ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮಾತು ‘ಪ್ರೀತಿಪೂರ್ವಕ ದಯೆಯಿಂದ’ ಕೂಡಿರಲಿ

ನಿಮ್ಮ ಮಾತು ‘ಪ್ರೀತಿಪೂರ್ವಕ ದಯೆಯಿಂದ’ ಕೂಡಿರಲಿ

ನಿಮ್ಮ ಮಾತು ‘ಪ್ರೀತಿಪೂರ್ವಕ ದಯೆಯಿಂದ’ ಕೂಡಿರಲಿ

‘ಬಾಯಿದೆರೆದು ವಿವೇಕವನ್ನು ತೋರ್ಪಡಿಸುವಳು. ಆಕೆಯ ನಾಲಿಗೆಯಲ್ಲಿ ಪ್ರೀತಿಪೂರ್ವಕ ದಯೆಯಿರುವುದು.’—ಜ್ಞಾನೋ. 31:26 NW.

1, 2. (ಎ) ಯಾವ ಗುಣವನ್ನು ಬೆಳೆಸಿಕೊಳ್ಳುವಂತೆ ಯೆಹೋವನ ಆರಾಧಕರನ್ನು ಉತ್ತೇಜಿಸಲಾಗಿದೆ? (ಬಿ) ಈ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?

ಪು ರಾತನ ಕಾಲದ ಅರಸ ಲೆಮೂವೇಲನಿಗೆ ಅವನ ತಾಯಿಯಿಂದ ದೊರೆತ ಬೋಧಪ್ರದ ಉಪದೇಶದಲ್ಲಿ ಒಳ್ಳೇ ಪತ್ನಿಯಲ್ಲಿರಬೇಕಾದ ಒಂದು ಮುಖ್ಯ ಗುಣವು ಒಳಗೂಡಿತ್ತು. ಅವಳು ‘ಬಾಯಿದೆರೆದು ಜ್ಞಾನವನ್ನು ತೋರ್ಪಡಿಸುವಳು. ಆಕೆಯ ನಾಲಿಗೆಯಲ್ಲಿ ಪ್ರೀತಿಪೂರ್ವಕ ದಯೆಯಿರುವುದು’ ಎಂದು ಅವನಿಗೆ ತಿಳಿಸಲಾಯಿತು. (ಜ್ಞಾನೋ. 31:1, 10, 26, NW) ಪ್ರೀತಿಪೂರ್ವಕ ದಯೆಯು ವಿವೇಕಿನಿಯಾದ ಸ್ತ್ರೀಯ ನಾಲಿಗೆಯಲ್ಲಿ ಹಾಗೂ ಯೆಹೋವ ದೇವರನ್ನು ಮೆಚ್ಚಿಸಲು ಬಯಸುವ ಬೇರೆ ಎಲ್ಲರ ನಾಲಿಗೆಯಲ್ಲಿ ಇರುವುದು ಅಪೇಕ್ಷಣೀಯ. (ಜ್ಞಾನೋಕ್ತಿ 19:22 ಓದಿ. *) ಪ್ರೀತಿಪೂರ್ವಕ ದಯೆಯು ಸತ್ಯಾರಾಧಕರೆಲ್ಲರ ಮಾತುಗಳಲ್ಲಿ ತೋರಿಬರಬೇಕು.

2 ಪ್ರೀತಿಪೂರ್ವಕ ದಯೆ ಎಂದರೇನು? ಯಾರ ಕಡೆಗೆ ಅದನ್ನು ತೋರಿಸಬೇಕು? ‘ಪ್ರೀತಿಪೂರ್ವಕ ದಯೆಯು’ ನಮ್ಮ ನಾಲಿಗೆಯಲ್ಲಿರುವಂತೆ ಯಾವುದು ನಮಗೆ ಸಹಾಯಮಾಡುವುದು? ಹಾಗೆ ಮಾಡುವುದು ಕುಟುಂಬದಲ್ಲಿನ ಹಾಗೂ ಜೊತೆಕ್ರೈಸ್ತರೊಂದಿಗಿನ ನಮ್ಮ ಸಂವಾದವನ್ನು ಯಾವ ರೀತಿಯಲ್ಲಿ ಪ್ರಭಾವಿಸುವುದು?

ನಿಷ್ಠೆಯುಳ್ಳ ಪ್ರೀತಿಯಿಂದ ಪ್ರಚೋದಿಸಲ್ಪಡುವ ದಯೆ

3, 4. (ಎ) ಪ್ರೀತಿಪೂರ್ವಕ ದಯೆ ಎಂದರೇನು? (ಬಿ) ಪ್ರೀತಿಪೂರ್ವಕ ದಯೆಯು, ಸಾಮಾನ್ಯವಾಗಿ ತೋರಿಸುವ ದಯೆ ಅಥವಾ ಮಾನವ ದಯೆಗಿಂತ ಹೇಗೆ ಭಿನ್ನವಾಗಿದೆ?

3 ಪ್ರೀತಿಪೂರ್ವಕ ದಯೆ ಎಂಬ ಪದವೇ ಸೂಚಿಸುವಂತೆ ಅದರಲ್ಲಿ ಪ್ರೀತಿ ಹಾಗೂ ದಯೆ ಎಂಬ ಗುಣಗಳು ಒಳಗೂಡಿವೆ. ದಯೆ ಒಳಗೂಡಿದೆ ಅಂದರೆ ಇತರರಲ್ಲಿ ವೈಯಕ್ತಿಕ ಆಸಕ್ತಿ ತೋರಿಸುವುದು ಮತ್ತು ಆ ಕಾಳಜಿಯನ್ನು ಸಹಾಯಕರ ಕ್ರಿಯೆಗಳ ಮೂಲಕ ಹಾಗೂ ವಿವೇಚನಾಭರಿತ ಮಾತುಗಳ ಮೂಲಕ ತೋರಿಸುವುದಾಗಿದೆ. ಪ್ರೀತಿ ಸಹ ಅದರ ಅಂಶವಾಗಿರುವುದರಿಂದ ಪ್ರೀತಿಪೂರ್ವಕ ದಯೆ ತೋರಿಸುವುದೆಂದರೆ ಇತರರ ಮೇಲಣ ಪ್ರೀತಿಯಿಂದ ಅವರ ಹಿತಕ್ಷೇಮದಲ್ಲಿ ಆಸಕ್ತಿವಹಿಸುವುದೂ ಆಗಿದೆ. ಆದರೂ ಪ್ರೀತಿಪೂರ್ವಕ ದಯೆಯ ಮೂಲಭಾಷಾ ಪದವು ಪ್ರೀತಿಯಿಂದ ಹೊರಹೊಮ್ಮುವ ದಯೆಗಿಂತಲೂ ಹೆಚ್ಚಿನದ್ದನ್ನು ಸೂಚಿಸುತ್ತದೆ. ಪ್ರೀತಿಪೂರ್ವಕ ದಯೆಯು ಒಬ್ಬ ವ್ಯಕ್ತಿಯ ಬಗ್ಗೆ ಅದಕ್ಕಿರುವ ಉದ್ದೇಶವು ಸಾಧಿಸಲ್ಪಡುವ ತನಕ ಸಿದ್ಧಮನಸ್ಸಿನಿಂದ ಹಾಗೂ ನಿಷ್ಠೆಯಿಂದ ಆ ವ್ಯಕ್ತಿಗೆ ಅಂಟಿಕೊಂಡಿರುತ್ತದೆ.

4 ಪ್ರೀತಿಪೂರ್ವಕ ದಯೆಯು, ಸಾಮಾನ್ಯ ದಯೆಗಿಂತ ಇನ್ನೊಂದು ರೀತಿಯಲ್ಲೂ ಭಿನ್ನವಾಗಿದೆ. ಸಾಮಾನ್ಯವಾಗಿ ತೋರಿಸುವ ದಯೆ ಅಥವಾ ಮಾನವ ದಯೆಯನ್ನು ಅಪರಿಚಿತರ ಕಡೆಗೂ ತೋರಿಸಸಾಧ್ಯವಿದೆ. ಅಪೊಸ್ತಲ ಪೌಲ ಹಾಗೂ ಅವನೊಂದಿಗಿದ್ದ 275 ಜನರು ಹಡಗು ಒಡೆತಕ್ಕೆ ಗುರಿಯಾದಾಗ ಅವರಿಗೆ ಇಂಥ ದಯೆಯು ತೋರಿಸಲ್ಪಟ್ಟಿತು. ಅವರನ್ನು ಹಿಂದೆ ಒಮ್ಮೆಯೂ ಕೂಡ ಭೇಟಿಯಾಗಿರದ ಮಾಲ್ಟ ದ್ವೀಪದ ಜನರು ಅವರಿಗೆ ಸಹಾಯಮಾಡಿದರು. (ಅ. ಕಾ. 27:37–28:2) ಪ್ರೀತಿಪೂರ್ವಕ ದಯೆಯಾದರೊ ಈಗಾಗಲೇ ಸುಸಂಬಂಧ ಬೆಸೆದುಕೊಂಡಿರುವ ಇಬ್ಬರು ವ್ಯಕ್ತಿಗಳ ನಡುವೆ ಇರುವ ನಿಷ್ಠಾವಂತ ಒಲವಾಗಿದೆ. * ಈ ಗುಣವನ್ನೇ ಕೇನ್ಯರು “ಇಸ್ರಾಯೇಲ್ಯರು ಐಗುಪ್ತದಿಂದ ಬರುತ್ತಿದ್ದಾಗ” ತೋರಿಸಿದರು.—1 ಸಮು. 15:6.

ಧ್ಯಾನ ಹಾಗೂ ಪ್ರಾರ್ಥನೆ ಅತ್ಯಗತ್ಯ

5. ನಮ್ಮ ನಾಲಿಗೆಗೆ ಕಡಿವಾಣ ಹಾಕಲು ನಮಗೆ ಯಾವುದು ಸಹಾಯಮಾಡುವುದು?

5 ನಮ್ಮ ಮಾತುಗಳಲ್ಲಿ ಪ್ರೀತಿಪೂರ್ವಕ ದಯೆಯನ್ನು ತೋರಿಸುವುದು ಅಷ್ಟೇನೂ ಸುಲಭವಲ್ಲ. ನಾಲಿಗೆಗೆ ಸೂಚಿಸುತ್ತಾ ಶಿಷ್ಯ ಯಾಕೋಬನು ಬರೆದದ್ದು: “ಮಾನವಕುಲದಲ್ಲಿ ಯಾವನೂ ನಾಲಿಗೆಯನ್ನು ಪಳಗಿಸಲಾರನು. ಅದು ಹತೋಟಿಗೆ ಬಾರದ ಹಾನಿಕರ ಅಂಗವಾಗಿದ್ದು ಮರಣಕಾರಕ ವಿಷದಿಂದ ತುಂಬಿದೆ.” (ಯಾಕೋ. 3:8) ನಿಯಂತ್ರಿಸಲು ಬಹು ಕಷ್ಟಕರವಾಗಿರುವ ಈ ನಾಲಗೆಗೆ ನಾವು ಹೇಗೆ ಕಡಿವಾಣ ಹಾಕಬಲ್ಲೆವು? ಯೇಸು ತನ್ನ ದಿನದ ಧಾರ್ಮಿಕ ಮುಖಂಡರಿಗೆ ಹೇಳಿದ ಮಾತುಗಳು ಈ ಕುರಿತು ನಮಗೆ ಒಳನೋಟ ನೀಡುತ್ತವೆ. ಅವನಂದದ್ದು: “ಹೃದಯದಲ್ಲಿ ತುಂಬಿರುವುದನ್ನೇ ಬಾಯಿ ಮಾತಾಡುತ್ತದೆ.” (ಮತ್ತಾ. 12:34) ನಮ್ಮ ಮಾತು ಪ್ರೀತಿಪೂರ್ವಕ ದಯೆಯಿಂದ ಕೂಡಿರಬೇಕಾದರೆ ಆ ಗುಣವನ್ನು ನಾವು ನಮ್ಮ ಹೃದಯದಲ್ಲಿ ಅಂದರೆ ನಮ್ಮ ಆಂತರ್ಯದಲ್ಲಿ ಬೆಳೆಸಿಕೊಳ್ಳಬೇಕು. ಇದನ್ನು ಸಾಧಿಸಲು ಧ್ಯಾನ ಹಾಗೂ ಪ್ರಾರ್ಥನೆ ಹೇಗೆ ಸಹಾಯಮಾಡುತ್ತದೆ ಎಂಬುದನ್ನು ನಾವೀಗ ನೋಡೋಣ.

6. ಯೆಹೋವನ ಪ್ರೀತಿಪೂರ್ವಕ ದಯೆಯ ಕೆಲಸಗಳ ಕುರಿತು ನಾವೇಕೆ ಗಣ್ಯತಾಭಾವದಿಂದ ಧ್ಯಾನಿಸಬೇಕು?

6 ಯೆಹೋವ ದೇವರು ಪ್ರೀತಿಪೂರ್ವಕ ದಯೆಯುಳ್ಳವನೆಂದು ಬೈಬಲ್‌ ಹೇಳುತ್ತದೆ. (ವಿಮೋ. 34:6) ಕೀರ್ತನೆಗಾರನು ಹಾಡಿದ್ದು: “ಯೆಹೋವನೇ, ಭೂಲೋಕವು ನಿನ್ನ ಕೃಪೆಯಿಂದ ಪೂರ್ಣವಾಗಿದೆ.” (ಕೀರ್ತ. 119:64) ಯೆಹೋವನು ತನ್ನ ಆರಾಧಕರ ಕಡೆಗೆ ಹೇಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸಿದನು ಎಂಬುದನ್ನು ಸೂಚಿಸುವ ಅನೇಕ ವೃತ್ತಾಂತಗಳು ಬೈಬಲಿನಲ್ಲಿವೆ. ‘ಯೆಹೋವನ ಪ್ರವರ್ತನೆಗಳನ್ನು’ ಅಥವಾ ಅವನು ವ್ಯವಹರಿಸಿದ ರೀತಿಯನ್ನು ಗಣ್ಯತಾಭಾವದಿಂದ ಧ್ಯಾನಿಸಲು ಸಮಯ ತಕ್ಕೊಳ್ಳುವುದು ಆ ದೈವಿಕ ಗುಣವನ್ನು ಬೆಳೆಸಿಕೊಳ್ಳುವ ಅಪೇಕ್ಷೆಯನ್ನು ನಮ್ಮಲ್ಲಿ ಉಂಟುಮಾಡಬಲ್ಲದು.—ಕೀರ್ತನೆ 77:12 ಓದಿ.

7, 8. (ಎ) ಲೋಟ ಮತ್ತು ಅವನ ಕುಟುಂಬಕ್ಕಾಗಿ ಯೆಹೋವನು ಪ್ರೀತಿಪೂರ್ವಕ ದಯೆಯ ಯಾವ ಕ್ರಿಯೆಯನ್ನು ಮಾಡಿದನು? (ಬಿ) ದೇವರ ಪ್ರೀತಿಪೂರ್ವಕ ದಯೆಗೆ ಪಾತ್ರನಾದದ್ದರ ಕುರಿತು ದಾವೀದನಿಗೆ ಹೇಗನಿಸಿತು?

7 ಉದಾಹರಣೆಗೆ, ಸೋದೋಮ್‌ ಪಟ್ಟಣದಲ್ಲಿ ವಾಸಿಸುತ್ತಿದ್ದ ಅಬ್ರಹಾಮನ ಸೋದರಳಿಯ ಲೋಟ ಹಾಗೂ ಅವನ ಕುಟುಂಬವನ್ನು ಆ ಪಟ್ಟಣದ ನಾಶನದಿಂದ ಯೆಹೋವನು ಹೇಗೆ ಪಾರುಗೊಳಿಸಿದನು ಎಂಬುದರ ಕುರಿತು ಯೋಚಿಸಿರಿ. ನಾಶನದ ಸಮಯ ಹತ್ತಿರವಾಗುತ್ತಿದ್ದಂತೆ ಲೋಟನ ಮನೆಗೆ ಬಂದಿದ್ದ ದೇವದೂತರು ಅವನು ತನ್ನ ಕುಟುಂಬದೊಂದಿಗೆ ಪಟ್ಟಣವನ್ನು ಬೇಗನೆ ಬಿಟ್ಟುಹೋಗುವಂತೆ ಒತ್ತಾಯಿಸಿದರು. ಆದರೆ “ಅವನು ತಡಮಾಡಲು ಯೆಹೋವನು ಅವನನ್ನು ಕನಿಕರಿಸಿದ್ದರಿಂದ ಆ [ದೇವದೂತರು] ಅವನನ್ನೂ ಅವನ ಹೆಂಡತಿ ಮಕ್ಕಳನ್ನೂ ಕೈಹಿಡಿದು ಹೊರಗೆ ತಂದು ಊರಾಚೆಗೆ ಬಿಟ್ಟರು” ಎಂದು ಬೈಬಲ್‌ ಹೇಳುತ್ತದೆ. ದೇವರ ಈ ರಕ್ಷಣಾಕಾರ್ಯದ ಕುರಿತು ಯೋಚಿಸುವಾಗ ಅದು ನಮ್ಮ ಮನಸ್ಸನ್ನು ಸ್ಪರ್ಶಿಸುವುದಿಲ್ಲವೇ? ದೇವರ ಪ್ರೀತಿಪೂರ್ವಕ ದಯೆಯ ಅಭಿವ್ಯಕ್ತಿ ಅದಾಗಿತ್ತೆಂದು ಒಪ್ಪಿಕೊಳ್ಳುವಂತೆ ನಾವು ಪ್ರಚೋದಿಸಲ್ಪಡುವುದಿಲ್ಲವೇ?—ಆದಿ. 19:16, 19.

8 ಪುರಾತನ ಇಸ್ರಾಯೇಲಿನ ರಾಜ ದಾವೀದನ ಉದಾಹರಣೆಯನ್ನೂ ಪರಿಗಣಿಸಿರಿ. “[ಯೆಹೋವನು] ನಿನ್ನ ಎಲ್ಲಾ ಅಪರಾಧಗಳನ್ನು ಕ್ಷಮಿಸುವವನೂ ಸಮಸ್ತರೋಗಗಳನ್ನು ವಾಸಿಮಾಡುವವನೂ” ಆಗಿದ್ದಾನೆ ಎಂದು ಅವನು ಹಾಡಿದನು. ಬತ್ಷೆಬೆಯೊಂದಿಗೆ ಮಾಡಿದ ಪಾಪವನ್ನು ದೇವರು ಕ್ಷಮಿಸಿದ್ದಕ್ಕಾಗಿ ದಾವೀದನೆಷ್ಟು ಕೃತಜ್ಞನಾಗಿದ್ದಿರಬೇಕು! ಅವನು ಯೆಹೋವನನ್ನು ಕೊಂಡಾಡುತ್ತಾ ಹೇಳಿದ್ದು: “ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ಕೃಪೆಯು ಅಷ್ಟು ಅಪಾರವಾಗಿದೆ.” (ಕೀರ್ತ. 103:3, 11) ಇವುಗಳನ್ನು ಹಾಗೂ ಬೈಬಲಿನಲ್ಲಿರುವ ಇನ್ನಿತರ ವೃತ್ತಾಂತಗಳನ್ನು ಧ್ಯಾನಿಸುವುದು ನಮ್ಮ ಹೃದಯಗಳಲ್ಲಿ ಯೆಹೋವನ ಪ್ರೀತಿಪೂರ್ವಕ ದಯೆಗಾಗಿ ಗಣ್ಯತೆಯನ್ನು ತುಂಬಿಸಿ ಆತನಿಗೆ ಕೃತಜ್ಞತಾಸ್ತುತಿ ಸಲ್ಲಿಸುವಂತೆ ಪ್ರಚೋದಿಸುತ್ತದೆ. ನಮ್ಮ ಹೃದಯದಲ್ಲಿ ಕೃತಜ್ಞತೆ ಹೆಚ್ಚಾದಂತೆ ಸತ್ಯ ದೇವರನ್ನು ಅನುಕರಿಸುವ ನಮ್ಮ ಅಪೇಕ್ಷೆಯೂ ಹೆಚ್ಚಾಗುತ್ತದೆ.—ಎಫೆ. 5:1.

9. ತಮ್ಮ ದಿನನಿತ್ಯ ಜೀವನದಲ್ಲಿ ಪ್ರೀತಿಪೂರ್ವಕ ದಯೆಯನ್ನು ತೋರಿಸಲು ಯೆಹೋವನ ಆರಾಧಕರಿಗೆ ಯಾವ ಬಲವಾದ ಕಾರಣವಿದೆ?

9 ತನ್ನೊಂದಿಗೆ ಈಗಾಗಲೇ ಮೆಚ್ಚಿಗೆಯ ಸಂಬಂಧದಲ್ಲಿರುವವರಿಗೆ ಯೆಹೋವನು ಪ್ರೀತಿಪೂರ್ವಕ ದಯೆಯನ್ನು ಅಥವಾ ನಿಷ್ಠೆಯುಳ್ಳ ಪ್ರೀತಿಯನ್ನು ತೋರಿಸುತ್ತಾನೆ ಎಂದು ಬೈಬಲ್‌ ಉದಾಹರಣೆಗಳು ತೋರಿಸುತ್ತವೆ. ಆದರೆ ಜೀವಸ್ವರೂಪ ದೇವರೊಂದಿಗೆ ಅಂಥ ಆಪ್ತ ಸಂಬಂಧ ಇಲ್ಲದಿರುವವರ ಕುರಿತೇನು? ಅವರೊಂದಿಗೆ ಯೆಹೋವನು ಕಟುವಾಗಿ ಅಥವಾ ನಿರ್ದಯೆಯಿಂದ ವ್ಯವಹರಿಸುತ್ತಾನೊ? ಇಲ್ಲವೇ ಇಲ್ಲ. “[ದೇವರು] ಉಪಕಾರನೆನಸದವರಿಗೂ ಕೆಟ್ಟವರಿಗೂ ದಯೆತೋರಿಸುವವನಾಗಿದ್ದಾನೆ” ಎಂದು ಲೂಕ 6:35 ಹೇಳುತ್ತದೆ. “ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ ಮತ್ತು ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.” (ಮತ್ತಾ. 5:45) ಸತ್ಯವನ್ನು ಕಲಿತು ಅದರ ಪ್ರಕಾರ ಜೀವಿಸಲು ಪ್ರಾರಂಭಿಸುವ ಮೊದಲು ನಾವು ದೇವರ ದಯೆಗೆ ಅಥವಾ ಎಲ್ಲರಿಗೆ ದೇವರು ತೋರಿಸುವ ಸಾಮಾನ್ಯ ದಯೆಗೆ ಪಾತ್ರರಾಗಿದ್ದೆವು. ಆದರೆ ಆತನ ಆರಾಧಕರಾಗಿರುವುದರಿಂದ ಈಗ ನಾವು ಆತನ ನಿಷ್ಠೆಯುಳ್ಳ ಪ್ರೀತಿಗೆ ಅಂದರೆ ಆತನ ಕದಲದ ಪ್ರೀತಿಪೂರ್ವಕ ದಯೆಗೆ ಪಾತ್ರರಾಗಿದ್ದೇವೆ. (ಯೆಶಾಯ 54:10 ಓದಿ.) ಅದಕ್ಕಾಗಿ ನಾವೆಷ್ಟು ಕೃತಜ್ಞರಾಗಿರಬಲ್ಲೆವು! ನಮ್ಮ ಮಾತುಗಳಲ್ಲಿ ಹಾಗೂ ದಿನನಿತ್ಯ ಜೀವನದ ಇತರ ಕ್ಷೇತ್ರಗಳಲ್ಲಿ ನಾವು ಪ್ರೀತಿಪೂರ್ವಕ ದಯೆಯನ್ನು ತೋರಿಸುವಂತೆ ಇದು ಬಲವಾದ ಕಾರಣವನ್ನು ಕೊಡುವುದಿಲ್ಲವೆ?

10. ಪ್ರೀತಿಪೂರ್ವಕ ದಯೆಯನ್ನು ನಮ್ಮ ವ್ಯಕ್ತಿತ್ವದ ಭಾಗವಾಗಿ ಮಾಡುವುದರಲ್ಲಿ ಪ್ರಾರ್ಥನೆಯು ಒಂದು ಅತ್ಯಮೂಲ್ಯ ಸಹಾಯಕವಾಗಿದೆ ಏಕೆ?

10 ಪ್ರೀತಿಪೂರ್ವಕ ದಯೆಯನ್ನು ನಾವು ಬೆಳೆಸಿಕೊಳ್ಳಲು ಒಂದು ಅತ್ಯಮೂಲ್ಯ ಸಹಾಯಕವು ಪ್ರಾರ್ಥನೆಯ ಸುಯೋಗವೇ. ಏಕೆಂದರೆ ಪ್ರೀತಿಪೂರ್ವಕ ದಯೆಯಲ್ಲಿ ಕೂಡಿರುವ ಪ್ರೀತಿ ಮತ್ತು ದಯೆ ಯೆಹೋವನ ಪವಿತ್ರಾತ್ಮದ ಫಲದ ಅಂಶಗಳಾಗಿವೆ. (ಗಲಾ. 5:22) ಆ ಪವಿತ್ರಾತ್ಮದ ಪ್ರಭಾವಕ್ಕೆ ಒಳಗಾಗುವ ಮೂಲಕ ನಾವು ನಮ್ಮ ಹೃದಯಗಳಲ್ಲಿ ಪ್ರೀತಿಪೂರ್ವಕ ದಯೆಯನ್ನು ಬೆಳೆಸಿಕೊಳ್ಳಬಲ್ಲೆವು. ಯೆಹೋವನ ಪವಿತ್ರಾತ್ಮವನ್ನು ಪಡೆದುಕೊಳ್ಳುವ ಅತಿ ನೇರವಾದ ವಿಧವು ಪ್ರಾರ್ಥನೆಯಲ್ಲಿ ಅದಕ್ಕಾಗಿ ಬೇಡುವುದೇ. (ಲೂಕ 11:13) ನಾವು ದೇವರ ಆತ್ಮಕ್ಕಾಗಿ ಪದೇ ಪದೇ ಬೇಡಿಕೊಳ್ಳುವುದು ಹಾಗೂ ಅದರ ಮಾರ್ಗದರ್ಶನೆಯನ್ನು ಸ್ವೀಕರಿಸುವುದು ಯೋಗ್ಯವಾಗಿದೆ. ಹೌದು, ನಮ್ಮ ನಾಲಿಗೆಯಲ್ಲಿ ಪ್ರೀತಿಪೂರ್ವಕ ದಯೆಯಿರಬೇಕಾದರೆ ಧ್ಯಾನಿಸುವುದು ಹಾಗೂ ಪ್ರಾರ್ಥಿಸುವುದು ಅತ್ಯಾವಶ್ಯಕ.

ವಿವಾಹಿತ ದಂಪತಿಯ ಮಾತಿನಲ್ಲಿ ಪ್ರೀತಿಪೂರ್ವಕ ದಯೆ

11. (ಎ) ಗಂಡಂದಿರು ತಮ್ಮ ಹೆಂಡತಿಯರಿಗೆ ಪ್ರೀತಿಪೂರ್ವಕ ದಯೆ ತೋರಿಸುವಂತೆ ಯೆಹೋವನು ಅಪೇಕ್ಷಿಸುತ್ತಾನೆ ಎಂಬುದು ನಮಗೆ ಹೇಗೆ ಗೊತ್ತು? (ಬಿ) ನಾಲಿಗೆಯು ಪ್ರೀತಿಪೂರ್ವಕ ದಯೆಯಿಂದ ಪ್ರಭಾವಿತವಾಗಿದ್ದರೆ ಗಂಡನಿಗೆ ಯಾವ ವಿಧದಲ್ಲಿ ಸಹಾಯಮಾಡಬಲ್ಲದು?

11 ಅಪೊಸ್ತಲ ಪೌಲನು ಗಂಡಂದಿರಿಗೆ ಈ ಬುದ್ಧಿವಾದ ಕೊಟ್ಟನು: “ಕ್ರಿಸ್ತನು ಸಹ ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟಂತೆಯೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸುತ್ತಾ ಇರಿ.” (ಎಫೆ. 5:25) ಯೆಹೋವನು ಆದಾಮಹವ್ವರಿಗೆ ಹೇಳಿದ ಈ ಮುಂದಿನ ಮಾತುಗಳನ್ನೂ ಅಪೊಸ್ತಲನು ಅವರಿಗೆ ನೆನಪುಹುಟ್ಟಿಸುತ್ತಾನೆ: “ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು ಮತ್ತು ಅವರಿಬ್ಬರು ಒಂದೇ ಶರೀರವಾಗುವರು.” (ಎಫೆ. 5:31) ಗಂಡಂದಿರು ತಮ್ಮ ಹೆಂಡತಿಯರಿಗೆ ನಿಷ್ಠಾವಂತರಾಗಿದ್ದು ಅವರಿಗೆ ಯಾವಾಗಲೂ ಪ್ರೀತಿಪೂರ್ವಕ ದಯೆಯನ್ನು ತೋರಿಸಬೇಕೆಂಬುದು ಯೆಹೋವನ ಅಪೇಕ್ಷೆಯಾಗಿದೆಯೆಂದು ಇದರಿಂದ ಸ್ಪಷ್ಟವಾಗುತ್ತದೆ. ಒಬ್ಬ ಗಂಡನ ನಾಲಿಗೆಯು ನಿಷ್ಠಾವಂತ ಪ್ರೀತಿಯಿಂದ ಪ್ರಭಾವಿತವಾಗಿದ್ದರೆ ಅವನು ತನ್ನ ಹೆಂಡತಿಯ ತಪ್ಪುಗಳನ್ನು ಇತರರ ಮುಂದೆ ಬಯಲು ಮಾಡುವುದಿಲ್ಲ ಅಥವಾ ಅವಳನ್ನು ಹೀನೈಸಿ ಮಾತಾಡುವುದಿಲ್ಲ. ಅವಳನ್ನು ಹೊಗಳಿ ಮಾತಾಡಲು ಸಂತೋಷಿಸುತ್ತಾನೆ. (ಜ್ಞಾನೋ. 31:28, 29) ಆದರೆ ಒಂದುವೇಳೆ ಯಾವ ಕಾರಣದಿಂದಾದರೂ ಅವರ ಮಧ್ಯೆ ಜಗಳ ಉಂಟಾಗುವಲ್ಲಿ ಗಂಡನು ಹೆಂಡತಿಯನ್ನು ಅವಮಾನಿಸದಂತೆ ತನ್ನ ನಾಲಿಗೆಯನ್ನು ಹತೋಟಿಯಲ್ಲಿಡಲು ಪ್ರೀತಿಪೂರ್ವಕ ದಯೆಯು ಪ್ರೇರಿಸುತ್ತದೆ.

12. ಪ್ರೀತಿಪೂರ್ವಕ ದಯೆಯು ಪತ್ನಿಯ ನಾಲಿಗೆಯನ್ನು ಪ್ರಭಾವಿಸುತ್ತದೆ ಎಂದು ಅವಳ ಮಾತುಗಳು ಹೇಗೆ ತೋರಿಸಿಕೊಡುತ್ತವೆ?

12 ಪ್ರೀತಿಪೂರ್ವಕ ದಯೆಯು ಹೆಂಡತಿಯ ನಾಲಿಗೆಯನ್ನು ಸಹ ಪ್ರಭಾವಿಸಬೇಕು. ಆಕೆಯ ಮಾತು ಲೋಕದ ಮನೋಭಾವದಿಂದ ಪ್ರಭಾವಿಸಲ್ಪಡಬಾರದು. ‘ತನ್ನ ಗಂಡನ ಕಡೆಗೆ ಆಳವಾದ ಗೌರವವಿರುವ’ ಆಕೆ ಇತರರ ಮುಂದೆ ಅವನ ಕುರಿತು ಒಳ್ಳೇದನ್ನೇ ಮಾತಾಡುತ್ತಾಳೆ ಹಾಗೂ ಇತರರಿಗೆ ಈ ಮೊದಲೇ ಗಂಡನ ಕಡೆಗಿರುವ ಗೌರವವನ್ನು ಹೆಚ್ಚಿಸುತ್ತಾಳೆ. (ಎಫೆ. 5:33) ಮಕ್ಕಳಿಗೆ ತಮ್ಮ ತಂದೆಯ ಕಡೆಗಿರುವ ಗೌರವವನ್ನು ಕುಂದಿಸಲು ಆಕೆ ಬಯಸುವುದಿಲ್ಲ. ಆದುದರಿಂದ ಆಕೆ ಮಕ್ಕಳ ಸಮ್ಮುಖದಲ್ಲಿ ಗಂಡನೊಂದಿಗೆ ಜಗಳವಾಡುವುದಿಲ್ಲ ಅಥವಾ ಅವನ ಅಭಿಪ್ರಾಯವನ್ನು ಪ್ರಶ್ನಿಸುವುದಿಲ್ಲ. ಅಂಥ ವಿಚಾರಗಳನ್ನು ಅವರಿಬ್ಬರೇ ಇರುವಾಗ ಮಾತಾಡಿ ಬಗೆಹರಿಸುವಳು. “ಜ್ಞಾನವಂತೆಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋ. 14:1) ಹೀಗೆ ಆಕೆಯ ಮನೆಯು ಇಡೀ ಕುಟುಂಬಕ್ಕೆ ಹಿತಕರ ಹಾಗೂ ನೆಮ್ಮದಿಯ ಬೀಡಾಗಿರುವುದು.

13. ಮುಖ್ಯವಾಗಿ ಎಲ್ಲಿ ಪ್ರೀತಿಪೂರ್ವಕ ದಯೆಯು ಪ್ರಭಾವ ಬೀರಬೇಕು? ಅದು ಹೇಗೆ?

13 ವಿವಾಹಿತ ದಂಪತಿಯು ತಮ್ಮ ಮನೆಯ ಏಕಾಂತದಲ್ಲೂ ತಾವು ಒಬ್ಬರನ್ನೊಬ್ಬರು ಗೌರವಿಸುತ್ತೇವೆಂದು ತೋರಿಸುವ ರೀತಿಯಲ್ಲಿ ತಮ್ಮ ನಾಲಿಗೆಯನ್ನು ಉಪಯೋಗಿಸುತ್ತಿರಬೇಕು. “ಕ್ರೋಧ, ಕೋಪ, ಕೆಟ್ಟತನ, ನಿಂದಾತ್ಮಕ ಮಾತು ಮತ್ತು ನಿಮ್ಮ ಬಾಯಿಂದ ಹೊರಡುವ ಅಶ್ಲೀಲವಾದ ಮಾತು ಇವುಗಳೆಲ್ಲವನ್ನು ನಿಮ್ಮಿಂದ ತೊಲಗಿಸಿಬಿಡಿರಿ” ಎಂದು ಪೌಲನು ಬರೆದನು. ಅವನು ಮತ್ತೂ ಹೇಳಿದ್ದು: “ನೀವು ಸಹಾನುಭೂತಿಯ ಕೋಮಲ ಮಮತೆಯನ್ನೂ ದಯೆಯನ್ನೂ ದೀನಮನಸ್ಸನ್ನೂ ಸೌಮ್ಯಭಾವವನ್ನೂ ದೀರ್ಘ ಸಹನೆಯನ್ನೂ ಧರಿಸಿಕೊಳ್ಳಿರಿ. . . . ಜೊತೆಗೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಏಕೆಂದರೆ ಇದು ಐಕ್ಯದ ಪರಿಪೂರ್ಣ ಬಂಧವಾಗಿದೆ.” (ಕೊಲೊ. 3:8, 12-14) ಮನೆಯಲ್ಲಿ ಮಕ್ಕಳು ಪ್ರೀತಿಪರ ಹಾಗೂ ದಯಾಭರಿತ ಮಾತುಗಳನ್ನು ಯಾವಾಗಲೂ ಕೇಳಿಸಿಕೊಳ್ಳುತ್ತಿರುವುದಾದರೆ ಅವರು ಏಳಿಗೆ ಹೊಂದುವರು ಮಾತ್ರವಲ್ಲ ಅವರು ತಮ್ಮ ಹೆತ್ತವರು ಮಾತಾಡುವ ರೀತಿಯನ್ನೇ ಅನುಕರಿಸುವ ಸಂಭಾವ್ಯತೆ ಹೆಚ್ಚು.

14. ತಮ್ಮ ಪಾಲನೆಯ ಕೆಳಗಿರುವವರನ್ನು ಸಾಂತ್ವನಗೊಳಿಸಲು ಕುಟುಂಬ ತಲೆಗಳು ತಮ್ಮ ನಾಲಿಗೆಯನ್ನು ಹೇಗೆ ಉಪಯೋಗಿಸಬಲ್ಲರು?

14 ಯೆಹೋವನ ಕುರಿತು ಕೀರ್ತನೆಗಾರನು ಬರೆದದ್ದು: “ನನ್ನ ಸಮಾಧಾನಕ್ಕೋಸ್ಕರ ಕೃಪೆಯನ್ನು ದಯಪಾಲಿಸು.” (ಕೀರ್ತ. 119:76) ಯೆಹೋವನು ತನ್ನ ಜನರನ್ನು ಸಮಾಧಾನಗೊಳಿಸುವ ಅಥವಾ ಸಾಂತ್ವನಗೊಳಿಸುವ ಒಂದು ಎದ್ದುಕಾಣುವ ವಿಧವು ಅವರಿಗೆ ಬುದ್ಧಿವಾದ ಮತ್ತು ಮಾರ್ಗದರ್ಶನೆಯನ್ನು ಕೊಡುವುದೇ. (ಕೀರ್ತ. 119:105) ನಮ್ಮ ಸ್ವರ್ಗೀಯ ತಂದೆಯ ಈ ಮಾದರಿಯಿಂದ ಕುಟುಂಬ ತಲೆಗಳು ಹೇಗೆ ಪ್ರಯೋಜನ ಪಡೆದುಕೊಳ್ಳಬಲ್ಲರು ಮತ್ತು ತಮ್ಮ ಪಾಲನೆಯ ಕೆಳಗೆ ಇರುವವರನ್ನು ಸಾಂತ್ವನಗೊಳಿಸಲು ತಮ್ಮ ನಾಲಿಗೆಯನ್ನು ಹೇಗೆ ಉಪಯೋಗಿಸಬಲ್ಲರು? ಅಗತ್ಯವಿರುವ ಮಾರ್ಗದರ್ಶನೆ ಹಾಗೂ ಉತ್ತೇಜನವನ್ನು ಕೊಡುವ ಮೂಲಕವೇ. ಆಧ್ಯಾತ್ಮಿಕ ನಿಕ್ಷೇಪಗಳನ್ನು ಕಂಡುಕೊಳ್ಳಲು ಕುಟುಂಬ ಆರಾಧನೆಯ ಸಂಜೆಯು ಎಂಥ ಉತ್ತಮ ಅವಕಾಶವಾಗಿದೆ!—ಜ್ಞಾನೋ. 24:4.

ಜೊತೆ ವಿಶ್ವಾಸಿಗಳಿಗೆ ನಿಷ್ಠೆಯುಳ್ಳ ಪ್ರೀತಿ ತೋರಿಸಿರಿ

15. ಹಿರಿಯರು ಮತ್ತು ಆಧ್ಯಾತ್ಮಿಕವಾಗಿ ಪ್ರೌಢರಾಗಿರುವವರು ಸಭೆಯಲ್ಲಿರುವ ಇತರರನ್ನು ಕಾಪಾಡಲು ತಮ್ಮ ನಾಲಿಗೆಯನ್ನು ಹೇಗೆ ಉಪಯೋಗಿಸಬಹುದು?

15 “ನಿನ್ನ ಕೃಪಾಸತ್ಯತೆಗಳು ನನ್ನನ್ನು ಯಾವಾಗಲೂ ಕಾಪಾಡಲಿ” ಎಂದು ರಾಜ ದಾವೀದನು ಪ್ರಾರ್ಥಿಸಿದನು. (ಕೀರ್ತ. 40:11) ಈ ವಿಷಯದಲ್ಲಿ ಕ್ರೈಸ್ತ ಹಿರಿಯರು ಹಾಗೂ ಆಧ್ಯಾತ್ಮಿಕವಾಗಿ ಪ್ರೌಢರಾಗಿರುವವರು ಯೆಹೋವನನ್ನು ಹೇಗೆ ಅನುಕರಿಸಬಲ್ಲರು? ಬೈಬಲಿನ ಮಾಹಿತಿಗೆ ಗಮನ ಸೆಳೆಯಲು ನಮ್ಮ ನಾಲಿಗೆಯನ್ನು ಉಪಯೋಗಿಸುವುದು ನಿಶ್ಚಯವಾಗಿಯೂ ಪ್ರೀತಿಪೂರ್ವಕ ದಯೆಯುಳ್ಳ ಕ್ರಿಯೆಯಾಗಿದೆ.—ಜ್ಞಾನೋ. 17:17.

16, 17. ನಮ್ಮ ನಾಲಿಗೆಯು ಪ್ರೀತಿಪೂರ್ವಕ ದಯೆಯಿಂದ ಪ್ರಭಾವಿಸಲ್ಪಟ್ಟಿದೆ ಎಂದು ತೋರಿಸುವ ಕೆಲವು ವಿಧಗಳಾವುವು?

16 ಒಬ್ಬ ಕ್ರೈಸ್ತನು ಬೈಬಲ್‌ ಮೂಲತತ್ತ್ವಗಳಿಗೆ ವಿರುದ್ಧವಾಗಿ ಹೋಗುತ್ತಿರುವುದನ್ನು ನಾವು ಗಮನಿಸುವಲ್ಲಿ ಏನು ಮಾಡಬೇಕು? ಅವನನ್ನು ಸರಿಪಡಿಸಲು ಪ್ರಯತ್ನಿಸಲಿಕ್ಕಾಗಿ ನಮ್ಮ ನಾಲಿಗೆಯನ್ನು ಉಪಯೋಗಿಸುವಂತೆ ಪ್ರೀತಿಪೂರ್ವಕ ದಯೆಯು ನಮ್ಮನ್ನು ಪ್ರಚೋದಿಸುವುದಿಲ್ಲವೆ? (ಕೀರ್ತ. 141:5) ಜೊತೆ ವಿಶ್ವಾಸಿಯು ಗಂಭೀರ ಪಾಪವನ್ನು ಮಾಡಿರುವುದು ತಿಳಿದುಬರುವಲ್ಲಿ ನಾವೇನು ಮಾಡುವೆವು? ‘ಸಭೆಯ ಹಿರೀಪುರುಷರನ್ನು ತನ್ನ ಬಳಿಗೆ ಕರೆಯುವಂತೆ’ ಅವನನ್ನು ಉತ್ತೇಜಿಸಲು ನಿಷ್ಠೆಯುಳ್ಳ ಪ್ರೀತಿ ನಮ್ಮನ್ನು ಪ್ರಚೋದಿಸುತ್ತದೆ. ಆಗ ಹಿರಿಯರು ‘ಯೆಹೋವನ ಹೆಸರಿನಲ್ಲಿ ಅವನಿಗೆ ಎಣ್ಣೆಯನ್ನು ಹಚ್ಚಿ ಅವನಿಗೋಸ್ಕರ ಪ್ರಾರ್ಥಿಸಸಾಧ್ಯವಾಗುತ್ತದೆ.’ (ಯಾಕೋ. 5:14) ಒಂದುವೇಳೆ ಆ ತಪ್ಪಿತಸ್ಥನು ಹಿರಿಯರನ್ನು ಸಂಪರ್ಕಿಸದಿದ್ದರೆ ನಾವು ಆ ವಿಷಯವನ್ನು ಹಿರಿಯರಿಗೆ ತಿಳಿಸದೇ ಇರುವುದು ಪ್ರೀತಿಪರವೂ ಅಲ್ಲ ದಯೆಯೂ ಅಲ್ಲ. ನಮ್ಮಲ್ಲಿ ಕೆಲವರು ನಿರುತ್ತೇಜನಗೊಂಡವರೂ, ಒಂಟಿಗರೂ, ಅಯೋಗ್ಯರೆಂಬ ಭಾವನೆಯಿಂದ ಪೀಡಿತರೂ ಹಾಗೂ ನಿರಾಶೆಯಿಂದ ಕಂಗೆಟ್ಟವರೂ ಆಗಿರಬಹುದು. ಅಂಥ ‘ಮನಗುಂದಿದವರನ್ನು ಸಾಂತ್ವನಗೊಳಿಸುವಂಥ ರೀತಿಯಲ್ಲಿ ಮಾತಾಡುವುದೇ’ ನಮ್ಮ ನಾಲಿಗೆಯಲ್ಲಿ ಪ್ರೀತಿಪೂರ್ವಕ ದಯೆಯಿದೆಯೆಂದು ತೋರಿಸುವ ಉತ್ತಮ ವಿಧವಾಗಿದೆ.—1 ಥೆಸ. 5:14.

17 ದೇವರ ವಿರೋಧಿಗಳು ಜೊತೆ ವಿಶ್ವಾಸಿಗಳ ಕುರಿತು ಸುಳ್ಳುಸುದ್ದಿ ಹಬ್ಬಿಸುವಾಗ ನಾವು ಹೇಗೆ ಪ್ರತಿಕ್ರಿಯಿಸಬೇಕು? ನಮ್ಮ ಸಹೋದರರ ನಂಬಿಗಸ್ತಿಕೆಯ ಕುರಿತು ಸಂದೇಹಪಡುವ ಬದಲಿಗೆ ಅಂಥ ಮಾತುಗಳಿಗೆ ಪ್ರತಿಕ್ರಿಯೆ ತೋರಿಸದೆ ತಳ್ಳಿಹಾಕಬೇಕು. ಅಥವಾ ಆ ಸುಳ್ಳಾರೋಪಿಯು ವಿವೇಚನೆಯುಳ್ಳವನಾಗಿದ್ದರೆ, ಅವನ ಆರೋಪಗಳಿಗೆ ಆಧಾರವೇನೆಂದು ಕೇಳಬಹುದು. ವಿರೋಧಿಗಳು ದೇವಜನರಿಗೆ ಹಾನಿಯನ್ನುಂಟುಮಾಡಲು ಅವರ ಕುರಿತು ಮಾಹಿತಿಯನ್ನು ಪಡೆದುಕೊಳ್ಳಲು ಪ್ರಯತ್ನಿಸಿದರೆ ಅಂಥ ಮಾಹಿತಿಯನ್ನು ಒದಗಿಸದಂತೆ ನಿಷ್ಠೆಯುಳ್ಳ ಪ್ರೀತಿಯು ನಮ್ಮನ್ನು ಪ್ರಚೋದಿಸುತ್ತದೆ.—ಜ್ಞಾನೋ. 18:24.

‘ಪ್ರೀತಿಪೂರ್ವಕ ದಯೆಯುಳ್ಳವನು ಜೀವವನ್ನು ಪಡೆಯುವನು’

18, 19. ನಮ್ಮ ಜೊತೆ ಆರಾಧಕರೊಂದಿಗೆ ವ್ಯವಹರಿಸುವಾಗ ಪ್ರೀತಿಪೂರ್ವಕ ದಯೆಯು ನಮ್ಮ ನಾಲಿಗೆಯನ್ನು ಬಿಟ್ಟುಹೋಗಬಾರದು ಏಕೆ?

18 ಯೆಹೋವನನ್ನು ಆರಾಧಿಸುತ್ತಿರುವ ಇತರರೊಂದಿಗೆ ನಾವು ಮಾಡುವ ಎಲ್ಲ ವ್ಯವಹಾರಗಳಲ್ಲಿ ನಿಷ್ಠೆಯುಳ್ಳ ಪ್ರೀತಿ ತೋರಿಬರಬೇಕು. ಕಷ್ಟಕರ ಸನ್ನಿವೇಶಗಳಲ್ಲೂ ಪ್ರೀತಿಪೂರ್ವಕ ದಯೆಯು ನಮ್ಮ ನಾಲಿಗೆಯನ್ನು ಬಿಟ್ಟುಹೋಗಬಾರದು. ಇಸ್ರಾಯೇಲ್ಯರ ಪ್ರೀತಿಪೂರ್ವಕ ದಯೆಯು ‘ಇಬ್ಬನಿಗೆ ಸಮಾನವಾಗಿ ಬೇಗನೆ ಮಾಯವಾಗಿ ಹೋದಾಗ’ ಯೆಹೋವನು ಅಸಂತೋಷಗೊಂಡನು. (ಹೋಶೇ. 6:4, 6) ಅದಕ್ಕೆ ಬದಲಾಗಿ ನಾವು ಪ್ರೀತಿಪೂರ್ವಕ ದಯೆಯನ್ನು ಕ್ರಮವಾಗಿ ತೋರಿಸುವಾಗ ಯೆಹೋವನು ಸಂತೋಷಗೊಳ್ಳುತ್ತಾನೆ. ಈ ಗುಣವನ್ನು ಅನುಸರಿಸುವವರನ್ನು ಆತನು ಹೇಗೆ ಆಶೀರ್ವದಿಸುತ್ತಾನೆ ಎಂಬುದನ್ನು ಪರಿಗಣಿಸಿರಿ.

19ಜ್ಞಾನೋಕ್ತಿ 21:21 ಹೇಳುವುದು: “ನೀತಿ ಕೃಪೆಗಳನ್ನು ಹುಡುಕುವವನು ನೀತಿ ಜೀವಕೀರ್ತಿಗಳನ್ನು ಪಡೆಯುವನು.” ಇಂಥ ವ್ಯಕ್ತಿಯು ಅನುಭವಿಸುವ ಆಶೀರ್ವಾದಗಳಲ್ಲಿ ಜೀವವನ್ನು ಪಡೆಯುವುದು ಸೇರಿದೆ. ಇದು ಅಲ್ಪಕಾಲದ ಜೀವನವಲ್ಲ, ಕೊನೆಯಿಲ್ಲದ ಜೀವನವಾಗಿದೆ. ಅವನಿಗೆ “ವಾಸ್ತವವಾದ ಜೀವನವನ್ನು ಭದ್ರವಾಗಿ ಹಿಡಿಯುವಂತಾಗಲು” ಯೆಹೋವನು ಸಹಾಯಮಾಡುತ್ತಾನೆ. (1 ತಿಮೊ. 6:12, 19) ಆದುದರಿಂದ ನಾವು ಅವಶ್ಯವಾಗಿ ‘ಒಬ್ಬರಿಗೊಬ್ಬರು ಪ್ರೀತಿಪೂರ್ವಕ ದಯೆಯನ್ನು ತೋರಿಸೋಣ.’—ಜೆಕ. 7:9.

[ಪಾದಟಿಪ್ಪಣಿಗಳು]

^ ಪ್ಯಾರ. 1 “ಪ್ರೀತಿಪೂರ್ವಕ ದಯೆ” ಎಂಬ ಪದವನ್ನು ಕನ್ನಡದ ಸತ್ಯವೇದವು ಬೈಬಲಿನಲ್ಲಿ ಅನೇಕ ಕಡೆಗಳಲ್ಲಿ ಔದಾರ್ಯ, ಬುದ್ಧಿ, ದಯೆ, ಪ್ರೀತಿ, ಕೃಪೆ, ಉಪಕಾರ, ಕರುಣೆ, ಭಕ್ತಿ ಎಂದು ಭಾಷಾಂತರಿಸಲಾಗಿದೆ. ಆದುದರಿಂದ ಈ ಲೇಖನದಲ್ಲಿ ಕೊಡಲಾಗಿರುವ ವಚನಗಳಲ್ಲಿ ಎಲ್ಲಿ ಈ ಪದಗಳು ಬರುತ್ತವೋ ಅಲ್ಲಿ ಅವು ‘ಪ್ರೀತಿಪೂರ್ವಕ ದಯೆಯನ್ನು’ ಸೂಚಿಸುತ್ತವೆ.

^ ಪ್ಯಾರ. 4 ಪ್ರೀತಿಪೂರ್ವಕ ದಯೆಯು ನಿಷ್ಠೆ, ಪ್ರೀತಿ ಹಾಗೂ ಸಾಮಾನ್ಯ ದಯೆಗಿಂತ ಹೇಗೆ ಭಿನ್ನವಾಗಿದೆ ಎಂಬುದರ ಕುರಿತು ಹೆಚ್ಚಿನ ಚರ್ಚೆಗಾಗಿ 2002, ಮೇ 15ರ ಕಾವಲಿನಬುರುಜು ಸಂಚಿಕೆಯ ಪುಟ 12-13, 18-19 ನೋಡಿ.

ನೀವು ವಿವರಿಸಬಲ್ಲಿರೊ?

• ಪ್ರೀತಿಪೂರ್ವಕ ದಯೆಯನ್ನು ನೀವು ಹೇಗೆ ನಿರೂಪಿಸುವಿರಿ?

• ನಮ್ಮ ನಾಲಿಗೆಯಲ್ಲಿ ಪ್ರೀತಿಪೂರ್ವಕ ದಯೆಯಿರುವಂತೆ ಯಾವುದು ಸಹಾಯಮಾಡುತ್ತದೆ?

• ವಿವಾಹ ಸಂಗಾತಿಗಳು ತಮ್ಮ ಮಾತುಕತೆಯಲ್ಲಿ ನಿಷ್ಠೆಯುಳ್ಳ ಪ್ರೀತಿಯನ್ನು ಹೇಗೆ ತೋರಿಸಬಹುದು?

• ನಮ್ಮ ಜೊತೆ ವಿಶ್ವಾಸಿಗಳೊಂದಿಗೆ ವ್ಯವಹರಿಸುವಾಗ ನಮ್ಮ ನಾಲಿಗೆಯಲ್ಲಿ ಪ್ರೀತಿಪೂರ್ವಕ ದಯೆಯಿದೆಯೆಂದು ಯಾವುದು ತೋರಿಸುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 23ರಲ್ಲಿರುವ ಚಿತ್ರ]

ಯೆಹೋವನ ಪ್ರೀತಿಪೂರ್ವಕ ದಯೆಯನ್ನು ದಾವೀದನು ಕೊಂಡಾಡಿದನು

[ಪುಟ 24ರಲ್ಲಿರುವ ಚಿತ್ರ]

ನೀವು ಕುಟುಂಬ ಆರಾಧನೆಯನ್ನು ಕ್ರಮವಾಗಿ ಮಾಡುತ್ತೀರೊ?