ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೈಂಗಿಕತೆ ಕುರಿತ ಹತ್ತು ಪ್ರಶ್ನೆಗಳಿಗೆ ಉತ್ತರ

ಲೈಂಗಿಕತೆ ಕುರಿತ ಹತ್ತು ಪ್ರಶ್ನೆಗಳಿಗೆ ಉತ್ತರ

ಲೈಂಗಿಕತೆ ಕುರಿತ ಹತ್ತು ಪ್ರಶ್ನೆಗಳಿಗೆ ಉತ್ತರ

1 ಏದೆನ್‌ ತೋಟದಲ್ಲಿ ಆದಾಮ ಹವ್ವರು ಮಾಡಿದ ಪಾಪ ಲೈಂಗಿಕ ಕ್ರಿಯೆ ಆಗಿತ್ತೇ?

▪ ಉತ್ತರ: ಏದೆನ್‌ ತೋಟದಲ್ಲಿದ್ದ ನಿಷಿದ್ಧ ಹಣ್ಣು ಆದಾಮ ಹವ್ವರ ಲೈಂಗಿಕ ಕ್ರಿಯೆಗೆ ಸೂಚಿಸುತ್ತದೆಂದು ಅನೇಕರು ನೆನಸುತ್ತಾರೆ. ಆದರೆ ಬೈಬಲ್‌ ಹಾಗೆ ಹೇಳುವುದಿಲ್ಲ.

“ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು” ತಿನ್ನಬಾರದೆಂದು ಆದಾಮನಿಗೆ ದೇವರು ಅಪ್ಪಣೆಕೊಟ್ಟಾಗ ಹವ್ವಳನ್ನು ಇನ್ನೂ ಸೃಷ್ಟಿಸಿರಲಿಲ್ಲ. (ಆದಿಕಾಂಡ 2:15-18) ಆದಾಮನು ಒಂಟಿಯಾಗಿದ್ದನು. ಹಾಗಾಗಿ ಆ ಹಣ್ಣು ಲೈಂಗಿಕ ಕ್ರಿಯೆಗೆ ಸೂಚಿಸಸಾಧ್ಯವಿಲ್ಲ. ಅಲ್ಲದೆ ‘ಬಹುಸಂತಾನವುಳ್ಳವರಾಗಿ ಹೆಚ್ಚಿ, ಭೂಮಿಯಲ್ಲಿ ತುಂಬಿಕೊಳ್ಳಿ’ ಎಂದು ದೇವರೇ ಆದಾಮ ಹವ್ವರಿಗೆ ಸ್ಪಷ್ಟ ಆಜ್ಞೆ ಕೊಟ್ಟಿದ್ದನು. (ಆದಿಕಾಂಡ 1:28) ‘ಬಹುಸಂತಾನವುಳ್ಳವರಾಗಿ ಭೂಮಿಯನ್ನು ತುಂಬಿಕೊಳ್ಳುವುದರಲ್ಲಿ’ ಲೈಂಗಿಕ ಕ್ರಿಯೆ ಸೇರಿದೆ ನಿಶ್ಚಯ. ಹೀಗಿರುವಾಗ ಆದಾಮ ಹವ್ವರಿಗೆ ಒಂದು ಆಜ್ಞೆ ಕೊಟ್ಟು, ಅದನ್ನು ಪಾಲಿಸಿದಕ್ಕಾಗಿ ಮರಣದಂಡನೆ ಕೊಡುವುದು ನ್ಯಾಯವೇ? ಪ್ರೀತಿಯುಳ್ಳ ದೇವರು ಆದಾಮ ಹವ್ವರಿಗೆ ಹಾಗೆ ಮಾಡುವನೇ?—1 ಯೋಹಾನ 4:8.

ಅಷ್ಟುಮಾತ್ರವಲ್ಲ, ಬೈಬಲಿನ ಮೂಲ ಗ್ರಂಥಪಾಠ ತೋರಿಸುವಂತೆ ಹವ್ವಳು ನಿಷಿದ್ಧ ಹಣ್ಣನ್ನು ‘ತೆಗೆದುಕೊಂಡು ತಿಂದಾಗ’ ಆದಾಮ ಅವಳ ಜೊತೆಗಿರಲಿಲ್ಲ. ಆಮೇಲೆ ಅವಳು “ಗಂಡನಿಗೂ ಕೊಡಲು ಅವನೂ ತಿಂದನು.”—ಆದಿಕಾಂಡ 3:6.

ಕಾಲಾನಂತರ ಆದಾಮ ಹವ್ವರು ಲೈಂಗಿಕ ಸಂಪರ್ಕದಿಂದ ಮಕ್ಕಳನ್ನು ಹುಟ್ಟಿಸಿದಾಗ ದೇವರು ಅವರನ್ನು ಖಂಡಿಸಲಿಲ್ಲ. (ಆದಿಕಾಂಡ 4:1, 2) ಹಾಗಾಗಿ ಆ ಹಣ್ಣು ಸಂಭೋಗಕ್ಕೆ ಸೂಚಿಸುವುದಿಲ್ಲ, ಬದಲಾಗಿ ಮರದಲ್ಲಿ ಬೆಳೆದ ನಿಜವಾದ ಹಣ್ಣೇ ಎಂಬುದು ಸ್ಪಷ್ಟ.

2 ದಾಂಪತ್ಯ ಸುಖವನ್ನು ಬೈಬಲ್‌ ನಿಷೇಧಿಸುತ್ತದೆಯೇ?

▪ ಉತ್ತರ: ಮಾನವರನ್ನು “ಗಂಡುಹೆಣ್ಣಾಗಿ ನಿರ್ಮಿಸಿದ”ವನು ದೇವರೇ ಎಂದು ಬೈಬಲಿನ ಪ್ರಥಮ ಪುಸ್ತಕ ತಿಳಿಸುತ್ತದೆ. ತನ್ನ ಈ ಸೃಷ್ಟಿ “ಬಹು ಒಳ್ಳೇದಾಗಿತ್ತು” ಎಂದೂ ದೇವರು ಘೋಷಿಸಿದನು. (ಆದಿಕಾಂಡ 1:27, 31) “ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು . . . ಆಕೆಯ ಸ್ತನಗಳು ನಿನ್ನನ್ನು ಸರ್ವದಾ ತೃಪ್ತಿಪಡಿಸಲಿ” ಎಂದು ಕಾಲಾನಂತರ ದೇವರು ಬೈಬಲಿನ ಒಬ್ಬ ಬರಹಗಾರನ ಮೂಲಕ ಗಂಡಂದಿರಿಗೆ ಸೂಚನೆ ಕೊಟ್ಟನು. (ಜ್ಞಾನೋಕ್ತಿ 5:18, 19) ಈ ಮಾತುಗಳನ್ನು ಓದುವಾಗ ದಾಂಪತ್ಯ ಸುಖವನ್ನು ಬೈಬಲ್‌ ನಿಷೇಧಿಸುತ್ತಿರುವಂತೆ ಅನಿಸುತ್ತಿದೆಯೇ?

ದೇವರು ಮಾನವರಲ್ಲಿ ಲೈಂಗಿಕ ಅಂಗಗಳನ್ನು ಸೃಷ್ಟಿಸಿದ್ದು ಸಂತಾನೋತ್ಪತ್ತಿಗಾಗಿ ಮಾತ್ರವಲ್ಲ ಪತಿಪತ್ನಿ ಪರಸ್ಪರ ಸಂತೋಷ ಕೊಡಲು, ಪ್ರೀತಿ ತೋರಿಸಲು ಎಂಬುದು ನಿಚ್ಚಳ. ಪ್ರೀತಿತುಂಬಿದ, ಅತ್ಯಾಪ್ತ ವಿವಾಹ ಬಂಧದಲ್ಲಿ ಬೆಸೆದಿರುವ ಗಂಡುಹೆಣ್ಣಿನ ದೈಹಿಕ ಮತ್ತು ಭಾವನಾತ್ಮಕ ಅಗತ್ಯಗಳನ್ನು ಲೈಂಗಿಕ ಕ್ರಿಯೆ ಪೂರೈಸುತ್ತದೆ.

3 ಗಂಡುಹೆಣ್ಣು ಕಾನೂನುಬದ್ಧವಾಗಿ ಮದುವೆಯಾಗದೆ ನಡೆಸುವ ಸಹಬಾಳ್ವೆಯನ್ನು ಬೈಬಲ್‌ ಒಪ್ಪುತ್ತದೆಯೇ?

▪ ಉತ್ತರ: ‘ದೇವರು ಜಾರರಿಗೆ ನ್ಯಾಯತೀರಿಸುವನು’ ಎಂಬುದು ಬೈಬಲಿನ ಸ್ಪಷ್ಟ ಮಾತು. (ಇಬ್ರಿಯ 13:4) ಜಾರತ್ವಕ್ಕಿರುವ ಗ್ರೀಕ್‌ ಪದ ಪೋರ್ನಿಯ. ವಿವಾಹ ಬಂಧದ ಹೊರಗಿನ ಎಲ್ಲ ವಿಧದ ಲೈಂಗಿಕ ಕ್ರಿಯೆಗಳು ಎಂಬ ವಿಶಾಲಾರ್ಥ ಆ ಪದಕ್ಕಿದೆ. * ಹಾಗಾಗಿ, ಒಂದು ಗಂಡುಹೆಣ್ಣು ಮದುವೆಯಾಗದೆ ಒಟ್ಟಿಗೆ ಜೀವಿಸುವುದು ದೇವರ ದೃಷ್ಟಿಯಲ್ಲಿ ತಪ್ಪಾಗಿದೆ. ಮುಂದೆ ಮದುವೆಯಾಗುವ ಯೋಜನೆ ಇದ್ದರೂ ಹಾಗೆ ಮಾಡುವುದು ತಪ್ಪೇ.

ಗಂಡುಹೆಣ್ಣು ಒಬ್ಬರನ್ನೊಬ್ಬರು ತುಂಬ ಪ್ರೀತಿಸುತ್ತಿದ್ದರೂ ಅವರು ಮದುವೆಯಾದ ಬಳಿಕವೇ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕೆಂಬುದು ದೇವರ ಆಜ್ಞೆ. ಪ್ರೀತಿಸುವ ಸಾಮರ್ಥ್ಯವನ್ನು ಕೊಟ್ಟಾತನು ದೇವರೇ. ಆತನ ಪ್ರಧಾನ ಗುಣವೂ ಪ್ರೀತಿಯೇ. ಹಾಗಾಗಿ, ಮದುವೆ ಮಾಡಿಕೊಂಡಿರುವ ಗಂಡುಹೆಣ್ಣು ಮಾತ್ರ ಲೈಂಗಿಕ ಸಂಪರ್ಕ ಇಡಬೇಕೆಂದು ಆತನು ಆಗ್ರಹಿಸುವುದರಲ್ಲಿ ತಪ್ಪೇನಿಲ್ಲ.

4 ಬಹುಪತ್ನಿತ್ವ/ಬಹುಪತಿತ್ವ ಸರಿಯೇ?

▪ ಉತ್ತರ: ದೇವರು ಹಿಂದೆ ಬಹುಪತ್ನಿತ್ವವನ್ನು ಸ್ವಲ್ಪ ಸಮಯದ ವರೆಗೆ ಅನುಮತಿಸಿದನು. (ಆದಿಕಾಂಡ 4:19; 16:1-4; 29:18–30:24) ಆದರೆ ಆ ಪದ್ಧತಿಗೆ ಚಾಲನೆ ಕೊಟ್ಟವನು ಆತನಲ್ಲ. ಆತನು ಆದಾಮನಿಗೆ ಒಬ್ಬಳೇ ಹೆಂಡತಿಯನ್ನು ಸೃಷ್ಟಿಸಿ ಕೊಟ್ಟನು.

ಈ ಏಕಪತ್ನಿತ್ವಕ್ಕೆ ಮರುಚಾಲನೆ ಕೊಡುವಂತೆ ದೇವರು ಯೇಸು ಕ್ರಿಸ್ತನಿಗೆ ಅಧಿಕಾರ ಕೊಟ್ಟನು. (ಯೋಹಾನ 8:28) ವಿವಾಹದ ಕುರಿತು ಕೇಳಲಾದ ಪ್ರಶ್ನೆಗೆ ಯೇಸು ಉತ್ತರಿಸಿದ್ದು: “ಮನುಷ್ಯರನ್ನು ಸೃಷ್ಟಿಸಿದಾತನು ಆರಂಭದಿಂದಲೇ ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿ, ‘ಈ ಕಾರಣದಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು ಮತ್ತು ಅವರಿಬ್ಬರು ಒಂದೇ ಶರೀರವಾಗಿರುವರು’ ಎಂದು ಹೇಳಿದನು.”—ಮತ್ತಾಯ 19:4, 5.

ಯೇಸುವಿನ ಒಬ್ಬ ಶಿಷ್ಯ ಕಾಲಾನಂತರ ಬೈಬಲಿನಲ್ಲಿ ಹೀಗೆ ಬರೆಯುವಂತೆ ದೇವರು ಪ್ರೇರಿಸಿದನು: “ಪ್ರತಿಯೊಬ್ಬ ಪುರುಷನಿಗೆ ತನ್ನ ಸ್ವಂತ ಹೆಂಡತಿಯು ಇರಲಿ ಮತ್ತು ಪ್ರತಿಯೊಬ್ಬ ಸ್ತ್ರೀಗೆ ತನ್ನ ಸ್ವಂತ ಗಂಡನು ಇರಲಿ.” (1 ಕೊರಿಂಥ 7:2) ಕ್ರೈಸ್ತ ಸಭೆಯಲ್ಲಿ ವಿಶೇಷ ಜವಾಬ್ದಾರಿ ಹೊತ್ತಿರುವ ವಿವಾಹಿತ ಪುರುಷರು ಏಕಪತ್ನಿಯುಳ್ಳವರಾಗಿರಬೇಕು ಎಂಬ ನಿಯಮ ಬೈಬಲ್‌ನಲ್ಲಿದೆ.—1 ತಿಮೊಥೆಯ 3:2, 12.

5 ವಿವಾಹಿತರು ಗರ್ಭನಿರೋಧಕಗಳನ್ನು ಬಳಸುವುದು ತಪ್ಪೇ?

▪ ಉತ್ತರ: ಮಕ್ಕಳನ್ನು ಪಡೆಯಬೇಕೊ ಬಾರದೊ ಎಂಬ ವಿಷಯದಲ್ಲಿ ಯೇಸು ತನ್ನ ಅನುಯಾಯಿಗಳಿಗೆ ಯಾವ ಆಜ್ಞೆಯನ್ನೂ ಕೊಡಲಿಲ್ಲ. ಯೇಸುವಿನೊಟ್ಟಿಗಿದ್ದ ಶಿಷ್ಯರೂ ಆ ಬಗ್ಗೆ ಯಾವುದೇ ನಿರ್ದೇಶನ ಕೊಡಲಿಲ್ಲ. ಜನನ ನಿಯಂತ್ರಣವನ್ನು ಖಂಡಿಸುವ ಮಾತು ಬೈಬಲಿನಲ್ಲಿ ಎಲ್ಲೂ ಇಲ್ಲ.

ಹಾಗಾಗಿ ಮಕ್ಕಳನ್ನು ಪಡೆಯಬೇಕೊ ಬಾರದೊ ಎಂಬುದು ದಂಪತಿಗೆ ಬಿಟ್ಟ ವಿಷಯ. ಎಷ್ಟು ಮಕ್ಕಳು ಬೇಕು, ಯಾವಾಗ ಪಡೆಯಬೇಕು ಎಂಬುದನ್ನೂ ಅವರೇ ನಿರ್ಣಯಿಸತಕ್ಕದ್ದು. ಅಂಕುರಗೊಂಡ ಜೀವವನ್ನು ಹೊಸಕಿಹಾಕದ ರೀತಿಯ ಗರ್ಭನಿರೋಧಕ ಬಳಸುವುದು ಅವರ ವೈಯಕ್ತಿಕ ನಿರ್ಣಯ ಹಾಗೂ ಜವಾಬ್ದಾರಿ. * ಅದು ತಪ್ಪೆಂದು ಹೇಳುವ ಹಕ್ಕು ಯಾರಿಗೂ ಇಲ್ಲ.—ರೋಮನ್ನರಿಗೆ 14:4, 10-13.

6 ಗರ್ಭಪಾತ ಮಾಡಿಸುವುದು ತಪ್ಪೇ?

▪ ಉತ್ತರ: ಇಸ್ರಾಯೇಲ್ಯರಿಗೆ ದೇವರು ಕೊಟ್ಟ ನಿಯಮ ಹೀಗಿತ್ತು: “ಪುರುಷರು ಪರಸ್ಪರ ಹೋರಾಡುತ್ತಿರುವಾಗ ಗರ್ಭಿಣಿ ಸ್ತ್ರೀಯೊಬ್ಬಳಿಗೆ ಏಟು ತಗಲಿ . . . [ಅವಳ ಅಥವಾ ಮಗುವಿನ] ಜೀವಕ್ಕೆ ಹಾನಿಯಾದರೆ ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು ಕೊಡತಕ್ಕದ್ದು.” (ವಿಮೋಚನಕಾಂಡ 21:22, 23, NW) ಹಾಗಾದರೆ ಜೀವ ದೇವರ ದೃಷ್ಟಿಯಲ್ಲಿ ಪವಿತ್ರ. ಆತನು ಒಂದು ಪಿಂಡಗೂಸನ್ನೂ ಒಬ್ಬ ವ್ಯಕ್ತಿ, ಒಂದು ಜೀವಿಯಾಗಿ ಎಣಿಸುತ್ತಾನೆ. (ಕೀರ್ತನೆ 139:16) ಆದ್ದರಿಂದ ಗರ್ಭಪಾತ ಮಾಡಿಸುವುದು ದೇವರ ದೃಷ್ಟಿಯಲ್ಲಿ ಒಂದು ಕೊಲೆ.—ವಿಮೋಚನಕಾಂಡ 20:13.

ಹೆರಿಗೆ ಸಮಯದಲ್ಲಿ ತಾಯಿಯನ್ನು ಮಾತ್ರ ಅಥವಾ ಮಗುವನ್ನು ಮಾತ್ರ ಉಳಿಸಬಹುದಾದ ತುರ್ತು ಪರಿಸ್ಥಿತಿ ಏಳುವಲ್ಲಿ ಏನು? ಆಗ, ಯಾರ ಜೀವವನ್ನು ಉಳಿಸಬೇಕೆಂಬ ನಿರ್ಣಯವನ್ನು ದಂಪತಿಯೇ ಮಾಡಬೇಕು. *

7 ವಿವಾಹ ವಿಚ್ಛೇದಕ್ಕೆ ಬೈಬಲ್‌ ಅನುಮತಿ ಕೊಡುತ್ತದೆಯೇ?

▪ ಉತ್ತರ: ಹೌದು. ಆದರೆ ಒಂದೇ ಒಂದು ಆಧಾರದ ಮೇಲೆ. ಇದನ್ನು ತಿಳಿಸುತ್ತಾ ಯೇಸು ಅಂದದ್ದು: “ಹಾದರದ [ವಿವಾಹಬಾಹಿರ ಲೈಂಗಿಕ ಕ್ರಿಯೆ] ಕಾರಣದಿಂದಲ್ಲದೆ ತನ್ನ ಹೆಂಡತಿಗೆ ವಿಚ್ಛೇದನ ನೀಡಿ ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗಿದ್ದಾನೆ.”—ಮತ್ತಾಯ 19:9.

ಮೋಸ ವಂಚನೆಯಿಂದ ಮಾಡಲಾದ ವಿಚ್ಛೇದವನ್ನು ದೇವರು ಹಗೆಮಾಡುತ್ತಾನೆ. ಕ್ಷುಲ್ಲಕ ಕಾರಣಗಳಿಗಾಗಿ, ಅದರಲ್ಲೂ ಇನ್ನೊಬ್ಬರೊಡನೆ ಹಾಸಿಗೆ ಹಂಚಿಕೊಳ್ಳಲಿಕ್ಕೆಂದೇ ತಮ್ಮ ಬಾಳಸಂಗಾತಿಯ ಕೈಬಿಟ್ಟವರಿಂದ ಆತನು ಲೆಕ್ಕಕೇಳುವನು.—ಮಲಾಕಿಯ 2:13-16; ಮಾರ್ಕ 10:9.

8 ಸಲಿಂಗರತಿಗೆ ದೇವರ ಅನುಮೋದನೆ ಇದೆಯೇ?

▪ ಉತ್ತರ: ಜಾರತ್ವವನ್ನು ಬೈಬಲ್‌ ನೇರವಾಗಿ ಖಂಡಿಸುತ್ತದೆ. ಜಾರತ್ವ ಎನ್ನುವಾಗ ಅದರಲ್ಲಿ ಸಲಿಂಗರತಿಯೂ ಸೇರಿದೆ. (ರೋಮನ್ನರಿಗೆ 1:26, 27; ಗಲಾತ್ಯ 5:19-21) ಈ ಜೀವನಶೈಲಿಗೆ ದೇವರ ಅನುಮೋದನೆ ಇಲ್ಲವೆಂದು ಬೈಬಲ್‌ ಖಂಡತುಂಡವಾಗಿ ಹೇಳುತ್ತದಾದರೂ ಆತನು “ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದು”ಕೊಳ್ಳುವುದು ಆತನ ಅಪೇಕ್ಷೆ ಎಂದೂ ಹೇಳುತ್ತದೆ.—ಯೋಹಾನ 3:16.

ನಿಜ ಕ್ರೈಸ್ತರು ಸಲಿಂಗರತಿಯನ್ನು ಒಪ್ಪದಿದ್ದರೂ ಸಲಿಂಗಕಾಮಿಗಳನ್ನು ದ್ವೇಷಿಸುವುದಿಲ್ಲ. (ಮತ್ತಾಯ 7:12) ಏಕೆಂದರೆ “ಎಲ್ಲ ರೀತಿಯ ಜನರನ್ನು ಗೌರವಿಸಿರಿ” ಎನ್ನುತ್ತಾನೆ ದೇವರು.—1 ಪೇತ್ರ 2:17.

9 ಫೋನ್‌ ಸೆಕ್ಸ್‌, ಸೆಕ್ಸ್‌ಟಿಂಗ್‌, ಸೈಬರ್‌ಸೆಕ್ಸ್‌ ತಪ್ಪೇ?

▪ ಉತ್ತರ: ಫೋನ್‌ನಲ್ಲಿ ಸೆಕ್ಸ್‌ ಕುರಿತು ಅಶ್ಲೀಲವಾಗಿ ಮಾತಾಡುವುದು, ಕಾಮೋತ್ತೇಜಕ ಮಾತುಗಳನ್ನು ಕೇಳಿಸಿಕೊಳ್ಳುವುದು ಫೋನ್‌ ಸೆಕ್ಸ್‌ ಆಗಿದೆ. ಮೊಬೈಲ್‌ ಮೂಲಕ ಇತರರಿಗೆ ಅಶ್ಲೀಲ ಚಿತ್ರಗಳನ್ನಾಗಲಿ, ಕಾಮಪ್ರಚೋದಕ ಸಂದೇಶಗಳನ್ನಾಗಲಿ ಕಳುಹಿಸುವುದೇ ಸೆಕ್ಸ್‌ಟಿಂಗ್‌ ಆಗಿದೆ. ಇಂಟರ್‌ನೆಟ್‌ನಲ್ಲಿ ನಡೆಸುವ ಕಾಮಪ್ರಚೋದಕ ಮಾತುಕತೆಯನ್ನು ಸೈಬರ್‌ಸೆಕ್ಸ್‌ ಅನ್ನುತ್ತಾರೆ.

ಇವುಗಳಂಥ ಆಧುನಿಕ ಚಾಳಿಗಳ ಬಗ್ಗೆ ಬೈಬಲ್‌ ಹೆಸರೆತ್ತಿ ತಿಳಿಸುವುದಿಲ್ಲ. ಆದರೆ “ಜಾರತ್ವ ಮತ್ತು ಪ್ರತಿಯೊಂದು ರೀತಿಯ ಅಶುದ್ಧತೆ ಅಥವಾ ಲೋಭ ಇವುಗಳ ಪ್ರಸ್ತಾಪವೂ ನಿಮ್ಮಲ್ಲಿರಬಾರದು. ಇವುಗಳಿಂದ ದೂರವಿರುವುದು ಪವಿತ್ರ ಜನರಿಗೆ ಯೋಗ್ಯವಾದದ್ದಾಗಿದೆ. ನಾಚಿಕೆಗೆಟ್ಟ ನಡತೆ, ಹುಚ್ಚುಮಾತು, ಅಶ್ಲೀಲವಾದ ತಮಾಷೆ ಇವು ಅಯುಕ್ತವಾಗಿವೆ” ಎಂದು ಹೇಳುತ್ತದೆ. (ಎಫೆಸ 5:3, 4) ಫೋನ್‌ ಸೆಕ್ಸ್‌, ಸೆಕ್ಸ್‌ಟಿಂಗ್‌, ಸೈಬರ್‌ಸೆಕ್ಸ್‌ನಂಥ ವಿಷಯಗಳು ಲೈಂಗಿಕತೆಯ ಕುರಿತ ವಿಕೃತ ನೋಟಕ್ಕೆ ಕುಮ್ಮಕ್ಕುಕೊಡುತ್ತವೆ. ಅಲ್ಲದೆ, ವಿವಾಹಬಂಧದ ಹೊರಗೆ ಲೈಂಗಿಕ ಸುಖ ಪಡೆಯುವಂತೆ ಉತ್ತೇಜಿಸುತ್ತವೆ. ಜನರು ತಮ್ಮ ಲೈಂಗಿಕ ಆಸೆಗಳನ್ನು ಹತ್ತಿಕ್ಕಲು ಇವು ನೆರವಾಗುವ ಬದಲು ಅವರ ಸ್ವಾರ್ಥ ಆಸೆಗಳೆಂಬ ಬೆಂಕಿಗೆ ಎಣ್ಣೆಸುರಿಯುತ್ತವೆ.

10 ಹಸ್ತಮೈಥುನದ ಬಗ್ಗೆ ಬೈಬಲಿನ ನೋಟವೇನು?

▪ ಉತ್ತರ: ಹಸ್ತಮೈಥುನ ಮಾಡುವ ವ್ಯಕ್ತಿ ಜನನಾಂಗಗಳನ್ನು ಉಜ್ಜುವ/ನೇವರಿಸುವ ಮೂಲಕ ಸ್ವತಃ ಲೈಂಗಿಕ ಉದ್ರೇಕ ಮತ್ತು ಪರಾಕಾಷ್ಠೆ ತಂದುಕೊಳ್ಳುತ್ತಾನೆ. ಹಸ್ತಮೈಥುನ ಎಂಬ ಪದವನ್ನು ಬೈಬಲ್‌ ಬಳಸದಿದ್ದರೂ “ಜಾರತ್ವ, ಅಶುದ್ಧತೆ, [ಅಯೋಗ್ಯ] ಕಾಮಾಭಿಲಾಷೆ, . . . ಇವುಗಳಿಗೆ ಸಂಬಂಧಿಸಿದ ಭೂಸಂಬಂಧವಾದ ನಿಮ್ಮ ದೈಹಿಕ ಅಂಗಗಳನ್ನು ಸಾಯಿಸಿರಿ” ಎಂದು ಅದು ಕ್ರೈಸ್ತರಿಗೆ ಅಪ್ಪಣೆ ಕೊಡುತ್ತದೆ.—ಕೊಲೊಸ್ಸೆ 3:5.

ಹಸ್ತಮೈಥುನವು ಲೈಂಗಿಕತೆಯ ಕುರಿತ ವಿಕೃತವಾದ, ಸ್ವಾರ್ಥಪರ ನೋಟಕ್ಕೆ ಇಂಬುಕೊಡುತ್ತದೆ. ಈ ಅಭ್ಯಾಸ ಬಿಟ್ಟುಬಿಡಲು ಯಥಾರ್ಥ ಪ್ರಯತ್ನ ಮಾಡುವವರಿಗೆ “ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ”ಯನ್ನು ದೇವರು ಕೊಡಬಲ್ಲನೆಂದು ಬೈಬಲ್‌ ಆಶ್ವಾಸನೆ ಕೊಡುತ್ತದೆ.—2 ಕೊರಿಂಥ 4:7; ಫಿಲಿಪ್ಪಿ 4:13. (w11-E 11/01)

[ಪಾದಟಿಪ್ಪಣಿಗಳು]

^ ಪ್ಯಾರ. 11 ಲೈಂಗಿಕ ಅಂಗಗಳನ್ನು ಸೃಷ್ಟಿಸುವುದರಲ್ಲಿ ದೇವರಿಗೊಂದು ಉದ್ದೇಶವಿತ್ತು. ಅದನ್ನು ಬಿಟ್ಟು ಹಾದರ, ಸಲಿಂಗರತಿ, ಪ್ರಾಣಿಗಳೊಂದಿಗೆ ಸಂಭೋಗಕ್ಕಾಗಿ ಅವುಗಳನ್ನು ಬಳಸುವುದು ಪೋರ್ನಿಯ ಆಗಿದೆ.

^ ಪ್ಯಾರ. 19 ಸಂತಾನಹರಣ ಚಿಕಿತ್ಸೆ ಬಗ್ಗೆ ಬೈಬಲಿನ ನೋಟ ತಿಳಿಯಲು ಜೂನ್‌ 15, 1999ರ ಕಾವಲಿನಬುರುಜು ಪುಟ 27-28ರಲ್ಲಿ “ವಾಚಕರಿಂದ ಪ್ರಶ್ನೆಗಳು” ಲೇಖನವನ್ನು ದಯವಿಟ್ಟು ನೋಡಿ.

^ ಪ್ಯಾರ. 22 ಬಲಾತ್ಕಾರಕ್ಕೆ ಒಳಗಾಗಿರುವ ಹೆಣ್ಣೊಬ್ಬಳು ಗರ್ಭಪಾತ ಮಾಡಿಸುವುದು ಸರಿಯೋ ಎಂಬದರ ಕುರಿತ ಮಾಹಿತಿಗಾಗಿ ಸೆಪ್ಟೆಂಬರ್‌ 8, 1993ರ ಎಚ್ಚರ! ಪತ್ರಿಕೆಯ ಪುಟ 10-11 ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.