ನೀವು ಏನು ಮಾಡುತ್ತೀರೋ ಅದನ್ನು ಯೆಹೋವನು ಗಮನಿಸುತ್ತಾನೊ?
ನೀವು ಏನು ಮಾಡುತ್ತೀರೋ ಅದನ್ನು ಯೆಹೋವನು ಗಮನಿಸುತ್ತಾನೊ?
ಈ ಪ್ರಶ್ನೆಯನ್ನು ನೀವು ಹೇಗೆ ಉತ್ತರಿಸುವಿರಿ? ಅನೇಕರು ಹೀಗೆ ಹೇಳಬಹುದು: ‘ಮೋಶೆ, ಗಿದ್ಯೋನ್ ಮತ್ತು ದಾವೀದರಂತಹ ವ್ಯಕ್ತಿಗಳ ಸಾಧನೆಗಳನ್ನು ದೇವರು ಗಮನಿಸಿದನೆಂದು ನಾನು ನಂಬುತ್ತೇನೆ. ಆದರೆ ನಾನು ಮಾಡಸಾಧ್ಯವಿರುವ ಯಾವುದೇ ವಿಷಯದಲ್ಲಿ ಆತನು ಆಸಕ್ತನಾಗಿದ್ದಾನೆಂದು ನಾನು ನಂಬುವುದಿಲ್ಲ. ಏಕೆಂದರೆ ನಿಶ್ಚಯವಾಗಿಯೂ ನಾನು ಮೋಶೆ, ಗಿದ್ಯೋನ್ ಅಥವಾ ದಾವೀದರಂತೆ ಇಲ್ಲ.’
ಬೈಬಲ್ ಸಮಯಗಳಲ್ಲಿ ಅನೇಕ ನಂಬಿಗಸ್ತ ವ್ಯಕ್ತಿಗಳು ನಂಬಿಕೆಯ ಅಸಾಧಾರಣವಾದ ಕೃತ್ಯಗಳನ್ನು ಮಾಡಿದರೆಂಬುದು ನಿಜ. ಅವರು ‘ರಾಜ್ಯಗಳನ್ನು ಸ್ವಾಧೀನಮಾಡಿಕೊಂಡರು, ಸಿಂಹಗಳ ಬಾಯಿ ಕಟ್ಟಿದರು, ಬೆಂಕಿಯ ಬಲವನ್ನು ಆರಿಸಿದರು, ಕತ್ತಿಯ ಬಾಯಿಗೆ ತಪ್ಪಿಸಿಕೊಂಡರು.’ (ಇಬ್ರಿಯ 11:33, 34) ಆದರೆ ಇತರರು, ಕಡಿಮೆ ಪ್ರೇಕ್ಷಣೀಯ ರೀತಿಗಳಲ್ಲಿ ತಮ್ಮ ನಂಬಿಕೆಯನ್ನು ಪ್ರದರ್ಶಿಸಿದರು ಮತ್ತು ಅವರ ನಂಬಿಕೆಯ ಕೃತ್ಯಗಳನ್ನು ಸಹ ದೇವರು ಗಮನಿಸಿದನೆಂದು ಬೈಬಲ್ ನಮಗೆ ಆಶ್ವಾಸನೆ ನೀಡುತ್ತದೆ. ದೃಷ್ಟಾಂತಕ್ಕಾಗಿ, ಒಬ್ಬ ಕುರುಬನ, ಒಬ್ಬ ಪ್ರವಾದಿಯ ಮತ್ತು ಒಬ್ಬಾಕೆ ವಿಧವೆಯ ಶಾಸ್ತ್ರೀಯ ಉದಾಹರಣೆಗಳನ್ನು ಪರಿಗಣಿಸಿರಿ.
ಕುರುಬನೊಬ್ಬನು ಒಂದು ಯಜ್ಞವನ್ನು ಅರ್ಪಿಸುತ್ತಾನೆ
ಆದಾಮಹವ್ವರ ಎರಡನೆಯ ಮಗನಾದ ಹೇಬೆಲನ ಬಗ್ಗೆ ನೀವು ಯಾವ ವಿಷಯ ಜ್ಞಾಪಿಸಿಕೊಳ್ಳುತ್ತೀರಿ? ಒಂದುವೇಳೆ ನಮ್ಮಲ್ಲಿ ಕೇವಲ ಕೊಂಚವೇ ಜನರು ಅನುಭವಿಸಬಹುದಾದ ಹುತಾತ್ಮ ಮರಣವನ್ನು ಅವನು ಅನುಭವಿಸಿದನೆಂದು ನೀವು ನೆನಪಿಸಿಕೊಳ್ಳಬಹುದು. ಆದರೆ ಮೊದಲ ಬಾರಿ ಹೇಬೆಲನನ್ನು ದೇವರು ಗಮನಿಸಿದ್ದು ಬೇರೊಂದು ಕಾರಣಕ್ಕಾಗಿ.
ಒಂದು ದಿನ ಹೇಬೆಲನು ತನ್ನ ಹಿಂಡಿನಿಂದ ಕೆಲವು ಅತ್ಯುತ್ತಮವಾಗಿದ್ದ ಪ್ರಾಣಿಗಳನ್ನು ಆರಿಸಿಕೊಂಡು, ದೇವರಿಗೆ ಒಂದು ಯಜ್ಞವನ್ನು ಅರ್ಪಿಸಿದನು. ಇಂದು ಅವನ ಆ ಕಾಣಿಕೆಯು ಅತಿ ಸಣ್ಣದಾಗಿ ಕಾಣಬಹುದಾದರೂ, ಯೆಹೋವನು ಅದನ್ನು ಗಮನಿಸಿ, ತನ್ನ ಒಪ್ಪಿಗೆಯನ್ನು ವ್ಯಕ್ತಪಡಿಸಿದನು. ಅಷ್ಟುಮಾತ್ರವಲ್ಲ, ಸುಮಾರು ನಾಲ್ಕು ಸಾವಿರ ವರುಷಗಳ ನಂತರ, ಇಬ್ರಿಯರಿಗೆ ಬರೆದ ತನ್ನ ಪತ್ರದಲ್ಲಿ ಅಪೊಸ್ತಲ ಪೌಲನು ಈ ವಿಷಯದ ಕುರಿತು ಬರೆಯುವಂತೆ ಯೆಹೋವನು ಅವನನ್ನು ಪ್ರೇರಿಸಿದನು. ಅಷ್ಟೊಂದು ವರುಷಗಳ ನಂತರವೂ ಯೆಹೋವನು ಆ ಸರಳವಾದ ಯಜ್ಞವನ್ನು ಮರೆತುಬಿಡಲಿಲ್ಲ!—ಇಬ್ರಿಯ 6:10; 11:4.
ಯಾವ ರೀತಿಯ ಯಜ್ಞವನ್ನು ಅರ್ಪಿಸಬೇಕೆಂದು ಹೇಬೆಲನು ಹೇಗೆ ನಿರ್ಧರಿಸಿದನು? ಬೈಬಲ್ ಇದನ್ನು ತಿಳಿಸುವುದಿಲ್ಲವಾದರೂ, ವಿಷಯವನ್ನು ಅವನು ಗಂಭೀರವಾಗಿ ಪರಿಗಣಿಸಿದ್ದಿರಲೇಬೇಕು. ಅವನು ಒಬ್ಬ ಕುರುಬನಾಗಿದ್ದರಿಂದ ಅವನ ಹಿಂಡಿನಿಂದಲೇ ಕೆಲವು ಕುರಿಗಳನ್ನು ಯಜ್ಞವಾಗಿ ಅರ್ಪಿಸಿದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಗಮನಿಸಬೇಕಾದ ವಿಷಯವೇನೆಂದರೆ, ಅವನು ಅತ್ಯುತ್ತಮವಾದದ್ದನ್ನು ಕೊಟ್ಟನು ಅಂದರೆ ಕುರಿಗಳ “ಕೊಬ್ಬನ್ನು” ಅರ್ಪಿಸಿದನು. (ಆದಿಕಾಂಡ 4:4) ಏದೆನ್ ತೋಟದಲ್ಲಿ, “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ” ಎಂಬುದಾಗಿ, ಯೆಹೋವನು ಸರ್ಪಕ್ಕೆ ಹೇಳಿದ ಮಾತುಗಳನ್ನು ಅವನು ಮನನಮಾಡಿದ್ದಿರಲೂಬಹುದು. (ಆದಿಕಾಂಡ 3:15; ಪ್ರಕಟನೆ 12:9) “ಸ್ತ್ರೀ” ಮತ್ತು ಆಕೆಯ “ಸಂತಾನವು” ಯಾರನ್ನು ಸೂಚಿಸುತ್ತದೆ ಎಂಬುದು ಹೇಬೆಲನಿಗೆ ತಿಳಿಯದಿದ್ದರೂ, ಸ್ತ್ರೀಯ ಸಂತಾನದ “ಹಿಮ್ಮಡಿಯನ್ನು ಕಚ್ಚು”ವುದು ರಕ್ತದ ಸುರಿಸುವಿಕೆಯನ್ನು ಒಳಗೊಂಡಿದೆ ಎಂಬುದನ್ನು ಅವನು ಗ್ರಹಿಸಿದ್ದಿರಬಹುದು. ಜೀವದಿಂದಿರುವ, ಉಸಿರಾಡುತ್ತಿರುವ ಪ್ರಾಣಿಗಿಂತ ಹೆಚ್ಚು ಮೌಲ್ಯವುಳ್ಳದ್ದು ಯಾವುದೂ ಇರಸಾಧ್ಯವಿಲ್ಲವೆಂಬುದನ್ನು ಖಂಡಿತವಾಗಿಯೂ ಅವನು ಗ್ರಹಿಸಿದ್ದನು. ಅತಿ ಪ್ರಾಮುಖ್ಯವಾದ ವಿಷಯವೇನೆಂದರೆ, ಅವನು ಅರ್ಪಿಸಿದಂಥ ಯಜ್ಞವು ನಿಜವಾಗಿಯೂ ಸೂಕ್ತವಾಗಿತ್ತು.
ಇಂದು ಕ್ರೈಸ್ತರು ಹೇಬೆಲನಂತೆಯೇ ದೇವರಿಗೆ ಯಜ್ಞಗಳನ್ನು ಅರ್ಪಿಸುತ್ತಾರೆ. ಅವರು ಹಿಂಡಿನಿಂದ ಚೊಚ್ಚಲ ಕುರಿಗಳನ್ನು ಅಲ್ಲ ಬದಲಾಗಿ “ಸ್ತುತಿಯಜ್ಞವನ್ನು, ಅಂದರೆ [ದೇವರ] ಹೆಸರನ್ನು ಬಹಿರಂಗವಾಗಿ ಬಾಯಿಂದ ಅರಿಕೆಮಾಡುವ ಯಜ್ಞವನ್ನು” ಅರ್ಪಿಸುತ್ತಾರೆ. (ಇಬ್ರಿಯ 13:15, NW) ಇತರರೊಂದಿಗೆ ನಮ್ಮ ನಂಬಿಕೆಯನ್ನು ನಾವು ಹಂಚಿಕೊಳ್ಳುವಾಗ, ನಮ್ಮ ಬಾಯಿಯು ಬಹಿರಂಗವಾಗಿ ಅರಿಕೆಮಾಡುತ್ತದೆ.
ನಿಮ್ಮ ಯಜ್ಞದ ಗುಣಮಟ್ಟವನ್ನು ನೀವು ಉತ್ತಮಗೊಳಿಸಲು ಬಯಸುತ್ತೀರೋ? ಹಾಗಿರುವಲ್ಲಿ, ನಿಮ್ಮ ಕ್ಷೇತ್ರದಲ್ಲಿರುವ ಜನರ ಅಗತ್ಯತೆಗಳಿಗೆ ಜಾಗರೂಕತೆಯಿಂದ ಗಮನಕೊಡಿರಿ. ಅವರ ಚಿಂತನೆಗಳೇನು? ಅವರ ಆಸಕ್ತಿಗಳೇನು? ಬೈಬಲಿನ ಸಂದೇಶದ ಯಾವ ಅಂಶಗಳು ಅವರಿಗೆ ಹಿಡಿಸಬಹುದು? ಪ್ರತಿಯೊಂದು ಸಾಕ್ಷಿಕಾರ್ಯದ ಸಮಯಾವಧಿಯಲ್ಲಿ, ನಿಮ್ಮ ಪರಿಣಾಮಕಾರಿತ್ವವನ್ನು ಉತ್ತಮಗೊಳಿಸುವ ಉದ್ದೇಶದಿಂದ ನೀವು ಮಾಡಿದ ಭೇಟಿಗಳನ್ನು ವಿಶ್ಲೇಷಿಸಿರಿ. ಅಷ್ಟುಮಾತ್ರವಲ್ಲದೆ, ನೀವು ಯೆಹೋವನ ಕುರಿತು ಮಾತಾಡುವಾಗ ಅದನ್ನು ನಿಶ್ಚಿತಭಾವದಿಂದ ಮತ್ತು ಹೃದಯದಾಳದಿಂದ ಮಾತಾಡಿರಿ. ನಿಮ್ಮ ಯಜ್ಞವನ್ನು ಒಂದು ನಿಜವಾದ “ಸ್ತುತಿಯಜ್ಞ”ವನ್ನಾಗಿ ಮಾಡಿರಿ.
ಪ್ರವಾದಿಯೊಬ್ಬನು ಕಿವಿಗೊಡದ ನೆರೆಯವರಿಗೆ ಸಾರುತ್ತಾನೆ
ಈಗ ಹನೋಕನ ಕುರಿತು ಪರಿಗಣಿಸಿರಿ. ಯೆಹೋವ ದೇವರ ಸಾಕ್ಷಿಯೋಪಾದಿ ಅವನು ಸಂಪೂರ್ಣವಾಗಿ ಒಂಟಿಗನಾಗಿದ್ದಿರಬಹುದು. ಹನೋಕನಂತೆ, ನಿಮ್ಮ ಕುಟುಂಬ ಸದಸ್ಯರಲ್ಲಿ ನೀವೊಬ್ಬರೇ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುವವರಾಗಿದ್ದೀರೋ? ನಿಮ್ಮ ತರಗತಿಯಲ್ಲಿರುವ ವಿದ್ಯಾರ್ಥಿಗಳಲ್ಲಿ ಅಥವಾ ನಿಮ್ಮ ಕೆಲಸದ ಸ್ಥಳದಲ್ಲಿ ನೀವೊಬ್ಬರೇ ಬೈಬಲಿನ ಮೂಲತತ್ತ್ವಗಳಿಗೆ ಅಂಟಿಕೊಳ್ಳುವವರಾಗಿದ್ದೀರೋ? ಹಾಗಿರುವಲ್ಲಿ, ನೀವು ಒತ್ತಡಗಳನ್ನು ಎದುರಿಸಬಹುದು. ನಿಮ್ಮ ಮಿತ್ರರು, ಸಂಬಂಧಿಕರು, ಸಹಪಾಠಿಗಳು, ಅಥವಾ ಜೊತೆಕೆಲಸಗಾರರು ದೇವರ ನಿಯಮಗಳನ್ನು ಮೀರಿ ನಡೆಯುವಂತೆ ನಿಮ್ಮನ್ನು ಒತ್ತಾಯಿಸಬಹುದು. “ನೀನು ಏನು ಮಾಡಿದ್ದಿಯೋ ಅದು ಯಾರಿಗೂ ಎಂದಿಗೂ ಗೊತ್ತಾಗುವುದಿಲ್ಲ. ನಾವು ಯಾರಿಗೂ ತಿಳಿಸುವುದಿಲ್ಲ” ಎಂಬುದಾಗಿ ಅವರು ಹೇಳಬಹುದು. ನೀವು ಏನನ್ನು ಮಾಡುತ್ತೀರೋ ಅದರ ಬಗ್ಗೆ ದೇವರು ಚಿಂತಿತನಾಗಿಲ್ಲ, ಆದುದರಿಂದ ಬೈಬಲಿನ ನೈತಿಕ ಮಟ್ಟಗಳ ಕುರಿತು ಚಿಂತಿಸುವುದು ಮೂರ್ಖತನವಾಗಿದೆ ಎಂಬುದಾಗಿ ಅವರು ಪಟ್ಟುಹಿಡಿದು ಹೇಳಬಹುದು. ನೀವು ಅವರಂತೆ ಆಲೋಚಿಸುವುದೋ ಚಿಂತಿಸುವುದೋ ಇಲ್ಲ ಎಂಬುದಾಗಿ ಹೇಳುವಾಗ, ಅವರು ತಮ್ಮಿಂದಾದದ್ದೆಲ್ಲವನ್ನು ಮಾಡುವ ಮೂಲಕ ನಿಮ್ಮ ನಿರೋಧಶಕ್ತಿಯನ್ನು ಮುರಿಯಲು ಪ್ರಯತ್ನಿಸಬಹುದು.
ಇಂತಹ ಒತ್ತಡವನ್ನು ಎದುರಿಸುವುದು ಸುಲಭವಲ್ಲವೆಂಬುದು ಒಪ್ಪತಕ್ಕ ವಿಷಯವಾಗಿದೆ. ಆದರೆ ಅದೇ ಸಮಯದಲ್ಲಿ ಅದು ಅಸಾಧ್ಯವೂ ಅಲ್ಲ. ಆದಾಮನಿಗೆ ಏಳನೆಯ ತಲೆಯವನಾದ ಹನೋಕನ ಕುರಿತು ಆಲೋಚಿಸಿರಿ. (ಯೂದ 14) ಹನೋಕನು ಹುಟ್ಟಿದ ಸಮಯದಷ್ಟಕ್ಕೆ, ಹೆಚ್ಚಿನ ಜನರು ಎಲ್ಲಾ ನೈತಿಕ ಪ್ರಜ್ಞೆಯನ್ನು ಕಳೆದುಕೊಂಡಿದ್ದರು. ಅವರ ಮಾತು ತುಚ್ಛವಾಗಿತ್ತು; ಅವರ ನಡತೆಯು “ವಿಪರೀತ ಅಸಹ್ಯ”ಕರವಾಗಿತ್ತು. (ಯೂದ 15, NW) ಇಂದು ಅನೇಕ ಜನರು ವರ್ತಿಸುವಂಥ ರೀತಿಯಲ್ಲೇ ಅವರು ವರ್ತಿಸುತ್ತಿದ್ದರು.
ಹನೋಕನು ಇದನ್ನು ಹೇಗೆ ನಿಭಾಯಿಸಿದನು? ಈ ಪ್ರಶ್ನೆಗಿರುವ ಉತ್ತರವು ಇಂದು ನಮಗೆ ಆಸಕ್ತಿಕರವಾದ ವಿಷಯವಾಗಿದೆ. ಆ ಸಮಯದಲ್ಲಿ ಭೂಮಿಯಲ್ಲಿ ಜೀವಿಸುತ್ತಿದ್ದ ಜನರಲ್ಲಿ ಹನೋಕನೊಬ್ಬನೇ ಯೆಹೋವನನ್ನು ಆರಾಧಿಸುವವನಾಗಿದ್ದರೂ, ಅವನು ನಿಜವಾಗಿಯೂ ಒಂಟಿಗನಾಗಿರಲಿಲ್ಲ. ಹನೋಕನು ದೇವರೊಂದಿಗೆ ನಡೆದನು.—ಆದಿಕಾಂಡ 5:22.
ದೇವರನ್ನು ಮೆಚ್ಚಿಸುವುದು ಹನೋಕನ ಜೀವಿತದ ಮುಖ್ಯ ಧ್ಯೇಯವಾಗಿತ್ತು. ದೇವರೊಂದಿಗೆ ನಡೆಯುವುದರಲ್ಲಿ, ಒಂದು ಶುದ್ಧವಾದ ನೈತಿಕ ಜೀವನವನ್ನು ನಡೆಸುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿತ್ತು ಎಂಬುದು ಅವನಿಗೆ ತಿಳಿದಿತ್ತು. ಅವನು ಸಾರುವಂತೆ ಯೆಹೋವನು ಅಪೇಕ್ಷಿಸಿದನು. (ಯೂದ 14, 15) ಜನರಿಗೆ, ಅವರ ಭಕ್ತಿಹೀನ ಕೃತ್ಯಗಳು ಗಮನಿಸಲ್ಪಟ್ಟಿವೆ ಎಂಬುದಾಗಿ ಎಚ್ಚರಿಸಬೇಕಿತ್ತು. ಇಂಥ ಪರಿಸ್ಥಿತಿಗಳನ್ನು ಮುನ್ನೂರಕ್ಕಿಂತಲೂ ಹೆಚ್ಚು ವರುಷ ತಾಳಿಕೊಳ್ಳುತ್ತಾ ಹನೋಕನು ದೇವರೊಂದಿಗೆ ನಡೆಯುತ್ತಾ ಮುಂದುವರಿದನು—ಬಹುಶಃ ನಮ್ಮಲ್ಲಿ ಯಾರೂ ಇಷ್ಟೊಂದು ದೀರ್ಘಕಾಲದ ವರೆಗೆ ತಾಳಿಕೊಂಡಿರಲಿಕ್ಕಿಲ್ಲ. ಅವನು, ತನ್ನ ಮರಣಪರ್ಯಂತ ದೇವರೊಂದಿಗೆ ನಡೆಯುತ್ತಾ ಮುಂದುವರಿದನು.—ಆದಿಕಾಂಡ 5:23, 24.
ಹನೋಕನಂತೆ ನಾವು ಸಹ ಸಾರುವಂತೆ ಆಜ್ಞಾಪಿಸಲ್ಪಟ್ಟಿದ್ದೇವೆ. (ಮತ್ತಾಯ 24:14) ಮನೆಯಿಂದ ಮನೆಗೆ ಸಾರುವುದರೊಂದಿಗೆ, ಸುವಾರ್ತೆಯ ಮೂಲಕ ಸಂಬಂಧಿಕರು, ವ್ಯಾಪಾರಿ ಪರಿಚಯಸ್ಥರು, ಮತ್ತು ಸಹಪಾಠಿಗಳನ್ನು ನಾವು ತಲಪಲು ಪ್ರಯತ್ನಿಸುತ್ತೇವೆ. ಆದರೂ, ಕೆಲವೊಮ್ಮೆ ನಾವು ಧೈರ್ಯದಿಂದ ಸಾಕ್ಷಿಕೊಡಲು ಹಿಂಜರಿಯಬಹುದು. ನಿಮ್ಮ ವಿಷಯದಲ್ಲಿ ಇದು ನಿಜವಾಗಿದೆಯೋ? ನಿರಾಶರಾಗಬೇಡಿರಿ. ಆದಿಕ್ರೈಸ್ತರನ್ನು ಅನುಕರಿಸಿರಿ, ಮತ್ತು ಧೈರ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿರಿ. (ಅ. ಕೃತ್ಯಗಳು 4:29, 30) ಎಷ್ಟರ ತನಕ ನೀವು ದೇವರೊಂದಿಗೆ ನಡೆಯುತ್ತೀರೋ ಅಷ್ಟರ ತನಕ ನೀವು ಖಂಡಿತವಾಗಿಯೂ ಒಂಟಿಗರಲ್ಲ ಎಂಬುದನ್ನು ಎಂದಿಗೂ ಮರೆಯದಿರಿ.
ಒಬ್ಬಾಕೆ ವಿಧವೆಯು ಊಟವನ್ನು ತಯಾರಿಸುತ್ತಾಳೆ
ಒಬ್ಬಾಕೆ ಅನಾಮಧೇಯ ವಿಧವೆಯು, ಕೇವಲ ಒಂದು ಸರಳವಾದ ಊಟವನ್ನು ತಯಾರಿಸಿದ್ದಕ್ಕಾಗಿ ಎರಡು ಆಶೀರ್ವಾದಗಳನ್ನು ಪಡೆದುಕೊಂಡಳೆಂಬುದನ್ನು ಊಹಿಸಿಕೊಳ್ಳಿರಿ! ಆಕೆಯು ಇಸ್ರಾಯೇಲ್ಯಳಾಗಿರಲಿಲ್ಲ, ಆದರೆ ಚಾರಪ್ತ ಊರಿನ ಒಂದು ಪಟ್ಟಣದಲ್ಲಿ ಸಾ.ಶ.ಪೂ. ಹತ್ತನೆಯ ಶತಮಾನದಲ್ಲಿ ಜೀವಿಸಿದ ಪರದೇಶಿಯಾಗಿದ್ದಳು. ಅನಾವೃಷ್ಟಿ ಮತ್ತು ಕ್ಷಾಮದ ದೀರ್ಘಸಮಯಾವಧಿಯು ಕೊನೆಗೊಳ್ಳುತ್ತಿದ್ದಂತೆಯೇ, ವಿಧವೆಯ ಆಹಾರ ಸರಬರಾಯಿ ಮುಗಿಯುತ್ತಾ ಬಂತು.
ಅವಳಿಗೂ ಅವಳ ಮಗನಿಗೂ ಕೊನೆಯ ಒಂದು ಊಟವನ್ನು ತಯಾರಿಸಲಿಕ್ಕಾಗಿ ಅವಳಲ್ಲಿ ಒಂದು ಹಿಡಿ ಹಿಟ್ಟು ಮತ್ತು ಸ್ವಲ್ಪ ಎಣ್ಣೆ ಮಾತ್ರ ಇತ್ತು.ಈ ಸಮಯದಲ್ಲಿ ಒಬ್ಬ ವ್ಯಕ್ತಿ ಆಕೆಯನ್ನು ಭೇಟಿಯಾಗುತ್ತಾನೆ. ಅವನು ದೇವರ ಪ್ರವಾದಿಯಾದ ಎಲೀಯನು. ಅವನು, ವಿಧವೆಯ ಸಾರವಿಲ್ಲದ ಆಹಾರವನ್ನು ತನ್ನೊಂದಿಗೆ ಹಂಚಿಕೊಳ್ಳಲು ಕೇಳಿಕೊಳ್ಳುತ್ತಾನೆ. ಅವಳಿಗೂ ಅವಳ ಮಗನಿಗೂ ಸಾಕಾಗದಷ್ಟು ಸ್ವಲ್ಪವೇ ಆಹಾರ ಅವಳಲ್ಲಿತ್ತು, ಹಾಗಿರುವದರಿಂದ ಈ ಭೇಟಿಗಾರನಿಗೆ ಕೊಡಲು ನಿಶ್ಚಯವಾಗಿಯೂ ಅವಳಲ್ಲಿ ಏನೂ ಇರಲಿಲ್ಲ. ಆದರೆ, ತನ್ನೊಂದಿಗೆ ಆಕೆಯು ಆಹಾರವನ್ನು ಹಂಚಿಕೊಳ್ಳುವುದಾದರೆ ಅವಳೂ ಅವಳ ಮಗನೂ ಆಹಾರವಿಲ್ಲದವರಾಗಿ ಇರುವುದಿಲ್ಲ ಎಂಬುದಾಗಿ ಯೆಹೋವನ ಮಾತಿನ ಆಧಾರದ ಮೇಲೆ ಎಲೀಯನು ಅವಳಿಗೆ ಆಶ್ವಾಸನೆ ನೀಡಿದನು. ಇಸ್ರಾಯೇಲ್ಯರ ದೇವರು, ಒಬ್ಬ ಪರದೇಶಿಯಾದ ವಿಧವೆಯನ್ನು ಗಮನಿಸುತ್ತಾನೆ ಎಂಬುದನ್ನು ವಿಶ್ವಾಸಿಸಲು ನಂಬಿಕೆಯ ಅಗತ್ಯವಿತ್ತು. ಆದರೂ, ಆಕೆಯು ಎಲೀಯನಲ್ಲಿ ವಿಶ್ವಾಸವಿಟ್ಟಳು ಮತ್ತು ಈ ಕಾರಣ ಯೆಹೋವನು ಆಕೆಗೆ ಪ್ರತಿಫಲ ಕೊಟ್ಟನು. “ಯೆಹೋವನು ಎಲೀಯನ ಮುಖಾಂತರವಾಗಿ ಹೇಳಿದಂತೆ ಮಡಕೆಯಲ್ಲಿದ್ದ ಹಿಟ್ಟು ತೀರಲಿಲ್ಲ; ಮೊಗೆಯಲ್ಲಿದ್ದ ಎಣ್ಣೆಯು ಮುಗಿದುಹೋಗಲಿಲ್ಲ.” ಕ್ಷಾಮವು ತೀರುವ ತನಕ ಸ್ತ್ರೀಗೆ ಮತ್ತು ಆಕೆಯ ಮಗನಿಗೆ ಕ್ರಮವಾದ ಆಹಾರ ಸರಬರಾಯಿಯು ಇತ್ತು.—1 ಅರಸುಗಳು 17:8-16.
ಹಾಗಿದ್ದರೂ, ಇನ್ನೊಂದು ಆಶೀರ್ವಾದವು ವಿಧವೆಗೆ ಕಾದಿತ್ತು. ಮುಂಚೆ ತಿಳಿಸಿದ ಅದ್ಭುತವು ನಡೆದು ಸ್ವಲ್ಪವೇ ಸಮಯದ ನಂತರ ಆಕೆಯ ಪ್ರಿಯ ಮಗನು ಅಸ್ವಸ್ಥನಾಗಿ ತೀರಿಕೊಳ್ಳುತ್ತಾನೆ. ಎಲೀಯನು ಕನಿಕರಪಟ್ಟು, ಹುಡುಗನನ್ನು ಪುನಃ ಬದುಕಿಸುವಂತೆ ಯೆಹೋವನಲ್ಲಿ ಮೊರೆಯಿಟ್ಟನು. (1 ಅರಸುಗಳು 17:17-24) ಇದು, ಹಿಂದೆಂದೂ ಸಂಭವಿಸಿರದ ಒಂದು ಅದ್ಭುತವನ್ನು ಅಗತ್ಯಪಡಿಸಿತು. ಈ ಹಿಂದೆ ಯಾರನ್ನೂ ಪುನರುತ್ಥಾನಮಾಡಿದ ದಾಖಲೆಯು ಇರಲಿಲ್ಲ! ಯೆಹೋವನು ಈ ಪರದೇಶಿ ವಿಧವೆಗೆ ಪುನಃ ಒಮ್ಮೆ ಕರುಣೆಯನ್ನು ತೋರಿಸುವನೋ? ಹೌದು ಕರುಣೆಯನ್ನು ತೋರಿಸಿದನು. ಹುಡುಗನನ್ನು ಪುನಃ ಬದುಕಿಸುವಂತೆ ಯೆಹೋವನು ಎಲೀಯನಿಗೆ ಶಕ್ತಿಯನ್ನು ಕೊಟ್ಟನು. ಇಂತಹ ಸುಯೋಗಗಳನ್ನು ಪಡೆದ ಈ ಸ್ತ್ರೀಯ ಕುರಿತು ಮುಂದಕ್ಕೆ ಯೇಸು ಹೀಗಂದನು: “ಇಸ್ರಾಯೇಲ್ ಜನರಲ್ಲಿ ಎಷ್ಟೋ ಮಂದಿ ವಿಧವೆಯರು ಇದ್ದದ್ದು ನಿಜ; ಆದರೆ . . . ಎಲೀಯನನ್ನು . . . ಸೀದೋನ್ದೇಶಕ್ಕೆ ಸೇರಿದ ಸರೆಪ್ತ ಊರಿನಲ್ಲಿದ್ದ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳುಹಿಸಿದನು.”—ಲೂಕ 4:25, 26.
ಕೈಗಾರಿಕಾ ದೇಶಗಳಲ್ಲಿ ಸಹ, ಇಂದಿನ ಆರ್ಥಿಕ ಪರಿಸ್ಥಿತಿಯು ಅಸ್ಥಿರವಾಗಿದೆ. ಕೆಲವು ದೊಡ್ಡ ಸಂಘಟನೆಗಳು ಸಹ, ದಶಕಗಳಿಂದ ನಿಷ್ಠಾವಂತರಾಗಿ ಸೇವೆಸಲ್ಲಿಸಿದ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದೆ. ನಿರುದ್ಯೋಗದ ಭಯದಿಂದ ಒಬ್ಬ ಕ್ರೈಸ್ತನು, ತಾನು ಹೆಚ್ಚು ಕೆಲಸವನ್ನು ಮಾಡಿದರೆ ಕಂಪೆನಿಯು ತನ್ನನ್ನು ಕೆಲಸದಿಂದ ತೆಗೆದುಹಾಕುವುದಿಲ್ಲವೆಂದು ಭಾವಿಸುತ್ತಾ, ಕೆಲಸದ ಸ್ಥಳದಲ್ಲಿ ಹೆಚ್ಚು ಸಮಯವನ್ನು ಕಳೆಯುವಂತೆ ಪ್ರೇರೇಪಿಸಲ್ಪಡಬಹುದು. ಈ ರೀತಿಯಾಗಿ ಮಾಡುವುದು ಅವನಿಗೆ ಕೂಟಗಳಿಗೆ ಹಾಜರಾಗಲು, ಕ್ಷೇತ್ರ ಸೇವೆಗೆ ಹೋಗಲು, ಅಥವಾ ತನ್ನ ಕುಟುಂಬದ ಭಾವನಾತ್ಮಕ ಹಾಗೂ ಆತ್ಮಿಕ ಅಗತ್ಯತೆಗಳ ಕಡೆಗೆ ಕಾಳಜಿ ವಹಿಸಲು ಕೊಂಚವೇ ಸಮಯವನ್ನು ಒದಗಿಸಬಹುದು. ಹಾಗಿದ್ದರೂ, ಪರಿಣಾಮಗಳು ಏನೇ ಆಗಲಿ, ತಾನು ಆ ಕೆಲಸವನ್ನು ಉಳಿಸಿಕೊಳ್ಳಲೇಬೇಕೆಂದು ಅವನಿಗನಿಸಬಹುದು.
ಅಂಥ ಒಂದು ಆರ್ಥಿಕ ಬಿಕ್ಕಟ್ಟಿನ ಸನ್ನಿವೇಶದಲ್ಲಿರುವ ಒಬ್ಬ ಕ್ರೈಸ್ತನಿಗೆ ಚಿಂತಿತನಾಗಲು ಸಕಾರಣವಿದೆ. ಈ ದಿನಗಳಲ್ಲಿ ಒಂದು ಉದ್ಯೋಗವನ್ನು ಕಂಡುಕೊಳ್ಳುವುದು ಕಷ್ಟಕರವಾಗಿದೆ. ನಮ್ಮಲ್ಲಿ ಹೆಚ್ಚಿನವರು ಐಶ್ವರ್ಯವಂತರಾಗಬೇಕೆಂದು ಪ್ರಯತ್ನಿಸುವುದಿಲ್ಲ, ಆದರೆ ಚಾರಪ್ತ ಊರಿನ ಆ ವಿಧವೆಯಂತೆ ಜೀವನದ ಅಗತ್ಯತೆಗಳನ್ನು ಹೊಂದಿರಲು ನಾವು ಬಯಸುತ್ತೇವೆ. ಹಾಗಿದ್ದರೂ, “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ” ಎಂಬುದಾಗಿ ದೇವರು ಹೇಳಿದ ಮಾತನ್ನು ಅಪೊಸ್ತಲ ಪೌಲನು ನಮ್ಮ ನೆನಪಿಗೆ ತರುತ್ತಾನೆ. ನಾವು ಪೂರ್ಣ ಭರವಸೆಯಿಂದ ಹೀಗೆ ಹೇಳಬಲ್ಲೆವು: “ಕರ್ತನು [ಯೆಹೋವನು] ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು?” (ಇಬ್ರಿಯ 13:5, 6) ಪೌಲನು, ಈ ವಾಗ್ದಾನದಲ್ಲಿ ಸಂಪೂರ್ಣ ಭರವಸೆಯನ್ನಿಟ್ಟನು, ಎಷ್ಟರಮಟ್ಟಿಗೆ ಎಂದರೆ ಆ ವಾಗ್ದಾನದ ಆಧಾರದ ಮೇಲೆ ತನ್ನ ಜೀವವನ್ನೇ ಗಂಡಾಂತರಕ್ಕೆ ಒಡ್ಡಲು ಸಿದ್ಧನಿದ್ದನು ಮತ್ತು ಯೆಹೋವನು ಎಂದಿಗೂ ಅವನ ಕೈಬಿಡಲಿಲ್ಲ. ನಾವು ದೇವರನ್ನು ತೊರೆಯದಿದ್ದರೆ ಆತನು ನಮ್ಮ ಕುರಿತು ಹೀಗೆಯೇ ಮಾಡುವನು.
ಮೋಶೆ, ಗಿದ್ಯೋನ್, ಮತ್ತು ದಾವೀದರಂತ ಆತ್ಮಿಕ ವ್ಯಕ್ತಿಗಳು ಮಾಡಿದ ಗಮನಾರ್ಹವಾದ ಕೃತ್ಯಗಳನ್ನು ನಾವು ಎಂದಿಗೂ ಮಾಡಸಾಧ್ಯವಿಲ್ಲ ಎಂಬುದಾಗಿ ನಾವು ಭಾವಿಸಬಹುದು. ಆದರೆ ನಾವು ಅವರ ನಂಬಿಕೆಯನ್ನು ಅನುಕರಿಸಸಾಧ್ಯವಿದೆ. ಅಷ್ಟುಮಾತ್ರವಲ್ಲದೆ, ಹೇಬೆಲ, ಹನೋಕ, ಮತ್ತು ಚಾರಪ್ತದ ವಿಧವೆಯು ಮಾಡಿದ ನಂಬಿಕೆಯ ಸರಳವಾದ ಕೃತ್ಯಗಳನ್ನು ನಾವು ನೆನಪಿಕೊಳ್ಳಸಾಧ್ಯವಿದೆ. ಸಣ್ಣ ಕೃತ್ಯಗಳನ್ನು ಸೇರಿಸಿ, ನಂಬಿಕೆಯ ಎಲ್ಲಾ ಕೃತ್ಯಗಳಲ್ಲಿ ಯೆಹೋವನು ಆಸಕ್ತನಾಗಿದ್ದಾನೆ. ಒಬ್ಬ ದೇವಭಯವುಳ್ಳ ವಿದ್ಯಾರ್ಥಿಯು ಸಮಾನಸ್ಥರಿಂದ ಮಾದಕ ಪದಾರ್ಥವನ್ನು ಸ್ವೀಕರಿಸಲು ನಿರಾಕರಿಸುವಾಗ, ಒಬ್ಬ ಕ್ರೈಸ್ತ ಕೆಲಸಗಾರನು ತನ್ನ ಕೆಲಸದ ಸ್ಥಳದಲ್ಲಿ ಅನೈತಿಕ ಪ್ರಸ್ತಾವನೆಗಳನ್ನು ಪ್ರತಿರೋಧಿಸುವಾಗ, ಅಥವಾ ಒಬ್ಬ ಪ್ರಾಯಸ್ಥ ಸಾಕ್ಷಿಯು ದಣಿವು ಹಾಗೂ ಅನಾರೋಗ್ಯದ ಹೊರತಾಗಿಯೂ ನಂಬಿಗಸ್ತಿಕೆಯಿಂದ ಸಭಾ ಕೂಟಗಳಿಗೆ ಹಾಜರಾಗುವಾಗ, ಯೆಹೋವನು ಇವೆಲ್ಲವುಗಳನ್ನು ನೋಡುತ್ತಾನೆ ಮತ್ತು ಸಂತೋಷಪಡುತ್ತಾನೆ!—ಜ್ಞಾನೋಕ್ತಿ 27:11.
ಇತರರು ಏನನ್ನು ಮಾಡುತ್ತಾರೋ ಅದನ್ನು ನೀವು ಗಮನಿಸುತ್ತೀರೋ?
ಹೌದು, ನಾವೇನನ್ನು ಮಾಡುತ್ತೇವೋ ಅದನ್ನು ಯೆಹೋವನು ಗಮನಿಸುತ್ತಾನೆ. ಆದುದರಿಂದ, ದೇವರನ್ನು ಅನುಸರಿಸುವವರಾಗಿರುವ ನಾವು, ಇತರರ ಪ್ರಯತ್ನಗಳನ್ನು ಗಮನಿಸಲು ಎಚ್ಚರದಿಂದಿರಬೇಕು. (ಎಫೆಸ 5:1) ನಮ್ಮ ಜೊತೆ ಕ್ರೈಸ್ತರು ಸಭಾ ಕೂಟಗಳಿಗೆ ಹಾಜರಾಗಲು, ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸಲು, ಅಷ್ಟುಮಾತ್ರವಲ್ಲದೆ ಅವರ ದಿನನಿತ್ಯದ ಚಟುವಟಿಕೆಗಳನ್ನು ಮಾಡಲು ಎದುರಿಸುವ ಪಂಥಾಹ್ವಾನಗಳನ್ನು ನಾವು ಏಕೆ ನಿಕಟವಾಗಿ ಪರಿಗಣಿಸಬಾರದು?
ಯೆಹೋವನನ್ನು ಆರಾಧಿಸುವ ನಿಮ್ಮ ಜೊತೆ ಆರಾಧಕರ ಪ್ರಯತ್ನಗಳನ್ನು ನೀವು ಗಣ್ಯಮಾಡುತ್ತೀರೆಂದು ಅವರು ತಿಳಿದುಕೊಳ್ಳಲಿ. ನೀವು ಅವರ ಪ್ರಯತ್ನಗಳನ್ನು ಗಮನಿಸಿದ್ದೀರೆಂದು ಅವರು ಸಂತೋಷಪಡುವರು ಮತ್ತು ನಿಮ್ಮ ಕಾಳಜಿಯು, ಯೆಹೋವನು ತಮ್ಮ ಪ್ರಯತ್ನಗಳನ್ನು ಗಮನಿಸುತ್ತಾನೆಂಬ ಪುನರಾಶ್ವಾಸನೆಯನ್ನು ಅವರಲ್ಲಿ ಉಂಟುಮಾಡಲು ಸಹಾಯಮಾಡಬಹುದು.