ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಹೃದಯವನ್ನು ಸಂತೋಷಪಡಿಸುವ ಕಾಣಿಕೆಗಳು

ದೇವರ ಹೃದಯವನ್ನು ಸಂತೋಷಪಡಿಸುವ ಕಾಣಿಕೆಗಳು

ದೇವರ ಹೃದಯವನ್ನು ಸಂತೋಷಪಡಿಸುವ ಕಾಣಿಕೆಗಳು

ಈ ಕಥೆಯು ಆಹ್ಲಾದಕರವಾದದ್ದೇನಲ್ಲ. ರಾಣಿ ಅತಲ್ಯಳು ಕಪಟೋಪಾಯ ಮತ್ತು ಕೊಲೆಯ ತಂತ್ರದ ಮೂಲಕ ಯೆಹೂದದ ಸಿಂಹಾಸನವನ್ನು ತನ್ನದಾಗಿಸಿಕೊಂಡಿದ್ದಳು. ರಾಜಸಂತಾನದವರೆಲ್ಲರೂ ಹತಿಸಲ್ಪಟ್ಟಿದ್ದಾರೆಂದು ಅಪಾರ್ಥಮಾಡಿಕೊಂಡ ಅವಳು ತನ್ನನ್ನು ರಾಣಿಯಾಗಿ ಮಾಡಿಕೊಂಡಳು. ಇನ್ನೊಬ್ಬ ಸ್ತ್ರೀಯು​—⁠ರಾಜಕುಮಾರಿ ಯೆಹೋಷೆಬಳು​—⁠ಯೆಹೋವನನ್ನು ಮತ್ತು ಆತನ ಧರ್ಮಶಾಸ್ತ್ರವನ್ನು ತುಂಬ ಪ್ರೀತಿಸುವವಳಾಗಿದ್ದು, ರಾಜಸಂತಾನವಾಗಿದ್ದ ಯೆಹೋವಾಷ ಎಂಬ ಹೆಸರಿನ ಶಿಶುವನ್ನು ಧೈರ್ಯದಿಂದ ಅಡಗಿಸಿಟ್ಟಳು. ಯೆಹೋಷೆಬಳು ಮತ್ತು ಮಹಾ ಯಾಜಕನಾಗಿದ್ದ ಅವಳ ಗಂಡ ಯೆಹೋಯಾದಾವನು, ದೇವಾಲಯದಲ್ಲಿ ತಾವು ವಾಸಿಸುತ್ತಿದ್ದ ಸ್ಥಳದಲ್ಲಿ ಈ ಬಾಧ್ಯಸ್ಥನನ್ನು ಆರು ವರ್ಷಗಳ ವರೆಗೆ ಬಚ್ಚಿಟ್ಟರು.​—⁠2 ಅರಸುಗಳು 11:1-3.

ಯೆಹೋವಾಷನು ಏಳು ವರ್ಷದವನಾದಾಗ, ಮಹಾ ಯಾಜಕನಾದ ಯೆಹೋಯಾದಾವನು ರಾಣಿ ಅತಲ್ಯಳು ಮೋಸದಿಂದ ತನ್ನದಾಗಿಸಿಕೊಂಡಿದ್ದ ಸಿಂಹಾಸನದಿಂದ ಅವಳನ್ನು ಉಚ್ಚಾಟನೆಮಾಡುವ ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಿದ್ಧನಾಗಿದ್ದನು. ಅವನು ತಾನು ಬಚ್ಚಿಟ್ಟಿದ್ದ ಹುಡುಗನನ್ನು ಹೊರಗೆ ಕರೆತಂದು, ಅವನನ್ನು ರಾಜ್ಯದ ಹಕ್ಕುಬಾಧ್ಯ ಅರಸನಾಗಿ ಪಟ್ಟಾಭಿಷೇಕಿಸಿದನು. ತದನಂತರ ರಾಜ ಸಿಪಾಯಿಗಳು ದುಷ್ಟ ರಾಣಿ ಅತಲ್ಯಳನ್ನು ದೇವಾಲಯದ ಅಂಗಣದಿಂದ ಹೊರಗೆ ಎಳೆದೊಯ್ದು ಹತಿಸಿಬಿಟ್ಟರು. ಇದು ಜನರಿಗೆ ಭಾರೀ ಉಪಶಮನ ಹಾಗೂ ಸಂತೋಷವನ್ನು ತಂದಿತು. ಯೆಹೋಯಾದಾವನೂ ಯೆಹೋಷೆಬಳೂ ಯೆಹೂದ ಸೀಮೆಯಲ್ಲಿ ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸಲು ಭಾರೀ ದೊಡ್ಡ ಕಾಣಿಕೆಯನ್ನಿತ್ತರು, ಅಂದರೆ ಬಹಳಷ್ಟು ನೆರವನ್ನಿತ್ತರು. ಆದರೆ ಹೆಚ್ಚು ಪ್ರಾಮುಖ್ಯವಾಗಿ, ಮೆಸ್ಸೀಯನ ತನಕ ನಡೆಸಲಿದ್ದ ದಾವೀದನ ರಾಜವಂಶದ ಮುನ್ನಡೆಯುವಿಕೆಗೆ ಅವರು ಸಹಾಯಮಾಡಿದರು.​—⁠2 ಅರಸುಗಳು 11:​4-21.

ಹೊಸದಾಗಿ ಪಟ್ಟಕ್ಕೆ ಬಂದ ಅರಸನು ಸಹ ದೇವರ ಹೃದಯವನ್ನು ಸಂತೋಷಪಡಿಸುವಂಥ ಗಮನಾರ್ಹ ಕ್ರಮವನ್ನು ಕೈಗೊಳ್ಳಲಿದ್ದನು. ಯೆಹೋವನ ಆಲಯವನ್ನು ದುರಸ್ತಿಪಡಿಸುವುದು ತುಂಬ ಜರೂರಿಯದ್ದಾಗಿತ್ತು. ಯೆಹೂದದ ಏಕಮಾತ್ರ ಅಧಿಕಾರಿಣಿಯಾಗುವ ಅತಲ್ಯಳ ಅನಿಯಂತ್ರಿತ ಹೆಬ್ಬಯಕೆಯ ಫಲಿತಾಂಶವಾಗಿ ದೇವಾಲಯವು ಅಲಕ್ಷಿಸಲ್ಪಟ್ಟಿತ್ತು ಮಾತ್ರವಲ್ಲ ಸೂರೆಮಾಡಲ್ಪಟ್ಟಿತ್ತು ಸಹ. ಆದುದರಿಂದ ಯೆಹೋವಾಷನು ದೇವಾಲಯವನ್ನು ಪುನರ್‌ನಿರ್ಮಿಸುವ ಹಾಗೂ ಪುನಸ್ಸ್ಥಾಪಿಸುವ ನಿರ್ಧಾರವನ್ನು ಮಾಡಿದನು. ಯೆಹೋವನ ಆಲಯದ ಪುನರ್ವಸತಿಗಾಗಿ ಬೇಕಾಗಿರುವ ಹಣವನ್ನು ಒಟ್ಟುಗೂಡಿಸಲಿಕ್ಕಾಗಿ ಅವನು ಒಡನೆಯೇ ಒಂದು ಆಜ್ಞೆಯನ್ನು ಹೊರಡಿಸಿದನು. ಅವನಂದದ್ದು: “ಯೆಹೋವನ ಆಲಯಕ್ಕೆ ಸೇರುವ ಎಲ್ಲಾ ಪರಿಶುದ್ಧದ್ರವ್ಯವನ್ನು ಅಂದರೆ ಖಾನೇಷುಮಾರಿಯಲ್ಲಿ ಲೆಕ್ಕಿಸಲ್ಪಟ್ಟ ಪ್ರತಿಯೊಬ್ಬನು ತಂದುಕೊಡುವ ಹಣ, ದೇವರಿಗೆ ಪ್ರತಿಷ್ಠಿತನಾದ ಮನುಷ್ಯನು ತನ್ನ ಪ್ರಾಣವನ್ನು ಬಿಡಿಸಿಕೊಳ್ಳುವದಕ್ಕಾಗಿ ತರುವ ಹಣ, ಜನರು ಯೆಹೋವನ ಆಲಯಕ್ಕೆ ಸ್ವೇಚ್ಛೆಯಿಂದ ತಂದೊಪ್ಪಿಸುವ ಹಣ ಇವುಗಳನ್ನು ತೆಗೆದುಕೊಂಡು ದೇವಾಲಯವು ಎಲ್ಲೆಲ್ಲಿ ಶಿಥಿಲವಾಗಿರುತ್ತದೆಂದು ನೋಡಿ ಅದನ್ನು ಸರಿಮಾಡುವದಕ್ಕೋಸ್ಕರ ವಿನಿಯೋಗಿಸಿರಿ; ಪ್ರತಿಯೊಬ್ಬನೂ ತನ್ನ ತನ್ನ ಪರಿಚಿತರಿಂದಲೇ ಹಣತೆಗೆದುಕೊಳ್ಳಬೇಕು.”​—⁠2 ಅರಸುಗಳು 12:4, 5.

ಜನರು ಮನಃಪೂರ್ವಕವಾಗಿ ಕಾಣಿಕೆಯನ್ನು ನೀಡಿದರು. ಆದರೂ, ದೇವಾಲಯವನ್ನು ದುರಸ್ತಿಮಾಡುವ ತಮ್ಮ ಕರ್ತವ್ಯವನ್ನು ಪೂರೈಸುವುದರಲ್ಲಿ ಯಾಜಕರು ಮನಃಪೂರ್ವಕವಾಗಿ ಒಳಗೂಡಲಿಲ್ಲ. ಆದುದರಿಂದ ಅರಸನು ಈ ಸನ್ನಿವೇಶವನ್ನು ಸ್ವತಃ ನಿರ್ವಹಿಸಲು ನಿರ್ಧರಿಸಿದನು ಮತ್ತು ಎಲ್ಲ ಕಾಣಿಕೆಗಳನ್ನು ನೇರವಾಗಿ ಒಂದು ವಿಶೇಷ ಪೆಟ್ಟಿಗೆಯೊಳಗೆ ಹಾಕುವಂತೆ ಅಪ್ಪಣೆಯಿತ್ತನು. ಅವನು ಇದರ ಮೇಲ್ವಿಚಾರಣೆಯನ್ನು ಯೆಹೋಯಾದಾವನಿಗೆ ವಹಿಸಿಕೊಟ್ಟನು ಮತ್ತು ಆ ವೃತ್ತಾಂತವು ಹೀಗೆ ತಿಳಿಸುತ್ತದೆ: “ಯಾಜಕನಾದ ಯೆಹೋಯಾದಾವನು ಒಂದು ಪೆಟ್ಟಿಗೆಯನ್ನು ತೆಗೆದುಕೊಂಡು ಬಂದು ಅದರ ಮುಚ್ಚಳದಲ್ಲಿ ತೂತುಮಾಡಿ ಅದನ್ನು ಯೆಹೋವನ ಆಲಯದ ಬಾಗಲಿನ ಬಲಗಡೆಯಲ್ಲಿ ಯಜ್ಞವೇದಿಯ ಹತ್ತಿರ ಇಟ್ಟನು. ದ್ವಾರಪಾಲಕರಾದ ಯಾಜಕರು ಯೆಹೋವನ ಆಲಯಕ್ಕೆ ತರಲ್ಪಟ್ಟ ಹಣವನ್ನೆಲ್ಲಾ ಅದರಲ್ಲಿಯೇ ಹಾಕಿಸುತ್ತಿದ್ದರು. ಪೆಟ್ಟಿಗೆಯಲ್ಲಿ ತಕ್ಕಷ್ಟು ಹಣಕೂಡಿದೆಯೆಂದು ಕಂಡು ಬಂದಾಗೆಲ್ಲಾ ರಾಜಲೇಖಕನೂ ಮಹಾಯಾಜಕನೂ ಬಂದು ಅದನ್ನು ಚೀಲಗಳಲ್ಲಿ ಹಾಕಿ ತೂಕಮಾಡಿ ಯೆಹೋವನ ಆಲಯದ ಹಣವು ಇಷ್ಟಿಷ್ಟು ಆಯಿತೆಂದು ಬರೆದುಕೊಂಡು ಅದನ್ನು ಆಲಯದ ಕೆಲಸವನ್ನು ನಡಿಸುವ ಮೊಕ್ತೇಸರರಿಗೆ ಒಪ್ಪಿಸುವರು; ಇವರು ಅದನ್ನು ಅಲ್ಲಿ ಕೆಲಸಮಾಡುವ ಬಡಗಿ, ಶಿಲ್ಪಿ, ಉಪ್ಪಾರ, ಕಲ್ಲುಕುಟಿಕ ಇವರ ಸಂಬಳಕ್ಕಾಗಿಯೂ ಮರ, ಕೆತ್ತಿದ ಕಲ್ಲು ಇವುಗಳನ್ನು ಕೊಂಡುಕೊಳ್ಳುವದಕ್ಕಾಗಿಯೂ ಆಲಯದ ಜೀರ್ಣೋದ್ಧಾರದ ಬೇರೆ ಎಲ್ಲಾ ವೆಚ್ಚಕ್ಕಾಗಿಯೂ ಉಪಯೋಗಿಸುವರು.”​—⁠2 ಅರಸುಗಳು 12:9-12.

ಜನರು ಮನಃಪೂರ್ವಕವಾಗಿ ಕಾಣಿಕೆಯನ್ನಿತ್ತು ಪ್ರತಿಕ್ರಿಯಿಸಿದರು. ಯೆಹೋವನ ಆರಾಧನೆಯು ಮಹಿಮಾನ್ವಿತ ರೀತಿಯಲ್ಲಿ ಮುಂದುವರಿಯಲು ಸಾಧ್ಯವಾಗುವಂತೆ, ಆತನ ಆರಾಧನಾಲಯವು ಪುನಸ್ಸ್ಥಾಪಿಸಲ್ಪಟ್ಟಿತು. ಹೀಗೆ, ಕಾಣಿಕೆಯಾಗಿ ದೊರೆತ ಎಲ್ಲ ಹಣಕಾಸನ್ನು ಸೂಕ್ತವಾಗಿ ಉಪಯೋಗಿಸಲಾಗುತ್ತಿದೆ ಎಂಬುದನ್ನು ಅರಸನಾದ ಯೆಹೋವಾಷನು ಖಚಿತಪಡಿಸಿಕೊಂಡನು!

ಇಂದು, ದಾನವಾಗಿ ಕೊಡಲ್ಪಡುವ ಎಲ್ಲ ಹಣಕಾಸನ್ನು ಯೆಹೋವನ ಆರಾಧನೆಯನ್ನು ಪ್ರವರ್ಧಿಸಲಿಕ್ಕಾಗಿ ಯೋಗ್ಯವಾದ ರೀತಿಯಲ್ಲಿ ಉಪಯೋಗಿಸಲಾಗುತ್ತಿದೆಯೋ ಎಂಬುದನ್ನು ಯೆಹೋವನ ದೃಶ್ಯ ಸಂಘಟನೆಯು ಜಾಗರೂಕತೆಯಿಂದ ಗಮನಿಸುತ್ತದೆ. ಮತ್ತು ನಿಜ ಕ್ರೈಸ್ತರು ಪುರಾತನ ಇಸ್ರಾಯೇಲ್ಯರಂತೆಯೇ ಮನಃಪೂರ್ವಕವಾಗಿ ಕಾಣಿಕೆಯನ್ನಿತ್ತು ಪ್ರತಿಕ್ರಿಯಿಸಿದ್ದಾರೆ. ಕಳೆದ ಸೇವಾ ವರ್ಷದಲ್ಲಿ ರಾಜ್ಯಾಭಿರುಚಿಗಳನ್ನು ಹೆಚ್ಚಿಸಲಿಕ್ಕಾಗಿ ಕಾಣಿಕೆಯನ್ನು ನೀಡಿರುವವರಲ್ಲಿ ನೀವೂ ಒಬ್ಬರಾಗಿರಬಹುದು. ನಿಮ್ಮ ಕಾಣಿಕೆಗಳು ಉಪಯೋಗಿಸಲ್ಪಟ್ಟಿರುವ ವಿಧಗಳಲ್ಲಿ ಕೆಲವನ್ನು ನಾವೀಗ ಗಮನಿಸೋಣ.

ಪ್ರಕಟಿಸುವ ಕೆಲಸಕ್ಕಾಗಿ

ಲೋಕವ್ಯಾಪಕವಾಗಿ, ಅಧ್ಯಯನ ಮತ್ತು ವಿತರಣೆಗೋಸ್ಕರ ಈ ಕೆಳಗಿನ ಪ್ರಕಾಶನಗಳು ಮುದ್ರಿಸಲ್ಪಟ್ಟವು:

• ಪುಸ್ತಕಗಳು: 4,74,90,247

• ಪುಸ್ತಿಕೆಗಳು: 68,34,740

• ಬ್ರೋಷರ್‌ಗಳು: 16,78,54,462

• ಕ್ಯಾಲೆಂಡರ್‌ಗಳು: 54,05,955

• ಪತ್ರಿಕೆಗಳು: 117,92,66,348

• ಟ್ರ್ಯಾಕ್ಟ್‌ಗಳು: 44,09,95,740

• ವಿಡಿಯೋಗಳು: 31,68,611

ಮುದ್ರಣವು ಆಫ್ರಿಕ ಮತ್ತು ಉತ್ತರ, ಮಧ್ಯ ಹಾಗೂ ದಕ್ಷಿಣ ಅಮೆರಿಕ, ಏಷಿಯ, ಯೂರೋಪ್‌ ಮತ್ತು ಪೆಸಿಫಿಕ್‌ನ ದ್ವೀಪ ರಾಷ್ಟ್ರಗಳಲ್ಲಿ ಮಾಡಲ್ಪಡುತ್ತದೆ​—⁠ಒಟ್ಟು 19 ದೇಶಗಳಲ್ಲಿ.

“ನನ್ನ ಹೆಸರು ಕ್ಯಾಟ್‌ಲನ್‌ ಮೇ. ನಾನು ಎಂಟು ವರ್ಷದವಳು. ನನ್ನ ಬಳಿ 28 ಡಾಲರ್‌ಗಳಿವೆ ಮತ್ತು ನೀವಿದನ್ನು ಪ್ರಿಂಟಿಂಗ್‌ ಪ್ರೆಸ್‌ಗಳಿಗೆ ಹಣಪಾವತಿಮಾಡುವುದರಲ್ಲಿ ಉಪಯೋಗಿಸಬೇಕೆಂಬುದು ನನ್ನ ಬಯಕೆಯಾಗಿದೆ. ನಿಮ್ಮ ಚಿಕ್ಕ ಸಹೋದರಿ, ಕ್ಯಾಟ್‌ಲನ್‌.”

“ಹೊಸ ಪ್ರೆಸ್‌ನ ಬಗ್ಗೆ ನಾವು ಕುಟುಂಬವಾಗಿ ಚರ್ಚೆ ನಡೆಸಿದೆವು. 11 ಮತ್ತು 9ರ ಪ್ರಾಯದ ನಮ್ಮ ಮಕ್ಕಳು ತಮ್ಮ ಉಳಿತಾಯದಿಂದ ಹಣವನ್ನು ತೆಗೆದು ಕಾಣಿಕೆ ನೀಡಲು ನಿರ್ಧರಿಸಿದ್ದಾರೆ. ನಮ್ಮ ಕಾಣಿಕೆಯೊಂದಿಗೆ ಅವರ ಕಾಣಿಕೆಯನ್ನು ಕಳುಹಿಸಲು ನಾವು ಸಂತೋಷಿಸುತ್ತೇವೆ.”

ನಿರ್ಮಾಣಕಾರ್ಯಕ್ಕಾಗಿ

ಯೆಹೋವನ ಸಾಕ್ಷಿಗಳ ಚಟುವಟಿಕೆಗಳನ್ನು ಬೆಂಬಲಿಸಲಿಕ್ಕಾಗಿ ಕೈಗೊಳ್ಳಲ್ಪಟ್ಟ ನಿರ್ಮಾಣ ಯೋಜನೆಗಳಲ್ಲಿ ಈ ಮುಂದಿನವು ಕೆಲವಾಗಿವೆ:

• ಮಿತ ಸಂಪನ್ಮೂಲಗಳಿರುವ ದೇಶಗಳಲ್ಲಿ ರಾಜ್ಯ ಸಭಾಗೃಹಗಳು: 2,180

• ಸಮ್ಮೇಳನ ಹಾಲ್‌ಗಳು: 15

• ಬ್ರಾಂಚ್‌ಗಳು: 10

• ಪೂರ್ಣ ಸಮಯದ ಸೇವೆಯಲ್ಲಿರುವ ಅಂತಾರಾಷ್ಟ್ರೀಯ ಸ್ವಯಂ-ಸೇವಕರು: 2,342

“ಈ ವಾರಾಂತ್ಯದಲ್ಲಿ ನಮ್ಮ ಹೊಸ ರಾಜ್ಯ ಸಭಾಗೃಹದಲ್ಲಿ ನಮ್ಮ ಮೊದಲ ಕೂಟವು ನಡೆಸಲ್ಪಟ್ಟಿತು. ನಮ್ಮ ತಂದೆಯಾದ ಯೆಹೋವ ದೇವರಿಗೆ ಸ್ತುತಿಯನ್ನು ಸಲ್ಲಿಸಲು ಯೋಗ್ಯವಾದ ಒಂದು ಸ್ಥಳವನ್ನು ಹೊಂದಿರುವುದಕ್ಕಾಗಿ ನಾವು ತುಂಬ ಸಂತೋಷಗೊಂಡಿದ್ದೇವೆ. ಹೆಚ್ಚು ರಾಜ್ಯ ಸಭಾಗೃಹಗಳನ್ನು ನಿರ್ಮಿಸುವ ಮೂಲಕ ನಮ್ಮ ಆವಶ್ಯಕತೆಗಳ ಕಡೆಗೆ ಗಮನ ಕೊಟ್ಟದ್ದಕ್ಕಾಗಿ ಯೆಹೋವನಿಗೆ ಮತ್ತು ನಿಮಗೆ ನಾವು ಉಪಕಾರ ಹೇಳುತ್ತೇವೆ. ವಾಸ್ತವದಲ್ಲಿ ನಮ್ಮ ರಾಜ್ಯ ಸಭಾಗೃಹವು ಈ ಕ್ಷೇತ್ರದ ನೈಸರ್ಗಿಕತೆಗೆ ಹೆಚ್ಚನ್ನು ಕೂಡಿಸುತ್ತದೆ.”​—⁠ಚಿಲಿ.

“ಸಹೋದರ ಸಹೋದರಿಯರು ಯೆಹೋವನ ಸಂಘಟನೆಯ ಮೂಲಕ ಕೊಡಲ್ಪಡುವ ಸಹಾಯವನ್ನು ತುಂಬ ಗಣ್ಯಮಾಡುತ್ತಾರೆ. ನಾವು ನಿರ್ಮಾಣಕಾರ್ಯ ತಂಡದೊಂದಿಗೆ ಕಳೆದ ಆನಂದಮಯ ಸಮಯದ ಕುರಿತು ಇವತ್ತಿಗೂ ಮಾತಾಡಿಕೊಳ್ಳುತ್ತಿರುತ್ತೇವೆ.”​—⁠ಮಾಲ್ಡೋವ.

“ನಾನು ಮತ್ತು ನನ್ನ ಪತ್ನಿಯು ಇತ್ತೀಚಿಗೆ ನಮ್ಮ 35ನೆಯ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದೆವು. ಈ ಸಂದರ್ಭದಲ್ಲಿ ನಾವು ಒಬ್ಬರಿಗೊಬ್ಬರು ಯಾವ ಉಡುಗೊರೆಯನ್ನು ಕೊಡುವುದು ಎಂಬುದನ್ನು ನಿರ್ಧರಿಸಲು ಪ್ರಯತ್ನಿಸುತ್ತಿದ್ದೆವು. ಯೆಹೋವನಿಗೆ ಹಾಗೂ ಆತನ ಸಂಘಟನೆಗೆ ಏನಾದರೂ ಉಡುಗೊರೆ ಕೊಡೋಣವೆಂದು ಇಬ್ಬರೂ ನಿರ್ಧರಿಸಿದೆವು, ಏಕೆಂದರೆ ಅವರ ಸಹಾಯವಿಲ್ಲದಿರುತ್ತಿದ್ದರೆ ಬಹುಶಃ ನಮ್ಮ ವಿವಾಹದಲ್ಲಿ ನಾವು ಸಫಲರಾಗಲು ಸಾಧ್ಯವಿರುತ್ತಿದ್ದಿರಲಿಲ್ಲ. ನಾವು ಕಳುಹಿಸುತ್ತಿರುವ ಹಣವನ್ನು, ಹೆಚ್ಚು ಬಡ ದೇಶಗಳಲ್ಲೊಂದರಲ್ಲಿ ರಾಜ್ಯ ಸಭಾಗೃಹವನ್ನು ಕಟ್ಟಲು ಉಪಯೋಗಿಸುವಂತೆ ಬಯಸುತ್ತೇವೆ.”

“ಇತ್ತೀಚೆಗೆ ನನಗೆ ಪಿತ್ರಾರ್ಜಿತವಾಗಿ ಸ್ವಲ್ಪ ಹಣ ಸಿಕ್ಕಿತು, ಮತ್ತು ನನ್ನ ‘ಅಪೇಕ್ಷೆಗಳು’ ಕೆಲವೇ ಆಗಿದ್ದು ನನ್ನ ‘ಆವಶ್ಯಕತೆಗಳು’ ತೀರ ಕೊಂಚವೇ ಆಗಿರುವುದರಿಂದ, ನಾನು ಕಳುಹಿಸುತ್ತಿರುವ ಹಣವನ್ನು ಅನೇಕ ದೇಶಗಳಲ್ಲಿ ತುಂಬ ಆವಶ್ಯಕತೆಯಿರುವ ರಾಜ್ಯ ಸಭಾಗೃಹಗಳನ್ನು ನಿರ್ಮಿಸಲಿಕ್ಕಾಗಿ ಉಪಯೋಗಿಸುವಂತೆ ಬಯಸುತ್ತೇನೆ.”

ವಿಪತ್ತು ಪರಿಹಾರಕಾರ್ಯಕ್ಕಾಗಿ

ಈ ಕಡೇ ದಿವಸಗಳಲ್ಲಿ ವಿಪತ್ತುಗಳು ಅನೇಕವೇಳೆ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಬಂದೆರಗುತ್ತವೆ. ಯೆಹೋವನ ಸಾಕ್ಷಿಗಳಲ್ಲಿ ಅನೇಕರು, ವಿಪತ್ತುಗಳಿಂದ ಬಾಧಿತವಾಗಿರುವ ಕ್ಷೇತ್ರಗಳಲ್ಲಿನ ತಮ್ಮ ಸಹೋದರರಿಗೆ ಸಹಾಯವಾಗಲೆಂದು ಹೆಚ್ಚಿನ ಕಾಣಿಕೆಗಳನ್ನು ನೀಡುತ್ತಾರೆ. ಒಂದು ಜ್ಞಾಪನವಾಗಿ, ವಿಪತ್ತು ಪರಿಹಾರಕ್ಕಾಗಿರುವ ಕಾಣಿಕೆಗಳನ್ನು ಲೋಕವ್ಯಾಪಕ ಕೆಲಸದ ಭಾಗವಾಗಿ ಕೊಡಲಾಗುತ್ತದೆ. ವಿಪತ್ತುಗಳಿಗೆ ಬಲಿಯಾದವರಿಗೆ ಯೆಹೋವನ ಸಾಕ್ಷಿಗಳು ಸಹಾಯಮಾಡಿರುವ ಸ್ಥಳಗಳಲ್ಲಿ ಈ ಕೆಳಗಿನವು ಕೆಲವಾಗಿವೆ:

• ಆಫ್ರಿಕ

• ಏಷಿಯ

• ಕ್ಯಾರಿಬಿಯನ್‌ ಪ್ರದೇಶ

• ಪೆಸಿಫಿಕ್‌ನ ದ್ವೀಪಗಳು

“ಚಂಡಮಾರುತಗಳ ಸಮಯದಲ್ಲಿ ಉಂಟಾದ ಹಾನಿಗಾಗಿ ಪರಿಹಾರ ಸಾಮಗ್ರಿಗಳ ಸರಬರಾಯಿಯನ್ನು ಕಳುಹಿಸಿದ್ದಕ್ಕಾಗಿ ನಾನು ಮತ್ತು ನನ್ನ ಪತಿ ನಿಮಗೆ ತುಂಬ ಉಪಕಾರ ತಿಳಿಸಲು ಬಯಸುತ್ತೇವೆ. ಇದರಿಂದಾಗಿ ನಾವು ನಮ್ಮ ಮನೆಗೆ ಹೊಸ ಛಾವಣಿಯನ್ನು ಹಾಕಿಸಲು ಶಕ್ತರಾದೆವು. ನೀವು ಇಷ್ಟು ಬೇಗನೆ ಪ್ರತಿಕ್ರಿಯಿಸಿದ್ದನ್ನು ನಾವು ನಿಜವಾಗಿಯೂ ಗಣ್ಯಮಾಡುತ್ತೇವೆ.”

“ನನ್ನ ಹೆಸರು ಕೋನರ್‌, ಮತ್ತು ನಾನು 11 ವರ್ಷದವನು. ಸುನಾಮಿಯಿಂದಾಗಿ ಏನು ಸಂಭವಿಸಿತೋ ಅದನ್ನು ನೋಡಿ ನನಗೆ ಸಹಾಯಮಾಡುವ ಮನಸ್ಸಾಯಿತು. ಇದು ನನ್ನ ಸಹೋದರ ಸಹೋದರಿಯರಿಗೆ ಸಹಾಯವಾಗಲಿ ಎಂದು ಹಾರೈಸುತ್ತೇನೆ.”

ವಿಶೇಷ ಪೂರ್ಣ ಸಮಯದ ಸೇವಕರಿಗಾಗಿ

ಅನೇಕ ಕ್ರೈಸ್ತರು ಸೌವಾರ್ತಿಕ ಕೆಲಸದಲ್ಲಿ ಅಥವಾ ಬೆತೆಲ್‌ ಗೃಹಗಳಲ್ಲಿ ಪೂರ್ಣ ಸಮಯದ ಸೇವೆಯನ್ನು ಮಾಡುತ್ತಾರೆ. ಪೂರ್ಣ ಸಮಯದ ಸ್ವಯಂ-ಸೇವಕರಲ್ಲಿ ಕೆಲವರು ಸ್ವಯಂಕೃತ ಕಾಣಿಕೆಗಳಿಂದ ಬೆಂಬಲಿಸಲ್ಪಡುತ್ತಾರೆ. ಇವರಲ್ಲಿ ಈ ಮುಂದೆ ತಿಳಿಸಲ್ಪಟ್ಟಿರುವವರು ಸೇರಿದ್ದಾರೆ:

• ಮಿಷನೆರಿಗಳು: 2,635

• ಸಂಚರಣ ಮೇಲ್ವಿಚಾರಕರು: 5,325

• ಬೆತೆಲಿಗರು: 20,092

“ಈಗ [ಐದು ವರ್ಷದ ಹುಡುಗ] ನಾನು ಬೆತೆಲ್‌ನಲ್ಲಿ ಸೇವೆಮಾಡಲು ಸಾಧ್ಯವಿಲ್ಲದಿರುವುದರಿಂದ, ಈ ಕಾಣಿಕೆಯನ್ನು ತುಂಬ ಪ್ರೀತಿಯಿಂದ ಕಳುಹಿಸಲು ಇಷ್ಟಪಡುತ್ತೇನೆ. ನಾನು ದೊಡ್ಡವನಾದಾಗ, ಕಷ್ಟಪಟ್ಟು ಕೆಲಸಮಾಡಲಿಕ್ಕಾಗಿ ಬೆತೆಲಿಗೆ ಹೋಗುವೆ.”

ಬೈಬಲ್‌ ಶಿಕ್ಷಣವನ್ನು ಪ್ರವರ್ಧಿಸಲಿಕ್ಕಾಗಿ

“ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ” ಮಾಡುವಂತೆ ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ನೇಮಕ ನೀಡಿದನು. (ಮತ್ತಾಯ 28:19) ಈ ಮಾತುಗಳಿಗನುಸಾರ, ಯೆಹೋವನ ಸಾಕ್ಷಿಗಳು 235 ದೇಶಗಳಲ್ಲಿ ಬೈಬಲ್‌ ಸಂದೇಶವನ್ನು ಸಾರುವ ಮತ್ತು ಕಲಿಸುವ ಕೆಲಸದಲ್ಲಿ ಕಾರ್ಯಮಗ್ನರಾಗಿದ್ದಾರೆ. ಅವರು 413 ಭಾಷೆಗಳಲ್ಲಿ ಬೈಬಲ್‌ ಸಾಹಿತ್ಯವನ್ನು ಪ್ರಕಾಶಿಸುತ್ತಾರೆ ಮತ್ತು ವಿತರಿಸುತ್ತಾರೆ.

ವಾಸ್ತವದಲ್ಲಿ, ಹೆಚ್ಚೆಚ್ಚು ಜನರು ದೇವರ ಕುರಿತು ಮತ್ತು ಆತನ ಉದ್ದೇಶಗಳ ಕುರಿತು ಕಲಿಯಲು ಕ್ರೈಸ್ತನೊಬ್ಬನು ನೀಡಸಾಧ್ಯವಿರುವ ಅತ್ಯಂತ ಅಮೂಲ್ಯವಾದ ಕಾಣಿಕೆಯು, ಅವನ ಸಮಯವೇ ಆಗಿದೆ. ಯೆಹೋವನ ಸಾಕ್ಷಿಗಳು ತಮ್ಮ ನೆರೆಹೊರೆಯವರಿಗೆ ಸಹಾಯಮಾಡಲಿಕ್ಕಾಗಿ ತಮ್ಮ ಸಮಯ ಹಾಗೂ ಶಕ್ತಿಯನ್ನು ಹೇರಳವಾಗಿ ವಿನಿಯೋಗಿಸಿದ್ದಾರೆ. ಅವರು ಉದಾರವಾದ ಹಣಕಾಸಿನ ಸಹಾಯವನ್ನು ಸಹ ಮಾಡಿದ್ದಾರೆ, ಮತ್ತು ಒಂದಲ್ಲ ಒಂದು ರೀತಿಯಲ್ಲಿ ಅವರ ಎಲ್ಲ ಕಾಣಿಕೆಗಳು ಯೆಹೋವನ ಹೆಸರನ್ನು ಹಾಗೂ ಉದ್ದೇಶಗಳನ್ನು ಭೂಮಿಯಾದ್ಯಂತ ಪ್ರಸಿದ್ಧಪಡಿಸಲು ಸಹಾಯಮಾಡಿವೆ. ಯೆಹೋವನ ಕುರಿತು ಹೆಚ್ಚನ್ನು ಕಲಿಯುವಂತೆ ಇತರರಿಗೆ ಸಹಾಯಮಾಡಲಿಕ್ಕಾಗಿರುವ ಈ ಪ್ರಯತ್ನಗಳನ್ನು ಆತನು ಹೆಚ್ಚೆಚ್ಚು ಆಶೀರ್ವದಿಸುತ್ತಿರಲಿ. (ಜ್ಞಾನೋಕ್ತಿ 19:17) ಸಹಾಯಮಾಡಲಿಕ್ಕಾಗಿರುವ ಇಂಥ ಸಿದ್ಧಮನಸ್ಸು ಯೆಹೋವನ ಹೃದಯವನ್ನು ಸಂತೋಷಪಡಿಸುತ್ತದೆ!​—⁠ಇಬ್ರಿಯ 13:​15, 16.

[ಪುಟ 28-30ರಲ್ಲಿರುವ ಚೌಕ]

ಕೆಲವರು ಕೊಡಲು ಆಯ್ಕೆಮಾಡುವ ವಿಧಗಳು

ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳು

ಅನೇಕರು, “ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳು​—⁠ಮತ್ತಾಯ 24:14” ಎಂದು ಗುರುತುಮಾಡಲ್ಪಟ್ಟಿರುವ ಕಾಣಿಕೆ ಪೆಟ್ಟಿಗೆಗಳಲ್ಲಿ ಹಾಕಲು ಬಯಸುವ ಹಣದ ಮೊತ್ತವನ್ನು ಬದಿಗಿರಿಸುತ್ತಾರೆ ಅಥವಾ ಬಜೆಟ್‌ ಮಾಡುತ್ತಾರೆ.

ಪ್ರತಿ ತಿಂಗಳು ಸಭೆಗಳು ಈ ಹಣವನ್ನು, ತಮ್ಮ ದೇಶದ ಕೆಲಸವನ್ನು ನೋಡಿಕೊಳ್ಳುತ್ತಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿಗೆ ಕಳುಹಿಸುತ್ತವೆ. ಸ್ವಯಂಪ್ರೇರಿತ ಹಣದ ದಾನಗಳನ್ನು ನೇರವಾಗಿ ಈ ಆಫೀಸುಗಳಿಗೆ ಕಳುಹಿಸಬಹುದು. ಬ್ರಾಂಚ್‌ ಆಫೀಸುಗಳ ವಿಳಾಸಗಳು ಈ ಪತ್ರಿಕೆಯ 2ನೇ ಪುಟದಲ್ಲಿ ಕಂಡುಬರುತ್ತವೆ. ಚೆಕ್‌ಗಳನ್ನು “ವಾಚ್‌ಟವರ್‌”ಗೆ ಸಂದಾಯವಾಗಬೇಕೆಂದು ಗುರುತಿಸಬೇಕು. ಆಭರಣಗಳು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನೂ ದಾನವಾಗಿ ಕೊಡಬಹುದು. ಇಂತಹ ಕಾಣಿಕೆಗಳೊಂದಿಗೆ, ಇದು ನೇರವಾಗಿ ಕೊಟ್ಟಿರುವ ಕೊಡುಗೆ ಎಂದು ಹೇಳುವ ಸಂಕ್ಷಿಪ್ತ ಪತ್ರವು ಜೊತೆಗೂಡಿರಬೇಕು.

ಚ್ಯಾರಿಟಬಲ್‌ ಯೋಜನೆ

ನೇರವಾದ ಹಣದ ಕೊಡುಗೆಗಳೊಂದಿಗೆ, ನೀವು ವಾಸಿಸುತ್ತಿರುವ ದೇಶದ ಮೇಲೆ ಹೊಂದಿಕೊಂಡು ಲೋಕವ್ಯಾಪಕ ರಾಜ್ಯ ಸೇವೆಯ ಪ್ರಯೋಜನಕ್ಕಾಗಿ ಬೇರೆ ಬೇರೆ ರೀತಿಯಲ್ಲಿ ಸಹಾಯಮಾಡಬಹುದಾದ ವಿಧಾನಗಳಿವೆ. ಇವು ಕೆಳಗಿನ ವಿಧಾನಗಳನ್ನು ಒಳಗೂಡುತ್ತವೆ:

ವಿಮೆ: ದ ವಾಚ್‌ಟವರ್‌ ಸೊಸೈಟಿ ಅನ್ನು ಒಂದು ಜೀವ ವಿಮಾ ಪಾಲಿಸಿ ಇಲ್ಲವೆ ನಿವೃತ್ತಿ ವೇತನ ಯೋಜನೆಯ ಫಲಾನುಭವಿಯಾಗಿ ಹೆಸರಿಸಬಹುದು.

ಬ್ಯಾಂಕ್‌ ಖಾತೆಗಳು: ಬ್ಯಾಂಕ್‌ ಖಾತೆಗಳು, ಠೇವಣಾತಿ ಸರ್ಟಿಫಿಕೇಟುಗಳು, ಅಥವಾ ವೈಯಕ್ತಿಕ ನಿವೃತ್ತಿ ಖಾತೆಗಳನ್ನು ಸ್ಥಳಿಕ ಬ್ಯಾಂಕ್‌ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ, ದ ವಾಚ್‌ಟವರ್‌ ಸೊಸೈಟಿ ಅನ್ನು ನ್ಯಾಸಾನುಭೋಗಿಯಾಗಿ ಇಟ್ಟುಕೊಳ್ಳಬಹುದು ಅಥವಾ ದಾನಿಯು ಮರಣಹೊಂದುವಲ್ಲಿ ಅವು ಸೊಸೈಟಿಗೆ ಸಲ್ಲುವಂತೆ ಏರ್ಪಡಿಸಬಹುದು.

ಸ್ಟಾಕ್‌ಗಳು ಮತ್ತು ಬಾಂಡ್‌ಗಳು: ಸ್ಟಾಕ್‌ಗಳು ಹಾಗೂ ಬಾಂಡ್‌ಗಳನ್ನು ನೇರವಾದ ಕೊಡುಗೆಯಾಗಿ ದ ವಾಚ್‌ಟವರ್‌ ಸೊಸೈಟಿಗೆ ದಾನಮಾಡಬಹುದು.

ಸ್ಥಿರಾಸ್ತಿ: ವಿಕ್ರಯಯೋಗ್ಯ ಸ್ಥಿರಾಸ್ತಿಯನ್ನು ನೇರವಾದ ಒಂದು ಕೊಡುಗೆಯಾಗಿ ದಾನಮಾಡಬಹುದು, ಇಲ್ಲವೆ ವಾಸದ ಮನೆಯಿರುವ ಆಸ್ತಿಯಾಗಿರುವಲ್ಲಿ ದಾನಿಯು ಅವನ ಅಥವಾ ಅವಳ ಜೀವಮಾನಕಾಲದಲ್ಲಿ ಅದರಲ್ಲಿ ಜೀವಿಸುತ್ತಾ ಇರಬಲ್ಲ ಏರ್ಪಾಡಿನೊಂದಿಗೆ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಆಸ್ತಿಯಾಗಿ ದಾನಮಾಡಬಹುದು. ಯಾವುದೇ ಸ್ಥಿರಾಸ್ತಿಯನ್ನು ಸೊಸೈಟಿಗೆ ದಾನಕೊಡುವ ಕರಾರುಪತ್ರವನ್ನು ತಯಾರಿಸುವ ಮೊದಲು ನಿಮ್ಮ ದೇಶದಲ್ಲಿರುವ ಬ್ರಾಂಚ್‌ ಆಫೀಸನ್ನು ಸಂಪರ್ಕಿಸಿರಿ.

ವರ್ಷಾಶನ ದಾನ: ವರ್ಷಾಶನ ದಾನದ ಏರ್ಪಾಡು ಅಂದರೆ ಒಬ್ಬನು ತನ್ನಲ್ಲಿರುವ ಹಣವನ್ನು ಅಥವಾ ಬಂಡವಾಳ ಪತ್ರಗಳನ್ನು ದ ವಾಚ್‌ಟವರ್‌ ಸೊಸೈಟಿಗೆ ವರ್ಗಾಯಿಸುತ್ತಾನೆ. ಇದಕ್ಕೆ ಪ್ರತಿಯಾಗಿ, ದಾನಿಯು ಅಥವಾ ಅವನಿಂದ ನೇಮಿಸಲ್ಪಟ್ಟವನು ತನ್ನ ಜೀವಮಾನದಾದ್ಯಂತ ಪ್ರತಿ ವರುಷ ನಿರ್ದಿಷ್ಟ ವಾರ್ಷಿಕ ವೇತನವನ್ನು ಪಡೆಯುತ್ತಾನೆ. ಅಷ್ಟುಮಾತ್ರವಲ್ಲದೆ, ವರ್ಷಾಶನ ದಾನವು ಸ್ಥಾಪಿತವಾದ ವರುಷ ದಾನಿಗೆ ವರಮಾನ ತೆರಿಗೆಯಲ್ಲಿ ಕಡಿತ ಸಿಗುತ್ತದೆ.

ಉಯಿಲುಗಳು ಮತ್ತು ಟ್ರಸ್ಟ್‌ಗಳು: ಆಸ್ತಿ ಅಥವಾ ಹಣವನ್ನು ಕಾನೂನುಬದ್ಧವಾಗಿ ನಿರ್ವಹಿಸಿದ ಉಯಿಲಿನ ಮೂಲಕ ದ ವಾಚ್‌ಟವರ್‌ ಸೊಸೈಟಿಗೆ ಬಿಟ್ಟುಹೋಗಬಹುದು. ಅಥವಾ ದ ವಾಚ್‌ಟವರ್‌ ಸೊಸೈಟಿಯನ್ನು ಒಂದು ಟ್ರಸ್ಟ್‌ ಒಪ್ಪಿಗೆ ಪತ್ರದ ಫಲಾನುಭವಿಯಾಗಿ ಹೆಸರಿಸಬಹುದು. ಕೆಲವು ದೇಶಗಳಲ್ಲಿ, ಒಂದು ಧಾರ್ಮಿಕ ಸಂಸ್ಥೆಗೆ ಪ್ರಯೋಜನವನ್ನು ನೀಡುವಂಥ ಟ್ರಸ್ಟ್‌, ನಿರ್ದಿಷ್ಟ ತೆರಿಗೆ ವಿನಾಯಿತಿಗಳನ್ನು ನೀಡಬಹುದಾದರೂ, ಭಾರತದಲ್ಲಿ ಈ ರೀತಿ ಇಲ್ಲ.

“ಚ್ಯಾರಿಟಬಲ್‌ ಯೋಜನೆ” ಎಂಬ ಪದವು ಸೂಚಿಸುವಂತೆ, ಈ ರೀತಿಯ ದಾನಗಳು ದಾನಿಯು ಕೆಲವೊಂದು ಯೋಜನೆಯನ್ನು ಮಾಡುವಂತೆ ಅಗತ್ಯಪಡಿಸುತ್ತವೆ. ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸಕ್ಕೆ ಯಾವುದೇ ರೀತಿಯ ಚ್ಯಾರಿಟಬಲ್‌ ಯೋಜನೆಯಿಂದ ಪ್ರಯೋಜನವಾಗುವಂತೆ ಬಯಸುವ ವ್ಯಕ್ತಿಗಳಿಗೆ ನೆರವು ನೀಡಲು, ಲೋಕವ್ಯಾಪಕ ರಾಜ್ಯ ಸೇವೆಯನ್ನು ಬೆಂಬಲಿಸಲು ಚ್ಯಾರಿಟಬಲ್‌ ಯೋಜನೆ ಎಂಬ ಬ್ರೋಷರ್‌ ಅನ್ನು ಇಂಗ್ಲಿಷ್‌ ಮತ್ತು ಸ್ಪ್ಯಾನಿಷ್‌ ಭಾಷೆಯಲ್ಲಿ ತಯಾರಿಸಲಾಗಿದೆ. * ಈಗ ಅಥವಾ ಅಂತಿಮ ಉಯಿಲಿನ ಮೂಲಕ ಕೊಡುಗೆಗಳನ್ನು ನೀಡಬಹುದಾದ ವಿವಿಧ ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡಲಿಕ್ಕಾಗಿ ಈ ಬ್ರೋಷರನ್ನು ತಯಾರಿಸಲಾಗಿದೆ. ಬ್ರೋಷರನ್ನು ಓದಿದ ಮತ್ತು ತಮ್ಮ ಸ್ವಂತ ವಕೀಲರೊಂದಿಗೆ ಚರ್ಚಿಸಿದ ಬಳಿಕ ಅನೇಕರು, ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳಿಗೆ ಸಹಾಯವನ್ನು ನೀಡಲು ಶಕ್ತರಾಗಿದ್ದಾರೆ ಮತ್ತು ಅದೇ ಸಮಯದಲ್ಲಿ ಈ ರೀತಿಯಾಗಿ ಮಾಡುವ ಮೂಲಕ ತಮ್ಮ ತೆರಿಗೆ ಪ್ರಯೋಜನಗಳನ್ನು ಸಹ ಹೆಚ್ಚಿಸಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ, ಪತ್ರಗಳ ಅಥವಾ ಫೋನಿನ ಮೂಲಕ ಕೆಳಗೆ ನೀಡಲ್ಪಟ್ಟಿರುವ ವಿಳಾಸದಲ್ಲಿ ಯೆಹೋವನ ಸಾಕ್ಷಿಗಳನ್ನು ಅಥವಾ ನಿಮ್ಮ ದೇಶದಲ್ಲಿರುವ ಯೆಹೋವನ ಸಾಕ್ಷಿಗಳ ಕೆಲಸವನ್ನು ನೋಡಿಕೊಳ್ಳುವ ಆಫೀಸನ್ನು ನೀವು ಸಂಪರ್ಕಿಸಬಹುದು.

Charitable Planning Office

Jehovah’s Witnesses,

Post Box 6440,

Yelahanka,

Bangalore 560 064,

Karnataka.

Telephone: (080) 28468072

[ಪುಟ 27ರಲ್ಲಿರುವ ಚಿತ್ರ ಕೃಪೆ]

Faithful video: Stalin: U.S. Army photo

[ಪಾದಟಿಪ್ಪಣಿ]

^ ಪ್ಯಾರ. 60 ಭಾರತದಲ್ಲಿ ಲಭ್ಯವಿಲ್ಲ.