ಪ್ರಕೃತಿ ವಿಕೋಪಗಳ ಹಾವಳಿ—ನಿಭಾಯಿಸುವುದು ಹೇಗೆ?
ಪ್ರಕೃತಿ ವಿಕೋಪಗಳ ಹಾವಳಿ—ನಿಭಾಯಿಸುವುದು ಹೇಗೆ?
ನೈಸರ್ಗಿಕ ವಿಪತ್ತುಗಳು ಮಾತ್ರವಲ್ಲ ಅವುಗಳಿಂದಾಗುವ ವಿನಾಶವೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಲೇಖನ ಬರೆಯಲಾಗಿದೆ. ಈ ವಿಪತ್ತುಗಳ ಹಾವಳಿಯನ್ನು ನಿಭಾಯಿಸಲು ನಾವೇನು ಮಾಡಬಲ್ಲೆವು? ಕೆಲವು ವ್ಯಾವಹಾರಿಕ ಸಲಹೆಗಳು ಇಲ್ಲಿವೆ.
ಅಪಾಯ ವಲಯದಲ್ಲಿ ಇರಬೇಡಿ. ಬೈಬಲಿನ ವಿವೇಕದ ನುಡಿ: “ಜಾಣನು ಕೇಡನ್ನು [ಮುಂದಾಗಿ] ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.” (ಜ್ಞಾನೋಕ್ತಿ 22:3) ಇದು ನೈಸರ್ಗಿಕ ವಿಪತ್ತುಗಳಿಗೂ ಅನ್ವಯವಾಗುತ್ತದೆ. ಜ್ವಾಲಾಮುಖಿ ಸ್ಫೋಟ, ನೆರೆಹಾವಳಿ, ಚಂಡಮಾರುತ, ತೂಫಾನು ಆಗಲಿದೆ ಎಂಬ ಎಚ್ಚರಿಕೆ ಸಿಕ್ಕಿ ತೆರವು ಮಾಡಬೇಕೆಂಬ ಆದೇಶ ಬಂದಾಗ ತಕ್ಷಣ ಸುರಕ್ಷಿತ ಸ್ಥಳಕ್ಕೆ ಹೋಗುವುದು ಬುದ್ಧಿವಂತಿಕೆಯ ಕೆಲಸ. ಮನೆಮಠಕ್ಕಿಂತ ನಿಮ್ಮ ಜೀವ ಹೆಚ್ಚು ಅಮೂಲ್ಯ.
ಕೆಲವರು ಅಪಾಯ ವಲಯದ ಹೊರಗೆ ಮನೆಮಾಡಿಕೊಳ್ಳುವ ಆಯ್ಕೆಮಾಡುತ್ತಾರೆ. ಒಂದು ಮಾಹಿತಿಗನುಸಾರ, “ಕೆಲವು ಕಡೆಗಳಲ್ಲಿ ಮಾತ್ರ ಹೆಚ್ಚಿನ ಅಪಾಯವಾಗುವ ಸಾಧ್ಯತೆಯಿದೆ. ಭವಿಷ್ಯತ್ತಿನಲ್ಲಿ ದೊಡ್ಡ ವಿಪತ್ತುಗಳು ಹೆಚ್ಚಾಗಿ ಇಂಥ ಕ್ಷೇತ್ರಗಳಲ್ಲಿ ನಡೆಯಲಿವೆ.” ಕರಾವಳಿಯ ತಗ್ಗು ಪ್ರದೇಶಗಳು ಮತ್ತು ಭೂಕಂಪ ಸಂಭಾವ್ಯ ನೆಲೆಗಳಿಗೆ (ಫಾಲ್ಟ್ ಲೈನ್) ಇದು ಅನ್ವಯ. ನೀವು ಇಂಥ ಅಪಾಯಕರ ಸ್ಥಳಗಳಿಂದ ದೂರದಲ್ಲಿ ಮನೆಮಾಡಿದರೆ ಅಥವಾ ಅಲ್ಲಿಂದ ಬೇರೆ ಕಡೆ ಸ್ಥಳಾಂತರಿಸಿದರೆ ವಿಪತ್ತುಗಳಿಂದಾಗುವ ಹಾನಿಯನ್ನು ಬಹುಮಟ್ಟಿಗೆ ತಪ್ಪಿಸಬಹುದು.
ಉಪಾಯವೊಂದನ್ನು ಯೋಚಿಸಿಡಿ. ನೀವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡ ಬಳಿಕವೂ ಒಂದು ಅನಿರೀಕ್ಷಿತ ಘಟನೆಗೆ ಸಿಕ್ಕಿಕೊಳ್ಳಬಹುದು. ಇಂಥ ಸನ್ನಿವೇಶವನ್ನು ನಿಭಾಯಿಸಲು ಏನು ಮಾಡಬೇಕೆಂದು ಮುಂಚೆಯೇ ಯೋಚಿಸಿಡಿ. ಹೀಗೆ ಮಾಡುವುದರ ಮೂಲಕವೂ, ಮೇಲೆ ಕೊಡಲಾದ ಜ್ಞಾನೋಕ್ತಿ 22:3ರ ವಿವೇಕದ ನುಡಿಯನ್ನು ಪಾಲಿಸುವಿರಿ. ಅಗತ್ಯವೆದ್ದಲ್ಲಿ ತಕ್ಷಣವೇ ತೆಗೆದುಕೊಂಡು ಹೋಗುವ ಹಾಗೆ ನೀವೊಂದು ಎಮರ್ಜೆನ್ಸಿ ಕಿಟ್ ಅನ್ನು ಸಿದ್ಧವಾಗಿಟ್ಟಿದ್ದೀರಾ? ಆ ಕಿಟ್ನಲ್ಲಿ ಏನೆಲ್ಲಾ ಇರಬೇಕು? ಪ್ರಥಮ ಚಿಕಿತ್ಸಾ ಸಾಮಗ್ರಿ, ನೀರು ತುಂಬಿದ ಬಾಟಲಿಗಳು, ಕೆಡದೆ ಸುರಕ್ಷಿತವಾಗಿರಬಲ್ಲ ಆಹಾರ ಮತ್ತು ಆವಶ್ಯಕ ಕಾಗದ ಪತ್ರಗಳು. (1-2-3 ಆಫ್ ಡಿಸಾಸ್ಟರ್ ಎಜ್ಯುಕೇಷನ್ ಎಂಬ ಪ್ರಕಾಶನದಲ್ಲಿರುವ ಪಟ್ಟಿ.) ಯಾವ್ಯಾವ ದುರಂತಗಳು ಎರಗಬಹುದು, ಪ್ರತಿಯೊಂದನ್ನೂ ನಿಭಾಯಿಸಲು ಏನು ಮಾಡಬೇಕೆಂದು ನಿಮ್ಮ ಮನೆಮಂದಿಯೊಂದಿಗೆ ಪರಿಶೀಲಿಸುವುದು ವಿವೇಕಯುತ.
ದೇವರೊಂದಿಗಿನ ಆಪ್ತ ಸಂಬಂಧ ಕಾಪಾಡಿಕೊಳ್ಳಿ. ಇದು ಹೇಗೆ ಸಹಾಯಮಾಡುತ್ತದೆಂದು ನೆನಸುತ್ತೀರಾ? ದೇವರು “ಕೋಮಲ ಕರುಣೆಯ ತಂದೆಯೂ ಸಕಲ ಸಾಂತ್ವನದ ದೇವರೂ ಆಗಿದ್ದಾನೆ. ನಮ್ಮ ಎಲ್ಲ ಸಂಕಟಗಳಲ್ಲಿ ಆತನು ನಮ್ಮನ್ನು ಸಾಂತ್ವನಗೊಳಿಸುತ್ತಾನೆ” ಎನ್ನುತ್ತದೆ ಬೈಬಲ್. “ಕುಗ್ಗಿಸಲ್ಪಟ್ಟಿರುವವರನ್ನು ಸಾಂತ್ವನಗೊಳಿಸುವ ದೇವರು” ಎಂದು ಇನ್ನೊಂದು ವಚನ ಆತನನ್ನು ವರ್ಣಿಸುತ್ತದೆ.—2 ಕೊರಿಂಥ 1:3, 4; 7:6.
ತನ್ನನ್ನು ನಂಬುವ ಜನರಿಗೆ ಏನೆಲ್ಲಾ ಕಷ್ಟ ಬರುತ್ತದೆ ಎಂಬುದು ದೇವರಿಗೆ ಚೆನ್ನಾಗಿ ತಿಳಿದಿದೆ. ಪ್ರೀತಿಯ ಸಾಕಾರಮೂರ್ತಿಯಾಗಿರುವ ಆತನು, ದುಃಖದ ಮಡುವಿನಲ್ಲಿರುವ ನಮ್ಮನ್ನು ಎಷ್ಟೋ ವಿಧಗಳಲ್ಲಿ ಪ್ರೋತ್ಸಾಹಿಸುತ್ತಾನೆ. (1 ಯೋಹಾನ 4:8) ನಾವು ಪ್ರಾರ್ಥಿಸಬೇಕು. ಅದ್ಭುತ ಮಾಡಿ ಕಾಪಾಡು ದೇವರೇ ಎನ್ನದೆ, ಏನೇ ಬಂದರೂ ಸಹಿಸಿಕೊಳ್ಳಲು ಶಕ್ತಿ ಕೊಡು ಎಂದು ಕೇಳಬೇಕು. ಸಾಂತ್ವನ ನೀಡುವ ಬೈಬಲ್ ವೃತ್ತಾಂತಗಳನ್ನು ದೇವರು ನಮ್ಮ ನೆನಪಿಗೆ ತಂದು ನಮ್ಮ ಮೇಲೆ ಬಂದೆರಗಿರುವ ವಿಪತ್ತನ್ನು ಸಹಿಸಿಕೊಳ್ಳಲು ಸಹಾಯಮಾಡುವನು. ಆಗ ನಮಗೆ ಪ್ರಾಚೀನ ಇಸ್ರೇಲಿನ ರಾಜ ದಾವೀದನಂತೆಯೇ ಅನಿಸುವುದು. ಅವನಂದದ್ದು: “ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ ನೀನು ಹತ್ತಿರವಿರುವದರಿಂದ ಕೇಡಿಗೆ ಹೆದರೆನು; ನಿನ್ನ ದೊಣ್ಣೆಯೂ ನಿನ್ನ ಕೋಲೂ ನನಗೆ ಧೈರ್ಯಕೊಡುತ್ತವೆ.”—ಕೀರ್ತನೆ 23:4.
ಜೊತೆ ಕ್ರೈಸ್ತರ ನೆರವು. ಒಂದನೇ ಶತಮಾನದಲ್ಲಿ ಅಗಬನೆಂಬ ಒಬ್ಬ ಕ್ರೈಸ್ತ ಪ್ರವಾದಿ “ಇಡೀ ನಿವಾಸಿತ ಭೂಮಿಯಲ್ಲಿ ದೊಡ್ಡ ಕ್ಷಾಮವು ಬರುವುದೆಂದು ಪವಿತ್ರಾತ್ಮ ಪ್ರೇರಣೆಯಿಂದ ತಿಳಿಸಿದನು; ಅದು ಕ್ಲೌದ್ಯ ಚಕ್ರವರ್ತಿಯ ಕಾಲದಲ್ಲಿ ಸಂಭವಿಸಿಯೇ ಬಿಟ್ಟಿತು.” ಈ ಕ್ಷಾಮದಿಂದ ಯೂದಾಯದಲ್ಲಿದ್ದ ಯೇಸುವಿನ ಶಿಷ್ಯರು ತುಂಬ ಕಷ್ಟಕ್ಕೊಳಗಾದರು. ಬೇರೆ ಕಡೆಗಳಲ್ಲಿ ಜೀವಿಸುತ್ತಿದ್ದ ಶಿಷ್ಯರು ಜೊತೆ ಕ್ರೈಸ್ತರ ಅವಸ್ಥೆಯನ್ನು ತಿಳಿದುಕೊಂಡಾಗ ಏನು ಮಾಡಿದರು ಗೊತ್ತೆ? “ಪ್ರತಿಯೊಬ್ಬರು ಯೂದಾಯದಲ್ಲಿ ವಾಸಿಸುತ್ತಿದ್ದ ಸಹೋದರರಿಗೆ ತಮ್ಮ ಸಾಮರ್ಥ್ಯಕ್ಕನುಸಾರ ಪರಿಹಾರ ನಿಧಿಯನ್ನು ಕಳುಹಿಸಲು ನಿರ್ಧರಿಸಿದರು” ಎಂದು ವೃತ್ತಾಂತ ತಿಳಿಸುತ್ತದೆ. (ಅಪೊಸ್ತಲರ ಕಾರ್ಯಗಳು 11:28, 29) ಪರಿಹಾರ ಸಾಮಗ್ರಿಯನ್ನು ಕಳುಹಿಸಿ ಅವರು ತಮ್ಮ ಅಪಾರ ಪ್ರೀತಿಯನ್ನು ವ್ಯಕ್ತಪಡಿಸಿದರು.
ಇಂದು ಸಹ ದೊಡ್ಡ ದುರಂತಗಳು ಸಂಭವಿಸುವಾಗ ಯೆಹೋವನ ಸಾಕ್ಷಿಗಳು ತಮ್ಮ ಜೊತೆ ವಿಶ್ವಾಸಿಗಳ ಸಹಾಯಕ್ಕೆ ಓಡೋಡಿ ಬರುತ್ತಾರೆ. ಇದನ್ನು ಎಷ್ಟೋ ಜನ ಮೆಚ್ಚಿದ್ದಾರೆ. ಒಂದು ಸಣ್ಣ ಉದಾಹರಣೆ: 2010 ಫೆಬ್ರವರಿ 27ರಂದು ಚಿಲಿ ದೇಶದಲ್ಲಿ ಒಂದು ಭೀಕರ ಭೂಕಂಪ ಸಂಭವಿಸಿತು. ತಕ್ಷಣವೇ ಯೆಹೋವನ ಸಾಕ್ಷಿಗಳು ಸಂತ್ರಸ್ತರಿಗೆ ಸಹಾಯ ನೀಡಲು ಸಜ್ಜಾದರು. ಕಾರ್ಲಾ ಎಂಬವರ ಮನೆ ಸುನಾಮಿಯ ಅಲೆಗಳ ಅಬ್ಬರಕ್ಕೆ ಕೊಚ್ಚಿಹೋಯಿತು. ಕಾರ್ಲಾ ಹೇಳುವುದು: “ಮರುದಿನವೇ ಬೇರೆ ಕಡೆಗಳಲ್ಲಿದ್ದ [ಜೊತೆ ಸಾಕ್ಷಿಗಳು] ಬಂದು ನೆರವು ನೀಡಿದರು. ಇದರಿಂದ ನಮಗೆ ತುಂಬ ಸಾಂತ್ವನ, ಪ್ರೋತ್ಸಾಹ ಸಿಕ್ಕಿತು. ಈ ಸ್ವಯಂ ಸೇವಕರ ಒಳ್ಳೇತನದಲ್ಲಿ ನಾವು ದೇವರ ಮಹಾ ಕೃಪೆಯನ್ನು ಕಣ್ಣಾರೆ ಕಂಡೆವು. ಇದರಿಂದ ಯೆಹೋವನ ಪ್ರೀತಿ, ರಕ್ಷೆ ನನಗೆ ಸಿಕ್ಕಿತು.” ಸಾಕ್ಷಿಗಳು ಕೊಡುತ್ತಿದ್ದ ನೆರವನ್ನು ನೋಡಿ ಸಾಕ್ಷಿಯಲ್ಲದ ಈಕೆಯ ಅಜ್ಜ ಆಶ್ಚರ್ಯಗೊಂಡರು. ಏಕೆಂದರೆ “ನನ್ನ ಚರ್ಚಿನ ಸದಸ್ಯರು ಹೀಗೆ ಮಾಡಿದ್ದನ್ನು ನಾನು ಇದು ವರೆಗೂ ನೋಡಿಲ್ಲ” ಎಂದವರು ಹೇಳಿದರು. ಇದರಿಂದ ಪ್ರಭಾವಿತರಾದ ಅವರು ಯೆಹೋವನ ಸಾಕ್ಷಿಗಳು ಬಂದು ತನ್ನೊಂದಿಗೆ ಬೈಬಲ್ ಅಧ್ಯಯನ ನಡೆಸಬೇಕೆಂದು ಕೇಳಿಕೊಂಡರು.
ವಿಪತ್ತುಗಳ ಸಮಯದಲ್ಲಿ ದೇವಭಕ್ತರ ಸಂಗ ನಮಗಿರುವ ವರ. ಆದರೂ ಈ ವಿಪತ್ತುಗಳಿಂದ ವಿಮುಕ್ತಿ ಎಂದಾದರೂ ಸಿಗುವುದೇ? ಈ ವಿಷಯದ ಬಗ್ಗೆ ಬೈಬಲ್ ಏನು ಹೇಳುತ್ತದೆಂದು ನೋಡೋಣ. (w11-E 12/01)
[ಪುಟ 6ರಲ್ಲಿರುವ ಚಿತ್ರ]
ಎಮರ್ಜೆನ್ಸಿ ಕಿಟ್ ಅನ್ನು ಸಿದ್ಧವಾಗಿಟ್ಟಿದ್ದೀರಾ?
[ಪುಟ 7ರಲ್ಲಿರುವ ಚಿತ್ರ]
ಅದ್ಭುತ ಮಾಡಿ ಕಾಪಾಡು ದೇವರೇ ಎನ್ನದೆ, ಏನೇ ಬಂದರೂ ಸಹಿಸಿಕೊಳ್ಳಲು ಶಕ್ತಿ ಕೊಡು ಎಂದು ಪ್ರಾರ್ಥಿಸಬೇಕು
[ಪುಟ 7ರಲ್ಲಿರುವ ಚಿತ್ರ]
ವಿಪತ್ತುಗಳಿಂದ ಚೇತರಿಸಿಕೊಳ್ಳಲು ಜೊತೆ ಕ್ರೈಸ್ತರು ಒಬ್ಬರಿಗೊಬ್ಬರು ನೆರವು ನೀಡುತ್ತಾರೆ
[ಪುಟ 7ರಲ್ಲಿರುವ ಚಿತ್ರ]
“ಯೆಹೋವನ ಪ್ರೀತಿ, ರಕ್ಷೆ ನನಗೆ ಸಿಕ್ಕಿತು”