ಭೂಮಿಗಾಗಿ ದೇವರ ಉದ್ದೇಶವೇನು?
ದೇವರ ವಾಕ್ಯದಿಂದ ಕಲಿಯಿರಿ
ಭೂಮಿಗಾಗಿ ದೇವರ ಉದ್ದೇಶವೇನು?
ನೀವು ಯೋಚಿಸಿರಬಹುದಾದ ಕೆಲವು ಪ್ರಶ್ನೆಗಳನ್ನು ಈ ಲೇಖನದಲ್ಲಿ ಕೊಡಲಾಗಿದೆ ಮಾತ್ರವಲ್ಲ ಅವುಗಳ ಉತ್ತರಗಳನ್ನು ದೇವರ ವಾಕ್ಯವಾದ ಬೈಬಲಿನಲ್ಲಿ ನೀವೆಲ್ಲಿ ಓದಬಹುದೆಂದೂ ತೋರಿಸಲಾಗಿದೆ. ಈ ಉತ್ತರಗಳನ್ನು ನಿಮ್ಮ ಜೊತೆ ಚರ್ಚಿಸಲು ಯೆಹೋವನ ಸಾಕ್ಷಿಗಳು ಸಂತೋಷಪಡುವರು.
1. ಭೂಮಿಗಾಗಿ ದೇವರ ಉದ್ದೇಶವೇನು?
ಈ ಭೂಮಿ ಮಾನವನ ಬೀಡು. ಸ್ವರ್ಗದಲ್ಲಿರಲಿಕ್ಕಾಗಿ ದೇವರು ದೇವದೂತರನ್ನು ಸೃಷ್ಟಿಸಿದನು. ಆದರೆ ಮನುಷ್ಯನನ್ನು ಭೂಮಿಯಲ್ಲಿ ಆನಂದದಿಂದ ಜೀವಿಸುವುದಕ್ಕಾಗಿ ನಿರ್ಮಿಸಿದನು. (ಯೋಬ 38:4, 6) ಆದ್ದರಿಂದ ಯೆಹೋವ ದೇವರು ಪ್ರಥಮ ಮನುಷ್ಯನ ವಾಸಕ್ಕಾಗಿ ಏದೆನ್ ಎಂದು ಕರೆಯಲಾದ ಸುಂದರ ತೋಟ ಇಲ್ಲವೆ ಪರದೈಸನ್ನು ಕೊಟ್ಟನು. ಅಲ್ಲದೆ, ಭೂಮಿ ಮೇಲೆ ಅನಂತ ಜೀವನದ ಪ್ರತೀಕ್ಷೆಯನ್ನು ಆದಾಮನ ಮತ್ತು ಅವನ ಸಂತತಿಯ ಮುಂದಿಟ್ಟನು.—ಆದಿಕಾಂಡ 2:15-17; ಕೀರ್ತನೆ 115:16 ಓದಿ.
ಏದೆನ್ ತೋಟವು ಭೂಮಿಯ ಒಂದು ಚಿಕ್ಕ ಭಾಗವನ್ನು ಮಾತ್ರ ಆವರಿಸಿತ್ತು. ಪ್ರಥಮ ಮಾನವ ದಂಪತಿಯಾದ ಆದಾಮ ಮತ್ತು ಹವ್ವರು ಮಕ್ಕಳನ್ನು ಹುಟ್ಟಿಸಬೇಕಾಗಿತ್ತು. ಹೀಗೆ ಮಾನವ ಕುಟುಂಬವು ದೊಡ್ಡದಾಗುತ್ತಾ ಹೋದಂತೆ ಅವರು ಏದೆನ್ ತೋಟವನ್ನು ವಿಸ್ತರಿಸುತ್ತಾ ಇಡೀ ಭೂಮಿಯನ್ನು ಪರದೈಸ್ ಆಗಿ ಮಾಡಬೇಕಾಗಿತ್ತು. (ಆದಿಕಾಂಡ 1:28) ಭೂಮಿಯು ಎಂದೂ ನಾಶವಾಗಲಿಕ್ಕಾಗಿ ನಿರ್ಮಿಸಲ್ಪಟ್ಟಿರಲಿಲ್ಲ.—ಕೀರ್ತನೆ 104:5 ಓದಿ.
2. ಭೂಮಿ ಇಂದು ಯಾಕೆ ಪರದೈಸ್ ಆಗಿಲ್ಲ?
ಆದಾಮ ಹವ್ವರು ದೇವರಿಗೆ ಅವಿಧೇಯರಾದರು. ಆದ್ದರಿಂದ ಅವರನ್ನು ಏದೆನ್ ತೋಟದಿಂದ ಹೊರಗಟ್ಟಲಾಯಿತು. ಹೀಗೆ ಅವರಿಗೆ ಆ ಪರದೈಸ್ ಕೈತಪ್ಪಿಹೋಯಿತು. ಅಂದಿನಿಂದ ಯಾವ ಮನುಷ್ಯನೂ ಅದನ್ನು ಪುನಃಸ್ಥಾಪಿಸುವುದರಲ್ಲಿ ಸಫಲನಾಗಿಲ್ಲ. “ಭೂಲೋಕವು ದುಷ್ಟರ ಕೈ ಸೇರಿದೆ” ಎನ್ನುತ್ತದೆ ಬೈಬಲ್.—ಯೋಬ 9:24; ಆದಿಕಾಂಡ 3:23, 24 ಓದಿ.
ಆದರೆ ಯೆಹೋವ ದೇವರು ಮಾನವಕುಲಕ್ಕಾಗಿ ತನಗಿದ್ದ ಮೂಲ ಉದ್ದೇಶವನ್ನು ಮರೆತಿಲ್ಲ. ಆತನ ಉದ್ದೇಶ ಯಾವತ್ತೂ ವಿಫಲವೂ ಆಗಲಾರದು. (ಯೆಶಾಯ 45:18) ಮಾನವಕುಲವು ಹೇಗಿರಬೇಕೆಂದು ಆತನು ಉದ್ದೇಶಿಸಿದ್ದನೊ ಅದೇ ಸ್ಥಿತಿಗೆ ಅದನ್ನು ಪುನಃಸ್ಥಾಪಿಸಿಯೇ ತೀರುವನು.—ಕೀರ್ತನೆ 37:11 ಓದಿ.
3. ದೇವರು ಭೂಮಿಯಲ್ಲಿ ಶಾಂತಿಯನ್ನು ಹೇಗೆ ಪುನಃಸ್ಥಾಪಿಸುವನು?
ಮಾನವಕುಲ ಶಾಂತಿಯಿಂದ ಜೀವಿಸಬೇಕಾದರೆ ದೇವರು ಮೊದಲಾಗಿ ದುಷ್ಟರನ್ನು ನಿರ್ಮೂಲಮಾಡಲೇಬೇಕು. ಆದ್ದರಿಂದ ತನ್ನನ್ನು ವಿರೋಧಿಸುವ ಜನರೆಲ್ಲರನ್ನು ದೇವರು ತನ್ನ ದೂತರ ಮೂಲಕ ಅರ್ಮಗೆದೋನ್ ಎಂಬ ಯುದ್ಧದಲ್ಲಿ ನಾಶಮಾಡುವನು. ಸೈತಾನನನ್ನು 1,000 ವರ್ಷಗಳ ಬಂಧಿವಾಸಕ್ಕೆ ಹಾಕಲಾಗುವುದು. ಆದರೆ ದೇವರನ್ನು ಪ್ರೀತಿಸುವ ಜನರು ಆ ಯುದ್ಧವನ್ನು ಪಾರಾಗಿ, ಈ ಭೂಮಿಯ ಮೇಲೆಯೇ ಒಂದು ಹೊಸ ಪರಿಸ್ಥಿತಿಯಲ್ಲಿ ಜೀವನವನ್ನು ಆನಂದಿಸುವರು.—ಪ್ರಕಟನೆ 16:14, 16; 20:1-3; 21:3, 4 ಓದಿ.
4. ಕಷ್ಟಸಂಕಟ ಯಾವಾಗ ಕೊನೆಗೊಳ್ಳುವುದು?
ಆ 1,000 ವರ್ಷಗಳ ಸಮಯದಲ್ಲಿ ಯೇಸು ಸ್ವರ್ಗದಿಂದ ಭೂಮಿಯನ್ನು ಆಳುವನು ಮತ್ತು ಅದನ್ನು ಪುನಃ ಪರದೈಸಾಗಿ ಮಾಡುವನು. ಅಲ್ಲದೆ, ಯಾರು ದೇವರನ್ನು ಪ್ರೀತಿಸುತ್ತಾರೊ ಅವರನ್ನು, ಆದಾಮನಿಂದ ಬಾಧ್ಯತೆಯಾಗಿ ಬಂದ ಪಾಪದಿಂದ ಬಿಡಿಸುವನು. ಹೀಗೆ ಅಸ್ವಸ್ಥತೆ, ವೃದ್ಧಾಪ್ಯ, ಮರಣವನ್ನೂ ಯೇಸು ತೆಗೆದುಹಾಕುವನು.—ಯೆಶಾಯ 11:9; 25:8; 33:24; 35:1 ಓದಿ.
ಭೂಮಿಯಲ್ಲಿರುವ ದುಷ್ಟತನವನ್ನು ದೇವರು ಯಾವಾಗ ನಾಶಮಾಡುವನು? ದುಷ್ಟತನದ ಅಂತ್ಯ ಹತ್ತಿರವಿದೆಯೆಂದು ತೋರಿಸುವ “ಸೂಚನೆ”ಯನ್ನು ಯೇಸು ಕೊಟ್ಟನು. ಸದ್ಯದ ಲೋಕದ ಪರಿಸ್ಥಿತಿಗಳು ಮಾನವನ ಅಸ್ತಿತ್ವಕ್ಕೇ ಬೆದರಿಕೆಯೊಡ್ಡುತ್ತಿವೆ ಮತ್ತು ನಾವೀಗ ಲೋಕ “ವ್ಯವಸ್ಥೆಯ ಸಮಾಪ್ತಿ”ಯಲ್ಲಿ ಜೀವಿಸುತ್ತಿದ್ದೇವೆಂದು ತೋರಿಸುತ್ತವೆ.—ಮತ್ತಾಯ 24:3, 7-14, 21, 22; 2 ತಿಮೊಥೆಯ 3:1-5 ಓದಿ.
5. ಭವಿಷ್ಯದ ಆ ಪರದೈಸಿನಲ್ಲಿ ಯಾರು ಜೀವಿಸುವರು?
ಯೇಸು ತನ್ನ ಹಿಂಬಾಲಕರಿಗೆ ಜನರನ್ನು ಶಿಷ್ಯರಾಗಿ ಮಾಡಬೇಕೆಂದು ಮತ್ತು ಅವರಿಗೆ ದೇವರ ಪ್ರೀತಿಯ ಮಾರ್ಗಗಳನ್ನು ಕಲಿಸಬೇಕೆಂದು ಅಪ್ಪಣೆಕೊಟ್ಟನು. (ಮತ್ತಾಯ 28:19, 20) ಲೋಕದಾದ್ಯಂತ ಯೆಹೋವನು ಲಕ್ಷಾಂತರ ಜನರನ್ನು ಭೂಮಿಯ ಮೇಲಿನ ಹೊಸ ಪರಿಸ್ಥಿತಿಗಳಲ್ಲಿನ ಜೀವನಕ್ಕಾಗಿ ಈಗಲೇ ಸಿದ್ಧಗೊಳಿಸುತ್ತಿದ್ದಾನೆ. (ಚೆಫನ್ಯ 2:3) ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಗಳಲ್ಲಿ ಜನರು ತಾವು ಹೇಗೆ ಉತ್ತಮ ಗಂಡಂದಿರು, ತಂದೆಯಂದಿರು, ಹೆಂಡತಿಯರು, ತಾಯಂದಿರು ಆಗಿರಬೇಕೆಂದು ಕಲಿಯುತ್ತಿದ್ದಾರೆ. ಮುಂದೆ ಒಳ್ಳೇ ಭವಿಷ್ಯವಿದೆಯೆಂದು ನಂಬಲಿಕ್ಕಾಗಿ ಯಾವ ಆಧಾರವಿದೆ ಎಂಬುದನ್ನು ಹೆತ್ತವರೂ ಮಕ್ಕಳೂ ಅಲ್ಲಿ ಜೊತೆಗೂಡಿ ಕಲಿಯುತ್ತಾರೆ.—ಮೀಕ 4:1-4 ಓದಿ.
ನೀವು ರಾಜ್ಯ ಸಭಾಗೃಹಕ್ಕೆ ಹೋದಾಗ, ದೇವರನ್ನು ಪ್ರೀತಿಸುವ ಮತ್ತು ಆತನನ್ನು ಮೆಚ್ಚಿಸುವುದು ಹೇಗೆಂದು ಕಲಿಯಲಿಚ್ಛಿಸುವ ಜನರನ್ನು ಭೇಟಿಯಾಗುವಿರಿ.—ಇಬ್ರಿಯ 10:24, 25 ಓದಿ. (w11-E 04/01)
ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 3ನೇ ಅಧ್ಯಾಯ ನೋಡಿ.