“ತನ್ನವರು ಯಾರಾರು ಎಂಬುದನ್ನು ಯೆಹೋವನು ತಿಳಿದಿದ್ದಾನೆ”
“ಯಾವನಾದರೂ ದೇವರನ್ನು ಪ್ರೀತಿಸುವುದಾದರೆ ದೇವರು ಅವನನ್ನು ತಿಳಿದುಕೊಂಡಿರುತ್ತಾನೆ.”—1 ಕೊರಿಂ. 8:3.
1. ತಪ್ಪಾಗಿ ಯೋಚಿಸಿದ ಕೆಲವು ದೇವಜನರ ಕುರಿತ ಬೈಬಲ್ ವೃತ್ತಾಂತವನ್ನು ವಿವರಿಸಿ. (ಮೇಲಿನ ಚಿತ್ರ ನೋಡಿ.)
ಒಂದು ದಿನ ಬೆಳಿಗ್ಗೆ ಮಹಾ ಯಾಜಕನಾದ ಆರೋನ ಧೂಪಾರತಿ ಹಿಡಿದುಕೊಂಡು ಯೆಹೋವನ ಗುಡಾರದ ಬಾಗಲಲ್ಲಿ ನಿಂತಿದ್ದನು. ಸ್ವಲ್ಪ ದೂರದಲ್ಲೇ ಕೋರಹ ನಿಂತಿದ್ದನು. ಅವನ ಜೊತೆ 250 ಪುರುಷರು ನಿಂತಿದ್ದರು. ಪ್ರತಿಯೊಬ್ಬರ ಕೈಯಲ್ಲಿ ಧೂಪಾರತಿ ಇತ್ತು. (ಅರ. 16:16-18) ನೋಡುವವರಿಗೆ ಕೋರಹ ಮತ್ತು ಆ 250 ಮಂದಿ ಪುರುಷರು ಯೆಹೋವನ ನಿಷ್ಠಾವಂತ ಆರಾಧಕರಂತೆ ಕಂಡರು. ಆದರೆ ಅವರು ಆರೋನನಂತೆ ನಿಷ್ಠಾವಂತ ಆರಾಧಕರಾಗಿರಲಿಲ್ಲ. ಅವನ ಯಾಜಕತ್ವವನ್ನು ಕಿತ್ತುಕೊಳ್ಳಲು ನಿಂತಿದ್ದ ದುರಹಂಕಾರಿ ದಂಗೆಕೋರರಾಗಿದ್ದರು. (ಅರ. 16:1-11) ತಮ್ಮ ಆರಾಧನೆಯನ್ನು ದೇವರು ಸ್ವೀಕರಿಸುತ್ತಾನೆಂದು ಅಂದುಕೊಂಡಿದ್ದರು. ಆದರೆ ಅವರ ಆ ಯೋಚನೆ ಯೆಹೋವನನ್ನು ಅವಮಾನಿಸಿದಂತಿತ್ತು. ಏಕಂದರೆ ಆತನು ಹೃದಯಗಳನ್ನು ಓದಬಲ್ಲ ಮತ್ತು ಕಪಟತನವನ್ನು ನೋಡಬಲ್ಲ ದೇವರು.—ಯೆರೆ. 17:10.
2. (ಎ) ಮೋಶೆ ಏನೆಂದು ಭವಿಷ್ಯ ನುಡಿದಿದ್ದನು? (ಬಿ) ಅವನ ಮಾತು ನಿಜವಾಯಿತಾ?
2 ಹಿಂದಿನ ದಿನವಷ್ಟೇ ಮೋಶೆ “ತನ್ನವರು ಯಾರಾರೆಂಬದನ್ನು ಯೆಹೋವನು ನಾಳೆ ತಿಳಿಸುವನು” ಎಂದು ಭವಿಷ್ಯ ನುಡಿದಿದ್ದನು. (ಅರ. 16:5) ಈ ಮಾತಿಗೆ ತಕ್ಕಂತೆ ಯೆಹೋವನು ತನ್ನ ಅಸಲಿ ಆರಾಧಕರು ಯಾರು, ನಕಲಿ ಆರಾಧಕರು ಯಾರು ಎಂದು ಗುರುತಿಸಿದನು. ಹೇಗೆ? “ಯೆಹೋವನ ಬಳಿಯಿಂದ ಬೆಂಕಿಹೊರಟು ಧೂಪವನ್ನು ಅರ್ಪಿಸುತ್ತಿದ್ದ [ಕೋರಹ ಮತ್ತು] ಆ ಇನ್ನೂರೈವತ್ತು ಮಂದಿಯನ್ನು ಭಸ್ಮಮಾಡಿತು.” (ಅರ. 16:35; 26:10) ಆದರೆ ಯೆಹೋವನು ಆರೋನನ ಜೀವ ಉಳಿಸಿದನು. ಹೀಗೆ ಅವನೇ ನಿಜವಾದ ಯಾಜಕ ಮತ್ತು ತನ್ನ ನಿಜ ಆರಾಧಕ ಎನ್ನುವುದನ್ನು ದೇವರು ಸಾಬೀತುಪಡಿಸಿದನು.—1 ಕೊರಿಂಥ 8:3 ಓದಿ.
3. (ಎ) ಅಪೊಸ್ತಲ ಪೌಲನ ಕಾಲದಲ್ಲಿ ಯಾವ ಸನ್ನಿವೇಶ ಇತ್ತು? (ಬಿ) ದಂಗೆಕೋರರನ್ನು ಹೇಗೆ ನಿಭಾಯಿಸಬೇಕೆಂಬ ವಿಷಯದಲ್ಲಿ ಯೆಹೋವನು ಶತಮಾನಗಳ ಹಿಂದೆ ಯಾವ ಮಾದರಿ ಇಟ್ಟಿದ್ದನು?
3 ಸುಮಾರು 1,500 ವರ್ಷಗಳ ನಂತರ ಅಪೊಸ್ತಲ ಪೌಲನ ಕಾಲದಲ್ಲಿ ಇಂಥದ್ದೇ ಸನ್ನಿವೇಶ ಇತ್ತು. ಕ್ರೈಸ್ತರೆಂದು ಸೋಗುಹಾಕಿಕೊಂಡ ಕೆಲವರು ಸುಳ್ಳು ಬೋಧನೆಗಳನ್ನು ನಂಬಲಾರಂಭಿಸಿದರು. ಅದೇ ಸಮಯದಲ್ಲಿ ಸಭೆಯೊಂದಿಗೂ ಒಡನಾಟ ಇಟ್ಟುಕೊಂಡಿದ್ದರು. ನೋಡುವವರಿಗೆ ಇವರ ಮತ್ತು ಸಭೆಯಲ್ಲಿರುವ ಇತರರ ಮಧ್ಯೆ ಯಾವುದೇ ವ್ಯತ್ಯಾಸ ಕಾಣುತ್ತಿರಲಿಲ್ಲ. ಆದರೆ ಇವರ ಧರ್ಮಭ್ರಷ್ಟತೆ ಇತರ ಕ್ರೈಸ್ತರ ನಂಬಿಕೆಗೆ ಮಾರಕವಾಗಿತ್ತು. ಇವರು ಕುರಿಗಳ ಸೋಗುಹಾಕಿದ ತೋಳಗಳಂತಿದ್ದು ‘ಕೆಲವರ ನಂಬಿಕೆಯನ್ನು ಕೆಡಿಸುತ್ತಿದ್ದರು.’ (2 ತಿಮೊ. 2:16-18) ಆದರೆ ದೇವರು ಇವರನ್ನು ನೋಡಿ ಸುಮ್ಮನಿರುವುದಿಲ್ಲ ಎನ್ನುವುದು ಪೌಲನಿಗೆ ಗೊತ್ತಿತ್ತು. ಶತಮಾನಗಳ ಹಿಂದೆ ಕೋರಹ ಮತ್ತು ಅವನ ಬೆಂಬಲಿಗರ ದಂಗೆಯನ್ನು ಯೆಹೋವನು ನಿಭಾಯಿಸಿದ ರೀತಿಯಿಂದ ಪೌಲ ಇದನ್ನು ತಿಳಿದುಕೊಂಡಿದ್ದನು. ಇದಕ್ಕೆ ಸಂಬಂಧಪಟ್ಟಂತೆ ಬೈಬಲಲ್ಲಿರುವ ಒಂದು ಆಸಕ್ತಿಕರ ಭಾಗವನ್ನು ಪರಿಗಣಿಸಿ ನಮಗೆ ಯಾವ ಪಾಠಗಳಿವೆ ಎಂದು ತಿಳಿಯೋಣ.
“ಯೆಹೋವನಾದ ನಾನು ಮಾರ್ಪಟ್ಟಿಲ್ಲ”
4. (ಎ) ಪೌಲನಿಗೆ ಯಾವ ದೃಢನಿಶ್ಚಯ ಇತ್ತು? (ಬಿ) ಆ ದೃಢನಿಶ್ಚಯವನ್ನು ತಿಮೊಥೆಯನಿಗೆ ಹೇಗೆ ವ್ಯಕ್ತಪಡಿಸಿದನು?
4 ಕಪಟತನದಿಂದ ಆರಾಧನೆ ಮಾಡುವವರನ್ನು ಯೆಹೋವನು ಕಂಡುಹಿಡಿಯುತ್ತಾನೆಂದು ಪೌಲನಿಗೆ ಚೆನ್ನಾಗಿ ಗೊತ್ತಿತ್ತು. ಹಾಗೇ ಆತನು ವಿಧೇಯ ಆರಾಧಕರನ್ನು ಗುರುತಿಸುತ್ತಾನೆ ಎಂದೂ ಪೌಲನಿಗೆ ದೃಢನಿಶ್ಚಯ ಇತ್ತು. ಆ ದೃಢನಿಶ್ಚಯ ಅವನು ತಿಮೊಥೆಯನಿಗೆ ಬರೆದ ಪತ್ರದಲ್ಲಿರುವ ಪದಗಳಲ್ಲಿ ಎದ್ದುಕಾಣುತ್ತದೆ. ಧರ್ಮಭ್ರಷ್ಟರು ಸಭೆಯಲ್ಲಿ ಈಗಾಗಲೇ ಮಾಡಿರುವ ಆಧ್ಯಾತ್ಮಿಕ ಹಾನಿಯ ಬಗ್ಗೆ ಹೇಳಿದ ಮೇಲೆ ಪೌಲ ಹೀಗಂದನು: “ಆದರೂ ದೇವರ ಸ್ಥಿರವಾದ ಅಸ್ತಿವಾರವು ನಿಂತೇ ಇರುತ್ತದೆ; ಆ ಅಸ್ತಿವಾರದ ಮೇಲೆ, ‘ತನ್ನವರು ಯಾರಾರು ಎಂಬುದನ್ನು ಯೆಹೋವನು ತಿಳಿದಿದ್ದಾನೆ’ ಮತ್ತು ‘ಯೆಹೋವನ ನಾಮವನ್ನು ಹೇಳಿಕೊಳ್ಳುವ ಪ್ರತಿಯೊಬ್ಬರು ಅನೀತಿಯನ್ನು ಬಿಟ್ಟುಬಿಡಲಿ’ ಎಂಬ ಮುದ್ರೆಯಿದೆ.”—2 ತಿಮೊ. 2:18, 19.
5, 6. (ಎ) “ದೇವರ ಸ್ಥಿರವಾದ ಅಸ್ತಿವಾರ” ಎಂಬ ಪದಗಳಲ್ಲಿರುವ ವಿಶೇಷತೆ ಏನು? (ಬಿ) ಅವು ತಿಮೊಥೆಯನ ಮೇಲೆ ಯಾವ ಪ್ರಭಾವ ಬೀರಿರಬೇಕು?
5 ಈ ವಚನದಲ್ಲಿ ಪೌಲ ಬಳಸಿದ ಪದಗಳ ವಿಶೇಷತೆ ಏನು? “ದೇವರ ಸ್ಥಿರವಾದ ಅಸ್ತಿವಾರ” ಎಂದವನು ಅಲ್ಲಿ ಮಾಡಿರುವ ಪದಪ್ರಯೋಗ ಬೈಬಲಲ್ಲಿ ಬೇರೆಲ್ಲೂ ಇಲ್ಲ. “ಅಸ್ತಿವಾರ” ಎಂಬ ಪದವನ್ನು ಬೈಬಲ್ ಬೇರೆ ಬೇರೆ ವಿಷಯಗಳಿಗೆ ರೂಪಕಾಲಂಕಾರವಾಗಿ ಬಳಸಿದೆ. ಉದಾಹರಣೆಗೆ, ಭೂಮಿಯ ಚಲನೆಯನ್ನು ನಿಯಂತ್ರಿಸುವ ಮತ್ತು ಅದರ ಪಥದಲ್ಲೇ ಇರುವಂತೆ ಮಾಡುವ ದೇವರ ಅಚಲ ನಿಯಮಗಳನ್ನು ಅಸ್ತಿವಾರಕ್ಕೆ ಹೋಲಿಸಲಾಗಿದೆ. (ಕೀರ್ತ. 104:5) ಯೆಹೋವನ ಉದ್ದೇಶದಲ್ಲಿ ಯೇಸುವಿಗಿರುವ ಪಾತ್ರವನ್ನೂ ಅಸ್ತಿವಾರಕ್ಕೆ ಹೋಲಿಸಲಾಗಿದೆ. (1 ಕೊರಿಂ. 3:11; 1 ಪೇತ್ರ 2:6) ಆದರೆ “ದೇವರ ಸ್ಥಿರವಾದ ಅಸ್ತಿವಾರ” ಎಂದು ಪೌಲ ಹೇಳಿದ್ದರ ಅರ್ಥವೇನು?
6 “ದೇವರ ಸ್ಥಿರವಾದ ಅಸ್ತಿವಾರ” ಎಂದು ಹೇಳಿರುವ ಅದೇ ಭಾಗದಲ್ಲಿ ಪೌಲನು ಕೋರಹ ಮತ್ತು ಅವನ ಬೆಂಬಲಿಗರ ಬಗ್ಗೆ ಅರಣ್ಯಕಾಂಡ 16:5ರಲ್ಲಿ ಮೋಶೆ ಹೇಳಿದ ಮಾತನ್ನು ಪ್ರಸ್ತಾಪಿಸಿದ್ದಾನೆ. ಮೋಶೆಯ ಕಾಲದ ಆ ಘಟನೆಗೆ ಸೂಚಿಸುವ ಮೂಲಕ ತಿಮೊಥೆಯನಿಗೆ ಪ್ರೋತ್ಸಾಹ ನೀಡಲು ಪೌಲ ಬಯಸಿರಬೇಕು. ಅಷ್ಟೇ ಅಲ್ಲ ದಂಗೆಯ ಕೃತ್ಯಗಳನ್ನು ಗುರುತಿಸಿ ಅವುಗಳನ್ನು ಮಟ್ಟಹಾಕುವ ಸಾಮರ್ಥ್ಯ ಯೆಹೋವನಿಗಿದೆ ಎನ್ನುವುದನ್ನು ತಿಮೊಥೆಯನಿಗೆ ನೆನಪುಹುಟ್ಟಿಸಲು ಬಯಸಿರಬೇಕು. ಶತಮಾನಗಳ ಹಿಂದೆ ಹೇಗೆ ಕೋರಹನು ಯೆಹೋವನ ಉದ್ದೇಶವನ್ನು ಭಂಗಗೊಳಿಸಲು ಸಾಧ್ಯವಾಗಲಿಲ್ಲವೋ ಅದೇ ರೀತಿ ಈಗ ಕ್ರೈಸ್ತ ಸಭೆಯಲ್ಲಿರುವ ಧರ್ಮಭ್ರಷ್ಟರು ಯೆಹೋವನ ಉದ್ದೇಶವನ್ನು ಭಂಗಗೊಳಿಸಲು ಸಾಧ್ಯವಿರಲಿಲ್ಲ. “ದೇವರ ಸ್ಥಿರವಾದ ಅಸ್ತಿವಾರ” ಯಾವುದನ್ನು ಸೂಚಿಸುತ್ತದೆ ಎನ್ನುವುದನ್ನು ಪೌಲ ವಿವರಿಸಲಿಲ್ಲ. ಆದರೂ ಆ ಪದಗಳು ತಿಮೊಥೆಯನಿಗೆ ಯೆಹೋವನ ಮೇಲೆ ನಂಬಿಕೆ ಮತ್ತು ಭರವಸೆಯನ್ನು ಕಟ್ಟಲು ನೆರವಾಗಿರಲೇಬೇಕು.
7. ಯೆಹೋವನು ನೀತಿ ಮತ್ತು ಸತ್ಯತೆಯಿಂದ ಕ್ರಿಯೆಗೈಯುವನು ಎನ್ನುವುದರಲ್ಲಿ ಯಾಕೆ ಸಂಶಯವಿಲ್ಲ?
7 ಯೆಹೋವನ ಶ್ರೇಷ್ಠ ತತ್ವಗಳು ಅಚಲ. “ಯೆಹೋವನ ಆಲೋಚನೆಯೋ ಶಾಶ್ವತವಾಗಿಯೇ ನಿಲ್ಲುವದು; ಆತನ ಸಂಕಲ್ಪವು ಎಂದಿಗೂ ಕದಲುವದಿಲ್ಲ” ಎನ್ನುತ್ತದೆ ಕೀರ್ತನೆ 33:11. ಇನ್ನೂ ಕೆಲವು ವಚನಗಳು ಯೆಹೋವನ ಆಡಳಿತ, ಕೃಪೆ, ನೀತಿ, ಸತ್ಯತೆ ಶಾಶ್ವತವಾಗಿರುತ್ತದೆ ಎಂದು ಹೇಳುತ್ತವೆ. (ವಿಮೋ. 15:18; ಕೀರ್ತ. 106:1; 112:9; 117:2) ಮಲಾಕಿಯ 3:6ರಲ್ಲಿ “ಯೆಹೋವನಾದ ನಾನು ಮಾರ್ಪಟ್ಟಿಲ್ಲ” ಎಂಬ ಮಾತಿದೆ. ಯೆಹೋವನಲ್ಲಿ “ನೆರಳಿನ ಓಲಿನಷ್ಟೂ ವ್ಯತ್ಯಾಸ ಸೂಚನೆ ಇಲ್ಲ” ಎಂದು ಯಾಕೋಬ 1:17 ಹೇಳುತ್ತದೆ.
ಯೆಹೋವನಲ್ಲಿ ನಂಬಿಕೆ ಕಟ್ಟುವಂಥ “ಮುದ್ರೆ”
8, 9. ಪೌಲ ಬಳಸಿದ ಶಬ್ದಚಿತ್ರದಲ್ಲಿನ “ಮುದ್ರೆ”ಯಿಂದ ನಾವೇನು ಕಲಿಯಬಹುದು?
8 ಪೌಲ 2 ತಿಮೊಥೆಯ 2:19ರಲ್ಲಿ ಮುದ್ರೆ ಇರುವ ಅಸ್ತಿವಾರದ ಶಬ್ದಚಿತ್ರವನ್ನು ಬಳಸಿದ್ದಾನೆ. ಮುದ್ರೆ ಅಂದರೆ ಒಂದು ಸಂದೇಶವನ್ನು ಕೆತ್ತಲಾಗಿರುವುದು. ಪ್ರಾಚೀನ ಕಾಲದ ಅಸ್ತಿವಾರಗಳಲ್ಲಿ ಕಟ್ಟಡವನ್ನು ಕಟ್ಟಿಸಿದವರ ಯಾರು ಅಥವಾ ಕಟ್ಟಡದ ಧಣಿ ಯಾರು ಎಂಬಂಥ ವಿಷಯಗಳನ್ನು ಕೆತ್ತಲಾಗಿರುತ್ತಿತ್ತು. ಈ ಶಬ್ದಚಿತ್ರವನ್ನು ಬಳಸಿದ ಮೊತ್ತಮೊದಲ ಬೈಬಲ್ ಲೇಖಕ ಪೌಲ. * “ದೇವರ ಸ್ಥಿರವಾದ ಅಸ್ತಿವಾರ”ದ ಮೇಲಿರುವ ಮುದ್ರೆಯಲ್ಲಿ ಎರಡು ಮಹತ್ತಾದ ಪ್ರಕಟಣೆಗಳಿವೆ. ಒಂದು, “ತನ್ನವರು ಯಾರಾರು ಎಂಬುದನ್ನು ಯೆಹೋವನು ತಿಳಿದಿದ್ದಾನೆ.” ಎರಡು, “ಯೆಹೋವನ ನಾಮವನ್ನು ಹೇಳಿಕೊಳ್ಳುವ ಪ್ರತಿಯೊಬ್ಬರು ಅನೀತಿಯನ್ನು ಬಿಟ್ಟುಬಿಡಲಿ.” ಇದು ನಮಗೆ ಅರಣ್ಯಕಾಂಡ 16:5ನ್ನು (ಓದಿ) ನೆನಪಿಗೆ ತರುತ್ತದೆ.
9 ದೇವರು ತನ್ನವರೆಂದು ಕರೆಯುವವರು, ಪೌಲ ಬಳಸಿದ ಶಬ್ದಚಿತ್ರದಲ್ಲಿನ “ಮುದ್ರೆ”ಯಿಂದ ಏನು ಕಲಿಯಬಹುದು? ಯೆಹೋವನ ಮೌಲ್ಯಗಳನ್ನು, ತತ್ವಗಳನ್ನು ಈ ಎರಡು ಮೂಲಭೂತ ಸತ್ಯಗಳಲ್ಲಿ ಸಾರಾಂಶಿಸಬಹುದೆಂದೇ. ಆ ಸತ್ಯಗಳೇನೆಂದರೆ (1) ತನಗೆ ನಿಷ್ಠೆ ತೋರಿಸುವವರನ್ನು ಯೆಹೋವನು ಪ್ರೀತಿಸುತ್ತಾನೆ ಮತ್ತು (2) ಆತನು ಅನೀತಿಯನ್ನು ದ್ವೇಷಿಸುತ್ತಾನೆ. ಆದರೆ ಈ ಸತ್ಯಗಳಿಗೂ ಸಭೆಯೊಳಗೆ ನುಸುಳಿರುವ ಧರ್ಮಭ್ರಷ್ಟತೆಗೂ ಏನು ಸಂಬಂಧ?
10. ಪೌಲನ ಕಾಲದಲ್ಲಿದ್ದ ಧರ್ಮಭ್ರಷ್ಟರ ಕೃತ್ಯಗಳು ನಂಬಿಗಸ್ತರನ್ನು ಹೇಗೆ ಬಾಧಿಸಿದವು?
10 ತಿಮೊಥೆಯ ಹಾಗೂ ಇತರ ನಂಬಿಗಸ್ತರು ಸಭೆಯಲ್ಲಿದ್ದ ಧರ್ಮಭ್ರಷ್ಟರ ಕೃತ್ಯಗಳನ್ನು ನೋಡಿ ಚಿಂತಿತರಾಗಿದ್ದರು. ಈ ಧರ್ಮಭ್ರಷ್ಟರನ್ನು ಸಭೆಯಲ್ಲಿರಲು ಯಾಕೆ ಬಿಡಲಾಗಿದೆ ಎಂದು ಕೆಲವು ಕ್ರೈಸ್ತರು ಪ್ರಶ್ನಿಸಿರಲೂಬಹುದು. ನಂಬಿಗಸ್ತ ಕ್ರೈಸ್ತರು ತಾವು ತೋರಿಸುತ್ತಿರುವ ಅಚಲ ನಿಷ್ಠೆಗೂ ಧರ್ಮಭ್ರಷ್ಟರ ಕಪಟ ಆರಾಧನೆಗೂ ಇರುವ ವ್ಯತ್ಯಾಸ ಯೆಹೋವನಿಗೆ ಗೊತ್ತಾಗುತ್ತಿದೆಯಾ ಎಂದು ಯೋಚಿಸಿರಲೂಬಹುದು.—ಅ. ಕಾ. 20:29, 30.
11, 12. ಪೌಲನ ಪತ್ರ ತಿಮೊಥೆಯನ ನಂಬಿಕೆಯನ್ನು ಖಂಡಿತ ಬಲಗೊಳಿಸಿರಬೇಕು ಹೇಗೆ?
11 ಪೌಲನ ಪತ್ರದಲ್ಲಿದ್ದ ವಿಷಯಗಳು ತಿಮೊಥೆಯನ ನಂಬಿಕೆಯನ್ನು ಖಂಡಿತ ಬಲಗೊಳಿಸಿರಬೇಕು. ನಂಬಿಗಸ್ತ ಆರೋನನೇ ಯೆಹೋವನಿಂದ ನೇಮಿತನಾದ ಯಾಜಕ ಎಂದು ಸಾಬೀತಾದದ್ದು, ಕೋರಹ ಮತ್ತವನ ಬೆಂಬಲಿಗರ ಕಪಟತನ ಬಯಲಾಗಿ ಅವರು ತಿರಸ್ಕೃತರಾಗಿ ನಾಶವಾದದ್ದು ತಿಮೊಥೆಯನಿಗೆ ಆ ಪತ್ರದಿಂದ ನೆನಪಾಗಿರಬೇಕು. ಇನ್ನೊಂದು ಮಾತಲ್ಲಿ, ನಕಲಿ ಕ್ರೈಸ್ತರು ನಿಮ್ಮ ಮಧ್ಯೆ ಇದ್ದರೂ ಮೋಶೆಯ ಕಾಲದಲ್ಲಾದಂತೆ ಯೆಹೋವನು ತನ್ನವರನ್ನು ಗುರುತಿಸುತ್ತಾನೆ ಎಂದು ಪೌಲ ತಿಮೊಥೆಯನಿಗೆ ಹೇಳಿದಂತಿತ್ತು.
12 ಯೆಹೋವನು ಎಂದಿಗೂ ಬದಲಾಗುವುದಿಲ್ಲ. ಆತನನ್ನು ನಾವು ನಂಬಬಹುದು. ಆತನು ಅನೀತಿಯನ್ನು ದ್ವೇಷಿಸುತ್ತಾನೆ. ಮಾತ್ರವಲ್ಲ ಪಶ್ಚಾತ್ತಾಪಪಡದ ದುಷ್ಟರನ್ನು ತಕ್ಕ ಸಮಯದಲ್ಲಿ ಶಿಕ್ಷಿಸುತ್ತಾನೆ. “ಯೆಹೋವನ ನಾಮವನ್ನು ಹೇಳಿಕೊಳ್ಳುವ” ತಿಮೊಥೆಯನಿಗೂ ನಕಲಿ ಕ್ರೈಸ್ತರ ಪ್ರಭಾವದಿಂದ ದೂರವಿರಬೇಕಾದ ಜವಾಬ್ದಾರಿ ಇದೆ ಎನ್ನುವುದನ್ನು ಪೌಲ ಅವನಿಗೆ ನೆನಪುಹುಟ್ಟಿಸಿದನು. *
ಯಥಾರ್ಥ ಆರಾಧನೆ ಎಂದಿಗೂ ವ್ಯರ್ಥವಲ್ಲ
13. ನಾವು ಯಾವ ಭರವಸೆ ಇಡಬಲ್ಲೆವು?
13 ದೇವಪ್ರೇರಣೆಯಿಂದ ಪೌಲ ಬರೆದ ಮಾತುಗಳಿಂದ ನಾವು ಕೂಡ ಆಧ್ಯಾತ್ಮಿಕ ಬಲ ಪಡೆದುಕೊಳ್ಳಬಲ್ಲೆವು. ಹೇಗೆ? ಯೆಹೋವನಿಗೆ ನಾವು ತೋರಿಸುವ ನಿಷ್ಠೆಯ ಬಗ್ಗೆ ಆತನಿಗೆ ಅರಿವಿದೆ ಎಂಬ ಸಂಗತಿಯೇ ನಮಗೆ ಧೈರ್ಯ ತುಂಬಿಸುತ್ತದೆ. ಆತನಲ್ಲಿರುವ ಈ ಅರಿವು ಒಂದು ರೀತಿಯ ಜಡ ಭಾವನೆ ಅಲ್ಲ. ಅದನ್ನು ಕ್ರಿಯೆಯಲ್ಲಿ ತೋರಿಸುತ್ತಾನೆ. ತನ್ನವರ ಬಗ್ಗೆ ತುಂಬ ಆಸಕ್ತಿವಹಿಸುತ್ತಾನೆ. “ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ” ಎನ್ನುತ್ತದೆ ಬೈಬಲ್. (2 ಪೂರ್ವ. 16:9) ಹಾಗಾಗಿ “ಶುದ್ಧವಾದ ಹೃದಯದಿಂದ” ನಾವು ಯೆಹೋವನಿಗಾಗಿ ಮಾಡುವ ಒಂದೇ ಒಂದು ಕೆಲಸ ಕೂಡ ವ್ಯರ್ಥವಾಗುವುದಿಲ್ಲ ಎಂದು ಸಂಪೂರ್ಣ ಭರವಸೆ ಇಡಬಲ್ಲೆವು.—1 ತಿಮೊ. 1:5; 1 ಕೊರಿಂ. 15:58.
14. ಎಂಥ ಆರಾಧನೆಯನ್ನು ಯೆಹೋವನು ಸಹಿಸುವುದಿಲ್ಲ?
14 ಯೆಹೋವನು ಕಪಟ ಆರಾಧನೆಯನ್ನು ಸಹಿಸುವುದಿಲ್ಲ ಎಂಬ ಸಂಗತಿ ಕೂಡ ನಮ್ಮಲ್ಲಿ ಧೈರ್ಯ ತುಂಬಿಸುತ್ತದೆ. ‘ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸಿ’ ‘ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರು’ ಯಾರೆಂದು ಆತನು ಕಂಡುಹಿಡಿಯುತ್ತಾನೆ. “ವಕ್ರಬುದ್ಧಿಯವನು ಯೆಹೋವನಿಗೆ ಅಸಹ್ಯ” ಎನ್ನುತ್ತದೆ ಜ್ಞಾನೋಕ್ತಿ 3:32. ಅಂದರೆ ದೇವರಿಗೆ ವಿಧೇಯತೆ ತೋರಿಸುತ್ತೇನೆ ಎಂಬ ಸೋಗುಹಾಕಿ ಬೇಕುಬೇಕೆಂದೇ ಗುಟ್ಟಾಗಿ ಪಾಪಮಾಡುವುದನ್ನು ಆತನು ದ್ವೇಷಿಸುತ್ತಾನೆ. ಈ ರೀತಿಯ ವಕ್ರಬುದ್ಧಿಯವರು ಅಂದರೆ ಮೋಸಗಾರರು ಚಾಣಾಕ್ಷತೆಯಿಂದ ಸ್ವಲ್ಪ ಸಮಯದವರೆಗೆ ಮಾನವರ ಕಣ್ಣಿಗೆ ಮಣ್ಣೆರೆಚಬಹುದು. ಆದರೆ ಯೆಹೋವನು ಮೋಸಹೋಗುವುದಿಲ್ಲ. ಏಕೆಂದರೆ ಅವನು ಸರ್ವಶಕ್ತನು ಮತ್ತು ನೀತಿಯ ದೇವರು. ಹಾಗಾಗಿ “ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು.”—ಜ್ಞಾನೋ. 28:13; 1 ತಿಮೊಥೆಯ 5:24; ಇಬ್ರಿಯ 4:13 ಓದಿ.
15. ನಾವು ಯಾವುದರಿಂದ ದೂರವಿರಬೇಕು? ಯಾಕೆ?
15 ಯೆಹೋವನ ಜನರಲ್ಲಿ ಅಧಿಕಾಂಶ ಮಂದಿ ಯಥಾರ್ಥ ಭಕ್ತಿ ತೋರಿಸುತ್ತಾರೆ. ಸಭಾಸದಸ್ಯರು ಬೇಕುಬೇಕೆಂದೇ ಯೆಹೋವನನ್ನು ಕಪಟತನದಿಂದ ಆರಾಧಿಸುವುದು ಬಹು ವಿರಳ. ಆದರೂ ಹೀಗೆ ಮಾಡಿದವರು ಮೋಶೆಯ ಕಾಲದಲ್ಲಿ ಮತ್ತು ಒಂದನೇ ಶತಮಾನದ ಕ್ರೈಸ್ತ ಸಭೆಯಲ್ಲಿದ್ದರು ಅಂದಮೇಲೆ ಇಂದು ಕೂಡ ಇರಬಹುದು. (2 ತಿಮೊ. 3:1, 5) ಹಾಗೆಂದು ನಮ್ಮ ಜೊತೆ ಕ್ರೈಸ್ತರು ಯೆಹೋವನಿಗೆ ತೋರಿಸುತ್ತಿರುವ ನಿಷ್ಠೆಯ ಬಗ್ಗೆ ಅನುಮಾನಪಡಬೇಕಾ? ಪಡಬಾರದು! ನಮ್ಮ ಸಹೋದರ ಸಹೋದರಿಯರ ಬಗ್ಗೆ ಇಂಥ ಆಧಾರವಿಲ್ಲದ ಅನುಮಾನಗಳು ಮನಸ್ಸಲ್ಲಿ ಗೂಡುಕಟ್ಟುವಂತೆ ಬಿಡುವುದು ತಪ್ಪು. (ರೋಮನ್ನರಿಗೆ 14:10-12; 1 ಕೊರಿಂಥ 13:7 ಓದಿ.) ಅಷ್ಟೇ ಅಲ್ಲ, ಸಭೆಯಲ್ಲಿರುವವರ ಸಮಗ್ರತೆಯನ್ನು ಶಂಕಿಸುವ ಮನೋಭಾವ ನಮ್ಮ ಸ್ವಂತ ಆಧ್ಯಾತ್ಮಿಕತೆಗೂ ಮಾರಕ.
16. (ಎ) ನಮ್ಮ ಹೃದಯದಲ್ಲಿ ಕಪಟ ಬೇರೂರದಿರಲು ನಮ್ಮಲ್ಲಿ ಪ್ರತಿಯೊಬ್ಬರೂ ಏನು ಮಾಡಬಲ್ಲೆವು? (ಬಿ) “ ಪರೀಕ್ಷಿಸಿಕೊಳ್ಳುತ್ತಾ ಇರಿ . . . ಪ್ರಮಾಣೀಕರಿಸುತ್ತಾ ಇರಿ” ಎಂಬ ಚೌಕದಿಂದ ನಾವು ಕಲಿಯುವ ಪಾಠಗಳೇನು?
16 ಪ್ರತಿಯೊಬ್ಬ ಕ್ರೈಸ್ತನು “ತನ್ನ ಸ್ವಂತ ಕೆಲಸವನ್ನು ಪರೀಕ್ಷಿಸಿಕೊಳ್ಳ”ಬೇಕು. (ಗಲಾ. 6:4) ನಮ್ಮ ಪಾಪಪ್ರವೃತ್ತಿಯ ಕಾರಣ ನಮಗೇ ಗೊತ್ತಿಲ್ಲದೆ ಕೆಲವೊಂದು ಯಥಾರ್ಥವಲ್ಲದ ಸ್ವಭಾವಗಳನ್ನು ಮೈಗೂಡಿಸಿಕೊಳ್ಳುವ ಸಾಧ್ಯತೆ ಇದೆ. (ಇಬ್ರಿ. 3:12, 13) ಹಾಗಾಗಿ ನಾವು ಯೆಹೋವನನ್ನು ಯಾವ ಉದ್ದೇಶದಿಂದ ಆರಾಧಿಸುತ್ತೇವೆ ಎಂದು ಆಗಾಗ್ಗೆ ಪರೀಕ್ಷಿಸಿಕೊಳ್ಳುತ್ತಾ ಇರಬೇಕು. ‘ನಾನು ಯೆಹೋವನನ್ನು ಆರಾಧಿಸುವುದು ಆತನ ಮೇಲೆ ಪ್ರೀತಿ ಮತ್ತು ಆತನ ಪರಮಾಧಿಕಾರಕ್ಕಾಗಿ ಗೌರವದ ಕಾರಣದಿಂದಲಾ? ಅಥವಾ ಪರದೈಸಿನಲ್ಲಿ ಸಿಗಲಿರುವ ಆಶೀರ್ವಾದಗಳ ಕಾರಣದಿಂದಲಾ?’ ಎಂದು ನಮ್ಮನ್ನೇ ಕೇಳಿಕೊಳ್ಳೋಣ. (ಪ್ರಕ. 4:11) ನಾವೆಲ್ಲರೂ ನಮ್ಮ ನಮ್ಮ ಕ್ರಿಯೆಗಳನ್ನು ಹೀಗೆ ಪರೀಕ್ಷಿಸಿಕೊಳ್ಳುತ್ತಾ ಹೃದಯದಲ್ಲಿ ಕಪಟತೆಯ ಚಿಕ್ಕ ತುಣುಕಿದ್ದರೂ ಅದನ್ನು ಕಿತ್ತುಹಾಕಿದರೆ ಖಂಡಿತ ಪ್ರಯೋಜನ ಪಡೆಯುವೆವು.
ನಿಷ್ಠೆ ತರುವ ಸಂತೋಷ
17, 18. ನಾವು ಯಾಕೆ ಯೆಹೋವನನ್ನು ಯಥಾರ್ಥವಾಗಿ ಆರಾಧಿಸಬೇಕು?
17 ನಾವು ಯೆಹೋವನನ್ನು ಯಥಾರ್ಥವಾಗಿ ಆರಾಧಿಸಲು ಶ್ರಮಿಸುತ್ತಿರುವಾಗ ಹಲವಾರು ಪ್ರಯೋಜನಗಳನ್ನು ಪಡೆಯುವೆವು. “ಯೆಹೋವನು ಯಾವನ ಲೆಕ್ಕಕ್ಕೆ ಅಪರಾಧವನ್ನು ಎಣಿಸುವದಿಲ್ಲವೋ ಯಾವನ ಹೃದಯದಲ್ಲಿ ಕಪಟವಿರುವದಿಲ್ಲವೋ ಅವನು ಧನ್ಯನು” ಎಂದು ಕೀರ್ತನೆಗಾರ ಹೇಳಿದನು. (ಕೀರ್ತ. 32:2) ಹೃದಯದಿಂದ ಕಪಟತೆಯನ್ನು ಪೂರ್ಣವಾಗಿ ಕಿತ್ತೆಸೆಯುವವರು ಧನ್ಯರು ಅಂದರೆ ಸಂತೋಷಿತರು. ಜೊತೆಗೆ, ಅವರು ಭವಿಷ್ಯದಲ್ಲಿ ಸಂತೋಷವನ್ನು ಪೂರ್ತಿಯಾಗಿ ಅನುಭವಿಸುವ ಆಶೀರ್ವಾದಕ್ಕೂ ಬುನಾದಿ ಹಾಕುತ್ತಿದ್ದಾರೆ.
18 ಕೆಟ್ಟ ಸಂಗತಿಗಳನ್ನು ಮಾಡುತ್ತಿರುವ ಅಥವಾ ಇಬ್ಬಗೆಯ ಜೀವನ ನಡೆಸುತ್ತಿರುವ ಜನರನ್ನು ತಕ್ಕ ಸಮಯದಲ್ಲಿ ಯೆಹೋವನು ಬಯಲಿಗೆಳೆಯಲಿದ್ದಾನೆ. ಹೀಗೆ “ಶಿಷ್ಟರಿಗೂ ದುಷ್ಟರಿಗೂ ದೇವರನ್ನು ಸೇವಿಸುವವರಿಗೂ ಸೇವಿಸದವರಿಗೂ ಇರುವ ತಾರತಮ್ಯ” ಅಂದರೆ ವ್ಯತ್ಯಾಸ ತೋರಿಸಲಿದ್ದಾನೆ. (ಮಲಾ. 3:18) ಅಲ್ಲಿಯವರೆಗೆ “ಯೆಹೋವನ ಕಣ್ಣುಗಳು ನೀತಿವಂತರ ಮೇಲಿವೆ ಮತ್ತು ಆತನ ಕಿವಿಗಳು ಅವರ ಯಾಚನೆಯ ಕಡೆಗಿವೆ” ಎಂಬ ಮಾತುಗಳು ನಮ್ಮಲ್ಲಿ ಧೈರ್ಯ ತುಂಬಲಿ.—1 ಪೇತ್ರ 3:12.
^ ಪ್ಯಾರ. 8 ಪೌಲ ತಿಮೊಥೆಯನಿಗೆ ಪತ್ರ ಬರೆದ ಎಷ್ಟೋ ದಶಕಗಳ ನಂತರ ಪ್ರಕಟನೆ 21:14ರಲ್ಲಿ 12 ‘ಅಸ್ತಿವಾರ-ಕಲ್ಲುಗಳ’ ಮೇಲೆ 12 ಅಪೊಸ್ತಲರ ಹೆಸರುಗಳು ಇರುವುದರ ಬಗ್ಗೆ ಉಲ್ಲೇಖವಿದೆ.
^ ಪ್ಯಾರ. 12 ಅನೀತಿಯನ್ನು ಬಿಟ್ಟುಬಿಡುವ ಮೂಲಕ ನಾವು ಯೆಹೋವನನ್ನು ಹೇಗೆ ಅನುಕರಿಸಬಹುದು ಎಂಬದನ್ನು ಮುಂದಿನ ಲೇಖನ ಚರ್ಚಿಸುತ್ತದೆ.