ಅವಳು ಸಹಾಯಮಾಡಿದಳು
ನಿಮ್ಮ ಮಕ್ಕಳಿಗೆ ಕಲಿಸಿರಿ
ಅವಳು ಸಹಾಯಮಾಡಿದಳು
ತೀವ್ರ ಖಾಯಿಲೆಯಿಂದ ಬಳಲುತ್ತಿರುವ ಯಾರಾದರೂ ನಿಮಗೆ ಗೊತ್ತೋ?— ಅವರಿಗೆ ಸಹಾಯಮಾಡಲು ನೀವು ಬಯಸಿದ್ದೀರೋ?— ಅವರು ಪರದೇಶದವರೂ ಪರಧರ್ಮದವರೂ ಆಗಿದ್ದಲ್ಲಿ ಏನು? ಆಗಲೂ ನೀವು ಅವರಿಗೆ ಗುಣಹೊಂದಲು ನೆರವಾಗುವಿರೋ?— ಸುಮಾರು 3,000 ವರ್ಷಗಳ ಹಿಂದೆ ಇಸ್ರಾಯೇಲ್‌ದೇಶದಲ್ಲಿ ವಾಸಿಸುತ್ತಿದ್ದ ಚಿಕ್ಕ ಹುಡುಗಿಯೊಬ್ಬಳು ಒಬ್ಬ ವ್ಯಕ್ತಿ ಗುಣಹೊಂದಲು ನೆರವಾದಳು. ಆಗ ನಡೆದ ಸಂಗತಿಯನ್ನು ನಾವೀಗ ಚರ್ಚಿಸೋಣ.
ಆ ಹುಡುಗಿ ವಾಸಿಸುತ್ತಿದ್ದ ಪುರಾತನ ಇಸ್ರಾಯೇಲ್ ಮತ್ತು ಸಮೀಪದ ಅರಾಮ್ಯ ದೇಶದ (ಸಿರಿಯ) ನಡುವೆ ಯಾವಾಗಲೂ ಯುದ್ಧ ನಡೆಯುತ್ತಿತ್ತು. (1 ಅರಸುಗಳು 22:1) ಒಮ್ಮೆ ಅರಾಮ್ಯರು ಇಸ್ರಾಯೇಲಿಗೆ ಬಂದು ಆ ಚಿಕ್ಕ ಹುಡುಗಿಯನ್ನು ಸೆರೆಹಿಡಿದು ಸಿರಿಯಕ್ಕೆ ಒಯ್ಯುತ್ತಾರೆ. ಅಲ್ಲಿ ಅವಳು ಅರಾಮ್ಯ ಸೇನಾಪತಿ ನಾಮಾನನ ಹೆಂಡತಿಯ ದಾಸಿಯಾಗುತ್ತಾಳೆ. ನಾಮಾನನಿಗೆ ಕೆಟ್ಟ ಕುಷ್ಠರೋಗವಿತ್ತು. ಈ ರೋಗವು ಒಬ್ಬ ವ್ಯಕ್ತಿಯ ದೇಹದ ಭಾಗಗಳನ್ನು ಕೊಳೆಯುವಂತೆ ಮಾಡುತ್ತದೆ.
ನಾಮಾನನು ಹೇಗೆ ಗುಣಹೊಂದಬಹುದೆಂಬುದನ್ನು ಆ ಹುಡುಗಿಯು ಅವನ ಹೆಂಡತಿಗೆ ತಿಳಿಸುತ್ತಾಳೆ. ‘ನಾಮಾನನು ಸಮಾರ್ಯದಲ್ಲಿರುತ್ತಿದ್ದರೆ ಯೆಹೋವನ ಪ್ರವಾದಿಯಾದ ಎಲೀಷನು ಅವನನ್ನು ಕುಷ್ಠರೋಗದಿಂದ ವಾಸಿ ಮಾಡುತ್ತಿದ್ದನು’ ಎಂದವಳು ಹೇಳುತ್ತಾಳೆ. ಎಲೀಷನ ಕುರಿತ ಅವಳ ದೃಢವಾದ ಮಾತು ಪ್ರವಾದಿಯು ತನ್ನನ್ನು ನಿಜವಾಗಿಯೂ ವಾಸಿಮಾಡಿಯಾನೆಂದು ನಾಮಾನನು ನಂಬುವಂತೆ ಮಾಡುತ್ತದೆ. ಆದ್ದರಿಂದ ಎಲೀಷನನ್ನು ಕಾಣಲು ನಾಮಾನನು ಅರಾಮ್ಯರ ಅರಸನಾದ ಬೆನ್ಹದದನ ಅಪ್ಪಣೆಪಡೆದು ತನ್ನ ಪರಿಚಾರಕರೊಂದಿಗೆ ಸುಮಾರು 150 ಕಿ.ಮೀ. ದೂರ ಪ್ರಯಾಣಿಸುತ್ತಾನೆ.
ಅವರು ಮೊತ್ತಮೊದಲಾಗಿ ಇಸ್ರಾಯೇಲ್ಯರ ಅರಸನಾದ ಯೆಹೋರಾಮನ ಬಳಿಗೆ ಹೋಗುತ್ತಾರೆ. ನಾಮಾನನಿಗೆ ನೆರವಾಗುವಂತೆ ವಿನಂತಿಸುವ ರಾಜ ಬೆನ್ಹದದನ ಪತ್ರವನ್ನು ಅವರು ಅವನಿಗೆ ತೋರಿಸುತ್ತಾರೆ. ಆದರೆ ಯೆಹೋರಾಮನಿಗೆ ಯೆಹೋವನ ಮೇಲಾಗಲಿ ಪ್ರವಾದಿ ಎಲೀಷನ ಮೇಲಾಗಲಿ ನಂಬಿಕೆಯಿಲ್ಲ. ಬೆನ್ಹದದನು ಜಗಳಕ್ಕೆ ಕಾರಣಹುಡುಕುತ್ತಿದ್ದಾನೆಂದು ಯೆಹೋರಾಮನು ನೆನಸುತ್ತಾನೆ. ಇದರ ಬಗ್ಗೆ ಎಲೀಷನು ತಿಳಿದುಕೊಂಡಾಗ ರಾಜ ಯೆಹೋರಾಮನಿಗೆ “ಅವನನ್ನು ನನ್ನ ಬಳಿಗೆ ಕಳುಹಿಸು” ಎಂದು ಹೇಳುತ್ತಾನೆ. ನಾಮಾನನ ಕೆಟ್ಟ ರೋಗವನ್ನು ಗುಣಮಾಡಲು ದೇವರಿಗೆ ಮಾತ್ರ ಶಕ್ತಿಯಿದೆ ಎಂದು ತೋರಿಸಲು ಎಲೀಷನು ಬಯಸುತ್ತಾನೆ.—2 ಅರಸುಗಳು 5:1-8.
ನಾಮಾನನು ತನ್ನ ಕುದುರೆ ಮತ್ತು ರಥಗಳೊಂದಿಗೆ ಎಲೀಷನ ಮನೆಗೆ ಬಂದಾಗ ಎಲೀಷನು ತನ್ನ ಸೇವಕನನ್ನು ಕಳುಹಿಸಿ, ‘ಹೋಗಿ ಯೋರ್ದನ್ ಹೊಳೆಯಲ್ಲಿ ಏಳು ಸಾರಿ ಸ್ನಾನ ಮಾಡು, ಆಗ ಗುಣಹೊಂದುವಿ’ ಎಂದು ಹೇಳುತ್ತಾನೆ. ಅದನ್ನು ಕೇಳಿ ನಾಮಾನನು ಬಹಳ ಸಿಟ್ಟುಗೊಳ್ಳುತ್ತಾನೆ. ಎಲೀಷನು ತಾನೇ ಹೊರಬಂದು ಕುಷ್ಠದ ಮೇಲೆ ತನ್ನ ಕೈಯಾಡಿಸಿ ವಾಸಿಮಾಡುವನೆಂದು ನಾಮಾನನು ನಿರೀಕ್ಷಿಸಿದ್ದನು. ಆದರೆ ಬಂದದ್ದು ಸೇವಕನು ಮಾತ್ರ! ಆದ್ದರಿಂದ ನಾಮಾನನು ಕ್ರೋಧಾವೇಶದಿಂದ ಅಲ್ಲಿಂದ ಹೊರಡುತ್ತಾನೆ.—2 ಅರಸುಗಳು 5:9-12.
ನಾಮಾನನ ಸೇವಕರಲ್ಲಿ ನೀವು ಒಬ್ಬರಾಗಿದ್ದಲ್ಲಿ ಏನು ಮಾಡುತ್ತಿದ್ದಿರಿ?— ಸೇವಕರು ಅವನನ್ನು ಸಮಾಧಾನಪಡಿಸುತ್ತಾ ಹೀಗೆ ಹೇಳುತ್ತಾರೆ: ‘ಎಲೀಷನು ಒಂದು ಕಷ್ಟದ ಕೆಲಸವನ್ನು ಹೇಳುತ್ತಿದ್ದಲ್ಲಿ ನೀವು ಮಾಡುತ್ತಿರಲಿಲ್ಲವೆ? ಸ್ನಾನಮಾಡಿ ಶುದ್ಧವಾಗುವ ಕೆಲಸ ಎಷ್ಟು ಸುಲಭ, ಅದನ್ನೇಕೆ ಮಾಡಬಾರದು?’ ನಾಮಾನನು ಅವರ ಮಾತನ್ನು ಒಪ್ಪುತ್ತಾನೆ. “ಅವನು ಯೊರ್ದನಿಗೆ ಹೋಗಿ ಏಳು ಸಾರಿ ಅದರಲ್ಲಿ ಮುಣುಗಿ ಎದ್ದನು. ಕೂಡಲೆ . . . ಅವನ ದೇಹವು ಕೂಸಿನ ದೇಹದಂತೆ ಶುದ್ಧವಾಯಿತು.”
ಆಗ ನಾಮಾನನು ಎಲೀಷನ ಬಳಿಗೆ ಹಿಂದಿರುಗಿ ಹೋಗಿ ಹೇಳುವುದು: “ಇಸ್ರಾಯೇಲ್‌ದೇಶದಲ್ಲಿರುವ ದೇವರ ಹೊರತಾಗಿ ಲೋಕದಲ್ಲಿ ಬೇರೆ ದೇವರು ಇರುವದೇ ಇಲ್ಲವೆಂಬದು ಈಗ ನನಗೆ ಗೊತ್ತಾಯಿತು.” ಮಾತ್ರವಲ್ಲದೆ ಅವನು ಎಲೀಷನಿಗೆ, “ನಾನು ಇನ್ನುಮುಂದೆ ಎಲ್ಲಾ ದೇವತೆಗಳನ್ನು ಬಿಟ್ಟು ಯೆಹೋವನೊಬ್ಬನಿಗೇ ಸರ್ವಾಂಗಹೋಮಯಜ್ಞಗಳನ್ನು ಸಮರ್ಪಿಸಬೇಕೆಂದಿರುತ್ತೇನೆ” ಎಂದು ಮಾತುಕೊಡುತ್ತಾನೆ.—2 ಅರಸುಗಳು 5:13-17.
ಆ ಚಿಕ್ಕ ಹುಡುಗಿ ಮಾಡಿದಂತೆ ನೀವು ಸಹ ಯೆಹೋವನ ಕುರಿತು ಮತ್ತು ಆತನು ಏನು ಮಾಡಶಕ್ತನೆಂಬುದರ ಕುರಿತು ಕಲಿಯುವಂತೆ ಯಾರಿಗಾದರೂ ಸಹಾಯಮಾಡಲು ಬಯಸುತ್ತೀರೋ?— ಯೇಸು ಭೂಮಿಯಲ್ಲಿದ್ದಾಗ ಅವನಲ್ಲಿ ನಂಬಿಕೆಯಿಟ್ಟ ಒಬ್ಬ ಕುಷ್ಠ ರೋಗಿಯು ಹೇಳಿದ್ದು: “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧ ಮಾಡಬಲ್ಲೆ.” ಅದಕ್ಕೆ ಯೇಸು ಏನು ಹೇಳಿದನೆಂದು ನಿಮಗೆ ಗೊತ್ತೋ?— “ನನಗೆ ಮನಸ್ಸುಂಟು.” ಹೀಗೆ ಹೇಳಿ ಯೇಸು ಅವನನ್ನು ವಾಸಿಮಾಡಿದನು, ನಾಮಾನನನ್ನು ಯೆಹೋವನು ವಾಸಿಮಾಡಿದಂತೆಯೇ.—ಮತ್ತಾಯ 8:2, 3.
ಯೆಹೋವನು ಒಂದು ಹೊಸಲೋಕವನ್ನು ನಿರ್ಮಿಸುವನು ಮತ್ತು ಅದರಲ್ಲಿ ಜನರು ಆರೋಗ್ಯದಿಂದ ಸದಾಕಾಲ ಜೀವಿಸುವರೆಂಬದು ನಿಮಗೆ ಗೊತ್ತೋ?— (2 ಪೇತ್ರ 3:13; ಪ್ರಕಟನೆ 21:3, 4) ಹಾಗಿರುವಲ್ಲಿ, ಈ ಆಶ್ಚರ್ಯಕರ ವಿಷಯಗಳ ಕುರಿತು ಇತರರಿಗೆ ತಿಳಿಸಲು ನೀವು ಬಯಸುವಿರಿ ಖಂಡಿತ. (w08 6/1)
ಪ್ರಶ್ನೆಗಳು:
❍ ನಾಮಾನನ ಸೈನಿಕರು ಸೆರೆಹಿಡಿದ ಚಿಕ್ಕ ಹುಡುಗಿಯು ನಾಮಾನನಿಗೆ ಸಹಾಯಮಾಡಿದ್ದು ಹೇಗೆ?
❍ ಎಲೀಷನು ಹೇಳಿದಂತೆ ಮಾಡಲು ನಾಮಾನನು ಮೊದಲು ಯಾಕೆ ಒಪ್ಪಲಿಲ್ಲ, ಆದರೆ ಅವನು ಮನಸ್ಸು ಬದಲಾಯಿಸಿದ್ದು ಹೇಗೆ?
❍ ಆ ಚಿಕ್ಕ ಹುಡುಗಿಯನ್ನು ಅನುಕರಿಸಲು ನೀವು ಏನು ಮಾಡಬೇಕು?
❍ ಯೇಸು ಏನನ್ನು ಮಾಡಬಯಸಿದನು, ಮತ್ತು ದೇವರು ತರುವ ಹೊಸ ಲೋಕದಲ್ಲಿ ಜೀವನವು ಹರ್ಷಕರವಾಗಿರುವುದೇಕೆ?