ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾಳಜಿವಹಿಸುವ ಕುರುಬನು

ಕಾಳಜಿವಹಿಸುವ ಕುರುಬನು

ದೇವರ ಸಮೀಪಕ್ಕೆ ಬನ್ನಿರಿ

ಕಾಳಜಿವಹಿಸುವ ಕುರುಬನು

ಮತ್ತಾಯ 18:12-14

‘ದೇವರಿಗೆ ನನ್ನ ಕುರಿತು ಕಾಳಜಿಯಿದೆಯೋ?’ ಎಂದು ನೀವು ನಿಮ್ಮನ್ನೇ ಕೇಳಿಕೊಂಡಿದ್ದೀರೋ? ನಿಮ್ಮಂತೆಯೇ ಬೇರೆಯವರೂ ಈ ಪ್ರಶ್ನೆಯನ್ನು ಕೇಳಿದ್ದಾರೆ. ನಮ್ಮಲ್ಲಿ ಅನೇಕರು ಕಷ್ಟಗಳನ್ನೂ ಸಮಸ್ಯೆಗಳನ್ನೂ ಎದುರಿಸುತ್ತೇವೆ. ಇಂಥ ಸಮಯಗಳಲ್ಲಿ ಈ ವಿಶಾಲವಾದ ವಿಶ್ವದ ಸೃಷ್ಟಿಕರ್ತನು ನಮ್ಮ ಕಡೆಗೆ ಲಕ್ಷ್ಯ ಕೊಡುತ್ತಾನೋ ಎಂಬ ಸಂಶಯ ನಮ್ಮಲ್ಲಿ ಹುಟ್ಟಬಹುದು. ಯೆಹೋವ ದೇವರು ನಮ್ಮಲ್ಲಿ ಒಬ್ಬೊಬ್ಬರ ಕುರಿತೂ ಕಾಳಜಿವಹಿಸುತ್ತಾನೋ ಎಂಬುದನ್ನು ನಾವು ತಿಳಿದುಕೊಳ್ಳುವುದು ಆವಶ್ಯಕ. ಯೆಹೋವನನ್ನು ಚೆನ್ನಾಗಿ ತಿಳಿದಿರುವ ಯೇಸು ಭೂಮಿಯಲ್ಲಿದ್ದಾಗ ಒಂದು ದೃಷ್ಟಾಂತದ ಮೂಲಕ ಈ ಪ್ರಶ್ನೆಗೆ ಹೃದಯಸ್ಪರ್ಶಿ ಉತ್ತರ ಕೊಟ್ಟನು.

ಯೆಹೋವನು ತೋರಿಸುವ ಕಾಳಜಿಯನ್ನು, ಕುರಿಗಳನ್ನು ಪರಾಮರಿಸುವ ಒಬ್ಬ ಕುರುಬನು ತೋರಿಸುವ ಕಾಳಜಿಗೆ ಹೋಲಿಸುತ್ತಾ ಯೇಸು ಹೇಳಿದ್ದು: “ಒಬ್ಬ ಮನುಷ್ಯನಿಗೆ ನೂರು ಕುರಿಗಳು ಇರಲಾಗಿ ಅವುಗಳಲ್ಲಿ ಒಂದು ತಪ್ಪಿಸಿಕೊಂಡರೆ ಅವನು ತೊಂಭತ್ತೊಂಭತ್ತು ಕುರಿಗಳನ್ನು ಬಿಟ್ಟು ಬೆಟ್ಟಕ್ಕೆ ಹೋಗಿ ತಪ್ಪಿಸಿಕೊಂಡದ್ದನ್ನು ಹುಡುಕುತ್ತಾನಲ್ಲವೇ. ಅದು ಸಿಕ್ಕಿದರೆ ತಪ್ಪಿಸಿಕೊಳ್ಳದೆ ಇರುವ ತೊಂಭತ್ತೊಂಭತ್ತು ಕುರಿಗಳಿಗಿಂತ ಆ ಒಂದಕ್ಕೋಸ್ಕರ ಹೆಚ್ಚಾಗಿ ಸಂತೋಷಪಡುವನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಹಾಗೆಯೇ ಈ ಚಿಕ್ಕವರಲ್ಲಿ ಒಬ್ಬನಾದರೂ ಕೆಟ್ಟುಹೋಗುವದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.” (ಮತ್ತಾಯ 18:12-14) ಯೆಹೋವನು ತನ್ನ ಪ್ರತಿಯೊಬ್ಬ ಆರಾಧಕನ ಕಡೆಗೆ ತೋರಿಸುವ ಕೋಮಲ ಕಾಳಜಿಯನ್ನು ಯೇಸು ಇಲ್ಲಿ ಹೇಗೆ ವರ್ಣಿಸಿದನೆಂಬುದನ್ನು ನೋಡೋಣ.

ಆ ಕುರುಬನಲ್ಲಿ, ಪ್ರತಿಯೊಂದು ಕುರಿಗಾಗಿ ತಾನು ಜವಾಬ್ದಾರನೆಂಬ ಅರಿವಿತ್ತು. ಒಂದು ಕುರಿಯು ಹಿಂಡಿನಿಂದ ತಪ್ಪಿಸಿಕೊಂಡಲ್ಲಿ ಅದು ನಿರ್ದಿಷ್ಟವಾಗಿ ಯಾವ ಕುರಿ ಎಂಬುದು ಅವನಿಗೆ ಗೊತ್ತಾಗುತ್ತಿತ್ತು. ಅವನು ಪ್ರತಿಯೊಂದು ಕುರಿಗೆ ಹೆಸರಿಟ್ಟಿದ್ದನು ಮತ್ತು ಒಂದೊಂದು ಕುರಿಯ ಬಗ್ಗೆಯೂ ಚೆನ್ನಾಗಿ ತಿಳಿದಿದ್ದನು. (ಯೋಹಾನ 10:3) ಕಾಳಜಿಯುಳ್ಳ ಆ ಕುರುಬನು, ತಪ್ಪಿಸಿಕೊಂಡ ಕುರಿಯನ್ನು ಪುನಃ ಹಿಂಡಿಗೆ ಸೇರಿಸುವ ತನಕ ವಿಶ್ರಮಿಸುತ್ತಿರಲಿಲ್ಲ. ಇದರರ್ಥ, ಉಳಿದ 99 ಕುರಿಗಳನ್ನು ಅಲ್ಲೇ ಅಪಾಯಕರ ಸ್ಥಿತಿಯಲ್ಲಿ ಬಿಟ್ಟು ಆ ಒಂದು ಕುರಿಯನ್ನು ಹುಡುಕಲು ಹೋದನೆಂದಲ್ಲ. ಕುರುಬರು ಹೆಚ್ಚಾಗಿ ಒಟ್ಟಿಗೆ ಇದ್ದು ತಮ್ಮ ಹಿಂಡು ಬೇರೆ ಹಿಂಡುಗಳೊಂದಿಗೆ ಬೆರೆಯುವಂತೆ ಬಿಡುತ್ತಿದ್ದರು. * ಆದುದರಿಂದ ತಪ್ಪಿಸಿಕೊಂಡ ಕುರಿಯನ್ನು ಹುಡುಕಲು ಹೋಗುವಾಗ ಆ ಕುರುಬನು ತನ್ನ ಕುರಿಗಳನ್ನು ಜೊತೆಕುರುಬರ ಬಳಿಯಲ್ಲಿ ಸ್ವಲ್ಪ ಸಮಯ ಬಿಟ್ಟು ಹೋದನು. ಕಳೆದು ಹೋದ ಆ ಕುರಿಯು ಸಿಕ್ಕಿದಾಗ ಮತ್ತು ಅದಕ್ಕೆ ಯಾವುದೇ ಅಪಾಯವಾಗದೆ ಇದ್ದದ್ದನ್ನು ನೋಡಿದಾಗ ಕುರುಬನು ತುಂಬ ಹರ್ಷಿಸಿದನು. ಹೆದರಿದ ಆ ಕುರಿಯನ್ನು ತನ್ನ ಹೆಗಲ ಮೇಲೆ ಇಟ್ಟುಕೊಂಡು ಮಂದೆಗೆ ಸೇರಿಸಿದನು.—ಲೂಕ 15:5, 6.

ದೃಷ್ಟಾಂತವನ್ನು ಅನ್ವಯಿಸುತ್ತಾ, “ಈ ಚಿಕ್ಕವರಲ್ಲಿ ಒಬ್ಬನಾದರೂ ಕೆಟ್ಟುಹೋಗುವದು” ದೇವರ ಅಪೇಕ್ಷೆಯಲ್ಲ ಎಂದು ಯೇಸು ಹೇಳಿದನು. “ನನ್ನಲ್ಲಿ ನಂಬಿಕೆಯಿಡುವ ಈ ಚಿಕ್ಕವರಲ್ಲಿ ಒಬ್ಬನಿಗೆ” ಅಡ್ಡಿಯಾಗದಂತೆ ಹಿಂದೊಮ್ಮೆ ಯೇಸು ಶಿಷ್ಯರನ್ನು ಎಚ್ಚರಿಸಿದ್ದನು. (ಮತ್ತಾಯ 18:6) ಹಾಗಾದರೆ, ಯೇಸುವಿನ ದೃಷ್ಟಾಂತವು ಯೆಹೋವನ ಬಗ್ಗೆ ನಮಗೇನು ಕಲಿಸುತ್ತದೆ? ಆತನು ‘ಚಿಕ್ಕವರನ್ನು’ ಅಂದರೆ ಲೋಕದ ದೃಷ್ಟಿಯಲ್ಲಿ ನಗಣ್ಯರಾಗಿರುವವರನ್ನು ಸೇರಿಸಿ, ತನ್ನ ಪ್ರತಿಯೊಂದು ಕುರಿಯ ಬಗ್ಗೆ ತೀವ್ರ ಕಾಳಜಿಯಿರುವ ಕುರುಬನಾಗಿದ್ದಾನೆ. ಹೌದು, ಯೆಹೋವನಿಗೆ ತನ್ನ ಪ್ರತಿಯೊಬ್ಬ ಆರಾಧಕನು ವಿಶಿಷ್ಟನೂ ಅಮೂಲ್ಯನೂ ಆಗಿದ್ದಾನೆ.

ನೀವು ದೇವರಿಗೆ ಅಮೂಲ್ಯರಾಗಿದ್ದೀರೆಂಬ ಭರವಸೆಯಿಂದಿರಲು ಬಯಸುತ್ತೀರೋ? ಹಾಗಿರುವಲ್ಲಿ, ಆ ಮಹಾ ಕುರುಬನ ಕುರಿತು ಹಾಗೂ ಆತನಿಗೆ ಸಮೀಪವಾಗುವುದು ಹೇಗೆಂಬುದರ ಕುರಿತು ಕಲಿಯಬಾರದೇಕೆ? ಹೀಗೆ ಮಾಡುವ ಮೂಲಕ, ಅಪೊಸ್ತಲ ಪೇತ್ರನಿಗಿದ್ದಂಥ ದೃಢ ಭರವಸೆ ನಿಮಗೂ ಇರಬಲ್ಲದು. ‘ಕಳೆದು ಹೋದ ಕುರಿಯ’ ದೃಷ್ಟಾಂತವನ್ನು ನಿಸ್ಸಂದೇಹವಾಗಿ ಯೇಸುವಿನಿಂದಲೇ ನೇರವಾಗಿ ಕೇಳಿಸಿಕೊಂಡಿದ್ದ ಅವನು ಸಮಯಾನಂತರ ಬರೆದದ್ದು: “ನಿಮ್ಮ ಚಿಂತೆಯನ್ನೆಲ್ಲಾ ಆತನ [ದೇವರ] ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.”—1 ಪೇತ್ರ 5:7. (w08 2/1)

[ಪಾದಟಿಪ್ಪಣಿ]

^ ಪ್ಯಾರ. 6 ಪ್ರತಿಯೊಂದು ಕುರಿಯು ತನ್ನ ಕುರುಬನ ಭಿನ್ನವಾದ ಧ್ವನಿಯನ್ನು ಗುರುತಿಸುವುದರಿಂದ, ಮಂದೆಗಳನ್ನು ಬೇರ್ಪಡಿಸುವುದು ದೊಡ್ಡ ಸಮಸ್ಯೆಯಾಗಿರಲಿಲ್ಲ.—ಯೋಹಾನ 10:4.