ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬದುಕನ್ನೇ ಬದಲಾಯಿಸಿತು ಬೈಬಲ್‌

ಬದುಕನ್ನೇ ಬದಲಾಯಿಸಿತು ಬೈಬಲ್‌

ಬದುಕನ್ನೇ ಬದಲಾಯಿಸಿತು ಬೈಬಲ್‌
  • ಜನನ: 1960

  • ದೇಶ: ಫಿನ್‌ಲ್ಯಾಂಡ್‌

  • ಹಿಂದೆ: ಹೆವಿ-ಮೆಟಲ್‌ ಸಂಗೀತಗಾರ

ಹಿನ್ನೆಲೆ:

ನಾನು ಮಧ್ಯವರ್ಗ ಕುಟುಂಬದಲ್ಲಿ ಬೆಳೆದುಬಂದವನು. ನಮ್ಮನೆ ಇದ್ದದ್ದು ಟುರ್ಕು ನಗರದ ಬಂದರಿನ ಪಕ್ಕ. ನಮ್ಮ ತಂದೆ ಬಾಕ್ಸಿಂಗ್‌ ವೀರ. ನಾನು ಮತ್ತು ನನ್ನ ತಮ್ಮ ಸಹ ಅದನ್ನು ಕಲಿತು ಆಗಾಗ ಭಾಗವಹಿಸುತ್ತಿದ್ದೆವು. ಶಾಲೆಯಲ್ಲಿದ್ದಾಗ ಒಂದಲ್ಲಾ ಒಂದು ಹೊಡೆದಾಟದಲ್ಲಿ ಇರುತ್ತಿದ್ದೆ. ಹದಿವಯಸ್ಸಿಗೆ ಬಂದಾಗಲಂತೂ ಕುಖ್ಯಾತ ಗ್ಯಾಂಗ್‌ಗೆ ಸೇರಿದ್ದರಿಂದ ಅದು ಇನ್ನೂ ಹೆಚ್ಚು ಹಿಂಸೆಗಳು ಕೂಡಿದ ದೊಂಬಿಗೆ ನನ್ನನ್ನು ನಡೆಸಿತು. ಆ ಸಮಯದಷ್ಟಕ್ಕೆ ನನಗೆ ಹೆವಿ ಮೆಟಲ್‌ ಸಂಗೀತದ ಹುಚ್ಚು ಹಿಡಿಯಿತು ಮತ್ತು ಒಬ್ಬ ದೊಡ್ಡ ರಾಕ್‌ಸ್ಟಾರ್‌ ಆಗಬೇಕೆಂಬ ಆಸೆ ನನ್ನಲ್ಲಿ ಕವಲೊಡೆಯಿತು.

ಕೆಲವು ಡ್ರಮ್ಸ್‌ಗಳನ್ನು ತಂದೆ. ನನ್ನದೇ ಒಂದು ಬ್ಯಾಂಡ್‌ ಕಟ್ಟಿಕೊಂಡೆ. ಬೇಗನೆ ಮುಖ್ಯ ಗಾಯಕ ಕೂಡ ಆದೆ. ವೇದಿಕೆ ಮೇಲೆ ಹಾಡುತ್ತಿರುವಾಗ ಅತಿರೇಕಕ್ಕೆ ಹೋಗಿ ಹುಚ್ಚನಂತಾಡುತ್ತಿದ್ದೆ. ನಮ್ಮ ಬ್ಯಾಂಡ್‌ನಲ್ಲಿದ್ದವರು ಸಹ ಹಾಗೆ ಇದ್ದರು. ನಾವು, ನಮ್ಮ ಶೈಲಿ ಎಲ್ಲಾ ವಿಚಿತ್ರವಾಗಿದ್ದರಿಂದ ಬೇಗ ಪ್ರಸಿದ್ಧರಾದೆವು. ದೊಡ್ಡ ಜನಸಂದಣಿ ಮುಂದೆ ಹಾಡಿದೆವು. ಕೆಲವು ಹಾಡುಗಳನ್ನು ರೆಕಾರ್ಡ್‌ ಮಾಡಿದೆವು ಮತ್ತು ಕೊನೆದಾಗಿ ನಾವು ಮಾಡಿದ ರೆಕಾರ್ಡಿಂಗಿಗೆ ಒಳ್ಳೇ ಪ್ರತಿಕ್ರಿಯೆ ಕೂಡ ಸಿಕ್ಕಿತು. ನಮ್ಮ ಬ್ಯಾಂಡ್‌ ಅನ್ನು ಪ್ರಚಾರ ಮಾಡಲು 1980ರಲ್ಲಿ ನಾವೆಲ್ಲ ಅಮೆರಿಕಗೆ ಹೋದೆವು. ನ್ಯೂಯಾರ್ಕ್‌ ಮತ್ತು ಲಾಸ್‌ ಎಂಜಲಿಸ್‌ನಲ್ಲಿ ಬ್ಯಾಂಡ್‌ ನುಡಿಸಿದೆವು. ಸಂಗೀತ ವೃತ್ತಿಪರರ ಪರಿಚಯ ಮಾಡಿಕೊಂಡ ನಂತರ ನಮ್ಮ ದೇಶಕ್ಕೆ ಮರಳಿದೆವು.

ನಾನು ನನ್ನ ಬ್ಯಾಂಡ್‌ನಲ್ಲಿ ಸಂತೋಷವಾಗಿದ್ದರೂ ಬದುಕು ಸಾರ್ಥಕವಾಗುವ ರೀತಿಯಲ್ಲಿ ಇರಬೇಕೆಂಬ ಬಯಕೆ ನನ್ನಲ್ಲಿ ಜಾಸ್ತಿಯಾಗುತ್ತಾ ಹೋಯಿತು. ಸಂಗೀತ ಕ್ಷೇತ್ರದ ಕರಾಳ ಮುಖ, ಅದರ ಒರಟುತನದಿಂದ ಬೇಸತ್ತು ಹೋಗಿದ್ದೆ. ತಲೆಬುಡ ಇಲ್ಲದ ನನ್ನ ಜೀವನ ರೀತಿಯಿಂದ ಕಿರಿಕಿರಿಯಾಗುತ್ತಿತ್ತು. ನಾನೊಬ್ಬ ಕೆಟ್ಟ ಮನುಷ್ಯ, ನನ್ನನ್ನು ನರಕದ ಬೆಂಕಿಯಲ್ಲಿ ಹಾಕುತ್ತಾರೆ ಅಂತ ತುಂಬ ಹೆದರುತ್ತಿದ್ದೆ. ಇದಕ್ಕಾಗಿ ಹೆಚ್ಚುಕಡಿಮೆ ಎಲ್ಲಾ ಧರ್ಮದ ಪುಸ್ತಕಗಳಲ್ಲಿ ಉತ್ತರ ಹುಡುಕಿದೆ. ನಾನೊಬ್ಬ ಒಳ್ಳೆ ವ್ಯಕ್ತಿ ಅಲ್ಲ ಅಂತ ಗೊತ್ತಿದ್ದರೂ ದೇವರಿಗೆ ತುಂಬ ಪ್ರಾರ್ಥಿಸಿದೆ.

ನನ್ನ ಬದುಕನ್ನು ಬದಲಾಯಿಸಿತು ಬೈಬಲ್‌:

ನನಗೆ ಹಣಕಾಸಿನ ಅವಶ್ಯಕತೆ ಇದ್ದದರಿಂದ ಅಂಚೆ ಕಛೇರಿಯಲ್ಲಿ ಕೆಲಸಕ್ಕೆ ಸೇರಿದೆ. ನನ್ನ ಜತೆ ಕೆಲಸ ಮಾಡುತ್ತಿದ್ದವ ಒಬ್ಬ ಯೆಹೋವನ ಸಾಕ್ಷಿ ಅಂತ ಗೊತ್ತಾಗಿದ್ದೇ ತಡ ಅವನ ಹತ್ತಿರ ನನಗಿದ್ದ ಪ್ರಶ್ನೆಗಳ ಭಂಡಾರವನ್ನೇ ಬಿಚ್ಚಿಟ್ಟೆ. ಅವನು ತರ್ಕ ಮಾಡುತ್ತಿದ್ದ ರೀತಿ ಮತ್ತು ಬೈಬಲ್‌ ಉಪಯೋಗಿಸಿ ಉತ್ತರ ಹೇಳುತ್ತಿದ್ದ ಪರಿ ನನಗೆ ತುಂಬ ಆಶ್ಚರ್ಯ ತಂದಿತು. ಆದ್ದರಿಂದ ಅವನ ಹತ್ತಿರ ಬೈಬಲ್‌ ಕಲಿಯಲು ಒಪ್ಪಿಕೊಂಡೆ. ಇದನ್ನು ಶುರುಮಾಡಿ ಸ್ವಲ್ಪ ವಾರಗಳು ಕಳೆದಿತ್ತು ಅಷ್ಟೇ, ನನ್ನ ಬ್ಯಾಂಡ್‌ಗೆ ಒಂದು ಅವಕಾಶ ಸಿಕ್ಕಿತು. ಸುಪ್ರಸಿದ್ಧ ಸಂಗೀತ ಕಂಪೆನಿಯೊಂದು ನಮ್ಮ ಹಾಡುಗಳನ್ನು ರೆಕಾರ್ಡ್‌ ಮಾಡಿ ಅದರ ಧ್ವನಿಸುರುಳಿಯನ್ನು ಅಮೆರಿಕದಲ್ಲಿ ಹೊರತರುವುದಾಗಿ ಹೇಳಿತು. ಇಂಥ ಅವಕಾಶ ಮತ್ತೆ ನನ್ನ ಜೀವನದಲ್ಲಿ ಸಿಗಲ್ಲ ಅಂತನಿಸಿತು.

ನಾನು ಯಾರ ಜತೆ ಬೈಬಲ್‌ ಕಲಿಯುತ್ತಿದ್ದೆನೋ ಅವನಿಗೆ ಹೇಳಿದೆ, ‘ಇದೇ ಕೊನೇ ಸಲ ಸಂಗೀತದ ರೆಕಾರ್ಡಿಂಗ್‌ ಮಾಡಿಬಿಡುತ್ತೇನೆ. ಅದಾದ ನಂತರ ನಾನು ಬೈಬಲ್‌ನಲ್ಲಿ ಕಲಿತ ವಿಷಯವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇನೆ.’ ಅದಕ್ಕವನು ತನ್ನ ಅಭಿಪ್ರಾಯವನ್ನು ಹೇಳದೆ ಮತ್ತಾಯ 6:24ರಲ್ಲಿರುವ ಯೇಸುವಿನ ಮಾತುಗಳನ್ನು ಓದಲು ಹೇಳಿದ. “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರ.” ಇದನ್ನು ಓದಿದ ಕೂಡಲೆ ಆಶ್ಚರ್ಯ ನನ್ನನ್ನಾವರಿಸಿತು. ಕೆಲವು ದಿನಗಳ ನಂತರ ಅವನಿಗೇ ಆಶ್ಚರ್ಯ ಕಾದಿತ್ತು! ಯಾಕೆಂದರೆ ಯೇಸುವಿನ ಹಿಂಬಾಲಕನಾಗಬೇಕೆಂಬ ಬಯಕೆಯಿಂದ ನಾನು ಬ್ಯಾಂಡ್‌ ಅನ್ನು ಬಿಟ್ಟು ಬಂದಿದ್ದೆ!

ಕನ್ನಡಿ ಹೇಗೆ ನಮ್ಮ ಮುಖದಲ್ಲಿರುವ ಕಲೆಯನ್ನು ಬಿಂಬಿಸುತ್ತೋ ಅದೇ ರೀತಿ ಬೈಬಲ್‌ ನನ್ನಲ್ಲಿದ್ದ ಕುಂದುಗಳನ್ನು ತೋರಿಸಿತು. (ಯಾಕೋಬ 1:22-25) ನಾನು ತುಂಬ ಕ್ರೂರಿಯಾಗಿದ್ದೆ. ಎಷ್ಟೇ ಗಳಿಸಿದರು ಅತೃಪ್ತಿ ನನ್ನಲ್ಲಿತ್ತು. ಕೆಟ್ಟ ಭಾಷೆ ಮಾತಾಡುತ್ತಿದ್ದೆ. ಜಗಳ, ಧೂಮಪಾನ, ಸಿಕ್ಕಾಪಟ್ಟೆ ಕುಡಿಯುತ್ತಿದ್ದೆ. ನನಗಾಗ ತಿಳಿಯಿತು, ನನ್ನ ಜೀವನ ಶೈಲಿ ಬೈಬಲ್‌ನ ತತ್ವಗಳಿಗೆ ಎಷ್ಟು ವಿರುದ್ಧವಾಗಿದೆ ಅಂತ. ನನ್ನ ಬಗ್ಗೆ ನನಗೇ ಅಸಹ್ಯ ಅಂತ ಅನಿಸಿತು. ಹಾಗಿದ್ದರೂ ಎಲ್ಲಾ ತರದ ಬದಲಾವಣೆಗಳನ್ನು ಮಾಡಿಕೊಳ್ಳಲು ಸಿದ್ಧನಿದ್ದೆ.—ಎಫೆಸ 4:22-24.

“ನಮ್ಮ ಸೃಷ್ಟಿಕರ್ತ ದೇವರು ತುಂಬ ಕರುಣಾಳು ಮತ್ತು ಮಾಡಿದ ತಪ್ಪಿಗೆ ಪರಿತಪಿಸುವವರನ್ನು ಕ್ಷಮಿಸುತ್ತಾನೆ”

ಆದರೆ ಜೀವನದಲ್ಲಿ ಮಾಡಿದ ತಪ್ಪುಗಳು ನನ್ನನ್ನು ಕಿತ್ತು ತಿನ್ನುತ್ತಿದ್ದವು. ನನಗೆ ಬೈಬಲ್‌ ಹೇಳಿಕೊಡುತ್ತಿದ್ದವ ತುಂಬ ಸಹಾಯಮಾಡಿದ. ಯೆಶಾಯ 1:18ರಲ್ಲಿರುವ ಮಾತುಗಳನ್ನು ತೋರಿಸಿದ: “ನಿಮ್ಮ ಪಾಪಗಳು ಕಡು ಕೆಂಪಾಗಿದ್ದರೂ ಹಿಮದ ಹಾಗೆ ಬಿಳುಪಾಗುವವು.” ಈ ವಚನ ಮತ್ತು ಇತರ ವಚನಗಳು ನಮ್ಮ ಸೃಷ್ಟಿಕರ್ತ ದೇವರು ಕರುಣಾಳು ಮತ್ತು ಮಾಡಿದ ತಪ್ಪಿಗೆ ಪರಿತಪಿಸುವವರನ್ನು ಕ್ಷಮಿಸುತ್ತಾನೆ ಅಂತ ನನಗೆ ಮನದಟ್ಟು ಮಾಡಿತು.

ಯೆಹೋವ ದೇವರನ್ನು ಅರಿಯುತ್ತಾ ಹೋದಂತೆ ಆತನನ್ನು ತುಂಬ ಪ್ರೀತಿಸಿದೆ ಮತ್ತು ಸಮರ್ಪಣೆ ಮಾಡಿಕೊಳ್ಳಬೇಕೆಂಬ ಬಯಕೆ ನನಗಾಯಿತು. (ಕೀರ್ತನೆ 40:8) 1992ರಲ್ಲಿ ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ ನಾನು ದೀಕ್ಷಾಸ್ನಾನ ಪಡೆದೆ.

ಸಿಕ್ಕಿದ ಪ್ರಯೋಜನಗಳು:

ಯೆಹೋವನನ್ನು ಆರಾಧಿಸುವ ಅನೇಕ ಒಳ್ಳೇ ಸ್ನೇಹಿತರು ನನಗಿದ್ದಾರೆ. ಕೆಲವೊಮ್ಮೆ ನಾವೆಲ್ಲಾ ಒಟ್ಟು ಸೇರಿ ಸಭ್ಯ ಸಂಗೀತವನ್ನು ಹಾಡಿ ನುಡಿಸಿ ದೇವರಿಂದ ಬಂದಿರುವ ಈ ಉಡುಗೊರೆಯಲ್ಲಿ ಆನಂದಿಸುತ್ತೇವೆ. (ಯಾಕೋಬ 1:17) ಕ್ರಿಸ್ಟಿನಾ ಜತೆ ಮದುವೆಯಾಗಿದ್ದು ನನಗೆ ಸಿಕ್ಕಿದ ಮತ್ತೊಂದು ಆಶೀರ್ವಾದ. ನನ್ನೆಲ್ಲಾ ಕಷ್ಟ ಸುಖ ಮತ್ತು ಮನದಾಳದ ಪ್ರತಿಯೊಂದು ಭಾವನೆಗಳನ್ನು ಅವಳೊಂದಿಗೆ ಹಂಚಿಕೊಳ್ಳುತ್ತೇನೆ.

ನಾನೊಬ್ಬ ಯೆಹೋವನ ಸಾಕ್ಷಿಯಾಗಿದ್ದಕ್ಕೇ ನಾನಿವತ್ತು ಬದುಕಿದ್ದೇನೆ. ಹಿಂದೆ ನಾನು ಒಂದಲ್ಲಾ ಒಂದು ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಂಡು ಬಳಲುತ್ತಿದ್ದೆ. ಆದರೆ ಈಗ ನನ್ನ ಜೀವನಕ್ಕೆ ಒಂದೊಳ್ಳೆ ಉದ್ದೇಶ ಇದೆ. ಎಲ್ಲಾ ಚೆನ್ನಾಗಿ ನಡಿತಿದೆ ಅನ್ನೊ ವಿಶ್ವಾಸ ಸಹ ಇದೆ. ▪ (w13-E 04/01)