ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೃಷ್ಟಿಯಲ್ಲಿ ತೋರಿಬರುವ ಯೆಹೋವನ ವಿವೇಕ

ಸೃಷ್ಟಿಯಲ್ಲಿ ತೋರಿಬರುವ ಯೆಹೋವನ ವಿವೇಕ

ಸೃಷ್ಟಿಯಲ್ಲಿ ತೋರಿಬರುವ ಯೆಹೋವನ ವಿವೇಕ

‘ಆತನ ಅದೃಶ್ಯ ಗುಣಗಳನ್ನು ಸೃಷ್ಟಿಮಾಡಲ್ಪಟ್ಟವುಗಳಿಂದ ಗ್ರಹಿಸಲು ಸಾಧ್ಯವಾಗುತ್ತದೆ.’​—⁠ರೋಮ. 1:⁠20.

ಬಹಳಷ್ಟು ಜ್ಞಾನ ಸಂಪಾದಿಸಿಕೊಂಡವರನ್ನು ಲೋಕವು ವಿವೇಕಿಗಳೆಂದು ಪರಿಗಣಿಸುತ್ತದೆ. ಅವರು ನಿಜಕ್ಕೂ ವಿವೇಕಿಗಳೋ? ಇಲ್ಲ. ಏಕೆಂದರೆ ಬುದ್ಧಿಜೀವಿಗಳೆಂದು ಕರೆಯಲಾಗುವ ಇಂಥವರು ಇತರರಿಗೆ ಸಹಾಯಮಾಡಲಾರರು ಇಲ್ಲವೇ ಜೀವನದ ನಿಜಾರ್ಥ ಕಂಡುಕೊಳ್ಳಲು ಭರವಸಾರ್ಹ ಸಲಹೆ ಕೊಡಲಾರರು. ಅದಕ್ಕೆ ವ್ಯತಿರಿಕ್ತವಾಗಿ ಅಂಥವರಿಂದ ಪ್ರಭಾವಿತರಾದವರು ಭಿನ್ನಭಿನ್ನ ಬೋಧನೆಗಳೆಂಬ ‘ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು ಹೋಗುವವರ ಹಾಗಿದ್ದಾರೆ.’​—⁠ಎಫೆ. 4:⁠14.

2 ನಿಜ ವಿವೇಕವನ್ನು ಸಂಪಾದಿಸಿಕೊಂಡವರಾದರೋ ಭಿನ್ನರಾಗಿರುತ್ತಾರೆ! ಇಂಥ ವಿವೇಕದ ಮೂಲನು ಯೆಹೋವ ದೇವರು. ಆತನೇ ‘ವಿವೇಕಿಯಾದ ಏಕಮಾತ್ರ ದೇವರು’ ಎಂದು ಬೈಬಲ್‌ ಹೇಳುತ್ತದೆ. (ರೋಮ. 16:27) ವಿಶ್ವದಲ್ಲಿರುವಂಥದ್ದೆಲ್ಲವೂ ಹೇಗೆ ಸಂಯೋಜಿಸಲ್ಪಟ್ಟಿತು ಮತ್ತು ಉಂಟಾಯಿತು ಎಂಬುದು ಆತನಿಗೆ ತಿಳಿದಿದೆ. ಮಾನವನು ಯಾವುದನ್ನು ಬಳಸಿ ತನ್ನೆಲ್ಲಾ ಸಂಶೋಧನೆಗಳನ್ನು ಮಾಡುತ್ತಾನೋ ಆ ನೈಸರ್ಗಿಕ ನಿಯಮಗಳೆಲ್ಲವನ್ನೂ ಯೆಹೋವನೇ ರಚಿಸಿದನು. ಆದ್ದರಿಂದ ಮಾನವನ ಯಾವುದೇ ಆವಿಷ್ಕಾರಗಳನ್ನು ನೋಡಿ ಆತನು ದಂಗಾಗುವುದಿಲ್ಲ ಮತ್ತು ಉನ್ನತ ಯೋಚನಾಧಾಟಿಯೆಂದು ಹೇಳಲಾಗುವ ಮಾನವ ತತ್ವಜ್ಞಾನದ ಬಗ್ಗೆ ಆತನಿಗೆ ಕುತೂಹಲ ಹುಟ್ಟುವುದಿಲ್ಲ. “ಈ ಲೋಕದ ವಿವೇಕವು ದೇವರ ಮುಂದೆ ಹುಚ್ಚುತನವಾಗಿದೆ.”​—⁠1 ಕೊರಿಂ. 3:⁠19.

3 ಯೆಹೋವನು ತನ್ನ ಸೇವಕರಿಗೆ ‘ವಿವೇಕವನ್ನು ಕೊಡುತ್ತಾನೆಂದು’ ಬೈಬಲ್‌ ತಿಳಿಸುತ್ತದೆ. (ಜ್ಞಾನೋ. 2:​6, NW) ದೇವರಿಂದ ಬರುವ ವಿವೇಕವು ಮಾನವ ತತ್ವಜ್ಞಾನದಂತೆ ಅಸ್ಪಷ್ಟವಾಗಿರುವುದಿಲ್ಲ. ಅದಕ್ಕೆ ಬದಲಾಗಿ, ನಿಷ್ಕೃಷ್ಟ ಜ್ಞಾನ ಹಾಗೂ ತಿಳುವಳಿಕೆಯ ಮೇಲಾಧರಿತವಾದ ಯೋಗ್ಯ ನಿರ್ಣಯಗಳನ್ನು ಮಾಡಲು ಅದು ನಮಗೆ ಸಹಾಯ ಮಾಡುತ್ತದೆ. (ಯಾಕೋಬ 3:17 ಓದಿ.) ಯೆಹೋವನ ವಿವೇಕದ ಕುರಿತು ಅಪೊಸ್ತಲ ಪೌಲನು ವಿಸ್ಮಯಪಟ್ಟನು. ಅವನು ಬರೆದದ್ದು: “ಆಹಾ! ದೇವರ ಐಶ್ವರ್ಯವೂ ವಿವೇಕವೂ ಜ್ಞಾನವೂ ಎಷ್ಟೋ ಅಗಾಧ! ಆತನ ನ್ಯಾಯತೀರ್ಪುಗಳು ಎಷ್ಟೋ ಅಗಮ್ಯ ಮತ್ತು ಆತನ ಮಾರ್ಗಗಳನ್ನು ಕಂಡುಹಿಡಿಯುವುದು ಎಷ್ಟೋ ಅಸಾಧ್ಯ!” (ರೋಮ. 11:33) ಯೆಹೋವನು ಸರ್ವವಿವೇಕಿ ಆಗಿರುವುದರಿಂದ ಆತನ ನಿಯಮಗಳು ನಮಗೆ ಅತ್ಯುತ್ತಮ ಜೀವನ ರೀತಿಯನ್ನು ಕಲಿಸುತ್ತವೆ ಎಂಬ ಭರವಸೆ ನಮಗಿರಬಲ್ಲದು. ಸಂತೋಷದಿಂದಿರಲು ನಮಗೇನು ಅಗತ್ಯ ಎಂಬುದಾಗಿ ಬೇರೆಲ್ಲರಿಗಿಂತ ಹೆಚ್ಚಾಗಿ ಯೆಹೋವನಿಗೆ ತಿಳಿದಿದೆ.​—⁠ಜ್ಞಾನೋ. 3:​5, 6.

ಯೇಸು​—⁠“ಕುಶಲ ಶಿಲ್ಪಿ”

4 ಯೆಹೋವನ ವಿವೇಕ ಹಾಗೂ ಇತರ ಅತುಲ್ಯ ಗುಣಗಳು ಆತನ ಸೃಷ್ಟಿಯಲ್ಲಿ ತೋರಿಬರುತ್ತವೆ. (ರೋಮನ್ನರಿಗೆ 1:20 ಓದಿ.) ಯೆಹೋವನ ಸೃಷ್ಟಿಕಾರ್ಯದಲ್ಲಿ ಅತೀ ದೊಡ್ಡದ್ದರಿಂದ ಹಿಡಿದು ಅತೀ ಚಿಕ್ಕದು ಸಹ ಆತನ ಗುಣಗಳನ್ನು ತೋರ್ಪಡಿಸುತ್ತದೆ. ನಾವು ಆಕಾಶದ ಕಡೆಗೆ ನೋಡಲಿ ನಮ್ಮ ಪಾದದಡಿಯಿರುವ ಮಣ್ಣನ್ನು ನೋಡಲಿ, ಸರ್ವವಿವೇಕಿ ಮತ್ತು ಪ್ರೀತಿಪರ ಸೃಷ್ಟಿಕರ್ತನಿದ್ದಾನೆಂಬುದಕ್ಕೆ ನಮಗೆ ಹೇರಳ ರುಜುವಾತು ಎಲ್ಲೆಲ್ಲೂ ಸಿಗುತ್ತದೆ. ಆತನು ಮಾಡಿದ ಸೃಷ್ಟಿಯನ್ನು ಪರಿಗಣಿಸುವ ಮೂಲಕ ನಾವಾತನ ಬಗ್ಗೆ ಬಹಳಷ್ಟನ್ನು ಕಲಿಯಬಲ್ಲೆವು.​—⁠ಕೀರ್ತ. 19:1; ಯೆಶಾ. 40:⁠26.

5 ಯೆಹೋವನು ‘ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದಾಗ’ ಒಬ್ಬನೇ ಇರಲಿಲ್ಲ. (ಆದಿ. 1:⁠1) ಈ ವಿಶ್ವವನ್ನು ಸೃಷ್ಟಿಮಾಡುವ ಎಷ್ಟೋ ಕಾಲದ ಹಿಂದೆ ಆತನು ಒಬ್ಬ ಆತ್ಮಜೀವಿಯನ್ನು ಸೃಷ್ಟಿಮಾಡಿದನೆಂದು ಬೈಬಲ್‌ ತಿಳಿಸುತ್ತದೆ. ಇವನ ಮೂಲಕವಾಗಿಯೇ “ಸರ್ವವು” ಸೃಷ್ಟಿಸಲ್ಪಟ್ಟಿತು. ಈ ಆತ್ಮ ಜೀವಿಯು ದೇವರ ಒಬ್ಬನೇ ಮಗನೂ ‘ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನೂ’ ಆಗಿದ್ದನು. ಅನಂತರ ಇವನೇ ಭೂಮಿಯ ಮೇಲೆ ಜೀವಿಸಿ ಯೇಸು ಎಂಬ ಹೆಸರಿನಿಂದ ಪರಿಚಿತನಾಗಿದ್ದನು. (ಕೊಲೊ. 1:​15-17) ಯೆಹೋವನಂತೆ ಯೇಸುವಿಗೂ ವಿವೇಕವಿದೆ. ವಾಸ್ತವದಲ್ಲಿ, ಜ್ಞಾನೋಕ್ತಿ 8ನೇ ಅಧ್ಯಾಯದಲ್ಲಿ ಅವನೇ “ವಿವೇಕ” ಆಗಿದ್ದಾನೆ ಎಂಬಂತೆ ವ್ಯಕ್ತೀಕರಿಸಿ ತಿಳಿಸಲಾಗಿದೆ. ಅದೇ ಅಧ್ಯಾಯವು ಯೇಸುವನ್ನು ದೇವರ “ಕುಶಲ ಶಿಲ್ಪಿ” ಎಂಬದಾಗಿಯೂ ಕರೆಯುತ್ತದೆ.​—⁠ಜ್ಞಾನೋ. 8:​12, 22-31, NW.

6 ಹೀಗೆ ಸೃಷ್ಟಿಯು, ಯೆಹೋವ ಮತ್ತು ಆತನ ಕುಶಲ ಶಿಲ್ಪಿಯಾದ ಯೇಸುವಿನ ವಿವೇಕವನ್ನು ತೋರ್ಪಡಿಸುತ್ತದೆ. ಅದರಲ್ಲಿ ನಮಗಾಗಿ ಅಮೂಲ್ಯ ಪಾಠಗಳಿವೆ. ನಾವೀಗ ಸೃಷ್ಟಿಜೀವಿಗಳ ನಾಲ್ಕು ಉದಾಹರಣೆಗಳನ್ನು ಪರಿಗಣಿಸೋಣ. ಜ್ಞಾನೋಕ್ತಿ 30:​24-28ರಲ್ಲಿ ಅವುಗಳನ್ನು “ಅಧಿಕ ಜ್ಞಾನವುಳ್ಳ” ಇಲ್ಲವೇ ಹುಟ್ಟರಿವಿನಿಂದಲೇ ವಿವೇಕಿಗಳಾಗಿರುವ ಪ್ರಾಣಿಗಳೆಂದು ವರ್ಣಿಸಲಾಗಿದೆ. *

ಶ್ರಮಶೀಲತೆಯ ಪಾಠ

7 ಕೆಲವೊಂದು ಜೀವಿಗಳು ‘ಭೂಮಿಯ ಸಣ್ಣ ಜಂತುಗಳು’ ಎಂದು ಕರೆಯಲ್ಪಡುವುದಾದರೂ, ಅವುಗಳ ರಚನೆ ಮತ್ತು ಚಟುವಟಿಕೆಯಿಂದ ನಾವು ಪಾಠಗಳನ್ನು ಕಲಿಯಬಲ್ಲೆವು. ಉದಾಹರಣೆಗೆ ಇರುವೆಯ ಹುಟ್ಟರಿವಿನ ವಿವೇಕವನ್ನು ಪರಿಗಣಿಸಿ.​—⁠ಜ್ಞಾನೋಕ್ತಿ 30:​24, 25 ಓದಿ.

8 ಮಾನವರ ಸಂಖ್ಯೆಗಿಂತ ಇರುವೆಗಳ ಸಂಖ್ಯೆ 2,00,000 ಪಟ್ಟು ಹೆಚ್ಚಿದೆ ಎಂಬುದು ಕೆಲವು ಸಂಶೋಧಕರ ಅಭಿಪ್ರಾಯ. ಅವೆಲ್ಲವೂ ನೆಲದ ಮೇಲೆ ಮತ್ತು ಅಡಿಯಲ್ಲೂ ಕಷ್ಟಪಟ್ಟು ಕೆಲಸ ಮಾಡುತ್ತವೆ. ಇರುವೆಗಳು ಗುಂಪುಗಳಲ್ಲಿ ಜೀವಿಸುವ ಸಂಘಜೀವಿಗಳು. ಹೆಚ್ಚಿನ ಗುಂಪುಗಳಲ್ಲಿ ರಾಣಿ ಇರುವೆಗಳು, ಗಂಡು ಇರುವೆಗಳು ಮತ್ತು ಕೆಲಸಗಾರ ಇರುವೆಗಳು ಎಂಬ ಮೂರು ವಿಧದ ಇರುವೆಗಳಿರುತ್ತವೆ. ಪ್ರತಿಯೊಂದು ಇರುವೆ ತನ್ನದೇ ಆದ ವಿಧದಲ್ಲಿ ಗುಂಪಿನ ಆರೈಕೆ ಮಾಡುವುದರಲ್ಲಿ ಸಹಕರಿಸುತ್ತದೆ. ದಕ್ಷಿಣ ಅಮೆರಿಕದಲ್ಲಿರುವ ‘ಎಲೆ ಕತ್ತರಿಸುವ ಇರುವೆ’ಯನ್ನು ಕುಶಲ ತೋಟಗಾರ ಎಂದೇ ಕರೆಯಬಹುದು. ತಮ್ಮ ಆಹಾರಕ್ಕಾಗಿ ಅವು ಬೆಳೆಸುವ ಬೂಷ್ಟಿನ ತೋಟಗಳಿಗೆ ಕತ್ತರಿಸಿದ ಎಲೆಗಳನ್ನು ತಂದುಹಾಕಿ ಫಲವತ್ತಾಗಿಸುತ್ತವೆ, ಬೂಷ್ಟನ್ನು ಹೊಸ ಗೂಡುಗಳಲ್ಲಿ ನಾಟಿ ಮಾಡುತ್ತವೆ ಮತ್ತು ಅದರ ಬೆಳವಣಿಗೆಯ ವೇಗವನ್ನು ಹೆಚ್ಚಿಸಲಿಕ್ಕಾಗಿ ಅದನ್ನು ಕತ್ತರಿಸಿ ತೆಗೆಯುತ್ತಿರುತ್ತವೆ. ಕುಶಲ ತೋಟಗಾರನಂತಿರುವ ಈ ಇರುವೆ ತನ್ನ ಗುಂಪಿನ ಆಹಾರದ ಅಗತ್ಯಕ್ಕೆ ತಕ್ಕಂತೆ ಶ್ರಮಪಡುತ್ತದೆ ಎಂಬುದಾಗಿ ಸಂಶೋಧಕರು ಕಂಡುಕೊಂಡಿದ್ದಾರೆ. *

9 ಈ ಇರುವೆಗಳಿಂದ ನಾವು ಪಾಠಗಳನ್ನು ಕಲಿಯಬಲ್ಲೆವು. ಒಳ್ಳೇ ಫಲ ಸಿಗಬೇಕಾದರೆ ಶ್ರದ್ಧಾಪೂರ್ವಕ ಪ್ರಯತ್ನ ಅಗತ್ಯ ಎಂಬದನ್ನು ಅವು ಕಲಿಸುತ್ತವೆ. ಬೈಬಲ್‌ ನಮಗನ್ನುವುದು: “ಸೋಮಾರಿಯೇ, ಇರುವೆಯ ಹತ್ತಿರ ಹೋಗಿ ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು ತಂದುಕೋ. ಅದಕ್ಕೆ ನಾಯಕ ಅಧಿಕಾರಿ ಪ್ರಭುಗಳಿಲ್ಲದಿದ್ದರೂ ಸುಗ್ಗಿಯಲ್ಲಿ ತನ್ನ ತೀನಿಯನ್ನು ಕೂಡಿಸಿಡುವದು, ಕೊಯ್ಲಿನ ಕಾಲದಲ್ಲಿ ತನಗೆ ಬೇಕಾದಷ್ಟು ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುವದು.” (ಜ್ಞಾನೋ. 6:​6-8) ಯೆಹೋವ ಮತ್ತು ಆತನ ಕುಶಲ ಶಿಲ್ಪಿಯಾದ ಯೇಸು ಶ್ರಮಜೀವಿಗಳು. “ನನ್ನ ತಂದೆಯು ಇಂದಿನ ವರೆಗೂ ಕೆಲಸಮಾಡುತ್ತಾ ಇದ್ದಾನೆ ಮತ್ತು ನಾನೂ ಕೆಲಸಮಾಡುತ್ತಿದ್ದೇನೆ” ಎಂದನು ಯೇಸು.​—⁠ಯೋಹಾ. 5:⁠17.

10 ದೇವರನ್ನು ಮತ್ತು ಕ್ರಿಸ್ತನನ್ನು ಅನುಕರಿಸುವ ನಾವೂ ಶ್ರಮಜೀವಿಗಳಾಗಿರತಕ್ಕದ್ದು. ದೇವರ ಸಂಘಟನೆಯಲ್ಲಿ ನಮಗೆ ಯಾವುದೇ ನೇಮಕವಿರಲಿ, ನಾವೆಲ್ಲರೂ “ಕರ್ತನ ಕೆಲಸವನ್ನು ಯಾವಾಗಲೂ ಹೇರಳವಾಗಿ ಮಾಡುವವರಾಗಿ” ಇರಬೇಕು. (1 ಕೊರಿಂ. 15:58) ಆದ್ದರಿಂದ, ರೋಮ್‌ನಲ್ಲಿದ್ದ ಕ್ರೈಸ್ತರಿಗೆ ಪೌಲನು ಕೊಟ್ಟ ಈ ಸಲಹೆಯನ್ನು ನಾವು ಅನುಸರಿಸಬೇಕು: “ನಿಮ್ಮ ಕೆಲಸದಲ್ಲಿ ಆಲಸಿಗಳಾಗಿರಬೇಡಿ. ಪವಿತ್ರಾತ್ಮದಿಂದ ಪ್ರಜ್ವಲಿಸಿರಿ. ಯೆಹೋವನಿಗಾಗಿ ದುಡಿದು ಸೇವೆಸಲ್ಲಿಸಿರಿ.” (ರೋಮ. 12:11) ಯೆಹೋವನ ಚಿತ್ತ ಮಾಡುವುದರಲ್ಲಿ ನಾವು ಪಡುವ ಪ್ರಯಾಸ ನಿಷ್ಫಲವಾಗುವುದಿಲ್ಲ. ಏಕೆಂದರೆ ಬೈಬಲ್‌ ನಮಗೆ ಆಶ್ವಾಸನೆ ಕೊಡುವುದು: “ನಿಮ್ಮ ಈ ಕೆಲಸವನ್ನೂ ದೇವರ ಹೆಸರಿಗಾಗಿ ನೀವು ತೋರಿಸಿದ ಪ್ರೀತಿಯನ್ನೂ ಮರೆಯುವದಕ್ಕೆ ಆತನು ಅನೀತಿವಂತನಲ್ಲ.”​—⁠ಇಬ್ರಿ. 6:⁠10.

ಆಧ್ಯಾತ್ಮಿಕ ಹಾನಿಯಿಂದ ಸಂರಕ್ಷಣೆ

11 ನಮಗೆ ಮಹತ್ತ್ವದ ಪಾಠಗಳನ್ನು ಕಲಿಸಬಲ್ಲ ಸಣ್ಣ ಜಂತುಗಳಲ್ಲಿ ಬೆಟ್ಟದ ಮೊಲವೂ (ಬಂಡೆ ಮೊಲ) ಒಂದು. (ಜ್ಞಾನೋಕ್ತಿ 30:26 ಓದಿ.) ಇದರ ಕಿವಿಗಳು ಚಿಕ್ಕದಾಗಿದ್ದು ದುಂಡಗಾಗಿವೆ ಮತ್ತು ಕಾಲುಗಳು ಗಿಡ್ಡವಾಗಿವೆ. ಈ ಚಿಕ್ಕ ಪ್ರಾಣಿ ಕಲ್ಲುಬಂಡೆಗಳಿರುವ ಪ್ರದೇಶದಲ್ಲಿ ಜೀವಿಸುತ್ತದೆ. ಅದರ ತೀಕ್ಷ್ಣ ದೃಷ್ಟಿಯಿಂದಾಗಿ ಅದಕ್ಕೆ ತುಂಬ ಸಹಾಯವಾಗುತ್ತದೆ. ಅದು ಬಂಡೆಗಳ ಎಡೆಯಲ್ಲಿ ವಾಸಮಾಡುವುದರಿಂದ ಪರಭಕ್ಷಕ ಪ್ರಾಣಿಗಳಿಂದ ಅದಕ್ಕೆ ಸುರಕ್ಷೆ ಸಿಗುತ್ತದೆ. ಹಲವಾರು ಮೊಲಗಳು ಒಟ್ಟಿಗೆಸೇರಿ ಒಂದೆಡೆ ವಾಸಿಸುವುದು ತಾನೇ ಅವುಗಳಿಗೆ ಸಂರಕ್ಷಣೆಯಾಗಿದೆ ಮತ್ತು ಚಳಿಗಾಲದಲ್ಲಿ ಬೆಚ್ಚಗಿರಲು ಸಾಧ್ಯವಾಗುತ್ತದೆ. *

12 ಬೆಟ್ಟದ ಮೊಲದಿಂದ ನಾವೇನು ಕಲಿಯಬಲ್ಲೆವು? ಮೊದಲಾಗಿ ಗಮನಿಸಬೇಕಾದದ್ದೇನೆಂದರೆ, ಈ ಪ್ರಾಣಿಯನ್ನು ಸುಲಭವಾಗಿ ಹಿಡಿಯಲು ಸಾಧ್ಯವಿಲ್ಲ. ಏಕೆಂದರೆ ಅದಕ್ಕಿರುವ ತೀಕ್ಷ್ಣ ದೃಷ್ಟಿಯಿಂದ ಅದು ಪರಭಕ್ಷಕ ಜೀವಿಗಳನ್ನು ದೂರದಿಂದಲೇ ಪತ್ತೆಹಚ್ಚುತ್ತದೆ ಮತ್ತು ಅದು ಯಾವಾಗಲೂ ತನ್ನ ಜೀವ ಕಾಪಾಡಬಲ್ಲ ಬಿಲ ಅಥವಾ ಸಂದುಗಂದುಗಳ ಹತ್ತಿರವೇ ಸುಳಿದಾಡುತ್ತಿರುತ್ತದೆ. ತದ್ರೀತಿಯಲ್ಲಿ ಸೈತಾನನ ಲೋಕದಲ್ಲಿರುವ ಅಪಾಯಗಳನ್ನು ಪತ್ತೆಹಚ್ಚಲು ನಮಗೂ ತೀಕ್ಷ್ಣವಾದ ಆಧ್ಯಾತ್ಮಿಕ ದೃಷ್ಟಿ ಇರಬೇಕು. ಅಪೊಸ್ತಲ ಪೇತ್ರನು ಕ್ರೈಸ್ತರಿಗೆ ಸಲಹೆ ನೀಡಿದ್ದು: “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ. ನಿಮ್ಮ ವಿರೋಧಿಯಾಗಿರುವ ಪಿಶಾಚನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.” (1 ಪೇತ್ರ 5:⁠8) ಯೇಸು ಭೂಮಿಯಲ್ಲಿದ್ದಾಗ, ತನ್ನ ಸಮಗ್ರತೆಯನ್ನು ಮುರಿಯಲು ಸೈತಾನನು ಮಾಡಿದ ಎಲ್ಲಾ ಪ್ರಯತ್ನಗಳ ವಿಷಯದಲ್ಲಿ ಎಚ್ಚರವಾಗಿದ್ದನು. (ಮತ್ತಾ. 4:​1-11) ಹೀಗೆ ಯೇಸು ತನ್ನ ಹಿಂಬಾಲಕರಿಗೆ ಉತ್ತಮ ಮಾದರಿಯನ್ನಿಟ್ಟನು.

13 ನಾವು ಎಚ್ಚರವಾಗಿರಬಲ್ಲ ಒಂದು ವಿಧವು ಯೆಹೋವನು ಲಭ್ಯಗೊಳಿಸುತ್ತಿರುವ ಆಧ್ಯಾತ್ಮಿಕ ಸಂರಕ್ಷಣೆಯ ಸದುಪಯೋಗ ಮಾಡಿಕೊಳ್ಳುವ ಮೂಲಕವೇ. ದೇವರ ವಾಕ್ಯದ ಅಧ್ಯಯನ ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾಗುವುದನ್ನು ನಾವು ಅಲಕ್ಷಿಸಲೇಬಾರದು. (ಲೂಕ 4:4; ಇಬ್ರಿ. 10:​24, 25) ಅಲ್ಲದೇ, ಬೆಟ್ಟದ ಮೊಲಗಳು ಒಟ್ಟಿಗೆಸೇರಿ ಒಂದೆಡೆಯಲ್ಲಿ ವಾಸಿಸುವಂತೆಯೇ ನಮಗೆ ಜೊತೆ ಕ್ರೈಸ್ತರ ಆಪ್ತ ಒಡನಾಟವಿರಬೇಕು. ಇದರಿಂದ, “ಉತ್ತೇಜನವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು” ಸಾಧ್ಯವಾಗುತ್ತದೆ. (ರೋಮ. 1:12) ಯೆಹೋವನ ಸಂರಕ್ಷಣೆ ಪಡೆಯಲು ಅಗತ್ಯವಿರುವುದೆಲ್ಲವನ್ನು ಮಾಡುವ ಮೂಲಕ, “ಯೆಹೋವನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನ ವಿಮೋಚಕನೂ ನನ್ನ ದೇವರೂ ನನ್ನ ಆಶ್ರಯಗಿರಿಯೂ ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ ನನ್ನ ದುರ್ಗವೂ ಆಗಿದ್ದಾನೆ” ಎಂದು ಕೀರ್ತನೆಗಾರ ದಾವೀದನು ಬರೆದ ಮಾತುಗಳನ್ನು ನಾವೂ ಒಪ್ಪಿಕೊಳ್ಳುತ್ತೇವೆಂದು ತೋರಿಸಿಕೊಡುತ್ತೇವೆ.​—⁠ಕೀರ್ತ. 18:⁠2.

ವಿರೋಧವಿದ್ದರೂ ಪಟ್ಟುಹಿಡಿಯುವುದು

14 ನಾವು ಮಿಡತೆಯಿಂದಲೂ ಪಾಠ ಕಲಿಯಬಹುದು. ಮಿಡತೆಗಳು ಕೇವಲ ಎರಡು ಇಂಚುಗಳಷ್ಟೇ ಉದ್ದವಿರುವುದರಿಂದ ಒಂದೇ ಒಂದು ಮಿಡತೆ ತೀರ ಕ್ಷುಲ್ಲಕವಾಗಿ ತೋರಬಹುದು. ಆದರೆ ಮಿಡತೆಗಳ ದಂಡಂತೂ ಭಯಹುಟ್ಟಿಸುತ್ತದೆ. (ಜ್ಞಾನೋಕ್ತಿ 30:27 ಓದಿ.) ಭಯಂಕರ ಹಸಿವೆಗೆ ಹೆಸರಾದ ಮಿಡತೆಗಳ ದಂಡು ಕೊಯ್ಲಿಗೆ ಸಿದ್ಧವಾದ ಹೊಲವೊಂದನ್ನು ಚಕ್ಕನೇ ತಿಂದು ಮುಗಿಸಬಲ್ಲದು. ಬೈಬಲು, ಆಗಮಿಸುತ್ತಿರುವ ಮಿಡತೆಗಳ ದಂಡಿನ ಶಬ್ದವನ್ನು ರಥಗಳ ಗಡಗಡ ಸದ್ದಿಗೂ ಕೂಳೆಯನ್ನು ನುಂಗುವ ಬೆಂಕಿಯ ಚಟಪಟ ಧ್ವನಿಗೂ ಹೋಲಿಸುತ್ತದೆ. (ಯೋವೇ. 2:​3, 5) ಮಿಡತೆ ದಂಡಿನ ಆಕ್ರಮಣವನ್ನು ನಿಲ್ಲಿಸಲು ಬೆಂಕಿಹಚ್ಚುತ್ತಾರೆ. ಆದರೆ ಅದರಿಂದೇನೂ ಉಪಯೋಗವಿಲ್ಲ. ಏಕೆ? ಬೆಂಕಿಯಿಂದ ಸತ್ತ ಮಿಡತೆಗಳ ದೇಹವು ಬೆಂಕಿಯನ್ನು ನಂದಿಸಿ ಬಿಡುತ್ತದೆ. ಆದ್ದರಿಂದ ಉಳಿದ ಮಿಡತೆ ದಂಡು ಯಾವುದೇ ಅಡ್ಡಿತಡೆಯಿಲ್ಲದೆ ಮುಂದುವರಿಯುತ್ತದೆ. ಮಿಡತೆ ದಂಡಿಗೆ ಒಬ್ಬ ಅರಸ ಅಥವಾ ನಾಯಕನಿಲ್ಲದಿದ್ದರೂ ಅದು, ಶಿಸ್ತಿನ ಸೈನ್ಯದಂತೆ ಕಾರ್ಯವೆಸಗುತ್ತಾ ಹೆಚ್ಚುಕಡಿಮೆ ಎಲ್ಲ ತಡೆಗಳನ್ನು ಜಯಿಸುತ್ತದೆ. *​—⁠ಯೋವೇ. 2:⁠25.

15 ಪ್ರವಾದಿ ಯೋವೇಲನು ಯೆಹೋವನ ಸೇವಕರ ಚಟುವಟಿಕೆಯನ್ನು ಮಿಡತೆಗಳ ಚಲನವಲನಕ್ಕೆ ಹೋಲಿಸಿದನು. ಅವನು ಬರೆದದ್ದು: “ಅವು ಶೂರರಂತೆ ಓಡಾಡುತ್ತವೆ; ಯೋಧರ ಹಾಗೆ ಗೋಡೆಯೇರುತ್ತವೆ; ತಮ್ಮ ತಮ್ಮ ಸಾಲುಗಳಲ್ಲಿಯೇ ನಡೆಯುತ್ತವೆ, ಆ ಸಾಲುಗಳನ್ನು ಕಲಸುವದಿಲ್ಲ. ಒಂದಕ್ಕೊಂದು ನೂಕಾಡುವದಿಲ್ಲ, ತಮ್ಮ ತಮ್ಮ ಸಾಲುಗಳಲ್ಲಿಯೇ ನಡೆಯುತ್ತವೆ; ಆಯುಧಗಳ ನಡುವೆ ನುಗ್ಗುತ್ತವೆ [“ಬೀಳುತ್ತವೆ,” NW], ಸಾಲುಗಳು ಒಡೆದುಹೋಗುವದಿಲ್ಲ.”​—⁠ಯೋವೇ. 2:​7, 8.

16 ಆಧುನಿಕ ದಿನದಲ್ಲಿರುವ ದೇವರ ರಾಜ್ಯ ಘೋಷಕರನ್ನು ಈ ಪ್ರವಾದನೆ ಎಷ್ಟು ಚೆನ್ನಾಗಿ ವರ್ಣಿಸುತ್ತದೆ! ಅವರ ಸಾರುವಿಕೆಯನ್ನು ವಿರೋಧದ ಯಾವುದೇ “ಗೋಡೆ” ತಡೆಯಲು ಶಕ್ತವಾಗಿಲ್ಲ. ಅನೇಕರು ಧಿಕ್ಕರಿಸಿದರೂ ಅವರು ಯೇಸುವನ್ನು ಅನುಕರಿಸುತ್ತಾ ದೇವರ ಚಿತ್ತವನ್ನು ಮಾಡುವುದರಲ್ಲಿ ಪಟ್ಟುಹಿಡಿಯುತ್ತಾರೆ. (ಯೆಶಾ. 53:⁠3) ಹೌದು, ಕೆಲವು ಕ್ರೈಸ್ತರು ‘ಆಯುಧಗಳ ನಡುವೆ ಬಿದ್ದಿದ್ದಾರೆ,’ ಅಂದರೆ ನಂಬಿಕೆಗಾಗಿ ಹುತಾತ್ಮರಾಗಿದ್ದಾರೆ. ಆದರೂ ಸಾರುವ ಕೆಲಸ ಮುಂದುವರಿಯುತ್ತಿದೆ ಮತ್ತು ರಾಜ್ಯ ಘೋಷಕರ ಸಂಖ್ಯೆ ಹೆಚ್ಚುತ್ತಿದೆ. ಎಷ್ಟೋ ಸಲ ಹಿಂಸೆಯಿಂದಾಗಿ, ರಾಜ್ಯ ಸಂದೇಶವನ್ನು ಎಂದೂ ಕೇಳಿಸಿಕೊಂಡಿರದ ಜನರಿಗೂ ಸುವಾರ್ತೆ ತಲುಪಿದೆ. (ಅ. ಕಾ. 8:​1, 4) ನಿಮ್ಮ ಶುಶ್ರೂಷೆಯಲ್ಲಿ ನೀವು ಸಹ ಜನರ ಉದಾಸೀನತೆ ಮತ್ತು ವಿರೋಧದ ಎದುರಲ್ಲೂ ಮಿಡತೆಯಂತೆ ಪಟ್ಟುಹಿಡಿಯುತ್ತೀರೋ?​—⁠ಇಬ್ರಿ. 10:⁠39.

“ಒಳ್ಳೆಯದಕ್ಕೆ ಅಂಟಿಕೊಳ್ಳಿರಿ”

17 ಹಲ್ಲಿಯ ಮೇಲೆ ಗುರುತ್ವಾಕರ್ಷಣಾ ಶಕ್ತಿಯು ಯಾವುದೇ ಪ್ರಭಾವಬೀರದಂತೆ ತೋರುತ್ತದೆ. (ಜ್ಞಾನೋಕ್ತಿ 30:28 ಓದಿ.) ಗೋಡೆಯಲ್ಲೆಲ್ಲಾ ಮತ್ತು ನುಣುಪಾದ ಮೇಲ್ಛಾವಣಿಗಳಲ್ಲೂ ಸರಸರನೆ ಓಡಾಡಿದರೂ ಬಿದ್ದುಬಿಡದ ಈ ಚಿಕ್ಕ ಜೀವಿಯ ಸಾಮರ್ಥ್ಯವನ್ನು ಕಂಡು ವಿಜ್ಞಾನಿಗಳೂ ಬೆರಗಾಗಿದ್ದಾರೆ. ಹಲ್ಲಿ ಇದನ್ನು ಹೇಗೆ ಮಾಡುತ್ತದೆ? ಅದರ ಬಳಿ ಚೂಷಣ ಬಲ ಇಲ್ಲವೇ ಯಾವುದೇ ವಿಧದ ಅಂಟು ಇಲ್ಲ. ಹಲ್ಲಿಯ ಕಾಲ್ಬೆರಳುಗಳಲ್ಲಿ ಕಿರಿದಾದ ಉಬ್ಬುಗಳಿವೆ. ಈ ಉಬ್ಬುಗಳ ಮೇಲೆ ಸಾವಿರಾರು ಬಿರುಗೂದಲುಗಳಿರುತ್ತವೆ. ಪ್ರತಿಯೊಂದು ಬಿರುಗೂದಲಿನಲ್ಲಿ ಬಟ್ಟಲಿನಾಕಾರದ ತುದಿಯಿರುವ ನೂರಾರು ಎಳೆಗಳಿರುತ್ತವೆ. ಈ ಎಲ್ಲಾ ಎಳೆಗಳಲ್ಲಿರುವ ಅಣುಗಳ ನಡುವಣ ಶಕ್ತಿ ಎಷ್ಟಿದೆಯೆಂದರೆ ಅದು ಹಲ್ಲಿಯ ದೇಹದ ಭಾರಕ್ಕಿಂತ ಹೆಚ್ಚಿನದ್ದನ್ನು ಹೊತ್ತುಕೊಳ್ಳಬಹುದು. ಆದ್ದರಿಂದಲೇ ಅದು ಒಂದು ಗಾಜಿನ ಕೆಳಮೈಯಿಂದಲೂ ಸುಲಭವಾಗಿ ಚಲಿಸಬಲ್ಲದು! ಹಲ್ಲಿಯ ಸಾಮರ್ಥ್ಯವನ್ನು ಕಂಡು ಬೆರಗಾಗಿರುವ ಸಂಶೋಧಕರು, ಅದರ ಪಾದವನ್ನು ನಕಲು ಮಾಡುವಲ್ಲಿ ಯಾವುದೇ ವಸ್ತುವಿಗೆ ಶಕ್ತಿಯುತವಾಗಿ ಅಂಟಿಕೊಳ್ಳುವ ಉತ್ಪನ್ನಗಳನ್ನು ತಯಾರಿಸಬಹುದೆಂದು ಹೇಳುತ್ತಾರೆ. *

18 ನಾವು ಹಲ್ಲಿಯಿಂದ ಏನನ್ನು ಕಲಿಯಬಲ್ಲೆವು? ಬೈಬಲ್‌ ನಮಗನ್ನುವುದು: “ಕೆಟ್ಟದ್ದನ್ನು ದ್ವೇಷಿಸಿ ಒಳ್ಳೆಯದಕ್ಕೆ ಅಂಟಿಕೊಳ್ಳಿರಿ.” (ರೋಮಾ. 12:​9, NIBV) ಈ ಸೈತಾನನ ಲೋಕದಲ್ಲಿರುವ ಅಹಿತಕರ ಪ್ರಭಾವವು ನಾವು ದೈವಿಕ ಮೂಲತತ್ತ್ವಗಳಿಗೆ ಅಂಟಿಕೊಳ್ಳದಂತೆ ಮಾಡಬಹುದು. ಉದಾಹರಣೆಗೆ, ಶಾಲೆಯಲ್ಲಾಗಲಿ, ಕೆಲಸದ ಸ್ಥಳದಲ್ಲಾಗಲಿ, ಹೊಲಸಾದ ಮನೋರಂಜನೆಯ ಮೂಲಕವಾಗಲಿ ನಾವು ದೇವರ ನಿಯಮಗಳಿಗೆ ಅಂಟಿಕೊಳ್ಳದವರೊಂದಿಗೆ ಸಹವಾಸ ಮಾಡುವಲ್ಲಿ ಸರಿಯಾದದ್ದನ್ನೇ ಮಾಡಬೇಕೆಂಬ ನಮ್ಮ ದೃಢನಿರ್ಧಾರವು ಬಾಧಿಸಲ್ಪಡುವುದು. ನಿಮ್ಮ ವಿಷಯದಲ್ಲಿ ಹಾಗಾಗುವಂತೆ ಎಂದೂ ಬಿಡಬೇಡಿ! ದೇವರ ವಾಕ್ಯ ಎಚ್ಚರಿಸುವುದು: ‘ನೀನೇ ಬುದ್ಧಿವಂತನು ಎಂದೆಣಿಸಬೇಡ.’ (ಜ್ಞಾನೋ. 3:⁠7) ಅದಕ್ಕೆ ಬದಲಾಗಿ ಪುರಾತನಕಾಲದಲ್ಲಿ ಮೋಶೆ ದೇವಜನರಿಗೆ ಕೊಟ್ಟ ಈ ವಿವೇಕಯುತ ಸಲಹೆಯನ್ನು ಅನುಸರಿಸಿ: “ನೀವು ನಿಮ್ಮ ದೇವರಾದ ಯೆಹೋವನಿಗೆ ಭಯಪಡಬೇಕು. ಆತನ ಸೇವೆಮಾಡಿ ಆತನಿಗೆ ಅಂಟಿಕೊಂಡು ಆತನ ಹೆಸರಿನಲ್ಲಿ ಪ್ರಮಾಣಮಾಡಬೇಕು.” (ಧರ್ಮೋ. 10:​20, NIBV) ಯೆಹೋವನಿಗೆ ಅಂಟಿಕೊಳ್ಳುವ ಮೂಲಕ ನಾವು ಯೇಸುವನ್ನು ಅನುಕರಿಸುತ್ತೇವೆ. ಅವನ ಬಗ್ಗೆ ಹೀಗೆ ಹೇಳಲಾಗಿದೆ: “ನೀನು ಧರ್ಮವನ್ನು ಪ್ರೀತಿಸಿದಿ, ಅಧರ್ಮವನ್ನು ದ್ವೇಷಿಸಿದಿ.”​—⁠ಇಬ್ರಿ. 1:⁠9.

ಸೃಷ್ಟಿಯಿಂದ ಪಾಠಗಳು

19 ನಾವೀಗ ನೋಡಿದಂತೆ ಯೆಹೋವನ ಗುಣಗಳು ಆತನು ಮಾಡಿದ ಸೃಷ್ಟಿಗಳ ಮೂಲಕ ಕಾಣಬರುತ್ತವೆ. ಆತನ ಸೃಷ್ಟಿ ನಮಗೆ ಅಮೂಲ್ಯ ಪಾಠಗಳನ್ನು ಸಹ ಕಲಿಸುತ್ತದೆ. ಯೆಹೋವನ ಕೃತ್ಯಗಳ ಬಗ್ಗೆ ನಾವು ಹೆಚ್ಚು ಕಲಿತಂತೆ ಆತನ ವಿವೇಕದ ಕುರಿತು ನಾವು ಹೆಚ್ಚು ವಿಸ್ಮಿತರಾಗುವೆವು. ದೇವರಿಂದ ಬರುವ ವಿವೇಕಕ್ಕೆ ಗಮನಕೊಡುವುದರಿಂದ ನಾವು ಈಗ ಸಂತೋಷ ಕಂಡುಕೊಳ್ಳುವೆವು ಮಾತ್ರವಲ್ಲ ಭವಿಷ್ಯತ್ತಿನಲ್ಲೂ ಸಂರಕ್ಷಿಸಲ್ಪಡುವೆವು. (ಪ್ರಸಂ. 7:12) ಹೌದು, ನಾವು ಜ್ಞಾನೋಕ್ತಿ 3:​13, 18ರಲ್ಲಿರುವ ಆಶ್ವಾಸನಾದಾಯಕ ಮಾತುಗಳ ಸತ್ಯತೆಯನ್ನು ವೈಯಕ್ತಿಕವಾಗಿ ಅನುಭವಿಸುವೆವು. ಅದು ತಿಳಿಸುವುದು: “ಜ್ಞಾನವನ್ನು [“ವಿವೇಕವನ್ನು,” NW] ಪಡೆಯುವವನು ಧನ್ಯನು, ವಿವೇಕವನ್ನು [“ವಿವೇಚನಾಶಕ್ತಿಯನ್ನು,” NW] ಸಂಪಾದಿಸುವವನು ಭಾಗ್ಯವಂತನು. ಜ್ಞಾನವು [“ವಿವೇಕವು,” NW] ತನ್ನನ್ನು ಹಿಡಿದುಕೊಳ್ಳುವವರಿಗೆ ಜೀವದ ಮರವಾಗಿದೆ; ಅದನ್ನು ಅವಲಂಬಿಸುವ ಪ್ರತಿಯೊಬ್ಬನೂ ಧನ್ಯನು.”

[ಪಾದಟಿಪ್ಪಣಿಗಳು]

^ ಪ್ಯಾರ. 9 ಯುವ ಜನರು ಮತ್ತು ಎಳೆಯರು ಪಾದಟಿಪ್ಪಣಿಯಲ್ಲಿ ಕೊಡಲಾಗಿರುವ ರೆಫರೆನ್ಸ್‌ಗಳನ್ನು ತೆರೆದುನೋಡಿ, ಈ ಲೇಖನವನ್ನು ಸಭೆಯಲ್ಲಿ ಅಧ್ಯಯನಮಾಡುವಾಗ, ಅವರ ಈ ಸಂಶೋಧನೆಯ ಮೇಲಾಧರಿತ ಉತ್ತರಗಳನ್ನು ಕೊಡಬಹುದು.

^ ಪ್ಯಾರ. 12 ‘ಎಲೆ ಕತ್ತರಿಸುವ ಇರುವೆ’ ಕುರಿತ ಹೆಚ್ಚಿನ ಮಾಹಿತಿಗಾಗಿ ಎಚ್ಚರ! (ಇಂಗ್ಲಿಷ್‌) 1997 ಮಾರ್ಚ್‌ 22, ಪುಟ 31, ಮತ್ತು 2002 ಮೇ 22, ಪುಟ 31ನ್ನು ನೋಡಿ.

^ ಪ್ಯಾರ. 16 ಬೆಟ್ಟದ ಮೊಲದ ಕುರಿತ ಹೆಚ್ಚಿನ ಮಾಹಿತಿಗಾಗಿ ಎಚ್ಚರ! (ಇಂಗ್ಲಿಷ್‌) 1990 ಸೆಪ್ಟೆಂಬರ್‌ 8, ಪುಟ 15-16ನ್ನು ನೋಡಿ.

^ ಪ್ಯಾರ. 20 ಮಿಡತೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಎಚ್ಚರ! (ಇಂಗ್ಲಿಷ್‌) 1976 ಅಕ್ಟೋಬರ್‌ 22, ಪುಟ 11ನ್ನು ನೋಡಿ.

^ ಪ್ಯಾರ. 24 ಹಲ್ಲಿಯ ಕುರಿತ ಹೆಚ್ಚಿನ ಮಾಹಿತಿಗಾಗಿ ಎಪ್ರಿಲ್‌ 2008ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ ಪುಟ 26ನ್ನು ನೋಡಿ.

ನಿಮಗೆ ಜ್ಞಾಪಕವಿದೆಯೇ?

ಈ ಕೆಳಗಿನ ಸಣ್ಣ ಜಂತುಗಳಿಂದ ಕಲಿಯಬಲ್ಲ ಪ್ರಾಯೋಗಿಕ ಪಾಠಗಳನ್ನು ತಿಳಿಸಿ:

• ಇರುವೆ

• ಬೆಟ್ಟದ ಮೊಲ

• ಮಿಡತೆ

• ಹಲ್ಲಿ

[ಅಧ್ಯಯನ ಪ್ರಶ್ನೆಗಳು]

1. ಲೋಕದ ವಿವೇಕವು ಇಂದು ಅನೇಕರ ಮೇಲೆ ಯಾವ ಪ್ರಭಾವ ಬೀರಿದೆ?

2, 3. (ಎ) ಯೆಹೋವನೇ ‘ವಿವೇಕಿಯಾದ ಏಕಮಾತ್ರ ದೇವರು’ ಏಕೆ? (ಬಿ) ದೈವಿಕ ವಿವೇಕವು ಲೋಕದ ವಿವೇಕಕ್ಕಿಂತ ಹೇಗೆ ಭಿನ್ನವಾಗಿದೆ?

4. ಯೆಹೋವನ ವಿವೇಕವನ್ನು ತಿಳಿದುಕೊಳ್ಳುವ ಒಂದು ವಿಧ ಯಾವುದು?

5, 6. (ಎ) ಸೃಷ್ಟಿಕಾರ್ಯದಲ್ಲಿ ಯೆಹೋವನಲ್ಲದೇ ಇನ್ಯಾರು ಒಳಗೂಡಿದ್ದರು? (ಬಿ) ನಾವೇನನ್ನು ಪರಿಗಣಿಸುವೆವು, ಮತ್ತು ಏಕೆ?

7, 8. ಇರುವೆಯ ಕುರಿತ ಯಾವ ವಾಸ್ತವಾಂಶಗಳು ನಿಮ್ಮನ್ನು ವಿಸ್ಮಯಗೊಳಿಸುತ್ತವೆ?

9, 10. ಇರುವೆಗಳ ಶ್ರಮಶೀಲತೆಯನ್ನು ನಾವು ಹೇಗೆ ಅನುಕರಿಸಬಹುದು?

11. ಬೆಟ್ಟದ ಮೊಲದ ಕೆಲವೊಂದು ಲಕ್ಷಣಗಳನ್ನು ವರ್ಣಿಸಿ.

12, 13. ಬೆಟ್ಟದ ಮೊಲದಿಂದ ನಾವು ಯಾವ ಪಾಠಗಳನ್ನು ಕಲಿಯಬಲ್ಲೆವು?

14. ಒಂದೇ ಒಂದು ಮಿಡತೆ ತೀರ ಕ್ಷುಲ್ಲಕವಾಗಿ ತೋರಬಹುದಾದರೂ ಮಿಡತೆ ದಂಡಿನ ಬಗ್ಗೆ ಏನು ಹೇಳಬಹುದು?

15, 16. ಆಧುನಿಕ ದಿನದಲ್ಲಿರುವ ದೇವರ ರಾಜ್ಯ ಘೋಷಕರು ಯಾವ ವಿಧದಲ್ಲಿ ಮಿಡತೆ ದಂಡಿನಂತಿದ್ದಾರೆ?

17. ನುಣುಪಾದ ಮೇಲ್ಮೈಯ ಮೇಲೂ ಹಲ್ಲಿಯ ಪಾದ ಅಂಟಿಕೊಳ್ಳಲು ಕಾರಣವೇನು?

18. ನಾವು ಹೇಗೆ ಯಾವಾಗಲೂ ‘ಒಳ್ಳೆಯದಕ್ಕೆ ಅಂಟಿಕೊಂಡಿರಬಲ್ಲೆವು’?

19. (ಎ) ಸೃಷ್ಟಿಯಲ್ಲಿ ದೇವರ ಯಾವ ಗುಣಗಳನ್ನು ನೀವು ಕಂಡಿದ್ದೀರಿ? (ಬಿ) ದೈವಿಕ ವಿವೇಕ ಹೇಗೆ ನಮಗೆ ಪ್ರಯೋಜನ ತರಬಲ್ಲದು?

[ಪುಟ 16ರಲ್ಲಿರುವ ಚಿತ್ರ]

ಎಲೆ ಕತ್ತರಿಸುವ ಇರುವೆಯಂತೆ ನೀವು ಶ್ರಮಜೀವಿಗಳೋ?

[ಪುಟ 17ರಲ್ಲಿರುವ ಚಿತ್ರಗಳು]

ಬೆಟ್ಟದ ಮೊಲಗಳು ಸಂರಕ್ಷಣೆಗಾಗಿ ಒಟ್ಟಿಗೆಸೇರಿ ವಾಸಿಸುವಂತೆಯೇ ನೀವೂ ಜೊತೆ ಕ್ರೈಸ್ತರ ಆಪ್ತ ಒಡನಾಟ ಮಾಡುತ್ತೀರೋ?

[ಪುಟ 18ರಲ್ಲಿರುವ ಚಿತ್ರಗಳು]

ಮಿಡತೆಗಳಂತೆ ಕ್ರೈಸ್ತ ಶುಶ್ರೂಷಕರು ಪಟ್ಟುಹಿಡಿಯುತ್ತಾರೆ

[ಪುಟ 18ರಲ್ಲಿರುವ ಚಿತ್ರ]

ಹಲ್ಲಿಯು ಮೇಲ್ಮೈಗೆ ಅಂಟಿಕೊಳ್ಳುವಂತೆಯೇ ಕ್ರೈಸ್ತರು ಒಳ್ಳೆಯದಕ್ಕೆ ಅಂಟಿಕೊಳ್ಳುತ್ತಾರೆ

[ಕೃಪೆ]

Stockbyte/Getty Images