ಯೆಹೋವನ ಜನರು ‘ಅನೀತಿಯನ್ನು ಬಿಟ್ಟುಬಿಡುತ್ತಾರೆ’
“ಯೆಹೋವನ ನಾಮವನ್ನು ಹೇಳಿಕೊಳ್ಳುವ ಪ್ರತಿಯೊಬ್ಬರು ಅನೀತಿಯನ್ನು ಬಿಟ್ಟುಬಿಡಲಿ.”—2 ತಿಮೊ. 2:19.
1. ನಮ್ಮ ಆರಾಧನೆಯಲ್ಲಿ ಯಾವುದಕ್ಕೆ ಮಹತ್ವದ ಸ್ಥಾನವಿದೆ?
ಯಾವುದಾದರೂ ಕಟ್ಟಡ, ವಾಹನ ಅಥವಾ ವಸ್ತುಸಂಗ್ರಹಾಲಯದಲ್ಲಿರುವ ಒಂದು ವಸ್ತುವಿನ ಮೇಲೆ ಯೆಹೋವನ ಹೆಸರನ್ನು ನೋಡಿದಾಗ ನಿಮಗೆ ರೋಮಾಂಚನ ಆಗಿರಬೇಕಲ್ಲವೇ? ನಮ್ಮ ಆರಾಧನೆಯಲ್ಲಿ ದೇವರ ಹೆಸರಿಗೆ ತುಂಬ ಮಹತ್ವದ ಸ್ಥಾನ ಇರುವುದರಿಂದ ನಮಗೆ ಖಂಡಿತ ಹಾಗನಿಸುತ್ತದೆ. ಎಷ್ಟೆಂದರೂ ನಾವು ಯೆಹೋವನ ಸಾಕ್ಷಿಗಳು! ನಾವು ದೇವರ ಹೆಸರನ್ನು ಬಳಸುವ ಹಾಗೆ ಜಾಗತಿಕ ಮಟ್ಟದಲ್ಲಿ ಬೇರಾವ ಗುಂಪೂ ಬಳಸುವುದಿಲ್ಲ. ಯೆಹೋವನ ನಾಮಧಾರಿಗಳಾಗಿರುವುದು ನಿಜಕ್ಕೂ ಒಂದು ಸುಯೋಗ. ಆದರೆ ಅದರ ಜೊತೆಗೆ ಜವಾಬ್ದಾರಿಯೂ ಇದೆ ಎಂಬ ಅರಿವು ನಮಗಿದೆ.
2. ಯೆಹೋವನ ನಾಮಧಾರಿಗಳಾಗಿರುವ ಸುಯೋಗದ ಜೊತೆಗೆ ಯಾವ ಜವಾಬ್ದಾರಿಯೂ ನಮಗಿದೆ?
2 ದೇವರ ಹೆಸರನ್ನು ಬಳಸಿದ ಮಾತ್ರಕ್ಕೆ ನಮಗೆ ಯೆಹೋವನ ಅನುಗ್ರಹ ಸಿಗುವುದಿಲ್ಲ. ಆತನ ನೈತಿಕ ಮಟ್ಟಗಳಿಗೆ ಹೊಂದಿಕೆಯಲ್ಲಿ ನಾವು ಬದುಕಬೇಕು ಸಹ. ಆದ್ದರಿಂದಲೇ ‘ಕೆಟ್ಟದ್ದನ್ನು ಬಿಟ್ಟುಬಿಡಬೇಕೆಂದು’ ಬೈಬಲ್ ಯೆಹೋವನ ಜನರಿಗೆ ನೆನಪು ಹುಟ್ಟಿಸುತ್ತದೆ. (ಕೀರ್ತ. 34:14) ಇದೇ ತತ್ವವನ್ನು ಅಪೊಸ್ತಲ ಪೌಲ ಸಹ ಎತ್ತಿಹಿಡಿಯುತ್ತಾ “ಯೆಹೋವನ ನಾಮವನ್ನು ಹೇಳಿಕೊಳ್ಳುವ ಪ್ರತಿಯೊಬ್ಬರು ಅನೀತಿಯನ್ನು ಬಿಟ್ಟುಬಿಡಲಿ” ಎಂದು ಹೇಳಿದ್ದಾನೆ. (2 ತಿಮೊಥೆಯ 2:19 ಓದಿ.) ಯೆಹೋವನ ಸಾಕ್ಷಿಗಳಾಗಿರುವ ನಾವು ಆತನ ಹೆಸರನ್ನು ಹೇಳಿಕೊಳ್ಳುತ್ತೇವೆ, ಬಳಸುತ್ತೇವೆ ನಿಜ. ಆದರೆ ನಾವು ಯಾವ ವಿಧಗಳಲ್ಲಿ ಅನೀತಿಯನ್ನು ಬಿಟ್ಟುಬಿಡಬೇಕು?
ಕೆಟ್ಟತನದಿಂದ “ದೂರ ಹೋಗಬೇಕು”
3, 4. ಯಾವ ವಚನ ತುಂಬ ಸಮಯದಿಂದ ಬೈಬಲ್ ವಿದ್ವಾಂಸರ ಆಸಕ್ತಿ ಕೆರಳಿಸಿದೆ? ಯಾಕೆ?
3 ಪೌಲ 2 ತಿಮೊಥೆಯ 2:19ರಲ್ಲಿ ಹೇಳಿರುವ ಮಾತುಗಳ ಶಾಸ್ತ್ರಾಧಾರಿತ ಹಿನ್ನೆಲೆಗೆ ಗಮನಕೊಡಿ. “ದೇವರ ಸ್ಥಿರವಾದ ಅಸ್ತಿವಾರ”ದ ಬಗ್ಗೆ ಹೇಳಿ ನಂತರ ಆ ಅಸ್ತಿವಾರದ ಮೇಲಿರುವ ಎರಡು ಪ್ರಕಟಣೆಗಳ ಬಗ್ಗೆ ತಿಳಿಸುತ್ತಾನೆ. “ತನ್ನವರು ಯಾರಾರು ಎಂಬುದನ್ನು ಯೆಹೋವನು ತಿಳಿದಿದ್ದಾನೆ” ಎಂಬ ಮೊದಲನೇ ಪ್ರಕಟಣೆ ಅರಣ್ಯಕಾಂಡ 16:5ರ ಉಲ್ಲೇಖವಾಗಿದೆ. (ಹಿಂದಿನ ಲೇಖನ ನೋಡಿ.) ಆದರೆ “ಯೆಹೋವನ ನಾಮವನ್ನು ಹೇಳಿಕೊಳ್ಳುವ ಪ್ರತಿಯೊಬ್ಬರು ಅನೀತಿಯನ್ನು ಬಿಟ್ಟುಬಿಡಲಿ” ಎಂಬ ಎರಡನೇ ಪ್ರಕಟಣೆ ಬೈಬಲ್ ವಿದ್ವಾಂಸರ ಆಸಕ್ತಿ ಕೆರಳಿಸಿದೆ. ಯಾಕೆ?
4 ಪೌಲನ ಮಾತುಗಳನ್ನು ಗಮನಿಸಿದರೆ, ಅವನದನ್ನು ಹೀಬ್ರು ಶಾಸ್ತ್ರದ ಬೇರೊಂದು ಭಾಗದಿಂದ ಉಲ್ಲೇಖಿಸಿರುವಂತೆ ತೋರಬಹುದು. ಆದರೂ ಅವನ್ನು ಹೋಲುವ ಯಾವ ಮಾತೂ ಹೀಬ್ರು ಶಾಸ್ತ್ರದಲ್ಲಿಲ್ಲ. ಹಾಗಾದರೆ “ಯೆಹೋವನ ನಾಮವನ್ನು ಹೇಳಿಕೊಳ್ಳುವ ಪ್ರತಿಯೊಬ್ಬರು ಅನೀತಿಯನ್ನು ಬಿಟ್ಟುಬಿಡಲಿ” ಎಂಬ ಮಾತುಗಳನ್ನು ಎಲ್ಲಿಂದ ಉಲ್ಲೇಖಿಸಿ ಬರೆದನು? ಪೌಲ ಈ ಮಾತನ್ನು ಹೇಳುವ ಮುಂಚೆ ಹೇಳಿದ ಮೊದಲ ಪ್ರಕಟಣೆಯನ್ನು ಕೋರಹನ ದಂಗೆಯ ಬಗ್ಗೆ ತಿಳಿಸುವ ಅರಣ್ಯಕಾಂಡ 16ರಿಂದ ಉಲ್ಲೇಖಿಸಿದ್ದಾನೆ. ಹಾಗಾಗಿ ಎರಡನೇ ಪ್ರಕಟಣೆ ಸಹ ಆ ದಂಗೆಗೆ ಸಂಬಂಧಪಟ್ಟಿರಬಹುದಾ?
5-7. ಎರಡು ತಿಮೊಥೆಯ 2:19ರಲ್ಲಿರುವ ಪೌಲನ ಮಾತುಗಳಿಗೆ ಮೋಶೆಯ ದಿನದ ಯಾವ ಘಟನೆಗಳು ಹಿನ್ನೆಲೆಯಾಗಿವೆ? (ಶೀರ್ಷಿಕೆ ಚಿತ್ರ ನೋಡಿ.)
5 ಮೋಶೆ ಆರೋನರ ವಿರುದ್ಧದ ದಂಗೆಯಲ್ಲಿ ಕೋರಹನ ಜೊತೆ ಎಲೀಯಾಬನ ಪುತ್ರರಾದ ದಾತಾನ್, ಅಬೀರಾಮ ಕೂಡ ನಾಯಕರಾಗಿ ಸೇರಿಕೊಂಡರು ಎನ್ನುತ್ತದೆ ಬೈಬಲ್. (ಅರ. 16:1-5) ಇವರು ಎಲ್ಲರ ಮುಂದೆ ಮೋಶೆಗೆ ಅಗೌರವ ತೋರಿಸಿದರು. ಅವನಿಗೆ ದೇವರು ಕೊಟ್ಟ ಅಧಿಕಾರವನ್ನು ತಿರಸ್ಕರಿಸಿದರು. ಈ ದಂಗೆಕೋರರು ಇಸ್ರಾಯೇಲ್ಯರ ಮಧ್ಯದಲ್ಲೇ ಜೀವಿಸುತ್ತಿದ್ದರು. ಆದ್ದರಿಂದ ನಂಬಿಗಸ್ತರ ಆಧ್ಯಾತ್ಮಿಕತೆಗೆ ಹಾನಿಯಾಗುವ ಅಪಾಯ ಇತ್ತು. ದಂಗೆಕೋರರು ಯಾರು ಮತ್ತು ನಿಷ್ಠಾವಂತ ಆರಾಧಕರು ಯಾರು ಎಂದು ಗುರುತಿಸುವ ದಿನ ಬಂದಾಗ ಯೆಹೋವನು ಸ್ಪಷ್ಟ ಆಜ್ಞೆಯೊಂದನ್ನು ಕೊಟ್ಟನು.
6 ಆ ವೃತ್ತಾಂತ ಹೇಳುವುದು: “ಯೆಹೋವನು ಮೋಶೆಗೆ—ಇಸ್ರಾಯೇಲ್ಯರ ಸಮೂಹದವರು ಕೋರಹ ದಾತಾನ್ ಅಬೀರಾಮರ ಗುಡಾರದ ಸುತ್ತಲಿರದೆ ದೂರವಿರಬೇಕೆಂದು ಅವರಿಗೆ ಆಜ್ಞಾಪಿಸು ಎಂದು ಹೇಳಿದನು. ಆಗ ಮೋಶೆ ಎದ್ದು ದಾತಾನ್ ಅಬೀರಾಮರ ಬಳಿಗೆ ಹೋದನು; ಇಸ್ರಾಯೇಲ್ಯರ ಹಿರಿಯರು ಅವರ ಹಿಂದೆ ಹೋದರು. ಅವನು [ಇಸ್ರಾಯೇಲ್ಯರ] ಸಮೂಹದವರಿಗೆ—ಈ ದುಷ್ಟರ ಡೇರೆಗಳ ಬಳಿಯಲ್ಲಿ ಇರದೆ ದೂರ ಹೋಗಬೇಕು; ಇವರ ಸೊತ್ತಿನಲ್ಲಿ ಯಾವದನ್ನೂ ಮುಟ್ಟಬಾರದು; ಇವರ ದೋಷಗಳಿಗಾಗಿ ಉಂಟಾಗುವ ಶಿಕ್ಷೆ ನಿಮ್ಮನ್ನೂ ಕೊಚ್ಚಿಕೊಂಡು ಹೋದೀತು ಎಂದು ಹೇಳಿದನು. ಆದಕಾರಣ ಅವರೆಲ್ಲರೂ ಕೋರಹ ದಾತಾನ್ ಅಬೀರಾಮರ ಗುಡಾರದ ಸುತ್ತಲಿರದೆ ಬೇರೆ ಹೋದರು.” (ಅರ. 16:23-27) ನಂತರ ಯೆಹೋವನು ಎಲ್ಲಾ ದಂಗೆಕೋರರನ್ನು ನಾಶಮಾಡಿದನು. ಅನೀತಿವಂತರಿಂದ ದೂರ ಹೋಗುವ ಮೂಲಕ ಅನೀತಿಯನ್ನು ಬಿಟ್ಟುಬಿಟ್ಟ ನಿಷ್ಠಾವಂತ ಆರಾಧಕರನ್ನು ಉಳಿಸಿದನು.
7 ಯೆಹೋವನು ಹೃದಯವನ್ನು ಓದಬಲ್ಲ. ತನ್ನವರ ನಿಷ್ಠೆಯನ್ನು ಗುರುತಿಸಬಲ್ಲ. ಹಾಗಿದ್ದರೂ ಆ ನಿಷ್ಠಾವಂತ ಆರಾಧಕರು ತಮ್ಮ ನಿಷ್ಠೆಯನ್ನು ಕ್ರಿಯೆಯಲ್ಲಿ ತೋರಿಸುತ್ತಾ ಅನೀತಿವಂತರಿಂದ ತಮ್ಮನ್ನೇ ಬೇರ್ಪಡಿಸಿಕೊಳ್ಳುವ ನಿರ್ಣಾಯಕ ಕ್ರಮ ಕೈಗೊಳ್ಳಬೇಕಿತ್ತು. ಹಾಗಾಗಿ ಪೌಲನು “ಯೆಹೋವನ ನಾಮವನ್ನು ಹೇಳಿಕೊಳ್ಳುವ ಪ್ರತಿಯೊಬ್ಬರು ಅನೀತಿಯನ್ನು ಬಿಟ್ಟುಬಿಡಲಿ” ಎಂದು ಬರೆದಾಗ ಅರಣ್ಯಕಾಂಡ 16: 5, 23-27ರ ವೃತ್ತಾಂತಕ್ಕೆ ಸೂಚಿಸಿರಬೇಕು. ಈ ತೀರ್ಮಾನವು, “ತನ್ನವರು ಯಾರಾರು ಎಂಬುದನ್ನು ಯೆಹೋವನು ತಿಳಿದಿದ್ದಾನೆ” ಎಂದು ಪೌಲ ಹೇಳಿದ ಮಾತಿಗೂ ಹೊಂದಿಕೆಯಲ್ಲಿದೆ.— 2 ತಿಮೊ. 2:19.
ಬುದ್ಧಿಯಿಲ್ಲದ ಮತ್ತು ವಿಚಾರಹೀನ ವಾಗ್ವಾದಗಳನ್ನು ತಿರಸ್ಕರಿಸಿ
8. ಯೆಹೋವನ ಹೆಸರನ್ನು ಬಳಸುವುದು ಅಥವಾ ಕ್ರೈಸ್ತ ಸಭೆಯ ಭಾಗವಾಗಿರುವುದು ಮಾತ್ರ ಸಾಕಾಗುವುದಿಲ್ಲ ಏಕೆ?
8 ಮೋಶೆಯ ದಿನದಲ್ಲಾದ ಘಟನೆಗಳಿಗೆ ಸೂಚಿಸುವ ಮೂಲಕ ತಿಮೊಥೆಯನು ಸಹ ನಿರ್ಣಾಯಕ ಕ್ರಮ ತೆಗೆದುಕೊಳ್ಳಬೇಕೆಂದು ಪೌಲ ನೆನಪು ಹುಟ್ಟಿಸಿದನು. ಯೆಹೋವನ ಜೊತೆ ತನ್ನ ಅಮೂಲ್ಯ ಸಂಬಂಧವನ್ನು ಕಾಪಾಡಬೇಕಾದರೆ ತಿಮೊಥೆಯ ಅದನ್ನು ಮಾಡಲೇಬೇಕಿತ್ತು. ಹೇಗೆ ಮೋಶೆಯ ದಿನದಲ್ಲಿ ಯೆಹೋವನ ಹೆಸರನ್ನು ಹೇಳಿಕೊಳ್ಳುವುದು ಮಾತ್ರ ಸಾಕಾಗಿರಲಿಲ್ಲವೋ ಹಾಗೇ ತಿಮೊಥೆಯನ ಸಮಯದಲ್ಲಿ ಕ್ರೈಸ್ತ ಸಭೆಯ ಭಾಗವಾಗಿರುವುದು ಮಾತ್ರ ಸಾಕಾಗಿರಲಿಲ್ಲ. ಪೌಲ ಹೇಳುವಂತೆ ನಂಬಿಗಸ್ತ ಆರಾಧಕರೆಲ್ಲರು ‘ಅನೀತಿಯನ್ನು ಬಿಟ್ಟುಬಿಡುವಂಥ’ ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳಬೇಕು. ಆದರೆ ತಿಮೊಥೆಯ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು? ಪೌಲನು ಕೊಟ್ಟ ದೇವಪ್ರೇರಿತ ಸಲಹೆಯಿಂದ ಇಂದು ಯೆಹೋವನ ಜನರಿಗೆ ಯಾವ ಪಾಠಗಳಿವೆ?
9. ಬುದ್ಧಿಯಿಲ್ಲದ ಮತ್ತು ವಿಚಾರಹೀನ ವಾಗ್ವಾದಗಳು ಆರಂಭದ ಕ್ರೈಸ್ತ ಸಭೆಯ ಮೇಲೆ ಯಾವ ಪರಿಣಾಮಬೀರಿದವು?
9 ಕ್ರೈಸ್ತರು ಬಿಟ್ಟುಬಿಡಬೇಕಾದ ಅಥವಾ ತಿರಸ್ಕರಿಸಬೇಕಾದ ಕೆಲವು ನಿರ್ದಿಷ್ಟ ಅನೀತಿಯ ಕೃತ್ಯಗಳ ಬಗ್ಗೆ ದೇವರ ವಾಕ್ಯ ಹೇಳುತ್ತದೆ. ಉದಾಹರಣೆಗೆ 2 ತಿಮೊಥೆಯ 2:19ರ ಪೂರ್ವಾಪರ ವಚನಗಳಲ್ಲಿ ಪೌಲ ತಿಮೊಥೆಯನಿಗೆ “ಪದಗಳ ವಿಷಯದಲ್ಲಿ ವಾಗ್ವಾದಗಳನ್ನು ಮಾಡಬಾರದೆಂದು” ಮತ್ತು “ಪೊಳ್ಳು ಮಾತುಗಳಿಗೆ ದೂರವಾಗಿರು” ಎಂದು ಹೇಳಿದ್ದಾನೆ. (2 ತಿಮೊಥೆಯ 2:14, 16, 23 ಓದಿ.) ಸಭೆಯ ಕೆಲವು ಸದಸ್ಯರು ಧರ್ಮಭ್ರಷ್ಟ ಬೋಧನೆಗಳನ್ನು ಹಬ್ಬಿಸುತ್ತಿದ್ದರು. ಇನ್ನು ಕೆಲವರು ವಿವಾದಾತ್ಮಕ ವಿಷಯಗಳನ್ನು ಸಭೆಯೊಳಗೆ ತರುತ್ತಿದ್ದರು. ಇಂಥ ವಿಷಯಗಳು ನೇರವಾಗಿ ಬೈಬಲ್ ಬೋಧನೆಗಳಿಗೆ ವಿರುದ್ಧವಾಗಿಲ್ಲದಿದ್ದರೂ ಒಡಕನ್ನು ಉಂಟುಮಾಡುತ್ತಿದ್ದವು. ಕಿತ್ತಾಟ, ಪದಗಳ ಬಗ್ಗೆ ವಾದ-ವಿವಾದಗಳಾಗುತ್ತಿದ್ದವು. ಇದು ಸಭೆಯ ಆಧ್ಯಾತ್ಮಿಕ ವಾತಾವರಣವನ್ನು ಕೆಡಿಸಿತು. ಆದ್ದರಿಂದ ಬುದ್ಧಿಯಿಲ್ಲದ ಮತ್ತು ವಿಚಾರಹೀನ ವಾಗ್ವಾದಗಳನ್ನು ತಿರಸ್ಕರಿಸುವಂತೆ ಪೌಲನು ತಿಮೊಥೆಯನಿಗೆ ಹೇಳಿದನು.
10. ಧರ್ಮಭ್ರಷ್ಟತೆ ಎದುರಾದಾಗ ನಮ್ಮ ಪ್ರತಿಕ್ರಿಯೆ ಹೇಗಿರಬೇಕು?
10 ಇಂದು ಯೆಹೋವನ ಸಾಕ್ಷಿಗಳಿಗೆ ಸಭೆಯೊಳಗೆ ಧರ್ಮಭ್ರಷ್ಟತೆ ಅಷ್ಟಾಗಿ ಎದುರಾಗುವುದಿಲ್ಲ. ಹಾಗಿದ್ದರೂ ಬೈಬಲ್ಗೆ ವಿರುದ್ಧವಾದ ಯಾವುದೇ ವಿಚಾರಗಳು ಯಾವ ಮೂಲದಿಂದ ಬಂದರೂ ನಾವು ಅವನ್ನು ತಿರಸ್ಕರಿಸುವ ನಿರ್ಣಾಯಕ ಕ್ರಮ ತೆಗೆದುಕೊಳ್ಳಬೇಕು. ಧರ್ಮಭ್ರಷ್ಟರೊಂದಿಗೆ ನೇರವಾಗಿಯಾಗಲಿ, ಅವರ ಬ್ಲಾಗ್ಗಳಿಗೆ ಪ್ರತಿಕ್ರಿಯಿಸುವ ಮೂಲಕವಾಗಲಿ ಅಥವಾ ಇನ್ನಾವುದೇ ಮಾಧ್ಯಮದ ಸಹಾಯದಿಂದಾಗಲಿ ವಾಗ್ವಾದ ಮಾಡಲು ಹೋಗುವುದು ಅವಿವೇಕತನ. ಅಂಥ ವ್ಯಕ್ತಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಸಂಪರ್ಕ ಇಟ್ಟುಕೊಳ್ಳಬೇಕು ಎಂದು ನಮಗನಿಸಬಹುದು. ಆದರೆ ಈಗಷ್ಟೇ ನಾವು ಕಲಿತ ಶಾಸ್ತ್ರಾಧಾರಿತ ನಿರ್ದೇಶನಕ್ಕೆ ಇದು ವಿರುದ್ಧವಾಗಿದೆ. ಆದ್ದರಿಂದ ಯೆಹೋವನ ಜನರಾದ ನಾವು ಧರ್ಮಭ್ರಷ್ಟತೆಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು, ಬಿಟ್ಟುಬಿಡಬೇಕು.
11. (ಎ) ಯಾವುದು ವಿಚಾರಹೀನ ವಾಗ್ವಾದಗಳಿಗೆ ಕಾರಣವಾಗಬಹುದು? (ಬಿ) ಈ ನಿಟ್ಟಿನಲ್ಲಿ ಕ್ರೈಸ್ತ ಹಿರಿಯರು ಹೇಗೆ ಒಳ್ಳೇ ಮಾದರಿ ಇಡಬಹುದು?
11 ಧರ್ಮಭ್ರಷ್ಟತೆಯಲ್ಲದೆ ಇನ್ನೂ ಕೆಲವು ವಿಷಯಗಳು ಸಭೆಯ ಶಾಂತಿಯನ್ನು ಕದಡಬಹುದು. ಉದಾಹರಣೆಗೆ, ಮನರಂಜನೆಯ ಕುರಿತ ಭಿನ್ನಭಿನ್ನ ಅಭಿಪ್ರಾಯಗಳು ಸಹ ಬುದ್ಧಿಯಿಲ್ಲದ, ವಿಚಾರಹೀನ ವಾಗ್ವಾದಗಳಿಗೆ ಕಾರಣವಾಗಬಹುದು. ಇದನ್ನು ನಾವು ತಿರಸ್ಕರಿಸಬೇಕು. ಆದರೆ ಸಭೆಯಲ್ಲಿ ಒಬ್ಬನು ಯೆಹೋವನ ನೈತಿಕ ಮಟ್ಟಗಳನ್ನು ಮೀರುವಂಥ ಮನರಂಜನೆಯನ್ನು ಇತರರೂ ನೋಡುವಂತೆ ಉತ್ತೇಜಿಸುವಲ್ಲಿ ಆಗೇನು? ಸುಮ್ಮನೆ ವಿವಾದ ಎಬ್ಬಿಸುವುದು ಬೇಡ ಎಂಬ ಕಾರಣಕ್ಕೆ ಹಿರಿಯರು ಅದನ್ನು ಸಹಿಸಿ ಸುಮ್ಮನಿರಬಾರದು. (ಕೀರ್ತ. 11:5; ಎಫೆ. 5:3-5) ಹಾಗಿದ್ದರೂ ತಮ್ಮ ಸ್ವಂತ ದೃಷ್ಟಿಕೋನವನ್ನು ಇತರರ ಮೇಲೆ ಹೇರದಂತೆ ಅವರು ಜಾಗ್ರತೆವಹಿಸುತ್ತಾರೆ. ಕ್ರೈಸ್ತ ಹಿರಿಯರಿಗಿರುವ ಈ ಶಾಸ್ತ್ರಾಧಾರಿತ ಸಲಹೆಯನ್ನು ಅವರು ನಿಷ್ಠೆಯಿಂದ ಪಾಲಿಸುತ್ತಾರೆ: “ನಿಮ್ಮ ವಶಕ್ಕೆ ಕೊಡಲ್ಪಟ್ಟಿರುವ ದೇವರ ಮಂದೆಯನ್ನು ಪರಿಪಾಲಿಸಿರಿ . . . ದೇವರ ಸೊತ್ತಾಗಿರುವವರ ಮೇಲೆ ದೊರೆತನ ಮಾಡುವವರಾಗಿರದೆ ಮಂದೆಗೆ ಮಾದರಿಗಳಾಗಿರಿ.”—1 ಪೇತ್ರ 5:2, 3; 2 ಕೊರಿಂಥ 1:24 ಓದಿ.
12, 13. (ಎ) ಮನರಂಜನೆಯ ವಿಷಯದಲ್ಲಿ ನಮ್ಮ ಸಂಘಟನೆ ಏನು ಮಾಡುವುದಿಲ್ಲ? (ಬಿ) ಯಾವ ಬೈಬಲ್ ತತ್ವಗಳು ಅನ್ವಯವಾಗುತ್ತವೆ? (ಸಿ) ಪ್ಯಾರ 12ರಲ್ಲಿ ಚರ್ಚಿಸಲಾದ ತತ್ವಗಳು ಹೇಗೆ ಬೇರೆ ವೈಯಕ್ತಿಕ ವಿಷಯಗಳಿಗೂ ಅನ್ವಯಿಸುತ್ತವೆ?
12 ನಮ್ಮ ಸಂಘಟನೆ ಚಲನಚಿತ್ರಗಳು, ವಿಡಿಯೋ ಗೇಮ್ಸ್, ಪುಸ್ತಕಗಳು, ಗೀತೆಗಳನ್ನು ವಿಮರ್ಶೆ ಮಾಡಿ ಒಂದು ಪಟ್ಟಿಕೊಟ್ಟು ಇವುಗಳಿಂದ ದೂರವಿರಿ ಎಂದು ಹೇಳುವುದಿಲ್ಲ. ಯಾಕೆ? ಯಾಕೆಂದರೆ ಪ್ರತಿಯೊಬ್ಬನು ‘ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲಿಕ್ಕಾಗಿ . . . ತನ್ನ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸುವಂತೆ’ ಬೈಬಲ್ ಪ್ರೋತ್ಸಾಹಿಸುತ್ತದೆ. (ಇಬ್ರಿ. 5:14) ಮನರಂಜನೆಯ ಆಯ್ಕೆ ಮಾಡಲು ಸಹಾಯಕಾರಿಯಾಗಿ ನಮಗೆ ಬೈಬಲ್ನಲ್ಲಿ ಮೂಲತತ್ವಗಳಿವೆ. ನಮ್ಮ ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿ ‘ಕರ್ತನಿಗೆ ಯಾವುದು ಅಂಗೀಕಾರಾರ್ಹವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾ ಇರುವುದೇ’ ನಮ್ಮ ಗುರಿ ಆಗಿರಬೇಕು. (ಎಫೆ. 5:10) ಬೈಬಲಿಗನುಸಾರ ಕುಟುಂಬದ ತಲೆಗೆ ತಕ್ಕಮಟ್ಟಿಗಿನ ಅಧಿಕಾರ ಇದೆ. ಆದ್ದರಿಂದ ತನ್ನ ಕುಟುಂಬದಲ್ಲಿ ಎಂಥ ಮನರಂಜನೆಗೆ ಅನುಮತಿ ನೀಡಬಾರದೆಂದು ಆತನು ನಿರ್ಧರಿಸಬೇಕು.—1 ಕೊರಿಂ. 11:3; ಎಫೆ. 6:1-4.
13 ಮೇಲೆ ತಿಳಿಸಲಾದ ಬೈಬಲ್ ತತ್ವಗಳು ಕೇವಲ ಮನರಂಜನೆಯ ವಿಷಯಕ್ಕೆ ಮಾತ್ರ ಅನ್ವಯಿಸುವುದಿಲ್ಲ. ನಮ್ಮ ಉಡುಪು, ಕೇಶಾಲಂಕಾರ, ಆರೋಗ್ಯ, ಆಹಾರ, ಇನ್ನಿತರ ವೈಯಕ್ತಿಕ ವಿಷಯಗಳಿಗೂ ಅನ್ವಯಿಸುತ್ತದೆ. ಇವುಗಳ ಕುರಿತ ಭಿನ್ನಭಿನ್ನ ಅಭಿಪ್ರಾಯಗಳು ವಿವಾದಕ್ಕೆ ಎಡೆಮಾಡಿಕೊಡಬಹುದು. ಆದ್ದರಿಂದ ಈ ವಿಷಯಗಳು ಬೈಬಲ್ ತತ್ವಗಳನ್ನು ಮೀರದೆ ಇರುವಾಗ ಅವುಗಳ ಬಗ್ಗೆ ವಾದ-ವಿವಾದ ಮಾಡುವುದರಿಂದ ಯೆಹೋವನ ಜನರು ದೂರವಿರುವುದು ವಿವೇಕಯುತ. ಏಕೆಂದರೆ ‘ಕರ್ತನ ದಾಸನು ಜಗಳವಾಡದೆ ಎಲ್ಲರೊಂದಿಗೆ ಕೋಮಲಭಾವದಿಂದ [“ಜಾಣ್ಮೆಯಿಂದ,” ಇಂಗ್ಲಿಷ್ NW 2013ರ ಆವೃತ್ತಿಯ ಪಾದಟಿಪ್ಪಣಿ] ಇರಬೇಕು.’—2 ತಿಮೊ. 2:24.
ಕೆಟ್ಟ ಸಹವಾಸದಿಂದ ದೂರವಿರಿ!
14. ಕೆಟ್ಟ ಸಹವಾಸದಿಂದ ದೂರವಿರುವ ಅಗತ್ಯವನ್ನು ಒತ್ತಿಹೇಳಲು ಪೌಲ ಯಾವ ದೃಷ್ಟಾಂತ ಬಳಸಿದ್ದಾನೆ?
14 ‘ಯೆಹೋವನ ನಾಮವನ್ನು ಹೇಳಿಕೊಳ್ಳುವವರು ಅನೀತಿಯನ್ನು ಬಿಟ್ಟುಬಿಡುವ’ ಇನ್ನೊಂದು ವಿಧ ಯಾವುದು? ಅನೀತಿಯ ಕೆಲಸಗಳಲ್ಲಿ ತೊಡಗಿರುವವರ ಸಹವಾಸದಿಂದ ದೂರವಿರುವ ಮೂಲಕ. “ದೇವರ ಸ್ಥಿರವಾದ ಅಸ್ತಿವಾರ” ಎಂಬ ದೃಷ್ಟಾಂತವನ್ನು ಬಳಸಿದ ನಂತರ ಪೌಲ ಇನ್ನೊಂದು ದೃಷ್ಟಾಂತವನ್ನು ಬಳಸಿರುವುದು ಆಸಕ್ತಿಕರ. “ದೊಡ್ಡ ಮನೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಪಾತ್ರೆಗಳಲ್ಲದೆ ಮರದ ಪಾತ್ರೆಗಳೂ ಮಣ್ಣಿನ ಪಾತ್ರೆಗಳೂ ಇರುತ್ತವೆ; ಅವುಗಳಲ್ಲಿ ಕೆಲವು ಗೌರವಾರ್ಹವಾದ ಉದ್ದೇಶಕ್ಕಾಗಿಯೂ ಉಳಿದವು ಗೌರವಹೀನವಾದ ಉದ್ದೇಶಕ್ಕಾಗಿಯೂ ಉಪಯೋಗಿಸಲ್ಪಡುತ್ತವೆ” ಎಂದು ಬರೆದಿದ್ದಾನೆ. (2 ತಿಮೊ. 2:20, 21) ನಂತರ, “ಗೌರವಹೀನ ಉದ್ದೇಶಕ್ಕಾಗಿ” ಬಳಸಲಾಗುವ ಪಾತ್ರೆಗಳಿಂದ ‘ದೂರವಿರುವಂತೆ’ ಅಥವಾ ಬೇರ್ಪಡಿಸಿಕೊಳ್ಳುವಂತೆ ಕ್ರೈಸ್ತರನ್ನು ಪೌಲ ಉತ್ತೇಜಿಸುತ್ತಾನೆ.
15, 16. “ದೊಡ್ಡ ಮನೆಯ” ದೃಷ್ಟಾಂತದಿಂದ ನಾವೇನು ಕಲಿಯುತ್ತೇವೆ?
15 ಈ ದೃಷ್ಟಾಂತದ ಅರ್ಥವೇನು? ಪೌಲನು ಬಳಸಿದ ರೂಪಕಾಲಂಕಾರದಲ್ಲಿ “ದೊಡ್ಡ ಮನೆ” ಅಂದರೆ ಕ್ರೈಸ್ತ ಸಭೆ. “ಪಾತ್ರೆಗಳು” ಅಂದರೆ ಸಭೆಯ ಸದಸ್ಯರು. ಒಂದು ಮನೆಯಲ್ಲಿ ಕೆಲವು ಪಾತ್ರೆಗಳು ಹಾನಿಕಾರಕ ಪದಾರ್ಥಗಳಿಂದಾಗಿ ಅಥವಾ ಕೊಳಕಿನಿಂದಾಗಿ ಕಲುಷಿತಗೊಳ್ಳಬಹುದು. ಹಾಗಾಗಿ ಶುದ್ಧ ಪಾತ್ರೆಗಳು, ಉದಾಹರಣೆಗೆ ಅಡುಗೆಗೆ ಬಳಸುವಂಥವುಗಳು ಕಲುಷಿತವಾಗದಂತೆ ಮನೆಯವನು ಅವನ್ನು ಬೇರ್ಪಡಿಸಿ ದೂರವಿಡುತ್ತಾನೆ.
16 ಹಾಗೆಯೇ ಇಂದು, ಶುದ್ಧ ಜೀವನ ನಡೆಸಲು ಯೆಹೋವನ ಜನರು ತುಂಬ ಪ್ರಯತ್ನ ಹಾಕುತ್ತಾರೆ. ಆದ್ದರಿಂದ ಆತನ ಮಟ್ಟಗಳನ್ನು ಪದೇಪದೇ ಕಡೆಗಣಿಸುವ ಸಭಾ ಸದಸ್ಯರೊಂದಿಗೆ ಅವರು ಹತ್ತಿರದ ಒಡನಾಟ ಇಟ್ಟುಕೊಳ್ಳುವುದಿಲ್ಲ. (1 ಕೊರಿಂಥ 15:33 ಓದಿ.) ಸಭೆಯ ಒಳಗಿರುವವರ ವಿಷಯದಲ್ಲಿ ನಾವು ಇಷ್ಟು ಜಾಗ್ರತೆ ವಹಿಸಬೇಕಾದರೆ, ಸಭೆಯ ಹೊರಗಿರುವವರ ಆಪ್ತ ಒಡನಾಟದಿಂದ ಇನ್ನೆಷ್ಟು “ದೂರ” ಇರಬೇಕು ಅಲ್ಲವೇ! ಏಕೆಂದರೆ ಅವರಲ್ಲಿ ಹೆಚ್ಚಿನವರು ‘ಹಣ ಪ್ರೇಮಿಗಳು, ಹೆತ್ತವರಿಗೆ ಅವಿಧೇಯರು, ಮಿಥ್ಯಾಪವಾದಿಗಳು, ಉಗ್ರರು, ಒಳ್ಳೇತನವನ್ನು ಪ್ರೀತಿಸದವರು, ದ್ರೋಹಿಗಳು ಮತ್ತು ದೇವರನ್ನು ಪ್ರೀತಿಸುವ ಬದಲು ಭೋಗವನ್ನು ಪ್ರೀತಿಸುವವರು’ ಆಗಿದ್ದಾರೆ.—2 ತಿಮೊ. 3:1-5.
ನಮ್ಮ ನಿರ್ಣಾಯಕ ಕ್ರಮವನ್ನು ಯೆಹೋವನು ಆಶೀರ್ವದಿಸುತ್ತಾನೆ
17. ನಿಷ್ಠಾವಂತ ಇಸ್ರಾಯೇಲ್ಯರು ಅನೀತಿಯ ವಿರುದ್ಧ ನಿಲುವು ತೆಗೆದುಕೊಂಡಾಗ ಹೇಗೆ ಕೂಲಂಕಷ ಕ್ರಮಗೈದರು?
17 ಇಸ್ರಾಯೇಲ್ಯರಿಗೆ “ಕೋರಹ ದಾತಾನ್ ಅಬೀರಾಮರ ಗುಡಾರದ ಸುತ್ತಲಿರದೆ ದೂರವಿರಬೇಕೆಂದು” ಹೇಳಿದಾಗ ಅವರು ಹೇಗೆ ನಿರ್ಣಾಯಕ ಕ್ರಮ ತೆಗೆದುಕೊಂಡರು ಎಂದು ಬೈಬಲ್ ಸ್ಪಷ್ಟವಾಗಿ ಹೇಳುತ್ತದೆ. “ಅವರು ತಕ್ಷಣ ದೂರ ಹೋದರು” ಎಂದು ಆ ವೃತ್ತಾಂತ ತಿಳಿಸುತ್ತದೆ. (ಅರ. 16:24, 27, NW) ಇದನ್ನು ಮಾಡಲು ಅವರು ಹಿಂಜರಿಯಲಿಲ್ಲ ಅಥವಾ ಇದನ್ನು ಮುಂದೂಡಲಿಲ್ಲ. ಅವರದನ್ನು ಎಷ್ಟು ಕೂಲಂಕಷವಾಗಿ ಮಾಡಿದರೆಂದು ಆ ವಚನ ತೋರಿಸುತ್ತದೆ. ಅವರು ಆ ದಂಗೆಕೋರರ “ಗುಡಾರದ ಸುತ್ತಲಿನ ಎಲ್ಲಾ ಕಡೆಗಳಿಂದ ದೂರ ಹೋದರು.” ನಿಷ್ಠಾವಂತರು ಯಾವುದೇ ವಿಧದಲ್ಲಿ ಅಪಾಯಕ್ಕೆ ಸಿಲುಕಲು ಬಯಸಲಿಲ್ಲ. ಅರೆಮನಸ್ಸಿನಿಂದ ವಿಧೇಯತೆ ತೋರಿಸಲಿಲ್ಲ. ಹೀಗೆ ಯೆಹೋವನ ಪಕ್ಷದಲ್ಲಿ ಮತ್ತು ಅನೀತಿಯ ವಿರುದ್ಧ ಸ್ಪಷ್ಟ ನಿಲುವನ್ನು ತೆಗೆದುಕೊಂಡರು. ಈ ಉದಾಹರಣೆಯಿಂದ ನಾವೇನು ಕಲಿಯಬಲ್ಲೆವು?
18. “ಯೌವನ ಸಹಜವಾದ ಇಚ್ಛೆಗಳನ್ನು ಬಿಟ್ಟು ಓಡಿಹೋಗು” ಎಂದು ಪೌಲನು ಕೊಟ್ಟ ಸಲಹೆಯಲ್ಲಿ ಯಾವ ಅರ್ಥ ಇದೆ?
18 ಯೆಹೋವನೊಟ್ಟಿಗಿನ ನಮ್ಮ ಸ್ನೇಹವನ್ನು ಕಾಪಾಡಿಕೊಳ್ಳುವ ವಿಷಯ ಬಂದಾಗ ನಾವು ಶೀಘ್ರ ಹಾಗೂ ಖಡಾಖಂಡಿತ ಕ್ರಮ ಕೈಗೊಳ್ಳಬೇಕು. ಪೌಲನು ತಿಮೊಥೆಯನಿಗೆ “ಯೌವನ ಸಹಜವಾದ ಇಚ್ಛೆಗಳನ್ನು ಬಿಟ್ಟು ಓಡಿಹೋಗು” ಎಂದು ಹೇಳಿದಾಗ ಇದನ್ನೇ ಮಾಡುವಂತೆ ಹೇಳಿದನು. (2 ತಿಮೊ. 2:22) ಆಗ ತಿಮೊಥೆಯನೊಬ್ಬ ವಯಸ್ಕನಾಗಿದ್ದನು. ಪ್ರಾಯ 30 ದಾಟಿರಬೇಕು. ಆ ವಯಸ್ಸಿನಲ್ಲಿ “ಯೌವನ ಸಹಜವಾದ ಇಚ್ಛೆಗಳು” ಬರುವುದಿಲ್ಲ ಎಂದೇನಿಲ್ಲ. ಅಂಥ ಇಚ್ಛೆಗಳು ಬಂದಾಗ ತಿಮೊಥೆಯನು ಅವುಗಳಿಂದ ‘ಓಡಿಹೋಗಬೇಕಿತ್ತು.’ ಇನ್ನೊಂದು ಮಾತಿನಲ್ಲಿ ಹೇಳುವುದಾದರೆ “ಅನೀತಿಯನ್ನು ಬಿಟ್ಟುಬಿಡಬೇಕಿತ್ತು.” ಯೇಸು ಸಹ ಹೀಗಂದಿದ್ದನು: “ನಿನ್ನ ಕಣ್ಣು ನಿನ್ನನ್ನು ಎಡವಿಸುವುದಾದರೆ ಅದನ್ನು ಕಿತ್ತುಬಿಸಾಡು.” (ಮತ್ತಾ. 18:9) ಇಂದು ಆಧ್ಯಾತ್ಮಿಕತೆಗೆ ಅಪಾಯ ಎದುರಾದಾಗ ಕ್ರೈಸ್ತರು ಈ ಸಲಹೆಯನ್ನು ಪಾಲಿಸುತ್ತಾ ಖಡಾಖಂಡಿತ ಕ್ರಮ ಕೈಗೊಳ್ಳುತ್ತಾರೆ. ಇದನ್ನು ಮಾಡಲು ಅವರು ಹಿಂಜರಿಯುವುದೂ ಇಲ್ಲ, ಇದನ್ನು ಮುಂದೂಡುವುದೂ ಇಲ್ಲ.
19. ಆಧ್ಯಾತ್ಮಿಕತೆಗೆ ಅಪಾಯವಾಗದಂತೆ ಕೆಲವರು ಯಾವ ಖಡಾಖಂಡಿತ ಕ್ರಮ ಕೈಗೊಂಡಿದ್ದಾರೆ?
19 ಕುಡಿತದ ಸಮಸ್ಯೆಯಿದ್ದ ಕೆಲವರು ಸಾಕ್ಷಿಗಳಾದ ಮೇಲೆ ಮದ್ಯವನ್ನು ಪೂರ್ತಿಯಾಗಿ ಬಿಟ್ಟುಬಿಡುವ ವೈಯಕ್ತಿಕ ನಿರ್ಣಯ ಮಾಡಿದ್ದಾರೆ. ಇನ್ನು ಕೆಲವರು ಕೆಲವೊಂದು ವಿಧದ ಮನರಂಜನೆಯಿಂದ ದೂರವಿರುತ್ತಾರೆ. ಅಂಥ ಮನರಂಜನೆಯಲ್ಲಿ ಏನೂ ತಪ್ಪಿರಲಿಕ್ಕಿಲ್ಲ. ಆದರೆ ಅದು ತಮ್ಮಲ್ಲಿರುವ ನೈತಿಕ ಬಲಹೀನತೆಗಳನ್ನು ಕೆರಳಿಸಬಹುದು ಎಂಬ ಕಾರಣಕ್ಕೆ ಅದರಿಂದ ದೂರವಿರುತ್ತಾರೆ. (ಕೀರ್ತ. 101:3) ಉದಾಹರಣೆಗೆ ಸಾಕ್ಷಿಯಾಗುವುದಕ್ಕೆ ಮುಂಚೆ ಸಹೋದರನೊಬ್ಬ ಡ್ಯಾನ್ಸ್ ಪಾರ್ಟಿಗಳಿಗೆ ಹೋಗುತ್ತಿದ್ದ. ಅಲ್ಲಿನ ಅನೈತಿಕ ವಾತಾವರಣವನ್ನು ಆನಂದಿಸುತ್ತಿದ್ದ. ಆದರೆ ಸತ್ಯಕ್ಕೆ ಬಂದ ನಂತರ ಅವನು ಡ್ಯಾನ್ಸ್ ಮಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಾನೆ. ಸಾಕ್ಷಿಗಳ ಸಂತೋಷ ಕೂಟಗಳಲ್ಲೂ ಡ್ಯಾನ್ಸ್ ಮಾಡುವುದಿಲ್ಲ. ಹಿಂದೆ ತನ್ನಲ್ಲಿದ್ದ ತಪ್ಪಾದ ಆಸೆ, ಯೋಚನೆಗಳನ್ನು ಇದು ಬಡಿದೆಬ್ಬಿಸಬಹುದು ಎಂಬ ಕಾರಣಕ್ಕಾಗಿ ಹೀಗೆ ಮಾಡುತ್ತಾನೆ. ಕ್ರೈಸ್ತರು ಮದ್ಯಪಾನ, ನೃತ್ಯ ಮಾಡಬಾರದು ಎಂದೇನಿಲ್ಲ ಯಾಕೆಂದರೆ ಈ ವಿಷಯಗಳು ತಪ್ಪಲ್ಲ. ಆದರೆ ಯಾವಾಗ ಇಂಥ ವಿಷಯಗಳು ನಮ್ಮ ಆಧ್ಯಾತ್ಮಿಕತೆಗೆ ಅಪಾಯವೊಡ್ಡುತ್ತವೊ ಆಗ ನಾವು ಕೂಲಂಕಷ, ಖಡಾಖಂಡಿತ ಕ್ರಮ ಕೈಗೊಳ್ಳಲೇಬೇಕು.
20. “ಅನೀತಿಯನ್ನು ಬಿಟ್ಟುಬಿಡುವುದು” ಕೆಲವೊಮ್ಮೆ ಕಷ್ಟವಾಗಿದ್ದರೂ ಯಾವುದು ನಮಗೆ ಸಾಂತ್ವನ, ಭರವಸೆ ನೀಡುತ್ತದೆ?
20 ಯೆಹೋವನ ನಾಮಧಾರಿಗಳಾಗಿರುವ ಸುಯೋಗದ ಜೊತೆಗೆ ಜವಾಬ್ದಾರಿಯೂ ಇದೆ. ಅದೇನೆಂದರೆ “ಅನೀತಿಯನ್ನು ಬಿಟ್ಟುಬಿಡಬೇಕು” ಮತ್ತು ‘ಕೆಟ್ಟದ್ದನ್ನು ಬಿಡಬೇಕು’ ಅಂದರೆ ಅದರಿಂದ ದೂರವಿರಬೇಕು. (ಕೀರ್ತ. 34:14) ಹೀಗೆ ಮಾಡುವುದು ಕೆಲವೊಮ್ಮೆ ಕಷ್ಟವಾಗಿದ್ದರೂ ಯೆಹೋವನು ‘ತನ್ನವರನ್ನು’ ಮತ್ತು ತನ್ನ ನೀತಿಯುತ ಮಾರ್ಗಗಳಲ್ಲೇ ನಡೆಯುವವರನ್ನು ಪ್ರೀತಿಸುತ್ತಾನೆ ಎಂಬ ಮಾತು ನಮಗೆ ತುಂಬ ಸಾಂತ್ವನ ನೀಡುತ್ತದೆ.—2 ತಿಮೊ. 2:19; 2 ಪೂರ್ವಕಾಲವೃತ್ತಾಂತ 16:9ಎ ಓದಿ.