಡೀ ಲೋಕವನ್ನ ತಲೆಕೆಳಗೆ” ಮಾಡಿದ್ದಾರೆ ಅನ್ನೋದು ಅವರು ಹಾಕಿದ ಮೊದಲನೇ ಆರೋಪ ಆಗಿತ್ತು. ಆದ್ರೆ ಸಿಹಿಸುದ್ದಿ ಸಾರ್ತಿದ್ದ ಇವರು ಥೆಸಲೊನೀಕದಲ್ಲಿ ಗಲಾಟೆ ಎಬ್ಬಿಸಿರಲಿಲ್ಲ. ಅವರು ಹಾಕಿದ ಎರಡನೇ ಆರೋಪ ಒಂದನೇ ಆರೋಪಕ್ಕಿಂತ ದೊಡ್ಡದಾಗಿತ್ತು. ಯೇಸು ಅನ್ನೋ ರಾಜನ ಬಗ್ಗೆ ಎಲ್ರಿಗೂ ಹೇಳ್ತಾ ಚಕ್ರವರ್ತಿಯ ಆಜ್ಞೆಯನ್ನ ಮುರಿದಿದ್ದಾರೆ ಅನ್ನೋದು ಆ ಆರೋಪ ಆಗಿತ್ತು. a
12. ಥೆಸಲೊನೀಕದಲ್ಲಿ ಕ್ರೈಸ್ತರ ಮೇಲೆ ಹಾಕಿದ್ದ ಆರೋಪದಿಂದ ತುಂಬ ಕೆಟ್ಟ ಪರಿಣಾಮ ಆಗೋ ಸಾಧ್ಯತೆ ಇತ್ತು ಅಂತ ಹೇಗೆ ಹೇಳಬಹುದು?
12 ಸ್ವಲ್ಪ ನೆನಪಿಸ್ಕೊಳ್ಳಿ, ಹಿಂದೆ ಧರ್ಮಗುರುಗಳು ಯೇಸು ವಿರುದ್ಧನೂ ಇದೇ ತರ ಆರೋಪ ಹಾಕಿದ್ರು. ಅವರು ಪಿಲಾತನಿಗೆ, “ಜನ ಸರ್ಕಾರದ ವಿರುದ್ಧ ಏಳೋ ತರ ಇವನು ಮಾಡ್ತಿದ್ದಾನೆ . . . ಅಷ್ಟೇ ಅಲ್ಲ ‘ನಾನೇ ಕ್ರಿಸ್ತ, ನಾನೇ ರಾಜ’ ಅಂತ ಹೇಳ್ಕೊಳ್ತಾ ಇದ್ದ. ಆಗ ಅವನನ್ನ ಹಿಡ್ಕೊಂಡು ಬಂದ್ವಿ” ಅಂತ ಹೇಳಿದ್ರು. (ಲೂಕ 23:2) ಆಗ ಈ ವಿಷ್ಯನ ಹಾಗೆ ಬಿಟ್ರೆ ಚಕ್ರವರ್ತಿ ನನ್ನ ಬಗ್ಗೆ ಏನು ಅಂದ್ಕೊತಾನೋ ಅಂತ ಪಿಲಾತನಿಗೆ ಭಯ ಆಗಿರಬೇಕು. ಅದಕ್ಕೆ ಅವನು ಯೇಸುಗೆ ಮರಣದಂಡನೆ ಕೊಟ್ಟಿರಬೇಕು. ಇದೇ ತರ ಥೆಸಲೊನೀಕದಲ್ಲೂ ಕ್ರೈಸ್ತರ ಮೇಲೆ ಹಾಕಿರೋ ಆರೋಪದಿಂದ ತುಂಬ ಕೆಟ್ಟ ಪರಿಣಾಮ ಆಗೋ ಸಾಧ್ಯತೆ ಇತ್ತು. ಇದ್ರ ಬಗ್ಗೆ ಒಂದು ಪುಸ್ತಕ ಹೀಗೆ ಹೇಳುತ್ತೆ: “ಅವರ ಮೇಲೆ ಹಾಕಿದ ಆರೋಪ ಅದು ತುಂಬ ಗಂಭೀರವಾಗಿತ್ತು. ಯಾಕಂದ್ರೆ, ಚಕ್ರವರ್ತಿಯ ವಿರುದ್ಧ ರಾಜದ್ರೋಹ ಮಾಡಿದ್ದಾರೆ ಅನ್ನೋ ಆರೋಪ ಇದ್ರೆ ಹೆಚ್ಚಾಗಿ ಮರಣದಂಡನೆ ಸಿಕ್ತಿತ್ತು.” ಯೆಹೂದ್ಯರು ಮಾಡಿದ ಈ ಕುತಂತ್ರ ಯಶಸ್ವಿ ಆಯ್ತಾ?
13, 14. (ಎ) ಗುಂಪು ಕಟ್ಕೊಂಡು ದಾಳಿ ಮಾಡೋಕೆ ಬಂದ ಜನ್ರಿಗೆ ಯಾಕೆ ಯಶಸ್ಸು ಸಿಗಲಿಲ್ಲ? (ಬಿ) ಕ್ರಿಸ್ತ ಹೇಳಿದ ಹಾಗೆ ಪೌಲ ಹೇಗೆ ಹುಷಾರಾಗಿದ್ದ? (ಸಿ) ನಾವು ಅವನ ತರ ಏನು ಮಾಡಬೇಕು?
13 ಆ ಜನ್ರಿಗೆ ಥೆಸಲೊನೀಕದಲ್ಲಿ ಸಾರೋ ಕೆಲಸವನ್ನ ನಿಲ್ಲಿಸೋಕೆ ಆಗಲಿಲ್ಲ. ಯಾಕೆ? ಯಾಕಂದ್ರೆ ಪೌಲ ಮತ್ತು ಸೀಲ ಅವ್ರ ಕೈಗೆ ಸಿಗಲಿಲ್ಲ. ಅಷ್ಟೇ ಅಲ್ಲ, ಅವ್ರ ಮೇಲೆ ಹಾಕಿದ್ದ ಆರೋಪನೂ ನಿಜ ಅಂತ ಪಟ್ಟಣದ ಅಧಿಕಾರಿಗಳ ಮುಂದೆ ಸಾಬೀತಾಗಲಿಲ್ಲ ಅಂತ ಕಾಣುತ್ತೆ. ಅವರು “ಜಾಮೀನಾಗಿ ತುಂಬ ಹಣ ತಗೊಂಡು” ತಮ್ಮ ಮುಂದೆ ಹಾಜಾರಾಗಿದ್ದ ಯಾಸೋನನನ್ನ ಮತ್ತು ಬೇರೆ ಸಹೋದರರನ್ನ ಬಿಟ್ಟುಬಿಟ್ರು. (ಅ. ಕಾ. 17:8, 9) “ಹಾವಿನ ತರ ಚುರುಕಾಗಿ ಇರಿ. ಪಾರಿವಾಳದ ತರ ಯಾವ ಹಾನಿನೂ ಮಾಡಬೇಡಿ” ಅಂತ ಯೇಸು ಕೊಟ್ಟ ಸಲಹೆಯನ್ನ ಪೌಲ ಪಾಲಿಸಿದ. ಅವನು ಅಪಾಯದಿಂದ ತಪ್ಪಿಸ್ಕೊಂಡ. ಇದ್ರಿಂದ ಬೇರೆ ಕಡೆ ಹೋಗಿ ಸಾರಕ್ಕಾಯ್ತು. (ಮತ್ತಾ. 10:16) ಪೌಲ ಧೈರ್ಯಶಾಲಿ ಅಷ್ಟೇ ಅಲ್ಲ ಹುಷಾರಾಗೂ ಇದ್ದ. ಇವತ್ತು ಕ್ರೈಸ್ತರು ಹೇಗೆ ಅವನ ತರ ಇರಬಹುದು?
14 ನಮ್ಮ ಕಾಲದಲ್ಲೂ ಕ್ರೈಸ್ತರು ಅಂತ ಹೇಳ್ಕೊಳ್ಳೋ ಪಾದ್ರಿಗಳು ಯೆಹೋವನ ಸಾಕ್ಷಿಗಳ ವಿರುದ್ಧ ಜನ್ರನ್ನ ಎತ್ತಿಕಟ್ತಾರೆ. ಯೆಹೋವನ ಸಾಕ್ಷಿಗಳು ದೇಶದ್ರೋಹಿಗಳು ಮತ್ತು ಸರ್ಕಾರದ ವಿರುದ್ಧ ದಂಗೆ ಏಳೋ ತರ ಜನ್ರಿಗೆ ಕುಮ್ಮಕ್ಕು ಕೊಡ್ತಾರೆ ಅಂತ ಆರೋಪ ಹಾಕಿ ಅಧಿಕಾರಿಗಳನ್ನೂ ನಮ್ಮ ವಿರುದ್ಧ ಎತ್ತಿಕಟ್ತಾರೆ. ಒಂದನೇ ಶತಮಾನದ ತರಾನೇ ಇವತ್ತು ಕೂಡ ತುಂಬ ಜನ್ರು ನಮ್ಮನ್ನ ವಿರೋಧಿಸೋಕೆ ಕಾರಣ ಹೊಟ್ಟೆಕಿಚ್ಚೇ. ಆದ್ರೆ ನಾವು ಏನೇ ಆದ್ರೂ ಬೇಕುಬೇಕಂತ ಹೋಗಿ ಸಮಸ್ಯೆಯಲ್ಲಿ ಸಿಕ್ಕಿಹಾಕೊಳ್ಳಲ್ಲ. ಸರಿಯಾಗಿ ಯೋಚ್ನೆ ಮಾಡದಿರೋ ಕೋಪಿಷ್ಠ ಜನರ ಹತ್ರ ವಾದ ಮಾಡೋಕೆ ಹೋಗಲ್ಲ. ಬದಲಿಗೆ ತಾಳ್ಮೆ ತೋರಿಸಬೇಕು, ಪರಿಸ್ಥಿತಿ ಶಾಂತ ಆದ್ಮೇಲೆ ಅಲ್ಲಿಗೆ ವಾಪಸ್ ಹೋಗಿ ಸಾರಬೇಕು.
“ಯೆಹೂದ್ಯರಿಗೆ ಕಲಿಯೋಕೆ ಜಾಸ್ತಿ ಆಸಕ್ತಿ ಇತ್ತು” (ಅ. ಕಾ. 17:10-15)
15. ಬೆರೋಯದವರು ಸಿಹಿಸುದ್ದಿ ಕೇಳಿಸ್ಕೊಂಡಾಗ ಏನು ಮಾಡಿದ್ರು?
15 ಥೆಸಲೋನಿಕದ ಸಹೋದರರು ಸುರಕ್ಷತೆಯನ್ನ ಮನಸ್ಸಲ್ಲಿಟ್ಟು ಪೌಲ ಮತ್ತು ಸೀಲನನ್ನ 65 ಕಿ.ಮೀ. ದೂರದಲ್ಲಿದ್ದ ಬೆರೋಯಕ್ಕೆ ಕಳಿಸಿದ್ರು. ಅಲ್ಲಿ ತಲುಪಿದಾಗ ಪೌಲ ಸಭಾಮಂದಿರಕ್ಕೆ ಹೋಗಿ ಅಲ್ಲಿದ್ದ ಜನ್ರ ಹತ್ರ ಮಾತಾಡಿದ. ಅವರು ಸತ್ಯವನ್ನ ಸ್ವೀಕರಿಸಿದ್ದನ್ನ ನೋಡಿದಾಗ ಅಪೊಸ್ತಲರಿಗೆ ಎಷ್ಟು ಸಂತೋಷ ಆಗಿರಬೇಕು! “ಥೆಸಲೊನೀಕದಲ್ಲಿ ಇದ್ದವ್ರಿಗಿಂತ ಬೆರೋಯದಲ್ಲಿದ್ದ ಯೆಹೂದ್ಯರಿಗೆ ಕಲಿಯೋಕೆ ಜಾಸ್ತಿ ಆಸಕ್ತಿ ಇತ್ತು. ಅದಕ್ಕೇ ಅವರು ಮನಸ್ಸು ಕೊಟ್ಟು ದೇವ್ರ ಸಂದೇಶವನ್ನ ಸ್ವೀಕರಿಸಿದ್ರು. ತಾವು ಕೇಳ್ತಾ ಇರೋ ವಿಷ್ಯಗಳು ನಿಜಕ್ಕೂ ಪವಿತ್ರಗ್ರಂಥದಲ್ಲಿ ಇದ್ಯಾ ಅಂತ ತಿಳ್ಕೊಳ್ಳೋಕೆ ಪ್ರತಿದಿನ ವಚನಗಳನ್ನ ಚೆನ್ನಾಗಿ ಪರೀಕ್ಷಿಸ್ತಿದ್ರು” ಅಂತ ಲೂಕ ಬರೆದಿದ್ದಾನೆ. (ಅ. ಕಾ. 17:10, 11) ಈ ಮಾತಿನ ಅರ್ಥ ಥೆಸಲೊನೀಕದಲ್ಲಿ ಸತ್ಯವನ್ನ ಸ್ವೀಕರಿಸಿದವರಲ್ಲಿ ಆಸಕ್ತಿ ಇರಲಿಲ್ಲ ಅಂತಾನಾ? ಸ್ವಲ್ಪ ಸಮಯ ಆದ್ಮೇಲೆ ಪೌಲ ಥೆಸಲೊನೀಕದವರಿಗೆ ಹೀಗೆ ಬರೆದ: “ನೀವು ದೇವರ ಸಂದೇಶವನ್ನ ನಮ್ಮಿಂದ ಕೇಳಿಸ್ಕೊಂಡಾಗ ಅದನ್ನ ಮನುಷ್ಯರ ಮಾತು ಅಂತ ಅಂದ್ಕೊಳ್ಳದೆ ದೇವರ ಮಾತು ಅಂತಾನೇ ಒಪ್ಕೊಂಡ್ರಿ. ಅದಕ್ಕಾಗಿ ನಾವು ದೇವರಿಗೆ ಯಾವಾಗ್ಲೂ ಧನ್ಯವಾದ ಹೇಳ್ತೀವಿ. ಅದು ನಿಜವಾಗ್ಲೂ ದೇವರ ಸಂದೇಶನೇ. ಆ ಸಂದೇಶ ವಿಶ್ವಾಸಿಗಳಾದ ನಿಮ್ಮೊಳಗೆ ಕೆಲಸ ಮಾಡ್ತಿದೆ.” (1 ಥೆಸ. 2:13) ಹಾಗಾದ್ರೆ ಬೆರೋಯದ ಕ್ರೈಸ್ತರಿಗೆ ಕಲಿಯೋಕೆ ಜಾಸ್ತಿ ಆಸಕ್ತಿ ಇತ್ತು ಅಂತ ಹೇಳೋಕೆ ಕಾರಣ ಏನು?
16. ಬೆರೋಯದವರಿಗೆ “ಕಲಿಯೋಕೆ ಜಾಸ್ತಿ ಆಸಕ್ತಿ ಇತ್ತು” ಅಂತ ಹೇಗೆ ಹೇಳಬಹುದು?
16 ಬೆರೋಯದವರು ಕೇಳಿಸ್ಕೊಂಡ ವಿಷ್ಯಗಳು ಹೊಸದಾಗಿದ್ರೂ ತುಂಬ ಅನುಮಾನ ಪಡ್ತಿರಲಿಲ್ಲ, ಟೀಕಿಸ್ತಾ ಇರಲಿಲ್ಲ. ಹಾಗಂತ ಕೇಳಿಸ್ಕೊಂಡಿದ್ದನ್ನೆಲ್ಲಾ ನಂಬಿಬಿಡೋಷ್ಟು ಮುಗ್ಧರೂ ಆಗಿರಲಿಲ್ಲ. ಮೊದಲು ಅವರು ಪೌಲನ ಮಾತನ್ನ ಚೆನ್ನಾಗಿ ಕೇಳಿಸ್ಕೊಂಡ್ರು. ಆಮೇಲೆ ಆ ವಿಷ್ಯಗಳು ನಿಜನಾ ಅಂತ ಪವಿತ್ರಗ್ರಂಥದಲ್ಲಿ ಪರೀಕ್ಷಿಸಿ ನೋಡಿದ್ರು. ಅವರು ದೇವರ ವಾಕ್ಯವನ್ನ ಶ್ರದ್ಧೆಯಿಂದ ಅಧ್ಯಯನ ಮಾಡಿದ್ರು. ಅದನ್ನ ಅವರು ಬರೀ ಸಬ್ಬತ್ ದಿನ ಅಷ್ಟೇ ಅಲ್ಲ, ಪ್ರತಿದಿನ ಮಾಡಿದ್ರು. ಪೌಲ ಕಲಿಸಿದ ಹೊಸ ವಿಷ್ಯಗಳ ಬಗ್ಗೆ ಇನ್ನೂ ಚೆನ್ನಾಗಿ ತಾವೇ ತಿಳ್ಕೊಳ್ಳೋಕೆ ಪವಿತ್ರಗ್ರಂಥವನ್ನ “ಮನಸ್ಸು ಕೊಟ್ಟು” ಅಧ್ಯಯನ ಮಾಡಿದ್ರು. ಆಮೇಲೆ ಅವರು ದೀನತೆಯಿಂದ ಬದಲಾವಣೆಗಳನ್ನ ಮಾಡ್ಕೊಂಡ್ರು. “ಅವ್ರಲ್ಲಿ ತುಂಬ ಜನ ಶಿಷ್ಯರಾದ್ರು.” (ಅ. ಕಾ. 17:12) ಹಾಗಾಗಿ ಲೂಕ ಹೇಳಿದ ಹಾಗೆ ಅವ್ರಿಗೆ ನಿಜವಾಗ್ಲೂ “ಕಲಿಯೋಕೆ ಜಾಸ್ತಿ ಆಸಕ್ತಿ ಇತ್ತು.”
17. (ಎ) ಬೆರೋಯದವರ ಮಾದರಿಯನ್ನ ನಾವು ಯಾಕೆ ಮೆಚ್ಕೊಬೇಕು? (ಬಿ) ನಾವು ಕ್ರೈಸ್ತರಾಗಿ ತುಂಬ ವರ್ಷ ಆಗಿದ್ರೂ ಬೆರೋಯದವರ ತರ ಏನು ಮಾಡಬೇಕು?
17 ಬೆರೋಯದವರಿಗೆ, ‘ನಮ್ಮ ಬಗ್ಗೆ ದೇವರ ವಾಕ್ಯದಲ್ಲಿ ಬರೀತಾರೆ ಮತ್ತು ಹೇಗೆ ಕಲಿಬೇಕು ಅನ್ನೋ ವಿಷ್ಯದಲ್ಲಿ ನಾವು ಬೇರೆಯವ್ರಿಗೆ ಮಾದರಿ ಆಗ್ತೀವಿ’ ಅನ್ನೋದು ಗೊತ್ತಿರಲಿಲ್ಲ. ಆದ್ರೆ ಅವರು ಏನು ಮಾಡಬೇಕಂತ ಪೌಲ ಅಂದ್ಕೊಂಡಿದ್ದನೋ ಮತ್ತು ಯೆಹೋವ ದೇವರು ಬಯಸಿದನೋ ಅದನ್ನೇ ಅವರು ಮಾಡಿದ್ರು. ನಾವು ಕೂಡ ಜನ್ರಿಗೆ ಬೈಬಲನ್ನ ಚೆನ್ನಾಗಿ ಪರೀಕ್ಷಿಸಿ ಅದರ ಮೇಲೆ ತಮಗಿರೋ ನಂಬಿಕೆಯನ್ನ ಇನ್ನೂ ಜಾಸ್ತಿ ಮಾಡ್ಕೊಳ್ಳೋಕೆ ಪ್ರೋತ್ಸಾಹಿಸಬೇಕು. ನಾವು ಈಗಾಗ್ಲೇ ಕ್ರೈಸ್ತರಾಗಿರೋದ್ರಿಂದ ಬೈಬಲ್ ಬಗ್ಗೆ ಇನ್ನೂ ಜಾಸ್ತಿ ಕಲಿಯೋದು ಬೇಕಾಗಿಲ್ಲ ಅಂತಾನಾ? ಇಲ್ಲ, ಯೆಹೋವ ದೇವರಿಂದ ಕಲಿತು ಅದನ್ನ ಪಾಲಿಸೋಕೆ ನಾವು ಯಾವಾಗ್ಲೂ ರೆಡಿ ಇರಬೇಕು. ಆಗ ಯೆಹೋವ ತನ್ನ ಇಷ್ಟದ ಪ್ರಕಾರ ನಮ್ಮನ್ನ ರೂಪಿಸೋಕೆ ಮತ್ತು ತರಬೇತಿ ಕೊಡೋಕೆ ಬಿಟ್ಕೊಡ್ತೀವಿ. (ಯೆಶಾ. 64:8) ಹೀಗೆ ನಾವು ಸೇವೆ ಮಾಡ್ತಾ ನಮ್ಮ ಸ್ವರ್ಗೀಯ ತಂದೆಯ ಪ್ರಯೋಜನಕ್ಕೆ ಬರ್ತೀವಿ, ಆತನೂ ನಮ್ಮನ್ನ ತುಂಬ ಮೆಚ್ಕೊಳ್ತಾನೆ.
18, 19. (ಎ) ಪೌಲ ಬೆರೋಯದಿಂದ ಯಾಕೆ ಹೋಗಿಬಿಟ್ಟ? (ಬಿ) ಅವನು ಹೇಗೆ ಛಲ ಬಿಡಲಿಲ್ಲ? (ಸಿ) ಇದಾದ ಮೇಲೆ ಪೌಲ ಎಲ್ಲಿ, ಯಾರಿಗೆ ಸಾರಿದ?
18 ಪೌಲ ಬೆರೋಯದಲ್ಲಿ ತುಂಬ ದಿನ ಇರಲಿಲ್ಲ. “ಬೆರೋಯದಲ್ಲೂ ಪೌಲ ದೇವ್ರ ಸಂದೇಶ ಸಾರುತ್ತಿದ್ದಾನೆ ಅಂತ ಥೆಸಲೊನೀಕದಲ್ಲಿದ್ದ ಯೆಹೂದ್ಯರಿಗೆ ಗೊತ್ತಾಯ್ತು. ಆಗ ಅವರು ಬೆರೋಯದ ಜನ್ರನ್ನ ಅವ್ರ ವಿರುದ್ಧ ಎತ್ತಿಕಟ್ಟೋಕೆ ಅಲ್ಲಿಗೂ ಬಂದ್ರು. ಆಗ ಸಹೋದರರು ತಕ್ಷಣ ಪೌಲನನ್ನ ಸಮುದ್ರ ತೀರಕ್ಕೆ ಕಳಿಸ್ಕೊಟ್ರು. ಆದ್ರೆ ಸೀಲ ಮತ್ತು ತಿಮೊತಿ ಅಲ್ಲೇ ಉಳ್ಕೊಂಡ್ರು. ಆದ್ರೆ ಪೌಲನ ಜೊತೆ ಇದ್ದ ಸಹೋದರರು ಅವನನ್ನ ಅಥೆನ್ಸ್ ತನಕ ಕರ್ಕೊಂಡು ಹೋದ್ರು. ಪೌಲ ಅವ್ರಿಗೆ ‘ಸಾಧ್ಯ ಆದಷ್ಟು ಬೇಗ ಸೀಲ ಮತ್ತು ತಿಮೊತಿಯನ್ನ ತನ್ನ ಹತ್ರ ಕಳಿಸಿ’ ಅಂತ ಹೇಳಿ ಹೋದನು. ಆಮೇಲೆ ಸಹೋದರರು ವಾಪಸ್ ಬಂದ್ರು.” (ಅ. ಕಾ. 17:13-15) ಥೆಸಲೊನೀಕದ ಆ ವಿರೋಧಿಗಳು ಅವ್ರ ಹಿಂದೆನೇ ಬಂದಿದ್ರು! ಪೌಲನನ್ನ ಥೆಸಲೊನೀಕದಿಂದ ಓಡಿಸಿ ಅವ್ರಿಗೆ ಸಮಾಧಾನ ಆಗಲಿಲ್ಲ, ಬೆರೋಯಕ್ಕೆ ಬಂದು ಅಲ್ಲಿನೂ ದೊಡ್ಡ ಗಲಾಟೆ ಮಾಡಬೇಕು ಅಂದ್ಕೊಂಡಿದ್ರು. ಆದ್ರೆ ಅದೇನೂ ನಡೀಲಿಲ್ಲ! ಸಾರೋಕೆ ತನಗೆ ಸಿಕ್ಕಿರೋ ಕ್ಷೇತ್ರ ತುಂಬ ದೊಡ್ಡದು ಅಂತ ಪೌಲನಿಗೆ ಗೊತ್ತಿತ್ತು. ಅದಕ್ಕೆ ಅವನು ಅಲ್ಲಿಂದ ಬೇರೆ ಕಡೆ ಸಾರೋಕೆ ಹೋದ. ಇವತ್ತೂ ಕೂಡ ನಮ್ಮ ಸಾರೋ ಕೆಲಸನ ನಿಲ್ಲಿಸೋಕೆ ವಿರೋಧಿಗಳೂ ಎಷ್ಟೇ ಪ್ರಯತ್ನ ಮಾಡಿದ್ರೂ ನಾವು ಸಾರೋದನ್ನ ನಿಲ್ಲಿಸೋದು ಬೇಡ!
19 ನಾವು ಧೈರ್ಯವಾಗಿ ಸಿಹಿಸುದ್ದಿ ಸಾರೋದು ಮತ್ತು ಜನ್ರಿಗೆ ಪವಿತ್ರಗ್ರಂಥದ ಬಗ್ಗೆ ವಿವರಿಸಿ ಅರ್ಥ ಮಾಡಿಸೋದು ತುಂಬಾ ಪ್ರಾಮುಖ್ಯ. ಇದನ್ನೇ ಪೌಲ ಥೆಸಲೊನೀಕ ಮತ್ತು ಬೆರೋಯದ ಯೆಹೂದಿಗಳಿಗೆ ಸಿಹಿಸುದ್ದಿ ಸಾರಿದಾಗ ಕಲಿತ. ನಾವು ಕೂಡ ಅದನ್ನೇ ಕಲಿಬೇಕು. ಇದಾದ ಮೇಲೆ ಪೌಲ ಅಥೆನ್ಸಿನ ಜನ್ರಿಗೆ ಸಾರಿದ. ಇಲ್ಲಿ ತನಕ ಸಿಕ್ಕಿದ ಜನ್ರ ತರ ಇವರು ಇರ್ಲಿಲ್ಲ, ಇವರ ಕತೆನೇ ಬೇರೆ. ಅಂಥದ್ದೇನಾಯ್ತು? ಇದ್ರ ಬಗ್ಗೆ ಮುಂದಿನ ಅಧ್ಯಾಯದಲ್ಲಿ ನೋಡೋಣ.
a ಒಬ್ಬ ಪಂಡಿತ ಹೇಳೋ ಪ್ರಕಾರ, ಆ ಕಾಲದಲ್ಲಿ “ಹೊಸ ರಾಜ ಅಥವಾ ರಾಜ್ಯ ಬರುತ್ತೆ, ಅದ್ರಲ್ಲೂ ಮುಖ್ಯವಾಗಿ ಈಗಿರೋ ಚಕ್ರವರ್ತಿಯನ್ನ ಸೋಲಿಸುತ್ತೆ” ಅನ್ನೋ ಭವಿಷ್ಯವನ್ನ ಯಾರೂ ಹೇಳಬಾರದು ಅಂತ ರೋಮಿನ ಚಕ್ರವರ್ತಿ ಆಜ್ಞೆ ಕೊಟ್ಟಿದ್ದ. ಅಪೊಸ್ತಲರು ಹೇಳಿದ್ದ ಸಂದೇಶವನ್ನ ತಪ್ಪಾಗಿ ವಿವರಿಸ್ತಾ ಆ ಆಜ್ಞೆಯನ್ನ ಅಪೊಸ್ತಲರು ಮುರಿದಿದ್ದಾರೆ ಅಂತ ಪೌಲನ ವಿರೋಧಿಗಳು ಆರೋಪ ಹಾಕಿದ್ದಿರಬಹುದು. “ ಅಪೊಸ್ತಲರ ಕಾರ್ಯ ಪುಸ್ತಕದಲ್ಲಿರೋ ರೋಮಿನ ಚಕ್ರವರ್ತಿಗಳು” ಅನ್ನೋ ಚೌಕ ನೋಡಿ.