“ಆಹಾ, ಈತನೇ ನಮ್ಮ ದೇವರು”
“ಆಹಾ, ಈತನೇ ನಮ್ಮ ದೇವರು”
ಈ ಎರಡು ಅಧ್ಯಯನ ಲೇಖನಗಳಲ್ಲಿ ಚರ್ಚಿಸಲ್ಪಟ್ಟಿರುವ ಮಾಹಿತಿಯು, 2002/03ನೆಯ ಇಸವಿಯಲ್ಲಿ ಲೋಕವ್ಯಾಪಕವಾಗಿ ನಡೆದ ಜಿಲ್ಲಾ ಅಧಿವೇಶನಗಳಲ್ಲಿ ಬಿಡುಗಡೆಮಾಡಲ್ಪಟ್ಟ ಯೆಹೋವನ ಸಮೀಪಕ್ಕೆ ಬನ್ನಿರಿ ಎಂಬ ಪುಸ್ತಕದ ಮೇಲಾಧಾರಿತವಾಗಿದೆ.—20ನೆಯ ಪುಟದಲ್ಲಿರುವ “ಅದು ನನ್ನ ಹೃದಯದ ಶೂನ್ಯತೆಯನ್ನು ತುಂಬಿತು” ಎಂಬ ಲೇಖನವನ್ನು ನೋಡಿರಿ.
“ಆಹಾ, ಈತನೇ ನಮ್ಮ ದೇವರು, ನಮ್ಮನ್ನು ರಕ್ಷಿಸಲಿ ಎಂದು ಈತನನ್ನು ನಿರೀಕ್ಷಿಸಿಕೊಂಡಿದ್ದೇವೆ; ಈತನೇ ಯೆಹೋವನು.”—ಯೆಶಾಯ 25:9.
1, 2. (ಎ) ಪೂರ್ವಜನಾದ ಅಬ್ರಹಾಮನನ್ನು ಯೆಹೋವನು ಯಾವ ಮಾತುಗಳಿಂದ ಸಂಬೋಧಿಸಿದನು, ಮತ್ತು ನಾವು ಯಾವುದರ ಕುರಿತು ಕುತೂಹಲಪಡುವಂತೆ ಇದು ಮಾಡಬಹುದು? (ಬಿ) ದೇವರೊಂದಿಗಿನ ಆಪ್ತ ಸಂಬಂಧವು ನಮ್ಮ ಕೈಗೆಟುಕುವಂತಿದೆ ಎಂಬ ಆಶ್ವಾಸನೆಯನ್ನು ಬೈಬಲು ನಮಗೆ ಹೇಗೆ ಕೊಡುತ್ತದೆ?
“ನನ್ನ ಸ್ನೇಹಿತ.” ಈ ಮಾತುಗಳಿಂದ ಭೂಮ್ಯಾಕಾಶಗಳ ಸೃಷ್ಟಿಕರ್ತನಾದ ಯೆಹೋವನು ಪೂರ್ವಜನಾದ ಅಬ್ರಹಾಮನನ್ನು ಸಂಬೋಧಿಸಿದನು. (ಯೆಶಾಯ 41:8) ಮನುಷ್ಯಮಾತ್ರನಾದ ಒಬ್ಬನು ಇಡೀ ವಿಶ್ವದ ಪರಮಾಧಿಕಾರಿ ಕರ್ತನೊಂದಿಗೆ ಸ್ನೇಹವನ್ನು ಬೆಳೆಸಿಕೊಂಡಿರುವುದನ್ನು ತುಸು ಊಹಿಸಿಕೊಳ್ಳಿರಿ! ‘ನಾನು ದೇವರೊಂದಿಗೆ ಅಷ್ಟರ ಮಟ್ಟಿಗೆ ಆಪ್ತನಾಗಿರಸಾಧ್ಯವಿದೆಯೋ?’ ಎಂದು ನೀವು ಕುತೂಹಲಪಡಬಹುದು.
2 ದೇವರೊಂದಿಗೆ ಆಪ್ತ ಸಂಬಂಧವನ್ನು ಪಡೆದುಕೊಳ್ಳಸಾಧ್ಯವಿದೆ ಎಂದು ಬೈಬಲ್ ನಮಗೆ ಆಶ್ವಾಸನೆ ನೀಡುತ್ತದೆ. ಅಬ್ರಹಾಮನಿಗೆ ದೇವರೊಂದಿಗೆ ಅಂಥ ಆಪ್ತ ಸಂಬಂಧವಿತ್ತು, ಏಕೆಂದರೆ ಅವನು “ದೇವರನ್ನು ನಂಬಿದನು.” (ಯಾಕೋಬ 2:23) ಇಂದು ಸಹ ‘ಯಥಾರ್ಥರಿಗೆ ಯೆಹೋವನ ಸ್ನೇಹವು ದೊರೆಯುವುದು.’ (ಜ್ಞಾನೋಕ್ತಿ 3:32) ಯಾಕೋಬ 4:8ರಲ್ಲಿ ಬೈಬಲ್ ನಮ್ಮನ್ನು ಹೀಗೆ ಉತ್ತೇಜಿಸುತ್ತದೆ: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” ನಾವು ದೇವರ ಸಮೀಪಕ್ಕೆ ಬರಲು ಸೂಕ್ತವಾದ ಹೆಜ್ಜೆಗಳನ್ನು ತೆಗೆದುಕೊಳ್ಳುವಲ್ಲಿ, ಆತನೂ ಅದಕ್ಕೆ ಪ್ರತಿಕ್ರಿಯಿಸುವನು ಎಂಬುದಂತೂ ಸ್ಪಷ್ಟ. ಹೌದು, ಆತನೂ ನಮ್ಮ ಸಮೀಪಕ್ಕೆ ಬರುವನು. ಆದರೆ ಪಾಪಭರಿತ, ಅಪರಿಪೂರ್ಣ ಮಾನವರಾದ ನಾವು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳಬೇಕು ಎಂಬುದನ್ನು ಈ ಪ್ರೇರಿತ ಮಾತುಗಳು ಅರ್ಥೈಸುತ್ತವೋ? ಖಂಡಿತವಾಗಿಯೂ ಇಲ್ಲ. ನಮ್ಮ ಪ್ರೀತಿಯ ಯೆಹೋವ ದೇವರು ಈಗಾಗಲೇ ಎರಡು ಮುಖ್ಯ ಹೆಜ್ಜೆಗಳನ್ನು ತೆಗೆದುಕೊಂಡಿರುವ ಕಾರಣದಿಂದಲೇ ನಮಗೆ ಆತನೊಂದಿಗೆ ಆಪ್ತತೆಯು ಸಾಧ್ಯಗೊಳಿಸಲ್ಪಟ್ಟಿದೆ.—ಕೀರ್ತನೆ 25:14.
3. ನಾವು ಆತನ ಸ್ನೇಹಿತರಾಗುವುದನ್ನು ಸಾಧ್ಯಗೊಳಿಸಲಿಕ್ಕಾಗಿ ಯೆಹೋವನು ಯಾವ ಎರಡು ಹೆಜ್ಜೆಗಳನ್ನು ತೆಗೆದುಕೊಂಡಿದ್ದಾನೆ?
3 ಪ್ರಥಮವಾಗಿ, ಯೇಸು “ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡು” ಕೊಡುವಂತೆ ಯೆಹೋವನು ಏರ್ಪಾಡನ್ನು ಮಾಡಿದನು. (ಮತ್ತಾಯ 20:28) ಆ ವಿಮೋಚನಾ ಯಜ್ಞವು ನಾವು ದೇವರಿಗೆ ಆಪ್ತರಾಗಿರುವುದನ್ನು ಸಾಧ್ಯಗೊಳಿಸುತ್ತದೆ. ಬೈಬಲ್ ಹೇಳುವುದು: “ದೇವರು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ ನಾವು ಪ್ರೀತಿಸುತ್ತೇವೆ.” (1 ಯೋಹಾನ 4:19) ಹೌದು, ದೇವರು “ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ,” ಆತನೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳಲು ಆತನು ಅಸ್ತಿವಾರವನ್ನು ಹಾಕಿದನು. ಎರಡನೆಯದಾಗಿ, ಯೆಹೋವನು ತನ್ನ ಕುರಿತು ನಮಗೆ ತಿಳಿಯಪಡಿಸಿದ್ದಾನೆ. ನಾವು ಬೆಳೆಸುವಂಥ ಯಾವುದೇ ಸ್ನೇಹದಲ್ಲಿ, ಬೇರೊಬ್ಬ ವ್ಯಕ್ತಿಯನ್ನು ನಿಜವಾಗಿಯೂ ತಿಳಿಯುವುದರ ಮೇಲೆ ಮತ್ತು ಅವನ ವಿಶಿಷ್ಟ ಗುಣಲಕ್ಷಣಗಳನ್ನು ಮೆಚ್ಚಿ ಮಾನ್ಯಮಾಡುವುದರ ಮೇಲೆ ಆ ಬಂಧವು ಹೊಂದಿಕೊಂಡಿರುತ್ತದೆ. ಇದರ ಅರ್ಥವೇನೆಂಬುದನ್ನು ಪರಿಗಣಿಸಿರಿ. ಒಂದುವೇಳೆ ಯೆಹೋವನು ಎಲ್ಲೋ ಮರೆಯಾಗಿದ್ದ, ಅಜ್ಞಾತ ದೇವರಾಗಿರುತ್ತಿದ್ದಲ್ಲಿ, ನಾವೆಂದಿಗೂ ಆತನಿಗೆ ಸಮೀಪವಾಗಲು ಸಾಧ್ಯವಾಗುತ್ತಿರಲಿಲ್ಲ. ಆದರೂ, ತನ್ನನ್ನು ಗೋಪ್ಯವಾಗಿರಿಸಿಕೊಳ್ಳುವುದಕ್ಕೆ ಬದಲಾಗಿ ಯೆಹೋವನು, ನಾವು ಆತನ ಕುರಿತು ತಿಳಿದುಕೊಳ್ಳುವಂತೆ ಬಯಸುತ್ತಾನೆ. (ಯೆಶಾಯ 45:19) ತನ್ನ ವಾಕ್ಯವಾದ ಬೈಬಲಿನಲ್ಲಿ ಆತನು ನಾವು ಅರ್ಥಮಾಡಿಕೊಳ್ಳಸಾಧ್ಯವಿರುವಂಥ ರೀತಿಯಲ್ಲಿ ತನ್ನನ್ನು ಪ್ರಕಟಪಡಿಸಿಕೊಳ್ಳುತ್ತಾನೆ ಮತ್ತು ಇದು, ಆತನು ನಮ್ಮನ್ನು ಪ್ರೀತಿಸುತ್ತಾನೆ ಮಾತ್ರವಲ್ಲ, ನಾವು ಆತನನ್ನು ನಮ್ಮ ಸ್ವರ್ಗೀಯ ಪಿತನೋಪಾದಿ ತಿಳಿದುಕೊಳ್ಳುವಂತೆಯೂ ಪ್ರೀತಿಸುವಂತೆಯೂ ಬಯಸುತ್ತಾನೆ ಎಂಬುದಕ್ಕೆ ಪುರಾವೆಯಾಗಿದೆ.
4. ಯೆಹೋವನ ಗುಣಗಳನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳುತ್ತಾ ಹೋದಂತೆ ಆತನ ಕುರಿತು ನಮಗೆ ಯಾವ ಅನಿಸಿಕೆಯಾಗುತ್ತದೆ?
4 ಒಂದು ಚಿಕ್ಕ ಮಗುವು ತನ್ನ ಸ್ನೇಹಿತರಿಗೆ ತನ್ನ ತಂದೆಯನ್ನು ತೋರಿಸಿ, ಮುಗ್ಧ ಆನಂದ ಹಾಗೂ ಹೆಮ್ಮೆಯಿಂದ “ಅವರು ನನ್ನ ಅಪ್ಪ” ಎಂದು ಹೇಳುವುದನ್ನು ನೀವೆಂದಾದರೂ ನೋಡಿದ್ದೀರೋ? ಯೆಹೋವನ ವಿಷಯದಲ್ಲಿಯೂ ಅದೇ ರೀತಿ ಭಾವಿಸಲು ದೇವರ ಆರಾಧಕರಿಗೆ ಪ್ರತಿಯೊಂದು ಕಾರಣವೂ ಇದೆ. “ಆಹಾ, ಈತನೇ ನಮ್ಮ ದೇವರು” ಎಂದು ನಂಬಿಗಸ್ತ ಜನರು ಉದ್ಗರಿಸುವಂಥ ಒಂದು ಸಮಯದ ಕುರಿತು ಬೈಬಲು ಮುಂತಿಳಿಸುತ್ತದೆ. (ಯೆಶಾಯ 25:8, 9) ಯೆಹೋವನ ಗುಣಗಳ ಕುರಿತು ಹೆಚ್ಚೆಚ್ಚು ಒಳನೋಟವನ್ನು ಪಡೆದುಕೊಳ್ಳುವಾಗ, ನಮಗೆ ಅತ್ಯುತ್ತಮನಾದ ತಂದೆಯಿದ್ದಾನೆ ಮತ್ತು ಆತನೇ ಊಹಿಸಸಾಧ್ಯವಿರುವ ಅತ್ಯಾಪ್ತ ಸ್ನೇಹಿತನಾಗಿದ್ದಾನೆ ಎಂಬ ಅನಿಸಿಕೆ ಇನ್ನಷ್ಟು ಹೆಚ್ಚಾಗುತ್ತದೆ. ಹೌದು, ಯೆಹೋವನ ಗುಣಗಳನ್ನು ಅರ್ಥಮಾಡಿಕೊಳ್ಳುವುದು, ಆತನ ಇನ್ನೂ ಸಮೀಪಕ್ಕೆ ಹೋಗಲು ನಮಗೆ ಅನೇಕ ಕಾರಣಗಳನ್ನು ಕೊಡುತ್ತದೆ. ಆದುದರಿಂದ, ಯೆಹೋವನ ಪ್ರಧಾನ ಗುಣಗಳಾದ ಶಕ್ತಿ, ನ್ಯಾಯ, ವಿವೇಕ ಮತ್ತು ಪ್ರೀತಿಯನ್ನು ಬೈಬಲು ಹೇಗೆ ತಿಳಿಯಪಡಿಸುತ್ತದೆಂಬುದನ್ನು ನಾವೀಗ ಪರೀಕ್ಷಿಸೋಣ. ಈ ಲೇಖನದಲ್ಲಿ, ಈ ಗುಣಗಳಲ್ಲಿ ಮೊದಲ ಮೂರನ್ನು ನಾವು ಚರ್ಚಿಸುವೆವು.
‘ಅಪಾರ ಶಕ್ತಿಯುಳ್ಳವನು’
5. ಯೆಹೋವನೊಬ್ಬನನ್ನೇ ‘ಸರ್ವಶಕ್ತನು’ ಎಂದು ಕರೆಯುವುದು ಏಕೆ ಸೂಕ್ತವಾದದ್ದಾಗಿದೆ, ಮತ್ತು ಯಾವ ವಿಧಗಳಲ್ಲಿ ಆತನು ತನ್ನ ಭಯಭಕ್ತಿಪ್ರೇರಕ ಶಕ್ತಿಯನ್ನು ಉಪಯೋಗಿಸುತ್ತಾನೆ?
5 ಯೆಹೋವನು ‘ಅಪಾರ ಶಕ್ತಿಯುಳ್ಳವನಾಗಿದ್ದಾನೆ.’ (ಯೋಬ 37:23, NW) ಯೆರೆಮೀಯ 10:6 ಹೇಳುವುದು: “ಯೆಹೋವನೇ, ನಿನ್ನ ಸಮಾನನು ಯಾವನೂ ಇಲ್ಲ; ನೀನು ಮಹತ್ತಮನು, ನಿನ್ನ ನಾಮವೂ ಸಾಮರ್ಥ್ಯದಿಂದ ಕೂಡಿ ಮಹತ್ತಮವಾಗಿದೆ.” ಇನ್ನಾವ ಜೀವಿಗೂ ಅಸದೃಶವಾಗಿ ಯೆಹೋವನಿಗೆ ಅಪರಿಮಿತವಾದ ಶಕ್ತಿಯಿದೆ. ಈ ಕಾರಣದಿಂದಲೇ ಆತನೊಬ್ಬನನ್ನೇ ‘ಸರ್ವಶಕ್ತನು’ ಎಂದು ಕರೆಯಲಾಗಿದೆ. (ಪ್ರಕಟನೆ 15:3) ಯೆಹೋವನು ತನ್ನ ಭಯಭಕ್ತಿಪ್ರೇರಕ ಶಕ್ತಿಯನ್ನು, ಸೃಷ್ಟಿಸಲಿಕ್ಕಾಗಿ, ನಾಶಪಡಿಸಲಿಕ್ಕಾಗಿ, ಸಂರಕ್ಷಿಸಲಿಕ್ಕಾಗಿ, ಮತ್ತು ಪುನಸ್ಸ್ಥಾಪಿಸಲಿಕ್ಕಾಗಿ ಉಪಯೋಗಿಸುತ್ತಾನೆ. ಕೇವಲ ಎರಡು ಉದಾಹರಣೆಗಳನ್ನು, ಅಂದರೆ ಆತನ ಸೃಷ್ಟಿಕಾರಕ ಶಕ್ತಿಯನ್ನು ಮತ್ತು ಆತನ ಸಂರಕ್ಷಣಾ ಶಕ್ತಿಯನ್ನು ಪರಿಗಣಿಸಿರಿ.
6, 7. ಸೂರ್ಯನಿಗೆ ಎಷ್ಟು ಶಕ್ತಿಯಿದೆ, ಮತ್ತು ಇದು ಯಾವ ಪ್ರಾಮುಖ್ಯ ಸತ್ಯಕ್ಕೆ ಪುರಾವೆ ನೀಡುತ್ತದೆ?
6 ಪ್ರಕಾಶಮಾನವಾದ ಬೇಸಗೆಯ ದಿನದಂದು ನೀವು ಹೊರಗೆ ನಿಲ್ಲುವಲ್ಲಿ, ನಿಮ್ಮ ಚರ್ಮಕ್ಕೆ ಏನು ತಟ್ಟುತ್ತದೆ? ಸೂರ್ಯನ ಶಾಖ. ಆದರೆ ವಾಸ್ತವದಲ್ಲಿ ನಿಮಗೆ ಯೆಹೋವನ ಸೃಷ್ಟಿಕಾರಕ ಶಕ್ತಿಯ ಫಲಿತಾಂಶಗಳು ತಟ್ಟುತ್ತಿವೆ. ಸೂರ್ಯನಿಗೆ ಎಷ್ಟು ಶಕ್ತಿಯಿದೆ? ಅದರ ಮಧ್ಯಭಾಗದ ತಾಪಮಾನವು ಸುಮಾರು 1.5 ಕೋಟಿ ಡಿಗ್ರಿ ಸೆಲ್ಸಿಯಸ್ ಆಗಿದೆ. ಸೂರ್ಯನ ಮಧ್ಯಭಾಗದಿಂದ ನೀವು ಗುಂಡುಸೂಜಿಯ ತಲೆಯಷ್ಟು ಗಾತ್ರದ ಒಂದು ತುಂಡನ್ನು ತೆಗೆದುಕೊಂಡು ಭೂಮಿಯ ಮೇಲಿಡುವುದಾದರೆ, ಆ ಪುಟ್ಟ ಶಾಖದ ಮೂಲದಿಂದ ನೀವು 150 ಕಿಲೊಮೀಟರುಗಳಷ್ಟು ದೂರದಲ್ಲಿ ನಿಂತರೆ ಮಾತ್ರ ಸುರಕ್ಷಿತವಾಗಿರುವಿರಿ!
ಪ್ರತಿ ಸೆಕೆಂಡಿಗೆ ಸೂರ್ಯನು ಹೊರಡಿಸುವ ಶಕ್ತಿಯು, ಕೋಟಿಗಟ್ಟಲೆ ನ್ಯೂಕ್ಲಿಯರ್ ಬಾಂಬುಗಳ ಸ್ಫೋಟಕ್ಕೆ ಸಮಾನವಾದದ್ದಾಗಿದೆ. ಆದರೂ, ಭೂಮಿಯು ಆ ಅಸಾಮಾನ್ಯವಾಗಿರುವ ಥರ್ಮೋನ್ಯೂಕ್ಲಿಯರ್ ಕುಲುಮೆಯಿಂದ ಸೂಕ್ತವಾದಷ್ಟು ದೂರದಲ್ಲೇ ಸುತ್ತುತ್ತದೆ. ಸೂರ್ಯನು ಭೂಮಿಗೆ ತೀರ ಹತ್ತಿರವಿರುತ್ತಿದ್ದಲ್ಲಿ, ಅದರ ನೀರು ಸಂಪೂರ್ಣವಾಗಿ ಆವಿಯಾಗುವ ಸಾಧ್ಯತೆಯಿತ್ತು; ಸೂರ್ಯನು ಭೂಮಿಯಿಂದ ತೀರ ದೂರವಿರುತ್ತಿದ್ದಲ್ಲಿ ಎಲ್ಲವೂ ಹಿಮಗಟ್ಟಿಹೋಗಸಾಧ್ಯವಿತ್ತು. ಈ ಎರಡೂ ವೈಪರೀತ್ಯಗಳು ನಮ್ಮ ಭೂಗ್ರಹವನ್ನು ನಿರ್ಜೀವವಾದದ್ದಾಗಿ ಮಾಡಿಬಿಡುತ್ತಿದ್ದವು.7 ಸೂರ್ಯನೇ ಅವರ ಜೀವಾಧಾರವಾಗಿರುವುದಾದರೂ, ಅನೇಕರು ಅದರ ಕೆಲಸವನ್ನು ಮಾಮೂಲಿಯಾಗಿ ತೆಗೆದುಕೊಳ್ಳುತ್ತಾರೆ. ಹೀಗೆ, ಸೂರ್ಯನು ನಮಗೆ ಏನನ್ನು ಕಲಿಸಸಾಧ್ಯವಿದೆಯೋ ಆ ಪಾಠವನ್ನು ಅವರು ಕಲಿಯದೇ ಹೋಗುತ್ತಾರೆ. ಯೆಹೋವನ ಕುರಿತು ಕೀರ್ತನೆ 74:16 ಹೇಳುವುದು: “ಸೂರ್ಯಾದಿ ಜ್ಯೋತಿರ್ಮಂಡಲಗಳ ನಿರ್ಮಾಣಕನು ನೀನು.” ಹೌದು, ಸೂರ್ಯವು ‘ಭೂಮಿ, ಆಕಾಶಗಳನ್ನು ನಿರ್ಮಿಸಿದ’ ಯೆಹೋವನನ್ನು ಮಹಿಮೆಪಡಿಸುತ್ತದೆ. (ಕೀರ್ತನೆ 146:6) ಹಾಗಿದ್ದರೂ, ಯೆಹೋವನ ಅಪಾರ ಶಕ್ತಿಯ ಕುರಿತು ನಮಗೆ ಪಾಠವನ್ನು ಕಲಿಸುವಂಥ ಅನೇಕ ಸೃಷ್ಟಿವಸ್ತುಗಳಲ್ಲಿ ಇದು ಕೇವಲ ಒಂದಾಗಿದೆ. ನಾವು ಯೆಹೋವನ ಸೃಷ್ಟಿಕಾರಕ ಸಾಮರ್ಥ್ಯದ ಕುರಿತು ಹೆಚ್ಚನ್ನು ಕಲಿತುಕೊಂಡಷ್ಟು ನಮ್ಮ ಭಯಭಕ್ತಿಯು ಇನ್ನಷ್ಟು ಗಾಢವಾಗುತ್ತದೆ.
8, 9. (ಎ) ತನ್ನ ಆರಾಧಕರನ್ನು ಸಂರಕ್ಷಿಸಲು ಹಾಗೂ ಪರಾಮರಿಸಲು ಯೆಹೋವನಿಗಿರುವ ಸಿದ್ಧಮನಸ್ಸನ್ನು ಯಾವ ಕೋಮಲ ಶಬ್ದ ಚಿತ್ರಣವು ತೋರಿಸುತ್ತದೆ? (ಬಿ) ಬೈಬಲ್ ಸಮಯಗಳ ಕುರುಬನು ತನ್ನ ಕುರಿಗಳಿಗೆ ಯಾವ ಪರಾಮರಿಕೆಯನ್ನು ನೀಡಿದನು, ಮತ್ತು ನಮ್ಮ ಮಹಾ ಕುರುಬನ ವಿಷಯದಲ್ಲಿ ಇದು ನಮಗೆ ಯಾವ ಪಾಠವನ್ನು ಕಲಿಸುತ್ತದೆ?
8 ಯೆಹೋವನು ತನ್ನ ಅಪಾರವಾದ ಶಕ್ತಿಯನ್ನು, ತನ್ನ ಸೇವಕರನ್ನು ಕಾಪಾಡಲು ಮತ್ತು ಪರಾಮರಿಸಲು ಸಹ ಉಪಯೋಗಿಸುತ್ತಾನೆ. ಯೆಹೋವನ ಸಂರಕ್ಷಕ ಪರಾಮರಿಕೆಯ ವಾಗ್ದಾನಗಳನ್ನು ವರ್ಣಿಸಲಿಕ್ಕಾಗಿ ಬೈಬಲು ಸುವ್ಯಕ್ತವಾದ ಹಾಗೂ ಮನಸ್ಸನ್ನು ಸ್ಪರ್ಶಿಸುವಂಥ ದೃಷ್ಟಾಂತಗಳನ್ನು ಉಪಯೋಗಿಸುತ್ತದೆ. ಉದಾಹರಣೆಗೆ ಯೆಶಾಯ 40:11ನ್ನು ಗಮನಿಸಿ. ಅಲ್ಲಿ ಯೆಹೋವನು ತನ್ನನ್ನು ಒಬ್ಬ ಕುರುಬನಿಗೂ ತನ್ನ ಜನರನ್ನು ಕುರಿಗಳಿಗೂ ಹೋಲಿಸುತ್ತಾನೆ. ನಾವು ಹೀಗೆ ಓದುತ್ತೇವೆ: “ಆತನು ಕುರುಬನಂತೆ ತನ್ನ ಮಂದೆಯನ್ನು ಮೇಯಿಸುವನು, ಮರಿಗಳನ್ನು ಕೈಯಿಂದ ಕೂಡಿಸಿ ಎದೆಗೆತ್ತಿಕೊಳ್ಳುವನು. ಹಾಲು ಕುಡಿಸುವ ಕುರಿಗಳನ್ನು ಮೆಲ್ಲಗೆ ನಡಿಸುವನು.” ಈ ವಚನದಲ್ಲಿ ಏನು ವರ್ಣಿಸಲ್ಪಟ್ಟಿದೆಯೋ ಅದನ್ನು ನೀವು ನಿಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಬಲ್ಲಿರೋ?
9 ಸಾಧು ಕುರಿಗಳಷ್ಟು ನಿಸ್ಸಹಾಯಕವಾಗಿರುವ ಪ್ರಾಣಿಗಳು ಕೆಲವೇ ಇವೆ. ಬೈಬಲ್ ಸಮಯಗಳ ಕುರುಬನು ತನ್ನ ಕುರಿಗಳನ್ನು ತೋಳ, ಕರಡಿ ಮತ್ತು ಸಿಂಹಗಳಿಂದ ರಕ್ಷಿಸಲಿಕ್ಕಾಗಿ ತುಂಬ ಧೈರ್ಯಶಾಲಿಯಾಗಿರಬೇಕಾಗಿತ್ತು. (1 ಸಮುವೇಲ 17:34-36; ಯೋಹಾನ 10:10-13) ಆದರೆ ಕುರಿಗಳನ್ನು ಸಂರಕ್ಷಿಸುವಾಗ ಮತ್ತು ಅವುಗಳ ಪರಾಮರಿಕೆ ಮಾಡುವಾಗ ಕೋಮಲಭಾವವು ಅಗತ್ಯವಾಗಿರುವಂಥ ಸಮಯಗಳೂ ಇದ್ದವು. ಉದಾಹರಣೆಗೆ, ಒಂದು ಕುರಿಯು ಮಂದೆಯಿಂದ ದೂರ ಹೋಗಿ ಮರಿಯನ್ನು ಹಾಕುತ್ತಿರುವಾಗ, ನಿಸ್ಸಹಾಯಕವಾಗಿರುವ ನವಜಾತ ಕುರಿಯನ್ನು ಕುರುಬನು ಹೇಗೆ ಸಂರಕ್ಷಿಸಸಾಧ್ಯವಿತ್ತು? ಆ ಕುರಿಮರಿಯನ್ನು ಅವನು ‘ಎದೆಯ’ ಬಳಿ ಅಂದರೆ ಅವನ ಹೊರಉಡುಪಿನ ಮಡಿಕೆಗಳಲ್ಲಿ ಪ್ರಾಯಶಃ ಕೆಲವು ದಿನಗಳ ತನಕ ಹೊತ್ತುಕೊಂಡುಹೋಗುತ್ತಿದ್ದನು. ಆದರೆ ಒಂದು ಪುಟ್ಟ ಕುರಿಮರಿಯು ಕುರುಬನ ಎದೆಯ ತನಕ ಬಂದು ಮುಟ್ಟುವುದಾದರೂ ಹೇಗೆ? ಆ ಕುರಿಮರಿಯು ಕುರುಬನ ಬಳಿಗೆ ಬರಬಹುದು ಮತ್ತು ಮೆತ್ತಗೆ ಅವನ ಕಾಲನ್ನು ಮುಖದಿಂದ ತಿವಿಯಲೂಬಹುದು. ಆದರೆ ಕುರಿಮರಿಯ ಕಡೆಗೆ ಬಗ್ಗಿ, ಕೈಚಾಚಿ, ಅದನ್ನು ಎತ್ತಿಕೊಂಡು, ತನ್ನ ಎದೆಯ ಸುರಕ್ಷೆಯಲ್ಲಿ ಅದನ್ನು ಇಟ್ಟುಕೊಳ್ಳುವುದು ಆ ಕುರುಬನ ಕೆಲಸವಾಗಿತ್ತು. ತನ್ನ ಸೇವಕರನ್ನು ಸಂರಕ್ಷಿಸಲು ಮತ್ತು ಪರಾಮರಿಸಲು ನಮ್ಮ ಮಹಾ ಕುರುಬನಿಗಿರುವ ಸಿದ್ಧಮನಸ್ಸಿನ ಎಂಥ ಕೋಮಲ ಚಿತ್ರಣವಿದು!
10. ಇಂದು ಯಾವ ಸಂರಕ್ಷಣೆಯನ್ನು ಯೆಹೋವನು ಒದಗಿಸುತ್ತಾನೆ, ಮತ್ತು ಅಂಥ ಸಂರಕ್ಷಣೆಯು ವಿಶೇಷವಾಗಿ ಪ್ರಾಮುಖ್ಯವಾಗಿದೆ ಏಕೆ?
10 ಯೆಹೋವನು ಕೇವಲ ಸಂರಕ್ಷಣೆಯ ವಾಗ್ದಾನವನ್ನು ನೀಡುವುದಕ್ಕಿಂತಲೂ ಹೆಚ್ಚನ್ನು ಮಾಡಿದ್ದಾನೆ. ಬೈಬಲ್ ಸಮಯಗಳಲ್ಲಿ, “ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿ”ಸಲು ತಾನು ಶಕ್ತನಾಗಿದ್ದೇನೆ ಎಂಬುದನ್ನು ಆತನು ಅದ್ಭುತಕರವಾದ ವಿಧಗಳಲ್ಲಿ ತೋರಿಸಿದನು. (2 ಪೇತ್ರ 2:9) ಇಂದಿನ ಕುರಿತಾಗಿ ಏನು? ಈಗ, ಸಕಲ ವಿಪತ್ತುಗಳಿಂದ ನಮ್ಮನ್ನು ಕಾಪಾಡಲು ಆತನು ತನ್ನ ಶಕ್ತಿಯನ್ನು ಉಪಯೋಗಿಸುವುದಿಲ್ಲ ಎಂಬುದು ನಮಗೆ ಗೊತ್ತು. ಆದರೆ, ಅದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾದ ಆತ್ಮಿಕ ಸಂರಕ್ಷಣೆಯನ್ನು ಆತನು ಒದಗಿಸುತ್ತಾನೆ. ನಮ್ಮ ಪ್ರಿಯ ದೇವರು ನಾವು ಪರೀಕ್ಷೆಗಳನ್ನು ತಾಳಿಕೊಳ್ಳುವಂತೆ ಮತ್ತು ಆತನೊಂದಿಗಿರುವ ಸಂಬಂಧವನ್ನು ಕಾಪಾಡಿಕೊಳ್ಳುವಂತೆ ನಮಗೆ ಬೇಕಾಗಿರುವ ವಿಷಯಗಳಿಂದ ನಮ್ಮನ್ನು ಸಜ್ಜುಗೊಳಿಸಿ, ಆತ್ಮಿಕ ಹಾನಿಯಿಂದ ನಮ್ಮನ್ನು ಸಂರಕ್ಷಿಸುತ್ತಾನೆ. ಉದಾಹರಣೆಗೆ, ಲೂಕ 11:13 ಹೇಳುವುದು: “ಹಾಗಾದರೆ ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನಲ್ಲವೇ.” ಆ ಪ್ರಬಲ ಶಕ್ತಿಯು, ನಾವು ಎದುರಿಸಬಹುದಾದ ಯಾವುದೇ ಪರೀಕ್ಷೆ ಅಥವಾ ಸಮಸ್ಯೆಯನ್ನು ನಿರ್ವಹಿಸಲು ಅಗತ್ಯವಿರುವ ಗುಣಗಳೊಂದಿಗೆ ನಮ್ಮನ್ನು ಸಜ್ಜುಗೊಳಿಸುವುದು. (2 ಕೊರಿಂಥ 4:7) ಹೀಗೆ ಯೆಹೋವನು ನಮ್ಮ ಜೀವಗಳನ್ನು ಕೇವಲ ಕೆಲವು ವರ್ಷಗಳ ವರೆಗೆ ಮಾತ್ರವಲ್ಲ, ಬದಲಾಗಿ ಅನಂತಕಾಲಕ್ಕೂ ಸಂರಕ್ಷಿಸಲು ಕಾರ್ಯನಡಿಸುತ್ತಾನೆ. ಈ ಪ್ರತೀಕ್ಷೆಯನ್ನು ಮನಸ್ಸಿನಲ್ಲಿಟ್ಟವರಾಗಿ, ಈ ವ್ಯವಸ್ಥೆಯಲ್ಲಿ ನಾವು ಅನುಭವಿಸುವ ಯಾವುದೇ ಕಷ್ಟಾನುಭವವನ್ನು ‘ಕ್ಷಣಮಾತ್ರವಿರುವಂಥದ್ದು ಮತ್ತು ಹಗುರವಾದದ್ದು’ ಆಗಿ ಪರಿಗಣಿಸಬಹುದು ಎಂಬುದಂತೂ ಖಂಡಿತ. (2 ಕೊರಿಂಥ 4:17) ನಮ್ಮ ಪರವಾಗಿ ಅಷ್ಟೊಂದು ಪ್ರೀತಿಯಿಂದ ತನ್ನ ಶಕ್ತಿಯನ್ನು ಉಪಯೋಗಿಸುವಂಥ ದೇವರ ಕಡೆಗೆ ನಾವು ಆಕರ್ಷಿಸಲ್ಪಡುವುದಿಲ್ಲವೋ?
“ಯೆಹೋವನು ನ್ಯಾಯವನ್ನು ಮೆಚ್ಚುವವನು”
11, 12. (ಎ) ಯೆಹೋವನ ನ್ಯಾಯವು ನಮ್ಮನ್ನು ಆತನ ಕಡೆಗೆ ಏಕೆ ಸೆಳೆಯುತ್ತದೆ? (ಬಿ) ಯೆಹೋವನ ನ್ಯಾಯದ ವಿಷಯದಲ್ಲಿ ದಾವೀದನು ಯಾವ ತೀರ್ಮಾನಕ್ಕೆ ಬಂದನು, ಮತ್ತು ಈ ಪ್ರೇರಿತ ಮಾತುಗಳು ನಮಗೆ ಹೇಗೆ ಸಾಂತ್ವನವನ್ನು ನೀಡಬಲ್ಲವು?
11 ಯೆಹೋವನು ಯಾವುದು ಸರಿಯಾಗಿದೆಯೋ ಅದನ್ನೇ
ಮಾಡುತ್ತಾನೆ, ಮತ್ತು ಅದನ್ನು ಸುಸಂಗತವಾಗಿ, ಯಾವುದೇ ಪಕ್ಷಪಾತವಿಲ್ಲದೆ ಮಾಡುತ್ತಾನೆ. ದೈವಿಕ ನ್ಯಾಯವು, ನಮ್ಮನ್ನು ವಿಕರ್ಷಿಸುವಂಥ ನೀರಸ, ಕಠೋರ ಗುಣವಾಗಿರದೆ, ನಮ್ಮನ್ನು ಯೆಹೋವನ ಬಳಿಗೆ ಸೆಳೆಯುವಂಥ ಪ್ರೀತಿಭರಿತ ಗುಣವಾಗಿದೆ. ಈ ಗುಣದ ಹೃದಯೋತ್ತೇಜಕ ಪ್ರವೃತ್ತಿಯನ್ನು ಬೈಬಲು ಸ್ಪಷ್ಟವಾಗಿ ವರ್ಣಿಸುತ್ತದೆ. ಆದುದರಿಂದ, ಯೆಹೋವನು ತನ್ನ ನ್ಯಾಯವನ್ನು ತೋರಿಸುವಂಥ ಮೂರು ವಿಧಗಳನ್ನು ನಾವೀಗ ಪರಿಗಣಿಸೋಣ.12 ಪ್ರಥಮವಾಗಿ, ಯೆಹೋವನ ನ್ಯಾಯವು ಆತನು ತನ್ನ ಸೇವಕರಿಗೆ ನಂಬಿಗಸ್ತಿಕೆ ಮತ್ತು ನಿಷ್ಠೆಯನ್ನು ತೋರಿಸುವಂತೆ ಪ್ರೇರಿಸುತ್ತದೆ. ಯೆಹೋವನ ನ್ಯಾಯದ ಈ ಅಂಶವನ್ನು ಕೀರ್ತನೆಗಾರನಾದ ದಾವೀದನು ವೈಯಕ್ತಿಕವಾಗಿ ಗಣ್ಯಮಾಡಿದನು. ದಾವೀದನು ತನ್ನ ಸ್ವಂತ ಅನುಭವದಿಂದ ಮತ್ತು ದೇವರ ಮಾರ್ಗಗಳನ್ನು ಅಧ್ಯಯನ ಮಾಡುವ ಮೂಲಕ ಯಾವ ತೀರ್ಮಾನಕ್ಕೆ ಬಂದನು? ಅವನು ಘೋಷಿಸಿದ್ದು: “ಯೆಹೋವನು ನ್ಯಾಯವನ್ನು ಮೆಚ್ಚುವವನು; ತನ್ನ ಭಕ್ತರನ್ನು [“ನಿಷ್ಠಾವಂತರನ್ನು,” NW] ಎಂದಿಗೂ ಕೈಬಿಡುವವನಲ್ಲ. ಅವರು ಸದಾಕಾಲವೂ ಸುರಕ್ಷಿತರಾಗಿರುವರು.” (ಕೀರ್ತನೆ 37:28) ಎಷ್ಟು ಸಾಂತ್ವನದಾಯಕ ಆಶ್ವಾಸನೆಯಿದು! ನಮ್ಮ ದೇವರು ತನಗೆ ನಿಷ್ಠರಾಗಿರುವವರನ್ನು ಎಂದಿಗೂ ತೊರೆಯನು. ಆದುದರಿಂದ ಆತನ ಸ್ನೇಹ ಹಾಗೂ ಪ್ರೀತಿಯ ಪರಾಮರಿಕೆಯ ಮೇಲೆ ನಾವು ಭರವಸವಿಡಬಲ್ಲೆವು. ಆತನ ನ್ಯಾಯವು ಇದಕ್ಕೆ ಖಾತ್ರಿಯನ್ನು ಕೊಡುತ್ತದೆ!—ಜ್ಞಾನೋಕ್ತಿ 2:7, 8.
13. ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರದಲ್ಲಿ, ಸಂಕಟಕ್ಕೊಳಗಾಗಿರುವವರ ಕುರಿತಾದ ಯೆಹೋವನ ಚಿಂತೆಯು ಹೇಗೆ ಸುವ್ಯಕ್ತವಾಗುತ್ತದೆ?
13 ಎರಡನೆಯದಾಗಿ, ದೈವಿಕ ನ್ಯಾಯವು ಸಂಕಟಕ್ಕೊಳಗಾಗಿರುವವರ ಅಗತ್ಯಗಳನ್ನು ಬೇಗನೆ ಗ್ರಹಿಸುತ್ತದೆ. ದೇವರು ಇಸ್ರಾಯೇಲ್ಗೆ ಕೊಟ್ಟ ಧರ್ಮಶಾಸ್ತ್ರದಲ್ಲಿ, ಪ್ರತಿಕೂಲ ಪರಿಸ್ಥಿತಿಗಳಲ್ಲಿರುವವರ ಕಡೆಗಿನ ಯೆಹೋವನ ಚಿಂತೆಯು ಸುವ್ಯಕ್ತವಾಗಿ ಕಂಡುಬರುತ್ತದೆ. ಉದಾಹರಣೆಗೆ, ಅನಾಥರೂ ವಿಧವೆಯರೂ ಪರಾಮರಿಸಲ್ಪಡುವುದನ್ನು ಖಚಿತಪಡಿಸಿಕೊಳ್ಳುವ ಒದಗಿಸುವಿಕೆಗಳನ್ನು ಧರ್ಮಶಾಸ್ತ್ರವು ಮಾಡಿತ್ತು. (ಧರ್ಮೋಪದೇಶಕಾಂಡ 24:17-21) ಅಂಥ ಕುಟುಂಬಗಳ ಜೀವನವು ಎಷ್ಟು ಕಷ್ಟಕರವಾಗಿರಬಹುದೆಂಬುದನ್ನು ತಿಳಿದವನಾಗಿ ಯೆಹೋವನು ತಾನೇ ಅವರ ಪಿತೃಸಮಾನ ನ್ಯಾಯಾಧಿಪತಿಯೂ ಸಂರಕ್ಷಕನೂ ಆದನು. (ಧರ್ಮೋಪದೇಶಕಾಂಡ 10:17, 18) ಇಸ್ರಾಯೇಲ್ಯರು ಸಹಾಯಶೂನ್ಯರಾದ ಸ್ತ್ರೀಯರ ಮತ್ತು ಮಕ್ಕಳ ಶೋಷಣೆಮಾಡುವಲ್ಲಿ, ಅಂಥವರ ಗೋಳಾಟವನ್ನು ತಾನು ಕೇಳುವೆನೆಂದು ಆತನು ಇಸ್ರಾಯೇಲ್ಯರನ್ನು ಎಚ್ಚರಿಸಿದನು. ವಿಮೋಚನಕಾಂಡ 22:24ರಲ್ಲಿ ದಾಖಲಿಸಲ್ಪಟ್ಟಿರುವಂತೆ, ‘ನಾನು ಕೋಪಿಸಿಕೊಳ್ಳುವೆನು’ ಎಂದು ಆತನು ಹೇಳಿದನು. ಕೋಪವು ಯೆಹೋವನ ಪ್ರಧಾನ ಗುಣಗಳಲ್ಲಿ ಒಂದಾಗಿರದಿದ್ದರೂ, ಉದ್ದೇಶಭರಿತವಾದ ಅನ್ಯಾಯದ ಕೃತ್ಯಗಳನ್ನು ಆತನು ನೋಡುವಾಗ, ಅದರಲ್ಲೂ ವಿಶೇಷವಾಗಿ ಸಹಾಯಶೂನ್ಯರಾಗಿರುವಂಥ ಜನರು ಅಂಥ ಕೃತ್ಯಗಳಿಗೆ ಬಲಿಯಾಗುವುದನ್ನು ನೋಡುವಾಗ, ಆತನ ನೀತಿಭರಿತ ಕೋಪವು ಕೆರಳಿಸಲ್ಪಡುತ್ತದೆ.
14. ಯೆಹೋವನ ನಿಷ್ಪಕ್ಷಪಾತದ ನಿಜವಾಗಿಯೂ ಗಮನಾರ್ಹವಾದ ಪುರಾವೆಯು ಯಾವುದಾಗಿದೆ?
14 ಮೂರನೆಯದಾಗಿ, ಧರ್ಮೋಪದೇಶಕಾಂಡ 10:17ರಲ್ಲಿ, ಯೆಹೋವನು “ದಾಕ್ಷಿಣ್ಯ ನೋಡುವವನಲ್ಲ, ಲಂಚತೆಗೆದುಕೊಳ್ಳುವವನಲ್ಲ” ಎಂದು ಬೈಬಲು ನಮಗೆ ಆಶ್ವಾಸನೆ ನೀಡುತ್ತದೆ. ಅಧಿಕಾರ ಅಥವಾ ಪ್ರಭಾವವಿರುವ ಅನೇಕ ಮಾನವರಂತೆ ಯೆಹೋವನು ಪ್ರಾಪಂಚಿಕ ಸಂಪತ್ತು ಅಥವಾ ಬಾಹ್ಯ ತೋರಿಕೆಯಿಂದ ಅನ್ಯಾಯದ ಪಕ್ಷವನ್ನು ವಹಿಸುವುದಿಲ್ಲ. ಆತನಲ್ಲಿ ಪೂರ್ವಗ್ರಹ ಅಥವಾ ಪಕ್ಷಪಾತವು ಇಲ್ಲವೇ ಇಲ್ಲ. ಆತನ ನಿಷ್ಪಕ್ಷಪಾತದ ನಿಜವಾಗಿಯೂ ಗಮನಾರ್ಹವಾದ ಒಂದು ಪುರಾವೆಯು ಇದಾಗಿದೆ: ಆತನ ಸತ್ಯಾರಾಧಕರಾಗುವ ಮತ್ತು ಮುಂದೆ ನಿತ್ಯಜೀವವನ್ನು ಪಡೆಯುವ ಸಂದರ್ಭವು ಕೆಲವೊಂದು ಗಣ್ಯ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಇದಕ್ಕೆ ಬದಲಾಗಿ, ಅಪೊಸ್ತಲರ ಕೃತ್ಯಗಳು 10:34, 35 ಹೇಳುವುದು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.” ಜನರ ಸಾಮಾಜಿಕ ನಿಲುವು, ಅವರ ಚರ್ಮದ ಬಣ್ಣ ಅಥವಾ ಅವರು ವಾಸಿಸುತ್ತಿರುವ ದೇಶ ಯಾವುದೇ ಆಗಿರಲಿ, ಎಲ್ಲರಿಗೂ ಈ ಪ್ರತೀಕ್ಷೆಯು ಲಭ್ಯವಿದೆ. ಇದು ಅತ್ಯುತ್ತಮ ಮಟ್ಟದ ನಿಜವಾದ ನ್ಯಾಯವಾಗಿಲ್ಲವೋ? ವಾಸ್ತವದಲ್ಲಿ, ಯೆಹೋವನ ನ್ಯಾಯದ ಹೆಚ್ಚು ಉತ್ತಮವಾದ ತಿಳಿವಳಿಕೆಯು ನಮ್ಮನ್ನು ಆತನ ಸಮೀಪಕ್ಕೆ ಹೋಗುವಂತೆ ಮಾಡುತ್ತದೆ!
“ಆಹಾ, ದೇವರ . . . ವಿವೇಕವೂ ಎಷ್ಟೋ ಅಗಾಧ!”
15. ವಿವೇಕ ಎಂದರೇನು, ಮತ್ತು ಯೆಹೋವನು ಅದನ್ನು ಹೇಗೆ ತೋರಿಸುತ್ತಾನೆ?
15ರೋಮಾಪುರ 11:33ರಲ್ಲಿ ದಾಖಲಿಸಲ್ಪಟ್ಟಿರುವಂತೆ, “ಆಹಾ ದೇವರ . . . ಜ್ಞಾನವೂ ವಿವೇಕವೂ ಎಷ್ಟೋ ಅಗಾಧ!” ಎಂದು ಉದ್ಗರಿಸುವಂತೆ ಅಪೊಸ್ತಲ ಪೌಲನು ಪ್ರಚೋದಿಸಲ್ಪಟ್ಟನು. ಹೌದು, ನಾವು ಯೆಹೋವನ ಅಪಾರವಾದ ವಿವೇಕದ ವಿವಿಧ ಅಂಶಗಳ ಕುರಿತು ಚಿಂತಿಸುವಾಗ, ನಮ್ಮಲ್ಲಿ ಭಯಭಕ್ತಿ ಹುಟ್ಟದಿರಲು ಸಾಧ್ಯವೇ ಇಲ್ಲ. ಹಾಗಾದರೆ, ನಾವು ಈ ಗುಣದ ಅರ್ಥವನ್ನು ಹೇಗೆ ನಿರೂಪಿಸಬಲ್ಲೆವು? ವಿವೇಕವು ಜ್ಞಾನ, ವಿವೇಚನಾಶಕ್ತಿ, ಮತ್ತು ತಿಳಿವಳಿಕೆಯನ್ನು ಕಾರ್ಯರೂಪಕ್ಕೆ ಹಾಕುವ ಮೂಲಕ ಅಪೇಕ್ಷಿತ ಪರಿಣಾಮವನ್ನು ಉಂಟುಮಾಡುತ್ತದೆ. ತನ್ನ ಅಪಾರ ಜ್ಞಾನ ಹಾಗೂ ಅಗಾಧ ತಿಳಿವಳಿಕೆಯ ಆಧಾರದ ಮೇಲೆ ಯೆಹೋವನು ಯಾವಾಗಲೂ ಸಾಧ್ಯವಿರುವ ಅತ್ಯುತ್ತಮ ನಿರ್ಣಯಗಳನ್ನು ಮಾಡುತ್ತಾನೆ ಮತ್ತು ಊಹಿಸಸಾಧ್ಯವಿರುವುದರಲ್ಲಿ ಅತ್ಯುತ್ತಮವಾಗಿರುವ ಮಾರ್ಗಕ್ರಮದ ಮೂಲಕ ಅದನ್ನು ಕಾರ್ಯರೂಪಕ್ಕೆ ತರುತ್ತಾನೆ.
16, 17. ಯೆಹೋವನ ಸೃಷ್ಟಿಜೀವಿಗಳು ಆತನ ಅಪಾರವಾದ ವಿವೇಕಕ್ಕೆ ಹೇಗೆ ಸಾಕ್ಷ್ಯನೀಡುತ್ತವೆ? ಒಂದು ಉದಾಹರಣೆಯನ್ನು ಕೊಡಿ.
16 ಯೆಹೋವನ ಅಪಾರ ವಿವೇಕದ ಕೆಲವು ನಿರ್ದಿಷ್ಟ ಪುರಾವೆಗಳು ಯಾವುವು? ಕೀರ್ತನೆ 104:24 ಹೇಳುವುದು: “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. ಅವುಗಳನ್ನೆಲ್ಲಾ ಜ್ಞಾನ [“ವಿವೇಕ,” NW]ದಿಂದಲೇ ಮಾಡಿದ್ದೀ; ಭೂಲೋಕವು ನಿನ್ನ ಆಸ್ತಿಯಿಂದ [“ಉತ್ಪನ್ನಗಳಿಂದ,” NW] ತುಂಬಿರುತ್ತದೆ.” ಹೌದು, ಯೆಹೋವನು ನಿರ್ಮಿಸಿರುವ ವಿಷಯಗಳ ಕುರಿತು ನಾವು ಎಷ್ಟು ಹೆಚ್ಚು ಕಲಿಯುತ್ತೇವೋ ಆತನ ವಿವೇಕದಿಂದ ನಾವು ಅಷ್ಟೇ ಹೆಚ್ಚು ಚಕಿತರಾಗುತ್ತೇವೆಂಬುದು ನಿಶ್ಚಯ. ಅಷ್ಟೇಕೆ, ಯೆಹೋವನ ಸೃಷ್ಟಿಯ ಅಧ್ಯಯನಮಾಡುವ ಮೂಲಕ ವಿಜ್ಞಾನಿಗಳು ಎಷ್ಟೋ ವಿಷಯಗಳನ್ನು ಕಲಿತಿದ್ದಾರೆ! ಎಂಜಿನಿಯರಿಂಗ್ ವಿದ್ಯಾವಲಯದಲ್ಲಿ, ಪ್ರಕೃತಿಯಲ್ಲಿ ಕಂಡುಬರುವ ವಿನ್ಯಾಸಗಳನ್ನು ಅನುಕರಿಸುವ ಬಯೋಮಿಮಟಿಕ್ಸ್ (ಜೈವಿಕ ರೂಪಾನುಕರಣ ಶಾಸ್ತ್ರ) ಎಂಬ ಕ್ಷೇತ್ರವೂ ಇದೆ.
17 ಉದಾಹರಣೆಗೆ, ನೀವು ಒಂದು ಜೇಡರ ಬಲೆಯ ಸೌಂದರ್ಯವನ್ನು ಆಶ್ಚರ್ಯದಿಂದ ಗಮನಿಸಿರಬಹುದು. ಖಂಡಿತವಾಗಿಯೂ ಇದು ಅದ್ಭುತಕರವಾದ ವಿನ್ಯಾಸವಾಗಿದೆ. ಅದರ ಬಲಹೀನವಾಗಿ ಕಾಣುವ ಕೆಲವು ಎಳೆಗಳು ಸ್ಟೀಲ್ಗಿಂತಲೂ ಹೆಚ್ಚು ಬಲವುಳ್ಳವುಗಳೂ, ಗುಂಡುನಿರೋಧಕ ಕವಚದಲ್ಲಿರುವ ನಾರಿಗಿಂತಲೂ ಕಠಿನವೂ ಆಗಿವೆ. ವಾಸ್ತವದಲ್ಲಿ ಇದು ನಿರ್ದಿಷ್ಟವಾಗಿ ಏನನ್ನು ಅರ್ಥೈಸುತ್ತದೆ? ಒಂದು ಜೇಡರ ಬಲೆಯು, ಮೀನು ಹಿಡಿಯುವ ದೋಣಿಯಲ್ಲಿ ಉಪಯೋಗಿಸಲ್ಪಡುವ ಬಲೆಯ ಗಾತ್ರದಷ್ಟು ದೊಡ್ಡದಾಗಿ ಮಾಡಲ್ಪಟ್ಟಿರುವುದನ್ನು ಊಹಿಸಿಕೊಳ್ಳಿರಿ. ಅಂಥ ಒಂದು ಬಲೆಯು ಎಷ್ಟು ಗಟ್ಟಿಯಾಗಿರುವುದೆಂದರೆ, ಅದು ಪ್ರಯಾಣಿಕರ ಒಂದು ವಿಮಾನವನ್ನು ಆಕಾಶದಲ್ಲಿ ಹಾರಾಟದ ಮಧ್ಯದಲ್ಲಿ ನಿಲ್ಲಿಸುವಷ್ಟು ಬಲವುಳ್ಳದ್ದಾಗಿರುವುದು! ಹೌದು, ಯೆಹೋವನು ಇಂಥ ಎಲ್ಲಾ ವಸ್ತುಗಳನ್ನು ಮಾಡಿರುವುದು “ವಿವೇಕ”ದಿಂದಲೇ.
18. ತನ್ನ ವಾಕ್ಯವಾದ ಬೈಬಲನ್ನು ದಾಖಲಿಸಲಿಕ್ಕಾಗಿ ಯೆಹೋವನು ಮಾನವರನ್ನು ಉಪಯೋಗಿಸಿದ್ದರಲ್ಲಿ ಆತನ ವಿವೇಕವು ಹೇಗೆ ವ್ಯಕ್ತವಾಗುತ್ತದೆ?
18 ಯೆಹೋವನ ವಿವೇಕದ ಅತ್ಯಂತ ಮಹಾ ಪುರಾವೆಯು ಆತನ ವಾಕ್ಯವಾದ ಬೈಬಲಿನಲ್ಲಿ ಕಂಡುಬರುತ್ತದೆ. ಅದರ ಪುಟಗಳಲ್ಲಿ ಕಂಡುಬರುವ ವಿವೇಕಪೂರ್ಣವಾದ ಸಲಹೆಯು, ನಾವು ಜೀವಿಸಬೇಕಾದ ಅತ್ಯುತ್ತಮ ವಿಧಾನವನ್ನು ನಿಜವಾಗಿಯೂ ತೋರಿಸುತ್ತದೆ. (ಯೆಶಾಯ 48:17) ಆದರೆ ಯೆಹೋವನ ಅತುಲ್ಯ ವಿವೇಕವು ಬೈಬಲು ಬರೆಯಲ್ಪಟ್ಟಿರುವ ರೀತಿಯಲ್ಲಿಯೂ ಕಂಡುಬರುತ್ತದೆ. ಅದು ಹೇಗೆ? ತನ್ನ ವಿವೇಕದಲ್ಲಿ ಯೆಹೋವನು, ತನ್ನ ವಾಕ್ಯವನ್ನು ದಾಖಲಿಸಲಿಕ್ಕಾಗಿ ಮಾನವರನ್ನು ಉಪಯೋಗಿಸುವ ಆಯ್ಕೆಮಾಡಿದನು. ಪ್ರೇರಿತ ವಾಕ್ಯವನ್ನು ಬರೆಯಲಿಕ್ಕಾಗಿ ಆತನು ದೇವದೂತರನ್ನು ಉಪಯೋಗಿಸುತ್ತಿದ್ದಲ್ಲಿ, ಬೈಬಲಿಗೆ ಅದೇ ರೀತಿಯ ಆಕರ್ಷಣೆ ಇರುತ್ತಿತ್ತೋ? ದೇವದೂತರು ತಮ್ಮ ಉನ್ನತ ದೃಷ್ಟಿಕೋನದಿಂದ ಯೆಹೋವನನ್ನು ಚಿತ್ರಿಸಿ, ಆತನೆಡೆಗಿನ ತಮ್ಮ ಭಕ್ತಿಯನ್ನು ಸೂಚಿಸಬಹುದಿತ್ತು ನಿಜ. ಆದರೆ ಯಾರ ಜ್ಞಾನ, ಅನುಭವ ಮತ್ತು ಬಲವು ನಮ್ಮದಕ್ಕಿಂತಲೂ ಎಷ್ಟೋ ಹೆಚ್ಚು ಶ್ರೇಷ್ಠವಾಗಿದೆಯೋ ಅಂತಹ ಪರಿಪೂರ್ಣ ಆತ್ಮಜೀವಿಗಳ ದೃಷ್ಟಿಕೋನವನ್ನು ನಾವು ನಿಜವಾಗಿಯೂ ಗ್ರಹಿಸಶಕ್ತರಾಗುತ್ತಿದ್ದೆವೊ?—ಇಬ್ರಿಯ 2:6, 7.
19. ಮಾನವ ಬರಹಗಾರರ ಉಪಯೋಗವು ಬೈಬಲಿಗೆ ಮಹತ್ತರವಾದ ಭಾವುಕತೆಯನ್ನೂ ಆಕರ್ಷಣೆಯನ್ನೂ ಕೊಡುತ್ತದೆ ಎಂಬುದನ್ನು ಯಾವ ಉದಾಹರಣೆಯು ತೋರಿಸುತ್ತದೆ?
19 ಮಾನವ ಲೇಖಕರ ಉಪಯೋಗವು ಬೈಬಲಿಗೆ ಮಹತ್ತರವಾದ ಭಾವುಕತೆಯನ್ನೂ ಆಕರ್ಷಣೆಯನ್ನೂ ಕೊಡುತ್ತದೆ. ಏಕೆಂದರೆ ಅದರ ಲೇಖಕರು ನಮ್ಮಂಥ ಭಾವನೆಗಳುಳ್ಳ ಸಾಮಾನ್ಯ ಜನರಾಗಿದ್ದರು. ಅಪರಿಪೂರ್ಣರಾಗಿದ್ದುದರಿಂದ, ಅವರು ನಮ್ಮಂತಹದ್ದೇ ಪರೀಕ್ಷೆಗಳು ಮತ್ತು ಒತ್ತಡಗಳನ್ನು ಎದುರಿಸಿದರು. ಕೆಲವು ಸಂದರ್ಭಗಳಲ್ಲಿ, ಅವರು ತಮ್ಮ ಸ್ವಂತ ಭಾವನೆಗಳನ್ನೂ ಪ್ರಯಾಸಗಳನ್ನೂ ಪ್ರಥಮ ವಿಭಕ್ತಿಯಲ್ಲಿ ಬರೆದರು. (2 ಕೊರಿಂಥ 12:7-10) ಆದುದರಿಂದ, ಯಾವನೇ ದೇವದೂತನಿಗೆ ವ್ಯಕ್ತಪಡಿಸಲು ಅಸಾಧ್ಯವಾಗಿದ್ದಂಥ ಮಾತುಗಳನ್ನು ಅವರು ಬರೆದರು. ಉದಾಹರಣೆಗೆ, ಕೀರ್ತನೆ 51ರಲ್ಲಿ ದಾಖಲಿಸಲ್ಪಟ್ಟಿರುವ ದಾವೀದನ ಮಾತುಗಳನ್ನು ತೆಗೆದುಕೊಳ್ಳಿರಿ. ಆ ಕೀರ್ತನೆಯ ಮೇಲ್ಬರಹಕ್ಕನುಸಾರ, ದಾವೀದನು ಗಂಭೀರವಾದ ಪಾಪವನ್ನು ಮಾಡಿದ ಬಳಿಕ ಇದನ್ನು ರಚಿಸಿದನು. ಅವನು ಗಾಢವಾದ ಶೋಕವನ್ನು ವ್ಯಕ್ತಪಡಿಸುತ್ತಾ, ದೇವರ ಕ್ಷಮಾಪಣೆಯನ್ನು ಬೇಡಿಕೊಳ್ಳುತ್ತಾ, ತನ್ನ ಹೃದಯದಲ್ಲಿದ್ದ ಬೇಗುದಿಯನ್ನು ಹೊರಹಾಕಿದನು. 2 ಮತ್ತು 3ನೆಯ ವಚನಗಳು ಹೇಳುವುದು: “ನನ್ನ ಪಾಪವನ್ನು ಸಂಪೂರ್ಣವಾಗಿ ತೊಳೆದುಬಿಡು; ನನ್ನ ದೋಷವನ್ನು ಪರಿಹರಿಸಿ ನನ್ನನ್ನು ಶುದ್ಧಿಗೊಳಿಸು. ನಾನು ದ್ರೋಹಿ ಎಂದು ನಾನೇ ಒಪ್ಪಿಕೊಂಡಿದ್ದೇನೆ, ನನ್ನ ಪಾಪವು ಯಾವಾಗಲೂ ನನ್ನ ಮುಂದೆ ಇದೆ.” 5ನೆಯ ವಚನವನ್ನು ಗಮನಿಸಿ: “ಹುಟ್ಟಿದಂದಿನಿಂದ ನಾನು ಪಾಪಿಯೇ; ಮಾತೃಗರ್ಭವನ್ನು ಹೊಂದಿದ ದಿನದಿಂದ ದ್ರೋಹಿಯೇ.” 17ನೆಯ ವಚನವು ಕೂಡಿಸಿ ಹೇಳುವುದು: “ಕುಗ್ಗಿದ ಮನಸ್ಸೇ ದೇವರಿಗೆ ಇಷ್ಟಯಜ್ಞ; ದೇವರೇ, ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು ನೀನು ತಿರಸ್ಕರಿಸುವದಿಲ್ಲ.” ಈ ಲೇಖಕನ ಸಂಕಟವನ್ನು ನೀವು ಗ್ರಹಿಸಲಾರಿರೊ? ಇಂಥ ಹೃತ್ಪೂರ್ವಕ ಅನಿಸಿಕೆಗಳನ್ನು ಒಬ್ಬ ಅಪರಿಪೂರ್ಣ ಮಾನವನಲ್ಲದೆ ಇನ್ನಾರು ವ್ಯಕ್ತಪಡಿಸಿಯಾರು?
20, 21. (ಎ) ಮಾನವ ಲೇಖಕರನ್ನು ಉಪಯೋಗಿಸಿರುವುದಾದರೂ, ಬೈಬಲಿನಲ್ಲಿ ಯೆಹೋವನ ವಿವೇಕವು ಅಡಕವಾಗಿದೆ ಎಂದು ಏಕೆ ಹೇಳಸಾಧ್ಯವಿದೆ? (ಬಿ) ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?
20 ಇಂಥ ಅಪರಿಪೂರ್ಣ ಮಾನವರನ್ನು ಉಪಯೋಗಿಸುವ ಮೂಲಕ, ಯೆಹೋವನು ನಮಗೆ ಏನು ಅಗತ್ಯವೋ ಅದನ್ನು, ಅಂದರೆ “ದೈವಪ್ರೇರಿತ”ವಾದರೂ ಮಾನವೀಯ ಅಂಶವುಳ್ಳ ದಾಖಲೆಯನ್ನು ಒದಗಿಸಿದನು. (2 ತಿಮೊಥೆಯ 3:16) ಹೌದು, ಆ ಲೇಖಕರು ದೇವರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟಿದ್ದರು. ಹೀಗೆ ಅವರು ತಮ್ಮ ಸ್ವಂತ ವಿವೇಕವನ್ನಲ್ಲ, ಬದಲಾಗಿ ಯೆಹೋವನ ವಿವೇಕವನ್ನು ದಾಖಲಿಸಿದರು. ಆ ವಿವೇಕವು ಸಂಪೂರ್ಣವಾಗಿ ಭರವಸಾರ್ಹವಾಗಿದೆ. ಅದು ನಮ್ಮ ಸ್ವಂತ ವಿವೇಕಕ್ಕಿಂತಲೂ ಎಷ್ಟು ಮಹೋನ್ನತವಾಗಿದೆಯೆಂದರೆ, ದೇವರು ಪ್ರೀತಿಪೂರ್ವಕವಾಗಿ ನಮ್ಮನ್ನು ಹೀಗೆ ಉತ್ತೇಜಿಸುತ್ತಾನೆ: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಿಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” (ಜ್ಞಾನೋಕ್ತಿ 3:5, 6) ಆ ವಿವೇಕಪೂರ್ಣ ಬುದ್ಧಿವಾದಕ್ಕೆ ಕಿವಿಗೊಡುವ ಮೂಲಕ, ನಾವು ನಮ್ಮ ಸರ್ವವಿವೇಕಿಯಾದ ದೇವರ ಸಮೀಪಕ್ಕೆ ಸೆಳೆಯಲ್ಪಡುತ್ತೇವೆ.
21 ಯೆಹೋವನ ಎಲ್ಲಾ ಗುಣಗಳಲ್ಲಿ ಅತ್ಯಂತ ಪ್ರಿಯವಾದ ಮತ್ತು ಸೊಗಸಾದ ಗುಣವು ಪ್ರೀತಿಯೇ ಆಗಿದೆ. ಯೆಹೋವನು ಹೇಗೆ ಪ್ರೀತಿಯನ್ನು ತೋರಿಸಿದ್ದಾನೆ ಎಂಬುದು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವುದು.
ನೀವು ನೆನಪಿಸಿಕೊಳ್ಳಬಲ್ಲಿರೋ?
• ನಾವು ಯೆಹೋವನೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳುವುದನ್ನು ಸಾಧ್ಯಗೊಳಿಸಲು ಆತನು ಯಾವ ಹೆಜ್ಜೆಗಳನ್ನು ತೆಗೆದುಕೊಂಡಿದ್ದಾನೆ?
• ಯೆಹೋವನ ಸೃಷ್ಟಿಕಾರಕ ಶಕ್ತಿ ಮತ್ತು ಆತನ ಸಂರಕ್ಷಣಾ ಶಕ್ತಿಯ ಕೆಲವು ಉದಾಹರಣೆಗಳು ಯಾವುವು?
• ಯಾವ ವಿಧಗಳಲ್ಲಿ ಯೆಹೋವನು ನ್ಯಾಯವನ್ನು ತೋರಿಸುತ್ತಾನೆ?
• ಸೃಷ್ಟಿವಸ್ತುಗಳಲ್ಲಿ ಹಾಗೂ ಬೈಬಲಿನಲ್ಲಿ ಯೆಹೋವನ ವಿವೇಕವು ಹೇಗೆ ಕಂಡುಬರುತ್ತದೆ?
[ಅಧ್ಯಯನ ಪ್ರಶ್ನೆಗಳು]
[ಪುಟ 10ರಲ್ಲಿರುವ ಚಿತ್ರ]
ತನ್ನ ಎದೆಯ ಬಳಿ ಕುರಿಮರಿಯೊಂದನ್ನು ಹೊತ್ತುಕೊಂಡು ಹೋಗುವಂಥ ಒಬ್ಬ ಕುರುಬನಂತೆ ಯೆಹೋವನು ತನ್ನ ಕುರಿಗಳನ್ನು ಕೋಮಲಭಾವದಿಂದ ಪರಾಮರಿಸುತ್ತಾನೆ
[ಪುಟ 13ರಲ್ಲಿರುವ ಚಿತ್ರ]
ಬೈಬಲ್ ಬರೆಯಲ್ಪಟ್ಟಿರುವಂಥ ರೀತಿಯಲ್ಲಿ ಯೆಹೋವನ ವಿವೇಕವು ಕಂಡುಬರುತ್ತದೆ