ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಲ್ಲರೂ ಸ್ತ್ರೀಯರನ್ನ ಗೌರವಿಸಬೇಕು ಅಂತ ದೇವರು ಬಯಸ್ತಾನೆ

ಎಲ್ಲರೂ ಸ್ತ್ರೀಯರನ್ನ ಗೌರವಿಸಬೇಕು ಅಂತ ದೇವರು ಬಯಸ್ತಾನೆ

ಯೇಸು ಭೂಮಿಯಲ್ಲಿದ್ದಾಗ ನಡೆ ನುಡಿಯಲ್ಲಿ ತನ್ನ ತಂದೆಯ ಗುಣಗಳನ್ನೇ ತೋರಿಸಿದನು. ಅದಕ್ಕೆ ಹೀಗೆ ಹೇಳುತ್ತಾನೆ: “ನನ್ನಷ್ಟಕ್ಕೆ ನಾನೇ ಏನೂ ಮಾಡಿಲ್ಲ, ಅಪ್ಪ ಕಲಿಸಿದ್ದನ್ನೇ ಮಾತಾಡಿದೆ . . . ಆತನು ಇಷ್ಟ ಪಡೋದನ್ನೇ ನಾನು ಯಾವಾಗ್ಲೂ ಮಾಡ್ತೀನಿ.” (ಯೋಹಾನ 8:28, 29; ಕೊಲೊಸ್ಸೆ 1:15) ಯೇಸು ಭೂಮಿಯಲ್ಲಿದ್ದಾಗ ಸ್ತ್ರೀಯರ ಜೊತೆ ನಡೆದುಕೊಂಡ ವಿಧದಿಂದ ಯೆಹೋವ ದೇವರಿಗೆ ಸ್ತ್ರೀಯರ ಬಗ್ಗೆ ಹೇಗನಿಸುತ್ತೆ, ಆತನು ಅವರನ್ನ ಹೇಗೆ ನೋಡ್ತಾನೆ ಅಂತ ಚೆನ್ನಾಗಿ ಅರ್ಥಮಾಡಿಕೊಳ್ಳೋಕೆ ಆಗುತ್ತೆ.

ಆಗಿನ ಕಾಲದ ಜನರು ಸ್ತ್ರೀಯರ ಜೊತೆ ವ್ಯವಹರಿಸಿದ್ದಕ್ಕೂ ಯೇಸು ಸ್ತ್ರೀಯರ ಜೊತೆ ವ್ಯವಹರಿಸಿದ್ದಕ್ಕೂ ತುಂಬ ವ್ಯತ್ಯಾಸ ಇತ್ತು ಅಂತ ಸುವಾರ್ತಾ ಪುಸ್ತಕದಲ್ಲಿರುವ ಮಾಹಿತಿಯ ಆಧಾರದ ಮೇಲೆ ಕೆಲವು ಬೈಬಲ್‌ ಪಂಡಿತರು ಹೇಳುತ್ತಾರೆ. ಹಾಗಾದ್ರೆ ಯಾವ ವ್ಯತ್ಯಾಸ ಇತ್ತು? ಸ್ತ್ರೀಯರನ್ನ ಗೌರವಿಸಬೇಕು ಅಂತ ಯೇಸು ಕಲಿಸಿದ್ರಿಂದ ಈಗ ಸ್ತ್ರೀಯರಿಗೆ ಹೆಚ್ಚು ಗೌರವ ಮತ್ತು ಸ್ವಾತಂತ್ರ್ಯ ಸಿಗುತ್ತಾ ಇದೆಯಾ?

ಯೇಸು ಸ್ತ್ರೀಯರ ಜೊತೆ ಹೇಗೆ ನಡೆದುಕೊಂಡನು?

ಸ್ತ್ರೀಯರನ್ನ ಲೈಂಗಿಕ ಬಳಕೆಗಾಗಿ ಉಪಯೋಗಿಸುವ ಸಾಧನದ ತರ ಯೇಸು ನೋಡಲಿಲ್ಲ. ಆಗಿನ ಕಾಲದ ಕೆಲವು ಯೆಹೂದಿ ಧಾರ್ಮಿಕ ಮುಖಂಡರು ಯಾರಾದ್ರೂ ಸ್ತ್ರೀಯರ ಜೊತೆ ಮಾತಾಡಿದ್ರೆ ಅವರ ಜೊತೆ ವ್ಯವಹರಿಸಿದ್ರೆ ಅದು ಲೈಂಗಿಕತೆಗೆ ನಡೆಸುತ್ತೆ ಅಂತ ಅಂದುಕೊಳ್ಳುತ್ತಿದ್ದರು. ಸ್ತ್ರೀಯರು ಸಾರ್ವಜನಿಕ ಸ್ಥಳಗಳಲ್ಲಿ ಪುರುಷರ ಜೊತೆ ಮಾತಾಡುವ ಹಾಗಿರಲಿಲ್ಲ. ತಲೆಮೇಲೆ ಬಟ್ಟೆ ಹಾಕಿಕೊಳ್ಳದೆ ಹೊರಗೆ ಹೋಗುವ ಹಾಗಿರಲಿಲ್ಲ. ಆದರೆ ಯೇಸು, ಪುರುಷರಿಗೆ ಸ್ವನಿಯಂತ್ರಣ ಕಾಪಾಡಿಕೊಳ್ಳೋಕೆ ಹೇಳಿದನು. ಅಷ್ಟೇ ಅಲ್ಲ ಸ್ತ್ರೀಯರಿಗೆ ಬೇಕಾದ ಗೌರವ, ಮಾನಮರ್ಯಾದೆ ಕೊಡಬೇಕು ಅಂತ ಹೇಳಿದನು. ಪುರುಷರ ತರಾನೇ ಸ್ತ್ರೀಯರಿಗೂ ಸಮಾಜದಲ್ಲಿ ಬೆರೆಯುವ ಅರ್ಹತೆ ಇದೆ ಅಂತ ಹೇಳಿದನು.—ಮತ್ತಾಯ 5:28.

“ಹೆಂಡತಿಗೆ ವಿಚ್ಛೇದನ ಕೊಟ್ಟು ಇನ್ನೊಬ್ಬಳನ್ನ ಮದುವೆ ಆಗುವವನು ವ್ಯಭಿಚಾರಿ ಆಗಿದ್ದಾನೆ . . . ಹೀಗೆ ಹೆಂಡತಿಗೆ ದ್ರೋಹ ಮಾಡ್ತಾನೆ” ಅಂತ ಯೇಸು ಹೇಳಿದನು. (ಮಾರ್ಕ 10:11, 12) “ಯಾವ ಕಾರಣಕ್ಕೆ ಬೇಕಾದ್ರೂ” ಹೆಂಡತಿಗೆ ವಿಚ್ಛೇದನ ಕೊಡಬಹುದು ಅನ್ನೋ ರಬ್ಬಿಗಳ ಪೊಳ್ಳು ಮಾತನ್ನ ಯೇಸು ತಳ್ಳಿಹಾಕಿದನು. (ಮತ್ತಾಯ 19:3, 9) ಪುರುಷ ಹೆಂಡತಿಗೆ ದ್ರೋಹ ಮಾಡಿ ವ್ಯಭಿಚಾರ ಮಾಡಕ್ಕೆ ಸಾಧ್ಯನೇ ಇಲ್ಲ ಅನ್ನೋದು ಹೆಚ್ಚಿನ ಯೆಹೂದ್ಯರ ವಾದವಾಗಿತ್ತು. ಒಂದುವೇಳೆ ವ್ಯಭಿಚಾರ ಅನ್ನೋದು ನಡೆದ್ರೆ ಅದು ಸ್ತ್ರೀಯರಿಂದನೇ ಆಗುತ್ತೆ ಹೊರತು ಪುರುಷರಿಂದ ಅಲ್ಲ ಅಂತ ರಬ್ಬಿಗಳು ಹೇಳುತ್ತಿದ್ದರು. ಬೈಬಲ್‌ ಬಗ್ಗೆ ವಿವರಣೆ ಕೊಡುವ ಒಂದು ಪುಸ್ತಕ ಹೇಳುವ ಪ್ರಕಾರ: “ಪುರುಷ ಕೂಡ ತನ್ನ ಹೆಂಡತಿಗೆ ನಂಬಿಗಸ್ತನಾಗಿ ಇರಬೇಕು ಅಂತ ಯೇಸು ಹೇಳಿದನು. ಹೀಗೆ ಸ್ತ್ರೀಯರನ್ನ ತಾನು ಗೌರವಿಸ್ತೀನಿ ಅಂತ ತೋರಿಸಿಕೊಟ್ಟನು.”

ಯೇಸು ಕಲಿಸಿದ್ದರಿಂದ ನಮಗೆ ಸಿಕ್ಕಿರುವ ಪ್ರಯೋಜನ: “ವಯಸ್ಸಾಗಿರೋ ಸ್ತ್ರೀಯರನ್ನ ಅಮ್ಮನ ತರ, ಯುವತಿಯರನ್ನ ಅಕ್ಕತಂಗಿ ತರ ನೆನಸಿ ಪೂರ್ತಿ ಶುದ್ಧಮನಸ್ಸಿಂದ” ಅವರ ಜೊತೆ ನಡೆದುಕೊಳ್ಳಿ. (1 ತಿಮೊತಿ 5:2) ಈ ಮಾತನ್ನ ಸಹೋದರರು ಪಾಲಿಸುತ್ತಿದ್ದಾರೆ. ಅದಕ್ಕೆ ಸಭೆಯಲ್ಲಿ ಸಹೋದರರು ತಮ್ಮನ್ನ ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರೆ ಅನ್ನೋ ಭಯ ಸಹೋದರಿಯರಿಗಿಲ್ಲ. ಹಾಗಾಗಿ ಸಹೋದರಿಯರಿಗೆ ಸಹೋದರರ ಜೊತೆ ಆರಾಮವಾಗಿ ಬೆರೆಯೋಕೆ ಆಗುತ್ತಿದೆ.

ಯೇಸು ಸ್ತ್ರೀಯರಿಗೂ ಕಲಿಸಿದನು. ರಬ್ಬಿಗಳು ಸ್ತ್ರೀಯರನ್ನ ತಾತ್ಸಾರದಿಂದ ತುಂಬ ಕೀಳಾಗಿ ನೋಡುತ್ತಿದ್ದರು. ಆದರೆ ಯೇಸು ಸ್ತ್ರೀಯರಿಗೆ ಕಲಿಸಿದನು ಮತ್ತು ಅವರ ಅಭಿಪ್ರಾಯಗಳನ್ನ ವ್ಯಕ್ತಪಡಿಸೋಕೆ ಪ್ರೋತ್ಸಾಹಿಸಿದನು. ಆಧ್ಯಾತ್ಮಿಕ ವಿಷಯಗಳನ್ನ ಕಲಿಯಕ್ಕೆ ಮರಿಯ ತೋರಿಸಿದ ಹುರುಪನ್ನ ಮೆಚ್ಚಿದನು. ಹೀಗೆ ಸ್ತ್ರೀಯರು ಕೇವಲ ಅಡಿಗೆ ಮನೆಯಲ್ಲಿ ಕೆಲಸ ಮಾಡಕ್ಕೆ ಮಾತ್ರ ಸೀಮಿತರಾಗಿಲ್ಲ ಅಂತ ತೋರಿಸಿಕೊಟ್ಟನು. (ಲೂಕ 10:38-42) ಯೇಸು ಕಲಿಸಿದ ವಿಷಯಗಳಿಂದ ಮಾರ್ಥ ಪ್ರಯೋಜನ ಪಡೆದುಕೊಂಡಿದ್ದಳು. ಲಾಜರ ಸತ್ತುಹೋದ ನಂತರ ಅವಳು ಯೇಸುವಿನ ಜೊತೆ ಆಡಿದ ಮಾತುಗಳಿಂದ ನಮಗಿದು ಗೊತ್ತಾಗುತ್ತೆ.—ಯೋಹಾನ 11:21-27.

ಯೇಸು ಸ್ತ್ರೀಯರ ಅಭಿಪ್ರಾಯಕ್ಕೆ ಬೆಲೆ ಕೊಟ್ಟನು. ಆಗಿನ ಕಾಲದ ಯೆಹೂದಿ ಸ್ತ್ರೀಯರಿಗೆ ಗಂಡುಮಕ್ಕಳು ಹುಟ್ಟಿದರೆ ಮಾತ್ರ ತುಂಬ ಖುಷಿಯಾಗುತ್ತಿತ್ತು. ಅದರಲ್ಲೂ ಅವನೊಬ್ಬ ಪ್ರವಾದಿ ಆಗಿದ್ದರೆ ಅವರ ಖುಷಿಗೆ ಎಲ್ಲೆನೇ ಇರುತ್ತಿರಲಿಲ್ಲ. ಒಮ್ಮೆ ಒಬ್ಬ ಸ್ತ್ರೀ ಯೇಸುವಿಗೆ: ‘ನಿನ್ನನ್ನ ಹೆತ್ತ ತಾಯಿ ಖುಷಿಯಾಗಿ ಇರ್ತಾಳೆ’ ಅಂದಳು. ಆಗ ಯೇಸು ಈ ಸಂದರ್ಭವನ್ನ ಬಳಸಿ ಒಂದು ಪ್ರಾಮುಖ್ಯ ವಿಷಯವನ್ನ ಅವಳಿಗೆ ಕಲಿಸುತ್ತಾನೆ. (ಲೂಕ 11:27, 28) ಸ್ತ್ರೀಯಾಗಲಿ, ಪುರುಷನಾಗಲಿ ದೇವರ ಮಾತನ್ನ ಕೇಳಿ ಅದರ ಪ್ರಕಾರ ನಡೆಯೋದೇ ತುಂಬ ಪ್ರಾಮುಖ್ಯ ಅಂತ ಅವಳಿಗೆ ಹೇಳಿದನು. ಹೀಗೆ ಹೇಳುವ ಮೂಲಕ ಆಗಿನ ಕಾಲದ ಜನರಲ್ಲಿದ್ದ ತಪ್ಪಭಿಪ್ರಾಯವನ್ನ ಸರಿ ಮಾಡಕ್ಕೆ ಪ್ರಯತ್ನಿಸಿದನು.—ಯೋಹಾನ 8:32.

ಯೇಸು ಕಲಿಸಿದ್ದರಿಂದ ನಮಗೆ ಸಿಕ್ಕಿರುವ ಪ್ರಯೋಜನ: ಕೂಟಗಳಲ್ಲಿ ಸಹೋದರಿಯರಿಗೆ ಉತ್ತರ ಕೊಡುವ ಅವಕಾಶ ಇದೆ. ಪ್ರೌಢ ಸಹೋದರಿಯರು ತಮ್ಮ ಮಾತು ಮತ್ತು ಮಾದರಿಯ ಮೂಲಕ ಇತರರಿಗೆ ‘ಒಳ್ಳೇದನ್ನ ಕಲಿಸುತ್ತಾರೆ.’ ಇದನ್ನ ಸಹೋದರರು ಮೆಚ್ಚಿಕೊಳ್ಳುತ್ತಾರೆ. (ತೀತ 2:3) ಸಾರುವ ಕೆಲಸವನ್ನ ಮಾಡುವ ಮೂಲಕ ಅವರು ಸಹೋದರರಿಗೆ ಬೆಂಬಲವನ್ನ ಕೊಡುತ್ತಾರೆ.—ಕೀರ್ತನೆ 68:11; “ ಸ್ತ್ರೀಯರು ಮಾತಾಡಬಾರದು ಅಂತ ಪೌಲ ಹೇಳಿದನಾ?” ಅನ್ನೋ ಚೌಕ ನೋಡಿ.

ಯೇಸು ಸ್ತ್ರೀಯರಿಗೆ ಕಾಳಜಿ ತೋರಿಸಿದನು. ಆಗಿನ ಕಾಲದಲ್ಲಿ ಗಂಡುಮಕ್ಕಳಿಗೆ ಜಾಸ್ತಿ ಗೌರವ ಮತ್ತು ಬೆಲೆ ಕೊಡುತ್ತಿದ್ದರು. ಹೆಣ್ಣು ಮಕ್ಕಳನ್ನ ಕೀಳಾಗಿ ನೋಡುತ್ತಿದ್ದರು. ಒಂದು ಟಾಲ್ಮುಡ್‌ ಹೇಳೋ ಪ್ರಕಾರ, “ಗಂಡು ಮಕ್ಕಳು ಹುಟ್ಟಿದರೆ ಅವರು ಭಾಗ್ಯವಂತರು. ಆದರೆ ಹೆಣ್ಣು ಮಕ್ಕಳು ಹುಟ್ಟಿದರೆ ಅವರ ಗತಿ ಅಧೋಗತಿ” ಅಂತ ನೆನಸುತ್ತಿದ್ದರು. ಕೆಲವು ಹೆತ್ತವರು ಹೆಣ್ಣು ಮಕ್ಕಳನ್ನ ಒಂದು ಹೊರೆಯಾಗಿ ನೋಡುತ್ತಿದ್ದರು. ಯಾಕಂದ್ರೆ ಅವರಿಗೆ ಮದುವೆ ಮಾಡಬೇಕಿತ್ತು, ವರದಕ್ಷಿಣೆ ಕೊಡಬೇಕಿತ್ತು. ಅಷ್ಟೇ ಅಲ್ಲ ವಯಸ್ಸಾದ ಕಾಲದಲ್ಲಿ ಹೆಣ್ಣುಮಕ್ಕಳಿಗೆ ತಮ್ಮನ್ನ ನೋಡಿಕೊಳ್ಳೋಕೆ ಆಗಲ್ಲ ಅಂತ ಅವರು ನೆನಸುತ್ತಿದ್ದರು.

ಯೇಸು ನಾಯಿನ್‌ ಅನ್ನೋ ಊರಿನಲ್ಲಿದ್ದ ಒಬ್ಬ ವಿಧವೆಯ ಮಗನನ್ನ ಮತ್ತೆ ಜೀವಂತವಾಗಿ ಎಬ್ಬಿಸಿದನು. ಅದೇ ತರಾನೇ ಯಾಯೀರನ ಮಗಳನ್ನ ಕೂಡ ಜೀವಂತವಾಗಿ ಎಬ್ಬಿಸಿದನು. ಇದರಿಂದ ನಮಗೆ ಏನು ಗೊತ್ತಾಗುತ್ತೆ ಅಂದರೆ ಯೇಸುವಿಗೆ ಗಂಡು ಮಗನ ಜೀವ ಎಷ್ಟು ಪ್ರಾಮುಖ್ಯನೋ ಅಷ್ಟೇ ಹೆಣ್ಣು ಮಗಳ ಜೀವನೂ ಪ್ರಾಮುಖ್ಯವಾಗಿತ್ತು. (ಮಾರ್ಕ 5:35, 41, 42; ಲೂಕ 7:11-15) “18 ವರ್ಷದಿಂದ ಕೆಟ್ಟ ದೇವದೂತ ಹಿಡಿದಿದ್ದ” ಒಬ್ಬ ಸ್ತ್ರೀಯನ್ನ ವಾಸಿಮಾಡಿದ ನಂತರ ಯೇಸು ಅವಳ ಬಗ್ಗೆ ‘ಅಬ್ರಹಾಮನ ವಂಶದವಳು’ ಅಂತ ಹೇಳಿದನು. ಆದರೆ ಸಾಮಾನ್ಯವಾಗಿ ಆ ರೀತಿಯಲ್ಲಿ ಆಗಿನ ಕಾಲದಲ್ಲಿ ಯಾರೂ ಸ್ತ್ರೀಯರನ್ನ ಕರೆಯುತ್ತಿರಲಿಲ್ಲ. (ಲೂಕ 13:10-16) ಹೀಗೆ ಯೇಸು ಪ್ರೀತಿ, ದಯೆ, ಕಾಳಜಿಯಿಂದ ಸ್ತ್ರೀಯರ ಜೊತೆ ಮಾತಾಡುವ ಮೂಲಕ ಸಮಾಜದಲ್ಲಿ ಪುರುಷರ ತರಾನೇ ಸ್ತ್ರೀಯರೂ ಅಮೂಲ್ಯ ಅಂತ ತೋರಿಸಿಕೊಟ್ಟನು. ಅಷ್ಟೇ ಅಲ್ಲ ಅವಳ ನಂಬಿಕೆಯನ್ನ ಕೂಡ ಮೆಚ್ಚಿದನು.—ಲೂಕ 19:9; ಗಲಾತ್ಯ 3:7.

ಯೇಸು ಕಲಿಸಿದ್ದರಿಂದ ನಮಗೆ ಸಿಕ್ಕಿರುವ ಪ್ರಯೋಜನ: ಏಷ್ಯಾದ ಒಂದು ಗಾದೆ ಮಾತು ಹೀಗೆ ಹೇಳುತ್ತೆ: “ಹೆಣ್ಣು ಮಕ್ಕಳನ್ನ ಬೆಳೆಸೋದು ಪಕ್ಕದ ಮನೆಯ ತೋಟಕ್ಕೆ ನೀರು ಹಾಕಿದಂತೆ.” ಆದರೆ ಕ್ರೈಸ್ತ ಹೆತ್ತವರು ಯಾವತ್ತೂ ಹೀಗೆ ಯೋಚಿಸಬಾರದು. ಬದಲಿಗೆ ತಮ್ಮ ಮಕ್ಕಳು ಗಂಡಾಗಲಿ, ಹೆಣ್ಣಾಗಲಿ ಅವರನ್ನ ಸಮಾನವಾಗಿ ನೋಡಬೇಕು. ಹೆತ್ತವರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನ ಕೊಡಬೇಕು ಮತ್ತು ಅವರನ್ನ ಚೆನ್ನಾಗಿ ನೋಡಿಕೊಳ್ಳಬೇಕು.

ತಾನು ಮತ್ತೆ ಜೀವಂತವಾಗಿ ಎದ್ದು ಬಂದ ಸುದ್ದಿಯನ್ನ ತನ್ನ ಶಿಷ್ಯರಿಗೆ ತಿಳಿಸುವ ಅವಕಾಶವನ್ನ ಯೇಸು ಮಗ್ದಲದ ಮರಿಯಳಿಗೆ ಕೊಡುತ್ತಾನೆ

ಯೇಸು ಸ್ತ್ರೀಯರ ಮೇಲೆ ನಂಬಿಕೆ ಇಟ್ಟಿದ್ದನು. ಯೆಹೂದಿ ಕೋರ್ಟ್‌ಗಳಲ್ಲಿ ಸ್ತ್ರೀಯರ ಹೇಳಿಕೆಗಳನ್ನ (ಸಾಕ್ಷಿ) ಕೇವಲ ಆಳಿನ ಹೇಳಿಕೆಗಳ ತರ ನೋಡುತ್ತಿದ್ದರು. ಒಂದನೇ ಶತಮಾನದ ಇತಿಹಾಸಗಾರನಾದ ಜೋಸೀಫಸ್‌ ಹೀಗೆ ಹೇಳುತ್ತಾನೆ: “ಸ್ತ್ರೀಯರಿಂದ ಯಾವ ಸಾಕ್ಷಿಯನ್ನೂ ಪಡೆದುಕೊಳ್ಳುತ್ತಿರಲಿಲ್ಲ. ಯಾಕಂದ್ರೆ ಹೆಣ್ಣು ಅನ್ನೋ ಕಾರಣಕ್ಕೆ ಅವಳ ಮಾತಿಗೆ ಯಾವ ಬೆಲೆಯನ್ನೂ ಕೊಡುತ್ತಿರಲಿಲ್ಲ.”

ಯೇಸು ಮತ್ತೆ ಜೀವಂತವಾಗಿ ಎದ್ದು ಬಂದಿದ್ದಕ್ಕೆ ಸಾಕ್ಷ್ಯವನ್ನ ಕೊಡಲಿಕ್ಕಾಗಿ ಸ್ತ್ರೀಯರನ್ನ ಬಳಸಿದನು. ಯೇಸುವಿಗೂ ಆಗಿನ ಕಾಲದ ಜನರಿಗೂ ಅಜಗಜಾಂತರ ವ್ಯತ್ಯಾಸ ಇತ್ತು ಅಂತ ಇದು ತೋರಿಸಿಕೊಡುತ್ತೆ ಅಲ್ವಾ? (ಮತ್ತಾಯ 28:1, 8-10) ಯೇಸುವನ್ನ ಕ್ರೂರವಾಗಿ ಕೊಂದು ಹಾಕಿದ್ದನ್ನ, ಆತನನ್ನ ಸಮಾಧಿ ಮಾಡಿದ್ದನ್ನ ಕಣ್ಣಾರೆ ನೋಡಿದ ಸ್ತ್ರೀಯರು ಆತನು ಮತ್ತೆ ಜೀವಂತವಾಗಿ ಎದ್ದು ಬಂದಿದ್ದಾನೆ ಅಂತ ಶಿಷ್ಯರಿಗೆ ಹೇಳಿದ್ರೂ ಅವರು ಸ್ತ್ರೀಯರ ಮಾತನ್ನ ನಂಬಲಿಲ್ಲ. (ಮತ್ತಾಯ 27:55, 56, 61; ಲೂಕ 24:10, 11) ಆದರೆ ಪುನರುತ್ಥಾನ ಆದಮೇಲೆ ಯೇಸು ಸ್ತ್ರೀಯರಿಗೆ ಮೊದಲು ಕಾಣಿಸಿಕೊಳ್ಳೋ ಮೂಲಕ ಬೇರೆ ಶಿಷ್ಯರ ತರಾನೇ ಅವರಿಗೂ ಸಾಕ್ಷಿ ಹೇಳೋ ಅರ್ಹತೆ ಇದೆ ಅಂತ ತೋರಿಸಿಕೊಟ್ಟನು.—ಅಪೊಸ್ತಲರ ಕಾರ್ಯ 1:8, 14.

ಯೇಸು ಕಲಿಸಿದ್ದರಿಂದ ನಮಗೆ ಸಿಕ್ಕಿರುವ ಪ್ರಯೋಜನ: ಯೆಹೋವನ ಸಾಕ್ಷಿಗಳ ಸಭೆಯಲ್ಲಿರುವ ಹಿರಿಯರು ಸಹೋದರಿಯರ ಅಭಿಪ್ರಾಯಗಳನ್ನ ಮಾನ್ಯ ಮಾಡುತ್ತಾರೆ. ಕುಟುಂಬದಲ್ಲಿ ಗಂಡ ತನ್ನ ಹೆಂಡತಿಯ ಅಭಿಪ್ರಾಯವನ್ನ ಚೆನ್ನಾಗಿ ಕೇಳಿಸಿಕೊಳ್ಳುವ ಮೂಲಕ ಅವಳಿಗೆ ಗೌರವ ಕೊಡುತ್ತಾನೆ.—1 ಪೇತ್ರ 3:7; ಆದಿಕಾಂಡ 21:12.

ಬೈಬಲ್‌ ತತ್ವಗಳು ನಿಮಗೆ ಸಹಾಯ ಮಾಡುತ್ತೆ

ಬೈಬಲ್‌ ತತ್ವವನ್ನ ಪಾಲಿಸುವವರು ಸ್ತ್ರೀಯರಿಗೆ ಮಾನ ಮರ್ಯಾದೆ ಮತ್ತು ಗೌರವವನ್ನ ಕೊಡುತ್ತಾರೆ

ಪುರುಷರು ಯೇಸು ಕ್ರಿಸ್ತನನ್ನ ಅನುಕರಿಸುತ್ತಾ ಸ್ತ್ರೀಯರಿಗೆ ಗೌರವ ಮತ್ತು ಸ್ವಾತಂತ್ರ್ಯವನ್ನ ಕೊಡಬೇಕು. ಹೀಗೆ ಮಾಡುವಾಗ ಅವರು ದೇವರ ಉದ್ದೇಶವನ್ನ ನೆರವೇರಿಸುತ್ತಾರೆ. (ಆದಿಕಾಂಡ 1:27, 28) ಪುರುಷ ತಾನು ಶ್ರೇಷ್ಠ ಅಂತ ನೆನಸದೆ ಬೈಬಲ್‌ ತತ್ವಗಳನ್ನ ಪಾಲಿಸಬೇಕು. ಹೀಗೆ ಮಾಡುವಾಗ ಅವನ ಹೆಂಡತಿ ಖುಷಿಯಾಗಿರುತ್ತಾಳೆ.—ಎಫೆಸ 5:28, 29.

ಯೆಲೆನಾ ಬೈಬಲನ್ನ ಕಲಿಯುತ್ತಿದ್ದಾಗ ಅವಳ ಗಂಡ ತುಂಬ ಕ್ರೂರವಾಗಿ ನಡೆದುಕೊಳ್ಳುತ್ತಿದ್ದನು. ಆದರೂ ಅವಳು ಅದನ್ನೆಲ್ಲಾ ತುಂಬ ತಾಳ್ಮೆಯಿಂದ ಸಹಿಸಿಕೊಳ್ಳುತ್ತಿದ್ದಳು. ಯಾಕಂದ್ರೆ ಅವನು ಬೆಳೆದು ಬಂದ ವಾತಾವರಣನೇ ಹಾಗಿತ್ತು. ಅಲ್ಲಿನ ಜನರು ಕ್ರೂರವಾಗಿ ನಡೆದುಕೊಳ್ಳೋದು, ಹುಡುಗಿರಯರನ್ನ ಕಿಡ್ನಾಪ್‌ ಮಾಡಿ ಮದುವೆ ಆಗೋದು, ದೌರ್ಜನ್ಯ ಮಾಡೋದು ಇವೆಲ್ಲಾ ಸರ್ವೇಸಾಮಾನ್ಯವಾಗಿತ್ತು. “ನಾನು ಬೈಬಲನ್ನ ಕಲಿಯಕ್ಕೆ ಶುರುಮಾಡಿದ ಮೇಲೆ ನನಗೆ ತುಂಬ ಬಲ ಸಿಕ್ಕಿದೆ. ನನ್ನನ್ನ ತುಂಬ ಪ್ರೀತಿಸುವ, ಗೌರವ ಕೊಡುವ ಮತ್ತು ಅಮೂಲ್ಯವಾಗಿ ನೋಡುವ ಒಬ್ಬರಿದ್ದಾರೆ ಅಂತ ಗೊತ್ತಾಯಿತು. ಈ ವಿಷಯವನ್ನ ನನ್ನ ಗಂಡನೂ ಕಲಿತಿದ್ದರೆ ತಮ್ಮ ಗುಣದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರಲ್ವಾ?” ಅಂತ ಅವಳು ಹೇಳುತ್ತಾಳೆ. ಆಮೇಲೆ ಅವಳ ಗಂಡ ಬೈಬಲ್‌ ಕಲಿಯುತ್ತಾನೆ ಮತ್ತು ದೀಕ್ಷಾಸ್ನಾನ ಪಡೆದುಕೊಳ್ಳುತ್ತಾನೆ. ಆಗ ಅವಳ ಕನಸು ನನಸಾಯಿತು. “ನನ್ನ ಗಂಡ ಸ್ವನಿಯಂತ್ರಣ ಕಾಪಾಡಿಕೊಳ್ಳೋದ್ರಲ್ಲಿ ಬೇರೆಯವರಿಗೆ ಈಗ ಮಾದರಿಯಾಗಿದ್ದಾನೆ. ನಾವಿಬ್ರೂ ಈಗ ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸಕ್ಕೆ ಕಲಿತಿದ್ದೀವಿ. ಬೈಬಲ್‌ ತತ್ವಗಳು ನನಗೆ ತುಂಬ ಸಹಾಯ ಮಾಡಿವೆ, ನನ್ನ ಕುಟುಂಬ ಜೀವನವನ್ನೇ ಕಾಪಾಡಿದೆ” ಅಂತ ಹೇಳುತ್ತಾಳೆ.—ಕೊಲೊಸ್ಸೆ 3:13, 18, 19.

ಯೆಲೆನಾ ತರಾನೇ ಇವತ್ತು ತುಂಬ ಸಹೋದರಿಯರಿಗೆ ಅನಿಸುತ್ತಿದೆ. ಲಕ್ಷಾಂತರ ಕ್ರೈಸ್ತ ಸಹೋದರಿಯರು ಮತ್ತು ಅವರ ಗಂಡಂದಿರು ಕುಟುಂಬದಲ್ಲಿ ಬೈಬಲ್‌ ತತ್ವಗಳನ್ನ ಅನ್ವಯಿಸುತ್ತಿರೋದ್ರಿಂದ ಅವರು ಖುಷಿಖುಷಿಯಾಗಿದ್ದಾರೆ. ಸಹೋದರರ ಮಧ್ಯ ಅವರು ಗೌರವ, ಸಾಂತ್ವನ ಮತ್ತು ಸ್ವಾತಂತ್ರ್ಯವನ್ನ ಪಡೆದುಕೊಳ್ಳುತ್ತಿದ್ದಾರೆ.—ಯೋಹಾನ 13:34, 35.

ಕ್ರೈಸ್ತ ಪುರುಷ ಮತ್ತು ಸ್ತ್ರೀ ತಾವು ಅಪರಿಪೂರ್ಣರು ಅಂತ ಅರ್ಥಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ ತಾವು ಕೂಡ ಸೃಷ್ಟಿಯ ಭಾಗ ಆಗಿರೋದ್ರಿಂದ ‘ವ್ಯರ್ಥ ಜೀವನ ಮಾಡಬೇಕಾಗಿದೆ’ ಅಂತ ಅರ್ಥಮಾಡಿಕೊಳ್ಳುತ್ತಾರೆ. ಹಾಗಾಗಿ ಯೆಹೋವ ದೇವರಿಗೆ ಆಪ್ತರಾಗೋಕೆ ಪ್ರಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ, ‘ದೇವರ ಮಕ್ಕಳಿಗೆ ಸಿಗೋ ಮಹಿಮೆಯ ಸ್ವಾತಂತ್ರ್ಯ ಪಡಿಯೋಕೆ’ ಕಾಯುತ್ತಾ ಇದ್ದಾರೆ. ಎಂಥ ಸುಂದರವಾದ ಅದ್ಭುತ ಜೀವನ ನಮಗಾಗಿ ಕಾದಿದೆ ಅಲ್ವಾ!—ರೋಮನ್ನರಿಗೆ 8:20, 21.