ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸುತ್ತಾನೆ?
ನಮ್ಮ ಓದುಗರ ಪ್ರಶ್ನೆ
ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸುತ್ತಾನೆ?
ಮಾನವರ ಕಷ್ಟಸಂಕಟಗಳಿಗೆ ದೇವರು ಕಾರಣನಲ್ಲ. ‘ದೇವರು ಕೆಟ್ಟದ್ದನ್ನು ಮಾಡುವನೆಂಬ ಯೋಚನೆ ದೂರವಾಗಿರಲಿ!’ ಎನ್ನುತ್ತದೆ ಬೈಬಲ್. (ಯೋಬ 34:10) ಹಾಗಾದರೆ ಕಷ್ಟಸಂಕಟಗಳಿಗೆ ಮೂಲಕಾರಣನು ಯಾರು?
ಯೇಸು ಸೈತಾನನನ್ನು “ಇಹಲೋಕಾಧಿಪತಿ” ಎಂದು ಕರೆದನು. (ಯೋಹಾನ 14:30) ಯೆಹೋವನು ವಿಶ್ವದ ಪರಮಾಧಿಕಾರಿ ನಿಜ. ಈ ಸ್ಥಾನವನ್ನು ಆತನೆಂದೂ ಬಿಟ್ಟುಕೊಡುವುದಿಲ್ಲ. ಆದಾಗ್ಯೂ, ಸೈತಾನನು ಅಧಿಕಾಂಶ ಮಾನವಕುಲವನ್ನು ಸ್ವಲ್ಪ ಸಮಯ ಆಳುವಂತೆ ದೇವರು ಅನುಮತಿಸಿದ್ದಾನೆ.—1 ಯೋಹಾನ 5:19.
ಸೈತಾನನು ಯಾವ ರೀತಿಯ ಅಧಿಪತಿಯಾಗಿದ್ದಾನೆ? ಸೈತಾನನು ಮನುಷ್ಯರೊಂದಿಗೆ ಪ್ರಥಮ ಸಲ ವ್ಯವಹರಿಸಲು ಆರಂಭಿಸಿದಂದಿನಿಂದ ಕೊಲೆಗಾರನೂ ಮೋಸಗಾರನೂ ಆಗಿರುತ್ತಾನೆ. ಸೈತಾನನು ಮಾನವ ಸಮಾಜಕ್ಕೆ ಹಾನಿಯನ್ನುಂಟುಮಾಡಲು ತೀಕ್ಷ್ಣ ವಿಧಾನಗಳನ್ನು ಬಳಸುತ್ತಾನೆ. ಅವನನ್ನು ಖಂಡಿಸುತ್ತಾ ಯೇಸು ಹೇಳಿದ್ದು: “ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನಿಲ್ಲಲಿಲ್ಲ; ಅವನಲ್ಲಿ ಸತ್ಯವು ಇಲ್ಲವೇ ಇಲ್ಲ. ಅವನು ಸುಳ್ಳಾಡುವಾಗ ಸ್ವಭಾವಾನುಸಾರವಾಗಿ ಆಡುತ್ತಾನೆ; ಅವನು ಸುಳ್ಳುಗಾರನೂ ಸುಳ್ಳಿಗೆ ಮೂಲಪುರುಷನೂ ಆಗಿದ್ದಾನೆ.” (ಯೋಹಾನ 8:44) ಅಲ್ಲದೇ, ತನ್ನನ್ನು ಕೊಲ್ಲಲು ಪಯತ್ನಿಸುತ್ತಿರುವವರು ಕೂಡ ಆ ಪ್ರಥಮ ಕೊಲೆಗಾರನ ಮಕ್ಕಳೆಂದು ಯೇಸು ಹೇಳಿದನು. ಸೈತಾನನಂತೆಯೇ ಕೆಲಸ ಮಾಡುವ ಮೂಲಕ ಅವರು ತಮ್ಮನ್ನು ಅವನ ಮಕ್ಕಳಾಗಿ ರುಜುಪಡಿಸಿದ್ದಾರೆ. ಇದು ‘ತಂದೆಯಂತೆ ಮಗ’ ಎನ್ನುವ ನಾಣ್ನುಡಿಗೆ ತಕ್ಕಂತಿದೆ.
ಸೈತಾನನು ಈಗಲೂ ಮಾನವರ ಹೃದಯಗಳಲ್ಲಿ ಕೊಲೆಗಡುಕ ಸ್ವಭಾವವನ್ನು ಬೆಳೆಸುತ್ತಿದ್ದಾನೆ. ಉದಾಹರಣೆಗೆ ಯು.ಎಸ್.ಎ.ಯ ಹವಾಯಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರೊಫೆಸರರಾದ ಆರ್. ಜೆ. ರೆಮೆಲ್ ಮಾಡಿರುವ ಅಂದಾಜಿಗನುಸಾರ, 1900ರಿಂದ 1987ರ ತನಕ ಅನೇಕ ಸರಕಾರಗಳು ತಮ್ಮ ವಿರೋಧಿಗಳನ್ನು ತೆಗೆದುಹಾಕುವುದರಲ್ಲಿ, ಜನಹತ್ಯೆಗಳಲ್ಲಿ ಮತ್ತು ನಿಷ್ಕಾರಣವಾದ ಹಿಂಸಾಚಾರದ ಮೂಲಕ 16,91,98,000 ಜನರನ್ನು ಕೊಂದಿವೆ. ಮೃತಪಟ್ಟವರ ಈ ಸಂಖ್ಯೆಯಲ್ಲಿ ಅದೇ ಸಮಯಾವಧಿಯಲ್ಲಿ ಯುದ್ಧ ರಂಗದಲ್ಲಿ ಕೊಲ್ಲಲ್ಪಟ್ಟ ಲಕ್ಷಗಟ್ಟಲೆ ಜನರು ಒಳಗೂಡಿಲ್ಲ.
ಕಷ್ಟಸಂಕಟಗಳಿಗೆ ದೇವರು ಕಾರಣನಲ್ಲವಾದರೆ ಆತನು ಏಕೆ ಅವುಗಳನ್ನು ಅನುಮತಿಸುತ್ತಾನೆ? ಏಕೆಂದರೆ ಇಡೀ ವಿಶ್ವಕ್ಕೆ ಮಹತ್ವಪೂರ್ಣವಾದ ಪ್ರಶ್ನೆಗಳನ್ನು, ನೈತಿಕ ವಿವಾದಾಂಶಗಳನ್ನು ಬಹಳ ದೀರ್ಘ ಸಮಯದ ಹಿಂದೆ ಎಬ್ಬಿಸಲಾಗಿತ್ತು ಮತ್ತು ಇವುಗಳನ್ನು ಇನ್ನೂ ಇತ್ಯರ್ಥಗೊಳಿಸಲಿಕ್ಕಿದೆ. ಆ ವಿವಾದಾಂಶಗಳಲ್ಲಿ ಒಂದನ್ನು ನಾವೀಗ ಪರಿಗಣಿಸೋಣ.
ಮಾನವ ಇತಿಹಾಸದ ಆರಂಭದಲ್ಲಿ ಆದಾಮಹವ್ವರು ಸೈತಾನನ ಪಕ್ಷವಹಿಸಿದರು. ಅವರು ದೇವರ ಆಳ್ವಿಕೆಯನ್ನು ತಿರಸ್ಕರಿಸಿ ಸ್ವಯಂ ಆಳ್ವಿಕೆಯನ್ನು ಆಯ್ಕೆಮಾಡಿದರು. ಹೀಗೆ ಮಾಡುವ ಮೂಲಕ ವಾಸ್ತವದಲ್ಲಿ ಅವರು ಸೈತಾನನ ಆಳ್ವಿಕೆಗೆ ಅಧೀನರಾದರು.—ಆದಿಕಾಂಡ 3:1-6; ಪ್ರಕಟನೆ 12:9.
ಯೆಹೋವನ ನ್ಯಾಯ ಪ್ರಜ್ಞೆಯು ಸಾಕ್ಷ್ಯಗಳನ್ನು ಒಟ್ಟುಗೂಡಿಸಲು ಸಮಯ ಅನುಮತಿಸುವುದನ್ನು ಅವಶ್ಯಪಡಿಸಿತು. ಇದನ್ನು ಅನುಮತಿಸಿರುವುದರಿಂದಾಗಿ ಯಾವ ತೀರ್ಮಾನಕ್ಕೆ ಬರಲು ಸಾಧ್ಯವಾಗಿದೆ? ಸೈತಾನನ ಪ್ರಭಾವದಡಿಯಲ್ಲಿರುವ ಮಾನವ ಆಳ್ವಿಕೆಯು ಕೇವಲ ಕಷ್ಟಸಂಕಟಗಳಿಗೆ ನಡೆಸುತ್ತದೆಂದೇ. ನಿಜವಾಗಿಯೂ ದೇವರು ಸಮಯವನ್ನು ಅನುಮತಿಸಿದ್ದು ದೀರ್ಘಾವಧಿಯಲ್ಲಿ ಮಾನವರಿಗೆ ಪ್ರಯೋಜನ ತಂದಿದೆ. ಹೇಗೆ? ಆ ಸಾಕ್ಷ್ಯಗಳನ್ನು ಪರಿಶೀಲಿಸಿ ಅವುಗಳನ್ನು ನಂಬುವವರಿಗೆ, ದೇವರು ತಮ್ಮನ್ನು ಆಳಬೇಕು ಎಂಬ ಇಚ್ಛೆಯನ್ನು ಪ್ರದರ್ಶಿಸುವ ಅವಕಾಶವಿದೆ. ಯಾರು ದೇವರ ಮಟ್ಟಗಳನ್ನು ಕಲಿತು ಅವುಗಳಿಗನುಸಾರ ಜೀವಿಸುತ್ತಾರೋ ಅವರಿಗೆ ಸದಾಕಾಲ ಜೀವಿಸುವ ಪ್ರತೀಕ್ಷೆಯಿದೆ.—ಯೋಹಾನ 17:3; 1 ಯೋಹಾನ 2:17.
ನಿಜ, ಈಗ ಲೋಕವನ್ನು ಸೈತಾನನು ತನ್ನ ಹಿಡಿತದಲ್ಲಿರಿಸಿಕೊಂಡಿದ್ದಾನೆ. ಆದರೆ ಇದು ಇನ್ನೂ ಹೆಚ್ಚು ಕಾಲ ಮುಂದುವರಿಯದು. ಬೇಗನೆ ಯೆಹೋವನು “ಸೈತಾನನ ಕೆಲಸಗಳನ್ನು ಲಯಮಾಡುವದಕ್ಕೋಸ್ಕರ” ತನ್ನ ಪುತ್ರನಾದ ಯೇಸುವನ್ನು ಉಪಯೋಗಿಸಲಿದ್ದಾನೆ. (1 ಯೋಹಾನ 3:8) ದೇವರ ನಿರ್ದೇಶನದ ಕೆಳಗೆ ಯೇಸು, ಮನಮುರಿದವರನ್ನು ವಾಸಿಮಾಡುವನು ಮತ್ತು ಅವರ ಜೀವನದಲ್ಲಿ ಎದುರಾಗಿರುವ ದುರಂತಕರ ಸ್ಥಿತಿಗಳನ್ನು ಸರಿಪಡಿಸುವನು. ಇತಿಹಾಸದಾದ್ಯಂತ ಕಷ್ಟಾನುಭವಿಸಿದ ಮತ್ತು ಮರಣಪಟ್ಟ ಕೋಟ್ಯಂತರ ಮನುಷ್ಯರನ್ನು ಯೇಸು ಜೀವಕ್ಕೆ ತರುವ ಮೂಲಕ ಪುನರುತ್ಥಾನಗೊಳಿಸುವನು.—ಯೋಹಾನ 11:25.
ಯೇಸುವಿನ ಪುನರುತ್ಥಾನವು ತಾನೇ ಪಿಶಾಚನ ಕೆಲಸಗಳ ಮೇಲೆ ದೇವರ ವಿಜಯವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದು ದೇವರ ಆಳ್ವಿಕೆಯನ್ನು ಆಯ್ಕೆಮಾಡುವ ಮಾನವರಿಗೆ ಏನು ಕಾದಿದೆ ಎನ್ನುವುದರ ಮುನ್‌ಸೂಚನೆಯಾಗಿದೆ. (ಅ. ಕೃತ್ಯಗಳು 17:31) ಈ ಸಾಂತ್ವನದಾಯಕ ಮಾತುಗಳೊಂದಿಗೆ ಭವಿಷ್ಯತ್ತನ್ನು ಅರ್ಥಮಾಡಿಕೊಳ್ಳುವಂತೆ ಬೈಬಲ್ ಸಹಾಯಮಾಡುತ್ತದೆ: “ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:3, 4. (w08 2/1)