ಯೆಹೋವನು ನಿಮ್ಮ ದಾಂಪತ್ಯವನ್ನು ಬಲಪಡಿಸಿ, ಕಾಪಾಡಲಿ
“ಯೆಹೋವನು ಪಟ್ಟಣವನ್ನು ಕಾಯದಿದ್ದರೆ ಕಾವಲುಗಾರರು ಅದನ್ನು ಕಾಯುವದು ವ್ಯರ್ಥ.”—ಕೀರ್ತ. 127:1ಬಿ.
1, 2. (ಎ) ಇಸ್ರಾಯೇಲ್ಯರಲ್ಲಿ 24,000 ಮಂದಿ ತಮ್ಮ ಅದ್ಭುತ ಪ್ರತಿಫಲವನ್ನು ಕಳೆದುಕೊಳ್ಳಲು ಕಾರಣವೇನು? (ಬಿ) ಈ ವೃತ್ತಾಂತ ನಮಗೇಕೆ ಮಹತ್ವದ್ದಾಗಿದೆ?
ಇಸ್ರಾಯೇಲ್ ಜನಾಂಗ ವಾಗ್ದತ್ತ ದೇಶಕ್ಕೆ ತುಂಬ ಹತ್ತಿರವಿತ್ತು. ಅಷ್ಟರಲ್ಲಿ ಸಾವಿರಾರು ಇಸ್ರಾಯೇಲ್ಯ ಪುರುಷರು ‘ಮೋವಾಬ್ ಸ್ತ್ರೀಯರೊಡನೆ ಸಹವಾಸಮಾಡಿದರು’ ಅಂದರೆ ಸಂಬಂಧ ಇಟ್ಟುಕೊಂಡರು. ಈ ಕಾರಣಕ್ಕೆ 24,000 ಇಸ್ರಾಯೇಲ್ಯರು ಸತ್ತರು. ಎಷ್ಟೋ ಸಮಯದಿಂದ ಇವರೆಲ್ಲರೂ ವಾಗ್ದತ್ತ ದೇಶವನ್ನು ಪ್ರವೇಶಿಸಲು ಕಾಯುತ್ತಾ ಇದ್ದರು! ಇನ್ನೇನು ಅದು ಅವರ ಕೈಸೇರಲಿತ್ತು. ಆದರೆ ಅವರು ಅನೈತಿಕತೆ ನಡೆಸಿದ್ದರಿಂದ ಆ ಅದ್ಭುತ ಪ್ರತಿಫಲ ಕೈಜಾರಿ ಹೋಯಿತು.—ಅರ. 25:1-5, 9.
2 ‘ವಿಷಯಗಳ ವ್ಯವಸ್ಥೆಗಳ ಅಂತ್ಯವನ್ನು ಸಮೀಪಿಸಿರುವ ನಮಗೆ ಎಚ್ಚರಿಕೆ ನೀಡಲಿಕ್ಕಾಗಿ’ ಈ ದುರಂತಕರ ಮಾದರಿ ಬೈಬಲಿನಲ್ಲಿ ದಾಖಲಾಗಿದೆ. (1 ಕೊರಿಂ. 10:6-11) ನಾವು “ಕಡೇ ದಿವಸಗಳ” ಕೊನೆ ಭಾಗದಲ್ಲಿ ಜೀವಿಸುತ್ತಿದ್ದೇವೆ. ಹೊಸ ಲೋಕ ತುಂಬ ಹತ್ತಿರದಲ್ಲಿದೆ. (2 ತಿಮೊ. 3:1; 2 ಪೇತ್ರ 3:13) ದುಃಖದ ಸಂಗತಿಯೇನೆಂದರೆ ಯೆಹೋವನ ಆರಾಧಕರಲ್ಲಿ ಕೆಲವರು ತಮ್ಮ ನೈತಿಕ ಮಟ್ಟಗಳನ್ನು ಕಡೆಗಣಿಸಿ, ಅನೈತಿಕತೆಗೆ ಮಣಿದಿದ್ದಾರೆ. ತಾವು ಮಾಡಿದ್ದರ ದುಃಖಕರ ಪರಿಣಾಮಗಳನ್ನು ಈಗ ಉಣ್ಣುತ್ತಿದ್ದಾರೆ. ಅವರು ತಮ್ಮ ತಪ್ಪಿಗಾಗಿ ಪಶ್ಚಾತ್ತಾಪಪಡದಿದ್ದರೆ ಪರದೈಸ್ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವ ಅವಕಾಶವನ್ನೂ ಕಳೆದುಕೊಳ್ಳುವರು.
3. ದಂಪತಿಗಳಿಗೆ ಯೆಹೋವನ ಮಾರ್ಗದರ್ಶನ ಹಾಗೂ ಸಂರಕ್ಷಣೆ ಏಕೆ ಅಗತ್ಯ? (ಶೀರ್ಷಿಕೆ ಚಿತ್ರ ನೋಡಿ.)
ಕೀರ್ತನೆ 127:1 ಓದಿ.) ಅವರು ತಮ್ಮ ದಾಂಪತ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬ ವಿಷಯವನ್ನು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ. ಅವರು ತಮ್ಮ ಹೃದಯ ಕಾಪಾಡಿಕೊಳ್ಳಬೇಕು, ದೇವರಿಗೆ ಹತ್ತಿರವಾಗಬೇಕು, ಹೊಸ ವ್ಯಕ್ತಿತ್ವ ಧರಿಸಿಕೊಳ್ಳಬೇಕು, ಇಬ್ಬರ ಮಧ್ಯೆ ಒಳ್ಳೇ ಮಾತುಕತೆ ಇರಬೇಕು ಮತ್ತು ವಿವಾಹಸಂಗಾತಿಗೆ ಸಲ್ಲತಕ್ಕದ್ದನ್ನು ಸಲ್ಲಿಸಬೇಕು.
3 ಈ ಲೋಕಕ್ಕೆ ಲೈಂಗಿಕತೆಯ ಹುಚ್ಚು ಹಿಡಿದಿದೆ. ಹಾಗಾಗಿ ತಮ್ಮ ದಾಂಪತ್ಯವನ್ನು ಕಾಪಾಡಲಿಕ್ಕಾಗಿ ಗಂಡಹೆಂಡತಿಯರಿಗೆ ಯೆಹೋವನ ಮಾರ್ಗದರ್ಶನ ಹಾಗೂ ಸಂರಕ್ಷಣೆ ಅಗತ್ಯ. (ನಿಮ್ಮ ಹೃದಯ ಕಾಪಾಡಿಕೊಳ್ಳಿ
4. ಕೆಲವು ಕ್ರೈಸ್ತರು ಅನೈತಿಕತೆಗೆ ಕೈಹಾಕಲು ಕಾರಣವೇನು?
4 ಕ್ರೈಸ್ತನೊಬ್ಬನು ಅನೈತಿಕತೆಗೆ ಕೈಹಾಕುವುದು ಹೇಗೆ? ಇದು ಹೆಚ್ಚಾಗಿ ಶುರುವಾಗುವುದು ಕಣ್ಣುಗಳಿಂದ. ಯೇಸು ವಿವರಿಸಿದ್ದು: “ಒಬ್ಬ ಸ್ತ್ರೀಯನ್ನು ಕಾಮೋದ್ರೇಕಭಾವದಿಂದ ನೋಡುತ್ತಾ ಇರುವ ಪ್ರತಿಯೊಬ್ಬನು ಈಗಾಗಲೇ ತನ್ನ ಹೃದಯದಲ್ಲಿ ಅವಳೊಂದಿಗೆ ವ್ಯಭಿಚಾರ ಮಾಡಿದವನಾಗಿದ್ದಾನೆ.” (ಮತ್ತಾ. 5:27, 28; 2 ಪೇತ್ರ 2:14) ಅನೈತಿಕತೆ ನಡೆಸಿದವರಲ್ಲಿ ಅನೇಕರು ತಮ್ಮ ನೈತಿಕ ಮಟ್ಟಗಳನ್ನು ಕಡೆಗಣಿಸಿದ್ದರು. ಹೇಗೆ? ಅಶ್ಲೀಲ ಚಿತ್ರಗಳನ್ನು ನೋಡುವ ಮೂಲಕ, ಲೈಂಗಿಕ ಆಸೆಗಳನ್ನು ಬಡಿದೆಬ್ಬಿಸುವ ಸಾಹಿತ್ಯ ಓದುವ ಮೂಲಕ ಅಥವಾ ಇಂಟರ್‌ನೆಟ್‍ನಲ್ಲಿ ಅಸಹ್ಯ ವಿಷಯಗಳನ್ನು ನೋಡುವ ಮೂಲಕ. ಇನ್ನೂ ಕೆಲವರು ಅನೈತಿಕ ಸಿನಿಮಾಗಳು, ನಾಟಕಗಳು ಇಲ್ಲವೆ ಟಿವಿ ಕಾರ್ಯಕ್ರಮಗಳನ್ನು ನೋಡಿದ್ದಾರೆ. ಇನ್ನಿತರರು ನೈಟ್ ಕ್ಲಬ್ಗಳಿಗೆ ಮತ್ತು ಬೆತ್ತಲೆ ಪ್ರದರ್ಶನಗಳನ್ನು ನೋಡಲು ಹೋಗಿದ್ದಾರೆ ಅಥವಾ ಲೈಂಗಿಕವಾಗಿ ಉದ್ರೇಕಗೊಳಿಸುವ ಮಾಲೀಷು ಮಾಡಿಸಿಕೊಳ್ಳಲು ಹೋಗಿದ್ದಾರೆ.
5. ನಮ್ಮ ಹೃದಯವನ್ನು ಕಾಪಾಡಿಕೊಳ್ಳುವುದು ಏಕೆ ಅಗತ್ಯ?
5 ಕೆಲವರು ಅನೈತಿಕತೆಗೆ ಕೈಹಾಕಲು ಕಾರಣವೇನೆಂದರೆ ಅವರು ತಮ್ಮ ವಿವಾಹ ಸಂಗಾತಿಯಲ್ಲದ ವ್ಯಕ್ತಿಯ ಗಮನಕ್ಕಾಗಿ ಆಶಿಸುವುದರಿಂದಲೇ. ನಾವಿರುವ ಈ ಜಗತ್ತಲ್ಲಿ ಜನರಿಗೆ ಸ್ವನಿಯಂತ್ರಣ ತೀರ ಕಡಿಮೆ. ಯಾವುದೇ ವಿಧದ ಅನೈತಿಕತೆಯಾದರೂ ಸರಿ ಅದರಲ್ಲಿ ಸುಖ ಪಡೆಯುತ್ತಾರೆ. ಅಲ್ಲದೆ, ನಮ್ಮ ಅಪರಿಪೂರ್ಣ ಹೃದಯ ವಂಚಕ. ಹಾಗಾಗಿ ಗಂಡ ಅಥವಾ ಹೆಂಡತಿ ಬಿಟ್ಟು ಬೇರೊಬ್ಬರ ಮೇಲೆ ಪ್ರೇಮದ ಭಾವನೆಗಳು ಸುಲಭವಾಗಿ ಹುಟ್ಟಿಕೊಳ್ಳುವ ಸಾಧ್ಯತೆಯಿದೆ. (ಯೆರೆಮಿಾಯ 17:9, 10 ಓದಿ.) ಯೇಸು ಹೇಳಿದ್ದು: “ಹೃದಯದಿಂದ ಕೆಟ್ಟ ಆಲೋಚನೆಗಳು, ಕೊಲೆ, ವ್ಯಭಿಚಾರ, ಹಾದರ . . . ಹೊರಬರುತ್ತವೆ.”—ಮತ್ತಾ. 15:19.
6, 7. (ಎ) ನಮ್ಮ ಹೃದಯದಲ್ಲಿ ತಪ್ಪು ಆಸೆಗಳು ಬೆಳೆದರೆ ಏನಾಗಬಲ್ಲದು? (ಬಿ) ನಾವು ಯೆಹೋವನ ವಿರುದ್ಧ ಪಾಪಮಾಡುವುದರಿಂದ ಹೇಗೆ ದೂರವಿರಬಹುದು?
6 ಪರಸ್ಪರರ ಕಡೆಗೆ ಆಕರ್ಷಿತರಾದ ಇಬ್ಬರು ವ್ಯಕ್ತಿಗಳ ಹೃದಯದಲ್ಲಿ ತಪ್ಪು ಆಸೆಗಳು ಬೆಳೆದಾಗ ಅವರಿಬ್ಬರ ನಡುವಿನ ಮಾತುಕತೆಯಲ್ಲಿ ತಮ್ಮ ಗಂಡ ಅಥವಾ ಹೆಂಡತಿ ಜೊತೆ ಮಾತ್ರ ಮಾತಾಡಬೇಕಾದಂಥ ವಿಷಯಗಳು ಇರುತ್ತವೆ. ನೆಪ ಹುಡುಕಿಕೊಂಡು ಒಟ್ಟಿಗೆ ಸಮಯ ಕಳೆಯುತ್ತಾರೆ. ಹೆಚ್ಚೆಚ್ಚು ಭೇಟಿಯಾಗುವುದಲ್ಲದೆ ಆಕಸ್ಮಿಕವಾಗಿ ಭೇಟಿಯಾದೆವು ಎಂಬಂತೆ ನಾಟಕವಾಡುತ್ತಾರೆ. ಅವರ ಭಾವನೆಗಳು ಹೆಚ್ಚು ಗಾಢವಾಗುತ್ತಾ ಹೋದಂತೆ ಸರಿಯಾದದ್ದನ್ನು ಮಾಡುವುದು ಅವರಿಗೆ ಹೆಚ್ಚು ಕಷ್ಟವೆನಿಸುತ್ತದೆ. ಅವರ ಸಂಬಂಧ ಎಷ್ಟು ಬೆಳೆಯುತ್ತದೊ, ಅದನ್ನು ಕಡಿದುಹಾಕುವುದು ಅಷ್ಟೇ ಕಷ್ಟವಾಗುತ್ತದೆ. ತಾವು ಮಾಡುತ್ತಿರುವುದು ತಪ್ಪು ಎಂದವರಿಗೆ ಗೊತ್ತಿದ್ದರೂ ಅದನ್ನು ನಿಲ್ಲಿಸಲು ಅವರಿಂದಾಗುವುದಿಲ್ಲ.—ಜ್ಞಾನೋ. 7:21, 22.
7 ಅವರು ಯೆಹೋವನ ನೈತಿಕ ಮಟ್ಟಗಳನ್ನು ಪೂರ್ತಿಯಾಗಿ ಮರೆತುಬಿಡುತ್ತಾರೆ. ಅವರ ತಪ್ಪು ಆಸೆಗಳು ಮತ್ತು ಮಾತುಕತೆಗಳು ಈಗ ಒಂದು ಹೆಜ್ಜೆ ಮುಂದೆ ಹೋಗುತ್ತವೆ. ದುಃಖದ ಸಂಗತಿಯೇನೆಂದರೆ ಅವರು ತಮ್ಮ ವಿವಾಹ ಸಂಗಾತಿ ಜೊತೆ ಮಾತ್ರ ಮಾಡಬೇಕಾದ ವಿಷಯಗಳನ್ನು ಮಾಡಲಾರಂಭಿಸುತ್ತಾರೆ. ಅಂದರೆ ಕೈಹಿಡಿಯುವುದು, ಮುದ್ದಿಡುವುದು, ಮೈನೇವರಿಸುವುದು, ಲೈಂಗಿಕ ರೀತಿಯಲ್ಲಿ ಮುಟ್ಟುವುದು ಇವೆಲ್ಲ ಮಾಡುತ್ತಾರೆ. ಅವರ ಸ್ವಂತ ಆಸೆಯಿಂದ ಅವರು “ಸೆಳೆಯಲ್ಪಟ್ಟು ಮರುಳುಗೊಳಿಸಲ್ಪ”ಡುತ್ತಾರೆ ಇಲ್ಲವೆ ಅದರಿಂದ ಸಿಕ್ಕಿಬೀಳುತ್ತಾರೆ. ಆ ಆಸೆ ತುಂಬ ಬಲವಾದಾಗ ಲೈಂಗಿಕ ಅನೈತಿಕತೆ ನಡೆಸುತ್ತಾರೆ. (ಯಾಕೋ. 1:14, 15) ಇದೊಂದು ದೊಡ್ಡ ದುರಂತ! ಒಂದುವೇಳೆ ಅವರು ದಾಂಪತ್ಯಕ್ಕಾಗಿರುವ ತಮ್ಮ ಗೌರವವನ್ನು ಹೆಚ್ಚಿಸಲು ಯೆಹೋವನ ನೆರವು ತೆಗೆದುಕೊಂಡಿರುತ್ತಿದ್ದರೆ ಆತನ ವಿರುದ್ಧ ಪಾಪಮಾಡುವುದನ್ನು ತಪ್ಪಿಸಬಹುದಿತ್ತು. ದಾಂಪತ್ಯಕ್ಕಾಗಿ ಅಂಥ ಗೌರವವನ್ನು ಒಬ್ಬ ವ್ಯಕ್ತಿ ಹೇಗೆ ಬೆಳೆಸಬಹುದು?
ದೇವರಿಗೆ ಹತ್ತಿರ ಬರುತ್ತಾ ಇರಿ
8. ಯೆಹೋವನೊಟ್ಟಿಗಿನ ಸ್ನೇಹ ನಾವು ಅನೈತಿಕತೆ ನಡೆಸದಂತೆ ಹೇಗೆ ಕಾಪಾಡುತ್ತದೆ?
8 ಕೀರ್ತನೆ 97:10 ಓದಿ. ನಾವು ಅನೈತಿಕತೆ ನಡೆಸದಂತೆ ಯೆಹೋವನೊಟ್ಟಿಗಿನ ಸ್ನೇಹ ಕಾಪಾಡುತ್ತದೆ. ಆತನ ಅದ್ಭುತ ಗುಣಗಳ ಬಗ್ಗೆ ಕಲಿಯುವಾಗ ನಾವು “ಪ್ರಿಯ ಮಕ್ಕಳಂತೆ ದೇವರನ್ನು ಅನುಕರಿಸುವವರಾಗಿ . . . ಪ್ರೀತಿಯಲ್ಲಿ ನಡೆಯುತ್ತಾ” ಇರುತ್ತೇವೆ. ಆಗ “ಜಾರತ್ವ ಮತ್ತು ಪ್ರತಿಯೊಂದು ರೀತಿಯ ಅಶುದ್ಧತೆ”ಯನ್ನು ತಿರಸ್ಕರಿಸಲು ಬೇಕಾದ ಬಲ ನಮಗಿರುತ್ತದೆ. (ಎಫೆ. 5:1-4) “ದೇವರು ಜಾರರಿಗೂ ವ್ಯಭಿಚಾರಿಗಳಿಗೂ ನ್ಯಾಯತೀರಿಸುವನು” ಎಂಬ ಮಾತನ್ನು ಅರ್ಥಮಾಡಿಕೊಳ್ಳುವಂಥ ಗಂಡಹೆಂಡತಿ ಒಬ್ಬರಿಗೊಬ್ಬರು ನಿಷ್ಠರಾಗಿರಲು ತುಂಬ ಶ್ರಮಿಸುತ್ತಾರೆ.—ಇಬ್ರಿ. 13:4.
9. (ಎ) ಧಣಿಯ ಹೆಂಡತಿಯಿಂದ ಒತ್ತಡ ಇದ್ದರೂ ಯೋಸೇಫನು ನಂಬಿಗಸ್ತನಾಗಿರಲು ಸಾಧ್ಯವಾದದ್ದು ಹೇಗೆ? (ಬಿ) ಯೋಸೇಫನ ಮಾದರಿಯಿಂದ ಯಾವ ಪಾಠಗಳನ್ನು ಕಲಿಯಬಲ್ಲೆವು?
9 ಕೆಲವು ಕ್ರೈಸ್ತರು ಕೆಲಸದ ಸಮಯದ ನಂತರವೂ ಸಾಕ್ಷಿಯಲ್ಲದ ಜೊತೆಕೆಲಸಗಾರರೊಂದಿಗೆ ಸಮಯ ಕಳೆಯುವ ಮೂಲಕ ನೈತಿಕ ಮಟ್ಟಗಳನ್ನು ನಿರ್ಲಕ್ಷಿಸಿದ್ದಾರೆ. ಇನ್ನೂ ಕೆಲವರಿಗೆ ಅನೈತಿಕತೆ ನಡೆಸುವ ಒತ್ತಡ ಕೆಲಸದ ಸಮಯದಲ್ಲೇ ಬರುತ್ತದೆ. ಯೋಸೇಫ ಎಂಬ ಯುವಕನಿಗೆ ಇದೇ ಆಯಿತು. ಧಣಿಯ ಪತ್ನಿ ತನ್ನ ಮೇಲೆ ಕಣ್ಣುಹಾಕಿದ್ದಾಳೆಂದು ಅವನಿಗೆ ಗೊತ್ತಾಯಿತು. ಅವಳೊಟ್ಟಿಗೆ ಸಂಬಂಧ ಇಡುವಂತೆ ದಿನಾಲೂ ಪೀಡಿಸುತ್ತಿದ್ದಳು. ಕೊನೆಗೊಂದು ದಿನ “ಆಕೆ ಅವನ ಬಟ್ಟೆಯನ್ನು ಹಿಡಿದುಕೊಂಡು—ನನ್ನ ಸಂಗಮಕ್ಕೆ ಬಾ” ಎಂದಳು. ಆದರೆ ಯೋಸೇಫ ನಿರಾಕರಿಸಿ ಅಲ್ಲಿಂದ ಓಡಿಹೋದ. ಈ ರೀತಿಯಲ್ಲಿ ಯೆಹೋವನಿಗೆ ನಂಬಿಗಸ್ತಿಕೆ ತೋರಿಸಲು ಅಷ್ಟೊಂದು ಮನೋಬಲ ಯೋಸೇಫನಿಗೆ ಹೇಗೆ ಬಂತು? ದೇವರೊಂದಿಗಿನ ಸ್ನೇಹವನ್ನು ಕಾಪಾಡಲು ಅವನಿಗಿದ್ದ ದೃಢತೀರ್ಮಾನ ಸಹಾಯಮಾಡಿತು. ನಂತರ ಅವನು ಉದ್ಯೋಗ ಕಳೆದುಕೊಂಡ. ಅವನನ್ನು ಜೈಲಿಗೂ ಕಳುಹಿಸಲಾಯಿತು. ಆದರೆ ಯೆಹೋವನು ಅವನ ಕೈಬಿಡಲಿಲ್ಲ. (ಆದಿ. 39:1-12; 41:38-43) ನಾವು ಕೆಲಸದ ಸ್ಥಳದಲ್ಲಿರಲಿ, ಇನ್ನೆಲ್ಲೇ ಇರಲಿ, ಪಾಪಮಾಡುವ ಒತ್ತಡಕ್ಕೆ ನಮ್ಮನ್ನು ತಳ್ಳುವಂಥ ಸನ್ನಿವೇಶಗಳಿಂದ ದೂರವಿರಬೇಕು.
ಹೊಸ ವ್ಯಕ್ತಿತ್ವ ಧರಿಸಿಕೊಳ್ಳಿ
10. ಹೊಸ ವ್ಯಕ್ತಿತ್ವ ದಾಂಪತ್ಯವನ್ನು ಕಾಪಾಡಲು ಹೇಗೆ ನೆರವಾಗುತ್ತದೆ?
10 “ಸತ್ಯಾನುಗುಣವಾದ ನೀತಿಯಲ್ಲಿಯೂ ನಿಷ್ಠೆಯಲ್ಲಿಯೂ ಸೃಷ್ಟಿಸಲ್ಪಟ್ಟ” ಹೊಸ ವ್ಯಕ್ತಿತ್ವವು ಗಂಡ ಅಥವಾ ಹೆಂಡತಿ ಬೇರೆಯವರೊಟ್ಟಿಗೆ ಅನೈತಿಕತೆ ನಡೆಸದಂತೆ ಕಾಪಾಡುತ್ತದೆ. (ಎಫೆ. 4:24) ನಾವು ಹೊಸ ವ್ಯಕ್ತಿತ್ವವನ್ನು ಧರಿಸುವಾಗ “ಜಾರತ್ವ, ಅಶುದ್ಧತೆ, ಕಾಮಾಭಿಲಾಷೆ, ಹಾನಿಕಾರಕ ಆಶೆ” ವಿರುದ್ಧ ಹೋರಾಡುತ್ತೇವೆ. ಹೀಗೆ ನಮ್ಮ ದೈಹಿಕ ಅಂಗಗಳನ್ನು ‘ಸಾಯಿಸು’ತ್ತೇವೆ. (ಕೊಲೊಸ್ಸೆ 3:5, 6 ಓದಿ.) ‘ಸಾಯಿಸು’ ಎನ್ನುವುದರ ಅರ್ಥ ಅನೈತಿಕ ಆಸೆಗಳ ವಿರುದ್ಧ ಹೋರಾಡಲು ಅಗತ್ಯವಿರುವ ಎಲ್ಲವನ್ನು ನಾವು ಮಾಡಬೇಕು. ಅಯೋಗ್ಯವಾದ ಲೈಂಗಿಕಾಸೆಗಳನ್ನು ಹುಟ್ಟಿಸಬಹುದಾದ ಯಾವುದೇ ವಿಷಯದಿಂದ ನಾವು ದೂರವಿರಬೇಕು. (ಯೋಬ 31:1) ದೇವರ ಮಟ್ಟಗಳಿಗನುಸಾರ ನಾವು ಜೀವಿಸುವಾಗ ‘ಕೆಟ್ಟದ್ದನ್ನು ಹೇಸಲು’ ಮತ್ತು ‘ಒಳ್ಳೇದನ್ನು ಬಿಗಿಯಾಗಿ ಹಿಡಿದುಕೊಳ್ಳಲು’ ಕಲಿಯುತ್ತೇವೆ.—ರೋಮ. 12:2, 9.
11. ಹೊಸ ವ್ಯಕ್ತಿತ್ವ ದಾಂಪತ್ಯವನ್ನು ಹೇಗೆ ಬಲಪಡಿಸುತ್ತದೆ?
11 ನಾವು ಹೊಸ ವ್ಯಕ್ತಿತ್ವವನ್ನು ಧರಿಸುವಾಗ ಯೆಹೋವನ ಗುಣಗಳನ್ನು ಅನುಕರಿಸುತ್ತಿದ್ದೇವೆಂದು ಅರ್ಥ. (ಕೊಲೊ. 3:10) ಗಂಡಹೆಂಡತಿ ‘ಸಹಾನುಭೂತಿ, ದಯೆ, ದೀನಮನಸ್ಸು, ಸೌಮ್ಯಭಾವ, ಸಹನೆ’ ತೋರಿಸುವಾಗ ಅವರ ದಾಂಪತ್ಯ ಬಲವಾಗಿರುವುದು. ಯೆಹೋವನು ಅವರನ್ನು ಆಶೀರ್ವದಿಸುವನು ಸಹ. (ಕೊಲೊ. 3:12) ‘ಕ್ರಿಸ್ತನ ಶಾಂತಿ ಅವರ ಹೃದಯಗಳಲ್ಲಿ ಆಳುವಂತೆ’ ಬಿಟ್ಟರೆ ಅವರ ಮಧ್ಯೆ ಹೊಂದಾಣಿಕೆ ಇರುತ್ತದೆ. (ಕೊಲೊ. 3:15) ಒಬ್ಬರ ಮೇಲೊಬ್ಬರಿಗೆ “ಕೋಮಲ ಮಮತೆ” ಇದ್ದರೆ ಅವರು ಪರಸ್ಪರರಿಗೆ ಗಮನ, ಗೌರವ ಕೊಡಲು ‘ಮುಂದಾಗುತ್ತಾರೆ.’—ರೋಮ. 12:10.
12. ಸಂಸಾರ ಸುಖವಾಗಿರಲು ಯಾವ ಗುಣಗಳು ಇರಲೇಬೇಕೆಂದು ನೆನಸುತ್ತೀರಿ?
12 ಸುಖ ಸಂಸಾರಕ್ಕೆ ಯಾವ ಗುಣಗಳು ನೆರವಾಗಿವೆಯೆಂದು ಒಂದು ದಂಪತಿಗೆ ಕೇಳಲಾಯಿತು. ಗಂಡ ಸಿಡ್ ಹೇಳಿದ್ದು: “ನಾವಿಬ್ಬರೂ ಮುಖ್ಯವಾಗಿ ಪ್ರೀತಿ ತೋರಿಸಲು ವಿಶೇಷ ಪ್ರಯತ್ನ ಮಾಡುತ್ತೇವೆ. ಸೌಮ್ಯಭಾವ ಸಹ ತುಂಬ ಮುಖ್ಯ ಗುಣವೆಂದು ಗಮನಿಸಿದ್ದೇವೆ.” ಅವನ ಹೆಂಡತಿ ಸೊನ್ಯಾ ಈ ಮಾತಿಗೆ
ತಲೆದೂಗಿಸುತ್ತಾ ಹೀಗಂದರು: “ದಯೆ ನಿಜವಾಗಿ ಇರಲೇಬೇಕಾದ ಗುಣ. ದೀನತೆ ತೋರಿಸುವುದು ಸುಲಭವಲ್ಲದಿದ್ದರೂ ಅದನ್ನು ಯಾವಾಗಲೂ ತೋರಿಸಲು ಪ್ರಯತ್ನಿಸಿದ್ದೇವೆ.”ಒಳ್ಳೇ ಮಾತುಕತೆ ಇರಲಿ
13. ಬಲವಾದ ದಾಂಪತ್ಯಕ್ಕಾಗಿ ಏನು ಅಗತ್ಯ? ಏಕೆ?
13 ದಾಂಪತ್ಯವನ್ನು ಬಲವಾಗಿರಿಸುವ ಅತ್ಯುತ್ತಮ ವಿಧ, ಬಾಳಸಂಗಾತಿಯ ಜತೆ ದಯೆಯಿಂದ ಮಾತಾಡುವುದೇ. ಅಪರಿಚಿತರ ಜತೆ, ಮುದ್ದು ಪ್ರಾಣಿಗಳ ಜತೆಗೂ ದಯೆಯಿಂದ ಮಾತಾಡುವ ಕೆಲವರು ಗಂಡ ಅಥವಾ ಹೆಂಡತಿ ಜತೆ ಹಾಗೆ ಮಾತಾಡುವುದಿಲ್ಲ ಎನ್ನುವುದು ವಿಷಾದದ ಸಂಗತಿ. ಪತಿಪತ್ನಿ ಮಧ್ಯೆ ‘ದ್ವೇಷಭರಿತ ವೈಷಮ್ಯ, ಕೋಪ, ಕ್ರೋಧ, ಕಿರಿಚಾಟ ಮತ್ತು ನಿಂದಾತ್ಮಕ ಮಾತುಗಳು’ ಇರುವಾಗ ಅದು ಅವರ ಸಂಬಂಧವನ್ನು ನಿಧಾನವಾಗಿ ತಿಂದುಹಾಕುತ್ತದೆ. (ಎಫೆ. 4:31) ಟೀಕಿಸುವ, ನೋಯಿಸುವ ಮನೋಭಾವವಿದ್ದರೆ ವಿವಾಹಬಂಧಕ್ಕೆ ಹಾನಿ ತಪ್ಪಿದ್ದಲ್ಲ. ಆದ್ದರಿಂದ ಗಂಡಹೆಂಡತಿ ದಯೆ, ಕೋಮಲತೆ ಹಾಗೂ ಕರುಣೆಯಿಂದ ಒಬ್ಬರನ್ನೊಬ್ಬರು ಮಾತಾಡಿಸಿದರೆ ಅವರ ದಾಂಪತ್ಯ ಬಲವಾಗಿರುತ್ತದೆ.—ಎಫೆ. 4:32.
14. ಗಂಡಹೆಂಡತಿ ಏನು ಮಾಡಬಾರದು?
14 “ಸುಮ್ಮನಿರುವ ಸಮಯ” ಇದೆಯೆಂದು ಬೈಬಲ್ ಹೇಳುತ್ತದೆ. (ಪ್ರಸಂ. 3:7) ವಿವಾಹ ಸಂಗಾತಿಯೊಟ್ಟಿಗೆ ಮಾತು ನಿಲ್ಲಿಸಬೇಕೆಂದು ಇದರರ್ಥವಲ್ಲ. ಏಕೆಂದರೆ ಸುಖೀ ಸಂಸಾರಕ್ಕೆ ಒಳ್ಳೇ ಮಾತುಕತೆ ಪ್ರಾಮುಖ್ಯ. ಜರ್ಮನಿಯಲ್ಲಿರುವ ಒಬ್ಬ ಹೆಂಡತಿ ಹೇಳಿದ್ದೇನೆಂದರೆ “ಮಾತು ನಿಲ್ಲಿಸಿದರೆ ನಿಮ್ಮ ಸಂಗಾತಿಯ ಮನಸ್ಸಿಗೆ ನೋವಾಗುತ್ತದೆ.” ಅವಳು ಇನ್ನೂ ಹೇಳಿದ್ದು: “ಒತ್ತಡದ ಸಮಯದಲ್ಲಿ ಶಾಂತರಾಗಿರುವುದು ಸುಲಭವಲ್ಲ ನಿಜ. ಆದರೆ ನೆಮ್ಮದಿ ಸಿಗುತ್ತದೆಂದು ಸುಮ್ಮನೆ ಸಿಟ್ಟನ್ನು ಕಾರಿಬಿಡುವುದು ಒಳ್ಳೇದಲ್ಲ. ಆಗ ದುಡುಕಿ ಏನೋ ಹೇಳಿಬಿಡುತ್ತೀರಿ, ಮಾಡಿಬಿಡುತ್ತೀರಿ. ಹೀಗೆ ಪರಿಸ್ಥಿತಿ ಇನ್ನಷ್ಟು ಕೆಟ್ಟುಹೋಗುತ್ತದೆ.” ಗಂಡಹೆಂಡತಿ ಕಿರಿಚಾಡಿದರೆ ಇಲ್ಲವೆ ಮಾತೇ ನಿಲ್ಲಿಸಿಬಿಟ್ಟರೆ ಸಮಸ್ಯೆಗಳು ಬಗೆಹರಿಯುವುದಿಲ್ಲ. ಅವರ ಮಧ್ಯೆ ಮನಸ್ತಾಪಗಳಿದ್ದರೆ ಅವರು ಅದನ್ನು ತಡಮಾಡದೇ ಸರಿಪಡಿಸಿಕೊಳ್ಳಬೇಕು. ಅದು ದೊಡ್ಡ ಜಗಳವಾಗದಂತೆ ನೋಡಿಕೊಳ್ಳಬೇಕು. ಹೀಗೆ ತಮ್ಮ ದಾಂಪತ್ಯವನ್ನು ಬಲಪಡಿಸುತ್ತಾರೆ.
15. ಒಳ್ಳೇ ಮಾತುಕತೆ ದಾಂಪತ್ಯವನ್ನು ಹೇಗೆ ಬಲಪಡಿಸಬಲ್ಲದು?
15 ನಿಮ್ಮ ಯೋಚನೆಗಳನ್ನು ಒಬ್ಬರಿಗೊಬ್ಬರಿಗೆ ಹೇಳಲು, ಭಾವನೆಗಳನ್ನು ಹಂಚಿಕೊಳ್ಳಲು ಸಮಯ ಮಾಡಿಕೊಳ್ಳಿ. ಆಗ ನಿಮ್ಮ ದಾಂಪತ್ಯ ಇನ್ನಷ್ಟು ಬಲಗೊಳ್ಳುತ್ತದೆ. ನೀವು ಏನು ಹೇಳುತ್ತೀರೊ ಅದು ತುಂಬ ಪ್ರಾಮುಖ್ಯ. ಅದನ್ನು ಹೇಗೆ ಹೇಳುತ್ತೀರೊ ಅದೂ ಅಷ್ಟೇ ಪ್ರಾಮುಖ್ಯ. ಆದ್ದರಿಂದ ಪರಿಸ್ಥಿತಿ ಸ್ವಲ್ಪ ಬಿಸಿಯೇರಿದರೂ ಕೊಲೊಸ್ಸೆ 4:6 ಓದಿ.) ಇಬ್ಬರೂ ಪ್ರೋತ್ಸಾಹಿಸುವ, ಉಪಯುಕ್ತ ಮಾತುಗಳನ್ನು ಬಳಸಬೇಕು. ಹೀಗೆ ಅವರ ದಾಂಪತ್ಯವನ್ನು ಒಳ್ಳೇ ಮಾತುಕತೆ ಮೂಲಕ ಬಲಪಡಿಸಬಹುದು.—ಎಫೆ. 4:29.
ದಯಾಪರ ಮಾತುಗಳನ್ನು ಬಳಸಲು ಮತ್ತು ದಯೆಯಿಂದ ಮಾತಾಡಲು ನಿಮ್ಮಿಂದಾದ ಎಲ್ಲ ಪ್ರಯತ್ನ ಮಾಡಿ. ಆಗ ನಿಮ್ಮ ಗಂಡ ಅಥವಾ ಹೆಂಡತಿ ನಿಮ್ಮ ಮಾತಿಗೆ ಕಿವಿಗೊಡಲು ಸುಲಭವಾಗುತ್ತದೆ. (ವಿವಾಹ ಸಂಗಾತಿಗೆ ಸಲ್ಲತಕ್ಕದ್ದನ್ನು ಸಲ್ಲಿಸಿ
16, 17. ಗಂಡಹೆಂಡತಿ ತಮ್ಮ ಸಂಗಾತಿಗೆ ಸಲ್ಲತಕ್ಕದ್ದನ್ನು ಸಲ್ಲಿಸುವುದು ಏಕೆ ಮಹತ್ವದ್ದು?
16 ಬಲವಾದ ದಾಂಪತ್ಯವನ್ನು ಕಟ್ಟಲಿಕ್ಕಾಗಿ ಗಂಡಹೆಂಡತಿ ಸ್ವಂತ ಅಗತ್ಯಗಳಿಗಿಂತ ತಮ್ಮ ಸಂಗಾತಿಯ ಅಗತ್ಯಗಳಿಗೆ ಪ್ರಥಮ ಸ್ಥಾನ ಕೊಡಬೇಕು. (ಫಿಲಿ. 2:3, 4) ಗಂಡ ಮಾತ್ರವಲ್ಲ ಹೆಂಡತಿ ಸಹ ಸಂಗಾತಿಯ ಭಾವನಾತ್ಮಕ ಹಾಗೂ ಲೈಂಗಿಕ ಅಗತ್ಯಗಳೇನೆಂದು ತಿಳಿದಿದ್ದು ಅದನ್ನು ಪೂರೈಸಬೇಕು.—1 ಕೊರಿಂಥ 7:3, 4 ಓದಿ.
17 ದುಃಖದ ಸಂಗತಿಯೇನೆಂದರೆ ಕೆಲವು ಗಂಡಹೆಂಡತಿಯರು ಒಬ್ಬರಿನ್ನೊಬ್ಬರ ಮೇಲೆ ಪ್ರೀತಿ ತೋರಿಸುವುದಿಲ್ಲ ಅಥವಾ ಲೈಂಗಿಕ ಆಪ್ತತೆ ವ್ಯಕ್ತಪಡಿಸುವುದಿಲ್ಲ. ಕೆಲವು ಪುರುಷರಂತೂ ಹೆಂಡತಿ ಜೊತೆ ಸೌಮ್ಯವಾಗಿ ನಡೆದುಕೊಂಡರೆ ಅದು ಗಂಡಸುತನವಲ್ಲ ಎಂದು ನೆನಸುತ್ತಾರೆ. ಆದರೆ ಬೈಬಲ್ ಹೀಗನ್ನುತ್ತದೆ: “ಗಂಡಂದಿರೇ ನೀವು ಬಾಳ್ವೆ ನಡೆಸುತ್ತಿರುವ ಹೆಂಡತಿಯರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.” (1 ಪೇತ್ರ 3:7, ಫಿಲಿಪ್ಸ್) ವಿವಾಹ ಸಂಗಾತಿಗೆ ಸಲ್ಲತಕ್ಕದ್ದನ್ನು ಸಲ್ಲಿಸುವುದರ ಅರ್ಥ ಬರೀ ದೈಹಿಕ ಸಂಬಂಧ ಇಡುವುದು ಮಾತ್ರ ಅಲ್ಲವೆಂದು ಗಂಡ ಅರ್ಥಮಾಡಿಕೊಳ್ಳಬೇಕು. ಎಲ್ಲಾ ಸಮಯದಲ್ಲೂ ಅವನು ಅವಳೊಟ್ಟಿಗೆ ಪ್ರೀತಿಯಿಂದ ನಡೆದುಕೊಳ್ಳಬೇಕು. ಆಗ ಅವನ ಹೆಂಡತಿ ಅವರ ದೈಹಿಕ ಸಂಬಂಧದಲ್ಲೂ ಸಂತೋಷ ಪಡೆಯುವಳು. ಗಂಡನು ಹೆಂಡತಿಗೆ ಮತ್ತು ಹೆಂಡತಿ ಗಂಡನಿಗೆ ಪ್ರೀತಿ ವಾತ್ಸಲ್ಯ ತೋರಿಸುವಾಗ ಅವರಿಗೆ ಒಬ್ಬರಿನ್ನೊಬ್ಬರ ಭಾವನಾತ್ಮಕ ಹಾಗೂ ದೈಹಿಕ ಅಗತ್ಯಗಳನ್ನು ಪೂರೈಸಲು ಸುಲಭವಾಗುವುದು.
18. ಗಂಡಹೆಂಡತಿ ತಮ್ಮ ಸಂಬಂಧವನ್ನು ಹೇಗೆ ಬಲಪಡಿಸಬಹುದು?
18 ದಾಂಪತ್ಯದ್ರೋಹಕ್ಕೆ ಯಾವುದೇ ನೆಪ ಕೊಡಬಾರದು ನಿಜ. ಆದರೆ ಗಂಡಹೆಂಡತಿಯರ ನಡುವೆ ಕೋಮಲತೆ ಇಲ್ಲದಿದ್ದರೆ ಅವರಲ್ಲೊಬ್ಬರು ಆ ಪ್ರೀತಿಯನ್ನು ಬೇರೆಯವರಿಂದ ಪಡೆಯಲು ಅದು ಕಾರಣ ಆಗಬಲ್ಲದು. (ಜ್ಞಾನೋ. 5:18; ಪ್ರಸಂ. 9:9) ಆದ್ದರಿಂದ ಸಲ್ಲತಕ್ಕದ್ದನ್ನು ಸಲ್ಲಿಸುವುದನ್ನು “ತಪ್ಪಿಸಬೇಡಿ” ಎಂದು ಬೈಬಲ್ ದಂಪತಿಗಳಿಗೆ ಸಲಹೆಕೊಡುತ್ತದೆ. ಸ್ವಲ್ಪಕಾಲ ಪರಸ್ಪರ ಸಮ್ಮತಿಯಿಂದ ಮಾತ್ರ ಅದರಿಂದ ದೂರವಿರಬಹುದು. ಏಕೆ? “ಇಲ್ಲದಿದ್ದರೆ ನಿಮ್ಮ ಸ್ವನಿಯಂತ್ರಣದ ಕೊರತೆಯನ್ನು ನೋಡಿ ಸೈತಾನನು ನಿಮ್ಮನ್ನು ಪ್ರಲೋಭಿಸುತ್ತಾ ಇರುವನು.” (1 ಕೊರಿಂ. 7:5) ಗಂಡ ಇಲ್ಲವೆ ಹೆಂಡತಿಯ “ಸ್ವನಿಯಂತ್ರಣದ ಕೊರತೆಯನ್ನು” ಬಳಸಿ ಸೈತಾನನು ಅವರನ್ನು ವ್ಯಭಿಚಾರಕ್ಕೆ ತಳ್ಳಿದರೆ ಅದೆಷ್ಟು ದೊಡ್ಡ ದುರಂತ ಅಲ್ಲವೇ? ವಿವಾಹಸಂಗಾತಿಗೆ ಸಲ್ಲತಕ್ಕದ್ದನ್ನು ಸಲ್ಲಿಸುವ ಮೂಲಕ ಗಂಡಹೆಂಡತಿಯರು “ಸ್ವಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸು”ತ್ತಿದ್ದಾರೆ. ಇದನ್ನು ಬರೀ ಕರ್ತವ್ಯ ತೀರಿಸಲಿಕ್ಕಾಗಿ ಅಲ್ಲ ಬದಲಾಗಿ ಸಂಗಾತಿಯ ಮೇಲಿನ ಪ್ರೀತಿಯಿಂದ ಮಾಡುತ್ತಾರೆ. ಪ್ರೀತಿ ಹಾಗೂ ಕೋಮಲತೆಯನ್ನು ಬೇರೆ ಬೇರೆ ವಿಧಗಳಲ್ಲಿ ತೋರಿಸುವುದು ಅವರ ಸಂಬಂಧವನ್ನು ಬಲಪಡಿಸುತ್ತದೆ.—1 ಕೊರಿಂ. 10:24.
ನಿಮ್ಮ ದಾಂಪತ್ಯವನ್ನು ಬಲಪಡಿಸುತ್ತಾ ಇರಿ
19. ನಮ್ಮ ದೃಢನಿರ್ಧಾರ ಏನಾಗಿರಬೇಕು? ಏಕೆ?
19 ಹೊಸ ಲೋಕ ತುಂಬ ಹತ್ತಿರದಲ್ಲಿದೆ. ಅದನ್ನು ಇನ್ನೇನು ಪ್ರವೇಶಿಸುವೆವು. ಆದ್ದರಿಂದ ನಾವು ತಪ್ಪಾದ ಬಯಕೆಗಳಿಗೆ ಮಣಿದರೆ ಅನಾಹುತವನ್ನು ಮೈಮೇಲೆ ಎಳಕೊಂಡ ಹಾಗೆ ಆಗುವುದಲ್ಲವೇ? ಮೋವಾಬ್ ಬಯಲಿನಲ್ಲಿದ್ದ 24,000 ಇಸ್ರಾಯೇಲ್ಯರು ಮಾಡಿದ್ದು ಇದನ್ನೇ. ಇದರ ಬಗ್ಗೆ ತಿಳಿಸಿದ ಬಳಿಕ ಬೈಬಲ್ ಈ ಎಚ್ಚರಿಕೆ ಕೊಡುತ್ತದೆ: “ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರವಾಗಿರಲಿ.” (1 ಕೊರಿಂ. 10:12) ವಿವಾಹಬಂಧವನ್ನು ಬಲಪಡಿಸಲಿಕ್ಕಾಗಿ ನಾವು ಯೆಹೋವನಿಗೆ ಮತ್ತು ನಮ್ಮ ವಿವಾಹ ಸಂಗಾತಿಗೆ ನಿಷ್ಠರಾಗಿರಬೇಕು. (ಮತ್ತಾ. 19:5, 6) ಹಿಂದೆಂದಿಗಿಂತಲೂ ಹೆಚ್ಚಾಗಿ ನಾವು ದೇವರ “ದೃಷ್ಟಿಯಲ್ಲಿ ಕಳಂಕವಿಲ್ಲದವರು, ನಿರ್ದೋಷಿಗಳು ಮತ್ತು ಶಾಂತಿಯಿಂದಿರುವವರು ಆಗಿ ಕಂಡುಬರಲು . . . ಕೈಲಾದದ್ದೆಲ್ಲವನ್ನು” ಮಾಡುವ ಸಮಯ ಇದೇ!—2 ಪೇತ್ರ 3:13, 14.