ನಿಮ್ಮ ಆಧ್ಯಾತ್ಮಿಕ ಆವಶ್ಯಕತೆಗಳನ್ನು ನೀವು ಹೇಗೆ ತೃಪ್ತಿಪಡಿಸಿಕೊಳ್ಳಸಾಧ್ಯವಿದೆ?
ನಿಮ್ಮ ಆಧ್ಯಾತ್ಮಿಕ ಆವಶ್ಯಕತೆಗಳನ್ನು ನೀವು ಹೇಗೆ ತೃಪ್ತಿಪಡಿಸಿಕೊಳ್ಳಸಾಧ್ಯವಿದೆ?
“ಕಳೆದ ದಶಕದಲ್ಲಿ ಪುಸ್ತಕದ ಅಂಗಡಿಗಳು, ಐಹಿಕ ಕೆಲಸದ ಸ್ಥಳದಲ್ಲಿನ ಆಧ್ಯಾತ್ಮಿಕತೆಯ—ಜೀಸಸ್ ಸಿಇಓ ಎಂಬ ಪುಸ್ತಕದಿಂದ ಹಿಡಿದು ದ ಟಾವು ಆಫ್ ಲೀಡರ್‌ಶಿಪ್ ಎಂಬ ಪುಸ್ತಕದ ವರೆಗೆ—ಬಗ್ಗೆ ಬರೆಯಲ್ಪಟ್ಟಿರುವ 300ಕ್ಕಿಂತಲೂ ಹೆಚ್ಚು ಪುಸ್ತಕಗಳಿಂದ ತುಂಬಿಹೋಗಿವೆ” ಎಂದು ಯು.ಎಸ್.ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ಪತ್ರಿಕೆಯು ತಿಳಿಸುತ್ತದೆ. ಈ ಪ್ರವೃತ್ತಿಯು, ಭೌತಿಕವಾಗಿ ಸಂಪದ್ಭರಿತವಾಗಿರುವ ಅನೇಕ ದೇಶಗಳಲ್ಲಿ
ಜೀವನದಲ್ಲಿ ಆಧ್ಯಾತ್ಮಿಕ ಮಾರ್ಗದರ್ಶನಕ್ಕಾಗಿರುವ ಹಸಿವೆಯು ಏಕಪ್ರಕಾರವಾಗಿ ಹೆಚ್ಚಾಗುತ್ತಿದೆ ಎಂಬ ವಾಸ್ತವಾಂಶದ ಕೇವಲ ಒಂದು ಪ್ರತಿಬಿಂಬವಾಗಿದೆ. ಇದರ ಬಗ್ಗೆ ಹೇಳಿಕೆ ನೀಡುತ್ತಾ, ತರಬೇತಿ ಹಾಗೂ ಅಭಿವೃದ್ಧಿ (ಇಂಗ್ಲಿಷ್) ಎಂಬ ವಾಣಿಜ್ಯ ಪತ್ರಿಕೆಯು ಹೀಗೆ ತಿಳಿಸುತ್ತದೆ: “ತಂತ್ರಜ್ಞಾನವು ನಮ್ಮ ಜೀವಿತಗಳ ಪ್ರತಿಯೊಂದು ಅಂಶವನ್ನೂ ಪ್ರಭಾವಿಸುತ್ತಿರುವಂಥ ಈ ಸಮಯದಲ್ಲಿ, ನಾವು ಹೆಚ್ಚು ಗಹನವಾದ ಅರ್ಥಕ್ಕಾಗಿ, ಉದ್ದೇಶಕ್ಕಾಗಿ ಮತ್ತು ಇನ್ನೂ ಹೆಚ್ಚಿನ ವೈಯಕ್ತಿಕ ಸಂತೃಪ್ತಿಗಾಗಿ ಹುಡುಕಾಡುತ್ತಿದ್ದೇವೆ.”ಹಾಗಾದರೆ, ತೃಪ್ತಿಕರವಾದ ಆಧ್ಯಾತ್ಮಿಕ ಮಾರ್ಗದರ್ಶನವನ್ನು ನೀವೆಲ್ಲಿ ಕಂಡುಕೊಳ್ಳಸಾಧ್ಯವಿದೆ? ಗತಸಮಯಗಳಲ್ಲಿ, ಜನರು ಜೀವನದಲ್ಲಿ “ಗಹನವಾದ ಅರ್ಥ”ವನ್ನು ಮತ್ತು “ಉದ್ದೇಶ”ವನ್ನು ಕಂಡುಕೊಳ್ಳಲು ಸಹಾಯಕ್ಕಾಗಿ ಅಧಿಕೃತ ಧರ್ಮದ ಕಡೆಗೆ ತೆರಳಿದರು. ಇಂದು, ಅನೇಕರು ಈ ಅಧಿಕೃತ ಧರ್ಮಕ್ಕೆ ಬೆನ್ನುಹಾಕಿದ್ದಾರೆ. 90 ಮಂದಿ ಉಚ್ಚ ವರ್ಗದ ಮ್ಯಾನೇಜರರು ಮತ್ತು ಕಾರ್ಯನಿರ್ವಾಹಕರ ಒಂದು ಸಮೀಕ್ಷೆಯು, “ಜನರು ಧರ್ಮ ಮತ್ತು ಆಧ್ಯಾತ್ಮಿಕತೆಯ ನಡುವೆ ಇರುವ ಸುಸ್ಪಷ್ಟ ಭೇದವನ್ನು ಗ್ರಹಿಸುತ್ತಾರೆ” ಎಂಬುದಾಗಿ ಕಂಡುಕೊಂಡಿತು ಎಂದು ತರಬೇತಿ ಹಾಗೂ ಅಭಿವೃದ್ಧಿ (ಇಂಗ್ಲಿಷ್) ಪತ್ರಿಕೆಯು ತಿಳಿಸುತ್ತದೆ. ಈ ಸಮೀಕ್ಷೆಯ ಸಮರ್ಥಕರು ಧರ್ಮವನ್ನು “ಅಸಹಿಷ್ಣುವಾದ ಮತ್ತು ವಿಭಾಜಕ” ಅಂಶವಾಗಿ, ಆದರೆ ಆಧ್ಯಾತ್ಮಿಕತೆಯನ್ನು “ಸಾರ್ವತ್ರಿಕವೂ ಸರ್ವಾಂತರ್ಗತವೂ” ಆಗಿ ಪರಿಗಣಿಸಿದರು.
ತದ್ರೀತಿಯಲ್ಲಿ ಆಸ್ಟ್ರೇಲಿಯ, ನ್ಯೂ ಸೀಲೆಂಡ್, ಯುನೈಟೆಡ್ ಕಿಂಗ್‌ಡಮ್, ಮತ್ತು ಯೂರೋಪ್‌ನಂಥ ಅಧಾರ್ಮಿಕ ಸಮಾಜಗಳಲ್ಲಿರುವ ಅನೇಕ ಯುವ ಜನರು ಸಹ ಧರ್ಮ ಮತ್ತು ಆಧ್ಯಾತ್ಮಿಕತೆಯ ನಡುವಿನ ವ್ಯತ್ಯಾಸವನ್ನು ಮನಗಾಣುತ್ತಾರೆ. ಯೂಥ್ ಸ್ಟಡೀಸ್ ಆಸ್ಟ್ರೇಲಿಯ ಎಂಬ ಪತ್ರಿಕೆಯಲ್ಲಿ ಬರೆಯುತ್ತಾ ಪ್ರೊಫೆಸರ್ ರೂತ್ ವೆಬರ್ ಹೀಗೆ ಒತ್ತಿಹೇಳುತ್ತಾರೆ: “ಅಧಿಕಾಂಶ ಯುವ ಜನರು, ದೇವರಲ್ಲಿ ಅಥವಾ ಒಂದಲ್ಲ ಒಂದು ರೀತಿಯ ಅಮಾನುಷ ಶಕ್ತಿಯಲ್ಲಿ ನಂಬಿಕೆಯಿಡುತ್ತಾರೆ, ಆದರೆ ಅವರು ತಮ್ಮ ಆಧ್ಯಾತ್ಮಿಕತೆಯನ್ನು ವ್ಯಕ್ತಪಡಿಸುವುದರಲ್ಲಿ ಚರ್ಚು ಪ್ರಾಮುಖ್ಯವಾಗಿದೆ ಅಥವಾ ಸಹಾಯಕರವಾಗಿದೆ ಎಂದು ಪರಿಗಣಿಸುವುದೇ ಇಲ್ಲ.”
ಸತ್ಯ ಧರ್ಮವು ಆಧ್ಯಾತ್ಮಿಕತೆಯನ್ನು ಉತ್ತೇಜಿಸುತ್ತದೆ
ಧರ್ಮದ ಕುರಿತಾದ ಈ ಸಂದೇಹಾಸ್ಪದ ವಿಚಾರವು ಗ್ರಾಹ್ಯ. ಅನೇಕ ಧಾರ್ಮಿಕ ಸಂಸ್ಥೆಗಳು ರಾಜಕೀಯ ಸಂಧಾನ ಮತ್ತು ನೈತಿಕ ಕಪಟತನದ ಕೊಚ್ಚೆಯಲ್ಲಿ ಹೂತುಹೋಗಿವೆ ಹಾಗೂ ಅಸಂಖ್ಯಾತ ಧಾರ್ಮಿಕ ಯುದ್ಧಗಳಲ್ಲಿ ಮುಗ್ಧ ಜನರ ಹತ್ಯೆಗೈಯುವ ಮೂಲಕ ಅವರ ರಕ್ತದಲ್ಲಿ ನೆನೆದುಹೋಗಿವೆ. ಆದರೂ, ಕೆಲವರು ಕಪಟತನ ಮತ್ತು ವಂಚನೆಯಿಂದ ಕಲುಷಿತಗೊಂಡಿರುವ ಧಾರ್ಮಿಕ ಸಂಸ್ಥೆಗಳನ್ನು ತಿರಸ್ಕರಿಸಿರುವುದಾದರೂ, ಬೈಬಲನ್ನು ಸಹ ತಿರಸ್ಕರಿಸುವ ತಪ್ಪನ್ನು ಅವರು ಮಾಡಿದ್ದಾರೆ, ಏಕೆಂದರೆ ಅದು ಇಂಥ ಕಾರ್ಯಗಳನ್ನು ಪೂರ್ಣವಾಗಿ ಮನ್ನಿಸುತ್ತದೆಂದು ಅವರು ನೆನಸುತ್ತಾರೆ.
ವಾಸ್ತವದಲ್ಲಿ, ಕಪಟತನ ಮತ್ತು ಅನ್ಯಾಯವನ್ನು ಬೈಬಲು ಖಂಡಿಸುತ್ತದೆ. ತನ್ನ ದಿನದ ಧಾರ್ಮಿಕ ಮುಖಂಡರಿಗೆ ಯೇಸು ಹೇಳಿದ್ದು: “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಸುಣ್ಣಾ ಹಚ್ಚಿದ ಸಮಾಧಿಗಳಿಗೆ ಹೋಲಿಕೆಯಾಗಿದ್ದೀರಿ; ಇವು ಹೊರಗೆ ಚಂದವಾಗಿ ಕಾಣುತ್ತವೆ. ಒಳಗೆ ನೋಡಿದರೆ ಸತ್ತವರ ಎಲುಬುಗಳಿಂದಲೂ ಎಲ್ಲಾ ಹೊಲಸಿನಿಂದಲೂ ತುಂಬಿರುತ್ತವೆ. ಹಾಗೆಯೇ ನೀವು ಸಹ ಹೊರಗೆ ಜನರಿಗೆ ಸತ್ಪುರುಷರಂತೆ ಕಾಣಿಸಿಕೊಳ್ಳುತ್ತೀರಿ ಸರಿ, ಆದರೆ ಒಳಗೆ ಕಪಟದಿಂದಲೂ ಅನ್ಯಾಯದಿಂದಲೂ ತುಂಬಿದವರಾಗಿದ್ದೀರಿ.”—ಮತ್ತಾಯ 23:27, 28.
ಅಷ್ಟುಮಾತ್ರವಲ್ಲ, ಎಲ್ಲಾ ರಾಜಕೀಯ ಆಗುಹೋಗುಗಳಲ್ಲಿ ಕ್ರೈಸ್ತರು ತಟಸ್ಥರಾಗಿರುವಂತೆ ಬೈಬಲು ಉತ್ತೇಜಿಸುತ್ತದೆ. ಪರಸ್ಪರ ಹತ್ಯೆಗೈಯುವಂತೆ ವಿಶ್ವಾಸಿಗಳನ್ನು ಪ್ರೋತ್ಸಾಹಿಸುವ ಬದಲು, ಅವರು ಒಬ್ಬರು ಇನ್ನೊಬ್ಬರಿಗೋಸ್ಕರ ಪ್ರಾಣವನ್ನೇ ಕೊಡಲು ಸಿದ್ಧರಾಗಿರುವಂತೆ ಅದು ತಿಳಿಸುತ್ತದೆ. (ಯೋಹಾನ 15:12, 13; 18:36; 1 ಯೋಹಾನ 3:10-12) ಬೈಬಲ್ ಆಧಾರಿತ ಸತ್ಯ ಧರ್ಮವು “ಅಸಹಿಷ್ಣುವಾದ ಮತ್ತು ವಿಭಾಜಕ” ಅಂಶವಾಗಿರುವುದಕ್ಕೆ ಬದಲಾಗಿ, “ಸರ್ವಾಂತರ್ಗತ” ಆಗಿದೆ. ಅಪೊಸ್ತಲ ಪೇತ್ರನು ಹೇಳಿದ್ದು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.”—ಅ. ಕೃತ್ಯಗಳು 10:34, 35.
ಬೈಬಲ್ —ಆಧ್ಯಾತ್ಮಿಕ ಆರೋಗ್ಯಕ್ಕೆ ವಿಶ್ವಾಸಾರ್ಹ ಮಾರ್ಗದರ್ಶಕ
ಮಾನವರು ದೇವರ ಸ್ವರೂಪದಲ್ಲಿ ಉಂಟುಮಾಡಲ್ಪಟ್ಟಿದ್ದಾರೆ ಎಂದು ಬೈಬಲ್ ನಮಗೆ ಹೇಳುತ್ತದೆ. (ಆದಿಕಾಂಡ 1:26, 27) ಶಾರೀರಿಕ ರೀತಿಯಲ್ಲಿ ಮಾನವರು ದೇವರಿಗೆ ಹೋಲಿಕೆಯಲ್ಲಿದ್ದಾರೆ ಎಂಬುದನ್ನು ಇದು ಅರ್ಥೈಸುವುದಿಲ್ಲವಾದರೂ, ಆಧ್ಯಾತ್ಮಿಕ ವಿಷಯಗಳಿಗಾಗಿ ಅಥವಾ ಆಧ್ಯಾತ್ಮಿಕತೆಗಾಗಿರುವ ಸಾಮರ್ಥ್ಯವನ್ನು ಒಳಗೊಂಡು ದೇವರ ವ್ಯಕ್ತಿತ್ವದ ಇತರ ಪ್ರವೃತ್ತಿಗಳನ್ನು ಪ್ರತಿಬಿಂಬಿಸುವ ಸಾಮರ್ಥ್ಯ ಮಾನವರಿಗಿದೆ ಎಂಬುದನ್ನು ಇದು ಅರ್ಥೈಸುತ್ತದೆ.
ವಿಷಯವು ಹೀಗಿರುವಾಗ, ಯಾವುದು ನಮಗೆ ಆಧ್ಯಾತ್ಮಿಕವಾಗಿ ಪ್ರಯೋಜನಾರ್ಹವಾಗಿದೆ ಮತ್ತು ಯಾವುದು ಹಾನಿಕರವಾಗಿದೆ ಎಂಬುದರ ಭೇದವನ್ನು ಗ್ರಹಿಸಸಾಧ್ಯವಾಗುವಂತೆ, ನಮ್ಮ ಆಧ್ಯಾತ್ಮಿಕ ಆವಶ್ಯಕತೆಗಳನ್ನು ತೃಪ್ತಿಪಡಿಸಲಿಕ್ಕಾಗಿರುವ ಮಾಧ್ಯಮವನ್ನು ಹಾಗೂ ಸೂಕ್ತವಾದ ಮಾರ್ಗದರ್ಶನವನ್ನು ಸಹ ದೇವರು ಒದಗಿಸುವನೆಂದು ನಂಬುವುದು ತರ್ಕಬದ್ಧವಾದ ಸಂಗತಿಯಾಗಿದೆ. ಹೇಗೆ ದೇವರು ರೋಗದೊಂದಿಗೆ ಹೋರಾಡುವ ಮತ್ತು ನಾವು ಆರೋಗ್ಯವಂತರಾಗಿ ಇರುವಂತೆ ಸಹಾಯಮಾಡುವ ಅತ್ಯುತ್ತಮ ಸೋಂಕು ರಕ್ಷಾ ವ್ಯವಸ್ಥೆಯನ್ನು ನಮ್ಮ ದೇಹದಲ್ಲಿ ಸೃಷ್ಟಿಸಿದ್ದಾನೋ ಹಾಗೆಯೇ ನಮ್ಮಲ್ಲಿ ಒಂದು ಮನಸ್ಸಾಕ್ಷಿಯನ್ನು ಅಥವಾ ಅಂತರಾತ್ಮದ ಕರೆಯನ್ನು ಸಜ್ಜುಗೊಳಿಸಿದ್ದಾನೆ. ಇದು ಸರಿಯಾದ ನಿರ್ಣಯಗಳನ್ನು ಮಾಡಲು ಮತ್ತು ಶಾರೀರಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಹಾನಿಕರವಾಗಿರುವ ರೂಢಿಗಳಿಂದ ದೂರವಿರಲು ನಮಗೆ ಸಹಾಯಮಾಡುತ್ತದೆ. (ರೋಮಾಪುರ 2:14, 15) ನಮ್ಮ ಸೋಂಕು ರಕ್ಷಾ ವ್ಯವಸ್ಥೆಯು ಸರಿಯಾಗಿ ಕೆಲಸಮಾಡಬೇಕಾದರೆ, ಅದಕ್ಕೆ ಯೋಗ್ಯ ರೀತಿಯ ಪೋಷಣೆಯ ಅಗತ್ಯವಿದೆ ಎಂಬುದು ನಮಗೆ ಗೊತ್ತೇ ಇದೆ. ತದ್ರೀತಿಯಲ್ಲಿ, ನಮ್ಮ ಮನಸ್ಸಾಕ್ಷಿಯು ಕೆಲಸಮಾಡಬೇಕಾದರೆ, ನಾವು ಅದಕ್ಕೆ ಒಳ್ಳೆಯ ಆಧ್ಯಾತ್ಮಿಕ ಆಹಾರವನ್ನು ಕ್ರಮವಾಗಿ ಉಣಿಸುವ ಆವಶ್ಯಕತೆಯಿದೆ.
ಯಾವ ರೀತಿಯ ಆಹಾರವು ನಮ್ಮನ್ನು ಆಧ್ಯಾತ್ಮಿಕವಾಗಿ ಆರೋಗ್ಯವಂತರನ್ನಾಗಿ ಇಡುತ್ತದೆ ಎಂಬುದನ್ನು ಗುರುತಿಸುತ್ತಾ ಯೇಸು ಹೇಳಿದ್ದು: ಮತ್ತಾಯ 4:4) ಯೆಹೋವನ ನುಡಿಗಳು ಆತನ ವಾಕ್ಯವಾಗಿರುವ ಬೈಬಲಿನಲ್ಲಿ ದಾಖಲಿಸಲ್ಪಟ್ಟಿವೆ, ಮತ್ತು ಅವು “ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ” ಉಪಯುಕ್ತವಾಗಿವೆ. (2 ತಿಮೊಥೆಯ 3:16) ಆದುದರಿಂದ, ಆ ಆಧ್ಯಾತ್ಮಿಕ ಪೋಷಣೆಯನ್ನು ತೆಗೆದುಕೊಳ್ಳಲು ಪ್ರಯತ್ನವನ್ನು ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ನಾವು ಎಷ್ಟರ ಮಟ್ಟಿಗೆ ಬೈಬಲಿನ ಬಗ್ಗೆ ತಿಳಿದುಕೊಂಡು ಅದರ ಮೂಲತತ್ತ್ವಗಳನ್ನು ನಮ್ಮ ಜೀವನದಲ್ಲಿ ಅನ್ವಯಿಸಿಕೊಳ್ಳಲು ಪ್ರಯತ್ನಿಸುತ್ತೇವೋ ಅಷ್ಟರ ಮಟ್ಟಿಗೆ ನಾವು ಆಧ್ಯಾತ್ಮಿಕವಾಗಿಯೂ ಶಾರೀರಿಕವಾಗಿಯೂ ಪ್ರಯೋಜನವನ್ನು ಪಡೆದುಕೊಳ್ಳುವೆವು.—ಯೆಶಾಯ 48:17, 18.
“ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು.” (ಪ್ರಯತ್ನ ಸಾರ್ಥಕವೋ?
ಬೈಬಲ್ ಅಧ್ಯಯನ ಮಾಡುವ ಮೂಲಕ ನಮ್ಮ ಆಧ್ಯಾತ್ಮಿಕ ಆರೋಗ್ಯವನ್ನು ಉತ್ತಮಗೊಳಿಸಲು ಸಮಯ ಹಿಡಿಯುತ್ತದೆ ಎಂಬುದು ಒಪ್ಪಿಕೊಳ್ಳತಕ್ಕದ್ದೇ; ಮತ್ತು ಸಮಯವು ತುಂಬ ಅಪರೂಪದ ವಸ್ತುವಾಗಿ ಪರಿಣಮಿಸಿರುವಂತೆ ತೋರುತ್ತದೆ. ಆದರೆ ಇದರಿಂದ ಸಿಗುವ ಪ್ರತಿಫಲಗಳಾದರೋ ಪ್ರಯತ್ನವನ್ನು ಸಾರ್ಥಕವಾಗಿಸುತ್ತವೆ! ತಮ್ಮ ಆಧ್ಯಾತ್ಮಿಕ ಆರೋಗ್ಯದ ಆರೈಕೆಗಾಗಿ ಸಮಯವನ್ನು ಮಾಡಿಕೊಳ್ಳುವುದು ಏಕೆ ಪ್ರಾಮುಖ್ಯವಾಗಿದೆಯೆಂದು ತುಂಬ ಕಾರ್ಯಮಗ್ನರಾಗಿರುವ ಕೆಲವು ವೃತ್ತಿಪರ ವ್ಯಕ್ತಿಗಳು ಹೇಗೆ ವಿವರಿಸುತ್ತಾರೆ ಎಂಬುದನ್ನು ಗಮನಿಸಿರಿ.
ವೈದ್ಯೆಯಾಗಿರುವ ಮಾರೀನ ಹೇಳುವುದು: “ನಾನು ಒಂದು ಆಸ್ಪತ್ರೆಯಲ್ಲಿ ಕೆಲಸಮಾಡಲು ಆರಂಭಿಸಿ, ಇತರರ ನರಳಾಟವು ನನ್ನ ಜೀವನದ ಮೇಲೆ ಆಳವಾದ ಪರಿಣಾಮವನ್ನು ಬೀರುವಷ್ಟರ ತನಕ ನನ್ನ ಆಧ್ಯಾತ್ಮಿಕತೆಯ ಕುರಿತು ನಾನೆಂದೂ ತಲೆಕೆಡಿಸಿಕೊಂಡಿರಲಿಲ್ಲ. ನನ್ನಂಥ ವೃತ್ತಿಯಲ್ಲಿರುವ ಯಾರೇ ಆಗಲಿ ವೇಗವಾದ ಜೀವನ ರೀತಿ ಮತ್ತು ಜನರ ಚಿಂತೆಗಳ ಕುರಿತು ಕಾಳಜಿ ವಹಿಸುವಂತೆ ಒತ್ತಡವನ್ನು ಹೇರುವ ವಿಚಾರಗಳಲ್ಲೇ ಸಂಪೂರ್ಣವಾಗಿ ಮುಳುಗಿಹೋಗುವುದರಿಂದ, ಒಂದುವೇಳೆ ನನಗೆ ಸಂತೃಪ್ತಿ ಹಾಗೂ ಮಾನಸಿಕ ನೆಮ್ಮದಿಯು ಸಿಗಬೇಕಾದರೆ ನಾನು ನನ್ನ ಆಧ್ಯಾತ್ಮಿಕ ಆವಶ್ಯಕತೆಯನ್ನು ಮನಗಾಣಬೇಕು ಮತ್ತು ಅದನ್ನು ತೃಪ್ತಿಪಡಿಸಬೇಕು ಎಂಬುದು ನನಗೆ ಮನವರಿಕೆಯಾಯಿತು.
“ಈಗ ನಾನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನ ಮಾಡುತ್ತಿದ್ದೇನೆ. ನನ್ನ ಚಟುವಟಿಕೆಗಳನ್ನು ಪರೀಕ್ಷಿಸುವಂತೆ ಈ ಅಧ್ಯಯನವು ನನಗೆ ಸಹಾಯಮಾಡುತ್ತದೆ ಮತ್ತು ರಚನಾತ್ಮಕವಾದ ರೀತಿಯಲ್ಲಿ ನನ್ನನ್ನು ಪ್ರೇರೇಪಿಸುತ್ತದೆ ಹಾಗೂ ನಾನು ಹೆಚ್ಚು ಸಕಾರಾತ್ಮಕ ಮನೋಭಾವದವಳಾಗಿರುವಂತೆ ನನ್ನ ಆಲೋಚನೆಗಳನ್ನು ರೂಪಿಸುತ್ತದೆ; ಇದು ನಾನು ಸಮತೂಕವಾದ ಜೀವನವನ್ನು ನಡೆಸುವಂತೆ ಸಹಾಯಮಾಡುತ್ತದೆ. ನನ್ನ ಐಹಿಕ ಕೆಲಸದಲ್ಲೂ ನಾನು ಮಹತ್ತರವಾದ ತೃಪ್ತಿಯನ್ನು ಕಂಡುಕೊಳ್ಳುತ್ತೇನೆ. ನನ್ನ ಬೈಬಲ್ ಅಧ್ಯಯನವೇ, ಅಹಿತಕರ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲು, ಉದ್ವೇಗವನ್ನು ಕಡಿಮೆಗೊಳಿಸಲು, ಮತ್ತು ಜನರೊಂದಿಗೆ ಹೆಚ್ಚು ತಾಳ್ಮೆಯಿಂದ ಹಾಗೂ ಸಹಾನೂಭೂತಿಯಿಂದ ವರ್ತಿಸಲು ಸಹಾಯಮಾಡುತ್ತಾ ನನ್ನ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸಿದೆ. ಬೈಬಲ್ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವುದು ನನ್ನ ವಿವಾಹದಲ್ಲಿಯೂ ಪ್ರಯೋಜನದಾಯಕವಾಗಿ ಪರಿಣಮಿಸಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ನಾನು ಯೆಹೋವನನ್ನು ತುಂಬ ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ ಮತ್ತು ಸ್ವಲ್ಪ ಮಟ್ಟಿಗೆ ಆತನ ಪವಿತ್ರಾತ್ಮದ ಸಹಾಯವನ್ನೂ ಅನುಭವಿಸಿದ್ದೇನೆ; ಮತ್ತು ಇದು ನನ್ನ ಜೀವಿತಕ್ಕೆ ಹೆಚ್ಚಿನ ಅರ್ಥವನ್ನು ನೀಡಿದೆ.”
ವಾಸ್ತುಶಿಲ್ಪದ ವಿನ್ಯಾಸಕನಾಗಿರುವ ನಿಕೊಲಸ್ ಹೇಳುವುದು: “ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನ ಮಾಡುವುದಕ್ಕೆ ಮುಂಚೆ ನನಗೆ ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿಯೇ ಇರಲಿಲ್ಲ. ಜೀವನದಲ್ಲಿ ನನಗಿದ್ದ ಏಕಮಾತ್ರ ಗುರಿ, ನಾನು ಆಯ್ಕೆಮಾಡಿದ್ದ ವೃತ್ತಿಯಲ್ಲಿ ಸಾಫಲ್ಯವನ್ನು ಪಡೆಯುವುದೇ ಆಗಿತ್ತು. ನನ್ನ ಬೈಬಲ್ ಅಧ್ಯಯನವು, ಜೀವನದಲ್ಲಿ ಇನ್ನೂ ಹೆಚ್ಚಿನದ್ದು ಒಳಗೂಡಿದೆ ಮತ್ತು ಯೆಹೋವನ ಚಿತ್ತವನ್ನು ಮಾಡುವುದೇ ನಿಜವಾದ ಮತ್ತು ನಿತ್ಯವಾದ ಸಂತೋಷವನ್ನು ತರುವುದು ಎಂಬುದನ್ನು ನನಗೆ ಕಲಿಸಿದೆ.
“ನನ್ನ ಐಹಿಕ ಉದ್ಯೋಗವು ನನಗೆ ಸಂತೃಪ್ತ ಭಾವವನ್ನು ಕೊಡುತ್ತದಾದರೂ, ಆಧ್ಯಾತ್ಮಿಕ ವಿಷಯಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸುವ ಮೂಲಕ ಜೀವನವನ್ನು ಸರಳವಾಗಿರಿಸಿಕೊಳ್ಳುವುದರ ಪ್ರಾಮುಖ್ಯತೆಯ ಕುರಿತು ಬೈಬಲ್ ನನಗೆ ಒಳ್ಳೆಯ ಪಾಠವನ್ನು ಕಲಿಸಿದೆ. ಹೀಗೆ ಮಾಡುವ ಮೂಲಕ, ನಾನೂ ನನ್ನ ಹೆಂಡತಿಯೂ ಪ್ರಾಪಂಚಿಕ ಜೀವನ ಶೈಲಿಯಿಂದ ಬರುವಂಥ ಒತ್ತಡದಲ್ಲಿ ಹೆಚ್ಚಿನದ್ದನ್ನು ದೂರಮಾಡಲು ಶಕ್ತರಾಗಿದ್ದೇವೆ. ಜೀವನದ ಬಗ್ಗೆ ನಮ್ಮಂಥದ್ದೇ ಆಧ್ಯಾತ್ಮಿಕ ಹೊರನೋಟವುಳ್ಳವರೊಂದಿಗಿನ ಸಹವಾಸದ ಮೂಲಕ ನಾವು ನಿಜವಾದ ಸ್ನೇಹಿತರನ್ನೂ ಮಾಡಿಕೊಂಡಿದ್ದೇವೆ.”
ವಕೀಲನಾಗಿರುವ ವಿನ್ಸೆಂಟ್ ಹೇಳುವುದು: “ಒಂದು ಒಳ್ಳೇ ಐಹಿಕ ವೃತ್ತಿಯು ಸ್ವಲ್ಪ ಮಟ್ಟಿಗಿನ ತೃಪ್ತಿಯನ್ನು ನೀಡಬಲ್ಲದು. ಆದರೂ, ಸಂತೋಷ ಮತ್ತು ಸಂತೃಪ್ತಿಯನ್ನು ಪಡೆದುಕೊಳ್ಳಲು ಇನ್ನೂ ಹೆಚ್ಚಿನದ್ದರ ಅಗತ್ಯವಿದೆ
ಎಂಬುದು ನನ್ನ ಅರಿವಿಗೆ ಬಂದಿದೆ. ಈ ವಿಷಯದ ಕುರಿತಾದ ಬೈಬಲ್ ಬೋಧನೆಯನ್ನು ತಿಳಿದುಕೊಳ್ಳುವ ಮುಂಚೆ, ನಾನು ಜೀವನದ ಉದ್ದೇಶರಹಿತ ಸ್ಥಿತಿಯನ್ನು—ಹುಟ್ಟುವುದು, ಬೆಳೆಯುವುದು, ಮದುವೆಯಾಗುವುದು, ಮಕ್ಕಳನ್ನು ಬೆಳೆಸಲಿಕ್ಕಾಗಿ ಭೌತಿಕವಾಗಿ ಅಗತ್ಯವಿರುವುದನ್ನು ಒದಗಿಸುವ ಸಲುವಾಗಿ ಒಂದು ಉದ್ಯೋಗಕ್ಕೆ ಹೋಗುವುದು, ನಮ್ಮಂಥದ್ದೇ ಜೀವನ ಚಕ್ರವನ್ನು ಅನುಸರಿಸಲು ಮಕ್ಕಳಿಗೆ ತರಬೇತಿ ಕೊಡುವುದು, ಮತ್ತು ಕೊನೆಗೆ ವಯಸ್ಸಾಗಿ ಸಾಯುವುದು—ನೆನಸಿ ಅಧೀರನಾದದ್ದು ನನಗೆ ನೆನಪಿಗೆ ಬರುತ್ತದೆ.“ಯೆಹೋವನ ಸಾಕ್ಷಿಗಳೊಂದಿಗೆ ಅಧ್ಯಯನ ಮಾಡಿದ ಬಳಿಕವೇ, ಜೀವನದ ಉದ್ದೇಶದ ಕುರಿತಾದ ನನ್ನ ಪ್ರಶ್ನೆಗಳಿಗೆ ಸಂತೃಪ್ತಿಕರ ಉತ್ತರಗಳು ದೊರೆತವು. ನನ್ನ ಬೈಬಲ್ ಅಧ್ಯಯನವು, ಒಬ್ಬ ವ್ಯಕ್ತಿಯೋಪಾದಿ ಯೆಹೋವನನ್ನು ತಿಳಿದುಕೊಳ್ಳುವಂತೆ ಮತ್ತು ಆತನಿಗಾಗಿ ಆಳವಾದ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡಿದೆ. ಇದು, ಯೆಹೋವನ ಉದ್ದೇಶವು ಏನಾಗಿದೆಯೆಂದು ನನಗೆ ಗೊತ್ತಿದೆಯೋ ಅದಕ್ಕೆ ಹೊಂದಿಕೆಯಲ್ಲಿ ಜೀವಿಸಲು ಪ್ರಯತ್ನಿಸುತ್ತಿರುವಾಗ, ಸ್ವಸ್ಥಕರವಾದ ಆಧ್ಯಾತ್ಮಿಕ ಹೊರನೋಟವನ್ನು ಕಾಪಾಡಿಕೊಳ್ಳುವಂತೆ ನನಗೆ ಆಧಾರವನ್ನು ಒದಗಿಸುತ್ತದೆ. ಈಗ, ನಾನೂ ನನ್ನ ಹೆಂಡತಿಯೂ ಸಾಧ್ಯವಿರುವಷ್ಟು ಹೆಚ್ಚು ಅರ್ಥಭರಿತ ರೀತಿಯಲ್ಲಿ ನಮ್ಮ ಜೀವಿತಗಳನ್ನು ಉಪಯೋಗಿಸುತ್ತಿದ್ದೇವೆ ಎಂಬ ಅರಿವಿನಿಂದ ಸಿಗುವ ಸಂತೃಪ್ತಿಯನ್ನು ಹೊಂದಿದ್ದೇವೆ.”
ಬೈಬಲ್ ಅಧ್ಯಯನ ಮಾಡುವ ಮೂಲಕ ನೀವು ಸಹ ಜೀವನದಲ್ಲಿ ಉದ್ದೇಶವನ್ನೂ ಅರ್ಥವನ್ನೂ ಪಡೆದುಕೊಳ್ಳಬಲ್ಲಿರಿ. ಯೆಹೋವನ ಸಾಕ್ಷಿಗಳು ನಿಮಗೆ ಸಹಾಯಮಾಡಲು ಸಂತೋಷಿಸುತ್ತಾರೆ. ಮಾರೀನ, ನಿಕೊಲಸ್ ಮತ್ತು ವಿನ್ಸೆಂಟರಂತೆ, ಯೆಹೋವನ ಕುರಿತು ಮತ್ತು ಇಡೀ ಮಾನವಕುಲಕ್ಕಾಗಿರುವ ಹಾಗೂ ವ್ಯಕ್ತಿಗತವಾಗಿ ನಿಮಗಾಗಿರುವ ಆತನ ಉದ್ದೇಶಗಳ ಕುರಿತು ಕಲಿಯುವುದರಿಂದ ಬರುವ ಸಂತೃಪ್ತಿಯನ್ನು ನೀವು ಪಡೆಯಸಾಧ್ಯವಿದೆ. ಈಗ ನಿಮ್ಮ ಆಧ್ಯಾತ್ಮಿಕ ಆವಶ್ಯಕತೆಗಳನ್ನು ಪೂರೈಸುವ ಸಂತೋಷ ನಿಮ್ಮದಾಗುವುದು ಮಾತ್ರವಲ್ಲ, ಪರಿಪೂರ್ಣ ಶಾರೀರಿಕ ಆರೋಗ್ಯದಲ್ಲಿ ಅನಂತ ಜೀವನವನ್ನು ಆನಂದಿಸುವ ಪ್ರತೀಕ್ಷೆಯನ್ನೂ ನೀವು ಪಡೆಯುವಿರಿ. ಈ ಪ್ರತೀಕ್ಷೆಯು ‘ತಮ್ಮ ಆಧ್ಯಾತ್ಮಿಕ ಅಗತ್ಯದ ಪರಿಜ್ಞಾನವುಳ್ಳವರಿಗೆ’ ಮಾತ್ರವೇ ಲಭ್ಯವಿದೆ.—ಮತ್ತಾಯ 5:3, NW.
ನಮ್ಮ ಆಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳುವ ಒಂದು ವಿಧವು ಪ್ರಾರ್ಥನೆಯ ಮೂಲಕವೇ ಆಗಿದೆ. ಯಾವುದು ಸಾಮಾನ್ಯವಾಗಿ ಕರ್ತನ ಪ್ರಾರ್ಥನೆ ಎಂದು ಕರೆಯಲ್ಪಡುತ್ತದೋ ಅದನ್ನು ತನ್ನ ಶಿಷ್ಯರಿಗೆ ಕೊಡುವ ಮೂಲಕ ಯೇಸು ಅವರಿಗೆ ಹೇಗೆ ಪ್ರಾರ್ಥಿಸಬೇಕು ಎಂಬುದನ್ನು ಕಲಿಸಲು ಸಮಯವನ್ನು ಬದಿಗಿರಿಸಿದನು. ಆ ಪ್ರಾರ್ಥನೆಯು ಇಂದು ನಿಮಗೆ ಯಾವ ಅರ್ಥವನ್ನು ಹೊಂದಿದೆ? ನೀವು ಅದರಿಂದ ಹೇಗೆ ಪ್ರಯೋಜನ ಪಡೆಯಬಲ್ಲಿರಿ? ಮುಂದಿನ ಎರಡು ಲೇಖನಗಳಲ್ಲಿ ನೀವು ಉತ್ತರಗಳನ್ನು ಕಂಡುಕೊಳ್ಳುವಿರಿ.
[ಪುಟ 6ರಲ್ಲಿರುವ ಚಿತ್ರಗಳು]
ಮಾರೀನ
[ಪುಟ 7ರಲ್ಲಿರುವ ಚಿತ್ರಗಳು]
ನಿಕೊಲಸ್
[ಪುಟ 7ರಲ್ಲಿರುವ ಚಿತ್ರಗಳು]
ವಿನ್ಸೆಂಟ್