ಹೆತ್ತವರೇ ನಿಮ್ಮ ಮಕ್ಕಳಿಗೆ ಉತ್ತಮ ಮಾದರಿಯಾಗಿರಿ
ಹೆತ್ತವರೇ ನಿಮ್ಮ ಮಕ್ಕಳಿಗೆ ಉತ್ತಮ ಮಾದರಿಯಾಗಿರಿ
“ಮಕ್ಕಳನ್ನು ಬೆಳೆಸುವ ಅತ್ಯುತ್ತಮ ವಿಧವನ್ನು ಶತಮಾನಗಳಿಂದ ಅನ್ವೇಷಿಸುತ್ತಿದ್ದ ಮನಶ್ಶಾಸ್ತ್ರಜ್ಞರು ಈಗ ತಮ್ಮ ಅನ್ವೇಷಣೆಯನ್ನು ನಿಲ್ಲಿಸಸಾಧ್ಯವಿದೆ. ಇದರರ್ಥ ಅವರು ಅತ್ಯುತ್ತಮ ವಿಧವನ್ನು ಕಂಡುಹಿಡಿದಿದ್ದಾರೆಂದಲ್ಲ, ಬದಲಾಗಿ ಅಂಥ ಒಂದು ವಿಧವು ಅಸ್ತಿತ್ವದಲ್ಲಿಯೇ ಇಲ್ಲ.” ಹೀಗೆಂದು, ಮಕ್ಕಳನ್ನು ಬೆಳೆಸುವುದರ ಕುರಿತಾದ ಒಂದು ಪುಸ್ತಕದ ಬಗ್ಗೆ ಟೈಮ್ಸ್ ಪತ್ರಿಕೆಯಲ್ಲಿ ಬಂದ ಪುನರ್ವಿಮರ್ಶೆಯು ತಿಳಿಸಿತು. ಮುಖ್ಯವಾಗಿ ಮಕ್ಕಳು ತಮ್ಮ ಹೆತ್ತವರ ಮೌಲ್ಯಗಳನ್ನಲ್ಲ ತಮ್ಮ ಸಮವಯಸ್ಕರ ಮೌಲ್ಯಗಳನ್ನು ರೂಢಿಸಿಕೊಳ್ಳುತ್ತಾರೆ ಎಂದು ಆ ಪುಸ್ತಕವು ವಾದಿಸುತ್ತದೆ.
ಸಮವಯಸ್ಕರ ಒತ್ತಡವು ಅತಿ ಶಕ್ತಿಶಾಲಿ ಪ್ರಭಾವವಾಗಿದೆ ಎಂಬುದು ಅಲ್ಲಗಳೆಯಲಾಗದ ಸಂಗತಿ. (ಜ್ಞಾನೋಕ್ತಿ 13:20; 1 ಕೊರಿಂಥ 15:33) ವಿಲಿಯಂ ಬ್ರೌನ್ ಎಂಬ ಪತ್ರಕರ್ತನು ತಿಳಿಸುವುದು: “ಹದಿಹರೆಯದವರಿಗೆ ದೇವರ ಸ್ಥಾನದಲ್ಲಿರುವ ವಿಷಯವು ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವುದೇ ಆಗಿದೆ. . . . ಬೇರೆಯವರಿಗಿಂತ ಭಿನ್ನರಾಗಿ ಕಂಡುಬರುವುದು ಹದಿಹರೆಯದವರಿಗೆ ಮರಣಕ್ಕಿಂತಲೂ ಭಯಂಕರವಾದ ಸಂಗತಿಯಾಗಿದೆ.” ಹೆತ್ತವರು ಮನೆಯನ್ನು ವಾತ್ಸಲ್ಯಭರಿತ ಮತ್ತು ಆನಂದಕರ ಸ್ಥಳವನ್ನಾಗಿ ಮಾಡದಿರುವುದು ಇಲ್ಲವೆ ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯದಿರುವುದು ಈಗ ಲೋಕದಲ್ಲಿ ಸರ್ವಸಾಮಾನ್ಯವಾಗಿದೆ. ಆದರೆ ಹೀಗೆ ಮಾಡುವ ಮೂಲಕ ಅವರು ತಮ್ಮ ಮಕ್ಕಳ ಮೇಲೆ ಸಮವಯಸ್ಕರ ಒತ್ತಡವು ಮುಖ್ಯ ಪಾತ್ರವನ್ನು ವಹಿಸುವಂತೆ ಅನುಮತಿಸುತ್ತಿದ್ದಾರೆ.
ಅಷ್ಟುಮಾತ್ರವಲ್ಲದೆ, ಈ “ಕಡೇ ದಿವಸಗಳಲ್ಲಿ” ಕುಟುಂಬದ ಐಕ್ಯವು ಗಂಡಾಂತರದಲ್ಲಿದೆ, ಏಕೆಂದರೆ ಬೈಬಲ್ ಮುಂತಿಳಿಸಿದಂತೆ ಜನರು ಹಣ, ಸುಖಾನುಭವ ಮತ್ತು ಸ್ವಾರ್ಥಪರ ಆಸಕ್ತಿಗಳಲ್ಲಿ ಮಗ್ನರಾಗಿದ್ದಾರೆ. ಹೀಗಿರುವಲ್ಲಿ, ಮಕ್ಕಳು “ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ [ಸ್ವಾಭಾವಿಕ] ಮಮತೆಯಿಲ್ಲದವರೂ” ಆಗಿರುವುದು ನಮಗೆ ಆಶ್ಚರ್ಯವನ್ನು ಉಂಟುಮಾಡಬೇಕೊ?—2 ತಿಮೊಥೆಯ 3:1-3.
ಬೈಬಲಿನಲ್ಲಿ ಉಪಯೋಗಿಸಿರುವ ‘ಸ್ವಾಭಾವಿಕ ಮಮತೆ’ ಎಂಬ ಪದವು ಕೌಟುಂಬಿಕ ಪ್ರೀತಿಯನ್ನು ವರ್ಣಿಸುತ್ತದೆ. ಈ ಪ್ರೀತಿಯು, ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ಹೆತ್ತವರನ್ನು ಮತ್ತು ಹೆತ್ತವರಿಗೆ ಅಂಟಿಕೊಳ್ಳುವಂತೆ ಮಕ್ಕಳನ್ನು ಪ್ರೇರೇಪಿಸುವ ಸ್ವಾಭಾವಿಕ ಬಂಧವಾಗಿದೆ. ಆದರೆ ಹೆತ್ತವರಲ್ಲಿ ಸ್ವಾಭಾವಿಕ ಮಮತೆಯ ಕೊರತೆಯಿರುವಾಗ, ಮಕ್ಕಳು ಭಾವನಾತ್ಮಕ ಬೆಂಬಲವನ್ನು ಬೇರೆ ಕಡೆಯಿಂದ ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಮುಖ್ಯವಾಗಿ ತಮ್ಮ ಸಮವಯಸ್ಕರಲ್ಲಿ ಅದನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ ಮತ್ತು ಹೀಗೆ ಅವರ ಮೌಲ್ಯ ಹಾಗೂ ಮನೋಭಾವಗಳನ್ನು ತಮ್ಮದನ್ನಾಗಿ ಮಾಡಿಕೊಳ್ಳುತ್ತಾರೆ. ಆದರೆ, ಬೈಬಲ್ ಮೂಲತತ್ತ್ವಗಳು ತಮ್ಮ ಕುಟುಂಬ ಜೀವನವನ್ನು ಮಾರ್ಗದರ್ಶಿಸುವಂತೆ ಹೆತ್ತವರು ಬಿಟ್ಟುಕೊಡುವುದಾದರೆ, ಈ ಪರಿಸ್ಥಿತಿಯನ್ನು ಅನೇಕವೇಳೆ ತಡೆಗಟ್ಟಸಾಧ್ಯವಿದೆ.—ಜ್ಞಾನೋಕ್ತಿ 3:5, 6.
ಕುಟುಂಬ—ಒಂದು ದೈವಿಕ ಏರ್ಪಾಡು
ಆದಾಮಹವ್ವರನ್ನು ಗಂಡಹೆಂಡತಿಯಾಗಿ ಐಕ್ಯಗೊಳಿಸಿದ ಅನಂತರ, ದೇವರು ಅವರಿಗೆ ‘ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಳ್ಳಿರಿ’ ಎಂಬ ಕಟ್ಟಳೆಯನ್ನು ಕೊಟ್ಟನು. ಹೀಗೆ ಕುಟುಂಬವು, ಅಂದರೆ ತಂದೆ, ತಾಯಿ ಮತ್ತು ಮಕ್ಕಳು ಅಸ್ತಿತ್ವಕ್ಕೆ ಬಂದರು. (ಆದಿಕಾಂಡ 1:28; 5:3, 4; ಎಫೆಸ 3:14, 15) ಮಾನವರು ತಮ್ಮ ಮಕ್ಕಳನ್ನು ಪಾಲಿಸಶಕ್ತರಾಗುವಂತೆ ಯೆಹೋವನು ಅವರಲ್ಲಿ ತಂದೆತಾಯ್ತನದ ಮೂಲಭೂತ ಪ್ರವೃತ್ತಿಯನ್ನು ಇಟ್ಟಿದ್ದಾನೆ. ಆದರೆ ಪ್ರಾಣಿಗಳಂತಿರದೆ ಮನುಷ್ಯರಿಗೆ ಇತರ ಸಹಾಯದ ಅಗತ್ಯವೂ ಇದೆ. ಆದುದರಿಂದ ದೇವರು ಲಿಖಿತ ಮಾರ್ಗದರ್ಶನಗಳನ್ನು ಅವರಿಗೆ ಒದಗಿಸಿದನು. ಇದರಲ್ಲಿ ನೈತಿಕ ಹಾಗೂ ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಮತ್ತು ಮಕ್ಕಳಿಗೆ ಯೋಗ್ಯವಾದ ರೀತಿಯಲ್ಲಿ ಶಿಸ್ತುನೀಡುವ ವಿಷಯದಲ್ಲಿಯೂ ನಿರ್ದೇಶನಗಳಿವೆ.—ಜ್ಞಾನೋಕ್ತಿ 4:1-4.
ಮುಖ್ಯವಾಗಿ ತಂದೆಗಳನ್ನು ಸಂಬೋಧಿಸುತ್ತಾ ದೇವರು ಹೇಳಿದ್ದು: “ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಧರ್ಮೋಪದೇಶಕಾಂಡ 6:6, 7; ಜ್ಞಾನೋಕ್ತಿ 1:8, 9) ಗಮನಿಸಿರಿ, ದೇವರ ಧರ್ಮಶಾಸ್ತ್ರವು ಮೊದಲಾಗಿ ಹೆತ್ತವರ ಹೃದಯದಲ್ಲಿರಬೇಕಿತ್ತು. ಅದು ಏಕೆ ಅಷ್ಟು ಪ್ರಾಮುಖ್ಯ? ಏಕೆಂದರೆ, ಇತರರನ್ನು ನಿಜವಾಗಿಯೂ ಪ್ರಚೋದಿಸುವುದು ಬಾಯಿಂದ ಕಲಿಸುವ ವಿಷಯಗಳಲ್ಲ ಹೃದಯದಿಂದ ಕಲಿಸುವಂಥವುಗಳೇ ಆಗಿವೆ. ಹೆತ್ತವರು ತಮ್ಮ ಹೃದಯದಿಂದ ಕಲಿಸುವಾಗ ಮಾತ್ರ ಅದು ಅವರ ಮಕ್ಕಳ ಹೃದಯವನ್ನು ತಲಪಸಾಧ್ಯವಿದೆ. ಅಂಥ ಹೆತ್ತವರು ಮಕ್ಕಳಿಗೆ ಉತ್ತಮ ಮಾದರಿಯಾಗಿಯೂ ಇರುತ್ತಾರೆ, ಏಕೆಂದರೆ ಹೇಳುವುದು ಒಂದು ಮಾಡುವುದು ಇನ್ನೊಂದಾಗಿದ್ದರೆ ಮಕ್ಕಳು ಅದನ್ನು ಸುಲಭವಾಗಿ ಕಂಡುಹಿಡಿಯುತ್ತಾರೆ.—ರೋಮಾಪುರ 2:21.
ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.” (ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗೆ ಶೈಶವದಿಂದಲೇ “ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ” ನೀಡಬೇಕೆಂದು ಹೇಳಲಾಗಿದೆ. (ಎಫೆಸ 6:4; 2 ತಿಮೊಥೆಯ 3:15) ಶೈಶವದಿಂದಲೊ? ಹೌದು! ಒಬ್ಬ ತಾಯಿಯು ತಿಳಿಸುವುದು: “ಕೆಲವೊಮ್ಮೆ ಹೆತ್ತವರಾದ ನಾವು ಮಕ್ಕಳಿಗೆ ಸಲ್ಲತಕ್ಕ ಗೌರವವನ್ನು ಸಲ್ಲಿಸುವುದಿಲ್ಲ. ಅಂದರೆ, ನಾವು ಅವರ ಸಾಮರ್ಥ್ಯಗಳನ್ನು ಕಡಿಮೆ ಅಂದಾಜುಮಾಡುತ್ತೇವೆ. ಮಕ್ಕಳಲ್ಲಿ ಸಾಮರ್ಥ್ಯವಿದೆ. ಹೆತ್ತವರಾದ ನಾವು ಅದನ್ನು ಸರಿಯಾಗಿ ಉಪಯೋಗಿಸಬೇಕು.” ಮಕ್ಕಳು ಕಲಿಯಲು ಪ್ರೀತಿಸುತ್ತಾರೆ ಮತ್ತು ದೇವಭಯವುಳ್ಳ ಹೆತ್ತವರಿಂದ ಕಲಿಸಲ್ಪಡುವಲ್ಲಿ ಪ್ರೀತಿಸಲು ಸಹ ಕಲಿಯುತ್ತಾರೆ. ಅಂಥ ಮಕ್ಕಳು ತಮಗೆ ಹಾಕಿರುವ ಮೇರೆಯೊಳಗೆ ಸುರಕ್ಷತೆ ಮತ್ತು ಭದ್ರತೆಯ ಭಾವನೆಯನ್ನು ಅನುಭವಿಸುತ್ತಾರೆ. ಆದುದರಿಂದ, ಯಶಸ್ವೀ ಹೆತ್ತವರು ತಮ್ಮ ಮಕ್ಕಳು ಆನಂದಿಸಸಾಧ್ಯವಿರುವ ಹಿತಕರ ಪರಿಸರವನ್ನು ಒದಗಿಸುತ್ತಾ ಅವರ ಪ್ರೀತಿಪರ ಸಂಗಾತಿಗಳು, ಉತ್ತಮ ಸಂವಾದಕರು ಮತ್ತು ತಾಳ್ಮೆಯ, ಅದೇ ಸಮಯದಲ್ಲಿ ಕಟ್ಟುನಿಟ್ಟಿನ ಶಿಕ್ಷಕರಾಗಿರುತ್ತಾರೆ. *
ನಿಮ್ಮ ಮಕ್ಕಳನ್ನು ಸಂರಕ್ಷಿಸಿರಿ
ಜರ್ಮನಿಯಲ್ಲಿರುವ ಹಿತಚಿಂತಕ ಮುಖ್ಯೋಪಾಧ್ಯಾಯರೊಬ್ಬರು ಹೆತ್ತವರಿಗೆ ಸಂಬೋಧಿಸಿ ಬರೆದ ಪತ್ರದಲ್ಲಿ ತಿಳಿಸಿದ್ದು: “ಪ್ರಿಯ ಹೆತ್ತವರೇ, ನಿಮ್ಮ ಮಕ್ಕಳ ಪಾಲನೆಯನ್ನು ಟೆಲಿವಿಷನ್‌ಗೊ ಬೀದಿ ಮಕ್ಕಳೊಂದಿಗಿನ ಸಹವಾಸಕ್ಕೊ ಒಪ್ಪಿಸಿಬಿಡದೆ, ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ನಿಮ್ಮ [ಜವಾಬ್ದಾರಿಯನ್ನು] ನೀವೇ ವಹಿಸಿಕೊಳ್ಳಿರಿ.”
ತಮ್ಮ ಮಗುವನ್ನು ಟೆಲಿವಿಷನ್‌ಗೆ ಇಲ್ಲವೆ ಬೀದಿ ಮಕ್ಕಳೊಂದಿಗಿನ ಸಹವಾಸಕ್ಕೆ ಒಪ್ಪಿಸಿಬಿಡುವುದು, ಮಗುವಿನ ಮೇಲೆ ಲೋಕದ ಆತ್ಮವು ಪ್ರಭಾವಬೀರುವಂತೆ ಮಾಡುತ್ತದೆ. (ಎಫೆಸ 2:1, 2) ದೇವರ ಆತ್ಮಕ್ಕೆ ತದ್ವಿರುದ್ಧವಾಗಿ ಈ ಲೋಕದ ಆತ್ಮವು, “ಭೂಸಂಬಂಧವಾದದ್ದು, ಪ್ರಾಕೃತಭಾವವಾದದ್ದು, ದೆವ್ವಗಳಿಗೆ ಸಂಬಂಧಪಟ್ಟದ್ದು” ಆದ ಆಲೋಚನೆಯ ಬೀಜಗಳನ್ನು ಬಿರುಸಾದ ಗಾಳಿಯಂತೆ ಹೊತ್ತೊಯ್ದು, ಅನನುಭವಿಗಳ ಇಲ್ಲವೆ ಮೂರ್ಖರ ಹೃದಮನಗಳಲ್ಲಿ ಧಾರಾಳವಾಗಿ ಕೂಡಿಸಿಡುತ್ತದೆ. (ಯಾಕೋಬ 3:15) ಹಣಜಿಯಂಥ ವಿನಾಶಕ ಆಲೋಚನೆಗಳು ಕ್ರಮೇಣ ಹೃದಯವನ್ನು ಮಲಿನಗೊಳಿಸುತ್ತದೆ. ಹೃದಯಕ್ಕೆ ಬಿತ್ತಲ್ಪಟ್ಟಿರುವ ವಿಷಯಗಳಿಂದ ಆಗುವ ಪರಿಣಾಮವನ್ನು ಯೇಸು ಈ ಮಾತುಗಳಿಂದ ದೃಷ್ಟಾಂತಿಸಿದನು: “ಒಳ್ಳೆಯವನು ತನ್ನ ಹೃದಯವೆಂಬ ಒಳ್ಳೆಯ ಬೊಕ್ಕಸದೊಳಗಿಂದ ಒಳ್ಳೆಯದನ್ನು ತರುತ್ತಾನೆ; ಕೆಟ್ಟವನು ಕೆಟ್ಟ ಬೊಕ್ಕಸದೊಳಗಿಂದ ಕೆಟ್ಟದ್ದನ್ನು ತರುತ್ತಾನೆ; ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು.” (ಲೂಕ 6:45) ಆದುದರಿಂದ, ಎಲ್ಲದಕ್ಕಿಂತಲೂ ಹೆಚ್ಚಾಗಿ “ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು” ಎಂದು ಬೈಬಲ್ ನಮಗೆ ಬುದ್ಧಿಹೇಳುತ್ತದೆ.—ಜ್ಞಾನೋಕ್ತಿ 4:23.
ಮಕ್ಕಳು ಮಕ್ಕಳೇ. ಕೆಲವರು ಹಟಮಾರಿಗಳು, ಮೊಂಡುತನದವರೂ ಆಗಿರುತ್ತಾರೆ. (ಆದಿಕಾಂಡ 8:21) ಆದರೆ ಹೆತ್ತವರು ಏನು ಮಾಡಸಾಧ್ಯವಿದೆ? “ಮೂರ್ಖತನವು ಹುಡುಗನ ಮನಸ್ಸಿಗೆ ಸಹಜ, ಆದರೆ ಶಿಕ್ಷಕನ ಬೆತ್ತವು ಅದನ್ನು ತೊಲಗಿಸುವದು” ಎನ್ನುತ್ತದೆ ಬೈಬಲ್. (ಜ್ಞಾನೋಕ್ತಿ 22:15) ಇದು ಈಗಿನ ಕಾಲಕ್ಕೆ ಉಪಯುಕ್ತವಲ್ಲದ ಕಠೋರವಾದ ವರ್ತನೆ ಎಂದು ಕೆಲವರು ಭಾವಿಸುತ್ತಾರೆ. ಬೈಬಲ್ ಹಿಂಸಾಕೃತ್ಯ ಮತ್ತು ಯಾವುದೇ ರೀತಿಯ ದುರ್ವರ್ತನೆಯನ್ನು ವಿರೋಧಿಸುತ್ತದೆ. “ಬೆತ್ತ” ಎಂದು ಹೇಳುವಾಗ ಕೆಲವೊಮ್ಮೆ ಅಕ್ಷರಾರ್ಥವಾದ ಶಿಕ್ಷೆಯನ್ನು ಸೂಚಿಸುವುದಾದರೂ ಅನೇಕವೇಳೆ ಅದು, ಪ್ರೀತಿಯಿಂದಲೂ ಮಕ್ಕಳ ನಿತ್ಯ ಹಿತಚಿಂತನೆಯಿಂದಲೂ ಕಟ್ಟುನಿಟ್ಟಾಗಿ ನಿರ್ವಹಿಸಲ್ಪಡುವ ಹೆತ್ತವರ ಅಧಿಕಾರವನ್ನು ಸೂಚಿಸುತ್ತದೆ.—ಇಬ್ರಿಯ 12:7-11.
ನಿಮ್ಮ ಮಕ್ಕಳೊಂದಿಗೆ ಮನರಂಜನೆಯಲ್ಲಿ ಆನಂದಿಸಿರಿ
ಮಕ್ಕಳ ಸೂಕ್ತ ಬೆಳವಣಿಗೆಗೆ ಆಟ ಮತ್ತು ಮನರಂಜನೆಯು ಅತ್ಯಾವಶ್ಯಕ ಎಂಬುದು ತಿಳಿದಿರುವ ಸಂಗತಿಯಾಗಿದೆ. ವಿವೇಕಿಗಳಾದ ಹೆತ್ತವರು ಸಾಧ್ಯವಿರುವಾಗ ಮಕ್ಕಳೊಂದಿಗೆ ಮನರಂಜನೆಯಲ್ಲಿ ಆನಂದಿಸುತ್ತಾರೆ ಮತ್ತು ಈ ಸಂದರ್ಭಗಳನ್ನು ತಮ್ಮ ಹಾಗೂ ತಮ್ಮ ಮಕ್ಕಳ ನಡುವಣ ಬಂಧವನ್ನು ಬಲಗೊಳಿಸಲು ಸದುಪಯೋಗಿಸಿಕೊಳ್ಳುತ್ತಾರೆ. ಹೀಗೆ, ಹೆತ್ತವರು ಮಕ್ಕಳಿಗೆ ಸರಿಯಾದ ಮನರಂಜನೆಯನ್ನು ಆಯ್ಕೆಮಾಡುವಂತೆ ಮಾರ್ಗದರ್ಶಿಸಶಕ್ತರಾಗುವುದು ಮಾತ್ರವಲ್ಲದೆ ತಾವು ಅವರ ಸಾಂಗತ್ಯವನ್ನು ಎಷ್ಟು ಅಮೂಲ್ಯವಾಗಿ ಪರಿಗಣಿಸುತ್ತೇವೆ ಎಂಬುದನ್ನು ಸಹ ತೋರಿಸಶಕ್ತರಾಗಿರುತ್ತಾರೆ.
ಕೆಲಸದಿಂದ ಮನೆಗೆ ಬಂದ ಅನಂತರ ತನ್ನ ಮಗನೊಂದಿಗೆ ಹೆಚ್ಚಾಗಿ ತಾನು ಚೆಂಡಾಟ ಆಡುತ್ತಿದ್ದೆನೆಂದು ಒಬ್ಬ ಸಾಕ್ಷಿ ತಂದೆಯು ಹೇಳುತ್ತಾನೆ. ತಾನು ತನ್ನ ಮಕ್ಕಳೊಂದಿಗೆ ಚೆಸ್, ಕ್ಯಾರಂ ಮುಂತಾದ ಬೋರ್ಡ್ ಆಟಗಳನ್ನು ಆಡುತ್ತಿದ್ದೆ ಎಂಬುದಾಗಿ ಇನ್ನೊಬ್ಬ ತಾಯಿಯು ನೆನಪಿಸಿಕೊಳ್ಳುತ್ತಾಳೆ. ವಯಸ್ಕ ಸ್ತ್ರೀಯೊಬ್ಬಳು ತನ್ನ ಬಾಲ್ಯದಲ್ಲಿ ತನ್ನ ಕುಟುಂಬವು ಆನಂದಿಸುತ್ತಿದ್ದ ಸೈಕಲ್ ಸವಾರಿಯನ್ನು ನೆನಪುಮಾಡಿಕೊಳ್ಳುತ್ತಾಳೆ. ಈ ಎಲ್ಲ ಮಕ್ಕಳು ಈಗ ಬೆಳೆದು ದೊಡ್ಡವರಾಗಿದ್ದಾರೆ, ಆದರೆ ಹೆತ್ತವರು ಮತ್ತು ಯೆಹೋವನ ಮೇಲಿರುವ ಅವರ ಪ್ರೀತಿಯು ಎಂದಿನಂತೆ ಇನ್ನೂ ಬಲವಾಗಿದೆ ಹಾಗೂ ಬಲಗೊಳ್ಳುತ್ತಾ ಇದೆ.
ತಮ್ಮ ನಡೆನುಡಿಯ ಮೂಲಕ ಮಕ್ಕಳನ್ನು ಪ್ರೀತಿಸುತ್ತೇವೆ ಹಾಗೂ ಅವರೊಂದಿಗೆ ಸಮಯ ಕಳೆಯಲು ಬಯಸುತ್ತೇವೆ ಎಂದು ತೋರಿಸಿಕೊಡುವ ಹೆತ್ತವರು, ಮಕ್ಕಳ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತಾರೆ ಮತ್ತು ಅದು ಅನೇಕವೇಳೆ ಇಡೀ ಜೀವಮಾನದ ವರೆಗೆ ಉಳಿಯುತ್ತದೆ. ಉದಾಹರಣೆಗೆ, ತಾವು ಪೂರ್ಣ ಸಮಯದ ಶುಶ್ರೂಷೆಯನ್ನು ಬೆನ್ನಟ್ಟಲು ತಮ್ಮ ಹೆತ್ತವರ ಮಾದರಿ ಮತ್ತು ಉತ್ತೇಜನವೇ ಸಹಾಯಮಾಡಿತು ಎಂಬುದಾಗಿ ವಾಚ್‌ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್‌ನ ಒಂದು ತರಗತಿಯ ಪದವೀಧರರಲ್ಲಿ ಅನೇಕರು ತಿಳಿಸಿದರು. ಇದು ಮಕ್ಕಳಿಗೆ ದೊರೆತ ಎಂಥ ಒಂದು ಅದ್ಭುತಕರ ಪರಂಪರೆ ಮತ್ತು ಹೆತ್ತವರಿಗೆ ಎಂಥ ಒಂದು ಆಶೀರ್ವಾದ! ದೊಡ್ಡವರಾದಾಗ ಪೂರ್ಣ ಸಮಯದ ಶುಶ್ರೂಷೆಯಲ್ಲಿ ಭಾಗವಹಿಸುವ ಸಂದರ್ಭ ಎಲ್ಲ ಮಕ್ಕಳಿಗೆ ಸಿಗುವುದಿಲ್ಲ ಎಂಬುದು ನಿಜ, ಆದರೆ ಎಲ್ಲ ಮಕ್ಕಳು ತಮ್ಮ ಆಪ್ತ ಸ್ನೇಹಿತರೂ ಉತ್ತಮ ಮಾದರಿಯೂ ಆದ ದೇವಭಯವುಳ್ಳ ಹೆತ್ತವರಿಂದ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ ಮತ್ತು ಖಂಡಿತವಾಗಿಯೂ ಅವರಿಗೆ ಗೌರವವನ್ನು ನೀಡುತ್ತಾರೆ.—ಜ್ಞಾನೋಕ್ತಿ 22:6; ಎಫೆಸ 6:2, 3.
ಒಂಟಿ ಹೆತ್ತವರು ಯಶಸ್ವಿಯಾಗಬಲ್ಲರು
ಇಂದು ಅನೇಕ ಮಕ್ಕಳು ಒಂಟಿ ಹೆತ್ತವರಿಂದ ಬೆಳೆಸಲ್ಪಡುತ್ತಾರೆ. ಈ ಪರಿಸ್ಥಿತಿಯು ಮಕ್ಕಳನ್ನು ಬೆಳೆಸುವುದನ್ನು ಮತ್ತಷ್ಟು ಕಷ್ಟಕರವನ್ನಾಗಿ ಮಾಡುತ್ತದಾದರೂ, ಯಶಸ್ವಿಯನ್ನು ಪಡೆಯಸಾಧ್ಯವಿದೆ. ಒಂಟಿ ಹೆತ್ತವರು, ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಪ್ರಥಮ ಶತಮಾನದ ಯೆಹೂದಿ ಕ್ರೈಸ್ತಳಾದ ಯೂನೀಕೆಯ ಉದಾಹರಣೆಯಿಂದ ಉತ್ತೇಜನವನ್ನು ಪಡೆದುಕೊಳ್ಳಬಲ್ಲರು. ಆಕೆಯ ಗಂಡನು ಅವಿಶ್ವಾಸಿಯಾಗಿದ್ದ ಕಾರಣ, ಅವಳಿಗೆ ಅವನಿಂದ ಯಾವುದೇ ಆಧ್ಯಾತ್ಮಿಕ ಬೆಂಬಲವು ದೊರಕಲಿಲ್ಲ. ಹಾಗಿದ್ದರೂ, ತಿಮೊಥೆಯನಿಗೆ ಕಲಿಸುವುದರಲ್ಲಿ ಅವಳು ಅತ್ಯುತ್ತಮ ಮಾದರಿಯನ್ನಿಟ್ಟಳು. ಶೈಶವದಿಂದ ತಿಮೊಥೆಯನ ಮೇಲೆ ಅವಳು ಮತ್ತು ತಿಮೊಥೆಯನ ಅಜ್ಜಿಯಾದ ಲೋವಿ ಬೀರಿದ ಉತ್ತಮ ಪ್ರಭಾವವು, ಅವನ ಸಮವಯಸ್ಕರು ಅವನ ಮೇಲೆ ಬೀರಿರಬಹುದಾದ ಯಾವುದೇ ನಕಾರಾತ್ಮಕ ಪ್ರಭಾವಕ್ಕಿಂತ ಬಹಳ ಶಕ್ತಿಯುತವಾಗಿ ರುಜುವಾಯಿತು.—ಅ. ಕೃತ್ಯಗಳು 16:1, 2; 2 ತಿಮೊಥೆಯ 1:5; 3:15.
ಇಂದು ಸಹ ಅವಿಶ್ವಾಸಿ ಹೆತ್ತವರಿರುವ ಇಲ್ಲವೆ ಒಂಟಿ ಹೆತ್ತವರಿರುವ ಕುಟುಂಬದಲ್ಲಿ ಬೆಳೆಸಲ್ಪಟ್ಟಿರುವ ಅನೇಕ ಯುವ ಜನರು ತಿಮೊಥೆಯನಂತೆಯೇ ಉತ್ತಮ ಗುಣಗಳನ್ನು ಪ್ರದರ್ಶಿಸುತ್ತಿದ್ದಾರೆ. ಉದಾಹರಣೆಗೆ, ಈಗ 22 ವರುಷದವನೂ ಪೂರ್ಣ ಸಮಯದ ಶೂಶ್ರೂಷಕನೂ ಆಗಿರುವ ರೈಅನ್, ಅವನ ಅಕ್ಕ ಮತ್ತು ಅಣ್ಣನೊಂದಿಗೆ ಒಂಟಿ ಹೆತ್ತವರಿರುವ ಕುಟುಂಬದಲ್ಲಿ ಬೆಳೆಸಲ್ಪಟ್ಟವನಾಗಿದ್ದಾನೆ. ಅವರ ತಂದೆ ಒಬ್ಬ ಕುಡುಕನಾಗಿದ್ದನು ಮತ್ತು ರೈಅನ್ ನಾಲ್ಕು ವರುಷದವನಾಗಿದ್ದಾಗ ಅವನು ಕುಟುಂಬವನ್ನು ಬಿಟ್ಟುಹೋದನು. ರೈಅನ್ ತಿಳಿಸುವುದು:
“ನಮ್ಮ ಮನೆಯವರೆಲ್ಲರು ಯೆಹೋವನನ್ನು ಸೇವಿಸುತ್ತಾ ಮುಂದುವರಿಯಬೇಕೆಂದು ಅಮ್ಮ ದೃಢನಿಶ್ಚಿತರಾಗಿದ್ದರು ಮತ್ತು ಸಂಪೂರ್ಣ ಹೃದಯದಿಂದ ಅದಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈದರು.”ರೈಅನ್ ಮುಂದುವರಿಸುವುದು: “ನಮ್ಮ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬಹುದಾದ ಮಕ್ಕಳೊಂದಿಗೆ ಮಾತ್ರ ನಾವು ಸಹವಾಸಿಸುವಂತೆ ಅಮ್ಮ ನೋಡಿಕೊಂಡರು. ಸಭೆಯ ಒಳಗಾಗಲಿ ಹೊರಗಾಗಲಿ, ದುಸ್ಸಹವಾಸಿಗಳು ಎಂಬುದಾಗಿ ಬೈಬಲ್ ಯಾರನ್ನು ವರ್ಣಿಸುತ್ತದೊ ಅಂಥವರೊಂದಿಗೆ ನಾವು ಸಹವಾಸಿಸದಿರುವುದನ್ನು ಅವರು ಖಚಿತಪಡಿಸಿಕೊಂಡರು. ಲೌಕಿಕ ವಿದ್ಯಾಭ್ಯಾಸದ ಕುರಿತು ಸರಿಯಾದ ದೃಷ್ಟಿಕೋನವನ್ನು ನಮ್ಮಲ್ಲಿ ಬೇರೂರಿಸಿದರು.” ರೈಅನ್‌ನ ತಾಯಿ ಹೆಚ್ಚಾಗಿ ಕಾರ್ಯಮಗ್ನಳಾಗಿದ್ದರೂ ಕೆಲಸದ ಕಾರಣ ಹೆಚ್ಚಾಗಿ ದಣಿದಿದ್ದರೂ, ತನ್ನ ಮಕ್ಕಳ ಕಡೆಗೆ ಪ್ರೀತಿಪರ ಆಸಕ್ತಿಯನ್ನು ತೋರಿಸುವುದರಿಂದ ಅದು ಅವಳನ್ನು ತಡೆಯುವಂತೆ ಅವಳು ಬಿಡಲಿಲ್ಲ. ರೈಅನ್ ತಿಳಿಸುವುದು: “ಅವರು ಯಾವಾಗಲೂ ನಮ್ಮೊಂದಿಗಿರಲು ಮತ್ತು ನಮ್ಮೊಂದಿಗೆ ಮಾತಾಡಲು ಬಯಸಿದರು. ಅವರು ತಾಳ್ಮೆಯುಳ್ಳವರೂ ಅದೇ ಸಮಯದಲ್ಲಿ ಕಟ್ಟುನಿಟ್ಟಿನ ಶಿಕ್ಷಕಿಯಾಗಿದ್ದರು. ಕುಟುಂಬದ ಬೈಬಲ್ ಅಧ್ಯಯನವು ಕ್ರಮವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದರು. ಬೈಬಲ್ ಮೂಲತತ್ತ್ವಗಳ ವಿಷಯದಲ್ಲಿ ‘ಒಪ್ಪಂದಮಾಡಿಕೊಳ್ಳುವ’ ಮಾತೇ ಇರಲಿಲ್ಲ.”
ರೈಅನ್ ತನ್ನ ಬಾಲ್ಯದ ದಿನಗಳ ಕಡೆಗೆ ಹಿನ್ನೋಟ ಬೀರುವಾಗ, ತನ್ನ ಮತ್ತು ತನ್ನ ಅಕ್ಕ ಹಾಗೂ ಅಣ್ಣನ ಜೀವನದಲ್ಲಿ ಅತಿ ಶಕ್ತಿಯುತವಾಗಿ ಪ್ರಭಾವ ಬೀರಿದ್ದು, ದೇವರನ್ನು ಮತ್ತು ತನ್ನ ಮಕ್ಕಳನ್ನು ನಿಜವಾಗಿಯೂ ಪ್ರೀತಿಸಿದ ತಮ್ಮ ತಾಯಿಯೇ ಎಂಬುದನ್ನು ಅಂಗೀಕರಿಸುತ್ತಾನೆ. ಆದುದರಿಂದ ಕ್ರೈಸ್ತ ಹೆತ್ತವರೇ, ನಿಮ್ಮ ಮಕ್ಕಳಿಗೆ ಕಲಿಸಲು ಹೆಣಗಾಡುತ್ತಿರುವಾಗ ನಿಮಗೆ ಎದುರಾಗಬಹುದಾದ ನಿರುತ್ತೇಜನ ಇಲ್ಲವೆ ತಾತ್ಕಾಲಿಕ ಹಿನ್ನಡೆಗಳಿಂದಾಗಿ ನೀವು ನಿಮ್ಮ ಪ್ರಯತ್ನವನ್ನು ಬಿಟ್ಟುಬಿಡಬೇಡಿ. ಕೆಲವೊಮ್ಮೆ, ಪೋಲಿಹೋದ ಮಗನಂತೆ ಕೆಲವು ಯುವ ಜನರು ಸತ್ಯದಿಂದ ದೂರಹೋಗಬಹುದು. ಆದರೆ ಈ ಲೋಕವು ಬರೀ ಬಾಹ್ಯ ತೋರಿಕೆಯ ಮತ್ತು ಅಮಾನವೀಯ ಲೋಕವಾಗಿದೆ ಎಂಬುದನ್ನು ಅವರು ಅನುಭವದಿಂದ ತಿಳಿದುಕೊಂಡಾಗ ಹಿಂದಿರುಗಿ ಬರಬಹುದು. ಹೌದು, “ಸದ್ಧರ್ಮಿಯು ನಿರ್ದೋಷವಾಗಿ ನಡೆಯುವನು; ಅವನು ಗತಿಸಿದ ಮೇಲೆಯೂ ಅವನ ಮಕ್ಕಳು ಭಾಗ್ಯವಂತರು [“ಸಂತೋಷಿತರು,” NW].”—ಜ್ಞಾನೋಕ್ತಿ 20:7; 23:24, 25; ಲೂಕ 15:11-24.
[ಪಾದಟಿಪ್ಪಣಿ]
^ ಪ್ಯಾರ. 9 ಈ ನಿರ್ದಿಷ್ಟ ಅಂಶಗಳ ವಿಸ್ತಾರವಾದ ಚರ್ಚೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಕುಟುಂಬ ಸಂತೋಷದ ರಹಸ್ಯ ಪುಸ್ತಕದ 55-9ನೇ ಪುಟಗಳನ್ನು ನೋಡಿ.
[ಪುಟ 11ರಲ್ಲಿರುವ ಚೌಕ/ಚಿತ್ರಗಳು]
ದೇವರಿಂದ ಆಯ್ಕೆಮಾಡಲ್ಪಟ್ಟ ಯೇಸುವಿನ ಹೆತ್ತವರು
ಯೆಹೋವನು ತನ್ನ ಮಗನನ್ನು ಈ ಭೂಮಿಗೆ ಮಾನವನಾಗಿ ಜೀವಿಸಲು ಕಳುಹಿಸಿದಾಗ ಬಹು ಜಾಗರೂಕತೆಯಿಂದ ಅವನಿಗಾಗಿ ಹೆತ್ತವರನ್ನು ಆಯ್ಕೆಮಾಡಿದನು. ಆತನು ದೀನರಾದ, ಆಧ್ಯಾತ್ಮಿಕ ಗುರಿಗಳಿರುವ ದಂಪತಿಯನ್ನು ಆಯ್ಕೆಮಾಡಿದನು. ಅವರು ಯೇಸುವನ್ನು ವಿಪರೀತವಾಗಿ ಮುದ್ದುಮಾಡಿ ಹಾಳುಮಾಡದೆ, ಅವನಿಗೆ ದೇವರ ವಾಕ್ಯವನ್ನು, ಕಠಿನ ಪರಿಶ್ರಮದ ಮೌಲ್ಯವನ್ನು ಮತ್ತು ಜವಾಬ್ದಾರಿಯನ್ನು ಕಲಿಸಿಕೊಟ್ಟರು. (ಜ್ಞಾನೋಕ್ತಿ 29:21; ಪ್ರಲಾಪಗಳು 3:27) ಯೋಸೇಫನು ಯೇಸುವಿಗೆ ಬಡಗಿಯ ಕೆಲಸವನ್ನು ಕಲಿಸಿಕೊಟ್ಟನು. ಮಾತ್ರವಲ್ಲದೆ, ಯೋಸೇಫ ಮತ್ತು ಮರಿಯ ತಮಗಿದ್ದ ಇತರ ಕಡಿಮೆಪಕ್ಷ ಆರು ಮಕ್ಕಳನ್ನು ನೋಡಿಕೊಳ್ಳುವಂತೆ ಖಂಡಿತವಾಗಿಯೂ ಯೇಸುವನ್ನು ಕೇಳಿಕೊಂಡಿದ್ದಿರಬಹುದು.—ಮಾರ್ಕ 6:3.
ಯೋಸೇಫನ ಕುಟುಂಬವು ಪಸ್ಕಹಬ್ಬದ ಸಮಯದಲ್ಲಿ ಯೆರೂಸಲೇಮಿಗೆ ಹೋಗುವ ತಮ್ಮ ವಾರ್ಷಿಕ ಪ್ರಯಾಣಕ್ಕಾಗಿ ಒಟ್ಟಾಗಿ ಸಿದ್ಧತೆಗಳನ್ನು ಮಾಡುತ್ತಿರುವುದನ್ನು ನೀವು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಸಾಧ್ಯವಿದೆ. ಅಲ್ಲಿಗೆ ಹೋಗಿಬರಲು ಯಾವುದೇ ಆಧುನಿಕ ಸಾರಿಗೆ ಸೌಕರ್ಯವಿಲ್ಲದೆ 200 ಕಿಲೊಮೀಟರ್ ಪ್ರಯಾಣಿಸಬೇಕಾಗಿತ್ತು. ಒಂಬತ್ತು ಇಲ್ಲವೆ ಹೆಚ್ಚಿನ ಸದಸ್ಯರನ್ನು ಹೊಂದಿದ್ದ ಕುಟುಂಬವು ಇಂಥ ಒಂದು ದೀರ್ಘ ಪ್ರಯಾಣಕ್ಕಾಗಿ ಬಹಳಷ್ಟು ಸಿದ್ಧತೆಯನ್ನು ಮಾಡಬೇಕಿತ್ತೆಂಬುದು ನಿಶ್ಚಯ. (ಲೂಕ 2:39, 41) ಪಂಥಾಹ್ವಾನಗಳ ಹೊರತಾಗಿಯೂ ಯೋಸೇಫ ಮತ್ತು ಮರಿಯ ಈ ಸಂದರ್ಭಗಳನ್ನು ಬಹಳ ಬೆಲೆಯುಳ್ಳದ್ದಾಗಿ ಪರಿಗಣಿಸಿದರು. ಅವರು ತಮ್ಮ ಮಕ್ಕಳಿಗೆ ಪೂರ್ವದಲ್ಲಿ ಸಂಭವಿಸಿದ ಬೈಬಲ್ ಘಟನೆಗಳನ್ನು ಕಲಿಸಲು ಈ ಸಂದರ್ಭಗಳನ್ನು ಉಪಯೋಗಿಸಿದ್ದಿರಬಹುದು.
ಯೇಸು ಬೆಳೆಯುತ್ತಿರುವಾಗ ಅವನ ಹೆತ್ತವರಿಗೆ “ಅಧೀನನಾಗಿದ್ದನು.” ಎಲ್ಲ ಸಮಯಗಳಲ್ಲಿ “ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ವೃದ್ಧಿಯಾಗುತ್ತಾ ಬಂದನು; ಇದಲ್ಲದೆ ದೇವರ ಮತ್ತು ಮನುಷ್ಯರ ದಯೆಯು ಆತನ ಮೇಲೆ ಹೆಚ್ಚಾಗುತ್ತಾ ಬಂತು.” (ಲೂಕ 2:51, 52) ಹೌದು, ಯೋಸೇಫ ಮತ್ತು ಮರಿಯ ದೇವರ ಭರವಸೆಗೆ ಯೋಗ್ಯರಾಗಿ ಪರಿಗಣಿಸಲ್ಪಟ್ಟರು. ಇಂದಿರುವ ಹೆತ್ತವರಿಗೆ ಅವರು ಎಂಥ ಉತ್ತಮ ಮಾದರಿಯಾಗಿದ್ದಾರೆ!—ಕೀರ್ತನೆ 127:3.