ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಫೀನೆಹಾಸನಂತೆ ಸವಾಲುಗಳನ್ನು ಎದುರಿಸಿರಿ

ಫೀನೆಹಾಸನಂತೆ ಸವಾಲುಗಳನ್ನು ಎದುರಿಸಿರಿ

ಫೀನೆಹಾಸನಂತೆ ಸವಾಲುಗಳನ್ನು ಎದುರಿಸಿರಿ

ಸಭಾ ಹಿರಿಯರಾಗಿ ಸೇವೆಮಾಡುವುದು ದೊಡ್ಡ ಭಾಗ್ಯವೇ ಸರಿ. ಆದರೂ ಹಿರಿಯರಿಗೆ ಸವಾಲುಗಳು ಎದುರಾಗುತ್ತವೆಂದು ಬೈಬಲ್‌ ತೋರಿಸುತ್ತದೆ. ಅವರು ಅಪರಾಧ ಪ್ರಕರಣಗಳನ್ನು ನಿರ್ವಹಿಸುವಾಗ “ಯೆಹೋವನಿಗೋಸ್ಕರವೇ ನ್ಯಾಯವಿಚಾರಣೆ” ಮಾಡಬೇಕಾಗುತ್ತದೆ. (2 ಪೂರ್ವ. 19:6) ಅಥವಾ ಒಂದು ನೇಮಕ ಸಿಗುವಾಗ ಮೋಶೆಯಂತೆ ಅನರ್ಹ ಭಾವನೆ ಅವರಲ್ಲಿ ಬರಬಹುದು. ಮೋಶೆ ತನಗೆ ಸಿಕ್ಕಿದ ನೇಮಕವನ್ನು ಪೂರೈಸಲು ಅಸಾಧ್ಯವೆಂದು ಎಣಿಸಿ, ಫರೋಹನ ಸನ್ನಿಧಿಗೆ ಹೋಗಲು “ನಾನು ಎಷ್ಟರವನು?” ಎಂದು ಅಂಜಿದನು.—ವಿಮೋ. 3:11.

ಹಿರಿಯರು ನೇಮಕ ಹೊಂದುವುದು ಪವಿತ್ರಾತ್ಮದ ಮಾರ್ಗದರ್ಶನದ ಅಡಿಯಲ್ಲಿ. ಬೈಬಲ್‌ ಬರೆಯಲ್ಪಟ್ಟದ್ದು ಕೂಡ ಅದೇ ಪವಿತ್ರಾತ್ಮದ ಅಡಿಯಲ್ಲೇ. ಆದ್ದರಿಂದ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದ ಮೇಲ್ವಿಚಾರಕರ ಕುರಿತು ಬೈಬಲಿನಲ್ಲಿರುವ ಉದಾಹರಣೆಗಳು ಇಂದಿನ ಹಿರಿಯರಿಗೆ ಜೀವಂತ ಮಾದರಿಗಳಾಗಿವೆ. ಫೀನೆಹಾಸನ ಕುರಿತು ನೋಡೋಣ. ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನೂ ಆಗಿದ್ದ ಅವನು ಮುಂದೆ ಮಹಾ ಯಾಜಕನಾಗಲಿದ್ದನು. ಅವನ ಜೀವನದಲ್ಲಿ ನಡೆದ ಮೂರು ಘಟನೆಗಳು ಹಿರಿಯರು ಸವಾಲುಗಳನ್ನು ಎದುರಿಸುವಾಗ ಧೈರ್ಯ, ಒಳನೋಟ ತೋರಿಸುವ ಮತ್ತು ಯೆಹೋವನಲ್ಲಿ ಭರವಸೆಯಿಡುವ ಅಗತ್ಯವನ್ನು ಒತ್ತಿಹೇಳುತ್ತವೆ.

ಧೈರ್ಯದಿಂದ ಕ್ರಿಯೆಗೈದನು

ಇಸ್ರಾಯೇಲ್ಯರು ಮೋವಾಬ್ಯರ ಬಯಲಿನಲ್ಲಿ ಪಾಳೆಯ ಹಾಕಿಕೊಂಡಿದ್ದ ಸಮಯದಲ್ಲಿ ಫೀನೆಹಾಸನು ಇನ್ನೂ ತರುಣ. ಆಗ ಏನಾಯಿತೆಂದು ಬೈಬಲ್‌ ತಿಳಿಸುತ್ತದೆ: “ಇಸ್ರಾಯೇಲ್ಯರು . . . ಮೋವಾಬ್‌ ಸ್ತ್ರೀಯರೊಡನೆ ಸಹವಾಸಮಾಡುವವರಾದರು. . . . [ಅವರೊಂದಿಗೆ] ಭೋಜನವನ್ನು ಮಾಡಿ ಅವರ ದೇವತೆಗಳಿಗೆ ನಮಸ್ಕರಿಸುವವರಾದರು.” (ಅರ. 25:1, 2) ಹಾಗಾಗಿ ತಪ್ಪುಗೈದವರ ಮೇಲೆ ಯೆಹೋವನು ಮಾರಕ ವ್ಯಾಧಿ ಬರಮಾಡಿದನು. ಇಸ್ರಾಯೇಲ್ಯರು ಮಾಡಿದ ಈ ಅಸಹ್ಯಕೃತ್ಯ ಮತ್ತು ತಂದುಕೊಂಡ ವಿಪತ್ತು ಫೀನೆಹಾಸನ ಮನಸ್ಸನ್ನು ಎಷ್ಟೊಂದು ಬಾಧಿಸಿರಬಹುದೆಂದು ಯೋಚಿಸಿ.

ವೃತ್ತಾಂತ ಮುಂದುವರಿಸಿ ಹೀಗನ್ನುತ್ತದೆ: “ಇಸ್ರಾಯೇಲ್ಯರ ಸರ್ವಸಮೂಹದವರು ದೇವದರ್ಶನದ ಗುಡಾರದ ಬಾಗಲಿನ ಹತ್ತಿರ ಅಳುತ್ತಿರುವಾಗ ಇಸ್ರಾಯೇಲ್ಯನಾದ ಒಬ್ಬ ಮನುಷ್ಯನು ಮೋಶೆಗೂ ಸರ್ವಸಮೂಹದವರಿಗೂ ಎದುರಾಗಿಯೇ ಒಬ್ಬ ಮಿದ್ಯಾನ್‌ ಸ್ತ್ರೀಯನ್ನು ತನ್ನ ಕುಲದವರ ಬಳಿಗೆ ಕರಕೊಂಡು ಬರುವದನ್ನು ಕಂಡರು.” (ಅರ. 25:6) ಯಾಜಕ ಫೀನೆಹಾಸ ಏನು ಮಾಡುವನು? ಅವನಿನ್ನೂ ಒಬ್ಬ ಯುವಕ, ಆದರೆ ಮಿದ್ಯಾನ್‌ ಸ್ತ್ರೀಯನ್ನು ಕರೆದುಕೊಂಡು ಬರುತ್ತಿದ್ದ ಆ ವ್ಯಕ್ತಿ? ಸಾಧಾರಣನೇನಲ್ಲ ಗೋತ್ರಪ್ರಧಾನನು. ತನ್ನ ಜನರ ಮಧ್ಯೆ ಆರಾಧನೆಯಲ್ಲಿ ಮುಂದಾಳುತ್ವ ವಹಿಸುವ ಸ್ಥಾನದಲ್ಲಿದ್ದನು.—ಅರ. 25:14.

ಆದರೆ ಫೀನೆಹಾಸನು ಮನುಷ್ಯನಿಗೆ ಹೆದರಲಿಲ್ಲ, ಯೆಹೋವನಿಗೆ ಭಯಪಟ್ಟನು. ಆ ಇಸ್ರಾಯೇಲ್ಯನು ಮಿದ್ಯಾನ್‌ ಸ್ತ್ರೀಯೊಂದಿಗೆ ಪಾಳೆಯದೊಳಗೆ ಹೋಗುವುದನ್ನು ನೋಡಿದ ಕೂಡಲೆ ಈಟಿಯನ್ನು ಕೈಯಲ್ಲಿ ಹಿಡಿದು ಹಿಂದೆಯೇ ಹೋಗಿ ಇಬ್ಬರನ್ನೂ ಒಂದೇ ಏಟಿನಲ್ಲಿ ತಿವಿದು ಕೊಂದನು. ಫೀನೆಹಾಸನ ಈ ಧೀರ, ನಿರ್ಣಾಯಕ ಹೆಜ್ಜೆಯನ್ನು ಯೆಹೋವನು ಹೇಗೆ ವೀಕ್ಷಿಸಿದನು? ತಕ್ಷಣವೇ ವ್ಯಾಧಿಯನ್ನು ನಿಲ್ಲಿಸಿದನು. ಮಾತ್ರವಲ್ಲ ಫೀನೆಹಾಸನೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತಾ “ಅವನ ತರುವಾಯ ಅವನ ಸಂತತಿಯವರಿಗೂ ಯಾಜಕತ್ವವು ಶಾಶ್ವತವಾಗಿಯೇ ಇರುವದೆಂದು” ಮಾತುಕೊಟ್ಟನು.—ಅರ. 25:7-13.

ಇಂದು ಹಿರಿಯರು ಹಿಂಸಾಕ್ರಮದ ಮೊರೆಹೋಗುವುದಿಲ್ಲ ಎಂಬುದು ನಿಜವಾದರೂ ಫೀನೆಹಾಸನಂತೆ ಧೈರ್ಯದಿಂದ ನಿರ್ಣಾಯಕ ಹೆಜ್ಜೆ ತೆಗೆದುಕೊಳ್ಳಲು ಸಿದ್ಧರಿರಬೇಕು. ಗೀಲ್ಯೆರ್ಮ ಎಂಬ ಹಿರಿಯನ ಉದಾಹರಣೆ ಪರಿಗಣಿಸಿ. ಅವರು ಹಿರಿಯರಾದ ಕೆಲವೇ ತಿಂಗಳಲ್ಲಿ ಒಂದು ನ್ಯಾಯನಿರ್ಣಾಯಕ ಕಮಿಟಿಯಲ್ಲಿ ಸೇವೆ ಮಾಡಬೇಕಾಯಿತು. ತಪ್ಪಿತಸ್ಥರಾಗಿದ್ದವರು ಬೇರೆ ಯಾರು ಅಲ್ಲ, ಗೀಲ್ಯೆರ್ಮ ಚಿಕ್ಕವರಿದ್ದಾಗ ಆಧ್ಯಾತ್ಮಿಕ ಪ್ರಗತಿ ಮಾಡಲು ಸಹಾಯಮಾಡಿದ ಒಬ್ಬ ಹಿರಿಯರು. ಗೀಲ್ಯೆರ್ಮ ಅವರ ತೊಳಲಾಟ ಗಮನಿಸಿ: “ನಾನು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೆ. ರಾತ್ರಿಯೆಲ್ಲ ನಿದ್ರೆ ಬರುತ್ತಿರಲಿಲ್ಲ. ನನ್ನ ಭಾವನೆಗಳು ಆಧ್ಯಾತ್ಮಿಕ ದೃಷ್ಟಿಯನ್ನು ಮಂಜಾಗಿಸದ ರೀತಿಯಲ್ಲಿ ಈ ವಿಷಯವನ್ನು ನಿರ್ವಹಿಸುವುದು ಹೇಗೆಂಬ ವಿಚಾರವೇ ಮನಸ್ಸಿನಲ್ಲಿ ಸುಳಿದಾಡುತ್ತಿತ್ತು. ಹಲವಾರು ದಿನಗಳ ವರೆಗೆ ಬಿಡದೆ ಪ್ರಾರ್ಥನೆ ಮಾಡಿದೆ. ಬೈಬಲ್‌ ಪ್ರಕಾಶನಗಳಲ್ಲಿ ಮಾರ್ಗದರ್ಶನಕ್ಕಾಗಿ ಹುಡುಕಿದೆ.” ಅವರು ಹಾಗೆ ಮಾಡಿದ್ದು ಆ ಕ್ಲಿಷ್ಟಕರ ಸನ್ನಿವೇಶವನ್ನು ನಿರ್ವಹಿಸಲು ಧೈರ್ಯ ತುಂಬಿತು. ಅಲ್ಲದೆ, ತನ್ನ ಆ ತಪ್ಪಿತಸ್ಥ ಸಹೋದರನಿಗೆ ಆಧ್ಯಾತ್ಮಿಕ ಸಹಾಯ ನೀಡಲು ಸಾಧ್ಯಮಾಡಿತು.—1 ತಿಮೊ. 4:11, 12.

ಇಂಥ ಸಂದರ್ಭಗಳಲ್ಲಿ ಧೈರ್ಯದಿಂದ ನಿರ್ಣಾಯಕ ಹೆಜ್ಜೆ ತೆಗೆದುಕೊಳ್ಳುವ ಹಿರಿಯರು ಸಭೆಯಲ್ಲಿ ನಂಬಿಕೆ ಮತ್ತು ನಿಷ್ಠೆಯ ಅತ್ಯುತ್ತಮ ಮಾದರಿಯಾಗಿರುತ್ತಾರೆ. ಹೌದು ಕ್ರೈಸ್ತರೆಲ್ಲರು ಸಹ ಈ ಗುಣವನ್ನು ತೋರಿಸಬೇಕು. ಇತರರು ಗಂಭೀರ ತಪ್ಪು ಮಾಡಿರುವುದು ಗೊತ್ತಾದಾಗ ಅದನ್ನು ಹಿರಿಯರಿಗೆ ತಿಳಿಸುವ ಮೂಲಕ ಧೈರ್ಯ ತೋರಿಸಬೇಕು. ತಮ್ಮ ಸ್ನೇಹಿತರೋ ಸಂಬಂಧಿಕರೋ ಬಹಿಷ್ಕೃತರಾದಾಗ ಅವರೊಂದಿಗಿನ ಸಹವಾಸವನ್ನು ಕಡಿದುಹಾಕುವ ಮೂಲಕ ಯೆಹೋವನಿಗೆ ನಿಷ್ಠೆ ತೋರಿಸಬೇಕು.—1 ಕೊರಿಂ. 5:11-13.

ಒಳನೋಟ ಅನಾಹುತ ತಪ್ಪಿಸಿತು

ಫೀನೆಹಾಸನ ಧೈರ್ಯ ಯೌವನದ ಬಿಸಿರಕ್ತದ ಪರಿಣಾಮವಾಗಿರಲಿಲ್ಲ. ಇನ್ನೊಂದು ಸಂದರ್ಭದಲ್ಲಿ ಅವನು ವಿವೇಚನೆ ಜಾಣ್ಮೆ ತೋರಿಸುತ್ತಾ ಒಳನೋಟದಿಂದ ಕ್ರಿಯೆಗೈದದ್ದನ್ನು ಗಮನಿಸಿ. ಯೊರ್ದನ್‌ ಹೊಳೆಯ ತೀರಪ್ರದೇಶದಲ್ಲಿ ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆ ಕುಲದಲ್ಲಿ ಅರ್ಧ ಜನರು ಒಂದು ಯಜ್ಞವೇದಿಯನ್ನು ಕಟ್ಟಿದ್ದರು. ಸುದ್ದಿ ತಿಳಿದ ಇಸ್ರಾಯೇಲಿನ ಇತರ ಕುಲದವರು ಅದನ್ನು ಸುಳ್ಳು ಆರಾಧನೆಗಾಗಿ ಕಟ್ಟಿರಬಹುದೆಂದು ನೆನಸಿ ಯುದ್ಧಕ್ಕೆ ಸನ್ನದ್ಧರಾದರು.—ಯೆಹೋ. 22:11, 12.

ಫೀನೆಹಾಸ ಹೇಗೆ ಪ್ರತಿಕ್ರಿಯಿಸಿದನು? ಇಸ್ರಾಯೇಲಿನ ಗೋತ್ರಪ್ರಧಾನರೊಂದಿಗೆ ಹೋದ ಅವನು ವೇದಿಯನ್ನು ಕಟ್ಟಿದವರ ಜೊತೆ ಜಾಣ್ಮೆಯಿಂದ ಆ ವಿಷಯದ ಕುರಿತು ಚರ್ಚಿಸಿದನು. ಆಗ ತಪ್ಪಿತಸ್ಥ ಸ್ಥಾನದಲ್ಲಿದ್ದ ಕುಲಗಳವರು ತಾವು ಯೆಹೋವನಿಗೆ ನಂಬಿಗಸ್ತರಾಗಿರುವುದಕ್ಕೆ ಸಾಕ್ಷಿಯಾಗಿ ಅದನ್ನು ಕಟ್ಟಿರುವುದಾಗಿ ವಿವರಿಸಿದರು. ಹೀಗೆ ಒಂದು ದೊಡ್ಡ ಅನಾಹುತವೇ ತಪ್ಪಿತು.—ಯೆಹೋ. 22:13-34.

ಜೊತೆ ಕ್ರೈಸ್ತನೊಬ್ಬನ ಕುರಿತು ನಾವು ಯಾವುದೇ ದೂರು ಅಥವಾ ಕೆಟ್ಟದ್ದನ್ನೇನಾದರು ಕೇಳಿಸಿಕೊಳ್ಳುವಲ್ಲಿ ಫೀನೆಹಾಸನಂತೆ ಒಳನೋಟ ತೋರಿಸುವುದು ವಿವೇಕಪ್ರದ. ಇದು ಕೂಡಲೆ ಕೋಪಿಸಿಕೊಳ್ಳದಂತೆ ಅಥವಾ ದುಡುಕಿ ಮಾತಾಡದಂತೆ ತಡೆಯುತ್ತದೆ.—ಜ್ಞಾನೋ. 19:11.

ಫೀನೆಹಾಸನಂತೆ ಕ್ರಿಯೆಗೈಯಲು ಹಿರಿಯರಿಗೆ ಒಳನೋಟ ಹೇಗೆ ಸಹಾಯ ಮಾಡಬಲ್ಲದು? ಹತ್ತಕ್ಕಿಂತ ಹೆಚ್ಚು ವರ್ಷಗಳಿಂದ ಹಿರಿಯರಾಗಿ ಸೇವೆಸಲ್ಲಿಸುತ್ತಿರುವ ಹೈಮೇ ಏನನ್ನುತ್ತಾರೆ ಕೇಳಿ: “ಇನ್ನೊಬ್ಬರೊಂದಿಗಿರುವ ಮನಸ್ತಾಪಗಳ ಬಗ್ಗೆ ಪ್ರಚಾರಕರು ನನ್ನ ಹತ್ತಿರ ತಿಳಿಸುವಾಗ ತಕ್ಷಣ ನಾನು ಯೆಹೋವನಿಗೆ ಪ್ರಾರ್ಥಿಸುತ್ತೇನೆ. ಪಕ್ಷಪಾತ ಮಾಡದೆ ಅವರಿಗೆ ಬೈಬಲ್‌ ಮಾರ್ಗದರ್ಶನ ನೀಡಲು ಸಹಾಯ ಕೇಳುತ್ತೇನೆ. ಒಮ್ಮೆ ಸಹೋದರಿಯೊಬ್ಬಳು ಇನ್ನೊಂದು ಸಭೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಹೋದರನೊಂದಿಗೆ ತನಗಿರುವ ಮನಸ್ತಾಪವನ್ನು ಹೇಳಿಕೊಂಡಳು. ಆ ಸಹೋದರ ಆಕೆಯೊಂದಿಗೆ ಒರಟಾಗಿ ಮಾತಾಡಿದನಂತೆ. ಆತ ನನ್ನ ಸ್ನೇಹಿತ. ಹಾಗಾಗಿ ನಾನೇ ಅವನ ಬಳಿ ಮಾತಾಡಬಹುದಿತ್ತು. ಆದರೆ ನಾನು ಆ ಸಹೋದರಿಯೊಂದಿಗೆ ಹಲವಾರು ಬೈಬಲ್‌ ಮೂಲತತ್ವಗಳನ್ನು ಚರ್ಚಿಸಿದೆ. ಆಗ ಆಕೆಯೇ ಆ ಸಹೋದರನೊಂದಿಗೆ ನೇರವಾಗಿ ಮಾತಾಡಲು ಒಪ್ಪಿಕೊಂಡಳು. (ಮತ್ತಾ. 5:23, 24) ವಿಷಯವೇನೂ ಆ ಕೂಡಲೆ ಇತ್ಯರ್ಥವಾಗಲಿಲ್ಲ. ಆಗ ನಾನು ಇನ್ನಿತರ ಬೈಬಲ್‌ ಮೂಲತತ್ವಗಳನ್ನು ಪರಿಗಣಿಸುವಂತೆ ಪ್ರೋತ್ಸಾಹಿಸಿದೆ. ಆಕೆ ಮತ್ತೊಮ್ಮೆ ಪ್ರಾರ್ಥಿಸಿ ಆ ಸಹೋದರನನ್ನು ಕ್ಷಮಿಸಲು ಮನಸ್ಸು ಮಾಡಿದಳು.”

ಫಲಿತಾಂಶ? “ಕೆಲವು ತಿಂಗಳ ಬಳಿಕ ಆ ಸಹೋದರಿ ಮತ್ತೆ ನನ್ನ ಬಳಿ ಬಂದಳು. ತಾನು ಹಾಗೆ ಮಾತಾಡಬಾರದಿತ್ತೆಂದು ಆ ಸಹೋದರನು ಒಪ್ಪಿದ್ದಲ್ಲದೆ ವಿಷಾದವನ್ನೂ ವ್ಯಕ್ತಪಡಿಸಿದನೆಂದು ಹೇಳಿದಳು. ಆಕೆಯೊಂದಿಗೆ ಸೇವೆಮಾಡಲು ಏರ್ಪಡಿಸಿ ಆಕೆಗೆ ಕೃತಜ್ಞತೆ ಹೇಳಿದನು ಕೂಡ. ವಿಷಯ ಅಲ್ಲಿಗೆ ಇತ್ಯರ್ಥವಾಯಿತು. ಸದ್ಯ ನಾನೇನಾದರೂ ಮಧ್ಯೆ ಮೂಗು ತೂರಿಸಿದ್ದರೆ ಸಂಗತಿ ಹದಗೆಡುತ್ತಿತ್ತೇನೋ. ನಾನು ಮುಖದಾಕ್ಷಿಣ್ಯ ತೋರಿಸುತ್ತಿರುವಂತೆ ಅವರಿಗೆ ಅನಿಸಬಹುದಿತ್ತು.” ಬೈಬಲ್‌ ನೀಡುವ ಬುದ್ಧಿವಾದವೂ ಅದೇ: “ದುಡುಕಿ ನೆರೆಯವನ ಮೇಲೆ ವ್ಯಾಜ್ಯಕ್ಕೆ ಹೋಗಬೇಡ.” (ಜ್ಞಾನೋ. 25:8) ಮನಸ್ತಾಪವುಳ್ಳ ವ್ಯಕ್ತಿಗಳು ಪರಸ್ಪರ ಶಾಂತಿಸಂಬಂಧವನ್ನು ಕಾಪಾಡಿಕೊಳ್ಳಲು ಬೈಬಲ್‌ ಮೂಲತತ್ವಗಳನ್ನು ಅನ್ವಯಿಸುವಂತೆ ಒಳನೋಟವುಳ್ಳ ಹಿರಿಯರು ಪ್ರೋತ್ಸಾಹಿಸುವರು.

ಯೆಹೋವನಲ್ಲಿ ಭರವಸವಿಟ್ಟನು

ದೇವರ ಸ್ವಕೀಯ ಜನರಿಗೆ ಯಾಜಕನಾಗಿ ಸೇವೆಮಾಡುವ ಸುಯೋಗ ಫೀನೆಹಾಸನಿಗಿತ್ತು. ಯುವ ಪ್ರಾಯದಲ್ಲೇ ಅವನಿಗೆ ಅಸಾಧಾರಣ ಧೈರ್ಯ, ಒಳನೋಟ ಇತ್ತೆಂದು ನಾವು ನೋಡಿದೆವು. ಹಾಗಿದ್ದರೂ ಅವನು ಸವಾಲುಗಳನ್ನು ಯಶಸ್ವಿಕರವಾಗಿ ಜಯಿಸಿದ್ದು ಯೆಹೋವನಲ್ಲಿ ಭರವಸವಿಟ್ಟದ್ದರಿಂದಲೇ.

ಒಮ್ಮೆ ಏನಾಯಿತೆಂದರೆ, ಲೇವಿಯನೊಬ್ಬನ ಉಪಪತ್ನಿಯನ್ನು ಬೆನ್ಯಾಮೀನ್ಯರ ಊರಿನ ಗಿಬೆಯದ ಜನರು ಮಾನಭಂಗಪಡಿಸಿದರು. ಆಕೆ ಸತ್ತಳು. ಈ ಹೃದಯವಿದ್ರಾವಕ ಸುದ್ದಿ ತಿಳಿದಾಗ ಬೇರೆ ಕುಲಗಳವರು ಬೆನ್ಯಾಮೀನ್ಯರ ವಿರುದ್ಧ ಯುದ್ಧಕ್ಕೆ ಹೋಗಲು ಸಿದ್ಧರಾದರು. (ನ್ಯಾಯ. 20:1-11) ಯೆಹೋವನಿಗೆ ಪ್ರಾರ್ಥಿಸಿಯೇ ಯುದ್ಧಕ್ಕೆ ಹೋದರು. ಆದರೆ ಎರಡು ಬಾರಿ ಸೋಲು, ತುಂಬ ನಷ್ಟ ಅನುಭವಿಸಿದರು. (ನ್ಯಾಯ. 20:14-25) ತಮ್ಮ ಪ್ರಾರ್ಥನೆಗಳು ವ್ಯರ್ಥವಾದವೆಂಬ ತೀರ್ಮಾನಕ್ಕೆ ಅವರು ಬಂದರೋ? ಅಥವಾ ಆ ದುಷ್ಕೃತ್ಯಕ್ಕೆ ಅವರು ಪ್ರತಿಕ್ರಿಯಿಸಿದ ಕುರಿತು ಯೆಹೋವನಿಗೆ ಆಸಕ್ತಿಯಿರಲಿಲ್ಲವೋ?

ಫೀನೆಹಾಸ ಯೆಹೋವನಲ್ಲಿ ಅಚಲ ಭರವಸೆಯಿಂದ ಮತ್ತೊಮ್ಮೆ ಕಾರ್ಯೋನ್ಮುಖನಾದನು. ಈಗ ಮಹಾ ಯಾಜಕನಾಗಿದ್ದ ಅವನು, “ನಾವು ನಮ್ಮ ಬಂಧುಗಳಾದ ಬೆನ್ಯಾಮೀನ್ಯರೊಡನೆ ಯುದ್ಧಕ್ಕೆ ಹೋಗಬೇಕೋ ಬೇಡವೋ” ಎಂದು ಯೆಹೋವನಲ್ಲಿ ವಿಚಾರಿಸಿದನು. ಯೆಹೋವನು ಪ್ರತ್ಯುತ್ತರವಾಗಿ ಬೆನ್ಯಾಮೀನ್ಯರನ್ನು ಇಸ್ರಾಯೇಲ್ಯರ ಕೈಗೊಪ್ಪಿಸಿದನು. ಅವರು ಗಿಬೆಯ ಊರನ್ನು ಸುಟ್ಟು ನೆಲಸಮ ಮಾಡಿದರು.—ನ್ಯಾಯ. 20:27-48.

ಇದರಲ್ಲಿರುವ ಪಾಠ? ಕೆಲವೊಮ್ಮೆ ಹಿರಿಯರು ಶ್ರದ್ಧೆಯಿಂದ ಪ್ರಾರ್ಥಿಸಿ ಪ್ರಯತ್ನಿಸಿದರೂ ಸಭೆಯಲ್ಲಿ ಸಮಸ್ಯೆಗಳು ಹಾಗೇ ಮುಂದುವರಿಯಬಹುದು. ಹೀಗಾಗುವಲ್ಲಿ ಹಿರಿಯರು ಯೇಸುವಿನ ಈ ಮಾತುಗಳನ್ನು ನೆನಪಿಗೆ ತಂದುಕೊಳ್ಳಬೇಕು: “ಕೇಳುತ್ತಾ [ಅಥವಾ ಪ್ರಾರ್ಥಿಸುತ್ತಾ] ಇರಿ, ಅದು ನಿಮಗೆ ಕೊಡಲ್ಪಡುವುದು; ಹುಡುಕುತ್ತಾ ಇರಿ, ನೀವು ಕಂಡುಕೊಳ್ಳುವಿರಿ; ತಟ್ಟುತ್ತಾ ಇರಿ, ಅದು ನಿಮಗೆ ತೆರೆಯಲ್ಪಡುವುದು.” (ಲೂಕ 11:9) ಪ್ರಾರ್ಥನೆಗೆ ಉತ್ತರ ಸಿಗುತ್ತಿಲ್ಲವೆಂದು ತೋರುವುದಾದರೂ ಯೆಹೋವನು ತಕ್ಕ ಸಮಯದಲ್ಲಿ ಸಹಾಯ ಮಾಡೇ ಮಾಡುವನೆಂದು ಮೇಲ್ವಿಚಾರಕರು ಭರವಸೆ ಇಡಸಾಧ್ಯವಿದೆ.

ಐರ್ಲಂಡ್‌ನ ಸಭೆಯೊಂದರ ಉದಾಹರಣೆ ಪರಿಗಣಿಸಿ. ಆ ಸಭೆಯವರಿಗೆ ಒಂದು ರಾಜ್ಯ ಸಭಾಗೃಹದ ಅಗತ್ಯ ಬಹಳವಾಗಿತ್ತು. ಆದರೆ ಕಟ್ಟಲು ಅಲ್ಲಿನ ಯೋಜನಾ ಅಧಿಕಾರಿ ಅನುಮತಿಸಲಿಲ್ಲ. ಸಹೋದರರ ಎಲ್ಲ ರೀತಿಯ ಮನವಿಗಳನ್ನು ತಳ್ಳಿಹಾಕಿದರು. ಹಾಗಾಗಿ ಸಹೋದರರಿಗಿದ್ದ ಒಂದೇ ದಾರಿಯೆಂದರೆ ಆ ದೇಶದ ಮುಖ್ಯ ಯೋಜನಾ ಅಧಿಕಾರಿ ಬಳಿ ಹೋಗಿ ಅನುಮತಿ ಕೇಳುವುದಾಗಿತ್ತು. ಫೀನೆಹಾಸನ ಸಮಯದಲ್ಲಾದಂತೆ ಪ್ರಾರ್ಥನೆ ಅವರಿಗೆ ಸಹಾಯಮಾಡಿತೋ?

ಹಿರಿಯರೊಬ್ಬರ ಉತ್ತರವನ್ನು ಕೇಳಿ: “ನಾವು ಮುಖ್ಯ ಯೋಜನಾ ಕಛೇರಿಯಿರುವ ಸ್ಥಳಕ್ಕೆ ಪ್ರಯಾಣ ಕೈಗೊಳ್ಳುವ ಮುನ್ನ ಕಟ್ಟಾಸಕ್ತಿಯಿಂದ ಪ್ರಾರ್ಥಿಸಿದೆವು. ಆ ಮುಖ್ಯ ಅಧಿಕಾರಿಯನ್ನು ಕಾಣಲು ವಾರಗಳೇ ಕಾಯಬೇಕಾಗುತ್ತದೆಂದು ನಮಗೆ ಹೇಳಲಾಗಿತ್ತು. ಆದರೆ ಅವರನ್ನು ಭೇಟಿಯಾಗಲು ನಮಗೆ ಕೇವಲ ಐದು ನಿಮಿಷಗಳ ಅವಕಾಶ ಸಿಕ್ಕಿತು. ಆ ಅಧಿಕಾರಿ ನಾವು ಸಿದ್ಧಪಡಿಸಿದ್ದ ಹೊಸ ನಕಾಶೆ ನೋಡಿದ ಕೂಡಲೆ ಕೆಲಸ ಮುಂದುವರಿಸಲು ಅನುಮತಿ ನೀಡಿದರು. ಅಲ್ಲಿಂದೀಚೆ ಸ್ಥಳೀಯ ಯೋಜನಾ ಅಧಿಕಾರಿ ಕೂಡ ನಮಗೆ ಬೇಕಾದ ಸಹಾಯ ಮಾಡಿದರು. ಈ ಅನುಭವದಿಂದ ಪ್ರಾರ್ಥನೆಗಿರುವ ಬಲವನ್ನು ನಾವು ಕಣ್ಣಾರೆ ಕಂಡೆವು.” ಹೌದು, ಯೆಹೋವನು ತನ್ನಲ್ಲಿ ಭರವಸೆಯಿಡುವ ಹಿರಿಯರ ಯಥಾರ್ಥ ಪ್ರಾರ್ಥನೆಗಳನ್ನು ಖಂಡಿತ ಉತ್ತರಿಸುವನು.

ಪ್ರಾಚೀನ ಇಸ್ರಾಯೇಲಿನಲ್ಲಿ ಫೀನೆಹಾಸನಿಗೆ ಭಾರಿ ಜವಾಬ್ದಾರಿಯಿತ್ತು. ಅದನ್ನು ನಿರ್ವಹಿಸುವಾಗ ಎದುರಾದ ಸವಾಲುಗಳನ್ನು ಅವನು ಧೈರ್ಯ, ಒಳನೋಟ ಹಾಗೂ ದೇವರಲ್ಲಿನ ಭರವಸೆಯಿಂದ ಯಶಸ್ವಿಯಾಗಿ ನಿಭಾಯಿಸಿದನು. ದೇವರ ಸಭೆಯನ್ನು ಹೀಗೆ ಶ್ರದ್ಧೆ, ಕಾಳಜಿಯಿಂದ ನೋಡಿಕೊಂಡ ಅವನು ಯೆಹೋವನ ಅನುಗ್ರಹಕ್ಕೆ ಪಾತ್ರನಾದನು. ಸುಮಾರು 1,000 ವರ್ಷಗಳ ಬಳಿಕ ಅವನ ಕುರಿತು ಎಜ್ರನು ದೇವಪ್ರೇರಣೆಯಿಂದ ಹೀಗೆ ಬರೆದನು: “ಆಗ ಎಲ್ಲಾಜಾರನ ಮಗನಾದ ಫೀನೆಹಾಸನು ಅವರ ನಾಯಕನಾಗಿದ್ದನು; ಯೆಹೋವನು ಇವನ ಸಂಗಡ ಇದ್ದನು.” (1 ಪೂರ್ವ. 9:20) ಈ ಮಾತುಗಳು, ಇಂದು ದೇವಜನರ ಮಧ್ಯೆ ಮುಂದಾಳುತ್ವ ವಹಿಸುವವರ ವಿಷಯದಲ್ಲೂ ನಿಜವಾಗಲಿ. ಮಾತ್ರವಲ್ಲ ನಿಷ್ಠೆಯಿಂದ ದೇವರಿಗೆ ಸೇವೆಸಲ್ಲಿಸುವ ಪ್ರತಿಯೊಬ್ಬ ಕ್ರೈಸ್ತನ ವಿಷಯದಲ್ಲೂ ನಿಜವಾಗಲಿ.