ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಚಲ ನಂಬಿಕೆ

ಅಚಲ ನಂಬಿಕೆ

ಅಚಲ ನಂಬಿಕೆ

ನಂಬಿಕೆ: ಬೈಬಲ್‌ನಲ್ಲಿ ತಿಳಿಸಿರುವ “ನಂಬಿಕೆ” ಅನ್ನೋ ಪದಕ್ಕೆ ಗಹನ ಅರ್ಥವಿದೆ. ಅದು ಕಣ್ಣಿಗೆ ಕಾಣದಿರುವ ವಿಷಯಗಳ ಬಗ್ಗೆ ದೃಢವಿಶ್ವಾಸ, ಬಲವಾದ ಸಾಕ್ಷಿಯ ಅಡಿಪಾಯದಲ್ಲಿ ಕಟ್ಟಲಾದ ದೃಢವಿಶ್ವಾಸ. ಉದಾಹರಣೆಗೆ ದೇವರ ಮೇಲೆ ನಂಬಿಕೆ ಇರೋ ವ್ಯಕ್ತಿಗೆ ‘ದೇವರು ಯಾವತ್ತೂ ಮಾತು ತಪ್ಪಲ್ಲ’ ಅನ್ನೋ ಪೂರ್ಣ ಭರವಸೆ ಇರುತ್ತೆ.

ಮೋಶೆ ನಂಬಿಕೆ ತೋರಿಸಿದ ಪರಿ? ಮೋಶೆ ದೇವರ ಮಾತುಗಳನ್ನು ಸದಾ ಮನಸ್ಸಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ಬದುಕಿನ ಪ್ರತಿ ಹೆಜ್ಜೆ ಇಡುತ್ತಿದ್ದರು. (ಆದಿಕಾಂಡ 22:15-18) ಅವರು ಈಜಿಪ್ಟಿನಲ್ಲಿ ಐಷಾರಾಮಿ ಬಾಳ್ವೆ ನಡೆಸಬಹುದಿತ್ತು. ಉಂಡುಟ್ಟು ಮೆರೆಯುವಷ್ಟು ಸಂಪತ್ತಿತ್ತು. ಇದನ್ನೆಲ್ಲ ಬೇಡವೆಂದ ಮೋಶೆ “ಪಾಪದ ತಾತ್ಕಾಲಿಕ ಸುಖಾನುಭವಕ್ಕಿಂತ ದೇವರ ಜನರೊಂದಿಗೆ ದುರುಪಚಾರವನ್ನು ಅನುಭವಿಸುವ ಆಯ್ಕೆ” ಮಾಡಿದರು. (ಇಬ್ರಿಯ 11:25) ಈ ಆಯ್ಕೆ ಮೂರ್ಖತನವಾಗಿತ್ತಾ? ಆಮೇಲೆ ವ್ಯಥೆ ಪಟ್ಟರಾ? ಇಲ್ಲವೇ ಇಲ್ಲ. ಅದೃಶ್ಯರಾಗಿರುವ ದೇವರನ್ನು ನೋಡುತ್ತಿದ್ದೀನಿ ಎಂಬಂತೆ ದೃಢಚಿತ್ತರಾಗಿದ್ದರು. ಅಚಲ ನಂಬಿಕೆಯಿಟ್ಟಿದ್ದರು.—ಇಬ್ರಿಯ 11:27.

ಮೋಶೆ ಬೇರೆಯವರ ನಂಬಿಕೆಯನ್ನೂ ಕಟ್ಟುತ್ತಿದ್ದರು. ಉದಾಹರಣೆಗೆ ಒಮ್ಮೆ ಇಸ್ರೇಲಿಗಳ ಪರಿಸ್ಥಿತಿ ಅತ್ತ ದರಿ ಇತ್ತ ಪುಲಿ ಎಂಬಂತಾಗಿತ್ತು. ಹಿಂದೆ ಈಜಿಪ್ಟಿನ ರಾಜ ಅಟ್ಟಿಸಿಕೊಂಡು ಬರುತ್ತಿದ್ದ, ಮುಂದೆ ಕೆಂಪು ಸಮುದ್ರ ಇತ್ತು. ಮಧ್ಯದಲ್ಲಿ ಸಿಕ್ಕಿಬಿದ್ದಂತೆ ಅನಿಸಿ ಇಸ್ರೇಲಿಗಳು ಕಂಗಾಲಾಗಿ ಹೋಗಿದ್ದರು. ಯೆಹೋವ ದೇವರಿಗೆ, ಮೋಶೆಗೆ ಮೊರೆಯಿಟ್ಟರು. ಆಗ ಮೋಶೆ ಹೇಗೆ ಪ್ರತಿಕ್ರಿಯಿಸಿದರು?

“ಮೋಶೆ ಆ ಜನರಿಗೆ—ನೀವು ಅಂಜಬೇಡಿರಿ; ಸುಮ್ಮನೆ ನಿಂತುಕೊಂಡಿದ್ದು ಯೆಹೋವನು ಈ ಹೊತ್ತು ನಿಮ್ಮನ್ನು ರಕ್ಷಿಸುವ ರೀತಿಯನ್ನು ನೋಡಿರಿ” ಅಂದರು. (ವಿಮೋಚನಕಾಂಡ 14:13) ದೇವರು ಕೆಂಪು ಸಮುದ್ರದ ಮಧ್ಯದಲ್ಲಿ ಒಣನೆಲ ಮಾಡಿ ಇಸ್ರೇಲಿಗಳನ್ನು ಕಾಪಾಡುತ್ತಾರೆ ಅನ್ನೋದು ಮೋಶೆಗೆ ಗೊತ್ತಿರದೇ ಇದ್ದಿರಬಹುದು. ಆದರೆ ದೇವರು ಏನಾದರೂ ಮಾಡೇ ಮಾಡುತ್ತಾರೆ ಅಂತ ಭರವಸೆ ಇತ್ತು. ಅದೇ ಭರವಸೆ ಎಲ್ಲ ಇಸ್ರೇಲಿಗಳಲ್ಲೂ ಇರಬೇಕು ಅನ್ನೋದು ಮೋಶೆಯ ಆಶಯವಾಗಿತ್ತು. ಇಸ್ರೇಲಿಗಳ ನಂಬಿಕೆ ಕಟ್ಟುವುದರಲ್ಲಿ ಮೋಶೆ ಯಶಸ್ವಿಯಾದರಾ? ಯಶಸ್ವಿಯಾದರು. “ನಂಬಿಕೆಯಿಂದಲೇ [ಇಸ್ರೇಲಿಗಳು] ಒಣನೆಲದಲ್ಲಿಯೋ ಎಂಬಂತೆ ಕೆಂಪು ಸಮುದ್ರವನ್ನು ದಾಟಿದರು” ಎನ್ನುತ್ತೆ ಬೈಬಲ್‌. (ಇಬ್ರಿಯ 11:29) ದೇವರ ಮೇಲೆ ಮೋಶೆಗಿದ್ದ ಅಚಲ ನಂಬಿಕೆಯನ್ನು ನೋಡಿದ ಇಸ್ರೇಲಿಗಳ ನಂಬಿಕೆ ಸಹ ಬಲವಾಯ್ತು.

ನಾವು ಕಲಿಯುವ ಪಾಠ? ನಾವು ಕೂಡ ದೇವರ ಮಾತುಗಳನ್ನೆಲ್ಲ ಸದಾ ಮನಸ್ಸಿನಲ್ಲಿಟ್ಟು ಬದುಕಿನ ಪ್ರತಿಯೊಂದು ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಉದಾಹರಣೆಗೆ ನಾವು ಬದುಕಿನಲ್ಲಿ ದೇವರ ಆರಾಧನೆಗೆ ಮೊದಲ ಸ್ಥಾನ ಕೊಟ್ಟರೆ ದೇವರು ನಮ್ಮ ಮೂಲಭೂತ ಆವಶ್ಯಕತೆಗಳನ್ನು ನೋಡಿಕೊಳ್ಳುತ್ತೀನಿ ಅನ್ನೋ ಭರವಸೆ ಕೊಟ್ಟಿದ್ದಾರೆ. (ಮತ್ತಾಯ 6:33) ಆದರೆ ಪ್ರಪಂಚದಲ್ಲಿ ದುಡ್ಡೆ ದೊಡ್ಡಪ್ಪ. ಹೀಗಿರುವಾಗ ಹಣಕ್ಕೆ ಪ್ರಾಮುಖ್ಯತೆ ಕೊಡದೆ ಜೀವಿಸೋದು ತುಂಬ ಕಷ್ಟ. ಆದರೂ ಸರಳ ಜೀವನ ನಡೆಸುತ್ತಾ ದೇವರಿಗೆ ಸಂಪೂರ್ಣ ಭಕ್ತಿ ಸಲ್ಲಿಸುವಲ್ಲಿ ದೇವರು ನಮ್ಮ ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ. ದೇವರು ಕೊಟ್ಟಿರುವ ಮಾತು ನೋಡಿ: “ನಾನು ಎಂದಿಗೂ ನಿನ್ನ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ.”—ಇಬ್ರಿಯ 13:5.

ಬೇರೆಯವರ ನಂಬಿಕೆ ಕಟ್ಟುವ ಕೆಲಸವನ್ನೂ ನಾವು ಮಾಡಬೇಕು. ಉದಾಹರಣೆಗೆ ಹೆತ್ತವರಿಗೆ ತಮ್ಮ ಮಕ್ಕಳ ನಂಬಿಕೆ ಕಟ್ಟುವ ಸದವಕಾಶವಿದೆ. ಮಕ್ಕಳು ಬೆಳೆಯುತ್ತಾ ಹೋದಂತೆ ತಿಳಿದುಕೊಳ್ಳಬೇಕಾದ ಅನೇಕ ವಿಷಯಗಳಿವೆ. ದೇವರು ಇದ್ದಾರೆ ಮತ್ತು ಸರಿ ಯಾವುದು ತಪ್ಪು ಯಾವುದು ಅಂತ ನಮಗೆ ತಿಳಿಸಿದ್ದಾರೆ ಅನ್ನುವುದನ್ನೆಲ್ಲ ಚಿಕ್ಕವಯಸ್ಸಿನಲ್ಲಿಯೇ ಹೇಳಿಕೊಡಬೇಕು. ದೇವರ ನಿಯಮಗಳನ್ನು ಪಾಲಿಸುವುದೊಂದೇ ಸರಿಯಾದ ಮಾರ್ಗ ಅಂತ ಮಕ್ಕಳಿಗೆ ಸಂಪೂರ್ಣ ಮನವರಿಕೆ ಆಗಬೇಕು. (ಯೆಶಾಯ 48:17, 18) ದೇವರ ಮೇಲೆ ಅಚಲ ನಂಬಿಕೆ ಬೆಳೆಸಿಕೊಳ್ಳಲು ಅಂದರೆ ‘ದೇವರಿದ್ದಾರೆ ಮತ್ತು ದೇವರನ್ನು ಶ್ರದ್ಧಾಪೂರ್ವಕವಾಗಿ ಹುಡುಕುವವರಿಗೆ ಪ್ರತಿಫಲ ಕೊಡುತ್ತಾರೆ’ ಅನ್ನೋ ನಂಬಿಕೆ ಬೆಳೆಸಿಕೊಳ್ಳಲು ಮಕ್ಕಳಿಗೆ ಹೆತ್ತವರು ಕೊಡುವ ಸಹಾಯವೇ ಅತೀ ದೊಡ್ಡ ಕೊಡುಗೆ.—ಇಬ್ರಿಯ 11:6. (w13-E 02/01)

[ಪುಟ 4ರಲ್ಲಿರುವ ಚಿತ್ರ]

[ಪುಟ 4ರಲ್ಲಿರುವ ಚಿತ್ರ]