ಅಧ್ಯಾಯ ಹದಿನಾರು
ನಿಮ್ಮ ಕುಟುಂಬಕ್ಕಾಗಿ ಒಂದು ಚಿರಸ್ಥಾಯಿಯಾದ ಭವಿಷ್ಯತ್ತನ್ನು ದೊರಕಿಸಿಕೊಳ್ಳಿರಿ
1. ಕುಟುಂಬ ಏರ್ಪಾಡಿಗಾಗಿ ಯೆಹೋವನ ಉದ್ದೇಶವೇನಾಗಿತ್ತು?
ಯೆಹೋವ ದೇವರು ಆದಾಮ ಮತ್ತು ಹವ್ವರನ್ನು ವಿವಾಹದಲ್ಲಿ ಐಕ್ಯಗೊಳಿಸಿದಾಗ, ದಾಖಲೆಯಾಗಿರುವ ಅತ್ಯಾರಂಭದ ಹೀಬ್ರು ಕವಿತೆಯನ್ನು ನುಡಿಯುವ ಮೂಲಕ ಆದಾಮನು ತನ್ನ ಸಂತೋಷವನ್ನು ವ್ಯಕ್ತಪಡಿಸಿದನು. (ಆದಿಕಾಂಡ 2:22, 23) ಆದರೂ, ತನ್ನ ಮಾನವ ಮಕ್ಕಳಿಗೆ ಕೇವಲ ಸುಖಾನುಭವವನ್ನು ತರುವುದಕ್ಕಿಂತಲೂ ಹೆಚ್ಚನ್ನು ನಿರ್ಮಾಣಿಕನು ಸಂಕಲ್ಪಿಸಿದ್ದನು. ವಿವಾಹಿತ ದಂಪತಿಗಳು ಮತ್ತು ಕುಟುಂಬಗಳು ತನ್ನ ಚಿತ್ತವನ್ನು ಮಾಡುವಂತೆ ಆತನು ಬಯಸಿದ್ದನು. ಮೊದಲ ಜೊತೆಗೆ ಅವನಂದದ್ದು: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ.” (ಆದಿಕಾಂಡ 1:28) ಅದು ಎಂತಹ ಮಹಾ, ಪ್ರತಿಫಲದಾಯಕ ನೇಮಕವಾಗಿತ್ತು! ಆದಾಮ, ಹವ್ವ, ಮತ್ತು ಅವರ ಭವಿಷ್ಯದ ಮಕ್ಕಳು ಯೆಹೋವನ ಚಿತ್ತವನ್ನು ಪೂರ್ಣ ವಿಧೇಯತೆಯಿಂದ ಮಾಡಿದ್ದುದಾದರೆ, ಅವರೆಷ್ಟು ಸಂತೋಷದಲ್ಲಿರುತ್ತಿದ್ದರು!
2, 3. ಇಂದು ಕುಟುಂಬಗಳು ಅತ್ಯಂತ ಮಹಾ ಸಂತೋಷವನ್ನು ಹೇಗೆ ಕಂಡುಕೊಳ್ಳಬಲ್ಲವು?
2 ಇಂದು ಸಹ ಕುಟುಂಬಗಳು ದೇವರ ಚಿತ್ತವನ್ನು ಮಾಡುವುದಕ್ಕೆ ಒಂದುಗೂಡಿ ಕಾರ್ಯನಡೆಸುವಾಗ, ಅತ್ಯಂತ ಸಂತೋಷಿತವಾಗುತ್ತವೆ. ಅಪೊಸ್ತಲ ಪೌಲನು ಬರೆದುದು: “ದಿವ್ಯ ಭಕ್ತಿಯಾದರೊ ಈಗಿನ ಮತ್ತು ಬರಲಿರುವ ಜೀವಿತದ ವಾಗ್ದಾನವನ್ನು ಹಿಡಿದಿರುವುದರಿಂದ, ಸಕಲ ವಿಷಯಗಳಿಗೆ ಪ್ರಯೋಜನಕರವಾಗಿದೆ.” (1 ತಿಮೊಥೆಯ 4:8, NW) ದಿವ್ಯ ಭಕ್ತಿಯೊಂದಿಗೆ ಜೀವಿಸುವ ಮತ್ತು ಬೈಬಲಿನಲ್ಲಿ ಒಳಗೊಂಡಿರುವ ಯೆಹೋವನ ಮಾರ್ಗದರ್ಶನವನ್ನು ಅನುಸರಿಸುವ ಒಂದು ಕುಟುಂಬವು, “ಈಗಿನ . . . ಜೀವಿತ”ದಲ್ಲಿ ಸಂತೋಷವನ್ನು ಪಡೆಯುವುದು. (ಕೀರ್ತನೆ 1:1-3; 119:105; 2 ತಿಮೊಥೆಯ 3:16) ಕುಟುಂಬದ ಒಬ್ಬನೇ ಒಬ್ಬ ಸದಸ್ಯನು ಬೈಬಲಿನ ಮೂಲತತ್ವಗಳನ್ನು ಅನ್ವಯಿಸುವುದಾದರೂ, ಸನ್ನಿವೇಶವು ಯಾರೂ ಅನುಸರಿಸದೆ ಇರುವುದಕ್ಕಿಂತ ಹೆಚ್ಚು ಉತ್ತಮವಾಗಿರುತ್ತದೆ.
3 ಕುಟುಂಬ ಸಂತೋಷಕ್ಕೆ ನೆರವಾಗುವ ಅನೇಕ ಬೈಬಲ್ ಮೂಲತತ್ವಗಳನ್ನು ಈ ಪುಸ್ತಕವು ಚರ್ಚಿಸಿದೆ. ಅವುಗಳಲ್ಲಿ ಕೆಲವು ಮೂಲತತ್ವಗಳು ಇಡೀ ಪುಸ್ತಕದಲ್ಲಿ ಪದೇ ಪದೇ ಕಂಡುಬರುವುದನ್ನು ಪ್ರಾಯಶಃ ನೀವು ಗಮನಿಸಿದ್ದೀರಿ. ಯಾಕೆ? ಯಾಕಂದರೆ ಕುಟುಂಬ ಜೀವನದ ವಿವಿಧ ಅಂಶಗಳಲ್ಲಿ ಎಲ್ಲರ ಒಳಿತಿಗಾಗಿ ಕಾರ್ಯನಡೆಸುವ ಪ್ರಬಲ ಸತ್ಯಗಳನ್ನು ಅವು ಪ್ರತಿನಿಧಿಸುತ್ತವೆ. ಬೈಬಲಿನ ಈ ಮೂಲತತ್ವಗಳನ್ನು ಅನ್ವಯಿಸುವುದಕ್ಕೆ ಪ್ರಯಾಸಪಡುವ ಒಂದು ಕುಟುಂಬವು, ದಿವ್ಯ ಭಕ್ತಿಯು ನಿಜವಾಗಿ “ಈಗಿನ ಜೀವಿತದ ವಾಗ್ದಾನವನ್ನು ಹಿಡಿದಿರು”ತ್ತದಂದು ಕಂಡುಕೊಳ್ಳುತ್ತದೆ. ಆ ಪ್ರಾಮುಖ್ಯ ಮೂಲತತ್ವಗಳಲ್ಲಿ ನಾಲ್ಕರ ಕಡೆಗೆ ನಾವು ಪುನಃ ನೋಡೋಣ.
ಆತ್ಮಸಂಯಮದ ಮೌಲ್ಯ
4. ಒಂದು ವಿವಾಹದಲ್ಲಿ ಆತ್ಮಸಂಯಮವು ಏಕೆ ಅತ್ಯಾವಶ್ಯಕ?
4 ಅರಸನಾದ ಸೊಲೊಮೋನನು ಹೇಳಿದ್ದು: “ಆತ್ಮವನ್ನು ಸ್ವಾಧೀನಮಾಡಿಕೊಳ್ಳದವನು ಗೋಡೆ ಬಿದ್ದ ಹಾಳೂರಿಗೆ ಸಮಾನ.” (ಜ್ಞಾನೋಕ್ತಿ 25:28; 29:11) ಒಂದು ಸಂತೋಷದ ವಿವಾಹವನ್ನು ಬಯಸುವವರು ‘ಆತ್ಮ ನಿಯಂತ್ರಣವನ್ನು,’ ಆತ್ಮಸಂಯಮವನ್ನು ಅಭ್ಯಾಸಿಸುವುದು ಅತ್ಯಾವಶ್ಯಕ. ಕ್ರೋಧ ಅಥವಾ ಅನೈತಿಕ ಕಾಮಾಭಿಲಾಷೆಯಂತಹ ನಾಶಕಾರಕ ಭಾವಾವೇಶಗಳಿಗೆ ಒಪ್ಪಿಸಿಕೊಡುವುದು, ದುರಸ್ತಿಗೆ—ಎಂದಾದರೂ ಮಾಡಸಾಧ್ಯವಿರುವಲ್ಲಿ—ವರುಷಗಳು ತಗಲುವ ಹಾನಿಯನ್ನು ಆಗಿಸುವುದು.
5. ಒಬ್ಬ ಅಪರಿಪೂರ್ಣ ಮಾನವನು ಆತ್ಮಸಂಯಮವನ್ನು ಹೇಗೆ ಬೆಳೆಸಿಕೊಳ್ಳಬಲ್ಲನು, ಮತ್ತು ಯಾವ ಪ್ರಯೋಜನಗಳೊಂದಿಗೆ?
5 ನಿಶ್ಚಯವಾಗಿಯೂ ಆದಾಮನ ಯಾವ ಸಂತತಿಯವನೂ ತನ್ನ ಅಪರಿಪೂರ್ಣ ಶರೀರವನ್ನು ಪೂರ್ಣವಾಗಿ ಸ್ವಾಧೀನದಲ್ಲಿಡಶಕ್ತನಲ್ಲ. (ರೋಮಾಪುರ 7:21, 22) ಆದರೂ, ಆತ್ಮಸಂಯಮವು ಆತ್ಮದ ಫಲಗಳಲ್ಲಿ ಒಂದಾಗಿದೆ. (ಗಲಾತ್ಯ 5:22, 23) ಆದಕಾರಣ, ನಾವು ಈ ಗುಣಕ್ಕಾಗಿ ಪ್ರಾರ್ಥಿಸುವುದಾದರೆ, ಶಾಸ್ತ್ರಗಳಲ್ಲಿ ಕಂಡುಬರುವ ಸೂಕ್ತವಾದ ಸಲಹೆಯನ್ನು ನಾವು ಅನ್ವಯಿಸುವುದಾದರೆ, ಮತ್ತು ಅದನ್ನು ಪ್ರದರ್ಶಿಸುವ ಇತರರೊಂದಿಗೆ ನಾವು ಸಾಹಚರ್ಯವನ್ನಿಟ್ಟುಕೊಂಡು ಅದನ್ನು ಪ್ರದರ್ಶಿಸದವರನ್ನು ವರ್ಜಿಸುವುದಾದರೆ, ದೇವರಾತ್ಮವು ನಮ್ಮಲ್ಲಿ ಆತ್ಮಸಂಯಮವನ್ನು ಉತ್ಪಾದಿಸುವುದು. (ಕೀರ್ತನೆ 119:100, 101, 130; ಜ್ಞಾನೋಕ್ತಿ 13:20; 1 ಪೇತ್ರ 4:7) ಅಂತಹ ಒಂದು ಮಾರ್ಗವು, ನಾವು ಶೋಧನೆಗೆ ಗುರಿಯಾದಾಗಲೂ, “ಜಾರತ್ವಕ್ಕೆ ದೂರವಾಗಿ ಓಡಿ”ಹೋಗುವುದಕ್ಕೆ ಸಹಾಯ ಮಾಡುವುದು. (1 ಕೊರಿಂಥ 6:18) ನಾವು ಹಿಂಸಾಚಾರವನ್ನು ತಳ್ಳಿಹಾಕಿ, ಮದ್ಯರೋಗಾವಸ್ಥೆಯನ್ನು ವರ್ಜಿಸುವೆವು ಅಥವಾ ಜಯಿಸುವೆವು. ಮತ್ತು ಕೆರಳಿಕೆಗಳೊಂದಿಗೆ ಮತ್ತು ಕಷ್ಟದ ಸನ್ನಿವೇಶಗಳೊಂದಿಗೆ ಹೆಚ್ಚು ಶಾಂತಮನಸ್ಸಿನಿಂದ ವ್ಯವಹರಿಸುವೆವು. ನಾವೆಲ್ಲರೂ—ಮಕ್ಕಳೂ ಸೇರಿ—ದೇವರಾತ್ಮದ ಈ ಮಹತ್ವವುಳ್ಳ ಫಲವನ್ನು ಬೆಳೆಸಿಕೊಳ್ಳಲು ಕಲಿಯುವಂತಾಗಲಿ.—ಕೀರ್ತನೆ 119:1, 2.
ತಲೆತನದ ಕುರಿತಾಗಿ ಒಂದು ಯೋಗ್ಯ ನೋಟ
6. (ಎ) ದೈವಿಕವಾಗಿ ಸ್ಥಾಪಿಸಲ್ಪಟ್ಟ ತಲೆತನದ ಏರ್ಪಾಡು ಯಾವುದು? (ಬಿ) ತಲೆತನವು ತನ್ನ ಕುಟುಂಬಕ್ಕೆ ಸಂತೋಷವನ್ನು ತರಬೇಕಾದರೆ ಒಬ್ಬ ಪುರುಷನು ಏನನ್ನು ನೆನಪಿನಲ್ಲಿಡಬೇಕು?
6 ಎರಡನೆಯ ಪ್ರಾಮುಖ್ಯ ಮೂಲತತ್ವವು ತಲೆತನದ ಅಂಗೀಕಾರವಾಗಿದೆ. ಪೌಲನು ಹೀಗೆ ಹೇಳಿದಾಗ ವಿಷಯಗಳ ಯೋಗ್ಯವಾದ ಕ್ರಮವನ್ನು ವರ್ಣಿಸಿದನು: “ಒಂದು ಸಂಗತಿಯನ್ನು ನೀವು ತಿಳಿಯಬೇಕೆಂದು ನನ್ನ ಇಷ್ಟ; ಅದೇನಂದರೆ ಪ್ರತಿ ಪುರುಷನಿಗೂ ಕ್ರಿಸ್ತನು ತಲೆ, ಸ್ತ್ರೀಗೆ ಪುರುಷನು ತಲೆ, ಕ್ರಿಸ್ತನಿಗೆ ದೇವರು ತಲೆ ಆಗಿದ್ದಾನೆ.” (1 ಕೊರಿಂಥ 11:3) ಇದರ ಅರ್ಥವೇನಂದರೆ, ಕುಟುಂಬದಲ್ಲಿ ಪುರುಷನು ನಾಯಕತ್ವ ವಹಿಸುತ್ತಾನೆ, ಅವನ ಹೆಂಡತಿಯು ನಿಷ್ಠೆಯಿಂದ ಬೆಂಬಲಿಸುತ್ತಾಳೆ, ಮತ್ತು ಮಕ್ಕಳು ತಮ್ಮ ಹೆತ್ತವರಿಗೆ ಅಧೀನರಾಗುತ್ತಾರೆ. (ಎಫೆಸ 5:22-25, 28-33; 6:1-4) ಆದರೂ, ಅದನ್ನು ಒಂದು ಯೋಗ್ಯ ರೀತಿಯಲ್ಲಿ ನಿರ್ವಹಿಸಿದಾಗ ಮಾತ್ರ ತಲೆತನವು ಸಂತೋಷಕ್ಕೆ ನಡೆಸುತ್ತದೆ ಎಂಬುದನ್ನು ಗಮನಿಸಿರಿ. ದಿವ್ಯ ಭಕ್ತಿಯಲ್ಲಿ ಜೀವಿಸುವ ಗಂಡಂದಿರಿಗೆ ತಲೆತನವು ನಿರಂಕುಶ ಪ್ರಭುತ್ವವಲ್ಲವೆಂದು ತಿಳಿದಿದೆ. ತಮ್ಮ ತಲೆಯಾದ ಯೇಸುವನ್ನು ಅವರು ಅನುಕರಿಸುತ್ತಾರೆ. ಯೇಸು ‘ಎಲ್ಲಾದರ ಮೇಲೆ ಶಿರಸ್ಸಾಗಿ’ ಇರಲಿದ್ದರೂ, ಅವನು “ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆ ಮಾಡುವದ”ಕ್ಕೆ ಬಂದನು. (ಎಫೆಸ 1:22; ಮತ್ತಾಯ 20:28) ಅದೇ ರೀತಿಯಲ್ಲಿ, ಒಬ್ಬ ಕ್ರೈಸ್ತ ಪುರುಷನು ತಲೆತನವನ್ನು, ತನ್ನ ಪ್ರಯೋಜನಕ್ಕಾಗಿ ಅಲ್ಲ, ತನ್ನ ಹೆಂಡತಿ ಮತ್ತು ಮಕ್ಕಳ ಹಿತಾಸಕ್ತಿಗಳ ಪರಾಮರಿಕೆಗಾಗಿ ನಡೆಸುತ್ತಾನೆ.—1 ಕೊರಿಂಥ 13:4, 5.
7. ಯಾವ ಶಾಸ್ತ್ರೀಯ ಮೂಲತತ್ವಗಳು ಕುಟುಂಬದಲ್ಲಿ ತನ್ನ ದೈವನೇಮಿತ ಪಾತ್ರವನ್ನು ನೆರವೇರಿಸಲು ಹೆಂಡತಿಗೆ ಸಹಾಯ ಮಾಡುವವು?
7 ದಿವ್ಯ ಭಕ್ತಿಯಲ್ಲಿ ಜೀವಿಸುವ ಹೆಂಡತಿಯಂತೂ, ತನ್ನ ಗಂಡನೊಂದಿಗೆ ಸ್ಪರ್ಧಿಸಲು ಅಥವಾ ಅವನ ಮೇಲೆ ಅಧಿಕಾರ ನಡೆಸಲು ಪ್ರಯತ್ನಿಸುವುದಿಲ್ಲ. ಅವನಿಗೆ ಬೆಂಬಲಿಗಳಾಗಿರಲು ಮತ್ತು ಅವನೊಂದಿಗೆ ಸಹಕರಿಸಲು ಅವಳು ಸಂತೋಷಪಡುತ್ತಾಳೆ. ಬೈಬಲು ಕೆಲವು ಸಲ ಹೆಂಡತಿಯ ಕುರಿತು ಅವಳು ತನ್ನ ಗಂಡನ “ಸ್ವಾಮ್ಯದ” ಕೆಳಗೆ ಇರುವವಳಾಗಿ ಮಾತಾಡುತ್ತಾ, ಅವನು ಅವಳ ತಲೆ ಎಂಬುದನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ. (ಆದಿಕಾಂಡ 20:3, NW) ವಿವಾಹದ ಮೂಲಕ ಅವಳು “ನ್ಯಾಯದ ಪ್ರಕಾರ ಅವನಿಗೆ ಬದ್ಧಳಾಗಿರುವಳು.” (ರೋಮಾಪುರ 7:2) ಅದೇ ಸಮಯದಲ್ಲಿ, ಬೈಬಲು ಅವಳನ್ನು “ಸಹಕಾರಿಣಿ” ಅಥವಾ ಒಂದು “ಪರಿಪೂರಕ”ಳು ಎಂದು ಕರೆಯುತ್ತದೆ. (ಆದಿಕಾಂಡ 2:20, NW) ತನ್ನ ಗಂಡನಲ್ಲಿ ನ್ಯೂನವಾಗಿರುವ ಗುಣಗಳನ್ನು ಮತ್ತು ಸಾಮರ್ಥ್ಯಗಳನ್ನು ಅವಳು ಒದಗಿಸಿ, ಅವನಿಗೆ ಬೇಕಾದ ಬೆಂಬಲವನ್ನು ನೀಡುತ್ತಾಳೆ. (ಜ್ಞಾನೋಕ್ತಿ 31:10-31) ಹೆಂಡತಿಯು ತನ್ನ ಸಂಗಾತಿಯೊಂದಿಗೆ ಜೊತೆಜೊತೆಯಾಗಿ ಕೆಲಸಮಾಡುವ “ಸಹಭಾಗಿ” ಎಂದೂ ಬೈಬಲು ಹೇಳುತ್ತದೆ. (ಮಲಾಕಿಯ 2:14) ಈ ಶಾಸ್ತ್ರೀಯ ಮೂಲತತ್ವಗಳು ಒಬ್ಬ ಗಂಡ ಮತ್ತು ಹೆಂಡತಿಗೆ, ತಮ್ಮ ಪರಸ್ಪರ ಸ್ಥಾನವನ್ನು ತಿಳಿದುಕೊಳ್ಳುವುದಕ್ಕೆ ಮತ್ತು ಯೋಗ್ಯ ಗೌರವ ಮತ್ತು ಆದರದಿಂದ ಒಬ್ಬರನ್ನೊಬ್ಬರು ಉಪಚರಿಸುವುದಕ್ಕೆ ಸಹಾಯ ಮಾಡುತ್ತವೆ.
“ಕಿವಿಗೊಡುವುದರಲ್ಲಿ ತೀವ್ರವಾಗಿ” ಇರಿ
8, 9. ಕುಟುಂಬದಲ್ಲಿರುವವರೆಲ್ಲರಿಗೆ, ತಮ್ಮ ಸಂವಾದದ ಕೌಶಲಗಳನ್ನು ಉತ್ತಮಗೊಳಿಸಲು ಸಹಾಯ ಮಾಡುವ ಕೆಲವು ಮೂಲತತ್ವಗಳನ್ನು ವಿವರಿಸಿರಿ.
8 ಸಂವಾದ ಮಾಡುವ ಅಗತ್ಯವನ್ನು ಪದೇ ಪದೇ ಈ ಪುಸ್ತಕದಲ್ಲಿ ಒತ್ತಿಹೇಳಲಾಗಿದೆ. ಯಾಕೆ? ಯಾಕಂದರೆ ಜನರು ಇತರರೊಂದಿಗೆ ಮಾತಾಡುವಾಗ ಮತ್ತು ನಿಜವಾಗಿಯೂ ಪರಸ್ಪರವಾಗಿ ಕಿವಿಗೊಡುವಾಗ, ಸಮಸ್ಯೆಗಳನ್ನು ಪರಿಹರಿಸುವುದು ಹೆಚ್ಚು ಸುಲಭವಾಗಿರುತ್ತದೆ. ಸಂವಾದವು ಒಂದು ಇದ್ದಾರಿಯ ರಸ್ತೆಯೆಂಬುದಾಗಿ ಪದೇ ಪದೇ ಒತ್ತಿ ಹೇಳಲಾಗಿತ್ತು. ಶಿಷ್ಯ ಯಾಕೋಬನು ಅದನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿದ್ದಾನೆ: “ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ.”—ಯಾಕೋಬ 1:19.
9 ನಾವು ಹೇಗೆ ಮಾತಾಡುತ್ತೇವೆಂಬುದರ ಕುರಿತು ಜಾಗ್ರತೆಯಿಂದಿರುವುದೂ ಪ್ರಾಮುಖ್ಯವಾಗಿದೆ. ದುಡುಕಿನ, ತಕರಾರಿನ, ಅಥವಾ ಕಟು ಟೀಕಾತ್ಮಕ ಮಾತುಗಳು ಯಶ್ವಸಿಯಾದ ಸಂವಾದವನ್ನು ಸಂಯೋಜಿಸುವುದಿಲ್ಲ. (ಜ್ಞಾನೋಕ್ತಿ 15:1; 21:9; 29:11, 20) ನಾವು ಸರಿಯಾದುದನ್ನು ಹೇಳುವಾಗಲೂ, ಅದನ್ನು ಕಠಿನವಾಗಿ, ಜಂಬದಿಂದ, ಅಥವಾ ಭಾವಶೂನ್ಯತೆಯಿಂದ ಹೇಳುವುದಾದರೆ, ಅದು ಒಳ್ಳೇದನ್ನು ಮಾಡುವುದಕ್ಕಿಂತ ಹೆಚ್ಚು ಹಾನಿಮಾಡುವುದು ಸಂಭವನೀಯ. ನಮ್ಮ ಮಾತು ರುಚಿಕರವೂ “ರಸವತ್ತಾಗಿಯೂ” ಇರಬೇಕು. (ಕೊಲೊಸ್ಸೆ 4:6) ನಮ್ಮ ನುಡಿಗಳು “ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣು”ಗಳಂತಿರಬೇಕು. (ಜ್ಞಾನೋಕ್ತಿ 25:11) ಚೆನ್ನಾಗಿ ಸಂವಾದ ಮಾಡಲು ಕಲಿಯುವ ಕುಟುಂಬಗಳು ಸಂತೋಷವನ್ನು ಗಳಿಸುವ ಕಡೆಗೆ ಒಂದು ದೊಡ್ಡ ಹೆಜ್ಜೆಯನ್ನು ತೆಗೆದುಕೊಂಡಿವೆ.
ಪ್ರೀತಿಯ ಪ್ರಾಮುಖ್ಯ ಪಾತ್ರ
10. ವಿವಾಹದಲ್ಲಿ ಯಾವ ವಿಧದ ಪ್ರೀತಿಯು ಅತ್ಯಾವಶ್ಯಕ?
10 ಈ ಪುಸ್ತಕದಲ್ಲಿ “ಪ್ರೀತಿ” ಎಂಬ ಶಬ್ದವು ಪದೇ ಪದೇ ತೋರಿಬರುತ್ತದೆ. ಪ್ರೀತಿಯ ಯಾವ ವಿಧವನ್ನು ಪ್ರಧಾನವಾಗಿ ಸೂಚಿಸಲಾಗಿದೆಯೆಂದು ನಿಮಗೆ ನೆನಪಿದೆಯೆ? ಪ್ರಣಯ ಪ್ರೀತಿ (ಗ್ರೀಕ್, ಈರೊಸ್) ವಿವಾಹದಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆಂಬುದು ನಿಜ, ಮತ್ತು ಯಶ್ವಸಿಯಾದ ವಿವಾಹಗಳಲ್ಲಿ, ಒಬ್ಬ ಗಂಡ ಮತ್ತು ಒಬ್ಬ ಹೆಂಡತಿಯ ಮಧ್ಯೆ ಆಳವಾದ ಮಮತೆ ಮತ್ತು ಗೆಳೆತನ (ಗ್ರೀಕ್, ಫಿಲೀಯ)ವು ಬೆಳೆಯುತ್ತದೆ. ಆದರೆ ಗ್ರೀಕ್ ಪದವಾದ ಅಗಾಪೆಯಿಂದ ಪ್ರತಿನಿಧಿಸಲ್ಪಡುವ ಪ್ರೀತಿಯು ಅದಕ್ಕಿಂತಲೂ ಹೆಚ್ಚು ಮಹತ್ವದ್ದು. ಯೆಹೋವನಿಗಾಗಿ, ಯೇಸುವಿಗಾಗಿ, ಮತ್ತು ನಮ್ಮ ನೆರೆಯವನಿಗಾಗಿ ನಾವು ಬೆಳೆಸಿಕೊಳ್ಳುವ ಪ್ರೀತಿಯು ಇದೇ. (ಮತ್ತಾಯ 22:37-39) ಯೆಹೋವನು ಮಾನವಕುಲದ ಕಡೆಗೆ ವ್ಯಕ್ತಪಡಿಸುವ ಪ್ರೀತಿಯು ಇದಾಗಿದೆ. (ಯೋಹಾನ 3:16) ಅದೇ ವಿಧದ ಪ್ರೀತಿಯನ್ನು ನಾವು ನಮ್ಮ ವಿವಾಹ ಸಂಗಾತಿಗಾಗಿ ಮತ್ತು ಮಕ್ಕಳಿಗಾಗಿ ತೋರಿಸಬಲ್ಲವರಾಗಿರುವುದು ಎಷ್ಟು ಅದ್ಭುತಕರವಾಗಿದೆ!—1 ಯೋಹಾನ 4:19.
11. ಒಂದು ವಿವಾಹದ ಒಳಿತಿಗಾಗಿ ಪ್ರೀತಿಯು ಹೇಗೆ ಕಾರ್ಯನಡೆಸುತ್ತದೆ?
11 ವಿವಾಹದಲ್ಲಿ ಈ ಉದಾತ್ತ ಪ್ರೀತಿಯು ನಿಜವಾಗಿಯೂ “ಐಕ್ಯದ ಒಂದು ಪರಿಪೂರ್ಣ ಬಂಧ”ವಾಗಿದೆ. (ಕೊಲೊಸ್ಸೆ 3:14, NW) ಅದು ಒಬ್ಬ ದಂಪತಿಗಳನ್ನು ಒಂದಾಗಿ ಬಂಧಿಸಿ, ತಾವು ಒಬ್ಬರಿಗೊಬ್ಬರು ಮತ್ತು ತಮ್ಮ ಮಕ್ಕಳಿಗಾಗಿ ಅತ್ಯುತ್ತಮವಾದುದನ್ನು ಮಾಡಬಯಸುವಂತೆ ಮಾಡುತ್ತದೆ. ಕುಟುಂಬಗಳು ಕಷ್ಟದ ಸನ್ನಿವೇಶಗಳನ್ನು ಎದುರಿಸುವಾಗ, ವಿಷಯಗಳನ್ನು ಐಕ್ಯದಿಂದ ನಿರ್ವಹಿಸುವುದಕ್ಕೆ ಪ್ರೀತಿಯು ಅವರಿಗೆ ಸಹಾಯ ಮಾಡುತ್ತದೆ. ಒಬ್ಬ ದಂಪತಿಗಳಿಗೆ ವಯಸ್ಸಾಗುತ್ತಾ ಹೋಗುವಾಗ, ಒಬ್ಬರನ್ನೊಬ್ಬರು ಬೆಂಬಲಿಸುವುದಕ್ಕೆ ಮತ್ತು ಗಣ್ಯಮಾಡುತ್ತಾ ಮಂದುವರಿಯುವುದಕ್ಕೆ ಪ್ರೀತಿಯು ಸಹಾಯ ಮಾಡುತ್ತದೆ. “ಪ್ರೀತಿ . . . ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ. . . . ಎಲ್ಲವನ್ನೂ ಅಡಗಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ. ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ಸಹಿಸಿಕೊಳ್ಳುತ್ತದೆ. ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ.”—1 ಕೊರಿಂಥ 13:4-8.
12. ವಿವಾಹ ದಂಪತಿಗಳಲ್ಲಿರುವ ದೇವರ ಮೇಲಣ ಪ್ರೀತಿಯು ಅವರ ವಿವಾಹವನ್ನು ಏಕೆ ಬಲಪಡಿಸುತ್ತದೆ?
12 ವಿವಾಹ ಬಂಧವು ವಿವಾಹ ಸಂಗಾತಿಗಳ ನಡುವಣ ಪ್ರೀತಿಯಿಂದ ಮಾತ್ರವಲ್ಲ, ಪ್ರಾಮುಖ್ಯವಾಗಿ ಯೆಹೋವನ ಮೇಲಣ ಪ್ರೀತಿಯಿಂದ ಬಿಗಿಯಾಗಿ ಬಂಧಿಸಲ್ಪಡುವಾಗ ವಿಶೇಷವಾಗಿ ಬಲವಾಗಿರುತ್ತದೆ. (ಪ್ರಸಂಗಿ 4:9-12) ಯಾಕೆ? ಒಳ್ಳೇದು, ಅಪೊಸ್ತಲ ಯೋಹಾನನು ಬರೆದುದು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ.” (1 ಯೋಹಾನ 5:3) ಹೀಗೆ, ಒಬ್ಬ ದಂಪತಿಗಳು ತಮ್ಮ ಮಕ್ಕಳನ್ನು ದಿವ್ಯ ಭಕ್ತಿಯಲ್ಲಿ ತರಬೇತು ಮಾಡುವುದು, ತಾವು ಅವರನ್ನು ಆಳವಾಗಿ ಪ್ರೀತಿಸುವುದರಿಂದ ಮಾತ್ರವಲ್ಲ, ಇದು ಯೆಹೋವನ ಆಜ್ಞೆಯಾಗಿರುವ ಕಾರಣದಿಂದಲೂ ಆಗಿದೆ. (ಧರ್ಮೋಪದೇಶಕಾಂಡ 6:6, 7) ಅವರು ಅನೈತಿಕತೆಯನ್ನು, ಒಬ್ಬರನ್ನೊಬ್ಬರು ಪ್ರೀತಿಸುವ ಕಾರಣದಿಂದಾಗಿ ಮಾತ್ರವಲ್ಲ, “ಜಾರರಿಗೂ ವ್ಯಭಿಚಾರಿಗಳಿಗೂ ನ್ಯಾಯತೀರಿಸು”ವವನಾದ ಯೆಹೋವನನ್ನು ಪ್ರೀತಿಸುವ ಮುಖ್ಯ ಕಾರಣದಿಂದಾಗಿಯೂ ವರ್ಜಿಸಬೇಕು. (ಇಬ್ರಿಯ 13:4) ವಿವಾಹದ ಒಬ್ಬ ಸಹಭಾಗಿಯು ತೀವ್ರ ಸಮಸ್ಯೆಗಳನ್ನು ಉಂಟುಮಾಡುವುದಾದರೂ, ಯೆಹೋವನಿಗಾಗಿರುವ ಪ್ರೀತಿಯು ಆ ಇನ್ನೊಬ್ಬ ಸಂಗಾತಿಯನ್ನು, ಬೈಬಲ್ ಮೂಲತತ್ವಗಳನ್ನು ಅನುಸರಿಸುತ್ತಾ ಮುಂದುವರಿಯುವಂತೆ ಪ್ರೇರಿಸುವುದು. ಯಾವ ಕುಟುಂಬದಲ್ಲಿ ಒಬ್ಬರಿಗೊಬ್ಬರಿಗಿರುವ ಪ್ರೀತಿಯು ಯೆಹೋವನ ಮೇಲಣ ಪ್ರೀತಿಯಿಂದ ಬಿಗಿಯಾಗಿ ಬಂಧಿಸಲ್ಪಡುತ್ತದೊ ಅವು ಧನ್ಯವೇ ಸರಿ!
ದೇವರ ಚಿತ್ತವನ್ನು ಮಾಡುವ ಕುಟುಂಬ
13. ದೇವರ ಚಿತ್ತವನ್ನು ಮಾಡುವ ದೃಢನಿಶ್ಚಯವು, ನಿಜವಾಗಿ ಮಹತ್ವವಾದ ವಿಷಯಗಳ ಮೇಲೆ ಕೇಂದ್ರೀಕರಿಸುವಂತೆ ವ್ಯಕ್ತಿಗಳಿಗೆ ಹೇಗೆ ಸಹಾಯ ಮಾಡುವುದು?
13 ಒಬ್ಬ ಕ್ರೈಸ್ತನ ಇಡೀ ಜೀವನವು ದೇವರ ಚಿತ್ತವನ್ನು ಮಾಡುವುದರ ಮೇಲೆ ಕೇಂದ್ರಿತವಾಗಿದೆ. (ಕೀರ್ತನೆ 143:10) ದಿವ್ಯ ಭಕ್ತಿಯ ನಿಜವಾದ ಅರ್ಥವು ಇದೇ ಆಗಿದೆ. ದೇವರ ಚಿತ್ತವನ್ನು ಮಾಡುವುದು ಕುಟುಂಬಗಳಿಗೆ ತಮ್ಮ ದೃಷ್ಟಿಯನ್ನು ನಿಜವಾಗಿ ಮಹತ್ವವಾದ ವಿಷಯಗಳ ಮೇಲೆ ಕೇಂದ್ರೀಕರಿಸುವಂತೆ ಸಹಾಯ ಮಾಡುತ್ತದೆ. (ಫಿಲಿಪ್ಪಿ 1:9, 10) ಉದಾಹರಣೆಗಾಗಿ, ಯೇಸು ಎಚ್ಚರಿಸಿದ್ದು: “ಮಗನಿಗೂ ತಂದೆಗೂ, ಮಗಳಿಗೂ ತಾಯಿಗೂ, ಸೊಸೆಗೂ ಅತ್ತೆಗೂ ಭೇದ ಹುಟ್ಟಿಸುವದಕ್ಕೆ ಬಂದೆನು. ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ [“ಮನೆವಾರ್ತೆಯವರೇ,” NW] ವೈರಿಗಳಾಗುವರು.” (ಮತ್ತಾಯ 10:35, 36) ಯೇಸುವಿನ ಎಚ್ಚರಿಕೆಗೆ ಸರಿಯಾಗಿ, ಆತನ ಹಿಂಬಾಲಕರಲ್ಲಿ ಅನೇಕರು ಕುಟುಂಬ ಸದಸ್ಯರಿಂದ ಹಿಂಸಿಸಲ್ಪಟ್ಟಿದ್ದಾರೆ. ಎಂತಹ ವಿಷಾದಕರವಾದ, ದುಃಖಕರವಾದ ಸನ್ನಿವೇಶ! ಆದರೂ, ಕುಟುಂಬ ಬಂಧಗಳು, ಯೆಹೋವ ದೇವರಿಗಾಗಿ ಮತ್ತು ಯೇಸು ಕ್ರಿಸ್ತನಿಗಾಗಿರುವ ನಮ್ಮ ಪ್ರೀತಿಗಿಂತ ಹೆಚ್ಚು ಪ್ರಧಾನವಾಗಿರಬಾರದು. (ಮತ್ತಾಯ 10:37-39) ಕುಟುಂಬ ವಿರೋಧದ ಮಧ್ಯೆಯೂ ಒಬ್ಬನು ತಾಳಿಕೊಳ್ಳುವುದಾದರೆ, ವಿರೋಧಿಗಳು ದಿವ್ಯ ಭಕ್ತಿಯ ಸತ್ಪರಿಣಾಮಗಳನ್ನು ಕಾಣುವಾಗ ಬದಲಾಗಲೂಬಹುದು. (1 ಕೊರಿಂಥ 7:12-16; 1 ಪೇತ್ರ 3:1, 2) ಅದು ಸಂಭವಿಸದಿದ್ದರೂ, ವಿರೋಧದ ಕಾರಣ ದೇವರನ್ನು ಸೇವಿಸುವುದನ್ನು ಬಿಟ್ಟುಬಿಡುವುದರಿಂದ ಯಾವ ಚಿರಸ್ಥಾಯಿ ಒಳಿತೂ ದೊರಕದು.
14. ದೇವರ ಚಿತ್ತವನ್ನು ಮಾಡುವ ಅಪೇಕ್ಷೆಯು ಹೆತ್ತವರನ್ನು ತಮ್ಮ ಮಕ್ಕಳ ಹಿತಾಸಕ್ತಿಗಾಗಿ ಕ್ರಿಯೆನಡಿಸಲು ಹೇಗೆ ಸಹಾಯ ಮಾಡುವುದು?
14 ದೇವರ ಚಿತ್ತವನ್ನು ಮಾಡುವುದು ಯೋಗ್ಯ ನಿರ್ಣಯಗಳನ್ನು ಮಾಡಲು ಹೆತ್ತವರಿಗೆ ಸಹಾಯ ಮಾಡುವುದು. ಉದಾಹರಣೆಗಾಗಿ, ಕೆಲವು ಸಮುದಾಯಗಳಲ್ಲಿ ಹೆತ್ತವರು ಮಕ್ಕಳನ್ನು ಒಂದು ಬಂಡವಾಳವಾಗಿ ನೋಡುವ ಪ್ರವೃತ್ತಿ ಇದೆ, ಮತ್ತು ತಮ್ಮ ವೃದ್ಧಾಪ್ಯದಲ್ಲಿ ತಮ್ಮನ್ನು ಆರೈಕೆಮಾಡುವಂತೆ ಅವರು ಮಕ್ಕಳ ಮೇಲೆ ಹೊಂದಿಕೊಳ್ಳುತ್ತಾರೆ. ಬೆಳೆದ ಮಕ್ಕಳು ತಮ್ಮ ಮುಪ್ಪಿನ ಹೆತ್ತವರನ್ನು ನೋಡಿಕೊಳ್ಳುವುದು ಯುಕ್ತವೂ ಯೋಗ್ಯವೂ ಆಗಿದೆಯಾದರೂ, ಅಂತಹ ಒಂದು ಪರಿಗಣನೆಯು ಹೆತ್ತವರು ತಮ್ಮ ಮಕ್ಕಳನ್ನು ಪ್ರಾಪಂಚಿಕವಾದೊಂದು ಜೀವಿತ ಮಾರ್ಗವನ್ನು ಬೆನ್ನಟ್ಟುವಂತೆ ಪ್ರೇರಿಸಬಾರದು. ತಮ್ಮ ಮಕ್ಕಳು ಆತ್ಮಿಕ ವಿಷಯಗಳಿಗಿಂತ ಹೆಚ್ಚಾಗಿ ಪ್ರಾಪಂಚಿಕ ವಿಷಯಗಳನ್ನು ಬೆಲೆಯುಳ್ಳದ್ದಾಗಿರುವಂತೆ ಮಾಡಿ ಬೆಳೆಸುವುದಾದರೆ, ಹೆತ್ತವರು ಅವರಿಗೆ ಯಾವ ಒಳಿತನ್ನೂ ಮಾಡುವುದಿಲ್ಲ.—1 ತಿಮೊಥೆಯ 6:9.
15. ತಿಮೊಥೆಯನ ತಾಯಿಯಾದ ಯೂನೀಕೆಯು, ದೇವರ ಚಿತ್ತವನ್ನು ಮಾಡಿದ ಹೆತ್ತವರಲ್ಲೊಬ್ಬರಿಗೆ ಅತ್ಯುತ್ತಮ ಮಾದರಿಯಾಗಿದ್ದದ್ದು ಹೇಗೆ?
15 ಈ ವಿಷಯದಲ್ಲಿ ಒಂದು ಅತ್ಯುತ್ತಮ ಉದಾಹರಣೆಯು ಪೌಲನ ಯುವ ಮಿತ್ರನಾದ ತಿಮೊಥೆಯನ ತಾಯಿ ಯೂನೀಕೆಯದ್ದಾಗಿದೆ. (2 ತಿಮೊಥೆಯ 1:5) ಯೂನೀಕೆ ಒಬ್ಬ ಅವಿಶ್ವಾಸಿಯನ್ನು ವಿವಾಹವಾಗಿದ್ದರೂ, ಅವಳು ತಿಮೊಥೆಯನ ಅಜ್ಜಿ ಲೋವಿಯೊಂದಿಗೆ, ತಿಮೊಥೆಯನನ್ನು ದಿವ್ಯ ಭಕ್ತಿಯನ್ನು ಬೆನ್ನಟ್ಟುವಂತೆ ಯಶಸ್ವಿಯಾಗಿ ಬೆಳೆಸಿದಳು. (2 ತಿಮೊಥೆಯ 3:14, 15) ತಿಮೊಥೆಯನು ಸಾಕಷ್ಟು ದೊಡ್ಡವನಾದಾಗ ಅವನು ಮನೆಬಿಟ್ಟುಹೋಗಿ, ಪೌಲನ ಮಿಷನೆರಿ ಸಂಗಡಿಗನಾಗಿ ರಾಜ್ಯ ಪ್ರಚಾರದ ಕಾರ್ಯವನ್ನು ಕೈಗೊಳ್ಳುವಂತೆ ಯೂನೀಕೆ ಅನುಮತಿಸಿದಳು. (ಅ. ಕೃತ್ಯಗಳು 16:1-5) ಅವಳ ಮಗನು ಒಬ್ಬ ಪ್ರಮುಖ ಮಿಷನೆರಿಯಾದಾಗ ಅವಳೆಷ್ಟು ಪುಳಕಿತಳಾಗಿದ್ದಿರಬೇಕು! ವಯಸ್ಕನಾದ ಅವನ ದಿವ್ಯ ಭಕ್ತಿಯು ಅವನ ಆರಂಭಿಕ ತರಬೇತಿನ ಮೇಲೆ ಚೆನ್ನಾಗಿ ಪ್ರತಿಬಿಂಬಿಸಿತು. ಯೂನೀಕೆಯು ಮನೆಯಲ್ಲಿ ತಿಮೊಥೆಯನ ಅನುಪಸ್ಥಿತಿಯಿಂದಾಗಿ ಮರುಕವುಳ್ಳವಳಾಗಿದ್ದಿರಬಹುದಾದರೂ, ಅವನ ನಂಬಿಗಸ್ತ ಸೇವಾ ವರದಿಗಳನ್ನು ಕೇಳುವುದರಲ್ಲಿ ಸಂತೃಪ್ತಿಯನ್ನೂ ಆನಂದವನ್ನೂ ಅವಳು ಕಂಡುಕೊಂಡಳೆಂಬುದು ನಿಶ್ಚಯ.—ಫಿಲಿಪ್ಪಿ 2:19, 20.
ಕುಟುಂಬ ಮತ್ತು ನಿಮ್ಮ ಭವಿಷ್ಯತ್ತು
16. ಮಗನೋಪಾದಿ ಯೇಸು ಯಾವ ಯೋಗ್ಯ ಆಸ್ಥೆಯನ್ನು ತೋರಿಸಿದನು, ಆದರೆ ಅವನ ಮುಖ್ಯ ಗುರಿಯು ಏನಾಗಿತ್ತು?
16 ಯೇಸು ದೈವ ಭಕ್ತಿಯ ಕುಟುಂಬವೊಂದರಲ್ಲಿ ಬೆಳೆಸಲ್ಪಟ್ಟನು, ಮತ್ತು ಒಬ್ಬ ವಯಸ್ಕನಂತೆ ತನ್ನ ತಾಯಿಗಾಗಿ ಒಬ್ಬ ಮಗನ ಯೋಗ್ಯ ಆಸ್ಥೆಯನ್ನು ತೋರಿಸಿದನು. (ಲೂಕ 2:51, 52; ಯೋಹಾನ 19:26) ಆದರೂ, ಯೇಸುವಿನ ಮುಖ್ಯ ಗುರಿಯು ದೇವರ ಚಿತ್ತವನ್ನು ನೆರವೇರಿಸುವುದಾಗಿತ್ತು, ಅವನಿಗೆ ಇದರಲ್ಲಿ ನಿತ್ಯಜೀವವನ್ನು ಅನುಭವಿಸುವಂತೆ ಮಾನವರಿಗಾಗಿ ದಾರಿಯನ್ನು ತೆರೆಯುವುದೂ ಸೇರಿತ್ತು. ಪಾಪಪೂರ್ಣ ಮಾನವಕುಲಕ್ಕಾಗಿ ತನ್ನ ಪರಿಪೂರ್ಣ ಮಾನವ ಜೀವವನ್ನು ಪ್ರಾಯಶ್ಚಿತ್ತವಾಗಿ ನೀಡಿದಾಗ ಅವನು ಇದನ್ನು ಮಾಡಿದನು.—ಮಾರ್ಕ 10:45; ಯೋಹಾನ 5:28, 29.
17. ದೇವರ ಚಿತ್ತವನ್ನು ಮಾಡುವವರಿಗಾಗಿ ಯೇಸುವಿನ ನಂಬಿಗಸ್ತ ಮಾರ್ಗವು ಯಾವ ಮಹಿಮೆಯುಳ್ಳ ಪ್ರತೀಕ್ಷೆಗಳನ್ನು ತೆರೆಯಿತು?
17 ಯೇಸುವಿನ ಮರಣಾನಂತರ ಯೆಹೋವನು ಅವನನ್ನು ಸ್ವರ್ಗೀಯ ಜೀವಿತಕ್ಕೆ ಎಬ್ಬಿಸಿ, ಮಹಾ ಆಧಿಕಾರವನ್ನು ಅವನಿಗೆ ಕೊಟ್ಟು, ಕೊನೆಗೆ ಅವನನ್ನು ಸ್ವರ್ಗೀಯ ರಾಜ್ಯದಲ್ಲಿ ಅರಸನಾಗಿ ಸ್ಥಾಪಿಸಿದನು. (ಮತ್ತಾಯ 28:18; ರೋಮಾಪುರ 14:9; ಪ್ರಕಟನೆ 11:15) ಯೇಸುವಿನ ಯಜ್ಞಾರ್ಪಣೆಯು ಕೆಲವು ಮಾನವರಿಗೆ, ಆ ರಾಜ್ಯದಲ್ಲಿ ಆತನೊಂದಿಗೆ ಆಳುವುದಕ್ಕಾಗಿ ಆರಿಸಲ್ಪಡುವಂತೆ ಸಾಧ್ಯಮಾಡಿತು. ಸಹೃದಯದ ಮಾನವಕುಲದಲ್ಲಿ ಉಳಿದವರಿಗೆ, ಇದು ಪ್ರಮೋದವನ್ಯ ಪರಿಸ್ಥಿತಿಗಳಿಗೆ ಪುನಸ್ಸ್ಥಾಪಿಸಲ್ಪಟ್ಟ ಭೂಮಿಯಲ್ಲಿ ಪರಿಪೂರ್ಣ ಜೀವವನ್ನು ಅನುಭವಿಸಲು ಮಾರ್ಗವನ್ನೂ ತೆರೆಯಿತು. (ಪ್ರಕಟನೆ 5:9, 10; 14:1, 4; 21:3-5; 22:1-4) ಇಂದು ನಮಗಿರುವಂತಹ ಅತ್ಯಂತ ಮಹಾ ಸುಯೋಗಗಳಲ್ಲಿ ಒಂದು, ಈ ಮಹಿಮಾಭರಿತವಾದ ಸುವಾರ್ತೆಯನ್ನು ನಮ್ಮ ನೆರೆಹೊರೆಯವರಿಗೆ ಹೇಳುವುದೇ ಆಗಿದೆ.—ಮತ್ತಾಯ 24:14.
18. ಕುಟುಂಬಗಳಿಗೆ ಮತ್ತು ವ್ಯಕ್ತಿಗಳಿಗೆ—ಉಭಯರಿಗೂ—ಯಾವ ಮರುಜ್ಞಾಪನ ಮತ್ತು ಯಾವ ಪ್ರೋತ್ಸಾಹನೆಯನ್ನು ಕೊಡಲಾಗಿದೆ?
18 ಅಪೊಸ್ತಲ ಪೌಲನು ತೋರಿಸಿದ ಪ್ರಕಾರ, ದಿವ್ಯ ಭಕ್ತಿಯ ಜೀವಿತವನ್ನು ಜೀವಿಸುವುದು, ಜನರು “ಬರಲಿರುವ” ಜೀವಿತದಲ್ಲಿ ಆ ಆಶೀರ್ವಾದಗಳನ್ನು ಬಾಧ್ಯವಾಗಿ ಹೊಂದಬಲ್ಲರೆಂಬ ವಾಗ್ದಾನವನ್ನೀಯುತ್ತದೆ. ನಿಶ್ಚಯವಾಗಿಯೂ, ಸಂತೋಷವನ್ನು ಕಂಡುಕೊಳ್ಳುವ ಅತ್ಯುತ್ತಮ ಮಾರ್ಗವಿದು! ನೆನಪಿನಲ್ಲಿಡಿರಿ, “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” (1 ಯೋಹಾನ 2:17) ಆದಕಾರಣ, ನೀವು ಒಬ್ಬ ಮಗುವಾಗಿರಲಿ ಅಥವಾ ಒಬ್ಬ ಹೆತ್ತವರಾಗಿರಲಿ, ಒಬ್ಬ ಗಂಡನಾಗಿರಲಿ ಯಾ ಒಬ್ಬ ಹೆಂಡತಿಯಾಗಿರಲಿ, ಅಥವಾ ಮಕ್ಕಳಿರುವ ಅಥವಾ ಇಲ್ಲದ ಒಂಟಿಗ ವಯಸ್ಕರಾಗಿರಲಿ, ದೇವರ ಚಿತ್ತವನ್ನು ಮಾಡಲಿಕ್ಕೆ ಪ್ರಯಾಸಪಡಿರಿ. ಒತ್ತಡದ ಕೆಳಗಿರುವಾಗಲೂ ಅಥವಾ ವಿಪರೀತ ಕಷ್ಟಗಳನ್ನು ಎದುರಿಸುವಾಗಲೂ, ನೀವು ಜೀವಸ್ವರೂಪನಾದ ದೇವರ ಒಬ್ಬ ಸೇವಕರೆಂಬುದನ್ನು ಎಂದಿಗೂ ಮರೆಯದಿರಿ. ಹೀಗೆ, ನಿಮ್ಮ ಕ್ರಿಯೆಗಳು ಯೆಹೋವನಿಗೆ ಸಂತೋಷವನ್ನು ತರುವಂತಾಗಲಿ. (ಜ್ಞಾನೋಕ್ತಿ 27:11) ಮತ್ತು ನಿಮ್ಮ ನಡತೆಯು ನಿಮಗೆ ಈಗ ಸಂತೋಷವನ್ನೂ, ಬರಲಿರುವ ನೂತನ ಲೋಕದಲ್ಲಿ ನಿತ್ಯಜೀವವನ್ನೂ ಫಲಿಸುವಂತಾಗಲಿ!