ನಮ್ಮ ಅದ್ವಿತೀಯ ಸೌರವ್ಯೂಹ ಅಸ್ತಿತ್ವಕ್ಕೆ ಬಂದದ್ದು ಹೇಗೆ?
ನಮ್ಮ ಅದ್ವಿತೀಯ ಸೌರವ್ಯೂಹ ಅಸ್ತಿತ್ವಕ್ಕೆ ಬಂದದ್ದು ಹೇಗೆ?
ನಮ್ಮ ಸೌರವ್ಯೂಹವು ಅನೇಕ ಅಂಶಗಳಿಂದಾಗಿ ಅದ್ವಿತೀಯವಾಗಿದೆ. ಅದು ಕ್ಷೀರಪಥ ಗ್ಯಾಲಕ್ಸಿಯ ಎರಡು ಸುರುಳಿಯಾಕಾರದ ಬಾಹುಗಳ ನಡುವಿನ ಪ್ರದೇಶದಲ್ಲಿ ನೆಲೆಸಿದೆ. ಇತರ ಪ್ರದೇಶಗಳಿಗೆ ಹೋಲಿಸುವಾಗ ಇಲ್ಲಿ ಕಡಿಮೆ ನಕ್ಷತ್ರಗಳಿವೆ. ರಾತ್ರಿಯಲ್ಲಿ ನಾವು ನೋಡಸಾಧ್ಯವಿರುವ ಎಲ್ಲಾ ನಕ್ಷತ್ರಗಳು ನಮ್ಮಿಂದ ಎಷ್ಟೊಂದು ದೂರದಲ್ಲಿವೆಯೆಂದರೆ ಅವನ್ನು ಅತಿ ದೊಡ್ಡದಾದ ದೂರದರ್ಶಕಗಳಿಂದ ನೋಡಿದಾಗಲೂ ಅವು ಕೇವಲ ಚುಕ್ಕೆಗಳಷ್ಟೇ ಸಣ್ಣದಾಗಿ ಕಾಣುತ್ತವೆ. ನಮ್ಮ ಸೌರವ್ಯೂಹವು ಇಂತಹ ಪ್ರದೇಶದಲ್ಲೇ ಇರಲು ಏನಾದರೂ ಕಾರಣವಿದೆಯೊ?
ಕ್ಷೀರಪಥದ ಕೇಂದ್ರ ಭಾಗದಲ್ಲಿ ನಕ್ಷತ್ರಗಳು ತುಂಬ ಕಿಕ್ಕಿರಿದಿವೆ. ನಮ್ಮ ಸೌರವ್ಯೂಹವೇನಾದರೂ ಅಂತಹ ಪ್ರದೇಶದ ಹತ್ತಿರವಿರುತ್ತಿದ್ದರೆ ಅದರಿಂದಾಗಿ ನಮ್ಮ ಮೇಲೆ ಹಾನಿಕಾರಕ ಪರಿಣಾಮಗಳಾಗುತ್ತಿತ್ತು. ಉದಾಹರಣೆಗೆ, ಭೂಮಿಯ ಕಕ್ಷೆಗೆ ಅಡಚಣೆಯಾಗುತ್ತಿತ್ತು ಮತ್ತು ಇದು ಮಾನವ ಜೀವನವನ್ನು ಬಹಳಷ್ಟು ಮಟ್ಟಿಗೆ ಬಾಧಿಸುತ್ತಿತ್ತು. ಆದರೆ ಈಗಿರುವಂತೆ, ಸೌರವ್ಯೂಹವು ಕ್ಷೀರಪಥ ಗ್ಯಾಲಕ್ಸಿಯಲ್ಲಿ ಸರಿಯಾದ ಸ್ಥಳದಲ್ಲಿದೆ. ಇದರಿಂದಾಗಿ ಅದು ಈ ಮೇಲಿನ ಅಪಾಯದಿಂದ ಮತ್ತು ಅನಿಲ ಮೋಡಗಳ ಮೂಲಕ ಹಾದು ಹೋಗುವಾಗ ಅತಿಯಾಗಿ ಬಿಸಿಯಾಗುವುದು ಮತ್ತು ಸ್ಫೋಟಗೊಳ್ಳುತ್ತಿರುವ ನಕ್ಷತ್ರಗಳ ಹಾಗೂ ಮಾರಣಾಂತಿಕ ವಿಕಿರಣದ ಇತರ ಮೂಲಗಳಿಗೆ ಒಡ್ಡಲ್ಪಡುವುದರಂಥ ಬೇರೆ ಅಪಾಯಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ.
ಸೂರ್ಯನು ನಮ್ಮ ಅಗತ್ಯಗಳನ್ನು ಪೂರೈಸಬಲ್ಲ ತಕ್ಕದಾದ ನಕ್ಷತ್ರವಾಗಿದೆ. ಅದು ಯಾವಾಗಲೂ ಒಂದೇ ಪ್ರಮಾಣದಲ್ಲಿ ಉರಿಯುತ್ತಿರುತ್ತದೆ ಮತ್ತು ದೀರ್ಘಾಯುವಿನದ್ದಾಗಿದೆ. ಅದರ ಗಾತ್ರವು ಅಗತ್ಯಕ್ಕಿಂತ ಹೆಚ್ಚು ದೊಡ್ಡದ್ದಾಗಿಲ್ಲ ಮತ್ತು ಅದರ ತಾಪವು ಅಗತ್ಯಕ್ಕಿಂತ ಹೆಚ್ಚು ಬಿಸಿಯಾಗಿಲ್ಲ. ನಮ್ಮ ಗ್ಯಾಲಕ್ಸಿಯಲ್ಲಿ ಹೆಚ್ಚಿನ ಸಂಖ್ಯೆಯ ನಕ್ಷತ್ರಗಳು ಸೂರ್ಯನಿಗಿಂತ ಬಹಳ ಸಣ್ಣ ಗಾತ್ರದ್ದಾಗಿವೆ ಮತ್ತು ಅವುಗಳು ಸರಿಯಾದ ಬೆಳಕನ್ನೂ ಕೊಡುವುದಿಲ್ಲ ಹಾಗೂ ಭೂಮಿಯಂತಹ ಗ್ರಹದಲ್ಲಿ ಜೀವವನ್ನು ಪೋಷಿಸಲು ಸಾಕಾಗುವಷ್ಟು ಪ್ರಮಾಣದ ಶಾಖವನ್ನೂ ನೀಡುವುದಿಲ್ಲ. ಅದಕ್ಕೆ ಕೂಡಿಸಿ, ಹೆಚ್ಚಿನ ನಕ್ಷತ್ರಗಳು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ನಕ್ಷತ್ರಗಳ ಗುರುತ್ವಾಕರ್ಷಣೆಯಿಂದಾಗಿ ಹಿಡಿದಿಡಲ್ಪಟ್ಟಿವೆ ಮತ್ತು ಅವು ಒಂದರ ಸುತ್ತ ಇನ್ನೊಂದು ಸುತ್ತುತ್ತಿರುತ್ತವೆ. ಅದಕ್ಕೆ ವೈದೃಶ್ಯವಾಗಿ ನಮ್ಮ ಸೂರ್ಯ ಸ್ವತಂತ್ರವಾಗಿದೆ. ಒಂದುವೇಳೆ ನಮ್ಮ ಸೌರವ್ಯೂಹವು ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಸೂರ್ಯಗಳ ಗುರುತ್ವಾಕರ್ಷಣ ಶಕ್ತಿಯಿಂದ ಪ್ರಭಾವಿತವಾಗಿರುತ್ತಿದ್ದಲ್ಲಿ ಅದು ಎಂದಿಗೂ ಈಗಿರುವಷ್ಟು ಸ್ಥಿರವಾಗಿರುತ್ತಿರಲಿಲ್ಲ.
ನಮ್ಮ ಸೌರವ್ಯೂಹವನ್ನು ಅದ್ವಿತೀಯವನ್ನಾಗಿ ಮಾಡುವ ಇನ್ನೊಂದು ಅಂಶವೇನೆಂದರೆ ಅದರಲ್ಲಿರುವ ಹೊರವಲಯದ ಬೃಹದಾಕಾರದ ಗ್ರಹಗಳ ಸ್ಥಾನ. ಈ ಗ್ರಹಗಳು ಬಹುಮಟ್ಟಿಗೆ ವೃತ್ತಾಕಾರದ ಕಕ್ಷೆಯಲ್ಲಿ ಸುತ್ತುತ್ತವೆ ಮತ್ತು ಒಳವಲಯದ ಗ್ರಹಗಳ ಮೇಲೆ ಯಾವುದೇ ರೀತಿಯ ಅನಗತ್ಯ ಗುರುತ್ವಾಕರ್ಷಣೆಯನ್ನು ಬೀರುವುದಿಲ್ಲ. * ಅದಕ್ಕೆ ಬದಲಾಗಿ, ಅವುಗಳು ಅಪಾಯಕಾರಿ ಆಕಾಶಸ್ಥ ಕಾಯಗಳನ್ನು ಹೀರಿಕೊಳ್ಳುವ ಅಥವಾ ದೂರತಳ್ಳುವ ರಕ್ಷಣಾತ್ಮಕ ಕೆಲಸವನ್ನು ಮಾಡುತ್ತವೆ. “ಕ್ಷುದ್ರಗ್ರಹಗಳು ಮತ್ತು ಧೂಮಕೇತುಗಳು ನಮ್ಮನ್ನು ಅಪ್ಪಳಿಸುವುದಾದರೂ, ಇದು ವಿಪರೀತವಾಗಿ ನಡೆಯದಂತೆ ಗುರುವಿನಂತಹ ಬೃಹದಾಕಾರದ ಅನಿಲ ಗ್ರಹಗಳ ಅಸ್ತಿತ್ವವು ತಡೆಯುತ್ತದೆ” ಎಂದು ವಿಜ್ಞಾನಿಗಳಾದ ಪೀಟರ್ ಡಿ. ವಾರ್ಡ್ ಮತ್ತು ಡೊನಾಲ್ಡ್ ಬ್ರೌನ್ಲೀ ಅಪರೂಪವಾದ ಭೂಮಿ—ಜಟಿಲವಾದ ಜೀವವು ವಿಶ್ವದಲ್ಲಿ ಬೇರೆಲ್ಲೂ ಕಂಡುಕೊಳ್ಳ ಸಾಧ್ಯವಿಲ್ಲವೇಕೆ? (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ವಿವರಿಸುತ್ತಾರೆ. ನಮ್ಮಂಥದ್ದೇ ರೀತಿಯ ಇತರ ಸೌರವ್ಯೂಹಗಳನ್ನು ಕಂಡುಹಿಡಿಯಲಾಗಿದೆ ಮತ್ತು ಅವುಗಳಲ್ಲಿ ಬೃಹದಾಕಾರದ ಗ್ರಹಗಳಿವೆ. ಆದರೆ ಈ ಬೃಹದಾಕಾರದ ಹೆಚ್ಚಿನ ಗ್ರಹಗಳಿಗಿರುವಂಥ ಕಕ್ಷೆಗಳು ಅವುಗಳಿಗಿಂತ ಸಣ್ಣ ಗಾತ್ರದ ಗ್ರಹವಾಗಿರುವ ಭೂಮಿಯನ್ನು ಅಪಾಯಕ್ಕೆ ಸಿಕ್ಕಿಸುವಂಥದ್ದಾಗಿವೆ.
ಚಂದ್ರನ ಪಾತ್ರ
ಪುರಾತನ ಸಮಯಗಳಿಂದಲೂ ನಮ್ಮ ಚಂದ್ರ ಮಾನವಕುಲವನ್ನು ಕೌತುಕಗೊಳಿಸಿದೆ. ಕವಿಗಳಿಗೆ ಮತ್ತು ಸಂಗೀತಕಾರರಿಗೆ ಅದು ಸ್ಫೂರ್ತಿಯನ್ನು ನೀಡಿದೆ. ಉದಾಹರಣೆಗೆ, ಚಂದ್ರನು “ಯುಗಯುಗಕ್ಕೂ ಸ್ಥಿರವಾಗಿರುವುದು; ಪರಲೋಕದಲ್ಲಿರುವ ಸಾಕ್ಷಿಯ ಹಾಗೆ ನಂಬಿಕೆಯುಳ್ಳದ್ದಾಗಿರುವುದು” ಎಂದು ಪ್ರಾಚೀನಕಾಲದ ಒಬ್ಬ ಹೀಬ್ರು ಕವಿಯು ವರ್ಣಿಸಿದನು.—ಕೀರ್ತನೆ 89:37.
ಚಂದ್ರನು ಭೂಮಿಯ ಮೇಲಿನ ಜೀವನವನ್ನು ಪ್ರಭಾವಿಸುವ ಒಂದು ಪ್ರಾಮುಖ್ಯ ವಿಧವು ಅದು ತನ್ನ ಗುರುತ್ವಾಕರ್ಷಣ ಸೆಳೆತದಿಂದ ಸಮುದ್ರದಲ್ಲಿ ಉಬ್ಬರವಿಳಿತವನ್ನು ಉಂಟುಮಾಡುವುದೇ ಆಗಿದೆ. ಈ ಉಬ್ಬರವಿಳಿತದಿಂದಾಗಿ ಸಾಗರ ಪ್ರವಾಹಗಳು ಉಂಟಾಗುತ್ತದೆ ಮತ್ತು ಈ ಸಾಗರ ಪ್ರವಾಹಗಳು ನಮ್ಮ ಹವಾಮಾನಗಳಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ.
ನಮ್ಮ ಚಂದ್ರನು ಇನ್ನೊಂದು ಮುಖ್ಯ ಕೆಲಸವನ್ನು ಪೂರೈಸುತ್ತದೆ. ಚಂದ್ರನ ಗುರುತ್ವಾಕರ್ಷಣೆಯಿಂದಾಗಿ, ಸೂರ್ಯನ ಸುತ್ತ ತಿರುಗುವಾಗ ಭೂಮಿಯ ಅಕ್ಷರೇಖೆಯು ಯಾವಾಗಲೂ 23.5 ಡಿಗ್ರಿ ಬಾಗಿಕೊಂಡಿರುತ್ತದೆ. ಪ್ರಕೃತಿ (ಇಂಗ್ಲಿಷ್) ಎಂಬ ವೈಜ್ಞಾನಿಕ ಪತ್ರಿಕೆಗನುಸಾರ, ಚಂದ್ರನಿಲ್ಲದಿರುತ್ತಿದ್ದಲ್ಲಿ ದೀರ್ಘ ಸಮಯಾವಧಿಗಳ ವರೆಗೆ ಭೂಮಿಯ ಅಕ್ಷರೇಖೆಯು “ಸುಮಾರು 0 [ಡಿಗ್ರಿ]ಯಿಂದ 85 [ಡಿಗ್ರಿ]ಗಳವರೆಗೆ” ಓಲಾಡುತ್ತಾ ಇರುತ್ತಿತ್ತು. ಭೂಮಿಯ ಅಕ್ಷರೇಖೆ ಬಾಗಿರದಿರುತ್ತಿದ್ದಲ್ಲಿ ಹೇಗಿರುತ್ತಿತ್ತೆಂದು ಸ್ವಲ್ಪ ಯೋಚಿಸಿರಿ! ಆಗ, ವೈವಿಧ್ಯಮಯವಾದ ಹವಾಮಾನಗಳನ್ನು ಅನುಭವಿಸುವ ಆನಂದ ನಮಗಿರುತ್ತಿರಲಿಲ್ಲ ಮತ್ತು ಮಳೆಯ ಅಭಾವವಿರುತ್ತಿತ್ತು. ಭೂಮಿಯು ಬಾಗಿಕೊಂಡಿರುವುದು ತಾಪಮಾನವು ತೀರಾ ಬಿಸಿ ಅಥವಾ ತೀರಾ ಚಳಿಯಾಗುವುದನ್ನು ತಡೆಯುತ್ತದೆ ಮತ್ತು ಈ ಮೂಲಕ ನಾವು ಬದುಕುಳಿಯಲು ಸಾಧ್ಯವಾಗುತ್ತದೆ. “ಸದ್ಯದ ವಾಯುಗುಣದಲ್ಲಿರುವ ಸ್ಥಿರತೆಗೆ ನಾವು ಚಂದ್ರನಿಗೆ ಋಣಿಯಾಗಿದ್ದೇವೆ” ಎಂದು ಖಗೋಳಶಾಸ್ತ್ರಜ್ಞರಾದ ಸಾಕ್ ಲಾಸ್ಕಾರ್ ಅಭಿಪ್ರಯಿಸುತ್ತಾರೆ. ಭೂಮಿಯನ್ನು ತನ್ನ ಅಕ್ಷರೇಖೆಯಲ್ಲಿ ಸ್ಥಿರವಾಗಿಡುವ ತನ್ನ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಲು ನಮ್ಮ ಚಂದ್ರನು ಇತರ ಬೃಹದಾಕಾರದ ಗ್ರಹಗಳ ಚಂದ್ರಗಳಿಗೆ ಹೋಲಿಕೆಯಲ್ಲಿ ಸಾಕಷ್ಟು ದೊಡ್ಡ ಗಾತ್ರದ್ದಾಗಿದೆ.
ಭೂಮಿಯ ನೈಸರ್ಗಿಕ ಉಪಗ್ರಹವಾಗಿರುವ ಚಂದ್ರನ ಇನ್ನೊಂದು ಕೆಲಸವು, ಪ್ರಾಚೀನ ಬೈಬಲ್ ಗ್ರಂಥದಲ್ಲಿ ಆದಿಕಾಂಡ ಎಂಬ ಪುಸ್ತಕದ ಲೇಖಕನು ಹೇಳಿರುವಂತೆ, ರಾತ್ರಿ ವೇಳೆಯಲ್ಲಿ ಬೆಳಕನ್ನು ನೀಡುವುದಾಗಿದೆ.—ಆದಿಕಾಂಡ 1:16.
ಆಕಸ್ಮಿಕವೊ ಉದ್ದೇಶಪೂರ್ವಕ ವಿನ್ಯಾಸವೊ?
ಭೂಮಿಯ ಮೇಲೆ ಜೀವವು ಅಸ್ತಿತ್ವದಲ್ಲಿರುವಂತೆ ಸಾಧ್ಯಮಾಡುವಂಥ ಮಾತ್ರವಲ್ಲದೆ ಜೀವನವನ್ನು ಆನಂದದಾಯಕವನ್ನಾಗಿ ಮಾಡುವ ಒಂದಕ್ಕಿಂತ ಹೆಚ್ಚು ಅಂಶಗಳು ಏಕಕಾಲದಲ್ಲಿ ಸಮ್ಮಿಲನಗೊಳ್ಳುವುದು ಹೇಗೆ ಸಾಧ್ಯ? ಹೀಗಾಗಲು ಕೇವಲ ಎರಡು ಸಾಧ್ಯತೆಗಳಿರಬಹುದು. ಅದರಲ್ಲಿ ಮೊದಲನೆಯದ್ದೇನೆಂದರೆ, ಇದು ಯಾವುದೇ ಉದ್ದೇಶವಿಲ್ಲದೆ ಆಕಸ್ಮಿಕವಾಗಿ ಉಂಟಾಗಿರಬೇಕು. ಎರಡನೆಯದೇನೆಂದರೆ, ಇವುಗಳ ಹಿಂದೆ ಬುದ್ಧಿವಂತಿಕೆಯಿಂದ ಕೂಡಿದ ಒಂದು ಉದ್ದೇಶವಿರಬೇಕು.
ಸಾವಿರಾರು ವರುಷಗಳ ಹಿಂದೆ ಒಬ್ಬ ಸೃಷ್ಟಿಕರ್ತನು—ಸರ್ವಶಕ್ತ ದೇವರು—ನಮ್ಮ ವಿಶ್ವವನ್ನು ಸಂಕಲ್ಪಿಸಿದನು ಮತ್ತು ನಿಪುಣತೆಯಿಂದ ಅದನ್ನು ಸೃಷ್ಟಿಸಿದನು ಎಂದು ಪವಿತ್ರ ಶಾಸ್ತ್ರಗಳು ತಿಳಿಸುತ್ತವೆ. ಈ ವಿಷಯವು ನಿಜವಾಗಿರುವಲ್ಲಿ, ನಮ್ಮ ಸೌರವ್ಯೂಹದಲ್ಲಿ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳು ಕೇವಲ ಆಕಸ್ಮಿಕವಾಗಿ ಅಸ್ತಿತ್ವಕ್ಕೆ ಬಂದಿರುವ ಬದಲು ಅವು ಉದ್ದೇಶಪೂರ್ವಕವಾಗಿ ವಿನ್ಯಾಸಿಸಲ್ಪಟ್ಟವು ಎಂಬುದು ಸ್ಪಷ್ಟ. ಭೂಮಿಯ ಮೇಲೆ ಜೀವನವನ್ನು ಸಾಧ್ಯಮಾಡಲು ತಾನು ತೆಗೆದುಕೊಂಡ ಹೆಜ್ಜೆಗಳ ಕುರಿತು ಸೃಷ್ಟಿಕರ್ತನು ನಮಗಾಗಿ ಒಂದು ದಾಖಲೆಯನ್ನಿಟ್ಟಿದ್ದಾನೆ. ಈ ದಾಖಲೆಯು ಸುಮಾರು 3,500 ವರ್ಷಗಳಷ್ಟು ಹಳೆಯದಾಗಿರುವುದಾದರೂ ಅದರಲ್ಲಿ ದಾಖಲಾಗಿರುವ ಘಟನೆಗಳು, ವಿಶ್ವದ ಆರಂಭದಲ್ಲಿ ಏನಾಗಿತ್ತೆಂದು ವಿಜ್ಞಾನಿಗಳು ಇಂದು ಆಲೋಚಿಸುತ್ತಾರೋ ಮೂಲತಃ ಅದಕ್ಕೆ ಹೊಂದಿಕೆಯಲ್ಲಿದೆ ಎಂಬುದನ್ನು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಈ ದಾಖಲೆಯು ಬೈಬಲಿನ ಆದಿಕಾಂಡ ಪುಸ್ತಕದಲ್ಲಿದೆ. ಅದು ಏನು ಹೇಳುತ್ತದೆಂಬುದನ್ನು ಪರಿಗಣಿಸಿರಿ.
ಆದಿಕಾಂಡದಲ್ಲಿನ ಸೃಷ್ಟಿಯ ವೃತ್ತಾಂತ
“ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು.” (ಆದಿಕಾಂಡ 1:1) ಬೈಬಲಿನ ಈ ಆರಂಭಿಕ ಮಾತುಗಳು ನಮ್ಮ ವಿಶ್ವದಲ್ಲಿರುವ ಕೋಟಿಗಟ್ಟಲೆ ಗ್ಯಾಲಕ್ಸಿಗಳಲ್ಲಿರುವ ನಕ್ಷತ್ರಗಳು, ನಮ್ಮ ಸೌರವ್ಯೂಹ ಮತ್ತು ನಮ್ಮ ಗ್ರಹದ ಸೃಷ್ಟಿಗೆ ಸೂಚಿಸುತ್ತವೆ. ಬೈಬಲಿಗನುಸಾರವಾಗಿ, ಒಂದು ಕಾಲದಲ್ಲಿ ಭೂಮಿಯ ಮೇಲ್ಮೈ “ಕ್ರಮವಿಲ್ಲದೆಯೂ ಬರಿದಾಗಿಯೂ” ಇತ್ತು. ಆಗ ಯಾವ ಖಂಡಗಳೂ ಇರಲಿಲ್ಲ ಮತ್ತು ಯಾವ ಫಲವತ್ತಾದ ನೆಲವೂ ಇರಲಿಲ್ಲ. ಆದರೆ ವಿಜ್ಞಾನಿಗಳು ಹೇಳುವಂತೆ ಜೀವಪೋಷಕ ಗ್ರಹವೊಂದರಲ್ಲಿ ಯಥೇಷ್ಟವಾದ ನೀರು ಅತ್ಯಾವಶ್ಯಕವಾಗಿ ಇರಬೇಕು. ಇದರಂತೆ ಬಹಳಷ್ಟು ನೀರು ಇತ್ತೆಂಬುದನ್ನು ಎತ್ತಿತೋರಿಸುತ್ತಾ ಬೈಬಲಿನ ಮುಂದಿನ ಮಾತುಗಳು ಹೇಳುವುದೇನೆಂದರೆ ದೇವರ ಪವಿತ್ರಾತ್ಮವು “ಜಲಸಮೂಹಗಳ ಮೇಲೆ ಚಲಿಸುತ್ತಿತ್ತು.”—ಆದಿಕಾಂಡ 1:2.
ಒಂದು ಗ್ರಹದಲ್ಲಿರುವ ಬಾಹ್ಯಜಲ (ನದಿಗಳು, ಕೆರೆಗಳು, ತೊರೆಗಳು) ದ್ರವ್ಯಾವಸ್ಥೆಯಲ್ಲಿರಬೇಕಾದರೆ ಆ ಗ್ರಹವು ಅದರ ಸೂರ್ಯನಿಂದ ಸರಿಯಾದ ದೂರದಲ್ಲಿರಬೇಕು. “ಮಂಗಳ ಗ್ರಹವು ಬಹಳ ತಣ್ಣಗಿದೆ, ಶುಕ್ರ ಗ್ರಹವು ತೀರ ಬಿಸಿಯಾಗಿದೆ. ಆದರೆ ಭೂಮಿ ಮಾತ್ರ ತಕ್ಕದ್ದಾಗಿದೆ” ಎಂದು ಗ್ರಹ ವಿಜ್ಞಾನಿ ಆ್ಯಂಡ್ರು ಇನ್‌ಗೆರ್‌ಸೊಲ್ ವಿವರಿಸುತ್ತಾರೆ. ತದ್ರೀತಿಯಲ್ಲಿ, ಸಸ್ಯಗಳು ಬೆಳೆಯಬೇಕಾದಲ್ಲಿ ಸಾಕಷ್ಟು ಬೆಳಕಿರಬೇಕು. ಯೋಬ 38:4, 9; ಆದಿಕಾಂಡ 1:3-5.
ಗಮನಾರ್ಹವಾಗಿ ಬೈಬಲ್ ವೃತ್ತಾಂತವು ವರದಿಸುವುದೇನೆಂದರೆ, ಸೃಷ್ಟಿಕಾರಕ ಅವಧಿಯ ಆರಂಭದಲ್ಲಿ ನೀರಾವಿಯ ದಟ್ಟವಾದ ಕಾರ್ಮೋಡಗಳು, ಒಂದು ಮಗುವಿನ ಸುತ್ತಕಟ್ಟುವಂತಹ “ಸುತ್ತುಬಟ್ಟೆ”ಯಂತೆ ಸಾಗರವನ್ನು ಆವರಿಸಿಕೊಂಡಿದ್ದವು. ಆಗ ಸೂರ್ಯನ ಬೆಳಕು ಆ ಕಾರ್ಮೋಡಗಳನ್ನು ತೂರಿಕೊಂಡು ಬರುವಂತೆ ದೇವರು ಮಾಡಿದನು.—ಆದಿಕಾಂಡದ ಮುಂದಿನ ವಚನಗಳಲ್ಲಿ ಬೈಬಲ್ ಯಾವುದನ್ನು “ವಿಸ್ತಾರವಾದ ಗುಮಟ” ಎಂದು ಕರೆಯುತ್ತದೊ ಅದನ್ನು ದೇವರು ನಿರ್ಮಿಸಿದನು ಎಂದು ನಾವು ಓದುತ್ತೇವೆ. (ಆದಿಕಾಂಡ 1:6-8) ಈ ವಿಸ್ತಾರವಾದ ಗುಮಟವು ಅನಿಲಗಳಿಂದ ತುಂಬಿದೆ ಮತ್ತು ಇದೇ ಭೂಮಿಯ ವಾಯುಮಂಡಲವಾಗಿದೆ.
ತದನಂತರ ದೇವರು, ಯಾವುದೇ ಕ್ರಮವಿಲ್ಲದಿದ್ದ ಅಂದರೆ ರೂಪವಿಲ್ಲದಿದ್ದ ಭೂಮಿಯ ಮೇಲ್ಮೈಯನ್ನು ಒಣನೆಲವನ್ನಾಗಿ ಮಾಡಿದನು ಎಂದು ಬೈಬಲ್ ವಿವರಿಸುತ್ತದೆ. (ಆದಿಕಾಂಡ 1:9, 10) ಆತನು ಭೂಮಿಯ ಹೊರಪದರವು ಮಡಿಕೆಗೊಂಡು ಪ್ರತ್ಯೇಕಗೊಳ್ಳುವಂತೆ ಮಾಡಿದ್ದಿರಬಹುದು. ಇದರ ಪರಿಣಾಮವಾಗಿ ಆಳವಾದ ಕಂದಕಗಳು ಉಂಟಾಗಿ, ಖಂಡಗಳು ಸಮುದ್ರದಿಂದ ಮೇಲೆದ್ದಿರಬಹುದು.—ಕೀರ್ತನೆ 104:6-8.
ಭೂಮಿಯ ಸೃಷ್ಟಿಕಾರಕ ಅವಧಿಯ ಒಂದು ಅನಿರ್ದಿಷ್ಟ ಸಮಯದಲ್ಲಿ, ದೇವರು ಸಾಗರಗಳಲ್ಲಿ ಸೂಕ್ಷ್ಮಾಣು ಶೈವಲಗಳನ್ನು (ಆಲ್ಗೆ) ಸೃಷ್ಟಿಸಿದನು. ಸ್ವಯಂ-ಪುನರುತ್ಪತಿಯಾಗುವ ಈ ಏಕಾಣು ಜೀವಿಗಳು ಸೂರ್ಯನಿಂದ ಬರುವ ಶಕ್ತಿಯನ್ನು ಉಪಯೋಗಿಸುತ್ತಾ ಇಂಗಾಲದ ಡೈಆಕ್ಸೈಡನ್ನು ಆಹಾರವಾಗಿ ಪರಿವರ್ತಿಸಿ ಆಮ್ಲಜನಕವನ್ನು ವಾತಾವರಣಕ್ಕೆ ಬಿಡಲು ಪ್ರಾರಂಭಿಸಿದವು. ಈ ಅದ್ಭುತವಾದ ಪ್ರಕ್ರಿಯೆಯು, ಮೂರನೆಯ ಸೃಷ್ಟಿಕಾರಕ ಅವಧಿಯಲ್ಲಿ ಸಸ್ಯಗಳ ಸೃಷ್ಟಿಯಿಂದಾಗಿ ಮತ್ತು ಈ ಸಸ್ಯಗಳು ಕ್ರಮೇಣ ನೆಲವನ್ನೆಲ್ಲಾ ಆವರಿಸಿಬಿಟ್ಟದ್ದರಿಂದ ಶೀಘ್ರಗೊಂಡಿತು. ಈ ಮೂಲಕ ವಾತಾವರಣದಲ್ಲಿನ ಆಮ್ಲಜನಕದ ಪ್ರಮಾಣವು ಹೆಚ್ಚಾಯಿತು. ಇದು ಮಾನವರು ಹಾಗೂ ಪ್ರಾಣಿಗಳು ಉಸಿರಾಡುವ ಮೂಲಕ ತಮ್ಮನ್ನು ಪೋಷಿಸುವುದನ್ನು ಸಾಧ್ಯಗೊಳಿಸಲಿತ್ತು.—ಆದಿಕಾಂಡ 1:11, 12.
ನೆಲವನ್ನು ಫಲವತ್ತಾಗಿ ಮಾಡಲು ಸೃಷ್ಟಿಕರ್ತನು ಅನೇಕ ವಿಧದ ಸೂಕ್ಷ್ಮಾಣುಜೀವಿಗಳನ್ನು ಮಣ್ಣಿನಲ್ಲಿ ಜೀವಿಸುವಂತೆ ಮಾಡಿದನು. (ಯೆರೆಮೀಯ 51:15) ಈ ಪುಟ್ಟ ಜೀವಿಗಳು ಸತ್ತ ಪದಾರ್ಥವನ್ನು ಕೊಳೆಯುವಂತೆ ಮಾಡುತ್ತವೆ ಮತ್ತು ಅವುಗಳನ್ನು ಪುನಃ ಉಪಯೋಗಿಸಬಹುದಾದ ಘಟಕಾಂಶಗಳನ್ನಾಗಿ ಮಾರ್ಪಡಿಸುತ್ತವೆ. ಈ ಘಟಕಾಂಶಗಳು ಸಸ್ಯಗಳ ಬೆಳವಣಿಗೆಗೆ ಉಪಯುಕ್ತವಾಗಿವೆ. ಮಣ್ಣಿನಲ್ಲಿರುವ ವಿಶೇಷ ರೀತಿಯ ಬ್ಯಾಕ್ಟೀರಿಯಗಳು ಸಾರಜನಕವನ್ನು ಗಾಳಿಯಿಂದ ಮಣ್ಣಿಗೆ ಸೇರಿಸುತ್ತವೆ. ಹೀಗೆ ಮಾಡುವ ಮೂಲಕ ಸಸ್ಯಗಳ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿರುವ ಈ ಘಟಕಾಂಶವನ್ನು ಅವುಗಳಿಗೆ ಒದಗಿಸಿಕೊಡುತ್ತವೆ. ವಿಸ್ಮಯದ ಸಂಗತಿಯೇನೆಂದರೆ, ಒಂದು ಹಿಡಿ ಫಲವತ್ತಾದ ಮಣ್ಣಿನಲ್ಲಿ ಸರಾಸರಿ 600 ಕೋಟಿ ಸೂಕ್ಷ್ಮಾಣು ಜೀವಿಗಳಿರಬಹುದು!
ನಾಲ್ಕನೆಯ ಸೃಷ್ಟಿಕಾರಕ ಅವಧಿಯಲ್ಲಿ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು ಉಂಟಾದವೆಂದು ಆದಿಕಾಂಡ 1:14-19 ವಿವರಿಸುತ್ತದೆ. ಇದು ಮೊದಲ ನೋಟದಲ್ಲಿ, ಈಗಾಗಲೇ ನಾವು ನೋಡಿರುವ ವಚನಗಳ ವಿವರಣೆಗೆ ವಿರುದ್ಧವಾಗಿರುವ ಹಾಗೆ ತೋರಬಹುದು. ಆದರೆ ಆದಿಕಾಂಡ ಪುಸ್ತಕದ ಲೇಖಕನಾದ ಮೋಶೆಯು, ಒಂದುವೇಳೆ ಒಬ್ಬ ಮನುಷ್ಯನು ಭೂಮಿಯ ಮೇಲೆ ನಿಂತು ಸೃಷ್ಟಿಕಾರ್ಯವನ್ನು ನೋಡಿರುತ್ತಿದ್ದರೆ ಏನನ್ನು ಗಮನಿಸಿರುತ್ತಿದ್ದನೋ ಆ ದೃಷ್ಟಿಕೋನದಿಂದ ಸೃಷ್ಟಿಯ ವೃತ್ತಾಂತವನ್ನು ಬರೆದನು ಎಂಬುದನ್ನು ಮನಸ್ಸಿನಲ್ಲಿಡಿರಿ. ಸೂರ್ಯ, ಚಂದ್ರ ಮತ್ತು ನಕ್ಷತ್ರಗಳನ್ನು ಭೂಮಿಯಿಂದ ನೋಡಲು ಸಾಧ್ಯವಾದದ್ದು ಈ ನಾಲ್ಕನೆಯ ಸೃಷ್ಟಿಕಾರಕ ಅವಧಿಯಲ್ಲಿ ಎಂದು ತೋರುತ್ತದೆ.
ಆದಿಕಾಂಡ ಪುಸ್ತಕ ಹೇಳುವಂತೆ ಐದನೆಯ ಸೃಷ್ಟಿಕಾರಕ ಅವಧಿಯಲ್ಲಿ ಸಮುದ್ರ ಜೀವಿಗಳು ಮತ್ತು ಆರನೆಯ ಅವಧಿಯಲ್ಲಿ ಭೂಚರ ಪ್ರಾಣಿಗಳು ಕಾಣಿಸಿಕೊಂಡವು. ಅದೇ ಅವಧಿಯಲ್ಲಿ ಮಾನವನ ಸೃಷ್ಟಿಯೂ ಆಯಿತು.—ಆದಿಕಾಂಡ 1:20-31.
ಬದುಕನ್ನು ಆನಂದಿಸುವಂತೆ ಭೂಮಿಯನ್ನು ಸೃಷ್ಟಿಸಲಾಯಿತು
ಆದಿಕಾಂಡದ ವೃತ್ತಾಂತದಲ್ಲಿ ವಿವರಿಸಲಾಗಿರುವಂತಹ ರೀತಿಯಲ್ಲಿ, ಭೂಮಿಯ ಮೇಲೆ ಅಸ್ತಿತ್ವಕ್ಕೆ ಬಂದಿರುವ ಮಾನವ ಜೀವನವನ್ನು ಆನಂದಿಸಲಿಕ್ಕಾಗಿಯೇ ಸೃಷ್ಟಿಸಲಾಗಿದೆ ಎಂದು ನಿಮಗೆ ಅನಿಸುವುದಿಲ್ಲವೇ? ಪ್ರಕಾಶಮಾನವಾದ ದಿನದಂದು ನೀವು ಬೆಳಗ್ಗೆ ಎದ್ದು ತಾಜಾ ಗಾಳಿಯನ್ನು ಸೇವಿಸಿದಾಗ ನೀವೆಂದಾದರೂ ಇನ್ನೂ ಬದುಕಿರುವುದಕ್ಕೆ ಸಂತೋಷಪಟ್ಟಿಲ್ಲವೇ? ಉದ್ಯಾನವನವೊಂದರಲ್ಲಿ ನೀವು ನಡೆಯುತ್ತಾ ಹೋಗುವಾಗ ಹೂವುಗಳ ಸೌಂದರ್ಯ ಮತ್ತು ಘಮಘಮ ಪರಿಮಳ ನಿಮ್ಮನ್ನು ಆನಂದಗೊಳಿಸಿದ್ದಿರಬಹುದು. ಅಥವಾ ಒಂದು ಹಣ್ಣಿನ ತೋಟದಲ್ಲಿ ಹಾದುಹೋಗುತ್ತಿರುವಾಗ ಕೆಲವೊಂದು ರಸವತ್ತಾದ ಹಣ್ಣುಗಳನ್ನು ನೀವು ಸವಿದಿರಬಹುದು. ಅಂತಹ ಪರಮಾನಂದದ ವಿಷಯಗಳು (1) ಭೂಮಿಯಲ್ಲಿ ಸಮೃದ್ಧವಾದ ನೀರು, (2) ಸೂರ್ಯನಿಂದ ತಕ್ಕ ಪ್ರಮಾಣದ ಶಾಖ ಮತ್ತು ಬೆಳಕು, (3) ಸರಿಯಾದ ಪ್ರಮಾಣದ ಅನಿಲಗಳ ಮಿಶ್ರಣವಿರುವ ಭೂಮಿಯ ವಾಯುಮಂಡಲ ಮತ್ತು (4) ಫಲವತ್ತಾದ ನೆಲ ಇವೆಲ್ಲವು ಇಲ್ಲದಿರುತ್ತಿದ್ದಲ್ಲಿ ಸಾಧ್ಯವಿರುತ್ತಿರಲಿಲ್ಲ.
ಈ ಎಲ್ಲ ವೈಶಿಷ್ಟ್ಯಗಳು ನಮ್ಮ ನೆರೆಯ ಗ್ರಹಗಳಾದ ಮಂಗಳ, ಶುಕ್ರ ಮತ್ತು ಸೌರವ್ಯೂಹದ ಇತರ ಗ್ರಹಗಳಲ್ಲಿ ಇಲ್ಲದೆ, ನಮ್ಮ ಗ್ರಹದಲ್ಲಿ ಮಾತ್ರವೇ ಇರುವುದು ಕೇವಲ ಒಂದು ಆಕಸ್ಮಿಕವಲ್ಲ. ಭೂಮಿಯ ಮೇಲೆ ಜೀವನವು ಆನಂದದಾಯಕವಾಗುವಂತೆ ಅವುಗಳನ್ನು ಬಹಳ ಜಾಗರೂಕತೆಯಿಂದ ವಿನ್ಯಾಸಿಸಲಾಯಿತು. ಸೃಷ್ಟಿಕರ್ತನು ನಮ್ಮ ಸುಂದರವಾದ ಗ್ರಹವನ್ನು ಶಾಶ್ವತವಾಗಿ ಉಳಿಯಲು ವಿನ್ಯಾಸಿಸಿದನು ಎಂಬುದನ್ನೂ ಬೈಬಲ್ ಹೇಳುತ್ತದೆ. ಇದನ್ನು ಮುಂದಿನ ಲೇಖನವು ವಿವರಿಸುವುದು. (w07 2/15)
[ಪಾದಟಿಪ್ಪಣಿ]
^ ಪ್ಯಾರ. 5 ನಮ್ಮ ಸೌರವ್ಯೂಹದ ನಾಲ್ಕು ಒಳವಲಯದ ಗ್ರಹಗಳಾದ ಬುಧ, ಶುಕ್ರ, ಭೂಮಿ ಮತ್ತು ಮಂಗಳ ಗ್ರಹಗಳ ಮೇಲ್ಮೈ ಶಿಲಾಮಯವಾಗಿದೆ. ಹೊರವಲಯದ ಬೃಹದಾಕಾರದ ಗ್ರಹಗಳಾದ ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್‌ಗಳು ಮುಖ್ಯವಾಗಿ ಅನಿಲಗಳಿಂದ ರಚಿತವಾಗಿವೆ.
[ಪುಟ 6ರಲ್ಲಿರುವ ಚೌಕ]
“ಭೂಮಿಯ ಹುಟ್ಟು ಮತ್ತು ಅದರ ಮೇಲಿನ ಜೀವದ ಬೆಳವಣಿಗೆಯ ಬಗ್ಗೆ ನಮಗಿರುವ ಆಧುನಿಕ ವಿಚಾರಗಳನ್ನು, ಆದಿಕಾಂಡ ಪುಸ್ತಕವು ಯಾರಿಗೆಂದು ಬರೆಯಲ್ಪಟ್ಟಿತೊ ಆ ಗೋತ್ರಗಳಂತಹ ಸರಳ ಹಾಗೂ ಸಾಮಾನ್ಯ ಜನರಿಗೆ ವಿವರಿಸುವಂತೆ ಒಬ್ಬ ಭೂವಿಜ್ಞಾನಿಯಾಗಿರುವ ನನ್ನನ್ನು ಯಾರಾದರೂ ಕೇಳುವಲ್ಲಿ, ಆದಿಕಾಂಡ ಪುಸ್ತಕದ ಮೊದಲನೆಯ ಅಧ್ಯಾಯದಲ್ಲಿ ಹೇಗೆ ವಿವರಿಸಲ್ಪಟ್ಟಿದೆಯೋ ನಾನು ಸಹ ಹಾಗೆಯೇ ವಿವರಿಸುವೆ. ಇದೇ ಅತ್ಯುತ್ತಮವಾದ ವಿವರಣೆಯಾಗಿದೆ.”—ಭೂವಿಜ್ಞಾನಿ ವಾಲೆಸ್ ಪ್ರ್ಯಾಟ್.
[ಪುಟ 7ರಲ್ಲಿರುವ ಚೌಕ/ಚಿತ್ರ]
ಖಗೋಳ ಅಧ್ಯಯನಕ್ಕೂ ಸರಿಯಾದ ಸ್ಥಳ
ಸೂರ್ಯನು ನಮ್ಮ ಗ್ಯಾಲಕ್ಸಿಯಲ್ಲಿ ಬೇರೆ ಯಾವುದೇ ಸ್ಥಳದಲ್ಲಿರುತ್ತಿದ್ದರೆ ನಮಗೆ ನಕ್ಷತ್ರಗಳನ್ನು ಇಷ್ಟು ಸ್ಪಷ್ಟವಾಗಿ ಕಾಣಲು ಆಗುತ್ತಿರಲಿಲ್ಲ. “ನಮ್ಮ ಸೌರವ್ಯೂಹವು ಧೂಳಿನಿಂದ ತುಂಬಿದ, ವಿಪರೀತ ಬೆಳಕಿರುವ ಪ್ರದೇಶಗಳಿಂದ ದೂರದಲ್ಲಿ . . . ನೆಲೆಸಿದೆ. ಇದರಿಂದಾಗಿ ಹತ್ತಿರದ ನಕ್ಷತ್ರಗಳನ್ನು ಮತ್ತು ವಿಶ್ವದ ದೂರದ ಭಾಗಗಳನ್ನು ಅತ್ಯುತ್ತಮವಾಗಿ ಕಾಣಲು ಸಾಧ್ಯವಾಗುತ್ತದೆ” ಎಂದು ಅತಿ ಅಪೂರ್ವ ಗ್ರಹ (ಇಂಗ್ಲಿಷ್) ಪುಸ್ತಕವು ವಿವರಿಸುತ್ತದೆ.
ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚಿಬಿಡಲಿಕ್ಕಾಗಿ ಚಂದ್ರನ ಗಾತ್ರ ಮತ್ತು ಅದಕ್ಕೂ ಭೂಮಿಗೂ ಇರುವ ಅಂತರವು ಸರಿಯಾದದ್ದಾಗಿದೆ. ಅಪರೂಪದ ಮತ್ತು ವಿಸ್ಮಯಗೊಳಿಸುವ ಘಟನೆಗಳಾಗಿರುವ ಇಂತಹ ಸೂರ್ಯಗ್ರಹಣಗಳಿಂದಾಗಿ ಖಗೋಳಶಾಸ್ತ್ರಜ್ಞರಿಗೆ ಸೂರ್ಯನ ಕುರಿತು ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಈ ರೀತಿಯ ಅಧ್ಯಯನಗಳಿಂದಾಗಿ ಅವರಿಗೆ, ನಕ್ಷತ್ರಗಳು ಹೊಳೆಯಲು ಕಾರಣವೇನು ಎಂಬುದರ ಕುರಿತು ಈ ಮುಂಚೆ ಅಜ್ಞಾತವಾಗಿದ್ದ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ.
[ಪುಟ 5ರಲ್ಲಿರುವ ಚಿತ್ರ]
ಚಂದ್ರನ ಗಾತ್ರವು ಭೂಮಿಯ ಅಕ್ಷರೇಖೆಯ ಬಾಗುವಿಕೆಯನ್ನು ಸ್ಥಿರವಾಗಿರಿಸಲು ಸಾಕಾಗುವಷ್ಟು ದೊಡ್ಡದಾಗಿದೆ
[ಪುಟ 7ರಲ್ಲಿರುವ ಚಿತ್ರಗಳು]
ಭೂಮಿಯಲ್ಲಿರುವ ಸಮೃದ್ಧವಾದ ನೀರು, ತಕ್ಕ ಪ್ರಮಾಣದ ಶಾಖ ಮತ್ತು ಬೆಳಕು, ವಾಯುಮಂಡಲ ಹಾಗೂ ಫಲವತ್ತಾದ ನೆಲದಿಂದಾಗಿ ಜೀವಿಸಲು ಸಾಧ್ಯವಾಗುತ್ತದೆ
[ಕೃಪೆ]
ಭೂಗೋಳ: Based on NASA Photo; ಗೋಧಿ: Pictorial Archive (Near Eastern History) Est.