ಯೆಹೋವನಿಂದ ನೇಮಿತರಾದ ಕುರುಬರಿಗೆ ವಿಧೇಯರಾಗಿ
“ನಿಮ್ಮ ಮಧ್ಯೆ ಮುಂದಾಳುತ್ವ ವಹಿಸುತ್ತಿರುವವರಿಗೆ ವಿಧೇಯರಾಗಿರಿ ಮತ್ತು ಅವರಿಗೆ ಅಧೀನರಾಗಿರಿ; ಅವರು . . . ನಿಮ್ಮ ಪ್ರಾಣಗಳನ್ನು ಕಾಯುವವರಾಗಿದ್ದಾರೆ.”—ಇಬ್ರಿ. 13:17.
1, 2. ಯೆಹೋವನು ತನ್ನನ್ನು ಒಬ್ಬ ಕುರುಬನಿಗೆ ಹೋಲಿಸಿರುವುದು ಏಕೆ ಗಮನಾರ್ಹ?
ಯೆಹೋವನು ತನ್ನನ್ನು ಒಬ್ಬ ಕುರುಬನಿಗೆ ಹೋಲಿಸುತ್ತಾನೆ. (ಯೆಹೆ. 34:11-14) ಇದೇಕೆ ಗಮನಾರ್ಹ ಸಂಗತಿಯೆಂದರೆ ಇದರಿಂದ ನಮಗೆ ಯೆಹೋವನು ಯಾವ ರೀತಿಯ ದೇವರೆಂದು ಅರ್ಥಮಾಡಿಕೊಳ್ಳಲು ಆಗುತ್ತದೆ. ಸಾಮಾನ್ಯವಾಗಿ ಕಾಳಜಿಯುಳ್ಳ ಕುರುಬನೊಬ್ಬ ತನ್ನ ವಶದಲ್ಲಿರುವ ಕುರಿಗಳ ಉಳಿವು ಮತ್ತು ಕ್ಷೇಮದ ಪೂರ್ತಿ ಜವಾಬ್ದಾರಿ ಹೊರುತ್ತಾನೆ. ಕುರಿಗಳನ್ನು ಹುಲ್ಲುಗಾವಲುಗಳಿಗೆ, ನೀರು ಸಿಗುವ ಸ್ಥಳಗಳಿಗೆ ನಡೆಸುತ್ತಾನೆ. (ಕೀರ್ತ. 23:1, 2) ಹಗಲೂ ಇರುಳೂ ಅವುಗಳಿಗೆ ಕಾವಲಾಗಿರುತ್ತಾನೆ. (ಲೂಕ 2:8) ಪರಭಕ್ಷಕ ಪ್ರಾಣಿಗಳಿಗೆ ತುತ್ತಾಗದಂತೆ ರಕ್ಷಿಸುತ್ತಾನೆ. (1 ಸಮು. 17:34, 35) ಆಗಷ್ಟೇ ಹುಟ್ಟಿದ ಪುಟ್ಟ ಮರಿಗಳನ್ನು ತನ್ನ ಕೈಗಳಿಂದ ಎತ್ತಿಕೊಳ್ಳುತ್ತಾನೆ. (ಯೆಶಾ. 40:11) ಮಂದೆಯಿಂದ ದೂರಹೋಗಿರುವ ಕುರಿಗಳಿಗಾಗಿ ಹುಡುಕಾಡುತ್ತಾನೆ. ಗಾಯಗೊಂಡ ಕುರಿಗಳ ಒಳ್ಳೇ ಆರೈಕೆ ಮಾಡುತ್ತಾನೆ.—ಯೆಹೆ. 34:16.
2 ಪ್ರಾಚೀನ ಕಾಲದಲ್ಲಿ ಯೆಹೋವನ ಜನರಲ್ಲಿ ಹೆಚ್ಚಿನವರು ಕುರುಬರೂ ರೈತರೂ ಆಗಿದ್ದರಿಂದ ಯೆಹೋವನು ತನ್ನನ್ನು ಪ್ರೀತಿಯುಳ್ಳ ಕುರುಬನಿಗೆ ಏಕೆ ಹೋಲಿಸಿಕೊಂಡನೆಂದು ಅವರಿಗೆ ಚೆನ್ನಾಗಿ ಅರ್ಥವಾಯಿತು. ಕುರಿಗಳು ಆರೋಗ್ಯದಿಂದಿದ್ದು ಚೆನ್ನಾಗಿ ಬೆಳೆಯಬೇಕಾದರೆ ಅವುಗಳಿಗೆ ಒಳ್ಳೇ ಆರೈಕೆ ಮತ್ತು ಗಮನ ಕೊಡಬೇಕೆಂದು ಅವರಿಗೆ ಗೊತ್ತಿತ್ತು. ಆಧ್ಯಾತ್ಮಿಕವಾಗಿ ಹೇಳುವುದಾದರೆ ಜನರಿಗೆ ಅದೇ ಬೇಕಿದೆ. (ಮಾರ್ಕ 6:34) ಒಳ್ಳೇ ಆಧ್ಯಾತ್ಮಿಕ ಆರೈಕೆ ಹಾಗೂ ಮುಂದಾಳತ್ವ ಇಲ್ಲದಿದ್ದರೆ ‘ಕುರುಬನಿಲ್ಲದ ಕುರಿಗಳು’ ಚದರಿಹೋಗುವಂತೆ ಜನರು ಸಂರಕ್ಷಣೆ ಇಲ್ಲದವರಾಗುತ್ತಾರೆ. ನೈತಿಕವಾಗಿ ಸರಿತಪ್ಪು ತಿಳಿಯದೆ ಸಂಕಷ್ಟಕ್ಕೊಳಗಾಗುತ್ತಾರೆ. (1 ಅರ. 22:17) ಆದರೆ ಯೆಹೋವನು ತನ್ನ ಜನರ ಅಗತ್ಯಗಳನ್ನೆಲ್ಲ ಪ್ರೀತಿಯಿಂದ ಪೂರೈಸುತ್ತಾನೆ.
3. ಈ ಲೇಖನದಲ್ಲಿ ನಾವೇನು ಚರ್ಚಿಸುವೆವು?
3 ಯೆಹೋವನು ಒಬ್ಬ ಕುರುಬನಂತಿದ್ದಾನೆ ಎಂಬ ಚಿತ್ರಣ ನಮ್ಮೀ ಸಮಯದಲ್ಲೂ ಅರ್ಥಭರಿತವಾಗಿದೆ. ಆತನು ಈಗಲೂ ಕುರಿಗಳಂತಿರುವ ತನ್ನ ಜನರ ಅಗತ್ಯಗಳನ್ನು ಪೂರೈಸುತ್ತಿದ್ದಾನೆ. ಯೆಹೋವನು ಹೇಗೆ ಅವರನ್ನು ನಡೆಸುತ್ತಾನೆ, ಅವರ ಅಗತ್ಯಗಳನ್ನು ಹೇಗೆ ಪೂರೈಸುತ್ತಾನೆ ಎಂಬದನ್ನು ನಾವು ಈ ಲೇಖನದಲ್ಲಿ ನೋಡೋಣ. ಆತನು ತೋರಿಸುತ್ತಿರುವ ಪ್ರೀತಿಭರಿತ ಕಾಳಜಿಗೆ ಕುರಿಗಳಾದ ನಾವು ಹೇಗೆ ಸ್ಪಂದಿಸಬೇಕೆಂದೂ ತಿಳಿಯೋಣ.
ಒಳ್ಳೆಯ ಕುರುಬನು ಉಪಕುರುಬರನ್ನು ನೇಮಿಸುತ್ತಾನೆ
4. ಯೆಹೋವನ ಕುರಿಗಳ ಅಗತ್ಯಗಳನ್ನು ಪೂರೈಸುವುದರಲ್ಲಿ ಯೇಸು ಯಾವ ಪಾತ್ರ ವಹಿಸುತ್ತಾನೆ?
4 ಯೆಹೋವನು ಯೇಸುವನ್ನು ಕ್ರೈಸ್ತ ಸಭೆಯ ಶಿರಸ್ಸಾಗಿ ನೇಮಿಸಿದ್ದಾನೆ. (ಎಫೆ. 1:22, 23) ‘ಒಳ್ಳೆಯ ಕುರುಬನಾದ’ ಯೇಸುವು ತಂದೆಯಂತೆಯೇ ತನ್ನ ಕುರಿಗಳನ್ನು ಪ್ರೀತಿಸುತ್ತಾನೆ, ಆರೈಕೆ ಮಾಡುತ್ತಾನೆ. ‘ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನೇ ಒಪ್ಪಿಸಿಕೊಟ್ಟಿದ್ದಾನೆ.’ (ಯೋಹಾ. 10:11, 15) ಯೇಸು ಕೊಟ್ಟ ಆ ವಿಮೋಚನಾ ಮೌಲ್ಯ ಯಜ್ಞವು ಮಾನವಕುಲಕ್ಕೆ ಒಂದು ಅದ್ವಿತೀಯ ಕೊಡುಗೆ! (ಮತ್ತಾ. 20:28) ಏಕೆಂದರೆ “[ಯೇಸುವಿನಲ್ಲಿ] ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳ”ಬೇಕೆನ್ನುವುದು ಯೆಹೋವನ ಉದ್ದೇಶವಾಗಿದೆ!—ಯೋಹಾ. 3:16.
5, 6. (1) ತನ್ನ ಕುರಿಗಳ ಆರೈಕೆಮಾಡಲು ಯೇಸು ಯಾರನ್ನು ನೇಮಿಸಿದ್ದಾನೆ? (2) ಈ ಏರ್ಪಾಡಿನಿಂದ ಪ್ರಯೋಜನ ಪಡೆಯಲು ಕುರಿಗಳು ಏನು ಮಾಡಬೇಕು? (3) ಸಭಾ ಹಿರಿಯರಿಗೆ ನಾವು ವಿಧೇಯರಾಗಲು ಅತಿ ಮುಖ್ಯ ಕಾರಣ ಯಾವುದಾಗಿರಬೇಕು?
5 ಕುರಿಗಳು ‘ಒಳ್ಳೆಯ ಕುರುಬನಾದ’ ಯೇಸು ಕ್ರಿಸ್ತನಿಗೆ ಹೇಗೆ ಸ್ಪಂದಿಸುತ್ತವೆ? “ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ; ನಾನು ಅವುಗಳನ್ನು ತಿಳಿದಿದ್ದೇನೆ ಮತ್ತು ಅವು ನನ್ನ ಹಿಂದೆ ಬರುತ್ತವೆ” ಎಂದನು ಯೇಸು. (ಯೋಹಾ. 10:27) ‘ಒಳ್ಳೆಯ ಕುರುಬನ’ ಸ್ವರಕ್ಕೆ ಕಿವಿಗೊಡುವುದರ ಅರ್ಥ ಎಲ್ಲ ವಿಷಯಗಳಲ್ಲೂ ಅವನ ಮಾರ್ಗದರ್ಶನ ಪಾಲಿಸುವುದೇ ಆಗಿದೆ. ಇದರಲ್ಲಿ, ಆತನು ನೇಮಿಸಿರುವ ಆಧ್ಯಾತ್ಮಿಕ ಉಪಕುರುಬರಿಗೆ ವಿಧೇಯರಾಗುವುದೂ ಸೇರಿದೆ. ಯೇಸು ಭೂಮಿಯಲ್ಲಿದ್ದಾಗ ತಾನು ಆರಂಭಿಸಿದ ಕೆಲಸವನ್ನು ತನ್ನ ಅಪೊಸ್ತಲರು ಹಾಗೂ ಶಿಷ್ಯರು ಮುಂದುವರಿಸುವರೆಂದು ಸೂಚಿಸಿದನು. ಅವರಿಗೆ ‘ತನ್ನ ಚಿಕ್ಕ ಕುರಿಗಳನ್ನು ಮೇಯಿಸುವ’ ಮತ್ತು ‘ಬೋಧಿಸುವ’ ಜವಾಬ್ದಾರಿಯನ್ನು ಕೊಟ್ಟನು. (ಮತ್ತಾ. 28:20; ಯೋಹಾನ 21:15-17 ಓದಿ.) ಸುವಾರ್ತೆ ಎಲ್ಲೆಡೆಯೂ ಹಬ್ಬಿ, ಶಿಷ್ಯರ ಸಂಖ್ಯೆ ಹೆಚ್ಚುತ್ತಾ ಹೋದಂತೆ ಪ್ರೌಢ ಕ್ರೈಸ್ತರು ಸಭೆಗಳನ್ನು ಪರಿಪಾಲಿಸುವಂತೆ ಯೇಸು ಏರ್ಪಾಡುಗಳನ್ನು ಮಾಡಿದನು.—ಎಫೆ. 4:11, 12.
6 ಒಂದನೇ ಶತಮಾನದ ಎಫೆಸ ಸಭೆಯ ಮೇಲ್ವಿಚಾರಕರಿಗೆ ಅಪೊಸ್ತಲ ಪೌಲನು, ‘ಸಭೆಯನ್ನು ಪರಿಪಾಲಿಸುವುದಕ್ಕಾಗಿ ಪವಿತ್ರಾತ್ಮವು ನಿಮ್ಮನ್ನು ಮೇಲ್ವಿಚಾರಕರನ್ನಾಗಿ ನೇಮಿಸಿದೆ’ ಎಂದು ಹೇಳಿದನು. (ಅ. ಕಾ. 20:28) ಇಂದಿನ ಕ್ರೈಸ್ತ ಮೇಲ್ವಿಚಾರಕರು ಸಹ ಪವಿತ್ರಾತ್ಮದಿಂದ ನೇಮಿಸಲ್ಪಟ್ಟಿದ್ದಾರೆ. ನಾವೇಕೆ ಹೀಗೆ ಹೇಳಬಹುದು? ಏಕೆಂದರೆ ಪವಿತ್ರಾತ್ಮದ ಪ್ರೇರಣೆಯಡಿ ಬರೆಯಲಾದ ಬೈಬಲಿನಲ್ಲಿರುವ ಆವಶ್ಯಕತೆಗಳನ್ನು ಪೂರೈಸಿದ್ದರಿಂದ ಅವರು ಆ ನೇಮಕವನ್ನು ಪಡೆದಿದ್ದಾರೆ. ಹಾಗಾಗಿ ನಾವು ಕ್ರೈಸ್ತ ಮೇಲ್ವಿಚಾರಕರಿಗೆ ವಿಧೇಯರಾಗುವಾಗ ಅತ್ಯಂತ ಮಹಾನ್ ಕುರುಬರಾದ ಯೆಹೋವನಿಗೂ ಯೇಸುವಿಗೂ ಗೌರವವನ್ನು ತೋರಿಸುತ್ತೇವೆ. (ಲೂಕ 10:16) ನಾವು ಹಿರಿಯರಿಗೆ ಅಧೀನತೆ ತೋರಿಸಲು ಇದೇ ಅತಿ ಮುಖ್ಯ ಕಾರಣವಾಗಿರಬೇಕು. ಆದರೆ ಅವರಿಗೆ ವಿಧೇಯರಾಗುವುದು ವಿವೇಕಯುತ ಎಂಬುದಕ್ಕೆ ಇತರ ಕಾರಣಗಳೂ ಇವೆ.
7. ಯೆಹೋವನೊಂದಿಗೆ ಒಳ್ಳೇ ಸಂಬಂಧ ಕಾಪಾಡಿಕೊಳ್ಳಲು ಹಿರಿಯರು ನಿಮಗೆ ಹೇಗೆ ನೆರವು ನೀಡುತ್ತಾರೆ?
7 ಹಿರಿಯರು ಜೊತೆ ವಿಶ್ವಾಸಿಗಳಿಗೆ ಪ್ರೋತ್ಸಾಹ ಮತ್ತು ನಿರ್ದೇಶನ ಕೊಡುವಾಗ ನೇರವಾಗಿ ಬೈಬಲ್ ವಚನಗಳಿಂದ ಇಲ್ಲವೆ ವಚನಗಳಲ್ಲಿರುವ ತತ್ವಗಳ ಆಧಾರದ ಮೇಲೆ ಕೊಡುತ್ತಾರೆ. ಹೀಗೆ ಮಾಡುವಾಗ ಹಿರಿಯರ ಗುರಿ ಸಹೋದರರ ಬದುಕನ್ನು ನಿಯಂತ್ರಿಸುವುದಲ್ಲ. (2 ಕೊರಿಂ. 1:24) ಬದಲಾಗಿ ಬೈಬಲಾಧರಿತ ನಿರ್ದೇಶನಗಳನ್ನು ಕೊಟ್ಟು ಸ್ವತಃ ಸಹೋದರರೇ ಒಳ್ಳೇ ನಿರ್ಣಯಗಳನ್ನು ಮಾಡಲು ಸಹಾಯಮಾಡುವುದು ಮತ್ತು ಸಭೆಯಲ್ಲಿ ಶಾಂತಿ, ಸುವ್ಯವಸ್ಥೆಯನ್ನು ವರ್ಧಿಸುವುದೇ ಆಗಿದೆ. (1 ಕೊರಿಂ. 14:33, 40) ಹಿರಿಯರು ನಮ್ಮ “ಪ್ರಾಣಗಳನ್ನು ಕಾಯುವವರಾಗಿದ್ದಾರೆ.” ಅದರರ್ಥ ಸಭೆಯಲ್ಲಿರುವ ಪ್ರತಿಯೊಬ್ಬ ಸದಸ್ಯನು ಯೆಹೋವನೊಟ್ಟಿಗೆ ಒಳ್ಳೇ ಸಂಬಂಧವನ್ನು ಕಾಪಾಡಿಕೊಳ್ಳುವಂತೆ ಸಹಾಯಮಾಡಲು ಅವರು ಬಯಸುತ್ತಾರೆ. ಹಾಗಾಗಿಯೇ ಒಬ್ಬ ಸಹೋದರ ಇಲ್ಲವೆ ಸಹೋದರಿ ‘ತಪ್ಪು ಹೆಜ್ಜೆ’ ಇಡಲಿದ್ದಾರೆಂದು ಗ್ರಹಿಸಿದೊಡನೆ ಅಥವಾ ಈಗಾಗಲೇ ತಪ್ಪು ಹೆಜ್ಜೆ ಇಟ್ಟಿದ್ದಾರೆಂದು ತಿಳಿದ ತಕ್ಷಣ ಅವರು ನೆರವು ನೀಡುತ್ತಾರೆ. (ಗಲಾ. 6:1, 2; ಯೂದ 22) ‘ಮುಂದಾಳುತ್ವ ವಹಿಸುತ್ತಿರುವವರಿಗೆ ನಾವು ವಿಧೇಯರಾಗಲು’ ಇವೆಲ್ಲ ಒಳ್ಳೇ ಕಾರಣಗಳಲ್ಲವೇ?—ಇಬ್ರಿಯ 13:17 ಓದಿ.
8. ಹಿರಿಯರು ದೇವರ ಮಂದೆಯನ್ನು ಹೇಗೆ ರಕ್ಷಿಸುತ್ತಾರೆ?
8 ಸ್ವತಃ ಒಬ್ಬ ಆಧ್ಯಾತ್ಮಿಕ ಕುರುಬನಾಗಿದ್ದ ಅಪೊಸ್ತಲ ಪೌಲನು ಕೊಲೊಸ್ಸೆಯಲ್ಲಿದ್ದ ತನ್ನ ಸಹೋದರರಿಗೆ ಹೀಗೆ ಬರೆದನು: “ಎಚ್ಚರವಾಗಿರಿ! ಕ್ರಿಸ್ತನಿಗೆ ಅನುಸಾರವಾಗಿರದೆ ಮನುಷ್ಯರ ಸಂಪ್ರದಾಯಕ್ಕೆ ಅನುಸಾರವಾಗಿಯೂ ಈ ಲೋಕಕ್ಕೆ ಸೇರಿದ ಪ್ರಾಥಮಿಕ ವಿಷಯಗಳಿಗೆ ಅನುಸಾರವಾಗಿಯೂ ಇರುವ ತತ್ತ್ವಜ್ಞಾನ ಮತ್ತು ನಿರರ್ಥಕವಾದ ಮೋಸಕರ ಮಾತುಗಳ ಮೂಲಕ ಯಾವನಾದರೂ ನಿಮ್ಮನ್ನು ತನ್ನ ಬೇಟೆಯೋಪಾದಿ ಹಿಡಿದುಕೊಂಡು ಹೋಗಬಹುದು.” (ಕೊಲೊ. 2:8) ಈ ಎಚ್ಚರಿಕೆಯು, ಹಿರಿಯರು ನೀಡುವ ಬೈಬಲಾಧರಿತ ಬುದ್ಧಿವಾದ-ಸಲಹೆಗೆ ವಿಧೇಯರಾಗಲು ನಮಗೆ ಇನ್ನೊಂದು ಒಳ್ಳೇ ಕಾರಣ ಕೊಡುತ್ತದೆ. ಅದೇನೆಂದರೆ ನಂಬಿಕೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವ ಯಾವುದೇ ವ್ಯಕ್ತಿಯ ವಿಷಯದಲ್ಲಿ ಹಿರಿಯರು ಸಹೋದರರನ್ನು ಎಚ್ಚರಿಸುತ್ತಾರೆ. ‘ಚಂಚಲ ವ್ಯಕ್ತಿಗಳನ್ನು ಮರುಳುಗೊಳಿಸಲು’ ಪ್ರಯತ್ನಿಸುವ “ಸುಳ್ಳು ಪ್ರವಾದಿಗಳು” ಮತ್ತು ‘ಸುಳ್ಳು ಬೋಧಕರ’ ಬಗ್ಗೆ ಅಪೊಸ್ತಲ ಪೇತ್ರನು ಎಚ್ಚರಿಸಿದನು. (2 ಪೇತ್ರ 2:1, 14) ಇಂದಿನ ಹಿರಿಯರಿಗೆ ಸಹ ಅಗತ್ಯ ಬೀಳುವಾಗೆಲ್ಲ ಅಂಥ ಎಚ್ಚರಿಕೆಗಳನ್ನು ಕೊಡುವ ಜವಾಬ್ದಾರಿಯಿದೆ. ಪ್ರೌಢ ಕ್ರೈಸ್ತ ಪುರುಷರಾಗಿರುವ ಅವರಿಗೆ ಬದುಕಿನಲ್ಲಿ ಅನುಭವವಿದೆ. ಅಲ್ಲದೆ ಹಿರಿಯರಾಗಿ ನೇಮಿತರಾಗುವ ಮುಂಚೆಯೇ ಅವರು ಬೈಬಲ್‌ನ ಸ್ಪಷ್ಟ ತಿಳಿವಳಿಕೆ ತಮಗಿದೆಯೆಂದು ಮತ್ತು ಸ್ವಸ್ಥ ಬೋಧನೆಯನ್ನು ಕಲಿಸಿಕೊಡಲು ಅರ್ಹರೆಂದು ತೋರಿಸಿಕೊಟ್ಟಿದ್ದಾರೆ. (1 ತಿಮೊ. 3:2; ತೀತ 1:9) ಅವರಲ್ಲಿ ಪ್ರೌಢತೆ, ಸಮತೋಲನ ಮತ್ತು ಬೈಬಲಾಧರಿತ ವಿವೇಕ ಇರುವುದರಿಂದ ಅವರು ಮಂದೆಗೆ ಕೌಶಲಭರಿತ ನಿರ್ದೇಶನ ಕೊಡಲು ಶಕ್ತರಾಗಿದ್ದಾರೆ.
ಒಳ್ಳೆಯ ಕುರುಬನು ಕುರಿಗಳಿಗೆ ಉಣಿಸುತ್ತಾನೆ, ಸಂರಕ್ಷಿಸುತ್ತಾನೆ
9. ಯೇಸು ಇಂದು ಕ್ರೈಸ್ತ ಸಭೆಯನ್ನು ಹೇಗೆ ನಿರ್ದೇಶಿಸಿ ಉಣಿಸುತ್ತಾನೆ?
9 ಯೆಹೋವನು ತನ್ನ ಸಂಘಟನೆಯ ಮೂಲಕ ಲೋಕವ್ಯಾಪಕವಾಗಿರುವ ಸಹೋದರರ ಇಡೀ ಬಳಗಕ್ಕೆ ಆಧ್ಯಾತ್ಮಿಕ ಆಹಾರವನ್ನು ಪುಷ್ಕಳವಾಗಿ ಒದಗಿಸುತ್ತಿದ್ದಾನೆ. ನಮ್ಮ ಪ್ರಕಾಶನಗಳ ಮೂಲಕ ಬಹಳಷ್ಟು ಬೈಬಲಾಧರಿತ ಸಲಹೆಯನ್ನು ಕೊಡಲಾಗುತ್ತಿದೆ. ಅಲ್ಲದೆ ಕೆಲವೊಮ್ಮೆ ಸಂಘಟನೆಯು ಸಭಾ ಹಿರಿಯರಿಗೆ ನೇರವಾಗಿ ಪತ್ರಗಳ ಮೂಲಕ ಇಲ್ಲವೆ ಸಂಚರಣ ಮೇಲ್ವಿಚಾರಕರ ಮೂಲಕ ಮಾರ್ಗದರ್ಶನ ಕೊಡುತ್ತದೆ. ಈ ವಿಧಗಳಲ್ಲಿ ಯೇಸು ಕುರಿಗಳನ್ನು ನಡೆಸಿ ಉಣಿಸುತ್ತಾನೆ.
10. ಮಂದೆಯನ್ನು ಬಿಟ್ಟು ದೂರಹೋಗಿರುವವರ ವಿಷಯದಲ್ಲಿ ಆಧ್ಯಾತ್ಮಿಕ ಕುರುಬರಿಗೆ ಯಾವ ಜವಾಬ್ದಾರಿಯಿದೆ?
10 ಆಧ್ಯಾತ್ಮಿಕ ಅರ್ಥದಲ್ಲಿ ಸಭೆಯ ಸದಸ್ಯರ, ವಿಶೇಷವಾಗಿ ನಂಬಿಕೆಯಲ್ಲಿ ಬಲಹೀನರಾಗಿರುವವರ, ಯಾಕೋಬ 5:14, 15 ಓದಿ.) ಕೆಲವರು ಮಂದೆಯನ್ನು ಬಿಟ್ಟು ದೂರಹೋಗಿರಬಹುದು ಮತ್ತು ಕ್ರೈಸ್ತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ನಿಲ್ಲಿಸಿರಬಹುದು. ಇಂಥ ಸಂದರ್ಭದಲ್ಲಿ, ಪ್ರೀತಿ-ಅಕ್ಕರೆಯಿರುವ ಹಿರಿಯನು ಏನು ಮಾಡುವನು? ಕಳೆದುಹೋದ ಆ ಕುರಿಯನ್ನು ಹುಡುಕಲು ಮತ್ತು ಅದು ಮಂದೆಗೆ ಅಂದರೆ ಸಭೆಗೆ ವಾಪಸ್ಸು ಬರುವಂತೆ ಉತ್ತೇಜಿಸಲು ತನ್ನಿಂದ ಏನೆಲ್ಲ ಆಗುತ್ತದೋ ಅದನ್ನು ಖಂಡಿತ ಮಾಡುವನು. “ಈ ಚಿಕ್ಕವರಲ್ಲಿ ಒಬ್ಬನಾದರೂ ನಾಶವಾಗುವುದನ್ನು ಸ್ವರ್ಗದಲ್ಲಿರುವ ನನ್ನ ತಂದೆಯು ಇಷ್ಟಪಡುವುದಿಲ್ಲ” ಎಂದು ಹೇಳಿದನು ಯೇಸು.—ಮತ್ತಾ. 18:12-14.
ಆಧ್ಯಾತ್ಮಿಕವಾಗಿ ಅಸ್ವಸ್ಥರಾಗಿರುವವರ ಆರೋಗ್ಯವನ್ನು ಸಂರಕ್ಷಿಸುವ, ಆರೈಕೆಮಾಡುವ, ಕಾಳಜಿವಹಿಸುವ ಜವಾಬ್ದಾರಿ ಮೇಲ್ವಿಚಾರಕರಿಗಿದೆ. (ಉಪಕುರುಬರ ಕುಂದುಕೊರತೆಗಳನ್ನು ನಾವು ಹೇಗೆ ವೀಕ್ಷಿಸಬೇಕು?
11. ಹಿರಿಯರ ಮುಂದಾಳತ್ವಕ್ಕೆ ವಿಧೇಯರಾಗುವುದು ಕೆಲವರಿಗೆ ಏಕೆ ಕಷ್ಟವೆಂದನಿಸಬಹುದು?
11 ಯೆಹೋವ ಮತ್ತು ಯೇಸು ಪರಿಪೂರ್ಣ ಕುರುಬರು. ಆದರೆ ಅವರು ಸಭೆಯ ಆರೈಕೆ ಮಾಡಲು ಯಾರನ್ನು ಉಪಯೋಗಿಸುತ್ತಾರೋ ಆ ಉಪಕುರುಬರು ಪರಿಪೂರ್ಣರಲ್ಲ. ಈ ನಿಜತ್ವವು ಕೆಲವರಿಗೆ ಹಿರಿಯರ ಮುಂದಾಳತ್ವಕ್ಕೆ ವಿಧೇಯರಾಗುವುದನ್ನು ಕಷ್ಟಕರವನ್ನಾಗಿ ಮಾಡುತ್ತಿರಬಹುದು. ‘ಅವರೂ ನಮ್ಮಂತೆ ಅಪರಿಪೂರ್ಣರು. ನಾವೇಕೆ ಅವರ ಮಾತು ಕೇಳಬೇಕು?’ ಎಂದು ಅವರು ಹೇಳಬಹುದು. ನಿಜ, ಹಿರಿಯರು ಅಪರಿಪೂರ್ಣರೇ. ಹಾಗಿದ್ದರೂ ಅವರ ಕುಂದುಕೊರತೆ, ದೌರ್ಬಲ್ಯಗಳ ಮೇಲೆ ನಾವು ಗಮನ ನೆಡಬಾರದು.
12, 13. (1) ಹಿಂದೆ ಜವಾಬ್ದಾರಿಯುತ ಸ್ಥಾನಗಳಲ್ಲಿದ್ದ ದೇವಸೇವಕರು ಯಾವ ತಪ್ಪುಗಳನ್ನು ಮಾಡಿದರು? (2) ಜವಾಬ್ದಾರಿಯುತ ಪುರುಷರ ಕುಂದುಕೊರತೆಗಳನ್ನು ಏಕೆ ಬೈಬಲಿನಲ್ಲಿ ದಾಖಲಿಸಲಾಗಿದೆ?
12 ಹಿಂದಿನ ಕಾಲಗಳಲ್ಲಿ ಯೆಹೋವನು ಯಾರ ಮೂಲಕ ತನ್ನ ಜನರನ್ನು ನಡೆಸಿದನೋ ಅವರ ಕುಂದುಕೊರತೆಗಳನ್ನು ಬೈಬಲ್ ಮುಚ್ಚುಮರೆಯಿಲ್ಲದೆ ತಿಳಿಸುತ್ತದೆ. ಉದಾಹರಣೆಗೆ ದಾವೀದನು ಇಸ್ರಾಯೇಲಿನ ರಾಜ ಮತ್ತು ನಾಯಕನಾಗಿ ಅಭಿಷೇಕಿಸಲ್ಪಟ್ಟಿದ್ದನು. ಆದರೂ ಪ್ರಲೋಭನೆಗೆ ಬಲಿಬಿದ್ದು ವ್ಯಭಿಚಾರ ಮಾಡಿದ ಮತ್ತು ಕೊಲೆಗೈದ. (2 ಸಮು. 12:7-9) ಅಪೊಸ್ತಲ ಪೇತ್ರನ ಉದಾಹರಣೆಯನ್ನೂ ಗಮನಿಸಿ. ಒಂದನೇ ಶತಮಾನದ ಕ್ರೈಸ್ತ ಸಭೆಯಲ್ಲಿ ಅವನಿಗೆ ಭಾರೀ ಜವಾಬ್ದಾರಿಯನ್ನು ವಹಿಸಲಾಗಿತ್ತಾದರೂ ಅವನು ಗಂಭೀರ ತಪ್ಪುಗಳನ್ನು ಮಾಡಿದ. (ಮತ್ತಾ. 16:18, 19; ಯೋಹಾ. 13:38; 18:27; ಗಲಾ. 2:11-14) ನಿಜವೆಂದರೆ, ಆದಾಮಹವ್ವರ ನಂತರ ಯೇಸುವನ್ನು ಬಿಟ್ಟರೆ ಭೂಮಿ ಮೇಲೆ ಪರಿಪೂರ್ಣ ಮಾನವರೊಬ್ಬರೂ ಇಲ್ಲ.
13 ಆದರೆ ತಾನು ನೇಮಿಸಿದ್ದ ಪುರುಷರ ಕುಂದುಕೊರತೆಗಳನ್ನು ಯೆಹೋವನು ಬೈಬಲಿನಲ್ಲಿ ಬರೆಯಿಸಿದ್ದೇಕೆ? ಇದಕ್ಕಿರುವ ಹಲವಾರು ಕಾರಣಗಳಲ್ಲಿ ಒಂದೇನೆಂದರೆ, ತನ್ನ ಜನರನ್ನು ನಡೆಸಲಿಕ್ಕಾಗಿ ತಾನು ಅಪರಿಪೂರ್ಣ ಮಾನವರನ್ನು ಬಳಸಬಲ್ಲೆನೆಂದು ತೋರಿಸಲಿಕ್ಕಾಗಿಯೇ. ವಾಸ್ತವದಲ್ಲಿ ಆತನು ಯಾವಾಗಲೂ ಇಂಥವರನ್ನೇ ಬಳಸಿದ್ದಾನೆ. ಆದ್ದರಿಂದ ಮುಂದಾಳತ್ವ ವಹಿಸುವವರ ಕುಂದುಕೊರತೆಗಳನ್ನು ನೆವ ಮಾಡಿಕೊಂಡು ನಾವು ಅವರ ವಿರುದ್ಧ ಗುಣುಗುಟ್ಟಬಾರದು ಇಲ್ಲವೆ ಅವರ ಅಧಿಕಾರವನ್ನು ಧಿಕ್ಕರಿಸಬಾರದು. ಈ ಸಹೋದರರನ್ನು ಗೌರವಿಸಬೇಕು ಮತ್ತು ಅವರಿಗೆ ವಿಧೇಯತೆ ತೋರಿಸಬೇಕೆಂದು ಯೆಹೋವನು ನಮ್ಮಿಂದ ಅಪೇಕ್ಷಿಸುತ್ತಾನೆ.—ವಿಮೋಚನಕಾಂಡ 16:2, 8 ಓದಿ.
14, 15. ಗತಕಾಲದಲ್ಲಿ ಯೆಹೋವನು ತನ್ನ ಜನರಿಗೆ ನಿರ್ದೇಶನಗಳನ್ನು ಕೊಟ್ಟ ವಿಧದಿಂದ ನಾವೇನು ಕಲಿಯಬಲ್ಲೆವು?
14 ಇಂದು ಮುಂದಾಳತ್ವ ವಹಿಸುತ್ತಿರುವವರಿಗೆ ನಾವು ವಿಧೇಯತೆ ತೋರಿಸುವುದು ಅತೀ ಪ್ರಾಮುಖ್ಯ. ಗತಕಾಲಗಳಲ್ಲಿ ಸಂಕಷ್ಟದ ಸಮಯದಲ್ಲಿ ಯೆಹೋವನು ತನ್ನ ಜನರಿಗೆ ಹೇಗೆ ನಿರ್ದೇಶನಗಳನ್ನು ಕೊಟ್ಟನೆಂದು ಸ್ವಲ್ಪ ಯೋಚಿಸಿ. ಉದಾಹರಣೆಗೆ, ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟು ಹೊರಟಾಗ ದೇವರು ಅವರಿಗೆ ಸೂಚನೆಗಳನ್ನು ಕೊಟ್ಟದ್ದು ಮೋಶೆ ಆರೋನರ ಮೂಲಕ. ಹತ್ತನೇ ಬಾಧೆಯಿಂದ ಬಚಾವಾಗಲಿಕ್ಕಾಗಿ ಇಸ್ರಾಯೇಲ್ಯರು ಒಂದು ವಿಶೇಷ ಊಟವನ್ನು ಮಾಡಬೇಕಿತ್ತು ಮತ್ತು ಕುರಿಯನ್ನು ಕೊಯ್ದು ಅದರ ರಕ್ತವನ್ನು ಮನೇಬಾಗಿಲಿನ ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗೂ ಹಚ್ಚಬೇಕಿತ್ತು. ಈ ನಿರ್ದೇಶನಗಳು ಅವರಿಗೆ ಸಿಕ್ಕಿದ್ದು ಸ್ವರ್ಗದಿಂದ ಒಂದು ವಾಣಿಯ ಮೂಲಕವಲ್ಲ. ಬದಲಿಗೆ ಹಿರೀಪುರುಷರು ಹೇಳಿದ್ದನ್ನು ಅವರು ಪಾಲಿಸಬೇಕಿತ್ತು. ಈ ಹಿರೀಪುರುಷರು ನಿರ್ದಿಷ್ಟ ನಿರ್ದೇಶನಗಳನ್ನು ಪಡೆದದ್ದು ಮೋಶೆಯಿಂದ. (ವಿಮೋ. 12:1-7, 21-23, 29) ಆ ಸನ್ನಿವೇಶಗಳಲ್ಲಿ ಮೋಶೆ ಮತ್ತು ಹಿರೀಪುರುಷರು ಯೆಹೋವನ ನಿರ್ದೇಶನಗಳನ್ನು ಆತನ ಜನರಿಗೆ ದಾಟಿಸುವ ಸಂದೇಶವಾಹಕರಾಗಿದ್ದರು. ಇಂದು ಕ್ರೈಸ್ತ ಹಿರಿಯರು ಅದಕ್ಕೆ ಹೋಲುವಂಥ ಒಂದು ಪ್ರಮುಖ ಕೆಲಸಮಾಡುತ್ತಿದ್ದಾರೆ.
15 ಬೈಬಲ್ ಇತಿಹಾಸದಲ್ಲಿ ಹೀಗೆ ಯೆಹೋವನು ಮಾನವರ ಇಲ್ಲವೆ ದೇವದೂತರ ಮುಖಾಂತರ ಜೀವರಕ್ಷಕ ಸೂಚನೆಗಳನ್ನು ಕೊಟ್ಟ ಹಲವಾರು ಸಂದರ್ಭಗಳು ನಿಮ್ಮ ನೆನಪಿಗೆ ಬರಬಹುದು. ಈ ಎಲ್ಲ ಸಂದರ್ಭಗಳಲ್ಲಿ ದೇವರು
ಸಂದೇಶವಾಹಕರಿಗೆ ತನ್ನ ಹೆಸರಿನಲ್ಲಿ ಮಾತಾಡುವ ಮತ್ತು ಬಿಕ್ಕಟ್ಟಿನ ಸಂದರ್ಭಗಳಲ್ಲಿ ಏನು ಮಾಡಬೇಕೆಂದು ತನ್ನ ಜನರಿಗೆ ತಿಳಿಸುವ ಅಧಿಕಾರ ವಹಿಸಿದನು. ಅರ್ಮಗೆದೋನಿನ ಸಮಯದಲ್ಲೂ ಯೆಹೋವನು ಹಾಗೆ ಮಾಡಬಹುದೆಂದು ನಾವು ನಿರೀಕ್ಷಿಸಸಾಧ್ಯ ಅಲ್ಲವೆ? ಇಂದು ಯೆಹೋವನನ್ನು ಅಥವಾ ಆತನ ಸಂಘಟನೆಯನ್ನು ಪ್ರತಿನಿಧಿಸುವ ಜವಾಬ್ದಾರಿಯುಳ್ಳ ಹಿರಿಯರು ತಮಗೆ ಕೊಡಲಾಗಿರುವ ಈ ಜವಾಬ್ದಾರಿಯನ್ನು ದುರುಪಯೋಗಿಸದಂತೆ ವಿಶೇಷ ಜಾಗ್ರತೆ ವಹಿಸಬೇಕು.‘ಒಂದೇ ಹಿಂಡು, ಒಬ್ಬನೇ ಕುರುಬ’
16. ಯಾವ ‘ಮಾತಿಗೆ’ ನಾವು ಕಿವಿಗೊಡಬೇಕು?
16 ಯೆಹೋವನ ಜನರು ‘ಒಬ್ಬನೇ ಕುರುಬನಾದ’ ಯೇಸು ಕ್ರಿಸ್ತನ ಕೆಳಗೆ ‘ಒಂದೇ ಹಿಂಡು’ ಆಗಿದ್ದಾರೆ. (ಯೋಹಾ. 10:16) ಯೇಸು ತನ್ನ ಶಿಷ್ಯರಿಗೆ “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲ ದಿವಸ” ಅವರ ಸಂಗಡ ಇರುವುದಾಗಿ ಮಾತುಕೊಟ್ಟನು. (ಮತ್ತಾ. 28:20) ಸೈತಾನನ ಲೋಕದ ಮೇಲೆ ತೀರ್ಪನ್ನು ಜಾರಿಗೊಳಿಸುವುದಕ್ಕೆ ಮುಂಚೆ ಸಂಭವಿಸಲಿರುವ ಎಲ್ಲ ಘಟನೆಗಳು ಸ್ವರ್ಗದಲ್ಲಿ ರಾಜನಾಗಿರುವ ಯೇಸುವಿನ ನಿಯಂತ್ರಣದಲ್ಲಿವೆ. ನಾವು ದೇವರ ಮಂದೆಯೊಳಗೆ ಐಕ್ಯರಾಗಿ, ಸುರಕ್ಷಿತರಾಗಿ ಉಳಿಯಬೇಕಾದರೆ ಏನು ಮಾಡಬೇಕು? ಯಾವ ಮಾರ್ಗದಲ್ಲಿ ಹೋಗಬೇಕೆಂದು ‘ನಮ್ಮ ಹಿಂದಿನಿಂದ’ ಹೇಳುವ ‘ಮಾತಿಗೆ’ ಕಿವಿಗೊಡಬೇಕು. ಈ ‘ಮಾತಿನಲ್ಲಿ’ ದೇವರ ಪವಿತ್ರಾತ್ಮವು ಹೇಳುವ ಸಂಗತಿಗಳು ಅಂದರೆ ಬೈಬಲಿನಲ್ಲಿರುವ ವಿಷಯಗಳು ಸೇರಿವೆ. ಮಾತ್ರವಲ್ಲ ಯೆಹೋವನು ಹಾಗೂ ಯೇಸು ತಾವು ನೇಮಿಸಿರುವ ಉಪಕುರುಬರ ಮುಖಾಂತರ ಹೇಳುವ ಸಂಗತಿಗಳೂ ಸೇರಿವೆ.—ಯೆಶಾಯ 30:21; ಪ್ರಕಟನೆ 3:22 ಓದಿ.
17, 18. (1) ಮಂದೆಗೆ ಯಾವ ಅಪಾಯವಿದೆ? (2) ಆದರೆ ನಮಗೆ ಯಾವ ಭರವಸೆಯಿದೆ? (3) ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸುವೆವು?
17 ಸೈತಾನನು ‘ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಿದ್ದಾನೆ.’ (1 ಪೇತ್ರ 5:8) ತುಂಬ ಹಸಿವಿನಿಂದಿರುವ ಕ್ರೂರ ಪರಭಕ್ಷಕ ಪ್ರಾಣಿಯಂತೆ ಸೈತಾನನು ಮಂದೆಯನ್ನು ಗಮನಿಸುತ್ತಾ ಇದ್ದಾನೆ. ಎಚ್ಚರಿಕೆಯಿಂದ ಇಲ್ಲದವರ ಮೇಲೆ ಅಥವಾ ಮಂದೆಯನ್ನು ಬಿಟ್ಟು ದೂರಸರಿಯುವವರ ಮೇಲೆ ಎರಗಲು ಅವಕಾಶಕ್ಕಾಗಿ ಕಾಯುತ್ತಾ ಇದ್ದಾನೆ. ನಾವು ಮಂದೆಯಲ್ಲಿರುವ ಉಳಿದವರಿಗೆ ಮತ್ತು ‘ನಮ್ಮ ಪ್ರಾಣಗಳನ್ನು ಕಾಯುವ ಕುರುಬನೂ ಮೇಲ್ವಿಚಾರಕನೂ ಆಗಿರುವ’ ಯೆಹೋವ ದೇವರಿಗೆ ಏಕೆ ತುಂಬ ಹತ್ತಿರವಾಗಿ ಉಳಿಯಬೇಕೆನ್ನುವುದಕ್ಕೆ ಇದು ಇನ್ನೊಂದು ಕಾರಣ. (1 ಪೇತ್ರ 2:25) ಮಹಾ ಸಂಕಟದಿಂದ ಪಾರಾಗಿ ಉಳಿಯುವವರ ಬಗ್ಗೆ ಪ್ರಕಟನೆ 7:17 ಈ ಭರವಸೆ ಕೊಡುತ್ತದೆ: “ಕುರಿಮರಿಯಾದ [ಯೇಸು] . . . ಅವರನ್ನು ಪಾಲಿಸಿ ಜೀವಜಲದ ಒರತೆಗಳ ಬಳಿಗೆ ನಡಿಸುವನು. ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು.” ಇದಕ್ಕಿಂತ ಉತ್ತಮವಾದ ವಾಗ್ದಾನ ಬೇರೊಂದಿದೆಯೇ?
18 ಆಧ್ಯಾತ್ಮಿಕ ಉಪಕುರುಬರಾದ ಕ್ರೈಸ್ತ ಹಿರಿಯರಿಗಿರುವ ಅತ್ಯಂತ ಪ್ರಮುಖ ಪಾತ್ರವನ್ನು ಪರಿಗಣಿಸಿದ ಬಳಿಕ ಪ್ರತಿಯೊಬ್ಬ ಹಿರಿಯನು ಈ ಪ್ರಶ್ನೆ ಕೇಳಿಕೊಳ್ಳುವುದು ಉಚಿತ: ‘ನಾನು ಯೇಸುವಿನ ಕುರಿಗಳನ್ನು ಯೋಗ್ಯವಾಗಿ ಉಪಚರಿಸುತ್ತಿದ್ದೇನೆಂದು ಖಚಿತಪಡಿಸಿಕೊಳ್ಳುವುದು ಹೇಗೆ?’ ಮುಂದಿನ ಲೇಖನ ಇದನ್ನು ಉತ್ತರಿಸಲಿದೆ.