ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಹೃದಯವನ್ನು ಸಂತೋಷಪಡಿಸಿದ ಸ್ತ್ರೀಯರು

ಯೆಹೋವನ ಹೃದಯವನ್ನು ಸಂತೋಷಪಡಿಸಿದ ಸ್ತ್ರೀಯರು

ಯೆಹೋವನ ಹೃದಯವನ್ನು ಸಂತೋಷಪಡಿಸಿದ ಸ್ತ್ರೀಯರು

“ನೀನು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಯೆಹೋವನು ನಿನಗೆ ಉಪಕಾರ ಮಾಡಲಿ; . . . ಯೆಹೋವನು ನಿನಗೆ ಉತ್ತಮವಾದ ಪ್ರತಿಫಲವನ್ನು ಅನುಗ್ರಹಿಸಲಿ.”​—ರೂತಳು 2:12.

1, 2. ಯೆಹೋವನ ಹೃದಯವನ್ನು ಸಂತೋಷಪಡಿಸಿದಂಥ ಸ್ತ್ರೀಯರ ಕುರಿತಾದ ಬೈಬಲ್‌ ಉದಾಹರಣೆಗಳನ್ನು ಪುನಃ ಪರಿಶೀಲಿಸುವ ಮೂಲಕ ನಾವು ಹೇಗೆ ಪ್ರಯೋಜನ ಪಡೆದುಕೊಳ್ಳಬಹುದು?

ದೇವರ ಭಯವು ಒಬ್ಬ ಫರೋಹನನ್ನು ಎದುರುಹಾಕಿಕೊಳ್ಳುವಂತೆ ಇಬ್ಬರು ಸ್ತ್ರೀಯರನ್ನು ಪ್ರಚೋದಿಸಿತು. ನಂಬಿಕೆಯು ಇಬ್ಬರು ಇಸ್ರಾಯೇಲ್ಯ ಗೂಢಚಾರರನ್ನು ಕಾಪಾಡಲಿಕ್ಕೋಸ್ಕರ ತನ್ನ ಜೀವವನ್ನೇ ಅಪಾಯಕ್ಕೊಡ್ಡುವಂತೆ ಒಬ್ಬ ಸೂಳೆಯನ್ನು ಉತ್ತೇಜಿಸಿತು. ಒಂದು ಬಿಕ್ಕಟ್ಟಿನ ಸಮಯದಲ್ಲಿ ಬುದ್ಧಿವಂತಿಕೆ ಹಾಗೂ ನಮ್ರತೆಯು, ಅನೇಕ ಜೀವಗಳನ್ನು ಉಳಿಸುವಂತೆ ಮತ್ತು ಯೆಹೋವನ ಅಭಿಷಿಕ್ತನು ರಕ್ತಾಪರಾಧ ದೋಷಕ್ಕೆ ಒಳಗಾಗುವುದರಿಂದ ತಡೆಯುವಂತೆ ಒಬ್ಬ ಸ್ತ್ರೀಗೆ ಸಹಾಯಮಾಡಿತು. ಯೆಹೋವ ದೇವರಲ್ಲಿನ ನಂಬಿಕೆ ಹಾಗೂ ಅತಿಥಿಸತ್ಕಾರದ ಮನೋಭಾವವು, ಒಬ್ಬ ವಿಧವೆಯೂ ತಾಯಿಯೂ ಆಗಿದ್ದ ಸ್ತ್ರೀಯೊಬ್ಬಳು ತನ್ನ ಬಳಿ ಕೊನೆಯದಾಗಿ ಉಳಿದಿದ್ದ ಆಹಾರವನ್ನು ದೇವರ ಪ್ರವಾದಿಯೊಬ್ಬನಿಗೆ ಕೊಡುವಂತೆ ಪ್ರಚೋದಿಸಿತು. ಯೆಹೋವನ ಹೃದಯವನ್ನು ಸಂತೋಷಪಡಿಸಿದಂಥ ಸ್ತ್ರೀಯರ ಅನೇಕ ಶಾಸ್ತ್ರೀಯ ಉದಾಹರಣೆಗಳಲ್ಲಿ ಇವು ಕೆಲವೇ ಆಗಿವೆ.

2 ಇಂಥ ಸ್ತ್ರೀಯರ ಕಡೆಗಿನ ಯೆಹೋವನ ಮನೋಭಾವ ಮತ್ತು ಅವರ ಮೇಲೆ ಆತನು ಸುರಿಸಿದ ಆಶೀರ್ವಾದಗಳು, ಒಬ್ಬ ವ್ಯಕ್ತಿಯು ಯಾವುದೇ ಲಿಂಗಜಾತಿಗೆ ಸೇರಿರುವುದಾದರೂ, ಆತ್ಮಿಕ ಗುಣಗಳೇ ಆತನಿಗೆ ಅತ್ಯಧಿಕ ಸಂತೋಷವನ್ನು ಉಂಟುಮಾಡುತ್ತವೆ ಎಂಬುದನ್ನು ತೋರಿಸುತ್ತವೆ. ಹೊರತೋರಿಕೆ ಮತ್ತು ಐಶ್ವರ್ಯದ ಗೀಳುಹಿಡಿದಿರುವ ಇಂದಿನ ಲೋಕದಲ್ಲಿ, ಒಬ್ಬ ವ್ಯಕ್ತಿಯು ಆತ್ಮಿಕತೆಗೆ ಆದ್ಯತೆ ನೀಡುವುದು ನಿಜವಾಗಿಯೂ ಒಂದು ಪಂಥಾಹ್ವಾನವಾಗಿದೆ. ಆದರೆ, ಇಂದು ದೇವಜನರಲ್ಲಿ ಅಧಿಕ ಸಂಖ್ಯೆಯಲ್ಲಿರುವ ದೇವಭಯವುಳ್ಳ ಲಕ್ಷಾಂತರ ಸ್ತ್ರೀಯರಿಂದ ರುಜುಪಡಿಸಲ್ಪಟ್ಟಿರುವಂತೆ, ಆ ಪಂಥಾಹ್ವಾನವನ್ನು ಎದುರಿಸಸಾಧ್ಯವಿದೆ. ಅಂಥ ಕ್ರೈಸ್ತ ಸ್ತ್ರೀಯರು, ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ದೇವಭಯವುಳ್ಳ ಸ್ತ್ರೀಯರಿಂದ ತೋರಿಸಲ್ಪಟ್ಟ ನಂಬಿಕೆ, ಬುದ್ಧಿವಂತಿಕೆ, ಅತಿಥಿಸತ್ಕಾರ ಮನೋಭಾವ ಹಾಗೂ ಇನ್ನಿತರ ಅತ್ಯುತ್ತಮ ಗುಣಗಳನ್ನು ಅನುಕರಿಸುತ್ತಾರೆ. ಪುರಾತನಕಾಲದ ಈ ರೀತಿಯ ಆದರ್ಶಪ್ರಾಯ ಸ್ತ್ರೀಯರಿಂದ ತೋರಿಸಲ್ಪಟ್ಟ ಗುಣಗಳನ್ನು ಕ್ರೈಸ್ತ ಪುರುಷರು ಸಹ ಅನುಕರಿಸಬೇಕು ಎಂಬುದಂತೂ ನಿಶ್ಚಯ. ಪೂರ್ಣ ಮಟ್ಟದಲ್ಲಿ ನಾವು ಅವರನ್ನು ಹೇಗೆ ಅನುಕರಿಸಬಹುದು ಎಂಬುದನ್ನು ತಿಳಿದುಕೊಳ್ಳಲಿಕ್ಕಾಗಿ, ಆರಂಭದಲ್ಲಿ ತಿಳಿಸಲ್ಪಟ್ಟಿರುವ ಸ್ತ್ರೀಯರ ಕುರಿತಾದ ಬೈಬಲ್‌ ವೃತ್ತಾಂತಗಳನ್ನು ಸವಿವರವಾಗಿ ಪರಿಗಣಿಸೋಣ.​—ರೋಮಾಪುರ 15:4; ಯಾಕೋಬ 4:8.

ಒಬ್ಬ ಫರೋಹನನ್ನು ಎದುರುಹಾಕಿಕೊಂಡ ಸ್ತ್ರೀಯರು

3, 4. (ಎ) ಇಬ್ರಿಯರ ಪ್ರತಿಯೊಂದು ನವಜಾತ ಗಂಡುಮಗುವನ್ನು ಕೊಲ್ಲುವಂತೆ ಫರೋಹನು ಶಿಪ್ರಾ ಮತ್ತು ಪೂಗರಿಗೆ ಅಪ್ಪಣೆ ನೀಡಿದ್ದನಾದರೂ, ಅವರು ಅವನಿಗೆ ವಿಧೇಯರಾಗಲು ನಿರಾಕರಿಸಿದರೇಕೆ? (ಬಿ) ಈ ಇಬ್ಬರು ಸೂಲಗಿತ್ತಿಯರ ಧೈರ್ಯ ಹಾಗೂ ದೇವಭಯಕ್ಕಾಗಿ ಯೆಹೋವನು ಅವರಿಗೆ ಹೇಗೆ ಪ್ರತಿಫಲ ನೀಡಿದನು?

3 ಎರಡನೆಯ ಲೋಕ ಯುದ್ಧದ ಬಳಿಕ ಜರ್ಮನಿಯಲ್ಲಿ ನಡೆಸಲ್ಪಟ್ಟ ನ್ಯೂರೆಂಬರ್ಗ್‌ ಕೋರ್ಟ್‌ ವಿಚಾರಣೆಗಳಲ್ಲಿ, ಸಾಮೂಹಿಕ ಹತ್ಯೆಯನ್ನು ಮಾಡಿರುವ ಅಪರಾಧಿಗಳೆಂದು ತೀರ್ಪುಮಾಡಲ್ಪಟ್ಟಿದ್ದವರಲ್ಲಿ ಅನೇಕರು, ತಾವು ಕೊಡಲ್ಪಟ್ಟ ಅಪ್ಪಣೆಗಳಿಗೆ ವಿಧೇಯತೆ ತೋರಿಸಿದೆವಷ್ಟೆ ನಮ್ಮದೇನೂ ತಪ್ಪಿಲ್ಲ ಎಂದು ವಾದಿಸುವ ಮೂಲಕ ತಾವು ಮಾಡಿದ ದುಷ್ಕೃತ್ಯಗಳನ್ನು ಸರಿಯೆಂದು ಸಮರ್ಥಿಸಲು ಪ್ರಯತ್ನಿಸಿದರು. ಈಗ ಈ ವ್ಯಕ್ತಿಗಳನ್ನು ಶಿಪ್ರಾ ಮತ್ತು ಪೂಗಾ ಎಂಬ ಇಬ್ಬರು ಇಬ್ರಿಯ ಸೂಲಗಿತ್ತಿಯರೊಂದಿಗೆ ಹೋಲಿಸಿರಿ. ಈ ಸೂಲಗಿತ್ತಿಯರು ಪುರಾತನ ಐಗುಪ್ತ ದೇಶದಲ್ಲಿ ಒಬ್ಬ ಅನಾಮಧೇಯ ಆದರೆ ಪ್ರಜಾಪೀಡಕನಾಗಿದ್ದ ಫರೋಹನ ಆಳ್ವಿಕೆಯ ಸಮಯದಲ್ಲಿ ಜೀವಿಸಿದ್ದರು. ಇಬ್ರಿಯರ ಜನಸಂಖ್ಯೆಯು ತ್ವರಿತಗತಿಯಲ್ಲಿ ಹೆಚ್ಚುತ್ತದೆಂಬ ಭಯದಿಂದ ಆ ಫರೋಹನು, ಇಬ್ರಿಯರ ಪ್ರತಿಯೊಂದು ನವಜಾತ ಗಂಡುಮಗುವನ್ನು ಕೊಲ್ಲುವಂತೆ ಆ ಇಬ್ಬರು ಸೂಲಗಿತ್ತಿಯರಿಗೆ ಅಪ್ಪಣೆ ನೀಡಿದ್ದನು. ಅತಿ ಘೋರವಾದ ಈ ಅಪ್ಪಣೆಗೆ ಆ ಸ್ತ್ರೀಯರು ಹೇಗೆ ಪ್ರತಿಕ್ರಿಯಿಸಿದರು? ಅವರು ‘ಐಗುಪ್ತ್ಯರ ಅರಸನ ಮಾತಿನಂತೆ ಮಾಡದೆ ಗಂಡುಮಕ್ಕಳನ್ನು ಉಳಿಸಿದರು.’ ಈ ಸ್ತ್ರೀಯರು ಮನುಷ್ಯರ ಭಯಕ್ಕೆ ಏಕೆ ಮಣಿಯಲಿಲ್ಲ? ಏಕೆಂದರೆ ಅವರು ‘ದೇವರಿಗೆ ಭಯಪಡುವವರಾಗಿದ್ದರು.’​—ವಿಮೋಚನಕಾಂಡ 1:15, 17; ಆದಿಕಾಂಡ 9:6.

4 ಹೌದು, ಸೂಲಗಿತ್ತಿಯರು ಯೆಹೋವನ ಮೇಲೆ ಆತುಕೊಂಡರು ಮತ್ತು ಇದಕ್ಕೆ ಪ್ರತಿಯಾಗಿ ಆತನು ಅವರಿಗೆ “ಗುರಾಣಿ”ಯಾಗಿ ಪರಿಣಮಿಸಿದನು ಮತ್ತು ಅವರನ್ನು ಫರೋಹನ ಉಗ್ರ ಕೋಪದಿಂದ ಸಂರಕ್ಷಿಸಿದನು. (2 ಸಮುವೇಲ 22:31; ವಿಮೋಚನಕಾಂಡ 1:​18-20) ಆದರೆ ಯೆಹೋವನ ಆಶೀರ್ವಾದವು ಅಷ್ಟಕ್ಕೇ ಕೊನೆಗೊಳ್ಳಲಿಲ್ಲ. ಅವನು ಶಿಪ್ರಾ ಮತ್ತು ಪೂಗರಿಗೆ ವಂಶಾಭಿವೃದ್ಧಿಯನ್ನು ಉಂಟುಮಾಡುವ ಮೂಲಕ ಪ್ರತಿಫಲ ನೀಡಿದನು. ಆ ಫರೋಹನ ಹೆಸರು ಕಾಲ ಪ್ರವಾಹದಲ್ಲಿ ಕೊಚ್ಚಿಹೋಗಿರುವುದಾದರೂ, ಮುಂದಿನ ಸಂತತಿಗಳವರು ಓದಲಿಕ್ಕಾಗಿ ಈ ಸ್ತ್ರೀಯರ ಹೆಸರುಗಳು ಹಾಗೂ ಕೃತ್ಯಗಳನ್ನು ತನ್ನ ಪ್ರೇರಿತ ವಾಕ್ಯದಲ್ಲಿ ದಾಖಲಿಸುವಂತೆ ಮಾಡುವ ಮೂಲಕವೂ ದೇವರು ಅವರನ್ನು ಸನ್ಮಾನಿಸಿದನು.​—ವಿಮೋಚನಕಾಂಡ 1:21; 1 ಸಮುವೇಲ 2:30ಬಿ; ಜ್ಞಾನೋಕ್ತಿ 10:7.

5. ಶಿಪ್ರಾ ಮತ್ತು ಪೂಗರಂತಹದ್ದೇ ಮನೋಭಾವವನ್ನು ಇಂದು ಅನೇಕ ಕ್ರೈಸ್ತ ಸ್ತ್ರೀಯರು ಹೇಗೆ ತೋರಿಸುತ್ತಾರೆ, ಮತ್ತು ಯೆಹೋವನು ಅವರಿಗೆ ಹೇಗೆ ಪ್ರತಿಫಲ ನೀಡುವನು?

5 ಇಂದು ಸಹ ಶಿಪ್ರಾ ಮತ್ತು ಪೂಗರಂಥ ಸ್ತ್ರೀಯರು ಇದ್ದಾರೋ? ಹೌದು, ಇದ್ದಾರೆ! ಪ್ರತಿ ವರ್ಷ, ಅಂಥ ಸಾವಿರಾರು ಸ್ತ್ರೀಯರು “ಅರಸನ ಅಪ್ಪಣೆ”ಯು ನಿಷೇಧವನ್ನು ಹಾಕುವಂತಹ ದೇಶಗಳಲ್ಲಿ ಬೈಬಲಿನ ಜೀವದಾಯಕ ಸಂದೇಶವನ್ನು ನಿರ್ಭಯವಾಗಿ ಸಾರುತ್ತಾರೆ ಮತ್ತು ಹೀಗೆ ತಮ್ಮ ಸ್ವಾತಂತ್ರ್ಯವನ್ನು ಅಥವಾ ತಮ್ಮ ಜೀವವನ್ನೂ ಅಪಾಯಕ್ಕೊಡ್ಡುತ್ತಿದ್ದಾರೆ. (ಇಬ್ರಿಯ 11:23; ಅ. ಕೃತ್ಯಗಳು 5:​28, 29) ದೇವರ ಹಾಗೂ ನೆರೆಯವರ ಪ್ರೀತಿಯಿಂದ ಪ್ರಚೋದಿತರಾದ ಅಂಥ ಧೀರ ಸ್ತ್ರೀಯರು, ದೇವರ ರಾಜ್ಯದ ಸುವಾರ್ತೆಯನ್ನು ಇತರರೊಂದಿಗೆ ಹಂಚಿಕೊಳ್ಳುವುದರಿಂದ ತಮ್ಮನ್ನು ತಡೆಹಿಡಿಯುವಂತೆ ಯಾರನ್ನೂ ಅನುಮತಿಸುವುದಿಲ್ಲ. ಇದರ ಪರಿಣಾಮವಾಗಿ, ಅನೇಕ ಕ್ರೈಸ್ತ ಸ್ತ್ರೀಯರು ವಿರೋಧ ಹಾಗೂ ಹಿಂಸೆಯನ್ನು ಎದುರಿಸುತ್ತಾರೆ. (ಮಾರ್ಕ 12:​30, 31; 13:​9-13) ಶಿಪ್ರಾ ಮತ್ತು ಪೂಗರ ವಿಷಯದಲ್ಲಿ ಸತ್ಯವಾಗಿದ್ದಂತೆಯೇ ಈಗಲೂ ಯೆಹೋವನು ಇಂಥ ಅತ್ಯುತ್ತಮ, ಧೈರ್ಯಶಾಲಿ ಸ್ತ್ರೀಯರ ಕೃತ್ಯಗಳನ್ನು ಚೆನ್ನಾಗಿ ಬಲ್ಲಾತನಾಗಿದ್ದಾನೆ ಮತ್ತು ಅವರು ಕಡೇ ವರೆಗೂ ನಂಬಿಗಸ್ತಿಕೆಯಿಂದ ತಾಳಿಕೊಳ್ಳುವಷ್ಟರ ತನಕ “ಜೀವಬಾಧ್ಯರ ಪಟ್ಟಿಯಲ್ಲಿ” ಅವರ ಹೆಸರುಗಳನ್ನು ಜೋಪಾನವಾಗಿ ಸಂರಕ್ಷಿಸಿಡುವ ಮೂಲಕ ಆತನು ತನ್ನ ಪ್ರೀತಿಯನ್ನು ವ್ಯಕ್ತಪಡಿಸುವನು.​—ಫಿಲಿಪ್ಪಿ 4:3; ಮತ್ತಾಯ 24:13.

ಮುಂಚೆ ಸೂಳೆಯಾಗಿದ್ದ ಒಬ್ಬ ಸ್ತ್ರೀ ಯೆಹೋವನ ಹೃದಯವನ್ನು ಸಂತೋಷಪಡಿಸುತ್ತಾಳೆ

6, 7. (ಎ) ಯೆಹೋವನ ಕುರಿತು ಮತ್ತು ಆತನ ಜನರ ಕುರಿತು ರಾಹಾಬಳಿಗೆ ಏನು ತಿಳಿದಿತ್ತು, ಮತ್ತು ಈ ಜ್ಞಾನವು ಅವಳ ಮೇಲೆ ಯಾವ ಪರಿಣಾಮವನ್ನು ಬೀರಿತು? (ಬಿ) ದೇವರ ವಾಕ್ಯವು ರಾಹಾಬಳನ್ನು ಹೇಗೆ ಸನ್ಮಾನಿಸುತ್ತದೆ?

6 ಸಾ.ಶ.ಪೂ. 1473ನೆಯ ವರ್ಷದಲ್ಲಿ, ರಾಹಾಬಳೆಂಬ ಹೆಸರಿನ ಒಬ್ಬ ಸೂಳೆಯು ಯೆರಿಕೋ ಎಂಬ ಕಾನಾನ್ಯ ಪಟ್ಟಣದಲ್ಲಿ ವಾಸಿಸುತ್ತಿದ್ದಳು. ರಾಹಾಬಳು ಒಳ್ಳೆಯ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಂಥ ಒಬ್ಬ ಸ್ತ್ರೀಯಾಗಿದ್ದಳು ಎಂಬುದು ಸುಸ್ಪಷ್ಟ. ಇಬ್ಬರು ಇಸ್ರಾಯೇಲ್ಯ ಗೂಢಚಾರರು ಅವಳ ಮನೆಯಲ್ಲಿ ಆಶ್ರಯವನ್ನು ಪಡೆದುಕೊಂಡಾಗ, 40 ವರ್ಷಗಳ ಹಿಂದೆ ಐಗುಪ್ತ ದೇಶದಿಂದ ಇಸ್ರಾಯೇಲ್ಯರು ಅದ್ಭುತಕರ ರೀತಿಯಲ್ಲಿ ವಿಮೋಚನೆಯನ್ನು ಪಡೆದುಕೊಂಡದ್ದರ ಕುರಿತಾದ ನಿರ್ದಿಷ್ಟ ವಿವರಗಳನ್ನು ಅವಳು ಅವರಿಗೆ ತಿಳಿಸಲು ಶಕ್ತಳಾಗಿದ್ದಳು! ಸೀಹೋನ್‌ ಮತ್ತು ಓಗ್‌ ಎಂಬ ಅಮೋರಿಯರ ಅರಸರಿಬ್ಬರ ವಿರುದ್ಧ ಇಸ್ರಾಯೇಲ್ಯರು ಪಡೆದುಕೊಂಡಿದ್ದ ಇತ್ತೀಚಿನ ವಿಜಯಗಳೂ ಅವಳಿಗೆ ಚಿರಪರಿಚಿತವಾಗಿದ್ದವು. ಈ ಜ್ಞಾನವು ಅವಳ ಮೇಲೆ ಹೇಗೆ ಪ್ರಭಾವ ಬೀರಿತೆಂಬುದನ್ನು ಗಮನಿಸಿರಿ. ಆ ಗೂಢಚಾರರಿಗೆ ಅವಳು ಹೇಳಿದ್ದು: “ಯೆಹೋವನು ಈ ದೇಶವನ್ನು ನಿಮಗೆ ಕೊಟ್ಟಿರುವದನ್ನು [“ನಿಶ್ಚಯವಾಗಿಯೂ ಕೊಡುವನೆಂಬುದನ್ನು,” NW] ಬಲ್ಲೆನು. . . . ನಿಮ್ಮ ದೇವರಾದ ಯೆಹೋವನೊಬ್ಬನೇ ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ದೇವರು.” (ಯೆಹೋಶುವ 2:1, 9-11) ಹೌದು, ಯೆಹೋವನ ಕುರಿತು ಮತ್ತು ಇಸ್ರಾಯೇಲ್ಯರ ಪರವಾಗಿ ಆತನು ನಡಿಸಿದ ಕೃತ್ಯಗಳ ಕುರಿತು ರಾಹಾಬಳು ಏನನ್ನು ಕಲಿತಳೋ ಅದು, ಅವಳ ಹೃದಯವು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವಂತೆ ಮಾಡಿತು ಮತ್ತು ಆತನಲ್ಲಿ ನಂಬಿಕೆಯಿಡುವಂತೆ ಪ್ರಚೋದಿಸಿತು.​—ರೋಮಾಪುರ 10:10.

7 ರಾಹಾಬಳ ನಂಬಿಕೆಯೇ ಅವಳನ್ನು ಕ್ರಿಯೆಗೈಯುವಂತೆ ಪ್ರಚೋದಿಸಿತು. ಅವಳು ಇಸ್ರಾಯೇಲ್ಯ ಗೂಢಚಾರರನ್ನು ‘ಸಮಾಧಾನವಾಗಿ ಸೇರಿಸಿಕೊಂಡಳು’ ಮತ್ತು ಇಸ್ರಾಯೇಲ್ಯರು ಯೆರಿಕೋ ಪಟ್ಟಣವನ್ನು ಆಕ್ರಮಿಸಿದಾಗ ಅವಳು ಅವರು ಕೊಟ್ಟಂಥ ಜೀವರಕ್ಷಕ ಸೂಚನೆಗಳಿಗೆ ವಿಧೇಯಳಾದಳು. (ಇಬ್ರಿಯ 11:31; ಯೆಹೋಶುವ 2:​18-21) ರಾಹಾಬಳ ನಂಬಿಕೆಯ ಕೃತ್ಯಗಳು ಯೆಹೋವನ ಹೃದಯವನ್ನು ಸಂತೋಷಪಡಿಸಿದವು ಎಂಬುದರಲ್ಲಿ ಸಂಶಯವೇ ಇಲ್ಲ; ಏಕೆಂದರೆ, ಕ್ರೈಸ್ತರಿಗೆ ಅನುಕರಿಸುವ ಒಂದು ಮಾದರಿಯೋಪಾದಿ ಅವಳ ಹೆಸರನ್ನು ದೇವರ ಸ್ನೇಹಿತನಾದ ಅಬ್ರಹಾಮನ ಹೆಸರಿನ ಜೊತೆಗೆ ದಾಖಲಿಸುವಂತೆ ಆತನು ಕ್ರೈಸ್ತ ಶಿಷ್ಯನಾದ ಯಾಕೋಬನನ್ನು ಪ್ರೇರೇಪಿಸಿದನು. ಯಾಕೋಬನು ಬರೆದುದು: “ಅದೇ ರೀತಿಯಾಗಿ ಸೂಳೆಯಾದ ರಹಾಬಳು ಗೂಢಚಾರರನ್ನು ತನ್ನ ಮನೆಯಲ್ಲಿ ಸೇರಿಸಿಕೊಂಡು ಬೇರೆ ದಾರಿಯಿಂದ ಅವರನ್ನು ಕಳುಹಿಸಿದ್ದರಲ್ಲಿ ಕ್ರಿಯೆಗಳಿಂದಲೇ ನೀತಿವಂತಳೆಂಬ ನಿರ್ಣಯವನ್ನು ಹೊಂದಿದಳಲ್ಲವೇ.”​—ಯಾಕೋಬ 2:25.

8. ರಾಹಾಬಳ ನಂಬಿಕೆ ಹಾಗೂ ವಿಧೇಯತೆಗಾಗಿ ಯೆಹೋವನು ಅವಳನ್ನು ಹೇಗೆ ಆಶೀರ್ವದಿಸಿದನು?

8 ಅನೇಕ ವಿಧಗಳಲ್ಲಿ ಯೆಹೋವನು ರಾಹಾಬಳಿಗೆ ಪ್ರತಿಫಲ ನೀಡಿದನು. ಮೊದಲನೆಯದಾಗಿ, ಆತನು ಅವಳ ಜೀವವನ್ನು ಹಾಗೂ ಅವಳ ಮನೆಯಲ್ಲಿ ಆಶ್ರಯವನ್ನು ಪಡೆದುಕೊಂಡಿದ್ದವರೆಲ್ಲರ ಜೀವಗಳನ್ನು, ಅಂದರೆ “ಅವಳ ತಂದೆಯ ಮನೆಯವರನ್ನೂ ಅವಳಿಗಿರುವದೆಲ್ಲವನ್ನೂ” ಅದ್ಭುತಕರವಾಗಿ ಕಾಪಾಡಿದನು. ತದನಂತರ ಇವರೆಲ್ಲರೂ “ಇಸ್ರಾಯೇಲ್ಯರಲ್ಲಿ” ವಾಸಿಸುವಂತೆ ಅನುಮತಿಸಿದನು, ಮತ್ತು ಅಲ್ಲಿ ಅವರು ಸ್ವಕೀಯ ಜನರೋಪಾದಿ ಉಪಚರಿಸಲ್ಪಡಬೇಕಾಗಿತ್ತು. (ಯೆಹೋಶುವ 2:13; 6:22-25; ಯಾಜಕಕಾಂಡ 19:33, 34) ಆದರೆ ಯೆಹೋವನು ಅವಳಿಗೆ ಕೊಟ್ಟಂಥ ಪ್ರತಿಫಲಗಳು ಇಷ್ಟೇ ಆಗಿರಲಿಲ್ಲ. ಯೇಸು ಕ್ರಿಸ್ತನ ಪೂರ್ವಜಳಾಗುವ ಸನ್ಮಾನವನ್ನು ಸಹ ಆತನು ರಾಹಾಬಳಿಗೆ ದಯಪಾಲಿಸಿದನು. ಒಂದುಕಾಲದಲ್ಲಿ ವಿಗ್ರಹಾರಾಧನೆಮಾಡುತ್ತಿದ್ದ ಒಬ್ಬ ಕಾನಾನ್ಯ ಸ್ತ್ರೀಯ ಕಡೆಗೆ ಎಷ್ಟರಮಟ್ಟಿಗೆ ಪ್ರೀತಿದಯೆಯು ತೋರಿಸಲ್ಪಟ್ಟಿತು! *​—ಕೀರ್ತನೆ 130:​3, 4.

9. ರಾಹಾಬಳ ಕಡೆಗೆ ಮತ್ತು ಪ್ರಥಮ ಶತಮಾನದ ಕೆಲವು ಕ್ರೈಸ್ತ ಸ್ತ್ರೀಯರ ಕಡೆಗೆ ಯೆಹೋವನು ತೋರಿಸಿದ ಮನೋಭಾವವು ಇಂದಿನ ಕೆಲವು ಸ್ತ್ರೀಯರಿಗೆ ಹೇಗೆ ಉತ್ತೇಜನದಾಯಕವಾಗಿ ಇರಸಾಧ್ಯವಿದೆ?

9 ರಾಹಾಬಳಂತೆ, ಪ್ರಥಮ ಶತಮಾನದಿಂದ ಹಿಡಿದು ಇಂದಿನ ತನಕವೂ ಕೆಲವು ಕ್ರೈಸ್ತ ಸ್ತ್ರೀಯರು ದೇವರನ್ನು ಸಂತೋಷಪಡಿಸಲಿಕ್ಕಾಗಿ ಅನೈತಿಕ ಜೀವನ ಮಾರ್ಗವನ್ನು ತೊರೆದಿದ್ದಾರೆ. (1 ಕೊರಿಂಥ 6:​9-11) ಅವರಲ್ಲಿ ಕೆಲವರು, ಎಲ್ಲಿ ಅನೈತಿಕತೆಯು ವ್ಯಾಪಕವಾಗಿದ್ದು ಸರ್ವಸಾಧಾರಣವಾಗಿ ಪರಿಗಣಿಸಲ್ಪಡುತ್ತಿತ್ತೋ ಆ ಪುರಾತನ ಕಾನಾನ್‌ಗೆ ತುಲನಾತ್ಮಕವಾದಂಥ ಪರಿಸರದಲ್ಲಿ ಬೆಳೆದವರಾಗಿದ್ದರು ಎಂಬುದರಲ್ಲಿ ಸಂಶಯವಿಲ್ಲ. ಆದರೂ, ಶಾಸ್ತ್ರವಚನಗಳ ನಿಷ್ಕೃಷ್ಟ ಜ್ಞಾನದ ಮೇಲಾಧಾರಿತವಾದ ನಂಬಿಕೆಯಿಂದ ಪ್ರಚೋದಿತರಾದ ಅಂಥವರು ತಮ್ಮ ಮಾರ್ಗಗಳನ್ನು ಬದಲಾಯಿಸಿದರು. (ರೋಮಾಪುರ 10:17) ಆದುದರಿಂದ, ‘ದೇವರು ಅವರ ದೇವರೆನಿಸಿಕೊಳ್ಳುವದಕ್ಕೆ ನಾಚಿಕೊಳ್ಳುವುದಿಲ್ಲ’ ಎಂದು ಅಂಥ ಸ್ತ್ರೀಯರ ಬಗ್ಗೆಯೂ ಹೇಳಸಾಧ್ಯವಿತ್ತು. (ಇಬ್ರಿಯ 11:16) ಇದು ಎಷ್ಟು ಸನ್ಮಾನಯೋಗ್ಯ ಸಂಗತಿಯಾಗಿದೆ!

ಅವಳ ಬುದ್ಧಿವಂತಿಕೆಗಾಗಿ ಆಶೀರ್ವದಿಸಲ್ಪಟ್ಟಳು

10, 11. ನಾಬಾಲ ಮತ್ತು ದಾವೀದರನ್ನು ಒಳಗೊಂಡ ಯಾವ ಸನ್ನಿವೇಶಗಳು ಅಬೀಗೈಲಳನ್ನು ಕ್ರಿಯೆಗೈಯುವಂತೆ ಪ್ರಚೋದಿಸಿದವು?

10 ಪುರಾತನಕಾಲದ ಅನೇಕ ನಂಬಿಗಸ್ತ ಸ್ತ್ರೀಯರು ಗಮನಾರ್ಹ ರೀತಿಯಲ್ಲಿ ಬುದ್ಧಿವಂತಿಕೆಯನ್ನು ತೋರಿಸಿದರು; ಮತ್ತು ಇದರಿಂದಾಗಿ ಅವರು ಯೆಹೋವನ ಜನರಿಗೆ ಅಮೂಲ್ಯರಾಗಿ ಪರಿಣಮಿಸಿದರು. ಅಂಥ ಸ್ತ್ರೀಯರಲ್ಲಿ ಅಬೀಗೈಲಳು ಒಬ್ಬಳಾಗಿದ್ದು, ಇವಳು ಬಹುಧನವಂತನಾಗಿದ್ದ ಇಸ್ರಾಯೇಲ್ಯ ಜಮೀನ್ದಾರ ನಾಬಾಲನ ಪತ್ನಿಯಾಗಿದ್ದಳು. ಅಬೀಗೈಲಳ ಬುದ್ಧಿವಂತಿಕೆಯು, ಅನೇಕ ಜೀವಗಳನ್ನು ಕಾಪಾಡಲು ಸಹಾಯಮಾಡಿತು ಮತ್ತು ಇಸ್ರಾಯೇಲಿನ ಭಾವೀ ಅರಸನಾದ ದಾವೀದನನ್ನು ರಕ್ತಾಪರಾಧಿಯಾಗುವುದರಿಂದ ತಡೆಯಿತು. 1 ಸಮುವೇಲ 25ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿರುವ ವೃತ್ತಾಂತದಲ್ಲಿ ಅಬೀಗೈಲಳ ಕುರಿತು ನಾವು ಓದಸಾಧ್ಯವಿದೆ.

11 ಆ ಕಥೆಯು ಹೀಗೆ ಆರಂಭವಾಗುತ್ತದೆ. ದಾವೀದನು ಮತ್ತು ಅವನ ಸೇವಕರು ನಾಬಾಲನ ಆಡುಗಳು ಹಾಗೂ ಕುರಿಗಳ ಮಂದೆಯ ಬಳಿ ಪಾಳೆಯ ಹೂಡಿದ್ದಾರೆ. ಜೊತೆ ಇಸ್ರಾಯೇಲ್ಯನಾದ ನಾಬಾಲನಿಗೆ ದಯೆತೋರಿಸಲಿಕ್ಕಾಗಿ ಇವರು ಹಗಲೂರಾತ್ರಿ ಯಾವುದೇ ಹಣವನ್ನು ತೆಗೆದುಕೊಳ್ಳದೆ ಅವನ ಮಂದೆಯನ್ನು ಕಾಪಾಡುತ್ತಾರೆ. ಆದರೆ ದಾವೀದನ ಆಹಾರಸಾಮಗ್ರಿಗಳು ಮುಗಿಯುತ್ತಾ ಬರುವಾಗ, ಆಹಾರಕ್ಕಾಗಿ ವಿನಂತಿಸಲು ಅವನು ಹತ್ತು ಮಂದಿ ಸೇವಕರನ್ನು ನಾಬಾಲನ ಬಳಿಗೆ ಕಳುಹಿಸುತ್ತಾನೆ. ದಾವೀದನಿಗೆ ತನ್ನ ಕೃತಜ್ಞತೆಯನ್ನು ತೋರಿಸಲು ಮತ್ತು ಯೆಹೋವನ ಅಭಿಷಿಕ್ತನೋಪಾದಿ ಅವನನ್ನು ಸನ್ಮಾನಿಸಲು ನಾಬಾಲನಿಗೆ ಈಗ ಒಂದು ಸದವಕಾಶವಿತ್ತು. ಆದರೆ ನಾಬಾಲನು ಇದಕ್ಕೆ ವಿರುದ್ಧವಾದದ್ದನ್ನೇ ಮಾಡುತ್ತಾನೆ. ಕೋಪೋದ್ರಿಕ್ತನಾದ ಅವನು ದಾವೀದನನ್ನು ತುಚ್ಛೀಕರಿಸುತ್ತಾನೆ ಮತ್ತು ಆ ಹತ್ತು ಮಂದಿ ಸೇವಕರನ್ನು ಬರಿಗೈಯಲ್ಲಿ ಕಳುಹಿಸಿಬಿಡುತ್ತಾನೆ. ದಾವೀದನು ಇದನ್ನು ಕೇಳಿಸಿಕೊಂಡಾಗ, ಅವನು 400 ಮಂದಿ ಶಸ್ತ್ರಸಜ್ಜಿತ ಪುರುಷರನ್ನು ಕರೆದುಕೊಂಡು ಮುಯ್ಯಿತೀರಿಸಲು ಹೊರಡುತ್ತಾನೆ. ಈ ನಡುವೆ ಅಬೀಗೈಲಳಿಗೆ ತನ್ನ ಗಂಡನ ನಿಷ್ಠುರ ಪ್ರತಿಕ್ರಿಯೆಯ ಕುರಿತು ಗೊತ್ತಾಗುತ್ತದೆ ಮತ್ತು ಅವಳು ಅತ್ಯಧಿಕ ಪ್ರಮಾಣದಲ್ಲಿ ಆಹಾರಸಾಮಗ್ರಿಗಳನ್ನು ಕಳುಹಿಸುವ ಮೂಲಕ ದಾವೀದನ ಕೋಪವನ್ನು ಶಮನಗೊಳಿಸಲು ಆ ಕೂಡಲೆ ಮತ್ತು ವಿವೇಕಭರಿತ ರೀತಿಯಲ್ಲಿ ಕ್ರಿಯೆಗೈಯುತ್ತಾಳೆ. ತದನಂತರ ಸ್ವತಃ ಅವಳೇ ದಾವೀದನನ್ನು ಎದುರುಗೊಳ್ಳಲು ಹೋಗುತ್ತಾಳೆ.​—2-20ನೆಯ ವಚನಗಳು.

12, 13. (ಎ) ಅಬೀಗೈಲಳು ಬುದ್ಧಿವಂತಳೂ ಯೆಹೋವನಿಗೆ ಮತ್ತು ಆತನ ಅಭಿಷಿಕ್ತನಿಗೆ ನಿಷ್ಠಳೂ ಆಗಿ ರುಜುವಾದದ್ದು ಹೇಗೆ? (ಬಿ) ಮನೆಗೆ ಹಿಂದಿರುಗಿದ ಬಳಿಕ ಅಬೀಗೈಲಳು ಏನು ಮಾಡಿದಳು, ಮತ್ತು ಅವಳ ವಿಷಯದಲ್ಲಿ ಪರಿಸ್ಥಿತಿಗಳು ಹೇಗೆ ಬದಲಾದವು?

12 ಅಬೀಗೈಲಳು ದಾವೀದನನ್ನು ಸಂಧಿಸಿದಾಗ ನಮ್ರಭಾವದಿಂದ ಕರುಣೆ ತೋರಿಸುವಂತೆ ಅವಳು ಕೇಳಿಕೊಂಡ ರೀತಿಯು, ಯೆಹೋವನ ಅಭಿಷಿಕ್ತನಿಗಾಗಿ ಅವಳಲ್ಲಿದ್ದ ಆಳವಾದ ಗೌರವವನ್ನು ವ್ಯಕ್ತಪಡಿಸುತ್ತದೆ. “ಸ್ವಾಮಿಯೇ, ನೀನು ಯೆಹೋವನ ಶತ್ರುಗಳೊಡನೆ ಯುದ್ಧಮಾಡುವದರಿಂದ ಆತನು ನಿನ್ನ ಮನೆಯನ್ನು ಶಾಶ್ವತವಾಗಿ ಸ್ಥಿರಪಡಿಸುವನು” ಎಂದು ಅವಳು ನುಡಿದಳು ಮಾತ್ರವಲ್ಲ, ಯೆಹೋವನು ದಾವೀದನನ್ನು ಇಸ್ರಾಯೇಲ್‌ ಪ್ರಭುವನ್ನಾಗಿ ಮಾಡುವನು ಎಂದೂ ಕೂಡಿಸಿ ಹೇಳಿದಳು. (28-30ನೆಯ ವಚನಗಳು) ಅದೇ ಸಮಯದಲ್ಲಿ, ದಾವಿದನು ಒಂದುವೇಳೆ ಮುಯ್ಯಿತೀರಿಸುವ ಆಲೋಚನೆಯನ್ನು ನಿಯಂತ್ರಿಸದಿರುವಲ್ಲಿ ಅದು ಅವನನ್ನು ರಕ್ತಾಪರಾಧಕ್ಕೆ ಗುರಿಮಾಡುವುದು ಎಂದು ಅವನಿಗೆ ಹೇಳುವ ಮೂಲಕವೂ ಅಬೀಗೈಲಳು ಗಮನಾರ್ಹ ರೀತಿಯಲ್ಲಿ ಧೈರ್ಯವನ್ನು ತೋರಿಸುತ್ತಾಳೆ. (26, 31ನೆಯ ವಚನಗಳು) ಅಬೀಗೈಲಳ ನಮ್ರಭಾವ, ಆಳವಾದ ಗೌರವ ಮತ್ತು ಸ್ಪಷ್ಟವಾದ ಆಲೋಚನಾಶಕ್ತಿಯಿಂದಾಗಿ ದಾವೀದನಿಗೆ ತಾನು ಮಾಡಲಿದ್ದ ತಪ್ಪು ಅರಿವಾಗುತ್ತದೆ. ಅವನು ಪ್ರತಿಕ್ರಿಯಿಸುವುದು: “ಈ ಹೊತ್ತು ನನ್ನನ್ನು ಎದುರುಗೊಳ್ಳುವದಕ್ಕಾಗಿ ನಿನ್ನನ್ನು ಕಳುಹಿಸಿದ ಇಸ್ರಾಯೇಲ್‌ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಸ್ವಹಸ್ತದಿಂದ ಮುಯ್ಯಿತೀರಿಸಿ ರಕ್ತಾಪರಾಧಕ್ಕೆ ಗುರಿಯಾಗದಂತೆ ನನ್ನನ್ನು ತಡೆದ ನೀನೂ ನಿನ್ನ ಬುದ್ಧಿಯೂ ಸ್ತೋತ್ರಾರ್ಹವೇ ಸರಿ.”​—32, 33ನೆಯ ವಚನಗಳು.

13 ಮನೆಗೆ ಹಿಂದಿರುಗಿದ ಬಳಿಕ ಅಬೀಗೈಲಳು ತಾನು ದಾವೀದನಿಗೆ ಕೊಟ್ಟ ಉಡುಗೊರೆಯ ಬಗ್ಗೆ ತನ್ನ ಗಂಡನಿಗೆ ತಿಳಿಸುವ ಧೈರ್ಯವನ್ನೂ ಮಾಡುತ್ತಾಳೆ. ಆದರೆ, ಅವಳು ಅವನನ್ನು ಕಂಡಾಗ, ಅವನು ‘ಬಹಳವಾಗಿ ಕುಡಿದಿರುತ್ತಾನೆ.’ ಆದುದರಿಂದ ಅವಳು ಅವನ ಅಮಲು ಇಳಿಯುವ ತನಕ ಕಾಯುತ್ತಾಳೆ ಮತ್ತು ನಂತರ ಇದರ ವಿಷಯವಾಗಿ ಹೇಳುತ್ತಾಳೆ. ಇದಕ್ಕೆ ನಾಬಾಲನು ಹೇಗೆ ಪ್ರತಿಕ್ರಿಯಿಸುತ್ತಾನೆ? ಅವನು ಎಷ್ಟು ಸ್ತಬ್ಧನಾಗುತ್ತಾನೆಂದರೆ, ಒಂದು ರೀತಿಯ ಪಾರ್ಶ್ವವಾಯು ಅವನಿಗೆ ಬಡಿಯುತ್ತದೆ. ಹತ್ತು ದಿನಗಳ ಬಳಿಕ ಅವನು ದೇವರಿಂದ ಹತನಾಗಿ ಸಾಯುತ್ತಾನೆ. ನಾಬಾಲನು ಸತ್ತನೆಂಬ ಸುದ್ದಿಯನ್ನು ದಾವೀದನು ಕೇಳಿಸಿಕೊಂಡಾಗ, ಅವನು ನಿಜವಾಗಿಯೂ ಮೆಚ್ಚಿಕೊಂಡಿರುವ ಮತ್ತು ತುಂಬ ಗೌರವಿಸುವ ಅಬೀಗೈಲಳ ಬಳಿ ವಿವಾಹದ ಪ್ರಸ್ತಾಪವನ್ನು ಮಾಡುತ್ತಾನೆ. ಅಬೀಗೈಲಳು ದಾವೀದನ ಬೇಡಿಕೆಗೆ ಸಮ್ಮತಿಸುತ್ತಾಳೆ.​—34-42ನೆಯ ವಚನಗಳು.

ನೀವು ಅಬೀಗೈಲಳಂತೆ ಇರಬಲ್ಲಿರೋ?

14. ಅಬೀಗೈಲಳ ಯಾವ ಗುಣಗಳನ್ನು ನಾವು ಹೆಚ್ಚಿನ ಮಟ್ಟಿಗೆ ಬೆಳೆಸಿಕೊಳ್ಳಲು ಬಯಸಬಹುದು?

14 ಪುರುಷರು ಹಾಗೂ ಸ್ತ್ರೀಯರು ಇನ್ನೂ ಹೆಚ್ಚಿನ ಮಟ್ಟಿಗೆ ಬೆಳೆಸಿಕೊಳ್ಳಲು ಬಯಸುವಂಥ ಕೆಲವು ಗುಣಗಳನ್ನು ನೀವು ಅಬೀಗೈಲಳಲ್ಲಿ ಕಾಣುತ್ತೀರೋ? ಕಷ್ಟತೊಂದರೆಗಳು ಏಳುವಾಗ ಹೆಚ್ಚು ವಿವೇಕಯುತವಾಗಿ ಮತ್ತು ಬುದ್ಧಿವಂತಿಕೆಯಿಂದ ಕ್ರಿಯೆಗೈಯಲು ನೀವು ಬಯಸಬಹುದು. ಅಥವಾ ನಿಮ್ಮ ಸುತ್ತಲಿರುವವರ ಭಾವನೆಗಳು ತೀವ್ರವಾಗಿರುವಾಗ ನೀವು ಶಾಂತವಾದ ಹಾಗೂ ತರ್ಕಬದ್ಧವಾದ ರೀತಿಯಲ್ಲಿ ಮಾತಾಡಲು ಬಯಸಬಹುದು. ಹಾಗಿರುವಲ್ಲಿ, ಈ ವಿಚಾರದ ಕುರಿತು ಯೆಹೋವನ ಬಳಿ ಏಕೆ ಪ್ರಾರ್ಥಿಸಬಾರದು? ಯಾರು ‘ನಂಬಿಕೆಯಿಂದ ಕೇಳಿಕೊಳ್ಳುತ್ತಾರೋ’ ಅವರೆಲ್ಲರಿಗೆ ಆತನು ವಿವೇಕ, ವಿವೇಚನಾಶಕ್ತಿ ಹಾಗೂ ಆಲೋಚನಾ ಸಾಮರ್ಥ್ಯವನ್ನು ಕೊಡುವೆನೆಂದು ವಾಗ್ದಾನಿಸುತ್ತಾನೆ.​—ಯಾಕೋಬ 1:5, 6; ಜ್ಞಾನೋಕ್ತಿ 2:1-6, 10, 11.

15. ಯಾವ ಸನ್ನಿವೇಶಗಳ ಕೆಳಗೆ ಕ್ರೈಸ್ತ ಸ್ತ್ರೀಯರು ಅಬೀಗೈಲಳಿಂದ ತೋರಿಸಲ್ಪಟ್ಟ ಗುಣಗಳನ್ನು ತೋರಿಸುವುದು ವಿಶೇಷವಾಗಿ ಪ್ರಾಮುಖ್ಯವಾದದ್ದಾಗಿದೆ?

15 ಬೈಬಲ್‌ ಮೂಲತತ್ತ್ವಗಳಿಗೆ ಸ್ವಲ್ಪ ಮಟ್ಟಿಗೆ ಮಾತ್ರ ಲಕ್ಷ್ಯಕೊಡುವ ಅಥವಾ ಅವುಗಳಿಗೆ ಲಕ್ಷ್ಯವನ್ನೇ ಕೊಡದಿರುವಂಥ ಒಬ್ಬ ಅವಿಶ್ವಾಸಿ ಪತಿ ಇರುವಂಥ ಒಬ್ಬ ಸ್ತ್ರೀಗೆ ಇಂಥ ಅತ್ಯುತ್ತಮ ಗುಣಗಳು ವಿಶೇಷವಾಗಿ ಪ್ರಾಮುಖ್ಯವಾಗಿವೆ. ಬಹುಶಃ ಅವನು ವಿಪರೀತ ಕುಡಿಯುವವನಾಗಿರಬಹುದು. ಒಂದಲ್ಲ ಒಂದು ದಿನ ಅಂಥ ಪುರುಷರು ತಮ್ಮ ಮಾರ್ಗಗಳನ್ನು ಬದಲಾಯಿಸುವರು ಎಂಬ ನಿರೀಕ್ಷೆಯಿರಲಿ. ಏಕೆಂದರೆ, ಅನೇಕವೇಳೆ ತಮ್ಮ ಪತ್ನಿಯರ ಸೌಮ್ಯ ಸ್ವಭಾವ, ಆಳವಾದ ಗೌರವ ಮತ್ತು ಪರಿಶುದ್ಧ ನಡವಳಿಕೆಗೆ ಪ್ರತಿಕ್ರಿಯೆಯಲ್ಲಿ ಅನೇಕ ಪುರುಷರು ಬದಲಾಗಿದ್ದಾರೆ.​—1 ಪೇತ್ರ 3:​1, 2, 4.

16. ಮನೆಯಲ್ಲಿ ಒಬ್ಬ ಕ್ರೈಸ್ತ ಸ್ತ್ರೀಯ ಸನ್ನಿವೇಶಗಳು ಹೇಗೇ ಇರಲಿ, ಎಲ್ಲಕ್ಕಿಂತಲೂ ಮಿಗಿಲಾಗಿ ಯೆಹೋವನೊಂದಿಗಿನ ತನ್ನ ಸಂಬಂಧವನ್ನು ಅಮೂಲ್ಯವಾಗಿ ಪರಿಗಣಿಸುತ್ತೇನೆ ಎಂಬುದನ್ನು ಅವಳು ಹೇಗೆ ತೋರಿಸಸಾಧ್ಯವಿದೆ?

16 ಮನೆಯಲ್ಲಿ ನೀವು ಯಾವುದೇ ಕಷ್ಟತೊಂದರೆಗಳನ್ನು ಸಹಿಸಿಕೊಳ್ಳಬೇಕಾಗಿರುವುದಾದರೂ, ಯೆಹೋವನು ಯಾವಾಗಲೂ ನಿಮಗೆ ಬೆಂಬಲವಾಗಿರುವನು ಎಂಬುದನ್ನು ಮಾತ್ರ ಮರೆಯದಿರಿ. (1 ಪೇತ್ರ 3:12) ಆದುದರಿಂದ ನಿಮ್ಮನ್ನು ಆತ್ಮಿಕವಾಗಿ ಬಲಪಡಿಸಿಕೊಳ್ಳಲು ಪ್ರಯತ್ನಿಸಿರಿ. ವಿವೇಕ ಹಾಗೂ ಶಾಂತ ಹೃದಯಕ್ಕಾಗಿ ಪ್ರಾರ್ಥಿಸಿರಿ. ಹೌದು, ಕ್ರಮವಾದ ಬೈಬಲ್‌ ಅಧ್ಯಯನ, ಪ್ರಾರ್ಥನೆ, ಮನನ ಹಾಗೂ ಜೊತೆ ಕ್ರೈಸ್ತರೊಂದಿಗಿನ ಸಹವಾಸದ ಮೂಲಕ ಯೆಹೋವನೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಳ್ಳಿರಿ. ಅವಳ ಗಂಡನ ಆತ್ಮಿಕವಲ್ಲದ ಹೊರನೋಟವು, ಅಬೀಗೈಲಳಿಗೆ ದೇವರ ಕಡೆಗಿದ್ದ ಪ್ರೀತಿ ಮತ್ತು ಆತನ ಅಭಿಷಿಕ್ತ ಸೇವಕನ ಕಡೆಗಿದ್ದ ಮನೋಭಾವವನ್ನು ಬಾಧಿಸಲಿಲ್ಲ. ನೀತಿಭರಿತ ಮೂಲತತ್ತ್ವಗಳ ಆಧಾರದ ಮೇಲೆ ಅವಳು ಕ್ರಿಯೆಗೈದಳು. ಗಂಡನು ದೇವರ ಒಬ್ಬ ಆದರ್ಶಪ್ರಾಯ ಸೇವಕನಾಗಿರುವ ಮನೆವಾರ್ತೆಗಳಲ್ಲಿ ಸಹ, ತನ್ನ ಸ್ವಂತ ಆತ್ಮಿಕತೆಯನ್ನು ಇನ್ನಷ್ಟು ಬಲಪಡಿಸಲು ಹಾಗೂ ಅದನ್ನು ಕಾಪಾಡಿಕೊಳ್ಳಲು ಪರಿಶ್ರಮಪಡುತ್ತಾ ಇರುವ ಆವಶ್ಯಕತೆಯಿದೆ ಎಂಬುದನ್ನು ಒಬ್ಬ ಕ್ರೈಸ್ತ ಪತ್ನಿಯು ಮನಗಾಣುತ್ತಾಳೆ. ಅವಳ ಆತ್ಮಿಕ ಹಾಗೂ ಭೌತಿಕ ಆವಶ್ಯಕತೆಗಳನ್ನು ಪೂರೈಸುವ ಶಾಸ್ತ್ರೀಯ ಹಂಗು ಗಂಡನಿಗೆ ಇದೆ ಎಂಬುದು ನಿಜವಾಗಿರುವುದಾದರೂ, ಅಂತಿಮವಾಗಿ ಸ್ವತಃ ಅವಳೇ ‘ಮನೋಭೀತಿಯಿಂದ ನಡುಗುವವಳಾಗಿ ತನ್ನ ರಕ್ಷಣೆಯನ್ನು ಸಾಧಿಸಿ’ಕೊಳ್ಳಬೇಕು.​—ಫಿಲಿಪ್ಪಿ 2:12; 1 ತಿಮೊಥೆಯ 5:8.

ಅವಳು “ಪ್ರವಾದಿಗೆ ಬರತಕ್ಕ ಪ್ರತಿಫಲವನ್ನು” ಪಡೆದುಕೊಂಡಳು

17, 18. (ಎ) ಚಾರೆಪ್ತದ ವಿಧವೆಯ ಮುಂದೆ ನಂಬಿಕೆಯ ಯಾವ ಅಸಾಮಾನ್ಯ ಪರೀಕ್ಷೆಯು ಒಡ್ಡಲ್ಪಟ್ಟಿತು? (ಬಿ) ಎಲೀಯನ ವಿನಂತಿಗೆ ಆ ವಿಧವೆಯು ಹೇಗೆ ಪ್ರತಿಕ್ರಿಯಿಸಿದಳು, ಮತ್ತು ಇದಕ್ಕಾಗಿ ಯೆಹೋವನು ಅವಳಿಗೆ ಹೇಗೆ ಪ್ರತಿಫಲ ನೀಡಿದನು?

17 ಪ್ರವಾದಿಯಾದ ಎಲೀಯನ ಕಾಲದಲ್ಲಿ ಬಡ ವಿಧವೆಯೊಬ್ಬಳನ್ನು ಯೆಹೋವನು ಪರಾಮರಿಸಿದ ವಿಧವು, ಸ್ವತಃ ತಮ್ಮನ್ನು ಮತ್ತು ತಮ್ಮ ಸಂಪನ್ಮೂಲಗಳನ್ನು ನೀಡಿಕೊಳ್ಳುವ ಮೂಲಕ ಸತ್ಯಾರಾಧನೆಯನ್ನು ಬೆಂಬಲಿಸುವವರನ್ನು ಆತನು ಬಹಳವಾಗಿ ಗಣ್ಯಮಾಡುತ್ತಾನೆ ಎಂಬುದನ್ನು ತೋರಿಸುತ್ತದೆ. ಎಲೀಯನ ದಿನದಲ್ಲಿ ದೀರ್ಘಕಾಲದ ಬರದಿಂದಾಗಿ, ಹಸಿವೆಬಾಯಾರಿಕೆಗಳು ಅನೇಕರ ಜೀವನಗಳ ಮೇಲೆ ಪರಿಣಾಮ ಬೀರಿದವು ಮತ್ತು ಇವರಲ್ಲಿ ಚಾರೆಪ್ತದಲ್ಲಿ ವಾಸಿಸುತ್ತಿದ್ದ ಒಬ್ಬ ವಿಧವೆ ಹಾಗೂ ಅವಳ ಎಳೆಯ ಮಗನೂ ಒಳಗೂಡಿದ್ದರು. ಅವರ ಬಳಿ ಕೊನೆಯ ಊಟಕ್ಕೆ ಮಾತ್ರ ಸಾಕಾಗುವಷ್ಟು ಆಹಾರವಿದ್ದಾಗ, ಒಬ್ಬ ಸಂದರ್ಶಕನ ಆಗಮನವಾಯಿತು​—ಅವನೇ ಪ್ರವಾದಿಯಾದ ಎಲೀಯನಾಗಿದ್ದನು. ಅವನು ತುಂಬ ಅಸಾಮಾನ್ಯವಾದ ವಿನಂತಿಯನ್ನು ಮಾಡಿದನು. ಆ ಸ್ತ್ರೀಯ ಅವಸ್ಥೆಯು ಎಲೀಯನಿಗೆ ಗೊತ್ತಿತ್ತಾದರೂ, ಕೊನೆಯದಾಗಿ ಉಳಿದಿರುವ ಎಣ್ಣೆ ಹಾಗೂ ಹಿಟ್ಟನ್ನು ಉಪಯೋಗಿಸಿ ತನಗೋಸ್ಕರ “ಒಂದು ಚಿಕ್ಕ ರೊಟ್ಟಿಯನ್ನು” ಮಾಡಿ ತರುವಂತೆ ಅವನು ಅವಳನ್ನು ಕೇಳಿಕೊಂಡನು. ಆದರೆ ಅವನು ಕೂಡಿಸಿ ಹೇಳಿದ್ದು: “ಇಸ್ರಾಯೇಲ್‌ದೇವರಾದ ಯೆಹೋವನು ನಿನಗೆ​—ನಾನು ದೇಶಕ್ಕೆ ಮಳೆಯನ್ನು ಕಳುಹಿಸುವ ವರೆಗೆ ನಿನ್ನ ಮಡಕೆಯಲ್ಲಿರುವ ಹಿಟ್ಟು ತೀರುವದಿಲ್ಲ, ಮೊಗೆಯಲ್ಲಿರುವ ಎಣ್ಣೆಯು ಮುಗಿದುಹೋಗುವದಿಲ್ಲ ಎಂದು ಹೇಳುತ್ತಾನೆ.”​—1 ಅರಸುಗಳು 17:8-14.

18 ಈ ಅಸಾಮಾನ್ಯ ವಿನಂತಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತಿದ್ದಿರಿ? ಬಹುಶಃ ಎಲೀಯನು ಯೆಹೋವನ ಪ್ರವಾದಿಯಾಗಿದ್ದನೆಂಬುದನ್ನು ಮನಗಂಡಿದ್ದ ಚಾರೆಪ್ತದ ಆ ವಿಧವೆಯು “ಅವನು ಹೇಳಿದಂತೆಯೇ ಮಾಡಿದಳು.” ಅವಳ ಅತಿಥಿಸತ್ಕಾರದ ಕ್ರಿಯೆಗೆ ಯೆಹೋವನು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಿದನು? ಆ ಬರಗಾಲದ ಸಮಯದಲ್ಲಿ ಆತನು ಆ ಸ್ತ್ರೀಗೆ, ಅವಳ ಮಗನಿಗೆ ಮತ್ತು ಎಲೀಯನಿಗೆ ಅದ್ಭುತಕರವಾದ ರೀತಿಯಲ್ಲಿ ಆಹಾರವನ್ನು ಒದಗಿಸಿದನು. (1 ಅರಸುಗಳು 17:​15, 16) ಹೌದು, ಚಾರೆಪ್ತದ ವಿಧವೆಯು ಒಬ್ಬ ಇಸ್ರಾಯೇಲ್ಯಳಲ್ಲದಿದ್ದರೂ ಯೆಹೋವನು ಅವಳಿಗೆ “ಪ್ರವಾದಿಗೆ ಬರತಕ್ಕ ಪ್ರತಿಫಲವನ್ನು” ಕೊಟ್ಟನು. (ಮತ್ತಾಯ 10:41) ದೇವಕುಮಾರನು ತನ್ನ ಸ್ವಂತ ಊರಾಗಿದ್ದ ನಜರೇತಿನ ನಂಬಿಕೆರಹಿತ ಜನರ ಮುಂದೆ ಈ ವಿಧವೆಯನ್ನು ಒಂದು ಉದಾಹರಣೆಯಾಗಿ ಎತ್ತಿಹೇಳಿದಾಗ, ಅವನು ಸಹ ಇವಳನ್ನು ಸನ್ಮಾನಿಸಿದನು.​—ಲೂಕ 4:​24-26.

19. ಯಾವ ವಿಧಗಳಲ್ಲಿ ಇಂದು ಅನೇಕ ಕ್ರೈಸ್ತ ಸ್ತ್ರೀಯರು ಚಾರೆಪ್ತದ ವಿಧವೆಯ ಮನೋಭಾವವನ್ನೇ ಪ್ರತಿಬಿಂಬಿಸುತ್ತಾರೆ, ಮತ್ತು ಇವರ ಕುರಿತು ಯೆಹೋವನಿಗೆ ಹೇಗನಿಸುತ್ತದೆ?

19 ಇಂದು ಅನೇಕ ಕ್ರೈಸ್ತ ಸ್ತ್ರೀಯರು ಚಾರೆಪ್ತದ ವಿಧವೆಯ ಮನೋಭಾವವನ್ನೇ ಪ್ರತಿಬಿಂಬಿಸುತ್ತಾರೆ. ಉದಾಹರಣೆಗೆ, ಪ್ರತಿ ವಾರ ನಿಸ್ವಾರ್ಥಭಾವದ ಕ್ರೈಸ್ತ ಸಹೋದರಿಯರು​—ಅವರಲ್ಲಿ ಅನೇಕರು ಬಡವರಾಗಿರುತ್ತಾರೆ ಮತ್ತು ಅವರಿಗೆ ಕುಟುಂಬಗಳನ್ನು ನೋಡಿಕೊಳ್ಳುವ ಜವಾಬ್ದಾರಿಯಿರುತ್ತದೆ​—ಸಂಚರಣ ಮೇಲ್ವಿಚಾರಕರಿಗೆ ಮತ್ತು ಅವರ ಪತ್ನಿಯರಿಗೆ ಅತಿಥಿಸತ್ಕಾರವನ್ನು ತೋರಿಸುತ್ತಾರೆ. ಇನ್ನಿತರರು ಸ್ಥಳಿಕ ಪೂರ್ಣ ಸಮಯದ ಶುಶ್ರೂಷಕರನ್ನು ಊಟಕ್ಕೆ ಕರೆಯುತ್ತಾರೆ, ಆವಶ್ಯಕತೆಯಲ್ಲಿರುವವರಿಗೆ ಸಹಾಯಮಾಡುತ್ತಾರೆ ಅಥವಾ ರಾಜ್ಯದ ಕೆಲಸವನ್ನು ಬೆಂಬಲಿಸಲಿಕ್ಕಾಗಿ ಬೇರೆ ವಿಧಗಳಲ್ಲಿ ಸ್ವತಃ ತಮ್ಮನ್ನು ಮತ್ತು ತಮ್ಮ ಸಂಪನ್ಮೂಲಗಳನ್ನು ನೀಡಿಕೊಳ್ಳುತ್ತಾರೆ. (ಲೂಕ 21:4) ಯೆಹೋವನು ಇಂಥ ತ್ಯಾಗಗಳನ್ನು ಗಮನಿಸುತ್ತಾನೋ? ಖಂಡಿತವಾಗಿಯೂ! “ನೀವು ದೇವಜನರಿಗೆ ಉಪಚಾರ ಮಾಡಿದಿರಿ, ಇನ್ನೂ ಮಾಡುತ್ತಾ ಇದ್ದೀರಿ. ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.”​—ಇಬ್ರಿಯ 6:10.

20. ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಾಗುವುದು?

20 ಪ್ರಥಮ ಶತಮಾನದಲ್ಲಿ, ದೇವಭಯವಿದ್ದ ಅನೇಕ ಸ್ತ್ರೀಯರು ಯೇಸುವಿನ ಹಾಗೂ ಅವನ ಅಪೊಸ್ತಲರ ಸೇವೆಮಾಡುವ ಸುಯೋಗವನ್ನು ಹೊಂದಿದ್ದರು. ಮುಂದಿನ ಲೇಖನದಲ್ಲಿ, ಈ ಸ್ತ್ರೀಯರು ಯೆಹೋವನ ಹೃದಯವನ್ನು ಹೇಗೆ ಸಂತೋಷಪಡಿಸಿದರು ಎಂಬುದನ್ನು ನಾವು ಚರ್ಚಿಸುವೆವು, ಮತ್ತು ಕಷ್ಟಕರ ಸನ್ನಿವೇಶಗಳಲ್ಲಿಯೂ ಪೂರ್ಣ ಹೃದಯದಿಂದ ಯೆಹೋವನ ಸೇವೆಮಾಡುವ ಆಧುನಿಕ ದಿನದ ಸ್ತ್ರೀಯರ ಮಾದರಿಯನ್ನು ನಾವು ಪರಿಗಣಿಸುವೆವು.

[ಪಾದಟಿಪ್ಪಣಿ]

^ ಪ್ಯಾರ. 8 ಮತ್ತಾಯನಿಂದ ದಾಖಲಿಸಲ್ಪಟ್ಟಂತೆ, ಯೇಸುವಿನ ವಂಶಾವಳಿಯು ತಾಮಾರಳು, ರಾಹಾಬಳು, ರೂತಳು ಮತ್ತು ಮರಿಯಳೆಂಬ ನಾಲ್ಕು ಮಂದಿ ಸ್ತ್ರೀಯರ ಹೆಸರನ್ನು ಉಲ್ಲೇಖಿಸುತ್ತದೆ. ದೇವರ ವಾಕ್ಯದಲ್ಲಿ ಇವರೆಲ್ಲರಿಗೂ ತುಂಬ ಮಾನ್ಯತೆಯನ್ನು ಕೊಡಲಾಗಿದೆ.​—ಮತ್ತಾಯ 1:​3, 5, 16.

ಪುನರ್ವಿಮರ್ಶೆಯಲ್ಲಿ

• ಈ ಮುಂದೆ ಉಲ್ಲೇಖಿಸಲ್ಪಟ್ಟಿರುವ ಸ್ತ್ರೀಯರು ಯೆಹೋವನ ಹೃದಯವನ್ನು ಹೇಗೆ ಸಂತೋಷಪಡಿಸಿದರು?

• ಶಿಪ್ರಾ ಮತ್ತು ಪೂಗಾ

• ರಾಹಾಬಳು

• ಅಬೀಗೈಲಳು

• ಚಾರೆಪ್ತದ ವಿಧವೆ

• ಈ ಸ್ತ್ರೀಯರಿಂದ ಇಡಲ್ಪಟ್ಟ ಮಾದರಿಯ ಕುರಿತು ಮನನ ಮಾಡುವುದು ನಮಗೆ ವೈಯಕ್ತಿಕವಾಗಿ ಹೇಗೆ ಸಹಾಯಮಾಡಸಾಧ್ಯವಿದೆ? ದೃಷ್ಟಾಂತಿಸಿರಿ.

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚಿತ್ರಗಳು]

ಅನೇಕ ನಂಬಿಗಸ್ತ ಸ್ತ್ರೀಯರು ‘ಅರಸನ ಅಪ್ಪಣೆಯ’ ಹೊರತಾಗಿಯೂ ದೇವರ ಸೇವೆಮಾಡಿದ್ದಾರೆ

[ಪುಟ 10ರಲ್ಲಿರುವ ಚಿತ್ರ]

ನಂಬಿಕೆಯುಳ್ಳವರು ಆಗಿರುವುದರಲ್ಲಿ ರಾಹಾಬಳು ಏಕೆ ಅತ್ಯುತ್ತಮ ಉದಾಹರಣೆಯಾಗಿದ್ದಾಳೆ?

[ಪುಟ 10ರಲ್ಲಿರುವ ಚಿತ್ರ]

ಅಬೀಗೈಲಳಿಂದ ತೋರಿಸಲ್ಪಟ್ಟ ಯಾವ ಗುಣಗಳನ್ನು ನೀವು ಅನುಕರಿಸಲು ಬಯಸುತ್ತೀರಿ?

[ಪುಟ 12ರಲ್ಲಿರುವ ಚಿತ್ರ]

ಇಂದಿನ ಅನೇಕ ಕ್ರೈಸ್ತ ಸ್ತ್ರೀಯರು ಚಾರೆಪ್ತದ ವಿಧವೆಯು ತೋರಿಸಿದ ಮನೋಭಾವವನ್ನೇ ಪ್ರತಿಬಿಂಬಿಸುತ್ತಾರೆ