ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾಕೋಬನು ಆತ್ಮಿಕ ಮೌಲ್ಯಗಳನ್ನು ಬಹುಮೂಲ್ಯವೆಂದೆಣಿಸಿದನು

ಯಾಕೋಬನು ಆತ್ಮಿಕ ಮೌಲ್ಯಗಳನ್ನು ಬಹುಮೂಲ್ಯವೆಂದೆಣಿಸಿದನು

ಯಾಕೋಬನು ಆತ್ಮಿಕ ಮೌಲ್ಯಗಳನ್ನು ಬಹುಮೂಲ್ಯವೆಂದೆಣಿಸಿದನು

ಯಾಕೋಬನ ಇಡೀ ಜೀವಮಾನವು ಕಷ್ಟಆಪತ್ತುಗಳಿಂದ ತುಂಬಿದ್ದವು. ಅವನ ಅವಳಿ ಸಹೋದರನ ಆಕ್ರೋಶವು, ಅವನು ತನ್ನ ಜೀವಕ್ಕಾಗಿ ಪಲಾಯನಗೈಯುವಂತೆ ಒತ್ತಾಯಿಸಿತು. ಅವನು ಪ್ರೀತಿಸಿದ ಹುಡುಗಿಯೊಂದಿಗೆ ವಿವಾಹವಾಗುವುದರ ಬದಲಿಗೆ, ಅವನನ್ನು ವಂಚಿಸಿ ಬೇರೊಬ್ಬ ಹುಡುಗಿಯೊಂದಿಗೆ ವಿವಾಹಮಾಡಲಾಯಿತು. ಕೊನೆಗೆ ಅವನು ನಾಲ್ಕು ಮಂದಿ ಹೆಂಡತಿಯರನ್ನು ಮದುವೆಯಾಗುವಂತಾಯಿತು ಮತ್ತು ಇದು ಅನೇಕ ಸಮಸ್ಯೆಗಳನ್ನು ತಂದೊಡ್ಡಿತು. (ಆದಿಕಾಂಡ 30:​1-13) ಅವನು, 20 ವರ್ಷಕಾಲ ಸ್ವಾರ್ಥಕ್ಕಾಗಿ ಅವನನ್ನು ಬಳಸಿಕೊಂಡ ಒಬ್ಬ ಮನುಷ್ಯನಿಗಾಗಿ ಮೈಮುರಿದು ಕೆಲಸ ಮಾಡಿದನು. ಅವನು ಒಬ್ಬ ದೇವದೂತನೊಂದಿಗೆ ಗುದ್ದಾಡಿ, ಶಾಶ್ವತವಾದ ಹಾನಿಗೊಳಗಾದನು. ಅವನ ಮಗಳು ಅತ್ಯಾಚಾರಕ್ಕೊಳಗಾದಳು ಮತ್ತು ಆಗ ಅವನ ಪುತ್ರರು ಕಗ್ಗೊಲೆಯನ್ನು ಮಾಡಿದರು ಮತ್ತು ಅವನು ತನ್ನ ಅಚ್ಚುಮೆಚ್ಚಿನ ಮಗ ಹಾಗೂ ಮಡದಿಯ ಮರಣಕ್ಕಾಗಿ ಗೋಳಾಡಿದನು. ಕ್ಷಾಮದಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಅವನು ತನ್ನ ಇಳಿವಯಸ್ಸಿನಲ್ಲಿ ಇನ್ನೊಂದು ದೇಶಕ್ಕೆ ವಲಸೆಹೋಗಬೇಕಾಯಿತು. ಹೀಗಿರಲಾಗಿ ಅವನು, ತಾನು ಜೀವಿಸಿರುವ ಕಾಲವು ‘ಸ್ವಲ್ಪವೂ ದುಃಖಕರವೂ’ ಆಗಿತ್ತೆಂದು ಒಪ್ಪಿಕೊಂಡನು. (ಆದಿಕಾಂಡ 47:9) ಇದೆಲ್ಲದ್ದರ ಎದುರಿನಲ್ಲೂ, ಯಾಕೋಬನು ದೇವರಲ್ಲಿ ಭರವಸೆಯಿಟ್ಟಂಥ ಒಬ್ಬ ಆತ್ಮಿಕ ವ್ಯಕ್ತಿಯಾಗಿದ್ದನು. ಅವನಿಟ್ಟಂಥ ನಂಬಿಕೆಯು ಅನುಚಿತವಾಗಿತ್ತೊ? ಯಾಕೋಬನ ಕೇವಲ ಕೆಲವು ಅನುಭವಗಳನ್ನು ಪರಿಗಣಿಸುವುದರಿಂದ ನಾವು ಯಾವ ಪಾಠಗಳನ್ನು ಕಲಿಯಸಾಧ್ಯವಿದೆ?

ತನ್ನ ಸಹೋದರನಿಗಿಂತ ತೀರ ಭಿನ್ನ

ಯಾಕೋಬನು ಆತ್ಮಿಕ ಐಶ್ವರ್ಯಗಳನ್ನು ಅಮೂಲ್ಯವೆಂದೆಣಿಸುತ್ತಿದ್ದನು, ಆದರೆ ಏಸಾವನು ಅವುಗಳನ್ನು ತಾತ್ಸಾರಮಾಡುತ್ತಿದ್ದನು. ಇದೇ ಅವರ ನಡುವಿನ ವೈಮನಸ್ಯಕ್ಕೆ ಕಾರಣವಾಗಿತ್ತು. ಅಬ್ರಹಾಮನೊಂದಿಗೆ ಮಾಡಲ್ಪಟ್ಟಿದ್ದ ಒಡಂಬಡಿಕೆಯಲ್ಲಿ ಯಾಕೋಬನು ಆಸಕ್ತನಾಗಿದ್ದನು ಮತ್ತು ವಾರಸುದಾರರಾಗಿರುವಂತೆ ದೇವರು ನೇಮಿಸಿದ್ದ ಕುಟುಂಬವನ್ನು ಸಂರಕ್ಷಿಸಿ ಪೋಷಿಸಲು ಅವನು ತನ್ನನ್ನೇ ಮುಡುಪಾಗಿಟ್ಟನು. ಈ ಕಾರಣಕ್ಕಾಗಿಯೇ ಯೆಹೋವನು ಅವನನ್ನು ‘ಪ್ರೀತಿಸಿದನು.’ ಯಾಕೋಬನು ಒಬ್ಬ ‘ಸಾಧುಮನುಷ್ಯನಾಗಿದ್ದನು,’ ಅಂದರೆ ನೈತಿಕ ಉತ್ಕೃಷ್ಟತೆಯುಳ್ಳವನಾಗಿದ್ದನು. ಇದಕ್ಕೆ ವ್ಯತಿರಿಕ್ತವಾಗಿ, ಏಸಾವನಿಗೆ ತನ್ನ ಆತ್ಮಿಕ ಪರಂಪರೆಯ ವಿಷಯದಲ್ಲಿ ಎಷ್ಟೊಂದು ಅಲಕ್ಷ್ಯಭಾವವಿತ್ತೆಂದರೆ, ಅವನದನ್ನು ಕ್ಷುಲ್ಲಕವಾದ ವಿಷಯಕ್ಕಾಗಿ ಯಾಕೋಬನಿಗೆ ಮಾರಿಬಿಟ್ಟನು. ಆದರೆ ಯಾಕೋಬನು, ದೈವಿಕ ಸಮ್ಮತಿಯಿಂದ, ಚೊಚ್ಚಲಮಗನಾಗಿ ತನ್ನ ಹಕ್ಕಿಗನುಸಾರ ಆಶೀರ್ವಾದವನ್ನು ಗಿಟ್ಟಿಸಿಕೊಂಡಾಗ, ಏಸಾವನು ಕೋಪದಿಂದ ಕುದಿಯತೊಡಗಿದನು. ಆಗ ಯಾಕೋಬನು ತನಗೆ ಪ್ರಿಯವಾದುದ್ದೆಲ್ಲವನ್ನೂ ಬಿಟ್ಟು ಅಲ್ಲಿಂದ ಹೊರಟನು. ಆದರೆ ಮುಂದೆ ನಡೆದಂಥ ಸಂಗತಿಗಳು, ಅವನ ಮುದುಡಿದ ಮನಸ್ಸನ್ನು ಖಂಡಿತವಾಗಿಯೂ ಅರಳಿಸಿದವು.​—ಮಲಾಕಿಯ 1:​2, 3; ಆದಿಕಾಂಡ 25:​27-34; 27:​1-45.

ಒಂದು ಕನಸಿನಲ್ಲಿ ದೇವರು ಯಾಕೋಬನಿಗೆ, ಸ್ವರ್ಗ ಹಾಗೂ ಭೂಮಿಯ ನಡುವೆ ಇದ್ದ ಒಂದು ನಿಚ್ಚಣಿಗೆ ಇಲ್ಲವೆ ಕಲ್ಲುಗಳ ಒಂದು ಮೆಟ್ಟಲಿನ ಮೇಲೆ ದೇವದೂತರು ಹತ್ತುತ್ತಾ ಇಳಿಯುತ್ತಾ ಇರುವುದನ್ನು ತೋರಿಸಿದನು ಮತ್ತು ತಾನು ಯಾಕೋಬನನ್ನೂ ಅವನ ಸಂತತಿಯನ್ನೂ ಸಂರಕ್ಷಿಸುವೆನೆಂಬ ಆಶ್ವಾಸನೆಯನ್ನು ಕೊಟ್ಟನು. “ನಿನ್ನ ಮೂಲಕವೂ ನಿನ್ನ ಸಂತತಿಯ ಮೂಲಕವೂ ಭೂಮಿಯ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವದು. ಇದಲ್ಲದೆ ನಾನು ನಿನ್ನ ಸಂಗಡ ಇದ್ದು ನೀನು ಹೋಗುವ ಎಲ್ಲಾ ಸ್ಥಳಗಳಲ್ಲಿ ನಿನ್ನನ್ನು ಕಾಪಾಡಿ ತಿರಿಗಿ ಈ ದೇಶಕ್ಕೆ ಬರಮಾಡುತ್ತೇನೆ. ನಾನು ನಿನಗೆ ಹೇಳಿದ್ದನ್ನೆಲ್ಲಾ ನೆರವೇರಿಸಿದ ಹೊರತು ಬಿಡುವದಿಲ್ಲ.”​—ಆದಿಕಾಂಡ 28:10-15.

ಎಷ್ಟು ಪುನರಾಶ್ವಾಸನದಾಯಕವಾದ ಮಾತುಗಳವು! ಅಬ್ರಹಾಮನಿಗೂ ಇಸಾಕನಿಗೂ ಕೊಡಲ್ಪಟ್ಟಿದ್ದ ವಾಗ್ದಾನಗಳು ಯಾಕೋಬನ ಕುಟುಂಬವನ್ನು ಆತ್ಮಿಕವಾಗಿ ಸಂಪಧ್ಯುಕ್ತವನ್ನಾಗಿ ಮಾಡುವುದೆಂದು ಯೆಹೋವನು ದೃಢೀಕರಿಸಿದನು. ದೇವದೂತರು ದೇವಾನುಗ್ರಹವುಳ್ಳವರ ಶುಶ್ರೂಷೆಮಾಡಬಲ್ಲರೆಂಬದನ್ನು ಯಾಕೋಬನ ಅರಿವಿಗೆ ತರಲಾಯಿತು, ಮತ್ತು ಅವನಿಗೆ ದೈವಿಕ ಸಂರಕ್ಷಣೆಯ ಆಶ್ವಾಸನೆಯು ಸಿಕ್ಕಿತು. ಇದೆಲ್ಲವನ್ನೂ ಕೃತಜ್ಞತಾಭಾವದಿಂದ ಅಂಗೀಕರಿಸುತ್ತಾ, ಯಾಕೋಬನು ತಾನು ಯೆಹೋವನಿಗೆ ನಂಬಿಗಸ್ತನಾಗಿರುವೆನೆಂದು ಮಾತುಕೊಟ್ಟನು.​—ಆದಿಕಾಂಡ 28:​16-22.

ಯಾಕೋಬನು ಯಾವುದೇ ರೀತಿಯಲ್ಲಿ ಏಸಾವನ ಬಾಧ್ಯತೆಯನ್ನು ಲಪಟಾಯಿಸಿರಲಿಲ್ಲ. ‘ಹಿರಿಯದು ಕಿರಿಯದಕ್ಕೆ ಸೇವೆಮಾಡುವದು’ ಎಂದು ಯೆಹೋವನು ಆ ಹುಡುಗರು ಹುಟ್ಟುವ ಮುಂಚೆಯೇ ಹೇಳಿದ್ದನು. (ಆದಿಕಾಂಡ 25:23) ‘ಯಾಕೋಬನೇ ಮೊದಲು ಹುಟ್ಟುವಂತೆ ದೇವರು ಮಾಡುತ್ತಿದ್ದರೆ, ಸನ್ನಿವೇಶವು ಇಷ್ಟೊಂದು ಕ್ಲಿಷ್ಟಕರವಾಗಿರುತ್ತಿರಲಿಲ್ಲ ಅಲ್ಲವೇ?’ ಎಂದು ಯಾರಾದರೂ ಕೇಳಬಹುದು. ಆದರೆ ಮುಂದಕ್ಕೆ ನಡೆದಂಥ ಘಟನೆಗಳು ಪ್ರಮುಖವಾದ ಸತ್ಯತೆಗಳನ್ನು ಕಲಿಸಿದವು. ತಮಗೆ ಆಶೀರ್ವಾದಗಳನ್ನು ಪಡೆಯುವ ಹಕ್ಕಿದೆಯೆಂದು ನೆನಸುವಂಥವರಿಗಾಗಿ ದೇವರು ಆಶೀರ್ವಾದಗಳನ್ನು ಕಾದಿರಿಸುವುದಿಲ್ಲ, ಬದಲಾಗಿ ತಾನು ಆಯ್ಕೆಮಾಡುವಂಥವರಿಗೆ ಅಪಾತ್ರ ದಯೆಯನ್ನು ಖಂಡಿತವಾಗಿಯೂ ತೋರಿಸುತ್ತಾನೆ. ಹೀಗಿರುವುದರಿಂದಲೇ ಚೊಚ್ಚಲುತನದ ಹಕ್ಕು ಯಾಕೋಬನಿಗೆ ಹೋಯಿತೇ ಹೊರತು ಅದರ ಮೌಲ್ಯವನ್ನು ಗಣ್ಯಮಾಡದ ಅವನ ಅಣ್ಣನಿಗಲ್ಲ. ತದ್ರೀತಿಯಲ್ಲಿ, ಒಂದು ಜನಾಂಗದೋಪಾದಿ ಮಾಂಸಿಕ ಯೆಹೂದ್ಯರು ಏಸಾವನಂತಹದ್ದೇ ಮನೋಭಾವವನ್ನು ತೋರಿಸಿದ್ದರಿಂದ, ಅವರು ಆತ್ಮಿಕ ಇಸ್ರಾಯೇಲ್ಯರಿಂದ ಸ್ಥಾನಾಂತರಿಸಲ್ಪಟ್ಟರು. (ರೋಮಾಪುರ 9:​6-16, 24) ಇಂದು ಕೂಡ ಯೆಹೋವನೊಂದಿಗಿನ ಸುಸಂಬಂಧವು, ನಿರಾಸಯವಾಗಿ ಬಾಧ್ಯತೆಯಾಗಿ ಬರುವಂಥ ವಿಷಯವಲ್ಲ. ಒಬ್ಬನು ಒಂದು ದೇವಭೀರು ಕುಟುಂಬದಲ್ಲಿ ಇಲ್ಲವೆ ಪರಿಸರದಲ್ಲಿ ಹುಟ್ಟಿದರೂ ಇದು ಸತ್ಯ. ದೈವಿಕ ಆಶೀರ್ವಾದಗಳನ್ನು ಪಡೆಯಲಪೇಕ್ಷಿಸುವವರೆಲ್ಲರೂ ಭಕ್ತಿಯುಳ್ಳವರಾಗಿದ್ದು, ನಿಜವಾಗಿ ಆತ್ಮಿಕ ವಿಷಯಗಳನ್ನು ಗಣ್ಯಮಾಡುವವರಾಗಿರಲು ಪ್ರಯತ್ನಿಸಬೇಕು.

ಲಾಬಾನನಿಂದ ಸ್ವಾಗತ

ಯಾಕೋಬನು ತನ್ನ ಸಂಬಂಧಿಕರೊಳಗೆಯೇ ತನಗಾಗಿ ಹೆಂಡತಿಯನ್ನು ಹುಡುಕಲಿಕ್ಕಾಗಿ ಪದ್ದನ್‌ಆರಾಮ್‌ ತಲಪಿದಾಗ, ಅಲ್ಲಿ ಒಂದು ಬಾವಿಯ ಬಳಿಯಲ್ಲಿ ಅವನಿಗೆ ತನ್ನ ಮಾವ ಲಾಬಾನನ ಮಗಳಾದ ರಾಹೇಲಳ ಭೇಟಿಯಾಯಿತು. ಅವಳು ಕಾಯುತ್ತಿದ್ದಂಥ ಜಾನುವಾರುಗಳಿಗೆ ನೀರನ್ನು ಒದಗಿಸಲು ಅವನು ಆ ಬಾವಿಯ ಭಾರವಾದ ಕಲ್ಲಿನ ಮುಚ್ಚಳವನ್ನು ಪಕ್ಕಕ್ಕೆ ಸರಿಸಿದನು. * ರಾಹೇಲಳು ಮನೆಗೆ ಓಡಿಹೋಗಿ ಯಾಕೋಬನ ಬರುವಿಕೆಯ ಕುರಿತಾಗಿ ಸುದ್ದಿಕೊಡುತ್ತಾಳೆ, ಮತ್ತು ಆಗ ಲಾಬಾನನು ಅವನನ್ನು ಭೇಟಿಯಾಗಲು ತರಾತುರಿಯಿಂದ ಬರುತ್ತಾನೆ. ಒಂದುವೇಳೆ ಅವನು ಅಬ್ರಹಾಮನ ಸೇವಕನಿಂದ ತನ್ನ ಕುಟುಂಬಕ್ಕೆ ಸಿಕ್ಕಿದಂಥ ಐಶ್ವರ್ಯಗಳನ್ನು ನೆನಪಿಸಿಕೊಳ್ಳುತ್ತಾ ಅವುಗಳ ಕನಸು ಕಾಣುತ್ತಿದ್ದಲ್ಲಿ, ಯಾಕೋಬನನ್ನು ನೋಡಿ ಲಾಬಾನನಿಗೆ ಆಶಾಭಂಗವಾಗಿದ್ದಿರಬಹುದು. ಯಾಕೆಂದರೆ ಯಾಕೋಬನು ಬರೀಗೈಯಲ್ಲಿ ಬಂದಿದ್ದನು. ಆದರೆ ಯಾಕೋಬನು ಒಬ್ಬ ಕಷ್ಟಜೀವಿಯೆಂಬದನ್ನೂ, ಅವನ ಈ ಗುಣವನ್ನು ತಾನು ತನ್ನ ಸ್ವಾರ್ಥಕ್ಕಾಗಿ ಬಳಸಬಹುದೆಂಬದನ್ನೂ ಲಾಬಾನನು ಖಂಡಿತವಾಗಿ ಗುರುತಿಸಿದನೆಂದು ತೋರುತ್ತದೆ.​—ಆದಿಕಾಂಡ 28:​1-5; 29:​1-14.

ಯಾಕೋಬನು ತನ್ನ ಕಥೆಯನ್ನು ತಿಳಿಸಿದನು. ಚೊಚ್ಚಲತನದ ಹಕ್ಕನ್ನು ಪಡೆಯಲಿಕ್ಕಾಗಿ ಉಪಯೋಗಿಸಲಾಗಿದ್ದ ತಂತ್ರದ ಬಗ್ಗೆ ಅವನು ತಿಳಿಸಿದನೊ ಇಲ್ಲವೊ ಎಂಬುದು ಸ್ಪಷ್ಟವಾಗಿಲ್ಲ. ಆದರೆ ‘ಎಲ್ಲಾ ಸಂಗತಿಗಳನ್ನು’ ಕೇಳಿಸಿಕೊಂಡ ನಂತರ ಲಾಬಾನನು ಹೇಳಿದ್ದು: ‘ನಿಜವಾಗಿ ನೀನು ನನ್ನ ರಕ್ತ ಸಂಬಂಧಿಯಾಗಿದ್ದೀ.’ ಈ ವಾಕ್ಸರಣಿಯನ್ನು, ಯಾಕೋಬನು ಅಲ್ಲಿ ತಂಗುವಂತೆ ಕೊಡಲ್ಪಟ್ಟ ಅನುರಾಗಭರಿತ ಆಮಂತ್ರಣವನ್ನಾಗಿ ಇಲ್ಲವೆ ಒಬ್ಬ ರಕ್ತಸಂಬಂಧಿಯೋಪಾದಿ ಯಾಕೋಬನನ್ನು ಸಂರಕ್ಷಿಸಲು ತನಗಿರುವ ಹಂಗಿನ ಅವನ ಅಂಗೀಕಾರವಾಗಿಯೂ ತೆಗೆದುಕೊಳ್ಳಬಹುದು. ವಿಷಯವು ಏನೇ ಆಗಿರಲಿ, ಲಾಬಾನನು ತನ್ನ ಸೋದರಿಯ ಮಗನನ್ನು ಹೇಗೆ ತನ್ನ ಸ್ವಾರ್ಥಕ್ಕಾಗಿ ಬಳಸುವುದೆಂಬದರ ಕುರಿತಾಗಿ ಲೆಕ್ಕಹಾಕಲಾರಂಭಿಸಿದನು.

ಮೊದಲಾಗಿ, ಮುಂದಿನ 20 ವರ್ಷಗಳ ಸಮಯದಲ್ಲಿ ಕಿತ್ತಾಟದ ವಿಷಯವಾಗಲಿದ್ದ ಸಂಗತಿಯನ್ನು ಲಾಬಾನನು ಪರಿಚಯಪಡಿಸಿದನು. “ನೀನು ನನ್ನನ್ನು ಸಂಬಂಧಿಯೆಂದು ಸುಮ್ಮನೆ ಸೇವಿಸುವದು ನ್ಯಾಯವೋ? ನಿನ್ನ ಕೆಲಸಕ್ಕಾಗಿ ನಾನು ನಿನಗೆ ಏನು ಕೊಡಲಿ”? ಎಂದವನು ಕೇಳಿದನು. ಲಾಬಾನನು ತುಂಬ ಮಮಕಾರವುಳ್ಳ ಮಾವನಾಗಿ ಸೋಗುಹಾಕಿದರೂ, ಅವನು ವಾಸ್ತವದಲ್ಲಿ ಯಾಕೋಬನೊಂದಿಗೆ ತನಗಿದ್ದ ರಕ್ತಸಂಬಂಧವನ್ನು ಬರಿಯ ಕೆಲಸದ ಗುತ್ತಿಗೆಯಾಗಿ ಬದಲಾಯಿಸಿದ್ದನು. ಯಾಕೋಬನು ರಾಹೇಲಳನ್ನು ಪ್ರೀತಿಸುತ್ತಿದ್ದನಾದ್ದರಿಂದ, ಅವನು ಉತ್ತರಿಸಿದ್ದು: “ನಿನ್ನ ಕಿರೀ ಮಗಳಾದ ರಾಹೇಲಳಿಗೋಸ್ಕರ ನಿನ್ನಲ್ಲಿ ಏಳು ವರುಷ ಸೇವೆಮಾಡುವೆನು.”​—ಆದಿಕಾಂಡ 29:​15-20.

ವಧುವಿನ ಕುಟುಂಬಕ್ಕೆ ವಧುದಕ್ಷಿಣೆಯನ್ನು ಕೊಡುವುದರ ಮೇಲೆ ಮದುವೆಯ ಒಪ್ಪಿಗೆಮಾತು ಜಾರಿಗೆ ಬರುತ್ತಿತ್ತು. ಮುಂದಕ್ಕೆ ಮೋಶೆಯ ಧರ್ಮಶಾಸ್ತ್ರವು, ಅತ್ಯಾಚಾರಗೈಯಲ್ಪಟ್ಟ ಕನ್ನಿಕೆಯರಿಗಾಗಿ 50 ಬೆಳ್ಳಿ ರೂಪಾಯಿ (ಶೆಕೆಲ್‌)ಗಳ ಬೆಲೆಯನ್ನು ನಿಗದಿಪಡಿಸಿತು. ವಿದ್ವಾಂಸ ಗೊರ್ಡನ್‌ ವೀನಮ್‌ರವರು, ಇದು “ಗರಿಷ್ಠಮೊತ್ತದ ವಧುದಕ್ಷಿಣೆ” ಆಗಿತ್ತೆಂದೂ, ಆದರೆ ಹೆಚ್ಚಿನವು “ಅದಕ್ಕಿಂತಲೂ ತುಂಬ ಕಡಿಮೆ” ಆಗಿದ್ದವು ಎಂದು ನಂಬುತ್ತಾರೆ. (ಧರ್ಮೋಪದೇಶಕಾಂಡ 22:​28, 29) ಯಾಕೋಬನು ಅಷ್ಟು ಹಣವನ್ನು ಕೊಡಲಿಕ್ಕಾಗಿ ಏರ್ಪಾಡು ಮಾಡಸಾಧ್ಯವಿರಲಿಲ್ಲ. ಆದುದರಿಂದ ಅವನು ಲಾಬಾನನಿಗೆ ತಾನು ಏಳು ವರ್ಷಗಳ ವರೆಗೆ ಕೆಲಸಮಾಡಲು ಸಿದ್ಧನಿದ್ದೇನೆಂದು ಹೇಳಿದನು. “ಪ್ರಾಚೀನ ಬಾಬೆಲಿನ ಸಮಯಗಳಲ್ಲಿ ಸಾಮಾನ್ಯ ಕಾರ್ಮಿಕರಿಗೆ, ಒಂದು ತಿಂಗಳಿಗೆ ಅರ್ಧ ಶೆಕೆಲಿನಿಂದ ಒಂದು ಶೆಕೆಲ್‌ ಸಂಬಳ ಸಿಗುತ್ತಿದ್ದದರಿಂದ,” (ಏಳು ಪೂರ್ಣ ವರ್ಷಗಳಲ್ಲಿ 42ರಿಂದ 84 ಶೆಕೆಲ್‌ಗಳು) “ರಾಹೇಲಳ ಕೈಹಿಡಿಯಲಿಕ್ಕೋಸ್ಕರ ಯಾಕೋಬನು ಲಾಬಾನನಿಗೆ ತುಂಬ ಉದಾರ ಮೊತ್ತದ ಕೊಡುಗೆಯನ್ನು ನೀಡುತ್ತಿದ್ದನು” ಎಂದು ವೀನಮ್‌ ಮುಂದುವರಿಸುತ್ತಾರೆ. ಲಾಬಾನನು ಇದಕ್ಕೆ ಕೂಡಲೇ ಒಪ್ಪಿಕೊಂಡನು.​—ಆದಿಕಾಂಡ 29:19.

ಆ ಏಳು ವರ್ಷಗಳು ಯಾಕೋಬನಿಗೆ “ಸ್ವಲ್ಪ ದಿವಸದಂತೆ” ಇದ್ದವು, ಏಕೆಂದರೆ ಅವನು ರಾಹೇಲಳನ್ನು ಅಷ್ಟೊಂದು ಪ್ರೀತಿಸುತ್ತಿದ್ದನು. ಆ ಸಮಯವು ದಾಟಿದ ನಂತರ, ಅವನು ತನ್ನ ಮುಸುಕುಧಾರಿ ವಧುವಿಗಾಗಿ ಕೇಳಿಕೊಂಡಾಗ, ಲಾಬಾನನು ತನಗೆ ಮೋಸಮಾಡುವನೆಂಬ ಕಿಂಚಿತ್ತು ಸುಳಿವೂ ಅವನಿಗಿರಲಿಲ್ಲ. ಮರುದಿನ ಬೆಳಗ್ಗೆ ಎದ್ದಾಗ, ತಾನು ಮಲಗಿದ್ದು ರಾಹೇಲಳೊಂದಿಗಲ್ಲ ಬದಲಾಗಿ ಅವಳ ಅಕ್ಕ ಲೇಯಳೊಂದಿಗೆ ಎಂಬುದು ತಿಳಿದಾಗ, ಅವನಿಗೆಂಥ ಆಘಾತವಾಗಿದ್ದಿರಬೇಕೆಂಬುದನ್ನು ಊಹಿಸಿಕೊಳ್ಳಿ! “ಇದೇನು ನೀನು ನನಗೆ ಮಾಡಿದ್ದು? ರಾಹೇಲಳಿಗೋಸ್ಕರ ನಿನಗೆ ಸೇವೆ ಮಾಡಿದೆನಲ್ಲಾ; ಯಾಕೆ ನನಗೆ ಮೋಸಮಾಡಿದಿ”? ಎಂದು ಯಾಕೋಬನು ತಗಾದೆಮಾಡಿದಾಗ, ಲಾಬಾನನು ಉತ್ತರದಲ್ಲಿ, “ಹಿರೀ ಮಗಳಿಗಿಂತ ಮೊದಲು ಕಿರೀ ಮಗಳನ್ನು ಮದುವೆಮಾಡಿಸಿ ಕೊಡುವದು ನಮ್ಮ ದೇಶದ ಪದ್ಧತಿಯಲ್ಲ. ಆಕೆಯ [ಮದುವೆಯ] ವಾರವನ್ನು ಪೂರೈಸು; ಅನಂತರ ಈ ನನ್ನ ಕಿರೀ ಮಗಳನ್ನೂ ನಿನಗೆ ಕೊಡುತ್ತೇವೆ; ಈಕೆಗೋಸ್ಕರ ನೀನು ಇನ್ನೂ ಏಳು ವರುಷ ಸೇವೆ ಮಾಡು” ಎಂದು ಹೇಳಿದನು. (ಆದಿಕಾಂಡ 29:​20-27) ನಿಸ್ಸಹಾಯಕನೂ, ಪಂಜರದಲ್ಲಿ ಸಿಕ್ಕಿಬಿದ್ದ ಪಕ್ಷಿಯಂತೆಯೂ ಆದ ಯಾಕೋಬನು, ರಾಹೇಲಳನ್ನು ಪಡೆಯಲಿಕ್ಕೋಸ್ಕರ ಆ ಷರತ್ತುಗಳಿಗೆ ಒಪ್ಪಿಕೊಳ್ಳಲೇಬೇಕಾಯಿತು.

ಆದರೆ ಮೊದಲ ಏಳು ವರ್ಷಗಳಂತಿರದೆ, ಈ ಮುಂದಿನ ಏಳು ವರ್ಷಗಳು ಅತೀ ಕಷ್ಟಕರವಾಗಿದ್ದವು. ಯಾಕೋಬನು ಲಾಬಾನನ ಈ ಕ್ರೂರವಾದ ಕುತಂತ್ರವನ್ನು ಹೇಗೆ ತಾನೇ ಮರೆಯಸಾಧ್ಯವಿತ್ತು? ಮತ್ತು ಅವನೊಂದಿಗೆ ಜೊತೆಗೂಡಿ ನಾಟಕವಾಡಿದ ಲೇಯಳ ಕುರಿತಾಗಿ ಏನು? ಲಾಬಾನನಿಗಂತೂ, ತಾನು ಲೇಯ ಹಾಗೂ ರಾಹೇಲರಿಗೋಸ್ಕರ ಕಟ್ಟಿಟ್ಟಿದ್ದಂಥ ತೊಂದರೆಗ್ರಸ್ಥ ಭವಿಷ್ಯದ ಕುರಿತಾಗಿ ಸ್ವಲ್ಪವೂ ಚಿಂತೆಯಿರಲಿಲ್ಲ. ಅವನಿಗೆ ತನ್ನ ಸ್ವಾರ್ಥವೇ ಪರಮೋಚ್ಛವಾಗಿತ್ತು. ಲೇಯಳು ಒಂದರ ನಂತರ ಒಂದಾಗಿ ನಾಲ್ಕು ಪುತ್ರರನ್ನು ಹಡೆದಾಗ, ಮತ್ತು ರಾಹೇಲಳು ಬಂಜೆಯಾಗಿಯೇ ಉಳಿದಾಗ ಅವಳ ಅಸಮಾಧಾನಕ್ಕೆ ಹೊಟ್ಟೆಕಿಚ್ಚು ಸೇರಿಸಲ್ಪಟ್ಟಿತು. ಮಕ್ಕಳಿಗಾಗಿ ಚಡಪಡಿಸುತ್ತಿದ್ದ ರಾಹೇಲಳು ತನ್ನ ದಾಸಿಯನ್ನು ಒಬ್ಬ ಬದಲಿ ತಾಯಿಯಾಗುವಂತೆ ಯಾಕೋಬನಿಗೆ ನೀಡಿದಳು, ಮತ್ತು ಲೇಯಳು ಸಹ ಪ್ರತಿಸ್ಪರ್ಧೆಯಿಂದ ಅದನ್ನೇ ಮಾಡಿದಳು. ಯಾಕೋಬನಿಗೀಗ 4 ಮಂದಿ ಹೆಂಡತಿಯರು, 12 ಮಕ್ಕಳು ಇದ್ದವು, ಮತ್ತು ಇದು ನಿಶ್ಚಯವಾಗಿಯೂ ಒಂದು ಸಂತೋಷಭರಿತ ಕುಟುಂಬವಾಗಿರಲಿಲ್ಲ. ಆದರೂ, ಯೆಹೋವನು ಯಾಕೋಬನನ್ನು ಒಂದು ಮಹಾ ಜನಾಂಗವಾಗಿ ರೂಪಿಸುತ್ತಾ ಇದ್ದನು.​—ಆದಿಕಾಂಡ 29:​28–30:24.

ಯೆಹೋವನಿಂದ ಸಂಪದ್ಯುಕ್ತನಾದದ್ದು

ಪರೀಕ್ಷೆಗಳು ಎದುರಾದರೂ, ದೇವರು ಮಾತುಕೊಟ್ಟಂತೆಯೇ ತನ್ನೊಂದಿಗಿದ್ದಾನೆಂಬುದನ್ನು ಯಾಕೋಬನು ನೋಡಿದನು. ಲಾಬಾನನೂ ಇದನ್ನು ಗಮನಿಸಿದನು. ಏಕೆಂದರೆ ಯಾಕೋಬನು ಬಂದಾಗ ಅವನ ಬಳಿಯಿದ್ದ ಕೊಂಚ ಪಶುಗಳು, ಈ ಸೋದರಳಿಯನ ಆರೈಕೆಯಿಂದ ಬಹುಸಂಖ್ಯಾತವಾಗಿ ಬೆಳೆದಿದ್ದವು. ಯಾಕೋಬನನ್ನು ಬಿಟ್ಟುಬಿಡಲು ಹಿಂಜರಿಯುತ್ತಾ, ಲಾಬಾನನು ಅವನ ಹೆಚ್ಚಿನ ಸೇವೆಗಾಗಿ ಸಂಬಳವೇನಾಗಿರಬೇಕೆಂಬುದನ್ನು ತಿಳಿಸುವಂತೆ ಹೇಳಿದನು. ಆಗ ಯಾಕೋಬನು ಲಾಬಾನನ ಹಿಂಡುಗಳಲ್ಲಿ ಅಸಾಮಾನ್ಯ ರೀತಿಯ ಬಣ್ಣವುಳ್ಳ ಜಾನುವಾರುಗಳಿಗಾಗಿ ಕೇಳಿಕೊಂಡನು. ಆ ಪ್ರದೇಶದಲ್ಲಿ, ಸಾಮಾನ್ಯವಾಗಿ ಕುರಿಗಳು ಬಿಳಿ ಮತ್ತು ಆಡುಗಳು ಕಪ್ಪು ಇಲ್ಲವೆ ಕಡುಕಂದುಬಣ್ಣದ್ದಾಗಿದ್ದು, ಇವುಗಳಲ್ಲಿ ಕೇವಲ ಕೆಲವು ಪ್ರಾಣಿಗಳಿಗೆ ಚುಕ್ಕೆ ಅಥವಾ ಮಚ್ಚೆಗಳು ಇರುತ್ತಿದ್ದವು ಎಂದು ಹೇಳಲಾಗಿದೆ. ಇದರಿಂದಾಗಿ ತನಗೇ ಲಾಭವಾಗುತ್ತಿದೆಯೆಂದು ನೆನಸುತ್ತಾ, ಲಾಬಾನನು ಇದಕ್ಕೆ ಕೂಡಲೇ ಒಪ್ಪಿಕೊಂಡನು. ಮತ್ತು ತಡಮಾಡದೇ, ಯಾಕೋಬನ ಆರೈಕೆಯಲ್ಲಿ ಉಳಿದಿರುವಂಥ ಹಿಂಡುಗಳೊಂದಿಗೆ ಯಾವುದೇ ಸಂಪರ್ಕವನ್ನು ಇಡದಂತೆ, ಅಸಾಮಾನ್ಯವಾದ ಚುಕ್ಕೆಗಳಿದ್ದ ಜಾನುವಾರುಗಳನ್ನು ಪ್ರತ್ಯೇಕವಾಗಿ ಇರಿಸಿದನು. ಈ ಒಪ್ಪಂದದಿಂದ ಯಾಕೋಬನಿಗೆ ಸ್ವಲ್ಪವೇ ಲಾಭವಾಗುವುದೆಂದು ಮತ್ತು ಪ್ರಾಚೀನಕಾಲದ ಕುರುಬರು ಸಾಮಾನ್ಯವಾಗಿ ಸಂಬಳವಾಗಿ ಪಡೆಯುತ್ತಿದ್ದ ನವಜನಿತ ಕುರಿ ಹಾಗೂ ಆಡುಗಳ ಮರಿಗಳಲ್ಲಿ 20 ಪ್ರತಿಶತವನ್ನಂತೂ ಪಡೆಯುವುದೇ ಇಲ್ಲವೆಂದು ಲಾಬಾನನು ನಂಬಿದ್ದನೆಂಬುದು ವ್ಯಕ್ತವಾಗುತ್ತದೆ. ಆದರೆ ಲಾಬಾನನ ಯೋಚನೆಯು ತಲೆಕೆಳಗಾಯಿತು, ಏಕೆಂದರೆ ಯೆಹೋವನು ಯಾಕೋಬನೊಂದಿಗಿದ್ದನು.​—ಆದಿಕಾಂಡ 30:​25-36.

ದೈವಿಕ ಮಾರ್ಗದರ್ಶನದ ಮೇರೆಗೆ, ಯಾಕೋಬನು ತಾನು ಅಪೇಕ್ಷಿಸಿದಂಥ ಬಣ್ಣಗಳುಳ್ಳ ಕಟ್ಟುಮಸ್ತಾದ, ದಷ್ಟಪುಷ್ಟ ಜಾನುವಾರುಗಳನ್ನು ಬೆಳೆಸಿದನು. (ಆದಿಕಾಂಡ 30:​37-42) ಆದರೆ ಜಾನುವಾರುಗಳ ತಳಿಬೆಳೆಸುವುದರ ಕುರಿತಾದ ಅವನ ವಿಚಾರಗಳು ಸರಿಯಾಗಿರಲಿಲ್ಲ. ಹಾಗಿದ್ದರೂ, “ವೈಜ್ಞಾನಿಕವಾಗಿ, ಅಂಥ ಅಪೇಕ್ಷಿತ ಫಲಿತಾಂಶಗಳನ್ನು, ಮಚ್ಚೆಗಳನ್ನು ಪಡೆಯುವ ವಂಶವಾಹಿಗಳುಳ್ಳ ಒಂದೇ ಬಣ್ಣದ ಜಾನುವಾರುಗಳನ್ನು ಅನುಕ್ರಮವಾಗಿ ಸಂಕರೋತ್ಪತ್ತಿ ಮಾಡಿಸುವ ಮೂಲಕ ಪಡೆಯಬಹುದು” ಮತ್ತು “[ಅವುಗಳ] ಮಿಶ್ರತಳಿ ಕಸುವಿನಿಂದ . . . ಅಂಥ ಜಾನುವಾರುಗಳನ್ನು ಗುರುತಿಸಸಾಧ್ಯವಿದೆ” ಎಂದು ವಿದ್ವಾಂಸ ನಾಹೂಮ್‌ ಸಾರ್ನಾ ಹೇಳುತ್ತಾರೆ.

ಯಾಕೋಬನಿಗೆ ಸಿಕ್ಕಿದಂಥ ಫಲಿತಾಂಶಗಳನ್ನು ನೋಡಿ, ಲಾಬಾನನು ತನ್ನ ಸೋದರಳಿಯನಿಗೆ ಸೇರಿರುವ ರೇಖೆ, ಚುಕ್ಕೆ, ಮಚ್ಚೆಗಳುಳ್ಳ ಜಾನುವಾರುಗಳ ಕುರಿತಾದ ಒಪ್ಪಂದವನ್ನು ಬದಲಾಯಿಸಲು ಪ್ರಯತ್ನಿಸಿದನು. ಅವನು ತನ್ನ ಸ್ವಂತ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದ್ದನು, ಆದರೆ ಲಾಬಾನನು ಆ ಒಪ್ಪಂದವನ್ನು ಎಷ್ಟು ಬದಲಾಯಿಸಿದರೂ, ಯಾಕೋಬನಿಗೇ ಯಾವಾಗಲೂ ಸಮೃದ್ಧಿಯಾಗುವಂತೆ ಯೆಹೋವನು ನೋಡಿಕೊಂಡನು. ಲಾಬಾನನು ಕೇವಲ ತನ್ನ ಹಲ್ಲುಕಚ್ಚಿಕೊಂಡು ಸುಮ್ಮನಿರಬೇಕಾಯಿತ್ತು ಅಷ್ಟೇ. ಸ್ವಲ್ಪ ಸಮಯದಲ್ಲೇ ಯಾಕೋಬನು ಬಹಳಷ್ಟು ಧನ, ಹಿಂಡುಗಳು, ಸೇವಕರು, ಒಂಟೆಗಳು ಮತ್ತು ಕತ್ತೆಗಳನ್ನು ಶೇಖರಿಸಿದನು. ಆದರೆ ಇದು ಸಾಧ್ಯವಾದದ್ದು, ಅವನ ಸ್ವಂತ ಬುದ್ಧಿವಂತಿಕೆಯಿಂದಲ್ಲ ಬದಲಾಗಿ ಯೆಹೋವನ ಬೆಂಬಲದಿಂದಾಗಿಯೇ. ಆನಂತರ ಅವನು ರಾಹೇಲ ಹಾಗೂ ಲೇಯರಿಗೆ ಇದನ್ನು ವಿವರಿಸಿ ಹೇಳಿದ್ದು: “ಅವನು [ಲಾಬಾನನು] ಚಪಲಚಿತ್ತನಾಗಿ ಹತ್ತು ಸಾರಿ ನನ್ನ ಸಂಬಳವನ್ನು ಬದಲಾಯಿಸಿ ವಂಚಿಸಿದರೂ ನನಗೆ ಕೇಡುಮಾಡುವದಕ್ಕೆ ದೇವರು ಅವನಿಗೆ ಅವಕಾಶಕೊಡಲಿಲ್ಲ. . . . ದೇವರು ನಿಮ್ಮ ತಂದೆಯ ಆಡುಕುರಿಗಳನ್ನು ಅವನಿಂದ ತೆಗೆದು ನನಗೆ ಕೊಟ್ಟನು.” ಲಾಬಾನನು ಏನನ್ನು ಮಾಡುತ್ತಿದ್ದನೊ ಅದನ್ನೆಲ್ಲಾ ತಾನು ಗಮನಿಸುತ್ತಿದ್ದೇನೆಂದೂ ಯಾಕೋಬನು ಚಿಂತಿಸಬೇಕಾಗಿಲ್ಲವೆಂದೂ ಯೆಹೋವನು ಅವನಿಗೆ ಆಶ್ವಾಸನೆ ನೀಡಿದನು. ದೇವರು ಹೇಳಿದ್ದು: ‘ಸ್ವದೇಶಕ್ಕೆ ಬಂಧುಗಳ ಬಳಿಗೆ ತಿರಿಗಿ ಹೋಗು, ನಿನಗೆ ಒಳ್ಳೇದನ್ನು ಮಾಡುವೆ.’​—ಆದಿಕಾಂಡ 31:1-13; 32:9.

ಕೊನೆಗೆ ಈ ಮೋಸಗಾರ ಲಾಬಾನನ ಕೈಕೆಳಗಿಂದ ಹೊರಬಂದ ನಂತರ ಯಾಕೋಬನು ನೇರವಾಗಿ ತನ್ನ ಸ್ವದೇಶದತ್ತ ಹೊರಟನು. ಅವನು ಮನೆಯಿಂದ ಹೊರಟು 20 ವರ್ಷಗಳು ದಾಟಿದ್ದರೂ ಅವನಿಗಿನ್ನೂ ಏಸಾವನ ಭಯವಿತ್ತು. ಮತ್ತು ಏಸಾವನು ನಾನೂರು ಪುರುಷರೊಂದಿಗೆ ತನ್ನ ಮುಂದೆ ಬರುತ್ತಿದ್ದಾನೆಂಬ ಸುದ್ದಿ ಸಿಕ್ಕಿದಾಗಲಂತೂ ಅವನು ಇನ್ನಷ್ಟು ಭಯಪಟ್ಟನು. ಯಾಕೋಬನು ಏನು ಮಾಡಸಾಧ್ಯವಿತ್ತು? ಸದಾ ದೇವರಲ್ಲಿ ಭರವಸೆಯನ್ನಿಡುವ ಆತ್ಮಿಕ ವ್ಯಕ್ತಿಯೋಪಾದಿ, ಅವನು ನಂಬಿಕೆಯಿಂದ ಕ್ರಿಯೆಗೈದನು. ಅವನು ಪ್ರಾರ್ಥನೆಮಾಡಿ, ತಾನು ಯೆಹೋವನ ಉದಾರತೆಗೆ ಅಯೋಗ್ಯನೆಂದೂ, ದೇವರು ಮಾಡಿದಂಥ ವಾಗ್ದಾನಗಳ ಆಧಾರದ ಮೇರೆಗೆ ಅವನೂ ಅವನ ಕುಟುಂಬವೂ ಏಸಾವನ ಕೈಯಿಂದ ಪಾರುಗೊಳಿಸಲ್ಪಡುವಂತೆಯೂ ಬೇಡಿಕೊಂಡನು.​—ಆದಿಕಾಂಡ 32:​2-12.

ಆಗ ಅನಿರೀಕ್ಷಿತವಾದ ಘಟನೆಯು ಸಂಭವಿಸಿತು. ವಾಸ್ತವದಲ್ಲಿ ದೇವದೂತನಾಗಿದ್ದಂಥ ಒಬ್ಬ ಅಪರಿಚಿತನು, ರಾತ್ರಿ ಸಮಯದಲ್ಲಿ ಯಾಕೋಬನೊಂದಿಗೆ ಹೋರಾಡಿದನು. ತನ್ನ ಒಂದೇ ಸ್ಪರ್ಶದಿಂದ ಅವನು ಯಾಕೋಬನ ತೊಡೆಯ ಕೀಲನ್ನು ತಪ್ಪಿಸಿದನು. ಆದರೆ ಯಾಕೋಬನು ಆ ದೇವದೂತನು ತನ್ನನ್ನು ಮೊದಲು ಆಶೀರ್ವದಿಸದ ಹೊರತು ಅವನನ್ನು ಬಿಟ್ಟುಬಿಡಲು ಒಪ್ಪಲಿಲ್ಲ. ಯಾಕೋಬನು “ಅಳುತ್ತಾ, ಆತನ ಕೃಪೆಯನ್ನು ಬೇಡಿಕೊಂಡನು” ಎಂದು ಕಾಲಾನಂತರ ಪ್ರವಾದಿಯಾದ ಹೋಶೇಯನು ಹೇಳಿದನು. (ಹೋಶೇಯ 12:​2-4; ಆದಿಕಾಂಡ 32:​24-29) ಈ ಹಿಂದೆ ದೇವದೂತರ ಕಾಣಿಸಿಕೊಳ್ಳುವಿಕೆಗಳು, ಅಬ್ರಹಾಮನ ಸಂತತಿಯ ಮೂಲಕ ಅಬ್ರಹಾಮಸಂಬಂಧಿತ ಒಡಂಬಡಿಕೆಯ ನೆರವೇರಿಕೆಯೊಂದಿಗೆ ಸಂಬಂಧಿಸಿದ್ದವೆಂದು ಯಾಕೋಬನಿಗೆ ತಿಳಿದಿತ್ತು. ಆದುದರಿಂದಲೇ ಅವನು ತನ್ನ ಪೂರ್ಣ ಬಲವನ್ನುಪಯೋಗಿಸುತ್ತಾ ಹೋರಾಡಿ, ಒಂದು ಆಶೀರ್ವಾದವನ್ನು ಗಿಟ್ಟಿಸಿಕೊಂಡನು. ಈ ಸಮಯದಲ್ಲೇ ದೇವರು ಅವನ ಹೆಸರನ್ನು ‘ಇಸ್ರಾಯೇಲ್‌’ ಎಂಬುದಾಗಿ ಬದಲಾಯಿಸಿದನು. ಇದರರ್ಥ, “ದೇವರೊಂದಿಗೆ ಹೋರಾಡಿದವನು (ಪಟ್ಟುಹಿಡಿದವನು)” ಅಥವಾ “ದೇವರು ಹೋರಾಡುತ್ತಾನೆ” ಎಂದಾಗಿದೆ.

ನಿಮಗೆ ಹೋರಾಡಲು ಮನಸ್ಸಿದೆಯೊ?

ಯಾಕೋಬನು ಒಬ್ಬ ದೇವದೂತನೊಂದಿಗೆ ಹೋರಾಡುವ ಮತ್ತು ಏಸಾವನೊಂದಿಗೆ ಪುನರ್ಮಿಲನವಾಗುವ ಬಿಕ್ಕಟ್ಟುಗಳನ್ನು ಮಾತ್ರ ಎದುರಿಸಲಿಲ್ಲ. ಆದರೂ ಇಲ್ಲಿ ಪರಿಗಣಿಸಲ್ಪಟ್ಟಂಥ ಘಟನೆಗಳು ಯಾಕೋಬನು ಯಾವ ರೀತಿಯ ವ್ಯಕ್ತಿಯಾಗಿದ್ದನೆಂಬುದನ್ನು ತೋರಿಸುತ್ತವೆ. ಏಸಾವನು ತನ್ನ ಚೊಚ್ಚಲುತನದ ಹಕ್ಕಿಗಾಗಿ ಸ್ವಲ್ಪ ಹಸಿವನ್ನು ತಡೆದುಕೊಳ್ಳಲು ಶಕ್ತನಾಗಿರಲಿಲ್ಲ, ಆದರೆ ಯಾಕೋಬನು ಜೀವನಪರ್ಯಂತವೂ ಆಶೀರ್ವಾದಗಳನ್ನು ಪಡೆದುಕೊಳ್ಳಲಿಕ್ಕಾಗಿ ಹೆಣಗಾಡಿದನು, ಮತ್ತು ಇದಕ್ಕಾಗಿ ಒಬ್ಬ ದೇವದೂತನೊಂದಿಗೂ ಹೋರಾಡಿದನು. ದೇವರು ವಚನವಿತ್ತಂತೆಯೇ, ಯಾಕೋಬನಿಗೆ ದೈವಿಕ ಮಾರ್ಗದರ್ಶನ ಮತ್ತು ಸಂರಕ್ಷಣೆಯು ಸಿಕ್ಕಿತು ಮತ್ತು ಅವನು ಒಂದು ದೊಡ್ಡ ಜನಾಂಗದ ಮೂಲಪಿತನೂ, ಮೆಸ್ಸೀಯನ ಪೂರ್ವಜನೂ ಆದನು.​—ಮತ್ತಾಯ 1:​2, 16.

ಯೆಹೋವನ ಅನುಗ್ರಹವನ್ನು ಪಡೆಯಲು ನೀವು ಕಷ್ಟಪಡಲು, ಕಾರ್ಯತಃ ಹೋರಾಡಲು ಮನಸ್ಸುಳ್ಳವರಾಗಿದ್ದೀರೊ? ಇಂದು ಯಾರು ದೇವರ ಚಿತ್ತವನ್ನು ಮಾಡಲು ಬಯಸುತ್ತಾರೊ ಅವರ ಜೀವನವು ಕಷ್ಟಒತ್ತಡಗಳಿಂದ ತುಂಬಿರುತ್ತದೆ, ಮತ್ತು ಸರಿಯಾದ ನಿರ್ಣಯಗಳನ್ನು ಮಾಡುವುದು ಕೆಲವೊಮ್ಮೆ ಒಂದು ಹೋರಾಟವೇ ಆಗಿರುತ್ತದೆ. ಆದರೆ, ಯಾಕೋಬನ ಉತ್ತಮ ಮಾದರಿಯು, ಯೆಹೋವನು ನಮ್ಮ ಮುಂದೆ ಇಟ್ಟಿರುವ ಬಹುಮಾನದ ನಿರೀಕ್ಷೆಗೆ ಅಂಟಿಕೊಂಡಿರಲು ಬಲವಾದ ಸ್ಫೂರ್ತಿಯನ್ನು ಕೊಡುತ್ತದೆ.

[ಪಾದಟಿಪ್ಪಣಿ]

^ ಪ್ಯಾರ. 9 ಈ ಸಂಧಿಸುವಿಕೆಯು, ಯಾಕೋಬನ ತಾಯಿ ರೆಬೆಕ್ಕಳು, ಎಲೀಯೆಜೆರನ ಒಂಟೆಗಳಿಗೆ ನೀರನ್ನು ಕುಡಿಸಿದ ಸಮಯಕ್ಕೆ ಹೋಲುತ್ತಿತ್ತು. ಆ ಸಮಯದಲ್ಲೂ ರೆಬೆಕ್ಕಳು ಆ ಅಪರಿಚಿತನ ಆಗಮನದ ಬಗ್ಗೆ ಸುದ್ದಿಯನ್ನು ಮುಟ್ಟಿಸಲು ಮನೆಗೆ ಓಡಿಹೋದಳು. ಲಾಬಾನನು ತನ್ನ ತಂಗಿಯು ಕೊಡುಗೆಯಾಗಿ ಪಡೆದಂಥ ಚಿನ್ನದ ಆಭರಣಗಳನ್ನು ನೋಡಿ, ಎಲೀಯೆಜೆರನನ್ನು ಸ್ವಾಗತಿಸಲು ಓಡಿಹೋಗಿದ್ದನು.​—ಆದಿಕಾಂಡ 24:​28-31, 53.

[ಪುಟ 31ರಲ್ಲಿರುವ ಚಿತ್ರಗಳು]

ಆಶೀರ್ವಾದಗಳನ್ನು ಪಡೆದುಕೊಳ್ಳಲಿಕ್ಕಾಗಿ ಯಾಕೋಬನು ತನ್ನ ಜೀವನಪರ್ಯಂತ ಹೋರಾಡಿದನು