ದೇವರ ಹೆಸರನ್ನು ತಿಳಿದುಕೊಳ್ಳುವುದು—ಏನೆಲ್ಲ ಒಳಗೂಡಿದೆ?
ದೇವರ ಹೆಸರನ್ನು ತಿಳಿದುಕೊಳ್ಳುವುದು—ಏನೆಲ್ಲ ಒಳಗೂಡಿದೆ?
ನಿಮ್ಮ ಹೆಸರಿಗೆ ನಿರ್ದಿಷ್ಟ ಅರ್ಥ ಇದೆಯೊ? ಲೋಕದ ಕೆಲವೆಡೆ ಮಕ್ಕಳಿಗೆ ಅರ್ಥಭರಿತವಾದ ಹೆಸರನ್ನಿಡುವ ಪದ್ಧತಿಯಿದೆ. ಆ ಹೆಸರು, ಹೆತ್ತವರ ನಂಬಿಕೆಗಳನ್ನೂ ಮೌಲ್ಯಗಳನ್ನೂ ಇಲ್ಲವೆ ಮಗುವಿನ ಭವಿಷ್ಯದ ಬಗ್ಗೆ ಅವರಿಗಿರುವ ನಿರೀಕ್ಷೆಗಳನ್ನೂ ಕನಸುಗಳನ್ನೂ ಪ್ರತಿಬಿಂಬಿಸುತ್ತದೆ.
ಈ ಪದ್ಧತಿ ಹೊಸತೇನಲ್ಲ. ಬೈಬಲ್ ಕಾಲದಲ್ಲಿ ವೈಯಕ್ತಿಕ ಹೆಸರುಗಳನ್ನು ಸಾಮಾನ್ಯವಾಗಿ ಅವುಗಳ ಅರ್ಥಕ್ಕನುಸಾರ ಇಡಲಾಗುತ್ತಿತ್ತು. ಕೆಲವು ಹೆಸರುಗಳು ಒಬ್ಬ ವ್ಯಕ್ತಿ ಮುಂದೆ ಬದುಕಿನಲ್ಲಿ ನಿರ್ವಹಿಸಲು ನಿರೀಕ್ಷಿಸಲಾಗುತ್ತಿದ್ದ ಪಾತ್ರವನ್ನು ಸೂಚಿಸುತ್ತಿದ್ದವು. ಉದಾಹರಣೆಗೆ, ಸೊಲೊಮೋನನು ಭವಿಷ್ಯದಲ್ಲಿ ನಿರ್ವಹಿಸಲಿರುವ ಪಾತ್ರದ ಬಗ್ಗೆ ಯೆಹೋವನು ಅವನ ತಂದೆಯಾದ ದಾವೀದನಿಗೆ ಹೀಗಂದನು: “ಅವನಿಗೆ ಸೊಲೊಮೋನನೆಂಬ ಹೆಸರಿರುವದು. ಅವನ ಕಾಲದಲ್ಲಿ ಇಸ್ರಾಯೇಲ್ಯರಿಗೆ ಸಮಾಧಾನವನ್ನೂ ಸೌಭಾಗ್ಯವನ್ನೂ ದಯಪಾಲಿಸುವೆನು.” ಸೊಲೊಮೋನ ಎಂಬ ಹೆಸರಿನ ಮೂಲ ಅರ್ಥ “ಶಾಂತಿ” ಎಂದಾಗಿದೆ.—1 ಪೂರ್ವಕಾಲವೃತ್ತಾಂತ 22:9.
ಒಂದು ಹೊಸ ಪಾತ್ರವನ್ನು ನಿರ್ವಹಿಸಲಿದ್ದವರಿಗೆ ಕೆಲವೊಮ್ಮೆ ಯೆಹೋವನು ಹೊಸ ಹೆಸರನ್ನು ಕೊಟ್ಟನು. ಅಬ್ರಹಾಮನ ಬಂಜೆ ಪತ್ನಿಗೆ ಸಾರಾ ಎಂಬ ಹೆಸರಿಟ್ಟನು. ಅದರರ್ಥ, “ರಾಣಿ, ರಾಜಸ್ತ್ರೀ.” ಈ ಹೆಸರು ಕೊಡಲು ಕಾರಣ? ಯೆಹೋವನು ವಿವರಿಸಿದ್ದು: “ನಾನು ಆಕೆಯನ್ನು ಆಶೀರ್ವದಿಸಿ ಆಕೆಯಲ್ಲಿ ನಿನಗೆ ಮಗನನ್ನು ಕೊಡುವೆನು. ನಾನು ಆಕೆಯನ್ನು ಆಶೀರ್ವದಿಸಿದ್ದರಿಂದ ಆಕೆಯಿಂದ ಅನೇಕಜನಾಂಗಗಳೂ ಅರಸರೂ ಉತ್ಪತ್ತಿಯಾಗುವರು.” (ಆದಿಕಾಂಡ 17:16) ಹಾಗಾದರೆ ಸಾರಾಳ ಹೊಸ ಪಾತ್ರವನ್ನು ಅರ್ಥಮಾಡಿಕೊಳ್ಳುವುದರಿಂದ ಆಕೆಗೆ ಹೊಸ ಹೆಸರನ್ನು ಏಕೆ ಕೊಡಲಾಯಿತೆಂದು ಗ್ರಹಿಸಬಹುದು.
ಎಲ್ಲಕ್ಕಿಂತಲೂ ಹೆಚ್ಚು ಮಹತ್ತಾದ ಯೆಹೋವ ಎಂಬ ಹೆಸರಿನ ಕುರಿತೇನು? ಅದರರ್ಥವೇನು? ಮೋಶೆ ಯೆಹೋವ ದೇವರಿಗೆ ಹೆಸರೇನೆಂದು ಕೇಳಿದಾಗ ಆತನು ಉತ್ತರಿಸಿದ್ದು: “ಎಂಥವನಾಗಿರುವೆನೋ ಅಂಥವನಾಗಿರುವೆನು.” (ವಿಮೋಚನಕಾಂಡ 3:14, ಪಾದಟಿಪ್ಪಣಿ) ರಾಥರ್ಹ್ಯಾಮ್ ಭಾಷಾಂತರ ಇದನ್ನು “ನನಗೇನು ಇಷ್ಟವೋ ಹಾಗೆಯೇ ಆಗುವೆನು” ಎಂದು ಭಾಷಾಂತರಿಸುತ್ತದೆ. ದೇವರಿಗಿರುವ ‘ಯೆಹೋವ’ ಎಂಬ ಹೆಸರೇ ಆತನಿಗೆ ಅಸಂಖ್ಯಾತ ಪಾತ್ರಗಳಿವೆ ಎಂಬುದನ್ನು ಪ್ರಕಟಿಸುತ್ತದೆ. ಇದಕ್ಕೊಂದು ಸರಳ ದೃಷ್ಟಾಂತ ಇಲ್ಲಿದೆ: ತಾಯಿಯು ಇಡೀ ದಿನ ತನ್ನ ಮಕ್ಕಳ ಪರಾಮರಿಕೆ ಮಾಡುವಾಗ ಅಗತ್ಯಕ್ಕೆ ತಕ್ಕಂತೆ ನರ್ಸ್ ಆಗಿ, ಅಡಿಗೆಯವಳಾಗಿ, ಶಿಕ್ಷಕಿ ಆಗಿ ಹೀಗೆ ಹತ್ತುಹಲವು ಪಾತ್ರಗಳನ್ನು ನಿರ್ವಹಿಸುತ್ತಾಳೆ. ಯೆಹೋವನ ವಿಷಯದಲ್ಲೂ ಹೀಗೆಯೇ. ವ್ಯತ್ಯಾಸ ಇಷ್ಟೇ, ಆತನ ಪಾತ್ರಗಳು ಒಬ್ಬ ತಾಯಿಗಿಂತ ಎಷ್ಟೋ ಹೆಚ್ಚು ಉನ್ನತವಾದವುಗಳು. ಮಾನವಕುಲಕ್ಕಾಗಿ ಆತನಿಗಿರುವ ಉದ್ದೇಶವನ್ನು ಪೂರೈಸಲಿಕ್ಕಾಗಿ ತನಗೇನು ಇಷ್ಟವೋ ಹಾಗೆಯೇ ಆಗಬಲ್ಲನು, ಅಗತ್ಯವಿರುವ ಯಾವುದೇ ಪಾತ್ರವನ್ನು ನಿರ್ವಹಿಸಲು ಶಕ್ತನು. ಹೀಗೆ ಯೆಹೋವನ ಹೆಸರನ್ನು ತಿಳಿದುಕೊಳ್ಳುವುದರಲ್ಲಿ ಆತನ ಹಲವಾರು ಪಾತ್ರಗಳನ್ನು ಅರ್ಥಮಾಡಿಕೊಂಡು ಮಾನ್ಯಮಾಡುವುದೂ ಒಳಗೂಡಿದೆ.
ದುಃಖದ ಸಂಗತಿಯೇನೆಂದರೆ, ದೇವರ ಹೆಸರನ್ನು ನಿಜವಾಗಿ ತಿಳಿಯದವರಿಗೆ ಆತನ ವ್ಯಕ್ತಿತ್ವದ ಸೊಬಗು ಮರೆಯಾಗಿದೆ. ಆದರೆ ಬೈಬಲಿನ ಅಧ್ಯಯನ ಮಾಡಿದರೆ ನೀವು ಯೆಹೋವನ ಪಾತ್ರಗಳನ್ನು ಗ್ರಹಿಸುವಿರಿ. ವಿವೇಕಿ ಸಲಹೆಗಾರ, ಶಕ್ತಿಯುತ ಉದ್ಧಾರಕ, ಉದಾರವಾಗಿ ಒದಗಿಸುವಾತ ಇವು ಆತನ ಕೆಲವೊಂದು ಪಾತ್ರಗಳು. ಯೆಹೋವನ ಹೆಸರಿನ ಸಿರಿ ನಿಶ್ಚಯವಾಗಿಯೂ ವಿಸ್ಮಯಕಾರಿ.
ಆದರೆ ದೇವರ ಹೆಸರನ್ನು, ಈ ಮೂಲಕ ಆತನ ವ್ಯಕ್ತಿತ್ವವನ್ನು ತಿಳಿದುಕೊಳ್ಳಲು ಕೆಲವೊಮ್ಮೆ ತಡೆಗಳು ಎದುರಾಗುತ್ತವೆ. ಏಕೆ? ಮುಂದಿನ ಲೇಖನ ಅದನ್ನು ತಿಳಿಸುವುದು. (w10-E 07/01)