ಅಟ್ಟಿಸಿಕೊಂಡು ಬಂದವರು ಅಪ್ಪಿಕೊಂಡರು
ಅಟ್ಟಿಸಿಕೊಂಡು ಬಂದವರು ಅಪ್ಪಿಕೊಂಡರು
ಕೆಲವು ವರ್ಷಗಳ ಹಿಂದೆ ಸಾಂಟ್ಯಾಗೊ ಮತ್ತು ಅವರ ಪತ್ನಿಯಾದ ಲುರ್ಡೆಸ್, ಪೆರೂವಿನ ಸುಂದರ ನಗರವಾದ ವ್ಹೀಲ್ಕಾಪಾಟಾದಲ್ಲಿರುವ ಜನರೊಂದಿಗೆ ಬೈಬಲಿನ ನಿರೀಕ್ಷೆಯ ಸಂದೇಶವನ್ನು ಹಂಚಿಕೊಳ್ಳಲಿಕ್ಕಾಗಿ ಅಲ್ಲಿಗೆ ಸ್ಥಳಾಂತರಿಸಿದರು. ಆದರೆ, ಸ್ವಲ್ಪದರಲ್ಲೇ ಕೂಸ್ಕೊವಿನಿಂದ ಬಂದ ಒಬ್ಬ ಪಾದ್ರಿಯು ಎಲ್ಲ ನಗರವಾಸಿಗಳನ್ನು ಒಟ್ಟುಗೂಡಿಸಿದನು. ಯೆಹೋವನ ಸಾಕ್ಷಿಗಳ ಇರುವಿಕೆಯು ಮಾರಕವಾದ ವ್ಯಾಧಿ ಮತ್ತು ಅತಿಯಾದ ಹಿಮಸುರಿತವನ್ನು ಉಂಟುಮಾಡಿ ಅವರ ದನಕರುಗಳನ್ನು ಕೊಲ್ಲುವುದು ಹಾಗೂ ಅವರ ಬೆಳೆಯನ್ನು ನಾಶಗೊಳಿಸುವುದು ಎಂದು ಎಚ್ಚರಿಸಿದನು.
ಅನೇಕರು ಈ “ಪ್ರವಾದನೆ”ಯಿಂದ ಪ್ರಭಾವಿತರಾದರು, ಮತ್ತು ಸುಮಾರು ಆರು ತಿಂಗಳುಗಳಿಗಿಂತ ಹೆಚ್ಚು ಕಾಲ ನಗರದಲ್ಲಿ ಯಾರೊಬ್ಬರೂ ಬೈಬಲನ್ನು ಅಧ್ಯಯನ ಮಾಡುವಂತೆ ಸಾಂಟ್ಯಾಗೊ ಮತ್ತು ಲುರ್ಡೆಸ್ ನೀಡಿದ ಆಮಂತ್ರಣವನ್ನು ಸ್ವೀಕರಿಸಲಿಲ್ಲ. ಲೆಫ್ಟೆನೆಂಟ್ ಗವರ್ನರ್ ಆಗಿದ್ದ, ಮೀಗೆಲ್ ಎಂಬ ಹೆಸರಿನ ನಗರಾಧಿಕಾರಿಯೊಬ್ಬನು ಸಾಂಟ್ಯಾಗೊ ಮತ್ತು ಲುರ್ಡೆಸ್ ಮೇಲೆ ಕಲ್ಲುಗಳನ್ನು ತೂರುತ್ತಾ ರಸ್ತೆಯುದ್ದಕ್ಕೂ ಅವರನ್ನು ಅಟ್ಟಿಸಿಕೊಂಡು ಬಂದನು. ಆದರೆ ಅವರು ಯಾವಾಗಲೂ ಶಾಂತಚಿತ್ತರಾಗಿ ಕ್ರೈಸ್ತರಿಗೆ ತಕ್ಕ ವರ್ತನೆಯನ್ನು ತೋರಿಸುತ್ತಿದ್ದರು.
ಕಾಲಕ್ರಮೇಣ, ನಗರವಾಸಿಗಳಲ್ಲಿ ಕೆಲವರು ಬೈಬಲ್ ಅಧ್ಯಯನವನ್ನು ಸ್ವೀಕರಿಸಿದರು. ಮೀಗೆಲ್ ಸಹ ತನ್ನ ಮನೋಭಾವವನ್ನು ಬದಲಾಯಿಸಿಕೊಂಡನು. ಅವನು ಸಾಂಟ್ಯಾಗೊರೊಂದಿಗೆ ಬೈಬಲನ್ನು ಅಧ್ಯಯನಮಾಡಲು ಆರಂಭಿಸಿದನು, ಕುಡಿತವನ್ನು ನಿಲ್ಲಿಸಿದನು ಮತ್ತು ಒಬ್ಬ ಶಾಂತಚಿತ್ತ ವ್ಯಕ್ತಿಯಾಗಿ ಪರಿಣಮಿಸಿದನು. ಕೊನೆಯಲ್ಲಿ ಮೀಗೆಲ್, ಅವನ ಹೆಂಡತಿ ಮತ್ತು ಅವನ ಹೆಣ್ಣುಮಕ್ಕಳಲ್ಲಿ ಇಬ್ಬರು ಬೈಬಲ್ ಸತ್ಯವನ್ನು ಸ್ವೀಕರಿಸಿದರು.
ಇಂದು, ಈ ಪಟ್ಟಣದಲ್ಲಿ ಯೆಹೋವನ ಸಾಕ್ಷಿಗಳ ತುಂಬಿತುಳುಕುತ್ತಿರುವ ಒಂದು ಸಭೆಯಿದೆ. ಸಾಂಟ್ಯಾಗೊ ಮತ್ತು ಲುರ್ಡೆಸ್ ಮೇಲೆ ಎಸೆದ ಹೆಚ್ಚಿನ ಕಲ್ಲುಗಳು ಅವರಿಗೆ ತಾಗಲಿಲ್ಲ ಎಂಬುದರ ಬಗ್ಗೆ ಮೀಗೆಲ್ ಸಂತೋಷಿತನಾಗಿದ್ದಾನೆ ಮತ್ತು ಆ ದಂಪತಿಯು ಶಾಂತಚಿತ್ತರಾಗಿ ಉಳಿಯುವ ಮೂಲಕ ಇಟ್ಟ ಉತ್ತಮ ಮಾದರಿಗಾಗಿ ಅವರಿಗೆ ಆಭಾರಿಯಾಗಿದ್ದಾನೆ.
[ಪುಟ 32ರಲ್ಲಿರುವ ಚಿತ್ರಗಳು]
ಸಾಂಟ್ಯಾಗೊ ಮತ್ತು ಲುರ್ಡೆಸ್ (ಮೇಲೆ)ರ ಶಾಂತಚಿತ್ತ ಮನೋಭಾವವು, ಮೀಗೆಲ್ (ಬಲಗಡೆ ಕೊನೆಯಲ್ಲಿ) ತನ್ನ ಮನಸ್ಸನ್ನು ಬದಲಾಯಿಸಿಕೊಳ್ಳುವಂತೆ ಪ್ರೇರಿಸಿತು