ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚಿಕ್ಕ ಮಕ್ಕಳು ದೀಕ್ಷಾಸ್ನಾನ ಹೊಂದಬಹುದೋ?

ಚಿಕ್ಕ ಮಕ್ಕಳು ದೀಕ್ಷಾಸ್ನಾನ ಹೊಂದಬಹುದೋ?

ಚಿಕ್ಕ ಮಕ್ಕಳು ದೀಕ್ಷಾಸ್ನಾನ ಹೊಂದಬಹುದೋ?

“ನನ್ನ ಮಗಳು ಈಗ ಯೆಹೋವನ ಸೇವಕರಲ್ಲಿ ಒಬ್ಬಳಾಗಿರುವುದು ನನಗೆ ಎಲ್ಲಿಲ್ಲದ ಸಂತೋಷವನ್ನು ತಂದಿದೆ. ಅವಳಿಗೂ ಅಷ್ಟೇ” ಎನ್ನುತ್ತಾರೆ ಫಿಲಿಪೈನ್ಸ್‌ನಲ್ಲಿರುವ ಕ್ರೈಸ್ತ ತಂದೆಯಾದ ಕಾರ್ಲೋಸ್‌. * ಗ್ರೀಸ್‌ನಲ್ಲಿರುವ ಸಹೋದರರೊಬ್ಬರು ಬರೆದದ್ದು: “ನಮ್ಮ ಮೂವರು ಮಕ್ಕಳು ಹದಿವಯಸ್ಸಿನಲ್ಲೇ ದೀಕ್ಷಾಸ್ನಾನ ಹೊಂದಿ ಯೆಹೋವನ ಸಾಕ್ಷಿಗಳಾದದ್ದು ನನಗೂ ನನ್ನ ಹೆಂಡತಿಗೂ ಹೆಚ್ಚು ಸಂತೋಷ ತಂದಿದೆ. ಅವರು ಆಧ್ಯಾತ್ಮಿಕವಾಗಿ ಪ್ರಗತಿಮಾಡುತ್ತಿದ್ದಾರೆ ಹಾಗೂ ಯೆಹೋವನ ಸೇವೆಯಲ್ಲಿ ಆನಂದಿಸುತ್ತಿದ್ದಾರೆ.”

ಮಕ್ಕಳು ದೀಕ್ಷಾಸ್ನಾನ ಹೊಂದುವಾಗ ಕ್ರೈಸ್ತ ಹೆತ್ತವರಿಗೆ ತುಂಬ ಆನಂದವಾಗುತ್ತದೆ ನಿಜ. ಆದರೆ ಕೆಲವೊಮ್ಮೆ ಆನಂದದ ಜೊತೆಗೆ ಆತಂಕವೂ ಶುರುವಾಗುತ್ತದೆ. ಒಬ್ಬಾಕೆ ತಾಯಿ ಹೇಳುವುದು: “ನನಗೆ ಎಷ್ಟು ಸಂತೋಷವಾಯಿತೋ ಅಷ್ಟೇ ಕಳವಳವೂ ಶುರುವಾಯಿತು.” ಏಕೆ ಈ ಮಿಳಿತಭಾವ? “ಏಕೆಂದರೆ ನನ್ನ ಮಗ ಈಗ ಯೆಹೋವನಿಗೆ ಉತ್ತರವಾದಿಯಾಗಿದ್ದಾನೆ” ಎನ್ನುತ್ತಾಳಾಕೆ.

ದೀಕ್ಷಾಸ್ನಾನ ಹೊಂದಿದ ಸಾಕ್ಷಿಯಾಗಿ ಯೆಹೋವನಿಗೆ ಸೇವೆಸಲ್ಲಿಸಬೇಕೆಂಬ ಗುರಿ ಎಲ್ಲ ಮಕ್ಕಳಿಗೆ ಇದ್ದೇ ಇರಬೇಕು. ಆದಾಗ್ಯೂ ದೇವಭಕ್ತ ಹೆತ್ತವರು, ‘ನನ್ನ ಮಗ ಒಳ್ಳೆಯ ಪ್ರಗತಿ ಮಾಡಿದ್ದಾನೇನೋ ನಿಜ. ಆದರೆ ಅನೈತಿಕ ಒತ್ತಡವನ್ನು ಪ್ರತಿರೋಧಿಸಿ ಯೆಹೋವನ ಮುಂದೆ ಶುದ್ಧನಾಗಿ ಉಳಿಯುವಷ್ಟರ ಮಟ್ಟಿಗೆ ದೃಢನಾಗಿದ್ದಾನೋ?’ ಎಂದು ಚಿಂತಿಸಬಹುದು. ಇತರರಿಗೆ, ‘ನನ್ನ ಮಗನು ಪ್ರಾಪಂಚಿಕತೆಯ ಪ್ರಲೋಭನೆಗಳ ಎದುರಲ್ಲೂ ಯೆಹೋವನ ಸೇವೆಯನ್ನು ಹರ್ಷದಿಂದಲೂ ಹುರುಪಿನಿಂದಲೂ ಮಾಡುತ್ತಾ ಮುಂದುವರಿಯುವನೋ?’ ಎಂಬ ಪ್ರಶ್ನೆ ಮನದಲ್ಲಿ ಕಾಡಬಹುದು. ಹಾಗಾದರೆ ತಮ್ಮ ಮಕ್ಕಳು ದೀಕ್ಷಾಸ್ನಾನಕ್ಕೆ ಸಿದ್ಧರಾಗಿದ್ದಾರೋ ಎನ್ನುವುದನ್ನು ನಿರ್ಧರಿಸಲು ಹೆತ್ತವರಿಗೆ ಬೈಬಲ್‌ ಯಾವ ಮಾರ್ಗದರ್ಶನ ನೀಡುತ್ತದೆ?

ಪ್ರಮುಖ ಆವಶ್ಯಕತೆ—ಅವರು ಶಿಷ್ಯರಾಗಿರಬೇಕು

ಇಂತಿಷ್ಟೇ ವಯಸ್ಸಿನಲ್ಲಿ ದೀಕ್ಷಾಸ್ನಾನ ಹೊಂದಬೇಕೆಂದು ದೇವರ ವಾಕ್ಯ ತಿಳಿಸುವುದಿಲ್ಲ. ಆದರೆ ದೀಕ್ಷಾಸ್ನಾನ ಹೊಂದುವವರಿಗೆ ಇರಬೇಕಾದ ಅರ್ಹತೆಗಳನ್ನು ಅದು ವಿವರಿಸುತ್ತದೆ. ಯೇಸು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದ್ದು: “ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ . . . ದೀಕ್ಷಾಸ್ನಾನ ಮಾಡಿಸಿ.” (ಮತ್ತಾ. 28:19) ಹಾಗಾದರೆ ಯಾರು ಈಗಾಗಲೇ ಕ್ರಿಸ್ತನ ಶಿಷ್ಯರಾಗಿದ್ದಾರೋ ಅವರು ಮಾತ್ರವೇ ದೀಕ್ಷಾಸ್ನಾನ ಹೊಂದಲು ಸಾಧ್ಯ.

ಶಿಷ್ಯರು ಅಂದರೆ ಯಾರು? “ಕ್ರಿಸ್ತನ ಭೋದನೆಗಳನ್ನು ನಂಬುವುದು ಮಾತ್ರವಲ್ಲ ಅವುಗಳನ್ನು ಯಾರು ನಿಕಟವಾಗಿ ಅನುಸರಿಸುತ್ತಾರೋ ಮುಖ್ಯವಾಗಿ ಅವರಿಗೆ ಈ ಪದ ಅನ್ವಯಿಸುತ್ತದೆ” ಎಂದು ಇನ್‌ಸೈಟ್‌ ಆನ್‌ ದ ಸ್ಕ್ರಿಪ್ಚರ್ಸ್‌ ವಿವರಿಸುತ್ತದೆ. ಚಿಕ್ಕ ವಯಸ್ಸಿನ ಮಕ್ಕಳು ಕ್ರಿಸ್ತನ ನಿಜ ಶಿಷ್ಯರಾಗಲು ಸಾಧ್ಯವೋ? ಲ್ಯಾಟಿನ್‌ ಅಮೆರಿಕದಲ್ಲಿ 40ಕ್ಕೂ ಹೆಚ್ಚು ವರ್ಷಗಳಿಂದ ಮಿಷನೆರಿಯಾಗಿ ಸೇವೆಸಲ್ಲಿಸುತ್ತಿರುವ ಸಹೋದರಿಯೊಬ್ಬಳು ತನ್ನ ಹಾಗೂ ತನ್ನ ಇಬ್ಬರು ಸಹೋದರಿಯರ ಬಗ್ಗೆ ಹೀಗೆ ಬರೆಯುತ್ತಾಳೆ: “ನಾವು ಚಿಕ್ಕ ಪ್ರಾಯದಲ್ಲೇ ದೇವರಿಗೆ ಸಮರ್ಪಣೆ ಮಾಡಿದೆವು. ಯೆಹೋವನ ಸೇವೆ ಮಾಡಬೇಕು, ಪರದೈಸಿನಲ್ಲಿ ಜೀವಿಸಬೇಕು ಎನ್ನುವ ತಿಳುವಳಿಕೆ ನಮಗಿತ್ತು. ಯೌವನದ ಪ್ರಲೋಭನೆಗಳನ್ನು ಎದುರಿಸಲು ಸಮರ್ಪಣೆ ನಮಗೆ ಸಹಾಯಮಾಡಿತು. ಚಿಕ್ಕ ಪ್ರಾಯದಲ್ಲೇ ಸಮರ್ಪಣೆ ಮಾಡಿದ್ದಕ್ಕಾಗಿ ನಾವೆಂದೂ ವಿಷಾದಿಸುವುದಿಲ್ಲ.”

ನಿಮ್ಮ ಮಕ್ಕಳು ಕ್ರಿಸ್ತನ ಶಿಷ್ಯರಾಗಿದ್ದಾರೋ ಇಲ್ಲವೋ ಎಂಬದನ್ನು ನೀವು ಹೇಗೆ ತಿಳಿಯಬಲ್ಲಿರಿ? “ಒಬ್ಬ ಹುಡುಗನಾದರೂ ಶುದ್ಧವೂ ಸತ್ಯವೂ ಆದ ನಡತೆಯಿಂದಲೇ ತನ್ನ ಗುಣವನ್ನು ತೋರ್ಪಡಿಸಿಕೊಳ್ಳುವನು” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋ. 20:11) ಶಿಷ್ಯನಾಗಿ ತನ್ನ ‘ಅಭಿವೃದ್ಧಿಯನ್ನು ಪ್ರಕಟಪಡಿಸುವ’ ಯುವಕನ ನಡತೆ ಹೇಗಿರುತ್ತದೆ ಎಂಬದನ್ನು ಪರಿಗಣಿಸೋಣ.—1 ತಿಮೊ. 4:15.

ಶಿಷ್ಯತನದ ರುಜುವಾತು

ನಿಮ್ಮ ಮಗ ನಿಮಗೆ ವಿಧೇಯತೆ ತೋರಿಸುತ್ತಾನೋ? (ಕೊಲೊ. 3:20) ನೀವು ಕೊಡುವ ಚಿಕ್ಕಪುಟ್ಟ ಕೆಲಸಗಳನ್ನು ಅವನು ಮಾಡುತ್ತಾನೋ? 12ರ ಪ್ರಾಯದ ಯೇಸುವಿನ ಬಗ್ಗೆ ಬೈಬಲ್‌ ತಿಳಿಸುವುದು: “ಅವನು . . . [ಹೆತ್ತವರಿಗೆ] ಅಧೀನನಾಗಿ ಮುಂದುವರಿದನು.” (ಲೂಕ 2:51) ಇಂದು ಯಾವ ಮಕ್ಕಳೂ ತಮ್ಮ ಹೆತ್ತವರಿಗೆ ಪರಿಪೂರ್ಣವಾಗಿ ವಿಧೇಯತೆ ತೋರಿಸಲಾರರು ನಿಜ. ಆದರೆ ನಿಜ ಕ್ರೈಸ್ತರು ‘ಯೇಸುವಿನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸಬೇಕು.’ ಹಾಗಾದರೆ ದೀಕ್ಷಾಸ್ನಾನ ಹೊಂದಲು ಬಯಸುವ ಮಕ್ಕಳು ಹೆತ್ತವರಿಗೆ ವಿಧೇಯತೆ ತೋರಿಸುವವರಾಗಿರಬೇಕು.—1 ಪೇತ್ರ 2:21.

ಈ ಮುಂದಿನ ಪ್ರಶ್ನೆಗಳನ್ನು ಪರಿಗಣಿಸಿ: ನಿಮ್ಮ ಮಗನು ಶುಶ್ರೂಷೆಯಲ್ಲಿ ಪೂರ್ಣವಾಗಿ ಭಾಗವಹಿಸುವ ಮೂಲಕ ‘ಮೊದಲು ರಾಜ್ಯವನ್ನು ಹುಡುಕುತ್ತಾ ಇದ್ದಾನೋ?’ (ಮತ್ತಾ. 6:33) ಅವನು ಸ್ವಇಚ್ಛೆಯಿಂದ ಸುವಾರ್ತೆ ಸಾರುತ್ತಾನೋ ಅಥವಾ ಕ್ಷೇತ್ರ ಸೇವೆಗೆ ಹೋಗಲು ಹಾಗೂ ಮನೆಯವರೊಂದಿಗೆ ಮಾತಾಡಲು ನೀವು ಅವನಿಗೆ ಬಲವಂತ ಮಾಡಬೇಕೋ? ದೀಕ್ಷಾಸ್ನಾನ ಪಡೆದಿಲ್ಲದ ಪ್ರಚಾರಕನಾಗಿ ಅವನಿಗೆ ತನ್ನ ಜವಾಬ್ದಾರಿಗಳು ಏನೆಂದು ತಿಳಿದಿವೆಯೋ? ಟೆರಿಟೊರಿಯಲ್ಲಿ ತಾನು ಭೇಟಿಯಾದ ಆಸಕ್ತ ವ್ಯಕ್ತಿಗಳನ್ನು ಪುನಃ ಸಂದರ್ಶಿಸಲು ಬಯಸುತ್ತಾನೋ? ತಾನು ಯೆಹೋವನ ಸಾಕ್ಷಿಯೆಂದು ಸಹಪಾಠಿಗಳಿಗೂ ಅಧ್ಯಾಪಕರಿಗೂ ತಿಳಿಸುತ್ತಾನೋ?

ಸಭಾ ಕೂಟಗಳಿಗೆ ಹಾಜರಾಗುವುದನ್ನು ಪ್ರಾಮುಖ್ಯವೆಂದೆಣಿಸುತ್ತಾನೋ? (ಕೀರ್ತ. 122:1) ಕಾವಲಿನಬುರುಜು ಅಧ್ಯಯನದಲ್ಲಿ ಮತ್ತು ಸಭಾ ಬೈಬಲ್‌ ಅಧ್ಯಯನದಲ್ಲಿ ಉತ್ತರ ಕೊಡುವುದರಲ್ಲಿ ಅವನು ಆನಂದಿಸುತ್ತಾನೋ? ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾನೋ?—ಇಬ್ರಿ. 10:24, 25.

ಶಾಲೆಯಲ್ಲಾಗಲಿ ಇತರೆಡೆಗಳಲ್ಲಾಗಲಿ ದುಸ್ಸಹವಾಸ ಮಾಡದಿರುವ ಮೂಲಕ ನಿಮ್ಮ ಮಗ ನೈತಿಕವಾಗಿ ಶುದ್ಧನಾಗಿ ಉಳಿಯಲು ಪ್ರಯತ್ನಿಸುತ್ತಾನೋ? (ಜ್ಞಾನೋ. 13:20) ಅವನು ಯಾವ ರೀತಿಯ ಸಂಗೀತ, ಚಲನಚಿತ್ರ, ಟಿ.ವಿ. ಕಾರ್ಯಕ್ರಮ ಮತ್ತು ವಿಡಿಯೋ ಗೇಮ್‌ಗಳನ್ನು ಇಷ್ಟಪಡುತ್ತಾನೆ? ಇಂಟರ್‌ನೆಟ್‌ ಬಳಕೆಯ ಕುರಿತೇನು? ಅವನು ಬೈಬಲ್‌ ಮಟ್ಟಗಳಿಗೆ ಹೊಂದಿಕೆಯಲ್ಲಿ ಜೀವಿಸಲು ಇಷ್ಟಪಡುತ್ತಾನೆಂಬದು ಅವನ ನಡೆನುಡಿಗಳಲ್ಲಿ ತೋರಿಬರುತ್ತದೋ?

ನಿಮ್ಮ ಮಗನು ಬೈಬಲನ್ನು ಎಷ್ಟರಮಟ್ಟಿಗೆ ಅರ್ಥಮಾಡಿಕೊಂಡಿದ್ದಾನೆ? ಕುಟುಂಬ ಆರಾಧನೆಯ ಸಂಜೆಯಲ್ಲಿ ಕಲಿತ ವಿಷಯಗಳನ್ನು ಸ್ವಂತ ಮಾತುಗಳಲ್ಲಿ ಅವನು ಹೇಳಶಕ್ತನೋ? ಬೈಬಲಿನ ಮೂಲಭೂತ ಸತ್ಯಗಳನ್ನು ವಿವರಿಸಬಲ್ಲನೋ? (ಜ್ಞಾನೋ. 2:6-9) ಬೈಬಲ್‌ ವಾಚನ ಹಾಗೂ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ವರ್ಗದಿಂದ ಬರುವ ಪ್ರಕಾಶನಗಳ ಅಧ್ಯಯನದಲ್ಲಿ ಅವನಿಗೆ ಆಸಕ್ತಿಯಿದೆಯೋ? (ಮತ್ತಾ. 24:45) ಬೈಬಲ್‌ ವಚನಗಳಿಗೆ ಹಾಗೂ ಬೋಧನೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳುತ್ತಾನೋ?

ಈ ಮೇಲಿನ ಪ್ರಶ್ನೆಗಳು ನಿಮ್ಮ ಮಕ್ಕಳ ಆಧ್ಯಾತ್ಮಿಕ ಪ್ರಗತಿಯನ್ನು ಅಳೆಯಲು ಸಹಾಯಮಾಡುತ್ತವೆ. ಅವುಗಳನ್ನು ಪರಿಗಣಿಸುವಲ್ಲಿ, ನಿಮ್ಮ ಮಕ್ಕಳು ದೀಕ್ಷಾಸ್ನಾನ ಪಡೆಯಲು ಅರ್ಹರಾಗಲಿಕ್ಕಾಗಿ ಇನ್ನೂ ಯಾವೆಲ್ಲ ವಿಷಯಗಳಲ್ಲಿ ಪ್ರಗತಿಮಾಡಬೇಕಿದೆ ಎನ್ನುವುದನ್ನು ತಿಳಿದುಕೊಳ್ಳುವಿರಿ. ಒಂದುವೇಳೆ ಅವರ ಜೀವನ ರೀತಿಯು ಅವರು ಶಿಷ್ಯರಾಗಿದ್ದಾರೆಂಬ ರುಜುವಾತು ಕೊಡುವಲ್ಲಿ ಮತ್ತು ಅವರು ಈಗಾಗಲೇ ತಮ್ಮ ಜೀವನವನ್ನು ದೇವರಿಗೆ ಸಮರ್ಪಿಸಿರುವಲ್ಲಿ ದೀಕ್ಷಾಸ್ನಾನ ಪಡೆಯಲು ಅವರು ಅರ್ಹರೆಂಬ ತೀರ್ಮಾನಕ್ಕೆ ನೀವು ಬರಬಲ್ಲಿರಿ.

ಮಕ್ಕಳೂ ಯೆಹೋವನನ್ನು ಸ್ತುತಿಸಸಾಧ್ಯ!

ದೇವರ ಸೇವಕರಲ್ಲಿ ಅನೇಕರು ಹದಿವಯಸ್ಕರಾಗಿದ್ದಾಗಲೇ ಅಥವಾ ಅದಕ್ಕಿಂತ ಚಿಕ್ಕ ವಯಸ್ಸಿನಲ್ಲೇ ನಂಬಿಗಸ್ತಿಕೆ ಹಾಗೂ ನಿಷ್ಠೆಯನ್ನು ತೋರಿಸಿದ್ದಾರೆ. ಯೋಸೇಫ, ಸಮುವೇಲ, ಯೋಷೀಯ ಮತ್ತು ಯೇಸು ಅವರಲ್ಲಿ ಕೆಲವರು. (ಆದಿ. 37:2; 39:1-3; 1 ಸಮು. 1:24-28; 2:18-20; 2 ಪೂರ್ವ. 34:1-3; ಲೂಕ 2:42-49) ಅಲ್ಲದೆ ಫಿಲಿಪ್ಪನ ನಾಲ್ಕು ಹೆಣ್ಣು ಮಕ್ಕಳು ಪ್ರವಾದಿನಿಯರಾಗಿದ್ದರು. ಅವರಿಗೆ ಚಿಕ್ಕಂದಿನಲ್ಲೇ ಒಳ್ಳೆಯ ತರಬೇತಿ ಸಿಕ್ಕಿರಲೇಬೇಕು.—ಅ. ಕಾ. 21:8, 9.

ಗ್ರೀಸ್‌ನಲ್ಲಿರುವ ಸಾಕ್ಷಿಯೊಬ್ಬನು ಹೇಳುವುದು: “ದೀಕ್ಷಾಸ್ನಾನ ಪಡೆದಾಗ ನನಗೆ 12 ವಯಸ್ಸು. ಇದಕ್ಕಾಗಿ ನಾನು ಯಾವತ್ತೂ ವಿಷಾದಪಟ್ಟಿಲ್ಲ. ನಾನು ದೀಕ್ಷಾಸ್ನಾನ ಪಡೆದು 24 ವರ್ಷಗಳು ಸಂದಿವೆ. 23 ವರ್ಷಗಳನ್ನು ಪೂರ್ಣ ಸಮಯದ ಸೇವೆಯಲ್ಲಿ ಕಳೆದಿದ್ದೇನೆ. ಯೌವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಯೆಹೋವನ ಮೇಲಿನ ಪ್ರೀತಿ ನನಗೆ ಯಾವಾಗಲೂ ಸಹಾಯಮಾಡಿದೆ. ನನಗೆ ಈಗಿರುವಷ್ಟು ಬೈಬಲ್‌ ಜ್ಞಾನ 12ನೇ ವಯಸ್ಸಿನಲ್ಲಿರಲಿಲ್ಲ. ಆದರೆ ನಾನು ಯೆಹೋವನನ್ನು ಪ್ರೀತಿಸುತ್ತಿದ್ದೆ. ನಿರಂತರಕ್ಕೂ ಆತನ ಸೇವೆಮಾಡಬೇಕೆಂಬ ಆಸೆ ನನ್ನಲ್ಲಿತ್ತು. ಆತನ ಸೇವೆಯಲ್ಲಿ ಮುಂದುವರಿಯುವಂತೆ ನನ್ನನ್ನು ಅನುಮತಿಸಿದ್ದಕ್ಕಾಗಿ ನಾನು ತುಂಬ ಸಂತೋಷಿತನು.”

ಚಿಕ್ಕವರಾಗಿರಲಿ ದೊಡ್ಡವರಾಗಿರಲಿ ಯಾರು ತಾವು ನಿಜವಾಗಿಯೂ ಶಿಷ್ಯರಾಗಿದ್ದೇವೆಂಬ ರುಜುವಾತನ್ನು ಕೊಡುತ್ತಾರೋ ಅವರು ದೀಕ್ಷಾಸ್ನಾನ ಹೊಂದಲು ಅರ್ಹರಾಗಿದ್ದಾರೆ. ಅಪೊಸ್ತಲ ಪೌಲನು ಬರೆದದ್ದು: “ಒಬ್ಬನು ನೀತಿಗಾಗಿ ಹೃದಯದಿಂದ ನಂಬಿಕೆಯನ್ನು ಅಭ್ಯಾಸಿಸುತ್ತಾನೆ; ಆದರೆ ರಕ್ಷಣೆಗಾಗಿ ಬಾಯಿಂದ ಬಹಿರಂಗವಾಗಿ ಪ್ರಕಟಿಸುತ್ತಾನೆ.” (ರೋಮ. 10:10) ಕ್ರಿಸ್ತನ ಶಿಷ್ಯನಾಗಿರುವ ಒಬ್ಬ ಯುವ ವ್ಯಕ್ತಿ ದೀಕ್ಷಾಸ್ನಾನವೆಂಬ ಪ್ರಮುಖ ಹೆಜ್ಜೆಯನ್ನು ತೆಗೆದುಕೊಳ್ಳುವಾಗ ಅವನು ಮತ್ತು ಅವನ ಹೆತ್ತವರು ಮೈಲಿಗಲ್ಲೊಂದನ್ನು ತಲುಪುತ್ತಾರೆ. ನಿಮಗೂ ನಿಮ್ಮ ಮಕ್ಕಳಿಗೂ ಕಾದಿರುವ ಸಂತೋಷವನ್ನು ಅನುಭವಿಸಲು ನಿಮಗೆ ಯಾವುದೂ ತಡೆಯಾಗದಿರಲಿ.

[ಪಾದಟಿಪ್ಪಣಿ]

^ ಪ್ಯಾರ. 2 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

[ಪುಟ 5ರಲ್ಲಿರುವ ಚೌಕ]

ದೀಕ್ಷಾಸ್ನಾನದ ಬಗ್ಗೆ ಯೋಗ್ಯ ನೋಟ

ಮಕ್ಕಳು ದೀಕ್ಷಾಸ್ನಾನ ಪಡೆಯುವುದು ಡ್ರೈವಿಂಗ್‌ ಲೈಸನ್ಸ್‌ ಪಡೆಯುವಂತಿದೆ ಎಂಬದು ಕೆಲವು ಹೆತ್ತವರ ಭಾವನೆ. ಅಂದರೆ ಅದು ಅಪಾಯವೂ ಒಳಗೂಡಿರುವ ಪ್ರಯೋಜನಕಾರಿ ಹೆಜ್ಜೆ ಎಂಬುದು ಅವರ ಎಣಿಕೆ. ಆದರೆ ದೀಕ್ಷಾಸ್ನಾನ ಮತ್ತು ಪವಿತ್ರ ಸೇವೆಯು ಒಬ್ಬನ ಭಾವೀ ಯಶಸ್ಸಿಗೆ ಮುಳ್ಳಾಗುವುದೋ? ‘ಖಂಡಿತ ಇಲ್ಲ’ ಎನ್ನುತ್ತದೆ ಬೈಬಲ್‌. ಜ್ಞಾನೋಕ್ತಿ 10:22 ಹೇಳುವುದು: “ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದು ವ್ಯಸನವನ್ನು ಸೇರಿಸದು.” ಅಲ್ಲದೆ, “ಸ್ವಸಂತೃಪ್ತಿಸಹಿತವಾದ ದೇವಭಕ್ತಿಯು ದೊಡ್ಡ ಲಾಭವಾಗಿದೆ ಎಂಬುದಂತೂ ಖಂಡಿತ” ಎಂದು ಪೌಲನು ಯುವ ತಿಮೊಥೆಯನಿಗೆ ಬರೆದನು.—1 ತಿಮೊ. 6:6.

ಯೆಹೋವನ ಸೇವೆಮಾಡುವುದು ಸುಲಭವಲ್ಲ ನಿಜ. ಯೆರೆಮೀಯನು ದೇವರ ಪ್ರವಾದಿಯಾಗಿ ಕೆಲಸವನ್ನು ಮಾಡುವಾಗ ಅನೇಕ ಕಷ್ಟಗಳನ್ನು ಅನುಭವಿಸಿದನು. ಹಾಗಿದ್ದರೂ ಸತ್ಯ ದೇವರ ಆರಾಧನೆಯ ಬಗ್ಗೆ ಅವನು ಬರೆದದ್ದು: “ನಿನ್ನ ನುಡಿಗಳು ನನಗೆ ಹರ್ಷವೂ ಹೃದಯಾನಂದವೂ ಆದವು; ಸೇನಾಧೀಶ್ವರನಾದ ದೇವರೇ, ಯೆಹೋವನೇ, ನಾನು ನಿನ್ನ ಹೆಸರಿನವನಲ್ಲವೆ!” (ಯೆರೆ. 15:16) ದೇವರ ಸೇವೆ ಹರ್ಷಾನಂದದ ಮೂಲವೆಂದು ಯೆರೆಮೀಯನಿಗೆ ಗೊತ್ತಿತ್ತು. ಸೈತಾನನ ಲೋಕವಾದರೋ ಸಂಕಷ್ಟಗಳ ಮೂಲವಾಗಿದೆ. ಹೆತ್ತವರೇ, ಈ ವ್ಯತ್ಯಾಸವನ್ನು ಗುರುತಿಸಲು ನಿಮ್ಮ ಮಕ್ಕಳಿಗೆ ಸಹಾಯಮಾಡಿ.—ಯೆರೆ. 1:19.

[ಪುಟ 6ರಲ್ಲಿರುವ ಚೌಕ/ಚಿತ್ರ]

ನನ್ನ ಮಗ/ಮಗಳ ದೀಕ್ಷಾಸ್ನಾನವನ್ನು ಮುಂದೂಡಬೇಕೋ?

ಮಕ್ಕಳು ದೀಕ್ಷಾಸ್ನಾನಕ್ಕೆ ಅರ್ಹರಾಗಿದ್ದರೂ ಹೆತ್ತವರು ಕೆಲವೊಮ್ಮೆ ಅದನ್ನು ಮುಂದೂಡುತ್ತಾರೆ. ಕಾರಣವೇನಿರಬಹುದು?

ನನ್ನ ಮಗ/ಮಗಳು ದೀಕ್ಷಾಸ್ನಾನ ಹೊಂದಿದ ನಂತರ ಏನಾದರೂ ಗಂಭೀರ ಪಾಪಮಾಡಿ ಸಭೆಯಿಂದ ಬಹಿಷ್ಕರಿಸಲ್ಪಡುವನೋ/ಳೋ ಎಂಬ ಭಯ ನನಗೆ. ದೀಕ್ಷಾಸ್ನಾನವನ್ನು ಮುಂದೂಡುವ ವ್ಯಕ್ತಿ ತನ್ನ ನಡತೆಯ ಬಗ್ಗೆ ದೇವರಿಗೆ ಲೆಕ್ಕ ಒಪ್ಪಿಸಬೇಕಾಗಿರುವುದಿಲ್ಲವೆಂದು ನಂಬುವುದು ಸರಿಯೋ? ಸೊಲೊಮೋನನು ಯೌವನಸ್ಥರಿಗೆ ನಿರ್ದೇಶಿಸಿ ಹೀಗೆ ಬರೆದನು: “[ನಿನ್ನ ಕ್ರಿಯೆಗಳ] ವಿಷಯಗಳಲ್ಲಿಯೂ ದೇವರು ನಿನ್ನನ್ನು ನ್ಯಾಯವಿಚಾರಣೆಗೆ ಗುರಿಮಾಡುವನೆಂದು ತಿಳಿದಿರು.” (ಪ್ರಸಂ. 11:9) ಪೌಲನು ತಿಳಿಸಿದ್ದು: “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ವಿಷಯದಲ್ಲಿ ದೇವರಿಗೆ ಲೆಕ್ಕ ಒಪ್ಪಿಸುವನು.” ಇಲ್ಲಿ ಪೌಲನು ನಿರ್ದಿಷ್ಟ ವಯೋಮಿತಿಯ ಜನರಿಗೆ ಮಾತ್ರ ಸೂಚಿಸಲಿಲ್ಲ ಎಂಬದನ್ನು ಗಮನಿಸಿ.—ರೋಮ. 14:12.

ದೀಕ್ಷಾಸ್ನಾನ ಹೊಂದಲಿ ಹೊಂದದಿರಲಿ ದೇವರ ಸೇವಕರೆಲ್ಲರೂ ಆತನಿಗೆ ಲೆಕ್ಕ ಒಪ್ಪಿಸಲೇಬೇಕು. ತನ್ನ ಸೇವಕರು ಸಹಿಸಿಕೊಳ್ಳಲು ಅಸಾಧ್ಯವಾದ ಪ್ರಲೋಭನೆಗಳಿಗೆ ಗುರಿಯಾಗುವಂತೆ ಯೆಹೋವನು ಎಂದೂ ಅನುಮತಿಸನು. ಹೀಗೆ ಆತನು ಅವರನ್ನು ಕಾಪಾಡುತ್ತಾನೆ ಎಂಬದನ್ನು ಮರೆಯದಿರಿ. (1 ಕೊರಿಂ. 10:13) ಅವರು ‘ಸ್ವಸ್ಥಚಿತ್ತರಾಗಿದ್ದು’ ಎಷ್ಟರವರೆಗೆ ಪ್ರಲೋಭನೆಗಳನ್ನು ಪ್ರತಿರೋಧಿಸುತ್ತಾರೋ ಅಷ್ಟರವರೆಗೆ ಅವರಿಗೆ ದೇವರ ಬೆಂಬಲವಿರುವುದು. (1 ಪೇತ್ರ 5:6-9) ಒಬ್ಬಾಕೆ ಕ್ರೈಸ್ತ ತಾಯಿ ಹೇಳುವುದು: “ದೀಕ್ಷಾಸ್ನಾನ ಪಡೆದಿರುವ ಮಕ್ಕಳಿಗೆ ಈ ಲೋಕದ ಕೆಟ್ಟ ವಿಷಯಗಳಿಂದ ದೂರವಿರಲು ಅನೇಕ ಕಾರಣಗಳಿರುತ್ತವೆ. 15ನೇ ವಯಸ್ಸಿನಲ್ಲಿ ದೀಕ್ಷಾಸ್ನಾನ ಪಡೆದ ನನ್ನ ಮಗ ಅದು ತನಗೆ ಸಂರಕ್ಷಣೆಯಂತಿದೆ ಎಂದು ನೆನಸುತ್ತಾನೆ. ‘ನಾನು ಯೆಹೋವನ ನಿಯಮಕ್ಕೆ ವಿರುದ್ಧವಾದ ಯಾವುದೇ ವಿಷಯ ಮಾಡುವೆನೆಂದು ಚಿಂತಿಸಬೇಡಮ್ಮ’ ಎಂದವನು ಹೇಳುತ್ತಾನೆ. ದೀಕ್ಷಾಸ್ನಾನವು ನೀತಿಯ ಕಾರ್ಯಗಳನ್ನು ಮಾಡಲು ಬಲವಾದ ಪ್ರಚೋದನೆ ನೀಡುತ್ತೆ.”

ಯೆಹೋವನಿಗೆ ವಿಧೇಯರಾಗುವಂತೆ ನೀವು ನಿಮ್ಮ ಮಾತು ಹಾಗೂ ಮಾದರಿಯ ಮೂಲಕ ಮಕ್ಕಳಿಗೆ ಕಲಿಸಿದ್ದೀರೋ? ಹಾಗಿರುವಲ್ಲಿ, ಅವರು ದೀಕ್ಷಾಸ್ನಾನದ ನಂತರವೂ ಯೆಹೋವನಿಗೆ ವಿಧೇಯರಾಗಿ ಮುಂದುವರಿಯುವರು ಎಂಬ ದೃಢಭರವಸೆ ನಿಮಗಿರಬಲ್ಲದು. “ಸದ್ಧರ್ಮಿಯು ನಿರ್ದೋಷವಾಗಿ ನಡೆಯುವನು; ಅವನು ಗತಿಸಿದ ಮೇಲೆಯೂ ಅವನ ಮಕ್ಕಳು ಭಾಗ್ಯವಂತರು” ಎನ್ನುತ್ತದೆ ಜ್ಞಾನೋಕ್ತಿ 20:7.

ನನ್ನ ಮಗ/ಮಗಳು ಮೊದಲು ಕೆಲವೊಂದು ಗುರಿಗಳನ್ನು ಮುಟ್ಟಲಿ. ಮಕ್ಕಳು ಮುಂದೆ ಸ್ವಾವಲಂಬಿಗಳಾಗಿ ಬದುಕಬೇಕಾದರೆ ಅವರು ಯಾವುದಾದರೊಂದು ಕೆಲಸ ಕಲಿಯಬೇಕು ನಿಜ. ಹಾಗಂತ ಜೀವನದಲ್ಲಿ ಸತ್ಯಾರಾಧನೆಗಿಂತ ಶಿಕ್ಷಣ ಹಾಗೂ ಆರ್ಥಿಕ ಭದ್ರತೆಗೇ ಹೆಚ್ಚು ಪ್ರಾಮುಖ್ಯತೆ ಕೊಡುವಂತೆ ಮಕ್ಕಳನ್ನು ಪ್ರೋತ್ಸಾಹಿಸುವಲ್ಲಿ ಅಪಾಯ ಖಂಡಿತ. ರಾಜ್ಯದ ವಾಕ್ಯವೆಂಬ ಬೀಜಗಳಲ್ಲಿ ಕೆಲವು ಬೆಳೆಯದೆ ಇರುವುದಕ್ಕೆ ಕಾರಣಕೊಡುತ್ತಾ ಯೇಸು ಅಂದದ್ದು: “ಮುಳ್ಳುಗಿಡಗಳಿರುವ ನೆಲದಲ್ಲಿ ಬಿತ್ತಲ್ಪಟ್ಟಿರುವವನು ವಾಕ್ಯವನ್ನು ಕೇಳಿಸಿಕೊಳ್ಳುತ್ತಾನೆ, ಆದರೆ ಈ ವಿಷಯಗಳ ವ್ಯವಸ್ಥೆಯ ಚಿಂತೆಯೂ ಐಶ್ವರ್ಯದ ಮೋಸಕರವಾದ ಪ್ರಭಾವವೂ ವಾಕ್ಯವನ್ನು ಅದುಮಿಬಿಡುವುದರಿಂದ ಅವನು ಫಲವನ್ನು ಕೊಡದೆ ಹೋಗುತ್ತಾನೆ.” (ಮತ್ತಾ. 13:22) ಲೌಕಿಕ ಗುರಿಗಳನ್ನಿಡುವಂತೆ ಮಕ್ಕಳನ್ನು ಪ್ರೋತ್ಸಾಹಿಸುವ ಮೂಲಕ ಆಧ್ಯಾತ್ಮಿಕತೆಯನ್ನು ಅಮುಖ್ಯವೆಂದೆಣಿಸುವಂತೆ ಮಾಡುವಲ್ಲಿ ದೇವರ ಸೇವೆಮಾಡಲು ಅವರಲ್ಲಿರುವ ಆಸೆ ನಂದಿಹೋಗುತ್ತದೆ.

ದೀಕ್ಷಾಸ್ನಾನ ಪಡೆಯಲು ಅರ್ಹರಾಗಿದ್ದರೂ ಹೆತ್ತವರು ಒಪ್ಪಿಗೆಸೂಚಿಸದ ಮಕ್ಕಳ ಕುರಿತು ತಿಳಿಸುತ್ತಾ ಒಬ್ಬ ಅನುಭವಸ್ಥ ಹಿರಿಯನು ಅಂದದ್ದು: “ದೀಕ್ಷಾಸ್ನಾನ ಪಡೆಯದಂತೆ ಮಕ್ಕಳನ್ನು ತಡೆಯುವಲ್ಲಿ ಅದು ಅವರ ಆಧ್ಯಾತ್ಮಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ಮಾತ್ರವಲ್ಲ ನಿರುತ್ತೇಜನಕ್ಕೂ ನಡೆಸುತ್ತದೆ.” ಸಂಚರಣ ಮೇಲ್ವಿಚಾರಕರೊಬ್ಬರು ಆ ಬಗ್ಗೆ ಬರೆದದ್ದು: “ಆಗ ಮಕ್ಕಳಲ್ಲಿ ದೇವರೊಂದಿಗಿನ ತಮ್ಮ ಸಂಬಂಧದ ಬಗ್ಗೆ ಅನಿಶ್ಚಿತತೆಯ ಭಾವನೆ ಮೂಡಬಹುದು ಅಥವಾ ಆಧ್ಯಾತ್ಮಿಕವಾಗಿ ತಾವೇನೂ ಸಾಧಿಸುತ್ತಿಲ್ಲವೆಂಬ ಕೀಳರಿಮೆ ಅವರನ್ನು ಕಾಡಬಹುದು. ಆಗ ಅವರು ಏನನ್ನಾದರೂ ಸಾಧಿಸಬೇಕೆಂಬ ಛಲದಿಂದ ಲೋಕದ ಕಡೆಗೆ ವಾಲುವರು.”

[ಚಿತ್ರ]

ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕೋ?

[ಪುಟ 3ರಲ್ಲಿರುವ ಚಿತ್ರ]

ಚಿಕ್ಕ ಮಕ್ಕಳು ತಾವು ಕ್ರಿಸ್ತನ ಶಿಷ್ಯರೆಂಬದಕ್ಕೆ ರುಜುವಾತನ್ನು ಕೊಡಬಲ್ಲರು

[ಪುಟ 3ರಲ್ಲಿರುವ ಚಿತ್ರಗಳು]

ಕೂಟಗಳಿಗಾಗಿ ತಯಾರಿ ಮತ್ತು ಕೂಟಗಳಲ್ಲಿ ಭಾಗವಹಿಸುವಿಕೆ

[ಪುಟ 4ರಲ್ಲಿರುವ ಚಿತ್ರ]

ಹೆತ್ತವರಿಗೆ ವಿಧೇಯತೆ

[ಪುಟ 4ರಲ್ಲಿರುವ ಚಿತ್ರ]

ಶುಶ್ರೂಷೆಯಲ್ಲಿ ಪಾಲ್ಗೊಳ್ಳುವಿಕೆ

[ಪುಟ 4ರಲ್ಲಿರುವ ಚಿತ್ರ]

ವೈಯಕ್ತಿಕ ಪ್ರಾರ್ಥನೆ