ಪೂರ್ಣ ಹೃದಯದಿಂದ ನಿಷ್ಠೆ ಕಾಪಾಡಿಕೊಳ್ಳಿ
ಪೂರ್ಣ ಹೃದಯದಿಂದ ನಿಷ್ಠೆ ಕಾಪಾಡಿಕೊಳ್ಳಿ
“ನಿನ್ನ ಸತ್ಯದಲ್ಲಿ ನಡೆದುಕೊಳ್ಳುವೆನು; ನಿನ್ನ ಹೆಸರಿಗೆ ಭಯಪಡುವಂತೆ ನನಗೆ ಪೂರ್ಣವಾದ ಹೃದಯವನ್ನು ದಯಪಾಲಿಸು.”—ಕೀರ್ತ. 86:11, NIBV.
ಸೆರೆವಾಸ, ಹಿಂಸೆ ಇದಾವುದಕ್ಕೂ ಜಗ್ಗದೆ ಹಲವಾರು ವರ್ಷ ನಂಬಿಗಸ್ತರಾಗಿದ್ದ ಕೆಲವು ಕ್ರೈಸ್ತರು ಕಾಲಾನಂತರ ಪ್ರಾಪಂಚಿಕತೆಗೆ ಬಲಿಯಾಗುವುದು ಏಕೆ? ಈ ಪ್ರಶ್ನೆಗೆ ಉತ್ತರವು, ನಮ್ಮ ಅಂತರಂಗ ಅಂದರೆ ನಮ್ಮ ಸಾಂಕೇತಿಕ ಹೃದಯದೊಂದಿಗೆ ಸಂಬಂಧಪಟ್ಟಿದೆ. 86ನೇ ಕೀರ್ತನೆಯು ನಿಷ್ಠೆಯನ್ನು ಒಂದು ಪೂರ್ಣ ಹೃದಯದೊಂದಿಗೆ ಜೋಡಿಸುತ್ತದೆ. ಕೀರ್ತನೆಗಾರ ದಾವೀದನು ಪ್ರಾರ್ಥಿಸಿದ್ದು: “ನನ್ನ ಪ್ರಾಣವನ್ನು ಕಾಪಾಡು; ನಾನು ನಿನ್ನ ಭಕ್ತ [“ನಿನಗೆ ನಿಷ್ಠನು,” NW]. ನೀನು ನನ್ನ ದೇವರು; ನಿನ್ನನ್ನು ನಂಬಿರುವ ನಿನ್ನ ಸೇವಕನನ್ನು ರಕ್ಷಿಸು. ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಿನ್ನ ಸತ್ಯದಲ್ಲಿ ನಡೆದುಕೊಳ್ಳುವೆನು. ನಿನ್ನ ಹೆಸರಿಗೆ ಭಯಪಡುವಂತೆ ನನಗೆ ಪೂರ್ಣವಾದ ಹೃದಯವನ್ನು ದಯಪಾಲಿಸು.”—ಕೀರ್ತ. 86:2, 11, NIBV.
2 ನಾವು ಪೂರ್ಣ ಹೃದಯದಿಂದ ಯೆಹೋವನಲ್ಲಿ ಭರವಸೆಯಿಡದಿದ್ದಲ್ಲಿ, ಇತರ ಚಿಂತೆಗಳೂ ಆಕರ್ಷಣೆಗಳೂ ಸತ್ಯ ದೇವರ ಕಡೆಗಿನ ನಮ್ಮ ನಿಷ್ಠೆಯನ್ನು ಕೊರೆದುಹಾಕುವವು. ಸ್ವಾರ್ಥ ಆಸೆಗಳು, ನಾವು ನಡೆಯುತ್ತಿರುವ ದಾರಿಯಲ್ಲಿ ಹುದುಗಿರುವ ನೆಲಬಾಂಬುಗಳಂತಿವೆ. ಕಷ್ಟಕರ ಪರಿಸ್ಥಿತಿಗಳಲ್ಲಿ ನಾವು ಯೆಹೋವನಿಗೆ ನಂಬಿಗಸ್ತರಾಗಿ ಉಳಿದಿರಬಹುದು, ಆದರೂ ನಾವು ಸೈತಾನನ ಪಾಶಗಳಿಗೆ ಬಲಿಬೀಳಸಾಧ್ಯವಿದೆ. ಆದುದರಿಂದ, ಪರೀಕ್ಷೆಗಳು ಮತ್ತು ಶೋಧನೆಗಳು ಬರುವ ಮುಂಚೆಯೇ ಅಂದರೆ ಈಗಲೇ ನಾವು ಯೆಹೋವನೆಡೆಗೆ ಹೃತ್ಪೂರ್ವಕ ನಿಷ್ಠೆಯನ್ನು ಬೆಳೆಸಿಕೊಳ್ಳುವುದು ಎಷ್ಟು ಅತ್ಯಾವಶ್ಯಕ! ಬೈಬಲ್ ಅನ್ನುವುದು: “ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ.” (ಜ್ಞಾನೋ. 4:23) ಈ ವಿಷಯದ ಕುರಿತು, ಯೆಹೋವನು ಇಸ್ರಾಯೇಲಿನ ರಾಜ ಯಾರೊಬ್ಬಾಮನ ಬಳಿ ಕಳುಹಿಸಿದ ಯೆಹೂದದ ಪ್ರವಾದಿಯ ಅನುಭವದಿಂದ ಅಮೂಲ್ಯ ಪಾಠಗಳನ್ನು ಕಲಿಯಬಲ್ಲೆವು.
“ನಾನು ನಿನಗೆ ಬಹುಮಾನವನ್ನು ಕೊಡುತ್ತೇನೆ”
3 ಈ ದೃಶ್ಯವನ್ನು ಕಲ್ಪಿಸಿಕೊಳ್ಳಿ. ಹತ್ತು ಕುಲಗಳ ಉತ್ತರದ ಇಸ್ರಾಯೇಲ್ ರಾಜ್ಯದಲ್ಲಿ ಬಸವಾರಾಧನೆಯನ್ನು ಸ್ಥಾಪಿಸಿದ ರಾಜ ಯಾರೊಬ್ಬಾಮನಿಗೆ ದೇವರ ಮನುಷ್ಯನು ಈಗತಾನೇ 1 ಅರ. 13:1-6.
ತೀಕ್ಷ್ಣ ಸಂದೇಶವನ್ನು ತಿಳಿಸಿದ್ದಾನೆ. ಇದರಿಂದ ಕುಪಿತನಾದ ರಾಜನು ಆ ಸಂದೇಶವಾಹಕನನ್ನು ಹಿಡಿಯುವಂತೆ ತನ್ನ ಸೈನಿಕರಿಗೆ ಅಪ್ಪಣೆಕೊಡುತ್ತಾನೆ. ಆದರೆ ಯೆಹೋವನು ತನ್ನ ಸೇವಕನೊಂದಿಗೆ ಇದ್ದದರಿಂದ ಒಂದು ಅದ್ಭುತ ನಡೆಯುತ್ತದೆ. ರಾಜನು ಸಿಟ್ಟಿನಿಂದ ಚಾಚಿದ ಕೈ ಅದೇ ಕ್ಷಣದಲ್ಲಿ ಒಣಗಿಹೋಗುತ್ತದೆ ಮತ್ತು ಸುಳ್ಳಾರಾಧನೆಗಾಗಿ ಬಳಸಲಾಗಿರುವ ವೇದಿಯು ಇಬ್ಭಾಗವಾಗುತ್ತದೆ. ತಟ್ಟನೇ ಯಾರೊಬ್ಬಾಮನು ತನ್ನ ಬಣ್ಣ ಬದಲಾಯಿಸುತ್ತಾನೆ. ಅವನು ದೇವರ ಮನುಷ್ಯನಿಗೆ, “ನಿನ್ನ ದೇವರಾದ ಯೆಹೋವನು ಪ್ರಸನ್ನನಾಗುವಂತೆ ಬೇಡಿಕೊಂಡು ನಾನು ನನ್ನ ಕೈಯನ್ನು ಹಿಂದೆಗೆಯುವದಕ್ಕಾಗುವ ಹಾಗೆ ಆತನನ್ನು ನನಗೋಸ್ಕರ ಪ್ರಾರ್ಥಿಸು” ಎಂದು ಅಂಗಲಾಚುತ್ತಾನೆ.—4 ಯಾರೊಬ್ಬಾಮನು ವಾಸಿಯಾದ ನಂತರ ಸತ್ಯ ದೇವರ ಮನುಷ್ಯನಿಗೆ ಹೀಗನ್ನುತ್ತಾನೆ: “ನನ್ನ ಮನೆಗೆ ಬಾ; ಸ್ವಲ್ಪ ಊಟಮಾಡಿ ಬಲಹೊಂದು; ನಾನು ನಿನಗೆ ಬಹುಮಾನವನ್ನು ಕೊಡುತ್ತೇನೆ.” (1 ಅರ. 13:7) ಪ್ರವಾದಿ ಈಗ ಏನು ಮಾಡಬೇಕು? ಖಂಡನೆಯ ಸಂದೇಶವನ್ನು ರಾಜನಿಗೆ ಕೊಟ್ಟು, ಈಗ ಅದೇ ರಾಜನಿಂದ ಅತಿಥಿಸತ್ಕಾರ ಸ್ವೀಕರಿಸಬೇಕೋ? (ಕೀರ್ತ. 119:113) ಅಥವಾ ಮರುಗಿದವನಂತೆ ತೋರುವ ಈ ರಾಜನ ಆಮಂತ್ರಣವನ್ನು ತಳ್ಳಿಹಾಕಬೇಕೋ? ಯಾರೊಬ್ಬಾಮನು ತನ್ನ ಮಿತ್ರರಿಗೆ ಬೆಲೆಬಾಳುವ ಉಡುಗೊರೆಗಳನ್ನು ಖಂಡಿತ ಕೊಡಶಕ್ತನಾಗಿದ್ದನು. ಒಂದುವೇಳೆ ದೇವರ ಆ ಪ್ರವಾದಿಗೆ ಒಳಗಿಂದೊಳಗೇ ಪ್ರಾಪಂಚಿಕ ವಸ್ತುಗಳಿಗಾಗಿ ಆಸೆಯಿದ್ದಲ್ಲಿ, ನಿಜವಾಗಿಯೂ ಇದೊಂದು ಶೋಧನೆ ಆಗಿರುತ್ತಿತ್ತು. ಆದರೆ ಯೆಹೋವನು ಪ್ರವಾದಿಗೆ ಹೀಗೆ ಆಜ್ಞಾಪಿಸಿದ್ದನು: ‘ಅನ್ನಪಾನಗಳನ್ನು ತೆಗೆದುಕೊಳ್ಳಬಾರದು ಮತ್ತು ಹಿಂದಿರುಗಿ ಹೋಗುವಾಗ ಬೇರೆ ದಾರಿಯಿಂದ ಹೋಗಬೇಕು.’ ಆದುದರಿಂದ ಆ ಪ್ರವಾದಿ ಖಡಾಖಂಡಿತವಾಗಿ ಉತ್ತರಿಸುವುದು: “ನೀನು ನನಗೆ ನಿನ್ನ ಆಸ್ತಿಯಲ್ಲಿ ಅರ್ಧವನ್ನು ಕೊಟ್ಟರೂ ನಾನು ನಿನ್ನ ಸಂಗಡ ಬರುವದಿಲ್ಲ; ಇಲ್ಲಿ ಅನ್ನಪಾನಗಳನ್ನು ತೆಗೆದುಕೊಳ್ಳುವದಿಲ್ಲ.” ಅನಂತರ ಅವನು ಬೇತೇಲಿನಿಂದ ಇನ್ನೊಂದು ದಾರಿ ಹಿಡಿದು ಹೊರಡುತ್ತಾನೆ. (1 ಅರ. 13:8-10) ಪ್ರವಾದಿಯ ಈ ನಿರ್ಣಯವು ಹೃತ್ಪೂರ್ವಕ ನಿಷ್ಠೆಯ ಕುರಿತು ನಮಗೆ ಯಾವ ಪಾಠ ಕಲಿಸುತ್ತದೆ?—ರೋಮಾ. 15:4.
“ತೃಪ್ತರಾಗಿರಿ”
5 ಪ್ರಾಪಂಚಿಕತೆ ನಮ್ಮ ನಿಷ್ಠೆಯನ್ನು ಪರೀಕ್ಷೆಗೊಡ್ಡುವುದಿಲ್ಲವೆಂದು ನಮಗನಿಸಬಹುದು. ಆದರೆ ಇದು ವಾಸ್ತವಿಕತೆಯಲ್ಲ. ನಮಗೆ ನಿಜವಾಗಿಯೂ ಅಗತ್ಯವಿರುವುದೆಲ್ಲವನ್ನು ಒದಗಿಸುವೆನೆಂದು ಯೆಹೋವನು ಕೊಟ್ಟಿರುವ ಮಾತಿನಲ್ಲಿ ನಮಗೆ ಭರವಸೆಯಿದೆಯೋ? (ಮತ್ತಾ. 6:33; ಇಬ್ರಿ. 13:5) ಜೀವನವನ್ನು ಹೆಚ್ಚು ಅನುಕೂಲಕರವನ್ನಾಗಿ ಮಾಡಬಲ್ಲ ಕೆಲವೊಂದು ಭೌತಿಕ ವಸ್ತುಗಳು ಸದ್ಯಕ್ಕೆ ನಮ್ಮ ಕೈಗೆಟುಕದಿರುವಾಗ, ಹೇಗಾದರೂ ಮಾಡಿ ಅವನ್ನು ಪಡೆದುಕೊಳ್ಳುವ ಬದಲು ನಾವು ಅವುಗಳಿಲ್ಲದೆ ಜೀವಿಸಬಲ್ಲೆವೋ? (ಫಿಲಿಪ್ಪಿ 4:11-13 ಓದಿ.) ನಮಗೀಗ ಬೇಕೆಂದು ಅನಿಸುವ ವಿಷಯಗಳನ್ನು ಗಿಟ್ಟಿಸಿಕೊಳ್ಳಲಿಕ್ಕಾಗಿ ದೇವಪ್ರಭುತ್ವಾತ್ಮಕ ಸುಯೋಗಗಳನ್ನು ಕೈಬಿಡುತ್ತೇವೋ? ಯೆಹೋವನಿಗೆ ಸಲ್ಲಿಸಬೇಕಾದ ನಿಷ್ಠೆಯ ಸೇವೆಗೆ ನಮ್ಮ ಜೀವನದಲ್ಲಿ ಪ್ರಥಮ ಸ್ಥಾನವಿದೆಯೋ? ನಮ್ಮ ಉತ್ತರಗಳು, ನಾವು ದೇವರಿಗೆ ಸಲ್ಲಿಸುವ ಸೇವೆ ಹೃತ್ಪೂರ್ವಕವಾಗಿದೆಯೋ ಇಲ್ಲವೋ ಎಂಬುದನ್ನು ತೋರಿಸುತ್ತವೆ. ಅಪೊಸ್ತಲ ಪೌಲನು ಬರೆದದ್ದು: “ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ. ನಾವು ಲೋಕದೊಳಕ್ಕೆ ಏನೂ ತಕ್ಕೊಂಡು ಬರಲಿಲ್ಲವಷ್ಟೆ; ಅದರೊಳಗಿಂದ ಏನೂ ತಕ್ಕೊಂಡು ಹೋಗಲಾರೆವು. ನಮಗೆ ಅನ್ನವಸ್ತ್ರಗಳಿದ್ದರೆ ಸಾಕು.”—1 ತಿಮೊ. 6:6-8.
6 ಉದಾಹರಣೆಗೆ, ನಮ್ಮ ಧಣಿ ನಮಗೆ ಹೆಚ್ಚಿನ ಸಂಬಳ ಹಾಗೂ ಇತರ ಸೌಲಭ್ಯಗಳಿರುವ ಬಡ್ತಿ ಕೊಡುವೆನೆಂದು ಹೇಳಬಹುದು. ಅಥವಾ, ನಾವು ಉದ್ಯೋಗಕ್ಕಾಗಿ ಇನ್ನೊಂದು ದೇಶ ಇಲ್ಲವೇ ಪ್ರದೇಶಕ್ಕೆ ಸ್ಥಳಾಂತರಿಸುವಲ್ಲಿ ಹೆಚ್ಚಿನ ಹಣ ಸಂಪಾದಿಸಲಿಕ್ಕಾಗುತ್ತದೆಂದು ನಮಗೆ ತಿಳಿದುಬರಬಹುದು. ಮೊದಮೊದಲು ನಮಗೆ ಅಂಥ ಅವಕಾಶಗಳು ಯೆಹೋವನಿಂದ ಬಂದಿರುವ ಆಶೀರ್ವಾದದಂತೆ ತೋರಬಹುದು. ಆದರೆ ಇವುಗಳಿಗೆ ಕೈಹಾಕುವ ಮುಂಚೆ, ನಮ್ಮ ಉದ್ದೇಶಗಳನ್ನು ಪರೀಕ್ಷಿಸಿ ನೋಡಬೇಕಲ್ಲವೇ? “ನನ್ನ ನಿರ್ಣಯವು ಯೆಹೋವನೊಂದಿಗಿನ ನನ್ನ ಸಂಬಂಧವನ್ನು ಹೇಗೆ ಬಾಧಿಸುವುದು?” ಎಂಬುದೇ ನಮ್ಮ ಮುಖ್ಯ ಚಿಂತೆಯಾಗಿರಬೇಕು.
7 ಸೈತಾನನ ವ್ಯವಸ್ಥೆಯು ಪ್ರಾಪಂಚಿಕತೆಯನ್ನು ಸತತವಾಗಿ ಪ್ರವರ್ಧಿಸುತ್ತದೆ. (1 ಯೋಹಾನ 2:15, 16 ಓದಿ.) ನಮ್ಮ ಹೃದಯಗಳನ್ನು ಭ್ರಷ್ಟಗೊಳಿಸುವುದೇ ಪಿಶಾಚನ ಗುರಿಯಾಗಿದೆ. ಆದುದರಿಂದ ನಮ್ಮ ಹೃದಯದಲ್ಲಿರಬಹುದಾದ ಪ್ರಾಪಂಚಿಕ ಆಸೆಗಳನ್ನು ಗುರುತಿಸಿ ಅವುಗಳನ್ನು ಕಿತ್ತೆಸೆಯಲು ನಾವು ಎಚ್ಚರವಾಗಿರಬೇಕು. (ಪ್ರಕ. 3:15-17) ಸೈತಾನನು ಲೋಕದ ಎಲ್ಲ ರಾಜ್ಯಗಳನ್ನು ನೀಡಿದಾಗ ಯೇಸುವಿಗೆ ಅದನ್ನು ತಳ್ಳಿಹಾಕುವುದು ಕಷ್ಟವೆನಿಸಲಿಲ್ಲ. (ಮತ್ತಾ. 4:8-10) ಯೇಸು ಎಚ್ಚರಿಸಿದ್ದು: “ಎಲ್ಲಾ ಲೋಭಕ್ಕೂ ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ.” (ಲೂಕ 12:15) ನಿಷ್ಠೆಯು ನಾವು ನಮ್ಮ ಮೇಲಲ್ಲ ಬದಲಾಗಿ ಯೆಹೋವನ ಮೇಲೆ ಆತುಕೊಳ್ಳುವಂತೆ ಸಹಾಯಮಾಡುವುದು.
ವೃದ್ಧ ಪ್ರವಾದಿ ‘ಸುಳ್ಳು ಹೇಳಿದನು’
8 ಒಂದುವೇಳೆ ದೇವರ ಆ ಪ್ರವಾದಿಯು ನೇರವಾಗಿ ಮನೆಗೆ ಹೋಗುತ್ತಿದ್ದಲ್ಲಿ ಎಲ್ಲವೂ ಸರಿಹೋಗುತ್ತಿತ್ತು. ಆದರೆ ಹೆಚ್ಚುಕಡಿಮೆ ಆ ಕೂಡಲೇ ಅವನಿಗೆ ಇನ್ನೊಂದು ಪರೀಕ್ಷೆ ಬಂತು. ಬೈಬಲ್ ಹೇಳುವುದು: “ಬೇತೇಲಿನಲ್ಲಿ ಒಬ್ಬ ಮುದುಕನಾದ ಪ್ರವಾದಿಯು ವಾಸವಾಗಿದ್ದನು. ಅವನ ಮಕ್ಕಳು ಬಂದು” ಆ ದಿನ ನಡೆದಂಥ ಎಲ್ಲ ಸಂಗತಿಗಳನ್ನು ಅವನಿಗೆ ತಿಳಿಸಿದರು. ಆ ವರದಿಯನ್ನು ಕೇಳಿ ಆ ವೃದ್ಧ ವ್ಯಕ್ತಿಯು, ಕತ್ತೆಗೆ ತಡಿಹಾಕುವಂತೆ ಪುತ್ರರಿಗೆ ಹೇಳಿ ದೇವರ ಮನುಷ್ಯನನ್ನು ಭೇಟಿಯಾಗಲು ಹೊರಡುತ್ತಾನೆ. ಅವನು ಸ್ವಲ್ಪ ದೂರ ಪ್ರಯಾಣಿಸಿದ ಬಳಿಕ, ದೇವರ ಮನುಷ್ಯನು ಒಂದು ದೊಡ್ಡ ಮರದಡಿಯಲ್ಲಿ ವಿಶ್ರಮಿಸುವುದನ್ನು ಕಂಡು ಅವನಿಗೆ ಹೀಗನ್ನುತ್ತಾನೆ: “ನೀನು ನನ್ನ ಮನೆಗೆ ಬಂದು ಊಟಮಾಡು.” ಸತ್ಯ ದೇವರ ಮನುಷ್ಯನು ಈ ಆಮಂತ್ರಣವನ್ನು ತಳ್ಳಿಹಾಕಿದಾಗ ಆ ವೃದ್ಧನು, “ನಾನೂ ನಿನ್ನಂತೆ ಪ್ರವಾದಿಯಾಗಿದ್ದೇನೆ; ಒಬ್ಬ ದೇವದೂತನು ನನಗೆ ಕಾಣಿಸಿಕೊಂಡು ನಿನ್ನನ್ನು ಕರಕೊಂಡು ಬರಬೇಕೆಂದೂ ನಿನಗೆ ಅನ್ನಪಾನಗಳನ್ನು ಕೊಡಬೇಕೆಂದೂ ಯೆಹೋವನ ಹೆಸರಿನಲ್ಲಿ ಆಜ್ಞಾಪಿಸಿದ್ದಾನೆ” ಎಂದು ಹೇಳಿದನು. ಆದರೆ “ಈ ಮಾತು ಸುಳ್ಳು” ಆಗಿತ್ತೆಂದು ಬೈಬಲ್ ಹೇಳುತ್ತದೆ.—1 ಅರ. 13:11-18.
9 ಆ ವೃದ್ಧ ಪ್ರವಾದಿಯ ಉದ್ದೇಶ ಏನೇ ಆಗಿದ್ದಿರಲಿ, ಅವನು ಸುಳ್ಳಾಡಿದ್ದಂತೂ ನಿಶ್ಚಯ. ಒಂದು ಕಾಲದಲ್ಲಿ ಅವನು ಯೆಹೋವನ ಒಬ್ಬ ನಂಬಿಗಸ್ತ ಪ್ರವಾದಿಯಾಗಿದ್ದಿರಬಹುದು. ಆದರೆ ಈ ಸಂದರ್ಭದಲ್ಲಿ ಅವನು ಮೋಸದಿಂದ ನಡೆದಿದ್ದನು. ಇಂಥ ನಡತೆಯನ್ನು ಬೈಬಲ್ ನೇರವಾಗಿ ಖಂಡಿಸುತ್ತದೆ. (ಕೀರ್ತನೆ 5:6 ಓದಿ.) ಮೋಸಗಾರರು ಸ್ವತಃ ತಮಗೆ ಮಾತ್ರವಲ್ಲ ಇತರರಿಗೂ ಆಧ್ಯಾತ್ಮಿಕ ಹಾನಿ ತರುತ್ತಾರೆ.
ಅವನು ವೃದ್ಧ ಪ್ರವಾದಿಯ ‘ಮನೆಗೆ ಹೋದನು’
10 ಯೆಹೂದದ ಪ್ರವಾದಿಯು ಆ ವೃದ್ಧ ಪ್ರವಾದಿಯ ಮೋಸವನ್ನು ಗ್ರಹಿಸಬೇಕಿತ್ತು. ‘ಯೆಹೋವನು ನನಗೆ ಹೊಸ ನಿರ್ದೇಶನಗಳನ್ನು ಕೊಡಲು ಬಯಸುತ್ತಿದ್ದಲ್ಲಿ ಬೇರೊಬ್ಬನ ಬಳಿ ತನ್ನ ದೂತನನ್ನು ಏಕೆ ಕಳುಹಿಸುವನು?’ ಎಂದವನು ಯೋಚಿಸಬಹುದಿತ್ತು. ಇಲ್ಲವೇ, ಆತನು ನೇರವಾಗಿ ಯೆಹೋವನಿಂದಲೇ ಸ್ಪಷ್ಟೀಕರಣ ಕೇಳಬಹುದಿತ್ತು. ಆದರೆ ಅವನು ಹಾಗೆ ಮಾಡಿದ್ದರ ಬಗ್ಗೆ ಬೈಬಲ್ ಎಲ್ಲಿಯೂ ತಿಳಿಸುವುದಿಲ್ಲ. ಬದಲಿಗೆ, ಅವನು ಆ ವೃದ್ಧನ “ಮನೆಗೆ ಹೋಗಿ ಅನ್ನಪಾನಗಳನ್ನು ತೆಗೆದುಕೊಂಡನು.” ಯೆಹೋವನು ಇದನ್ನು ಮೆಚ್ಚಲಿಲ್ಲ. ಮೋಸಹೋದ ಆ ಪ್ರವಾದಿ ಕೊನೆಗೂ ಯೆಹೂದಕ್ಕೆ ಹೊರಟಾಗ, ದಾರಿಯಲ್ಲಿ ಒಂದು ಸಿಂಹವು ಅವನಿಗೆ ಎದುರಾಗಿ ಬಂದು ಅವನನ್ನು ಕೊಂದುಹಾಕಿತು. ಒಬ್ಬ ಪ್ರವಾದಿಯ ಜೀವನಕ್ಕೆ ಎಂಥ ದುರಂತಕರ ಅಂತ್ಯ!—1 ಅರ. 13:19-25. *
11 ಇನ್ನೊಂದು ಬದಿಯಲ್ಲಿ, ಯಾರೊಬ್ಬಾಮನನ್ನು ಅರಸನಾಗಿ ಅಭಿಷೇಕಿಸಲು ಕಳುಹಿಸಲಾಗಿದ್ದ ಪ್ರವಾದಿ ಅಹೀಯನು, ತನ್ನ ವೃದ್ಧಾಪ್ಯದಲ್ಲೂ ನಂಬಿಗಸ್ತನಾಗಿ ಉಳಿದನು. ಅಹೀಯನು ವೃದ್ಧನಾಗಿ ಅವನ ದೃಷ್ಟಿ ಮಂದವಾದಾಗ, ಯಾರೊಬ್ಬಾಮನು 1 ಅರ. 14:1-18) ಅಹೀಯನು ಪಡೆದಂಥ ಅನೇಕ ಅಶೀರ್ವಾದಗಳಲ್ಲಿ ಒಂದು, ದೇವರ ಪ್ರೇರಿತ ವಾಕ್ಯದ ಬರವಣಿಗೆಯಲ್ಲಿ ಸಹಾಯಮಾಡುವ ಸುಯೋಗವಾಗಿತ್ತು. ಅವನು ಯಾವ ರೀತಿಯಲ್ಲಿ ಸಹಾಯಮಾಡಿದನು? ಕಾಲಾನಂತರ ಯಾಜಕನಾದ ಏಜ್ರನು, ಅಹೀಯನ ಬರವಣಿಗೆಗಳಲ್ಲಿರುವ ಮಾಹಿತಿಯನ್ನು ಬಳಸಿ ತನ್ನ ಪುಸ್ತಕವನ್ನು ಬರೆದನು.—2 ಪೂರ್ವ. 9:29.
ತನ್ನ ಅಸ್ವಸ್ಥ ಮಗನಿಗೆ ಏನಾಗುವುದೆಂಬುದನ್ನು ತಿಳಿದುಕೊಳ್ಳಲು ತನ್ನ ಹೆಂಡತಿಯನ್ನು ಆ ಪ್ರವಾದಿಯ ಬಳಿ ಕಳುಹಿಸಿದನು. ಯಾರೊಬ್ಬಾಮನ ಮಗನು ಸಾಯುವನೆಂದು ಅಹೀಯನು ಧೈರ್ಯದಿಂದ ಮುಂತಿಳಿಸಿದನು. (12 ಆ ಯುವ ಪ್ರವಾದಿಯು, ವೃದ್ಧ ಪ್ರವಾದಿಯೊಂದಿಗೆ ಅನ್ನಪಾನಮಾಡಲು ಹೋಗುವ ಮುಂಚೆ ಯೆಹೋವನ ಬಳಿ ಏಕೆ ವಿಚಾರಿಸಲಿಲ್ಲವೆಂದು ಬೈಬಲ್ ಹೇಳುವುದಿಲ್ಲ. ಬಹುಶಃ, ‘ರೋಗಿ ಬಯಸಿದ್ದೂ ಹಾಲು ವೈದ್ಯ ಕೊಟ್ಟದ್ದೂ ಹಾಲು’ ಎಂಬಂತೆ, ಅವನು ಕೇಳಲು ಇಷ್ಟಪಟ್ಟದ್ದನ್ನೇ ಆ ವೃದ್ಧ ಪ್ರವಾದಿ ಹೇಳಿದ್ದರಿಂದ ಇರಬಹುದು. ಇದರಿಂದ ನಮಗೇನು ಪಾಠವಿದೆ? ಯೆಹೋವನ ಆವಶ್ಯಕತೆಗಳು ನ್ಯಾಯವಾದವುಗಳು ಎಂಬ ಪೂರ್ಣ ಖಾತ್ರಿ ನಮಗಿರಬೇಕು ಮತ್ತು ಏನೇ ಆಗಲಿ ಅದನ್ನು ಪಾಲಿಸುವ ದೃಢಸಂಕಲ್ಪವಿರಬೇಕು.
13 ಸಲಹೆ ಸಿಗುವಾಗ ಕೆಲವರು ತಮಗಿಷ್ಟವಾದದ್ದನ್ನು ಮಾತ್ರ ಕಿವಿಗೆ ಹಾಕಿಕೊಳ್ಳುತ್ತಾರೆ. ಉದಾಹರಣೆಗೆ, ಒಬ್ಬ ಪ್ರಚಾರಕನಿಗೆ ಒಂದು ಉದ್ಯೋಗದ ಅವಕಾಶ ಸಿಕ್ಕಿದೆ ಎಂದಿಟ್ಟುಕೊಳ್ಳಿ. ಆದರೆ ಆ ಉದ್ಯೋಗವು, ಅವನು ತನ್ನ ಕುಟುಂಬ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಕೊಡಬೇಕಾದ ಸಮಯವನ್ನು ಕಬಳಿಸಬಲ್ಲದು. ಈಗ ಅವನು ಹಿರಿಯನೊಬ್ಬನ ಬಳಿ ಸಲಹೆ ಕೇಳುತ್ತಾನೆ. ಪ್ರಚಾರಕನು ಕುಟುಂಬವನ್ನು ಹೇಗೆ ನೋಡಿಕೊಳ್ಳಬೇಕೆಂಬ ನಿರ್ಣಯವನ್ನು ಸ್ವತಃ ಅವನೇ ಮಾಡಬೇಕೆಂದೂ, ಅದನ್ನು ತಾನು ಮಾಡಲಾರೆ ಎಂದೂ ಹಿರಿಯನು ಆರಂಭದಲ್ಲಿ ಹೇಳುವನು. ಅನಂತರ ಅವನು ಆ ಸಹೋದರನೊಂದಿಗೆ, ಆ ಉದ್ಯೋಗದಿಂದ ಬರುವ ಆಧ್ಯಾತ್ಮಿಕ ಅಪಾಯಗಳ ಕುರಿತಾಗಿ ವಿಮರ್ಶಿಸುವನು. ಆ ಸಹೋದರನು, ಹಿರಿಯನು ಆರಂಭದಲ್ಲಿ ಹೇಳಿದ ಮಾತುಗಳನ್ನು ಮಾತ್ರ ನೆನಪಿನಲ್ಲಿಡುವನೋ, ಇಲ್ಲವೇ ತದನಂತರ ಹೇಳಿದ ವಿಷಯಗಳ ಬಗ್ಗೆಯೂ ಗಂಭೀರವಾಗಿ ಯೋಚಿಸುವನೋ? ತನಗೆ ಆಧ್ಯಾತ್ಮಿಕವಾಗಿ ಯಾವುದು ಅತ್ಯುತ್ತಮ ಎಂಬುದನ್ನು ಆ ಸಹೋದರನು ನಿರ್ಣಯಿಸಬೇಕು.
14 ಇನ್ನೊಂದು ಸಂಭಾವ್ಯ ಸನ್ನಿವೇಶವನ್ನು ಪರಿಗಣಿಸಿರಿ. ಒಬ್ಬ ಸಹೋದರಿಯು ತನ್ನ ಅವಿಶ್ವಾಸಿ ಗಂಡನಿಂದ ಪ್ರತ್ಯೇಕಗೊಳ್ಳಬೇಕೋ ಇಲ್ಲವೋ ಎಂದು ಹಿರಿಯನ ಬಳಿ ಕೇಳಬಹುದು. ಅದನ್ನು ಅವಳು ಸ್ವತಃ ನಿರ್ಣಯಿಸಬೇಕೆಂದು ಹಿರಿಯನು ನಿಸ್ಸಂದೇಹವಾಗಿ ವಿವರಿಸುವನು. ತದನಂತರ, ಆ ವಿಷಯದ ಬಗ್ಗೆ ಬೈಬಲ್ ಏನು ಹೇಳುತ್ತದೆಂಬುದನ್ನು ಆಕೆಯೊಂದಿಗೆ ವಿಮರ್ಶಿಸುವನು. (1 ಕೊರಿಂ. 7:10-16) ಹಿರಿಯನ ಸಲಹೆಯ ಕುರಿತು ಆ ಸಹೋದರಿ ಗಂಭೀರವಾಗಿ ಯೋಚಿಸುವಳೋ? ಅಥವಾ ಗಂಡನನ್ನು ಬಿಟ್ಟುಬಿಡಬೇಕೆಂದು ಅವಳು ಈಗಾಗಲೇ ನಿರ್ಣಯಿಸಿಕೊಂಡು ಬಂದಿದ್ದಾಳೋ? ಆಕೆ ಬೈಬಲ್ ಆಧರಿತ ಸಲಹೆಯನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಿ ನಿರ್ಣಯಮಾಡುವುದು ವಿವೇಕಯುತ.
ವಿನಯಶೀಲರಾಗಿರಿ
15 ಯೆಹೂದದ ಪ್ರವಾದಿಯ ತಪ್ಪಿನಿಂದ ನಾವು ಇನ್ನಾವ ಪಾಠ ಕಲಿಯಬಹುದು? ಜ್ಞಾನೋಕ್ತಿ 3:5 ಹೇಳುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು.” ಯೆಹೂದದ ಆ ಪ್ರವಾದಿ ಹಿಂದೆ ಯೆಹೋವನ ಮೇಲೆ ಆತುಕೊಂಡಂತೆಯೇ ಈ ಸಂದರ್ಭದಲ್ಲೂ ಆತುಕೊಳ್ಳುವ ಬದಲು ತನ್ನ ಸ್ವಂತ ತೀರ್ಮಾನಶಕ್ತಿಯ ಮೇಲೆ ಅವಲಂಬಿಸಿದನು. ಅವನ ಈ ತಪ್ಪಿಗಾಗಿ, ಅವನು ತನ್ನ ಜೀವವನ್ನು ಮತ್ತು ದೇವರೊಂದಿಗಿನ ಒಳ್ಳೇ ಹೆಸರನ್ನು ಕಳೆದುಕೊಳ್ಳಬೇಕಾಯಿತು. ಯೆಹೋವನ ಸೇವೆಯನ್ನು ವಿನಯಶೀಲತೆಯಿಂದ ಹಾಗೂ ನಿಷ್ಠೆಯಿಂದ ಮಾಡುವುದರ ಮಹತ್ತ್ವವನ್ನು ಅವನ ಅನುಭವ ಎಷ್ಟು ಪ್ರಬಲವಾಗಿ ಎತ್ತಿತೋರಿಸುತ್ತದೆ!
16 ನಮ್ಮ ಹೃದಯದಲ್ಲಿರುವ ಸ್ವಾರ್ಥ ಪ್ರವೃತ್ತಿಗಳು ನಮ್ಮನ್ನು ತಪ್ಪುದಾರಿಗೆ ನಡೆಸುವ ಸಾಧ್ಯತೆಗಳಿವೆ. “ಹೃದಯವು ಎಲ್ಲಕ್ಕಿಂತಲೂ ವಂಚಕ.” (ಯೆರೆ. 17:9) ಯೆಹೋವನಿಗೆ ನಿಷ್ಠರಾಗಿ ಉಳಿಯಲಿಕ್ಕಾಗಿ ನಾವು, ಹಳೇ ಸ್ವಭಾವ ಇಲ್ಲವೇ ವ್ಯಕ್ತಿತ್ವವನ್ನು ಕಳಚಿಹಾಕಲು ಪರಿಶ್ರಮಪಡುತ್ತಾ ಇರಬೇಕು. ಇದರಲ್ಲಿ ಅಹಂಭಾವ ಹಾಗೂ ಆತ್ಮಾವಲಂಬನೆಯ ಪ್ರಕೃತಿ ಒಳಗೂಡಿರಬಹುದು. ಅನಂತರ ನಾವು “ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ [“ನಿಷ್ಠೆಯುಳ್ಳದ್ದಾಗಿಯೂ,” NW] ನಿರ್ಮಿಸಲ್ಪಟ್ಟಿ”ರುವ ಹೊಸ ಸ್ವಭಾವವನ್ನು ಧರಿಸಿಕೊಳ್ಳಬೇಕು.—ಎಫೆಸ 4:22-24 ಓದಿ.
17 “ವಿನಯಶೀಲರಲ್ಲಿ ವಿವೇಕವಿದೆ” ಎಂದು ಜ್ಞಾನೋಕ್ತಿ 11:2 (NW) ಹೇಳುತ್ತದೆ. ವಿನಯದಿಂದ ನಾವು ಯೆಹೋವನ ಮೇಲೆ ಆತುಕೊಂಡರೆ, ಗಂಭೀರ ತಪ್ಪುಗಳಿಂದ ದೂರವಿರಬಲ್ಲೆವು. ಉದಾಹರಣೆಗೆ, ನಿರುತ್ತೇಜನವು ನಮ್ಮ ತೀರ್ಮಾನಶಕ್ತಿಯನ್ನು ಸುಲಭವಾಗಿ ಕುಂದಿಸಬಲ್ಲದು. (ಜ್ಞಾನೋ. 24:10) ಪವಿತ್ರ ಸೇವೆಯ ಯಾವುದೋ ಒಂದು ವೈಶಿಷ್ಟ್ಯದಲ್ಲಿ ಪಾಲ್ಗೊಳ್ಳಲು ನಮಗೆ ಬೇಸರವಾಗುತ್ತಿರಬಹುದು ಮತ್ತು ‘ನಾವು ಇಷ್ಟೊಂದು ವರ್ಷ ಮಾಡಿದ್ದು ಸಾಕು, ಈಗ ಬೇರೆಯವರು ಮಾಡಲಿ’ ಎಂದು ನಮಗೆ ಅನಿಸಬಹುದು. ಇಲ್ಲವೇ, ಎಲ್ಲರಂತೆ ಸಾಮಾನ್ಯ ಜೀವನ ನಡೆಸಲು ನಾವು ಬಯಸುತ್ತಿರಬಹುದು. ಆದರೆ, ನಾವು “ಹೆಣಗಾಡಿ” ‘ಕರ್ತನ ಸೇವೆಯಲ್ಲಿ ಪ್ರಯಾಸಪಟ್ಟರೆ’ ಮಾತ್ರ ನಮ್ಮ ಹೃದಯವನ್ನು ಕಾಪಾಡಿಕೊಳ್ಳಬಲ್ಲೆವು.—ಲೂಕ 13:24; 1 ಕೊರಿಂ. 15:58.
18 ಕೆಲವೊಮ್ಮೆ ನಮಗೆ ಕಷ್ಟಕರ ನಿರ್ಣಯಗಳನ್ನು ಮಾಡಬೇಕಾದೀತು, ಮತ್ತು ಆಗ ಸರಿಯಾದ ಮಾರ್ಗ ಯಾವುದೆಂಬುದು ಕೂಡಲೇ ತೋಚಲಿಕ್ಕಿಲ್ಲ. ಆಗ ನಮಗೇನು ಸರಿಯೆಂದು ತೋರುತ್ತದೋ ಅದನ್ನೇ ಮಾಡಲು ನಮಗೆ ಮನಸ್ಸಾಗುತ್ತದೋ? ನಾವು ಅಂಥ ಪರಿಸ್ಥಿತಿಯಲ್ಲಿರುವಾಗಲೆಲ್ಲ, ಯೆಹೋವನ ಸಹಾಯ ಕೇಳುವುದು ವಿವೇಕಯುತ. ಯಾಕೋಬ 1:5 ಹೇಳುವುದು: “ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ.” ಒಳ್ಳೇ ನಿರ್ಣಯಗಳನ್ನು ಮಾಡಲು ಅಗತ್ಯವಿರುವ ಪವಿತ್ರಾತ್ಮವನ್ನು ನಮ್ಮ ಸ್ವರ್ಗೀಯ ತಂದೆ ನಮಗೆ ಕೊಡುವನು.—ಲೂಕ 11:9, 13 ಓದಿ.
ನಿಷ್ಠರಾಗಿ ಉಳಿಯುವ ದೃಢಸಂಕಲ್ಪದಿಂದಿರ್ರಿ
19 ಸೊಲೊಮೋನನು ಸತ್ಯಾರಾಧನೆಯನ್ನು ಬಿಟ್ಟುಹೋದ ನಂತರದ ಕೋಲಾಹಲಭರಿತ ವರ್ಷಗಳಲ್ಲಿ, ದೇವರ ಸೇವಕರ ನಿಷ್ಠೆ ತೀವ್ರ ಪರೀಕ್ಷೆಗೊಳಗಾಯಿತು. ಅನೇಕರು ಒಂದಲ್ಲ ಒಂದು ವಿಧದಲ್ಲಿ ರಾಜಿಮಾಡಿಕೊಂಡರು. ಹಾಗಿದ್ದರೂ, ಕೆಲವರು ಯೆಹೋವನಿಗೆ ನಿಷ್ಠರಾಗಿ ಉಳಿದರು.
20 ನಮ್ಮ ನಿಷ್ಠೆಯನ್ನು ಪರೀಕ್ಷಿಸುವಂಥ ಆಯ್ಕೆಗಳು ಹಾಗೂ ನಿರ್ಣಯಗಳನ್ನು ನಾವು ಪ್ರತಿದಿನ ಮಾಡಬೇಕಾಗುತ್ತದೆ. ನಾವು ಸಹ ನಂಬಿಗಸ್ತರಾಗಿ ಉಳಿಯಸಾಧ್ಯವಿದೆ. ಪೂರ್ಣ ಹೃದಯದಿಂದ ನಾವು ಯೆಹೋವನಿಗೆ ಯಾವಾಗಲೂ ನಿಷ್ಠರಾಗಿ ಉಳಿದು, ಆತನು ತನ್ನ ನಿಷ್ಠಾವಂತ ಸೇವಕರನ್ನು ಹರಸುವುದನ್ನು ಮುಂದುವರಿಸುವನೆಂಬ ಪೂರ್ಣ ಭರವಸೆಯಿಂದಿರೋಣ.—2 ಸಮು. 22:26.
[ಪಾದಟಿಪ್ಪಣಿ]
^ ಪ್ಯಾರ. 16 ಯೆಹೋವನು ವೃದ್ಧ ಪ್ರವಾದಿಯನ್ನು ಮರಣಕ್ಕೀಡುಮಾಡಿ ದಂಡಿಸಿದನೋ ಇಲ್ಲವೋ ಎಂಬುದನ್ನು ಬೈಬಲ್ ಹೇಳುವುದಿಲ್ಲ.
ನಿಮ್ಮ ಉತ್ತರವೇನು?
• ನಮ್ಮ ಹೃದಯದಲ್ಲಿರುವ ಪ್ರಾಪಂಚಿಕ ಆಸೆಗಳನ್ನು ಕಿತ್ತೆಸೆಯಲು ನಾವೇಕೆ ಪ್ರಯಾಸಪಡಬೇಕು?
• ಯೆಹೋವನಿಗೆ ನಿಷ್ಠರಾಗಿರಲು ನಮಗೆ ಯಾವುದು ಸಹಾಯಮಾಡುವುದು?
• ದೇವರಿಗೆ ನಿಷ್ಠಾವಂತರಾಗಿರಲು ನಮಗೆ ವಿನಯಶೀಲತೆ ಹೇಗೆ ಸಹಾಯಮಾಡಬಲ್ಲದು?
[ಅಧ್ಯಯನ ಪ್ರಶ್ನೆಗಳು]
1, 2. (ಎ) ಕೀರ್ತನೆ 86:2, 11ಕ್ಕನುಸಾರ, ಪರೀಕ್ಷೆಗಳು ಇಲ್ಲವೇ ಶೋಧನೆಗಳು ಬಂದಾಗ ನಂಬಿಗಸ್ತರಾಗಿರಲು ನಮಗೆ ಯಾವುದು ಸಹಾಯಮಾಡುವುದು? (ಬಿ) ಹೃತ್ಪೂರ್ವಕ ನಿಷ್ಠೆಯನ್ನು ಯಾವಾಗ ಬೆಳೆಸಿಕೊಳ್ಳಬೇಕು?
3. ದೇವರ ಪ್ರವಾದಿ ಕೊಟ್ಟ ತೀರ್ಪಿನ ಸಂದೇಶಕ್ಕೆ ಯಾರೊಬ್ಬಾಮನು ಹೇಗೆ ಪ್ರತಿಕ್ರಿಯಿಸಿದನು?
4. (ಎ) ರಾಜನ ಆಮಂತ್ರಣವು ಪ್ರವಾದಿಯ ನಿಷ್ಠೆಯನ್ನು ಪರೀಕ್ಷಿಸಿದ್ದು ಹೇಗೆ? (ಬಿ) ಪ್ರವಾದಿಯ ಉತ್ತರವೇನಾಗಿತ್ತು?
5. ಪ್ರಾಪಂಚಿಕತೆಯು ನಮ್ಮ ನಿಷ್ಠೆಯನ್ನು ಪರೀಕ್ಷೆಗೊಡ್ಡುವುದು ಹೇಗೆ?
6. ನಮಗೆ ಯಾವ ‘ಬಹುಮಾನಗಳನ್ನು’ ನೀಡಲಾಗಬಹುದು, ಮತ್ತು ನಾವದನ್ನು ಸ್ವೀಕರಿಸಬೇಕೋ ಬೇಡವೋ ಎಂಬುದನ್ನು ನಿರ್ಣಯಿಸಲು ಯಾವುದು ಸಹಾಯಮಾಡುವುದು?
7. ಪ್ರಾಪಂಚಿಕ ಆಸೆಗಳನ್ನು ಕಿತ್ತೆಸೆಯುವುದು ಏಕೆ ಪ್ರಾಮುಖ್ಯ?
8. ದೇವರ ಪ್ರವಾದಿಯ ನಿಷ್ಠೆ ಹೇಗೆ ಪರೀಕ್ಷೆಗೊಳಗಾಯಿತು?
9. ಮೋಸಗಾರರ ಕುರಿತು ಬೈಬಲ್ ಏನನ್ನುತ್ತದೆ, ಮತ್ತು ಅವರು ಯಾರಿಗೆ ಹಾನಿಮಾಡುತ್ತಾರೆ?
10. ದೇವರ ಪ್ರವಾದಿ ಆ ವೃದ್ಧನ ಆಮಂತ್ರಣಕ್ಕೆ ಹೇಗೆ ಪ್ರತಿಕ್ರಿಯಿಸಿದನು, ಮತ್ತು ಫಲಿತಾಂಶವೇನಾಗಿತ್ತು?
11. ಅಹೀಯನು ಯಾವ ಒಳ್ಳೇ ಮಾದರಿಯನ್ನಿಟ್ಟನು?
12-14. (ಎ) ಯೆಹೂದದ ಪ್ರವಾದಿಗೆ ಸಂಬಂಧಪಟ್ಟ ಘಟನೆಯಿಂದ ನಮಗೇನು ಪಾಠವಿದೆ? (ಬಿ) ಹಿರಿಯರು ಕೊಡುವ ಬೈಬಲ್ ಆಧರಿತ ಸಲಹೆಯನ್ನು ಜಾಗರೂತೆಯಿಂದ ಹಾಗೂ ಪ್ರಾರ್ಥನಾಪೂರ್ವಕವಾಗಿ ಪರಿಗಣಿಸುವ ಅಗತ್ಯವನ್ನು ದೃಷ್ಟಾಂತಿಸಿರಿ.
15. ದೇವರ ಪ್ರವಾದಿಯ ತಪ್ಪಿನಿಂದ ನಾವೇನು ಕಲಿಯಬಹುದು?
16, 17. ಯೆಹೋವನಿಗೆ ನಿಷ್ಠರಾಗಿ ಉಳಿಯಲು ನಮಗೆ ಯಾವುದು ಸಹಾಯಮಾಡುವುದು?
18. ಯಾವ ನಿರ್ಣಯ ಮಾಡಬೇಕೆಂದು ನಮಗೆ ತಿಳಿಯದಿರುವಲ್ಲಿ ನಾವೇನು ಮಾಡಬೇಕು?
19, 20. ನಾವು ಯಾವ ದೃಢಸಂಕಲ್ಪ ಮಾಡಬೇಕು?
[ಪುಟ 9ರಲ್ಲಿರುವ ಚಿತ್ರಗಳು]
ನಿಮಗೆ ಶೋಧನೆಗಳನ್ನು ಪ್ರತಿರೋಧಿಸಲು ಕಷ್ಟವಾಗುತ್ತದೋ?
[ಪುಟ 10ರಲ್ಲಿರುವ ಚಿತ್ರಗಳು]
ನೀವು ಬೈಬಲ್ ಆಧರಿತ ಸಲಹೆಯನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸುವಿರೋ?