ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರನ್ನು ಅರಿತಿದ್ದೀರೋ?

ದೇವರನ್ನು ಅರಿತಿದ್ದೀರೋ?

ದೇವರನ್ನು ಅರಿತಿದ್ದೀರೋ?

ಮೇಲಿನ ಪ್ರಶ್ನೆಗೆ ನಿಮ್ಮ ಉತ್ತರವೇನು? ‘ನಾವಾತನನ್ನು ಚೆನ್ನಾಗಿ ಅರಿತಿದ್ದೇವೆ’ ಎಂದು ಕೆಲವರ ಅನಿಸಿಕೆ. ಇನ್ನು ಕೆಲವರು ದೇವರು ಅಸ್ತಿತ್ವದಲ್ಲಿದ್ದಾನೆಂದು ನಂಬುತ್ತಾರೆ ಹಾಗೂ ಆತನಿಗೆ ಭಯಭಕ್ತಿಯನ್ನು ತೋರಿಸುತ್ತಾರೆ. ಆದರೆ ಆತನ ಕುರಿತು ಅವರಿಗೆ ತಿಳಿದಿರುವುದು ಕೊಂಚವೇ. ನೀವು ದೇವರನ್ನು ನಂಬುವುದಾದರೆ ಕೆಳಗಿನ ಪ್ರಶ್ನೆಗಳನ್ನು ಹೇಗೆ ಉತ್ತರಿಸುವಿರಿ?

1.ದೇವರು ಶಕ್ತಿಯೋ ವ್ಯಕ್ತಿಯೋ?

2.ದೇವರಿಗೆ ಹೆಸರಿದೆಯೇ?

3.ಯೇಸು ಸರ್ವಶಕ್ತ ದೇವರೋ?

4.ದೇವರಿಗೆ ನನ್ನ ಬಗ್ಗೆ ಚಿಂತೆ ಇದೆಯೇ?

5.ಎಲ್ಲ ರೀತಿಯ ಭಕ್ತಿ ದೇವರಿಗೆ ಪ್ರಿಯವೋ?

ಆ ಪ್ರಶ್ನೆಗಳನ್ನು ಇತರರಿಗೆ ನೀವು ಕೇಳುವಲ್ಲಿ ಭಿನ್ನ ಭಿನ್ನವಾದ ಬೆರಗುಗೊಳಿಸುವ ಉತ್ತರಗಳು ನಿಮಗೆ ದೊರಕುವುದು ಸಂಭಾವ್ಯ. ಆದ್ದರಿಂದ ದೇವರ ಕುರಿತ ಅನೇಕಾನೇಕ ಕಲ್ಪನೆಗಳು ಮತ್ತು ಸುಳ್ಳು ಗ್ರಹಿಕೆಗಳು ಬೆಳೆದುಬಂದಿವೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ.

ಉತ್ತರಗಳೇಕೆ ಅತಿ ಪ್ರಾಮುಖ್ಯ

ದೇವರನ್ನು ನಂಬಿದ್ದ ಒಬ್ಬಾಕೆ ಸ್ತ್ರೀಯನ್ನು ಒಂದು ಬಾವಿಯ ಬಳಿ ಯೇಸು ಭೇಟಿಯಾದಾಗ ದೇವರ ಬಗ್ಗೆ ಸತ್ಯವನ್ನು ತಿಳಿಯುವ ಅವಶ್ಯಕತೆಯ ಕುರಿತು ಮಾತಾಡಿದನು. ಯೇಸುವು ಒಬ್ಬ ಪ್ರವಾದಿಯಾಗಿದ್ದನೆಂದು ಆ ಸಮಾರ್ಯ ಸ್ತ್ರೀ ಅಂಗೀಕರಿಸಿದ್ದಳು. ಆದರೆ ಯಾವುದೋ ಒಂದು ಚಿಂತೆಯು ಅವಳನ್ನು ಕಾಡಿಸಿತ್ತು. ಯೇಸುವಿನ ಧರ್ಮವು ಅವಳ ಧರ್ಮಕ್ಕಿಂತ ಭಿನ್ನವಾಗಿತ್ತೆಂಬ ಚಿಂತೆಯೇ ಅದು. ಅವಳು ಅದನ್ನು ಯೇಸುವಿಗೆ ತಿಳಿಸಿದಾಗ ಆತನು ಉತ್ತರಿಸಿದ್ದು: “ನೀವು ಅರಿಯದೆ ಇರುವಂಥದ್ದನ್ನು ಆರಾಧಿಸುವವರು.” (ಯೋಹಾನ 4:​19-22) ಹೀಗೆ ದೇವರನ್ನು ನಂಬುವ ಎಲ್ಲ ಜನರು ನಿಜವಾಗಿ ಆತನನ್ನು ಅರಿತಿರುವದಿಲ್ಲವೆಂದು ಯೇಸು ಸೂಚಿಸಿದನು.

ಯೇಸುವಿನ ಈ ಮಾತಿನ ಅರ್ಥವು ದೇವರನ್ನು ಯಾರೂ ನಿಜವಾಗಿ ಅರಿಯಲಾರರು ಎಂದೋ? ಇಲ್ಲ, ಏಕೆಂದರೆ ಆತನು ಆ ಸ್ತ್ರೀಗೆ ಮತ್ತೂ ತಿಳಿಸಿದ್ದು: “ಸತ್ಯಭಾವದಿಂದ ದೇವಾರಾಧನೆ ಮಾಡುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ತಂದೆಯನ್ನು ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ; ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುತ್ತಾನಲ್ಲವೇ.” (ಯೋಹಾನ 4:​22, 23.) ದೇವರನ್ನು ‘ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸುವವರಲ್ಲಿ’ ನೀವೂ ಒಬ್ಬರೋ?

ಈ ಪ್ರಶ್ನೆಗೆ ಸರಿಯಾದ ಉತ್ತರ ನಿಮಗೆ ಖಚಿತವಾಗಿ ತಿಳಿದಿರುವುದು ಅತ್ಯಂತ ಪ್ರಾಮುಖ್ಯ. ಏಕೆ? ಏಕೆಂದರೆ ಅದರ ಕುರಿತ ನಿಷ್ಕೃಷ್ಟ ಜ್ಞಾನದ ಅಗತ್ಯವನ್ನು ಯೇಸು ತನ್ನ ಪ್ರಾರ್ಥನೆಯಲ್ಲಿ ಒತ್ತಿಹೇಳಿದ್ದನು. “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:⁠3.) ಹೌದು, ನಿಮ್ಮ ಭವಿಷ್ಯತ್ತಿನ ಜೀವನದ ಪ್ರತೀಕ್ಷೆಗಳು ದೇವರ ಕುರಿತ ಸತ್ಯವನ್ನು ತಿಳಿದುಕೊಳ್ಳುವುದರ ಮೇಲೆ ಪೂರ್ಣವಾಗಿ ಹೊಂದಿಕೊಂಡಿವೆ!

ದೇವರ ಕುರಿತ ಸತ್ಯವನ್ನು ತಿಳಿದುಕೊಳ್ಳುವುದು ನಿಜವಾಗಿ ಸಾಧ್ಯವೋ? ಹೌದು ಸಾಧ್ಯ! ಹಾಗಾದರೆ ನೀವು ಅದನ್ನು ಹೇಗೆ ಕಂಡುಕೊಳ್ಳಬಹುದು? ಯೇಸು ತನ್ನ ಕುರಿತು ಹೀಗೆ ಹೇಳಿದನು: “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ.” (ಯೋಹಾನ 14:⁠6) ಆತನು ಇದನ್ನೂ ಹೇಳಿದನು: “ತಂದೆ ಇಂಥವನೆಂದು ಮಗನೇ ಹೊರತು ಇನ್ನಾವನೂ ತಿಳಿದವನಲ್ಲ; ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಿಸುವದಕ್ಕೆ ಮನಸ್ಸುಳ್ಳವನಾಗಿದ್ದಾನೋ ಅವನೂ ಆತನನ್ನು ತಿಳಿದವನಾಗಿದ್ದಾನೆ.”​—⁠ಲೂಕ 10:⁠22.

ಆದುದರಿಂದ ದೇವರನ್ನು ಅರಿತುಕೊಳ್ಳುವ ಕೀಲಿಕೈ ದೇವಕುಮಾರನಾದ ಯೇಸು ಕ್ರಿಸ್ತನ ಬೋಧನೆಗಳಲ್ಲಿ ಅಡಕವಾಗಿದೆ. ವಾಸ್ತವದಲ್ಲಿ ಯೇಸು ನಮಗೆ ವಚನವಿತ್ತದ್ದು: “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರಾದರೆ ನಿಜವಾಗಿ ನನ್ನ ಶಿಷ್ಯರಾಗಿದ್ದು ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.”​—⁠ಯೋಹಾನ 8:​31, 32.

ಹಾಗಾದರೆ ಆರಂಭದಲ್ಲಿ ಕೇಳಲಾದ ಐದು ಪ್ರಶ್ನೆಗಳನ್ನು ಯೇಸು ಹೇಗೆ ಉತ್ತರಿಸಿದನು? (w09 2/1)

[ಪುಟ 4ರಲ್ಲಿರುವ ಚಿತ್ರ]

ನೀವು ಅರಿಯದ ದೇವರನ್ನು ಆರಾಧಿಸುತ್ತೀರೋ?