ಬದುಕನ್ನೇ ಬದಲಾಯಿಸುವ ಬೈಬಲ್
ಬದುಕನ್ನೇ ಬದಲಾಯಿಸುವ ಬೈಬಲ್
ಬೈಕ್ ಸವಾರಿ, ಡ್ರಗ್ಸ್, ಕ್ರೀಡೆಗಳಲ್ಲೇ ಪೂರ್ತಿ ಮುಳುಗಿದ್ದ ವ್ಯಕ್ತಿ ಪೂರ್ಣ ಸಮಯ ದೇವರ ಸೇವೆ ಮಾಡಲು ಆರಿಸಿಕೊಂಡದ್ದೇಕೆ? ಜೂಜಾಟದಿಂದಲೇ ಜೀವನ ಸಾಗಿಸುತ್ತಿದ್ದ ಇನ್ನೊಬ್ಬ ವ್ಯಕ್ತಿ ಆ ಚಾಳಿ ಬಿಟ್ಟು ಗೌರವಾರ್ಹ ಕೆಲಸಮಾಡಿ ಕುಟುಂಬವನ್ನು ಪರಾಮರಿಸುವಂತೆ ಮಾಡಿದ್ದು ಯಾವುದು? ಬಾಲ್ಯದಿಂದಲೇ ಬೈಬಲ್ ಸತ್ಯ ಗೊತ್ತಿದ್ದರೂ ಅದಕ್ಕನುಸಾರ ಜೀವಿಸುವುದನ್ನು ಬಿಟ್ಟುಬಿಟ್ಟ ಯುವತಿಗೆ ತನ್ನ ಜೀವನರೀತಿಯನ್ನು ಪರಿಶೀಲಿಸುವಂತೆ ಪ್ರಚೋದಿಸಿದ್ದು ಯಾವುದು? ಅವರು ಹೇಳುವುದನ್ನು ನೀವೇ ಕೇಳಿ.
ವ್ಯಕ್ತಿ-ಪರಿಚಯ
ಹೆಸರು: ಟೆರೆನ್ಸ್ ಜೆ. ಓಬ್ರೈಯನ್
ವಯಸ್ಸು: 57
ಸ್ವದೇಶ: ಆಸ್ಟ್ರೇಲಿಯ
ಹಿಂದೆ: ಡ್ರಗ್ಸ್ ಬಳಕೆ, ಬೈಕ್ ಹುಚ್ಚು
ಹಿನ್ನೆಲೆ: ನಾನು ಬಾಲ್ಯವನ್ನು ಕಳೆದದ್ದು ಕ್ವೀನ್ಸ್‌ಲ್ಯಾಂಡ್ ರಾಜ್ಯದ ರಾಜಧಾನಿಯಾದ ಬ್ರಿಸ್ಬೇನ್ ಎಂಬ ಜನನಿಬಿಡ ನಗರದಲ್ಲಿ. ನನ್ನದು ಕ್ಯಾಥೊಲಿಕ್ ಕುಟುಂಬ. ಆದರೆ ನಾನು ಎಂಟು ವರ್ಷದವನಾಗಿದ್ದಾಗ ನನ್ನ ಕುಟುಂಬ ಚರ್ಚ್‌ಗೆ ಹೋಗುವುದನ್ನು ನಿಲ್ಲಿಸಿತು. ಆ ಬಳಿಕ ನಮ್ಮ ಮಧ್ಯೆ ಧರ್ಮದ ಕುರಿತ ಮಾತೇ ಬರುತ್ತಿರಲಿಲ್ಲ. ನಾನು ಹತ್ತು ವರ್ಷದವನಾಗಿದ್ದಾಗ ನನ್ನ ಕುಟುಂಬ ಆಸ್ಟ್ರೇಲಿಯದಲ್ಲೇ ಗೋಲ್ಡ್ ಕೋಸ್ಟ್‌ಗೆ ಸ್ಥಳಾಂತರಿಸಿತು. ಕಡಲ ತೀರದಲ್ಲಿ ನಮ್ಮ ಮನೆ. ಹದಿವಯಸ್ಸಿನ ಆರಂಭದ ವರ್ಷಗಳನ್ನು ಈಜು ಮತ್ತು ಕಡಲಲೆಗಳ ಸವಾರಿಯ (ಸರ್ಫಿಂಗ್) ಮೋಜಿನಲ್ಲೇ ಕಳೆದೆ.
ಆದರೂ ನನ್ನ ಬಾಲ್ಯ ಆನಂದದಿಂದ ತುಂಬಿರಲಿಲ್ಲ. ಅಪ್ಪ ಮನೆ ಬಿಟ್ಟು ಹೋದಾಗ ನನಗೆ ಎಂಟು ವರ್ಷ. ಅಮ್ಮ ಪುನಃ ಮದುವೆಯಾದರು. ಮನೆಯಲ್ಲಿ ಮದ್ಯಪಾನ, ವಾಗ್ವಾದಗಳು ಒಂದು ದಿನವೂ ತಪ್ಪುತ್ತಿರಲಿಲ್ಲ. ಒಂದು ರಾತ್ರಿ ಯಾವುದೋ ವಿಷಯಕ್ಕೆ ಅಪ್ಪಅಮ್ಮ ಮಧ್ಯೆ ಮಾತಿಗೆ ಮಾತು ಬೆಳೆದು ಬಡಿದಾಡಿಕೊಂಡರು. ನಾನೇನಾದರೂ ಮದುವೆಯಾದರೆ ಯಾವತ್ತೂ ನನ್ನ ಹೆಂಡತಿಯೊಟ್ಟಿಗೆ ವಾದ ಮಾಡುವುದಿಲ್ಲವೆಂದು ಅಂದೇ ಶಪಥಮಾಡಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ತಾಯಿ, ಮಲತಂದೆ ಮತ್ತು ನಾವು ಆರು ಮಂದಿ ಮಕ್ಕಳು ಆಪ್ತರಾಗಿದ್ದೆವು.
ಹದಿವಯಸ್ಸಿನ ಕೊನೆಯಲ್ಲಿದ್ದಾಗ ನನ್ನ ಸಮವಯಸ್ಕರಲ್ಲಿ ಹೆಚ್ಚಿನವರು ಅಧಿಕಾರದಲ್ಲಿರುವವರ ವಿರುದ್ಧ ದಂಗೆಯೆದ್ದರು. ಗಾಂಜಾ, ತಂಬಾಕು, ಇತರ ಡ್ರಗ್ಸ್ ಬಳಸಿದರು ಮತ್ತು ಮದ್ಯವ್ಯಸನಿಗಳಾದರು. ನಾನು ಕೂಡ ಅವರಂತೆ ಮಾಡಿ ಬಿಂದಾಸ್ ಜೀವನ ನಡೆಸಿದೆ. ಬೈಕ್ ಸವಾರಿ ಅಂದರೆ ನನಗೆ ಪ್ರಾಣ. ಅನೇಕ ಬಾರಿ ಭೀಕರ ಅಪಘಾತಕ್ಕೀಡಾಗಿದ್ದರೂ ಬೈಕ್ ಹುಚ್ಚು ಎಷ್ಟಿತ್ತೆಂದರೆ ಅದರಲ್ಲಿ ಇಡೀ ಆಸ್ಟ್ರೇಲಿಯ ಸುತ್ತಿ ಬರಬೇಕೆಂದು ನೆನಸಿದೆ.
ನನಗೆ ಇಷ್ಟೆಲ್ಲಾ ಸ್ವಾತಂತ್ರ್ಯ ಇದ್ದರೂ, ಲೋಕದ ಪರಿಸ್ಥಿತಿ ಕುರಿತು ಮತ್ತು ಮಾನವಕುಲದ ಸಮಸ್ಯೆಗಳ ಬಗ್ಗೆ ಹೆಚ್ಚಿನವರ
ನಿರ್ಲಕ್ಷ್ಯವನ್ನು ನೆನಸುವಾಗಲೆಲ್ಲಾ ಖಿನ್ನನಾಗುತ್ತಿದ್ದೆ. ದೇವರು, ಧರ್ಮ, ಲೋಕದ ಪರಿಸ್ಥಿತಿಗಳ ಬಗ್ಗೆ ಸತ್ಯವನ್ನು ತಿಳಿಯಲು ಹಾತೊರೆದೆ. ಆದರೆ ನನಗಿದ್ದ ಪ್ರಶ್ನೆಗಳನ್ನು ಇಬ್ಬರು ಕ್ಯಾಥೊಲಿಕ್ ಪಾದ್ರಿಗಳ ಬಳಿ ಕೇಳಿದಾಗ ಅವರು ಕೊಟ್ಟ ಉತ್ತರಗಳಿಂದ ನಿರಾಶೆಯಾಯಿತು. ಬೇರೆ ಬೇರೆ ಪ್ರಾಟೆಸ್ಟಂಟ್ ಪಾದ್ರಿಗಳೊಂದಿಗೆ ಚರ್ಚಿಸಿದಾಗಲೂ ಆದದ್ದು ಅದೇ. ಆಗ ಸ್ನೇಹಿತನೊಬ್ಬನು ಎಡ್ಡೀ ಎಂಬ ಯೆಹೋವನ ಸಾಕ್ಷಿಯೊಬ್ಬನನ್ನು ನನಗೆ ಭೇಟಿಮಾಡಿಸಿದನು. ಎಡ್ಡೀಯೊಂದಿಗೆ ನಾಲ್ಕು ಬಾರಿ ಚರ್ಚೆ ನಡೆಯಿತು. ಪ್ರತಿ ಸಲವೂ ಅವನು ಬೈಬಲನ್ನು ಉಪಯೋಗಿಸಿ ನನ್ನ ಪ್ರಶ್ನೆಗಳನ್ನು ಉತ್ತರಿಸಿದ. ಆರಂಭದ ಚರ್ಚೆಯಿಂದಲೇ ನನಗೇನೋ ವಿಶೇಷವಾದದ್ದು ಸಿಕ್ಕಿದೆಯೆಂದು ಗೊತ್ತಾಯಿತು. ಹಾಗಿದ್ದರೂ ಜೀವನಶೈಲಿಯನ್ನು ಬದಲಾಯಿಸುವುದು ಅಗತ್ಯವೆಂದು ನನಗಾಗ ಕಾಣಲಿಲ್ಲ.ನನ್ನ ಬದುಕನ್ನು ಬದಲಾಯಿಸಿತು ಬೈಬಲ್: ಬೈಕಲ್ಲಿ ಆಸ್ಟ್ರೇಲಿಯ ಪರ್ಯಟನೆ ಮಾಡುತ್ತಿದ್ದಾಗ ನಾನು ಭೇಟಿಯಾದ ಇನ್ನೊಬ್ಬ ಸಾಕ್ಷಿಯೊಂದಿಗೆ ಬೈಬಲ್ ಚರ್ಚೆಗಳು ನಡೆದವು. ಆದರೆ ನಾನು ಕ್ವೀನ್ಸ್‌ಲ್ಯಾಂಡ್‌ಗೆ ಮರಳಿದಾಗ ಆರು ತಿಂಗಳ ವರೆಗೆ ಸಾಕ್ಷಿಗಳೊಂದಿಗೆ ಯಾವುದೇ ಸಂಪರ್ಕವಿರಲಿಲ್ಲ.
ಒಂದು ದಿನ ಕೆಲಸ ಮುಗಿಸಿ ಮನೆಗೆ ಬರುತ್ತಿರುವಾಗ, ನೀಟಾದ ಬಟ್ಟೆಧರಿಸಿ ಬ್ರೀಫ್‌ಕೇಸ್ ಹಿಡಿದಿದ್ದ ಇಬ್ಬರು ಪುರುಷರನ್ನು ದಾರಿಯಲ್ಲಿ ನೋಡಿದೆ. ಅವರು ಯೆಹೋವನ ಸಾಕ್ಷಿಗಳೇ ಆಗಿರಬೇಕೆಂದು ಊಹಿಸಿದೆ. ಅವರ ಬಳಿ ಹೋಗಿ ಮಾತಾಡಿಸಿದಾಗ ನನ್ನ ಊಹೆ ನಿಜವಾಯಿತು. ನನಗೆ ಬೈಬಲ್ ಅಧ್ಯಯನ ಬೇಕೆಂದು ಅವರನ್ನು ಕೇಳಿಕೊಂಡೆ. ಕೂಡಲೆ ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗ ತೊಡಗಿದೆ. 1973ರಲ್ಲಿ ಸಿಡ್ನಿಯಲ್ಲಿ ನಡೆದ ಒಂದು ದೊಡ್ಡ ಅಧಿವೇಶನಕ್ಕೂ ಹೋದೆ. ಆದರೆ ನನ್ನ ಕುಟುಂಬದವರಿಗೆ ಅದರಲ್ಲೂ ಅಮ್ಮನಿಗೆ ಇದೆಲ್ಲ ಗೊತ್ತಾದಾಗ ಅವರಿಗೆ ತುಂಬ ಬೇಸರವಾಯಿತು. ಇದರಿಂದ ಮತ್ತು ಇನ್ನಿತರ ಕಾರಣಗಳಿಂದ ಸಾಕ್ಷಿಗಳೊಂದಿಗಿನ ಸಹವಾಸ ನಿಲ್ಲಿಸಿದೆ. ಬಳಿಕ ಕ್ರಿಕೆಟ್ ಆಡುವುದರಲ್ಲೇ ಒಂದು ವರ್ಷ ಕಳೆದೆ. ಅದು ನನಗಿದ್ದ ಇನ್ನೊಂದು ಹುಚ್ಚು.
ಆದರೆ ಸಮಯ ಕಳೆದಂತೆ, ನಾನು ನಿಜವಾಗಿಯೂ ಸಂತೋಷವಾಗಿದ್ದದ್ದು ಯೆಹೋವನ ಸಾಕ್ಷಿಗಳು ನನ್ನೊಂದಿಗೆ ಬೈಬಲ್ ಅಧ್ಯಯನ ಮಾಡುತ್ತಿದ್ದಾಗ ಮಾತ್ರ ಎಂಬುದು ಮನದಟ್ಟಾಯಿತು. ಪುನಃ ಅವರನ್ನು ಸಂಪರ್ಕಿಸಿ ಕೂಟಗಳಿಗೆ ಹಾಜರಾಗ ತೊಡಗಿದೆ. ಡ್ರಗ್ಸ್ ಸೇವಿಸುತ್ತಿದ್ದ ಗೆಳೆಯರೊಂದಿಗಿನ ಸ್ನೇಹವನ್ನೂ ಕಡಿದುಹಾಕಿದೆ.
ಈ ಎಲ್ಲ ಬದಲಾವಣೆಗಳನ್ನು ಮಾಡಲು ನನಗೆ ಪ್ರಚೋದನೆ ಸಿಕ್ಕಿದ್ದು ಬೈಬಲಿನಲ್ಲಿ ತಿಳಿಸಲಾಗಿರುವ ಯೋಬನ ಕುರಿತು ಕಲಿತಾಗಲೇ. ಪ್ರಾಯದಲ್ಲಿ ಹಿರಿಯರಾಗಿದ್ದ ಬಿಲ್ ನನ್ನೊಂದಿಗೆ ಕ್ರಮವಾಗಿ ಬೈಬಲ್ ಅಧ್ಯಯನ ಮಾಡುತ್ತಿದ್ದರು. ಅವರು ದಯಾಪರರಾದರೂ ದೃಢರಾಗಿದ್ದರು. ಒಮ್ಮೆ ಅಧ್ಯಯನದಲ್ಲಿ ಯೋಬನ ಕಥೆಯನ್ನು ಓದಿದ ಬಳಿಕ ನನಗೊಂದು ಪ್ರಶ್ನೆ ಕೇಳಿದರು. ‘ದೇವರನ್ನು ಅರೆಮನಸ್ಸಿನಿಂದ ಸೇವಿಸುತ್ತಾರೆಂದು ಸೈತಾನನು ಬೇರೆ ಯಾರ ಮೇಲೆ ಅಪವಾದ ಹೊರಿಸುತ್ತಾನೆ?’ (ಯೋಬ 2:3-5) ನನಗೆ ಗೊತ್ತಿದ್ದ ಎಲ್ಲ ಬೈಬಲ್ ವ್ಯಕ್ತಿಗಳ ಹೆಸರನ್ನು ಒಂದೊಂದಾಗಿ ಹೇಳಿದೆ. ಬಿಲ್ ಅವರು ತಾಳ್ಮೆಯಿಂದ “ಹೌದು, ಹೌದು” ಎನ್ನುತ್ತಾ ಇದ್ದರು. ಅನಂತರ ನನ್ನ ಕಣ್ಣಲ್ಲಿ ಕಣ್ಣಿಟ್ಟು “ನಿನ್ನ ಮೇಲೂ ಸೈತಾನನು ಆ ಅಪವಾದ ಹೊರಿಸುತ್ತಾನೆ!” ಎಂದರು. ನನಗೆ ಸಿಡಿಲು ಬಡಿದಂತಾಯಿತು. ನಾನು ಕಲಿಯುತ್ತಿರುವ ಬೈಬಲ್ ಬೋಧನೆಗಳು ಸತ್ಯವೆಂದು ಆ ಅಧ್ಯಯನಕ್ಕೆ ಮುಂಚೆ ನನಗೆ ಗೊತ್ತಿತ್ತು. ಆದರೆ ನಾನೇನು ಕಲಿತಿದ್ದೆನೋ ಅದಕ್ಕೆ ತಕ್ಕಂತೆ ಏಕೆ ಕ್ರಿಯೆಗೈಯಬೇಕೆಂದು ಈಗ ತಿಳಿಯಿತು. ನಾಲ್ಕು ತಿಂಗಳ ಬಳಿಕ ನಾನು ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಯಾದೆ.
ಸಿಕ್ಕಿದ ಪ್ರಯೋಜನ: ಬೈಬಲಿಗನುಸಾರ ಜೀವಿಸುವುದನ್ನು ಕಲಿಯದೆ ಹೋಗಿದ್ದರೆ ನನ್ನ ಬಾಳು ಹೇಗಿರುತ್ತಿತ್ತೊ ಏನೋ! ನೆನಸಿದರೆ ಈಗಲೂ ಎದೆ ನಡುಗುತ್ತದೆ. ಬಹುಶಃ ನಾನಿಂದು ಜೀವಂತವಾಗಿರುತ್ತಿರಲ್ಲಿಲ್ಲ. ಅನೇಕ ಮಾಜಿ ಸ್ನೇಹಿತರು ಡ್ರಗ್ಸ್ ಇಲ್ಲವೆ ಮದ್ಯ ಸೇವನೆಯಿಂದ ಸತ್ತುಹೋದರು. ವೈವಾಹಿಕ ಜೀವನದಲ್ಲೂ ಅವರಿಗೆ ಸುಖವಿರಲಿಲ್ಲ. ನನ್ನ ಜೀವನವೂ ಹಾಗೇ ಇರುತ್ತಿತ್ತು.
ಈಗ ನಾನು ವಿವಾಹಿತ. ನಾನು ಮತ್ತು ನನ್ನ ಹೆಂಡತಿ ಮಾರ್ಗರೇಟ್ ಯೆಹೋವನ ಸಾಕ್ಷಿಗಳ ಆಸ್ಟ್ರೇಲಿಯ ಬ್ರಾಂಚ್ ಆಫೀಸ್‌ನಲ್ಲಿ ಸೇವೆಸಲ್ಲಿಸುತ್ತಿದ್ದೇವೆ. ನನ್ನ ಕುಟುಂಬದಲ್ಲಿ ಯಾರೊಬ್ಬರೂ ಯೆಹೋವನ ಆರಾಧಕರಾಗಲಿಲ್ಲ. ಆದರೆ ನಾನು ಮತ್ತು ಮಾರ್ಗರೇಟ್ ಅನೇಕಾನೇಕ ವ್ಯಕ್ತಿಗಳೊಂದಿಗೆ ಮತ್ತು ದಂಪತಿಗಳೊಂದಿಗೆ ಬೈಬಲ್ ಅಧ್ಯಯನ
ಮಾಡುವುದರಲ್ಲಿ ಆನಂದಿಸಿದ್ದೇವೆ. ಅವರೆಲ್ಲರೂ ನನ್ನಂತೆಯೇ ಜೀವನದಲ್ಲಿ ಬದಲಾವಣೆಗಳನ್ನು ಮಾಡಿದ್ದಾರೆ. ಹೀಗೆ ನಮಗೆ ಒಳ್ಳೊಳ್ಳೆ ಸ್ನೇಹಿತರು ಸಿಕ್ಕಿದ್ದಾರೆ. ಮಾತ್ರವಲ್ಲ, ಯೆಹೋವನ ಸಾಕ್ಷಿಯಾಗಿಯೇ ಬೆಳೆದ ಮಾರ್ಗರೇಟ್ ನಾನು ಸುಮಾರು 40 ವರ್ಷಗಳ ಹಿಂದೆ ಮಾಡಿದ ಶಪಥವನ್ನು ಕಾಪಾಡಿಕೊಳ್ಳಲು ನೆರವಾಗಿದ್ದಾಳೆ. 25ಕ್ಕೂ ಹೆಚ್ಚು ವರ್ಷಗಳ ಸುಖೀ ದಾಂಪತ್ಯ ಜೀವನ ನಡೆಸಿದ್ದೇವೆ. ಕೆಲವು ವಿಷಯಗಳಲ್ಲಿ ನಮ್ಮಿಬ್ಬರ ಅಭಿಪ್ರಾಯ ಒಂದೇ ಆಗಿರದಿದ್ದರೂ ಇದು ವರೆಗೆ ನಾವು ಒಮ್ಮೆಯೂ ವಾಗ್ವಾದ ಮಾಡಿಲ್ಲ. ಇದಕ್ಕಾಗಿ ನಾವಿಬ್ಬರೂ ಬೈಬಲ್‌ಗೆ ಋಣಿ.ವ್ಯಕ್ತಿ-ಪರಿಚಯ
ಹೆಸರು: ಮಾಸಾಹೀರೋ ಓಕಾಬಾಯಾಶೀ
ವಯಸ್ಸು: 39
ಸ್ವದೇಶ: ಜಪಾನ್
ಹಿಂದೆ: ಜೂಜುಗಾರ
ಹಿನ್ನೆಲೆ: ನಾನು ಬೆಳೆದದ್ದು ಈವಾಕುರ ಎಂಬ ಪುಟ್ಟ ಊರಲ್ಲಿ. ನಗೊಯ ನಗರದಿಂದ ಅಲ್ಲಿಗೆ ರೈಲಿನಲ್ಲಿ ಅರ್ಧ ತಾಸು ಪ್ರಯಾಣ. ಅಪ್ಪಅಮ್ಮ ತುಂಬ ದಯಾಪರರಾಗಿದ್ದರೆಂದು ನನಗೆ ನೆನಪಿದೆ. ಆದರೆ ಅಪ್ಪ ಒಬ್ಬ ಯಾಕೂಸಾ ಅಂದರೆ ಗೂಂಡಾ ಆಗಿದ್ದರೆಂದು ನಂತರ ತಿಳಿಯಿತು. ಬೇರೆಯವರ ಹೊಟ್ಟೆ ಮೇಲೆ ಹೊಡೆದು ಐದು ಮಂದಿಯಿದ್ದ ನಮ್ಮ ಕುಟುಂಬದ ಹೊಟ್ಟೆ ಹೊರೆಯುತ್ತಿದ್ದರು. ದಿನವೂ ಕಂಠಪೂರ್ತಿ ಕುಡಿಯುತ್ತಿದ್ದರು. ನಾನು 20 ವರ್ಷದವನಾಗಿದ್ದಾಗ ಅವರು ಸಿರೋಸಿಸ್ ಎಂಬ ಯಕೃತ್ತಿನ ತೀವ್ರ ರೋಗದಿಂದ ಸಾವನ್ನಪ್ಪಿದರು.
ನನ್ನ ತಂದೆ ಕೊರಿಯದವರು. ಆದ್ದರಿಂದ ಸಮುದಾಯದವರು ನಮ್ಮ ಕುಟುಂಬದೆಡೆಗೆ ತಾರತಮ್ಯ ತೋರಿಸುತ್ತಿದ್ದರು. ಇದು ಮತ್ತು ಬೇರೆ ಸಮಸ್ಯೆಗಳಿಂದ ನನ್ನ ಹದಿವಯಸ್ಸಿನಾದ್ಯಂತ ದುಃಖದ ಕಾರ್ಮೋಡಗಳೇ ಕವಿದಿದ್ದವು. ಹೈಸ್ಕೂಲ್ ಮೆಟ್ಟಿಲೇರಿದಾಗ ಆಗೊಮ್ಮೆ ಈಗೊಮ್ಮೆ ಶಾಲೆಗೆ ಹೋಗುತ್ತಿದ್ದೆ. ಒಂದು ವರ್ಷ ನಂತರ ಶಾಲೆ ಬಿಟ್ಟುಬಿಟ್ಟೆ. ನನ್ನ ಹೆಸರು ಈಗಾಗಲೇ ಪೊಲೀಸ್ ರೆಕಾರ್ಡ್‌ನಲ್ಲಿತ್ತು ಮತ್ತು ನನ್ನ ತಂದೆ ಕೊರಿಯದವರಾಗಿದ್ದರೆಂಬ ಕಾರಣಗಳಿಂದ ನನಗೆ ಕೆಲಸ ಸಿಗುವುದು ತುಂಬ ಕಷ್ಟವಾಯಿತು. ಕೊನೆಗೆ ಹೇಗೂ ಒಂದು ಕೆಲಸ ಸಿಕ್ಕಿತು ಆದರೆ ಅಲ್ಲಿ ನನಗೆ ಮೊಣಕಾಲುಗಳಲ್ಲಾದ ಪೆಟ್ಟಿನಿಂದಾಗಿ ದೈಹಿಕ ಕೆಲಸ ಮಾಡಲು ಸಾಧ್ಯವಾಗಲಿಲ್ಲ.
ಬಳಿಕ, ಪಚಿಂಕೋ ಎಂಬ ಜೂಜಾಟ ಆಡಿ ಜೀವನ ಸಾಗಿಸತೊಡಗಿದೆ. ಆಗ ನಾನು ಒಂದು ಹುಡುಗಿಯೊಂದಿಗೆ ಬಾಳ್ವೆ ನಡೆಸುತ್ತಿದ್ದೆ. ನಾನೊಂದು ಒಳ್ಳೇ ಕೆಲಸ ಹುಡುಕಿ ಅವಳನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ಆದರೆ ಜೂಜಾಟದಲ್ಲೇ ತುಂಬ ಹಣ ಸಿಗುತ್ತಿದ್ದ ಕಾರಣ ನನ್ನ ಜೀವನಶೈಲಿಯನ್ನು ಬದಲಾಯಿಸಲು ನನಗೆ ಮನಸ್ಸಿರಲಿಲ್ಲ.
ನನ್ನ ಬದುಕನ್ನು ಬದಲಾಯಿಸಿತು ಬೈಬಲ್: ಒಂದು ದಿನ ಯೆಹೋವನ ಸಾಕ್ಷಿಗಳು ನಮ್ಮ ಮನೆಗೆ ಬಂದು, ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? * ಎಂಬ ಪುಸ್ತಕವನ್ನು ನನಗೆ ಕೊಟ್ಟರು. ಈ ಪ್ರಶ್ನೆ ಹಿಂದೆಂದೂ ನನ್ನ ಮನಸ್ಸಿಗೆ ಬಂದಿರಲಿಲ್ಲ. ಆದರೆ ಆ ಪುಸ್ತಕ ಓದಿದ ಬಳಿಕ ಬೈಬಲ್ ಕುರಿತು ಹೆಚ್ಚನ್ನು ಕಲಿಯಲು ಒಪ್ಪಿಕೊಂಡೆ. ಸತ್ತ ಬಳಿಕ ಏನಾಗುತ್ತದೆ ಎಂಬುದರ ಬಗ್ಗೆ ನಾನು ಯಾವಾಗಲೂ ಯೋಚಿಸುತ್ತಿದ್ದೆ. ಈ ಕುರಿತು ಮತ್ತು ಇನ್ನಿತರ ವಿಷಯಗಳ ಕುರಿತು ಬೈಬಲಿನಿಂದ ಸ್ಪಷ್ಟ ಉತ್ತರ ಪಡೆದಾಗ ನನ್ನ ಕಣ್ಣುಗಳಿಂದ ಪರೆಗಳು ಕಳಚಿಬಿದ್ದಂತೆ ಅನಿಸಿತು.
ಬೈಬಲಿನಿಂದ ಕಲಿತದ್ದನ್ನು ಅನ್ವಯಿಸುವ ಅಗತ್ಯವನ್ನು ಕಂಡೆ. ಆದ್ದರಿಂದ ನಾನು ಬಾಳ್ವೆ ನಡೆಸುತ್ತಿದ್ದ ಹುಡುಗಿಯೊಂದಿಗೆ ಕಾನೂನುಬದ್ಧವಾಗಿ ಮದುವೆಯಾದೆ. ಧೂಮಪಾನ ನಿಲ್ಲಿಸಿದೆ, ಹೊಂಬಣ್ಣದ ಡೈ ಹಾಕಿದ್ದ ಉದ್ದ ತಲೆಕೂದಲನ್ನು ಕತ್ತರಿಸಿದೆ, ನನ್ನ ತೋರಿಕೆಯನ್ನು ನೀಟಾಗಿಸಿದೆ. ಜೂಜಾಡುವುದನ್ನು ಸಹ ಬಿಟ್ಟುಬಿಟ್ಟೆ.
ಈ ಎಲ್ಲ ಬದಲಾವಣೆಗಳನ್ನು ಮಾಡುವುದು ಸುಲಭವಾಗಿರಲಿಲ್ಲ. ಉದಾಹರಣೆಗೆ ಧೂಮಪಾನವನ್ನು ನನ್ನ ಸ್ವಂತ ಬಲದಿಂದಂತೂ ಫಿಲಿಪ್ಪಿ 4:6, 7. ಅದು ಹೀಗನ್ನುತ್ತದೆ: “ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ. ಆಗ ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವುದು.” ನನ್ನ ವಿಷಯದಲ್ಲಂತೂ ಈ ಮಾತು ಅನೇಕ ಸಂದರ್ಭಗಳಲ್ಲಿ ಸತ್ಯವಾಗಿದೆ.
ಬಿಡಲು ಸಾಧ್ಯವಾಗಲಿಲ್ಲ. ಶ್ರದ್ಧೆಯಿಂದ ಯೆಹೋವ ದೇವರಿಗೆ ಪ್ರಾರ್ಥಿಸಿ ಆತನ ಮೇಲೆ ಹೊಂದಿಕೊಂಡಿದ್ದರಿಂದಲೇ ಅದನ್ನು ಬಿಡಲು ಸಾಧ್ಯವಾಯಿತು. ಅಲ್ಲದೆ, ಜೂಜಾಟ ಬಿಟ್ಟ ಮೇಲೆ ಸಿಕ್ಕಿದ ಮೊದಲ ಕೆಲಸವನ್ನು ಮಾಡುವುದು ಒಂದು ದೊಡ್ಡ ಸವಾಲಾಗಿತ್ತು. ಏಕೆಂದರೆ ಜೂಜಾಟದಲ್ಲಿ ಸಿಗುತ್ತಿದ್ದ ಹಣದಲ್ಲಿ ಅರ್ಧದಷ್ಟನ್ನು ಮಾತ್ರ ಈ ಕೆಲಸದಲ್ಲಿ ಸಂಪಾದಿಸುತ್ತಿದ್ದೆ. ಕೆಲಸ ಕಠಿಣ, ಒತ್ತಡವೂ ಇತ್ತು. ಆ ಸಂದಿಗ್ಧ ಸಮಯದಲ್ಲಿ ನನಗೆ ಸಹಾಯಮಾಡಿದ ಬೈಬಲ್ ವಚನವೆಂದರೆಸಿಕ್ಕಿದ ಪ್ರಯೋಜನ: ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನ ಮಾಡಿದಾಗ ಮೊದಮೊದಲು ನನ್ನ ಹೆಂಡತಿಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ಆದರೆ ನನ್ನ ನಡತೆಯಲ್ಲಿ ದೊಡ್ಡ ಬದಲಾವಣೆಗಳನ್ನು ಕಂಡಾಗ ಅಧ್ಯಯನದಲ್ಲಿ ಆಕೆಯೂ ಜೊತೆಗೂಡಿದಳು. ನನ್ನೊಟ್ಟಿಗೆ ಸಾಕ್ಷಿಗಳ ಕೂಟಗಳಿಗೂ ಬಂದಳು. ಈಗ ನಾವಿಬ್ಬರೂ ಯೆಹೋವನ ಸಾಕ್ಷಿಗಳು. ಇಬ್ಬರೂ ಒಟ್ಟಿಗೆ ದೇವರ ಸೇವೆಮಾಡುವುದು ಒಂದು ದೊಡ್ಡ ಆಶೀರ್ವಾದ!
ನಾನು ಸಂತೋಷವಾಗಿದ್ದೇನೆಂದು ಬೈಬಲ್ ಅಧ್ಯಯನ ಮಾಡುವ ಮುಂಚೆ ನೆನಸುತ್ತಿದ್ದೆ. ಆದರೆ ನಿಜ ಸಂತೋಷ ಏನೆಂದು ನನಗೀಗ ಗೊತ್ತಾಗಿದೆ. ಬೈಬಲಿಗನುಸಾರ ಜೀವಿಸುವುದು ಸುಲಭವಲ್ಲವೇನೋ ನಿಜ ಆದರೆ ಅದು ಮಾತ್ರವೇ ಅತ್ಯುತ್ತಮ ಜೀವನಮಾರ್ಗ ಎಂಬುದಂತೂ ಖಚಿತ.
ವ್ಯಕ್ತಿ-ಪರಿಚಯ
ಹೆಸರು: ಎಲಿಸಬೇತ್ ಜೇನ್ ಸ್ಕೊಫೀಲ್ಡ್
ವಯಸ್ಸು: 35
ಸ್ವದೇಶ: ಯುನೈಟೆಡ್ ಕಿಂಗ್‌ಡಮ್
ಹಿಂದೆ: ವಾರಾಂತ್ಯದ ಮೋಜೇ ಬದುಕು
ಹಿನ್ನೆಲೆ: ನಾನು ಬೆಳೆದದ್ದು ಹಾರ್ಡ್‌ಗೇಟ್ ಎಂಬ ಚಿಕ್ಕ ಪಟ್ಟಣದಲ್ಲಿ. ಅದು ಸ್ಕಾಟ್‌ಲ್ಯಾಂಡ್‌ನ ಗ್ಲಾಸ್‌ಗೊ ನಗರದ ಹೊರವಲಯದಲ್ಲಿದೆ. ನಾನು ಏಳು ವರ್ಷದವಳಾಗಿದ್ದಾಗ ಯೆಹೋವನ ಸಾಕ್ಷಿಯಾದ ನನ್ನ ಅಮ್ಮ ಬೈಬಲ್ ಕುರಿತು ನನಗೆ ಕಲಿಸಲು ಆರಂಭಿಸಿದರು. ಆದರೆ 17 ವರ್ಷ ಆಗುವಷ್ಟರಲ್ಲಿ ನನಗೆ ಶಾಲೆಯ ಸ್ನೇಹಿತರೊಂದಿಗೆ ಬೆರೆಯುವುದೇ ಮುಖ್ಯವಾಗಿ ಬಿಟ್ಟಿತು. ಅವರೊಂದಿಗೆ ನೈಟ್ ಕ್ಲಬ್‌ಗಳಿಗೆ ಹೋಗುತ್ತಿದ್ದೆ, ರಾಕ್ ಮ್ಯೂಸಿಕ್ ಕೇಳುತ್ತಿದ್ದೆ, ಮದ್ಯಪಾನ ಮಾಡುತ್ತಿದ್ದೆ. ಆಧ್ಯಾತ್ಮಿಕ ವಿಷಯಗಳೆಂದರೆ ನನಗೆ ಅಷ್ಟಕಷ್ಟೆ. ವಾರಾಂತ್ಯದ ಮೋಜಿಗಾಗಿಯೇ ಬದುಕುತ್ತಿದ್ದೆ. ಆದರೆ 21ನೇ ವಯಸ್ಸಲ್ಲಿ ಎಲ್ಲ ಬದಲಾಯಿತು.
ಒಮ್ಮೆ ಉತ್ತರ ಐರ್ಲೆಂಡ್‌ನಲ್ಲಿದ್ದ ಸಂಬಂಧಿಕರನ್ನು ನೋಡಲು ಹೋಗಿದ್ದಾಗ ‘ಆರೆಂಜ್ ವಾಕ್’ ಎಂದು ಪ್ರಸಿದ್ಧವಾದ ಪ್ರಾಟೆಸ್ಟಂಟರ ಸಾರ್ವಜನಿಕ ಮೆರವಣಿಗೆಯನ್ನು ನಾನು ಕಣ್ಣಾರೆ ನೋಡಿದೆ. ಆ ಸಂದರ್ಭದಲ್ಲಿ ಪ್ರಾಟೆಸ್ಟಂಟರ ಮತ್ತು ಕ್ಯಾಥೊಲಿಕರ ನಡುವೆ ವ್ಯಕ್ತವಾದ ಕಡು ದ್ವೇಷ ಮತ್ತು ಅಸಹನೆ ಕಂಡು ನನಗೆ ಆಘಾತವಾಯಿತು. ಆಗ ನನ್ನ ಕಣ್ಣು ತೆರೆಯಿತು. ನನ್ನ ಅಮ್ಮ ಬೈಬಲಿನಿಂದ ಕಲಿಸಿದ ವಿಷಯಗಳು
ನೆನಪಿಗೆ ಬಂದವು. ಆ ರೀತಿ ದೇವರ ಪ್ರೀತಿಭರಿತ ನಿಯಮಗಳನ್ನು ಉಲ್ಲಂಘಿಸುವವರನ್ನು ಆತನು ಖಂಡಿತ ಮೆಚ್ಚನು ಎಂದು ನನಗೆ ಗೊತ್ತಿತ್ತು. ನಾನೇನು ಮಾಡುತ್ತಿದ್ದೆನೋ ಅದೂ ಥಟ್ಟನೆ ಮನಸ್ಸಿಗೆ ಬಂತು. ದೇವರು ಹೇಳುವಂತೆ ನಾನು ಬದುಕದೆ ಸ್ವಾರ್ಥ ವಿಷಯಗಳಲ್ಲಿ ಮುಳುಗಿದ್ದೇನೆಂದು ನನಗಾಗ ಅರಿವಿಗೆ ಬಂತು. ನಾನು ಸ್ಕಾಟ್‌ಲ್ಯಾಂಡ್‌ಗೆ ವಾಪಸ್ಸು ಹೋದಾಗ ಬೈಬಲ್ ಬೋಧನೆಗಳನ್ನು ಗಂಭೀರವಾಗಿ ಪರಿಶೀಲಿಸಬೇಕೆಂಬ ನಿರ್ಣಯಕ್ಕೆ ಬಂದೆ.ನನ್ನ ಬದುಕನ್ನು ಬದಲಾಯಿಸಿತು ಬೈಬಲ್: ಮನೆಗೆ ಹಿಂತೆರಳಿ ಪ್ರಥಮ ಬಾರಿ ಯೆಹೋವನ ಸಾಕ್ಷಿಗಳ ಕೂಟಕ್ಕೆ ಹೋದಾಗ ನನಗೆ ಒಂಥರಾ ಮುಜುಗರ, ಹೆದರಿಕೆ ಆಯಿತು. ಆದರೆ ಅಲ್ಲಿದ್ದವರೆಲ್ಲರೂ ನನ್ನನ್ನು ಆದರದಿಂದ ಸ್ವಾಗತಿಸಿದರು. ಬೈಬಲಿನಿಂದ ಕಲಿತ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಆರಂಭಿಸಿದೆ. ಆಗ ಸಭೆಯಲ್ಲಿದ್ದ ದಯಾಪರ ಸಹೋದರಿಯೊಬ್ಬರು ನನ್ನಲ್ಲಿ ವಿಶೇಷ ಆಸಕ್ತಿವಹಿಸಿದರು. ನಾನು ಸಭೆಯ ಭಾಗವಾಗಿದ್ದೇನೆಂಬ ಭಾವನೆಯನ್ನು ನನ್ನಲ್ಲಿ ಮೂಡಿಸಿದರು. ನನ್ನ ಹಳೇ ಸ್ನೇಹಿತರು ನೈಟ್ ಕ್ಲಬ್‌ಗಳಿಗೆ ಕರೆಯುತ್ತಾ ಇದ್ದರು. ಆದರೆ ನಾನು ಬರುವುದಿಲ್ಲ, ಬೈಬಲ್ ಬೋಧನೆಗಳಿಗನುಸಾರ ಜೀವಿಸಲು ದೃಢಸಂಕಲ್ಪ ಮಾಡಿದ್ದೇನೆಂದು ಅವರಿಗೆ ತಿಳಿಸಿದೆ. ಕ್ರಮೇಣ ಅವರು ನನ್ನಿಂದ ದೂರವಾದರು.
ಬೈಬಲ್ ಕೇವಲ ನಿಯಮಗಳ ಪುಸ್ತಕವೆಂದು ನಾನು ಹಿಂದೆ ನೆನಸುತ್ತಿದ್ದೆ. ಆದರೆ ನನ್ನ ಮನೋಭಾವ ಬದಲಾಯಿತು. ಬೈಬಲಿನಲ್ಲಿ ತಿಳಿಸಲಾಗಿರುವ ವ್ಯಕ್ತಿಗಳು ನನ್ನಂಥ ಭಾವನೆ, ಬಲಹೀನತೆಗಳಿದ್ದ ನೈಜ ಜನರೆಂದು ನನಗೆ ಅರ್ಥವಾಗತೊಡಗಿತು. ಅವರು ಕೂಡ ತಪ್ಪುಗಳನ್ನು ಮಾಡಿದ್ದರು. ಆದರೂ ಮನದಾಳದಿಂದ ಕ್ಷಮೆಯಾಚಿಸಿದಾಗ ಯೆಹೋವ ದೇವರು ಅವರನ್ನು ಕ್ಷಮಿಸಿದ್ದನು. ಇದು, ಹದಿವಯಸ್ಸಿನಲ್ಲಿ ದೇವರಿಗೆ ಬೆನ್ನುಹಾಕಿದ ನಾನು ಆತನ ಚಿತ್ತಮಾಡಲು ಶತಪ್ರಯತ್ನ ಮಾಡುವಲ್ಲಿ ನನ್ನ ತಪ್ಪನ್ನೂ ಆತನು ಮನ್ನಿಸಿ, ಮರೆತುಬಿಡುವನೆಂಬ ಭರವಸೆ ಕೊಟ್ಟಿತು.
ನನ್ನ ತಾಯಿಯ ನಡವಳಿಕೆ ಸಹ ನನ್ನನ್ನು ಆಳವಾಗಿ ಪ್ರಭಾವಿಸಿತು. ನಾನು ದೇವರನ್ನು ತೊರೆದಿದ್ದರೂ ಅವರು ತೊರೆದಿರಲಿಲ್ಲ. ಅವರ ನಿಷ್ಠೆಯ ಸ್ಥಿರವಾದ ಮಾದರಿಯು ಯೆಹೋವನ ಸೇವೆಮಾಡುವುದು ಸಾರ್ಥಕ ಎಂಬುದನ್ನು ಮನವರಿಕೆ ಮಾಡಿತು. ಚಿಕ್ಕ ವಯಸ್ಸಿನಲ್ಲಿ ನನ್ನ ತಾಯಿಯೊಂದಿಗೆ ಮನೆಮನೆಗೆ ಹೋಗಿ ಸಾರುತ್ತಿದ್ದಾಗ ಯಾವತ್ತೂ ನನಗೆ ಖುಷಿಯಾಗುತ್ತಿರಲಿಲ್ಲ. ಜನರಿಗೆ ಸಾರುವುದರಲ್ಲಿ ತಾಸುಗಟ್ಟಳೆ ಸಮಯ ಕಳೆಯುವುದನ್ನು ನನ್ನಿಂದ ಊಹಿಸಲಿಕ್ಕೂ ಸಾಧ್ಯವಿರಲಿಲ್ಲ. ಈಗಲಾದರೋ ನಾನು ಮತ್ತಾಯ 6:31-33ರಲ್ಲಿ ಯೇಸು ಕೊಟ್ಟ ಮಾತನ್ನು ಪರೀಕ್ಷಿಸಿ ನೋಡಲು ನಿರ್ಣಯಿಸಿದೆ. ಯೇಸು ಅಂದದ್ದು: “ಏನು ಊಟಮಾಡಬೇಕು ಏನು ಕುಡಿಯಬೇಕು ಏನು ಧರಿಸಬೇಕೆಂದು ಎಂದಿಗೂ ಚಿಂತೆಮಾಡಬೇಡಿ. . . . ಇವು ನಿಮಗೆ ಬೇಕಾಗಿವೆ ಎಂಬುದು ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ. ಆದುದರಿಂದ ಮೊದಲು ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕುತ್ತಾ ಇರಿ; ಆಗ ಈ ಎಲ್ಲ ಇತರ ವಸ್ತುಗಳು ನಿಮಗೆ ಕೂಡಿಸಲ್ಪಡುವವು.” ಸ್ವಲ್ಪದರಲ್ಲೇ ನಾನು ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಯಾದೆ. ಫುಲ್ ಟೈಮ್ ಕೆಲಸ ಬಿಟ್ಟು ಪಾರ್ಟ್ ಟೈಮ್ ಕೆಲಸ ಮಾಡಿದೆ. ಈಗ ಪೂರ್ಣ ಸಮಯ ದೇವರ ಸೇವೆಮಾಡುತ್ತಿದ್ದೇನೆ.
ಸಿಕ್ಕಿದ ಪ್ರಯೋಜನ: ಹದಿವಯಸ್ಸಿನಲ್ಲಿ ವಾರಾಂತ್ಯದ ಮೋಜು ಮಾತ್ರ ನನ್ನ ಜೀವನದ ಪರಮ ಗುರಿಯಾಗಿದ್ದಾಗ ನನಗೆ ಯಾವತ್ತೂ ತೃಪ್ತಿ ಇರಲಿಲ್ಲ. ಬದುಕು ಬರಡಾಗಿತ್ತು. ಈಗ ಯೆಹೋವನ ಸೇವೆಯಲ್ಲಿ ಪೂರ್ಣವಾಗಿ ಕಾರ್ಯಮಗ್ನಳಾಗಿರುವ ಕಾರಣ ಸಂತೃಪ್ತಿಯಿದೆ. ಬದುಕಿಗೆ ಅರ್ಥವಿದೆ, ಉದ್ದೇಶವಿದೆ. ನಾನೀಗ ವಿವಾಹಿತಳು. ನಾನೂ ನನ್ನ ಗಂಡ ಪ್ರತಿವಾರ ಯೆಹೋವನ ಸಾಕ್ಷಿಗಳ ಬೇರೆ ಬೇರೆ ಸಭೆಗಳನ್ನು ಭೇಟಿಮಾಡಿ ಅಲ್ಲಿರುವವರನ್ನು ಪ್ರೋತ್ಸಾಹಿಸುತ್ತೇವೆ. ಇದು ನನಗೆ ಸಿಕ್ಕಿದ ದೊಡ್ಡ ಭಾಗ್ಯ. ಯೆಹೋವನು ನನಗೆ ಎರಡನೇ ಅವಕಾಶ ಕೊಟ್ಟದ್ದಕ್ಕಾಗಿ ನಾನು ಆತನಿಗೆ ತುಂಬ ಆಭಾರಿ! (w09-E 11/01)
[ಪಾದಟಿಪ್ಪಣಿ]
^ ಪ್ಯಾರ. 26 ಕನ್ನಡದಲ್ಲಿ ಲಭ್ಯವಿಲ್ಲ.
[ಪುಟ 29ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಆರಂಭದ ಚರ್ಚೆಯಿಂದಲೇ ನನಗೇನೋ ವಿಶೇಷವಾದದ್ದು ಸಿಕ್ಕಿದೆಯೆಂದು ಗೊತ್ತಾಯಿತು. ಹಾಗಿದ್ದರೂ ಜೀವನಶೈಲಿಯನ್ನು ಬದಲಾಯಿಸುವುದು ಅಗತ್ಯವೆಂದು ನನಗಾಗ ಕಾಣಲಿಲ್ಲ”
[ಪುಟ 31ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಧೂಮಪಾನವನ್ನು ನನ್ನ ಸ್ವಂತ ಬಲದಿಂದಂತೂ ಬಿಡಲು ಸಾಧ್ಯವಾಗಲಿಲ್ಲ. ಶ್ರದ್ಧೆಯಿಂದ ಯೆಹೋವ ದೇವರಿಗೆ ಪ್ರಾರ್ಥಿಸಿ ಆತನ ಮೇಲೆ ಹೊಂದಿಕೊಂಡಿದ್ದರಿಂದಲೇ ಅದನ್ನು ಬಿಡಲು ಸಾಧ್ಯವಾಯಿತು”
[ಪುಟ 32ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಬೈಬಲ್ ಕೇವಲ ನಿಯಮಗಳ ಪುಸ್ತಕವೆಂದು ನಾನು ಹಿಂದೆ ನೆನಸುತ್ತಿದ್ದೆ. ಆದರೆ ನನ್ನ ಮನೋಭಾವ ಬದಲಾಯಿತು. ಬೈಬಲಿನಲ್ಲಿ ತಿಳಿಸಲಾಗಿರುವ ವ್ಯಕ್ತಿಗಳು ನನ್ನಂಥ ಭಾವನೆ, ಬಲಹೀನತೆಗಳಿದ್ದ ನೈಜ ಜನರೆಂದು ನನಗೆ ಅರ್ಥವಾಗತೊಡಗಿತು”