ಪ್ರೀತಿ, ನಂಬಿಕೆ ಮತ್ತು ವಿಧೇಯತೆಗೆ ಒಂದು ಪುರಾವೆ
ಪ್ರೀತಿ, ನಂಬಿಕೆ ಮತ್ತು ವಿಧೇಯತೆಗೆ ಒಂದು ಪುರಾವೆ
ಇಸವಿ 2005 ಮೇ 16ರ ಬೆಳಿಗ್ಗೆ, ನ್ಯೂ ಯಾರ್ಕ್ನ ವಾಲ್ಕಿಲ್ನಲ್ಲಿರುವ ವಾಚ್ಟವರ್ ಫಾರ್ಮ್ಸ್ನಲ್ಲಿ ವಾತಾವರಣವು ಹಿತಕರವಾದ ಮಟ್ಟದಲ್ಲಿ ತಂಪಾಗಿಯೂ ಉಜ್ವಲವಾಗಿಯೂ ಇತ್ತು. ನೀಟಾಗಿ ಕತ್ತರಿಸಿದ ಹುಲ್ಲುಹಾಸುಗಳು ಮತ್ತು ಹೂಗಿಡಗಳ ಹಾಸಿಗೆಗಳು, ಸೂರ್ಯೋದಯಕ್ಕಿಂತ ಮುಂಚೆ ಸುರಿದ ಮಳೆಯಿಂದಾಗಿ ಥಳಥಳಿಸುತ್ತಿದ್ದವು. ಕೊಳದ ಅಂಚಿನ ಪ್ರಶಾಂತವಾದ ನೀರಿನಲ್ಲಿ ಒಂದು ಬಾತುಕೋಳಿಯು ತನ್ನ ಎಂಟು ಮರಿಗಳೊಂದಿಗೆ ಶಾಂತವಾಗಿ ತೇಲಿಕೊಂಡು ಹೋಗುತ್ತಿತ್ತು. ಈ ಸೌಂದರ್ಯವನ್ನು ನೋಡಿ ಸಂದರ್ಶಕರು ವಿಸ್ಮಿತರಾದರು. ಬೆಳಗಿನ ನಿಶ್ಶಬ್ದತೆಯನ್ನು ತಾವು ಹಾಳುಮಾಡಲು ಬಯಸುವುದಿಲ್ಲ ಎಂಬಂತೆ ಸಂದರ್ಶಕರು ತಗ್ಗುದನಿಯಲ್ಲಿ ಮಾತಾಡುತ್ತಿದ್ದರು.
ಈ ಸಂದರ್ಶಕರು, ಲೋಕಾದ್ಯಂತವಿರುವ 48 ದೇಶಗಳಿಂದ ಬಂದಿದ್ದ ಯೆಹೋವನ ಸಾಕ್ಷಿಗಳಾಗಿದ್ದರು. ಆದರೆ ಅವರು ಬಂದದ್ದು ಈ ದೃಶ್ಯ ಸೌಂದರ್ಯವನ್ನು ವೀಕ್ಷಿಸಲಿಕ್ಕಾಗಿ ಅಲ್ಲ. ಕೆಂಪು ಇಟ್ಟಿಗೆಯ ವಿಶಾಲವಾದ ಕಟ್ಟಡವೊಂದರ ಒಳಗೆ ಏನು ಸಂಭವಿಸುತ್ತಿದೆಯೊ ಅದನ್ನು ನೋಡಲು ಅವರು ಆಸಕ್ತರಾಗಿದ್ದರು. ಈ ಕಟ್ಟಡವು, ಯುನೈಟೆಡ್ ಸ್ಟೇಟ್ಸ್ನ ವಾಲ್ಕಿಲ್ನಲ್ಲಿರುವ ಬೆತೆಲ್ ಸೌಕರ್ಯಕ್ಕೆ ಇತ್ತೀಚೆಗೆ ಮಾಡಲ್ಪಟ್ಟ ವಿಸ್ತರಣೆಯಾಗಿದೆ. ಈ ಕಟ್ಟಡದ ಒಳಗಿನ ಪರಿಸರವು ಪ್ರಶಾಂತವಾಗಿ ಇಲ್ಲವೆ ನಿಶ್ಶಬ್ದವಾಗಿ ಇರಲಿಲ್ಲವಾದರೂ, ಸಂದರ್ಶಕರು ಅಲ್ಲಿ ಏನನ್ನು ನೋಡಿದರೊ ಅದರಿಂದ ಪುನಃ ಒಮ್ಮೆ ವಿಸ್ಮಿತರಾದರು.
ಸಂದರ್ಶಕರು ಮಧ್ಯದಂತಸ್ತಿನಿಂದ (ಎರಡು ಅಂತಸ್ತುಗಳ ನಡುವೆ ಬಾಲ್ಕನಿಯಂಥ ತಗ್ಗು ಅಂತಸ್ತು) ಯಂತ್ರಗಳ ಜಟಿಲವಾದ ಸಾಲನ್ನು ಎವೆಯಿಕ್ಕದೆ ನೋಡಿದರು. ಐದು ಅತಿ ದೊಡ್ಡ ಮುದ್ರಣ ಯಂತ್ರಗಳು, ಒಂಬತ್ತು ಫುಟ್ಬಾಲ್ ಮೈದಾನ (ಒಂದು ಅಮೆರಿಕನ್ ಫೂಟ್ಬಾಲ್ ಮೈದಾನವು 110 ಮೀಟರ್ ಉದ್ದ ಮತ್ತು 49 ಮೀಟರ್ ಅಗಲವಿದೆ)ಗಳಷ್ಟು ದೊಡ್ಡದಾದ ನಯಮಾಡಿದ ಕಾಂಕ್ರಿಟ್ ನೆಲದಲ್ಲಿ ಹರಡಿಕೊಂಡಿದ್ದವು. ಬೈಬಲ್ಗಳು, ಪುಸ್ತಕಗಳು ಮತ್ತು ಪತ್ರಿಕೆಗಳು ಮುದ್ರಿಸಲ್ಪಡುವುದು ಇದೇ ಸ್ಥಳದಲ್ಲಿ. ಬಹಳ ದೊಡ್ಡದಾದ ಪೇಪರ್ ರೋಲ್ಗಳು ಶೀಘ್ರವಾಗಿ ಚಲಿಸುವ ಟ್ರಕ್ಕಿನ ಚಕ್ರಗಳಂತೆ ಉರುಳುತ್ತಿವೆ. ಪ್ರತಿಯೊಂದು ಪೇಪರ್ ರೋಲ್ 1,700 ಕಿಲೋಗ್ರ್ಯಾಮ್ಗಳಷ್ಟು ತೂಕದ್ದಾಗಿದೆ ಮತ್ತು 23 ಕಿಲೊಮೀಟರ್ ಉದ್ದದ ಕಾಗದವನ್ನು ಹೊಂದಿದೆ. ಒಂದು ಪೇಪರ್ ರೋಲಿನ ಕಾಗದವು ಬಿಚ್ಚಿಕೊಂಡು ಮುದ್ರಣ ಯಂತ್ರದ ಮಧ್ಯದಿಂದ ಹಾದುಹೋಗಲು 25 ನಿಮಿಷಗಳಷ್ಟೇ ಸಾಕಾಗುತ್ತದೆ. ಈ ಸಮಯದೊಳಗೆ, ಆ ಮುದ್ರಣ ಯಂತ್ರವು ಅಚ್ಚುಮಸಿಯನ್ನು ಬಳಿಯುತ್ತದೆ, ನಂತರ ಒಣಗಿಸುತ್ತದೆ ಮತ್ತು ಮುದ್ರಿಸಲ್ಪಟ್ಟ ಕಾಗದವನ್ನು ಪತ್ರಿಕೆಗಳಾಗಿ ಮಡಿಚಲು ಸಾಧ್ಯವಾಗುವಂತೆ ಅದನ್ನು ತಣ್ಣಗೆ ಮಾಡುತ್ತದೆ. ಮುದ್ರಿತವಾದ ಪತ್ರಿಕೆಗಳು ಓವರ್ಹೆಡ್ ಕನ್ವೇಅರ್ಗಳ ಮೂಲಕ, ಅವುಗಳನ್ನು ಬಾಕ್ಸುಗಳಿಗೆ ಹಾಕಿ ಸಭೆಗಳಿಗೆ
ಕಳುಹಿಸುವ ಸಿದ್ಧತೆಯನ್ನು ಮಾಡುವ ವಿಭಾಗಕ್ಕೆ ಅತಿ ವೇಗದಿಂದ ಸಾಗುತ್ತವೆ. ಇತರ ಮುದ್ರಣ ಯಂತ್ರಗಳು, ಪುಸ್ತಕಗಳ ಭಾಗಗಳಾಗಿ ಮಡಿಚಲ್ಪಡುವ ಹಾಳೆಗಳನ್ನು (ಸಿಗ್ನೆಚರ್ಸ್) ಮುದ್ರಿಸುತ್ತವೆ. ಪುಸ್ತಕಗಳ ಈ ಮುದ್ರಿತ ಹಾಳೆಗಳನ್ನು ನೆಲದಿಂದ ಛಾವಣಿಯ ವರೆಗೆ ತಲಪುವಷ್ಟು ಎತ್ತರವಿರುವ ಶೇಖರಣಾ ಸ್ಥಳದಲ್ಲಿ ಇಡಲು ತ್ವರಿತವಾಗಿ ಸಾಗಿಸಲಾಗುತ್ತದೆ. ಅವು ಬೈಂಡಿಂಗ್ ವಿಭಾಗಕ್ಕೆ ಕಳುಹಿಸಲ್ಪಡುವ ತನಕ ಅಲ್ಲಿರುತ್ತವೆ. ಈ ಇಡೀ ಕಾರ್ಯಾಚರಣೆಯು ಕಂಪ್ಯೂಟರ್ನಿಂದ ನಿರ್ದೇಶಿಸಲ್ಪಟ್ಟು ಸುಸಂಗತವಾಗಿ ನಡೆಯುತ್ತದೆ.ಮುದ್ರಣಾ ಕೊಠಡಿಯನ್ನು ಬಿಟ್ಟು ಸಂದರ್ಶಕರು ಈಗ ಬೈಂಡಿಂಗ್ ವಿಭಾಗಕ್ಕೆ ಭೇಟಿನೀಡುತ್ತಾರೆ. ಇಲ್ಲಿರುವ ಯಂತ್ರಗಳು ದಿನಕ್ಕೆ 50,000 ಪ್ರತಿಗಳ ಮೊತ್ತದಲ್ಲಿ ಗಟ್ಟಿರಟ್ಟಿನ (ಹಾರ್ಡ್ಕವರ್ನ) ಪುಸ್ತಕಗಳನ್ನು ಮತ್ತು ಡಿಲಕ್ಸ್ ಬೈಬಲ್ಗಳನ್ನು ಉತ್ಪಾದಿಸುತ್ತವೆ. ಪುಸ್ತಕದ ಮುದ್ರಿತ ಹಾಳೆಗಳನ್ನು ಸರಿಯಾದ ಅನುಕ್ರಮದಲ್ಲಿ ಒಟ್ಟುಗೂಡಿಸಿ ಅಂಟಿಸಿದ ನಂತರ ಅದರ ಮೂರು ಬದಿಗಳನ್ನು ನೀಟಾಗಿ ಕತ್ತರಿಸಲಾಗುತ್ತದೆ. ಆಮೇಲೆ ಅದಕ್ಕೆ ಕವರನ್ನು ಅಂಟಿಸಲಾಗುತ್ತದೆ. ಸಿದ್ಧಗೊಂಡಿರುವ ಪುಸ್ತಕಗಳನ್ನು ರಟ್ಟಿನ ಬಾಕ್ಸ್ಗಳಲ್ಲಿ ಜೋಡಿಸಿಡಲಾಗುತ್ತದೆ. ಈ ಬಾಕ್ಸ್ಗಳಿಗೆ ಯಂತ್ರಗಳೇ ಮುದ್ರೆಹಾಕಿ, ಲೇಬಲ್ ಅಂಟಿಸಿ, ನಂತರ ಒಯ್ಯಬಹುದಾದ ಹಲಗೆಯ (ಪ್ಯಾಲಟ್) ಮೇಲೆ ಇಡುತ್ತದೆ. ಇದಕ್ಕೆ ಕೂಡಿಕೆಯಾಗಿ, ಕಾಗದದ ಹೊದಿಕೆಯುಳ್ಳ (ಸಾಫ್ಟ್ಕವರ್) ಪುಸ್ತಕಗಳನ್ನು ತಯಾರಿಸುವ ವಿಭಾಗವು ದಿನಕ್ಕೆ 1,00,000ದಷ್ಟು ಪುಸ್ತಕಗಳನ್ನು ಸಿದ್ಧಪಡಿಸಿ ಪ್ಯಾಕ್ಮಾಡುತ್ತದೆ. ಇದೂ ಯಂತ್ರಸಜ್ಜಿತ ವಿಭಾಗವಾಗಿದೆ. ಬೈಬಲ್ ಸಾಹಿತ್ಯಗಳನ್ನು ತಯಾರಿಸುವ ಸಲುವಾಗಿ ಅಸಂಖ್ಯಾತ ಯಂತ್ರಗಳು—ಮೋಟರ್ಗಳು, ಕನ್ವೇಅರ್ಗಳು, ಗೇರುಗಳು, ಚಕ್ರಗಳು ಮತ್ತು ಬೆಲ್ಟ್ಗಳು—ದಿಗ್ಭ್ರಮೆಗೊಳಿಸುವ ವೇಗದಲ್ಲಿ ಚಲಿಸುತ್ತಿರುತ್ತವೆ.
ಸುನಿರ್ಮಿತ ಗಡಿಯಾರದಂತೆ ಕಾರ್ಯವೆಸಗುತ್ತಾ ಅತ್ಯಂತ ವೇಗವಾಗಿ ಚಲಿಸುವ ಮುದ್ರಣಾಲಯದಲ್ಲಿರುವ ಈ ಅತ್ಯಾಧುನಿಕ ಯಂತ್ರಗಳು ಆಧುನಿಕ ತಂತ್ರಜ್ಞಾನದ ಒಂದು ಅದ್ಭುತವಾಗಿದೆ. ನಾವು ಮುಂದಕ್ಕೆ ನೋಡಲಿರುವಂತೆ ದೇವಜನರ ಪ್ರೀತಿ, ನಂಬಿಕೆ ಮತ್ತು ವಿಧೇಯತೆಗೆ ಇದೊಂದು ಪುರಾವೆಯಾಗಿಯೂ ಇದೆ. ಆದರೆ, ಮುದ್ರಣ ಕಾರ್ಯಾಚರಣೆಗಳನ್ನು ನ್ಯೂ ಯಾರ್ಕ್ನ ಬ್ರೂಕ್ಲಿನ್ನಿಂದ ವಾಲ್ಕಿಲ್ಗೆ ಸ್ಥಳಾಂತರಿಸಲು ಕಾರಣವೇನು?
ಮುಖ್ಯ ಕಾರಣವು, ಮುದ್ರಣ ಮತ್ತು ಶಿಪ್ಪಿಂಗ್ ಕಾರ್ಯಾಚರಣೆಗಳನ್ನು ಒಂದೇ ಸ್ಥಳದಲ್ಲಿ ನಡೆಸುವ ಮೂಲಕ ಈ ಕೆಲಸವನ್ನು ಸರಳೀಕರಿಸುವುದೇ ಆಗಿತ್ತು. ಅನೇಕ ವರುಷಗಳಿಂದ, ಪುಸ್ತಕಗಳನ್ನು ಬ್ರೂಕ್ಲಿನ್ನಲ್ಲಿ ಮತ್ತು ಪತ್ರಿಕೆಗಳನ್ನು ವಾಲ್ಕಿಲ್ನಲ್ಲಿ ಮುದ್ರಿಸಿ ರವಾನಿಸಲಾಗುತ್ತಿತ್ತು. ಈ ಎರಡೂ ಕಾರ್ಯಾಚರಣೆಗಳನ್ನು ಒಟ್ಟುಗೂಡಿಸುವ ಮೂಲಕ ಸಿಬ್ಬಂದಿಯನ್ನು ಕಡಿಮೆಗೊಳಿಸಲು ಮತ್ತು ದೇವರ ಸೇವೆಗಾಗಿ ಅರ್ಪಿಸಲ್ಪಟ್ಟಿರುವ ಕಾಣಿಕೆಗಳ ಉತ್ತಮ ಉಪಯೋಗವನ್ನು ಮಾಡಲು ಸಾಧ್ಯವಾಗುವುದು. ಮಾತ್ರವಲ್ಲದೆ, ಬ್ರೂಕ್ಲಿನ್ನಲ್ಲಿದ್ದ ಮುದ್ರಣ ಯಂತ್ರಗಳು ಹಳೆಯದಾದ ಕಾರಣ ಜರ್ಮನಿಯಿಂದ ಎರಡು ಹೊಸ ‘ಮ್ಯಾನ್ ರೋಲೆಂಡ್ ಲಿಥೊಮನ್’ ಮುದ್ರಣ ಯಂತ್ರಗಳನ್ನು ತರಿಸಲಾಯಿತು. ಈ ಯಂತ್ರಗಳು ಬಹಳ ದೊಡ್ಡದಾಗಿದ್ದ ಕಾರಣ ಬ್ರೂಕ್ಲಿನ್ನ ಮುದ್ರಣಾಲಯದಲ್ಲಿ ಇವನ್ನು ಇಡಸಾಧ್ಯವಿರಲಿಲ್ಲ.
ಯೆಹೋವನು ಕೆಲಸವನ್ನು ಬೆಂಬಲಿಸುತ್ತಾನೆ
ಯಾವಾಗಲೂ ಮುದ್ರಣಕಾರ್ಯದ ಉದ್ದೇಶವು ದೇವರ ರಾಜ್ಯದ ಸುವಾರ್ತೆಯನ್ನು ಹಬ್ಬಿಸುವುದೇ ಆಗಿರುತ್ತದೆ. ಯೆಹೋವನ ಆಶೀರ್ವಾದವು ಈ ಕೆಲಸದ ಮೇಲಿತ್ತು ಎಂಬುದು ಆರಂಭದಿಂದಲೇ ಸುವ್ಯಕ್ತವಾಗಿದೆ. 1879ರಿಂದ 1922ರ ತನಕ, ಪುಸ್ತಕಗಳನ್ನು ವ್ಯಾಪಾರಿ ಮುದ್ರಣಾ ಸಂಸ್ಥೆಗಳು ಮುದ್ರಿಸುತ್ತಿದ್ದವು. 1922ರಲ್ಲಿ, ಬ್ರೂಕ್ಲಿನ್ನ 18 ಕಾನ್ಕರ್ಡ್ ಸ್ಟ್ರೀಟ್ನಲ್ಲಿದ್ದ ಆರು ಮಹಡಿಗಳ ಕಟ್ಟಡವನ್ನು ಬಾಡಿಗೆಗೆ ತೆಗೆದುಕೊಳ್ಳಲಾಯಿತು ಮತ್ತು ಪುಸ್ತಕಗಳನ್ನು ಮುದ್ರಿಸಲು ಬೇಕಾಗಿರುವ ಸಲಕರಣೆಗಳನ್ನು ಖರೀದಿಸಲಾಯಿತು. ಆ ಸಮಯದಲ್ಲಿ, ಸಹೋದರರಿಂದ ಈ ಕೆಲಸವನ್ನು ನಿರ್ವಹಿಸಲು ಸಾಧ್ಯವೊ ಎಂದು ಅನೇಕರು ಸಂಶಯಿಸಿದರು.
ಈ ರೀತಿಯಾಗಿ ಸಂಶಯಿಸಿದವರಲ್ಲಿ ಒಬ್ಬರು, ನಮ್ಮ ಪುಸ್ತಕಗಳಲ್ಲಿ ಹೆಚ್ಚಿನವುಗಳನ್ನು ನಮಗಾಗಿ ಮುದ್ರಿಸುತ್ತಿದ್ದ ಕಂಪೆನಿಯ ಅಧ್ಯಕ್ಷರಾಗಿದ್ದರು. ಕಾನ್ಕರ್ಡ್ ಸ್ಟ್ರೀಟನ್ನು ಭೇಟಿಮಾಡಿದಾಗ ಅವರು ಹೇಳಿದ್ದು: “ನಿಮ್ಮ ಬಳಿ ಅತ್ಯುತ್ತಮ ದರ್ಜೆಯ ಮುದ್ರಣಾಲಯವಿದೆ, ಆದರೆ ಇದನ್ನು ನಡೆಸುವುದು ಹೇಗೆಂದು ನಿಮ್ಮಲ್ಲಿ ಯಾರಿಗೂ ಗೊತ್ತಿಲ್ಲ. ಆರು ತಿಂಗಳುಗಳೊಳಗೆ ಇಡೀ ಮುದ್ರಣಾಲಯವು ಕೆಟ್ಟುಹೋದ ಯಂತ್ರಗಳ ಕೊಂಪೆಯಾಗಲಿದೆ; ಆಗ, ನಿಮ್ಮ ಮುದ್ರಣವನ್ನು ಮಾಡಲು ಸೂಕ್ತರಾದ ಜನರು ಈಗಾಗಲೇ ಅದನ್ನು ಮಾಡುತ್ತಿರುವ ಮತ್ತು ಮುದ್ರಣವೇ ತಮ್ಮ ವ್ಯಾಪಾರವಾಗಿರುವಂಥ ವೃತ್ತಿಪರ ಮುದ್ರಣಕಾರರೇ ಎಂಬುದನ್ನು ನೀವು ಅರಿತುಕೊಳ್ಳುವಿರಿ.”
ಆ ಸಮಯದಲ್ಲಿ ಮುದ್ರಣಾಲಯದ ಮೇಲ್ವಿಚಾರಕರಾಗಿದ್ದ ರೋಬರ್ಟ್ ಜೆ. ಮಾರ್ಟಿನ್ ಹೇಳಿದ್ದು: “ಅವರ ಮಾತು ತರ್ಕಬದ್ಧವಾಗಿ ತೋರಿತು, ಆದರೆ ಅವರು ಕರ್ತನನ್ನು ಮರೆತಿದ್ದರು; ಆತನು ಯಾವಾಗಲೂ ನಮ್ಮೊಂದಿಗಿದ್ದನು. . . . ಬರೀ ಸ್ವಲ್ಪ ಸಮಯದಲ್ಲೇ ನಾವು ಪುಸ್ತಕಗಳನ್ನು ತಯಾರಿಸಲಾರಂಭಿಸಿದೆವು.” ಮುಂದಿನ 80 ವರುಷಗಳಲ್ಲಿ, ಯೆಹೋವನ ಸಾಕ್ಷಿಗಳು ನೂರಾರು ಕೋಟಿ ಸಾಹಿತ್ಯಗಳನ್ನು ತಮ್ಮ ಸ್ವಂತ ಮುದ್ರಣ ಯಂತ್ರಗಳಲ್ಲಿ ಮುದ್ರಿಸಿದರು.
ಅನಂತರ 2002ರ ಅಕ್ಟೋಬರ್ 5ರಂದು ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಪೆನ್ಸಿಲ್ವೇನಿಯದ ವಾರ್ಷಿಕ ಕೂಟದಲ್ಲಿ, ಯುನೈಟೆಡ್ ಸ್ಟೇಟ್ಸ್ ಬ್ರಾಂಚಿನ ಮುದ್ರಣ ಕಾರ್ಯಾಚರಣೆಗಳನ್ನು ವಾಲ್ಕಿಲ್ಗೆ ಸ್ಥಳಾಂತರಿಸಲು ಆಡಳಿತ ಮಂಡಲಿಯು ಒಪ್ಪಿಗೆಯನ್ನು ನೀಡಿದೆ ಎಂದು ಘೋಷಿಸಲಾಯಿತು. ಎರಡು ಹೊಸ ಮುದ್ರಣ ಯಂತ್ರಗಳನ್ನು ಆರ್ಡರ್ ಮಾಡಲಾಗಿತ್ತು
ಮತ್ತು ಅವು 2004ರ ಫೆಬ್ರವರಿ ತಿಂಗಳಿನಲ್ಲಿ ಬರಲಿದ್ದವು. ಹೊಸ ಮುದ್ರಣ ಯಂತ್ರಗಳನ್ನು ಪಡೆದುಕೊಳ್ಳಲಿಕ್ಕಾಗಿ ಸಹೋದರರು ಕೇವಲ 15 ತಿಂಗಳುಗಳೊಳಗೆ ಮುದ್ರಣಾಲಯವನ್ನು ವಿನ್ಯಾಸಿಸಿ ವಿಸ್ತರಿಸಬೇಕಿತ್ತು. ಅನಂತರ, ಮುಂದಿನ ಒಂಬತ್ತು ತಿಂಗಳಿನೊಳಗಾಗಿ ಹೊಸ ಬೈಂಡಿಂಗ್ ವಿಭಾಗವನ್ನು ಮತ್ತು ಶಿಪ್ಪಿಂಗ್ ಕಾರ್ಯಾಚರಣೆಯ ವಿಭಾಗವನ್ನು ಸ್ಥಾಪಿಸಬೇಕಿತ್ತು. ಕಾಲತಖ್ತೆಯನ್ನು ತಿಳಿದುಕೊಂಡ ಬಳಿಕ ಕೆಲವರಿಗೆ ಸಂಶಯವಾಗಿದ್ದಿರಬಹುದು, ಇದು ಅಸಾಧ್ಯ ಸಂಗತಿಯೆಂದು ಅವರು ನೆನಸಿದ್ದಿರಬಹುದು. ಹಾಗಿದ್ದರೂ, ಯೆಹೋವನ ಆಶೀರ್ವಾದದಿಂದ ಇದನ್ನು ಸಾಧಿಸಲು ಸಾಧ್ಯವೆಂದು ಸಹೋದರರಿಗೆ ತಿಳಿದಿತ್ತು.“ಸಂತೋಷಭರಿತ ಸಹಕಾರ ಮನೋಭಾವ”
ಯೆಹೋವನ ಜನರು ತಾವಾಗಿಯೇ ಸೇರಿಕೊಳ್ಳುವರು ಎಂಬುದನ್ನು ತಿಳಿದವರಾಗಿ ಸಹೋದರರು ಯೋಜನೆಯನ್ನು ಆರಂಭಿಸಿದರು. (ಕೀರ್ತನೆ 110:3) ಇದು ಬೃಹತ್ ಯೋಜನೆಯಾಗಿದ್ದ ಕಾರಣ ಬೆತೆಲ್ ನಿರ್ಮಾಣ ವಿಭಾಗಗಳಲ್ಲಿ ಇರುವ ಕೆಲಸದವರಿಗಿಂತ ಹೆಚ್ಚಿನ ಜನರ ಅಗತ್ಯವಿತ್ತು. ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡದಿಂದ, ನಿರ್ಮಾಣ ಕುಶಲತೆಗಳಿದ್ದ 1,000ಕ್ಕಿಂತಲೂ ಹೆಚ್ಚಿನ ಸಹೋದರ ಸಹೋದರಿಯರು ಒಂದು ವಾರದಿಂದ ಹಿಡಿದು ಮೂರು ತಿಂಗಳಿನ ತನಕ ತಾತ್ಕಾಲಿಕ ಸ್ವಯಂಸೇವಾ ಕಾರ್ಯಕ್ರಮದ ಭಾಗವಾಗಿ ತಮ್ಮನ್ನು ಸ್ವಯಂಸೇವಕರಾಗಿ ನೀಡಿಕೊಂಡರು. ಮಾತ್ರವಲ್ಲದೆ, ಈ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಅಂತಾರಾಷ್ಟ್ರೀಯ ಸೇವಕ ಮತ್ತು ಸ್ವಯಂಸೇವಕ ಕಾರ್ಯಕ್ರಮದಿಂದ ಇತರರನ್ನು ಆಮಂತ್ರಿಸಲಾಯಿತು. ರೀಜನಲ್ ಬಿಲ್ಡಿಂಗ್ ಕಮಿಟಿಗಳು ಸಹ ಬಹಳಷ್ಟು ಸಹಾಯವನ್ನು ನೀಡಿದವು.
ಅನೇಕರಿಗೆ, ವಾಲ್ಕಿಲ್ ಯೋಜನೆಯಲ್ಲಿ ಸ್ವಯಂಸೇವಕರಾಗಿ ಕೆಲಸಮಾಡಲು, ಪ್ರಯಾಣಕ್ಕಾಗಿ ಬಹಳಷ್ಟು ಹಣವನ್ನು ವಿನಿಯೋಗಿಸಬೇಕಾಯಿತು ಮತ್ತು ಐಹಿಕ ಉದ್ಯೋಗದಿಂದ ಅನೇಕ ದಿನಗಳ ರಜೆಯನ್ನು ತೆಗೆದುಕೊಳ್ಳಬೇಕಾಯಿತು. ಹಾಗಿದ್ದರೂ, ಅವರು ಈ ತ್ಯಾಗಗಳನ್ನು ಬಹಳ ಸಂತೋಷದಿಂದ ಮಾಡಿದರು. ಈ ಹೆಚ್ಚಿನ ಸ್ವಯಂಸೇವಕರಿಗೆ ಬೇಕಾಗಿರುವ ವಸತಿ ಸೌಲಭ್ಯ ಮತ್ತು ಆಹಾರವನ್ನು ಒದಗಿಸುವ ಸುಯೋಗ ಬೆತೆಲ್ ಕುಟುಂಬದ ಸದಸ್ಯರಿಗೆ ದೊರಕಿತು. ಈ ರೀತಿಯಲ್ಲಿ ಅವರು ಸಹ ಈ ಯೋಜನೆಯಲ್ಲಿ ಬೆಂಬಲವನ್ನು ನೀಡಿದರು. ಬ್ರೂಕ್ಲಿನ್, ಪ್ಯಾಟರ್ಸನ್ ಮತ್ತು ವಾಲ್ಕಿಲ್ನ ಸುಮಾರು 535ಕ್ಕಿಂತಲೂ ಹೆಚ್ಚಿನ ಬೆತೆಲ್ ಕುಟುಂಬ ಸದಸ್ಯರು ತಮ್ಮ ವಾರದ ನೇಮಕಗಳಲ್ಲದೆ ಶನಿವಾರಗಳಂದು ಈ ಯೋಜನೆಯಲ್ಲಿ ಕೆಲಸಮಾಡಲು ತಮ್ಮನ್ನು ನೀಡಿಕೊಂಡರು. ಈ ಚಾರಿತ್ರಿಕ ಪ್ರಯತ್ನಕ್ಕೆ ದೇವಜನರು ನೀಡಿದ ಆಶ್ಚರ್ಯಕರವಾದ ಬೆಂಬಲವು ಸಾಧ್ಯವಾದದ್ದು, ಈ ಯೋಜನೆಯ ಹಿಂದೆ ಯೆಹೋವನ ಬೆಂಬಲವಿದ್ದದ್ದರಿಂದಲೇ.
ಇತರರು ಈ ಯೋಜನೆಗೆ ಆರ್ಥಿಕ ಬೆಂಬಲವನ್ನು ನೀಡಿದರು. ಉದಾಹರಣೆಗೆ, ಒಂಬತ್ತು ವರುಷ ಪ್ರಾಯದ ಎಬ್ಈಯಿಂದ ಸಹೋದರರು ಒಂದು ಪತ್ರವನ್ನು ಪಡೆದರು. ಅವಳು ಬರೆದದ್ದು: “ನೀವು ಮಾಡುತ್ತಿರುವ ಎಲ್ಲ ಕೆಲಸಗಳಿಗಾಗಿ, ಎಲ್ಲ ಅದ್ಭುತಕರವಾದ ಪುಸ್ತಕಗಳನ್ನು ತಯಾರಿಸುತ್ತಿರುವುದಕ್ಕಾಗಿ ನಾನು ಆಭಾರಿಯಾಗಿದ್ದೇನೆ. ನಾನು ಬೇಗನೆ ನಿಮಗೆ ಭೇಟಿನೀಡಲಿದ್ದೇನೆ. ನಾವು ಮುಂದಿನ ವರುಷ ಹೋಗೋಣ ಎಂದು ಅಪ್ಪ ಹೇಳಿದ್ದಾರೆ! ನಾನು ಬ್ಯಾಡ್ಜ್ ಧರಿಸಿ ಬರುತ್ತೇನೆ, ಆಗ ನಿಮಗೆ ನನ್ನ ಗುರುತು ಹಿಡಿಯಲು ಸಾಧ್ಯವಾಗುವುದು. ಹೊಸ ಮುದ್ರಣ ಯಂತ್ರಕ್ಕಾಗಿ 20 ಡಾಲರುಗಳನ್ನು ಕಳುಹಿಸುತ್ತಿದ್ದೇನೆ. ಇದು ನನ್ನ ಪಾಕೆಟ್ ಮನಿ, ಆದರೆ ಇದನ್ನು ನಾನು ಸಹೋದರರಾದ ನಿಮಗೆ ಕೊಡಲು ಇಷ್ಟಪಡುತ್ತೇನೆ.”
ಒಬ್ಬ ಸಹೋದರಿಯು ಹೀಗೆ ಬರೆದಳು: “ನನ್ನ ಬಡ ಕೈಗಳಿಂದ ನಾನು ಕ್ರೋಷಾದಲ್ಲಿ ಹೆಣೆದ ಟೋಪಿಗಳನ್ನು ದಯಮಾಡಿ ಉಡುಗೊರೆಯಾಗಿ ಸ್ವೀಕರಿಸಿ. ಈ ಟೋಪಿಗಳನ್ನು ವಾಲ್ಕಿಲ್ ಕಾರ್ಯಯೋಜನೆಯಲ್ಲಿ ಕೆಲಸಮಾಡುತ್ತಿರುವವರಿಗೆ ಕೊಡಬೇಕೆಂದು ನಾನು ಬಯಸುತ್ತೇನೆ. ಅಲ್ಲಿ ಈಗ ತೀವ್ರ ಚಳಿಗಾಲ ಎಂದು ಒಂದು ಆಲ್ಮನ್ಯಾಕ್ನಿಂದ [ಕಾಲಗಳನ್ನು ತಿಳಿಸುವ ಕ್ಯಾಲೆಂಡರ್ನಿಂದ] ತಿಳಿದುಬಂತು. ಅದರಲ್ಲಿದ್ದ ವಿವರ ಸರಿಯೊ ತಪ್ಪೊ ನನಗೆ ತಿಳಿಯದು. ಆದರೆ, ವಾಲ್ಕಿಲ್ನಲ್ಲಿ ಹೆಚ್ಚಿನ ಕೆಲಸ ಹೊರಗೆ ನಡೆಯುತ್ತದೆ ಎಂದು ನನಗೆ ತಿಳಿದಿದೆ. ಆದುದರಿಂದ ನನ್ನ ಸಹೋದರ ಸಹೋದರಿಯರು ತಮ್ಮ ತಲೆಯನ್ನು ಬೆಚ್ಚಗೆ ಇಟ್ಟುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಸಹೋದರರು ಬಯಸುವ ಬೇರೆ ಯಾವುದೇ ಕುಶಲತೆಗಳು ನನ್ನಲ್ಲಿಲ್ಲ, ಆದರೆ ನಾನು ಕೇವಲ ಕ್ರೋಷಾವನ್ನು ಹೆಣೆಯಬಲ್ಲೆ. ಆದುದರಿಂದ ಈ ಕುಶಲತೆಯನ್ನು ಉಪಯೋಗಿಸುತ್ತಾ ನಾನು ಏನನ್ನು ಮಾಡಬಲ್ಲೆನೊ ಅದನ್ನು
ಮಾಡಲು ನಿರ್ಧರಿಸಿದೆ.” ಆ ಪತ್ರದೊಂದಿಗೆ, ಕ್ರೋಷಾದಲ್ಲಿ ಹೆಣೆಯಲ್ಪಟ್ಟಿದ್ದ 106 ಟೋಪಿಗಳಿದ್ದವು!ಮುದ್ರಣಾಲಯದ ಕೆಲಸವು ಕಾಲತಖ್ತೆಗೆ ಅನುಗುಣವಾಗಿ ಮುಗಿಯಿತು. ಮುದ್ರಣಾಲಯದ ಮೇಲ್ವಿಚಾರಕರಾದ ಜಾನ್ ಲಾರ್ಸನ್ರವರು ಹೀಗೆ ಹೇಳಿದರು: “ಅಲ್ಲಿ ಎಂಥ ಸಂತೋಷಭರಿತ ಸಹಕಾರ ಮನೋಭಾವವಿತ್ತು. ಆ ಕೆಲಸವನ್ನು ಯೆಹೋವನು ಆಶೀರ್ವದಿಸುತ್ತಿದ್ದನೆಂದು ಯಾರು ತಾನೇ ಅಲ್ಲಗಳೆಯಬಲ್ಲರು? ಯೋಜನೆಯು ಬಹಳ ತೀವ್ರಗತಿಯಲ್ಲಿ ಮುಂದುವರಿಯಿತು. 2003ರ ಮೇ ತಿಂಗಳಿನಲ್ಲಿ ಮಣ್ಣಿನಲ್ಲಿ ನಿಂತುಕೊಂಡು ಸಹೋದರರು ಕಟ್ಟಡದ ತಳಪಾಯ ಹಾಕುತ್ತಿರುವುದನ್ನು ನಾನು ವೀಕ್ಷಿಸುತ್ತಿರುವುದು ನನಗೆ ನೆನಪಿದೆ. ಅಂದಿನಿಂದ ಒಂದು ವರುಷಕ್ಕಿಂತಲೂ ಕಡಿಮೆ ಸಮಯದೊಳಗೆ, ನಾನು ಅದೇ ಸ್ಥಳದಲ್ಲಿ ನಿಂತು ಒಂದು ಮುದ್ರಣ ಯಂತ್ರವು ಕೆಲಸಮಾಡುತ್ತಿರುವುದನ್ನು ನೋಡಿದೆ.”
ಸಮರ್ಪಣೆಯ ಕಾರ್ಯಕ್ರಮ
ಹೊಸ ಮುದ್ರಣಾಲಯವನ್ನು ಮತ್ತು ಅದರೊಂದಿಗೆ ಮೂರು ವಸತಿ ಕಟ್ಟಡಗಳನ್ನು ಸಮರ್ಪಿಸುವ ಕಾರ್ಯಕ್ರಮವು 2005, ಮೇ 16ರ ಸೋಮವಾರದಂದು ವಾಲ್ಕಿಲ್ನಲ್ಲಿ ನಡೆಯಿತು. ಪ್ಯಾಟರ್ಸನ್ ಮತ್ತು ಬ್ರೂಕ್ಲಿನ್ನಲ್ಲಿರುವ ಬೆತೆಲ್ ಸಂಕೀರ್ಣಗಳು ಹಾಗೂ ಕೆನಡ ಬೆತೆಲ್ ಸಂಕೀರ್ಣವು ವಿಡಿಯೊಗಳ ಮೂಲಕ ಜೋಡಿಸಲ್ಪಟ್ಟಿತ್ತು. ಒಟ್ಟಿನಲ್ಲಿ 6,049 ಮಂದಿ ಈ ಕಾರ್ಯಕ್ರಮದಲ್ಲಿ ಆನಂದಿಸಿದರು. ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾದ ಥಿಯೊಡರ್ ಜಾರಸ್ರವರು ಕಾರ್ಯಕ್ರಮದ ಅಧ್ಯಕ್ಷರಾಗಿ ಸೇವೆಸಲ್ಲಿಸಿದರು. ಅವರು, ಮುದ್ರಣ ಕೆಲಸದ ಇತಿಹಾಸವನ್ನು ಸಂಕ್ಷಿಪ್ತವಾಗಿ ತಿಳಿಸಿದರು. ಇಂಟರ್ವ್ಯೂಗಳ ಮತ್ತು ವಿಡಿಯೊ ನಿರೂಪಣೆಗಳ ಮೂಲಕ ಬ್ರಾಂಚ್ ಕಮಿಟಿ ಸದಸ್ಯರಾದ ಜಾನ್ ಲಾರ್ಸನ್ ಮತ್ತು ಜಾನ್ ಕಿಕಾಟ್ರವರು ಯುನೈಟೆಡ್ ಸ್ಟೇಟ್ಸ್ನಲ್ಲಿನ ನಿರ್ಮಾಣ ಯೋಜನೆ ಮತ್ತು ಮುದ್ರಣ ಕಾರ್ಯಾಚರಣೆ ಇವೆರಡರ ಇತಿಹಾಸವನ್ನು ಪುನರ್ವಿಮರ್ಶಿಸಿದರು. ಆಡಳಿತ ಮಂಡಲಿಯ ಸದಸ್ಯರಾದ ಜಾನ್ ಬಾರ್ ಸಮಾಪ್ತಿಯ ಭಾಷಣವನ್ನು ನೀಡಿ, ಹೊಸ ಮುದ್ರಣಾಲಯ ಮತ್ತು ಮೂರು ವಸತಿ ಕಟ್ಟಡಗಳನ್ನು ಯೆಹೋವ ದೇವರಿಗೆ ಸಮರ್ಪಿಸಿದರು.
ಅದರ ನಂತರದ ವಾರದಲ್ಲಿ, ಪ್ಯಾಟರ್ಸನ್ ಮತ್ತು ಬ್ರೂಕ್ಲಿನ್ ಬೆತೆಲಿನಲ್ಲಿ ಸೇವಮಾಡುತ್ತಿರುವವರಿಗೆ ಈ ಹೊಸ ಸೌಕರ್ಯಗಳಿಗೆ ಭೇಟಿನೀಡುವ ಸಂದರ್ಭವನ್ನು ನೀಡಲಾಯಿತು. ಆ ಸಮಯದಲ್ಲಿ ಒಟ್ಟು 5,920 ಮಂದಿ ಆ ಸ್ಥಳಕ್ಕೆ ಭೇಟಿನೀಡಿದರು.
ಮುದ್ರಣಾಲಯವನ್ನು ನಾವು ಹೇಗೆ ವೀಕ್ಷಿಸುತ್ತೇವೆ?
ಮುದ್ರಣಾಲಯವು ಮನತಟ್ಟುವಂಥದ್ದಾಗಿರಬಹುದಾದರೂ ಅದು ಪ್ರಾಮುಖ್ಯವಾಗಿರುವುದು ಅಲ್ಲಿರುವ ಯಂತ್ರಗಳಿಂದಾಗಿ ಅಲ್ಲ, ಬದಲಾಗಿ ಜನರ ಜೀವನದ ಮೇಲೆ ಬೀರುವ ಪ್ರಭಾವದಿಂದಾಗಿ ಪ್ರಾಮುಖ್ಯವಾಗಿದೆ ಎಂದು ಸಮರ್ಪಣೆಯ ಭಾಷಣದಲ್ಲಿ ಸಹೋದರ ಬಾರ್ ತಮಗೆ ಕಿವಿಗೊಡುತ್ತಿದ್ದವರಿಗೆ ಜ್ಞಾಪಕ
ಹುಟ್ಟಿಸಿದರು. ನಾವು ಮುದ್ರಿಸುವ ಸಾಹಿತ್ಯವು ಜನರ ಜೀವನದ ಮೇಲೆ ಅಪಾರವಾದ ಪ್ರಭಾವವನ್ನು ಬೀರುತ್ತದೆ.ಪ್ರತಿಯೊಂದು ಹೊಸ ಮುದ್ರಣ ಯಂತ್ರವು, ಒಂದು ತಾಸಿಗಿಂತ ಸ್ವಲ್ಪ ಹೆಚ್ಚು ಸಮಯದೊಳಗೆ ಹತ್ತು ಲಕ್ಷ ಟ್ರ್ಯಾಕ್ಟ್ಗಳನ್ನು ಮುದ್ರಿಸಶಕ್ತವಾಗಿದೆ! ಹಾಗಿದ್ದರೂ, ಬರೀ ಒಂದು ಟ್ರ್ಯಾಕ್ಟ್ ಒಬ್ಬ ವ್ಯಕ್ತಿಯ ಜೀವನದ ಮೇಲೆ ವ್ಯಾಪಕ ಪರಿಣಾಮವನ್ನು ಬೀರಬಲ್ಲದು. ಉದಾಹರಣೆಗೆ, 1921ರಲ್ಲಿ ದಕ್ಷಿಣ ಆಫ್ರಿಕದಲ್ಲಿನ ರೈಲುಮಾರ್ಗದ ದುರಸ್ತಿಯನ್ನು ಮಾಡುವ ಪುರುಷರ ತಂಡವು ಹಳಿಯುದ್ದಕ್ಕೂ ಅವಿರತವಾಗಿ ಕೆಲಸಮಾಡುತ್ತಾ ಇತ್ತು. ಅವರಲ್ಲಿ ಒಬ್ಬನಾದ ಕ್ರಿಸ್ಟೀಆನ್, ರೈಲುಕಂಬಿಯ ಅಡಿಯಲ್ಲಿ ತುರುಕಿಕೊಂಡಿರುವ ಕಾಗದದ ಒಂದು ತುಂಡನ್ನು ಗಮನಿಸಿದನು. ಅದು ನಮ್ಮ ಟ್ರ್ಯಾಕ್ಟ್ಗಳಲ್ಲಿ ಒಂದಾಗಿತ್ತು. ಕ್ರಿಸ್ಟೀಆನ್ ಬಹಳ ಆಸಕ್ತಿಯಿಂದ ಅದನ್ನು ಓದಿದ ನಂತರ ಓಡಿಹೋಗಿ, “ಇವತ್ತು ನನಗೆ ಸತ್ಯ ಸಿಕ್ಕಿತು!” ಎಂದು ತನ್ನ ಅಳಿಯನಿಗೆ ಭಾವೋದ್ರೇಕಿತನಾಗಿ ತಿಳಿಸಿದನು. ಆಮೇಲೆ ಅವರು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲಿಕ್ಕಾಗಿ ಪತ್ರಬರೆದರು. ದಕ್ಷಿಣ ಆಫ್ರಿಕದ ಬ್ರಾಂಚ್ ಹೆಚ್ಚಿನ ಬೈಬಲ್ ಸಾಹಿತ್ಯವನ್ನು ಅವರಿಗೆ ಕಳುಹಿಸಿತು. ಆ ಇಬ್ಬರು ಪುರುಷರು ಅಧ್ಯಯನಮಾಡಿ, ದೀಕ್ಷಾಸ್ನಾನ ಪಡೆದುಕೊಂಡರು ಮತ್ತು ಬೈಬಲ್ ಸತ್ಯವನ್ನು ಇತರರೊಂದಿಗೆ ಹಂಚತೊಡಗಿದರು. ಇದರ ಪರಿಣಾಮವಾಗಿ ಅನೇಕರು ಸತ್ಯವನ್ನು ಸ್ವೀಕರಿಸಿದರು. 1990ರ ಆರಂಭದೊಳಗಾಗಿ ಅವರ ಸಂತತಿಯವರಲ್ಲಿ ನೂರಕ್ಕಿಂತಲೂ ಹೆಚ್ಚು ಮಂದಿ ಯೆಹೋವನ ಸಾಕ್ಷಿಗಳಾಗಿದ್ದರು. ಇದೆಲ್ಲವೂ ಸಾಧ್ಯವಾದದ್ದು, ಒಬ್ಬ ಮನುಷ್ಯನು ರೈಲುಮಾರ್ಗದಲ್ಲಿನ ಕಂಬಿಯಡಿಯಲ್ಲಿ ಕಂಡುಕೊಂಡ ಬರೀ ಒಂದು ಟ್ರ್ಯಾಕ್ಟ್ನಿಂದಾಗಿಯೇ!
ನಾವು ಮುದ್ರಿಸುವ ಸಾಹಿತ್ಯವು ಜನರನ್ನು ಸತ್ಯಕ್ಕೆ ತರುತ್ತದೆ, ಸತ್ಯದಲ್ಲಿ ಇರಿಸುತ್ತದೆ, ಹೆಚ್ಚಿನ ಹುರುಪನ್ನು ಅವರಲ್ಲಿ ಮೂಡಿಸುತ್ತದೆ ಮತ್ತು ಸಹೋದರತ್ವವನ್ನು ಐಕ್ಯಗೊಳಿಸುತ್ತದೆ ಎಂದು ಸಹೋದರ ಬಾರ್ ತಿಳಿಸಿದರು. ಎಲ್ಲಕ್ಕಿಂತಲೂ ಹೆಚ್ಚಾಗಿ, ನಾವೆಲ್ಲರೂ ವಿತರಿಸುವ ಈ ಸಾಹಿತ್ಯವು ನಮ್ಮ ದೇವರಾದ ಯೆಹೋವನಿಗೆ ಘನತೆಯನ್ನು ತರುತ್ತದೆ!
ಮುದ್ರಣಾಲಯವನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ?
ಮುದ್ರಣಾಲಯವನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ ಎಂಬುದನ್ನು ಸಹ ಪರಿಗಣಿಸುವಂತೆ ಸಹೋದರ ಬಾರ್ ಸಭಿಕರನ್ನು ಪ್ರೋತ್ಸಾಹಿಸಿದರು. ಯೆಹೋವನು ಖಂಡಿತವಾಗಿಯೂ ಇದರ ಮೇಲೆ ಅವಲಂಬಿಸಿರುವುದಿಲ್ಲ. ಕಲ್ಲುಗಳು ಸಹ ಸುವಾರ್ತೆಯನ್ನು ಸಾರುವಂತೆ ಆತನು ಮಾಡಬಲ್ಲನು. (ಲೂಕ 19:40) ಮಾತ್ರವಲ್ಲ ಯಂತ್ರದ ಜಟಿಲತೆ, ಗಾತ್ರ, ವೇಗ ಇಲ್ಲವೆ ಸಾಮರ್ಥ್ಯದಿಂದಾಗಿ ಆತನು ವಿಸ್ಮಿತನಾಗುವುದಿಲ್ಲ. ಆತನು ವಿಶ್ವವನ್ನೇ ಸೃಷ್ಟಿಸಿದವನು! (ಕೀರ್ತನೆ 147:10, 11) ಸಾಹಿತ್ಯವನ್ನು ತಯಾರಿಸುವ ವಿಷಯದಲ್ಲಿ, ಮಾನವನು ಇನ್ನೂ ಸಿದ್ಧಮಾಡಿರದಂಥ ಇಲ್ಲವೆ ಇನ್ನೂ ಯೋಚಿಸಿರದಂಥ ಹೆಚ್ಚು ಮುಂದುವರಿದ ವಿಧಾನಗಳು ಯೆಹೋವನಿಗೆ ತಿಳಿದಿವೆ. ಹಾಗಾದರೆ, ಯೆಹೋವನು ನಿಜವಾಗಿಯೂ ಅಮೂಲ್ಯವೆಂದೆಣಿಸುವ ವಿಷಯವು ಯಾವುದು? ಈ ಮುದ್ರಣಾಲಯದಲ್ಲಿ ಯೆಹೋವನು ತನ್ನ ಜನರ ಅತ್ಯಮೂಲ್ಯ ಗುಣಗಳನ್ನು, ಅಂದರೆ ಅವರ ಪ್ರೀತಿ, ನಂಬಿಕೆ ಮತ್ತು ವಿಧೇಯತೆಯನ್ನು ನೋಡುತ್ತಾನೆ.
ಇದರಲ್ಲಿ ಪ್ರೀತಿ ಹೇಗೆ ಒಳಗೂಡಿದೆ ಎಂಬುದನ್ನು ಅರ್ಥಮಾಡಿಸಲು ಸಹೋದರ ಬಾರ್ ಒಂದು ದೃಷ್ಟಾಂತವನ್ನು ತಿಳಿಸಿದರು. ಒಂದು ಹುಡುಗಿಯು ತನ್ನ ಹೆತ್ತವರಿಗಾಗಿ ಕೇಕ್ ತಯಾರಿಸುತ್ತಾಳೆ. ಖಂಡಿತವಾಗಿಯೂ ಅವಳ ಹೆತ್ತವರಿಗೆ ಬಹಳ ಸಂತೋಷವಾಗುತ್ತದೆ. ಕೇಕಿನ ಗುಣಮಟ್ಟ ಹೇಗೆಯೇ ಇರಲಿ, ಹೆತ್ತವರನ್ನು ಸ್ಪರ್ಶಿಸುವಂಥದ್ದು ಹುಡುಗಿಯ ಉದಾರ ಕೃತ್ಯದಲ್ಲಿ ತೋರಿಬರುವ ಅವರ ಕಡೆಗಿನ ಅವಳ ಪ್ರೀತಿಯೇ ಆಗಿದೆ. ಅಂತೆಯೇ, ಯೆಹೋವನು ಈ ಮುದ್ರಣಾಲಯವನ್ನು ನೋಡುವಾಗ ಆತನು ಕಟ್ಟಡ ಮತ್ತು ಯಂತ್ರಗಳಿಗಿಂತ ಮಿಗಿಲಾದದ್ದನ್ನು ನೋಡುತ್ತಾನೆ. ಪ್ರಧಾನವಾಗಿ ಆತನು ಅದನ್ನು ತನ್ನ ನಾಮದ ವಿಷಯವಾಗಿ ತೋರಿಸುವ ಪ್ರೀತಿಯ ಅಭಿವ್ಯಕ್ತಿಯಾಗಿ ವೀಕ್ಷಿಸುತ್ತಾನೆ.—ಇಬ್ರಿಯ 6:10.
ಅಷ್ಟುಮಾತ್ರವಲ್ಲದೆ, ನೋಹನು ಕಟ್ಟಿದ ನಾವೆಯನ್ನು ಯೆಹೋವನು ಅವನ ನಂಬಿಕೆಯ ಅಭಿವ್ಯಕ್ತಿಯಾಗಿ ವೀಕ್ಷಿಸಿದಂತೆ ಈ ಮುದ್ರಣಾಲಯವನ್ನು ನಮ್ಮ ನಂಬಿಕೆಯ ಒಂದು ದೃಶ್ಯ ಪುರಾವೆಯಾಗಿ ವೀಕ್ಷಿಸುತ್ತಾನೆ. ಯಾವುದರಲ್ಲಿನ ನಂಬಿಕೆ? ನೋಹನಿಗೆ, ಯೆಹೋವನು ಏನನ್ನು ಮುಂತಿಳಿಸಿದ್ದಾನೊ ಅದು ನಿಶ್ಚಯವಾಗಿಯೂ ನೆರವೇರುತ್ತದೆ ಎಂಬ ನಂಬಿಕೆಯಿತ್ತು. ಅದೇ ರೀತಿಯಲ್ಲಿ ನಮಗೆ—ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ, ಭೂಮಿಯಲ್ಲಿ ಘೋಷಿಸಲಾಗುತ್ತಿರುವ ಸಂದೇಶಗಳಲ್ಲಿ ರಾಜ್ಯದ ಸುವಾರ್ತೆಯೇ ಅತಿ ಪ್ರಾಮುಖ್ಯವಾದದ್ದು ಮತ್ತು ಅದನ್ನು ಜನರು ಕೇಳಿಸಿಕೊಳ್ಳುವುದು ಅತ್ಯಾವಶ್ಯಕವಾಗಿದೆ ಎಂಬ ನಂಬಿಕೆಯಿದೆ. ಬೈಬಲಿನ ಸಂದೇಶವು ಜೀವಗಳನ್ನು ರಕ್ಷಿಸಬಲ್ಲದು ಎಂಬುದು ನಮಗೆ ತಿಳಿದಿದೆ.—ರೋಮಾಪುರ 10:13, 14.
ಈ ಮುದ್ರಣಾಲಯವನ್ನು ಯೆಹೋವನು ನಮ್ಮ ವಿಧೇಯತೆಯ ಅಭಿವ್ಯಕ್ತಿಯಾಗಿಯೂ ವೀಕ್ಷಿಸುತ್ತಾನೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ನಮಗೆ ತಿಳಿದಿರುವಂತೆ, ಅಂತ್ಯವು ಬರುವುದಕ್ಕಿಂತ ಮುಂಚೆ ಸುವಾರ್ತೆಯು ಲೋಕವ್ಯಾಪಕವಾಗಿ ಸಾರಲ್ಪಡಬೇಕೆಂಬುದು ಆತನ ಚಿತ್ತವಾಗಿದೆ. (ಮತ್ತಾಯ 24:14) ಈ ಮುದ್ರಣಾಲಯ ಮತ್ತು ಲೋಕಾದ್ಯಂತ ಇತರ ಕ್ಷೇತ್ರಗಳಲ್ಲಿರುವ ಮುದ್ರಣಾಲಯಗಳು ಈ ಆಜ್ಞೆಯನ್ನು ನೆರವೇರಿಸುವುದರಲ್ಲಿ ಒಂದು ಪಾತ್ರವನ್ನು ವಹಿಸುತ್ತಿವೆ.
ಈ ಸೌಕರ್ಯಗಳಿಗೆ ಹಣಕಾಸಿನ ಬೆಂಬಲವನ್ನು ನೀಡುವುದರಲ್ಲಿ, ನಿರ್ಮಾಣಕಾರ್ಯದಲ್ಲಿ ಮತ್ತು ಈ ಸೌಕರ್ಯಗಳನ್ನು ನಡೆಸುವುದರಲ್ಲಿ ತೋರಿಸಲ್ಪಟ್ಟ ಪ್ರೀತಿ, ನಂಬಿಕೆ ಮತ್ತು ವಿಧೇಯತೆಯು, ಎಲ್ಲ ಕಡೆಯಲ್ಲಿರುವ ಯೆಹೋವನ ಜನರ ಹುರುಪಿನ ಚಟುವಟಿಕೆಯಲ್ಲಿಯೂ ಅಂದರೆ ಆಲಿಸಲು ಇಚ್ಚಿಸುವವರಿಗೆ ಅವರು ಸತ್ಯವನ್ನು ಘೋಷಿಸುತ್ತಾ ಮುಂದುವರಿಸುವಾಗಲೂ ತೋರಿಬರುತ್ತಿದೆ.
[ಪುಟ 11ರಲ್ಲಿರುವ ಚೌಕ/ಚಿತ್ರಗಳು]
ಯುನೈಟೆಡ್ ಸ್ಟೇಟ್ಸ್ನಲ್ಲಿ ಮುದ್ರಣ ಕಾರ್ಯದಲ್ಲಿನ ವಿಸ್ತರಣೆ
1920: ಬ್ರೂಕ್ಲಿನ್ನ 35 ಮರ್ಟ್ಲ್ ಆ್ಯವಿನ್ಯೂನಲ್ಲಿ ಪ್ರಥಮ ರೋಟರಿ ಪ್ರೆಸ್ನ ಮೂಲಕ ಪತ್ರಿಕೆಗಳು ಮುದ್ರಿಸಲ್ಪಟ್ಟವು.
1922: ಮುದ್ರಣಾಲಯವನ್ನು 18 ಕಾನ್ಕರ್ಡ್ ಸ್ಟ್ರೀಟ್ನಲ್ಲಿನ ಆರು ಮಹಡಿಯ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈ ವರುಷದಿಂದ, ಪುಸ್ತಕಗಳನ್ನು ಮುದ್ರಿಸಲು ಆರಂಭಿಸಲಾಯಿತು.
1927: ಮುದ್ರಣಾಲಯವನ್ನು 117 ಆ್ಯಡಮ್ಸ್ ಸ್ಟ್ರೀಟ್ನಲ್ಲಿ ನಿರ್ಮಿಸಿದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.
1949: ಆ ಹೊಸ ಕಟ್ಟಡಕ್ಕೆ ಒಂಬತ್ತು ಮಹಡಿಗಳು ಕೂಡಿಸಲ್ಪಟ್ಟ ಕಾರಣ ಮುದ್ರಣಾಲಯವು ಎರಡುಪಟ್ಟು ವಿಸ್ತಾರವಾಯಿತು.
1956: 77 ಸ್ಯಾಂಡ್ಸ್ ಸ್ಟ್ರೀಟ್ನಲ್ಲಿ ಹೊಸ ಕಟ್ಟಡವು ನಿರ್ಮಿಸಲ್ಪಟ್ಟಾಗ ಆ್ಯಡಮ್ಸ್ ಸ್ಟ್ರೀಟ್ನ ಮುದ್ರಣಾಲಯವು ಪುನಃ ಎರಡುಪಟ್ಟಾಗಿ ವಿಸ್ತಾರವಾಯಿತು.
1967: ಹತ್ತು ಮಹಡಿಗಳುಳ್ಳ ಕಟ್ಟಡವು ನಿರ್ಮಿಸಲ್ಪಟ್ಟಿತು. ಇದರಿಂದಾಗಿ, ಆರಂಭದ ಕಟ್ಟಡಕ್ಕಿಂತ ಹತ್ತುಪಟ್ಟು ದೊಡ್ಡದಾದ ಅಂತರ್ ಸಂಬಂಧವುಳ್ಳ ಮುದ್ರಣಾಲಯವು ಸಾಧ್ಯವಾಯಿತು.
1973: ವಾಲ್ಕಿಲ್ನಲ್ಲಿ ಇನ್ನೊಂದು ಸಹಾಯಕ ಮುದ್ರಣಾಲಯವು, ಮುಖ್ಯವಾಗಿ ಪತ್ರಿಕೆಗಳ ತಯಾರಿಕೆಗಾಗಿ ಕಟ್ಟಲ್ಪಟ್ಟಿತು.
2004: ಯುನೈಟೆಡ್ ಸ್ಟೇಟ್ಸ್ನ ಮುದ್ರಣ, ಬೈಂಡಿಂಗ್ ಮತ್ತು ಶಿಪ್ಪಿಂಗ್ ಈ ಎಲ್ಲ ಕಾರ್ಯಾಚರಣೆಗಳು ವಾಲ್ಕಿಲ್ನಲ್ಲಿಯೇ ಕ್ರೋಡೀಕರಿಸಲ್ಪಟ್ಟವು.