ಯೇಸು ಅಸ್ತಿತ್ವದಲ್ಲಿದ್ದನು ಎಂಬುದಕ್ಕೆ ಪ್ರಾಕ್ತನಶಾಸ್ತ್ರದ ರುಜುವಾತಿದೆಯೊ?
ಯೇಸು ಅಸ್ತಿತ್ವದಲ್ಲಿದ್ದನು ಎಂಬುದಕ್ಕೆ ಪ್ರಾಕ್ತನಶಾಸ್ತ್ರದ ರುಜುವಾತಿದೆಯೊ?
“ಯೇಸುವಿನ ಬಗ್ಗೆ ಶಿಲಾಲಿಖಿತ ರುಜುವಾತು.” ಇದನ್ನು, ಬಿಬ್ಲಿಕಲ್ ಆರ್ಕಿಯಾಲಜಿ ರಿವ್ಯೂ (ನವೆಂಬರ್/ಡಿಸೆಂಬರ್ 2002) ಪತ್ರಿಕೆಯ ಮುಖಪುಟವು ಘೋಷಿಸಿತು. ಆ ಪುಟದಲ್ಲಿ ಇಸ್ರಾಯೇಲಿನಲ್ಲಿ ಪತ್ತೆಯಾಗಿದ್ದ ಒಂದು ಸುಣ್ಣಕಲ್ಲಿನ ಅಸ್ಥಿಪಾತ್ರೆಯ ಚಿತ್ರವಿತ್ತು. ಇಂತಹ ಅಸ್ಥಿಪಾತ್ರೆಗಳನ್ನು ಯೆಹೂದ್ಯರು ಸಾ.ಶ.ಪೂ. ಒಂದನೆಯ ಶತಮಾನದಿಂದ ಸಾ.ಶ. 70ರ ವರೆಗಿನ ಸಂಕ್ಷಿಪ್ತ ಅವಧಿಯಲ್ಲಿ ವ್ಯಾಪಕವಾಗಿ ಉಪಯೋಗಿಸುತ್ತಿದ್ದರು. ಈ ಪಾತ್ರೆಯ ಒಂದು ಬದಿಯಲ್ಲಿದ್ದ ಅರಮೇಯ ಭಾಷೆಯ ಕೆತ್ತನೆಯ ಲಿಪಿಯು, ಅದನ್ನು ವಿಶೇಷವಾಗಿ ಗಮನಾರ್ಹವಾದದ್ದಾಗಿ ಮಾಡಿತು. ಅದರಲ್ಲಿ ಹೀಗೆ ಬರೆಯಲ್ಪಟ್ಟಿತ್ತೆಂದು ವಿದ್ವಾಂಸರು ಒಪ್ಪಿಕೊಂಡರು: “ಯೋಸೇಫನ ಪುತ್ರನೂ ಯೇಸುವಿನ ಸಹೋದರನೂ ಆದ ಯಾಕೋಬನು.”
ಬೈಬಲಿಗನುಸಾರ, ನಜರೇತಿನ ಯೇಸುವಿಗೆ ಯಾಕೋಬನೆಂಬ ತಮ್ಮನಿದ್ದನು. ಇವನನ್ನು, ಮರಿಯಳ ಗಂಡನಾದ ಯೋಸೇಫನ ಮಗನೆಂದು ಪರಿಗಣಿಸಲಾಗಿತ್ತು. ಯೇಸು ತನ್ನ ಸ್ವಂತ ಊರಿನಲ್ಲಿ ಬೋಧಿಸುತ್ತಿದ್ದಾಗ, ವಿಸ್ಮಿತರಾದ ಜನರು ಹೀಗೆ ಕೇಳಿದರು: “ಇವನು ಆ ಬಡಗಿಯ ಮಗನಲ್ಲವೇ. ಇವನ ತಾಯಿ ಮರಿಯಳೆಂಬವಳಲ್ಲವೇ. ಯಾಕೋಬ ಯೋಸೇಫ ಸೀಮೋನ ಯೂದ ಇವರು ಇವನ ತಮ್ಮಂದಿರಲ್ಲವೇ. ಇವನ ತಂಗಿಯರೆಲ್ಲರು ನಮ್ಮಲ್ಲಿ ಇದ್ದಾರಲ್ಲವೇ.”—ಮತ್ತಾಯ 13:54-56; ಲೂಕ 4:22; ಯೋಹಾನ 6:42.
ಹೌದು, ಆ ಅಸ್ಥಿಪಾತ್ರೆಯ ಲಿಪಿಪ್ರತಿಯು ನಜರೇತಿನ ಯೇಸುವಿನ ಕುರಿತಾದ ವರ್ಣನೆಯನ್ನು ಹೋಲುತ್ತದೆ. ಹಳೇ ಕೆತ್ತನೆಲಿಪಿಗಳ ವಿಷಯದಲ್ಲಿ ನಿಪುಣರೂ ಬಿಬ್ಲಿಕಲ್ ಆರ್ಕಿಯಾಲಜಿ ರಿವ್ಯೂನಲ್ಲಿದ್ದ ಮೇಲಿನ ಲೇಖನವನ್ನು ಬರೆದವರೂ ಆದ ಆಂಡ್ರೆ ಲಮೆರ್ ಎಂಬವರು, ಆ ಕೆತ್ತನೆಲಿಪಿಯಲ್ಲಿ ತಿಳಿಸಲ್ಪಟ್ಟಿರುವ ಯಾಕೋಬನು ಯೇಸು ಕ್ರಿಸ್ತನ ಮಲಸಹೋದರನಾಗಿರುವಲ್ಲಿ ಇದು ಯೇಸುವಿನ ಕುರಿತ “ಬೈಬಲೇತರ ಪ್ರಾಕ್ತನಶಾಸ್ತ್ರೀಯ ರುಜುವಾತುಗಳಲ್ಲಿ ಅತಿ ಹಳೆಯದಾಗಿ”ದೆಯೆಂದು ಪ್ರತಿಪಾದಿಸುತ್ತಾರೆ. ಆ ಪತ್ರಿಕೆಯ ಸಂಪಾದಕರಾದ ಹರ್ಷಲ್ ಶ್ಯಾಂಕ್ಸ್ ಗಮನಿಸುವುದೇನೆಂದರೆ ಆ ಅಸ್ಥಿಪಾತ್ರೆಯು, “ಭೂಮಿಯಲ್ಲಿ ಜೀವಿಸಿದ ಏಕಮಾತ್ರ ಅತಿ ಪ್ರಾಮುಖ್ಯ ವ್ಯಕ್ತಿಯ ಸಮಯದಷ್ಟು ಹಿಂದಿನ ಸ್ಪರ್ಶ್ಯ ಮತ್ತು ದೃಶ್ಯ ವಸ್ತುವಾಗಿದೆ.”
ಆದರೆ ಆ ಅಸ್ಥಿಪಾತ್ರೆಯ ಮೇಲಿದ್ದ ಆ ಮೂರು ಹೆಸರುಗಳೂ ಒಂದನೆಯ ಶತಮಾನದಲ್ಲಿ ಸಾಮಾನ್ಯವಾಗಿದ್ದವು. ಆದುದರಿಂದ ಯೇಸು ಕ್ರಿಸ್ತನ ಕುಟುಂಬ ಮಾತ್ರವಲ್ಲದೇ ಬೇರೊಂದು ಕುಟುಂಬದಲ್ಲಿಯೂ ಯಾಕೋಬ, ಯೋಸೇಫ ಮತ್ತು ಒಬ್ಬ ಯೇಸು ಇದ್ದಿರುವ ಸಾಧ್ಯತೆಯಿದೆ. ಲಮೆರ್ ಅಂದಾಜು ಹಾಕುವುದು: “ಯೆರೂಸಲೇಮಿನಲ್ಲಿ ಸಾ.ಶ. 70ರ ಹಿಂದಿನ ಎರಡು ಪೀಳಿಗೆಗಳಲ್ಲಿ ಬಹುಶಃ ‘ಯೋಸೇಫನ ಮಗನೂ ಯೇಸುವಿನ ಸಹೋದರನೂ’ ಆಗಿದ್ದ ‘ಜೇಮ್ಸ್/ಯಾಕೋಬ’ ಎಂದು ಕರೆಯಲ್ಪಟ್ಟ ಸುಮಾರು 20 ಜನರಿದ್ದಿರಬಹುದು.” ಆದರೂ ಆ ಅಸ್ಥಿಪಾತ್ರೆಯಲ್ಲಿ ಲಿಖಿತವಾಗಿದ್ದ ಯಾಕೋಬನು ಯೇಸು ಕ್ರಿಸ್ತನ ಮಲಸಹೋದರನೇ ಆಗಿರಬೇಕು ಎಂಬುದಕ್ಕೆ 90 ಪ್ರತಿಶತ ಸಾಧ್ಯತೆ ಇದೆ ಎಂದು ಅವರಿಗನಿಸುತ್ತದೆ.
ಆ ಕೆತ್ತನೆಲಿಪಿಯಲ್ಲಿ ತಿಳಿಸಲ್ಪಟ್ಟಿರುವ ಯಾಕೋಬನು ಯೇಸು ಕ್ರಿಸ್ತನ ಮಲಸಹೋದರನೇ ಆಗಿರಬೇಕೆಂದು ಕೆಲವರು ನಂಬುವಂತೆ ಮಾಡುವ ಇನ್ನೊಂದು ಅಂಶವಿದೆ. ಅಂತಹ ಕೆತ್ತನೆಲಿಪಿಗಳಲ್ಲಿ ಮೃತನ ತಂದೆಯ ಹೆಸರನ್ನು ಬರೆಯುವುದು
ಸಾಮಾನ್ಯವಾಗಿದ್ದರೂ ಸಹೋದರನ ಹೆಸರನ್ನು ಬರೆಯುವುದು ತೀರ ವಿರಳವಾಗಿತ್ತು. ಆದುದರಿಂದ ಕೆಲವು ವಿದ್ವಾಂಸರಿಗೆ ಈ ಯೇಸು ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದನೆಂದೂ, ಅವನು ಕ್ರೈಸ್ತತ್ವದ ಸ್ಥಾಪಕನಾದ ಯೇಸು ಕ್ರಿಸ್ತನೇ ಆಗಿದ್ದಿರಬೇಕೆಂದೂ ನಂಬುವಂತೆ ಮಾಡುತ್ತದೆ.ಆ ಅಸ್ಥಿಪಾತ್ರೆ ವಿಶ್ವಾಸಾರ್ಹವೊ?
ಅಸ್ಥಿಪಾತ್ರೆಯೆಂದರೇನು? ಅದು ಒಂದು ಪೆಟ್ಟಿಗೆ ಅಥವಾ ಪೆಠಾರಿ ಆಗಿದೆ. ಮೃತನ ಶರೀರವು ಹೂಳಿಡಲ್ಪಡುವ ಗವಿಯಲ್ಲಿ ಮಣ್ಣುಪಾಲಾದ ಮೇಲೆ ಆ ಮೃತನ ಎಲುಬುಗಳನ್ನು ಆ ಪೆಟ್ಟಿಗೆಯಲ್ಲಿ ಹಾಕಿಡಲಾಗುತ್ತಿತ್ತು. ಯೆರೂಸಲೇಮಿನ ಸುತ್ತಲಿದ್ದ ಅನೇಕ ಸಮಾಧಿಗಳಿಂದ ಅನೇಕ ಅಸ್ಥಿಪಾತ್ರೆಗಳನ್ನು ಲೂಟಿ ಮಾಡಲಾಗಿತ್ತು. ಈ ಯಾಕೋಬನ ಕೆತ್ತನೆಲಿಪಿಯಿದ್ದ ಪೆಟ್ಟಿಗೆಯು ಅಧಿಕೃತ ಭೂಅಗೆತ ನಿವೇಶನದಿಂದಲ್ಲ, ಬದಲಾಗಿ ಒಂದು ಪುರಾತನ ಅವಶೇಷಗಳ ಮಾರುಕಟ್ಟೆಯೊಂದರಿಂದ ದೊರಕಿತ್ತು. ಆ ಪಾತ್ರೆಯ ಒಡೆಯನು ಅದನ್ನು 1970ರ ದಶಕದಲ್ಲಿ ಕೆಲವೇ ನೂರು ಡಾಲರುಗಳಿಗೆ ಖರೀದಿಸಿದ್ದನೆಂದು ಹೇಳಲಾಗಿದೆ. ಹೀಗೆ ಆ ಪಾತ್ರೆಯ ಮೂಲವು ರಹಸ್ಯದಲ್ಲಿ ಮರೆಯಾಗಿದೆ. ಬಾರ್ಡ್ ಕಾಲೇಜಿನ ಪ್ರೊಫೆಸರ್ ಬ್ರೂಸ್ ಚಿಲ್ಟನ್‌ರವರು ಹೇಳುವುದು: “ಒಂದು ಅವಶೇಷವು ಎಲ್ಲಿ ಸಿಕ್ಕಿತು ಮತ್ತು ಸುಮಾರು 2,000 ವರುಷಗಳ ತನಕ ಅದು ಎಲ್ಲಿತ್ತು ಎಂದು ನಿಮಗೆ ತಿಳಿಯದಿರುವಲ್ಲಿ, ಆ ವಸ್ತು ಮತ್ತು ಅದು ತಿಳಿಸುವ ಜನರ ಮಧ್ಯೆ ಸಂಬಂಧವನ್ನು ನೀವು ಊಹಿಸಿ ಹೇಳಸಾಧ್ಯವಿಲ್ಲ.”
ಪ್ರಾಕ್ತನಶಾಸ್ತ್ರೀಯ ಹಿನ್ನೆಲೆಯ ಕೊರತೆಯನ್ನು ನೀಗಿಸಲು, ಆಂಡ್ರೆ ಲಮೆರ್ ಆ ಅಸ್ಥಿಪಾತ್ರೆಯನ್ನು ಜಿಅಲಾಜಿಕಲ್ ಸರ್ವೆ ಆಫ್ ಇಸ್ರಾಯೇಲ್ ಸಂಸ್ಥೆಗೆ ಕಳುಹಿಸಿದರು. ಅಲ್ಲಿನ ಸಂಶೋಧಕರು, ಆ ಪಾತ್ರೆಯು ಸಾ.ಶ. ಒಂದನೆಯ ಅಥವಾ ಎರಡನೆಯ ಶತಮಾನದ ಸುಣ್ಣಕಲ್ಲಿನಿಂದ ಮಾಡಲ್ಪಟ್ಟಿದೆ ಎಂದು ದೃಢಪಡಿಸಿದರು. ಅದರ ರಚನೆಯಲ್ಲಿ “ಯಾವುದೇ ಆಧುನಿಕ ಸಾಧನ ಅಥವಾ ಉಪಕರಣದ ಉಪಯೋಗವು ಕಂಡುಬರಲಿಲ್ಲ” ಎಂದು ಅವರು ವರದಿ ಮಾಡಿದರು. ಆದರೂ, ದ ನ್ಯೂ ಯಾರ್ಕ್ ಟೈಮ್ಸ್ ಇಂಟರ್‌ವ್ಯೂ ಮಾಡಿದ ಬೈಬಲ್ ವಿದ್ವಾಂಸರು ಹೇಳಿದ್ದು: “ಯೇಸುವಿನೊಂದಿಗೆ ಸಂಬಂಧವಿದೆಯೆಂಬುದನ್ನು ಬೆಂಬಲಿಸುವ ಸಾಂದರ್ಭಿಕ ಸಾಕ್ಷ್ಯ ಪ್ರಬಲವಾಗಿದ್ದರೂ ಅದು ಕೇವಲ ಸಾಂದರ್ಭಿಕ ಅಷ್ಟೇ.”
ಟೈಮ್ ಪತ್ರಿಕೆ ಹೇಳಿದ್ದು: “ಈ ದಿನಗಳಲ್ಲಿ ಹೆಚ್ಚು ಕಡಮೆ ಯಾವ ವಿದ್ಯಾವಂತನೂ ಯೇಸು ಜೀವಿಸಿದನೆಂಬ ವಿಷಯವನ್ನು ಸಂದೇಹಿಸುವುದಿಲ್ಲ.” ಆದರೂ, ಯೇಸುವಿನ ಅಸ್ತಿತ್ವದ ಬಗ್ಗೆ ಬೈಬಲಿನೊಂದಿಗೆ, ಇನ್ನೂ ಹೆಚ್ಚಿನ ಹೊರಗಣ ಸಾಕ್ಷ್ಯವು ಇರಲೇಬೇಕೆಂದು ಅನೇಕರು ಅಭಿಪ್ರಯಿಸುತ್ತಾರೆ. ಹಾಗಾದರೆ ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನಿಡಲು ಪ್ರಾಕ್ತನಶಾಸ್ತ್ರವು ಆಧಾರವಾಗಿರಬೇಕೊ? “ಭೂಮಿಯಲ್ಲಿ ಜೀವಿಸಿದ ಏಕಮಾತ್ರ ಅತಿ ಪ್ರಾಮುಖ್ಯ ವ್ಯಕ್ತಿಯ” ಐತಿಹಾಸಿಕತೆಗೆ ನಮ್ಮಲ್ಲಿ ಯಾವ ಸಾಕ್ಷ್ಯವಿದೆ?
[ಪುಟ 3ರಲ್ಲಿರುವ ಚಿತ್ರ ಕೃಪೆ]
ಎಡಬದಿ, ಯಾಕೋಬನ ಅಸ್ಥಿಪಾತ್ರೆ: AFP PHOTO/J.P. Moczulski; ಬಲಬದಿ, ಕೆತ್ತನೆ ಲಿಪಿ: AFP PHOTO/HO