ಜೀವನದ ಉದ್ದೇಶ ಏನು?
ಜೀವನದ ಉದ್ದೇಶ ಏನು?
ಇದಕ್ಕೆ ಉತ್ತರ ಪ್ರಾಮುಖ್ಯ ಏಕೆ? ಜೀವನಕ್ಕೆ ಅರ್ಥವಿಲ್ಲ, ಉದ್ದೇಶವಿಲ್ಲ ಎಂಬ ವಿಚಾರವು ಮನಸ್ಸಿಗೆ ಬಹಳಷ್ಟು ಬೇಸರ ತರಿಸುವ ಸಂಗತಿಗಳಲ್ಲಿ ಒಂದು. ಇನ್ನೊಂದು ಬದಿ, ಜೀವನದಲ್ಲಿ ಸ್ಪಷ್ಟ ಉದ್ದೇಶವಿರುವ ವ್ಯಕ್ತಿಯೊಬ್ಬನು ಯಾವುದೇ ಕೆಟ್ಟ ಸನ್ನಿವೇಶದಿಂದ ಚೇತರಿಸಿಕೊಳ್ಳಲು ಶಕ್ತನಾಗಿರುತ್ತಾನೆ. ಎರಡನೇ ವಿಶ್ವ ಯುದ್ಧದ ಸಮಯದಲ್ಲಾದ ಯೆಹೂದ್ಯರ ಸರ್ವನಾಶದಿಂದ ಪಾರಾದ ವಿಕ್ಟರ್ ಈ. ಫ್ರಾಂಕ್ ಎಂಬ ನರಶಾಸ್ತ್ರಜ್ಞರು ಬರೆದದ್ದು: “ಜೀವನಕ್ಕೊಂದು ಅರ್ಥವಿದೆ ಎಂಬ ಅರಿವು, ವ್ಯಕ್ತಿಯೊಬ್ಬನಿಗೆ ಅತ್ಯಂತ ಕೆಡುಕಿನ ಪರಿಸ್ಥಿತಿಗಳಲ್ಲೂ ಬದುಕಿ ಉಳಿಯಲು ಸಹಾಯಮಾಡುತ್ತದೆ. ಇಂಥ ಸಹಾಯ ಲೋಕದಲ್ಲಿ ಇನ್ಯಾವುದರಿಂದಲೂ ಸಿಗಲಾರದೆಂದು ಹೇಳಬಲ್ಲೆ.”
ಆದರೆ ಈ ವಿಷಯದ ಕುರಿತು ವಿಭಿನ್ನವಾದ ಅಸಂಖ್ಯಾತ ಅಭಿಪ್ರಾಯಗಳಿವೆ. ಜೀವನದ ಉದ್ದೇಶವನ್ನು ಪ್ರತಿಯೊಬ್ಬರು ಸ್ವತಃ ನಿರ್ಧರಿಸಿಕೊಳ್ಳಬೇಕೆಂದು ಕೆಲವರಿಗನಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಜೀವನಕ್ಕೆ ಅರ್ಥವೇ ಇಲ್ಲವೆಂಬುದು ವಿಕಾಸವಾದಿಗಳ ಅಂಬೋಣ.
ಆದುದರಿಂದ, ಜೀವನದ ಉದ್ದೇಶವನ್ನು ಕಂಡುಹಿಡಿಯುವ ಅತಿ ತರ್ಕಬದ್ಧ ವಿಧಾನವು ಜೀವದಾತನಾದ ಯೆಹೋವ ದೇವರಿಂದಲೇ ಅದನ್ನು ಕಲಿಯುವುದು ಆಗಿದೆ. ಆತನ ವಾಕ್ಯವು ಈ ವಿಷಯದಲ್ಲಿ ಏನು ಹೇಳುತ್ತದೆಂಬುದನ್ನು ಪರಿಗಣಿಸಿರಿ.
ಬೈಬಲ್ ಏನನ್ನುತ್ತದೆ?
ಯೆಹೋವ ದೇವರು ಪ್ರಥಮ ಸ್ತ್ರೀಪುರುಷರನ್ನು ಸೃಷ್ಟಿಮಾಡಿದಾಗ ಅವರಿಗಾಗಿ ನಿರ್ದಿಷ್ಟ ಉದ್ದೇಶವನ್ನಿಟ್ಟನೆಂದು ಬೈಬಲ್ ಬೋಧಿಸುತ್ತದೆ. ಯೆಹೋವನು ನಮ್ಮ ಆ ಮೊದಲ ಹೆತ್ತವರಿಗೆ ಈ ಆಜ್ಞೆ ಕೊಟ್ಟನು.
ಆದಿಕಾಂಡ 1:28: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ.”
ಆದಾಮಹವ್ವರು ಮತ್ತು ಅವರಿಗೆ ಹುಟ್ಟಲಿದ್ದ ಮಕ್ಕಳು ಇಡೀ ಭೂಮಿಯನ್ನು ಒಂದು ಪರದೈಸ್ ಅಂದರೆ ಸುಂದರ ತೋಟವನ್ನಾಗಿ ಮಾಡಬೇಕೆಂದು ದೇವರು ಉದ್ದೇಶಿಸಿದ್ದನು. ಮಾನವರು ವೃದ್ಧರಾಗಿ ಸಾಯಬೇಕೆಂದಾಗಲಿ, ಪರಿಸರಕ್ಕೆ ಹಾನಿಮಾಡಬೇಕೆಂದಾಗಲಿ ಆತನು ಇಚ್ಛಿಸಿರಲಿಲ್ಲ. ಆದರೆ ನಮ್ಮ ಪ್ರಥಮ ಹೆತ್ತವರ ಬುದ್ಧಿಹೀನ ಆಯ್ಕೆಗಳಿಂದಾಗಿ ನಾವು ಪಾಪ ಮತ್ತು ಮರಣವನ್ನು ಬಳುವಳಿಯಾಗಿ ಪಡೆದೆವು. (ಆದಿಕಾಂಡ 3:2-6; ರೋಮಾಪುರ 5:12) ಹಾಗಿದ್ದರೂ ಯೆಹೋವನ ಉದ್ದೇಶ ಬದಲಾಗಿಲ್ಲ. ಬೇಗನೆ ಈ ಭೂಮಿ ಒಂದು ಪರದೈಸಾಗಲಿದೆ.—ಯೆಶಾಯ 55:10, 11.
ಯೆಹೋವನು ನಮ್ಮನ್ನು ಸೃಷ್ಟಿಸಿದಾಗ ತನ್ನ ಉದ್ದೇಶವನ್ನು ಪೂರೈಸಲು ಬೇಕಾದ ಶಾರೀರಿಕ ಹಾಗೂ ಬೌದ್ಧಿಕ ಸಾಮರ್ಥ್ಯಗಳನ್ನು ಕೊಟ್ಟನಾದರೂ, ಆತನಿಂದ ಸ್ವತಂತ್ರರಾಗಿ ಜೀವಿಸುವಂಥ ರೀತಿಯಲ್ಲಿ ಸೃಷ್ಟಿಸಲಿಲ್ಲ. ನಮಗಾಗಿ ದೇವರ ಉದ್ದೇಶ ಏನೆಂಬುದನ್ನು ಬೈಬಲಿನ ಈ ವಚನಗಳಲ್ಲಿ ಗಮನಿಸಿರಿ.
ಪ್ರಸಂಗಿ 12:13. “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.”
ಮೀಕ 6:8. “ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?”
ಮತ್ತಾಯ 22:37-39. “ನಿನ್ನ ದೇವರಾಗಿರುವ ಕರ್ತ [“ಯೆಹೋವ,” NW]ನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು. ಇದಕ್ಕೆ ಸಮಾನವಾದ ಎರಡನೆಯ ಆಜ್ಞೆ ಒಂದು ಉಂಟು, ಅದು ಯಾವದಂದರೆ—ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.”
ಬೈಬಲಿನ ಉತ್ತರದಿಂದ ಹೇಗೆ ನಿಜ ನೆಮ್ಮದಿ ಸಿಗುತ್ತದೆ?
ಜಟಿಲವಾದ ಯಾವುದೇ ಯಂತ್ರವು ಸರಿಯಾಗಿ ಕೆಲಸ ನಡೆಸಬೇಕಾದರೆ, ಅದರ ರಚಕನು ಅದನ್ನು ಯಾವುದಕ್ಕಾಗಿ ರಚಿಸಿದನೋ ಅದೇ ಉದ್ದೇಶಕ್ಕಾಗಿ ಮತ್ತು ಅದೇ ವಿಧಾನದಲ್ಲಿ ಬಳಸಬೇಕು. ಹಾಗೆಯೇ ನಾವು ಆಧ್ಯಾತ್ಮಿಕ, ಮಾನಸಿಕ, ಭಾವನಾತ್ಮಕ ಮತ್ತು ಶಾರೀರಿಕ ಹಾನಿಯಿಂದ ದೂರವಿರಬೇಕಾದರೆ ನಮ್ಮ
ನಿರ್ಮಾಣಿಕನು ಉದ್ದೇಶಿಸಿದಂಥ ರೀತಿಯಲ್ಲೇ ನಮ್ಮ ಜೀವನವನ್ನು ಬಳಸಬೇಕು. ಬದುಕಿನ ಈ ಕೆಳಗಿನ ವಿದ್ಯಮಾನಗಳಲ್ಲೂ ದೇವರ ಉದ್ದೇಶವನ್ನು ತಿಳಿದುಕೊಳ್ಳುವುದು ನಮಗೆ ಹೇಗೆ ನೆಮ್ಮದಿ ಕೊಡುತ್ತದೆಂಬುದನ್ನು ಪರಿಗಣಿಸೋಣ.ಜೀವನದಲ್ಲಿ ಆದ್ಯತೆಗಳನ್ನು ಇಡುವಾಗ ಅನೇಕರಿಂದು ಧನ-ಶೇಖರಣೆಗೆ ತಮ್ಮ ಇಡೀ ಬದುಕನ್ನು ಮುಡಿಪಾಗಿರಿಸಿದ್ದಾರೆ. ಆದರೆ, “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ” ಎಂದು ಬೈಬಲ್ ಎಚ್ಚರಿಸುತ್ತದೆ.—1 ತಿಮೊಥೆಯ 6:9, 10.
ಇನ್ನೊಂದೆಡೆ, ಧನವನ್ನಲ್ಲ ಬದಲಿಗೆ ದೇವರನ್ನು ಪ್ರೀತಿಸಲು ಕಲಿತಿರುವವರಿಗೆ ಸಂತೃಪ್ತರಾಗಿರುವುದರ ಗುಟ್ಟು ತಿಳಿದಿದೆ. (1 ತಿಮೊಥೆಯ 6:7, 8) ಕಠಿನ ದುಡಿಮೆಯ ಮಹತ್ವವನ್ನು ಅವರು ಗ್ರಹಿಸಿದ್ದಾರೆ ಮತ್ತು ತಮ್ಮ ಭೌತಿಕ ಅಗತ್ಯಗಳನ್ನು ಸ್ವತಃ ಪೂರೈಸಿಕೊಳ್ಳುವುದು ತಮ್ಮ ಕರ್ತವ್ಯವೆಂದು ಅರಿತಿದ್ದಾರೆ. (ಎಫೆಸ 4:28) ಆದರೆ ಯೇಸುವಿನ ಈ ಮಾತುಗಳನ್ನು ಸಹ ಅವರು ಗಂಭೀರವಾಗಿ ಪರಿಗಣಿಸುತ್ತಾರೆ: “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು; ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು. ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ.”—ಮತ್ತಾಯ 6:24.
ಆದುದರಿಂದ, ದೇವರನ್ನು ಪ್ರೀತಿಸುವವರು ಉದ್ಯೋಗ ಇಲ್ಲವೇ ಹಣಮಾಡುವುದಕ್ಕೆ ಆದ್ಯತೆ ಕೊಡದೆ ದೇವರ ಚಿತ್ತ ಮಾಡುವುದಕ್ಕೆ ತಮ್ಮ ಜೀವನದಲ್ಲಿ ಪ್ರಮುಖ ಸ್ಥಾನ ಕೊಡುತ್ತಾರೆ. ಹೀಗೆ ಮಾಡಿದರೆ ಯೆಹೋವ ದೇವರು ತಮ್ಮನ್ನು ಪರಾಮರಿಸುವನೆಂದು ಅವರಿಗೆ ತಿಳಿದಿದೆ. ಅಷ್ಟೇ ಅಲ್ಲ, ತನ್ನ ಚಿತ್ತಕ್ಕೆ ಆದ್ಯತೆ ಕೊಡುವವರನ್ನು ಪರಾಮರಿಸುವುದು ತನ್ನ ಕರ್ತವ್ಯವೆಂದು ಯೆಹೋವನು ಎಣಿಸುತ್ತಾನೆ.—ಮತ್ತಾಯ 6:25-33.
ಜನರೊಂದಿಗೆ ವ್ಯವಹರಿಸುವಾಗ ಅನೇಕರು ತಮ್ಮನ್ನು ಇತರರಿಗಿಂತ ಮುಂದಾಗಿರಿಸುತ್ತಾರೆ. ಅನೇಕಾನೇಕ ಜನರು “ಹಣದಾಸೆಯವರೂ . . . ಮಮತೆಯಿಲ್ಲದವರೂ” ಆಗಿದ್ದಾರೆ ಮತ್ತು ಜಗತ್ತಿನಲ್ಲಿ ಇಂದು ಶಾಂತಿಯಿಲ್ಲದಿರುವುದಕ್ಕೆ ಇದೇ ಒಂದು ಮುಖ್ಯ ಕಾರಣ. (2 ತಿಮೊಥೆಯ 3:2, 3) ಇಂಥವರನ್ನು ಯಾರಾದರೂ ನಿರಾಶೆಗೊಳಿಸುವಲ್ಲಿ ಇಲ್ಲವೇ ಅವರ ಅಭಿಪ್ರಾಯವನ್ನು ಸಮ್ಮತಿಸದಿದ್ದಲ್ಲಿ, ಅವರಿಂದ “ಎಲ್ಲಾ ದ್ವೇಷ ಕೋಪ ಕ್ರೋಧ ಕಲಹ ದೂಷಣೆ” ಹೊರಡುತ್ತದೆ. (ಎಫೆಸ 4:31) ಸ್ವನಿಯಂತ್ರಣದ ಈ ಕೊರತೆಯು ನೆಮ್ಮದಿ ತರುವ ಬದಲು ಕೇವಲ ‘ವ್ಯಾಜ್ಯವನ್ನೆಬ್ಬಿಸುತ್ತದೆ.’—ಜ್ಞಾನೋಕ್ತಿ 15:18.
ಇದಕ್ಕೆ ವ್ಯತಿರಿಕ್ತವಾಗಿ ತಮ್ಮಂತೆಯೇ ತಮ್ಮ ನೆರೆಯವನನ್ನು ಪ್ರೀತಿಸಬೇಕೆಂಬ ದೇವರ ಆಜ್ಞೆಗೆ ವಿಧೇಯರಾಗುವವರು “ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ” ಇರುತ್ತಾರೆ. (ಎಫೆಸ 4:32; ಕೊಲೊಸ್ಸೆ 3:13) ಇತರರು ತಮ್ಮೊಂದಿಗೆ ದಯೆಯಿಂದ ನಡೆದುಕೊಳ್ಳದಿದ್ದರೂ ಅವರು, ‘ಬೈಯುವವರನ್ನು ಪ್ರತಿಯಾಗಿ ಬೈಯದಿದ್ದ’ ಯೇಸುವನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. (1 ಪೇತ್ರ 2:23) ತಾವು ಮಾಡಿರುವ ಉಪಕಾರಕ್ಕಾಗಿ ಕೃತಜ್ಞತೆಯಿಲ್ಲದವರನ್ನೂ ಸೇರಿಸಿ, ಇತರರ ಸೇವೆಮಾಡುವುದರಿಂದ ನಿಜ ತೃಪ್ತಿ ಸಿಗುತ್ತದೆಂದು ಅವರು ಯೇಸುವಿನಂತೆ ಗ್ರಹಿಸುತ್ತಾರೆ. (ಮತ್ತಾಯ 20:25-28; ಯೋಹಾನ 13:14, 15; ಅ. ಕೃತ್ಯಗಳು 20:35) ತನ್ನ ಪುತ್ರನನ್ನು ಅನುಕರಿಸುವವರಿಗೆ ಯೆಹೋವ ದೇವರು ತನ್ನ ಪವಿತ್ರಾತ್ಮ ಕೊಡುತ್ತಾನೆ ಮತ್ತು ಇದು ಅವರ ಜೀವನದಲ್ಲಿ ನಿಜ ನೆಮ್ಮದಿ ತರುತ್ತದೆ.—ಗಲಾತ್ಯ 5:22.
ಆದರೆ ಭವಿಷ್ಯತ್ತಿನ ಕುರಿತ ನೋಟವು ನಿಮ್ಮ ನೆಮ್ಮದಿಯನ್ನು ಹೇಗೆ ಪ್ರಭಾವಿಸಬಲ್ಲದು? (w08 2/1)
[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]
ವ್ಯಕ್ತಿಯೊಬ್ಬನಿಗೆ ಜೀವನದಲ್ಲಿ ಸ್ಪಷ್ಟ ಉದ್ದೇಶ ಇರಬೇಕು
[ಪುಟ 7ರಲ್ಲಿರುವ ಚಿತ್ರ]
ನಿಜ ನೆಮ್ಮದಿ ಹೇಗೆ ಸಿಗಬಲ್ಲದೆಂದು ಯೇಸು ಕಲಿಸುತ್ತಾನೆ