ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಸಾರುವವರ ಧ್ವನಿಯು ಭೂಮಿಯಲ್ಲೆಲ್ಲಾ ಪ್ರಸರಿಸಿತು”

“ಸಾರುವವರ ಧ್ವನಿಯು ಭೂಮಿಯಲ್ಲೆಲ್ಲಾ ಪ್ರಸರಿಸಿತು”

“ಸಾರುವವರ ಧ್ವನಿಯು ಭೂಮಿಯಲ್ಲೆಲ್ಲಾ ಪ್ರಸರಿಸಿತು”

“ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ [“ಪವಿತ್ರಾತ್ಮದ,” Nw] ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ.”​—⁠ಮತ್ತಾಯ 28:19.

ಸ್ವರ್ಗಕ್ಕೆ ಏರಿಹೋಗುವ ಸ್ವಲ್ಪ ಸಮಯಕ್ಕೆ ಮುಂಚೆ, ಯೇಸು ತನ್ನ ಶಿಷ್ಯರಿಗೆ ಒಂದು ನೇಮಕವನ್ನು ಕೊಟ್ಟನು. ಅವನು ಅವರಿಗೆ ಹೇಳಿದ್ದು: “ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ [“ಪವಿತ್ರಾತ್ಮದ,” NW] ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ.” (ಮತ್ತಾಯ 28:19) ಅದೆಂತಹ ಬೃಹತ್ತಾದ ಕೆಲಸವಾಗಿತ್ತು!

2 ತುಸು ಯೋಚಿಸಿ! ಸಾ.ಶ. 33ರ ಪಂಚಾಶತ್ತಮದಂದು, ಸುಮಾರು 120 ಶಿಷ್ಯರು ಪವಿತ್ರಾತ್ಮವನ್ನು ಪಡೆದುಕೊಂಡರು ಮತ್ತು ಯೇಸುವೇ ವಾಗ್ದಾನಿತ ಮೆಸ್ಸೀಯನು ಹಾಗೂ ಅವನ ಮೂಲಕವೇ ರಕ್ಷಣೆಯನ್ನು ಪಡೆದುಕೊಳ್ಳಸಾಧ್ಯವಿದೆ ಎಂದು ಇತರರಿಗೆ ಹೇಳುವ ಮೂಲಕ ಆ ನೇಮಕವನ್ನು ಪೂರೈಸಲು ಆರಂಭಿಸಿದರು. (ಅ. ಕೃತ್ಯಗಳು 2:1-36) ಇಷ್ಟು ಚಿಕ್ಕದಾದ ಗುಂಪು “ಎಲ್ಲಾ ದೇಶಗಳ ಜನರನ್ನು” ತಲಪುವುದಾದರೂ ಹೇಗೆ? ಮನುಷ್ಯಮಾತ್ರದವರಿಗೆ ಇದು ಅಸಾಧ್ಯ ಸಂಗತಿ, ಆದರೆ “ದೇವರಿಗೆ ಎಲ್ಲವು ಸಾಧ್ಯವೇ.” (ಮತ್ತಾಯ 19:26) ಆದಿ ಕ್ರೈಸ್ತರಿಗೆ ಯೆಹೋವನ ಪವಿತ್ರಾತ್ಮದ ಬೆಂಬಲವಿತ್ತು, ಮತ್ತು ಅವರಲ್ಲಿ ತುರ್ತುಪ್ರಜ್ಞೆಯಿತ್ತು. (ಜೆಕರ್ಯ 4:6; 2 ತಿಮೊಥೆಯ 4:2) ಆದುದರಿಂದ, ಕೇವಲ ಕೆಲವೇ ದಶಕಗಳಲ್ಲಿ ಸುವಾರ್ತೆಯು “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ” ಸಾರಲ್ಪಟ್ಟಿತು ಎಂದು ಅಪೊಸ್ತಲ ಪೌಲನು ಹೇಳಶಕ್ತನಾದನು.​—⁠ಕೊಲೊಸ್ಸೆ 1:23.

3 ಪ್ರಥಮ ಶತಮಾನದ ಹೆಚ್ಚಿನ ಭಾಗದಲ್ಲಿ, ಸತ್ಯಾರಾಧನೆಯು ಹಬ್ಬುತ್ತಾ ಮುಂದುವರಿಯಿತು. ಆದರೂ, ಸೈತಾನನು “ಹಣಜಿ”ಯನ್ನು ಬಿತ್ತುವ ಮತ್ತು ನಿಜವಾದ ಕ್ರೈಸ್ತ “ಗೋದಿ” ಸುಗ್ಗೀಕಾಲದ ತನಕ ಹಲವಾರು ಶತಮಾನಗಳಿಗೆ ಮರೆಮಾಡಲ್ಪಡುವ ಸಮಯವು ಬರುತ್ತದೆಂದು ಯೇಸು ಪ್ರವಾದಿಸಿದ್ದನು. ಅಪೊಸ್ತಲರ ಮರಣಾನಂತರ, ಈ ಮಾತು ಸತ್ಯವಾಯಿತು.​—⁠ಮತ್ತಾಯ 13:24-39.

ಇಂದು ಕ್ಷಿಪ್ರವಾದ ಅಭಿವೃದ್ಧಿ

4 ಇಸವಿ 1919, ನಿಜವಾದ ಕ್ರೈಸ್ತ ಗೋದಿಯನ್ನು ಹಣಜಿಯಿಂದ ಬೇರ್ಪಡಿಸುವ ಸಮಯವಾಗಿತ್ತು. ಯೇಸುವಿನ ಮಹಾ ನೇಮಕವು ಇನ್ನೂ ಅನ್ವಯಿಸುತ್ತದೆಂಬುದು ಅಭಿಷಿಕ್ತ ಕ್ರೈಸ್ತರಿಗೆ ತಿಳಿದಿತ್ತು. ತಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆಂದು ಅವರು ದೃಢವಾಗಿ ನಂಬಿದ್ದರು ಮತ್ತು ಯೇಸುವಿನ ಈ ಪ್ರವಾದನೆಯ ಅರಿವುಳ್ಳವರಾಗಿದ್ದರು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (2 ತಿಮೊಥೆಯ 3:1; ಮತ್ತಾಯ 24:14) ಹೌದು, ಹೆಚ್ಚು ಕೆಲಸವನ್ನು ಮಾಡಬೇಕಾಗಿದೆ ಎಂಬುದು ಅವರಿಗೆ ತಿಳಿದಿತ್ತು.

5 ಆದರೂ, ಸಾ.ಶ. 33ರಲ್ಲಿದ್ದ ಅಪೊಸ್ತಲರಂತೆಯೇ ಆ ಅಭಿಷಿಕ್ತ ಕ್ರೈಸ್ತರು ಒಂದು ದೊಡ್ಡ ಪಂಥಾಹ್ವಾನವನ್ನು ಎದುರಿಸಿದರು. ಅವರು ಕೇವಲ ಕೆಲವೇ ಸಾವಿರಗಳ ಸಂಖ್ಯೆಯಲ್ಲಿದ್ದರು ಮತ್ತು ಕೇವಲ ಕೆಲವು ದೇಶಗಳಲ್ಲಿ ಜೀವಿಸುತ್ತಿದ್ದರು. ಅವರು “ಸರ್ವಲೋಕದಲ್ಲಿ” ಸಾರಲು ಹೇಗೆ ಸಾಧ್ಯವಾಗುವುದು? ಮೊದಲನೇ ಲೋಕ ಯುದ್ಧದ ನಂತರ ಲೋಕದ ಜನಸಂಖ್ಯೆಯು, ಕೈಸರರ ಕಾಲಗಳಲ್ಲಿದ್ದ 30 ಕೋಟಿಯಿಂದ 200 ಕೋಟಿಗೆ ಹೆಚ್ಚಿತ್ತು ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿ. ಮತ್ತು 20ನೇ ಶತಮಾನದಾದ್ಯಂತ ಇದು ತೀವ್ರಗತಿಯಲ್ಲಿ ಹೆಚ್ಚಾಗಲಿಕ್ಕಿತ್ತು.

6 ಆದರೂ, ಯೆಹೋವನ ಅಭಿಷಿಕ್ತ ಕ್ರೈಸ್ತರು ತಮ್ಮ ಪ್ರಥಮ ಶತಮಾನದ ಸಹೋದರರಂತೆಯೇ ಯೆಹೋವನಲ್ಲಿ ಪೂರ್ಣ ವಿಶ್ವಾಸವುಳ್ಳವರಾಗಿ ತಮ್ಮ ಮುಂದಿದ್ದ ಕೆಲಸವನ್ನು ಮಾಡುತ್ತಾ ಮುಂದುವರಿದರು, ಮತ್ತು ಆತನ ಆತ್ಮವು ಅವರೊಂದಿಗಿತ್ತು. 1930ಗಳ ಮಧ್ಯ ಭಾಗದಷ್ಟಕ್ಕೆ ಸುಮಾರು 56,000 ಸೌವಾರ್ತಿಕರು 115 ದೇಶಗಳಲ್ಲಿ ಬೈಬಲ್‌ ಸತ್ಯವನ್ನು ಘೋಷಿಸಿದ್ದರು. ಈಗಾಗಲೇ, ಸಾಕಷ್ಟು ಕೆಲಸವು ಮಾಡಲ್ಪಟ್ಟಿತ್ತು, ಆದರೂ ಮಾಡಲಿಕ್ಕೆ ಇನ್ನೂ ಹೆಚ್ಚು ಕೆಲಸವು ಉಳಿದಿತ್ತು.

7 ನಂತರ, ಪ್ರಕಟನೆ 7:9ರಲ್ಲಿ ಸೂಚಿಸಲ್ಪಟ್ಟಿರುವ “ಮಹಾ ಸಮೂಹ”ದ ಗುರುತನ್ನು ಹೆಚ್ಚು ಆಳವಾಗಿ ಅರ್ಥಮಾಡಿಕೊಳ್ಳುವುದು ಒಂದು ಹೊಸ ಪಂಥಾಹ್ವಾನವನ್ನೊಡ್ಡಿತು ಮಾತ್ರವಲ್ಲದೆ, ಆ ಪರಿಶ್ರಮಿ ಕ್ರೈಸ್ತರಿಗೆ ಸಹಾಯವು ದೊರಕುವುದೆಂಬ ಆಶ್ವಾಸನೆಯನ್ನೂ ಕೊಡಲ್ಪಟ್ಟಿತು. ಭೂನಿರೀಕ್ಷೆಯುಳ್ಳ ವಿಶ್ವಾಸಿಗಳ ಎಣಿಸಲಾಗದ ಜನಸಮೂಹದ ‘ಬೇರೆ ಕುರಿಗಳನ್ನು’ ‘ಸಕಲ ಜನಾಂಗ ಕುಲ ಪ್ರಜೆ ಭಾಷೆಗಳಿಂದ’ ಒಟ್ಟುಗೂಡಿಸಬೇಕಿತ್ತು. (ಯೋಹಾನ 10:16) ಇವರು ‘[ಯೆಹೋವನಿಗೆ] ಹಗಲಿರುಳು ಸೇವೆಮಾಡುವರು.’ (ಪ್ರಕಟನೆ 7:15) ಇದರರ್ಥವು, ಇವರು ಸಾರುವ ಮತ್ತು ಬೋಧಿಸುವ ಕೆಲಸದಲ್ಲಿ ಸಹಾಯ ನೀಡುವರು ಎಂದಾಗಿದೆ. (ಯೆಶಾಯ 61:5) ಫಲಿತಾಂಶವಾಗಿ, ಸೌವಾರ್ತಿಕರ ಸಂಖ್ಯೆಯು ಸಾವಿರಗಟ್ಟಲೆ ಮತ್ತು ನಂತರ ಲಕ್ಷಗಟ್ಟಲೆಯಲ್ಲಿ ಬೆಳೆಯುವುದನ್ನು ನೋಡಿ ಅಭಿಷಿಕ್ತ ಕ್ರೈಸ್ತರು ಪುಳಕಿತರಾದರು. ಇಸವಿ 2003ರಲ್ಲಿ, 64,29,351 ಮಂದಿ ಸಾರುವ ಕೆಲಸದಲ್ಲಿ ಭಾಗವಹಿಸಿದರು​—⁠ಇವರಲ್ಲಿ ಬಹುತೇಕ ಮಂದಿ ಮಹಾ ಸಮೂಹಕ್ಕೆ ಸೇರಿದವರಾಗಿದ್ದರು​—⁠ಇದೊಂದು ಹೊಸ ಉಚ್ಚಾಂಕವಾಗಿದೆ. * ಈ ಸಹಾಯಕ್ಕಾಗಿ ಅಭಿಷಿಕ್ತ ಕ್ರೈಸ್ತರು ಆಭಾರಿಗಳಾಗಿದ್ದಾರೆ, ಮತ್ತು ತಮ್ಮ ಅಭಿಷಿಕ್ತ ಸಹೋದರರಿಗೆ ನೆರವು ನೀಡುವ ಸುಯೋಗಕ್ಕಾಗಿ ಬೇರೆ ಕುರಿಗಳು ಆಭಾರಿಗಳಾಗಿದ್ದಾರೆ.​—⁠ಮತ್ತಾಯ 25:34-40.

8 ಗೋದಿ ವರ್ಗದವರು ಪುನಃ ಒಮ್ಮೆ ಪ್ರತ್ಯಕ್ಷವಾದಾಗ, ಸೈತಾನನು ಅವರ ಮೇಲೆ ಉಗ್ರವಾದ ದಾಳಿಯನ್ನು ನಡೆಸಿದನು. (ಪ್ರಕಟನೆ 12:17) ಮಹಾ ಸಮೂಹವು ಗೋಚರವಾಗಲು ಆರಂಭಿಸಿದಾಗ ಅವನು ಹೇಗೆ ಪ್ರತಿಕ್ರಿಯಿಸಿದನು? ಘೋರ ಹಿಂಸೆಯೊಂದಿಗೆ! ಎರಡನೇ ಲೋಕ ಯುದ್ಧದ ಸಮಯದಲ್ಲಿ ಸತ್ಯಾರಾಧನೆಯ ಮೇಲೆ ಮಾಡಲ್ಪಟ್ಟ ಲೋಕವ್ಯಾಪಕ ದಾಳಿಯ ಹಿಂದೆ ಅವನ ಕೈವಾಡವಿತ್ತು ಎಂಬುದನ್ನು ನಾವು ಸಂದೇಹಿಸುವೆವೋ? ಕದನಕ್ಕಿಳಿದಿರುವ ಎರಡೂ ಪಕ್ಷಗಳಿಂದ, ಕ್ರೈಸ್ತರ ಮೇಲೆ ತೀವ್ರ ಒತ್ತಡ ಬಂತು. ಅನೇಕ ಪ್ರಿಯ ಸಹೋದರ ಸಹೋದರಿಯರು ಘೋರವಾದ ಪರೀಕ್ಷೆಗಳನ್ನು ಎದುರಿಸಿದರು, ಕೆಲವರು ತಮ್ಮ ನಂಬಿಕೆಗಾಗಿ ಸತ್ತರು ಸಹ. ಆದರೂ, ಅವರು ಕೀರ್ತನೆಗಾರನ ಮಾತುಗಳನ್ನು ಪ್ರತಿಧ್ವನಿಸಿದರು: “ದೇವರ ವಾಗ್ದಾನಕ್ಕೋಸ್ಕರ ಆತನಲ್ಲಿಯೇ ಹೆಚ್ಚಳಪಡುವೆನು; ದೇವರನ್ನು ನಂಬಿ ನಿರ್ಭಯದಿಂದಿರುವೆನು. ನರಪ್ರಾಣಿಗಳು ನನಗೆ ಮಾಡುವದೇನು?” (ಕೀರ್ತನೆ 56:4; ಮತ್ತಾಯ 10:28) ಅಭಿಷಿಕ್ತ ಕ್ರೈಸ್ತರು ಮತ್ತು ಬೇರೆ ಕುರಿಗಳು, ಯೆಹೋವನ ಆತ್ಮದಿಂದ ಬಲಪಡಸಲ್ಪಟ್ಟವರಾಗಿ ಒಟ್ಟಿಗೆ ದೃಢವಾಗಿ ನಿಂತರು. (2 ಕೊರಿಂಥ 4:7) ಇದರ ಫಲಿತಾಂಶವಾಗಿ, “ದೇವರ ವಾಕ್ಯವು ಹೆಚ್ಚು ಹೆಚ್ಚು ಜನರಿಗೆ ತಲುಪತೊಡಗಿತು.” (ಅ. ಕೃತ್ಯಗಳು 6:​7, ಪರಿಶುದ್ಧ ಬೈಬಲ್‌ *) 1939ರಲ್ಲಿ ಯುದ್ಧವು ಪ್ರಾರಂಭವಾದಾಗ, ಸಾರುವ ಕೆಲಸದಲ್ಲಿ ಭಾಗವಹಿಸುತ್ತಿರುವುದಾಗಿ 72,475 ನಂಬಿಗಸ್ತ ಕ್ರೈಸ್ತರು ವರದಿಸಿದರು. ಆದರೂ, ಯುದ್ಧವು ಕೊನೆಗೊಂಡ 1945ರ ಇಸವಿಯ ಅಪೂರ್ಣವಾದ ವರದಿಯು, 1,56,299 ಕ್ರಿಯಾಶೀಲ ಸಾಕ್ಷಿಗಳು ಸುವಾರ್ತೆಯನ್ನು ಹಬ್ಬಿಸುತ್ತಿದ್ದರೆಂಬುದನ್ನು ತಿಳಿಯಪಡಿಸಿತು. ಸೈತಾನನಿಗೆ ಎಂತಹ ಹೊಡೆತವದು!

9 ಎರಡನೇ ಲೋಕ ಯುದ್ಧದ ಭೀಕರತೆಯು, ಸಾರುವ ಕೆಲಸವು ಮಾಡಲ್ಪಡುವುದೋ ಎಂಬ ಶಂಕೆಯನ್ನು ಯೆಹೋವನ ಸೇವಕರಲ್ಲಿ ಮೂಡಿಸಲಿಲ್ಲ ಎಂಬುದು ಸುವ್ಯಕ್ತ. ವಾಸ್ತವದಲ್ಲಿ, 1943ರಲ್ಲಿ, ಯುದ್ಧವು ಉತ್ತುಂಗಕ್ಕೇರಿದ್ದಾಗ, ಎರಡು ಹೊಸ ಶಾಲೆಗಳ ಕುರಿತು ಪ್ರಕಟಿಸಲಾಯಿತು. ಅದರಲ್ಲಿ ಒಂದು, ಈಗ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಎಂದು ಕರೆಯಲ್ಪಡುತ್ತದೆ. ಇದು ಸಾರುವುದರಲ್ಲಿ ಮತ್ತು ಶಿಷ್ಯರನ್ನಾಗಿ ಮಾಡುವುದರಲ್ಲಿ ವ್ಯಕ್ತಿಗತವಾಗಿ ಸಾಕ್ಷಿಗಳನ್ನು ತರಬೇತುಗೊಳಿಸುವುದಕ್ಕಾಗಿ ಎಲ್ಲಾ ಸಭೆಗಳಲ್ಲಿ ನಡೆಸಲ್ಪಡಲಿಕ್ಕಿತ್ತು. ಮತ್ತೊಂದು, ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ ಆಗಿತ್ತು. ಇದು, ವಿದೇಶಗಳಲ್ಲಿ ಸಾರುವ ಕೆಲಸವನ್ನು ಪ್ರವರ್ಧಿಸಲಿಕ್ಕಿದ್ದ ಮಿಷನೆರಿಗಳನ್ನು ತರಬೇತುಗೊಳಿಸಲಿಕ್ಕಾಗಿತ್ತು. ಹೌದು, ಯುದ್ಧದ ಜ್ವಾಲೆಗಳು ಕೊನೆಗೆ ನಂದಿಹೋದಾಗ, ಸತ್ಯ ಕ್ರೈಸ್ತರು ಹೆಚ್ಚಿನ ಚಟುವಟಿಕೆಗಾಗಿ ಸಿದ್ಧರಾಗಿದ್ದರು.

10 ಅವು ಎಂತಹ ಅದ್ಭುತಕರ ಕೆಲಸವನ್ನು ಸಾಧಿಸಿವೆ! ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ತರಬೇತಿ ಪಡೆದವರಾಗಿ, ಎಳೆಯರು ಮತ್ತು ವೃದ್ಧರು, ಹೆತ್ತವರು ಮತ್ತು ಮಕ್ಕಳು, ಹಾಗೂ ಅಸ್ವಸ್ಥರೂ ಸೇರಿ ಎಲ್ಲರೂ ಯೇಸುವಿನ ಮಹಾ ನೇಮಕವನ್ನು ನೆರವೇರಿಸುವುದರಲ್ಲಿ ಭಾಗವಹಿಸಿದ್ದಾರೆ ಮತ್ತು ಭಾಗವಹಿಸುತ್ತಿದ್ದಾರೆ. (ಕೀರ್ತನೆ 148:12, 13; ಯೋವೇಲ 2:28, 29) ಇಸವಿ 2003ರಲ್ಲಿ, ಪ್ರತಿ ತಿಂಗಳಿಗೆ ಸರಾಸರಿಯಾಗಿ 8,25,185 ಮಂದಿ, ತಾತ್ಕಾಲಿಕವಾಗಿ ಅಥವಾ ಕ್ರಮವಾಗಿ, ಪಯನೀಯರ್‌ ಸೇವೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ತುರ್ತುಪ್ರಜ್ಞೆಯನ್ನು ತೋರಿಸಿದ್ದಾರೆ. ಇದೇ ವರ್ಷದಲ್ಲಿ, ಇತರರೊಂದಿಗೆ ದೇವರ ರಾಜ್ಯದ ಸುವಾರ್ತೆಯ ಕುರಿತು ಮಾತನಾಡುವುದರಲ್ಲಿ ಯೆಹೋವನ ಸಾಕ್ಷಿಗಳು 123,47,96,477 ತಾಸುಗಳನ್ನು ವ್ಯಯಿಸಿದ್ದಾರೆ. ನಿಶ್ಚಯವಾಗಿಯೂ ಯೆಹೋವನು ತನ್ನ ಜನರ ಹುರುಪನ್ನು ನೋಡಿ ಪ್ರಸನ್ನನಾಗಿದ್ದಾನೆ!

ಪರದೇಶ ಕ್ಷೇತ್ರಗಳಲ್ಲಿ

11 ಈ ಎಲ್ಲಾ ವರ್ಷಗಳಲ್ಲಿ, ಗಿಲ್ಯಡ್‌ನ ಪದವೀಧರರು, ಮತ್ತು ಇತ್ತೀಚೆಗೆ ಶುಶ್ರೂಷಾ ತರಬೇತಿ ಶಾಲೆಯ ಪದವೀಧರರು ಅತ್ಯುತ್ತಮವಾದೊಂದು ದಾಖಲೆಯನ್ನು ಸ್ಥಾಪಿಸಿದ್ದಾರೆ. ಉದಾಹರಣೆಗೆ, 1945ರಲ್ಲಿ ಬ್ರಸಿಲ್‌ಗೆ ಮೊದಲ ಮಿಷನೆರಿಗಳು ಆಗಮಿಸಿದಾಗ 400ಕ್ಕಿಂತ ಕಡಿಮೆ ಪ್ರಚಾರಕರಿದ್ದರು. ಇವರು ಮತ್ತು ಇವರ ನಂತರ ಬಂದ ಇತರ ಮಿಷನೆರಿಗಳೂ ತಮ್ಮ ಹುರುಪಿನ ಬ್ರಸಿಲ್ಯನ್‌ ಸಹೋದರರೊಂದಿಗೆ ಸೇರಿ ಕಠಿಣವಾಗಿ ಪರಿಶ್ರಮಿಸಿದ್ದಾರೆ, ಮತ್ತು ಅವರ ಪ್ರಯತ್ನಗಳನ್ನು ಯೆಹೋವನು ಮಹತ್ತರವಾಗಿ ಆಶೀರ್ವದಿಸಿದ್ದಾನೆ. ಆ ಪ್ರಾರಂಭಿಕ ದಿನಗಳನ್ನು ಜ್ಞಾಪಿಸಿಕೊಳ್ಳುವ ಯಾವನಿಗೂ ಬ್ರಸಿಲ್‌ 2003ರಲ್ಲಿ 6,07,362ರ ಹೊಸ ಉಚ್ಚಾಂಕವನ್ನು ತಲಪಿತು ಎಂಬುದನ್ನು ನೋಡುವುದು ಎಷ್ಟು ರೋಮಾಂಚಕವಾಗಿದೆ!

12 ಜಪಾನನ್ನು ಪರಿಗಣಿಸಿರಿ. ಎರಡನೇ ಲೋಕ ಯುದ್ಧಕ್ಕೆ ಮುಂಚೆ, ಆ ದೇಶದಲ್ಲಿ ಸುಮಾರು ಒಂದು ನೂರು ರಾಜ್ಯ ಪ್ರಚಾರಕರಿದ್ದರು. ಯುದ್ಧದ ಸಮಯದಲ್ಲಿ, ಘೋರ ಹಿಂಸೆಯು ಅವರ ಸಂಖ್ಯೆಯನ್ನು ಕ್ಷಯಿಸಿತು, ಮತ್ತು ಯುದ್ಧದ ಅಂತ್ಯದಷ್ಟಕ್ಕೆ ಕೇವಲ ಕೆಲವು ಸಾಕ್ಷಿಗಳು ಮಾತ್ರ ಆತ್ಮಿಕವಾಗಿ ಮತ್ತು ಶಾರೀರಿಕವಾಗಿ ಜೀವಂತವಾಗಿದ್ದರು. (ಜ್ಞಾನೋಕ್ತಿ 14:32) ಆ ಕೆಲವೇ ಎದ್ದುಕಾಣುವ ಸಮಗ್ರತಾ ಪಾಲಕರು 1949ರಲ್ಲಿ ಮೊದಲ 13 ಗಿಲ್ಯಡ್‌ ಶಿಕ್ಷಿತ ಮಿಷನೆರಿಗಳನ್ನು ಆಮಂತ್ರಿಸುವುದರಲ್ಲಿ ಸಂತೋಷಿಸಿದರು, ಮತ್ತು ಮಿಷನೆರಿಗಳಿಗೆ ತಮ್ಮ ಉತ್ಸಾಹಭರಿತ, ಸತ್ಕಾರಶೀಲ ಜಪಾನೀ ಸಹೋದರರ ಮೇಲೆ ವಾತ್ಸಲ್ಯವಿತ್ತು. 50 ವರ್ಷಗಳು ಕಳೆದ ನಂತರ, ಇಸವಿ 2003ರಲ್ಲಿ, ಜಪಾನ್‌ 2,17,508 ಪ್ರಚಾರಕರ ಉಚ್ಚಾಂಕವನ್ನು ವರದಿಸಿತು! ಯೆಹೋವನು ನಿಜವಾಗಿಯೂ ಆ ದೇಶದಲ್ಲಿರುವ ತನ್ನ ಜನರನ್ನು ಸಮೃದ್ಧವಾಗಿ ಆಶೀರ್ವದಿಸಿದ್ದಾನೆ. ಇನ್ನೂ ಅನೇಕ ದೇಶಗಳಲ್ಲೂ ತದ್ರೀತಿಯ ವರದಿಗಳು ಕಂಡುಬರುತ್ತವೆ. ವಿದೇಶೀಯ ಕ್ಷೇತ್ರಗಳಲ್ಲಿ ಸಾರಲು ಶಕ್ತರಾಗಿರುವವರು ಸುವಾರ್ತೆಯನ್ನು ಹಬ್ಬಿಸುವುದರಲ್ಲಿ ಹೆಚ್ಚು ನೆರವನ್ನು ನೀಡಿದ್ದಾರೆ, ಮತ್ತು ಈ ಕಾರಣದಿಂದಾಗಿ 2003ರಲ್ಲಿ ಲೋಕವ್ಯಾಪಕವಾಗಿ 235 ದೇಶ, ದ್ವೀಪ, ಕ್ಷೇತ್ರಗಳಲ್ಲಿ ಸುವಾರ್ತೆಯು ಕೇಳಿಬಂತು. ಹೌದು, ಮಹಾ ಸಮೂಹವು ‘ಸಕಲ ಜನಾಂಗಗಳಿಂದ’ ಹೊರಬರುತ್ತಿದೆ.

‘ಸಕಲ . . . ಕುಲ ಪ್ರಜೆ ಭಾಷೆಗಳಿಂದ’

13 ಸಾ.ಶ. 33ರ ಪಂಚಾಶತ್ತಮದಲ್ಲಿ ಶಿಷ್ಯರು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟ ನಂತರ ದಾಖಲಾಗಿರುವ ಮೊದಲನೆಯ ಅದ್ಭುತವು, ಕೂಡಿಬಂದಿದ್ದ ಜನಸಮೂಹಗಳಿಗೆ ಅವರು ವಿಭಿನ್ನ ಭಾಷೆಗಳಲ್ಲಿ ಮಾತನಾಡಿದ್ದಾಗಿತ್ತು. ಅವರ ಪ್ರಸಂಗವನ್ನು ಕೇಳಿಸಿಕೊಂಡವರು ಪ್ರಾಯಶಃ ಒಂದು ಅಂತಾರಾಷ್ಟ್ರೀಯ ಭಾಷೆಯನ್ನು ಆಡುತ್ತಿದ್ದಿರಬಹುದು; ಅದು ಒಂದುವೇಳೆ ಗ್ರೀಕ್‌ ಭಾಷೆಯಾಗಿದ್ದಿರಬಹುದು. ಆ ಜನಸಮೂಹದವರು ‘ಸದ್ಭಕ್ತರಾಗಿದ್ದ’ ಕಾರಣ, ದೇವಾಲಯದಲ್ಲಿ ನಡೆಯುತ್ತಿದ್ದ ಇಬ್ರಿಯ ಸೇವೆಗಳನ್ನು ಅರ್ಥಮಾಡಿಕೊಳ್ಳಲೂ ಸಾಧ್ಯವಿದ್ದಿರಬಹುದು. ಆದರೆ ಅವರು ತಮ್ಮ ತಾಯಿಯ ಮಡಿಲಲ್ಲಿ ಕಲಿತ ಭಾಷೆಯಲ್ಲಿ ಸುವಾರ್ತೆಯನ್ನು ಕೇಳಿಸಿಕೊಂಡದ್ದು ಅವರ ಗಮನವನ್ನು ಸೆರೆಹಿಡಿಯಿತು.​—⁠ಅ. ಕೃತ್ಯಗಳು 2:5, 7-12.

14 ಇಂದು ಸಹ, ಸಾರುವ ಕೆಲಸದಲ್ಲಿ ಅನೇಕ ಭಾಷೆಗಳು ಉಪಯೋಗಿಸಲ್ಪಡುತ್ತವೆ. ಮಹಾ ಸಮೂಹವು ಕೇವಲ ಜನಾಂಗಗಳಿಂದ ಮಾತ್ರವಲ್ಲದೆ ‘ಕುಲ ಪ್ರಜೆ ಭಾಷೆಗಳಿಂದ’ ಬರುವುದೆಂದು ಪ್ರವಾದಿಸಲ್ಪಟ್ಟಿತ್ತು. ಇದಕ್ಕೆ ಸಹಮತದಲ್ಲಿ, ಯೆಹೋವನು ಜೆಕರ್ಯನ ಮೂಲಕವಾಗಿ ಪ್ರವಾದಿಸಿದ್ದು: “ಜನಾಂಗಗಳ ವಿವಿಧಭಾಷೆಗಳವರಾದ ಹತ್ತು ಜನರು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು​—⁠ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ ಎಂದು ಹೇಳುವರು.” (ಓರೆ ಅಕ್ಷರಗಳು ನಮ್ಮವು.) (ಜೆಕರ್ಯ 8:23) ಈಗ ಯೆಹೋವನ ಸಾಕ್ಷಿಗಳಿಗೆ ವಿವಿಧ ಭಾಷೆಗಳಲ್ಲಿ ಮಾತನಾಡುವ ವರವಿಲ್ಲವಾದರೂ, ಜನರ ಭಾಷೆಗಳಲ್ಲಿ ಬೋಧಿಸುವ ಮಹತ್ವವನ್ನು ಅವರು ಅರಿತುಕೊಂಡಿದ್ದಾರೆ.

15 ಇಂದು ಇಂಗ್ಲಿಷ್‌, ಫ್ರೆಂಚ್‌, ಮತ್ತು ಸ್ಪ್ಯಾನಿಷ್‌ನಂತಹ ಕೆಲವು ಭಾಷೆಗಳು ಮಾತ್ರ ಹೆಚ್ಚು ವ್ಯಾಪಕವಾಗಿ ಉಪಯೋಗಿಸಲ್ಪಡುತ್ತವೆ. ಆದರೂ, ಬೇರೆ ದೇಶಗಳಲ್ಲಿ ಸೇವೆಸಲ್ಲಿಸಲು ತಮ್ಮ ಸ್ವದೇಶವನ್ನು ಬಿಟ್ಟಿರುವವರು, ‘ನಿತ್ಯಜೀವಕ್ಕೆ ನೇಮಿಸಲ್ಪಟ್ಟವರಿಗೆ’ ಸುವಾರ್ತೆಯನ್ನು ಹೆಚ್ಚು ಸುಲಭಸಾಧ್ಯವಾಗಿ ಮಾಡಲಿಕ್ಕಾಗಿ ಸ್ಥಳಿಕ ಭಾಷೆಗಳನ್ನು ಕಲಿತುಕೊಳ್ಳಲು ಪ್ರಯತ್ನಿಸುತ್ತಾರೆ. (ಅ. ಕೃತ್ಯಗಳು 13:48) ಇದು ಕಷ್ಟಕರವಾಗಿರಸಾಧ್ಯವಿದೆ. ದಕ್ಷಿಣ ಪೆಸಿಫಿಕ್‌ನ ಟುವಾಲು ದೇಶದಲ್ಲಿರುವ ಸಹೋದರರಿಗೆ ತಮ್ಮ ಸ್ವಂತ ಭಾಷೆಯಲ್ಲಿ ಪ್ರಕಾಶನಗಳ ಅಗತ್ಯವೆದ್ದಾಗ, ಮಿಷನೆರಿಗಳಲ್ಲೊಬ್ಬರು ಈ ಪಂಥಾಹ್ವಾನವನ್ನು ಸ್ವೀಕರಿಸಿದರು. ಯಾವುದೇ ಶಬ್ದಕೋಶವು ಲಭ್ಯವಿರಲಿಲ್ಲವಾದ್ದರಿಂದ, ಅವರು ಟುವಾಲು ಶಬ್ದಗಳ ಒಂದು ಕ್ಲಿಷ್ಟ ಶಬ್ದಾರ್ಥಕೋಶವನ್ನು ಶೇಖರಿಸಲು ಆರಂಭಿಸಿದರು. ಸಮಯಾನಂತರ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ * ಎಂಬ ಪುಸ್ತಕವು ಟುವಾಲು ಭಾಷೆಯಲ್ಲಿ ಪ್ರಕಾಶಿಸಲ್ಪಟ್ಟಿತು. ಮಿಷನೆರಿಗಳು ಕ್ಯುರೆಸೋವಿಗೆ ಆಗಮಿಸಿದಾಗ, ಅಲ್ಲಿ ಯಾವುದೇ ಬೈಬಲ್‌ ಸಾಹಿತ್ಯವಿರಲಿಲ್ಲ ಮತ್ತು ಪಾಪಿಯಮೆಂಟೊ ಎಂಬ ಸ್ಥಳಿಕ ಭಾಷೆಯಲ್ಲಿ ಒಂದು ಶಬ್ದಕೋಶವೂ ಇರಲಿಲ್ಲ. ಆ ಭಾಷೆಯನ್ನು ಹೇಗೆ ಬರೆಯುವುದು ಎಂಬುದರ ಕುರಿತು ತುಂಬ ವಾಗ್ವಾದವೂ ಇತ್ತು. ಆದರೂ, ಮೊದಲ ಮಿಷನೆರಿಗಳು ಬಂದಿಳಿದ ಎರಡು ವರ್ಷಗಳಲ್ಲಿ, ಮೊದಲ ಕ್ರೈಸ್ತ ಬೈಬಲ್‌ ಕಿರುಹೊತ್ತಗೆ ಆ ಭಾಷೆಯಲ್ಲಿ ಪ್ರಕಾಶಿಸಲ್ಪಟ್ಟಿತು. ಇಂದು, ಇಂಗ್ಲಿಷ್‌ ಕಾವಲಿನಬುರುಜು ಪತ್ರಿಕೆಯೊಂದಿಗೆ ಏಕಕಾಲಿಕವಾಗಿ ಪ್ರಕಾಶಿಸಲ್ಪಡುವ 133 ಭಾಷೆಗಳಲ್ಲಿ ಪಾಪಿಯಮೆಂಟೊ ಸಹ ಒಂದಾಗಿದೆ.

16 ನಮೀಬಿಯದಲ್ಲಿ, ಭಾಷಾಂತರಿಸಲಿಕ್ಕಾಗಿ ತಮಗೆ ಸಹಾಯಮಾಡಬಲ್ಲ ಒಬ್ಬ ಸ್ಥಳಿಕ ಸಾಕ್ಷಿಯನ್ನು ಮೊದಲ ಮಿಷನೆರಿಗಳು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಮಾತ್ರವಲ್ಲದೆ, ನಮ್ಮ ಪ್ರಕಾಶನಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸಲ್ಪಡುವ ಪದಗಳು, ಉದಾಹರಣೆಗೆ “ಪರಿಪೂರ್ಣ” ಎಂಬಂಥ ಪದವು ಸ್ಥಳಿಕ ಭಾಷೆಗಳಲ್ಲೊಂದಾದ ನಾಮಾ ಭಾಷೆಯಲ್ಲಿ ಕಂಡುಬರಲಿಲ್ಲ. ಒಬ್ಬ ಮಿಷನೆರಿ ವರದಿಸುವುದು: “ಭಾಷಾಂತರಿಸಲಿಕ್ಕಾಗಿ ನಾನು ಮುಖ್ಯವಾಗಿ ಬೈಬಲನ್ನು ಅಧ್ಯಯನ ಮಾಡುತ್ತಿದ್ದ ಶಾಲಾ ಶಿಕ್ಷಕರನ್ನು ಉಪಯೋಗಿಸಿದೆ. ಅವರಿಗೆ ಸತ್ಯದ ಜ್ಞಾನವು ಸ್ವಲ್ಪವೇ ಇದ್ದದರಿಂದ, ಪ್ರತಿಯೊಂದು ವಾಕ್ಯವೂ ನಿಷ್ಕೃಷ್ಟವಾಗಿದೆ ಎಂಬುದನ್ನು ಖಚಿತಪಡಿಸಲಿಕ್ಕಾಗಿ ನಾನು ಅವರೊಂದಿಗೆ ಕುಳಿತುಕೊಳ್ಳಬೇಕಾಗಿತ್ತು.” ಆದರೂ, ಹೊಸ ಲೋಕದಲ್ಲಿ ಜೀವನ ಎಂಬ ಕಿರುಹೊತ್ತಗೆಯು ನಾಲ್ಕು ನಮೀಬಿಯನ್‌ ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟಿತು. ಇಂದು, ಕನ್ಯಾಮ ಮತ್ತು ಡಾಂಗ ಭಾಷೆಗಳಲ್ಲಿ ಕಾವಲಿನಬುರುಜು ಪತ್ರಿಕೆಯು ಕ್ರಮವಾಗಿ ಪ್ರಕಾಶಿಸಲ್ಪಡುತ್ತದೆ.

17 ಮೆಕ್ಸಿಕೊದಲ್ಲಿ, ಮುಖ್ಯ ಭಾಷೆಯು ಸ್ಪ್ಯಾನಿಷ್‌ ಭಾಷೆಯಾಗಿದೆ. ಆದರೂ ಸ್ಪೆಯಿನ್‌ನ ನಿವಾಸಿಗಳು ಆಗಮಿಸುವುದಕ್ಕೆ ಮೊದಲೇ ಅಲ್ಲಿ ಅನೇಕ ಭಾಷೆಗಳು ಮಾತಾಡಲ್ಪಡುತ್ತಿದ್ದವು ಮತ್ತು ಅವುಗಳಲ್ಲಿ ಅನೇಕ ಭಾಷೆಗಳು ಇನ್ನೂ ಉಪಯೋಗದಲ್ಲಿವೆ. ಆದುದರಿಂದ, ಇಂದು ಯೆಹೋವನ ಸಾಕ್ಷಿಗಳ ಸಾಹಿತ್ಯವು ಏಳು ಮೆಕ್ಸಿಕನ್‌ ಭಾಷೆಗಳಲ್ಲಿ ಸಿದ್ಧಗೊಳಿಸಲ್ಪಡುತ್ತಿದೆ ಮತ್ತು ಮೆಕ್ಸಿಕನ್‌ ಸಂಜ್ಞಾ ಭಾಷೆಯಲ್ಲೂ ತಯಾರಿಸಲ್ಪಡುತ್ತಿದೆ. ಮಾಯ ಭಾಷೆಯ ರಾಜ್ಯದ ಸೇವೆಯು ಅಮೆರಿಕನ್‌ ಇಂಡಿಯನ್‌ ಭಾಷೆಯಲ್ಲಿನ ಪ್ರಥಮ ನಿಯತಕಾಲಿಕ ಪ್ರಕಾಶನವಾಗಿತ್ತು. ಮೆಕ್ಸಿಕೋದಲ್ಲಿರುವ 5,72,530 ರಾಜ್ಯ ಪ್ರಚಾರಕರ ನಡುವೆ ಮಾಯ, ಆ್ಯಸ್ಟೆಕ್‌, ಹಾಗೂ ಇತರ ಜನರು ಸಾವಿರಾರು ಸಂಖ್ಯೆಯಲ್ಲಿ ಕಾಣಸಿಗುತ್ತಾರೆ ಎಂಬುದಂತೂ ನಿಜ.

18 ಇತ್ತೀಚಿನ ಸಮಯಗಳಲ್ಲಿ, ಕೋಟಿಗಟ್ಟಲೆ ಜನರು ನಿರಾಶ್ರಿತರೋಪಾದಿ ವಿದೇಶಗಳಿಗೆ ಪಲಾಯನಗೈದಿದ್ದಾರೆ ಅಥವಾ ಆರ್ಥಿಕ ಕಾರಣಗಳಿಗಾಗಿ ವಲಸೆಹೋಗಿದ್ದಾರೆ. ಇದರ ಫಲಿತಾಂಶವಾಗಿ, ಈಗ ಸಾಕಷ್ಟು ದೇಶಗಳು ಪ್ರಪ್ರಥಮ ಬಾರಿಗೆ ಸಾಕಷ್ಟು ದೊಡ್ಡ ವಿದೇಶೀ ಭಾಷೆಯ ಕ್ಷೇತ್ರಗಳನ್ನು ಹೊಂದಿವೆ. ಯೆಹೋವನ ಸಾಕ್ಷಿಗಳು ಈ ಪಂಥಾಹ್ವಾನವನ್ನು ಅಂಗೀಕರಿಸಿದ್ದಾರೆ. ಉದಾಹರಣೆಗೆ, ಇಟಲಿಯಲ್ಲಿ, ಇಟಲಿಯನ್‌ ಭಾಷೆಯಲ್ಲದೆ ಬೇರೆ 22 ಭಾಷೆಗಳ ಸಭೆಗಳು ಮತ್ತು ಗುಂಪುಗಳು ಇವೆ. ಇತರ ಭಾಷೆಗಳನ್ನಾಡುವ ಜನರಿಗೆ ಸಾರುವಂತೆ ಸಹೋದರರಿಗೆ ಸಹಾಯಮಾಡಲಿಕ್ಕಾಗಿ, ಇಟಲಿಯನ್‌ ಸಂಜ್ಞಾ ಭಾಷೆಯನ್ನೂ ಸೇರಿಸಿ ಇತರ 16 ಭಾಷೆಗಳನ್ನು ಕಲಿಸಲಿಕ್ಕಾಗಿ ಇತ್ತೀಚೆಗೆ ಕ್ಲಾಸ್‌ಗಳು ಏರ್ಪಡಿಸಲ್ಪಟ್ಟವು. ಇನ್ನೂ ಅನೇಕ ದೇಶಗಳಲ್ಲಿ ವಲಸೆಹೋಗಿರುವ ದೊಡ್ಡ ಜನಸಂಖ್ಯೆಯನ್ನು ತಲಪಲಿಕ್ಕಾಗಿ ಯೆಹೋವನ ಸಾಕ್ಷಿಗಳು ತದ್ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹೌದು, ಯೆಹೋವನ ಸಹಾಯದಿಂದ ಮಹಾ ಸಮೂಹವು ಖಂಡಿತವಾಗಿಯೂ ಅನೇಕಾನೇಕ ಭಾಷಾ ಗಂಪುಗಳಿಂದ ಹೊರಬರುತ್ತಿದೆ.

“ಭೂಮಿಯಲ್ಲೆಲ್ಲಾ”

19 ಪ್ರಥಮ ಶತಮಾನದಲ್ಲಿ ಅಪೊಸ್ತಲ ಪೌಲನು ಬರೆದುದು: “ಆದರೂ ಅವರ ಕಿವಿಗೆ ಬೀಳಲಿಲ್ಲವೇನು . . . ಬಿದ್ದದ್ದು ನಿಶ್ಚಯ. ಸಾರುವವರ ಧ್ವನಿಯು ಭೂಮಿಯಲ್ಲೆಲ್ಲಾ ಪ್ರಸರಿಸಿತು, ಅವರ ನುಡಿಗಳು ಲೋಕದ ಕಟ್ಟಕಡೆಯ ವರೆಗೂ ವ್ಯಾಪಿಸಿದವು.” (ರೋಮಾಪುರ 10:18) ಇದು ಪ್ರಥಮ ಶತಮಾನದಲ್ಲಿ ಸತ್ಯವಾಗಿದ್ದಲ್ಲಿ, ಇಂದೂ ಅದೆಷ್ಟು ಹೆಚ್ಚು ಸತ್ಯವಾಗಿದೆ! ಇತಿಹಾಸದಲ್ಲೇ ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ, ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಜನರು ಹೀಗೆ ಹೇಳುತ್ತಿದ್ದಾರೆ: “ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು; ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವದು.”​—⁠ಕೀರ್ತನೆ 34:⁠1.

20 ಅಷ್ಟುಮಾತ್ರವಲ್ಲದೆ, ಸಾರುವ ಕೆಲಸವು ಸಹ ವೇಗಗತಿಯಲ್ಲಿ ಮುಂದುವರಿಯುತ್ತಿದೆ. ರಾಜ್ಯ ಪ್ರಚಾರಕರ ಸಂಖ್ಯೆಯು ಏಕಪ್ರಕಾರವಾಗಿ ವೃದ್ಧಿಯಾಗುತ್ತಿದೆ. ಸಾರುವ ಕೆಲಸದಲ್ಲಿ ಹೆಚ್ಚೆಚ್ಚು ಸಮಯವನ್ನು ವ್ಯಯಿಸಲಾಗುತ್ತಿದೆ. ಕೋಟಿಗಟ್ಟಲೆ ಪುನರ್ಭೇಟಿಗಳು ಮತ್ತು ಲಕ್ಷಗಟ್ಟಲೆ ಬೈಬಲ್‌ ಅಧ್ಯಯನಗಳು ನಡೆಸಲ್ಪಡುತ್ತಿವೆ. ಹೆಚ್ಚೆಚ್ಚು ಹೊಸಬರು ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಕಳೆದ ವರ್ಷ, ಯೇಸುವಿನ ಮರಣದ ಜ್ಞಾಪಕಾಚರಣೆಗೆ 1,60,97,622 ಮಂದಿ ಹಾಜರಾದರು, ಮತ್ತು ಇದೊಂದು ಹೊಸ ಉಚ್ಚಾಂಕವಾಗಿತ್ತು. ಇನ್ನೂ ಹೆಚ್ಚು ಕೆಲಸವನ್ನು ಮಾಡಲಿಕ್ಕಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ತೀವ್ರವಾದ ಹಿಂಸೆಯನ್ನು ತಾಳಿಕೊಂಡಿರುವಂಥ ನಮ್ಮ ಸಹೋದರರ ಸದೃಢ ಸಮಗ್ರತೆಯನ್ನು ನಾವು ಸಹ ಅನುಕರಿಸುತ್ತಾ ಇರೋಣ. ಮತ್ತು 1919ರಿಂದ ತಮ್ಮನ್ನೇ ಯೆಹೋವನ ಸೇವೆಯಲ್ಲಿ ವಿನಿಯೋಗಿಸಿಕೊಂಡಿರುವ ನಮ್ಮ ಎಲ್ಲಾ ಸಹೋದರರ ಹುರುಪನ್ನು ನಾವು ಸಹ ಪ್ರತಿಬಿಂಬಿಸೋಣ. ಎಲ್ಲರೂ ಕೀರ್ತನೆಗಾರನ ಪಲ್ಲವಿಯನ್ನು ಒಟ್ಟಾಗಿ ಪ್ರತಿಧ್ವನಿಸುತ್ತಾ ಮುಂದುವರಿಯೋಣ: “ಶ್ವಾಸವಿರುವದೆಲ್ಲವೂ ಯೆಹೋವನನ್ನು ಸ್ತುತಿಸಲಿ; ಯಾಹುವಿಗೆ ಸ್ತೋತ್ರ!”​—⁠ಕೀರ್ತನೆ 150:⁠6.

[ಪಾದಟಿಪ್ಪಣಿಗಳು]

^ ಪ್ಯಾರ. 10 ಈ ಪತ್ರಿಕೆಯ 18ರಿಂದ 21ನೇ ಪುಟಗಳಲ್ಲಿರುವ ವಾರ್ಷಿಕ ವರದಿಯನ್ನು ನೋಡಿರಿ.

^ ಪ್ಯಾರ. 11 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

^ ಪ್ಯಾರ. 20 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

ನೀವು ವಿವರಿಸಬಲ್ಲಿರೋ?

• ಇಸವಿ 1919ರಲ್ಲಿ ಸಹೋದರರು ಯಾವ ಕೆಲಸವನ್ನು ಆರಂಭಿಸಿದರು, ಮತ್ತು ಅದು ಏಕೆ ಒಂದು ಪಂಥಾಹ್ವಾನವಾಗಿತ್ತು?

• ಸಾರುವ ಕೆಲಸಕ್ಕೆ ಬೆಂಬಲವಾಗಿ ಯಾರು ಒಟ್ಟುಗೂಡಿಸಲ್ಪಟ್ಟರು?

• ವಿದೇಶಗಳಲ್ಲಿ ಸೇವೆಮಾಡುತ್ತಿರುವ ಮಿಷನೆರಿಗಳು ಹಾಗೂ ಇನ್ನಿತರರು ಯಾವ ದಾಖಲೆಗಳನ್ನು ಮಾಡಿದ್ದಾರೆ?

• ಯೆಹೋವನು ಇಂದು ತನ್ನ ಜನರ ಕೆಲಸವನ್ನು ಆಶೀರ್ವದಿಸುತ್ತಾ ಇದ್ದಾನೆ ಎಂಬುದನ್ನು ತೋರಿಸಲು ನೀವು ಯಾವ ಪುರಾವೆಯನ್ನು ಉಲ್ಲೇಖಿಸಬಲ್ಲಿರಿ?

[ಅಧ್ಯಯನ ಪ್ರಶ್ನೆಗಳು]

1, 2. (ಎ) ಯೇಸು ತನ್ನ ಶಿಷ್ಯರಿಗೆ ಯಾವ ನೇಮಕವನ್ನು ಕೊಟ್ಟನು? (ಬಿ) ಪ್ರಥಮ ಶತಮಾನದ ಕ್ರೈಸ್ತರಿಂದ ಅಷ್ಟು ಹೆಚ್ಚನ್ನು ಸಾಧಿಸಲು ಏಕೆ ಸಾಧ್ಯವಾಯಿತು?

3. ನಿಜವಾದ ಕ್ರೈಸ್ತ “ಗೋದಿ”ಯನ್ನು ಯಾವುದು ದೃಷ್ಟಿಗೆ ಮರೆಮಾಡಿತು?

4, 5. ಇಸವಿ 1919ರಲ್ಲಿ ಆರಂಭಿಸುತ್ತಾ, ಅಭಿಷಿಕ್ತ ಕ್ರೈಸ್ತರು ಯಾವ ಕೆಲಸವನ್ನು ಕೈಗೊಂಡರು, ಮತ್ತು ಇದು ಒಂದು ಪಂಥಾಹ್ವಾನವನ್ನೊಡ್ಡಿತು ಏಕೆ?

6. ಇಸವಿ 1930ಗಳ ಅವಧಿಯಲ್ಲಿ ಸುವಾರ್ತೆಯ ಹಬ್ಬಿಸುವಿಕೆಯು ಯಾವ ಪ್ರಗತಿಯನ್ನು ಮಾಡಿತ್ತು?

7. (ಎ) ಅಭಿಷಿಕ್ತ ಕ್ರೈಸ್ತರು ಎದುರಿಸಿದ ಹೊಸ ಪಂಥಾಹ್ವಾನ ಯಾವುದು? (ಬಿ) ‘ಬೇರೆ ಕುರಿಗಳ’ ನೆರವಿನೊಂದಿಗೆ, ಒಟ್ಟುಗೂಡಿಸುವ ಕೆಲಸವು ಇದು ವರೆಗೆ ಹೇಗೆ ಮುಂದುವರಿದಿದೆ?

8. ಎರಡನೇ ಲೋಕ ಯುದ್ಧದ ಸಮಯದಲ್ಲಿದ್ದ ತೀವ್ರ ಒತ್ತಡಗಳಿಗೆ ಯೆಹೋವನ ಸಾಕ್ಷಿಗಳು ಹೇಗೆ ಪ್ರತಿಕ್ರಿಯಿಸಿದರು?

9. ಎರಡನೇ ಲೋಕ ಯುದ್ಧದ ಸಮಯದಲ್ಲಿ ಯಾವ ಹೊಸ ಶಾಲೆಗಳ ಕುರಿತು ಪ್ರಕಟಿಸಲಾಯಿತು?

10. ಇಸವಿ 2003ರಲ್ಲಿ ಯೆಹೋವನ ಜನರ ಹುರುಪು ಹೇಗೆ ತೋರಿಬಂತು?

11, 12. ಮಿಷನೆರಿಗಳ ಉತ್ತಮ ದಾಖಲೆಯನ್ನು ಯಾವ ಉದಾಹರಣೆಗಳು ತೋರಿಸುತ್ತವೆ?

13, 14. ‘ಸಕಲ . . . ಭಾಷೆಗಳಲ್ಲಿ’ ಸುವಾರ್ತೆಯನ್ನು ಸಾರುವುದರ ಮಹತ್ವವನ್ನು ಯೆಹೋವನು ಯಾವ ರೀತಿಯಲ್ಲಿ ತೋರಿಸಿದನು?

15, 16. ಸ್ಥಳಿಕ ಭಾಷೆಗಳಲ್ಲಿ ಸಾರುವ ಪಂಥಾಹ್ವಾನವನ್ನು ಮಿಷನೆರಿಗಳು ಮತ್ತು ಇತರರು ಹೇಗೆ ಸ್ವೀಕರಿಸಿದ್ದಾರೆ?

17, 18. ಮೆಕ್ಸಿಕೊ ಮತ್ತು ಇತರ ದೇಶಗಳಲ್ಲಿ ಯಾವ ಪಂಥಾಹ್ವಾನಗಳನ್ನು ನಿರ್ವಹಿಸಲಾಗಿದೆ?

19, 20. ಪೌಲನ ಯಾವ ಮಾತುಗಳು ಇಂದು ಗಮನಾರ್ಹ ರೀತಿಯಲ್ಲಿ ನೆರವೇರುತ್ತಿವೆ? ವಿವರಿಸಿ.

[ಪುಟ 18-21ರಲ್ಲಿರುವ ಚಾರ್ಟು]

2003 ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ XXXXನೇ ಇಸವಿಯ ಸೇವಾ ವರ್ಷದ ವರದಿ

(ಬೌಂಡ್‌ ವಾಲ್ಯುಮ್‌ ನೋಡಿ)

[ಪುಟ 14, 15ರಲ್ಲಿರುವ ಚಿತ್ರಗಳು]

ಎರಡನೇ ಲೋಕ ಯುದ್ಧದ ಭೀಕರತೆಯು, ಸುವಾರ್ತೆಯು ಸಾರಲ್ಪಡುವುದೋ ಎಂಬ ಶಂಕೆಯನ್ನು ಕ್ರೈಸ್ತರಲ್ಲಿ ಮೂಡಿಸಲಿಲ್ಲ

[ಕೃಪೆ]

ಸ್ಫೋಟ: U.S. Navy photo; ಬೇರೆಯವು: U.S. Coast Guard photo

[ಪುಟ 16, 17ರಲ್ಲಿರುವ ಚಿತ್ರಗಳು]

ಮಹಾ ಸಮೂಹವು ಸಕಲ ಕುಲ ಭಾಷೆಗಳಿಂದ ಹೊರಬರುವುದು