ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಂಘಟನೆಯಲ್ಲಿ ಕಾರ್ಯಮಗ್ನ ಸೇವೆ

ಯೆಹೋವನ ಸಂಘಟನೆಯಲ್ಲಿ ಕಾರ್ಯಮಗ್ನ ಸೇವೆ

ಯೆಹೋವನ ಸಂಘಟನೆಯಲ್ಲಿ ಕಾರ್ಯಮಗ್ನ ಸೇವೆ

ವರ್ನನ್‌ ಜೂಬ್ಕೋರವರು ಹೇಳಿದಂತೆ

ನಾನು ಬೆಳೆದದ್ದು ಕೆನಡದ ಸಸ್ಕ್ಯಾಚುವಾನ್‌ ಪ್ರಾಂತದಲ್ಲಿನ ಸ್ಟೆನನ್‌ ಎಂಬ ಹಳ್ಳಿಯ ಪಕ್ಕದ ಹೊಲಮನೆಯಲ್ಲಿ. ನನ್ನ ತಂದೆ ಫ್ರೆಡ್‌ ಮತ್ತು ತಾಯಿ ಅಡೆಲ ಕಷ್ಟಪಟ್ಟು ದುಡಿಯುತ್ತಾ ನನ್ನನ್ನು, ನನ್ನ ಅಕ್ಕ ಅರೆಲ್ಯ, ತಂಗಿ ಅಲೆಗ್ರ, ತಮ್ಮಂದಿರಾದ ಆಲ್ವಿನ್‌, ಡ್ಯಾರಿಲ್‌ರನ್ನು ಆಧ್ಯಾತ್ಮಿಕವಾಗಿಯೂ ಭೌತಿಕವಾಗಿಯೂ ಪೋಷಿಸಿದರು. ನಮಗೆ ಸತ್ಯವನ್ನು ಕಲಿಸಿದ್ದಕ್ಕಾಗಿ ಇಂದಿಗೂ ನಾವು ನಮ್ಮ ಹೆತ್ತವರಿಗೆ ಚಿರಋಣಿಗಳು.

ನನ್ನ ತಂದೆ ಅಭಿಷಿಕ್ತ ಕ್ರೈಸ್ತರಲ್ಲಿ ಒಬ್ಬರಾಗಿದ್ದು ನಿರ್ಭೀತ ಸೌವಾರ್ತಿಕರಾಗಿದ್ದರು. ಅವರು ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿದರು ಮತ್ತು ತಾವು ಒಬ್ಬ ಸಾಕ್ಷಿ ಎಂಬುದನ್ನು ಸುತ್ತಮುತ್ತಲಿನ ಪ್ರತಿಯೊಬ್ಬರಿಗೆ ಖಂಡಿತವಾಗಿ ತಿಳಿಯಪಡಿಸಿದರು. ಯಾವಾಗಲೂ ಸತ್ಯದ ಕುರಿತೇ ಮಾತಾಡುತ್ತಿದ್ದರು. ಅವರ ಹುರುಪು ಮತ್ತು ಧೈರ್ಯವು ನನ್ನಲ್ಲಿ ಗಾಢ ಪ್ರಭಾವ ಬೀರಿತು. “ಯೆಹೋವನ ಸಂಘಟನೆಯಲ್ಲಿ ನಿನ್ನನ್ನು ಕಾರ್ಯಮಗ್ನವಾಗಿರಿಸಿಕೋ. ಆಗ ಅನೇಕ ಸಮಸ್ಯೆಗಳನ್ನು ನೀನು ಜಯಿಸುವಿ” ಎಂದವರು ನನಗೆ ಆಗಾಗ್ಗೆ ಹೇಳುತ್ತಿದ್ದರು.

ನಾವು ಸ್ಟೆನನ್‌ನಲ್ಲಿ ಮತ್ತು ನೆರೆಹೊರೆಯ ಸಮುದಾಯಗಳಲ್ಲಿ ಅನೇಕ ಸಲ ಬೀದಿ ಸಾಕ್ಷಿಕಾರ್ಯವನ್ನು ಮಾಡುತ್ತಿದ್ದೆವು. ನನಗದು ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ಪ್ರತಿಯೊಂದು ಊರಿನಲ್ಲಿ ಹೆಸರಾಂತ ಪುಂಡರಿದ್ದರು. ಅವರು ಕಿರಿಯರಾದ ನಮ್ಮನ್ನು ಪೀಡಿಸುತ್ತಾ ಗೇಲಿಮಾಡುತ್ತಿದ್ದರು. ಎಂಟು ವಯಸ್ಸಿನಲ್ಲಿ ಒಮ್ಮೆ ನಾನು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಹಿಡಿದುಕೊಂಡು ಬೀದಿಯ ಮೂಲೆಯಲ್ಲಿ ನಿಂತಿದ್ದೆ. ಪುಂಡರ ಗುಂಪು ನನ್ನನ್ನು ಸುತ್ತುವರಿದು ಕೀಟಲೆಮಾಡುತ್ತಾ ನನ್ನ ಹೊಸ ಟೋಪಿಯನ್ನು ಕಿತ್ತೆಳೆದು ಪಕ್ಕದ ಕಂಬಕ್ಕೇರಿಸಿದರು. ಸ್ವಲ್ಪ ದೂರದಲ್ಲಿ ನನ್ನನ್ನು ನಿಗಾಯಿಟ್ಟು ನೋಡುತ್ತಿದ್ದ ಹಿರಿಯ ಸಹೋದರರೊಬ್ಬರು ಹತ್ತಿರ ಬಂದು “ಏನಾಯ್ತು ವರ್ನ್‌?” ಎಂದು ಕೇಳಿದರು. ಪುಂಡರೆಲ್ಲರೂ ಥಟ್ಟನೆ ಪರಾರಿ! ಆ ಘಟನೆ ನನ್ನ ಮನಕಲಕಿತಾದರೂ ಅದರಿಂದ ನಾನೊಂದು ಪಾಠ ಕಲಿತೆ. ಏನೆಂದರೆ ಬೀದಿ ಸಾಕ್ಷಿಕಾರ್ಯ ಮಾಡುವಾಗ ಕಲ್ಲುಕಂಬದಂತೆ ಒಂದೇ ಕಡೆ ನಿಲ್ಲಬಾರದು, ಆಚಿಂದೀಚೆ ನಡೆಯುತ್ತಾ ಜನರನ್ನು ಸಮೀಪಿಸಬೇಕು. ಬಾಲ್ಯದಲ್ಲಿ ದೊರೆತ ಅಂಥ ತರಬೇತಿಯು ಮನೆ ಮನೆಯ ಸೇವೆಗಾಗಿ ನನ್ನಲ್ಲಿ ಧೈರ್ಯ ತುಂಬಿತು.

ನಾನು ಮತ್ತು ಆಲ್ವಿನ್‌ ಮೇ 1951ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡೆವು. ನನಗಾಗ 13 ವಯಸ್ಸು. ದೀಕ್ಷಾಸ್ನಾನದ ಭಾಷಣ ಕೊಟ್ಟ ಸಹೋದರ ಜ್ಯಾಕ್‌ ನೇತನ್‌ರವರ ನೆನಪು ನನಗಿನ್ನೂ ಇದೆ. ‘ಯೆಹೋವನ ಕುರಿತು ಯಾವಾಗಲೂ ಮಾತಾಡುತ್ತಿರಬೇಕು, ಒಂದು ತಿಂಗಳು ಸಹ ಬಿಡಬಾರದು’ ಎಂದವರು ಪ್ರಬೋಧಿಸಿದರು. * ಪಯನೀಯರ್‌ ಸೇವೆಯನ್ನು ನಮ್ಮ ಕುಟುಂಬವು ಜೀವನದ ಅತ್ಯುತ್ತಮ ಕೆಲಸವಾಗಿ ಪರಿಗಣಿಸಿತು. ಆದ್ದರಿಂದ 1958ರಲ್ಲಿ ನನ್ನ ಶಾಲಾ ಶಿಕ್ಷಣವು ಮುಗಿದ ನಂತರ ನಾನು ಮ್ಯಾನಿಟೊಬದ ವಿನಿಪೆಗ್‌ಗೆ ಸ್ಥಳಾಂತರಿಸಿ ಪಯನೀಯರ್‌ ಸೇವೆಯನ್ನು ಆರಂಭಿಸಿದೆ. ನಮ್ಮ ಕುಟುಂಬವೃತ್ತಿಯಾದ ಮರಗೆಲಸವನ್ನು ಮಾಡುತ್ತಾ ತನ್ನೊಂದಿಗೆ ಇರುವಂತೆ ತಂದೆಯು ಬಯಸಿದರಾದರೂ ಅವರೂ ನನ್ನ ತಾಯಿಯೂ ನನ್ನನ್ನು ಪೂರ್ಣ ಸಮಯದ ಶುಶ್ರೂಷೆಗೆ ತುಂಬ ಪ್ರೋತ್ಸಾಹಿಸಿ ನನ್ನ ನಿರ್ಣಯವನ್ನು ಬೆಂಬಲಿಸಿದರು.

ಹೊಸ ಮನೆ, ಹೊಸ ಸಂಗಾತಿ

ಕ್ವಿಬೆಕ್‌ನಲ್ಲಿ ಸುವಾರ್ತಿಕರ ತೀವ್ರ ಅಗತ್ಯವಿತ್ತು. ಆದ್ದರಿಂದ ಅಲ್ಲಿಗೆ ಸ್ಥಳಾಂತರಿಸಬಲ್ಲವರಿಗೆ 1959ರಲ್ಲಿ ಬ್ರಾಂಚ್‌ ಆಫೀಸು ಕರೆನೀಡಿತು. ಕ್ವಿಬೆಕ್‌ನ ಮಾಂಟ್ರಿಯಲ್‌ಗೆ ನನ್ನನ್ನು ಪಯನೀಯರನಾಗಿ ಕಳುಹಿಸಲಾಯಿತು. ಎಂಥಾ ಬದಲಾವಣೆ! ನನ್ನ ಬದುಕಿನ ಹೊಸ ಅಧ್ಯಾಯವೇ ಆರಂಭಿಸಿತು. ಫ್ರೆಂಚ್‌ ಭಾಷೆಯನ್ನಾಡಲು ಕಲಿಯುತ್ತಾ, ಪೂರಾ ಭಿನ್ನವಾದ ಸಂಸ್ಕೃತಿಗೆ ನನ್ನನ್ನು ಹೊಂದಿಸಿಕೊಂಡೆ. “‘ನಮ್ಮ ಸಂಸ್ಕೃತಿಯಲ್ಲಿ ಹೀಗೆಲ್ಲಾ ಇಲ್ಲ. ನಮ್ಮದು ಬೇರೆ’ ಎಂದು ಯಾವತ್ತೂ ಹೇಳಬೇಡ” ಎಂದರು ನಮ್ಮ ಸರ್ಕಿಟ್‌ ಮೇಲ್ವಿಚಾರಕರು. ಅದೆಷ್ಟು ಉತ್ತಮ ಸಲಹೆಯಾಗಿತ್ತು!—1 ಕೊರಿಂಥ 9:22, 23.

ಕ್ವಿಬೆಕ್‌ನಲ್ಲಿ ನನ್ನ ಜೊತೆಗೆ ಯಾರೂ ಪಯನೀಯರರು ಇರಲಿಲ್ಲ. ಈ ಮುಂಚೆ ವಿನಿಪೆಗ್‌ನಲ್ಲಿ ಶರ್ಲಿ ಟ್ರಕಾಟ್‌ ಎಂಬ ಯುವ ಸಹೋದರಿಯ ಪರಿಚಯವಾಗಿತ್ತು. 1961ರ ಫೆಬ್ರವರಿಯಲ್ಲಿ ನಾವು ಮದುವೆಯಾದಾಗ ಆಕೆ ನನ್ನ ಪಯನೀಯರ್‌ ಸಂಗಾತಿಯೂ ಬಾಳಸಂಗಾತಿಯೂ ಆದಳು. ಆಕೆಯೂ ಯೆಹೋವನನ್ನು ಪ್ರೀತಿಸುವ ಕುಟುಂಬದಲ್ಲಿ ಬೆಳೆದಿದ್ದಳು. ಈ ಎಲ್ಲ ವರ್ಷಗಳಲ್ಲಿ ಆಕೆ ನನಗೆ ಬಲ ಮತ್ತು ಉತ್ತೇಜನದ ಚಿಲುಮೆಯಾಗಿದ್ದಳು.

ಗಾಸ್ಪೆಗೆ ಸಂಚಾರ

ಮದುವೆಯಾಗಿ ಎರಡು ವರ್ಷಗಳ ಬಳಿಕ ನಾವು ಕ್ವಿಬೆಕ್‌ನ ರಿಮೊಸ್ಕೀ ಎಂಬಲ್ಲಿ ವಿಶೇಷ ಪಯನೀಯರರಾಗಿ ನೇಮಿಸಲ್ಪಟ್ಟೆವು. ಮುಂದಿನ ವರ್ಷ ಕೆನಡದ ಪೂರ್ವ ಕರಾವಳಿಯುದ್ದಕ್ಕೂ ಗಾಸ್ಪೆ ದ್ವೀಪಕಲ್ಪದಲ್ಲೆಲ್ಲ ಸಾರುವ ಸಂಚಾರವನ್ನು ಕೈಗೊಳ್ಳುವಂತೆ ಬ್ರಾಂಚ್‌ ಆಫೀಸ್‌ ನಮ್ಮನ್ನು ಕೇಳಿಕೊಂಡಿತು. ಸತ್ಯದ ಬೀಜಗಳನ್ನು ಸಾಧ್ಯವಾದಷ್ಟು ಹೆಚ್ಚೆಚ್ಚು ಬಿತ್ತುವುದೇ ನಮ್ಮ ನೇಮಕವಾಗಿತ್ತು. (ಪ್ರಸಂ. 11:6) ನಾವು ಕಾರ್‌ನಲ್ಲಿ ಸುಮಾರು 1,000 ಪತ್ರಿಕೆಗಳನ್ನೂ 400 ಪುಸ್ತಕಗಳನ್ನೂ ಒಂದಿಷ್ಟು ಊಟಬಟ್ಟೆಗಳನ್ನೂ ತುಂಬಿಸಿಕೊಂಡು ಒಂದು ತಿಂಗಳ ಮಟ್ಟಿಗಿನ ಸಾರುವ ಸಂಚಾರವನ್ನು ಕೈಗೊಂಡೆವು. ಗಾಸ್ಪೆಯ ಚಿಕ್ಕ ಹಳ್ಳಿಗಳನ್ನೆಲ್ಲ ವ್ಯವಸ್ಥಿತ ರೀತಿಯಲ್ಲಿ ಆವರಿಸಿದೆವು. ಆದರೆ ಸ್ಥಳೀಯ ರೇಡಿಯೊ ಸ್ಟೇಷನ್‌ ಎಚ್ಚರಿಕೆ ಸಾರಿತು! ಸಾಕ್ಷಿಗಳು ಬಂದಿದ್ದಾರೆ, ಅವರ ಪ್ರಕಾಶನಗಳನ್ನು ತಕ್ಕೊಳ್ಳಬಾರದೆಂದು ಘೋಷಿಸಿತು. ಆದರೆ ಹೆಚ್ಚಿನವರು ಆ ಪ್ರಕಟನೆಯನ್ನು ತಪ್ಪರ್ಥಮಾಡಿಕೊಂಡು ಅದು ನಮ್ಮ ಪ್ರಕಾಶನದ ಜಾಹೀರಾತೆಂದು ನೆನಸಿ ನಾವು ನೀಡಿದ ಸಾಹಿತ್ಯವನ್ನು ಸರಾಗವಾಗಿ ಸ್ವೀಕರಿಸಿದರು.

ಆ ಸಮಯದಲ್ಲಿ ಕ್ವಿಬೆಕ್‌ನ ಕೆಲವು ಭಾಗಗಳಲ್ಲಿ ಸಾರುವ ಸ್ವಾತಂತ್ರ್ಯ ಹೊಸದಾಗಿತ್ತು. ಪೊಲೀಸರು ಆಗಿಂದಾಗ್ಗೆ ನಮ್ಮನ್ನು ತಡೆದು ನಿಲ್ಲಿಸುತ್ತಿದ್ದರು. ಒಂದು ನಗರದಲ್ಲಿ ನಾವು ಹೆಚ್ಚುಕಡಿಮೆ ಎಲ್ಲ ಮನೆಗಳಲ್ಲಿ ಸಾಹಿತ್ಯವನ್ನು ನೀಡುತ್ತಿದ್ದಾಗ ಪೊಲೀಸನೊಬ್ಬನು ನಮ್ಮನ್ನು ಹಿಡಿದು ಠಾಣೆಗೆ ಬರುವಂತೆ ಹೇಳಿದನು, ನಾವು ಹೋದೆವು. ಆ ನಗರದ ವಕೀಲನು ನಮ್ಮ ಸಾರುವ ಕೆಲಸವನ್ನು ನಿಲ್ಲಿಸುವಂತೆ ಆಜ್ಞೆ ಕೊಟ್ಟಿದ್ದನೆಂದು ಆಗ ತಿಳಿದುಬಂತು. ಅಂದು ಪೊಲೀಸ್‌ ಮುಖ್ಯಾಧಿಕಾರಿ ಇರದ ಕಾರಣ ಸಾರಲು ನಮಗಿರುವ ಹಕ್ಕನ್ನು ಪೂರ್ಣವಾಗಿ ವಿವರಿಸುವ ಟೊರಾಂಟೋ ಬ್ರಾಂಚ್‌ನ ಒಂದು ದಾಖಲೆಪತ್ರವನ್ನು ನಾನು ಆ ವಕೀಲನಿಗೆ ಕೊಟ್ಟೆ. ಅದನ್ನು ಓದಿದ ಕೂಡಲೆ ವಕೀಲನು, “ನೋಡಿ, ನನಗೆ ಇದೆಲ್ಲಾ ಸಮಸ್ಯೆ ಬೇಡ. ನಿಮ್ಮ ಸಾರುವ ಕೆಲಸವನ್ನು ನಿಲ್ಲಿಸಬೇಕೆಂದು ಪ್ರಾಂತದ ಪಾದ್ರಿ ನನಗೆ ಹೇಳಿದ್ರು” ಎಂದು ತಿಳಿಸಿದನು. ನಮ್ಮ ಕೆಲಸ ಕಾನೂನುಬದ್ಧವೆಂದು ಜನರು ತಿಳಿಯಬೇಕೆಂದು ನಾವು ಬಯಸಿದ್ದರಿಂದ ನಮ್ಮ ಸಾರುವಿಕೆಯನ್ನು ಪೊಲೀಸನು ತಡೆದಿದ್ದ ಅದೇ ಕ್ಷೇತ್ರಕ್ಕೆ ಆ ಕೂಡಲೆ ಹಿಂತಿರುಗಿ ಪುನಃ ಸಾರುವ ಕೆಲಸವನ್ನು ಆರಂಭಿಸಿದೆವು.

ಮರುದಿನ ಪೊಲೀಸ್‌ ಮುಖ್ಯಾಧಿಕಾರಿಯನ್ನು ನೋಡಲು ಹೋದಾಗ ನಮ್ಮ ಸಾರುವ ಕೆಲಸವನ್ನು ನಿಲ್ಲಿಸಿದ್ದನ್ನು ಕೇಳಿ ಅವರು ತುಂಬ ರೇಗಿದರು. ಪೋನ್‌ನಲ್ಲಿ ಆ ವಕೀಲನನ್ನು ತರಾಟೆಗೆ ತೆಗೆದುಕೊಂಡರು! ‘ಇನ್ನೇನಾದರೂ ತೊಂದರೆಯಾದರೆ ನನಗೆ ಒಂದು ಫೋನ್‌ ಮಾಡಿಬಿಡಿ ಸಾಕು, ಮುಂದಿನದ್ದನ್ನು ನಾನು ನೋಡಿಕೊಳ್ತೇನೆ’ ಎಂದರು ಆ ಮುಖ್ಯಾಧಿಕಾರಿ ನಮಗೆ. ನಾವು ಅಪರಿಚಿತರಾಗಿದ್ದರೂ ನಮ್ಮ ಫ್ರೆಂಚ್‌ ಹರುಕುಮುರುಕಾಗಿದ್ದರೂ ಜನರು ಆದರದಯೆ ತೋರಿಸಿದರು. ಆದರೆ ‘ಈ ಜನರು ಎಂದಾದರೂ ಸತ್ಯ ಕಲಿಯುವರೋ?’ ಎಂಬ ಪ್ರಶ್ನೆ ನಮ್ಮನ್ನು ಕಾಡಿಸಿತು. ಆ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ವರ್ಷಗಳ ನಂತರ. ಅಂದರೆ ಗಾಸ್ಪೆಯ ಅನೇಕ ಕಡೆಗಳಲ್ಲಿ ರಾಜ್ಯ ಸಭಾಗೃಹಗಳನ್ನು ಕಟ್ಟುವ ಕೆಲಸದ ಮೇಲೆ ಮತ್ತೆ ನಾವು ಅಲ್ಲಿಗೆ ಹೋದಾಗ. ನಾವು ಸಾಕ್ಷಿ ಕೊಟ್ಟಿದ್ದ ಅನೇಕರು ಈಗ ನಮ್ಮ ಸಹೋದರರಾಗಿದ್ದರು. ನಿಶ್ಚಯವಾಗಿಯೂ ಸತ್ಯದ ಬೀಜವನ್ನು ಬೆಳೆಯುವಂತೆ ಮಾಡುವವನು ಯೆಹೋವನೇ.—1 ಕೊರಿಂ. 3:6, 7.

ನಾವು ಪಡೆದ ಸ್ವಾಸ್ತ್ಯ

1970ರಲ್ಲಿ ನಮ್ಮ ಮುದ್ದುಮಗಳು ಲೀಸ ಹುಟ್ಟಿದಳು. ಯೆಹೋವನು ಕೊಟ್ಟ ಈ ಸ್ವಾಸ್ತ್ಯ ನಮ್ಮ ಬಾಳಿಗೆ ಇನ್ನಷ್ಟು ಹರ್ಷಾನಂದವನ್ನು ಕೂಡಿಸಿತು. ಅನೇಕ ರಾಜ್ಯ ಸಭಾಗೃಹಗಳ ನಿರ್ಮಾಣ ಯೋಜನೆಗಳಲ್ಲಿ ನನ್ನೊಂದಿಗೆ ನನ್ನ ಪತ್ನಿ ಮತ್ತು ಮಗಳು ಕೆಲಸಮಾಡಿದ್ದಾರೆ. ಶಾಲಾ ಶಿಕ್ಷಣ ಮುಗಿಸಿದ ಬಳಿಕ ಲೀಸ, “ನನ್ನಿಂದಾಗಿ ಪೂರ್ಣ ಸಮಯದ ಸೇವೆಯನ್ನು ಸ್ವಲ್ಪ ಸಮಯ ನಿಮಗೆ ಬಿಡಬೇಕಾಯಿತಲ್ಲಾ. ಬದಲಿಯಾಗಿ ನಾನೀಗ ಪಯನೀಯರಳಾಗಲು ಯೋಚಿಸಿದ್ದೇನೆ” ಎಂದಳು. ಹಾಗೆ ಲೀಸ ಹೇಳಿ ಈಗ 20ಕ್ಕೂ ಹೆಚ್ಚು ವರ್ಷಗಳು ಕಳೆದಿವೆ. ಅವಳಿನ್ನೂ ಪಯನೀಯರಳಾಗಿದ್ದಾಳೆ, ಆದರೆ ಈಗ ತನ್ನ ಗಂಡ ಸೀಲ್ವಾನ್‌ನೊಂದಿಗೆ. ಅನೇಕ ಅಂತಾರಾಷ್ಟ್ರೀಯ ನಿರ್ಮಾಣ ಯೋಜನೆಗಳಲ್ಲಿ ಕೆಲಸಮಾಡುವ ಸದವಕಾಶ ಅವರಿಗೂ ಸಿಕ್ಕಿದೆ. ಜೀವನವನ್ನು ಸರಳವಾಗಿಟ್ಟು ಯೆಹೋವನ ಸೇವೆಗೆ ನಮ್ಮನ್ನು ಅರ್ಪಿಸಿಕೊಳ್ಳುವುದೇ ನಮ್ಮ ಕುಟುಂಬದ ಧ್ಯೇಯ. ಲೀಸ ಪಯನೀಯರ್‌ ಸೇವೆ ಆರಂಭಿಸುವಾಗ ಹೇಳಿದ ಮಾತುಗಳನ್ನು ನಾನೆಂದೂ ಮರೆತಿಲ್ಲ. 2001ರಲ್ಲಿ ಮತ್ತೆ ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸುವಂತೆ ಪ್ರಚೋದಿಸಿದವಳು ನಿಜವಾಗಿ ಅವಳೇ. ಅಂದಿನಿಂದ ನಾನು ಪಯನೀಯರನಾಗಿಯೇ ಇದ್ದೇನೆ. ಆ ಸೇವೆಯು ಎಲ್ಲ ವಿಷಯಗಳಲ್ಲಿ ಯೆಹೋವನಲ್ಲಿ ಭರವಸೆಯಿಡುವಂತೆ, ಸಂತೃಪ್ತಿಕರವೂ ಸಂತೋಷಭರಿತವೂ ಆದ ಸರಳ ಜೀವನವನ್ನು ನಡೆಸುವಂತೆ ನನಗೆ ಕಲಿಸುತ್ತಾ ಇದೆ.

ನಿರ್ಮಾಣ ಕೆಲಸಕ್ಕೆ ಪ್ರೀತಿ, ನಿಷ್ಠೆ, ನಂಬಿಗಸ್ತಿಕೆ ಅಗತ್ಯ

ಯೆಹೋವನ ಸೇವೆಗೆ ನಮ್ಮನ್ನು ಅರ್ಪಿಸಿಕೊಂಡು ಆತನು ಕೊಡುವ ಯಾವುದೇ ನೇಮಕವನ್ನು ಸ್ವೀಕರಿಸುವುದಾದರೆ ದೊರಕುವ ಆಶೀರ್ವಾದಗಳು ಅಪಾರ ಎಂದು ಆತನು ನನಗೆ ಕಲಿಸಿದ್ದಾನೆ. ರೀಜನಲ್‌ ಬಿಲ್ಡಿಂಗ್‌ ಕಮಿಟಿ ಮತ್ತು ನಿರ್ಮಾಣ ಯೋಜನೆಗಳಲ್ಲಿ ನನ್ನ ಸಹೋದರ ಸಹೋದರಿಯರೊಂದಿಗೆ ಕ್ವಿಬೆಕ್‌ನಾದ್ಯಂತ ಹಾಗೂ ಇತರ ಕಡೆಗಳಲ್ಲಿ ಕೆಲಸಮಾಡುವುದನ್ನು ನಾನು ಅಮೂಲ್ಯವೆಂದೆಣಿಸುತ್ತೇನೆ.

ಕೆಲವು ಸ್ವಯಂಸೇವಕರು ಅತ್ಯುತ್ತಮ ಭಾಷಣಗಾರರು ಆಗಿರಲಿಕ್ಕಿಲ್ಲ. ಆದರೂ ರಾಜ್ಯ ಸಭಾಗೃಹ ನಿರ್ಮಾಣಕಾರ್ಯದಲ್ಲಿ ಅವರು ಬಲು ನಿಪುಣರು. ಈ ಪ್ರಿಯ ಸಹೋದರರು ಸಮರ್ಪಿತಭಾವದಿಂದ ಕೆಲಸಮಾಡುವುದರಿಂದ ಅವರಲ್ಲಿರುವ ಪ್ರತಿಭೆಯು ತೋರಿಬರುತ್ತದೆ. ಫಲಿತಾಂಶವಾಗಿ ಯೆಹೋವನ ಆರಾಧನೆಗಾಗಿ ಒಂದು ಸುಂದರ ಕಟ್ಟಡವು ತಲೆ ಎತ್ತುತ್ತದೆ.

“ರಾಜ್ಯ ಸಭಾಗೃಹ ನಿರ್ಮಾಣ ಕೆಲಸದಲ್ಲಿ ಸ್ವಯಂಸೇವಕನಿಗೆ ಇರಬೇಕಾದ ಅತಿ ಪ್ರಾಮುಖ್ಯ ಗುಣಗಳು ಯಾವುವು?” ಎಂದು ನನ್ನನ್ನು ಕೇಳಲಾಗಿದೆ. ಅನುಭವದಿಂದ ನಾನು ಹೇಳುವುದೇನೆಂದರೆ, ಮೊತ್ತಮೊದಲಾಗಿ ಒಬ್ಬನಿಗೆ ಯೆಹೋವನ, ಆತನ ಪುತ್ರನ ಮತ್ತು ಸಹೋದರ ಬಳಗದ ಮೇಲೆ ಪ್ರೀತಿಯಿರಬೇಕು. (1 ಕೊರಿಂ. 16:14) ಎರಡನೇದಾಗಿ ನಿಷ್ಠೆ ಮತ್ತು ನಂಬಿಗಸ್ತಿಕೆ ಬೇಕು. ಕೆಲವೊಮ್ಮೆ ವಿಷಯಗಳು ನಾವು ಬಯಸುವಂತೆ ನಡೆಯಲಿಕ್ಕಿಲ್ಲ ನಿಜ. ಹೀಗಾಗುವಾಗ ನಿಷ್ಠೆಯು ಆ ದೇವಪ್ರಭುತ್ವಾತ್ಮಕ ಏರ್ಪಾಡನ್ನು ತಪ್ಪದೆ ಬೆಂಬಲಿಸುವಂತೆ ಪ್ರೇರಿಸುತ್ತದೆ. ನಂಬಿಗಸ್ತಿಕೆಯು ಮುಂದಿನ ಯೋಜನೆಗಳಲ್ಲೂ ಸ್ವಯಂಸೇವೆಯನ್ನು ಮುಂದುವರಿಸುವಂತೆ ಪ್ರಚೋದಿಸುತ್ತದೆ.

ಯೆಹೋವನಿಗೆ ಆಭಾರಿ

ನನ್ನ ತಂದೆ 1985ರಲ್ಲಿ ಮರಣಹೊಂದಿದರು. ಆದರೆ ಯೆಹೋವನ ಸಂಘಟನೆಯಲ್ಲಿ ಕಾರ್ಯಮಗ್ನರಾಗಿ ಇರಬೇಕೆಂದು ಅವರು ಕೊಟ್ಟ ಸಲಹೆಯಂತೂ ನನ್ನ ಮನಸ್ಸಲ್ಲಿ ಆಳವಾಗಿ ಅಚ್ಚೊತ್ತಿ ಉಳಿದಿದೆ. ಯೆಹೋವನ ಸಂಘಟನೆಯ ಸ್ವರ್ಗೀಯ ಭಾಗದಲ್ಲಿ ನೇಮಕವನ್ನು ಪಡೆದ ಇತರರಂತೆ ಅವರು ಕೂಡ ಕಾರ್ಯಮಗ್ನರಾಗಿದ್ದಾರೆ ಎಂಬುದು ನಿಸ್ಸಂಶಯ. (ಪ್ರಕ. 14:13) ಅಮ್ಮಗೆ ಈಗ 97 ವಯಸ್ಸು. ಲಕ್ವ ಹೊಡೆದಿದ್ದರಿಂದ ಅವರಿಗೆ ಮುಂಚಿನಂತೆ ಮಾತಾಡಲು ಆಗದಿದ್ದರೂ ಬೈಬಲ್‌ನ ವಚನಗಳು ಅವರಿಗೆ ಚೆನ್ನಾಗಿ ನೆನಪಿವೆ. ಪತ್ರಗಳಲ್ಲಿ ಅವರು ವಚನಗಳನ್ನು ಉಲ್ಲೇಖಿಸಿ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುವಂತೆ ನಮ್ಮನ್ನು ಉತ್ತೇಜಿಸುತ್ತಾರೆ. ಇಂಥ ಪ್ರೀತಿಪರ ಹೆತ್ತವರನ್ನು ಹೊಂದಿರಲು ಮಕ್ಕಳಾದ ನಾವೆಲ್ಲರೂ ದೇವರಿಗೆ ತುಂಬ ಆಭಾರಿಗಳು!

ನನ್ನ ನಂಬಿಗಸ್ತೆ ಪತ್ನಿಯೂ ಸಂಗಾತಿಯೂ ಆದ ಶರ್ಲಿಗಾಗಿ ಕೂಡ ನಾನು ಯೆಹೋವನಿಗೆ ಆಭಾರಿ. ಅವಳ ಅಮ್ಮ ಅವಳಿಗೆ, “ನಿನ್ನ ಗಂಡ ವರ್ನ್‌ ಸೇವೆಯಲ್ಲಿ ತುಂಬ ಕಾರ್ಯಮಗ್ನನು. ಅವನು ತನ್ನ ಸಮಯವನ್ನು ಇತರರಿಗೆ ಕೊಡುವಾಗ ನೀನೂ ಅವನೊಂದಿಗೆ ಸಹಕರಿಸಲು ಕಲಿಯಬೇಕು” ಎಂದು ಹೇಳಿದ್ದರು. ಈ ಬುದ್ಧಿವಾದವನ್ನು ಶರ್ಲಿ ಯಾವಾಗಲೂ ಮನಸ್ಸಿನಲ್ಲಿಡುತ್ತಾಳೆ. ನಾವು ಒಟ್ಟೊಟ್ಟಿಗೆ ಯೆಹೋವನ ಸೇವೆಮಾಡುತ್ತಾ ವೃದ್ಧರಾಗಬೇಕು ಮತ್ತು ಒಂದುವೇಳೆ ಅಂತ್ಯವನ್ನು ಪಾರಾದರೆ ಒಟ್ಟಿಗೆ ಯೌವನಸ್ಥರಾಗುತ್ತಾ ಆತನನ್ನು ನಿತ್ಯಕ್ಕೂ ಸೇವಿಸುತ್ತಿರಬೇಕು ಎಂದು 49 ವರ್ಷಗಳ ಹಿಂದೆ ನಾವು ಮದುವೆಯಾದಾಗ ನಿಶ್ಚೈಸಿಕೊಂಡಿದ್ದೆವು. ಹೌದು ನಮಗೆ ‘ಕರ್ತನ ಕೆಲಸವನ್ನು ಯಾವಾಗಲೂ ಹೇರಳವಾಗಿ ಮಾಡಲಿಕ್ಕಿತ್ತು.’ (1 ಕೊರಿಂ. 15:58) ಯೆಹೋವನಾದರೋ ನಮ್ಮನ್ನು ನಿಜವಾಗಿಯೂ ಪರಾಮರಿಸಿ ಕಾಪಾಡಿದನು. ಎಂದಿಗೂ ಯಾವುದಕ್ಕೂ ನಮಗೆ ಕೊರತೆಯಾಗಲಿಲ್ಲ.

[ಪಾದಟಿಪ್ಪಣಿ]

^ ಪ್ಯಾರ. 6 ಜ್ಯಾಕ್‌ ನೇತನ್‌ರವರ ಜೀವನ ಕಥೆಗಾಗಿ 1990, ಸೆಪ್ಟೆಂಬರ್‌ 1ರ ಕಾವಲಿನಬುರುಜು (ಇಂಗ್ಲಿಷ್‌) ಪುಟ 10-14 ನೋಡಿ.

[ಪುಟ 31ರಲ್ಲಿರುವ ಚಿತ್ರ]

“ಜೀವನವನ್ನು ಸರಳವಾಗಿಟ್ಟು ಯೆಹೋವನ ಸೇವೆಗೆ ನಮ್ಮನ್ನು ಅರ್ಪಿಸಿಕೊಳ್ಳುವುದೇ ನಮ್ಮ ಕುಟುಂಬದ ಧ್ಯೇಯ”