ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?

ಯೆಹೋವನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?

ಯೆಹೋವನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?

“ನ್ಯಾಯವನ್ನು ಆಚರಿಸುವದು, ದಯೆಯನ್ನು ಪ್ರೀತಿಸುವುದು ಮತ್ತು ದೇವರೊಂದಿಗೆ ವಿನಯಶೀಲನಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?”​—ಮೀಕ 6:8, NW.

1, 2. ಯೆಹೋವನ ಕೆಲವು ಸೇವಕರು ನಿರಾಶರಾಗಬಹುದು ಏಕೆ, ಆದರೆ ಯಾವುದು ಸಹಾಯಕರವಾಗಿ ಪರಿಣಮಿಸುವುದು?

ವಿರ, 75 ವರ್ಷ ಪ್ರಾಯದ ಒಬ್ಬ ನಂಬಿಗಸ್ತ ಕ್ರೈಸ್ತರಾಗಿದ್ದಾರೆ. ಅವರ ಆರೋಗ್ಯವು ಅಷ್ಟು ಒಳ್ಳೆಯದಾಗಿರುವುದಿಲ್ಲ. ಅವರು ಹೇಳುವುದು: “ಕೆಲವೊಮ್ಮೆ, ನಾನು ಕಿಟಕಿಯಿಂದ ಹೊರಗೆ ನೋಡುವಾಗ, ನನ್ನ ಸಹೋದರ ಸಹೋದರಿಯರು ಮನೆಯಿಂದ ಮನೆಗೆ ಹೋಗಿ ಸಾರುತ್ತಿರುವುದನ್ನು ನೋಡುತ್ತೇನೆ. ಆಗ ನನ್ನ ಕಣ್ಣುಗಳು ಕಂಬನಿಯಿಂದ ತುಂಬಿಬರುತ್ತವೆ, ಏಕೆಂದರೆ ನಾನು ಅವರೊಟ್ಟಿಗೆ ಸೇರಿ ಸೇವೆ ಮಾಡಲು ಬಯಸುತ್ತೇನೆ, ಆದರೆ ನಾನು ಯೆಹೋವನಿಗೆ ನೀಡಬಯಸುವ ಸೇವೆಯನ್ನು ನನ್ನ ಅಸ್ವಸ್ಥತೆಯು ಸೀಮಿತಗೊಳಿಸುತ್ತದೆ.”

2 ನಿಮಗೂ ಎಂದಾದರೂ ಇದೇ ರೀತಿಯ ಅನಿಸಿಕೆಯಾಗಿದೆಯೋ? ಖಂಡಿತವಾಗಿಯೂ, ಯೆಹೋವನನ್ನು ಪ್ರೀತಿಸುವ ಪ್ರತಿಯೊಬ್ಬರೂ ಆತನ ಹೆಸರಿನಲ್ಲಿ ನಡೆಯಲು ಮತ್ತು ಆತನ ಆವಶ್ಯಕತೆಗಳನ್ನು ಪೂರೈಸಲು ಬಯಸುತ್ತಾರೆ. ಆದರೆ, ಒಂದುವೇಳೆ ನಮ್ಮ ಆರೋಗ್ಯವು ಹದಗೆಡುತ್ತಿರುವಲ್ಲಿ, ನಾವು ವೃದ್ಧರಾಗಿರುವಲ್ಲಿ ಅಥವಾ ನಮಗೆ ಕುಟುಂಬದ ಜವಾಬ್ದಾರಿಗಳಿರುವಲ್ಲಿ ಆಗೇನು? ನಾವು ಸ್ವಲ್ಪಮಟ್ಟಿಗೆ ನಿರಾಶರಾಗಬಹುದು, ಏಕೆಂದರೆ ದೇವರ ಸೇವೆಯಲ್ಲಿ ಮಾಡುವಂತೆ ನಮ್ಮ ಹೃದಯವು ಹಾತೊರೆಯುವಂಥದ್ದೆಲ್ಲವನ್ನೂ ಮಾಡುವುದರಿಂದ ಇಂತಹ ಪರಿಸ್ಥಿತಿಗಳು ನಮ್ಮನ್ನು ತಡೆಯಬಹುದು. ನಮ್ಮ ಪರಿಸ್ಥಿತಿಯು ಇದಾಗಿರುವಲ್ಲಿ, ಮೀಕ 6 ಮತ್ತು 7ನೆಯ ಅಧ್ಯಾಯಗಳ ಪರಿಗಣನೆಯು ನಮಗೆ ತುಂಬ ಪ್ರೋತ್ಸಾಹವನ್ನು ನೀಡಬಹುದು. ಈ ಅಧ್ಯಾಯಗಳು, ಯೆಹೋವನು ಅಪೇಕ್ಷಿಸುವಂಥ ವಿಷಯಗಳು ನ್ಯಾಯಸಮ್ಮತವೂ ಕೈಗೆ ನಿಲುಕುವಂಥವುಗಳೂ ಆಗಿವೆಯೆಂಬುದನ್ನು ತೋರಿಸುತ್ತವೆ.

ಯೆಹೋವನು ತನ್ನ ಜನರೊಂದಿಗೆ ವ್ಯವಹರಿಸುವ ವಿಧ

3. ದಂಗೆಕೋರ ಇಸ್ರಾಯೇಲ್ಯರೊಂದಿಗೆ ಯೆಹೋವನು ಹೇಗೆ ವ್ಯವಹರಿಸುತ್ತಾನೆ?

3 ನಾವು ಪ್ರಥಮವಾಗಿ ಮೀಕ 6:​3-5ನ್ನು ನೋಡೋಣ, ಮತ್ತು ಯೆಹೋವನು ತನ್ನ ಜನರೊಂದಿಗೆ ಹೇಗೆ ವ್ಯವಹರಿಸುತ್ತಾನೆಂಬುದನ್ನು ಗಮನಿಸೋಣ. ಮೀಕನ ಸಮಯದಲ್ಲಿ ಇಸ್ರಾಯೇಲ್ಯರು ದಂಗೆಕೋರರಾಗಿದ್ದರು ಎಂಬುದನ್ನು ನೆನಪಿನಲ್ಲಿಡಿರಿ. ಆದರೂ, ಯೆಹೋವನು ಅವರನ್ನು ಕನಿಕರದಿಂದ, “ನನ್ನ ಪ್ರಜೆಯೇ” ಎಂದು ಸಂಬೋಧಿಸುತ್ತಾನೆ. “ನನ್ನ ಜನರೇ, . . . [“ದಯವಿಟ್ಟು,” NW] ಜ್ಞಾಪಕಮಾಡಿಕೊಳ್ಳಿರಿ” ಎಂದು ಆತನು ಬಿನ್ನೈಸುತ್ತಾನೆ. ಯೆಹೋವನು ಅವರನ್ನು ಬಿರುಸಾಗಿ ಅಪಾದಿಸದೆ, ಅವರ ಹೃದಯವನ್ನು ತಲಪಲು ಪ್ರಯತ್ನಿಸುತ್ತಾ, “ನಾನು ನಿನಗೇನು ಮಾಡಿದೆನು”? ಎಂದು ಕೇಳುತ್ತಾನೆ. ಆತನು ಅವರನ್ನು ತನ್ನ ವಿರುದ್ಧವಾಗಿ ‘ಸಾಕ್ಷಿಹೇಳುವಂತೆಯೂ’ ಪ್ರೋತ್ಸಾಹಿಸುತ್ತಾನೆ.

4. ದೇವರು ಕನಿಕರವನ್ನು ತೋರಿಸುವುದರಲ್ಲಿ ಇಟ್ಟ ಮಾದರಿಯು ನಮ್ಮ ಮೇಲೆ ಯಾವ ಪ್ರಭಾವವನ್ನು ಬೀರಬೇಕು?

4 ಯೆಹೋವನು ನಮಗೆಲ್ಲರಿಗೂ ಎಂತಹ ಉತ್ತಮ ಮಾದರಿಯನ್ನು ಇಡುತ್ತಾನೆ! ಮೀಕನ ದಿನದ ಇಸ್ರಾಯೇಲ್‌ ಮತ್ತು ಯೆಹೂದದ ಜನರು ದಂಗೆಕೋರರಾಗಿದ್ದರೂ ಅವರನ್ನು “ನನ್ನ ಜನರೇ” ಎಂದು ಕರೆದು, “ದಯವಿಟ್ಟು” ಎಂಬ ಪದವನ್ನುಪಯೋಗಿಸುತ್ತಾ ಸಂಬೋಧಿಸಿದನು. ಹೀಗಿರುವಾಗ ಖಂಡಿತವಾಗಿಯೂ ನಾವು ಕೂಡ, ಕ್ರೈಸ್ತ ಸಭೆಯ ಭಾಗವಾಗಿರುವವರೊಂದಿಗೆ ಕನಿಕರ ಮತ್ತು ದಯೆಯಿಂದ ವರ್ತಿಸಬೇಕು. ಕೆಲವರೊಂದಿಗೆ ವ್ಯವಹರಿಸುವುದು ಕಷ್ಟಕರವಾಗಿರಬಹುದು ಅಥವಾ ಅವರು ಆತ್ಮಿಕವಾಗಿ ಬಲಹೀನರಾಗಿರಬಹುದು ಎಂಬುದು ಒಪ್ಪತಕ್ಕ ವಿಷಯ. ಆದರೆ ಅವರು ಯೆಹೋವನನ್ನು ಪ್ರೀತಿಸುತ್ತಾರಾದರೆ, ನಾವು ಅವರಿಗೆ ಸಹಾಯಮಾಡಲು, ಕನಿಕರ ತೋರಿಸಲು ಬಯಸುತ್ತೇವೆ.

5. ಯಾವ ಮೂಲಭೂತ ಅಂಶವನ್ನು ಮೀಕ 6:​6, 7ರಲ್ಲಿ ತಿಳಿಸಲಾಗಿದೆ?

5 ಈಗ ನಾವು ಮೀಕ 6:​6, 7ಕ್ಕೆ ತೆರಳೋಣ. ಅಲ್ಲಿ ಮೀಕನು ಹೀಗೆ ಹೇಳುತ್ತಾ ಪ್ರಶ್ನೆಗಳ ಸರಮಾಲೆಯನ್ನೇ ಕೇಳುತ್ತಾನೆ: “ನಾನು ಯೆಹೋವನ ಸನ್ನಿಧಿಯಲ್ಲಿ ಯಾವ ಕಾಣಿಕೆಯೊಡನೆ ಕಾಣಿಸಿಕೊಳ್ಳಲಿ, ಯಾವದನ್ನರ್ಪಿಸಿ ಮಹೋನ್ನತದೇವರ ಸಮ್ಮುಖದಲ್ಲಿ ಅಡ್ಡಬೀಳಲಿ? ಹೋಮದ ಪಶುಗಳನ್ನೂ ಒಂದು ವರುಷದ ಕರುಗಳನ್ನೂ ತೆಗೆದುಕೊಂಡುಬಂದು ಆತನ ಮುಂದೆ ಕಾಣಿಸಿಕೊಳ್ಳಲೋ? ಸಾವಿರಾರು ಟಗರುಗಳನ್ನೂ ಲಕ್ಷೋಪಲಕ್ಷ ತೈಲಪ್ರವಾಹಗಳನ್ನೂ ನೋಡಿ ಯೆಹೋವನು ಮೆಚ್ಚಾನೇ? ನನ್ನ ದ್ರೋಹದ ನಿಮಿತ್ತ ನನ್ನ ಚೊಚ್ಚಲಮಗನನ್ನು ಅರ್ಪಿಸಲೋ, ನನ್ನ ಆತ್ಮದ ಪಾಪಕ್ಕಾಗಿ ನನ್ನ ಗರ್ಭದ ಫಲವನ್ನು ಸಲ್ಲಿಸಲೋ?” ಇಲ್ಲ, “ಸಾವಿರಾರು ಟಗರುಗಳನ್ನೂ ಲಕ್ಷೋಪಲಕ್ಷ ತೈಲಪ್ರವಾಹಗಳನ್ನೂ ನೋಡಿ ಯೆಹೋವನು” ಮೆಚ್ಚನು. ಆದರೆ ಆತನನ್ನು ಮೆಚ್ಚಿಸುವ ಒಂದು ವಿಷಯವಿದೆ. ಅದು ಯಾವುದು?

ನಾವು ನ್ಯಾಯವನ್ನು ಆಚರಿಸಬೇಕು

6. ಮೀಕ 6:8ರಲ್ಲಿ ದೇವರು ಅಪೇಕ್ಷಿಸುವ ಯಾವ ಮೂರು ವಿಷಯಗಳು ಕೊಡಲ್ಪಟ್ಟಿವೆ?

6ಮೀಕ 6:8ರಲ್ಲಿ, ಯೆಹೋವನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ ಎಂಬುದರ ಕುರಿತು ನಾವು ತಿಳಿದುಕೊಳ್ಳುತ್ತೇವೆ. ಮೀಕನು ಕೇಳುವುದು: “ನ್ಯಾಯವನ್ನು ಆಚರಿಸುವದು, ದಯೆಯನ್ನು ಪ್ರೀತಿಸುವುದು ಮತ್ತು ದೇವರೊಂದಿಗೆ ವಿನಯಶೀಲನಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?” (NW) ಆತನು ಅಪೇಕ್ಷಿಸುವಂಥ ಈ ಮೂರು ವಿಷಯಗಳಲ್ಲಿ ನಮ್ಮ ಭಾವನೆ, ಯೋಚನೆ, ಮತ್ತು ವರ್ತನೆಯು ಒಳಗೂಡಿದೆ. ಈ ಗುಣಗಳನ್ನು ತೋರಿಸಬೇಕೆಂಬ ಭಾವನೆಯು ನಮ್ಮಲ್ಲಿ ಮೂಡಿಬರಬೇಕು, ಇವುಗಳನ್ನು ಹೇಗೆ ವ್ಯಕ್ತಪಡಿಸುವುದು ಎಂಬುದರ ಕುರಿತು ನಾವು ಯೋಚಿಸಬೇಕು, ಮತ್ತು ಇವುಗಳನ್ನು ಪ್ರದರ್ಶಿಸಲು ಕ್ರಿಯೆಗೈಯಬೇಕು. ಈ ಮೂರು ವಿಷಯಗಳನ್ನು ನಾವು ಒಂದೊಂದಾಗಿ ಪರಿಗಣಿಸೋಣ.

7, 8. (ಎ) “ನ್ಯಾಯವನ್ನು ಆಚರಿಸುವದು” ಎಂಬುದರ ಅರ್ಥವೇನು? (ಬಿ) ಯಾವ ಅನ್ಯಾಯಗಳು ಮೀಕನ ದಿನದಲ್ಲಿ ಎಲ್ಲೆಡೆಯೂ ಹಬ್ಬಿಕೊಂಡಿದ್ದವು?

7 “ನ್ಯಾಯವನ್ನು ಆಚರಿಸುವದು” ಎಂದರೆ ಸರಿಯಾಗಿರುವುದನ್ನು ಮಾಡುವುದು ಎಂದರ್ಥ. ದೇವರು ಕೆಲಸಗಳನ್ನು ಮಾಡುವ ರೀತಿಯು ನ್ಯಾಯದ ಮಟ್ಟವಾಗಿದೆ. ಆದರೆ ಮೀಕನ ಸಮಕಾಲೀನರು ನ್ಯಾಯವನ್ನಲ್ಲ, ಅನ್ಯಾಯವನ್ನು ಆಚರಿಸುತ್ತಾರೆ. ಯಾವ ವಿಧಗಳಲ್ಲಿ? ಮೀಕ 6:10ನ್ನು ಪರಿಗಣಿಸಿ. ಆ ವಚನದ ಅಂತ್ಯದಲ್ಲಿ, ವ್ಯಾಪಾರಿಗಳು “ಅಸಹ್ಯಕರವಾದ ಕಿರಿಯಳತೆ”ಯನ್ನು, ಅಂದರೆ ತೀರ ಕಡಮೆ ಅಳತೆಯನ್ನು ಉಪಯೋಗಿಸುತ್ತಾರೆಂದು ವರ್ಣಿಸಲಾಗಿದೆ. ಅವರು “ಮೋಸದ ಕಲ್ಲಿನ ಚೀಲ”ವನ್ನು ಬಳಸುತ್ತಾರೆಂದು ವಚನ 11 ತಿಳಿಸುತ್ತದೆ. ಮತ್ತು 12ನೆಯ ವಚನಕ್ಕನುಸಾರ, “ಅವರ ಬಾಯನಾಲಿಗೆಯು ಮೋಸಕರ.” ಹೀಗೆ, ಮೀಕನ ದಿನಗಳ ವಾಣಿಜ್ಯಲೋಕದಲ್ಲಿ ಕಳ್ಳಳತೆ, ಕಳ್ಳತಕ್ಕಡಿ ಮತ್ತು ಮೋಸದ ಮಾತುಗಳು ಎಲ್ಲೆಡೆಯೂ ಹಬ್ಬಿಕೊಂಡಿದ್ದವು.

8 ಈ ಅನ್ಯಾಯಾಚಾರಗಳು ಮಾರುಕಟ್ಟೆಯಲ್ಲಿ ಮಾತ್ರವಲ್ಲ, ನ್ಯಾಯಾಲಯದಲ್ಲಿಯೂ ಸಾಮಾನ್ಯವಾಗಿತ್ತು. “ಪ್ರಭುವು [ಧನವನ್ನು] ಕೇಳುತ್ತಾನೆ, ನ್ಯಾಯಾಧಿಪತಿಯು ಲಂಚಕ್ಕೆ [ಕೈಯೊಡ್ಡುತ್ತಾನೆ],” ಎನ್ನುತ್ತದೆ ಮೀಕ 7:3. ನಿರಪರಾಧಿಗಳ ಮೇಲೆ ಅನ್ಯಾಯವಾಗಿ ಶಿಕ್ಷೆ ವಿಧಿಸುವಂತೆ ನ್ಯಾಯಾಧೀಶರಿಗೆ ಲಂಚವನ್ನು ಕೊಡಲಾಗುತ್ತಿತ್ತು. “ದೊಡ್ಡ ಮನುಷ್ಯನು” ಅಥವಾ ವರ್ಚಸ್ಸುಳ್ಳ ನಾಗರಿಕನು ಈ ಪಾತಕಗಳಲ್ಲಿ ಸೇರಿಕೊಳ್ಳುತ್ತಿದ್ದನು. ವಾಸ್ತವದಲ್ಲಿ, ಪ್ರಭು, ನ್ಯಾಯಾಧಿಪತಿ ಮತ್ತು ದೊಡ್ಡ ಮನುಷ್ಯ ಮುಂತಾದವರು ದುಷ್ಕಾರ್ಯಗಳನ್ನು “ಹೆಣೆಯುತ್ತಾರೆ” ಅಥವಾ ಸಂಘಟಿಸುತ್ತಾರೆಂದು ಮೀಕನು ಹೇಳುತ್ತಾನೆ.

9. ದುಷ್ಟರಿಂದ ಮಾಡಲ್ಪಡುತ್ತಿರುವ ಅನ್ಯಾಯಗಳು ಯೆಹೂದ ಮತ್ತು ಇಸ್ರಾಯೇಲನ್ನು ಹೇಗೆ ಬಾಧಿಸಿವೆ?

9 ದುಷ್ಟ ಮುಖಂಡರು ಮಾಡುತ್ತಿದ್ದ ಅನ್ಯಾಯಗಳು ಇಡೀ ಯೆಹೂದ ಮತ್ತು ಇಸ್ರಾಯೇಲನ್ನು ಬಾಧಿಸುತ್ತವೆ. ನ್ಯಾಯದ ಕೊರತೆಯು ಮಿತ್ರರ, ಆಪ್ತರ ಮತ್ತು ವಿವಾಹಸಂಗಾತಿಗಳ ನಡುವೆ ಭರವಸೆಯ ಕೊರತೆಗೂ ನಡೆಸಿದೆಯೆಂದು ಮೀಕ 7:5 ಹೇಳುತ್ತದೆ. ಇಂಥ ಪರಿಸ್ಥಿಯು, ತಂದೆ ಮತ್ತು ಗಂಡುಮಕ್ಕಳು, ತಾಯಿ ಮತ್ತು ಹೆಣ್ಣುಮಕ್ಕಳಷ್ಟು ಹತ್ತಿರದ ಸಂಬಂಧಿಗಳೂ ಪರಸ್ಪರರನ್ನು ತುಚ್ಛೀಕರಿಸುವಷ್ಟರ ಮಟ್ಟಿಗೆ ನಡೆಸಿದೆಯೆಂದು 6ನೆಯ ವಚನವು ಸೂಚಿಸುತ್ತದೆ.

10. ಇಂದಿನ ಅನ್ಯಾಯ ತುಂಬಿರುವ ವಾತಾವರಣದಲ್ಲಿ, ಕ್ರೈಸ್ತರು ಹೇಗೆ ನಡೆದುಕೊಳ್ಳುತ್ತಾರೆ?

10 ಹಾಗಾದರೆ ಇಂದಿನ ಕುರಿತಾಗಿ ಏನು? ನಾವು ತದ್ರೀತಿಯ ಪರಿಸ್ಥಿತಿಗಳನ್ನು ನೋಡುವುದಿಲ್ಲವೊ? ಮೀಕನಂತೆ, ನಾವು ನ್ಯಾಯದ ಕೊರತೆ, ಸಂಶಯದ ವಾತಾವರಣ ಮತ್ತು ಸಾಮಾಜಿಕ ಹಾಗೂ ಕುಟುಂಬ ಜೀವನದ ಕುಸಿತದಂಥ ಪರಿಸ್ಥಿತಿಗಳಿಂದ ಸುತ್ತುವರಿಯಲ್ಪಟ್ಟಿದ್ದೇವೆ. ಆದರೂ, ಈ ಅನೀತಿಯ ಪ್ರಪಂಚದ ಮಧ್ಯೆ ಜೀವಿಸುತ್ತಿರುವ ದೇವರ ಸೇವಕರೋಪಾದಿ, ನಾವು ಲೋಕದ ಅನ್ಯಾಯದ ವ್ಯವಹಾರಗಳ ಮನೋಭಾವವು ಕ್ರೈಸ್ತ ಸಭೆಯೊಳಗೆ ನುಸುಳುವಂತೆ ಬಿಡುವುದಿಲ್ಲ. ಅದಕ್ಕೆ ಬದಲಾಗಿ, ನಾವು ಪ್ರಾಮಾಣಿಕತೆ ಮತ್ತು ಸಮಗ್ರತೆಯ ಮೂಲತತ್ತ್ವಗಳನ್ನು ಎತ್ತಿಹಿಡಿಯಲು ಶತಪ್ರಯತ್ನವನ್ನು ಮಾಡುತ್ತಾ, ಇವನ್ನು ನಮ್ಮ ದೈನಂದಿನ ಜೀವಿತದ ವ್ಯವಹಾರಗಳಲ್ಲಿ ತೋರಿಸುತ್ತೇವೆ. ವಾಸ್ತವದಲ್ಲಿ, ನಾವು “ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ ನಡೆದು”ಕೊಳ್ಳುತ್ತೇವೆ. (ಇಬ್ರಿಯ 13:18) ನ್ಯಾಯವನ್ನು ಆಚರಿಸುವುದರಿಂದಲೇ, ನಿಜವಾದ ಭರವಸೆಯನ್ನು ವ್ಯಕ್ತಪಡಿಸುವ ಒಂದು ಸಹೋದರತ್ವದಿಂದ ಬರುವ ಹೇರಳವಾದ ಆಶೀರ್ವಾದಗಳನ್ನು ನಾವು ಅನುಭವಿಸುತ್ತೇವೆಂಬುದನ್ನು ನೀವು ಒಪ್ಪುವುದಿಲ್ಲವೊ?

ಜನರು ‘ಯೆಹೋವನ ದನಿ’ಯನ್ನು ಕೇಳಿಸಿಕೊಳ್ಳುವುದು ಹೇಗೆ?

11. ಮೀಕ 7:12 ಹೇಗೆ ನೆರವೇರುತ್ತಿದೆ?

11 ಆಗ ಅನ್ಯಾಯದ ಪರಿಸ್ಥಿತಿಗಳಿದ್ದರೂ, ನ್ಯಾಯವು ಎಲ್ಲಾ ರೀತಿಯ ಜನರನ್ನು ತಲಪಲಿಕ್ಕಿದೆಯೆಂದು ಮೀಕನು ಪ್ರವಾದಿಸಿದನು. ಯೆಹೋವನ ಆರಾಧಕರಾಗುವಂತೆ ಜನರನ್ನು “ಸಮುದ್ರದಿಂದ ಸಮುದ್ರದ ವರೆಗೆ, ಪರ್ವತದಿಂದ ಪರ್ವತದ ವರೆಗೆ” ಕೂಡಿಸಲಾಗುವುದು ಎಂದು ಪ್ರವಾದಿಯು ಮುಂತಿಳಿಸುತ್ತಾನೆ. (ಮೀಕ 7:12) ಇಂದು, ಈ ಪ್ರವಾದನೆಯ ಅಂತಿಮ ನೆರವೇರಿಕೆಯಲ್ಲಿ, ಕೇವಲ ಒಂದು ಪ್ರತ್ಯೇಕ ಜನಾಂಗವಲ್ಲ, ಬದಲಾಗಿ ಸಕಲ ಜನಾಂಗಗಳ ವ್ಯಕ್ತಿಗಳು ದೇವರ ನಿಷ್ಪಕ್ಷಪಾತ ನ್ಯಾಯದ ಪ್ರಯೋಜನವನ್ನು ಪಡೆಯುತ್ತಿದ್ದಾರೆ. (ಯೆಶಾಯ 42:1) ಇದು ಸತ್ಯವಾಗಿ ರುಜುವಾಗುತ್ತಿರುವುದು ಹೇಗೆ?

12. ಇಂದು ‘ಯೆಹೋವನ ದನಿ’ ಕೇಳಿಬರುವುದು ಹೇಗೆ?

12 ಉತ್ತರವನ್ನು ಪಡೆದುಕೊಳ್ಳಲಿಕ್ಕಾಗಿ, ಮೀಕನ ಹಿಂದಿನ ಮಾತುಗಳನ್ನು ಪರಿಗಣಿಸಿರಿ. ಮೀಕ 6:9 ತಿಳಿಸುವುದು: ‘ಯೆಹೋವನು ದನಿಗೈದು ಪಟ್ಟಣದ ಕಡೆಗೆ ಕೂಗುತ್ತಾನೆ; ಸುಜ್ಞಾನವುಳ್ಳವರು ನಿನ್ನ ನಾಮದಲ್ಲಿ ಭಯಭಕ್ತಿಯಿಡುವರು.’ ಎಲ್ಲಾ ಜನಾಂಗಗಳ ಜನರು ‘ಯೆಹೋವನ ದನಿ’ಯನ್ನು ಕೇಳಿಸಿಕೊಳ್ಳುವುದು ಹೇಗೆ, ಮತ್ತು ಇದು ನಾವು ನ್ಯಾಯವನ್ನು ಆಚರಿಸುವುದಕ್ಕೆ ಹೇಗೆ ಸಂಬಂಧಿಸಿದೆ? ಜನರು ಅಕ್ಷರಾರ್ಥದಲ್ಲಿ ದೇವರ ಧ್ವನಿಯನ್ನು ಕೇಳಿಸಿಕೊಳ್ಳುವುದಿಲ್ಲ ನಿಜ. ಆದರೆ, ನಮ್ಮ ಲೋಕವ್ಯಾಪಕ ಸಾರುವ ಕಾರ್ಯದ ಮೂಲಕ, ಯೆಹೋವನ ಧ್ವನಿಯು ಎಲ್ಲಾ ಕುಲಗಳ ಮತ್ತು ಅಂತಸ್ತಿನ ಜನರಿಗೆ ಕೇಳಿಸಿಕೊಳ್ಳುತ್ತದೆ. ಇದರ ಫಲಿತಾಂಶವಾಗಿ, ಅದಕ್ಕೆ ಕಿವಿಗೊಡುವವರು “[ದೇವರ] ನಾಮದಲ್ಲಿ ಭಯಭಕ್ತಿ”ಯಿಡುತ್ತಾರೆ, ಅಂದರೆ ಅದಕ್ಕಾಗಿ ಪೂಜ್ಯಭಾವದ ಪರಿಗಣನೆಯನ್ನು ಹೊಂದಿದವರಾಗುತ್ತಾರೆ. ಹುರುಪಿನ ರಾಜ್ಯ ಘೋಷಕರೋಪಾದಿ ಸೇವೆ ಸಲ್ಲಿಸುವ ಮೂಲಕ ನಾವು ನಿಶ್ಚಯವಾಗಿಯೂ ನ್ಯಾಯ ಮತ್ತು ಪ್ರೀತಿಯಿಂದ ವರ್ತಿಸುತ್ತಿದ್ದೇವೆ. ಪಕ್ಷಪಾತವಿಲ್ಲದೆ ದೇವರ ಹೆಸರನ್ನು ಎಲ್ಲರಿಗೂ ತಿಳಿಯಪಡಿಸುವ ಮೂಲಕ ನಾವು ‘ನ್ಯಾಯವನ್ನು ಆಚರಿಸುತ್ತೇವೆ.’

ನಾವು ದಯೆಯನ್ನು ಪ್ರೀತಿಸಬೇಕು

13. ಪ್ರೀತಿಪೂರ್ವಕ ದಯೆ ಮತ್ತು ಪ್ರೀತಿಯ ಮಧ್ಯೆ ಯಾವ ಭಿನ್ನತೆಯಿದೆ?

13 ನಾವು ಈಗ, ಮೀಕ 6:8ರಲ್ಲಿ ಅಪೇಕ್ಷಿಸಲ್ಪಡುವ ಎರಡನೆಯ ವಿಷಯವನ್ನು ಚರ್ಚಿಸೋಣ. ನಾವು ‘ದಯೆಯನ್ನು ಪ್ರೀತಿಸಬೇಕೆಂದು’ ಯೆಹೋವನು ಅಪೇಕ್ಷಿಸುತ್ತಾನೆ. “ದಯೆ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದವನ್ನು “ಪ್ರೀತಿಪೂರ್ವಕ ದಯೆ” ಅಥವಾ “ನಿಷ್ಠೆಯುಳ್ಳ ಪ್ರೀತಿ” ಎಂದೂ ಭಾಷಾಂತರಿಸಲಾಗುತ್ತದೆ. ಪ್ರೀತಿಪೂರ್ವಕ ದಯೆಯು, ಇತರರಿಗಾಗಿರುವ ಕ್ರಿಯಾಶೀಲ ಪರಿಗಣನೆ ಮತ್ತು ಕರುಣಾಭರಿತ ಚಿಂತೆಯಾಗಿದೆ. ಪ್ರೀತಿಪೂರ್ವಕ ದಯೆಯು ಪ್ರೀತಿಯೆಂಬ ಗುಣದಿಂದ ಭಿನ್ನವಾಗಿದೆ. ಅದು ಹೇಗೆ? ಪ್ರೀತಿ ಎಂಬುದು ವಿಶಾಲಾರ್ಥವಿರುವ ಪದವಾಗಿದೆ, ಮತ್ತು ಇದನ್ನು ವಸ್ತುಗಳಿಗೂ ಕಲ್ಪನಾ ವಿಷಯಗಳಿಗೂ ತೋರಿಸಬಹುದು. ಉದಾಹರಣೆಗೆ, “ದ್ರಾಕ್ಷಾರಸವನ್ನೂ ತೈಲವನ್ನೂ ಪ್ರೀತಿಸುವ” ಮತ್ತು “ಜ್ಞಾನವನ್ನು ಪ್ರೀತಿಸುವ” ಮನುಷ್ಯನ ಕುರಿತಾಗಿ ಶಾಸ್ತ್ರವಚನವು ತಿಳಿಸುತ್ತದೆ. (ಜ್ಞಾನೋಕ್ತಿ 21:17; 29:3, ಪರಿಶುದ್ಧ ಬೈಬಲ್‌ *) ಆದರೆ ‘ಪ್ರೀತಿಪೂರ್ವಕ ದಯೆ’ ಯಾವಾಗಲೂ ಜನರಿಗೆ, ವಿಶೇಷವಾಗಿ ದೇವರನ್ನು ಸೇವಿಸುವವರಿಗೆ ತೋರಿಸಲ್ಪಡುತ್ತದೆ. ಆದುದರಿಂದಲೇ, ಮೀಕ 7:​20 (NW), ಯೆಹೋವ ದೇವರನ್ನು ಸೇವಿಸಿದ “ಅಬ್ರಹಾಮನಿಗೆ ಕೊಡಲ್ಪಟ್ಟ ಪ್ರೀತಿಪೂರ್ವಕ ದಯೆ”ಯ ಕುರಿತು ಮಾತಾಡುತ್ತದೆ.

14, 15. ಪ್ರೀತಿಪೂರ್ವಕ ದಯೆಯನ್ನು ಹೇಗೆ ತೋರಿಸಲಾಗುತ್ತದೆ, ಮತ್ತು ಇದರ ಯಾವ ರುಜುವಾತು ಉದ್ಧರಿಸಲ್ಪಟ್ಟಿದೆ?

14ಮೀಕ 7:18ಕ್ಕನುಸಾರ, ದೇವರು “ಪ್ರೀತಿಪೂರ್ವಕ ದಯೆಯಲ್ಲಿ ಹರ್ಷಿಸುತ್ತಾನೆ” (NW) ಎಂದು ಪ್ರವಾದಿಯು ಹೇಳುತ್ತಾನೆ. ಮೀಕ 6:8ರಲ್ಲಿ, ನಾವು ಪ್ರೀತಿಪೂರ್ವಕ ದಯೆಯನ್ನು ಕೇವಲ ತೋರಿಸಬೇಕು ಎಂದು ಹೇಳಲ್ಪಟ್ಟಿಲ್ಲ, ಬದಲಾಗಿ ಆ ಗುಣವನ್ನು ಪ್ರೀತಿಸಬೇಕು ಎಂದು ಹೇಳಲಾಗಿದೆ. ನಾವು ಈ ವಚನಗಳಿಂದ ಏನನ್ನು ಕಲಿಯುತ್ತೇವೆ? ಪ್ರೀತಿಪೂರ್ವಕ ದಯೆಯು ಇಷ್ಟಪೂರ್ವಕವಾಗಿಯೂ ಧಾರಾಳವಾಗಿಯೂ ತೋರಿಸಲ್ಪಡುತ್ತದೆ, ಏಕೆಂದರೆ ನಾವು ಸ್ವತಃ ಅದನ್ನು ತೋರಿಸಲು ಬಯಸುತ್ತೇವೆ. ಯೆಹೋವನಂತೆಯೇ, ಈ ಪ್ರೀತಿಪೂರ್ವಕ ದಯೆಯನ್ನು ಅಗತ್ಯವಿರುವವರಿಗೆ ತೋರಿಸುವುದರಲ್ಲಿ ನಾವು ಸಂತೋಷವನ್ನು ಅಥವಾ ಹರ್ಷವನ್ನು ಪಡೆಯುತ್ತೇವೆ.

15 ಇಂದು, ಇಂತಹ ಪ್ರೀತಿಪೂರ್ವಕ ದಯೆಯು ದೇವಜನರ ಒಂದು ಗುರುತಾಗಿದೆ. ಕೇವಲ ಒಂದು ದೃಷ್ಟಾಂತವನ್ನು ಪರಿಗಣಿಸಿರಿ. 2001ರ ಜೂನ್‌ ತಿಂಗಳಿನಲ್ಲಿ, ಅಮೆರಿಕದ ಟೆಕ್ಸಸ್‌ನಲ್ಲಿ, ಉಷ್ಣವಲಯದ ಚಂಡಮಾರುತವೊಂದು ಭಯಂಕರ ನೆರೆಹಾವಳಿಯನ್ನು ಉಂಟುಮಾಡಿ, ಯೆಹೋವನ ಸಾಕ್ಷಿಗಳ ನೂರಾರು ಮನೆಗಳೊಂದಿಗೆ ಇತರ ಸಾವಿರಾರು ಮನೆಗಳನ್ನೂ ಹಾಳುಮಾಡಿತು. ಅಗತ್ಯದಲ್ಲಿದ್ದ ತಮ್ಮ ಕ್ರೈಸ್ತ ಸಹೋದರರ ಸಹಾಯಕ್ಕಾಗಿ, ಸುಮಾರು 10,000 ಮಂದಿ ಸಾಕ್ಷಿಗಳು ತಮ್ಮ ಸಮಯವನ್ನೂ ಶಕ್ತಿಯನ್ನೂ ಇಷ್ಟಪೂರ್ವಕವಾಗಿಯೂ ಧಾರಾಳವಾಗಿಯೂ ನೀಡಿದರು. ಸುಮಾರು ಅರ್ಧವರ್ಷಕ್ಕೂ ಹೆಚ್ಚುಕಾಲ, ಸ್ವಯಂಸೇವಕರು ದಿನಗಳನ್ನು, ರಾತ್ರಿಗಳನ್ನು ಮತ್ತು ವಾರಾಂತ್ಯಗಳನ್ನು ಉಪಯೋಗಿಸುತ್ತಾ ಬಳಲಿಹೋಗದೆ, 8 ರಾಜ್ಯ ಸಭಾಗೃಹಗಳನ್ನೂ ತಮ್ಮ ಕ್ರೈಸ್ತ ಸಹೋದರರಿಗಾಗಿ 700 ಮನೆಗಳನ್ನೂ ಪುನರ್ನಿರ್ಮಿಸಿದರು. ಅಂಥ ಕೆಲಸವನ್ನು ಮಾಡಲಾಗದಿದ್ದವರು ಆಹಾರ, ಆವಶ್ಯಕ ಸರಬರಾಜು ಮತ್ತು ಹಣವನ್ನು ದಾನ ಮಾಡಿದರು. ಈ ಸಾವಿರಾರು ಮಂದಿ ಸಾಕ್ಷಿಗಳು ತಮ್ಮ ಸಹೋದರರ ಸಹಾಯಕ್ಕಾಗಿ ಬಂದದ್ದೇಕೆ? ಏಕೆಂದರೆ ಅವರು “ದಯೆಯನ್ನು ಪ್ರೀತಿಸು”ತ್ತಿರುವುದರಿಂದಲೇ. ಮತ್ತು ಇಂತಹ ಪ್ರೀತಿಪೂರ್ವಕ ದಯೆಯ ಕೃತ್ಯಗಳು ಲೋಕವ್ಯಾಪಕವಾಗಿ ನಮ್ಮ ಸಹೋದರರಿಂದ ಮಾಡಲ್ಪಡುತ್ತಿದೆಯೆಂಬುದನ್ನು ತಿಳಿಯುವುದು ಅದೆಷ್ಟು ಹೃದಯೋತ್ತೇಜಕವಾಗಿದೆ! ಹೌದು, ‘ದಯೆಯನ್ನು ಪ್ರೀತಿಸಬೇಕು’ ಎಂದು ಅಪೇಕ್ಷಿಸಲ್ಪಡುವುದು ಒಂದು ಹೊರೆಯಲ್ಲ, ಬದಲಾಗಿ ಆನಂದದ ವಿಷಯವಾಗಿದೆ!

ದೇವರೊಂದಿಗೆ ನಡೆದುಕೊಳ್ಳುವುದರಲ್ಲಿ ವಿನಯಶೀಲರಾಗಿರಿ

16. ದೇವರೊಂದಿಗೆ ನಡೆಯುವುದರಲ್ಲಿ ವಿನಯಶೀಲರಾಗಿರಬೇಕೆಂಬ ಅಗತ್ಯವನ್ನು ಒತ್ತಿಹೇಳಲು ಯಾವ ದೃಷ್ಟಾಂತವು ಸಹಾಯಮಾಡುತ್ತದೆ?

16ಮೀಕ 6:8ರಲ್ಲಿ ಕಂಡುಬರುವ ಮೂರನೆಯದಾಗಿ ಅಪೇಕ್ಷಿಸಲ್ಪಡುವ ವಿಷಯವು, “ನಿನ್ನ ದೇವರೊಂದಿಗೆ ವಿನಯಶೀಲನಾಗಿ ನಡೆದುಕೊಳ್ಳುವದು” ಎಂದಾಗಿದೆ. ನಮ್ಮ ಇತಿಮಿತಿಗಳನ್ನು ನಾವು ಒಪ್ಪಿಕೊಂಡು ದೇವರ ಮೇಲೆ ಹೊಂದಿಕೊಳ್ಳಬೇಕೆಂಬುದೇ ಇದರರ್ಥ. ದೃಷ್ಟಾಂತಕ್ಕಾಗಿ, ಬಿರುಗಾಳಿಯ ಸಮಯದಲ್ಲಿ ಚಿಕ್ಕ ಹುಡುಗಿಯೊಬ್ಬಳು ತನ್ನ ತಂದೆಯ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ನಡೆಯುತ್ತಿರುವುದನ್ನು ಒಂದು ಕ್ಷಣ ಚಿತ್ರಿಸಿಕೊಳ್ಳಿ. ತನಗಿರುವ ಬಲವು ಸೀಮಿತವೆಂಬುದು ಆ ಹುಡುಗಿಗೆ ಚೆನ್ನಾಗಿ ತಿಳಿದಿದೆ, ಆದರೆ ಆಕೆಗೆ ತನ್ನ ತಂದೆಯ ಮೇಲೆ ಭರವಸೆಯಿದೆ. ನಮಗೂ ನಮ್ಮ ಇತಿಮಿತಿಗಳ ಅರಿವಿರಬೇಕು, ಆದರೆ ನಮ್ಮ ಸ್ವರ್ಗೀಯ ತಂದೆಯಲ್ಲಿ ನಾವು ಭರವಸೆಯುಳ್ಳವರಾಗಿರಬೇಕು. ಈ ಭರವಸೆಯನ್ನು ನಾವು ಹೇಗೆ ಕಾಪಾಡಿಕೊಳ್ಳಬಲ್ಲೆವು? ಒಂದು ವಿಧವು, ಯೆಹೋವನಿಗೆ ನಿಕಟವಾಗಿ ಉಳಿಯುವುದು ಏಕೆ ವಿವೇಕಪೂರ್ಣವಾಗಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಮೂಲಕವೇ. ಇದಕ್ಕೆ ಮೂರು ಕಾರಣಗಳನ್ನು ಮೀಕನು ನಮ್ಮ ಜ್ಞಾಪಕಕ್ಕೆ ತರುತ್ತಾನೆ: ಯೆಹೋವನು ನಮ್ಮ ವಿಮೋಚಕ, ಮಾರ್ಗದರ್ಶಕ ಮತ್ತು ಸಂರಕ್ಷಕನಾಗಿದ್ದಾನೆ.

17. ಪ್ರಾಚೀನ ಕಾಲದ ತನ್ನ ಜನರನ್ನು ಯೆಹೋವನು ವಿಮೋಚಿಸಿದ್ದು, ಮಾರ್ಗದರ್ಶಿಸಿದ್ದು, ಮತ್ತು ಸಂರಕ್ಷಿಸಿದ್ದು ಹೇಗೆ?

17ಮೀಕ 6:​4, 5ಕ್ಕನುಸಾರ, ದೇವರು ಹೇಳುವುದು: “ನಾನು ನಿನ್ನನ್ನು ಐಗುಪ್ತದೇಶದೊಳಗಿಂದ ಪಾರುಮಾಡಿ ದಾಸತ್ವದಿಂದ ಬಿಡಿಸಿದೆನು.” ಹೌದು, ಯೆಹೋವನು ಇಸ್ರಾಯೇಲಿನ ವಿಮೋಚಕನಾಗಿದ್ದನು. ಯೆಹೋವನು ಇನ್ನೂ ಹೇಳುವುದು: “ಮೋಶೆಯನ್ನೂ ಆರೋನನನ್ನೂ ಮಿರ್ಯಾಮಳನ್ನೂ ನಿನಗೆ ನಾಯಕರನ್ನಾಗಿ ಕಳುಹಿಸಿದೆನು.” ಮೋಶೆ ಮತ್ತು ಆರೋನರು ಆ ಜನಾಂಗಕ್ಕೆ ಮಾರ್ಗದರ್ಶನ ಮಾಡಿದರು. ಮತ್ತು ಮಿರ್ಯಾಮಳು ಇಸ್ರಾಯೇಲಿನ ಸ್ತ್ರೀಯರನ್ನು ಒಂದು ವಿಜಯನೃತ್ಯದಲ್ಲಿ ನಡೆಸಿದಳು. (ವಿಮೋಚನಕಾಂಡ 7:1, 2; 15:1, 19-21; ಧರ್ಮೋಪದೇಶಕಾಂಡ 34:10) ಯೆಹೋವನು ತನ್ನ ಸೇವಕರ ಮುಖಾಂತರ ಮಾರ್ಗದರ್ಶನವನ್ನು ನೀಡಿದನು. 5ನೆಯ ವಚನದಲ್ಲಿ, ಯೆಹೋವನು ಇಸ್ರಾಯೇಲ್‌ ಜನಾಂಗವನ್ನು ಬಾಲಾಕ ಮತ್ತು ಬಿಳಾಮರಿಂದ ಸಂರಕ್ಷಿಸಿದ್ದನ್ನು ಮತ್ತು ಮೋವಾಬಿನ ಶಿಟ್ಟೀಮ್‌ನಿಂದ ವಾಗ್ದತ್ತ ದೇಶದ ಗಿಲ್ಗಾಲ್‌ಗೆ ಅವರು ಮಾಡಿದ ಪ್ರಯಾಣದ ಕೊನೆಯ ಭಾಗದಲ್ಲಿ ಅವರನ್ನು ಸಂರಕ್ಷಿಸಿದ ವಿಧವನ್ನು ಅವರಿಗೆ ಜ್ಞಾಪಿಸುತ್ತಾನೆ.

18. ದೇವರು ಇಂದು ನಮ್ಮ ವಿಮೋಚನಕಾಗಿ, ಮಾರ್ಗದರ್ಶಕನಾಗಿ, ಮತ್ತು ಸಂರಕ್ಷಕನಾಗಿ ಇರುವುದು ಹೇಗೆ?

18 ನಾವು ದೇವರೊಂದಿಗೆ ನಡೆಯುತ್ತಿರುವಾಗ, ಆತನು ನಮ್ಮನ್ನು ಸೈತಾನನ ಲೋಕದಿಂದ ವಿಮೋಚಿಸಿ, ಆತನ ಸಂಸ್ಥೆಯ ಮೂಲಕ ನಮ್ಮನ್ನು ಮಾರ್ಗದರ್ಶಿಸಿ, ವಿರೋಧಿಗಳ ದಾಳಿಗೆ ನಾವು ಒಳಗಾದಾಗ ನಮ್ಮನ್ನು ಒಂದು ಗುಂಪಿನೋಪಾದಿ ಸಂರಕ್ಷಿಸುತ್ತಾನೆ. ಆದಕಾರಣ, ಪುರಾತನ ಕಾಲದ ವಾಗ್ದತ್ತ ದೇಶಕ್ಕಿಂತಲೂ ಎಷ್ಟೋ ಶ್ರೇಷ್ಠವಾಗಿರುವ ದೇವರ ನೀತಿಯ ನೂತನ ಲೋಕದ ಕಡೆಗೆ ನಾವು ಮಾಡುತ್ತಿರುವ ಪಯಣದ, ಈ ಸಂಕ್ಷೋಭೆಯ ಕೊನೆಯ ಭಾಗದಲ್ಲಿ ನಾವು ಆತನೊಂದಿಗೆ ನಡೆಯುತ್ತಿರುವಾಗ ನಮ್ಮ ಸ್ವರ್ಗೀಯ ಪಿತನ ಕೈಯನ್ನು ಬಿಗಿಯಾಗಿ ಹಿಡಿದುಕೊಳ್ಳಲು ನಮಗೆ ಸಕಲ ಕಾರಣಗಳೂ ಇವೆ.

19. ವಿನಯಶೀಲತೆಯು ನಮ್ಮ ಇತಿಮಿತಿಗಳೊಂದಿಗೆ ಹೇಗೆ ಸಂಬಂಧಿಸಿದೆ?

19 ದೇವರೊಂದಿಗೆ ನಡೆಯುವಾಗ ವಿನಯಶೀಲರಾಗಿರುವುದು, ನಮ್ಮ ಪರಿಸ್ಥಿತಿಗಳ ಕುರಿತು ವಾಸ್ತವಿಕ ನೋಟವುಳ್ಳವರಾಗಿರುವಂತೆಯೂ ನಮಗೆ ಸಹಾಯ ಮಾಡುವುದು. ಇದು ನಿಜವಾಗಿದೆ, ಏಕೆಂದರೆ ವಿನಯಶೀಲತೆಯನ್ನು ತೋರಿಸುವುದರಲ್ಲಿ ನಮ್ಮ ಇತಿಮಿತಿಗಳ ಬಗ್ಗೆ ನಾವು ಅರಿವುಳ್ಳವರಾಗಿರುವುದು ಒಳಗೂಡಿರುತ್ತದೆ. ದೇವರ ಸೇವೆಯಲ್ಲಿ ನಾವು ಏನನ್ನು ಮಾಡಬಹುದೊ ಅದನ್ನು ವೃದ್ಧಾಪ್ಯ ಅಥವಾ ಅನಾರೋಗ್ಯವು ಸೀಮಿತಗೊಳಿಸಬಹುದು. ಆದರೆ ಇದು ನಮ್ಮನ್ನು ನಿರುತ್ಸಾಹಗೊಳಿಸುವಂತೆ ಬಿಡದೆ, ‘ನಮ್ಮಲ್ಲಿ ಇಲ್ಲದ್ದನ್ನು ದೇವರು ಕೇಳಿಕೊಳ್ಳುವುದಿಲ್ಲ, ನಮ್ಮಲ್ಲಿರುವುದಕ್ಕೆ ಅನುಸಾರವಾಗಿ ಕೊಟ್ಟರೆ’ ದೇವರು ನಮ್ಮ ಪ್ರಯತ್ನಗಳನ್ನು ಹಾಗೂ ತ್ಯಾಗಗಳನ್ನು ಮನಃಪೂರ್ವಕವಾಗಿ ಅಂಗೀಕರಿಸುತ್ತಾನೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದು ಒಳ್ಳೆಯದು. (2 ಕೊರಿಂಥ 8:12) ಹೌದು, ನಾವು ಪೂರ್ಣಪ್ರಾಣದ ಸೇವೆಯನ್ನು, ನಮ್ಮ ಪರಿಸ್ಥಿತಿಗಳು ಅನುಮತಿಸುವಷ್ಟನ್ನು ಮಾಡುವಂತೆ ಯೆಹೋವನು ನಿರೀಕ್ಷಿಸುತ್ತಾನೆ. (ಕೊಲೊಸ್ಸೆ 3:23) ನಾವು ದೇವರ ಸೇವೆಯಲ್ಲಿ ಹೃತ್ಪೂರ್ವಕವಾಗಿ ಮತ್ತು ಹುರುಪಿನಿಂದ ನಮ್ಮಿಂದಾದುದೆಲ್ಲವನ್ನೂ ಮಾಡುವಾಗ ಆತನು ನಮ್ಮನ್ನು ಸಮೃದ್ಧವಾಗಿ ಆಶೀರ್ವದಿಸುವನು.​—ಜ್ಞಾನೋಕ್ತಿ 10:22.

ಕಾಯುವ ಮನೋಭಾವವು ಆಶೀರ್ವಾದಗಳನ್ನು ತರುತ್ತದೆ

20. ಯಾವುದರ ಕುರಿತು ತಿಳಿದಿರುವುದು ನಾವು ಮೀಕನಂತೆ ಕಾಯುವ ಮನೋಭಾವವನ್ನು ತೋರಿಸಲು ನಮಗೆ ಸಹಾಯಮಾಡುವುದು?

20 ಯೆಹೋವನ ಆಶೀರ್ವಾದವನ್ನು ಅನುಭವಿಸುವುದು ನಾವು ಮೀಕನ ಆತ್ಮವನ್ನು ಪ್ರದರ್ಶಿಸುವಂತೆ ನಮ್ಮನ್ನು ಪ್ರೇರಿಸುತ್ತದೆ. ಅವನು ಘೋಷಿಸುವುದು: “ನಾನು ನನ್ನ ರಕ್ಷಣೆಯ ದೇವರ ಕಡೆಗೆ ಕಾಯುವ ಮನೋಭಾವವನ್ನು ತೋರಿಸುವೆನು.” (ಮೀಕ 7:​7, NW) ಈ ಮಾತುಗಳು ನಾವು ದೇವರೊಂದಿಗೆ ವಿನಯಶೀಲರಾಗಿ ನಡೆಯುವುದರೊಂದಿಗೆ ಹೇಗೆ ಸಂಬಂಧಿಸುತ್ತವೆ? ಕಾಯುವ ಮನೋಭಾವ ಅಥವಾ ತಾಳ್ಮೆಯುಳ್ಳವರಾಗಿರುವುದು, ಯೆಹೋವನ ದಿನವು ಇನ್ನೂ ಬಂದಿಲ್ಲವೆಂಬ ವಿಷಯದಲ್ಲಿ ನಾವು ನಿರಾಶರಾಗುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. (ಜ್ಞಾನೋಕ್ತಿ 13:12) ನಾವೆಲ್ಲರೂ ಈ ದುಷ್ಟ ಲೋಕದ ಅಂತ್ಯಕ್ಕಾಗಿ ಹಾತೊರೆಯುತ್ತಿದ್ದೇವೆಂಬುದು ಸ್ಪಷ್ಟ. ಆದರೂ, ಪ್ರತಿ ವಾರ ಸಾವಿರಾರು ಜನರು ದೇವರೊಂದಿಗೆ ನಡೆಯಲು ಈಗ ತಾನೇ ಆರಂಭಿಸುತ್ತಿದ್ದಾರೆ. ಇದನ್ನು ತಿಳಿದಿರುವುದು, ನಾವು ಕಾಯುವ ಮನೋಭಾವವನ್ನು ತೋರಿಸಲು ಸಕಾರಣವನ್ನು ಕೊಡುತ್ತದೆ. ಈ ಸಂಬಂಧದಲ್ಲಿ ದೀರ್ಘಸಮಯದಿಂದ ಸಾಕ್ಷಿಯಾಗಿರುವ ಒಬ್ಬರು ಹೇಳಿದ್ದು: “55 ವರ್ಷಕಾಲ ಸಾರುವ ಕಾರ್ಯವನ್ನು ಮಾಡಿದ ನಂತರ, ಯೆಹೋವನನ್ನು ಆಶ್ರಯಿಸಿಕೊಂಡು ಕಾಯುವುದರಿಂದ ನನಗೇನೂ ನಷ್ಟವಾಗಿಲ್ಲ ಎಂದು ನಾನು ನಿಶ್ಚಯತೆಯಿಂದ ಹೇಳಬಲ್ಲೆ. ಅದರ ಬದಲು, ನಾನು ಅನೇಕ ಮನೋವ್ಯಥೆಗಳಿಂದ ತಪ್ಪಿಸಿಕೊಂಡಿದ್ದೇನೆ.” ನಿಮಗೂ ಈ ರೀತಿಯ ಅನುಭವವು ಆಗಿದೆಯೊ?

21, 22. ನಮ್ಮ ದಿನದಲ್ಲಿ ಮೀಕ 7:14 ಹೇಗೆ ನೆರವೇರಿಸಲ್ಪಡುತ್ತಿದೆ?

21 ಯೆಹೋವನೊಂದಿಗೆ ನಡೆಯುವುದು ಖಂಡಿತವಾಗಿಯೂ ನಮಗೆ ಪ್ರಯೋಜನಗಳನ್ನು ತರುತ್ತದೆ. ನಾವು ಮೀಕ 7:14ರಲ್ಲಿ ಓದುವಂತೆ, ಮೀಕನು ದೇವಜನರನ್ನು ತಮ್ಮ ಕುರುಬನೊಂದಿಗೆ ಸುರಕ್ಷಿತವಾಗಿ ವಾಸಿಸುವ ಕುರಿಗಳಿಗೆ ಹೋಲಿಸುತ್ತಾನೆ. ಈ ಪ್ರವಾದನೆಯ ದೊಡ್ಡ ನೆರವೇರಿಕೆಯಲ್ಲಿ, ಇಂದು ಆತ್ಮಿಕ ಇಸ್ರಾಯೇಲಿನ ಉಳಿಕೆಯವರೂ ‘ಬೇರೆ ಕುರಿಗಳೂ’ ತಮ್ಮ ಭರವಸಾರ್ಹ ಕುರುಬನಾದ ಯೆಹೋವನಲ್ಲಿ ಖಂಡಿತವಾಗಿ ಭದ್ರತೆಯನ್ನು ಕಂಡುಕೊಂಡಿದ್ದಾರೆ. ಅವರು “ಫಲವತ್ತಾದ ಭೂಮಿಯ ಮಧ್ಯದಲ್ಲಿನ ಕಾಡಿನೊಳಗೆ ಪ್ರತ್ಯೇಕವಾಗಿ,” ಹೆಚ್ಚೆಚ್ಚು ಸಮಸ್ಯಾತ್ಮಕ ಮತ್ತು ಭೀತಿದಾಯಕ ಲೋಕದಿಂದ ಆತ್ಮಿಕವಾಗಿ ಪ್ರತ್ಯೇಕಿಸಲ್ಪಟ್ಟವರಾಗಿ ವಾಸಿಸುತ್ತಾರೆ.​—ಯೋಹಾನ 10:16; ಧರ್ಮೋಪದೇಶಕಾಂಡ 33:28; ಯೆರೆಮೀಯ 49:31; ಗಲಾತ್ಯ 6:16.

22ಮೀಕ 7:14ರಲ್ಲಿಯೂ ಮುಂತಿಳಿಸಿದಂತೆ, ದೇವಜನರು ಆತ್ಮಿಕ ಸಮೃದ್ಧಿಯನ್ನು ಅನುಭವಿಸುತ್ತಾರೆ. ದೇವರ ಕುರಿಗಳ ಅಥವಾ ಜನರ ವಿಷಯದಲ್ಲಿ ಮಾತಾಡುತ್ತಾ ಮೀಕನು ಹೇಳುವುದು: “ಬಾಷಾನಿನಲ್ಲಿಯೂ ಗಿಲ್ಯಾದಿನಲ್ಲಿಯೂ ಮೇಯಲಿ.” ಕುರಿಗಳು ಬಾಷಾನ್‌ ಮತ್ತು ಗಿಲ್ಯಾದಿನ ಫಲವತ್ತಾದ ಹುಲ್ಲುಗಾವಲಿನಲ್ಲಿ ಮೇಯ್ದು, ಏಳಿಗೆ ಹೊಂದಿದಂತೆಯೇ, ಇಂದು ದೇವಜನರು ಆತ್ಮಿಕ ಸಮೃದ್ಧಿಯನ್ನು ಅನುಭವಿಸುತ್ತಿದ್ದಾರೆ. ಇದು ದೇವರೊಂದಿಗೆ ವಿನಯಶೀಲತೆಯಿಂದ ನಡೆಯುವವರಿಗೆ ದೊರೆಯುವ ಇನ್ನೊಂದು ಆಶೀರ್ವಾದವಾಗಿದೆ.​—ಅರಣ್ಯಕಾಂಡ 32:1; ಧರ್ಮೋಪದೇಶಕಾಂಡ 32:14.

23. ಮೀಕ 7:​18, 19ನ್ನು ಪರಿಗಣಿಸುವುದರಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು?

23ಮೀಕ 7:​18, 19ರಲ್ಲಿ, ಪಶ್ಚಾತ್ತಾಪಪಡುವವರನ್ನು ಕ್ಷಮಿಸಲು ಯೆಹೋವನಿಗಿರುವ ಅಪೇಕ್ಷೆಯನ್ನು ಪ್ರವಾದಿಯು ಎತ್ತಿಹೇಳುತ್ತಾನೆ. ವಚನ 18, ಯೆಹೋವನು “ಅಪರಾಧವನ್ನು ಕ್ಷಮಿಸುವವನೂ” “ದ್ರೋಹವನ್ನು ಲಕ್ಷಿಸದವನೂ” ಆಗಿದ್ದಾನೆಂದು ಹೇಳುತ್ತದೆ. ಮತ್ತು 19ನೆಯ ವಚನಕ್ಕನುಸಾರ, ಆತನು “ಜನರ ಪಾಪಗಳನ್ನೆಲ್ಲಾ ಸಮುದ್ರದ ತಳಕ್ಕೆ ಬಿಸಾಟು”ಬಿಡುತ್ತಾನೆ. ನಾವು ಇದರಿಂದ ಕಲಿಯಬಲ್ಲ ಒಂದು ಪಾಠ ಯಾವುದು? ಈ ವಿಷಯದಲ್ಲಿ ನಾವು ಯೆಹೋವನನ್ನು ಅನುಕರಿಸುತ್ತೇವೊ ಎಂದು ನಮ್ಮನ್ನೇ ಕೇಳಿಕೊಳ್ಳಬಹುದು. ಇತರರು ನಮ್ಮ ವಿರುದ್ಧ ಮಾಡಬಹುದಾದ ತಪ್ಪುಗಳನ್ನು ನಾವು ಕ್ಷಮಿಸುತ್ತೇವೊ? ಅಂಥವರು ಪಶ್ಚಾತ್ತಾಪಪಡುವಾಗ ಮತ್ತು ತಿದ್ದುವಿಕೆಗಳನ್ನು ಮಾಡಲು ಪ್ರಯತ್ನಿಸುವಾಗ, ನಾವು ಪೂರ್ತಿಯಾಗಿಯೂ ಕಾಯಂ ಆಗಿಯೂ ಕ್ಷಮಿಸಲು ಯೆಹೋವನಿಗಿರುವ ಸಿದ್ಧಮನಸ್ಸನ್ನು ಪ್ರತಿಬಿಂಬಿಸಲು ಅಪೇಕ್ಷಿಸಬೇಕು.

24. ಮೀಕನ ಪ್ರವಾದನೆಯಿಂದ ನೀವು ಹೇಗೆ ಪ್ರಯೋಜನವನ್ನು ಪಡೆದುಕೊಂಡಿದ್ದೀರಿ?

24 ಮೀಕನ ಪ್ರವಾದನೆಯ ಕುರಿತಾದ ಈ ಪರಿಗಣನೆಯಿಂದ ನಾವು ಯಾವ ಪ್ರಯೋಜನವನ್ನು ಪಡೆದುಕೊಂಡಿದ್ದೇವೆ? ಯೆಹೋವನು ಆತನೆಡೆಗೆ ಸೆಳೆಯಲ್ಪಡುವವರಿಗೆ ನಿಜ ನಿರೀಕ್ಷೆಯನ್ನು ಒದಗಿಸುತ್ತಾನೆಂದು ಇದು ನಮಗೆ ಜ್ಞಾಪಕಹುಟ್ಟಿಸಿದೆ. (ಮೀಕ 2:1-13) ನಾವು ದೇವರ ಹೆಸರಿನಲ್ಲಿ ಎಂದೆಂದಿಗೂ ನಡೆಯಲಾಗುವಂತೆ, ಸತ್ಯಾರಾಧನೆಯನ್ನು ವರ್ಧಿಸಲು ನಮ್ಮಿಂದ ಸಾಧ್ಯವಿರುವುದೆಲ್ಲವನ್ನೂ ಮಾಡುವಂತೆ ನಾವು ಪ್ರೋತ್ಸಾಹಿಸಲ್ಪಟ್ಟಿದ್ದೇವೆ. (ಮೀಕ 4:1-4) ಮತ್ತು ನಮ್ಮ ಪರಿಸ್ಥಿತಿಗಳು ಏನೇ ಆಗಿರಲಿ, ಯೆಹೋವನು ನಮ್ಮಿಂದ ಅಪೇಕ್ಷಿಸುವ ವಿಷಯಗಳನ್ನು ತಲಪಲು ನಾವು ಶಕ್ತರೆಂಬ ಆಶ್ವಾಸನೆ ನಮ್ಮಲ್ಲಿ ಮೂಡಿಸಲ್ಪಟ್ಟಿದೆ. ಹೌದು, ಯೆಹೋವನ ಹೆಸರಿನಲ್ಲಿ ನಡೆಯುವಂತೆ ಮೀಕನ ಪ್ರವಾದನೆಯು ನಮ್ಮನ್ನು ನಿಜವಾಗಿಯೂ ಬಲಪಡಿಸುತ್ತದೆ.

[ಪಾದಟಿಪ್ಪಣಿ]

^ ಪ್ಯಾರ. 13 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

ನೀವು ಹೇಗೆ ಉತ್ತರಿಸುವಿರಿ?

ಮೀಕ 6:8ಕ್ಕನುಸಾರ, ಯೆಹೋವನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?

• ನಾವು ‘ನ್ಯಾಯವನ್ನು ಆಚರಿಸಬೇಕಾದರೆ’ ಏನು ಆವಶ್ಯಕ?

• ನಾವು ‘ದಯೆಯನ್ನು ಪ್ರೀತಿಸುತ್ತೇವೆ’ ಎಂಬುದನ್ನು ಹೇಗೆ ತೋರಿಸಬಲ್ಲೆವು?

• ‘ದೇವರೊಂದಿಗೆ ವಿನಯಶೀಲತೆಯೊಂದಿಗೆ ನಡೆಯುವುದರಲ್ಲಿ’ ಏನು ಒಳಗೂಡಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 21ರಲ್ಲಿರುವ ಚಿತ್ರಗಳು]

ತನ್ನ ದಿನದ ದುಷ್ಟ ಪರಿಸ್ಥಿತಿಗಳ ಹೊರತೂ, ಮೀಕನು ಯೆಹೋವನು ಅಪೇಕ್ಷಿಸಿದಂಥ ವಿಷಯಗಳಿಗನುಸಾರ ನಡೆದುಕೊಂಡನು. ನೀವು ಸಹ ಹಾಗೆ ಮಾಡಬಲ್ಲಿರಿ

[ಪುಟ 23ರಲ್ಲಿರುವ ಚಿತ್ರ]

ಎಲ್ಲಾ ಅಂತಸ್ತಿನ ಜನರಿಗೆ ಸಾಕ್ಷಿನೀಡುವುದರ ಮೂಲಕ ನ್ಯಾಯವನ್ನು ಆಚರಿಸಿರಿ

[ಪುಟ 23ರಲ್ಲಿರುವ ಚಿತ್ರಗಳು]

ಇತರರ ಅಗತ್ಯಗಳನ್ನು ಪೂರೈಸುವ ಮೂಲಕ ನೀವು ದಯೆಯನ್ನು ಪ್ರೀತಿಸುತ್ತೀರೆಂಬುದನ್ನು ತೋರಿಸಿರಿ

[ಪುಟ 23ರಲ್ಲಿರುವ ಚಿತ್ರ]

ನಿಮ್ಮ ಇತಿಮಿತಿಗಳನ್ನು ವಿನಯಶೀಲತೆಯಿಂದ ಒಪ್ಪಿಕೊಂಡು, ಅದೇ ಸಮಯದಲ್ಲಿ ನಿಮ್ಮಿಂದ ಸಾಧ್ಯವಿರುವುದೆಲ್ಲವನ್ನೂ ಮಾಡಿರಿ